- ಮಹಾನಗರದ ಮಹಾನ್ ಸಾಧಕಿ – ಡಾ.ಸುನಂದ ನಾರಾಯಣ ಭಟ್. - May 18, 2015
- ರಾಮಾಯಣ ಅಲ್ಲ ಪಿಟ್ಕಾಯನ - April 4, 2015
- ಪಾರುವ ಸ್ವಗತ - June 23, 2014
’ಹೊಸಕನ್ನಡ ಗುರುಪರಂಪರೆಯ’ ವಿಶೇಷ ವೆಗ್ತಿಗಳ ನಮ್ಮ ಬೈಲಿಂಗೆ ಪರಿಚಯಿಸುವ ಕಾರ್ಯವ ಸಾಹಿತ್ಯಾಸಕ್ತರಾದ ತೆಕ್ಕುಂಜೆ ಕುಮಾರಮಾವ°’ ಮಾಡ್ತಾ ಇದ್ದವು.
ನಾಡಭಾಷೆ ಕನ್ನಡದ ಶಾಸ್ತ್ರೀಯ ಬೆಳವಣಿಗೆಗೆ ಕಾರಣರಾದ ನಮ್ಮ ನಾಡಿನ ಗುರುಗಳ ಬಗ್ಗೆ ತಿಳ್ಕೊಂಬ.
ಕಳುದವಾರ: ಕವಿಶಿಷ್ಯ ಪಂಜೆ ಮಂಗೇಶರಾಯರ ಬಗಗೆ (ಸಂಕೊಲೆ)
‘ಹಳೆಗನ್ನಡ ಕಾವ್ಯಾರಣ್ಯ ಕೇಸರಿ’ : ಮುಳಿಯ ತಿಮ್ಮಪ್ಪಯ್ಯ:
“ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕ್ರರ್ತ, ಅಚ್ಚಗನ್ನಡದ ಹುಚ್ಚ – ಕ್ಷಮಿಸು ನಮೋ ನಮೋ!
ಕನ್ನಡ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ್ಲಿ, ಕನ್ನಡ ಕಾವ್ಯ ಪಾಠಕರಲ್ಲಿ, ಪರಮೋಚ್ಚ ಸಿರಿವಂತರ ಕುಲದಲ್ಲಿ ಜನಿಸಿಯೂ ಬಲು ಬಡವ;
ಬದುಕನ್ನೆಲ್ಲ ಬಡತನದಲ್ಲಿಯೇ ಕಳೆದು ಮನಸ್ವಿ, ವಚಸ್ವಿ, ವರ್ಚಸ್ವಿ, ಯಶಸ್ವಿ..”
– ಶ್ರೀ ಮುಳಿಯ ತಿಮ್ಮಪ್ಪಯ್ಯನವರ ಬಗ್ಗೆ ಶ್ರೀ ಸೇಡಿಯಾಪು ಕೃಷ್ಣ ಭಟ್ಟರ ಈ ನುಡಿನಮನಂಗೊ ಬರೆ ಹೊಗಳಿಕೆಯ ಶಬ್ದ ಮಾಂತ್ರ ಅಲ್ಲ, ತಿಮ್ಮಪ್ಪಯ್ಯನವರ ಜೀವನ – ಸಾಧನೆಗಳ ಬಗ್ಗೆ ಸ್ಥೂಲ ಪರಿಚಯ ಕೊಡುತ್ತು.
ಮುಳಿಯ ವಿಟ್ಲ ಸೀಮೆಯ ಶ್ರೀಮಂತ, ಪ್ರಭಾವಶಾಲಿ ಮನೆತನ.
ಈ ಮನೆತನದ ಕೇಶವ – ಮೂಕಾಂಬಿಕೆ ದಂಪತಿಯ ಮಗನಾಗಿ 1888 ರ ಮಾರ್ಚಿ 3 ರಂದು ತಿಮ್ಮಪ್ಪಯ್ಯ ಜನಿಸಿದವು.
ಪ್ರಾಥಮಿಕ ವಿದ್ಯಾಭಾಸ (ನಾಲ್ಕನೇ ಕ್ಲಾಸಿನವರೆಗೆ) ವಿಟ್ಲಲ್ಲಿ ಮುಗುಶಿದವು.
ಇದೇ ಸಮಯಲ್ಲಿ ಕೇಶವ ಭಟ್ರಿಂಗೆ ಅತೀವ ಆರ್ಥಿಕ ಸಂಕಷ್ಟವುಂಟಾಗಿ ಸಾಲದ ತೊಂದರೆ ಗೆ ಸಿಕ್ಕಿದ ಕಾರಣ, ಇವರ ಮುಂದಾಣ ವಿದ್ಯಾಭ್ಯಾಸ ಅಲ್ಲಿಗೇ ನಿಂದತ್ತು.
ಆದರೂ,ಮನೆಲಿದ್ದುಗೊಂಡು ಕಲ್ಲಜೆ ಕೃಷ್ಣ ಶಾಸ್ತ್ರಿಗಳ ಮೂಲಕ ಸಂಸ್ಕೃತ ಅಭ್ಯಾಸವನ್ನೂ, ಕೂಡ್ಲಿನ ಸುಬ್ರಾಯ ಶಾನುಭೋಗರಲ್ಲಿ ಸಂಗೀತಾಭ್ಯಾಸವನ್ನೂ ಮಾಡಿದವು.
ವಿದ್ಯಾರ್ಥಿ ಚೇತ್ ತ್ಯಜೇತ್ ಸುಖಂ !:
ಕಲಿಯೆಕ್ಕು ಹೇಳುವ ಮನೋಭಿಲಾಷೆ ತಿಮ್ಮಪ್ಪಯರಿಂಗೆ ಕಾಡಿಗೊಂಡಿತ್ತು. ಮನೆಯ ಆರ್ಥಿಕ ಮುಗ್ಗಟ್ಟಿಂದ ಕಂಗಾಲಾದರೂ,ಓದುವ ಇಚ್ಛೆ ಅವರಲ್ಲಿ ಬಲವಾಗಿದ್ದತ್ತು.
1906 ರಲ್ಲಿ ಏಕಾಏಕಿ ಮನೆಂದ ಹೆರಟು ತಿರುವಾಂಕೂರಿಂಗೆ ಪ್ರಯಾಣ ಮಾಡಿದವು. ವಿದ್ಯಾರ್ಜನೆಯೊಂದೇ ಅವರ ಪರಮ ಉದ್ದೇಶ!
ಅಲ್ಲಿ ಮಹಾರಾಜ ಸಂಸ್ಕೃತ ಪಾಠಶಾಲೆಲಿ ಸಂಸ್ಕೃತ ಕಲಿವಲೆ ಶುರು ಮಾಡಿದವು.
ಧರ್ಮಚತ್ರಲ್ಲಿ ಊಟ. ಅಪರೂಪಕ್ಕೊಂದರಿ ಸಿಕ್ಕಿಗೊಂಡಿತ್ತ ದಕ್ಷಿಣೆ ಬಾಕಿ ಅಗತ್ಯಂಗೊಕ್ಕೆ ಉಪಯೋಗಿಸಿದವು.
ಹೆರಿ ವಿದ್ಯಾರ್ಥಿಗಳ ಔದಾರ್ಯವನ್ನೂ ಬೇಡಿಗೊಂಡವು. ಅಷ್ಟು ಮಾಂತ್ರಕ್ಕೆ ತೃಪ್ತರಾದವಿಲ್ಲೆ.
ಅಲ್ಲಿಂದ,ಮುಂದಾಣ ಯಾತ್ರೆ ಕಾಲ್ನಡಿಗೆಲಿಯೇ ಮೈಸೂರಿಂಗೆ. ಅಲ್ಲಿ ಜೀವನಕ್ಕೆ ವಾರಾನ್ನವನ್ನೆ ಅವಲಂಬಿಸೆಕ್ಕಾದ ಪರಿಸ್ಥಿತಿ ಬಂತು.
ಮೈಸೂರಿಲಿ ಇವರ ಹಾಂಗೆ ವಾರಾನ್ನ ಉಂಡುಗೊಂಡು ಜೀವಿಸಿಗೊಂಡಿತ್ತಿದ್ದ ಪೇಜಾವರ ಸೀತಾರಾಮಾಚಾರ್ಯ ಹೇಳ್ತ ‘ಸಮವ್ಯಸನಿ’ ವಾರಾನ್ನ, ಅನ್ನದಾನ ಎಲ್ಯೆಲ್ಲ, ಯೇವಾಗಲ್ಲ ಇರ್ತು ಹೇಳ್ತ ವಿವರವ ಕೊಟ್ಟವಡ.
ಹಸಿದವಂಗೆ ಹೆಬ್ಬಲಸು ಸಿಕ್ಕಿದ ಹಾಂಗೆ ಆತು ಇವರ ಸ್ಥಿತಿ!
ಸುತ್ತಿಗೊಂಬಲೆ ಇತ್ತಿದ್ದು ಒಂದು ವೇಷ್ಟಿ, ಅದರ ಇನ್ನೊಂದು ಕೊಡಿಯ ಮೈ ಮುಚ್ಚುಲೆ ಉಪಯೊಗಿಸಿದವು. ಮನೆ ಮನೆಲಿ ಊಳಿಗ ಮಾಡಿಗೊಂಡು ವಿದ್ಯಾರ್ಜನೆಯನ್ನೂ, ಸಂಗೀತಾಭ್ಯಾಸವನ್ನೂ ಅಲ್ಲಿ ಮುಂದುವರಿಸಿದವು.
1910 ರ ಪರ್ಯಂತ ತಿಮ್ಮಪ್ಪಯ್ಯರು ವಿಧ್ಯಾರ್ಜನೆಗೆ ಬೇಕಾಗಿ ಹೀಂಗೆ ಕಠಿಣತಮ ಹಾದಿಲಿ ದೇಶಾಟನೆ ಮಾಡೆಕ್ಕಾಗಿ ಬಂತು.!
ವೃತ್ತಿ ಜೀವನ:
ಇದೇ ಸಮಯಕ್ಕೆ ಇವರ ಕುಟುಂಬದವು ಮೂಲ ಆಸ್ತಿಯ ಕಳಕ್ಕೊಂಡು ಪೆರುವಾಯಿ ಗ್ರಾಮದ ಕುಂಬಳಕೋಡಿಗೆ ಬಂದು ನೆಲಸಿದವು.
ತಿಮ್ಮಪ್ಪಯನವರೂ ಅಲ್ಲಿ ಕುಟುಂಬದವರೊಟ್ಟಿಂಗೆ ಬಂದು ಸೇರಿಗೊಂಡವು.
ಇವರ ಸಂಗೀತ ಜ್ಞಾನವನ್ನೂ, ಅಬ್ಬೆಂದ ಕಲ್ತ ಗಮಕ ಕಲೆಯನ್ನೂ ಸಮರ್ಥವಾಗಿ ಉಪಯೋಗಿಸಿಗೊಂಡವು. ಜೈಮಿನಿ ಭಾರತ ವಾಚನಲ್ಲಿ ಸೈ ಎನಿಸಿಗೊಂಡವು.
ಮಾಂತ್ರ ಅಲ್ಲ,ತನ್ನಲ್ಲಿ ಸಹಜವಾಗಿ ಇತ್ತಿದ್ದ ಕಾವ್ಯರಚನಾ ಸಾಮರ್ಥ್ಯವನ್ನೂ ಒರೆಗೆ ಹಚ್ಚಿದವು. ಊರವರ ಪ್ರಶಂಸೆಗೆ ಪಾತ್ರರಾದವು.
ಮುಂದೆ ಜೈಮಿನಿ ಭಾರತ ವಾಚನವ ಮಂಗಳೂರಿಲಿ ಪ್ರಸಿದ್ಧ ನ್ಯಾಯವಾದಿ ಅಮ್ಮೆಂಬಳ ಶ್ರೀನಿವಾಸ ಪೈಗಳ ಸಮ್ಮುಖಲ್ಲಿ ಮಾಡುವ ಅವಕಾಶ ಸಿಕ್ಕಿದ್ದು ಇವರ ಬಾಳಿನ ದೊಡ್ಡ ತಿರುವು.
ತಿಮ್ಮಪ್ಪಯನವರ ವಿದ್ವತ್ತು, ಕಂಠ ಮಾಧುರ್ಯ, ರಸಜ್ಞತೆಯ ಗುರುತಿಸಿಗೊಂಡ ಶ್ರೀನಿವಾಸ ಪೈಗಳು, 1911 ರಲ್ಲಿ ಇವರ ಕೆನರಾ ಹೈಸ್ಕೂಲಿಲಿ ಕನ್ನಡ ಪಂಡಿತರಾಗಿ ನೇಮಕ ಮಾಡಿದವು.
ಮಂಗಳೂರಿಲಿ ಬಾಡಿಗೆ ಮನೆ ಮಾಡಿಗೊಂಡು ತಮ್ಮ ಕುಟುಂಬದವರೊಟ್ಟಿಂಗೆ ನೆಲೆ ನಿಂದವು. ಅದ್ಯಾಪನದೊಟ್ಟಿಂಗೆ ಅಧ್ಯಯನವ ಮುಂದುವರಿಸಿದವು.
1914 ರಲ್ಲಿ ಇವರ ತೀರ್ಥರೂಪರು ದೈವಾಧೀನರಾದ ಮೇಲೆ ಕುಟುಂಬದವರ ಜವಾಬ್ದಾರಿಯ ವಹಿಸಿಗೊಂಡವು.
ಕರೋಪಾಡಿ ಮಹಾಬಲ ಭಟ್ಟರ ಮಗಳು ದೇವಕಿಯ ಧರ್ಮಪತ್ನಿಯಾಗಿ ಸ್ವೀಕರಿಸಿದವು.
1915 ರಲ್ಲಿ ಕನ್ನಡ ಕೋಗಿಲೆ ಹೆಸರಿನ ಮಾಸ ಪತ್ರಿಕೆಯ ಸಂಪಾದಕರಾದವು.ಈ ಕಾರಣಂದಾಗಿ “ಕೋಗಿಲೆ ತಿಮ್ಮಪ್ಪಯ್ಯ” ಹೆಸರೂ ಇವಕ್ಕೆ ಬಂತು.
ಎಲೋಶಿಯಸ್ ಕಾಲೇಜಿಲಿ ಕನ್ನಡ ಪಂಡಿತ ಹುದ್ದೆಯ ಅವಶ್ಯಕತೆ ಬಂದಪ್ಪಗ, ಇವರ ಪಾಂಡಿತ್ಯದ ಅರಿವಿತ್ತಿದ್ದ, ಅದುವರೆಗೆ ಆ ಸ್ಥಾನಲ್ಲಿತ್ತಿದ್ದ ವೆಗ್ತಿಯೇ ಇವರ ಹೆಸರಿನ ಸೂಚಿಸಿದ ಕಾರಣ, ಕಾಲೇಜಿನ ವ್ಯವಸ್ತಾಪನಾ ಮಂಡಳಿಯವು 1918 ರಲ್ಲಿ ಇವರನ್ನೇ ಆ ಹುದ್ದೆಗೆ ನೇಮಕ ಮಾಡಿಗೊಂಡವು.
ಮುಂದೆ ಮೂವತ್ತು ವರ್ಷಗಳ ಪರ್ಯಂತ ಈ ಹುದ್ದೆಲಿದ್ದುಗೊಂಡು ಕನ್ನಡಮ್ಮನ ಸೇವೆಯ ಅವಿಶ್ರಾಂತರಾಗಿ ಮಾಡಿದವು.
ಕನ್ನಡ ಬೋಧನ ಕಾಲೇಜಿನ ವಿದ್ಯಾರ್ಥಿಗೊಕ್ಕೆ ಮಾಂತ್ರ ಸೀಮಿತವಾಗಿತ್ತಿಲ್ಲೆ, ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಪರೀಕ್ಷೆಯ ಖಾಸಗಿಯಾಗಿ ತೆಕ್ಕೊಂಬ ಎಷ್ಟೋ ಅಭ್ಯಾಸಿಗೊಕ್ಕೆ ತರಬೇತಿ ಕೊಟ್ಟಿದವು.
ಎಲೊಶಿಯಸ್ ಕಾಲೇಜಿನ ಪ್ರಾದ್ಯಾಪಕರಾಗಿತ್ತಿದ್ದ ಶ್ರೀಯುತ ತೆಕ್ಕುಂಜ ಗೋಪಾಲಕೃಷ್ಣ ಭಟ್ ಸ್ವತಃ ಈ ಸಂದರ್ಭವ – ಇಂದು ಎನ್ನತ್ತರೆ ಏನಾರು ಯೋಗ್ಯತೆ ಇದ್ದರೆ ಅದು ತಿಮ್ಮಪ್ಪಯ್ಯರ ಔದಾರ್ಯದ ಕೊಡುಗೆ ಮಾಂತ್ರ ಹೇಳಿ ನೆನಪಿಸಿಗೊಂಡಿದವು.
ಸಾಹಿತ್ಯ – ಸಾಧನೆ:
ತಿಮ್ಮಪ್ಪಯ್ಯರ ಸಮಗ್ರ ಕೃತಿಗೊ ಲಭ್ಯ ಇಲ್ಲೆಡ, ಕಾರಣ ಅವು ಬರದ್ದದರ ಹಸ್ತಪ್ರತಿಯೆ ಇರಳಿ, ಒಪ್ಪಲ್ಲಿ ಒಂದಿಕ್ಕೆ ಮಡಗಿದ್ದವಿಲ್ಲೆಡ.
ಕೆಲವದರ ಹೆಸರು ಮಾಂತ್ರ ಗೊಂತಿಲಿಪ್ಪದು.
- ಅವು ಕೆನರಾ ಹೈಸ್ಕೂಲಿಲಿ ಪಂಡಿತರಾಗಿ ಸೇರೆಕ್ಕಾರೆ ಮದಲೇ ‘ಅಜೋದಯ’ ಹೇಳ್ತ ವಾರ್ಧಕ ಷಡ್ಪದಿಲಿ ಬರದ ಕಾವ್ಯ ಬಹುಷಃ ಅವರ ಶುರುವಾಣ ರಚನೆ ಆಗಿಕ್ಕು ಹೇಳ್ತವು.
- ಅದೇ ಸಮಯಲ್ಲಿ ಬರದ, ಹಸ್ತಪ್ರತಿಲಿಪ್ಪ “ಸೂರ್ಯಕಾಂತಿ ಕಲ್ಯಾಣ” ಒಂದು ಯಕ್ಷಗಾನ ಪ್ರಸಂಗ.
ಶ್ರೀ ಕೃಷ್ಣ ಬೋಧಾಮೃತದ ಕತೆ ಇದು ಹೇಳಿ ಸೂಚಿತವಾದರೂ, ಹಸ್ತಪ್ರತಿಯ ಓದಿದ ಶ್ರೀ ತೆಕ್ಕುಂಜೆಯವು ಇದೊಂದು ಮುಳಿಯದವರ ಕಲ್ಪನಾ ಕತೆ ಹೇಳಿ ಅಭಿಪ್ರಾಯ ಪಟ್ಟಿದವು.
ಇದರ ತಿಮ್ಮಪ್ಪಯ್ಯರೇ ಬರದ್ದಕ್ಕೆ ಆಧಾರ ರೂಪದ ಒಂದು ಪದ್ಯವೂ ಇದ್ದು –
ಡಿತ್ಥದರ್ಥದಿ ವರ್ತಿಸುವ ತೃಣ|
ಪತ್ತನದಿ ಭೂದಿವಿಜನಣ್ಣಯ||
ಪುತ್ರನಹ ತಿಮ್ಮಯ್ಯನಾನಿದ|ವಿಸ್ತರಿಸಿದೇ || - ‘ಮುಳಿಯ’ಕ್ಕೆ ತಿಮ್ಮಪ್ಪಯ್ಯರು ಕೊಟ್ಟ ಸಂಸ್ಕೃತ ರೂಪ ‘ತೃಣಪತ್ತನ’
- “ಸಂಸ್ಕೃತಿ” ಹೇಳ್ತದು ಇವರ ಇನ್ನೊಂದು ಅಪ್ರಕಟಿತ ತಾತ್ವಿಕ ನಿಬಂಧ ಗ್ರಂಥ. ಅದರ ಒಂದು ಅಧ್ಯಾಯ ರಾಷ್ಟ್ರಬಂಧು ಪತ್ರಿಕೆಲಿ ಪ್ರಕಟ ಆಗಿತ್ತಿದ್ದು.
- ಅಲ್ಲಲ್ಲಿ ಬರದು ಪ್ರಕಟ ಆದ ಎಷ್ಟೊ ಕವನಂಗೊ ಒಂದು ಸಂಕಲನ ರೂಪಲ್ಲಿ ಪ್ರಕಟ ಆಗದ್ದು ದುರದೃಷ್ತಕರ.
ಕೆಲವು ಕವನಂಗೊ ಕಂದ ವೃತ್ತಲ್ಲಿದ್ದರೆ,ಕೆಲವು ಹಾಡುಗಳ ರೂಪಲ್ಲಿದ್ದು. - ಬಡಹುಡುಗಿ – 67 ಪದ್ಯಂಗೊ ಇಪ್ಪ ಒಂದು ಖಂಡ ಕಾವ್ಯ.
ಬಡ ಕುಟುಂಬ ಒಂದರ ಕತೆ ಇದು. ನಮ್ಮ ಜಿಲ್ಲೆಲಿ ಬಳಕೆಲಿಪ್ಪ ಹಲವು ನುಡಿಗಟ್ಟುಗೊ, ಗಾದೆಗಳ ಸ್ವಾಭಾವಿಕವಾಗಿ ಸುಂದರವಾಗಿ ಬಳಸಿಗೊಂಡಿದವು.
ತುಳು ಗಾದೆ “ಮುಂಡಾಸ್ ದಾಯೆ ಬರ್ಪುಜ್ಜೆ, ಮುಟ್ಟಾಳೆದಾಯೆಗ್ ಕೊರ್ಪುಜ್ಜಿ” ತಿಮ್ಮಪ್ಪಯರು ತಮ್ಮ ಕಾವ್ಯಲ್ಲಿ ಕನ್ನಡೀಕರಿಸಿದ್ದವು:
ಮುಂಡಾಸಿನವನಿಲ್ಲ,ಮುಟ್ಟಾಳೆಯಾತನನು
ಕಂಡರೆನ್ನಾಕೆ ಇಸ್ಸೀ ಎಂಬಳು
ಖಂಡಿತವು ಕೊರಳಿಂಗೆ ಬಂದ ಮಗಳನು ಕಟ್ಟಿ
ಕೊಂಡಿರುವ ತಂದೆಯೆದೆಗದೆ ಕುಂತವು. - “ಚಂದ್ರಾವಲಿ ವಿಲಾಸ” ತಿಮ್ಮಪ್ಪಯ್ಯರು ಬರದ ಗದ್ಯಕಾವ್ಯ.
- ಎರಡು ನಾಟಕವನ್ನೂ ಬರದ್ದವು – “ಹಗಲಿರುಳು” ಮತ್ತೆ “ರಾವುತ ರಂಗಪ್ಪ”.
- “ನಡತೆಯ ನಾಡು” ಕರ್ಣನ ಸಚ್ಚಾರಿತ್ರ್ಯವ ಚಿತ್ರಿಸುವ ಅಚ್ಚಗನ್ನಡದ ಗದ್ಯ ಕೃತಿ.
- “ಸೊಬಗಿನ ಬಳ್ಳಿ“ಲಿಪ್ಪದು ಭಾಗವತದ ಶಂಬರಾಸುರ ವಧೆಯ ಕತೆ.
ಇದು ಅಚ್ಚಗನ್ನಡದ ಪದ್ಯ ಕೃತಿ. - ಇವರ ಇನ್ನೊಂದು ಪದ್ಯಕೃತಿ” ನವನೀತ ರಾಮಾಯಣ”.
ಒಂದನೆ ಭಾಂಡಲ್ಲಿ ಶ್ರೀ ರಾಮ ವನವಾಸಕ್ಕೆ ಹೋಪಲ್ಲಿವರೆಗಾಣ ಚಿತ್ರಣ ಇಪ್ಪದು.
ಮತ್ತೆರಡು ಭಾಂಡಂಗಳಲ್ಲಿ, ಹಿಂದಿರುಗಿ ಬಂದು ಪಟ್ಟಾಭಿಷಿಕ್ತ ನಾಗಿ- ಅಶ್ವಮೇಧದ ಮತ್ತೆ ಪರಂಧಾಮ ಹೊಂದುವಲ್ಲಿವರೆಗೆ ಚಿತ್ರಿಸೆಕ್ಕು ಹೇಳಿ ಸಂಕಲ್ಪ ಮಾಡಿರೂ ಅದು ಕೈಗೂಡದ್ದೆ, ಇದೊಂದು ಅಪೂರ್ಣ ಕೃತಿಯಾಗಿ ಒಳುದ್ದು.
ಇದರ ಮುನ್ನುಡಿಲಿ ತಿಮ್ಮಪ್ಪಯ್ಯರು ಹೀಂಗೆ ಹೇಳಿದ್ದವು :
“ವಾಲ್ಮೀಕಿ ರಾಮಾಯಣವನ್ನಾಗಲಿ ಹಿಂಬಾಲಿಸಿ ಬರೆದುದಲ್ಲವಿದು.
ಕಥಾರಚನೆ ಆದ್ಯಂತವಾಗಿ “ನವ-ನೀತ’ವಾದುದೇ.
ಆ ಅರ್ಥಾನುಗುಣವಾಗಿಯೇ ಈ ಕಾವ್ಯದ ಹೆಸರೂ ರೂಪಿತವಾಗಿದೆ.
ಹೆಸರಲ್ಲಿ ಹೊಳೆಯುವ ಶ್ಲೇಷಾರ್ಥದ ಸವಿ ಇದಿರೊಳಗಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವೆಂಬುದು ನನ್ನದಲ್ಲ….ವಾಚಕ ಮಹಾಶಯರು” - ಹಿರಿಯಡ್ಕ ಮುರಳೀಧರ ಉಪಾಧ್ಯರು, ಸರಳ ರಗಳೆ ಛಂದಸ್ಸಿಲಿ ಬರದ ಈ ಕೃತಿಯ ಬಗ್ಗೆ ಬರದ ಅಭಿಪ್ರಾಯ ಓದಿರೆ ಇದರ ಮಹತ್ವ ನಮ್ಮ ಅರಿವಿಂಗೆ ಬತ್ತು.-
“ನವನೀತರಾಮಾಯಣವು ಅಪೂರ್ಣವಾಗಿದ್ದರೂ ನವೀನ ಕಲ್ಪನೆಗಳಿಂದ ಸಾಂದ್ರವಾಗಿರುವ,ತನ್ನದೇ ಆದ ಸ್ವಂತಿಕೆಯನ್ನು ಮೆರೆದಿರುವ ಒಂದು ಒಯಿನಾದ ಕೃತಿಯಾಗಿದೆ”. - ಇದರಲ್ಲಿ ಶೃಂಗಾರ ಭೈರವ ರಾವಣನ ಚಿತ್ರಣವ ತಿಮ್ಮಪ್ಪಯ್ಯರು ಮಾಡಿದ ರೀತಿಯ ಗಮನಿಸಿ:
ಹಾಸುಗಲ್ಲಿನ ಹಾಸುದಪ್ಪಲಿನ ಹೇರೆದೆಯ
ಮೇಲೆ,ಮಲ್ಲಿಗೆವಳ್ಳಿ ತುರುಗಿ ಹಾರಾಕಾರ
ವಾಗಿ ಹಬ್ಬಿದ ಕೊರಳ ಪೀಠದಲಿ ನೀಲಮಣಿ
ಮೂರ್ತಿ ಮುಖಮಂಡಲಂ ಪಲ್ಲವಿಸೆ,ಕೆಮ್ಮೀಸೆ
ಯಿಂದೆ ಗುಡಿಗೆತ್ತಿ ಕಟ್ಟಿದ ತೋರಣದ ಹುಬ್ಬು
ಗಳ ಮೇಲೆ ಶೃಂಗಾರವೀರ ರೌದ್ರಗಳೆಂಬ
ಮುಮ್ಮೆಯ್ಯ ರಸದೇವನೆಡೆಬಿಡದೆ ಸನ್ನಿಧಾ
ನಂಗೊಂಬ ಮಣೆಯ ಹಣೆ ತಳತಳಿಸಲೊಂದೋಜೆ
ಗಾಬಾದ…ದಡಿಗ… - ಕಾದಂಬರಿ ಕ್ಷೇತ್ರಕ್ಕೆ ಇವರ ಕೊಡುಗೆ ಎರಡು.
“ಪಶ್ಚಾತ್ತಾಪ” ಸಾಮಾಜಿಕ ಕಾದಂಬರಿಯಾದರೆ, “ವೀರಬಂಕೆಯ” ಐತಿಹಾಸಿಕ ಕಾದಂಬರಿ. - ಹಳೆ ಕಾವ್ಯಂಗಳ ಆಧಾರಲ್ಲಿ ಕತೆಗಳನ್ನೂ ಬರದ್ದವು.
ಒಂದು “ತ್ರಿಪುರ ದಾಹ”. ಇದು ತ್ರಿಪುರ ದಹನ ಹೇಳ್ತ ಸಾಂಗತ್ಯದ ಕಥಾರೂಪ. ಹಳೆಗನ್ನಡ ಕಾವ್ಯಂಗಳ ಕಥಾಸಾರ ಇಪ್ಪ ಇನ್ನೆರಡು ಕೃತಿಗೊ – “ಆದಿಪುರಾಣ ಸಂಗ್ರಹ” ಮತ್ತೆ “ಸಮಸ್ತ ಭಾರತಸಾರ”.
ಇವು, ಹಳೆಗನ್ನಡದ ಪಂಪನ ಕೃತಿಗಳ ಹೊಸಗನ್ನಡ ರೂಪಾಂತರ.
ಸಂಶೋಧನ – ವಿಮರ್ಶೆ
- ತಿಮ್ಮಪ್ಪಯ್ಯರಿಂಗೆ ಇಡೀ ನಾಡಿಲಿ ಒಂದು ದೊಡ್ಡ ಹೆಸರು ತಂದು ಕೊಟ್ಟದು ಮದಾಲು, ‘ಅಂಡಯ್ಯನೂ,ಕನ್ನಡ ಮೆನಿಪ್ಪಾ ನಾಡೂ” ಹೇಳ್ತ ಲೇಖನ.
“ನಾಡೋಜ ಪಂಪ” ಹೆಸರಿನ ಉದ್ಗ್ರಂಥಂದಾಗಿ ಅವರ ಹೆಸರು ಮತ್ತಷ್ಟು ಪ್ರಸಿದ್ಧಿಗೆ ಬಂತು.
‘ಪಾರ್ತಿಸುಬ್ಬ” ಅವರ ಇನ್ನೊಂದು ಮಹತ್ವದ ಸಂಶೋಧನಾ ಕೃತಿ.
ಕವಿರಾಜಮಾರ್ಗದ ವ್ಯಾಖ್ಯಾನ ವಿವರಣೆಗಳ “ಕವಿರಾಜಮಾರ್ಗ ವಿವೇಕ”ಲ್ಲಿ ಬರದ್ದವು.
ಜೀವಮಾನವಿಡೀ ಅಧ್ಯಯನ – ಅಧ್ಯಾಪನಲ್ಲಿ ಕಳದ ತಿಮ್ಮಪ್ಪಯ್ಯರು ತಮ್ಮ ಈ ವೆವಸಾಯದ ಫಲವಾಗಿ ಪಡದ ಕೃತಿ “ನಾಡೋಜ ಪಂಪ”.
ಇದು ಅವಕ್ಕೆ ಶಾಶ್ವತವಾದ ಕೀರ್ತಿಯ ತಂದು ಕೊಟ್ಟಿದು.ಈ ಕೃತಿಯ ಅಕೇರಿಲಿ ಪಂಪಂಗೆ ಪುಷ್ಪಾಂಜಲಿಯ ಮುಖಾಂತರ ತಮ್ಮ ಭಕ್ತಿಯ ನಿವೆದಿಸಿಗೊಂಡಿದವು.
ಪಂಪನ ಗಾದೆ ಪಂಪನೊಲವಿಂ ನುಡುಗಟ್ಟು ಪಂಪನೊಳ್
ದಿಂಪಿನ ಗೆಯ್ಮೆ ಪಂಪನುಸುರಿಂದೊಸರೆದ್ದು ತಿರುಳ್ದ ಬಾಸೆಯಾ
ಪಂಪನ ದೇಸಿಯಂ ದೆಸೆಯಪ್ಪುವ ಕಂಪಿನ ವಸ್ತುರೂ
ಪಂ ಪೆಣೆವಂದಮುಂ ಬಗೆಯ ಪಂಪನ ಕನ್ನಡಮಲ್ತೆ ಕನ್ನಡಂ
ಕೀರ್ತಿ – ಮನ್ನಣೆ:
ತಿಮ್ಮಪ್ಪಯ್ಯರ ಸತತಾಧ್ಯಯನ, ಸಂಶೋಧನೆಂದಾಗಿ ನಾಡಿನ ವಿದ್ವಜ್ಜನರ ಮನ್ನಣೆಗೆ ಪಾತ್ರರಾದವು.
1931 ರಲ್ಲಿ ಕಾರವಾರದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಒಲುದು ಬಂತು.
1941 ರಲ್ಲಿ ಪಂಪನ ಸಹಸ್ರವರ್ಷಾಚರಣೆಯ ಸಂದರ್ಭದ ಉತ್ಸವವ ಲಕ್ಷ್ಮೇಶ್ವರಲ್ಲಿ ಆಚರುಸುವಾಗ ತಿಮ್ಮಪ್ಪಯ್ಯರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದವು.
ಅಲ್ಲಿ ಅವಕ್ಕೆ ಅತ್ಯಪೂರ್ವವಾದ ಮನ್ನಣೆಯೂ ಸಿಕ್ಕಿತ್ತು.
ನೂರಒಂದು ಎತ್ತುಗಳ ಕಟ್ಟಿದ ರಥಲ್ಲಿ ವೈಭವಪೂರ್ಣವಾದ ಮೆರವಣಿಗೆ, ಹೆಜ್ಜೆ ಹೆಜ್ಜೆಗೂ ಸಂಘ ಸಂಸ್ಥೆಗೊ, ಸಾರ್ವಜನಿಕರುಗೊ ಅರ್ಪಿಸಿದ ಹಾರಂಗೊ ಅವು ಬರದ ನಾಡೋಜ ಪಂಪದ 600 ಪುಟಗಳನ್ನೂ ಮೀರಿಸಿದ್ದು, ಕನ್ನಡಿಗರು ಅವಕ್ಕೆ ಕೊಟ್ಟ ಅತಿ ದೊಡ್ಡ ಮನ್ನಣೆಯೇ ಸರಿ !
ಮುಳಿಯದವು – ಅಳಿಯದವು:
ಮುಳಿಯದ ತಿಮ್ಮಪ್ಪಯ್ಯನವರು ಎಂದೂ ಮುಳಿಯದವರು – ತಿಮ್ಮಪ್ಪಯರ ಹೆಸರಿನ ಬಗ್ಗೆ ದಿ.ಬಿ.ಎಮ್.ಶ್ರೀಕಂಠಯ್ಯರು ವಿಶ್ಲೇಶಣೆ ಮಾಡಿದ ರೀತಿ ಇದು.
(ಮುಳಿಯ ಹೇಳಿರೆ ಸ್ವಭಾವಲ್ಲಿ ಕೋಪವೇ ಇಲ್ಲದ್ದವ, ಮುಳಿಯದ ಹೇಳಿರೆ ಸ್ವಭಾವಲ್ಲಿ ಕೋಪ ಇದ್ದರೂ ಹೆರ ತೋರ್ಸದ್ದವ).
ಹಳೆಗನ್ನಡ – ಹೊಸಗನ್ನಡ ಹಾರದ ಮಧ್ಯಮಣಿ,ನಮ್ಮ ಮುದ್ದಿನ ಮುದ್ದಣ, ಕನ್ನದ ನವೋದಯದ ಮುಂಗೋಳಿ –ಸ್ವರವೆತ್ತಿ ಕೂಗಿ ಕೆಲೆದು ನುಡಿಯಿಸಿದ ಕನ್ನಡಕ್ಕೆ ನಮ್ಮ ಮುಳಿಯದ ಪಂಡಿತವಕ್ಕಿ – ಶ್ರೀ ಸೇಡಿಯಾಪು ಮುಳಿಯದವರ ಕೊಂಡಾಡಿದ ಪರಿಯಿದು.
ಕನ್ನಡದ ವಿಧ್ಯಾರ್ಥಿಗಳು ಕನ್ನಡವನ್ನು ಮರೆತರೂ ಅವರನ್ನು ಮರೆಯಲಾರರು -ಇದು ಕಾರಂತರ ನುಡಿನಮನ !
1948 ರಲ್ಲಿ ತಿಮ್ಮಪ್ಪಯ್ಯರು ನಿವೃತ್ತರಾದ ಮೇಲೆ ಮಂಗಳೂರು ಬಿಟ್ಟು ಪೆರ್ಲಲ್ಲಿ ಮಗನ ಮನೆಗೆ ಬಂದವು.
ಅನಾರೋಗ್ಯ ಪೀಡಿತರಾದ ಕಾರಣ ಮದ್ರಾಸಿಲಿತ್ತಿದ್ದ ದೊಡ್ಡ ಮಗನ ಮನೆಗೆ ಬರೆಕ್ಕಾಗಿ ಬಂತು.
ಅಲ್ಲಿ ಶುಶ್ರೂಷೆ ಫಲಕಾರಿಯಾದರೂ ಅನಾರೊಗ್ಯ ಮತ್ತೆ ಮತ್ತೆ ಪೀಡಿಸಿತ್ತು. 1950 ರ ಜನವರಿ ಹದಿನಾರನೆ ತಾರೀಕು, ಯಾವ ಪೂರ್ವಸೊಚನೆಯೊ, ಕ್ಷೀಣಸ್ವರಲ್ಲಿ “ಸ್ನೇಹಿತರೆಲ್ಲ ಇಲ್ಲೆ ಇದ್ದವೊ ?” ಕೇಳಿದವಡ!
ಮರುಕ್ಷಣಲ್ಲಿ ಅವರ ಹಿಂದೆ ಕೂದೊಂಡಿತ್ತಿದ್ದ ಮಗನ ಮೇಲೆ ಕುಸುದು ಬಿದ್ದವು, ಅಲ್ಲೇ ಆ ಮಹಾನಿದ್ರೆಗೆ ತೆರಳಿದವು.
ಕನ್ನಡ ಕಾಡಿನ ಕೋಗಿಲೆ ಮೇಲೆ ಮುಟ್ಟುಲಾಗದ್ದ ಎತ್ತರಕ್ಕೆ ಹಾರಿ ಹೋತು!
ಅವ್ವೇ ಬರದ ಒಂದು ಕಂದ ಪದ್ಯದೊಟ್ಟಿಂಗೆ ಈ ಲೇಖನಕ್ಕೆ ಮುಕ್ತಾಯ ಹೇಳ್ತೆ –
ಬೆರಳಂ ಸಿಡಿಯಲಿ ಪೊಗಳಲಿ
ಧರೆಯೊಳ್ ತಂತಮ್ಮ ಪುಟ್ಟುಗುಣದಂದದೊಳಾ –
ನೆರಡರೊಳುಂ ಮುದಮಾಂಪೆಂ
ಇರುಳುಂ ಪಗಲುಂ ನರಂಗೆ ಸುಖಕರಮಲ್ತೇ !
~*~*~
ಆಧಾರ ಗ್ರಂಥ:
- ಮುಳಿಯ ತಿಮ್ಮಪ್ಪಯ್ಯ – ಜೀವನ ಮತ್ತು ಕಾರ್ಯ
ಲೇ: ತೆಕ್ಕುಂಜ ಗೋಪಾಲಕೃಷ್ಣ ಭಟ್ಟ.
(ಚಿತ್ರಕೃಪೆ – ಶ್ರೀ ಮುಳಿಯ ರಾಘವಯ್ಯ)
೧. ‘ಸಂಕೋಲೆ’ ಹೇಳ್ತ ಪದವ ಈ ಬೈಲ್ಲಿ ( ಬೈಲು = website?) ಉಪಯೋಗಿಸುತ್ತಾ ಇಪ್ಪದು chain ಹೇಳುವ
ಅರ್ಥಲ್ಲಿ ಅಲ್ಲ, ‘link’ ಹೇಳುವ ಅರ್ಥಲ್ಲಿ. ಆದರೆ ಅದಕ್ಕೂ ‘ಸಂಕೋಲೆ’ ಸರಿಯಾದ ಶಬ್ದ ಅಲ್ಲ ಹೇಳಿ ಎನ್ನ ಅಭಿಪ್ರಾಯ.
‘ಕೊಂಡಿ’ ಹೇಳಿದರೆ ಅಕ್ಕೋ?
೨. ಇಂಗ್ಲಿಷ್ ಭಾಷೆಯ (ಅಥವಾ ಯಾವುದೇ ಇನ್ನೊಂದು ಭಾಷೆಯ ಅಥವಾ ಹೊಸ ತಾಂತ್ರಿಕ ಭಾಷೆಯ) ಪದಕ್ಕೆ
ಸಮಾನಾರ್ಥ ಪದವ ಹುಡುಕ್ಕುವ ಅಥವಾ ಹುಟ್ಟುಹಾಕುವ ಸಂದರ್ಭಲ್ಲಿ ಇಂತಹ ವಿಮರ್ಶೆ ಅಗತ್ಯ ಇದ್ದು. ಹೊಸ
ಶಬ್ದಂಗಳ ಅಳುಕಿಲ್ಲದ್ದೆ ಪ್ರಯೋಗ ಮಾಡುವ ಒಪ್ಪಣ್ಣನ ಕೆಲಸ ಶ್ಲಾಘನೀಯ, ಸ್ವಾಗತಾರ್ಹ(ಉದಾಃ ಮೋರೆ ಪುಟ).
ಅದರ ಬಗ್ಗೆ ಇಂತಹ ವಸ್ತುನಿಷ್ಠ ಪ್ರತಿಕ್ರಿಯಗಳೂ ಇರೆಕಾದ್ದೆ. ವಸ್ತುನಿಷ್ಠ ಸಂವಾದ, ಚರ್ಚೆ, ವಿಮರ್ಶೆ, ಸಲಹೆ,
ಸೂಚನಗೊ ಇದ್ದರೆ ಎಲ್ಲೋರೂ ಒಪ್ಪುವಂಥ ಯೋಗ್ಯ ಶಬ್ದ ಸೃಷ್ಟಿ ಸಾಧ್ಯ. ಇಂತಹ ಸಂವಾದಂಗಳಲ್ಲಿ ವೈಯಕ್ತಿಕ
ನಿಂದನೆ, ಕೊಂಕು ಮಾತುಗೊಕ್ಕೆ ಅವಕಾಶ ಇಪ್ಪಲಾಗ.
೩. ಮುಳಿಯ ರಾಘವಯ್ಯ ಭಾವನ ನಮ್ಮ ಬೈಲ್ಲಿ ಕಂಡು ಸಂತೋಷ ಆತು; ಸುಸ್ವಾಗತ!
೪. ಮುಳಿಯ ರಾಘವಯ್ಯ ಬರದ “ನಾಡೋಜ ಮುಳಿಯ ತಿಮ್ಮಪ್ಪಯ್ಯ” ಹೇಳುವ ಒಂದು ಸಣ್ಣ ಪುಸ್ತಕವ ಇತ್ತೀಚಗೆ
ಕಾಂತಾವರ ಕನ್ನಡ ಸಂಘ ಪ್ರಕಟಿಸಿದ್ದು. ಅಲ್ಲದ್ದೆ ಅವರ ಕೆಲವು ಲೇಖನಂಗೊ ಕನ್ನಡ ಪತ್ರಿಕೆಗಳಲ್ಲಿಯೂ ಕಾಣುತ್ತು.
ಕರ್ನಾಟಕದ ಹೆರವೇ ದೀರ್ಘಕಾಲ ವೃತ್ತಿ ಜೀವನ ಮಾಡಿ ಮೈಸೂರಿಲ್ಲಿ ನಿವೃತ್ತ ಜೀವನಲ್ಲಿಪ್ಪ ಮುಳಿಯ ರಾಘವಯ್ಯ
ಕನ್ನಡಲ್ಲಿ ಬರವದರ ಓದಿ ನೋಡಿದರೆ ಮುಳಿಯದ ಕನ್ನಡ ಪ್ರೇಮ, ಪಾಂಡಿತ್ಯ ಅಳುದ್ದಿಲ್ಲೆ ಹೇಳುವದಲ್ಲಿ ಸಂಶಯ ಇಲ್ಲೆ.!
ತೆ. ಕುಮಾರಂಗೆ ನಮಸ್ಕಾರ
ಆನು ಕೊಟ್ಟ ಸ್ಪಷ್ಟನೆಗೊಕ್ಕೆ ನಿಂಗೊ ಕೂಡ್ಲೇ ಸ್ಪಂದಿಸಿದ್ದು ಸಂತೋಷ ಆತು. ದಾಮೋದರ ಮಾವ, ಗೋಪಾಲ ಮಾವ, ಶಂಕರ ಮಾವ, ಚಿಕ್ಕಿ ಎಲ್ಲೋರನ್ನೂ ಎನಗೆ ಸಣ್ಣಾಗಿಪ್ಪಗಂದ ಗೊಂತು. ಅಂಬಗ ಸುಮಾರು ಸರ್ತಿ ಆನು ತೆಕ್ಕುಂಜಕ್ಕೂ ಬಂದಿತ್ತಿದ್ದೆ. ಅವರ ಮುಂದಾಣ ಪೀಳಿಗೆಯೋರ (ಕೆಲವರ ಬಿಟ್ಟು) ಹೆಚ್ಚಿನೋರ ಗೊಂತಿಲ್ಲೆ ಅಷ್ಟೆ. ಈ ಮೂಲಕ ನಿಂಗಳ ಪರಿಚಯ ಆತು. ಸಂತೋಷ ಆತು. ಯಾವಾಗಾದರು ಭೇಟಿ ಅಪ್ಪೊ.
ಒಪ್ಪಣ್ಣ.ಕಾಮ್ಲಿ ಇನ್ನೊಂದು ಎನಗೆ ಅನಿಸಿದ್ದು, ಅದರ ಆರಿಂಗೆ ಬರೆಯೆಕ್ಕು ಹೇಳಿ ಗೊಂತಿಲ್ಲೆ. ಹಾಂಗಾಗಿ ಇಲ್ಲಿಯೇ ಬರೆತಾ ಇದ್ದೆ. ಈ ವೆಬ್ ಸೈಟಿಲಿ ‘ಸಂಕೋಲೆ’ ಪದವ ‘chain’ ಹೇಳುವ ಅರ್ಥಲ್ಲಿ ಉಪಯೋಗಿಸಿದ ಹಾಂಗೆ ಕಾಣ್ತು. ‘chain’ ಂಗೆ ಸಂಕೋಲೆ ಹೇಳುವ ಅರ್ಥ ಇದ್ದರೂ ಅದರ ಹಾಂಗೆ ಉಪಯೋಗ್ಸುದು ಆರನ್ನಾದರೂ (ಕೈದಿಗೊ ಇತ್ಯಾದಿ) ಅಥವಾ ಪ್ರಾಣಿಗಳ (ದನ, ಆನೆ ಇತ್ಯಾದಿ) ಕಟ್ಟಿ ಹಾಕುವ ಸಂದರ್ಭಲ್ಲಿ. ಇಲ್ಲಿ ಸರಪಣಿ ಅಥವಾ ಸರಣಿ ಹೇಳುವ ಪದ ಹೆಚ್ಚು ಯೋಗ್ಯ ಹೇಳಿ ಕಾಣ್ತು ಅಲ್ಲದ? ಈಗ ನೋಡಿ, ಕೊರಳಿಂಗೆ ಹಾಗುವ ಚಿನ್ನದ ಸರಕ್ಕೂ ಇಂಗ್ಲಿಷಿಲಿ ‘chain’ಹೇಳ್ತವು. ಆದರೆ ಅದರ ಸಂಕೋಲೆ ಹೇಳುಲಾವ್ತಾ?
ಒಪ್ಪಣ್ಣ ಬಳಗದ ಎಲ್ಲ್ದೋರಿಂಗುದೇ ನಮಸ್ಕಾರ. ಈ ವೆಬ್ ಸೈಟಿಲಿ ಆನು ಇದುವೇ ಸುರುವಿಂಗೆ ಬರೆತ್ತಾ ಇಪ್ಪದು. ಎನ್ನ ಪರಿಚಯ ಬೇಕಾದರೆ – ಆನು ಮುಳಿಯ ತಿಮ್ಮಪ್ಪಯ್ಯನೋರ ಅಖೇರಿ ಮಗ. ರಘುವಿಂಗೆ ಅಪ್ಪಚ್ಚಿ ಆಯೆಕ್ಕು. ಅಷ್ಟು ಸಾಕನ್ನೆ ಸದ್ಯಕ್ಕೆ. ಅಪ್ಪನ ವಿಷಯ ತುಂಬ ಲಾಯೆಕಲ್ಲಿ ಅಬರದ್ದವು ತೆಕ್ಕುಂಜ ಕುಮಾರ. ‘ಚಿಕ್ಕದಾದರೂ ಚೊಕ್ಕದಾಗಿದೆ’ ಹೇಳುಲಕ್ಕು. ಅವಕ್ಕೆ ಅಭಿನಂದನೆ. ಬರವಣಿಗೆಯ ವಿಚಾರಲ್ಲಿ ಎರಡೇ ಎರಡು ಅಂಶಂಗಳ ಬಗ್ಗೆ ರಜ ಸ್ಪಷ್ಟನೆ ಕೊಡ್ತೆ. ‘ಪ್ರಾಥಮಿಕ ವಿದ್ಯಾಭಾಸ (ನಾಲ್ಕನೇ ಫೋರ್ಮಿನವರೆಗೆ) ವಿಟ್ಲಲ್ಲಿ ಮುಗುಶಿದವು’ ಹೇಳಿ ಬರದ್ದವು. ಅಪ್ಪ ಶಾಲೆಗೆ ಹೋದ್ದು ನಾಲ್ಕನೇ ಕ್ಲಾಸಿನ (ತರಗತಿ) ವರೆಗೆ ಮಾತ್ರ. ಮದಲು ‘ಫೋರ್ಮು’ ಹೇಳಿಗೊಂಡಿದ್ದದು ಹೈಸ್ಕೂಲಿನ ಕ್ಲಾಸುಗೊಕ್ಕೆ. ಆರನೆಯ ಕ್ಲಾಸು ಹೇಳಿದರೆ ಒಂದನೆಯ ಫೋರ್ಮು, ಏಳನೆಯ ಕ್ಲಾಸು ಹೇಳಿದರೆ ಎರಡನೆಯ ಫೋರ್ಮು – ಹೀಂಗೆ. ಆ ಲೆಕ್ಕಲ್ಲಿ ನಾಲ್ಕನೆಯ ಫೋರ್ಮು ಹೇಳಿದರೆ ಒಂಬತ್ತನೆಯ ಕ್ಲಾಸು ಆವ್ತು. ಇನ್ನೊಂದು ದಿಕ್ಕೆ – ‘1906 ರಲ್ಲಿ ಏಕಏಕಿ ಆರಿಂಗೂ ಹೇಳದ್ದೆ ಮನೆಂದ ಹೆರಟು ತಿರುವಾಂಕೂರಿಂಗೆ ಪಲಾಯನ ಮಾಡಿದವು’ ಹೇಳಿ ಬರದ್ದವು. ಈ ವಾಕ್ಯಲ್ಲಿ ‘ಪಲಾಯನ’ ಹೇಳುವ ಪದ ಅಷ್ಟೊಂದು ಯೋಗ್ಯ ಅಲ್ಲ ಹೇಳಿ ಎನಗೆ ಕಾಣ್ತು. ಯಾವದೋ ತಪ್ಪು ಅಥವಾ ಅಪರಾಧ ಮಾಡಿ ಓಡಿ ಹೋದರೆ ಅಂಬಗ ‘ಪಲಾಯನ’ ಹೇಳುವ ಪದವ ಪ್ರಯೋಗ ಮಾಡುದು ಸರಿ. ‘ಪಲಾಯನ’ಕ್ಕೆ ಒಂದು ರೀತಿಯ negative ಧ್ವನಿ ಇದ್ದು, ಅದರ ಬದಲು ಬರೇ ‘ಪ್ರಯಾಣ’ ಹೇಳುಲಕ್ಕು ಹೇಳಿ ಕಾಣ್ತು. ಇರಲಿ.
ಇನ್ನು ಅಪ್ಪ ಬರದ ಪುಸ್ತಕಂಗಳ ವಿಷಯ. ಮುಳಿಯ ತಿಮ್ಮಪ್ಪಯ್ಯ ಸಮಗ್ರ ಸಂಪುಟ ೧ ಮತ್ತೆ ೨ ಪ್ರಿಂಟ್ ಮಾಡುವ ಹೊತ್ತಿಂಗೆ ಅವರ ‘ನಾಡೋಜ ಪಂಪ’ ಮತ್ತೆ ‘ಕವಿರಾಜ ಮಾರ್ಗ ವಿವೇಕ’ ಪುಸ್ತಕಂಗಳ ಪ್ರತಿಗೊ (ಗೀತಾ ಬುಕ್ ಹೌಸ್, ಮೈಸೂರು) ಇದ್ದ ಕಾರಣ ಅವುಗಳ ಪ್ರಿಂಟ್ ಮಾಡಿದ್ದಿಲ್ಲೆ. ಸುರು ಸುರುವಿಂಗೆ ಸಮಗ್ರ ಸಂಪುಟಂಗಳ ಒಟ್ಟಿಂಗೆ ಈ ಎರಡು ಪುಸ್ತಕಂಗಳನ್ನೂ ಕೊಟ್ಟು ಇದ್ದ ಎಲ್ಲ ಪ್ರತಿಗೊ ಖಾಲಿ ಆತು. ಮತ್ತೆ ೨೦೦೮ರಲ್ಲಿ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ ನಾಡೋಜ ಪಂಪ ಪುಸ್ತಕವ ಪ್ರಿಂಟ್ ಮಾಡಿದ್ದು. ಕವಿರಾಜ ಮಾರ್ಗ ವಿವೇಕದ ಪ್ರತಿಗೊ ಇಲ್ಲೆ. ಸಮಗ್ರ ಸಂಪುಟದ ಕೆಲವೇ ಕೆಲವು ಪ್ರತಿಗೊ ಇದ್ದಷ್ಟೆ. ೨೦೦೯ನೇ ಇಸವಿಲಿ ಸಂಪಾಜೆ ಡಾ। ಕೀಲಾರು ಗೋಪಾಲ ಕೃಷ್ಣಯ್ಯ ಪ್ರತಿಷ್ಠಾನ , ಕುಕ್ಕಿಲ ಕೃಷ್ಣ ಭಟ್ಟರ ‘ಪಾರ್ತಿಸುಬ್ಬನ ಯಕ್ಷಗಾನಗಳು’ (ಕ್ರಯಃ ರೂ. ೧೮೦) ಪುಸ್ತಕವ ಅಚ್ಚು ಹಾಕಿದವು, ಆ ಪುಸ್ತಕಲ್ಲಿ ಅಪ್ಪನ ಸಂಶೋಧನ ಗ್ರಂಥ ‘ಪಾರ್ತಿಸುಬ್ಬ’ವನ್ನೂ ಸೇರ್ಸಿಗೊಂಡಿದವು. ಎಲ್ಲೋರಿಂಗೂ ಮತ್ತೊಂದರಿ ನಮಸ್ಕಾರ. – ಮುಳಿಯ ರಾಘವಯ್ಯ, ಮೈಸೂರು.
ಮುಳಿಯ ರಾಘವಯ್ಯರಿಂಗೆ ನಮಸ್ಕಾರ.
ಎನ್ನ ಪರಿಚಯ ನಿಂಗೊಗೆ ಇಲ್ಲದ್ದರೂ ನಿಂಗಳ ಬಗ್ಗೆ ಎನಗೆ ಗೊಂತಿದ್ದು. ( ಆನು ತೆಕ್ಕುಂಜ ದಾಮೋದರ ಭಟ್ಟರ ಮಗ). ನಿಂಗೊ “ಒಪ್ಪಣ್ಣ” ಕ್ಕೆ ಬಂದು ಶುದ್ದಿ ಓದಿ ಒಪ್ಪ ಕೊಟ್ಟದು ಕೊಶಿ ಆತು.
ನಿಂಗಳ ಸ್ಪಷ್ಟನೆಗಳೂ
೧.{ಇನ್ನೊಂದು ದಿಕ್ಕೆ – ’1906 ರಲ್ಲಿ ಏಕಏಕಿ ಆರಿಂಗೂ ಹೇಳದ್ದೆ ಮನೆಂದ ಹೆರಟು ತಿರುವಾಂಕೂರಿಂಗೆ ಪಲಾಯನ ಮಾಡಿದವು’ ಹೇಳಿ ಬರದ್ದವು. ಈ ವಾಕ್ಯಲ್ಲಿ ‘ಪಲಾಯನ’ ಹೇಳುವ ಪದ ಅಷ್ಟೊಂದು ಯೋಗ್ಯ ಅಲ್ಲ ಹೇಳಿ ಎನಗೆ ಕಾಣ್ತು.}. – ನಿಂಗಳ ಅಭಿಪ್ರಾಯಕ್ಕೆ ಖಂಡಿತಾ ಮನ್ನಣೆ ಕೊಡ್ತೆ. ತಿಮ್ಮಪ್ಪಯ್ಯರಂತಹಾ ಹೆರಿಯೋರ ಯೇವತ್ತೂ ಆನು ಕಾಯಾ, ವಾಚಾ, ಮನಸಾ ಎನ್ನ ಅಜ್ಜನ ಸ್ಥಾನಲ್ಲಿ ಗೌರವಿಸುತ್ತೆ. ಇಲ್ಲಿ ಆದ ಪ್ರಮಾದಕ್ಕೆ ಎನಗೆ ಅತ್ಯಂತ ಖೇದ ಆತು. ಕ್ಷಮೆ ಇರಳಿ.
೨. ಪ್ರಾಥಮಿಕ ವಿದ್ಯಾಭ್ಯಾಸದ ಬಗ್ಗೆ ನಿಂಗೊ ಕೊಟ್ಟ ಸ್ಪಷ್ಟನೆ ಮನದಟ್ಟಾತು. ಈ ತಪ್ಪು ಎನ್ನ ಅಜ್ಞಾನಂದ ಆದ್ದದು.
“ಒಪಣ್ಣ” ಬೈಲಿಂಗೆ ಬಂದುಗೊಂಡಿರಿ, ನಿಂಗಳ ಸಲಹೆ, ಸೂಚನಗೊ ಎಂಗೊಗೆಲ್ಲ ದಾರಿದೀಪ ಆಗಲಿ.
ಇಂಥ ಅಪೂರ್ವ ವ್ಯಕ್ತಿಯ ಪರಿಚಯಿಸಿದ್ದಕ್ಕೆ ಧನ್ಯವಾದಂಗ ಕುಮಾರ ಮಾವ. ಅಬ್ಬ, ಎಷ್ಟು ಸಾಹಿತ್ಯ ಸಾಧನೆ ಮಾಡಿದ್ದವು ಇವು!
ಅವು ಬರದ್ದು ಎಲ್ಲವೂ ಲಭ್ಯ ಇದ್ದರೆ ಅಮೂಲ್ಯ ಸಂಗ್ರಹವೇ ಅಕ್ಕು.
ಮುಳಿಯ ತಿಮ್ಮಪ್ಪಯ್ಯರ ಬಗ್ಗೆ ಪರಿಚಯ ಲೇಖನ ಅವರ ಬಾಲ್ಯದ ಕಷ್ಟದ ಜೀವನ, ಅವರ ಸಾಧನೆಗಳ ಬಗೆಲಿ ಬೆಣಂಚು ಹಿಡುದತ್ತು. ಸೇಡಿಯಾಪು, ಕಾರಂತರು ಶ್ರೀಯುತರ ಬಗ್ಗೆ ಹೇಳಿದ ಮಾತುಗಳ ಕೇಳುವಗ ಹೆಮ್ಮೆ ಅನಿಸಿತ್ತು. ಪರಿಚಯಿಸಿದ ಕುಮಾರಣ್ಣಂಗೆ ಧನ್ಯವಾದಂಗೊ.
ತೆಕ್ಕುಂಜ ಗೋಪಾಲ ಕೃಷ್ಣ ಭಟ್ರು ಎಂಗೊಗೆ ಕನ್ನಡ ಪಾಠ ಮಾಡುವಾಗ ಮುಳಿಯದವರ ಹೆಸರು ಸ್ಮರಿಸಿಗೊಂಡು ಇತ್ತಿದ್ದು ನೆಂಪು ಇದ್ದು ಎನಗೆ.
ಅಂತಹ ಮೇರು ವ್ಯಕ್ತಿಯ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಂಗೊ.
[ ಮುಳಿಯದವು – ಅಳಿಯದವು ] – ಒಳ್ಳೆ ಲಾಯಕ ಆಯ್ದು ಶುದ್ದಿ. ಓದಿ ಹೆಮ್ಮೆಪಟ್ಟುಗೊಳ್ಳೆಕ್ಕಾದ ಶುದ್ದಿ.
ಕನ್ನಡ ಸಾಹಿತ್ಯದ ಬಗ್ಗೆ ಏನೇನೂ ಗೊಂತಿಲ್ಲದ್ದ ಎನಗೆ ಈ ಲೇಖನ ಮಾಲೆಗ ತುಂಬಾ ಸಹಾಯ ಆವುತ್ತಾ ಇದ್ದು…
‘ಮುಳಿಯ’,’ಮುಳಿಯದ’ – ಅರ್ಥ ತುಂಬಾ ಲಾಯಕ ಇದ್ದು… ಧನ್ಯವಾದ ಮಾವ…
ಹಳೆಗನ್ನಡಕ್ಕೂ, ಹವ್ಯಕ ಭಾಷೆಗೂ ತುಂಬಾ ಹತ್ತರಣ ಸಂಬಂಧ ಇದ್ದ ಹಾಂಗೆ ಕಾಣುತ್ತು ಅಲ್ಲದ?
ಬೆರಳಂ ಸಿಡಿಯಲಿ ಪೊಗಳಲಿ
ಧರೆಯೊಳ್ ತಂತಮ್ಮ ಪುಟ್ಟುಗುಣದಂದದೊಳಾ –
ನೆರಡರೊಳುಂ ಮುದಮಾಂಪೆಂ
ಇರುಳುಂ ಪಗಲುಂ ನರಂಗೆ ಸುಖಕರಮಲ್ತೇ !
ತುಂಬಾ ಲಾಯಕ ಇದ್ದು… ಭಾವಾರ್ಥ ಗೊಂತಾದರೂ ಶಬ್ದಾರ್ಥ ಸರಿಯಾಗಿ ಗೊಂತಿಲ್ಲೇ… ಹೇಳುವಿರ ಮಾವ?
ಮೇಗಾಣ ಕ೦ದ ಪದ್ಯದ ಅರ್ಥ ಹೀ೦ಗಿದ್ದು ಅಕ್ಕಾ,
ಜೆನ೦ಗೊ ಬೈಯಲಿ ಅಥವಾ ಹೊಗಳಲಿ,ಅದು ಅವರ ಹುಟ್ಟುಗುಣ೦ದ ಬ೦ದದು.ಆನು ಕಷ್ಟ ಮತ್ತು ಸುಖ ಈ ಎರಡನ್ನೂ ಸ೦ತೋಷಲ್ಲಿ ಸ್ವೀಕಾರ ಮಾಡ್ತೆ,ಎ೦ತಗೆ ಹೇಳಿರೆ ಇರುಳು ಮತ್ತೆ ಹಗಲು ಈ ಎರಡೂ ಮನುಷ್ಯ೦ಗೆ ಸುಖಕರವಾಗಿದ್ದಲ್ಲದೊ?
ತಿಮ್ಮಪ್ಪಯ್ಯರು ನಂಬಿಗೊಂಡು ಬಂದ ಜೀವನ ತತ್ವವ “ಕಂದ” ಲ್ಲಿ ಬರದ್ದದು. ಅವರ ಹಳೆಗನ್ನಡದ ಮೇಲಣ ಪ್ರಬುದ್ಧತೆ ಇದರಲ್ಲಿ ಕಾಣುತ್ತು.
ಇಂತಹ ಮೇರು ವ್ಯಕ್ತಿ ಬರದ ಇಷ್ಟು ಒಳ್ಳೆ ಪದ್ಯದ ಅರ್ಥವ ಅವರ ತಮ್ಮನ ಪುಳ್ಳಿಯ ಮೂಲಕವೇ ತಿಳುಕ್ಕೊಂಬದು ಹೇಳಿರೆ ಎಂಗಳ ಬಹುದೊಡ್ಡ ಸೌಭಾಗ್ಯ…
ತುಂಬಾ ತುಂಬಾ ಇಷ್ಟ ಆತು ಈ ಪದ್ಯ… ಜೀವನಲ್ಲಿ ನಾವೆಲ್ಲಾ ಅಳವಡಿಸಿಗೊಲ್ಲೆಕ್ಕಾದ ತತ್ವ…
ಇಲ್ಲಿ ‘ಜೆನಂಗೋ ಬೈದರೆ ಬೈಯಲ್ಲಿ’ ಹೇಳುವ ಭಾವಲ್ಲಿ ಅವು ಬೈಗುಳವ ಸ್ವೀಕರಿಸುದು ಅಲ್ಲ… ‘ಇರುಳುದೆ ಸುಖಕರ ಅಲ್ಲದ?’ ಹೇಳಿರೆ ಇರುಳಿನ ವಿಶ್ರಾಂತಿ ಪಡಕ್ಕೊಂಬಲೋಸ್ಕರ ನಾವು ಉಪಯೋಗಿಸುವ ಹಾಂಗೆ ಆರಾರೂ ನಮ್ಮ ಬೈದರೆ ಅದರ ನಿಜವಾದ ಪ್ರಯೋಜನವ ನಾವು ಪಡಕ್ಕೊಲ್ಲೆಕ್ಕು… ಎಷ್ಟು ಅರ್ಥಪೂರ್ಣ!!!
ಶಬ್ದ ಶಬ್ದ ಬಿಡುಸಿ ಅರ್ಥ ತಿಳುಕ್ಕೊಲ್ಲೆಕ್ಕು ಹೇಳಿ ಅನ್ನಿಸುತ್ತಾ ಇದ್ದು…
ತು೦ಬಾ ದೊಡ್ದ ಮಾತುಗೊ ಅಕ್ಕಾ.
ಅವರ ಇನ್ನೊ೦ದು ಚ೦ಪಕಮಾಲಾ ವೃತ್ತ ಹೀ೦ಗಿದ್ದು.
ಮತಮತವೆ೦ದು ಕಾದುವರು ಕೊಲ್ವರಿದು೦ ಮತವಾಗೆ ಮಾರಣ೦|
ಮತವಹುದಲ್ತೆ ಸನ್ಮತಿಯ ಸಾರವೆ ತಾ೦ ಮತವೆ೦ಬ ವಿಶ್ವಸ|
ಮ್ಮತವಹ ತತ್ವದೊ೦ದಮೃತಮ೦ ವಸುದೈವ ಕುಟು೦ಬವೆ೦ಬ ವಾ|
ಙ್ಮಥಿತವನು೦ಡು ಧಾತ್ರಿಗುಣಿಪಾ ಗುರುವಲ್ತೆ ಮಹಾತ್ಮನೆ೦ಬವನ್ ||
ಇದು ಮಹಾತ್ಮಾ ಗಾ೦ಧಿಯ ವರ್ಣನೆ. ೧೯೫೦ ನೆ ಇಸವಿಲಿ ‘ಮದ್ರಾಸ್ ಸಮಾಚಾರ’ ಪತ್ರಿಕೆಲಿ ಪ್ರಕಟ ಆದ ಈ ಪದ್ಯ ಬಹುಶಃ ಅವರ ಕಡೇ ರಚನೆ ಆಗಿಕ್ಕು. ಎನ್ನ ಅಪ್ಪನ ಮನಸ್ಸಿಲಿ ಈಗಳೂ ಸರೀ ಅಚ್ಚಾಗಿ ನಿ೦ದಿದು.
ತುಂಬಾ ಒಳ್ಳೆದಿದ್ದು…ನಾವುದೇ ಇದೇ ಮಾದರಿಲ್ಲಿ ಹೋರಾಟ ಮಾಡೆಕ್ಕಾದವು… ಇದರ ಅರ್ಥವನ್ನೂ ನಿಂಗಳೇ ಹೇಳಿಬಿಡಿ…
ಭಾವಾರ್ಥ ಹೀ೦ಗಿದ್ದುಃ
ಧರ್ಮ ಧರ್ಮ ಹೇಳಿ ಕಾದುತ್ತವು,ಕೊಲ್ಲುತ್ತವು,ಆದರೆ ಇದು ನಾಶ ಮಾಡುವ ಧರ್ಮ ಅಲ್ಲದೊ?ವಿಶ್ವವೇ ಒ೦ದು ಕುಟು೦ಬ ಹೇಳೊದರ ತಾನು ಅನುಭವಿಸಿಕ್ಕಿ, ಒಳ್ಳೆಯ ಬುದ್ಧಿಯ ಸಾರವೇ ವಿಶ್ವಸಮ್ಮತವಾದ ನಿಜವಾದ ಧರ್ಮ ಹೇಳ್ತ ಅಮೃತ ತತ್ವವ,ಭೂಮಿಯ ಜೆನಕ್ಕೆ ಉ೦ಬಲೆ ಬಳುಸುವ ಗುರುವಲ್ಲದೋ ಮಹಾತ್ಮನೆ೦ಬವ° ?
ಧನ್ಯವಾದ…
‘ಮತ’ ಹೇಳುವ ಶಬ್ದವನ್ನೇ ಬಳಸಿರೆ ಒಳ್ಳೆದೇನೋ ಹೇಳಿ ಅನ್ನಿಸುತ್ತು… ‘ಮತ’ ಹೇಳುವ ಶಬ್ದದ ಬದಲು ‘ಧರ್ಮ’ ಹೇಳುವ ಶಬ್ದ ಉಪಯೋಗಿಸಿರೆ ಹಲವರು ತಪ್ಪಾಗಿ ಅರ್ಥ ಮಾಡಿಗೊಂಬ ಸಾಧ್ಯತೆ ಇದ್ದು… (ಧರ್ಮ,ಅಧರ್ಮ) ಇವುಗಳಲ್ಲಿ ಧರ್ಮಕ್ಕಾಗಿ ಹೋರಾಡುವುದು ಯಾವತ್ತೂ ಶ್ರೇಯಸ್ಕರವೇ…
ಓ..ಅದು ಅ೦ದಾಜು ಆತಿಲ್ಲೆ.
ದೇಶ ವಿಭಜನೆಯ ಕಾಲಲ್ಲಿ ಹಿ೦ದೂ ಮುಸ್ಲಿ೦ ಧರ್ಮ೦ಗಳ ನಡುವೆ ನೆಡದ ಸ೦ಘರ್ಷ,ರಕ್ತಕ್ರಾ೦ತಿಯೇ ತಲೆಲಿ ತಿರುಗಿಗೊ೦ಡಿತ್ತು!
ಮುಳಿಯ ತಿಮ್ಮಪ್ಪಯ್ಯರ ಸಮಗ್ರ ಸಾಹಿತ್ಯ ಹೇಳಿ ಎರಡು ಸಂಪುಟಂಗೊ ಅವರ ಮಗ ದಿ.ಮುಳಿಯ ಮಹಾಬಲ ಭಟ್ಟ ಮತ್ತೆ ಇತರ ಆಸಕ್ತ ಗೆಳೆಯರ ಮೂಲಕ ಪ್ರಕಟ ಆಯಿದು ಪ್ರಕಾಶಕರು;ಮುಳಿಯ ತಿಮ್ಮಪ್ಪಯ್ಯಶತಮಾನೋತ್ಸವ ಸಮಿತಿ,ಸೌಗಂಧಿಕಾ,ಉರ್ವ ಸ್ಟೋರ್,ಮಂಗಳೂರು-೫೭೫೦೦೬ ಪ್ರಕಟನೆಯ ವರ್ಷ [ಎರಡನೆ ಸಂಪುಟದ್ದು]-೧೯೯೭ .ಅದರಲ್ಲಿ ಅವರ ಸುಮಾರು ಕವನಂಗೊ,ಕಾದಂಬರಿಗೊ,ಲೇಖನಂಗಳ ಹಾಕಿದ್ದವು.ನಾಡೋಜ ಪಂಪ ಅವರ ಉದ್ಗ್ರಂಥ,ಅದರಲ್ಲಿ ಇಲ್ಲೆ.ಅದು ಪ್ರತ್ಯೇಕವಾಗಿ ಪ್ರಕಟ ಆಯಿದು.ಈ ಗ್ರಂಥಂಗಳ ಪ್ರತಿ ಸಿಕ್ಕುತ್ತೋ ಹೇಳಿ ಗೊಂತಿಲ್ಲೆ.ಆಸಕ್ತರು ಮುಳಿಯದವರ ಬಂಧುಗಳಲ್ಲಿ ವಿಚಾರಿಸಲಕ್ಕು.
” ಮುಳಿಯ ತಿಮ್ಮಪ್ಪಯ್ಯರ ಸಮಗ್ರ ಸಾಹಿತ್ಯ” – ಇದು ಅತ್ರಿ ಪುಸ್ತಕ ಭ೦ಡಾರಲ್ಲಿ ಇತ್ತು.ಈಗ ಹಸ್ತಾ೦ತರ ಆದ ಮೇಲೆ ಎ೦ತ ಹೇಳಿ ಗೊ೦ತಿಲ್ಲೆ.