ಮೊನ್ನೆ ಚೌಕ್ಕಾರುಮಾವನಲ್ಲಿಗೆ ಹೋದ್ದರ್ಲಿ ಷಟ್ಪದಿಗಳ ಬಗ್ಗೆ ತಿಳ್ಕೊಂಡದು ನಿಂಗೊಗೆ ಗೊಂತಿಕ್ಕು.
ಮಾಷ್ಟ್ರುಮಾವನ ಸೂಚನೆಲಿ ಕಳುದ ವಾರ ಅದರ ಬೈಲಿಂಗೆ ಹೇಳಿದ್ದೂ ನಿಂಗೊಗೆ ಅರಡಿಗು.
ಷಡ್ಪದಿಗಳ ಬಗ್ಗೆ ವಿವರ ಬೈಲಿಂಗೆ ತಿಳುದು ಬಂದದು ಎಲ್ಲೋರಿಂಗೂ ಕೊಶಿ ಆಯಿದು.
ಶುದ್ದಿ ಹೊಂದುಸಲೆ ಕಾರಣೀಭೂತರಾದ ಚೌಕ್ಕಾರುಮಾವಂಗೂ, ಮಾಷ್ಟ್ರುಮಾವಂಗೂ ಆ ಕೀರ್ತಿ ಸಲ್ಲೇಕು!
~
ಅದಿರಳಿ,
ಈಗ ನೋಡಿಗೊಂಡಿದ್ದ ಹಾಂಗೇ ಮವುಢ್ಯ ಬಂತದಾ!
ಅಂದಿಂದ ಜೆಂಬ್ರಂಗೊ ಸೊರುದ್ದು, ಒಂದರಿಯೇ ನಿಂದತ್ತು, ಕೆರೆನೀರು ಕಟ್ಟಿದ ಕಟ್ಟಪುಣಿಯ ನಮುನೆಲಿ!
ಅಪ್ಪಲೆ ಶುಕ್ರಮೌಢ್ಯ ಇಪ್ಪದು ಮೊನ್ನೆ ಹತ್ತೊಂಬತ್ತರಿಂದ ನಾಳ್ತು ಇಪ್ಪತ್ತೆರಡ್ರ ವರೆಗೆ ಆದರೂ, ಮೌಢ್ಯಂದ ಮೊದಲು ಮೂರುದಿನ, ಮತ್ತೆ ಮೂರುದಿನ – ಒಟ್ಟು ಆರುದಿನ ಒಯಿದೀಕ ಜೆಂಬಾರಂಗೊ ಇರ.
ಅಷ್ಟುದಿನ ಬೈಲಿನ ಎಲ್ಲೋರಿಂಗೂ ಪುರುಸೊತ್ತೇ! 😉
ಹ್ಮ್, ಪುರುಸೋತಿಲಿ ಒಂದೊಂದಿನ ಒಂದೊಂದು ಜೆಂಬ್ರದ ವಿಮರ್ಶೆ ಮಾಡಿಗೊಂಡು ಆರಾಮಲ್ಲಿ ಕೂರ್ತದಲ್ಲದೋ ಬೈಲಿನೋರ ಕೆಲಸ ಈಗ!? ಪೇಪರು ತಿದ್ದಲಿದ್ದ ಕಾರಣ ಸುದ್ದಿ ಇಲ್ಲೆ, ಅಲ್ಲದ್ದರೆ ನೀಟಂಪ ಒರಗುತಿತ° ನಮ್ಮ ದೊಡ್ಡಬಾವ°! 😉
ನಮ್ಮ ನಮ್ಮ ಮನೆಲೇ ಕಾಲುನೀಡಿ ಕೂದಂಡು, ಆರಾಮಕೆ ಹೊತ್ತುಕಳೆತ್ತದು, ಏನಾರು ಮನೆಗೆಲಸ (ಇದ್ದರೆ) ಮಾಡ್ತದು ಇನ್ನು ಮೌಢ್ಯ ಮುಗಿವನ್ನಾರ ಒಳುದಿರ್ತ ಮಹಾಪುಣ್ಯ ಕಾರ್ಯ!
ಅದರೊಟ್ಟಿಂಗೇ, ಮವುಢ್ಯಲ್ಲೇ ಒಳ್ಳೆ ಮೂರ್ತ – ಹೇಳಿಗೊಂಡು ಬೈಲಿಲಿ ನೆರೆಕರೆ ನೆಂಟ್ರುಗೊ ಒಟ್ಟು ಸೇರುದೂ ಇದ್ದು.
~
ಮೌಢ್ಯಲ್ಲಿ ಜೆಂಬ್ರ ತೆಗವಲಾಗ, ಸರಿ.
ಜೆಂಬ್ರದ ಶುದ್ದಿ ತೆಗವಲಾಗ ಹೇಳಿ ಏನಾರಿದ್ದೋ? ಇಲ್ಲೇನೇ!
ಹೇಳಿದಾಂಗೆ ಮೊನ್ನೆ ಪೋಳ್ಯಕ್ಕೆ ಒಂದು ಜೆಂಬ್ರಕ್ಕೆ ಹೋಗಿತ್ತಿದ್ದೆ.
ಅಲ್ಲಿ ಕಂಡ ಒಂದು ಶುದಿ ಪಕ್ಕನೆ ಈಗ ನೆಂಪಾತು.
ಹೇಂಗೂ ಪುರುಸೊತ್ತೇ ಇದಾ, ಹಾಂಗೆ ನೆಂಪಾತು – ಹೇಳ್ತೆ.
~
ನಮ್ಮ ಬೈಲಿಲಿ ಆರತ್ರೆ ಕೇಳಿರೂ ಹೆಸರಿನೊಟ್ಟಿಂಗೆ ಒಂದೊಂದು ಮನೆ ಹೆಸರು ಹೇಳ್ತು – ಸಾಮಾನ್ಯವಾಗಿ ಅವು ಹುಟ್ಟಿ ಬೆಳದ ಮನೆ. ಹೆಚ್ಚಿನೋರಿಂಗೆ ಹೆರಿಯೋರ ಕಾಲಂದಲೇ ಬಂದು ಒದಗಿದ ಮನೆ. ಕೆಲವು ಜೆನಕ್ಕೆ ಸ್ವಂತ ಪೈಶೆಲಿ ಕಟ್ಟಿದ ಸ್ವಂತ ಮನೆ!
ಏನೇ ಆಗಿರಲಿ, ಹೇಳುಲೆ ದಕ್ಕಿತ ಒಂದು ಮನೆ ಇದ್ದೇ ಇದ್ದು, ಅಲ್ಲದೋ?
ಅದೂ ಇಲ್ಲದ್ದ ಕೆಲವು ವೆಗ್ತಿತ್ವಂಗೊ ಇರ್ತವು, ಗೊಂತಿದ್ದೋ?
~
ಮೊನ್ನೆ ಪೋಳ್ಯದ ಜೆಂಬ್ರಲ್ಲಿ ಎಲ್ಲೋರು ಪರಸ್ಪರ ಏನೊಳ್ಳೆದು ಮಾತಾಡುವಗ ಕರೇಲಿ ಕೂದು ತನ್ನಷ್ಟಕ್ಕೇ ನೆಗೆಮಾಡಿಗೊಂಡು ಇಪ್ಪ ಗುಬ್ಬಿಯ ಕಂಡತ್ತು.
ಆ ಜೆಂಬ್ರದ ಗವುಜಿ ಗಡಿಬಿಡಿ ಎಡಕ್ಕಿಲಿದೇ ತನ್ನದೇ ಶಾಂತಿಯ ಕಂಡು ನೆಮ್ಮದಿಲಿ ಕೂದಿದ್ದ ಆ ಹೆಮ್ಮಕ್ಕಳ ಆರುದೇ ಮಾತಾಡುಸುತ್ತ ತಂಟೆಗೆ ಹೋಯಿದವಿಲ್ಲೆ. ಅವರವರ ಆಪ್ತೇಷ್ಟರ ಹತ್ತರೆ ಮಾತಾಡ್ತರಲ್ಲಿ ಅಂಬೆರ್ಪಿಲಿ ಇದ್ದಿದ್ದವು ಬಂದು ಸೇರಿದೋರು.
ಅದರೆಡಕ್ಕಿಲಿ ಈ ಗುಬ್ಬಿ ಆರಿಂಗೂ ಕಂಡೂ ಕಾಣದ್ದೆ ಆಗಿ ಹೋಗಿತ್ತು.
ಗುಬ್ಬಿಯೂ ಹಾಂಗೆ, ಮಾಸಿದ ಒಸ್ತ್ರವ ಸುತ್ತಿಗೊಂಡು . . .
– ಓ! ಗುಬ್ಬಿ ಆರು ಹೇಳಿದ್ದೇ ಇಲ್ಲೆ ಇದಾ!
~
ಗುಬ್ಬಿ ಆರು ಹೇಳ್ತ ವಿವರ ಎಲ್ಲೋರಿಂಗೂ ಗೊಂತಿಪ್ಪಷ್ಟೇ ಒಪ್ಪಣ್ಣಂಗೂ ಅರಡಿಗಷ್ಟೇ! ಜಾಸ್ತಿ ಏನೂ ಅರಡಿಯ! ಇರಳಿ, ಅಷ್ಟನ್ನೇ ಹೇಳ್ತೆ..
ಗುಬ್ಬಿ ಹೇಳಿರೆ ಒಂದು ಹೆಮ್ಮಕ್ಕೊ.
ಅದರ ಹೆಸರು ಆರಿಂಗೂ ಸರಿ ಅರಡಿಯ.
ಕೆಲವು ಜೆನ ಲಕ್ಷ್ಮಿ ಹೇಳ್ತವು, ಕೆಲವು ಜೆನ ಗೌರಿ ಆಗಿರೇಕು ಹೇಳ್ತವು, ಅಂತೂ ಎಲ್ಲೋರುದೇ ಅದರ ದಿನಿಗೇಳ್ತದು ಗುಬ್ಬಿ ಹೇಳಿಯೇ!.
ಅರೆ ಮಾಸಲು ಸೀರೆ ಸುತ್ತಿಗೊಂಡು ಜೆಂಬ್ರಂದ ಜೆಂಬ್ರಕ್ಕೆ ಹೋಪದೇ ಅದರ ಪರಮ ಪುಣ್ಯ ಕಾರ್ಯ.
ಹತ್ತೈವತ್ತೊರಿಶ ಆಗಿಕ್ಕು, ಕಾಂಬಗ ಹಾಂಗೆ ಕಾಣ್ತು. ತಲಗೆ ಎಷ್ಟೋ ಒರಿಶಂದ ಸಮಗಟ್ಟು ಎಣ್ಣೆ ಹಾಕಿ ಮೀಯದ್ದ ಕಾರಣ ಕಾಯಿಸುಗುಡಿನ ಹಾಂಗೆ ಆಯಿದು ತಲೆಗಸವು!
ಪಾವೆಲಿಯಷ್ಟು ಅಗಲಕೆ ಕುಂಕುಮದ ಬೊಟ್ಟು ಹಾಕುಗು, ಹಳೆಕಾಲದ ಕ್ರಮಲ್ಲಿ.
ಆದರೆ ಸಮಗಟ್ಟು ಮೋರೆತೊಳೆಯದ್ದ ಕಾರಣ ಆ ಬೊಟ್ಟು ಹಣೆಇಡೀಕ, ನೋಟಿನಷ್ಟಗಲ ಆಗಿ – ತಲೆಗಸವಿನ ಒರೆಂಗೂ ಎತ್ತಿ, ಬೆಳಿ ತಲೆಕಸವಿನ ಬುಡ ರಜ ಕೆಂಪೋ- ಅರುಶಿನವೋ – ಆಯಿದು.
ಮದಲಿಂಗೆ ಒಂದರಿ ಎಲ್ಲಿಯೋ ನೆಡವಗ ಬಿದ್ದದಾಡ – ಮೋರೆ ರಜ ಗರ್ಪಿದ ಗಾಯ ಇದ್ದು, ಅದರೊಟ್ಟಿಂಗೇ ಎದುರಾಣ ಹಲ್ಲುದೇ ಅರ್ದ ತುಂಡಾಗಿ, ’ತ’ಕಾರ ಹೇಳುಲೆ ತಕರಾರು ಮಾಡ್ತು! ತತ್ತೆ – ಹೇಳುದು ಸತ್ತೆ ಹೇಳಿದಾಂಗೆ ಕೇಳ್ತಡ, ಬಿಂಗಿಮಕ್ಕೊ ನೆಗೆಮಾಡುಗು.
~
ಇಂತಲ್ಲಿ ಜೆಂಬ್ರ ಹೇಳಿ ಅದಕ್ಕೆ ಗೊಂತಾದರೆ ಹೇಂಗಾರೂ ಬಂದು ಸೇರಿಗೊಂಗು.
ಎಲ್ಲಿಯೂ ಜೆಂಬ್ರ ಇಲ್ಲದ್ದ ದಿನ ಯೇವದಾರು ದೊಡ್ಡೋರ ಮನಗೆ ಹೋಕು, ಹೊತ್ತಪ್ಪಗ ಉಂಬಲೆ!
ಅಂತೇ ಹೋಗಿ ಕೂರ, ಹೋದಲ್ಲಿ ಏನಾರು ಕೆಲಸ ಮಾಡುಗು.
ಯೇವದಾರು ಮನಗೆ ಹೋದರೆ ತೋಟಂದ ಕೂಂಬಾಳೆ ಹೆರ್ಕಿ ತಪ್ಪದೋ, ಪೂಂಬೆ ಹೆರ್ಕಿ ದನಗೊಕ್ಕೆ ಹಾಕುದೋ, ಹಿಡಿಸುಡಿ ಮಾಡ್ತದೋ, ಹಟ್ಟಿಯ ಕೋಣೆ ಉಡುಗುತ್ತದೋ – ಎಂತಾರು ಮಾಡಿಗೊಂಡು ಊಟದ ಹೊತ್ತಿಂದ ಊಟದ ಹೊತ್ತಿನ ಒರೆಗೆ ಹೊತ್ತುಕಳಗು.
ಜೆಂಬ್ರಕ್ಕೆ ಹೋಗಿದ್ದರುದೇ ಹಾಂಗೆ, ಸುಮ್ಮನೆ ಕೂದುಗೊಳ್ಳ.
ಅದರ ಊಟದ ಬಾವ್ತು ಕೆಲಸ ಮಾಡಿಯೇ ಮಾಡುಗು.
ಮುನ್ನಾಣದಿನವೇ ಬಂದು ಸೇರುಗಿದಾ, ಇರುಳು ಬೆಂದಿಗೆ ಕೊರವಂದ ಮದಲೇ ಹಿಡಿಸುಡಿ ತೆಕ್ಕೊಂಡು ಎಂಜಲು ಉಡುಗ್ಗು.
ಬೆಂದಿಗೆ ಕೊರದಾದ ಮೇಗೆ, ಎಲ್ಲ ಕೆಲಸ ಮುಗುದ ಮತ್ತೆ – ಮನೆಯೋರುದೇ ಬಚ್ಚುತ್ತು, ಹೇಳಿ ರಜ ಮನುಗುಲೆ ಹೋದ ಮೇಗೆ – ಹಿಡಿಸುಡಿ ತೆಕ್ಕೊಂಡು ಚೆಂದಕೆ ಉಡುಗ್ಗು!
ಮರದಿನ ಉದಿಯಪ್ಪಗ ಎದ್ದು ನೋಡಿರೆ ಇಡೀ ಜೆಂಬ್ರದ ಜಾಗೆ ಮನಾರ ಆಗಿಕ್ಕು!
ಪಕ್ಕನೆ ನೋಡಿರೆ ಗುಬ್ಬಿ ಹತ್ತರಾಣ ನೆಂಟ್ರೇ ಆಗಿರೇಕು – ಹೇಳ್ತ ಸೌಂಶಯ ಬಕ್ಕು..
~
ಹೀಂಗೇ ಹೋದಲ್ಲಿ ಆರೋ ಪುಣ್ಯಾದಿಗರು ನಿತ್ಯಕ್ಕೆ ಸುತ್ತಿ ಕೊಟ್ಟ ಒಸ್ತ್ರ ಒಂದು ಜೊತೆ ಇದ್ದು ಅದರ ಕೆಂಪು ಮಾರಾಪಿಲಿ – ಅದುವೇ ಅದರ ಪರಮ ಸಂಪತ್ತು. ಬೇರೆ ನೊಗಬಂಗಾರು ಎಂತ್ಸೂ ಇಲ್ಲೆ!
ಹಾಂಗಾಗಿ ಕಲ್ಯಾಣಮಂಟಪವೋ, ಹೋದ ಮನೆಯ ಜೆಗಿಲಿಯೋ, ಹಟ್ಟಿಯ ಕೋಣೆಯೋ – ಎಲ್ಲಿ ಬೇಕಾರೂ ಸರಿ, ಒರಕ್ಕು ಬಂದೇ ಬತ್ತು!
ದಿನ ಉದಿ ಆಯೇಕಾರೆ ಬೆಶಿನೀರಿಂಗಿಚ್ಚಾಕಿ, ಮನೆಯೋರಿಂಗೆ ಎಚ್ಚರಿಗೆ ಅಪ್ಪಂದ ಮದಲೇ ಮಿಂದಿಕ್ಕುಗು, ಎಡಿಗಾದಷ್ಟು ಮನಾರಕ್ಕೆ. ಸಾಬೊನೊ – ಹಾಂಗೆ ಹೇಳಿತ್ತುಕಂಡ್ರೆ ಎಂತ್ಸು? 🙁
~
ಒಂದು ದಿಕ್ಕಂದ ಹೆರಡುವಗ ಇನ್ನೊಂದು ಮನೆಗೆ ಹೋಪಲೆದಕ್ಕಿತ ಪೈಶೆ ಕೇಳುಗು – ಮನೆ ಯೆಜಮಾನ್ರ ಹತ್ತರೆ.
ಯಜಮಾನಂಗೂ ಅದೊಂದೇ ಅವಕಾಶ ಇಪ್ಪದಿದಾ, ದರ್ಪ ತೋರುಸಲೆ – ಜೋರು ಮಾಡಿ ಬೈಗು.
ಮತ್ತೆ ಮೆಲ್ಲಂಗೆ ಮನೆ ಹೆಮ್ಮಕ್ಕಳ ಹತ್ರೆ ಕೇಳಿ ಹತ್ತಿಪ್ಪತ್ತು ರುಪಾಯಿ – ಬಸ್ಸಿಂಗೆ ದಕ್ಕಿತ – ತೆಕ್ಕೊಂಡು ಸಂತೋಷಲ್ಲಿ ಇನ್ನಾಣ ಮನೆಗೆ (/ ಕಲ್ಯಾಣಮಂಟಪಕ್ಕೆ) ಹೋಕು.
~
ಹೇಳಿಕೆ ಇರ, ಆದರೂ ಬಕ್ಕು.
ಸ್ವತಃ ಮನಾರ ಇರ, ಆದರೂ ಪರಿಸರ ಮನಾರ ಮಾಡ್ಳೆ ಎಡಿಗಾದಷ್ಟು ಸೇರುಗು.
ಆರ ಹತ್ತರೂ ಮಾತಾಡ, ಆದರೂ ಮಾತಾಡುಸಿರೆ ಉತ್ತರಕೊಡದ್ದೆ ಇರ.
ಎಲ್ಲೇ ಕೂದಿರಳಿ – ಹಲ್ಲು ಹೆರಹಾಕಿ ನೆಗೆಮಾಡುದು ನಿಲ್ಲುಸ.
ಕೈಗೆ ಪುರುಸೊತ್ತು ಸಿಕ್ಕಿರೆ ಅಂತೂ – ತಲೆತೊರುಸಿ ಹೇನುಕುಟ್ಟುತ್ಸು ಬಿಡ!!
ಹಶು ಅಪ್ಪದು ಮನುಷ್ಯ ಸಹಜ ಧರ್ಮ!
ಆದರೂ,ಇಷ್ಟೆಲ್ಲ ಇದ್ದರೂ ಒಂದೇ ಒಂದು ವಸ್ತು ಕದ್ದುಗೊಳ.
ಕೊಟ್ಟದರ ತೆಕ್ಕೊಳದ್ದೆಯೂ ಇರ. ಎಂತ ಕೊಟ್ರೂ ತೆಕ್ಕೊಂಗು. ಮಕ್ಕೊ ಆಟ ಆಡುವಗ ಒಂದೊಂದರಿ – ’ಇದಾ ಗುಬ್ಬಿ, ತೆಕ್ಕೊ’ ಹೇಳಿ ಊದುಬತ್ತಿ ಓಟೆ ಕೊಡ್ಳೆ ಇದ್ದು. ಸಂತೋಷಲ್ಲಿ ತೆಕ್ಕೊಂಡು ಅದರ ಮಾರಾಪಿನ ಹತ್ತರೆ ಮಡಿಕ್ಕೊಂಗು. ರಜಾ ಅರಡಿವ ದೊಡ್ಡ ಮಕ್ಕೊ ಅದರ ನೋಡಿ, ಬಾಕಿದ್ದೋರಿಂಗೆ ತೋರುಸಿ – ಹೆ ಹೆ, ಗುಬ್ಬಿಗೆ ಓಟೆಯೂ ಬೇಕಾವುತ್ತೋ – ಹೇಳಿ ನೆಗೆಮಾಡಿ ಗಟ್ಟಿಗರಪ್ಪಲಿದ್ದು ಕೆಲವು ಸರ್ತಿ! 🙁
ಗುಬ್ಬಿಯೂ ನೆಗೆಮಾಡುಗು, ಅವರೊಟ್ಟಿಂಗೇ!
~
ಒಂದು ಸರ್ತಿ ಹೀಂಗೆ ಒಂದು ದಿಕ್ಕೆ ಜೆಂಬ್ರಲ್ಲಿ,..
ಕ್ರಮದಂತೇ ನಾರ್ತ ಸೆಂಟಿನ ಮೈಗೆ ಮೆತ್ತಿಗೊಂಡು ಬಂದ ಒಬ್ಬ ಬೆಳಿಅಂಗಿ ಭಾವಯ್ಯ°!
ಈ ಗುಬ್ಬಿಯ ಹತ್ತರೆ ಎತ್ತುವಗ ಎಂತ ಪೌರುಷ ಬಂತೋ ಅರಡಿಯ – ಇದಾ, ಗುಬ್ಬಿಗೆ ಸೆಂಟು ಹಾಕುವೊ° – ಹೇಳಿ ಅದರ ಮುಚ್ಚಲು ತೆಗದು ತಲಗೇ ಎರದು ಬಿಟ್ಟ°!
ಹತ್ತರೆ ಇಪ್ಪ ಹತ್ತುಜೆನ ನೆಗೆಮಾಡಿ ಅಪ್ಪಗ – ಅವಂಗೂ ಕೊಶಿ ಆತಿದಾ!
ಜೆಂಬ್ರ ಇಪ್ಪದು ಸೇರಿದೋರ ಕೊಶಿಗೇ ಅಲ್ಲದೋ!! 🙁
ಪಾಪ, ಯೇವತ್ತೂ ಮೀಯದ್ದೆ ಪರಿಮ್ಮಳ ಬತ್ತ ಗುಬ್ಬಿ – ಆ ದಿನ ಸೆಂಟು ಮೆತ್ತಿ ವಾಸನೆ ಬಂದುಗೊಂಡು ಇತ್ತು.
ಹೇಂಗೂ ಆರೂ ಅದರ ಹತ್ತರೆ ಹೋಗವಿದಾ… ಅದು ಬೇರೆ.
~
ಅದೇನೇ ಇರಳಿ, ಎಲ್ಲಿತ್ತಿದ್ದೆ..? ಹಾಂ..
ಗುಬ್ಬಿಯೂ ಹಾಂಗೆ, ಮಾಸಿದ ಒಸ್ತ್ರವ ಸುತ್ತಿಗೊಂಡು – ಒಂದು ಕರೇಲಿ ಕೂದುಗೊಂಡಿತ್ತು.
ಬೌಷ್ಷ ಜೆಂಬ್ರ ಸುರುಅಪ್ಪಗ ಆ ಮೂಲೆಲಿ ಕೂದುಗೊಂಡಿದ್ದದು ಉಂಬಲಪ್ಪಗಳೇ ಎದ್ದತ್ತು.
ಆದಷ್ಟು ಎಲ್ಲೋರ ಕಣ್ಣನ್ನೂ ತಪ್ಪುಸಿಗೊಂಡು, ಎಡಕ್ಕಿಲಿ ಒಂದರಿ – ಬೇಡಿತಿಂತಲ್ಲಿ ಅಶನವೂ – ಬೈಗಳೂ ಒಟ್ಟಿಂಗೇ ತಿಂದತ್ತು.
ಈಗೀಗ ಪ್ರಾಯ ಆದ್ದು ಗೊಂತಾವುತ್ತು ಅದಕ್ಕೆ.
ತಲೆಕಸವು ಇನ್ನೂ ಬೆಳಿ ಆಯಿದು; ಮೋರೆಲಿ ಪ್ರಾಯದ ನೆರಿಗೆಗೊ ಬಯಿಂದು.
ಇನ್ನೆಷ್ಟು ದಿನ ತಿರುಗುತ್ತದು? ಒಂದು ವಿಶ್ರಾಂತಿ ಬೇಡದೋ? ಇನ್ನಂಬಗ ಶಾಶ್ವತ ವಿಶ್ರಾಂತಿಯೇ ಗೆತಿಯೋ? ಅದರಿಂದ ಮದಲೇ ಜಂಗಮ ಇಪ್ಪ ಗುಬ್ಬಿ ಎಲ್ಲಿಗಾರು ಒಂದಿ ನಿಂದು ಸ್ಥಾವರ ಅಕ್ಕೋ – ಹೇಳಿ ಯೋಚನೆಮಾಡಿಗೊಂಡಿತ್ತಿದ್ದೆ.
~
ಹಾಂಗೇ ಆ ದಿನ ಜೆಂಬ್ರಲ್ಲಿ ಒಟ್ಟಿಂಗೆ ಇದ್ದಿದ್ದ ಗಣೇಶಮಾವನ ಹತ್ತರೆ ಮಾತಾಡಿದೆ ಆ ಶುದ್ದಿ.
“ಪ್ರತಿಯೊಬ್ಬ ಹೀಂಗ್ರುತ್ತ ವೆಗ್ತಿತ್ವಂಗಳ ಹಿಂದೆಯೂ ಒಂದೊಂದು ಕರುಣಾಜನಕ ಕತೆ ಇರ್ತು ಒಪ್ಪಣ್ಣಾ –
ಆ ಕತೆಂದಾಗಿಯೇ ಇವು ಹೀಂಗೆ ಆಗಿಪ್ಪದು” – ಹೇಳಿದವು.
ಗುಬ್ಬಿಯ ಬಗ್ಗೆಯೂ ಒಂದು ಶುದ್ದಿ ಕತೆ ಗೊಂತಾತು..
~
ಗುಬ್ಬಿಯ ಅಪ್ಪ° ಮದಲಿಂಗೆ ಅಡಿಗ್ಗೆ ಹೋಗಿಂಡು ಇದ್ದದಾಡ.
ಅಪ್ಪಂಗೆ ಇದೊಂದು ಚುರುಕ್ಕಿನ ಮಗಳು ಮಾಂತ್ರ, ಬೇರೆ ಮಕ್ಕೊ ಇಲ್ಲೆ!
ಜಾಗೆ ರಜ ಇತ್ತು, ಆದರೆ ಇದರ ಅಪ್ಪಚ್ಚಿಯ ಸಂಸಾರವೂ ಅಲ್ಲೇ ಇದ್ದದಿದಾ, ಹಾಂಗಾಗಿ ಕೂದು ಉಂಬಲೆ ಗೊಂತಿಲ್ಲೆ.
ಅಪ್ಪಚ್ಚಿಗೆ ಎರಡು ಜೆನ ಮಾಣಿಯಂದ್ರು – ಇದಕ್ಕಪ್ಪಗ ತಮ್ಮಂದ್ರು.
~
ಇದು ಸಣ್ಣ ಇಪ್ಪಗಳೇ ಅಮ್ಮ ತೀರಿ ಹೋದಕಾರಣ ಅಪ್ಪನೇ ಆಯೇಕಷ್ಟೆ.
ಒಂದು ದಿನ ಅದರ ಅಪ್ಪಂಗೆ ಎಕ್ಸಿಡೆಂಟೋ – ಎಂತದೊ ಆಗಿ ಅಕಾಲಮರಣ ಆದವು.
ಅವರ ಸ್ವಾರ್ಜಿತ ಆಸ್ತಿ ಆದರೂ, ಅಪ್ಪಚ್ಚಿ ಎಂತದೋ ಸೈನು ಮಾಡುಸಿಗೊಂಡು ಇದಕ್ಕೆ ಎಂತದೂ ಸಿಕ್ಕದ್ದ ನಮುನೆ ಆತಡ.
ಬೇರೆ ಹತ್ತರೆ ಪೈಕಿಯೋರು ಹೇಳಿ ಆರನ್ನೂ ಗುರ್ತವೂ ಇಲ್ಲೆ ಇದಾ!
ಒಂದಾರಿ ಜಾರಿಗೊಂಬ ಲೆಕ್ಕಲ್ಲಿ ಅಪ್ಪಚ್ಚಿ ಗುಬ್ಬಿಯ ಮದುವೆ ಮಾಡುಸಲೆ ಹೆರಟನಾಡ.
ಅಷ್ಟಪ್ಪಗ ’ಕೂಸಿಂಗೆ ಅಪ್ಪಮ್ಮನೂ ಇಲ್ಲೆ, ಜಾಗೆಯೂ ಇಲ್ಲೆ’ ಹೇಳ್ತ ಕಾರಣಲ್ಲಿ ನಿಗಂಟಾದ ಮದುವೆಯನ್ನೂ ಮುರುದನಾಡ ಮದುಮ್ಮಾಯ.
ಭೌತಿಕವಾಗಿ ಕೂದು ಉಂಬಲೆ ಜಾಗೆಯೂ ಇಲ್ಲೆ, ಮಾನಸಿಕವಾಗಿ ಪ್ರೀತಿ ತೋರುಸಲೆ ಜೆನಂಗಳೂ ಇಲ್ಲೆ – ಹಾಂಗಾಗಿ ರಜಾ ಮನಸ್ಸು ಹದತಪ್ಪಿತ್ತಡ ಈ ಹೆಮ್ಮಕ್ಕೊಗೆ.
ಮದುವೆಯೂ ಆಯಿದಿಲ್ಲೆ, ಮನಸ್ಸು ಸರಿಯೂ ಆಯಿದಿಲ್ಲೆ.
ಅಂದಿಂದ ಇಂದಿನ ಒರೆಂಗೂ ಹೀಂಗೇ!
ಮನೆ ಮುರುತ್ತು!
ಮದುವೆಯೂ ಮುರುತ್ತು!!
ಮನಸ್ಸೂ ಮುರುತ್ತು!!!
ಈಗಾಣ ನಮುನೆಲಿ ಕೋರ್ಟಿಂಗೆ ಹೋಗಿ ಎಲ್ಲ ಹೋರಾಡಿರೆ ಧಾರಾಳ ಸಿಕ್ಕುಗು, ಆದರೆ, ಎಲ್ಲವುದೇ ಮನಸ್ಸು ಸರಿ ಇದ್ದರೆ ತಾನೇ? – ಹೇಳಿದವು ಗಣೇಶಮಾವ..
ಒಂದರಿ ಮನಸ್ಸೇ ತೊಳಸಿದ ಹಾಂಗಾತು!
~
ಚೆ, ಪ್ರತಿಯೊಬ್ಬ ಈ ನಮುನೆ ’ಜಂಗಮ’ ವೆಗ್ತಿತ್ವಂಗಳ ಹಿಂದೆಯೂ ಈ ನಮುನೆ ಸ್ಥಾವರ ಸಂಬಂಧ ಕಿತ್ತು ಮನಸ್ಸು ಹಾಳಾದ ಶುದ್ದಿ ಇಕ್ಕನ್ನೇ – ಹೇಳಿ ಅನುಸಿ ಹೋತು.
ಪಾಪ, ಅಂತವರ ನಾವು ನೆಗೆಮಾಡಿರೆ ಆವುತ್ತೋ? ಅವ್ವಾರೂ ಎಂತ ಮಾಡುಗು?
ನಾವೇ ನಮ್ಮ ಕೈಲಿ ಇಲ್ಲೆ ಹೇಳಿರೆ ಎಂತ ಮಾಡ್ಳೆಡಿಗು?
ಮನಸ್ಸು ಸರಿ ಇದ್ದರೆ ಮನುಶ್ಶ! ಅಲ್ಲದ್ದರೆ ಎಂತ ಇದ್ದು!?
ಹಾಂಗೆ ನೋಡಿರೆ, ಇವು ನಿರ್ಗತಿಕರಲ್ಲ, ಅನುಕೂಲಸ್ಥರೇ.
ಸಂಸ್ಕಾರ ಹೀನರಲ್ಲ – ಅಷ್ಟೊಳ್ಳೆ ಬುದ್ಧಿ ಇರ್ತು.
ಬೇಡ್ತವಲ್ಲ, ಅಭಿಮಾನ ಇರ್ತು ಅವಕ್ಕೆ, ದುಡುದು ತಿಂತವು.
ಇದೇವದೂ ಅಲ್ಲ, ಅವು ಅಲೆಮಾರಿಗೊ – ಅಷ್ಟೇ.
ಒಂದೇ ದಿಕ್ಕೆ ನೆಲೆನಿಲ್ಲದ್ದೆ, ಸಮಾಜದ ಒಳ ಒಂದಾಗಿ ಭಾಗವಹಿಸುವ ನಮ್ಮೋರು!
ಈಗ ಅವು ಜಂಗಮ ಆಗಿದ್ದವು.
ನಾಳೆ ಎಂತಾರು – ಮಳೆಯೋ, ಪ್ರವಾಹವೋ – ಆಗಿ ನಾವುದೇ ವಸತಿಹೀನರಾದರೆ; ಎಷ್ಟು ಪೈಸೆ ಇದ್ದರೆಂತ?
ನವಗೆ ಜಂಗಮರಾಗಿ ಜೀವನಕ್ಕೆ ಹೊಂದಿಗೊಂಬಲೆ ಎಡಿಗೋ?
ಅಷ್ಟಪ್ಪಗ ಅವ್ವೇ ಅನುಭವಸ್ಥರಾಗಿ ನಮ್ಮಂದ ಹೆರಿಯೋರಾಗಿ ಕಾಂಗಲ್ಲದೋ?!
~
ಹಾಂಗೆ ನೋಡಿರೆ ಎಲ್ಲೋರುದೇ ಜಂಗಮವೇ – ಸ್ಥಾವರ ಹೇಳಿ ಆರುದೇ ಇಲ್ಲೆ.
ಅವಕ್ಕೆ ಹೋಲುಸಿರೆ ನಾವು ರಜಾ ಸ್ಥಾವರವಾಗಿರ್ತು – ಅಷ್ಟೇ!
ಹುಟ್ಟಿದ ದಿನಂದ ತಿರುಗಲೆ ಸುರುಮಾಡ್ತು; ಸಾವನ್ನಾರವೂ ಪ್ರಯಾಣ ಮುಂದುವರುದೇ ಇರ್ತು, ಕಾವಿನಮೂಲೆ ಮಾಣಿ ಹೇಳಿದಾಂಗೆ.
ಅದಕ್ಕೇ ಮಾಷ್ಟ್ರುಮಾವ ಒಂದೊಂದರಿ ಜೀವನವ “ಹಿಂದಿರುಗದ ಹಾದಿ” ಹೇಳ್ತದು.. ಅಲ್ಲದೋ?
ಇನ್ನಾಣ ಸರ್ತಿ ನಿಂಗೊಗೆ ಗುಬ್ಬಿ ಸಿಕ್ಕಿರೆ ಈ ಶುದ್ದಿ ನೆಂಪಾದರೆ ಒಪ್ಪಣ್ಣ ಶುದ್ದಿ ಹೇಳಿದ್ದು ಸಾರ್ಥಕ ಆತು!
ಒಂದೊಪ್ಪ: ಗುಬ್ಬಿಗೂ ಗುಬ್ಬಚ್ಚಿಗೂ ಇಪ್ಪದು ಒಂದೇ ನಮುನೆ ಹೃದಯ! ಪೈಸೆ ಕೊಟ್ರೂ ಕೊಡದ್ರೂ, ಪ್ರೀತಿ ಕೊಟ್ಟೇ ಕೊಡ್ತವು!
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಎಲ್ಲಿಯೊ ಒ೦ದು ಕಡೆ ನಮ್ಮ ಒಳ ನಮ್ಮ ಸಮಾಜಲ್ಲಿ “ಗುಬ್ಬಿ” ಹೇಳ್ತ ಪಾತ್ರ ಇದ್ದೆ ಇರ್ತು…
ಒಪ್ಪಣ್ಣ ಹೇಳಿದಾ೦ಗೆ.. ಕಂಡೂ ಕಾಣದ್ದೆ ಮಾಡ್ತದು ನವು ಎಷ್ಟು ಸತ್ತಿ ಕ೦ಡಿದಿಲ್ಲೆ..!! ಅಲ್ಲದೊ?
ಎಷ್ಟೇ ಆದರು ಗುಬ್ಬಿ ಹಾ೦ಗಿಪ್ಪವರ ಪ್ರಾಮಾಣಿಕತೆ ನಾವು ಒಪ್ಪೆಕು..
ಬೆಳಿ ಅ೦ಗಿ ಭಾವ ಮಾಡ್ತಾ೦ಗೆ ಅಪಹಾಸ್ಯ ಮಾಡ್ತದು ನೋಡಿಪ್ಪಿಯೊ.. ಒಟ್ಟಿ೦ಗೆ ನೆಗಯೂ ಮಾಡಿಪ್ಪಿಯೊ..
ಆದರೆ, ನೆಗೆ ಮಾಡಿದ ಮೇಲೆ ಆ ಮನಸ್ಸು ಎಷ್ಟು ನೊ೦ದಿಗೊ೦ಡಿದೂ ಹೇಳಿ ಅವಕ್ಕೇ ಗೊ೦ತು.. 🙁
ಇದರ ಓದಿಯಪ್ಪಗ ಎನ್ನ ಮನಸ್ಸು ಕರಗಿ ಹೋತು.. ದೊಡ್ಡಭಾವ೦ಗೆ ಕಣ್ಣು ನೀರು ಬ೦ದಾ೦ಗೆ ಎನಗೂ ಬ೦ತು… :’(
ಒಪ್ಪಣ್ಣ ಭಾವ.. ಎ೦ದಿ ನಾ೦ಗೆ ನಿನ್ನ ಬರಹಲಿ ಪದ ಬಳಕೆ ಭಾರಿಲಾಕೆ ಆವುತ್ತು… ಅದ್ಭುತ ಲೇಖನ…!!!
ಬರದ್ದರ ಓದಿದವಕ್ಕೆ ಒ೦ದಾರಿಯ೦ಗೆ ಕೂದಲ್ಲಿಯ೦ಗ ಜುಮ್ಮ್ ಆದಿಕ್ಕು.. 🙁
ಒಪ್ಪಣ್ಣ, ನಿನ್ನ ಈ ವಾರದ ಶುದ್ದಿ ಓದಿ ಅಪ್ಪಗ ನಿಜವಾಗಿ ಮನಸ್ಸು ತೊಳಸಿತ್ತು. ಮನಸ್ಸಿಂಗೆ ಮುಟ್ಟುತ್ತ ಹಾಂಗೆ ಬರದ್ದೆ.
ನಮ್ಮ ಸುತ್ತಲೂ ಪ್ರತಿ ಜೆಂಬ್ರಲ್ಲಿಯೂ ಕಾಣ್ತ ವೆಗ್ತಿತ್ವಂಗ. ಗುಬ್ಬಿಯ ಹಾಂಗೆ ಈ ವೆಗ್ತಿತ್ವಂಗ ಕಾಂಬಲೆ ಒಂದೇ ಹಾಂಗೆ ಇರ್ತವು.
ನೀನು ಹೇಳಿದ ಹಾಂಗೆ ಸ್ವತಃ ಮನಾರ ಇಲ್ಲದ್ದರೂ ಸುತ್ತಲೂ ಮನಾರ ಮಡಿಕ್ಕೊಂಗು. ನೋಡಿ ಅಪ್ಪಗಳೇ ಅಂದಾಜು ಆವುತ್ತು ಅವರ, ಅಲ್ಲದ್ದೆ ಅವರ ಹಿಂದೆ ಇಪ್ಪ ಕತೆ ಎಂತಾಗಿಕ್ಕಪ್ಪಾ ಹೇಳಿ ಆವುತ್ತು. ಆದರೆ ವಿಶೇಷ ಅವರ ವಿಚಾರ್ಸುಲೆ ಹೋವುತ್ತಿಲ್ಲೆ ಅಲ್ಲದಾ? ನೀನು ಹೇಳಿದ ಹಾಂಗೆ ಜೀವನಲ್ಲಿ ಒಂದು ನೆಲೆ ತಪ್ಪಿದರೆ ಬದುಕಿಲಿ ಆರ ಆಶ್ರಯವೂ ಇಲ್ಲೆ, ತನ್ನವ್ವು ಹೇಳಿ ಹೇಳಿಗೊಂಬಲೆ ಆರೂ ಇಲ್ಲೆ, ನಾಳಂಗಂಗೆ ಕಟ್ಟಿ ಮಡುಗೆಕ್ಕು ಹೇಳಿ ಇಲ್ಲೆ, ಈ ಎಲ್ಲ ಇಲ್ಲೆಗಳ ಎಡಕ್ಕಿಲಿ ಅವರದ್ದು ಹೇಳಿ ಅಲ್ಲ ಆರದ್ದುದೇ ಮನಸ್ಸು ಹದ ತಪ್ಪುಗು ಅಲ್ಲದಾ? ಮತ್ತೆ ಅವಕ್ಕೆ ಅವರ ಬಗ್ಗೆ ಯೋಚನೆ ಇರ್ತಿಲ್ಲೆ. ಹೊಟ್ಟೆ ಯೋಚನೆ ಮಾಂತ್ರ ಆಗಿರ್ತು. ಅದರ ತುಂಬುಸುಲೆ ಎಡಿಗಪ್ಪ ಎಲ್ಲಾ ಪ್ರಯತ್ನ ಮಾಡ್ತವು. ಅದರಲ್ಲಿ ಗುಬ್ಬಿಯ ಹಾಂಗಿರ್ತವ್ವು ಸರಿಯಾದ ರೀತಿಲಿ ಊಟಕ್ಕೆ ತಕ್ಕಷ್ಟು ಕೆಲಸ ಮಾಡಿ ತುತ್ತಿನ ಚೀಲ ತುಂಬುಸುಗು. ಊಟದ ಋಣ ಮಡಿಕ್ಕೊಳ್ಳವು. ಹಾಂಗೆ ಹೇಳಿಗೊಂಡು ಬೇಕಷ್ಟು ಸಿಕ್ಕುತ್ತು ಹೇಳಿ ಒಂದೇ ದಿಕ್ಕೆ ನಿಲ್ಲವುದೇ!! ಒಂದು ತರಹದ ಸನ್ಯಾಸವೇ ಅಲ್ಲದಾ ಇದು? ಭಕ್ತಿಯ ಮಾರ್ಗ ವಿಶೇಷ ಅರಡಿಯ. ಆದರೆ ಇನ್ನೊಬ್ಬಂಗೆ ಉಪದ್ರ ಮಾಡದ್ದೆ ಬದುಕ್ಕುಗು ಅಲ್ಲದ? ಗುಬ್ಬಿ ಕದ್ದುಗೊಳ್ಳ, ಕೊಟ್ಟದರ ತೆಕ್ಕೊಂಗು ಅಲ್ಲದಾ? ಅದೇ ಪ್ರೀತಿಲಿ ಕೊಟ್ಟ ಯೇವುದನ್ನಾದರೂ ತೆಕ್ಕೊಂಗು ಅಲ್ಲದಾ? ಮಕ್ಕೊ ಕೊಟ್ಟದರ ಎಲ್ಲವನ್ನೂ ತೆಕ್ಕೊಳ್ತವು. ಮಕ್ಕೊ ಬಹುಶ ಎಲ್ಲವನ್ನೂ ಕೊಡ್ತವು ಗುಬ್ಬಿಯ ಹಾಂಗಿಪ್ಪವಕ್ಕೆ ಎಂತಕ್ಕೆ ಹೇಳಿದರೆ ಮಕ್ಕೊ ಕೊಡುವಾಗ ಅವರ ಮೋರೆಲಿ ಒಂದು ಮಾಸದ್ದ ನೆಗೆ ಇರ್ತಲ್ಲದಾ ಅದರ ನೋಡ್ಲೆ ಆದಿಕ್ಕು.
ಆದರೆ ಲೋಕಲ್ಲಿ ಹೀಂಗಿಪ್ಪ ವೆಗ್ತಿತ್ವಂಗ ಎಲ್ಲರುದೇ ಒಳ್ಳೆ ಮನಸ್ಸಿನವ್ವು ಆಯೆಕ್ಕು ಹೇಳಿ ಇಲ್ಲೆ ಅಲ್ಲದಾ? ಎಲ್ಲ ಸೌಕರ್ಯ ಇಪ್ಪ ಲೋಕದ ಮನುಷ್ಯರಲ್ಲಿ ಹೇಂಗೆ ಭಿನ್ನ ವೆಗ್ತಿತ್ವಂಗ ಇರ್ತೋ ಹಾಂಗೆ ಹೀಂಗಿಪ್ಪ ಅಲೆಮಾರಿ ವೆಗ್ತಿತ್ವಂಗಳಲ್ಲಿಯೂ ಇರ್ತು. ಕೆಲವು ಜನಂಗ ಹೋದಲ್ಲಿ ಕದ್ದುಗೊಂಬೋರುದೇ ಇರ್ತವು. ಅದು ಸೀರೆ, ಚಿನ್ನ, ಅಡಿಗೆ ಸಾಮಾನುಗ ಎಂತದೂ ಆದಿಕ್ಕು. ಬಹುಶ ಹೀಂಗಿಪ್ಪ ಜನಂಗಳಿಂದ ಮೋಸ ಹೋಗಿ ಅನುಭವ ಆದಪ್ಪಗ ಗುಬ್ಬಿಯ ಹಾಂಗೆ ನಿಜವಾಗಿ ಪ್ರೀತಿಗೆ ಅರ್ಹರಾದಂಥವರನ್ನುದೇ ದೂರ ಮಡುಗೆಕ್ಕಾಗಿ ಬಪ್ಪದು ಅಲ್ಲದಾ? ಅದು ನವಗೆ ಆದ ಅನುಭವ ಪಾಠಂದಾಗಿ ಆಗಿರ್ತು.
ನೀನು ಹೇಳಿದ ಹಾಂಗೆ ಎಲ್ಲಿಯಾದರೂ ಕಾಲನ ಕೈಗೆ ಸಿಕ್ಕಿ ನವಗೂ ಆ ಗೆತಿ ಬಂದರೆ ನವಗೆ ಜಂಗಮ ಬದುಕು ಸಾಧ್ಯವಾ? ಬಹುಶ ಅವ್ವೇ ನವಗೆ ಅನುಭವಸ್ಥರಾಗಿ ಕಾಂಗು ಹೇಳಿ ನೀನು ಹೇಳಿದ್ದದು ಸರಿಯೇ! ನಮ್ಮ ಬದುಕುದೇ ಜಂಗಮವೇ ಅಲ್ಲದಾ?
ಒಂದೊಪ್ಪ ಲಾಯ್ಕಾಯಿದು. ಗುಬ್ಬಿಯ ಹಾಂಗೆ ಪ್ರೀತಿಯೋ, ತಾತ್ಸಾರವೋ, ದ್ವೇಷವೋ, ಕೋಪವೋ, ಏನು ಕೊಟ್ಟರೂ ಪ್ರೀತಿ ಒಂದನ್ನೇ ವಾಪಾಸು ಮಾಡ್ತವಕ್ಕೆ ಎಲ್ಲರಿಂದಲೂ ಪ್ರೀತಿಯೇ ಸಿಕ್ಕಲಿ. ನಕಲಿ ಜಂಗಮರಿಂದಾಗಿ ಅಸಲಿ ಜಂಗಮರ ಬದುಕ್ಕುದೇ ಹಾಳಗದ್ದೆ ಇರಳಿ.. ಅವರ ಪಾಡಿಂಗೆ ಅವರ ಜೀವನ ಶಾಶ್ವತ ವಿಶ್ರಾಂತಿಯ ಕಡೆಂಗೆ ಸಾಗಲಿ..
ಶ್ರೀಅಕ್ಕಾ..
ಚೆಂದದ “ಶುದ್ದಿ”ಬರದ್ದಕ್ಕೆ ಒಪ್ಪಂಗೊ!
{ಒಂದು ತರಹದ ಸನ್ಯಾಸವೇ ಅಲ್ಲದಾ ಇದು}
ಸರಿಯಾಗಿ ಹೇಳಿದಿ ಅಕ್ಕ ನಿಂಗೊ!
ಅಪ್ಪಾದ ವಿಚಾರವೇ. ತನಗೆ, ತನ್ನ ಸ್ವಂತಕ್ಕೆ, ಎಂತದೂ ಮಡಿಕ್ಕೊಳದ್ದೆ, ಕೇವಲ ಸಮಾಜಂದಲೇ ತೆಗದು, ಸಮಾಜದೊಳ ಬದ್ಕುತ್ತ ಮಹಾಕಾರ್ಯ ಮಾಡ್ತ ಇಂತೋರು ಸನ್ಯಾಸ ಅಲ್ಲದ್ದೆ ಬೇರೆ ಯೇವ ಆಶ್ರಮ ಮಾಡ್ತವು? ಅಲ್ಲದೋ?
ಮನಸ್ಸಿಂಗೆ ತಟ್ಟುವ ಹಾಂಗೆ ಬರದ್ದಿ.
ಇದು ಎಲ್ಲಾ ರೊಗಸ್ಥ ಮನಸ್ಸುಗೊ ಮಾಡುವ ಕೆಲಸ.
ಆನು ಸಣ್ಣಾದಿಪ್ಪಗ ಹಿಂಗೆ ಒಬ್ಬರ ನೊಡಿದ ನೆಂಪಿದ್ದು. “SI (Sabbanakodi Ishwara Bhat)” ಹೇಳಿ. ಈಗಲೂ ಇಕ್ಕು.
ಆವರದ್ದು ಹೀಂಗಿಪ್ಪ ಒಂದು ಕರುಣಾಜನಕ ಕಥೆ.
ಸಣ್ನಾದಿಪ್ಪಗ ಆನುದೆ ತಮಾಶೆ ಮಾಡಿಗೊಂಡು ಇತ್ಥೆ. ಈಗ ಗ್ರೆಶಿರೆ ಅಸಹ್ಯ ಅವುತ್ತು.
ಮಕ್ಕೊ ಹಾಂಗಿಪ್ಪ ತಪ್ಪು ಮಾಡಿರೆ ದೊಡವು ನೆಗೆ ಮಾಡುದರ ಬದಲಾಗಿ ತಿದ್ದಿ ಬುದ್ದಿ ಹೇಳೆಕ್ಕು.
ನಮ್ಮ ಸಮಾಜಲ್ಲಿ ಹಾಂಗಿಪ್ಪ ಪ್ರಬುದ್ದತೆ ಎಲ್ಲರಿಂಗೂ ಬರಲಿ.
ಯಸ್ಸೈ ಯ ಬಗ್ಗೆ ಹೇಳಿ ಸೂಚ್ಯವಾಗಿ ಒಪ್ಪ ಕೊಟ್ಟದಕ್ಕೆ ಒಪ್ಪಂಗೊ! 🙂
ಮಾಣಿಯ ಶುದ್ದಿಗೊಕ್ಕೆ ಕಾಯಿತ್ತಾ ಇದ್ದೆ ಪುಟ್ಟೋ..
ಒಂದು ಆಧಾರ ಇಲ್ಲದ್ದ ಹೆಮ್ಮಕ್ಕೊ, ಅಲೆಮಾರಿ ಜೀವನಕ್ಕೆ ಅನಿವಾರ್ಯವಾಗಿ ಹೊಂದಿಗೊಳೆಕ್ಕಾಗಿ ಬಂದದರ ಹೇಳಿದ್ದು ಮನಸ್ಸಿಂಗೆ ತುಂಬಾ ನಾಟಿತ್ತು.
ಸಮಾಜ ನಡವದೇ ಪ್ರೀತಿ ವಿಶ್ವಾಸಲ್ಲಿ. ಆದರೆ ಅದು ಸಿಕ್ಕೆಕ್ಕಾರೆ ಪೈಸೆ ಬಲ ಬೇಕು ಹೇಳಿ ಆದರೆ, ಅದು ಇಲ್ಲದ್ದವನ ಜೀವನ ಹೇಂಗೆ ಇಕ್ಕು?
ಮನುಷ್ಯ ಮನುಷ್ಯರ ಸಂಬಂಧ ಬರೇ ಪೈಸೆಯ ಮೋರೆ ನೋಡುವದರಲ್ಲಿ ಮುಗಿತ್ತು ಹೇಳಿರೆ, ಬಾಂಧವ್ಯಕ್ಕೆ ಎಂತ ಬೆಲೆ?
ಅಶನವೂ ಬೈಗುಳವೂ ಒಟ್ಟಿಂಗೇ ತಿಂದರೂ, ತಿಂದ ಅಶನದ ಋಣ ತೀರುಸುವೆ ಹೇಳ್ತ ಭಾವನೆಂದ ಮಾಡುವ ಈ ಗುಬ್ಬಿಯ ಕೆಲಸ ನೋಡಿ ಬಾಕಿಪ್ಪವು ಕಲಿಯೆಕ್ಕು. ಎಂತಗೆ ಹೇಳಿರೆ, ಜಪಾನಿಲ್ಲಿ ಮೊನ್ನೆ ಆದ ಹಾಂಗಿಪ್ಪ ಪ್ರಾಕೃತಿಕ ವೈಪರೀತ್ಯ ಉಂಟಾದರೆ, ಎಲ್ಲರೂ ಜಂಗಮಂಗಳೇ. ಅಂಬಗ ಹಶು ಹೇಳಿರೆ ಎಂತರ ಹೇಳಿ ಗೊಂತಕ್ಕು, ಅಲೆಮಾರಿ ಜೀವನದ ಅನುಭವದ ಅನಿವಾರ್ಯತೆಯೂ ಉಂಟಕ್ಕು.
ಒಂದೊಪ್ಪ ಲಾಯಿಕ ಆಯಿದು. ಅವು ತೋರುಸುತ್ತ ಪ್ರೀತಿಗೆ ಪ್ರತಿ ಸ್ಪಂದನ ತೋರುಸುವಷ್ಟಾದರೂ ಮಾನವತ್ವ ಒಳುಶಿಗೊಂಡರೆ, ಜೀವನ ಸಾರ್ಥಕ.
ಉಪಕಾರ ಮಾಡ್ಲೆ ಎಡಿಯದ್ದರೂ ತೊಂದರೆ ಇಲ್ಲೆ. ಉಪದ್ರ ಮಾಡದ್ದರೆ ಅದುವೇ ದೊಡ್ಡ ಉಪಕಾರ.
ಶರ್ಮಪ್ಪಚ್ಚೀ..
ತುಂಬಾ ಚೆಂದದ ಒಪ್ಪ ಕೊಟ್ಟಿ!
{ ಸಮಾಜಲ್ಲಿ ಪ್ರೀತಿ ಸಿಕ್ಕೇಕಾರೆ ಪೈಸೆ ಬಲ ಬೇಕು } –
ಕೆಲವು ಜೆನ ಮಾಡ್ತದು ಕಾಂಬಗ ಸತ್ಯವೇ ಹೇಳಿ ಅನುಸುತ್ತು.
ಧನಸಂಪತ್ತು ಆದರೆ ಮಾಡಿಗೊಂಬಲೆಡಿಗು, ಮನ ಸಂಪತ್ತು ಇಲ್ಲದ್ದರೆ ಎಂತ ಮಾಡ್ತದು, ಅಲ್ಲದೋ?
ಆದರೆ ನಮ್ಮ ಬೈಲಿಲಿ ಬೋಚಬಾವಂಗೂ ಎಲ್ಲೋರು ಪ್ರೀತಿ ಕೊಡ್ತವು ಹೇಳ್ತದೇ ಹೆಗ್ಗಳಿಕೆ. ಅಲ್ಲದೋ? 🙂
ಒಪ್ಪಂಗೊಕ್ಕೆ ಒಪ್ಪಂಗೊ ಅಪ್ಪಚ್ಚೀ.
ಛೇ…
🙁
ನಮ್ಮ ಜನವೇ ಹೀಂಗೆ…. ಚಳಿ ಅಪ್ಪಗ ಬೆಶಿ ಚಾಯ ಕುಡುದವು… ಮತ್ತೆ ಅವಕ್ಕೆ ಚಳಿ ಬಿಟ್ಟತ್ತದ…… ಹಾಂಗಾಗಿ ಬಾಕಿ ಒಳುದವರ ಚಳಿ ಗೊಂತಾವುತ್ತಿಲ್ಲೆ. ನಮ್ಮ ಸಮಾಜಲ್ಲಿ ಈ ಗುಬ್ಬಿಹಾಂಗಿಪ್ಪ ತುಂಬಾ ಜೆನ ಇದ್ದವು. ಆವಕ್ಕೆ ಚಳಿ ಬಿಟ್ಟು ಹೆರಬಪ್ಪಲೇ ಅವಕಾಶ ಇರ್ತ್ತಿಲ್ಲೆ… ಅಷ್ಟ್ಟು ಪಾಪದವು…ಎಂತ ಮಾಡೆಕ್ಕು ಹೇಳಿ ಅರಡಿಯದ್ದವು… ಅಲ್ಲಿ ಇಲ್ಲಿ ಸಣ್ಣ ಕೆಲಸ , ಒಂದೊಂದರಿ ಅರಡಿಯದ್ದೆಯೋ … ಆರಡಿಯೋ ಕದ್ದುಕೊಂಬೊದು {ಆಸೆ ಆಗಿ… ಇಲ್ಲದ್ದವಕ್ಕೆ ಯಾವಗಳೂ ಆಸೆಯೆ….ನಮ್ಮ ಪ್ರಕ್ರತಿಯೇ ಹಾಂಗೆ} ಎಂಥ ಮಾಡೊದು… ಕಡೆಂಗೆ ದೇವರ ದೂರೊದು….. “ದೇವರು ಅವಕ್ಕೆ ಹಾಂಗೆ ಹೇಳಿ ಬರದ್ದ ” ಹೇಳಿ. ಎಡಿಗಾರೆ ಇಂತವಕ್ಕೆ ಸಹಾಯ ಮಾಡುವ.. ಎದಿಯದ್ರೆ ನೆಗೆ ಮಾಡೊದು ಬೇಡ…… ಒಟ್ಟಿಲ್ಲಿ ನಮ್ಮ ಸಮಾಜಲ್ಲಿಪ್ಪ ಪಾಪದವರ ಬಗ್ಗೆ ಬರದ್ದು ಲಾಯಿಕ್ಕಯಿದು ಒಪ್ಪಣ್ಣ.
ಆನ. ಸುಬ್ಬಣ್ಣಾ..
ಚಾಯ ಕುಡಿತ್ತದರ ಮೂಲಕ ಸಮಾಜದ ಚಿಂತನೆಯ ಸೂಕ್ಷ್ಮವಾಗಿ ಹೇಳಿದ್ದಕ್ಕೆ ತುಂಬಾ ಒಪ್ಪಂಗೊ.
ಕಡೆಂಗೆ ದೇವರ ದೂರ್ತು, ಆದರೆ ಹೀಂಗಿರ್ತ ಗುಬ್ಬಿಗೊಕ್ಕೆ ಉಪದ್ರ ಕೊಡುವಗ ದೇವರ ನೆಂಪಾಗ ಇವಕ್ಕೆ, ಅಲ್ಲದೋ?
ಒಪ್ಪ ಒಪ್ಪ ಕೊಟ್ಟದಕ್ಕೆ ಒಪ್ಪಂಗೊ.
ಅಸಹಾಯಕ ಗುಬ್ಬಿಯ ಕತೆ ಕೇಳಿ ತುಂಬಾ ಬೇಜಾರು ಆತು. ತನ್ನಿಂದ ಎಡಿಗಾದಷ್ಟು ಸಕಾಯ ಮಾಡುವೆ ಹೇಳ್ತ ಒಳ್ಳೆ ಮನಸ್ಸಿನ ಹೀಂಗ್ರುತ್ತ ಪಾಪದವರ ಕೆಲವು ಜೆನ ತಮಾಷೆ ಮಾಡ್ತವಾನೆ. ಎಂಗಳ ಊರಿಲ್ಲಿ ಯುದೆ ಒಬ್ಬ ಇದ್ದಿದ್ದ. ಆನು ಸಣ್ಣ ಇಪ್ಪಗ ಅಂಬಗಾಣ ಜವ್ವನಿಗರೆಲ್ಲ ಅವಂಗೆ, ಬೀಡಿ ಒಳ ಮೆಣಸಿನ ಹೊಡಿ ಹಾಕಿ ಎಳವಲೆ ಕೊಟ್ಟದು ಈಗಳೂ ನೆಂಪು ಆವುತ್ತು. ಪಾಪ, ಒಂದು ಬೀಡಿ ಸಿಕ್ಕಿತ್ತಾನೆ ಹೇಳಿ ಅವ ಬೀಡಿಗೆ ಕಿಚ್ಚು ಕೊಟ್ಟು ಗಮ್ಮತ್ತಿಲ್ಲಿ ಎಳವಗೆ, ಕಾರ ಆಗಿ ಅವನ ಕಣ್ಣಿಲ್ಲಿ ನೀರು ಬಂದಿತ್ತು. ಪಾಪದವಕ್ಕೆ ನವಗೆ ಎಡಿಗಾದರೆ ಸಕಾಯ ಮಾಡೆಕು, ಇಲ್ಲದ್ರೆ, ತಳಿಯದ್ದೆ ನಮ್ಮ ಷ್ಟಕ್ಕೆ ಕೂಬ್ಬಲಾದ್ರೂ ಅಕ್ಕಾನೆ. ಒಪ್ಪಣ್ಣನ ಲೇಖನ ಲಾಯಕಾಯಿದು.
ಬೊಳುಂಬುಮಾವಾ..
ಬೀಡಿಯ ಶುದ್ದಿ ಕೇಳಿ ಶ್ವಾಸಕೋಶವೇ ಉರುದ ಹಾಂಗಾತು ಒಪ್ಪಣ್ಣಂಗೆ! 🙁
ಅಪ್ಪು ಮಾವ, ಇದು ತಪ್ಪು.
ಈಗೀಗ ರಜ ಕ್ರಮ್ಮಿ ಆಯಿದು, ಮದಲಿಂಗೆ ಇನ್ನೂ ಜಾಸ್ತಿ ಇತ್ತಡ ಈ ನಮುನೆ ಅನಾರೋಗ್ಯಕರ ಬಿಂಗಿಗೊ!
ತುಂಬಾ ಲಾಯ್ಕಾಯಿದು ಬರದ್ದು. ಈ ‘ಗುಬ್ಬಿ’ಯ ಕಥೆ ಎಲ್ಲೊರ ಮನಸ್ಸಿಂಗೂ ತಟ್ಟುವಂಥದ್ದೇ.
ಎಂಗಳ ಹೊಡೆಲಿ ಹೀಂಗಿಪ್ಪ ಒಬ್ಬ ‘ರಾಮಣ್ಣ’ ಇದ್ದ. ಎಲ್ಲೊರು ಅವನ ‘ಶಾಸ್ತ್ರಿ’ ಹೇಳಿ ದಿನಿಗೇಳುದು.
ಅವ ಒಂದು ದಿನ ನಡಿರುಳು ಯಾವುದೋ ಜೆಂಬ್ರಂದ ಬಪ್ಪಾಗ ತಡವಾಗಿ, ಪೇಟೆಲಿ ಎಂತ ವಾಹನ ಸಿಕ್ಕದ್ದೆ ಆ ನಡಿರುಳು ಆರು ಕಿಲೋಮೀಟರ್ ನಡಕ್ಕೊಂಡು ಬಂದು – ಅದೂ ಹಗಲು ನಡವಾಗಳೇ ಡಂಕಿಬೀಳ್ತಾಂಗಿಪ್ಪ ಮಾರ್ಗ ಎಂಗಳದ್ದು – ಅಲ್ಲಾಗಿ ಎದ್ದು ಬಿದ್ದು ಬಂದು, ಮನೆಯವರ ಏಳ್ಸಿದರೆ ಅವಕ್ಕೆ ಉಪದ್ರ ಅಕ್ಕು ಹೇಳಿ ಹೆರ ಜೆಗಿಲಿಲೇ ಮನುಗಿತ್ತಿದ್ದನಡ.
ಗುಬ್ಬಿಯ ಕಥೆ ಓದುವಾಗ ಎಂಗಳಲ್ಲಿ ಆದ ಈ ರಾಮಣ್ಣನ ಕಥೆ ನೆಂಪಾತು.
ಅವಂಗೆ ಮಾತು ರಜ್ಜ ಜಾಸ್ತಿ. ಎಲ್ಲೊರು ಅವನ ಬಾಯಿಗೆ ಕೋಲು ಹಾಕುವವ್ವೇ. ಎಲ್ಲ ಅವನ ತಮಾಶೆ ಮಾಡಿ ನೆಗೆ ಮಾಡುವಾಗ, ಬುದ್ಧಿ ಸ್ಥಿಮಿತಲ್ಲಿ ಇಲ್ಲದ್ದದು ಅವಂಗೋ ಅಥವಾ ಈಚವಕ್ಕೋ ಹೇಳಿ ಕನ್ಫ್ಯೂಸು ಬತ್ತು!
ಅನುಶ್ರೀ, ಗುಬ್ಬಿಯ ಕತೆ ಕೊಶಿ ಆದ್ದು ಕಂಡು ಒಪ್ಪಣ್ಣಂಗೆ ಸಮಾದಾನ ಆತು!
ರಾಮಣ್ಣ ಶಾಸ್ತ್ರಿಯ ಕತೆ ಗೊಂತಾತು!
ಆ ದೊಡ್ಡ ದೇಹವ ಹೊತ್ತೊಂಡು ಅಷ್ಟು ದೂರ ನೆಡಕ್ಕೊಂಡು ಬಂದದಾದರೂ ಹೇಂಗಪ್ಪಾ! ಯಬ್ಬ!
ಶ್! ಅಜ್ಜಿಗೆ ಹೇಳಿಕ್ಕೆಡಿ, ಮತ್ತೆ ರಾಮಣ್ಣಂಗೂ, ನಿನಗೂ ಒಟ್ಟಿಂಗೆ ಪರಂಚಲೆ ಸುರುಮಾಡುಗು!
ಫಸ್ಟ್ ಕ್ಲಾಸ್ ಆಯಿದು ಭಾವಯ್ಯ, ಕಣ್ಣೊ೦ದರಿ ಮ೦ಜಾತು … ಹಾ೦ಗೆ ಅಸಹಾಯಕರಿ೦ಗೆ ಉಪಕಾರ ಮಾಡ್ಲೆ ಎಡಿಯದ್ರು, ಉಪದ್ರ ಮಾಡಿಕ್ಕಲಾಗ ಹೇಳಿ ನೆ೦ಪು ಮಾಡಿಗೊ೦ಬಾಗಾತು ….
ಶಂಕರಭಾವಯ್ಯ!
ಕೊಶಿ ಆತು ಒಪ್ಪ ಕಂಡು.
ಹೇಳಿದಾಂಗೆ, ಇದಾರು?ರಜ್ಜ ವಿವರ ಕೊಡ್ತೊರೋ?
ನಮಸ್ತೆ, ಶ೦ಕರನ ಒಟ್ಟೀ೦ಗೆ ಮಧು ಸೆರಿಗೊ೦ಡ ಹಾ೦ಗೆ ಇಪ್ಪ ಹೆಸರು.
ಕೆಲವರಿ೦ಗೆ ಗುರು, ಹಲವರಿ೦ಗೆ ಶಿಷ್ಯ.
ಸಮಾಜಲ್ಲಿ ಹೀಂಗೆ ಅನಾದರ,ಸಸಾರಕ್ಕೆ ಒಳಗಾದ ಮನುಷ್ಯರು ಇದ್ದವು.ಅವರ ಬಗ್ಗೆ ಗಮನ ಸೆಳೆದು,ಚಿಂತನೆಗೆ ಹಚ್ಚುವ ಕೆಲಸ ಮಾಡಿದ್ದಕ್ಕೆ ಧನ್ಯವಾದ.
ಕೆಲವರು ಹೆಚ್ಚಿಗೆ ಬುದ್ಧಿ ಇಲ್ಲದ್ದೆ,ಕೆಲಸವೂ ಮಾಡಲೆ ಎಡಿಯದ್ದೆ ಹೀಂಗೆ ಅಲೆಮಾರಿಗೊ ಆವುತ್ತವು.ನಮ್ಮವು ಕೆಲವರು ಅಂತವರ ಹಾಸ್ಯ ಮಾಡುತ್ತವು.ಇದು ತಪ್ಪು.
ಖಡ್ಪದ ವಿಶಯವ ಖಡ್ಪಕೆ ಹೇಳಿದ ಸಣ್ಣ ಒಪ್ಪ ಕೊಶಿ ಆತು ಗೋಪಾಲಣ್ಣ.
ಈ ನಮುನೆ ಅಪಹಾಸ್ಯ ಮಾಡ್ತದು “ಬರ್ಮು” ಹೇಳಿ ಗ್ರೇಶುತ್ತವು ಕೆಲವು ಜೆನ.
ಅವರ ಕಂಡ್ರೆ ಒಪ್ಪಣ್ಣಂಗೆ ಉರುದು ಬತ್ತು ಪಿಸುರು! 🙁
ಈ ಕಥೆ ಓದಿಯಪ್ಪಗ ಎನಗೂ ಅಕ್ಷರಶಃ ಇದೇ ಅನುಭವ ಆಯಿದು ದೊಡ್ಡಭಾವ..
ಉದಿಯಪ್ಪಗ ಒಂದಾರಿ ಈ ಶುದ್ದಿಯ ಓದ್ಲೆ ಹೆರಟೆ. ಅರ್ಧ ಓದಿಯಪ್ಪಗಳೇ ಭಾವೋದ್ವೇಗಲ್ಲಿ ಕಣ್ಣು ಮಂಜಾತು. ಮುಂದೆ ಓದ್ಲೆ ಎಡಿಗಾಯಿದೇ ಇಲ್ಲೆ.
ಹೊತ್ತೋಪಗ ಅಮ್ಮನನ್ನೂ ಹೆಂಡತಿಯನ್ನೂ ತಂಗೆಯನ್ನೂ ಹತ್ತರೆ ಕೂರ್ಸಿಂಡು ಅವಕ್ಕೆಲ್ಲ ಕೇಳುವಹಾಂಗೆ ಪುನಃ ಈ ಶುದ್ದಿಯ ‘ವಾಚನ’ ಮಾಡಿದೆ. ಗುಬ್ಬಿಯ ಕಥೆ ಎಲ್ಲೋರ ಅಂತಃಕರಣವ ಎಷ್ಟು ಆಳಕ್ಕೆ ಹೊಕ್ಕಿತ್ತು ಹೇಳಿರೆ- ಕಥೆ ಓದಿ ಮುಗುದು ಕ್ಷಣ ಕಾಲ ಕಳುದರೂ ಪ್ರತಿಕ್ರಿಯೆ ಕೊಡ್ಲೆ ಆರಿಂಗು ಮಾತೇ ಬಾರ!
‘ಚಿಂಯ್ಯಾ ಚಿಂಯ್ಯಾ ಚಿಕ್ಕಾ ಗುಬ್ಬಿ..’ ಶಿಶುಗೀತೆ ನೆಂಪಾತು. ಎಲ್ಲಿಯೂ ಗೂಡು ಕಟ್ಟ್ಲೆ ಎಡಿಗಾಗದ್ದ ಈ ‘ಗುಬ್ಬಿ’ಗೆ ನಮ್ಮ ಒಪ್ಪಣ್ಣ ಗೂಡು ಒದಗುಸಿ ಕೊಟ್ಟಿದ..
ಒಂದೆರಡಲ್ಲ- ಈ ಶುದ್ದಿ ಓದಿದ ನೂರಾರು ಸಹೃದಯಿಗೊ ಅವರವರ ಹೃದಯದ ಗೂಡಿನ ಬಾಗಿಲು ತೆಗದು ಗುಬ್ಬಿಯ ಬರಮಾಡಿಯೊಂಗು ಖಂಡಿತ.
ಭೇಷ್ ಒಪ್ಪಣ್ಣ.. ಭೇಷ್..! ಏನೂ ಇಲ್ಲದ್ದ; ಏನೂ ಅಲ್ಲದ್ದ ನಮ್ಮವಕ್ಕೂ ಬೈಲಿಲ್ಲಿ ಗೌರವ ಇದ್ದು ಹೇಳ್ತದರ ಈ ಶುದ್ದಿಯ ಮೂಲಕ ತೋರ್ಸಿಕೊಟ್ಟೆ.
ಅಭಿನಂದನೆಗೊ.
ಸುಭಗಣ್ಣಾ..
ಮನೆಲಿ ನಿಂಗೊ ಓದಿದ ವಿಶಯ ಕೇಳಿ ಕೊಶಿಯೂ ಆತು, ಬೇಜಾರವೂ ಆತು.
ಕೊಶಿ ಆದ್ದು, ಮನೆಯೋರು ಎಲ್ಲೋರುದೇ ಬೈಲಿನ ಶುದ್ದಿಗಳ ಕೇಳ್ತವನ್ನೇ ಹೇಳಿಗೊಂಡು.
ಬೇಜಾರ ಆದ್ದು, ಮನೆಯ ಎಲ್ಲೋರ ಮನಸ್ಸಿಂಗೂ ಗುಬ್ಬಿ ಮುಟ್ಟಿತ್ತನ್ನೇ – ಹೇಳಿಗೊಂಡು.
ಗುಬ್ಬಿಯ ಶುದ್ದಿ ಕೇಳಿರೆ ಆರಿಂಗಾರೂ ಬೇಜಾರ ಆಗದ್ದೆ ಇಕ್ಕೋ? 🙁
ಪ್ರೀತಿ-ಪ್ರೋತ್ಸಾಹಕ್ಕೆ ಅನಂತ ಅಭಿವಂದನೆಗೊ, ಸುಭಗಣ್ಣ..
ಕಥೆ ಓದಿ, ಎರಡು ಹನಿ ಕಣ್ಣು ನೀರು ಹಾಕುತ್ತ ಹಾಂಗಿಪ್ಪ ಒಪ್ಪ ಕಥೆ ಓದಿ ಸುಮಾರು ಸಮಯ ಆತು.
ಆದರೆ,
ಇದು ಕಥೆ ಅಲ್ಲ, ಜೀವನ…
ದೊಡ್ಡಬಾವಾ..
ಗುಬ್ಬಿಯ ಕತೆ ನೆಂಪಪ್ಪಗ ನೆಂಪಪ್ಪಗ ಒಪ್ಪಣ್ಣಂಗೂ ಒಂದರಿ ಮನಸ್ಸು ಕಣ್ಣೀರು ಹಾಕಲೆ ಇದ್ದು! 🙁
🙁
ಪೆರುವದಣ್ಣಂಗೆ ಬೇಜಾರಾಗಿ ಮಾತೇ ಬತ್ತಿಲ್ಲೆಯೋ ಹೇಳಿಗೊಂಡು!
ಒಂದು ಬೇಜಾರವ ಕೊಟ್ಟು ಶುದ್ದಿಗೆ ಪುಷ್ಟಿಕೊಟ್ಟವು.
ಹೇಳಿದಾಂಗೆ, ಪೆರುವದ ಜೋಯಿಷರ ಹತ್ತರೆ ಪುಸ್ತಕ ಇದ್ದಡ, ಓದಿ – ಧ್ಯಾನ ಮಾಡಿ.
ಮನಸ್ಸು ಸರಿ ಅಕ್ಕು 😉
ನಿಜವಾದ ಮಾತು ಹೇಳಿದಿ ಒಪ್ಪಣ್ಣಾ.. ಕೆಲವು ಸ೦ದರ್ಭ೦ಗಳಲ್ಲಿ, ಭಾವನೆಗಳ ಹೆರಹಾಕಲೆ ಮಾತುಗೊ ಸಾಕಾವ್ತಿಲ್ಲೆ..
ಲೇಖನ ಒಪ್ಪ ಆಯಿದು ಒಪ್ಪಣ್ಣ.. ಗುಬ್ಬಿಯ ಹಾಂಗಿಪ್ಪ ಎಷ್ಟೋ ಜನ ನಮ್ಮ ಸಮಾಜಲ್ಲಿ ಇದ್ದವು. ಎಲ್ಲರುದೇ ಒಪ್ಪಣ್ಣ ಹೇಳಿದ ಹಾಂಗೆ ಯಾವುದೋ ಒಂದು ಕಾರಣಂದ ಕಾಲದ ಹೊಡೆತಕ್ಕೆ ಸಿಕ್ಕಿ ಗುಬ್ಬಿಯ ಹಾಂಗೆ ಆಗಿತ್ತವು.
ಒಪ್ಪಂಗಳೊಟ್ಟಿಂಗೆ… 🙂
ಮುಣ್ಚಿಕಾನದ ಸಣ್ಣ ಒಪ್ಪ – ಗಾಂಧಾರಿಮುಣ್ಚಿಯಷ್ಟಕೇ.
ಕೊಶಿ ಆತು.
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರದ ಹಾಂಗಿರ್ತ ಹೊಡೆತ ಸಿಕ್ಕಿರೆ ಸಹಿಸಲೇ ಎಡಿಯ, ಅಲ್ಲದೋ?
ಬನ್ನಿ, ಶುದ್ದಿ ಹೇಳಿ ಬೈಲಿಲಿ. ಆಗದೋ?
ನಮ್ಮ ಸಮಾಜಲ್ಲಿ ಸುಮಾರು ಗುಬ್ಬಿಗ ಇದ್ದವು. ಗೆ೦ಡು ಗುಬ್ಬಿಗಳೂ ಇದ್ದವು ಹೆಣ್ಣು ಗುಬ್ಬಿಗಳೂ ಇದ್ದವು.
ಈ ಗುಬ್ಬಿಯ ವಿಶಯ ಓದಿ ರಜ್ಜ ಬೇಜಾರಾತು. ಅದೇ ನಮೂನೆ ಅಸಹಾಯಕ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರ ಬಳಸುವ ಗೂಡಿಪ್ಪ ಗುಬ್ಬಿಗಳೂ ಬೇಕಾದಸ್ತಿದ್ದವು.
ಸಣ್ಣ ಸಣ್ಣ ಕಳ್ಳತನ೦ಗ ನಮ್ಮ ಸಮಾಜಲ್ಲಿ ಒಳ್ಳೆ ಪ್ರಚಾರ ಪಡೆತ್ತು ಆದರೆ ಎಸ್ತೊ ಜನ ಉನ್ನತ ಸರ್ಕಾರಿ ಹುದ್ದೆಲಿಪ್ಪ ನಮ್ಮ ಜನ೦ಗಳೆ ಮಾಡಿದ ಭ್ರಷ್ತಾಚಾರ೦ಗಳ ನಮ್ಮ ಸಮಾಜ ಸುಮಾರು ಜನ೦ಗ ಮೆಚ್ಚುಗೆ ಮತ್ತು ಸೋಜಿಗಲ್ಲೆ ನೊಡ್ತವು. ‘ಎಸ್ಟು ಪೈಸೆ ಮಾಡಿದರೆ೦ತ? ಯಕ್ಶಗಾನಕ್ಕೆಲ್ಲ ಎಸ್ತು ಕರ್ಚಿ ಮಾಡ್ತ?’ ಹೇಳ್ಟ ಕಾಮ೦ಟ್ ಸಮೇತ.
ಸಮಾಜದ ದ್ವ೦ದ್ವ ಅರ್ತ ಅಪ್ಪಲೆ ಬ೦ಗ ಇದ್ದಲ್ಲದಾ?
“ಹೀಂಗೂ ಒಬ್ಬ” ಹೀಂಗೂ ಹೇಳ್ತನೋ ಹೇಳಿ ಆಶ್ಚರ್ಯ ಆತು.
ಇಷ್ಟೊಳ್ಳೆ ಒಪ್ಪ ಬರೆತ್ತಿ ನಿಂಗೊ, ನಿಜ ಹೆಸರಿಲೇ ಬರದರೆ ಆಗದೋ?
ಬೈಲಿಂಗೆ ಬನ್ನಿ, ಶುದ್ದಿ ಹೇಳಿ.
ನಿಂಗೊ ಹೇಳಿದ ವಿಷಯ ತಲಗೆ ಮುಟ್ಟಿತ್ತು.
ಗುಬ್ಬಿಯ ಹಾಂಗಿದ್ದೋರು ಊದುಬತ್ತಿ ಓಟೆ ಕದ್ದರೆ ದೊಡ್ಡಾ ವಿಶಯ ಆವುತ್ತು. ಬಳ್ಳಾರಿಲಿ ಗುಡ್ಡೆ ಗುಡ್ಡೆ ಕದ್ದರೆ ಆರಿಂಗೂ ಕಾಣ್ತಿಲ್ಲೆ. ಅಲ್ಲದೋ?
[ನೀಟಂಪ ಒರಗುತಿತ° ನಮ್ಮ ದೊಡ್ಡಬಾವ°!] – ಅಂಬಗ ಬೇಳದ ಇಂಗ್ರೋಜಿಲಿ ಸದ್ಯಕ್ಕೆ ಎಂತೂ ಇಲ್ಲ್ಯೋಪ. ಶಿಂಗಾರಿಮೇಳ , ತಿಡಂಬು ನೃತ್ಯ ಓರೆ ಕಟ್ಟಿಯಾತೋ?!!
[ಏನಾರು ಮನೆಗೆಲಸ (ಇದ್ದರೆ) ಮಾಡ್ತದು ಇನ್ನು ಮೌಢ್ಯ ಮುಗಿವನ್ನಾರ ಒಳುದಿರ್ತ ಮಹಾಪುಣ್ಯ ಕಾರ್ಯ!] – ಭೂಪಣ್ಣ ಭಾವನ ಅಫೀಸಿಂಗೂ ಮೌಢ್ಯ ರಜೆ ಇರುತ್ತಿದ್ದರೆ…..!!
[ಮೊನ್ನೆ ಪೋಳ್ಯಕ್ಕೆ ಒಂದು ಜೆಂಬ್ರಕ್ಕೆ ಹೋಗಿತ್ತಿದ್ದೆ.] – ಬಪ್ಪಗ ಪರ್ಸು ಬೇಗು ಚೀಲ ಎಲ್ಲಾ ಸರೀ ಇತ್ತೋ ಭಾವ?!
ಹಾಂ ., ನೆಂಪಾತಿದಾ – ನಿಂಗಳ ಗುಬ್ಬಿ ಹಾಂಗಿರ್ತದೇ ಒಂದು ಗುಬ್ಬಿ ಎಂಗಳ ಕುಂಬ್ಳೆ ಸೀಮೆಲಿ ಇದ್ದು. ವಜಾಯ ಎಲ್ಲಾ ನಿಂಗೊ ಹೇಳಿದಾಂಗೆ ಮಡಿಕ್ಕೊಳ್ಳಿ. ಆದರೆ, ಹೋದಲ್ಲಿ ಅಂತೇ ಕೂರ, ಏನಾರ ಮಾಡದ್ದೆ ಬಾರ. ಮನ್ನೆ ಆ ಏನಾರ ಮಾಡ್ಲೆ ಹೆರಡುವಾಗ ಒಬ್ಬ ಜವ್ವನಿಗನ ಕಣ್ಣಿಂಗೆ ಬಿದ್ದತ್ತು. ‘ಪೆಟ್ಟಿನ ಬೆಷಿ’ ಎಂತರ ಹೇಳಿ ಗೊಂತಿದ್ದೋ ಕೇಳಿದನಡ. ಇಲ್ಲೆ ಹೇಳಿತ್ತಡ. ರಫಕ್ಕನೆ ಒಂದು ಮಡುಗಿದನಡ. ‘ಅಯ್ಯೋ ಅಮ್ಮಾ ಇದು ಮನ್ನೆ ಮಧೂರಿಲ್ಲಿ ಸಿಕ್ಕಿದ್ದು’ ಹೇಳಿಕ್ಕೆ ಕರ್ಗುಡಿ ಕಸ್ತಲೆಲಿ ಮಾಯ ಆತಡಾ .
[ದಿನ ಉದಿ ಆಯೇಕಾರೆ ಬೆಶಿನೀರಿಂಗಿಚ್ಚಾಕಿ] – ಎಂಗಳ ಗುಬ್ಬಿ ಸರೀ ಉದಿಯಾದಮತ್ತೆಯೇ ಎದ್ದು ಮನೆಯವು ಕಾದ ಬೆಶಿನೀರು ಮಾಡಿ ಮಡಿಗಿದ್ದು ಇದ್ದರೆ ಮೀಯಿಗು ಇಲ್ಲದ್ರೆ ಮರುದಿನಕ್ಕೇ.
ಈ ಗುಬ್ಬಿಯ ಅಪ್ಪ ಅವನೇ ಹೇಳಿಗೊಂಬ ಹಾಂಗೆ ವೈದಿಕ. ಒಂದು ಹಂತಲ್ಲಿ ಇವರ ಬಿಟ್ಟಿಕ್ಕಿ ಮೇಗೆ ಹೋಗಿ ಸೇರಿದ. ೩ ಜೆನ ತಮ್ಮಂದ್ರು. ಅಪ್ಪ ಹೋದ ಮತ್ತೆ ಅದರಲ್ಲಿ ಒಬ್ಬ ತಮ್ಮ ಇದರ ಒಟ್ಟಿಲ್ಲಿಯೇ ತರಭೇತಿ ಪಡಕ್ಕೊಂಡಿದ್ದ. ಜೆಂಬ್ರಕ್ಕೆ ಹೋದರೆ ಅಂಗಿ ತೆಗದು ಭಟ್ಟಕ್ಕಳ ಹತ್ರೆ ಹೋಗಿ ಕೂದರೆ ದಾನ ದಕ್ಷಿಣೆ ಸಿಕ್ಕುತ್ತು ಹೇಳಿ ಅಪ್ಪನತ್ರಂದ ಗಟ್ಟಿ ಕಲ್ತು ಮಡಿಕ್ಕೊಂಡಿದ.
[ನಾಳೆ ಎಂತಾರು – ಮಳೆಯೋ, ಪ್ರವಾಹವೋ – ಆಗಿ ನಾವುದೇ ವಸತಿಹೀನರಾದರೆ; ಎಷ್ಟು ಪೈಸೆ ಇದ್ದರೆಂತ?]
[ಗುಬ್ಬಿಗೂ ಗುಬ್ಬಚ್ಚಿಗೂ ಇಪ್ಪದು ಒಂದೇ ನಮುನೆ ಹೃದಯ! ಪೈಸೆ ಕೊಟ್ರೂ ಕೊಡದ್ರೂ, ಪ್ರೀತಿ ಕೊಟ್ಟೇ ಕೊಡ್ತವು!] – ಹುಟ್ಟಿಲ್ಲಿ ನಾವೆಲ್ಲಾ ಮನುಷ್ಯರೇ. ಅಂತ್ಯಲ್ಲಿ ನವಗೆಲ್ಲರಿಂಗೂ ಸಿಕ್ಕುವದು ಆ .. ಅದೊಂದೇ. ಈ ನಡುವಿಲ್ಲಿ ಮನುಷ್ಯತ್ವವ ನಾವು ಎತ್ತಿ ಹಿಡಿವಲ್ಲಿಗೆ ಮನುಷ್ಯ ಜನ್ಮ ಸಾರ್ಥಕ ಹೇಳಿಗೊಂಡು ಇತ್ಲಾಗಿಂದ ಇದಾ ಒಪ್ಪ.
ಹರೇ ರಾಮ.
ಚೆನ್ನೈಭಾವ..
ವಿಷಯ ಅಪ್ಪು ನಿಂಗೊ ಹೇಳಿದ್ದು. ಈ ನಮುನೆಯೋರು ಎಷ್ಟೂ ಇರ್ತವಿದಾ.
ಕೆಲವು ಜೆನ ಜೋರು ಇಪ್ಪದೂ ಇದ್ದು. ಆದರೆ ಅದು ಅವರ ಸ್ಥಿಮಿತ ಕಮ್ಮಿ ಆಗಿಯೇ ವಿನಃ ಇನ್ನೊಬ್ಬಂಗೆ ಉಪದ್ರ ಕೊಡೆಕ್ಕು ಹೇಳಿಗೊಂಡು ಅಲ್ಲ.
ನಮ್ಮ ಹಾಂಗೇ ಯೋಚನೆ ಮಾಡ್ಳೆ ಶೆಗ್ತಿ ಇದ್ದಿದ್ದರೆ ಬೌಶ್ಷ ಹಾಂಗೆ ಮಾಡ್ತಿತವಿಲ್ಲೆ, ಅಲ್ಲದೋ?
ಸುರೂವಾಣ ಒಪ್ಪ ಕಂಡು ತುಂಬಾ ಕೊಶಿ ಆತು.