ಕಾಲ ಬೆಳದಷ್ಟೂ ಕಡಮ್ಮೆ ಆಗಿಂಡು ಹೋಪದೋ ಹೇದು – ಒಂದು ಸಂಶಯ ಬಪ್ಪದಿದ್ದು.
ಮದಲಿಂಗೆ, ಒಪ್ಪಣ್ಣ ಸಣ್ಣಾಗಿಪ್ಪಗ – ಯಥೇಷ್ಟ ಕಾಲಾವಕಾಶ ಇದ್ದತ್ತು. ಶೆನಿವಾರ ಆಯಿತ್ಯವಾರದ ರಜಾದಿನಂಗೊ, ಮಧ್ಯಾವಧಿ- ವಾರ್ಷೀಕ ಹೇದು ಎರಡು ನಮುನೆ ದೊಡ್ಡ ರಜೆಗೊ, ಹಬ್ಬ, ಪತ್ನಾಜೆ, ಆಟಿ ಕಂಡದಕೋರಿ ಹೇದು ಹಲವೂ ಹಬ್ಬಂಗೊ – ಎಲ್ಲದಕ್ಕೂ ಧಾರಾಳ ಪುರುಸೊತ್ತೂ ಇದ್ದತ್ತು, ಅದರ ಅನುಭವಿಸುವ ಚೈತನ್ಯವೂ ಇದ್ದತ್ತು.
ಕಾಲ ಬೆಳದತ್ತು, ಬೆಳದು ಬೆಳದ ಹಾಂಗೇ – ಸಣ್ಣವೂ ಆತು.
ಮದಲು ಇದ್ದ ಪುರುಸೊತ್ತು ಈಗ ಇಲ್ಲೆ. ನೆಂಟ್ರ ಮನೆಗೊಕ್ಕೆ ಹೋಗಿ ವಾರಗಟ್ಳೆ ಕೂರ್ತ ಕ್ರಮವೇ ಇಲ್ಲೆ; ಸ್ವಾತಂತ್ರ್ಯವೂ ಇಲ್ಲೆ. ಎಲ್ಲವೂ ಏನಿದ್ದರೂ – ಬೇಗಬೇಗ ಆಯೇಕು. ರಪರಪ ಮುಗಿಯೇಕು, ಹೊತ್ತು ಕಂತುವ ಮದಲು ಮನಗೆ ಎತ್ತೇಕು – ಇಷ್ಟೇ ಇರ್ಸು.
~
ಒಪ್ಪಣ್ಣ ಸಣ್ಣಾಗಿಪ್ಪಗಾಣ ಒಂದು ಶುದ್ದಿ ಇದು. ಅಂಗಿಚಡ್ಡಿ ಹಾಕಿಂಡು ಬೈಲಕರೆ ಶಾಲಗೆ ಹೋಪ ಕಾಲ. ವಾರದ ಎರಡು ದಿನ ಯುನಿಫೋರ್ಮಿನ ಅಂಗಿ ಚಡ್ಡಿ, ಒಳುದ ದಿನ ಬೇಕಾದಬಣ್ಣದ್ದು. ಸೋಮವಾರ ಶುಕ್ರವಾರ ಎರಡೇ ದಿನ ಎಂತಗೆ – ಕೇಳುವಿ ನಿಂಗೊ. ಆ ಎರಡು ದಿನಲ್ಲೇ ಮಣ್ಣೊಡ್ಡನ ಹಾಂಗೆ ಬೆಳಿಅಂಗಿ ಕೆಂಪು ಮಾಡಿ ತಂದದರ್ಲಿ ಪುನಾ ಒಗದು ಮನಾರ ಮಾಡ್ಳೆ ಮತ್ತೆ ಮೂರುದಿನ ಸರೀ ಆಗಿಂಡಿತ್ತು ಅಮ್ಮಂಗೆ. ಅದಿರಳಿ.
ಅಂತೂ ಮಕ್ಕೊಗೆಲ್ಲ ಅಂಗಿಚಡ್ಡಿಯೇ ಅಂಬಗಾಣ ಶೈಲಿ. ಒಸ್ತ್ರವೋ, ಚೆಂಡಿತುಂಡೋ ಮಣ್ಣ ಸುತ್ತಲೆ ರಜಾ ದೊಡ್ಡ ಆಗಿರೇಕು. ಅಲ್ಲದ್ದರೆ ಚಡ್ಡಿಯೇ. ರಜೆ ದಿನವೂ ಅಷ್ಟೇ. ನೆಂಟ್ರ ಮನೆಗೆ ಹೋಪದು ಹೇದರೆ ಹೋಪಲೊಂದು ಮತ್ತೊಂದು – ಎರಡು ಅಂಗಿಯೂ, ನಾಲ್ಕೈದು ಈ ನಮುನೆ ಚಡ್ಡಿಗಳೂ ಇದ್ದರೆ ಆತು. ಅದೂ – ಹೆಚ್ಚುಕಮ್ಮಿ ಅದೇ ಪ್ರಾಯದ ಮಾಣಿ ಆ ಹೋವುತ್ತ ನೆಂಟ್ರ ಮನೆಲಿ ಇದ್ದರೆ ಚಡ್ಡಿಯೂ ಕೊಂಡೋಯೇಕಾದ ಪ್ರಮೇಯ ಇಲ್ಲೆ! ಫೋ!
ಕಜೆ ದೊಡ್ಡಪ್ಪನಲ್ಲಿಗೆ ಒಪ್ಪಣ್ಣ ಹೋವುತ್ತರೆ ಮಾಂತ್ರ – ಅಂಗಿಚಡ್ಡಿಯೂ ಕೊಂಡೋಯೇಕಾವುತ್ತು. ಏಕೇದರೆ, ಅಲ್ಯಾಣ ಅಣ್ಣ ಹೇದರೆ ಒಪ್ಪಣ್ಣನಿಂದ ತುಂಬ ದೊಡ್ಡ! 😉
~
ಒಂದಾನೊಂದು ಕಾಲಲ್ಲಿ ದೊಡ್ಡರಜೆಯ ಸಮಯ. ಯಥಾಪ್ರಕಾರವಾಗಿ ಬಿನ್ನೆರು ಕಟ್ಳೆ ಸುರುಮಾಡಿ ಚೂರಿಬೈಲು, ಜೋಗಿಬೈಲು, ಬೈಲಕರೆ, ಕಾಟ್ಳ, ಬೆಳ್ತಂಗಡಿ – ಎಲ್ಲಾ ಹೊಡೆಲಿ ದಿಗ್ವಿಜಯ ಮಾಡಿಂಡು ಅಖೇರಿಗೆ ಕಜೆದೊಡ್ಡಪ್ಪನಲ್ಲಿಗೆ ಎತ್ತಿತ್ತು ನಾವು. ಎತ್ತುವಾಗ ಇದ್ದದು ಮಾಮೂಲಿನ ಹಾಂಗೇ – ಸಣ್ಣ ಬೇಗು. ಅದರೊಳ ನಾಲ್ಕೈದು ಅಂಗಿಚಡ್ಡಿಗೊ ಅಷ್ಟೇ.
ಕಜೆದೊಡ್ಡಪ್ಪನಲ್ಲಿಗೆ ಹೋದರೆ ಒಂದು ವಾರ ಕೂದಿಕ್ಕಿ ಬಪ್ಪದು ನಿಘಂಟು. ಒಂದು ವಾರಲ್ಲಿ ಎಡಿಗಾಷ್ಟು ಕಾರ್ಯಭಾರ ಮಾಡಿ, ದೊಡ್ಡಮ್ಮನ ಮೊಳಪ್ಪು ಬೇನೆ ಇನ್ನೂ ರಜ ಜೋರು ಎಳಗಿದ ಮತ್ತೆಯೇ ಹೆರಡುಸ್ಸು. ಅಲ್ಲಿಗೆ ಹೋದರೂ – ಈಗಾಣ ಕಾಲದ ನೊಂಪಣ್ಣಂಗಳ ಹಾಂಗೆ ಕೂದುಗೊಂಡೇ ಇದ್ದದಲ್ಲ, ಎಂತಾರು ಗುರುಟಿಗೊಂಡಿರ್ತ ಕ್ರಮ. ದೊಡ್ಡಪ್ಪನ ಇಬ್ರೂ ಮಕ್ಕಳೂ ಒಪ್ಪಣ್ಣನಿಂದ ಅರ್ಧ ತಲೆಮಾರು ದೊಡ್ಡವು; ಅವರತ್ರೆ ಎಂತರ ಮಕ್ಕಳಾಟಿಗೆ!? ಏಯ್!!
ಹಾಂಗಾಗಿ ಅಲ್ಲಿಗೆ ಹೋದರೂ ಒಪ್ಪಣ್ಣ ಒಬ್ಬನೇ ಆಡುದು. ಒಬ್ಬನೇ ಸೀತ ತೋಟಕ್ಕೆ ಇಳಿವದು; ಅಲ್ಲಿಂದ ಹಾಂಗೇ ನೆಡಕ್ಕೊಂಡು ನೀಲಂ ಮಾವಿನ ಬುಡಲ್ಲೆ ಆಗಿ ಮೇಗೆ ಗುಡ್ಡೆಗೆ ಹತ್ತುದು. ಅಲ್ಲಿ ಬೋರುವೆಲ್ಲು ಬುಡಲ್ಲಿ ಆಟಾಡುದು. ಅಲ್ಲೇ ಹತ್ತರಾಣ ಗೇಟುವಾಲು ಬಿಡುದು; ಬಿಟ್ಟೊಂಡಿದ್ದರೆ ಕಟ್ಟುದು. ಪಂಪಿನ ಬುಡದ ಟೇಂಕಿನೀರಿಲಿ ತೇಲಿಂಡಿಪ್ಪ ಸತ್ತ ಎಲಿಯ ಎಳದು ದೂರ ಇಡ್ಕುದು – ಹೀಂಗಿರ್ತ ಗುರುಟಾಣಂಗೊ.
ಹೆಚ್ಚಿಂದರ್ಲಿಯೂ ಆರಿಂಗೂ ಹಾನಿ ಇಲ್ಲದ್ದರೂ – ಕೆಲವೆಲ್ಲ ನಿನ್ನದು ಲೂಟಿ ಜೋರಾವುತ್ತು – ಹೇದು ಅಣ್ಣ ಪರಂಚಿಗೊಂಡು ಇದ್ದದು ನೆಂಪಾವುತ್ತು. ಅದೆಲ್ಲ ಸಣ್ಣದು – ಅಡಿಗೆ ಕೋಣೆಲಿ ಹಾಲಿನ ಹೊಡಿ ತಿಂಬಾಂಗಿರ್ತ ಲೂಟಿಗೊ ಅಷ್ಟೆ.
~
ಒಂದು ಸರ್ತಿ ಹೋಗಿಪ್ಪಾಗ, ಕಜೆ ಅಕ್ಕನೂ ಇದ್ದತ್ತು. ಉಜಿರೆಲಿಯೋ ಎಲ್ಲಿಯೋ ದೂರಲ್ಲಿ ಕೋಲೇಜಿಂಗೆ ಹೋಗಿಂಡಿತ್ತು ಅದು; ಒಪ್ಪಣ್ಣಂಗೆ ಕಾಂಬಲೆ ಸಿಕ್ಕಿಂಡಿದ್ದದೇ ಅಪುರೂಪ! ಆ ಸರ್ತಿಯಾಣ ಒಂದಿನ “ನಾಳೆ ಉದಿಯಪ್ಪಾಗ ಟೀವಿ ನೋಡ್ಳೆ ಹೋಪೊ°, ಬತ್ತೆಯೋ?” ಕೇಳಿತ್ತು ಒಂದು ಹೊತ್ತೋಪಗ.
ಒಪ್ಪಣ್ಣನಲ್ಲಿ ಇದ್ದತ್ತಿಲ್ಲೆ ಟೀವಿ ಆ ಸಮೆಯಲ್ಲಿ; ಕಜೆದೊಡ್ಡಪ್ಪನ ಮನೆಲಿಯೂ ಇದ್ದತ್ತಿಲ್ಲೆ, ಅವರ ನೆರೆಕರೆಯ ಒಂದು ಮನೆಲಿ ಇದ್ದದು. ಎಲ್ಲ ಊರಿಲಿಯೂ ಇದೇ ವ್ಯವಸ್ಥೆ; ಅಂಬಗ ಟೀವಿ ನೋಡೇಕಾರೆ ಭಾರೀ ಅಪುರೂಪ! ನೆರೆಕರೆ ಪೈಕಿಲಿ ಒಂದೆರಡು ಮನೆಲಿ ಇಕ್ಕಷ್ಟೇ ಟೀವಿ. ಆ ದಿನ ಕಜೆ ಅಕ್ಕ° ಹಾಂಗೆ ಕೇಳಿ ಅಪ್ಪಾಗ ಒಪ್ಪಣ್ಣಂಗೆ ಅನಿರೀಕ್ಷಿತ ಆಶ್ಚರ್ಯದ ಹಾಂಗಾಗಿತ್ತು!
ಮರದಿನ ಆಯಿತ್ಯವಾರ. ಆದಿತ್ಯವಾರದ ಲೆಕ್ಕಲ್ಲಿ ವಿಶೇಷ ಕಾರ್ಯಕ್ರಮವೊಂದರ ದೂರದರ್ಶನಲ್ಲಿ ಪ್ರಸಾರ ಮಾಡಿಗೊಂಡು ಇತ್ತಿದ್ದವಾಡ ಆ ಸಮಯಲ್ಲಿ. ಆ ಕಾರಣಲ್ಲಿಯೇ “ಟೀವಿ ನೋಡುವೊ°” – ಹೇದು ನಿಜ ಮಾಡಿದ್ದು ಕಜೆಅಕ್ಕ°. ನವಗೆ ಅದೆಲ್ಲ ಅಂಬಗ ಅರಡಿಯ; ದೊಡ್ಡೋರು ಹೇಳಿದಲ್ಲಿಗೆ, ದೊಡ್ಡೋರು ತೋರ್ಸಿದಲ್ಲಿಗೆ ಹೋಪದು.
ಉದಿಯಪ್ಪಾಗ ನೆಗೆನೆಗೆ ಮೋರೆಲಿ ಏಳುವಾಗಳೇ ಟೀವಿ ನೋಡುವ ಸಂಭ್ರಮ. ಆ ಮನೆಗೆ ಎಷ್ಟು ದೂರ ಇದ್ದೋ, ಎಷ್ಟು ಹೊತ್ತಿಂಗೆ ಹೆರಡುದೋ, ಎಷ್ಟು ಹೊತ್ತು ಟೀವಿ ನೋಡ್ಳೆ ಸಿಕ್ಕುಗೋ – ಇದೆಲ್ಲವೂ ತಲೆಲಿ ತಿರುಗೆಂಡು ಇದ್ದತ್ತು. ಅಂತೂ ಇಂತೂ ಡಂಙಾ ಡಂಙನೆ ಹೆರಟು ಅಲ್ಲಿಗೆ ಎತ್ತಿ ಆತು.
ವಿಶಾಲ ಅಂಗಣದ ದೊಡ್ಡ ಮನೆ. ಆತಿಥ್ಯ ಚೆಂದಕೆ ಅರಡಿತ್ತ ಮನೆಯೋರು. ಹೋದಾಂಗೆ ಕೊಟ್ಟ ಬೆಶಿಬೆಶಿ ಕಾಪಿ, ಮಜ್ಜಾನ ಮಾಡಿದ ಗಡದ್ದು ಊಟ, ಎಡೆಲಿ ನೋಡಿದ ಭರ್ಜರಿ ಟೀವಿ – ಇದೆಲ್ಲವೂ ಆ ದಿನದ ವಿಶೇಷ. ಟೀವಿಲಿ ಆ ದಿನ ಬಂದುಗೊಂಡಿದ್ದದು ಮಹಾಭಾರತದ ಕಥೆ ಅಡ. ವಾರವಾರಕ್ಕೆ ರಜ್ಜ ರಜ್ಜ ಆಗಿ ಆರ ಕಥೆಯ ಆಡಿ ತೋರ್ಸಿದ ವೀಡ್ಯದ ರೆಕಾರ್ಡಿನ ಧಾರವಾಗಿ ಮಾಲೆಯ ಹಾಂಗೆ ಟೀವಿಲಿ ಕೊಟ್ಟುಗೊಂಡು ಇತ್ತಿದ್ದವಾಡ. ಆ ಒಪ್ಪಣ್ಣ ನೋಡಿದ ದಿನ ಅದೆಂತದೋ ಯುದ್ಧ ಆಗಿಂಡು ಇತ್ತು ಕಾಣ್ತು. ಅದಿರಳಿ.
~
ಆ ದಿನ ಒಪ್ಪಣ್ಣಂಗೆ ಆಶ್ಚರ್ಯ ಆದ ವಿಷಯ – ಟೀವಿ ನೋಡ್ಳೆ ಇದ್ದಿದ್ದ ಅಪೂರ್ವ ಜನಸಂಖೆ. ಆ ವಿಶಾಲ ಮನೆಯ ದೊಡ್ಡಾ ಹಾಲಿಲಿ ಪೂರ್ತಿ ಜೆನ ಕೂದುಗೊಂಡು ಟೀವಿ ನೋಡಿದ್ದದು ತಡವಾಗಿ ಹೋದ ಒಪ್ಪಣ್ಣಂಗೆ ಜಾಗೆ ಇಲ್ಲದ್ದೆ ಮಾಡಿದ್ದತ್ತು. ಎಲ್ಲೋರುದೇ ಅತ್ಲಾಗಿತ್ಲಾಗಿ ಮಾತಾಡಿಗೊಂಡು ಮುಂದೆಂತಾವುತ್ತು – ಹೇಳ್ತರ ವಿಮರ್ಶೆ ಮಾಡಿಗೊಂಡು ಆ ಕಥೆ ಮುಂದೆ ಹೋಪದು. ಜೆನಂಗಳ ಹತ್ತರೆ ತೋರ್ಸಿಗೊಂಡು ಇದ್ದದು ಈ ಟೀವಿ – ಹೇದು ಒಪ್ಪಣ್ಣಂಗೆ ಎಷ್ಟೋ ಸರ್ತಿ ಅನುಸಿಗೊಂಡು ಇದ್ದತ್ತು.
~
ಆದರೆ ಈಗ?
ಮೊದಲಾಣ ಹಾಂಗೆ ಟೀವಿಗೆ ದರಿದ್ರ ಇಲ್ಲೆ. ಮನೆಗೊಂದು ಇದ್ದೇ ಇರ್ತು. ಕೆಲವು ದಿಕ್ಕೆ ಅಂತೂ ಮನೆಗೆ ಎರಡು – ಮೂರು – ನಾಲ್ಕು ಟೀವಿಗಳೂ ಇಪ್ಪ ಸಂದರ್ಭಂಗೊ ಇದ್ದು. ಆದರೆ. ಜೆನಂಗೊ? ಮದಲಾಣಷ್ಟು ಪುರುಸೊತ್ತು ಇದ್ದೋ? ಪುರುಸೊತ್ತು ಇದ್ದರೂ ಆ ಬಾಂಧವ್ಯಂಗೊ ಇರ್ತಾ?
ಮದಲಾಣ ಹಾಂಗೆ ಊರಿಂಗೆ ಒಂದು ಟೀವಿ ಇಪ್ಪಾಗ ಊರೋರೆಲ್ಲ ಅಲ್ಲಿಗೆ ಹೋಗಿ ಸೇರ್ತ ಒಂದು ಅವಕಾಶ ಇದ್ದತ್ತು. ಆ ದಿನದ ಮಾತುಕತೆಗೊ, ಹೊಸ ವಿಷಯಂಗಳ ಅತ್ತಿತ್ತೆ ಹೇಳುತ್ತ ಕ್ರಮಂಗೊ.. ಅದರ ಒಟ್ಟಿಂಗೇ ಕೆಲವು ಜೆನ ಹಳಬ್ಬರು ಆ ಕತೆಯ ಹಿಂದಾಣ ರಜ್ಜ – ಮುಂದಾಣ ರಜ್ಜ ಕಥೆಯ ಅಲ್ಲಿದ್ದ ಮಕ್ಕೊಗೆ ಸಮಗ್ರವಾಗಿ ಹೇಳಿಕೊಟ್ಟವು.
ಈಗ ಸಮಯವೇ ಇಲ್ಲೆ. ಮನುಗುತ್ತ ಕೋಣೆ ಒಳವೇ ಒಂದು ಟೀವಿ ಇರ್ತು. ಅದರಿಂದ ಹೆರ ಬಂದರೆ ಕೂದು ತಿಂಬ ಡೈನಿಂಗು ಮಾಡ್ತಲ್ಲಿ ಒಂದು, ಅದೂ ಅಲ್ಲದ್ದರೆ ಮತ್ತೆ ಹಾಲಿಲಿ ಇನ್ನೊಂದು – ಒಟ್ಟು ಒಂದೊಂದು ಮನೆಗಂತೊ ಮೂರು ಮೂರು – ನಾಲ್ಕು ನಾಲ್ಕು ಟೀವಿಗೊ ಇಪ್ಪ ಕ್ರಮ ಇದ್ದು. ಆದರೆ ಟೀವಿ ಹೆಚ್ಚಾದಷ್ಟು ಮನುಷ್ಯ ಸಂವಹನ ಕಡಮ್ಮೆ ಆಯಿದಿಲ್ಲೆಯೋ?
~
ಅಂದು ಬತ್ತಾ ಇದ್ದಿದ ಕತೆಗಳೂ ಹಾಂಗೇ ಇಪ್ಪದು – ರಾಮಾಯಣ ಮಹಾಭಾರತದ ಹಾಂಗಿಪ್ಪ ಧರ್ಮವಿಜಯಂಗೊ.
ಈಗಾಣ ಕಾಲದ ಟೀವಿಗಳಲ್ಲಿ ಬಪ್ಪ ಧಾರವಾಹಿಗೊ ಹೇಂಗಿಪ್ಪ ನಮುನೆದು?
ಅರ್ಧಕ್ಕರ್ಧ ಅತ್ತೆ-ಸೊಸೆ ಜಗಳದ್ದು, ಎರಡು-ಮೂರು ಮದುವೆದು. ಒಗ್ಗಟ್ಟಿದ್ದ ಮನೆ ಒಡವದು. ಮತ್ತೆ ಒಳುದ್ದದು ಕಳ್ಳತನ, ಪೋಲೀಸು, ಕೋರ್ಟು ಹೀಂಗಿರ್ಸರ ತೋರುಸುತ್ತದು, ಮತ್ತೆ ಬಾಕಿಪ್ಪಾದು ಆಧುನಿಕತೆಯ ಗಂಧ ಇಪ್ಪಂತಾದ್ದು.
ಈ ಧಾರಾವಾಹಿಗಳ ನೋಡಿರೆ, ಆ ರಾಮಾಯಣ ಮಹಾಭಾರತವ ನೋಡಿದ ಕೌಟುಂಬಿಕ ಶಕ್ತಿ ಬಕ್ಕೋ? ಎಷ್ಟಾದರೂ ಒಬ್ಬೊಬ್ಬನೇ ನೋಡೇಕಷ್ಟೆ; ಒಂದಿಡೀ ಹಾಲಿಲಿ ಜೆನ ಸಾಮಾಗಿ ಕೂದುಗೊಂಡು ನೋಡ್ತದು ಈಗಾಣ ಕಾಲಕ್ಕೆ ಅವಮರ್ಯಾದಿ ಹೇದು ಲೆಕ್ಕ. ಹಾಂಗೆ ಒಟ್ಟಿಂಗೆ ಕೂದು ನೋಡ್ತ ಸಮೆಯವೂ ಇಲ್ಲೆ.
~
ಅದೇನೇ ಇರಳಿ, ಮದಲಾಣ ಕಾಲಲ್ಲಿ ನೆರೆಕರೆಯ ಒಳ ಟೀವಿ ಅಪುರೂಪ. ಆದರೆ, ಅದೇನೂ ಸಾರ ಇದ್ದತ್ತಿಲ್ಲೆ, ನೆರೆಕರೆಯ ಎಲ್ಲೋರುದೇ ಸೇರಿ ಕೂಡಿ ಮಾತಾಡಿಗೊಂಡು ಇದ್ದಿದ್ದವು. ಆದರೆ ಈಗ? ಟೀವಿ ಧಾರಾಳ, ಆದರ ನೋಡಿ, ನೆಗೆ ಹಂಚುಲೆ ಜೆನ ಇಲ್ಲೆ. ಮೊದಲಿದ್ದ ಹಾಂಗೆ ಒಂದೇ ಚೇನಲ್ಲು ಅಲ್ಲ. ಬೇಕಾದ ನಮುನೆದು ಇಪ್ಪಗ ಒಟ್ಟಿಂಗೆ ಕೂಡು ನೋಡಿ ಜಗಳ ಅಪ್ಪದೇ ಹೆಚ್ಚು. ಟೀವಿಯ ಒಳವೂ ಜಗಳ, ಹೆರವೂ ಜಗಳ 🙁
ಅದಕ್ಕೇ ಹೇಳೀದ್ದು – ಮನುಷ್ಯನ ಸಂಪರ್ಕ ಧಾರೆಗೊ ಯೇವತ್ತೋ ನಿಂದಿದು; ಆದರೆ ಧಾರಾವಾಹಿಗೊ ನಿಂದಿದೇ ಇಲ್ಲೆ. ಒಂದಲ್ಲದ್ರೆ ಒಂದು, ನಿರಂತರವಾಗಿದ್ದು. ಆದರೆ ಅದರಿಂದ ಜಾಸ್ತಿ ಗುಣ ಇಲ್ಲೆ. ಉಪಕಾರ ಆಯೇಕಾರೆ, ಮದಲಾಣ ಹಾಂಗೇ ಯುವ ತಂಡ ಧಾರವಾಹಿ, ಟೀವಿಗಳಲ್ಲಿ ಜಾಸ್ತಿ ಸಮಯ ಕಳೆಯದ್ದೆ ಓದಿ, ಬೆಳಗಿ, ಪರಸ್ಪರ ಕೂಡಿ ಬಾಳ್ತ ಗುಟ್ಟಿನ ಕಲಿಯೇಕಾದ ಅಗತ್ಯ ಇದ್ದು.
ಎಂತ ಹೇಳ್ತಿ?
~
ಒಂದೊಪ್ಪ: ಸಮಾಜವ ಕೂಡುಸಿದ್ದದೂ ಅದೇ ಟೀವಿ, ಸಮಾಜವ ದೂರ ಮಾಡಿದ್ದದೂ ಅದೇ ಟೀವಿ. ಒಂದೇ ವ್ಯವಸ್ಥೆಲಿ ಎರಡು ರೀತಿಯ ಬೆಳವಣಿಗೆ ಸಾಧ್ಯ ಇದ್ದು. ಅಲ್ಲದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಲಾಯಕ ಆಯಿದು ಒಪ್ಪಣ್ಣ…..
ಬೇಸಗೆ ರಜೆಲಿ ಅಜ್ಜನ ಮನಗೆ ಹೋಗಿ ಒಂದು ವಾರ ಕೂದು ಗಮ್ಮತ್ತು ಮಾಡೆಂಡಿದ್ದಿದ್ದು ನೆಂಪಾತು. ಅಂಗಿ ಚೆಡ್ಡಿ ತೆಕ್ಕೊಂಡು ಹೋಗದ್ರೂ ತೊಂದರೆ ಇಲ್ಲೆ, ಎಲ್ಲೋರ ಅನುಭವದ ಮಾತು ಅದು. ಟಿವಿ ಕಂಪ್ಯೂಟರು ಬಂದು ಮಕ್ಕಳ ನಿಜವಾದ ಸ್ವಾತಂತ್ರ್ಯ ಕಳದುಹೋದ್ದದು ಖಂಡಿತವಾಗಿಯೂ ಅಪ್ಪು. ಅದರ ಎದುರು ಕೂದು ಸ್ನೇಹ ಸಂಬಂಧಂಗಳ ಎಲ್ಲೋರು ಮರೆತ್ತದರ ಕಾಂಬಗ ಬೇಜಾರಾವ್ತು. “ಇ-ಉಪವಾಸ “ದ ಮೂಲಕ, ನಮ್ಮ ಹಳೆಕಾಲದ ಮಧುರ ನೆಂಪಿನ ಮತ್ತೆ ನೆನಸು ಮಾಡ್ಳೆ ಎಡಿಗೋ ಹೇಳಿ.
ಒಪ್ಪಣ್ಣನ ಶುದ್ದಿಗೆ ಧನ್ಯವಾದಂಗೊ.
ಟಿ ವಿ, ಮೊಬೈಲ್ ಮತ್ತೆ ಕಂಪ್ಯೂಟರ್ -ಈ ಮೂರು ಆಧುನಿಕ ಕಾಲದ ಆಕರ್ಷಣೆ ಗೋ . ಯುವ ಸಮುದಾಯ ಅದರಿಂದಾಗಿ ನೆಂಟರಿಷ್ಟರ ಮರೆತ್ತಾ ಇದ್ದು. ಗೆಳೆಯರು ಮಾತ್ರ ಬೇಕು. ನೆಂಟರು ಬೇಡ -ಹೇಳಿ ಆವ್ತಾ ಇದ್ದು. ಒಪ್ಪಣ್ಣ ಬರೆದ್ದು ಸರಿಯಾಯಿದು.
ಒಪ್ಪಣ್ಣನ ಈ ಸರ್ತಿಯಾಣ ಶುದ್ದಿ ಓದಿಯಪ್ಪಗ ಎಂಗಳಲ್ಲಿಗೆ ಟಿ.ವಿ ಬಂದಕಾಲದ [1986 ] ರಸ ನಿಮಿಷ ನೆಂಪಾವುತ್ತಿದ. ಅಂಬಗ ಮೂಡಕೋಣಮ್ಮೆಲಿ ಬಿಟ್ಟ್ರೆ ಈ ಏರಿಯಾಲ್ಲಿ ನಮ್ಮಲ್ಲೇ ಇದ್ದದು. ಆದಿತ್ಯವಾರ ಗೌಜಿ!. ನಮ್ಮ ಈ ಸಣ್ಣ ಹಾಲ್ ಸಾಕಾವುತ್ತಿಲ್ಲೆ. ಮತ್ತೆ ಹೆರ ಜಾಲಿಲ್ಲಿಯೂ ಕೂದಂಡು ನೋಡುಗು ಜೆನ!. ಆಯಿತ್ಯವಾರ ಬಂದರೆ ಎನಗೂ , ಎನ್ನೆಜಮಾನ್ರಿಂಗೂ ಎಲ್ಲಿಲ್ಲದ್ದ ಸಂತೋಷ!.ಕೆಲವು ಅನುಪತ್ಯಕ್ಕೆ ಟಿ.ವಿ ನೋಡ್ಳೆ ಬತ್ತವಕ್ಕೆ ಬೇಜಾರಕ್ಕೂಳಿ ಎಂಗೊ ಹೋಗದ್ದದೂ ಇದ್ದು. ಇದರೆಡಿಲಿ ಒಂದು ಮನುಷ್ಯ ಮಾತಾಡ್ಸಿ ಹಳೆಮರೆವಿನ ನೆಂಪುಮಾಡಿ; ನಾವೆಲ್ಲ ನಿಮ್ಮನೆಗೆ “ಟಿ.ವಿ ವಿಜಯಕ್ಕನ ಮನೆ” ಹೇಳಿಕೊಂಡಿದ್ದದು. ಅಷ್ಟಪ್ಪಗ, ಬಚಾವು ’ಠೀವಿ’ ಹೇಳ್ಲಿಲ್ಲ ಹೇಳಿಗೊಂಡೆ.
ಪ್ರತಿ ಆದಿತ್ಯವಾರ ಆಚಕರೆ ಮನಗೆ ತೋಡು ದಾಂಟಿ ಅದೂ ಮಳೆಗಾಲಲ್ಲಿ ಒಂದುವರೆ ಮೈಲು ಸುತ್ತಾಕಿ ಮೇಗಾಣ ಮನೆ ಅಪ್ಪಚ್ಚಿಯೂ ಆನೂ ಮಹಾಭಾರತ ನೋಡ್ಳೆ ಹೋಗ್ಯೊಂಡು ಮಹಾಭಾರತ ಕಳುದಿಕ್ಕಿ ಅಂಬೇರ್ಪಿನವೆಲ್ಲ ಹೋದಪ್ಪದ್ದೆ ಬಾಕಿ ಒಳುದೋರಿಂಗೆ ಒಂದೊಂದು ಮಹಾಚಾಯವೂ ಸಿಕ್ಕಿಯೊಂಡಿತ್ತಿದ್ದದು ನೆಂಪಾತು ಶುದ್ದಿ ಓದಿ.
ಅಪ್ಪು., ಅಂದು ಮನೆ ಮನವ ಕೂಡಿಸಿದ ಅದೇ ಟೀವಿ ಧಾರವಾಹಿ ಹೇದರೆ ಕೌಟುಂಬಿಕ ಧಾರವಾಹಿ, ಇಂದು ಕುಟುಂಬ ಒಡವುದರ ತೋರುಸುತ್ತ ಧಾರವಾಹಿಯಾಗಿ, ಮನೆ ಮನವ ಕೆಡುಸ್ಯೊಂಡಿಪ್ಪದು ನೋಡಿರೆ ಮದಲಿಂಗೆ ಹಾಂಗೆ ಇದ್ದತ್ತು ಹೇಳ್ಸು ನೆಂಪು ಮಾಂತ್ರ ಮುಂದಂಗೆ. ಹರೇ ರಾಮ ಶುದ್ದಿಗೆ
ಮದಲು ಇದ್ದದು ಒಂದೇ ಚಾನೆಲ್ಲು ದೂರದರ್ಶನ . ಅದು ಜೆನಂಗಳ ಹತ್ತರೆ ಮಾಡಿರೆ , ಈಗ ಹತ್ತು ಹಲವು ಚಾನೆಲ್ಲುಗೋ. ಜೆನಂಗ ದೂರ ದೂರ ಆಯಿದವು.