ಗುರುಗೊ ಸಪರಿವಾರ ಕ್ಷೇಮವಾಗಿ ಊರಿಂಗೆ ಎತ್ತಿದ ವಾರ್ತೆ ಕೇಳಿ ಅಪ್ಪದ್ದೇ – ಒಂದು ದೊಡ್ಡ ಉಸುಲು ತನ್ನಿಂತಾನಾಗಿಯೇ ಬಂತು ನಮ್ಮ ಬೈಲಿಂಗೆ. ರುದ್ರ ಭೀಕರ ಪ್ರವಾಹದ ಕರೆಲೇ ನೆಡಕ್ಕೊಂಡು ಮಾನಸ ಸರೋವರಲ್ಲಿ ಮಿಂದು, ಸರೋವರದ ಕರೆಲಿ ರಾಮದೇವರ ಪೂಜೆ ಎಲ್ಲ ಚೆಂದಕ್ಕೆ ಮಾಡಿ ಒಪಾಸು ಬಂದು ಪೀಠಾಲಂಕಾರ ಮಾಡಿದ್ದು ಬಹು ನೆಮ್ಮದಿಯ ಶುದ್ದಿ.
ಯೇವದೇ ತೊಂದರೆ ಆಗದ್ದೆ ಇರಳಿ ಹೇದು ಅದೆಷ್ಟೋ ಗುರುಭಕ್ತರು ನಿತ್ಯವೂ ಪ್ರಾರ್ಥನೆ ಮಾಡಿಗೊಂಡಿದ್ದ ಸಂಗತಿ ಒಪ್ಪಣ್ಣಂಗೆ ಅರಡಿಗು. ಅದಿರಳಿ.
ಗುರುಗೊ ಬಂದಾತು, ಕೊಲ್ಕತ್ತಲ್ಲಿ ಒಂದು ಹಂತದ ರಾಮಕಥೆಯೂ ನೆಡೆಶಿ ಕೊಟ್ಟಾತು. ಇನ್ನೆಂತರ ಕಾರ್ಯ?
ಇನ್ನು ಚಾತುರ್ಮಾಸ್ಯ!
ಹೋ – ಈ ಸರ್ತಿ ಚಾತುರ್ಮಾಸ್ಯಕ್ಕೆ ಹೋಪಲೆಡಿತ್ತೋ ಕೇಳುವ ಪ್ರಶ್ನೆಯೇ ಇಲ್ಲೆ. ಏಕೇದರೆ, ನಮ್ಮ ಮಾಣಿಮಠಲ್ಲೇ ಇದಾ!
~
ಓ ಮನ್ನೆ ಪೋಳ್ಯಲ್ಲಿ ಮದುವೆ ಕಳಾತಿದಾ; ಹತ್ತರಾಣದ್ದು.
ಮದುವೆ ಉಪ್ನಾನ ಜೆಂಬ್ರಂಗೊಕ್ಕೆ ಹಗಲಿಂಗೆ ಬಂದಿಕ್ಕಲೆ ಕಾನಾವು ಡಾಗುಟ್ರಿಂಗೆ ಪುರುಸೊತ್ತಾಗದ್ದರೆ ಹೇದು ಇರುಳಿಂಗೇ ಬಪ್ಪದು ಮರಿಯಾದಿ. ಜೆಂಬ್ರದ್ದಿನ ಇರುಳು ಬಂದೆಂತರ ಮಾಡ್ಳೆ? ಪಾತ್ರ ತೊಳೆಸ್ಸೋ – ಅದರ ಮನೆಲೇ ಮಾಡ್ಳಾಗದೋ – ಕೇಳುಗು. ಅದಕ್ಕೆ ಮುನ್ನಾದಿನದ ಇರುಳು ಹೋವುಸ್ಸು; ಬೆಂದಿಗೆ ಕೊರೆತ್ತ ಲೆಕ್ಕಲ್ಲಿ. ಹಾಂಗೆ ಮೊನ್ನೆ ಶ್ರೀಅಕ್ಕಂದೇ ಒಟ್ಟಿಂಗೆ ಬಂದಿತ್ತವು.
ಸಭೆ ಸೇರಿದ ಕೂಡ್ಳೇ ಬಾಳೆ ಸಜ್ಜಿ ಮಾಡುಸ್ಸು; ಅದಾಯಿಕ್ಕಿ ಊಟ; ಉಂಡಿಕ್ಕಿ ಬೆಂದಿಗೆ ಕೊರವದು ಕ್ರಮ.
ಹಾಂಗೆ ಬಾಳೆಸಜ್ಜಿಮಾಡುವಾಗ ಕಾನಾವು ಡಾಗುಟ್ರು ಹತ್ತರೆಯೇ ಕೂದುಗೊಂಡವು. ಸುಭಗಣ್ಣ ಪೇಂಟು ಹಾಕಿಂಡು ಕರೆಲಿ ಸುದರಿಕೆ ಮಾಡಿಗೊಂಡಿತ್ತವು – ಎಲೆ ಹರಿವಾಣವ. ಅದಿರಳಿ.
ಅಪುರೂಪಲ್ಲಿ ಪುರುಸೊತ್ತಾದ ಕಾರಣ ಸುಮಾರು ಶುದ್ದಿ ಮಾತಾಡಿದವು ಡಾಗುಟ್ರುಬಾವ°. ಹೊಸ ಆಸ್ಪತ್ರೆ, ಮಕ್ಕಳ ಹೊಸ ಶಾಲೆ, ತೋಟಲ್ಲಿ ಹೊಸ ಫಲ, ಕೆಲಸಕ್ಕೆ ಹೊಸ ಜೆನಂಗೊ – ಎಲ್ಲವುದೇ ಹೊಸ ಹೊಸತ್ತು. ಮಾಣಿಮಠಲ್ಲಿ ಹೊಸ ಸಭಾಭವನ ಆಗಿ ಈ ಸರ್ತಿ ಚಾತುರ್ಮಾಸ್ಯದ ಬೆಶಿಯೂ ಬಂತು ಮಾತಾಡುವಾಗ.
ಎಂತ ಡಾಗುಟ್ರುಬಾವ° – ರಜ ಬಚ್ಚಿದ್ದಿರೋ ಕೇಟೆ ಎಡಕ್ಕಿಲಿ.
ಅದೇ – ಚಾತುರ್ಮಾಸ್ಯದ ‘ಅತಿಥಿ ಸತ್ಕಾರ ಮತ್ತು ಪಾನೀಯ’ ವೆವಸ್ತೆಯ ಸಮಿತಿಲಿ ಶ್ರೀಅಕ್ಕಂದು ಜೆಬಾದಾರಿಕೆ ಇದ್ದಾಡ. ಯಾವ ವಲಯಕ್ಕೆ ಯೇವ ದಿನ ಜೆಬಾದಾರಿ, ಎಷ್ಟು ಸುದರಿಕೆ, ಯೇವ-ಯೇವ ವಲಯದ ಹೆಮ್ಮಕ್ಕಳ ಯೇವಾಗ ಸೇರ್ಸುದು? ಯೇವ ದಿನ ಮಕ್ಕೊಗೆ ರಜೆ ಇದ್ದು? ಹೇಂಗೆ ಎಲ್ಲ ನೆಡೆಸ್ಸು ಹೇದು ತೀರ್ಮಾನ ಮಾಡಿ, ಅದರ ಒಂದು ಚೊಕ್ಕಕೆ ಪಟ್ಟಿಮಾಡಿ ದಿನವಾರು ಪ್ರಕಟಮಾಡ್ತಲ್ಲಿ ಒರೆಂಗೆ ನವಗೆ ಸರಿ ಹೆಜ್ಜೆ ಸಿಕ್ಕದೋ ಕಾಣ್ತು – ಹೇದು ನೆಗೆಮೋರೆಲಿ ಬೇಜಾರು ಮಾಡಿಗೊಂಡವು; ಅದಿರಳಿ.
ಸುಬಗಣ್ಣಂಗೆ ಪಿಸಿಕ್ಕನೆ ನೆಗೆ ಬಂದ್ಸರಲ್ಲಿ ಬಾಯಿಂದ ಎಸರು ರಟ್ಟಿ, ಪೇಂಟಿಂಗೆ ಕಲೆ ಆಗಿ ಮತ್ತೆ ಒಸ್ತ್ರ ಸುತ್ತಿಗೊಂಡ ಸಂಗತಿ ಚೆನ್ನೈಭಾವಂಗೆ ಮೊನ್ನೆಯೇ ಗೊಂತಾಯಿದು. ಅದಿರಳಿ.
~
ಊಟದ ಸಮೆಯಲ್ಲೇ ಶ್ರೀಅಕ್ಕ° ಮಾತಾಡ್ಳೆ ಸಿಕ್ಕಿದವು. ಬಾವಂಗೆ ಹೆಜ್ಜೆ ಸಿಕ್ಕದ್ದ ಶುದ್ದಿ ತೆಗದ್ದಿಲ್ಲೆ ನಾವು; ತೆಗದಿದ್ದರೆ ನವಗೆ ಆ ದಿನವೇ ಊಟ ಸಿಕ್ಕದ್ದ ಹಾಂಗಾವುತಿತು! ಮತ್ತೆಂತ ಶುದ್ದಿ ತೆಗದ್ಸು? ಅದೇ – ಚಾತುರ್ಮಾಸ್ಯದ ಶುದ್ದಿ!
~
ಹೊಸ ಸಭಾಭವನದ ಉದ್ಘಾಟನೆಯ ಶ್ರೀಗುರುಗೊ ಮನ್ನೆ ನೆಡೆಶಿ ಕೊಟ್ಟಿದವಲ್ಲದೋ – ಏಳೆಂಟು ತಿಂಗಳಿಲೇ ಆ ಸಭಾಭವನ ಎದ್ದು ನಿಂದದು ನಿಜವಾಗಿಯೂ ದೊಡ್ಡ ಸಂಗತಿಯೇ. ಊರ ಶಿಷ್ಯರ ತ್ರಾಣವ ತೋರ್ಸುತ್ತು ಹೇದು ಎಲ್ಲೋರುದೇ ಕೊಶಿ ಪಟ್ಟುಗೊಳ್ತವಾಡ. ಹಾಂಗೆ ಅದರ್ಲೇ ಈ ಒರಿಶದ ಚಾತುರ್ಮಾಸ್ಯ ಆಡ.
ಕಲ್ಲಡ್ಕ ಉಮಾಶಿವ ಕ್ಷೇತ್ರಂದ ಮಾಣಿಗೆ ಮೆರವಣಿಗೆ ಮೂಲಕ ಗುರುಗಳ ಬರುಸಿ, ಎದುರುಗೊಂಬದಾಡ. ಆ ದಿನಂದಲೇ ಸುರುಆವುತ್ತು, ಸಾವಿರಾರು ಜೆನಂಗೊ ಸೇರ್ತ ಮಾಣಿಮಠದ ಜಾತ್ರೆ. ಎರಡು ತಿಂಗಳುಗಳ ಕಾಲ ನೆಡೆತ್ತಿದಾ. ಅದಕ್ಕೆ ಬೇಕಾದ ವೆವಸ್ತೆಗೊ ಎಲ್ಲ ಹೇಂಗಾವುತ್ತಾ ಇದ್ದು, ಹೇಂಗೆ ಆಯೆಕ್ಕು ಹೇಳ್ತ ವಿಮರ್ಶೆಗೆ ಅಂಬಗಂಬಗ ಸಭೆ ಸೇರ್ತವಾಡ. ಪ್ರತಿಯೊಬ್ಬನೂ ಈ ಚಾತುರ್ಮಾಸ್ಯ ನಮ್ಮದೇ ಮನೆ ಜೆಂಬ್ರ ಹೇಳುತ್ತ ಹಾಂಗೆ ಕೊಶೀಲಿ ಎಲ್ಲ ಕೆಲಸಂಗಳ ವಹಿಶಿಗೊಳ್ತಾ ಇದ್ದವಡ. ನಮ್ಮ ಹೋಬಳಿಯ ಎಲ್ಲಾ ವಲಯದ ಹೆಮ್ಮಕ್ಕ ಅಲಂಕಾರದ ಮಾಲೆಗಳ ಮಾಡಿ ಹೊಸ ಸಭಾಂಗಣವ ಚೆಂದ ಮಾಡ್ತ ಎಲ್ಲ ಏರ್ಪಾಡಿನ ವಹಿಶಿಗೊಂಡಿದವಡ.
ಕೆಲವು ಜೆನ ಅಂತೂ ನಮ್ಮ ಮಠಕ್ಕೋಸ್ಕರ ಸಮಯ, ಜೀವನ, ಪೈಶೆ, ಎಲ್ಲವನ್ನೂ ಅರ್ಪಣೆ ಮಾಡಿ ದುಡಿವದು ನೋಡುವಾಗ ಮನಸ್ಸು ತುಂಬಿ ಬತ್ತು – ಹೇಳಿದವು.
~
ಮಾಣಿಮಠ ಹೇದರೆ ಆಂಜನೇಯನ ಕ್ಷೇತ್ರ ಇದಾ. ಹಾಂಗಾಗಿ ಈ ಸರ್ತಿ ಚಾತುರ್ಮಾಸ್ಯದ ಒಟ್ಟು ಆರಾಧನಾ ಬಿಂದು ಆಂಜನೇಯನೇ ಆಡ. ಅಲಂಕಾರ, ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ – ಎಲ್ಲದರ್ಲಿಯೂ ಆಂಜನೇಯನ ಪ್ರತಿಬಿಂಬ-ಪ್ರತಿರೂಪಂಗಳ ಕಾಂಗಾಡ. ಈ ಸರ್ತಿಯಾಣ ಚಾತುರ್ಮಾಸ್ಯದ “ರಾಮಕಥೆ“ಲಿಯೂ ರಾಮನ ಬಂಟ ಹನುಮಂತನ ಕಥೆಯನ್ನೇ ನಮ್ಮ ಶ್ರೀಗುರುಗೊ ಅವರ ಅಮೃತವಾಣಿಲಿ ಶಿಷ್ಯಕೋಟಿಗೆ ಹೇಳ್ತವಡ. ಶ್ರೀರಾಮ ಪಟ್ಟದ ದೇವರಾಗಿಪ್ಪಾಗ ಆಂಜನೇಯನ ಆರಾಧನೆ ಮಾಡಿರೆ ಏನೂ ವಿತ್ಯಾಸ ಇಲ್ಲೆ; ಆಂಜನೇಯ ಬೇರೆ ಅಲ್ಲ, ರಾಮ ಬೇರೆ ಅಲ್ಲ – ಹೇಳಿದವು. ಹ್ಮ್, ಅಪ್ಪಪ್ಪು – ಹೇಳಿದೆ.
ದೊಡ್ಡ ಗುರುಗಳ ಕಾಲಲ್ಲಿ ನಮ್ಮ ಊರ ಅಂಬಗಾಣ ಮಾಣಿಯಂಗೊ ಸೇರಿ ಕಟ್ಟಿದ ಮಠವೇ ಅಲ್ಲದೋ ಈ ಮಾಣಿಮಠ. ಇದರ್ಲೇ ಚಾತುರ್ಮಾಸ್ಯ ನೆಡೆಸ್ಸು ಹೇದರೆ ಅದರಷ್ಟು ಕೊಶಿ ಬೇರೆ ಇದ್ದೋ?
ಅದೂ ಅಲ್ಲದ್ದೆ ನಮ್ಮದೇ ಹೋಬಳಿಲಿ, ನಮ್ಮದೇ ಊರಿಲಿ, ನಮ್ಮದೇ ಮನೆ ಹತ್ತರೆ ಇಪ್ಪ ಮಾಣಿ ಮಠಲ್ಲಿ ಚಾತುರ್ಮಾಸ್ಯ ದೀಕ್ಷೆ ನಮ್ಮ ಪೀಠಾಧಿಪರು ತೆಕ್ಕೊಂಡು ಕೂಪದು ಇದೇ ಸುರು.
ಚಾತುರ್ಮಾಸ್ಯಕ್ಕಾಗಿಯೇ ಒಂದು ಸಭಾಭವನವೂ ಕಟ್ಟಿಪ್ಪಗ, ಆ ಸಭಾಭವನಲ್ಲಿ ಸುರೂವಾಣ ಕಾರ್ಯಕ್ರಮವಾಗಿ, ಸುರೂವಾಣ ಚಾತುರ್ಮಾಸ್ಯ ಕಾರ್ಯಕ್ರಮವಾಗಿ ನೆಡೆತ್ತಾ ಇಪ್ಪದು ನಮ್ಮ ಬೈಲಿಂಗೆಲ್ಲ ಒಂದು ಸದಾಶೀರ್ವಾದವೇ ಸರಿ.
ಎರಡು ತಿಂಗಳ ಕಾಲ ವೇದ ಧ್ಯಾನ-ದೇವ ಧ್ಯಾನಲ್ಲಿ ಕಳದು, ಆಹಾರ ವಿಚಾರಲ್ಲಿ ಹಲವಾರು ವ್ರತಂಗಳ ಮಾಡಿಂಡು ಕಾಲಕ್ಷೇಪ ಮಾಡ್ತದೇ ಚಾತುರ್ಮಾಸ್ಯ ಇದಾ. ಹಾಂಗಾಗಿ ಎರಡು ತಿಂಗಳಿನ ಪ್ರತಿ ದಿನವೂ ನಮ್ಮ ಊರಿಲೇ ಇರ್ತವು ಗುರುಗೊ. ಗುರುಭೇಟಿಗೆ, ಗುರುಗಳ ಕಾಂಬ ಹಂಬಲ ಇಪ್ಪೋರಿಂಗೆ ಇದೊಂದು ಸದವಕಾಶ ಅಡ.
~
ಊರ ಎಲ್ಲೋರುದೇ, ಊರಿಲಿ ಬೇರು ಇದ್ದುಗೊಂಡು ಪರವೂರಿಲಿಪ್ಪ ಎಲ್ಲೋರುದೇ, ಶ್ರೀಮಠದ ಶಿಷ್ಯಪರಂಪರೆಯೋರೆಲ್ಲೋರುದೇ ಬಂದು, ಕಾರ್ಯಕ್ರಮವ ಚೆಂದ ಕಾಣುಸಿಕೊಟ್ರೆ ವಿಜಯ ಸಂವತ್ಸರದ ಈ ವಿಜಯ ಚಾತುರ್ಮಾಸ್ಯ ವಿಜಯಿಯಪ್ಪದರ್ಲಿ ಯೇವ ಸಂಶಯವೂ ಇಲ್ಲೆ; ಚಾತುರ್ಮಾಸ್ಯ ವಿಜಯಿಯಾದರೆ ನಮ್ಮೆಲ್ಲರ ಜೀವನವೇ ವಿಜಯವಾದ ಹಾಂಗೆ. ನಮ್ಮ ಊರೇ ವಿಜಯ ಆದ ಹಾಂಗೆ.
ಶ್ರೀಗುರುಗಳ ವಿಜಯ ಚಾತುರ್ಮಾಸ್ಯ ಚೆಂದಕೆ ನೆಡೆಯಲಿ – ಹೇಳ್ತದು ಬೈಲಿನ ಹಾರೈಕೆ.
~
ಊಟಕ್ಕೆ ಹಂತಿ ಹಾಕಿದವು. ಉಂಡಾತು, ಬೆಂದಿಗೆ ಕೊರದೂ ಆತು. ಹೆರಡ್ತೋರು ಹೆರಟೂ ಆತು.
ನವಗೆ ಸುಬಗಣ್ಣನ ಬೈಕ್ಕಿನ ಹಿಂದಾಣ ಕಾಯಂ ಇಪ್ಪ ಕಾರಣ ಬೈಲಿಂಗೆ ನೆಡೇಕಾದ್ಸಿಲ್ಲೆ.
ರಾಮ ಬೇರೆ ಅಲ್ಲ, ಹನುಮ ಬೇರೆ ಅಲ್ಲ – ಹೇದು ಶ್ರೀಅಕ್ಕ° ಹೇಳಿದವಲ್ಲದೋ? ಒಂದೊಂದರಿ ಅಜ್ಜಕಾನ ಬಾವನ ಕಾಂಬಗ ಅಪ್ಪು ಹೇಳಿಯೂ ಅನುಸುತ್ತು!! ಅದಿರಳಿ; ಆದರೆ ಗಾತಿಗೆ ನೋಡಿರೆ, ರಾಮನ ಔನ್ನತ್ಯ ಗೊಂತಾಯೇಕಾರೆ ಹನುಮನ ಸೇವೆ ಅರಡಿಯೇಕಡ. ಅದು ಹೇಂಗೆ? ಬಪ್ಪ ವಾರ ಮಾತಾಡುವೊ°, ಆಗದೋ?
~
ಒಂದೊಪ್ಪ: ಮಾಣಿಮಠಲ್ಲಿ ಚಾತುರ್ಮಾಸ್ಯಕ್ಕೆ ಕೂಸುಗೊ-ಮಾಣಿಯಂಗೊ ಎಲ್ಲೋರುದೇ ಸೇರಿ ವಿಜಯಗೊಳುಸುವೊ°.
॥ಹರೇರಾಮ॥
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಹರೇ ರಾಮ, ಜೈ ಹನುಮಾನ್, ಜೈ ಹನುಮಂತ…
ತುಂಬಾ ಒಪ್ಪ ಶುಧ್ಧಿ ಓದಿ ಖುಶಿ ಆತು.
ಮೊನ್ನೆ ಊರಿಂಗೆ ಹೋದಿಪ್ಪಗ ಮಾಣಿಮಠಕ್ಕೆ ಹೋಪಲೆ ಸಿಕ್ಕಿದ್ದು, ಹನುಮ ಗುಡಿಗೆ ಹೋದ್ದು, ಶ್ರೀ ಗುರುಗಳ ಕೈಂದ ಮಂತ್ರಾಕ್ಷತೆ ತೆಕ್ಕೊಂಬ ಸುಯೋಗ ಒದಗಿ ಬಂದದು ಖುಶಿ ಆಯಿದು.
ಈಗ ಚಾತುರ್ಮಾಸ್ಯದ ಶುಧ್ಧಿಯ ಓದುದು, ಫೋಟೋಂಗಳ ನೋಡುದು, ಊರಿಂದ ಫೋನಿಲ್ಲಿ ಶುಧ್ಧಿ ಕೇಳುದು ಮಾಡುದು ಎಂಗೋ.
ದೇವರಿಂಗೆ, ಶ್ರೀ ಗುರುಗಳಿಂಗೆ ಇಲ್ಲಿಂದಲೇ ಹೊಡಾಡ್ತೆ.
hare raama.
ಸ೦ತೋಷದ ಶುದ್ದಿ.
ಪೇ೦ಟು ಹಾಕಿಗೊ೦ಡು ಸುದರಿಕೆ ಮಾಡುವ ಒಗ್ಗರಣೆ ಕೊಶಿ ಕೊಟ್ಟತ್ತು.
ನಮ್ಮೂರಿಲ್ಲಿ ಚಾತುರ್ಮಾಸ್ಯ, ಹಾಂಗೂ ಶ್ರೀಗುರುಗೊ ಸಪರಿವಾರ ಸಮೇತ ಊರಿಂಗೆ ಬಂದದು ಇದೆರಡು ಸಂತೋಷದ ಸುದ್ದಿ ಗುರುಗಳ ಅಮೃತ ಹಸ್ತಂದ ಮಂತ್ರಾಕ್ಷತೆ ಸಾಗರದ ಹಾಂಗಿದ್ದ ದಿವ್ಯ ವಾಣಿಂದ ನಮ್ಮ ಸಾಮರ್ತ್ಯಕ್ಕೆಡಿಗಾದ ಹಾಂಗೆ ಮೊಗಕ್ಕೊಂಬೊ. ಮತ್ತೆ ತ್ರಿಕರಣ ಪೂರ್ವಕ ಸೇವೆ ಮಾಡುವೊ.
ಹರೇರಾಮ, ಈಸರ್ತಿ ಎರಡೆರಡು ಒಳೇ ಸುದ್ದ ಶ್ರೀ ಗುರುಗೊ ಪರಿವಾರ ಸಮೇತ ಕ್ಷೇಮವಾಗಿ ಊರಿಂಗೆ ತಲಪಿದ ವರ್ತಮಾನ, ಅಲ್ಲಾ , ರಾಮಚಂದ್ರಾಪುರ ಪೀಠಾಧೀಶರಿಂಗೆ ಯಾವ ತೊಂದರೆಯೂ ಆಗ ಹೇದು ಎಲ್ಲೋರ ಮನಸ್ಸಿಲ್ಲಿ ಬಲವಾಗಿದ್ದ ಅನನ್ಯ ನಂಬಿಕೆ.
ವಿಜಯ ಚಾತುರ್ಮಾಸ್ಯ ಶ್ರೀ ಗುರುಗಳೇಹೇಳಿದಾಂಗೆ “ಹನುಮನೊಂದಿಗೆ ರಾಮನೆಡೆಗೆ” ಕಾರ್ಯಕ್ರಮ ಯಶಸ್ವಿಯಾಗಲಿ
ವಿಜಯ ಸಂವತ್ಸರದ ಚಾತುರ್ಮಾಸ್ಯಕ್ಕೆ ವಿಜಯವಾಗಲಿ. ನಾವೆಲ್ಲೋರು ಅಲ್ಲಿ ಸೇರುವೊ. ನಮ್ಮ ಬೈಲಿನವೆಲ್ಲೋರು ಒಂದು ದಿನ ಒಟ್ಟಿಂಗೆ ಅಲ್ಲಿ ಸೇರ್ಲಿದ್ದು ಹೇಳಿ ಶುದ್ದಿ. ಒಪ್ಪ ಶುದ್ದಿ ಹೇಳಿದ ಒಪ್ಪಣ್ಣಂಗೆ ಧನ್ಯವಾದಂಗೊ. ರಾಮ ಬೇರೆ ಅಲ್ಲ, ಹನುಮ ಬೇರೆ ಅಲ್ಲ ಹೇಳುವುದರೆಡಕ್ಕಿಲ್ಲಿ ಅಜ್ಜಕಾನ ಭಾವಯ್ಯನ ವಿಷಯ ಬಂದದು ಗಮ್ಮತ್ತಾಯಿದು. ಒಪ್ಪಣ್ಣಾ, ಅಂಬಗಂಬಗ ಭಾವಯ್ಯನ ಚೇಡುಸದ್ದೆ ನಿನಗೆ ಒರಕ್ಕು ಬತ್ತಿಲ್ಲೆಯೊ ಹೇಳಿ ?
ಹರೇ ರಾಮ. ಒಪ್ಪ ಶುದ್ದಿ.
ಅದಿರಳಿ.., ಕೊರೆತ್ತಲ್ಲಿ ‘ಆಂಜನೇಯ ಬೇರೆ ಅಲ್ಲ, ರಾಮ ಬೇರೆ ಅಲ್ಲ’ ಹೇಳೋದರ ಕೇಳಿ ಅಡಿಗೆ ಕೊಟ್ಟಗೆಲಿದ್ದ ಸತ್ಯಣ್ಣ ಸುಭಗಣ್ಣನ ಬೈಕು ಹೋಪದ್ದೆ- ‘ಸುಭಗಣ್ಣ ಬೇರೆ ಅಲ್ಲ, ಸುಭಗಣ್ಣನ ಬೈಕಿನ ಹಿಂದೆ ಕೂದವ ಬೇರೆ ಅಲ್ಲ’ ಹೇಳಿದ್ದನಡಪ್ಪ!!