Oppanna.com

ಸರ್ಪನ ಜಾಗೆಯ ಗರ್ಪುವ ಮದಲು…

ಬರದೋರು :   ಒಪ್ಪಣ್ಣ    on   27/07/2012    13 ಒಪ್ಪಂಗೊ

ಬೆಣ್ಚಿ ಬತ್ತಷ್ಟೆ; ಇನ್ನೂ ಸಮಗಟ್ಟು ಉದಿ ಆವುತ್ತಷ್ಟೆ.
ಆಟಿ ಮಳೆಗಾಲದ ಚಳಿಗಾಳಿ ನಿಲ್ಲುತ್ತಷ್ಟೆ;
ಪಾಡಿಗೆದ್ದೆಯ ಮೇಗೆ ಕವುಂಚಿ ಬಿದ್ದ ಕಸ್ತಲೆ ಕರಗುತ್ತಷ್ಟೆ;
ಸಾರಡಿತೋಡಿಲಿ ಹರಿತ್ತ ನೀರಿನ ಅಡಿ ಕಾಣ್ತಷ್ಟೆ.
ಆರೋ ಅದಾಗಲೇ– ದಳುಂಬುಳುಂ ಹೇದು ಶೆಬ್ದ ಮಾಡಿಂಡು ತೋಡು ದಾಂಟಿ ಗೆದ್ದೆಪುಣಿ ಹತ್ತಿದವು.
ಪಹ್-ಪಹ್ ಸೆಮ್ಮದ ಶಬ್ದ ಕೇಳುವಗಳೇ ಗೊಂತಾತು – ಅದು ನಮ್ಮ ಬಟ್ಟಮಾವ ಅಲ್ಲದೊ!

ನೋಡಿರೆ – ಹೆಗಲಿಂಗೆ ಒಂದು ಒಸ್ತ್ರದ ಚೀಲ ನೇಲುಸೆಂಡು ಬೀಸಬೀಸಕೆ ಹೋಗಿಂಡಿತ್ತವು ಬಟ್ಟಮಾವ°.
ಗೆದ್ದೆಪುಣಿ ದಾಂಟಿ, ಪಾಡಿಗುಡ್ಡೆ ಹತ್ತಿ, ಬೈಲಕರೆ ಮಾರ್ಗದ ಹೊಡೆಂಗೆ ನೆಡಕ್ಕೊಂಡೇ ಹೋದವು.
ಚೆಲ, ಈ ಹೊಡೆಂಗೆ ಬಟ್ಟಮಾವ ನೆಡಕ್ಕೊಂಡು ಹೋವುತ್ಸು ಎಲ್ಲಿಗಪ್ಪಾ – ಪುನಾ ಮನಿಕ್ಕೊಂಡು ಗುಡಿ ಒಳಂದಲೇ ಗ್ರೇಶಿಂಡೆ.
ಹೋ – ಅಂದು ನಾಗರಪಂಚಮಿ – ಹೇದು ನೆಂಪಪ್ಪಗ ಬಟ್ಟಮಾವ ಅದಾಗಲೇ ಬೈಲಮೂಲೆಗೆ ಎತ್ತುಲಾಗಿತ್ತು.

~

ಬೈಲಮೂಲೆ ಮೋಹನ ಬಂಟನ ತೋಟದ ಮೂಲೆಲಿ ಒಂದು “ಬನ” ಇಪ್ಪದು ನಿಂಗೊಗೆ ಗೊಂತಿಕ್ಕು.
ಬನ ಹೇದರೆ ಸಂಸ್ಕೃತದ “ವನ”ವೇ ಆದರೂ – ಕಾಡು ಕಡುದು ಮಾಡಿದ ತೋಟದ ಎಡಕ್ಕಿಲಿ ರಜ್ಜ ಜಾಗೆಯ ಹಾಂಗೇ ಒಳಿಶಿ – ಕಾಡಿನ ನೆಂಪಿಂಗೆ ಬಾಕಿ ಮಡಗಿದ ನಮುನೆ ಕಾಣ್ತು.
ಅಲ್ಲಿ ಒಂದು ಅತ್ತಿಮರ ಇದ್ದಲ್ಲದೋ – ಹಳೇ ಕಾಲದ ಪತ್ತಕ್ಕೆ ಸಿಕ್ಕದ್ದಷ್ಟು ತೋರದ್ದು – ಅದರ ಬುಡಲ್ಲೇ ದೊಡ್ಡ ಪುಂಚ ಇದ್ದಿದಾ.
ಆ ಪುಂಚಲ್ಲೇ ನಾಗ ಸಾನ್ನಿಧ್ಯ ಇಪ್ಪದಾಡ.
ನಾಗಂಗೆ ಹಾಲು ಭಾರೀ ಕೊಶಿ, ಹಾಂಗಾಗಿ “ಹಾಲಿಪ್ಪ ಮರದ” ಬುಡಲ್ಲೇ ನಾಗಬನ ಇಪ್ಪದು ಹೇದು ಮಾಷ್ಟ್ರುಮಾವ ಅಂದೊಂದರಿ ಹೇಳಿತ್ತಿದ್ದವು.

ಪುಂಚಕ್ಕೆ ಹೊಂದಿಗೊಂಡು ಕೆಲವು ಮಾದರಿ ಬಳ್ಳಿಗೊ, ಇಂಜಿರದ ಬಳ್ಳಿಗೊ, ಸರೊಳಿ-ಸಂಪಗೆ ಗೆಡುಗೊ ಬೆಳದ್ದು.
ಕಡಿವೋರಿಲ್ಲದ್ದೆ ಅದೆಲ್ಲವೂ ಬೆಳದು ಬಿತ್ತುಕಟ್ಟಿದ್ದು!
ದೊಡಾ ಮರದ ಬುಡಲ್ಲಿ ಹೀಂಗೆ ಬಲ್ಲೆ ಬೆಳದು – ಯೇವ ನೆಡು ಮಧ್ಯಾನಕ್ಕೂ ಆ ಪುಂಚಕ್ಕೆ ಬೆಶಿಲು ಬೀಳ!

ಅತ್ತಿಮರದ ಬುಡಲ್ಲಿ ಪುಂಚ ಇಪ್ಪ ಕಾರಣ ಅಲ್ಲಿ ಹತ್ತರೆ ಆರೂ ಹೋಪದು ಕಮ್ಮಿ.

ಒಂದು ವೇಳೆ – ಆ ಬನಕ್ಕೆ ಆರಾರು ಮೈಲಿಗೆಯೋರು ಹೋಗಿ, ನಾಗನ ಜಾಗೆ ಅಶುದ್ಧ ಆದರೆ ಸಾಕು – ಮತ್ತೆ ಎರಡೇ ದಿನಲ್ಲಿ ಮೋಹನ ಬಂಟನ ತೋಟಲ್ಲಿ ಇಡೀ “ಒಳ್ಳೆದು” ಕಾಂಬಲೆ ಸಿಕ್ಕುತ್ತಡ. ಹಾಂಗಾಗಿ, ಎಡೆದಿನಲ್ಲಿ ಬನದೊಳಂಗೆ ಆರುದೇ ಹೋಪಲಿಲ್ಲೆ.
ಒಟ್ಟಾರೆಯಾಗಿ ಆ ಜಾಗೆ ನಾಗನ ವಾಸಕ್ಕೆ ಹೇಳಿಮಾಡುಸಿದ ಜಾಗೆ ಅದು!

ಹೀಂಗಿರ್ತ ಬನಂಗೊ ಬೈಲಿನೊಳದಿಕ್ಕೆ ಹಲವಿದ್ದು.
ತರವಾಡುಮನೆ ರಂಗಮಾವನ ಗೆದ್ದೆಪುಣಿಲಿ, ಕುಡ್ಪಲ್ತಡ್ಕ ಮಾವನ ತೋಟಲ್ಲಿ, ಪಾರೆಅಜ್ಜಿಯ ಸ್ಥಾನದ ಬುಡಲ್ಲಿ, ಹತ್ಯಡ್ಕ ಅಜ್ಜನ ಗುಡ್ಡೆಲಿ, ಪಾಡಿಮಾವನ ಜಾಗೆಕರೇಲಿ – ಹೀಂಗೊಂದು “ಆರೂ ಹೋಪಲಾಗದ್ದ” ಬಲ್ಲೆ ಬನ ಇಕ್ಕು;
ಅದರೊಳ ನೆಮ್ಮದಿಲಿ ವಾಸ ಮಾಡ್ತ ನಾಗಂಗೊ ಇರ್ತವು.

ಈಗೀಗ ಹೀಂಗಿರ್ತ ತಂಪಿನ ಬನಂಗೊ ಕಾಣೆ ಆಗಿ ಕೋಂಗ್ರೇಟಿನ “ನಾಗನ ಕಟ್ಟೆ” ಇರ್ತು.
ಒಂದು ವೇಳೆ ನಾಗ ಬಂದರೂ ಬೆಶಿಲಿಂಗೆ ಪೊಕ್ಕುಳು ಬಂದು ಕರಂಚುಗು!! ಅಪ್ಪೋಲ್ದೋ? ಅದಿರಳಿ.

ಅಂಬಗ ಈ ನಾಗಬನಂಗೊಕ್ಕೆ, ನಾಗನ ಕಟ್ಟೆಗೊಕ್ಕೆ ಜೆನಂಗೊ ಹೋಪದು ಯೇವತ್ತು?
ಅದೇ ನಾಗರ ಪಂಚಮಿ ದಿನ.
~

ಪಾರೆಅಜ್ಜಿಯ ಕಟ್ಟೆಬುಡಲ್ಲಿ ನಾಗನ ಕಟ್ಟೆ.

ಬೈಲಮೂಲೆ ಬನಲ್ಲಿ ಇಪ್ಪ ನಾಗಂಗೆ ಯೇವತ್ತೂ ಬಟ್ಟಮಾವನೇ ಹಾಲೆರೆತ್ತದು.
ಮೋಹನಬಂಟನೂ ಬೇಗವೇ ಎದ್ದು ಮಿಂದು ತೆಯಾರಕ್ಕು.
ಅದು ಮೋಹನಬಂಟಂಗೆ ಮಾಂತ್ರ ಸಮ್ಮಂದಪಟ್ಟ ನಾಗ ಅಲ್ಲ; ಆ ಜಾಗೆಗೆ ಸಮ್ಮಂದ ಪಟ್ಟದಾಡ.
ಹಾಂಗಾಗಿ, ಬೈಲಮೂಲೆ ಮೋಹನಬಂಟ, ಅಲ್ಲೇ ಸುತ್ತುಮುತ್ತ ಇಪ್ಪ ಹುಕ್ರಪ್ಪು ಪೂಜಾರಿ, ಕೊರಗಪ್ಪು ಪೂಜಾರಿ, ಹೊನ್ನಪ್ಪ ನಾಯ್ಕ – ಇತ್ಯಾದಿಗೊ ಅವರವರ ಜಾಗೆಂದ ಬೊಂಡ, ಹಾಲು, ಸಿಂಗಾರ ಇತ್ಯಾದಿಗಳ ಹಿಡ್ಕೊಂಡು ಬಂದು ಸೇರಿಂಗು.

ಹಾಂಗೇ ಇಪ್ಪ ಇನ್ನೂ ಹಲವು ನಾಗಬನಂಗೊ, ನಾಗನ ಕಟ್ಟೆಗೊಕ್ಕೆ ಹಾಲೆರವಲೆ ಇರ್ತ ಕಾರಣ ಆ ದಿನ ರಜ ಬೇಗವೇ ಸುರುಮಾಡುಗು. ಹಾಂಗೆ – ಮನ್ನೆ ಮದಾಲು ಹೆರಟದು ಬೈಲಮೂಲೆ ಮೋಹನಬಂಟನ ಜಾಗೆಗೇ.
ಬಟ್ಟಮಾವ° ಆ ಕಾಡು ಪೊದೆಲಿನ ಒಳ ಮದಾಲು ಹೋಗಿ, ನಾಕು ಅಡರಿನ ಹಿಡಿಸುಡಿ ನಮುನೆ ಕೈಲಿ ಹಿಡ್ಕೊಂಡು – ಕಸವಿನ ಬರಗಿ ಮನಾರ ಮಾಡುಗು.
ಪುಂಚದ ಸುತ್ತುಮುತ್ತ, ಅಲ್ಲೇ ಇಪ್ಪ ನಾಗನ ಕಲ್ಲಿನ ಆಸುಪಾಸು ರಜ ಮಣ್ಣು ಕಾಣ್ತ ನಮುನೆ ಮಾಡುಗು.
ಜಾಸ್ತಿ ಅಲ್ಲ; ರಜ್ಜ – ಮಣೆಮಡಗಿ ಕೂಪಲೆ ತಕ್ಕ.

ಬಟ್ಟಮಾವ ಅಷ್ಟು ಮಾಡಿದ ಮತ್ತೆ ಮಣೆಮಡಗಿ ಪೂಜಾ ಕೈಂಕರ್ಯ ಸುರುಮಾಡ್ಳೆ ಹೆರಡುಗು.
ಅಷ್ಟಪ್ಪಗ ನೆರೆಕರೆಯೋರು, ಮೋಹನಬಂಟ ಎಲ್ಲೋರುದೇ ಸೇರಿ ಒಂದೊಂದು ಮುಷ್ಟಿ ಅಡ್ರುಹಿಡುದು ಬಟ್ಟಮಾವನ ಸುತ್ತುಮುತ್ತದ ಜಾಗೆಯ ಮನಾರ ಮಾಡುಗು.
ಪಕ್ಕನೆ ಕಸವೆಡಕ್ಕಿಲಿ ಎಲ್ಯಾರು ನಾಗದೇವರು ಇದ್ದು ನಾವು ಅತ್ತಿತ್ತೆ ಹೋಪಗ ಅದಕ್ಕೆ ತೊಂದರೆ ಆಗಿಹೋಪದು ಬೇಡ – ಹೇದು.ಅಷ್ಟೇ.

ಬಟ್ಟಮಾವ° ಒಂದು ಕೊಡಪ್ಪಾನ ನೀರು ತಂದು, ಅರುಶಿನ ಹೊಡಿ, ಸಿಂಗಾರ, ಇತ್ಯಾದಿಗಳ ತೆಯಾರಿ ಮಾಡಿಂಡು, ನಾಗಸೇವೆ ಆರಂಭ ಮಾಡುಗು. ನೈಸರ್ಗಿಕವಾದ ಪರಿಸರಲ್ಲಿ, ನಿಸರ್ಗಲ್ಲೇ ಇಪ್ಪ ನಾಗನ ಮೂರ್ತಿಯ ಒಂದರಿ ತೊಳದು; ಎರಡು ಎಸಳು ಸಿಂಗಾರ ಮಡಗಿ ಪ್ರೋಕ್ಷಣೆ ಮಾಡಿ ಅಭಿಷೇಕ ಸುರು ಮಾಡುಗು. ನೆರೆಕರೆಯೋರು ತಂದ ಬೊಂಡ – ಹಾಲು ಇತ್ಯಾದಿಗಳ ನಾಗನ ತಲಗೆ ಎರದು ಖುಷಿಗೊಳಿಸುಗು. ಅದಾದ ಮತ್ತೆ ಮತ್ತೊಂದರಿ ನೀರಿಲಿ ಮೀಶಿಕ್ಕಿ, ಅರುಶಿನ ಹೊಡಿಯ ಅರ್ಚನೆ ಮಾಡಿಗೊಂಡು , ತಂದ ಸಿಂಗಾರಂಗಳ ತಲಗೆ ಮಡಗಿ ಅಲಂಕಾರ ಮಾಡುಗು. ನೈಸರ್ಗಿಕವಾಗಿ ಆಯೆತಮಾಡಿಕ್ಕಿ ಸಂಪ್ರೀತಿಗೊಳಿಶುಗು.

ಅರ್ಚನೆ, ಅಭಿಷೇಕ, ಅಲಂಕಾರ ಆಗಿ ಅಪ್ಪದ್ದೇ, ನಾಗನ ಹೊಟ್ಟಗೆ ಏನಾರು ಕೊಡೆಡದೋ –
ಬಾಳೆಲೆಲಿ ರಜ ಹೊದಳು, ಒಂತುಂಡು ಬೆಲ್ಲ, ಒಟ್ಟೆಮಾಡದ್ದ ಬೊಂಡ, ಬಾಳೆಹಣ್ಣು – ಇತ್ಯಾದಿಗಳ ಮಡಗ್ಗು. ಬಟ್ಯ ಇದನ್ನೇ “ಅಗೆಲು” ಹೇಳುಸ್ಸು. ಅದಾದ ಮತ್ತೆ ಒಂದು ತೆಂಙಿನಕಾಯಿ ಒಡದು, ಬಾಳೆಹಣ್ಣು ಇತ್ಯಾದಿಗಳ ಮಡಗಿ ಮಹಾ ನೈವೇದ್ಯ ಮಾಡುಗು. ಇದೆಲ್ಲದರ ಎದುರು ಮಡಿಕ್ಕೊಂಡೇ ಒಂದು “ಮಂಗಳಾರತಿ”ಯೂ ಕೊಡುಗು.

ಮಂಗಳಾರತಿ ಆದ ಮತ್ತೆ ಎಲ್ಲೋರನ್ನೂ ಎದುರು ನಿಲ್ಲುಸಿಂಡು ಬಟ್ಟಮಾವ ಒಂದು ಪ್ರಾರ್ಥನೆ ಮಾಡುಗು.
“ಈ ಜಾಗೆಯ ಒಳಿಶಿ ಬೆಳೆಶಿ ಅಲಫಲ, ನೆಲ ಜಲ ಸಂಪತ್ತುಗಳ ಕೊಟ್ಟು, ಜಾಗೆಲಿ ನೆಲೆ ಆದೋರ ಸಂತತಿ ಬೆಳೆಶಿ, ಭೂಮಿಗೆ ರಕ್ಷಣೆ ಕೊಟ್ಟು, ಮಣ್ಣಿನ ಮಕ್ಕಳ ಬೇಕಾದ ಹಾಂಗೆ ನೆಡೆಶಿಗೊಂಬ ಭಾರ ಜಾಗೆಯ ಅಧಿಪತಿ ಆದ ನಾಗದೇವರದ್ದು” – ಹೇಳುಲೆ ಮರೆಯವು.
ಬಟ್ಟಮಾವನ ಪ್ರಾರ್ತನೆ ಮುಗುದಪ್ಪದ್ದೇ, ಸೇರಿದ ಎಲ್ಲೋರುದೇ ನಾಗಂಗೆ ಹೊದಳು ಬಿಕ್ಕಿ ನಮಸ್ಕಾರ ಮಾಡುಗು.
ನಿಂದಲ್ಲಿಂದಲೇ ನಮಸ್ಕಾರ ಗ್ರೇಶಿಗೊಂಬದಲ್ಲ, ಮಣ್ಣಗುಡ್ಡೆಲಿ, ನೀರ ಕಿರಿಂಚಿಲಿ ಹಿಂದೆಮುಂದೆ ನೋಡದ್ದೆ ಅಡ್ಡಬಿದ್ದು ನಮಸ್ಕಾರ ಮಾಡುಗು.

ನೈವೇದ್ಯ ಮಾಡಿದ ಹಾಲು, ಹೊದಳು, ಬೆಲ್ಲ, ಬಾಳೆಹಣ್ಣಿನ ಬಂದ ಎಲ್ಲೋರಿಂಗೂ ಹಂಚಿಕೊಟ್ಟು, ಅರುಶಿನ ಪ್ರಸಾದವನ್ನೂ ಕೊಟ್ಟು ಬಟ್ಟಮಾವ ಬನ ಬಿಟ್ಟು ಹೆರ ಬಕ್ಕು.
ಬಟ್ಟಮಾವನ ಹಿಂದಂದಲೇ ಮೋಹನಬಂಟನೂ ಆ ಜಾಗೆಂದ ಹೆರ ಬಕ್ಕು. ಇನ್ನೊಂದರಿ ಅಲ್ಲಿಗೆ ಹೋಪದು ಬಪ್ಪೊರಿಶವೇ.
ಅಲ್ಲದ್ದರೆ – ಎಲ್ಯಾರು ಅಶುದ್ಧ ಆದರೆ!?
~

ಬಟ್ಟಮಾವ ಅಲ್ಲಿಂದ ಸೀತ ಇನ್ನಾಣ ಮನಗೆ ಹೋಕು – ಇನ್ನಾಣ ಬನಲ್ಲಿ ಹಾಲೆರವಲೆ.
ಅಂತೂ – ನಾಗರ ಪಂಚಮಿ ದಿನ ಬಟ್ಟಮಾವಂಗೆ ಪುರ್ಸೊತ್ತೇ ಇರ.
ಉದಿ ಆದರೆ, ಮಜ್ಜಾನ ಒರೆಂಗೂ ಹಾಲೆರವದೇ ಕೆಲಸ. ಎಲ್ಲೋರಿಂಗೂ ಬಟ್ಟಮಾವನೇ ಬಂದು ಹಾಲೆರೇಕು.
~

ನಾಗನ ಮೂರ್ತಿಗೆ ಆರಾಧನೆ ಮಾಡಿ, ನಾಗದೇವರಿಂಗೆ ಇಷ್ಟ ಇಪ್ಪ ಬೊಂಡ – ಹಾಲು-ಹಣ್ಣು – ಅಡಕ್ಕೆ ಸಿಂಗಾರ- ಅರುಶಿನ ಹೊಡಿಗಳ ಸಮರ್ಪಣೆ ಮಾಡಿ ಸಂಪ್ರೀತಿಗೊಳುಶುತ್ತ ಕಾರ್ಯಕ್ಕೆ “ಹಾಲೆರವದು” ಹೇಳ್ತದು.
ಸಾಮಾನ್ಯವಾಗಿ ನಾಗರಪಂಚಮಿ ದಿನ ಈ ಹಾಲೆರೆತ್ತ ಕಾರ್ಯ ಮಾಡ್ತವು. ಒಂದು ವೇಳೆ ಆ ದಿನ ಅನುಕೂಲ ಒದಗದ್ದರೆ ಮತ್ತೆ ಪುರುಸೋತಿಲಿ ಮಾಡುಗು. ಅಂತೂ ಒರಿಶಕ್ಕೆ ಒಂದರಿ ಆದರೂ ನಾಗನ ನೆಂಪುಮಾಡಿಯೇ ಮಾಡುಗು.
ಎಂತಗೆ?
~

ಪರಶುರಾಮ ಸೃಷ್ಟಿಲಿ ಮನುಷ್ಯವಾಸಕ್ಕೆ ಮದಲು ನಾಗದೇವರೇ ಇದ್ದದಾಡ. ಮನುಷ್ಯವಾಸಕ್ಕೆ ನಾಗದೇವರು ಬಿಟ್ಟುಕೊಟ್ಟ ಕಾರಣ; ನಾಗನ ಜಾಗೆಲಿ ನಾವು ವಾಸ ಮಾಡ್ತ ಕಾರಣ – ಅನುದಿನವೂ, ಪ್ರತಿ ಸರ್ತಿಯೂ ನಾಗದೇವರ ನೆಂಪುಮಾಡೇಕಡ – ಶಂಬಜ್ಜ ಹೇಳಿಗೊಂಡು ಇತ್ತಿದ್ದವು. ಹಾಂಗಾಗಿ ನಾವು ಬದ್ಕುತ್ತ ಈ ಕಡಲ ತಡಿಯ ಊರಿಲಿ ಅಲ್ಲಲ್ಲಿ ನಾಗಸನ್ನಿಧಿಗೊ, ಅಲ್ಲಲ್ಲಿ ಸುಬ್ರಮಣ್ಯ ದೇವಸ್ಥಾನಂಗೊ.

ಸುಬ್ರಹ್ಮಣ್ಯ ದೇವರು ಲೋಕಕಂಟಕನಾದ ತಾರಕಾಸುರನ ವಧೆ ಮಾಡಿದ ಮೇಗೆ, ಬಚ್ಚಲು ತಣಿವಲೆ ಹೇದು ನಾಗನ ರೂಪ ತಾಳಿ ಇತ್ತಿದ್ದವಾಡ. ಮನುಗಿದ ಜಾಗೆಯೇ ನಮ್ಮ ಊರಿನ ಸುಬ್ರಹ್ಮಣ್ಯ ಆಡ. ಸುಬ್ರಹ್ಮಣ್ಯ ದೇವರು ಸರ್ಪನ ರೂಪಲ್ಲಿ ವಿಶ್ರಾಂತಿ ತೆಕ್ಕೊಂಡ ಕಾರಣ ಸರ್ಪನ ಸುಬ್ರಮಣ್ಯ ಹೇಳಿಯೂ, ಸುಬ್ರಹ್ಮಣ್ಯನ ಸರ್ಪ ಹೇಳಿಯೂ ಪೂಜಿಸುತ್ತವು ನಮ್ಮ ಊರಿಲಿ.
ಹಾಂಗಾಗಿ ಎಲ್ಲಾ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಸರ್ಪ ಸಾನ್ನಿಧ್ಯ ಕಾಂಬಲೆ ಸಿಕ್ಕುತ್ತು.

ನಾಗನ ಹಬ್ಬ ಪಂಚಮಿಗೆ ಬಂದರೆ, ಸುಬ್ರಮಣ್ಯನ ಹಬ್ಬ ಷಷ್ಠಿದಿನ ಬತ್ತು; ಅಷ್ಟೇ ಸಂಗತಿ!
~

ನಿನ್ನೆ ಆಚಮನೆ ಪುಟ್ಟಣ್ಣನ ದಿಂಡು. ಒರಿಶಾವಧಿ ಪೂಜೆಯೂ ಅದೇ ದಿನ ಇದ್ದ ಕಾರಣ ಜೆನ ರಜ ಗಮ್ಮತ್ತಿಲಿಯೇ ಸೇರಿದ್ದವು!
ಬೈಲಕರೆ ಗಣೇಶಮಾವನ ಮನೆ ಜೆಂಬ್ರದ ಗವುಜಿ ಕಳುದ ಮತ್ತೆ ಮದಾಲು ಅವರ ತಲೆಕೊಡಿ ಕಂಡದು ಅಲ್ಲಿಯೇ ನವಗೆ!
ಆಟಿ ಎಡೆಲಿಯೂ ಅಂಬೆರ್ಪು ಕಳುಶಿಂಡು ಬಂದು ಪಾಚದೂಟ ಉಂಡಿಕ್ಕಿ ಹೋದವು.
ಉಂಡಿಕ್ಕಿ ಮಾತಾಡುವಗ ಅಂಬೆರ್ಪಿಲೇ ಒಂದು ಶುದ್ದಿ ಹೇಳಿದವು;
ನಿಂಗೊಗೂ ಅಂಬೆರ್ಪಿಲೇ ಹೇಳಿಕ್ಕುತ್ತೆ. ಕೇಳಿ.

~

ಗಣೇಶಮಾವನ ಜಾಗೆಂದಲೇ ಒತ್ತಕ್ಕೆ ಬಂಟಕ್ಕಳ ಜಾಗೆ ಇದ್ದಾಡ.
ಹಳೆಕಾಲದ ಜಾಗೆ ಆದ ಕಾರಣ ಒಂದು ನಾಗಬನವೂ ಇದ್ದಾಡ.
ಬಟ್ಟಮಾವಂಗೆ ಬಪ್ಪಲೆ ಎಡೆಇಲ್ಲದ್ದ ಸರ್ತಿ ಗಣೇಶಮಾವನೇ ಹೋಗಿಂಡಿದ್ದದಾಡ.

ಯೆಜಮಾನ ಅಜ್ಜಬಂಟ ಕಳುದೊರಿಶ ತೀರಿಗೊಂಡ ಕಾರಣ ಮತ್ತಾಣೋರು ಪಾಲುಪಟ್ಟಿ ಮಾಡಿಗೊಂಡು – ಜಾಗೆಯ ಹರುದು ಹಂಚಿ ಹಾಕಿದ್ದವಡ. ನಾಗಸನ್ನಿಧಿ ಬತ್ತ ಆ ಬನದ ಜಾಗೆಯ ವಹಿಸಿಗೊಂಡ ಜೆನ ಆರು ತಿಂಗಳ ಹಿಂದೆ ಒಳ್ಳೆ ಕ್ರಯಕ್ಕೆ ಮಾರಾಟ ಮಾಡಿತ್ತಾಡ. ತೆಕ್ಕೊಂಡ ಜೆನ ಕೊಚ್ಚಿಯ ಪೊರ್ಬು ಅಡ. ಒಳ್ಳೆ ಪೈಸೆಕ್ಕಾರ° ಆಡ. ಊರಿಲಿಲ್ಲದ್ದ ಕ್ರಯ ಕೊಟ್ಟು ಆ ಜಾಗೆಯ ಮಾಡಿಗೊಂಡತ್ತಾಡ. ಕೊಡುವಾಗಳೇ ನೆರೆಕರೆಯೋರು ಹೇಳಿತ್ತಿದ್ದವಾಡ – ಆ ನಾಗಬನದಷ್ಟು ಜಾಗೆ ಆದರೂ ಒಳಿಶಿಗೊಂಡು ಒಳುದ ಜಾಗೆಯ ಕ್ರಯಚ್ಚೀಟು ಮಾಡಿ ಹೇದು; ಕೇಳಿದ್ದವಿಲ್ಲೆ ಆರುದೇ.

ಈಗ ಪ್ರಸ್ತುತ ಆ ಜಾಗೆಯ ಇಡೀ ತಟ್ಟು ಮಾಡಿ ರಬ್ಬರು ಹಾಕಲೆ ಏರ್ಪಾಡು ಮಾಡಿದ್ದಾಡ ಆ ಮಲೆಯಾಳಿ.
ಮದಲಿದ್ದ ಒಂದೇ ಒಂದು ಮರಂಗೊ ಈಗ ಇಲ್ಲೇಡ; ಎಲ್ಲಾ ಮರಂಗಳೂ.
ಒಳುದ ಮರಂಗೊ ಕಡುದು ಹೋದರೆ ಹೋಗಲಿ, ಸಾರ ಇಲ್ಲೆ- ಆದರೆ ಈ ಬನದ ಜಾಗೆಯೂ, ಅದರೊಟ್ಟಿಂಗೆ ನಾಗನೂ, ಎಲ್ಲವೂ ಹೋತಾಡ. ಗುಡ್ಡೆ, ಗುಪ್ಪೆ, ಗುಂಪೆ, ಎಲ್ಲವೂ ನೆಲಸಮ. ಹಾಲಿಪ್ಪ ಮರ, ಹಾಲಿಲ್ಲದ್ದ ಮರ – ಎಲ್ಲವುದೇ ಹೋಗಿ ಇನ್ನು ರಬ್ಬರಿನ ಹಾಲಿನ ಮರ ಮಾಂತ್ರ ಬಕ್ಕಷ್ಟೆ.

ಅಲ್ಲಿದ್ದ ಪುಂಚಲ್ಲಿ ಹಲವು ನಾಗಂಗೊ ಇದ್ದಿದ್ದವಡ; ಎಷ್ಟೋ ಸಾವಿರ ಒರಿಶಂದ ಬದ್ಕಿಂಡು.
ಕೆಲಸ ಮಾಡುವಗ ಬುಳ್ಡೋಜರಿನ ಅಡಿಂಗೆ ಹಲವು ನಾಗಂಗೊ ಬಿದ್ದು ತೀರಿಗೊಂಡಿದವಾಡ. ಕಂಡೋರು ಮಾತಾಡಿಂಡಿದ್ದದು ಗಣೇಶಮಾವಂಗೂ ಸಿಕ್ಕಿದ್ದು ಶುದ್ದಿ.

ಯೆತಾರ್ತಕ್ಕೆ, ಸರ್ಪ ಹೇದರೆ ಬ್ರಹ್ಮನೇ ಅಡ.
ಒಬ್ಬ ಬ್ರಾಹ್ಮಣ ಸತ್ತರೆ ಎಂತೆಲ್ಲ ಸಂಸ್ಕಾರ ಆಯೇಕೋ – ಆ ಸಂಸ್ಕಾರಂಗೊ ಪೂರ್ತಿ ಒಂದು ನಾಗ ಸತ್ತರೆ ಆಯೇಕು.
“ಸರ್ಪನ ಬೊಜ್ಜ” ಹೇಳಿ ನಮ್ಮೋರು ಹೇಳುದು ಆ ಸಂಸ್ಕಾರವ.
ಹಾಂಗಿಪ್ಪಗ, ಬುಳ್ಡೋಜರಿನ ಅಡಿಂಗೆ ಬಿದ್ದು ಸತ್ತ ಸಂಖ್ಯೆ ಎಷ್ಟು? ಅವಕ್ಕೆ ಸಂಸ್ಕಾರ ಕೊಡ್ಸು ಆರು?

ನಂಬದ್ದೋರಿಂಗೆ ಏನೂ ತೊಂದರೆ ಆಗ, ಆದರೆ ನಂಬುವೋರಿಂಗೆ ಈ ಅನಾಚಾರಂಗಳ ಕಂಡ್ರೆ ಕೂಪಲೆಡಿಗೋ – ಹೇಳ್ತದು ಗಣೇಶಮಾವನ ಬೇಜಾರು.
ಅಂಬೆರ್ಪಿಲಿ ಇಷ್ಟು ಮಾತಾಡಿಕ್ಕಿ, ಅಂಬೆರ್ಪಿಲೇ ಹೆರಟವು.

~

ಮೊನ್ನೆ ನಾಗರಪಂಚಮಿ ಕಳುದ ಸಮೆಯಲ್ಲೇ ಈ ಶುದ್ದಿ ಕೇಳಿ ಒಪ್ಪಣ್ಣಂಗೆ ತುಂಬ ಬೇಜಾರಾತು.
ನಾಗರ ಪಂಚಮಿಯ ಒಂದು ದಿನ ಕೊಂಗ್ರೇಟು ನಾಗಂಗೆ ಹಾಲೆರವದರಿಂದಲೂ, ಒಳುದ ದಿನಂಗಳಲ್ಲಿಯೂ ನಾಗದೇವರು ಬದ್ಕೇಕಾದ ’ನೈಸರ್ಗಿಕ’ ಬನಂಗಳ ಒಳಿಶೆಡದೋ? ನವಗೆ ಬದ್ಕಲೆ ಹೇದು ನಾವು ಭೂಮಿ ಕೊಟ್ಟದಕ್ಕೆ ಈಗ ಅದರ ವಸತಿಯನ್ನೇ ನಾಶ ಮಾಡುದೋ?
ಗ್ರೇಶುವಗಳೇ ಬೇಜಾರಾವುತ್ತು. ಎಂತ ಹೇಳ್ತಿ?

ಒಂದೊಪ್ಪ: ನಾಗ ನವಗಾಗಿ ಕೊಟ್ಟ ಜಾಗೆಲಿ ಬದ್ಕುವಗ ನಮ್ಮಂದಾಗಿ ಹಾನಿ ಆಗದ್ದ ಹಾಂಗೆ ನೋಡಿಗೊಂಬೊ. ಅಲ್ಲದೋ?

13 thoughts on “ಸರ್ಪನ ಜಾಗೆಯ ಗರ್ಪುವ ಮದಲು…

  1. ಎಪ್ಪತ್ತನೇ ಇಸವಿ ಆಗಿರೆಕು.ಆನಂಬಗ ಬೆಟ್ಟಂಪಾಡಿ ಶಾಲೆಲಿ ಕಲ್ತೊಂಡಿತ್ತಿದ್ದೆ.ಇಂಗ್ಲಿಷಿನ ಎಲ್ ಆಕಾರಲ್ಲಿದ್ದ ಕಟ್ಟೋಣ ಅದು.ಈಗ ಹೇಂಗಿದ್ದೋ ನೋಡಿದ್ದಿಲ್ಲೆ.ಜೆಗಿಲಿ ಕರೆಲಿ ಕೆಂಪು ಕಲ್ಲಿನ ಕುಂದಂಗೊ.ಅದರ ಮೇಲೆ ಅಡ್ಡ,ಪಕಾಸಿಂಗೆ ಆಧಾರ ಆಗಿಯೊಂಡಿತ್ತು.ಆ ಕುಂದದ ಕೊಡಿಲಿ ರಜಾ ಜಾಗೆ ಒಳಿತ್ತದಾ.
    ಒಂದು ದಿನ ಉದಿಯಪ್ಪಗ,ಅಂಬಗ ಎಂಗೊ ಎಂಟೂವರೆಗೆಲ್ಲ ಶಾಲೆಲಿಪ್ಪಿಯೋ°,ಎಂತಕೋ ಎನ್ನ ಜೋಸ್ತಿಯೊಬ್ಬ° ಕುಂದದ ಮೇಲೆ ನೋಡಿರೆ ಒಂದು “ಒಳ್ಳೆದು” ಮುರೂಟಿ ಮನಿಕ್ಕೊಂಡಿತ್ತು.ಅಂಬಗ ಹಳ್ಳಿಲಿ ಬೆಳದ ನವಗೆಲ್ಲಾ ಅದರ ಬಗ್ಗೆ ಹೆದರಿಕೆಂದ ಹೆಚ್ಚು ಕುತೂಹಲ.
    ಎಂಗಳ ಹೆಡ್ಮಾಷ್ಟ್ರುಕ್ವೆೋಳ್ಟಾರಿ ವೆಂಕಟ ಕೄಷ್ಣ ಭಟ್ ಹೇಳಿ ,ಅವು ಬಪ್ಪಾಗ ಅವರ ಕರಕ್ಕೊಣ್ದು ಹೋಗಿ ತೋರ್ಸಿದೆಯೊ°.
    ಅದು ಹೋಕು ಹೇಳಿ ಅವು ಹೇಳಿಯಪ್ಪಾಗ ಅಲ್ಲಿಗೆ ಬಿಟ್ಟು ಕ್ಲಾಸಿಂಗೆ ಹೋದೆಯೊ°.
    ಒಂದು ವಾರ ಆದರೂ ಅದು ಅಲ್ಲೇ ಅಲ್ಲದ್ದಾರೆ ಇನ್ನೊಂದು ಕುಂದದ ಮೇಲೇ ಮನಿಕ್ಕೊಂಡು ಸತ್ಯಾಗ್ರಹ ಮಾಡಿದ ಹಾಂಗಪ್ಪಾಗ ಶಾಲೆಯ ಆಢಳ್ತೆ ಮಾಡ್ತವೆಲ್ಲ ಬಂದು ಎಂತ ಮಾಡುದು ಹೇಳಿ ವಿಮರ್ಷೆ ಮಾಡಿ ಜೋಯ್ಸರ ಕಾಂಬದೇ ಒಳ್ಳೆದು ಹೇಳ್ತ ನಿರ್ಧಾರಕ್ಕೆ ಬಂದವು.
    ಹಾಂಗೇ ಪ್ರಶ್ನೆ ಮಡಗಿಯಪ್ಪಗ ಅದಕ್ಕೊಂದು ಬೆಟ್ಟಂಪಾಡಿ ದೇವರಿಂಗೆ ಒಂದು ರುದ್ರಾಭಿಶೇಕ ಮಾಡೆಕ್ಕು ಹೇಳ್ತ ಅಭಿಪ್ರಾಯ ಬಂತು.
    ಮತಾಣ ಸೋಮವಾರ ರುದ್ರಾಭಿಶೇಕ ಮಾಡಿದವು.ಮರ ದಿನ ಅದಿಲ್ಲೆ.
    ಎಲ್ಲೋರಿಂಗೂ ಸಮಾಧಾನ.
    ಎರಡು ದಿನ ಅಪ್ಪಗ ಪುನಃ ಅಲ್ಲಿ ಅದು ಪ್ರತ್ಯಕ್ಷ!
    ಇನ್ನೆಂತ ಮಾಡುದು ಹೇಳಿ ಹಾವು ಹಿಡಿವವರ ಬಪ್ಪಲೆ ಮಾಡಿ ಆತು.ಒಂದು ಹಿಡಿತ್ತ ಜೆನ ಬಂದದಕ್ಕೆ ಏಳು ಜೆಡೆ ಕಂಡತ್ತಡ.ಒಂದಕ್ಕೆ ಹೆದರ್ಕೆ ಆದ ಹಾಂಗಾಗಿ ಅದು ಓಡಿತ್ತು.
    ಅಂತೂ ಹಿಡಿವಲೂ ಆಯಿದಿಲ್ಲೆ.
    ಇದೆಲ್ಲಾ ಅಪ್ಪಗ ರಜೆ ಬಂತು.
    ರಜೆ ಕಳುದು ಎಂಗೊ ಶಾಲಗೆ ಹೋಗಿ ನೋಡಿರೆ ಅದು ಅಲ್ಲೇ ಇದ್ದು!
    ಪುನಃ ರುದ್ರಾಭಿಶೇಕ,ಒಂದು ದಿನ ಮಾಯ,ಮರ ದಿನ ಪ್ರತ್ಯಕ್ಷ.ಹೀಂಗೇ ಮೂರು ತಿಂಗಳು ಕಣ್ಣು ಮುಚ್ಚಾಲೆ ಆತು.
    ಮತ್ತೆ ಬೇರೆ ಯೇವದೋ ಜೋಯಿಷರ ದಿನಿಗೇಳಿ ಕೇಳುವಾಗ ಅವು ಹೇಳಿದ್ದಿಷ್ಟು-ಶಾಲಗೆ ಆಟದ ಮೈದಾನ ಮಾಡುವಾಗ ಆ ಹಾವಿನ ಜೆತೆಯ ಒಂದು ಹಾವುದೇ ಅದರ ಮೊಟ್ಟೆಯೂ ನಾಶ ಆಯಿದು,ಅದಕ್ಕೆ ಪರಿಹಾರ ಆಯೆಕ್ಕಾರೆ ಬೆಟ್ಟಂಪಾಡಿ ಆಯನ ಸಮಯಲ್ಲಿ ದೇವರ ಸವಾರಿ ಅಲ್ಲಿಗೆ ಬರೆಕು.
    ಎಂಗಳ ಮಾಷ್ಟ್ರೊಬ್ಬ ದೇವಸ್ತಾನದ ಆಢಳ್ತೆಯವನೇ,ಶಿರಾಮ ಬಲ್ಲಾಳ್ ಹೇಳಿ.ಅವೆಲ್ಲಾ ಒಪ್ಪಿ ಹಾಂಗೇ ಮಾಡ್ತು ಹೇಳಿ ನಿಘಂಟು ಮಾಡಿದವು.
    ಕಟ್ಟೆ ಕಟ್ಳೆ ಕಲ್ಲು ಬಂದು ಬಿದ್ದ ದಿನ ಕಾಣದ್ದೆ ಆದ ಆ ಹವು ಇಂದಿನ ವರೆಗೂ ಕಂಡಿದಿಲ್ಲೆ.
    ಆನುದೇ ವಿಜ್ಞಾನ ಕಲ್ತವನೇ.ಆದರೆ ನವಗಿನ್ನೂ ಅರ್ಥ ಆಗದ್ದ ವಿಷಯಂಗೊ ತುಂಬಾ ಇದ್ದು ಹೇಳಿ ಸಣ್ಣ ಪ್ರಾಯಲ್ಲೆ ಕಲ್ತ ಒಂದು ಪಾಠ ಇದು.
    ಆರಿಂಗಾರೂ ನಂಬಿಕೆ ಬಾರದ್ದರೆ ಬೆಟ್ಟಂಪಾಡಿ ನವೋದಯ ಹೈಸ್ಕೂಲಿಂಗೆ ಹೋಗಿ ಆಟದ ಮೈದಾನದ ಕರೆಲಿಪ್ಪ ಕಟ್ಟೆಯ ಕಥೆ ಕೇಳಿರೆ ಹೇಳ್ತವು ಹಿರಿಯರು ಅಲ್ಲಿಕ್ಕು.

    1. ಕೆಲವು ಅನಿರ್ವಚನೀಯವಾದ್ದು ಇರುತ್ತು.

  2. ಶುದ್ದಿ ಪಷ್ಟಾಯ್ದು ಒಪ್ಪಣ್ಣ.! “ಒಳ್ಲೆದು” ಅಂಬಗಂಬಗ ನಮ್ಮ ಜಾಗೆಲಿ ಬಂದು ಹೋಗಿ ಎಲ್ಲಾ ಸರಿ ಇದ್ದೊ ಹೇಳಿ ನೋಡುದಾದಿಕ್ಕೋ?
    ಎಷ್ಟಾದರೂ ಪರಶುರಾಮ ಕ್ಷೇತ್ರಲ್ಲಿ ಎಲ್ಲಾ ಜಾಗೆಗೊಕ್ಕೂ ನಾಗದೇವರೇ ಯಜಮಾನ ಹೇಳಿ ಪ್ರತೀತಿ ಅಲ್ಲದೊ?!!

  3. ಉತ್ತಮ ಲೇಖನ, ಸಾ೦ಪ್ರದಾಯಿಕ ಕಾಡಿನ ತರದ ನಾಗನ ಕಟ್ತೆಯ ಬದಲು, ಕಾ೦ಕ್ರೀಟ್ ನಾಗನ ಕಟ್ತಗೊ ತು೦ಬುತ್ತ ಇಪ್ಪದು ದೌರ್ಭಾಗ್ಯ. ಹೀಗೆ ಅಪ್ಪಲೆ ಜೋಯಿಸರು ಕೂಡ ಕಾರಣ.

    1. ಅಪ್ಪು ಹರೀಶಣ್ಣ… ನೂರಕ್ಕೆ ನೂರರಷ್ಟು ಸತ್ಯವಾದ ಮಾತು.
      ಆನು ಮೇಲೆ ಹೇಳಿದ ಕುಟುಮ್ಬದವು ಒಬ್ಬ ಜೋಯಿಶ ಮಾವನ ‘family doctor’ ಹಾಂಗೆ ನಮ್ಬಿದ್ದವು. ಅವು ಹೇಳಿದ ಹಾಂಗೆ ಮಾಡುತ್ತವು. ಅವರತ್ರೆ ಈ ವಿಷಯವಾಗಿ ಮಾತನಾಡಿಯಪ್ಪಗ “ಎಂತ ಮಾಡುದು? ದುಡ್ಡಿದ್ದವನೆ ದೊಡ್ಡಪ್ಪ… ಅದಕ್ಕೆ ಸರಿಯಾಗಿ ನಾವು ಮಾತನಾಡದ್ದರೆ ನಮ್ಮ ಹತ್ತರೆ ಜೆನ ಬತ್ತವಿಲ್ಲೇ, ಈ ಹೆಮ್ಮಕ್ಕಗೂ ಎನ್ನ ವ್ಯಾಪಾರೀ ಬುದ್ದಿ ಅರ್ಥ ಆತನ್ನೇ?” ಹೇಳಿ ವ್ಯಾಪಾರೀ ಬುದ್ದಿಯ ಮನಸ್ಸಿಲ್ಲಿ ನೆನಪು ಮಾಡಿಗೊಂಡು ನೆಗೆಬೀರುತ್ತಾ ಹಲವು ಶ್ಲೋಕಂಗಳ ಹೇಳಿ ತಮ್ಮ ಜ್ಹಾನ ಪ್ರದರ್ಶಿಸುಲೆ ಸುರು ಮಾಡಿದವು.

      ವೈಯುಕ್ತಿಕವಾಗಿ ಆ ಮಾವನ ದೂರುದು ಅಲ್ಲ. ಒಂದು ಕಾಲಲ್ಲಿ ಅವು ಹೇಳಿದ ಮಾತಿನ ಆರೂ ಕೇಳದ್ದೆ ದುಡ್ಡಿದ್ದವನೇ ದೊಡ್ಡಪ್ಪ ಹೇಳಿ ಬೀಗುವ ಸಮಾಜವ ನೋಡಿ ನೊಂದು ಅವುದೆ ಈ ‘ವ್ಯಾಪಾರೀ ಬುದ್ದಿ’ ಅಳವಡಿಸಿಗೊಂಡದು ಆದಿಕ್ಕು. ಆದರೆ ಇಂದು ಅವಕ್ಕೆ ದೇವಿ ಸರ್ವ ಐಶ್ವರ್ಯವನ್ನೂ ಕರುಣಿಸಿದ್ದು. ಹಾಂಗಿಪ್ಪಗ ಆ ದೇವಿಯ ಪರವಾಗಿ ಒಂದು ಹೆಮ್ಮಕ್ಕೋ ಮಾತನಾಡುತ್ತಾ ಇದ್ದರೆ… ಅವು ಸಹಾಯ ಮಾಡದ್ದರೆ ದೇವಿ ಅವರ ಕ್ಷಮಿಸುಗೋ? “ರೋಗ ಬಂದ ಮೇಲೆ ಔಷಧಿ ಕೊಡುವ ಈ ವೈದ್ಯರು, ರೋಗವೇ ಬಾರದ್ದ ಹಾಂಗೆ ಸಹಕರಿಸಿದರೆ ಎಷ್ಟು ಒಳ್ಳೇದಿತ್ತು;ಅಮ್ಮ ನೀನೇ ಸದ್ಬುದ್ದಿಯ ಕರುಣಿಸು…” ಹೇಳಿ ಆ ದೇವಿಯ ಪ್ರಾರ್ಥಿಸಿಗೊಂಡು ಅಲ್ಲಿಂದ ಜಾಗ ಖಾಲಿ ಮಾಡಿದೆ.

  4. “ಒಳ್ಳೆದ”ರ ಆರಾಧನೆ ಬಗೆಲಿ ಒಳ್ಳೆ ಲೇಖನ. ಸರ್ಪದ ಜಾಗೆಯ ಗರ್ಪಲಾಗ ನಿಜ. ನಾಗನ ಬಗ್ಗೆ ಈಗಾಣ ಕಾಲಲ್ಲಿ ಹೆಚ್ಚಿನವಕ್ಕೂ ಹೆದರಿಕೆ ಇದ್ದೇ ಇದ್ದು. ನಾಗ ಇದ್ದ ಜಾಗೆಯ ತೆಕ್ಕೊಂಬಲೆ ಅಷ್ಟು ಡಿಮಾಂಡ್ ಇಲ್ಲೆ ಹೇಳ್ತದೂ ಅಪ್ಪು.

  5. ತುಳುನಾಡು ಭೂತಾರಾಧನೆ ಮತ್ತೆ ನಾಗಾರಧನೆಗೆ ವಿಶೇಷ ಮಹತ್ವ ಕೊಡುತ್ತು.
    ಅನ್ಯ ಮತೀಯರು ಕೂಡಾ ನಾಗಾರಧನೆಯ ನಂಬುತ್ತವು ಹೇಳುವದಕ್ಕೆ ಸಾಕ್ಶಿ ಹೇಳಿರೆ ಕುಕ್ಕೆ ಸುಬ್ರಹ್ಮಣ್ಯಲ್ಲಿ ಅವು (ಬ್ಯಾರಿಗೊ, ಪುರ್ಬುಗೊ) ಕೂಡಾ ನಾಗ ದೋಷಂಗೊಕ್ಕೆ ಸಂಬಂಧಪಟ್ಟ ಸೇವೆಗಳ ಮಾಡುಸುವದು. ರಷ್ಯಾದ ಮಹಿಳೆ ಸೇವೆ ಮಾಡಿಸಿದ ವಿಷಯ ನಾವು ಓದಿದ್ದು.
    ಇತ್ತೀಚೆಗೆ ಕಾಂಬದು ಎಂತ ಹೇಳಿರೆ ನಾಗಬನ ಹೇಳಿರೆ ಅಲ್ಲಿ ಇಪ್ಪ ಬನವ ಅಳುಸಿ, ಕಾಂಕ್ರೀಟೀಕರಣ ಮಾಡುವದು. ನವಗೆ ಎಂತದೋ ಚೆಂದ ಕಾಂಗು, ಆದರೆ ಅಲ್ಲಿಯೇ ವಾಸ ಇಪ್ಪ ನಾಗಂಗೊಕ್ಕೆ ಇದು ಅನುಕೂಲ ಅಕ್ಕೋ ಹೇಳಿ ವಿಚಾರ ಮಾಡೆಕ್ಕಾದ್ದು ಮುಖ್ಯ. ವಾಸ ಮಾಡುತ್ತವಕ್ಕೆ ಬೇಕಾದ ಹಾಂಗೆ ಇಪ್ಪ ಮನೆ ಬೇಕಲ್ಲದ್ದೆ, ದೂರಂದ ಚೆಂದ ನೋಡ್ತವಕ್ಕೆ ಬೇಕಾದ ಹಾಂಗಿಪ್ಪದು ಅಲ್ಲ.
    ನಾಗರ ಪಂಚಮಿಯ ಸಂದರ್ಭಲ್ಲಿ, ನಾಗಬನ ಒಳುಶೆಕ್ಕು ಹೇಳ್ತ ಆಶಯಲ್ಲಿ ಬಂದ ಶುದ್ದಿ ಲಾಯಿಕ ಆಯಿದು.

  6. ಕೆಲ ವರುಶದ ಹಿ೦ದೆ, ಒ೦ದು ಕನಸು ಉದಿಯಪ್ಪಗ ಬಿದ್ದತ್ತು.ರಜಾ ಹೆದರಿಕೆಯೂ ಆತು .ಆಯಕ್ಕಾದ್ದೇ ಬಿಡಿ ಅಲ್ಲದಾ.

    ಕನಸಲಿ,ಹರವದು ಹೆಡೆಯೆತ್ತಿ ಮಗುವಿನ ಹೊಡೆ೦ಗೆ ನಿ೦ತ ಸನ್ನಿವೇಶ. ಎ೦ತ ಮಾಡುವುದು ಅರಡಿಯದ್ದಾತು. ಆದರೂ ಕೇಳಿಕೊ೦ಡೆ. ಮಗುವಿನ ಹತ್ತರೆ ದಾಳಿ ಮಾಡೋ ಬದಲು, ಎನ್ನಾತ್ಲಾಗಿಯೆ ಆಗಲಿ. ಕಾಪಾಡು ಅ೦ತ ಕೇಳಿಕೊ೦ಡೆ. ಆದರೆ ಆಗ ಬ೦ದ ಉತ್ತರ, ಶು ದ್ದ ಮನಸಿನವ ಕ೦ಡರೆ ಏಕೋ ಆಗಿ ಬತ್ತಿಲ್ಲೆ,.ನಿನ್ನ೦ತವೆ ಇರಲಿ ಹೇಳಿ ಉತ್ತರ ಬ೦ತು. ಅ೦ದಿ೦ದ್ದ ಇ೦ದಿನವರೆಗೂ ಮನಸಿ೦ದ ಅಳಿಸಿದ್ದಿಲ್ಲೆ.

    ಏವ ಸಾಲಿಲಿ
    ಈ ಲೋಕ(ಲಿ) ನಿ೦ದೆ,
    ಕಾಪಾಡು ಮಹಾಮಹಿಮ.

    1. ಕನಸಿಲಿ ಹಾವು ಕಂಡ್ರೆ ಎಂತ ಫಲ ಹೇದು ನಮ್ಮ ಜೋಯಿಶಪ್ಪಚ್ಚಿ ಹತ್ರೆ ಕೇಳೆಕ್ಕು.
      ಮನಶ್ಶಾಸ್ತ್ರಜ್ನರು ಬೇರೆಂತದೋ ಹೇಳ್ತವಡಾ. ನವಗದು ಬೇಡ…….

  7. “ಸರ್ಪನ ಜಾಗೆಯ ಗರ್ಪುವ ಮೊದಲು…”. ದಯವಿಟ್ಟು ಸರ್ಪ ದೋಷಂದಾಗಿ ಕಷ್ಟ ಅನುಭವಿಸಿದವು ತಮ್ಮ ಅನುಭವಂಗಳ ಹೇಳಿ. ಇದು ಇಂದು ಎಷ್ಟೋ ಕುಟುಮ್ಬಂಗ ತಪ್ಪು ಮಾಡಿ ಕಷ್ಟ ಅನುಭವಿಸುವುದರ ತಪ್ಪುಸುಲೆ ಕಾರಣ ಅಕ್ಕು…

    ನಮ್ಮ ಸುತ್ತು ಮುತ್ತಲು ಇಪ್ಪವಕ್ಕೆ ನಾವು ತೊಂದರೆ ಮಾಡಿರೆ ಅವು ಸಹಜವಾಗಿ ದ್ವೇಷ ಮಡಿಕ್ಕೊಲ್ಲುತ್ತವು. ಅದರಲ್ಲಿ ‘ಸರ್ಪ’ ಕ್ಕೆ ವಿಪರೀತ ದ್ವೇಷ. ಅದಕ್ಕೆ ಏನಾದರೂ ತೊಂದರೆ ಆದರೆ ಅದು ವಂಶವನ್ನೇ ನಿರ್ವಂಶ ಮಾಡಿಬಿಡುತ್ತು.

    ಒಂದು ಕುಟುಮ್ಬದವು ಸರ್ಪ ಇಪ್ಪಂತಹ ಜಾಗೆಲ್ಲಿ ಕಾಡು ಕಡುದು ರಬ್ಬರ್ ಹಾಕುಲೆ ಪ್ರಯತ್ನಿಸುತ್ತಾ ಇದ್ದವು. ಬಾರಿ ಬಾರಿ ಹೇಳಿದರೂ “ವಿನಾಶಕಾಲೇ ವಿಪರೀತ ಬುದ್ದಿ” ಹೇಳಿ ಮತ್ತೆ ಅದೇ ಹಾದಿಲ್ಲಿ ಪ್ರಯತ್ನ ಮಾಡುತ್ತಾ ಇದ್ದವು. ಬೇರೆ ಯಾವುದೇ ಮಾರ್ಗ ಕಾಣದ್ದೆ ಅವಕ್ಕೆ ಸದ್ಬುದ್ದಿಯ ಕೊಡು ದೇವರೇ ಹೇಳಿ “ಗುರುಗಳನ್ನೂ,ದೇವಿಯನ್ನೂ” ಪ್ರಾರ್ಥಿಸುತ್ತಾ ಇದ್ದೆ. ನಿಂಗ ಎಲ್ಲೋರೂ ಎನ್ನ ಜೊತೆ ಮನಸ್ಸು,ದನಿ ಸೇರುಸುತ್ತಿರ??? ಒಂದು ಕುಟುಮ್ಬವ ರಕ್ಷಿಸುಲೇ ಕಾರಣರಾಗಿ ಪುಣ್ಯ ಪಡಕ್ಕೊಲ್ಲುತ್ತಿರ??? ಹರೇ ರಾಮ…

  8. ನಾಗಾರಾಧನೆ ತುಳುನಾಡಿನ ವಿಶೇಷ.ಲಾಯ್ಕ ಲೇಖನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×