ಕೆಲೆಂಡ್ರಿಲಿ ಜೂನು ತಿಂಗಳ ಐದನೇ ತಾರೀಕು ಬಂದರೆ ಸಾಕು – ಎಲ್ಲೋರಿಂಗೂ ಪರಿಸರ ಕಾಳಜಿ.
ಮಂತ್ರಿ ಮಾಗಧರು ಬಪ್ಪದೇನೋ, ಯೇವ ಯೇವದೋ ಗೆಡು ಹಿಡ್ಕೊಂಡು ಪಟ ತೆಗೆಸ್ಸು ಏನೋ, ಅದರ ನೆಡ್ತ ಹಾಂಗೆ ಮಾಡುಸ್ಸು ಏನೋ – ಶಾಲೆ ಜಾಲ ಕರೆಲಿ, ಗೋರ್ಮೆಂಟು ಆಪೀಸಿನ ಮಾಡನೀರ ಕರೆಲಿ, ಕರಿಮಾರ್ಗದ ಕರೆಲಿ, ಮಾರ್ಗದ ಗುಂಡಿಲಿ, ಎಲ್ಲ ದಿಕ್ಕೆಯೂ ಗಿಡನೆಡುವ ಕಾರ್ಯ!!
ಅದೇ ಒಂದು ಗೌಜಿ.
ಮರದಿನ ಎಂತಾತು?!! ಹೇದು ಆರೂ ಕೇಳ್ತವ° ಇಲ್ಲೆ.
~
ನವೆಂಬ್ರ ಒಂದು ಬಂದರೆ ಕನ್ನಡ ಕನ್ನಡ ಹೇದು ಬಾವುಟ ಹಿಡಿವದೇ ಆತು;
ಹದಿನಾಲ್ಕು ಬಂದರೆ ಮಕ್ಕಳೋ ಮಕ್ಕಳು ಹೇದು ಚೋಕುಲೇಟು ಕೊಡ್ಸೇ ಆತು;
ಮತ್ತೊಂದು ದಿನ ಬಂದರೆ ಮಾತೆಯರ ದಿನ ಹೇದು ಅಮ್ಮಂಗೆ ಗ್ರೀಟಿಂಗು ಕಳುಸುದೋ ಕಳುಸುದು;
ಮಗದೊಂದು ದಿನ ಶಾಲೆಲಿ ಮಾಷ್ಟ್ರಂಗೊಕ್ಕೆ ಗುಲಾಬಿ ಕೊಡುದೋ ಕೊಡುದು;
ಇನ್ನೊಂದು ದಿನ ಪರಿಸರ ದಿನ ಹೇದು ಗಿಡನೆಡುದೋ ಗಿಡ ನೆಡುದು.
ಈ ದಿನಂಗಳ ಆ ದಿನವೇ ಆಚರಣೆ ಮಾಡೇಕೋ?
ಮಾಡಿರೂ ಒಂದು ದಿನಕ್ಕೆ ಮಾಂತ್ರವೋ?
ಅಪ್ಪಾದರೆ – ಮಾಡುಸ್ಸು ಎಂತಗೆ?
ಅಲ್ಲದ್ದರೆ – ಮಾಡುಸ್ಸು ಎಂತಗೆ?
ಪರಿಸರ ನೆಂಪಪ್ಪದು ಜೂನು ಐದಕ್ಕೆ ಮಾಂತ್ರ; ಒಳುದ ದಿನ ಅವರವರ ಅನುಕೂಲ ಶಾಸ್ತ್ರವೋ?
ಒಪ್ಪಣ್ಣಂಗೆ ತುಂಬ ಕನ್ಫ್ಯೂಸು!
~
ಪ್ರಗತಿಗಾಗಿ ಪ್ರಕೃತಿ ಹಾಳಪ್ಪಲಾಗ – ಹೇದು ನಮ್ಮ ಗುರುಗೊ ಒಂದರಿ ಆಶೀರ್ವಚನಲ್ಲಿ ಹೇಳಿತ್ತಿದ್ದವು. ಒಳ್ಳೆ ಮಾತದು. ಈಗ ಅಲ್ಲದ್ರೂ ಆವುಸ್ಸು ಅದುವೇ – ಮನುಷ್ಯನ ಪ್ರಗತಿಗಾಗಿ ಪ್ರಕೃತಿಯ ಲಗಾಡಿ ಕೊಟ್ಟುಗೊಂಡು ಇದ್ದು ಸಮಾಜ.
ಒಂದು ದೊಡಾ ಕಟ್ಟೋಣ ಕಟ್ಟೇಕಾರೆ – ಅದಕ್ಕೆ ಜಾಗೆ ಕೆರೆ ಮುಚ್ಚಿಯೇ ಆಯೇಕು.
ಒಂದು ಸಮ್ಮೇಳನ ಮಾಡೇಕಾರೆ ಅದಕ್ಕೆ ಕಾಡು ಕಡುದೇ ಆಯೇಕು!
ಕಾರ್ಯಕ್ರಮ ಆದರೆ ಅಷ್ಟು ಜಾಗೆಯೂ ಕಸವಿನ ರಾಶಿ!!
ಯೇವ ಸಾಂಕ್ರಾಮಿಕ ರೋಗವೂ ಹರಡುಗು!!
ಪ್ರಕೃತಿಗೆ ಹಾನಿ ಮಾಡದ್ದೆ ಹಾಂಗಾರೆ ಪ್ರಗತಿಯೇ ಆವುತ್ತಿಲ್ಲೆಯಾ?
ನಮ್ಮ ಅಜ್ಜಂದ್ರು ಪ್ರಗತಿ ಆಯಿದವಿಲ್ಲೆಯೋ?
ಆಯಿದವು, ಆದರೆ ಪ್ರತಿ ಪ್ರಗತಿಲಿ ಅವು ಪ್ರಕೃತಿಯ ಜಾಗ್ರತೆ ಮಾಡಿಗೊಂಡು ಬಯಿಂದವು.
ಅವು ಬೆಳದ ಹಾಂಗೇ ಪ್ರಕೃತಿಯ ಬೆಳೆಶಿದವು.
ಅವರ ಜಾಗ್ರತೆಂದಾಗಿ ನವಗೆ ಇಂದು ನೋಡ್ಲೆ ಸಿಕ್ಕಿದ್ದು.
ನಾವು ಜಾಗ್ರತೆ ಮಾಡದ್ರೆ ನಮ್ಮ ಮುಂದಾಣೋರು ಎಂತರ ನೋಡುಗು? ಆಲೋಚನೆ ಮಾಡಿ!
ದೊಡಾ ದೊಡಾ ಕಟ್ಟೋಣಂಗೊ, ಹಳತ್ತಾಗಿ ವಾಸ ಮಾಡ್ಳೆಡಿಯದ್ದ ನಮುನೆದು.
ಅದರ ಕರೆಲಿ ದೊಡಾ ಕಸವು ರಾಶಿಗೊ – ಪ್ಲೇಷ್ಟಿಕು ಕೈಚೀಲ, ಕರಡಿಗೆಗೊ, ಟಂಗೀಸು ಬಳ್ಳಿಗೊ, ಸಿಮೆಂಟು ಗಟ್ಟಿಗೊ, ವಿಷದ ಮದ್ದುಗೊ, ಕುಪ್ಪಿಗೊ – ಹೀಂಗಿಪ್ಪದೇ ಇಕ್ಕಷ್ಟೆಯೋದು ಸಂಶಯ ಬತ್ತು.
ಕಾಡು ಒಳಿಶಿ, ನಾಡು ಬೆಳೆಶೆಕ್ಕು. ಇದು ಒಂದು ದಿನದ ಏರ್ಪಾಡು ಅಲ್ಲ.
ಇದಕ್ಕಾಗಿ ದಿನಾಚರಣೆಂದಲೂ, ಜೀವನಾಚರಣೆ ವಿಶೇಷ – ಹೇಳ್ಸು ಒಪ್ಪಣ್ಣನ ಅನಿಸಿಕೆ.
ಭೂಮಿ ನಮ್ಮೆಲ್ಲರ ಅಬ್ಬೆ. ಅದು ಸಮೃದ್ಧವಾಗಿರೆಕ್ಕು ಅಂಬಗ ನಾವೂ ನೆಮ್ಮದಿಲಿ ಇಕ್ಕು.
ಭೂಮಿಲಿ ಎಲ್ಲಿ ಎಂತದೇ ಹಾಕಿದರೂ, ಬಿತ್ತಿದರೂ ಅಬ್ಬೆ ಅದರ ಪೋಷಣೆ ಮಾಡಿ ಬೆಳೆಶಿ ಕೊಡ್ತು.
ಮನುಷ್ಯ ಆದರೂ ಮರ ಆದರೂ ಮೃಗ ಆದರೂ ಅಬ್ಬೆ ಬೇಧ ಮಾಡ. ಅದಕ್ಕೆ ಎಲ್ಲವೂ ಒಂದೇ.
ನವಗೆ ಈಗ ನಾವು ಮಾಂತ್ರ ಈ ಭೂಮಿಲಿ ಬದುಕ್ಕಿದರೆ ಸಾಕು ಹೇಳ್ತ ದುರಾಶೆ ಬಯಿಂದು, ಅದುವೇ ನಮ್ಮ ಹಾಳು ಮಾಡ್ತಾ ಇಪ್ಪದು.
ಸಮೃದ್ಧ ಆಗಿ ಬೆಳದ ಜಾಗೆಲಿ ನಾವು ಕಟ್ಟೋಣಂಗಳ ಕಟ್ಟುತ್ತು. ಮರಂಗಳ ಜಾಗೆ ನಾವು ಆಕ್ರಮಿಸುತ್ತು.
ಮರಂಗಳ ಹೊಂದಿಗೊಂಡು ಇಪ್ಪವ್ವು ಇಪ್ಪಲೆ ಜಾಗೆ ಇಲ್ಲದ್ದೆ ನಮ್ಮಲ್ಲಿಗೆ ಬಂದರೆ ಅವರ ಕೊಂದತ್ತು!
ಮೊದಲು ಸಮಬಾಳ್ವೆಲಿ ಅವರವರ ಜಾಗೆಲಿ ವಿಹರಿಸಿಗೊಂಡು ಕೊಶೀಲಿ ಇದ್ದವಕ್ಕೆ ಈಗ ನೆಲೆ ಇಲ್ಲದ್ದೆ ಆಯಿದು.
ಪ್ರಾಣಿಗೊಕ್ಕೂ, ನಮ್ಮ ಹೆರಿಯೋರಿಂಗೂ!!
ನಮ್ಮ ಹೆರಿಯೋರು ಪ್ರತಿ ಕಾಲಲ್ಲಿ ಬೆಳವದರ ಆಯಾ ಜಾಗೆಗೆ ಅಪ್ಪ ಹಾಂಗೆ ಇಪ್ಪ ಮರಗೆಡುಗಳ ನೆಟ್ಟು ಪೋಷಣೆ ಮಾಡಿಗೊಂಡು ಇದ್ದದು. ಅವರ ನಂತ್ರದವಕ್ಕೆ ಹೇಳಿಯೂ ಬೆಳೆಶಿ ಕಾದವು.
ಮಳೆ ಬಪ್ಪಗ ಎಲ್ಲಾ ನಮುನೆ ಮರಂಗಳ ನೆಟ್ಟವು. ಬೆಳೆಶಿದವು.
ಪ್ರಕೃತಿಯೂ ಕೊಶೀಲಿ ಕಾಲಕಾಲಕ್ಕೆ ಮಳೆ ಸುರಿಸಿ ಅದರ ಕೊಶಿಯ ಹರಡಿತ್ತು.
ಈಗಾಣ ಕಾಲಲ್ಲಿ ಕಾಲಕಾಲಕ್ಕೆ ಆಯೆಕ್ಕಾದ ಹಾಂಗೆ ಕಾಲಮಾನ ಇಲ್ಲದ್ದೆ ಇಪ್ಪದು ಕಾಂಬಗ ಒಪ್ಪಣ್ಣಂಗೆ ಇದೆಲ್ಲ ನೆಂಪಾವುತ್ತು.
ಈಗಳೂ ಪೂರ ಕಾಲ ಕಳುದ್ದಿಲ್ಲೆ. ಇನ್ನುದೇ ನಮ್ಮ ತಪ್ಪಿನ ತಿದ್ದಿಗೊಂಬ ಅವಕಾಶ ಇದ್ದು.
ತಡವಾಗಿ ಆದರೂ ಮಳೆಗಾಲ ಬತ್ತಾ ಇದ್ದು.
ನಮ್ಮ ಆಸುಪಾಸು ಇಪ್ಪ ಜಾಗೆಗಳಲ್ಲಿ ಹಣ್ಣಿನ ಬೀಜಂಗಳ, ಬೇರೆ ಬೇರೆ ಮರಂಗಳ ಗೆಡುಗಳ, ಮದ್ದಿನ ಗೆಡುಗಳ ಎಲ್ಲ ನೆಡುವ°.
ನಮ್ಮ ಕೈಲಿ ಆದಷ್ಟು ಅಬ್ಬೆಯ ಗರ್ಭವ ತುಂಬುವ°.
ನಾಳೆ ನಮ್ಮ ಮುಂದಾಣ ಪೀಳಿಗೆ ಕೊಶೀಲಿ ಜೀವನ ಮಾಡೆಕ್ಕಾದರೆ ನಾವು ಇಂದು ಅದಕ್ಕಿಪ್ಪ ಕೆಲಸ ಮಾಡುವ°.
ಎಂತ ಹೇಳ್ತಿ?
~
ಪ್ರಕೃತಿಯ ಆರೈಕೆ ಮಾಡ್ಳೆ ನಾವು ಪ್ರಾಣಿಗಳ ಕೈಂದಲೇ ಕಲಿಯೆಕ್ಕಾಯಿದು.
ಒಂದು ಚೂರುದೇ ತೊಂದರೆ ಆಗದ್ದ ರೀತಿಲಿ ಬದ್ಕಿ ಬಾಳುತ್ತವು, ತೀರಿಗೊಳ್ತವು.
ಪ್ರಾಣಿಗೊ – ಅವರ ಹೆರಿಯೋರಿಂದ ಹೇಂಗೆ ಪ್ರಕೃತಿ ಸಿಕ್ಕಿದ್ದೋ, ಅವರ ಕಿರಿಯೋರಿಂಗೂ ಅದೇ ರೀತಿಲಿ ಕೊಟ್ಟಿಕ್ಕಿ ಹೋವುತ್ತವು. ನಾವು?
~
ಒಂದೊಪ್ಪ: ಪರಿಸರದ ಒಟ್ಟಿಂಗೇ ಜೀವನ ಮಾಡಿರೆ ವಿಶ್ವ ಇಡೀ ಒಳಿಗು.
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಸರಿ ಒಪ್ಪಣ್ಣ, ಪ್ರಗತಿಗಾಗಿ ಪ್ರಕೃತಿ ಹಾಳಪ್ಪಲಾಗ ,ಹಾಂಗೇ ಒಂದೇ ದಿನಕ್ಕೆ ಆಚರಣೆ ಮುಗುದು ಮತ್ತೆ ನಾಶ ಮಾಡ್ತ ಕೆಲಸ!! ಜೀವನಪೂರ್ತಿ ಪರಿಸರ ಒಳಿಶುತ್ತ ಬಗ್ಗೆ ಕಾಯ-ಕಲ್ಪ ಅಯೆಕ್ಕು.
ಗೆದ್ದೆಗೆ ಮಣ್ಣು ಹಾಕಿ ತುಂಬುಸಿ, ಮರಂಗಳ ಕಡುದುರುಳುಸಿ, ಮನೆಗಳ ಕಾರ್ಖಾನೆಗಳ ಮಾಡ್ತದು, ಕಾಂಕ್ರೀಟು ಹಾಕಿ ಅಗಲ ಮಾರ್ಗಂಗಳ ಮಾಡಿದ್ದರಿಂದ ಎಂತ ದುರವಸ್ಥೆ ಬಂತೂ ಹೇಳಿ ಕಣ್ಣೆದುರೇ ಕಾಣ್ತಾ ಇದ್ದು. ಇನ್ನಾದರೂ ಮನುಷ್ಯರಿಂಗೆ ಬುದ್ದಿ ಬಂದರೆ ಪ್ರಕೃತಿ ಒಳಿಗು. ಲೋಕ ಒಳಿಗು. ಒಳ್ಳೆ ಶುದ್ದಿಗೆ ಒಂದೊಪ್ಪ.