ವಿಷು ವಿಶೇಷ ಸ್ಪರ್ಧೆ 2013: ನೆಗೆಬರಹ ದ್ವಿತೀಯ: ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು

ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013” ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.

ವಿಷು ವಿಶೇಷ ಸ್ಪರ್ಧೆ- 2013ನೆಗೆಬರಹ ಸ್ಪರ್ಧೆಲಿ ದ್ವಿತೀಯ ಬಹುಮಾನ ಪಡೆದ ಬರಹ.
ಲೇಖಕರಾದ ಶ್ರೀಮತಿ ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನದುಂಬಿದ ಅಭಿನಂದನೆಗೊ.

ಕವಿಗೋಷ್ಠಿಗೆ ಒಂದು ದಿನ: ಪಾರ್ವತಿ ಎಂ.ಭಟ್ ಕೂಳಕ್ಕೋಡ್ಳು

ಲೇ | ಶ್ರೀಮತಿ ಪಾರ್ವತಿ ಎಂ.ಭಟ್.ಕೂಳಕ್ಕೋಡ್ಳು

ಲೇ | ಶ್ರೀಮತಿ ಪಾರ್ವತಿ ಎಂ.ಭಟ್.ಕೂಳಕ್ಕೋಡ್ಳು

ಒಂದು ದಿನ ಮಧ್ಯಾಹ್ನದ ಹೊತ್ತಿಂಗೆ ಆನು ಸೀರಿಯಸ್ಸಾಗಿ ಸೀರಿಯಲ್ಲು ನೋಡಿಗೊಂಡಿಪ್ಪಗ ಫೋನು ರಿಂಗಾಗಿ ಎನ್ನ ರಸಭಂಗ ಮಾಡಿತ್ತು.
ಫೋನು ರಿಸೀವ್ ಮಾಡುದು ಹೇಳಿದರೆ ಎನಗೆ ಬಹಳ ಇಷ್ಟವೇ ಆದರೂ ಇಷ್ಟದ ಸೀರಿಯಲ್ಲು ನೋಡಿಗೊಂಡಿಪ್ಪ ಆ ಸಂದರ್ಭಲ್ಲಿ ಅದು ಕಷ್ಟ ಹೇಳಿ ಕಂಡ ಕಾರಣ ಕೂದಲ್ಲಿಂದ ಎದ್ದಿದೇ ಇಲ್ಲೆ. ಫೋನು ಅರಚಿ ಅರಚಿ ನಿಂಬ ಹೊತ್ತಿಂಗೆ ಎನ್ನವು ಪರಂಚಿಗೊಂಡು ಬಂದು ಫೋನ್ ತೆಗದವು.
ಅವು ಮಾತಾಡುವಗ ನೆಗೆ ಮಾಡಿಗೊಂಡು ಒಂದೆರಡು ಸರ್ತಿ ಎನ್ನನ್ನೂ ನೋಡಿಗೊಂಡು ಫೋನ್ ಮಡಗಿದವು. ಅದರ ಕಂಡು ಈಗ ಎನಗೆ ಸೀರಿಯಲಿಲ್ಲಿ ಇದ್ದ ಸೀರಿಯಸ್ಸು ಕಮ್ಮಿ ಆಗಿ ಫೋನಿನ ಮೇಲೆ ಫೋಕಸ್ ಜಾಸ್ತಿ ಆತು. “ಆರ ಫೋನು? ನೆಗೆ ಮಾಡಿದ್ದೆಂತಕೆ? ಎಂತಗೆ ಫೋನ್ ಮಾಡಿದ್ದಡ?” ಹೇಳಿ ಎಲ್ಲ ಪ್ರಶ್ನಗೂ ಒಟ್ಟಿಂಗೆ ಒಂದೇ ವಾಕ್ಯಲ್ಲಿ ಉತ್ತರ ಸಿಕ್ಕೆಕ್ಕು ಹೇಳುವ ದೃಷ್ಟಿಂದ ಕೇಳಿದೆ. “ಎಲ್ಲದಕ್ಕೂ ಉತ್ತರ ಕೊಡ್ತೆ. ಮದಾಲು TV ಓಫ್ ಮಾಡು” ಹೇಳಿದವು. ಬೇರೆ ದಾರಿ ಇಲ್ಲದ್ದೆ TV ಓಫ್ ಮಾಡೆಕ್ಕಾಗಿ ಬಂತು.

“ಮಂಗಳೂರಿಂಗೆ ಕವಿಗೋಷ್ಠಿಗೆ ನೀನು ಕಳ್ಸಿದ ಕವಿತೆ ಸೆಲೆಕ್ಟ್ ಆಯಿದಡ. ನಾಳೆ ಮಧ್ಯಾಹ್ನ ಮೇಲೆ 3 ಗಂಟೆಗೆ ಅಲ್ಲಿ ಇರೆಕ್ಕಡ” ಹೇಳಿ ಆರಾಮಲ್ಲಿ ಹೇಳಿದವು.
“ಅಪ್ಪಾ!!! ಈ ವಿಷಯವ ನಿಂಗೊ ಇಷ್ಟು ಕೂಲಾಗಿ ಹೇಳುದೆಂತ?” ಹೇಳಿ ರೆಜಾ ಕೋಪಲ್ಲಿಯೇ ಹೇಳಿದೆ.
“ಹಾಂಗಾದರೆ ಎಂತ ಮಾಡೆಕ್ಕಾತು? ನೆರೆಕರೆಯವರ, ನೆಂಟ್ರಿಷ್ಟ್ರ ಎಲ್ಲ ದೆನಿಗೋಳಿ ಹೇಳೆಕ್ಕಾತಾ?” ಹೇಳಿ ರೆಜಾ ಗರಂ ಆದವು.
“ಹಾಂಗಲ್ಲಾ… ಎನಗೆ ಅವಕಾಶ ಸಿಕ್ಕಿದ್ದಕ್ಕೆ ಆವೇಶ ಬಂದು ಹಾಂಗೆ ಹೇಳಿದ್ದಷ್ಟೆ.” ಈಗ ಆನೇ ರಜಾ ಕೂಲಾದೆ.
ಎನ್ನ ಕವಿತೆ ಕವಿಗೋಷ್ಠಿಲಿ ಓದ್ಲೆ ಆಯ್ಕೆ ಆದ್ದು ಎನಗೆ ಬಹಳ ಖುಷಿ ಆತು. ಎನಗೆ ಬಾಲ್ಯಂದಲೇ ಕನ್ನಡ ಸಾಹಿತ್ಯ, ವ್ಯಾಕರಣ ಹೇಳಿದರೆ ಬಹಳ ಇಷ್ಟ.
ಹೈಸ್ಕೂಲಿಂದ ಮತ್ತೆ ಆನು ಕಥೆ, ಕವನ, ಪ್ರಬಂಧ ಎಲ್ಲಾ ಜೋರು ಬರವಲೆ ಸುರು ಮಾಡಿದ್ದು. ಎನ್ನ ತಮ್ಮ ತಂಗೆಕ್ಕೊಗೆ ಯಾವಾಗಲೂ ಕಾಂಪಿಟೀಶನ್‌ಗೊಕ್ಕೆ ಪ್ರಬಂಧ, ಭಾಷಣ ಎಲ್ಲಾ ಬರವಲೆ ಆನು ಸಹಾಯ ಮಾಡುವೆ. ಹಾಂಗೆ ಹೇಳಿ ಪ್ರೈಜ್ ಬಂದುಗೊಂಡಿತ್ತಾ ಹೇಳಿ ಕೇಳುವಿ. ಖಂಡಿತಾ ಬಂದುಗೊಂಡಿತ್ತು. ಸಾಹಿತ್ಯ ಹೇಳಿದರೂ ವ್ಯಾಕರಣ ಕಂಡರೂ ಮಾರು ದೂರ ಓಡುವ ಎನ್ನ ಫ್ರೆಂಡ್ಸ್‌ಗೊ ಎನ್ನ ಉಪಸ್ಥಿತಿಲಿ ಹೆದರದ್ದೇ ಅವಕ್ಕೆ ಬೇಕಾದ್ಸರ ಎಲ್ಲಾ ಬರೆಶಿಗೊಂಗು. ಹಾಂಗೆ ಹೇಳಿ ಆನು ಭಾರೀ ಹುಷಾರು ಹೇಳಿ ಹೇಳಿಗೊಂಬದಲ್ಲ. ಎನಗದರಲ್ಲಿಪ್ಪ ಇಂಟರೆಷ್ಟಿಂದ ಇಂಪ್ರೆಸ್ಸಾಗಿ ಹೇಳಿದ್ದಷ್ಟೆ. ಮುಂದೆ ಎನಗೆ ಬೇಗನೆ ಮದುವೆ ಆತು ನೋಡೀ… ಎನ್ನ ಸಾಹಿತ್ಯ ಪೂರಾ ಗುಡ್ಡೆ ಹತ್ತಿತ್ತು. ಅದಕ್ಕೆ ಕಾರಣ ಮಾಂತ್ರ ನಿಂಗೊ ಆರೂ ಕೇಳೆಯಿ ಹೇಳಿ ನಂಬಿದ್ದೆ. ಮತ್ತೀಗ ಒಂದು ಒಂದೂವರೆ ವರ್ಷಂದ ಇತ್ಲಾಗಿಯೇ ಆನು ಈ ಕ್ಷೇತ್ರಕ್ಕೆ ಹಾರಿದ್ದು.

ಹಾಂಗೆ ಹೇಳಿ ನಾಳೆಯಾಣ ಎನ್ನ ಕವನ ವಾಚನ ಮದಲಾಣ ವಾಚನ ಏನೂ ಅಲ್ಲ. 2-3 ತಿಂಗಳ ಹಿಂದೆ ಸ್ಟೇಜಿಲಿ ಎರಡು ಸರ್ತಿ ಕವಿತೆ ವಾಚಿಸಿದ್ದೆ. ಆದರೆ ಇದು ಮಂಗಳೂರು ಟೌನ್ ಹಾಲಿಲ್ಲಿ ಆದ ಕಾರಣ ಅದಕ್ಕೆ ರಜ ತೂಕ ಜಾಸ್ತಿ ಅಲ್ಲದಾ?
ಸರಿ; ಮರದಿನ ಮಧ್ಯಾಹ್ನ ಬೇಗ ಉಂಡಿಕ್ಕಿ ಹನ್ನೆರಡೂ ಮುಕ್ಕಾಲು ಗಂಟೆಗೆ ಮನೆಂದ ಹೆರಡುದು ಹೇಳಿ ತೀರ್ಮಾನ ಆತು. ಎಂಗಳ ಮನೆಂದ ಮಂಗಳೂರಿಂಗೆ ಎರಡೂವರೆ ಗಂಟೆ ದಾರಿ ಇದ್ದು. ಮನೆಲಿ ಕಂಪ್ಯೂಟರ್ ಹಾಳಾಗಿದ್ದ ಕಾರಣ ಬೆಂಗಳೂರಿಲ್ಲಿಪ್ಪ ಮಗಳಿಂಗೆ ಫೋನು ಮಾಡಿ ಅಮೇರಿಕಲ್ಲಿಪ್ಪ ನಿನ್ನ ಅಕ್ಕಂಗೂ, ಅಣ್ಣಂಗೂ ಈ ವಿಷಯವ ಮೈಲ್ ಮಾಡು ಹೇಳಿದೆ. ಈಗ ಮದಲಾಣ ಹಾಂಗಲ್ಲ ನೋಡಿ. ಇಡೀ ಜಗತ್ತೇ ನಮ್ಮ ಕೈಲಿ ಕೊಣಿತ್ತು. ಐದೇ ನಿಮಿಷಲ್ಲಿ ಮಕ್ಕೊ ಅಮೇರಿಕಂದ ಫೋನ್ ಮಾಡಿ ಕಂಗ್ರಾಟ್ಸ್ ಹೇಳಿದವು. ಒಟ್ಟಿಂಗೇ ಅಷ್ಟು ದೊಡ್ಡ ಸ್ಟೇಜಿಲ್ಲಿ ಅಮ್ಮಂಗೆ ಹೆದರದ್ದೆ ಓದ್ಲೆ ಎಡಿಗಾ ಹೇಳುವ ಡೌಟಿಲ್ಲೇ ಹೇಂಗೆ ಓದೆಕ್ಕು ಹೇಳುವ ಸಲಹೆಯನ್ನೂ ಕೊಟ್ಟವು.

ಇರುಳಿಡೀ ಖುಷಿಲಿ ಎನಗೆ ಸರಿ ವರಕ್ಕೇ ಬಾರ. ಹೇಂಗೋ ಉದಿ ಆತು. ಬೇಗನೆ ಕಾಫಿ ತಿಂಡಿ ರೆಡಿ ಮಾಡಿ ಪೂಜಗೆ ಸಾಹಿತ್ಯ ಎಲ್ಲ ಮಾಡಿ ಕೊಟ್ಟು ಬೇಗ ಅಡಿಗೆ ಸುರು ಮಾಡ್ತೆ ಹೇಳುವಗ 2-3 ಫೋನುಗೊ. ಒಂದಂತೂ ಹತ್ತು-ಹದಿನೈದು ವರ್ಷಂದ ಇತ್ಲಾಗಿ ಬಾರದ್ದ ಫೋನು. “ಅಲ್ಲ, ನಿನ್ನ ನೆನಪಾತು. ಹಾಂಗೆ ಆರ ಹತ್ತರಂದಲೋ ನಂಬರ್ ತೆಕ್ಕೊಂಡು ಮಾತಾಡುವ° ಹೇಳಿ ಮಾಡಿದ್ದು.” ಹೇಳಿ ಲೋಕಾಭಿರಾಮ ಮಾತಾಡ್ಳೆ ಸುರು ಮಾಡಿದವು. ಅವರ ಎಲ್ಲಾ ಸಾಗ ಹಾಕಿ ಅಪ್ಪಗ 3 ತಿಂಗಳಿಂದ ಇತ್ಲಾಗಿ ಕಾಯಿ ಕೊಯಿವಲೆ ಬಾರದ್ದ ನಾಯ್ಕ ಮತ್ತೆ ಮೂರು ಜನರ ಕರಕ್ಕೊಂಡು ಒಟ್ಟು ನಾಲ್ಕು ಜನ ಬಂದವು. ಎರಡು ಜನ ಕೊಯಿವಲೆ, ಎರಡು ಜನ ಹೆರ್ಕಿ ಹೊರ್ಲೆ. ಅವರ ಕಂಡಪ್ಪಗ ಎನಗೆ ಉರಿ ಧರುಸಿತ್ತು. ಆನು ಎನ್ನವರ ಹತ್ತರೆ ಹೇಳಿದೆ. “ಅವು ಇಂದು ಕೊಯ್ಯದ್ರಕ್ಕು. ನಾಳೆ ಬಪ್ಪಲೆ ಹೇಳಿ” ಹೇಳಿದೆ. “ಅಯ್ಯೋ ಅವು ಬಪ್ಪದು ಹೆಚ್ಚೋ? ನಾವು ಕೊಯಿಶುದು ಹೆಚ್ಚೋ? ಇಂದು ಬೇಡ ಹೇಳಿದರೆ ಅವು ಮತ್ತೆ ಇತ್ಲಾಗಿ ಅಣೆಯವು. ಅವಕ್ಕೆ ಮೂರು ತಿಂಗಳಿಲ್ಲಿ ಮೂವತ್ತು ಸರ್ತಿ ಫೋನು ಮಾಡಿದ್ದೆ. ಅವೆಂತ 1 ಗಂಟೆಯೊರೇಗೆ ಕೊಯ್ತವಾ? 12 ಗಂಟೆಗೇ ಮರಂದ ಜಾರುಗು” ಹೇಳಿದವು. ಮನಸ್ಸಿಲ್ಲದ್ರೂ ಒಪ್ಪದ್ದೆ ವಿಧಿಯಿಲ್ಲೆ. ಹಾಂಗೆ ಫ್ರಿಜ್ಜಿಲಿ ಮಡಗಿದ ದೋಸೆ ಹಿಟ್ಟಿನ ಪುನಃ ತೆಗದು ದೋಸೆ ಎರದು ಚಟ್ನಿಯನ್ನೂ ಕಡದು ಅಡಿಗೆ ಆಗಿ ಒತ್ತರೆ ಅಪ್ಪಗ ಎಂಗಳ ಹಳೇ ಗಂಟೆ ಹತ್ತು ಸರ್ತಿ ಬಡುದತ್ತು. ಮತ್ತೆ ಅವಕ್ಕೆಲ್ಲಾ ತಿಂಬಲೆ ಹಾಕಿ ಮಿಂದು ಆನು ಹನ್ನೆರಡು ಗಂಟೆಗೇ ಹೆರಟು ಕೂದೆ.

ಯಾವಾಗಲೂ ಹನ್ನೆರಡು ಗಂಟೆಗೇ ಕೆಲಸ ನಿಲ್ಲುಸುವವು ಇಂದು ಹನ್ನೆರಡೂವರೆ ಆದರೂ ಮರಂದ ಇಳಿತ್ತವೇ ಇಲ್ಲೆ. “ಅವಕ್ಕೆಂತಾಯಿದು ಇಂದು?” ಯಜಮಾನ್ರ ಹತ್ತರೆ ಕೇಳಿದೆ. “ಎಂತ ಅಪ್ಪದು? ಕೊಯಿವದೇ ಲೆಕ್ಕದ್ದು. ಅವು ಕೊಯಿವಷ್ಟು ಕೊಯ್ಯಲಿ.” ದೊಡ್ಡ ಸ್ವರಲ್ಲಿ ಹೇಳಿದವು. ಎನಗೆ ಎಂತ ಮಾಡೆಕ್ಕು ಹೇಳಿ ಗೊಂತಾಗದ್ದೆ ತಲೆ ಚಚ್ಚಿಗೊಳ್ಳೆಕ್ಕು ಹೇಳಿ ಕಂಡತ್ತು.
ಅಡೀ ಕೂಡೀ 1 ಗಂಟೆಗೆ ಅವರ ಬಿಡುಗಡೆ ಆತು. ಎನ್ನವಕ್ಕೆ ಡ್ರೈವಿಂಗ್ ಹೆಚ್ಚು ಅಭ್ಯಾಸ ಇಲ್ಲದ್ದ ಕಾರಣ ಎಂಗೊ ದೂರ ಹೋವ್ತರೆ ಕಾರಿನ ಹತ್ರಾಣ ಪೇಟೆಲಿ ಮಡಗಿಕ್ಕಿ ಬಸ್ಸಿಲ್ಲಿ ಹೋಪದು. ಜಾಲು ತುಬಾ ಅಡಕ್ಕೆ, ಎಣ್ಣಗೆ ಒಡದ ಕಾಯಿ, ಗೆಣಮೆಣಸು ಇಡೀ ಹರಗಿಯೊಂಡಿಪ್ಪ ಕಾರಣ ಕಾರಿನ ತಿರುಗುಸೆಕ್ಕಾದರೆ ಹತ್ತು ನಿಮಿಷ ಬೇಕು.

“ನಿಂಗೊಗೆ ಆಗಳೇ ಕಾರಿನ ತಿರುಗುಸಿ ಮಡಗುಲೆ ಎಂತಾತು? ಇನ್ನು ಅದಕ್ಕೆ ಕಾಲುಗಂಟೆ ಬೇಕು” ಹೇಳಿ ದೊಡ್ಡ ಸ್ವರಲ್ಲಿ ಹೇಳಿದೆ.
“. . . . . . ”
ಅತ್ಲಾಗಿಂದ ಉತ್ತರ ಬಾರದ್ದಿಪ್ಪಗ ಎನ್ನ ಕೋಪ ಇನ್ನೂ ಹೆಚ್ಚಾತು.
“ಎಂತ ಹೇಳಿದರೂ ನಿಂಗಳೂ ಸ್ತ್ರೀದ್ವೇಷಿಯೇ. ಆನು ಮುಂದೆ ಬಪ್ಪದು ನಿಂಗೊಗೆ ಇಷ್ಟ ಇಲ್ಲೆ.”
“. . . . . . ”
ಅದಕ್ಕೂ ಉತ್ತರ ಕೊಡದ್ದಿಪ್ಪಗ ಎನಗೆ ಪಿತ್ತ ನೆತ್ತಿಗೇರಿತ್ತು.
“ತಡವಾದರೆ ಒಳ್ಳೆದಾತು. ಎನ್ನ ಚಾನ್ಸ್ ಹೋಯೆಕ್ಕು ಹೇಳಿಯೇ ನಿಂಗೊಗಿಪ್ಪದು.”
“. . . . . . ”

ಈಗ ಎನಗೆ ಎಂತ ಮಾಡೆಕ್ಕು ಹೇಳಿ ಅರಡಿಯದ್ದೆ ಆನು ಸುಮ್ಮನೆ ಕೂದೆ. ಅಂತೂ ಪೇಟಗೆ ಎತ್ತಿಯಪ್ಪಗ ಅಲ್ಲಿ ಮಂಗಳೂರಿಂಗೆ ಹೋಪ ಬಸ್ಸುಗಳೇ ಇಲ್ಲೆ.
ಮತ್ತೆ ಹತ್ತು ನಿಮಿಷ ಕಾದು ಕೂದು ಬಂದ ಬಸ್ಸಿಂಗೆ ಹತ್ತಿ ಕೂದು ಹತ್ತು ನಿಮಿಷ ಆದರೂ ಬಸ್ಸು ಹೆರಡುವ ಯೇವದೇ ಲಕ್ಷಣಂಗೊ ಕಾಣ್ತಿಲ್ಲೆ. “ಈಗ ಮನುಷ್ಯರಿಂಗೆ ಸಮಯದ ಬೆಲೆಯೇ ಗೊಂತಿಲ್ಲೆ. ಇವಕ್ಕೆಲ್ಲಾ ಯಾವುದಕ್ಕೂ ಟೈಮು ಹೇಳಿ ಇಲ್ಲೆ. ಹಾಂಗಾಗಿಯೇ ನಮ್ಮ ದೇಶ ಇಂದು ಈ ಸ್ಥಿತಿಗೆ ಇಳುದ್ದು” ಹೇಳಿ ದೊಡ್ಡಕೆ ಹೇಳುಲೆ ಎಡಿಯದ್ದ ಕಾರಣ ಮನಸ್ಸಿಲ್ಲೇ ಗ್ರೇಶಿಗೊಂಡೆ.
ಡ್ರೈವರ್ ಬೇರೆ ಡ್ರೈವರುಗಳ ಹತ್ತರೆ ಎಲ್ಲಾ ಸುಖ, ದುಃಖ ಮಾತಾಡಿ ಅವಕ್ಕೆಲ್ಲಾ ‘ಬೈ’ ಹೇಳಿ ಹೇಂಗಾದರೂ ಬಸ್ಸಿಂಗೆ ಹತ್ತಿತ್ತು. ಅಂತೂ ಇಂತೂ ಬಸ್ಸು ಹೆರಡುವಗ ಗಂಟೆ ಒಂದೂವರೆ ಆತು. ಹಾಂಗೆ ಹೆರಟ ಬಸ್ಸು ಮಾರ್ಗಲ್ಲಿಪ್ಪ ಹೊಂಡಂಗೊಕ್ಕೆಲ್ಲಾ ಹಾರಿ ಎದ್ದು ಬಿದ್ದು ಮೆಟ್ಟು ಮೆಟ್ಟಿಂಗೆ ನಿಂದುಗೊಂಡು ಹತ್ತುವವರ, ಇಳಿವವರ ಹತ್ತಿಸಿಗೊಂಡು, ಇಳಿಶಿಗೊಂಡು ಆಮೆ ವೇಗಲ್ಲಿ ಹೋಗಿಯೊಂಡಿತ್ತು. “ಅಲ್ಲ ಇಷ್ಟು ರಶ್ ಇಪ್ಪ ಈ ಮಾರ್ಗಲ್ಲಿ ಬೇಕಾದಷ್ಟು ಬಸ್ಸುಗಳನ್ನೂ, ಎಕ್ಸ್‌ಪ್ರೆಸ್ ಬಸ್ಸುಗಳನ್ನೂ ಹಾಕುಲೆಂತಾವುತ್ತು ಇವಕ್ಕೆ.” ಈ ಬಗ್ಗೆ ‘ವಾಚಕರ ವಿಜಯ’ಕ್ಕೆ ಒಂದು ಪತ್ರ ಖಾರವಾಗಿ ಬರೆಯೆಕ್ಕು ಹೇಳಿ ಮನಸ್ಸಿಲ್ಲೇ ತೀರ್ಮಾನಿಸಿದೆ.

ದಾರಿ ಉದ್ದಕ್ಕೂ ಅಂಬಗಂಬಗ ಆನು ಎನ್ನ ವಾಚು ನೋಡುದು, ಎನ್ನವರ ಮೋರೆ ನೋಡುದು ನೆಡಕ್ಕೊಂಡೇ ಇತ್ತು. ಅಷ್ಟಪ್ಪಗ ಎನ್ನ ಬ್ಯಾಗಿನ ಒಳಂದ ಮೊಬೈಲ್ ರಿಂಗ್ ಆದ ಹಾಂಗೆ ಕೇಳಿತ್ತು. ಎಷ್ಟು ಹುಡ್ಕಿದರೂ ಮೊಬೈಲ್ ಸಿಕ್ಕಲೇ ಸಿಕ್ಕ. ಎನ್ನ ಮಗ ಯಾವಾಗಲೂ ಹೇಳುಗು “ಅಮ್ಮನ ವ್ಯಾನಿಟಿ ಬೇಗಿಂಗೆ ಕೈ ಹಾಕಲೇ ಹೆದರಿಕೆ ಆವುತ್ತು. ಅದರ ಒಳಂದ ಎಂತಾದರೂ ಕಚ್ಚುಲೂ ಸಾಕು. ಅಷ್ಟು ಬಲ್ಲೆ ಇದ್ದು ಅದರ್ಲಿ” ಹೇಳಿ. ಆನು ಹುಡ್ಕುದರ ನೋಡಿ ಎನ್ನ ಹತ್ತರೆ ಕೂದ ಹೆಮ್ಮಕ್ಕೊ “ದಾಯ್ತೆನು ನಾಡುನೆ ಅಕ್ಕಾ?” ಹೇಳಿ ಕೇಳಿತ್ತು. “ದಾಲಾ ಇದ್ಯತ್ತಾ” ಹೇಳಿದೆ. ಬಹುಶಃ ಎನ್ನ ವಾಯ್ಸ್‌ನ ವಾಲ್ಯೂಮ್ ಜಾಸ್ತಿ ಆತು ಕಾಣ್ತು. ಮತ್ತೆ ಅದು ಎನ್ನ ಹತ್ತರೆ ಮಾತಾಡ್ಲೆ ಬಯಿಂದಿಲ್ಲೆ. ಎನಗೋ ಕಾರ್ಯಕ್ರಮದ ಸಂಚಾಲಕರು “ನಿಂಗೊ ಬತ್ತಿಲ್ಲಿರಾ?” ಹೇಳಿ ಕೇಳುಲೆ ಫೋನ್ ಮಾಡುದಾದಿಕ್ಕಾ ಹೇಳುವ ಅನುಮಾನ. ಹೇಂಗೋ ಕಡೇಂಗೆ ಫೋನ್ ಸಿಕ್ಕಿತ್ತು. ನೋಡಿದರೆ ಅದು ‘ರೋಮಿಂಗ್ ಮೆಸೇಜ್’ ಬಂದದು. ಅಂಬಗ ಎನಗೆ ಮನಸ್ಸಿಂಗೆ ರಜ ಧೈರ್ಯ ಆತು. ಅಂತೂ ಇಂತೂ ಎಂತೋ ಬಸ್ಸು ಮಂಗಳೂರಿಂಗೆ ಎತ್ತಿತ್ತು. ಹೇಂಗೋ ಕೈಕಾಲು ಅರಚ್ಚಿಸಿಗೊಂಡು ಜನಂಗಳ ಎಡೆಂದ ಇಳುದಪ್ಪಗ ಎನ್ನ ವಾಚು 3.20 ತೋರ್ಸಿತ್ತು. ಎನ್ನವರ ಹತ್ತರೆ ಕೇಳಿದೆ. “ನಿಂಗಳ ವಾಚಿಲ್ಲಿ ಎಷ್ಟು ಗಂಟೆ ಆತು?”

“ಎಲ್ಲಾ ವಾಚಿಲ್ಲಿಯೂ ಒಂದೇ ಹಾಂಗೆ 3.20. ಹೆಚ್ಚಿಗೆ ಇಲ್ಲೆ ಹೇಳಿದವು. ಮತ್ತೆ ಬೇಗ ಬೇಗ ಏದುಸಿರು ಬಿಟ್ಟುಗೊಂಡು ‘ಹಾಲ್’ನ ಹತ್ತರೆ ಎತ್ತಿದೆಯೊ°. ನೋಡ್ತೇ… ಅಲ್ಲಿ ಸಂಚಾಲಕ ಆರ ಹತ್ತರೋ ಕೂಲಾಗಿ ಮಾತಾಡಿಗೊಂಡಿತ್ತಿದ್ದ °. ಎನಗೆ ಡೌಟು ಬಂತು. ಕಾರ್ಯಕ್ರಮ ಬೇಗ ಮುಗಿಶಿ ಅವ° ಹೆರ ಬಂದದಾದಿಕ್ಕೋ ಹೇಳಿ. ಆನೇ ಹೇಳಿದೆ “ಸರ್ ಬರುವಾಗ ಸ್ವಲ್ಪ ಲೇಟಾಯ್ತು.” “ಪರವಾಗಿಲ್ಲ, ಕಾರ್ಯಕ್ರಮ ಇನ್ನೂ ಪ್ರಾರಂಭಿಸಿಲ್ಲ. ನೀವು ಒಳಗೆ ಹೋಗಿ ಕೂತ್ಕೊಳ್ಳಿ” ಹೇಳಿದ°. ಅಬ್ಬಾ!!! ಎನಗೆ ಹೋದ ಜೀವ ಬಂದ ಹಾಂಗೆ ಆತು. ತಲೆಗೆ ಒಂದರಿಯೇ ಒಂದು ಕೊಡಪ್ಪಾನ ತಣ್ಣೀರು ಎರದಪ್ಪಗ ತಂಪು ಅಪ್ಪ ಹಾಂಗೆ ಅಂದು ಇಡೀ ದಿನಂದ ಇದ್ದ ಟೆನ್ಶನ್ ಒಂದರಿಯೇ ಕಮ್ಮಿ ಆತು. ಮತ್ತೆ ಕಾಲು ಗಂಟೆ ಕಳುದ ಮೇಲೆಯೇ ಎಂಗಳ ಕವಿಗೋಷ್ಠಿ ಸುರು ಆದ್ದು. ಕಾರ್ಯಕ್ರಮ ಎಲ್ಲಾ ಚೆಂದಕೆ ನೆಡದು ಒಂದೊಳ್ಳೆ ಅನುಭವ ಆತು.

ಎಲ್ಲಾ ಕಳುದು ಪುನಃ ಬಪ್ಪಗ ಎನಗೆ ಯಾವುದೇ ಟೆನ್ಶನ್ ಇದ್ದತ್ತಿಲ್ಲೆ. ಬಸ್ಸಿನ ಕರೆಸೀಟಿಲ್ಲಿ ಕೂದುಗೊಂಡು ಕಾರ್ಯಕ್ರಮದ ಸವಿನೆಂಪುಗಳ ಮೆಲುಕು ಹಾಕಿಗೊಂಡು ‘ಪ್ರಸನ್ನ ವದನ’ಳಾಗಿ ಇತ್ತಿದ್ದೆ. ಈಗ ಹತ್ತರೆ ಕೂದ ಇನ್ನೊಂದು ಹೆಮ್ಮಕ್ಕೊ “ಅಕ್ಕ ದೂರ ಪೋಯದು?” ಹೇಳಿ ಕೇಳಿತ್ತು. ಅದಕ್ಕೆ ಸಂತೋಷಲ್ಲಿಯೇ ಉತ್ತರ ಕೊಟ್ಟೆ.
ಮನಸ್ಸೇ ಹಾಂಗೆ ನೋಡಿ. ನಾವು ಅದರ ಹದ್ದುಬಸ್ತಿಲ್ಲಿ ಮಡುಗದ್ದರೆ ಅದುವೇ ನಮ್ಮ ಮೇಲೆ ಸವಾರಿ ಮಾಡ್ತು. ಮನಸ್ಸು ಸರಿ ಇದ್ದರೆ ನಾವು ಸರಿ ಇರ್ತು. ನಾವು ಸರಿ ಇದ್ದರೆ ಲೋಕವೇ ಸರಿ ಕಾಣ್ತು. ಇಲ್ಲದ್ದೆ ‘ಕಾಮಾಲೆ ಕಣ್ಣಿಂಗೆ ಲೋಕವೇ ಹಳದಿ ಕಾಣ್ತಡ’. ಹಾಂಗೆ ಎಲ್ಲೋರಲ್ಲೂ ನವಗೆ ತಪ್ಪೇ ಕಾಣ್ತು. ಹಾಂಗೆ ಹೇಳಿ ಈ ಲೇಖನ ಓದಿ ನಿಂಗಳ ಮನಸ್ಸಿಂಗೆ ಎಲ್ಲಿಯಾದರೂ ಎನ್ನ ಮನಸ್ಸಿನ ಮೇಲೆ ವೈಮನಸ್ಸು ಬಂದರೆ ಮನಸೋ ಇಚ್ಛೆ ಎನ್ನ ಮಾತ್ರ ಬೈದಿಕ್ಕೆಡಿ ಆತಾ?

ಸರಿ. ಹಾಂಗಾದರೆ ಎಂಗೊ ಬೇಗ ಒಂದರಿ ಮನಗೆ ಎತ್ತಿಗೊಳ್ತೆಯೊ °. ಈಗ ನಾಯ್ಕನ ಫೋನ್ ಬಂತು. ನಾಳಂಗೆ ಅಡಕ್ಕೆ ಕೊಯ್ವಲೆ 3+3+3=9 ಜನ ಬತ್ತವಡ. ಅವಕ್ಕೆಲ್ಲಾ ಚಾಯಕ್ಕೆ ಕೊಡ್ಲೆ ಉಂಡೆ ಮಾಡ್ಳೆ ಅಕ್ಕಿ ಬೊದುಲುಲೆ ಹಾಕೆಕ್ಕಷ್ಟೆ. ಆದರೆ ಹ್ಹಾಂ… ನಾಳೆ ಮಾಂತ್ರ ಎನಗೆ ಒಂದು ಚುಟುಕು ವಾಚನಗೋಷ್ಠಿಗೆ ಹೋಪಲಿದ್ದನ್ನೇ..!

~*~*~

ಸೂ:

ಪಾರ್ವತಿ ಅತ್ತೆಗೆ ಪ್ರೊ.ವಿ.ಬಿ.ಅರ್ತಿಕಜೆ ಅಜ್ಜ ಪ್ರಶಸ್ತಿ ಪ್ರದಾನ ಮಾಡುವ ಪಟ:

ಪ್ರೊ.ವಿ.ಬಿ. ಅರ್ತಿಕಜೆ ಇವರಿಂದ ಶ್ರೀಮತಿ ಪಾರ್ವತಿ ಭಟ್ ರಿಂಗೆ ಪ್ರಶಸ್ತಿ ಪ್ರದಾನ

ಪ್ರೊ.ವಿ.ಬಿ. ಅರ್ತಿಕಜೆ ಇವರಿಂದ ಶ್ರೀಮತಿ ಪಾರ್ವತಿ ಭಟ್ ರಿಂಗೆ ಪ್ರಶಸ್ತಿ ಪ್ರದಾನ

ಸಂಪಾದಕ°

   

You may also like...

10 Responses

 1. ಚೆನ್ನೈ ಭಾವ says:

  [ಫೋನು ರಿಂಗಾಗಿ ಎನ್ನ ರಸಭಂಗ ಮಾಡಿತ್ತು. ] – ಚೇ… ನಿಂಗೊಗಿನ್ನೂ ಮೊಬೈಲು ತೆಗದುಕೊಟ್ಟಿದವಿಲ್ಯೋ ಅಪ್ಪಚ್ಚಿ!

  [ಒಂದೇ ವಾಕ್ಯಲ್ಲಿ ಉತ್ತರ ಸಿಕ್ಕೆಕ್ಕು ] – ಯಪ! ಅಂಬೇರ್ಪೆ.
  [ಇಂಟರೆಷ್ಟಿಂದ ಇಂಪ್ರೆಸ್ಸಾಗಿ ಹೇಳಿದ್ದಷ್ಟೆ .. ; …ಅದಕ್ಕೆ ಕಾರಣ ಮಾಂತ್ರ ನಿಂಗೊ ಆರೂ ಕೇಳೆಯಿ ..] – ಇದು ಪಷ್ಟಾಯ್ದು.

  ಉಹ್ …ಹು …ಹ್ಹು!! ಭಾರೀ ಪಷ್ಟಾಯ್ದು ನಗೆಬರಹ. ಕತೆ ಉದ್ದಕ್ಕೂ ನೆಗೆಯೇ. ತೀರ್ಪುಗಾರರಿಂಗೆ ಈ ಸರ್ತಿ ಏವುದಕ್ಕೆ ಪಷ್ಟು ಏವುದಕ್ಕೆ ಸೆಕೆಂಡು ಕೊಡ್ಸು ಹೇದು ಒಳ್ಳೆತ ಗೊಂದಲ ಆದಿಕ್ಕು.

  • parvathi m bhat says:

   ಉತ್ತರ ಕೊಡ್ಲೆ ತಡವಾತು. ಸ್ಸಾರಿ,ಎನ್ನ ಹತ್ತೆರೆ ಮೊಬೈಲು ಇದ್ದು ಆದರೆ ಎಲ್ಲೋರು ಕೇಳುದು ಲಾ೦ದ್ ಲೈನ್ ನ೦ಬರ್ ಅಲ್ಲದಾ? ನಗೆಬರಹ ಮೆಚ್ಹಿ ಅಭಿಪ್ರಾಯ ತಿಳಿಶಿದ್ದಕ್ಕೆ ಸ೦ತೋಷ ಆತುಮಗಾ. ಇನ್ನೊ೦ದರಿ ಊರಿ೦ಗೆ ಬ೦ದಿಪ್ಪಗ ಎ೦ಗಳ ಮನಗೂ ಬಾ .

 2. ಇಂದಿರತ್ತೆ says:

  ಪಾರ್ವತಿಅಕ್ಕ, ಕವಿಗೋಷ್ಟಿಗೆ ಮಂಗಳೂರಿಂಗೆ ಹೆರಟ ಗಡಿಬಿಡಿ, ಉಮೇದು ಎಲ್ಲವೂ ಕಣ್ಣಿಂಗೆ ಕಟ್ಟಿದ ಹಾಂಗೆ ಬಯಿಂದು.ಲಾಯ್ಕಿಲಿ ಬರದ್ದಕ್ಕೆ ಅಭಿನಂದನೆಗೊ.

  • parvathi m bhat says:

   ಇ೦ದಿರೆ, ಈ ನಗೆಬರಹಲ್ಲಿ ಅರ್ಧದಷ್ಟೂ ಘಟನೆಗೊ ಅ೦ದು ನಡದ್ದದೇ.ಹ೦ಗಾಗಿ ಎನಗೆ ಬರವಲೆ ರಜ ಸುಲಭ ಆತು.ಅನಿಸಿಕೆ ತಿಳಿಶಿದ್ದಕ್ಕೆ ಧನ್ಯವಾದ೦ಗೊ.ನೀನು ಈಗ ಹೊಸತ್ತು ಎ೦ತ ಬರೆತ್ತಾ ಇದ್ದೆ?

 3. ಬಾಲಣ್ಣ (ಬಾಲಮಧುರಕಾನನ) says:

  ಅಕ್ಕ,ಬರಹ ಲಾಯಕ್ಕಾಯಿದು.ನಾವು ನಮ್ಮ ಗಡಿಬಿಡಿಲಿಪ್ಪಾಗಳೆ ಕೆಲವು ಸರ್ತಿ ಅನಿವಾರ್ಯವಾಗಿ ಬೇರೆ ಕೆಲಸ ಬತ್ತು ಅಲ್ಲದೋ

  • parvathi m bhat says:

   ಬಾಲಣ್ಣ,ಮೆಚ್ಹಿ ಬರದ್ದಕ್ಕೆ ಅಭಿನ೦ದನೆ.ಕೆಲ ಕಾರಣ೦ದ ಉತ್ತರುಸುಲೆ ತಡವಾತು ನಿ೦ಗೊ ಹೇಳಿದ ಹಾ೦ಗೆ ಗಡಿಬಿಡಿಲಿ ಇಪ್ಪಗಳೇ ನವಗೆ ಬೇರೆ ಹಲವು ಕೆಲಸ೦ಗಳ ಆನಿವಾರ್ಯತೆಯೂ ಬಪ್ಪದು ನಿಜವೇ ಆಪ್ಪು.

 4. ಪಾರ್ವತಿ, ಫಸ್ಟಾಯಿದು. ಸಾಹಿತ್ಯ ಪ್ರಕಾರ ಯಾವುದೇ ಇರಲಿ ನಾವು ಅನುಭವಿಸಿದ ವಿಷಯಕ್ಕೆ ಸಂಬಂಧ ಪಟ್ಟದ್ದಾದರೆ ಅದು ಒಲ್ಳೆದಾವುತ್ತು ಇನ್ನೂ ಮುಂದುವರಿ ಶುಭ ಹಾರೈಕೆ

  • parvathi m bhat says:

   ವಿಜಯಕ್ಕ,ನಿಜವಾಗಿ ನಾವು ಕಲ್ಪನೆ ಮಾಡಿ ಬರವದಕ್ಕಿ೦ತ ನಿಜವಾಗಿ ನಡದ್ದರ ಬಗ್ಗೆ ಬರವಲೆ ಸುಲಭ
   ಅಪ್ಪದು ಮಾತ್ರ ಅಲ್ಲ ಅದು ಲಾಯಿಕವೂ ಆಪ್ಪದು ಅಲ್ಲದಾ?.ಶುಭ ಹಾರೈಕೆಗೆ ಧನ್ಯವಾದ. ಮತ್ತೆ ಈಗ ಎ೦ತ ಬರೆತ್ತಾ ಇದ್ದಿ?

 5. ರಘುಮುಳಿಯ says:

  ಅ೦ತೂ ಮಾವ೦ಗೆ ನಾಲ್ಕು ಪರ೦ಚಿದ್ದು ಬ೦ತು!
  ನೆಗೆ ಬರುಸಿತ್ತು ಬರಹ. ಅಭಿನ೦ದನೆಗೊ ಅತ್ತೆಗೆ.ನಿ೦ಗಳ ಹವ್ಯಕ ಸಾಹಿತ್ಯ ಸೇವೆ ಹೀ೦ಗೇ ಸಾಗಲಿ ಹೇಳಿ ಹಾರೈಕೆಗೊ.

  • parvathi m bhat says:

   ಮಾವನ ಪರೆ೦ಚಿದ್ದು ನಿಜವಾಗಿ ಒ೦ದೇ ವಾಕ್ಯಲ್ಲಿ ರಘು .ಒಳುದ್ದೆಲ್ಲಾ ಕಲ್ಪನೆಲಿ ಮಾತ್ರ.
   ಧನ್ನ್ಯವಾದ೦ಗೊ.ಇನ್ನೊ೦ದರಿ ಬ೦ದಿಪ್ಪಗ ಖ೦ಡಿತ ಮನೆಗೆ ಬನ್ನಿ,

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *