Oppanna.com

ವಾಸದ ವಸುಧೆಯ ರಜೆಯೇ “ಕೆಡ್ವಾಸ”

ಬರದೋರು :   ಒಪ್ಪಣ್ಣ    on   11/02/2011    41 ಒಪ್ಪಂಗೊ

ಬೈಲಿಲಿ ಎಲ್ಲ ಶುದ್ದಿಯೂ ಮಾತಾಡಿದ್ದು.
ಹಳೇ ಕಾಲದ ಆಟಿಯ ಶುದ್ದಿಗಳಿಂದ ಹಿಡುದು, ಆಧುನಿಕದ ಇಂಟರುನೆಟ್ಟಿನ ಶುದ್ದಿಯೂ ಮಾತಾಡಿದ್ದು!
ಎರಡೂ ಅಲ್ಲದ್ದೆ ಅಂತೇ ನೇರಂಪೋಕು ನೆಗೆಯ ಶುದ್ದಿಗಳೂ ಮಾತಾಡಿದ್ದು.
ಯೇವ ಶುದ್ದಿಯೇ ಆಗಿರಳಿ, ಒಂದು ಒಳ್ಳೆ ಮಾಹಿತಿ ಇದ್ದರೆ ಬೈಲಿಂಗೆ ಕೊಶಿಯೇ ಅದು!
ಶುದ್ದಿ ನಮ್ಮದೇ ಆಚರಣೆಗಳ ಬಗ್ಗೆ ಆದರೆ ಬೈಲಿಂಗೂ ಕೊಶಿ ಅಕ್ಕು; ಎಂತ್ಸಕೇ ಹೇಳಿತ್ತುಕಂಡ್ರೆ, ಅದು ’ನಮ್ಮದು’.
ಹಾಂಗೆಯೇ,
ನಮ್ಮದೇ ಆದ ಅನೇಕ ಹಳ್ಳಿ ಆಚರಣೆ ಕ್ರಮಂಗಳಲ್ಲಿ ಒಂದರ ಬಗ್ಗೆ ಇಂದು ಮಾತಾಡುವೊ° ಆಗದಾ?
~

ನಮ್ಮ ಹೆರಿಯೋರ ಕಾಲಲ್ಲಿ ಕ್ರಮಂಗೊಕ್ಕೆ ಏನೂ ಕಮ್ಮಿ ಇಲ್ಲೆ! ಧಾರಾಳ ಇಕ್ಕು.
ಎಲ್ಲಾ ಆಚರಣೆಗಳಲ್ಲಿಯೂ ಪ್ರಕೃತಿಪ್ರೇಮ, ದೇವತಾ ವಿನಿಯೋಗ, ಅಂತಃಕರಣ, ಮಾನವೀಯ ಬಾಂಧವ್ಯ – ಇವು ಎದ್ದು ಕಾಂಗು.
ಪ್ರಕೃತಿಯನ್ನೇ ಆರಾಧನೆ ಮಾಡಿ ಆಚರುಸುತ್ತ ಒಂದು ಆಚರಣೆಯೇ “ಕೆಡ್ವಾಸ“.
ಅದೆಂತರ, ಅದರ ಶುದ್ದಿ ಎಂತಕೆ ಬಂತು ಹೇಳದ್ದೆ ಸೀತ ಹೇಳಿಗೊಂಡು ಹೋದರೆ ಸಮ ಆಗ!
~
ಬೈಲಿಲೇ ನೆಡಕ್ಕೊಂಡು ನಿನ್ನೆಲ್ಲಮೊನ್ನೆ ತರವಾಡುಮನೆಗೆ ಹೋದೆ.
ರಂಗಮಾವ ಪಂಚಾಂಗಲ್ಲಿ ಕೂದಂಡು ಕೋಕ ಕೆರಸಿಗೊಂಡು ಇದ್ದಕಾರಣ, ಒಳ ಹೋಗದ್ದೆ ಸೀತ ಅವರ ಕರೆಲೇ ಕೂದೊಂಡೆ.
ಅಲ್ಲಿಗೆ ಒಪ್ಪಣ್ಣ ಎತ್ತುದೂ, ಕೋಟಿ ಎತ್ತುದೂ ಸರೀ ಆತು.
(ಕೋಟಿಯ ಗುರ್ತ ಇದ್ದಲ್ಲದೋ ನಿಂಗೊಗೆ? ಬೈಲಿನ ಕೋಲಂಗಳಲ್ಲಿ ಬೂತಕಟ್ಟುತ್ತ ಸನಾತನಿ!
ಅದರ ಬಗ್ಗೆ ಒಂದು ಶುದ್ದಿ ಮಾತಾಡಿದ್ದು ನಾವು)

ಆ ದಿನ ಕೋಟಿ ನಿತ್ಯದ ಹಾಂಗೆ ರಂಗಮಾವನತ್ರೆ ಪಟ್ಟಾಂಗವುದೇ, ಎಲೆಡಕ್ಕೆಯುದೇ ಹೊಡವಲೆ ಮಾಂತ್ರ ಬಂದದಲ್ಲ, ಅದರ ಕರ್ತವ್ಯಲ್ಲಿ ಬಂದದು. ಕರ್ತವ್ಯವೋ?
ಬಾಣಾರೇ – ಹೇಳಿ ರಂಗಮಾವನ ಒಂದರಿ ದಿನಿಗೆಳಿಗೊಂಡು ಕೆಡ್ಡಸೊದ ಹೇಳಿಕೆ ಸುರುಮಾಡಿತ್ತು.
(ನಮ್ಮೋರು ಇದರ ಕೆಡ್ವಾಸ ಹೇಳ್ತರೂ, ಬಟ್ಯನ ಹಾಂಗೆ ತುಳುಮಾತಾಡುವೋರು ಕೆಡ್ಡಸೊ – ಹೇಳುಗು)
~

ಕೋಟಿ ಕೆಡ್ವಾಸದ ಹೇಳಿಕೆಗೆ ಸರ್ಪಮಲೆ ಮಾವನಲ್ಲಿಗೆ ಹೋದ್ದದು!!

ರೂಪತ್ತೆಯ ವೇನಿಟಿಬೇಗಿನಷ್ಟಕೆ ಇಪ್ಪ ದುಡಿಯ ಹೆಗಲಿಂಗೆ ನೇಲುಸಿಗೊಂಡಿದು;
ಬಲದ ಕೈಮುಷ್ಟಿಲಿ ಸಣ್ಣ ಕೋಲು ಹಿಡ್ಕೊಂಡು -ದುಡಿಯ ಡೊಂಯ್ಡೊಂಯ್ ಹೆಟ್ಟಿಗೊಂಡು –
ಬಡುದತ್ತಯ್ಯಾ – ಯೇವ ತಾಳವೋ – ಉಮ್ಮ, ಸಂಗೀತದ ಕುಡ್ಪಲ್ತಡ್ಕ ಭಾವನತ್ರೇ ಕೇಳೆಕ್ಕಷ್ಟೆ.
ಎಡದ ಕೈಲಿ ರಜಾ ದಪ್ಪದ ಕೋಲು ಹಿಡ್ಕೊಂಡು ದುಡಿಯ ಮೈಗೆ ಒರಸಿಗೊಂಡಿತ್ತು;
ಒರಸುತ್ತ ಪೆಟ್ಟಿಂಗೆ ಬತ್ತ ಗುಂಯ್ಗುಂಯಿ ಶಬ್ದವೇ ಬಲದ ಕೈ ಪೆಟ್ಟಿಂಗೆ ಶೃತಿ ಆತು!
ಇದೆರಡೂ ಒಂದಕ್ಕೊಂದು ತಾಗುಲೆ ಸುರು ಅಪ್ಪಗ ಪಾಡ್ದನ ಹೇಳುಲೆ ಸುರುಮಾಡಿತ್ತು;
ಸರಿ ಸ್ಪಷ್ಟ ಆಯಿದಿಲ್ಲೆ – ಡೆನನೋ-ಒಬೇಲೆ… – ಹೇಳಿಗೊಂಡು ಕೇಳಿತ್ತು ಒಪ್ಪಣ್ಣಂಗೆ! (ನೆಗೆಮಾಣಿ ಇದ್ದಿದ್ದರೆ ಎಬೇಲೆ ಹೇಳಿ ಕೇಳ್ತಿತು ಅವಂಗೆ) 😉

ಹೇಳ್ತದು ಹೇಳಿಗೊಂಡೇ ಇತ್ತು, ಸುಮಾರು ಹೊತ್ತು; ರಂಗಮಾವ ಕೆಮಲಿ ಕೇಳಿಗೊಂಡು – ಅಡಕ್ಕೆ ಕೆರಸಿಗೊಂಡೇ ಇತ್ತಿದ್ದವು.
ಕೋಟಿ ಹೇಳ್ತದರ ಕೆಮಿ ಅಗಾಲುಸಿ ಕೇಳಿಗೊಂಡಿದ್ದದು ನಾವು ಮಾಂತ್ರ! ಆದರೂ, ಅದು ಹೇಳ್ತಾ ಇಪ್ಪದು ಸ್ಪಷ್ಟವೇ ಆಯಿದಿಲ್ಲೆ! 🙁
~
ಒಂದೆರಡು ನಿಮಿಶ ಹೇಳುದರ ಎಲ್ಲ ಹೇಳಿಕ್ಕಿ ಜೋರು ಒಂದರಿ ದುಡಿಬಡುದು ನಿಲ್ಲುಸಿತ್ತು, ತುರ್ಕಲ್ಲಿ ಕೂದಂಡತ್ತು, ಜಾಲಕರೆಲಿ.
ರಂಗಮಾವ ಒಂದು ಎಲೆಡಕ್ಕೆ ಸುಣ್ಣವ ಕುಣಿಯ ಹೊಗೆಸೊಪ್ಪಿನ ತುಂಡಿನೊಟ್ಟಿಂಗೆ ಮಡಗಿ ಬೀಡ ತೆಯಾರುಮಾಡಿ ಕೊಟ್ಟಿಕ್ಕಿ ಬಂದವು.
ಹೊಗೆಸೊಪ್ಪು ಲಾಯಿಕಿದ್ದು – ಹೇಳಿಗೊಂಡು ಮಾತಾಡ್ಳೆ ಸುರುಮಾಡಿತ್ತು ಕೋಟಿ!
ಸಮಪ್ರಾಯದ ರಂಗಮಾವನೂ, ಕೋಟಿಯೂ – ಮಾತಾಡುದು ಇಂದು – ನಿನ್ನೆ ಅಲ್ಲ, ಸುಮಾರು ಹೊತ್ತು ಲೋಕಾಭಿರಾಮ ಮಾತಾಡಿದವು.
ನೆಗೆ, ಕುಶಾಲು, ಪ್ರಾಯ ಆತು ಹೇಳುವ ಚಿಂತೆ, ಕಳುದೊರಿಶ ಬಂದ ಗೆಂಟುಬೇನೆ, ಬೂತ ಕಟ್ಳೆ ಎಡಿಯದ್ದೆ ಅಪ್ಪದು – ಎಲ್ಲವನ್ನೂ ಮಾತಾಡಿದವು. ಸನಾತನ ಧರ್ಮವನ್ನೇ ಜೀವಮಾನ ಇಡೀ ಧರುಸಿದ ಅನುಭವಿ ಜೀವ ಅದು!
ಒಪ್ಪಣ್ಣನ ಹತ್ತರೆಯೂ ರಜ ಕುಶಲೋಪರಿ ಮಾತಾಡಿತ್ತು.
~
ಮಾತಾಡಿಗೊಂಡು ಇಪ್ಪಗಳೇ ಪಾತಿಅತ್ತೆ ಒಳಂದ  – ಒಂದು ಸೇರು ಅಕ್ಕಿ, ಒಂದು ಇಡಿ
ತೆಂಗಿನಕಾಯಿ, ಐದಾರು ಅಡಕ್ಕೆಯ – ಒಂದು ಪಡಿಗೆಲಿ ಹಿಡ್ಕೊಂಡು ಬಂದು – ಕೋಟಿಯ ಎದುರು ಮಡಗಿದವು.
ಪಡಿಗೆಂದ ಸುವಸ್ತುಗಳ ಜೋಳಿಗೆಲಿ ತುಂಬುಸಿಕ್ಕಿ, ಗವುರವಲ್ಲಿ ಬರ್ಪೆ ಬಾಣಾರೆ – ಹೇಳಿಕ್ಕಿ ಮುಂದುವರುದತ್ತು.
ಪುನಾ ಬತ್ತೋ – ಹೇಳಿ ಆತೊಂದರಿ ಒಪ್ಪಣ್ಣಂಗೆ 🙂

ಕೋಟಿ ಹೆರಟ ಮತ್ತೆ ರಂಗಮಾವನ ಹತ್ತರೆ ಮೆಲ್ಲಂಗೆ ಕೇಟೆ: ಆಟಿಕಳೆಂಜ ಬಪ್ಪದು ನವಗೆ ಅರಡಿಗು, ಇಬ್ರು ಬಕ್ಕು. ಇಂದು ಒಂದೇ ಬಂತು, ಇದೆಂತರ ಅಂಬಗ? – ಹೇಳಿಗೊಂಡು.
ಇದು ಕೆಡ್ವಸದ ಹೇಳಿಕೆ ಹೇಳ್ತದು ಇದಾ, ಹಾಂಗೆ ಒಬ್ಬನೇ – ಹೇಳಿದವು ರಂಗಮಾವ.
ಓ, ಅದು ಪಕ್ಕನೆ ಅಂದಾಜಿ ಆಗದ್ದೆ ಹೋತನ್ನೆ! – ಹೇಳಿಗೊಂಡು ಬೇಜಾರಾತೊಂದರಿ!
~

ನಾವು ವಾಸಮಾಡ್ತ ಭೂಮಿ ಬರೇ ಒಂದು ಗ್ರಹ ಹೇಳ್ತದರಿಂದಲೂ ಹೆಚ್ಚು, ನಮ್ಮ ಜೀವನಕ್ಕೆ ಜೀವ ಕೊಡ್ತ ಅಮ್ಮ – ಹೇಳ್ತ ಪರಿಕಲ್ಪನೆ ನಮ್ಮ ಅಜ್ಜಂದ್ರಿಂಗೆ ಬಂದಿತ್ತು.
ಜೀವಿಗೊ ಹುಟ್ಟೇಕಾರೆ, ಹುಟ್ಟಿ ಬೆಳೇಕಾರೆ, ಬೆಳದು ಬದ್ಕೇಕಾರೆ, ಬದ್ಕಿ ಸಾಯೇಕಾರೆ ಭೂಮಿ ಬೇಕು. ಅದಿಲ್ಲದ್ದೆ ಆಗಲೇ ಆಗ.
ಒಂದಕ್ಕೊಂದು ಆಹಾರ ಆಗಿ, ಆಹಾರಕ್ಕಾಗಿ ಸಂಹಾರಂಗೊ ಆಗಿ, ಸಂಹಾರಂದಾಗಿ ಜೀವಿಯ ಹಶು ಪರಿಹಾರ ಅಪ್ಪ ಕತೆಯ ಹುಟ್ಟುಸಿ, ಚೆಂದ ನೋಡ್ತದೇ ಭೂಮಿ ಮಾತೆ.
ಭೂಮಿ ಒಂದು ಮಾತೆ ಹೇಳಿ ಆದರೆ, ಆ ಮಾತೆಗೆ ಮನಸ್ಸಿಲ್ಲೆಯೋ? ಇದ್ದು!
ಅತ್ಯಂತ ಹೆಚ್ಚು ಸಹನೆ ಇಪ್ಪ ಅಮ್ಮ ಭೂಮಿಯೇ ಅಡ.
ಮಣ್ಣು ಗರ್ಪುವಂದ ಮೊದಲು ಸಹನಾ ಧರಿತ್ರೀ – ಹೇಳ್ತವು. ಬಳ್ಳಾರಿಲಿ ಗರ್ಪುವೋರುದೇ ಇದರ ಒಪ್ಪುತ್ತವು!
ಈ ಭೂಮಿ ಹೆಚ್ಚು ಜಗಳ ಮಾಡುದು ಬೇಡ, ಒಂದರಿ ಮೈ ಆಡುಸಿರೆ ಸಾಕು, ಮನುಷ್ಯ-ಪ್ರಾಣಿ – ಸಸ್ಯ ಸಂಕುಲಂಗೊ ಅಲ್ಲೋಲ ಕಲ್ಲೋಲ ಆಗಿ ಬಿಡ್ತು!
ಹೀಂಗಿಪ್ಪ ಭೂಮಿಯ ಅಮ್ಮ- ಹೇಳ್ತ ಲೆಕ್ಕಲ್ಲಿ ಪೂಜೆ ಮಾಡ್ಳೆ ಸುರುಮಾಡಿದವು.
ಹಾಂಗಾಗಿ, ಭೂಮಾತೆ – ಭೂತಾಯಿ (ಬಟ್ಯನ ಬೂತಾಯಿ ಮೀನು ಒಂದಿದ್ದು, ಅದು ಬೇರೆ! 😉 ) ಹೇಳ್ತ ಹೆಸರುಗೊ ಕೊಟ್ಟವು.
ಅಲ್ಲದೋ?
ಲೋಕಾದ್ಯಂತ ಬೇರೆಬೇರೆದಿಕ್ಕೆ – ಬೇರೆಬೇರೆ ನಮುನೆಲಿ ಭೂಮಿಯ ಪೂಜೆ ಮಾಡ್ತವಡ.
ನಮ್ಮ ಊರಿಲಿಯೂ ಸೇರಿಗೊಂಡು!
~
ಹಾಂಗೆ ನೋಡಿರೆ ನಮ್ಮ ಊರಿಲಿಯೇ ಅನೇಕ ವಿಧಲ್ಲಿ ಅಬ್ಬೆಭೂಮಿಯ ಪೂಜೆ ಮಾಡ್ತವಿದಾ..
ವಾಸ್ತುಪೂಜೆಯ ದಿನ ಬಟ್ಟಮಾವ ಒಯಿದಿಕ ವಿಧಾನಲ್ಲಿ ’ಭೂಮಿ ಪೂಜೆ’ ಮಾಡುಗು,
ದೇವಸ್ಥಾನಲ್ಲಿ ತಂತ್ರಿಗೊ ತಂತ್ರಮುಖೇನ  ಭೂಮುಖ ಪೂಜೆ ಮಾಡುಗು.
ಭೂತಸ್ಥಾನದ ಪೂಜಾರಿ ಅದರ ಕ್ರಮಲ್ಲಿ ಒಂದು ಕೋಳಿಕಡುದು ಪೂಜೆ ಮಾಡುಗು,
ಇದೇವದೂ ಇಲ್ಲದ್ದ ಕೇವಲ ಪ್ರಕೃತಿ ಪ್ರೇಮಿಗೊ  ಎರಡು ಸೆಸಿ ನೆಟ್ಟು ಪೂಜೆ ಮಾಡಿಕ್ಕುಗು.
ಒಟ್ಟಿಲಿ ಒಂದಲ್ಲ ಒಂದು ರೀತಿಲಿ ಭೂಮಿಯ, ಅದರ ಸಹನೆಯ, ಜೀವಸಂಕುಲಕ್ಕೆ ಅದರ ಉಪಕಾರವ ನೆಂಪು ಮಾಡಿಯೇ ಮಾಡಿಗೊಂಗು!
~
ತರವಾಡುಮನೆ ಪಂಚಾಂಗಲ್ಲಿ ಕೂದಂಡು ಯೋಚನೆಮಾಡುವಗ ಇದೆಲ್ಲ ಗ್ರೇಶಿ ಹೋತು!
ಎಂತಕೆ? – ಇಂದು ಕೋಟಿ ಬಂದು ಹೇಳಿಕೆ ಹೇಳಿತ್ತಲ್ಲದೋ?
– ಆ ಕೆಡ್ವಸವುದೇ ಒಂದು ಕ್ರಮದ ಭೂಮಿಪೂಜೆಯೇ!
~

ಮೊನ್ನೆ ಮಕರಮಾಸ ಸುರು ಅಪ್ಪಗಳೇ ಶೆಂಕ್ರಾಂತಿಯ ಗವುಜಿಯೂ ಒಟ್ಟಿಂಗೆ ಸುರು ಆಯಿದು.
ಹಾಂಗೆಯೇ, ಕೆಡ್ವಾಸ ಹೇಳಿರೆ – ಮಕರಮಾಸದ ಇಪ್ಪತ್ತೇಳನೇ ಹೊದ್ದಿಂಗೆ (ದಿನಕ್ಕೆ) ಸುರು ಆಗಿ – ಕುಂಭ ಸಂಕ್ರಮಣಕ್ಕೆ
ಮುಗಿತ್ತ ಹಾಂಗೆ – ಮೂರು ನಾಕು ದಿನ – ಮಾಡ್ತ ಆಚರಣೆ.
ಭೂಮಿಯೂ ಒಂದು ಹೆಮ್ಮಕ್ಕೊ ಹೇಳ್ತ ಪರಿಕಲ್ಪನೆಲಿ – ಭೂಮಿತಾಯಿ ರಜೆಲಿ ಇಪ್ಪ ಈ ದಿನಂಗಳೇ ಕೆಡ್ವಾಸ – ಹೇಳ್ತದು ನಮ್ಮೂರಿನ ಕಲ್ಪನೆ.

ಅಮ್ಮಂಗೆ ಬೇನೆ ಇಪ್ಪಗ ಮಕ್ಕೊ ಎಂತದೂ ಬೇನೆಕೊಡವು, ಈ ಕಲ್ಪನೆ ಭೂಮಿಗೂ ಅನ್ವಯಿಸುತ್ತು.
ಹಾಂಗೆ, ಕೆಡ್ವಾಸದ ದಿನಂಗಳಲ್ಲಿ ಗುಡ್ಡೆಯ ಮಣ್ಣು ಗರ್ಪುಲಿಲ್ಲೆ,
ಕಾಡಿನ ಮರ ಕಡಿವಲಿಲ್ಲೆ ,
ತೋಟಕ್ಕೆ ನೀರು ಬಿಡ್ಳಿಲ್ಲೆ,
ಅಡಕ್ಕೆ ಜಾಲು ಹೊಳಿವಲಿಲ್ಲೆ
– ಅಂತೂ ಯೇವದೇ ಬಂಙದ ಕೆಲಸ ಮಾಡಿ ಭೂಮಿಅಬ್ಬೆಯ ಬೇನೆ ಮಾಡುಸುಲೆ ಇಲ್ಲೆ!
ಇಲ್ಲಲೇ ಇಲ್ಲೆ, ಇಡೀ ಊರಿಂದ ಊರಿಂಗೇ! ಬೈಲಿಂದ ಬೈಲಿಂಗೆ!!
ಈಗಾಣ ಸ್ಪರ್ಧಾತ್ಮಕ ಜಗತ್ತಿಲಿ ಇದೆಲ್ಲ ಸಾಧ್ಯ ಆಗ, ಆದರೂ – ಕೆಲವು ಹಳ್ಳಿಯೋರು ಈಗಳೂ ಇದರ ಆಚರಣೆ ಮಾಡುಗು. ಮೂರೂ ದಿನ ಅಲ್ಲದ್ದರೂ – ನಡುಕೆಡ್ಡೊಸದ ದಿನ ಅಂತೂ ಮಾಡಿಯೇ ಮಾಡುಗು.

ನಡುಕೆಡ್ಡೊಸ:
ಮಕರಮಾಸ ಇಪ್ಪತ್ತೇಳಕ್ಕೆ ಸುರು ಆದ ಕೆಡ್ವಾಸ ಹಬ್ಬ ಮತ್ತೆ – ಇಪ್ಪತ್ತೇಳು, ಇಪ್ಪತ್ತೆಂಟು, ಇಪ್ಪತ್ತೊಂಭತ್ತು – ಮೂರು ದಿನ ಇಕ್ಕು.
ಒಂದುವೇಳೆ ಆ ಒರಿಶದ ಮಕರಮಾಸಲ್ಲಿ ಮೂವತ್ತು ಹೊದ್ದು(ದಿನ) ಬಂದರೆ, ಕೆಡ್ಡೊಸ ನಾಕು ದಿನ ಆವುತ್ತು.
ಮೂರು ದಿನದ ಕೆಡ್ಡೊಸದ ಆಚರಣೆಲಿ ಮಧ್ಯದ ದಿನ ನಡು ಕೆಡ್ವಾಸ, (ನಾಕು ದಿನದ ಆಚರಣೆಲಿಯೂ ಅದೇ ದಿನ ಅಡ)
ಕೆಡ್ವಸದ ಒಳುದ ದಿನ ಎಂತಾರು ಅನಿವಾರ್ಯ ಇದ್ದರೂ, ನಡು ಕೆಡ್ವಸದ ದಿನ ಎಂತದೂ ಕೆಲಸ ಇರ.
ಕೆಲಸಕ್ಕೆ ಬತ್ತೋರು ಆ ದಿನ ರಜೆಯೇ!!
ಬಟ್ಟಮಾವಂಗೆ ಅಮವಾಸೆಯ ಅನಾಧ್ಯಾಯ ಹೇಂಗೋ – ಬಟ್ಯಂಗೆ ಇದು!
ಮದಲಿಂಗೆಲ್ಲ, ಮನೆಯ ಆರುದೇ ಯೇವ ಕೆಲಸಕ್ಕೂ ಹೆರ ಹೋಪಲಿಲ್ಲೆ – ಕೃಷಿಕಾರ್ಯದ ಹೆಚ್ಚಿನ ಕೆಲಸಂಗೊಕ್ಕೂ ರಜೆ!

ಮನೆಲೇ ಇಪ್ಪ ಈ ದಿನಂಗಳಲ್ಲಿ ಹೆಮ್ಮಕ್ಕೊ ಕೆಲವು ವಿಶೇಷ ತಿಂಡಿಗೊ ಮಾಡುಗು.
ಕೊಯಿಶಕ್ಕಿಯ ಲಾಯಿಕಕ್ಕೆ ಹೊರುದು, ಹೊರಿಯಕ್ಕಿಯ ಹಾಂಗೆ ಅಪ್ಪಗ, ಅದಕ್ಕೆ ಕಾಯಿ, ಬೆಲ್ಲ ಎಲ್ಲ ಹಾಕಿ ಚೆಂದಕೆ ಕರುಕುರು ತಿಂಬಲೆ ರುಚಿಗೆ ನನ್ನೆರಿ ಮಾಡ್ತದು.
ಹಾಂಗೆಯೇ, ಇನ್ನೊಂದು ಚೀಪೆತಿಂಡಿ – ಅಕ್ಕಿಯ ಹೊರುದು, ಬೆಲ್ಲಪಾಕಕ್ಕೆ ಮಿಶ್ರಮಾಡಿ ಬೆಶಿಬೆಶಿ ಇಪ್ಪಾಗಳೇ ಉಂಡೆಕಟ್ಟಿ
ತಂಬಿಟ್ಟುಂಡೆಯೂ ಮಾಡುಗು.
ಎರಡುದೇ ತಿಂಬಲೆ ಭಾರೀ ರುಚಿ!
ನಮ್ಮದೇ ಊರಿನ ಹೀಂಗಿರ್ತ ತಿಂಡಿಗೊ ಈಗಾಣ ಜವ್ವನಿಗರಿಂಗೆ ಅರಡಿಗೋ?
(ಬೈಲಿಂಗೆ ನಮ್ಮ ಬಂಡಾಡಿಅಜ್ಜಿ ಹೀಂಗಿರ್ತ ಅಪುರೂಪದ ತಿಂಡಿಗಳ ಬಗ್ಗೆ ಹೇಳಿಕೊಡ್ತಾ ಇದ್ದವು. ಹಿರಿಯರ ಆ ಪ್ರಯತ್ನಕ್ಕೆ ನಾವೆಲ್ಲರೂ ತಲೆದೂಗುವೊ.!)
ಬಂಡಾಡಿ ಅಜ್ಜಿ ಬರದ ತಂಬಿಟ್ಟುಂಡೆ ಶುದ್ದಿ ಇಲ್ಲಿದ್ದು:
https://oppanna.com/adige/tambittunde

ಇದೆರಡು ಚೀಪೆ ತಿಂಡಿ ಅಲ್ಲದ್ದೆ, ಈ ದಿನದ ವಿಶೇಷ ಬೆಂದಿ – ನುಗ್ಗೆಬದನೆ ಬೋಳುಬೆಂದಿ!
ನುಗ್ಗೆ ಸೆಸಿಗೊ ಈ ಕಾಲಕ್ಕೆ ಸರಿಯಾಗಿ ಫಲಬಿಟ್ಟಿಕ್ಕು. ಬಟ್ಯ ಅಂತೂ ಅಪುರೂಪದ ನುಗ್ಗೆಯ ಎಲ್ಲಿಂದಾರು ಕೊಯಿಕ್ಕೊಂಡು ಬೈಲಿಲಿ ಹಂಚುಗು!!
ಬದನೆ ಹೇಂಗಾರುದೇ ಬೈಲಿಲೇ ಇಕ್ಕನ್ನೆ! ಬೈಲಿನ ತರಕಾರಿ ಗೆದ್ದೆಗಳಲ್ಲಿ ಹುಡ್ಕಿರಾತು!
ನುಗ್ಗೆ-ಬದನೆಯ ಈ ಒರಿಶ ಸುರೂ ತಿಂತದು ಕೆಡ್ವಾಸಕ್ಕೇ – ಹೇಳಿ ಒಂದು ಕಲ್ಪನೆ ಇದ್ದು.

~

ನಿಂಗಳ ವಳಚ್ಚಲಿಲಿ ನುಗ್ಗೆ ಇಲ್ಲೆಯೋ? - ಇಲ್ಲಿದ್ದು ತೆಕ್ಕೊಳಿ!

ಕೆಡ್ವಸ ಮುಗುದ ಮತ್ತೆ ಬತ್ತದು ಕುಂಬಾ ಸಂಕ್ರಮಣ.
ಭೂಮಿ ಮತ್ತೊಂದರಿ ಮಿಂದು, ಶುದ್ಧ ಆಗಿ ಈ ಒರಿಶದ ಫಲ ಕೊಡ್ತದು – ಹೇಳ್ತ ನಂಬಿಕೆ.
ಹಾಂಗಾಗಿ, ಈ ಶೆಂಕ್ರಾಂತಿಯ ದಿನ ಇರುಳಿಂಗೆ ತೊಳಶಿಕಟ್ಟೆಲಿ – ಒಂದು ಗಿಣ್ಣಾಲು ಎಣ್ಣೆಯ – ಭೂಮಿತಾಯಿ ಮೀವಲೆ ಹೇಳ್ತ ಲೆಕ್ಕಲ್ಲಿ – ಮಡಗುತ್ತ ಕಾರ್ಯ ಇದ್ದು.
ಎಣ್ಣೆ ಒಟ್ಟಿಂಗೆ ಹೂಗಿನ ಮಾಲೆ, ಸುವಸ್ತುಗೊ – ಎಲ್ಲ ಮಡಗುತ್ತದೂ ಇದ್ದಡ ಕೆಲವು ಮನೆಗಳಲ್ಲಿ.
ಹಳಬ್ಬರಲ್ಲಿ ಇನ್ನುದೇ ಇದರ ಆಚರಣೆ ಇದ್ದು, ಹೊಸಬ್ಬರು ಇದು ಪೂರಾ ಮರುಳು ಹೇಳಿ ನೆಗೆಮಾಡುಗು, ಅದು ಬೇರೆ!
ಬೈಲಿಂಗೆ ನಾವೆಲ್ಲರೂ ಹಳಬ್ಬರೇ! ಅಲ್ಲದೋ? ಅದಿರಳಿ.
ಕೆಡ್ವಾಸಂದ ಮತ್ತೆ ಬೋಂಟೆಗೆ(ಬೇಟಗೆ) ಹೋಪದು ಹೇಳಿ ಒಂದು ಕ್ರಮ ಇದ್ದು. ಮೊಲವೋ – ಕಾಡಂದಿಯೋ – ಎಂತಾರು ಬೇಟೆ ಹಿಡ್ಕೊಂಡು ಬಂದು ಹಂಚಿ ತಿಂಗು, ತಿಂತೋರು.
~

ಈ ಒರಿಶದ ಮಕರ ಮಾಸ ಇಪ್ಪತ್ತೇಳು ಗುರುವಾರ ಬತ್ತಾಡ (ನಿನ್ನೆ).
ಹಾಂಗಾಗಿ ಇಂದು ಸುರು ಆದ ಕೆಡ್ವಾಸ, ನಾಕು ದಿನ ಕಳುದು, ಬಪ್ಪ ಸೋಮವಾರದ ಕುಂಬಾಸಂಕ್ರಮಣದ ಒರೆಂಗೆ ಮುಂದರಿತ್ತು.
ಹೇಳ್ರೆ, ತಾರೀಕು ಲೆಕ್ಕಲ್ಲಿ – ಹತ್ತನೇ ತಾರೀಕಿಂದ, ಹದಿಮೂರನೇ ತಾರೀಕೊರೆಂಗೆ ಬತ್ತಡ.
ಹಾಂಗಾಗಿ, ಹತ್ತು, ಹನ್ನೊಂದು, ಹನ್ನೆರಡಕ್ಕೆ ಕೆಡ್ವಾಸ.  ಹನ್ನೊಂದು ಇರುಳಿಂಗೆ ನಡುಕೆಡ್ವಾಸ- ನುಗ್ಗೆಬದನೆ ಬೆಂದಿ!

ಭೂಮಿ! ನಾವೊಳುಶಿರೆ ನಮ್ಮ ಒಳುಶುಗು!!

ಬೈಲಿಲಿ ಆರಿಂಗೂ ಮರೆಯದ್ದೆ – ಎಲ್ಲೋರುದೇ ಆಚರಣೆ ಮಾಡಿ – ಹೇಳ್ತದರ ನೆಂಪುಮಾಡ್ಳೇ ಕೋಟಿ ದುಡಿ ಹೆಟ್ಟಿಗೊಂಡು ಮನೆಮನೆಗೆ ಹೋಪದು!
ಬೈಲಿನ ಆಚಕರೆಲಿ ಮಾಂತ್ರ ಇಪ್ಪ ಕೋಟಿ – ಅಷ್ಟು ಶ್ರದ್ಧೆಲಿ ಅದರ ವ್ಯಾಪ್ತಿಗೆ ಎಡಿಗಾದಷ್ಟು ಜೆನರಿಂಗೆ ಕೆಡ್ವಾಸವ ನೆಂಪುಮಾಡ್ತ ಶುದ್ದಿ ಹೇಳ್ತರೆ, ಬೈಲಿಡೀ ಶುದ್ದಿ ಹೇಳ್ತ ನಾವು ಅತ್ತಿತ್ತೆ ಹೇಳಿಗೊಂಡ್ರೆ ಎಷ್ಟು ಒಳ್ಳೆದಲ್ಲದೋ – ಹೇಳಿ ಕಂಡತ್ತು ಒಪ್ಪಣ್ಣಂಗೆ!
~
ನಮ್ಮ ಹುಟ್ಟು-ಬೆಳವಣಿಗೆಗೆ ಕಾರಣ ಆದ ಅಮ್ಮ – ಭೂಮಿಯ ನೆಂಪುಮಾಡಿಗೊಂಬನಾ?
ಭೂಮಿಯ ಬಗೆಗೆ ನಮ್ಮದೇ ಸಂಸ್ಕಾರಲ್ಲಿ, ಸಂಸ್ಕೃತಿಲಿ, ಪರಿಸರಲ್ಲಿ – ಇಪ್ಪ ಜಾಗರೂಕತೆಯ ಬಗ್ಗೆ ಮತ್ತೊಂದರಿ ಯೋಚನೆ ಮಾಡುವನಾ?
ಎಡಿಗಾದ ಹಾಂಗೆ ಆಚರಣೆ ಮಾಡಿಗೊಂಬನಾ?
ನನ್ನೆರಿ, ತಂಬಿಟ್ಟುಂಡೆ ಚೀಪೆಯೊಟ್ಟಿಂಗೆ, ನುಗ್ಗೆಬದನೆ ಬೆಂದಿ ಮಾಡಿ ಹೊಟ್ಟೆ ತುಂಬ ಉಂಬನಾ?
ನಾವು ಹೊಟ್ಟೆತುಂಬಉಂಡು ನೆಮ್ಮದಿಲಿ ಇದ್ದರೆ ಅದುವೇ ಅಲ್ಲದೋ – ಅಮ್ಮಂಗೆ ಕೊಶಿ?!

ತುಳುನಾಡಿನ ಸಂಪರ್ಕಂದಾಗಿ ಬಂದ ಇಂತಹ ಅನೇಕ ಸ್ಥಳೀಯ ಆಚರಣೆಗೊ ನಮ್ಮದರಲ್ಲಿ ಒಂದಾಗಿ ಹೋಯಿದು.
ಮತ್ತೆ ಪುನಾ ಮರದು ದೂರ ಅಪ್ಪಂದ ಮದಲೇ ಮತ್ತೊಂದರಿ ನೆಂಪು ಮಾಡಿಗೊಂಬ.
– ಕೋಕದ ರಾಶಿಂದ ಒಂದು ಕೊಟ್ಟಡಕ್ಕೆ ತೆಗದು ಬಾಯಿಗೆ ಹಾಕಿಂಡು, ತಲೆಲಿ ಇದೇ ಅಲೋಚನೆ ಇದ್ದಂಡು – ಜಾಲಿಳುದು ಬೈಲಕರೆ ಹೊಡೆಂಗೆ ಮುಂದುವರುದೆ..

ಒಂದೊಪ್ಪ: ಭೂಮಿಯ ತಂಪು ಒಳಿಶೇಕು ಹೇಳಿ ಅಮೇರಿಕದವು ಹೇಳಿರೆ ನಾವು ಕೇಳ್ತು, ಕೋಟಿ ಹೇಳಿರೆ ಏಕೆ ಕೇಳ್ಳಾಗ?
ಅಲ್ಲದೋ?

ಸೂ: ಪಟಂಗೊ ಇಂಟರುನೆಟ್ಟಿಂದ

41 thoughts on “ವಾಸದ ವಸುಧೆಯ ರಜೆಯೇ “ಕೆಡ್ವಾಸ”

  1. ಕೆಡ್ವಾಸದ ಹಿನ್ನೆಲೆಯ ತಿಳಿಶಿಕೊಟ್ಟ ಈ ಮಾಹಿತಿಪೂರ್ಣ ಶುದ್ದಿ ಓದಿ ಕುಶಿ ಆತು. ಗೊಂತಿಲ್ಲದ್ದ ವಿಶಯಂಗಳ ತಿಳುದ ಹಾಂಗೂ ಆತು. ಬರದ ಶೈಲಿ ಏವತ್ರಾಣ ಹಾಂಗೆ ಸೂಪರ್.
    “ರೂಪತ್ತೆಯ ವೇನಿಟಿಬೇಗಿನಷ್ಟಕೆ ಇಪ್ಪ ದುಡಿಯ ಹೆಗಲಿಂಗೆ ನೇಲುಸಿಗೊಂಡಿದು;
    ಬಲದ ಕೈಮುಷ್ಟಿಲಿ ಸಣ್ಣ ಕೋಲು ಹಿಡ್ಕೊಂಡು -ದುಡಿಯ ಡೊಂಯ್ಡೊಂಯ್ ಹೆಟ್ಟಿಗೊಂಡು –
    ಬಡುದತ್ತಯ್ಯಾ…”
    ಓದುವಾಗ ನಮ್ಮ ಕೆಮಿಯ ಹತ್ರವೇ ಬಡಿತ್ತಾ ಇದ್ದಾ ಹೇಳಿ ಅನ್ಸಿತ್ತು. ಒಳ್ಳೆ ನಿರೂಪಣೆ.

    “ನಾವು ಹೊಟ್ಟೆತುಂಬಉಂಡು ನೆಮ್ಮದಿಲಿ ಇದ್ದರೆ ಅದುವೇ ಅಲ್ಲದೋ – ಅಮ್ಮಂಗೆ ಕೊಶಿ?!”
    ಖಂಡಿತಾ ಅಪ್ಪು.

  2. ಈ ‘ಕೆಡ್ವಾಸ’ದ ಬಗ್ಗೆ ಓದಿ ಉಬ್ಬಸ ಬಪ್ಪಲೆ ಶುರುವಾತಣ್ನೊ ಒಪ್ಪಣ್ಣೋ!

  3. ಒಪ್ಪಣ್ಣೋ, ಒಳ್ಳೆ ಸಕಾಲಿಕ ಶುದ್ದಿ ಈ ವಾರದ್ದು. ತುಂಬಾ ಲಾಯ್ಕಲ್ಲಿ ಬಯಿಂದು.
    ನಮ್ಮ ಸಂಸ್ಕೃತಿಯ ಎಲ್ಲಾ ಅಂಶಂಗಳನ್ನೂ ಹೇಳಿದ್ದೆ ತುಂಬಾ ಚೆಂದಲ್ಲಿ.

    ಇನ್ನೂ ಈ ಹಳೆ ಸಂಪ್ರದಾಯವ ಒಳಿಶಿ ನಡೆಶುತ್ತಾ ಬಪ್ಪ ಕೋಟಿಗೂ ಅದರ ಹಾಂಗಿಪ್ಪ ಅದರ ಬಂಧುಗೊಕ್ಕೂ ಕೋಟಿ ಕೋಟಿ ನಮನಂಗೋ. ಕೋಟಿ ಅದರ ಕರ್ತವ್ಯವ ಇನ್ನುದೇ ಮರೆಯದ್ದೆ ಮಾಡ್ತಾ ಇದ್ದು. ಭೂಮಿಗೆ ಕೊಡ್ತ ಮರಿಯಾದೆ ಕೊಡೆಕ್ಕು ಹೇಳಿ ನೆಂಪು ಮಾಡ್ತಾ ಇಪ್ಪ ಕಾರಣವೂ, ಕೆಲವು ಜೆನಂಗ ಆದರೂ ಪಾಲನೆ ಮಾಡ್ತ ಕಾರಣವೂ ನಾವು ಸುಭಿಕ್ಷಲ್ಲಿ ಇದ್ದು ಅಲ್ಲದೋ?

    ಒಪ್ಪಣ್ಣ ಹೇಳಿದ ಹಾಂಗೆ ಭೂಮಿ ಹೇಳಿದರೆ ಬರೇ ನವಗೆ ಆಧಾರ ಕೊಡುವ ಒಂದು ತಾಣ ಅಲ್ಲ. ಅದು ನಮ್ಮ ಅಬ್ಬೆ. ನಮ್ಮ ನಿತ್ಯದ ಕೆಲಸಂಗೊ (ಹೇಳಿದರೆ ನಡವದು, ಓಡುದು, ಹೊಟ್ಟೆಪಾಡಿನ ಕೆಲಸಂಗೊ ಎಲ್ಲವೂ, ಒಟ್ಟು ಪ್ರಕೃತಿ ಸಹಜವಾಗಿ ಇಪ್ಪದು,) ಈ ಅಬ್ಬೆಗೆ ಬಹುಶ ಮನುಷ್ಯರಲ್ಲಿ ಮಕ್ಕೊ ಹೊಟ್ಟೆಲಿ ಇಪ್ಪಗ ಮಾಡುವ ಕೈಕ್ಕಾಲು ಬಡಿವ ಹಾಂಗೆ ಅಕ್ಕು ಅಲ್ಲದೋ? ನಮ್ಮ ಎಲ್ಲಾ ಕ್ರಿಯೆಗಳ ಸಂತೋಷಲ್ಲಿ, ಮನಸಾ ಕೊಶಿ ಪಟ್ಟುಗೊಂಡು ನಮ್ಮ ಅಭಿಮಾನಲ್ಲಿ ಕಾಪಾಡುಗು ಅಲ್ಲದಾ? ನಾವು ಅಬ್ಬೆಯ ಗವುರವಿಸಿ ನಡಕ್ಕೊಂಬಗ ಅಬ್ಬೆದೇ ಕೊಶೀಲಿ ನವಗೆ ಬೇಕಾದ್ದದರ ಬೆಳವಲೆ, ಅದರ ಅನುಭವಿಸುಲೆ ಬಿಡ್ತಾ ಇಪ್ಪದು. ಅಬ್ಬೆಯ ಕಷ್ಟದ ದಿನಂಗಳಲ್ಲಿ ನಾವು ಅಬ್ಬೆಗೆ ಹೆಚ್ಚು ಉಪದ್ರ ಮಾಡ್ಲೆ ಆಗ ಹೇಳ್ತ ಹಿರಿಯೋರ ನಂಬಿಕೆ ನವಗೂ ಅಬ್ಬೆಯ ಮೇಲೆ ಪ್ರೀತಿ ಹೆಚ್ಚಪ್ಪಲೆ, ಅಬ್ಬೆಯ ಮಹಿಮೆ ಗೊಂತಪ್ಪಲೆ ಮಾಡಿದ ಒಂದು ಕ್ರಮ.

    ಮಕ್ಕೊ ಎಲ್ಲೋರೂ ಒಂದೇ ಆದರೂ, ಮಕ್ಕೊ ತಪ್ಪು ಮಾಡಿ ಅಪ್ಪಗ ಹೇಂಗೆ ಒಂದು ಅಬ್ಬೆ ತಪ್ಪಿದಲ್ಲಿ ಶಿಕ್ಷೆ ಕೊಟ್ಟು ತಿದ್ದಿ ಒಳ್ಳೆ ದಾರಿ ತೋರ್ಸುತ್ತೋ ಹಾಂಗೆ ಅಬ್ಬೆ ವಸುಧೆದೇ ಈ ಮಕ್ಕೊ ತಪ್ಪಿದಲ್ಲಿ ಬೇಕಾದ ಹಾಂಗೆ ತಿದ್ದುತ್ತು. ಅದರ ಅರ್ಥೈಸಿಗೊಂಬ ಮನಸ್ಸು ನವಗೆ ಬೇಕಷ್ಟೇ!! ಜನಸಂಕೆ ಹೆಚ್ಚಾದರೆ ಯೇವುದಾರೂ ರೋಗ ಬಂದು ಸಾವುಗೊ ಬಕ್ಕು. ಅಲ್ಲದ್ದರೆ ಪ್ರಕೃತಿಯ ಯಾವುದಾದರೂ ಒಂದು ತತ್ವದ ಮೂಲಕ ಮಕ್ಕಳ ನಿಯಂತ್ರಿಸುಗು ಈ ಅಬ್ಬೆ!!

    ನಮ್ಮ ಮೂಲ ಜನ್ಮಕ್ಕೆ ಕಾರಣ ಆಗಿ, ನಮ್ಮ ನಿಜವಾಗಿ ಸಾಂಕುತ್ತಾ ಇಪ್ಪ ಭೂಮಾತೆಗೆ ನಾವು ಯಾವತ್ತಿಂಗೂ ಋಣಿಯಾಗಿರೆಕ್ಕು.
    ನಮ್ಮ ಸಂಸ್ಕೃತಿಲಿ ಹೇಳಿ ಕೊಟ್ಟ ಕ್ರಮಂಗಳ ಮುಂದರಿಶಿಗೊಂಡು ಬಂದರೆ ನಾವು ರಜ್ಜ ಆದರೂ ಋಣಮುಕ್ತರಪ್ಪಲಕ್ಕು.

    ಒಂದೊಪ್ಪ ಲಾಯ್ಕಾಯಿದು.

  4. kushi aathu oppanna.oppannanali enthada gammatthu.
    attigeyatre kelekkasteyo henge.bhoomi garpule aaga thotakke neeru bidle aaga helthe hangare oppanna bike ride madle aakko?
    enthade aagali hiriyaraddu ella aacharane maadle ediyadru kaalamsha aadaru edittho heli noduva aatha oppanno.
    good luck.

  5. ಒಪ್ಪಣ್ಣ, ಸಕಾಲಿಕ ಲೇಖನ ತು೦ಬಾ ಒಳ್ಳೆದಿದ್ದು, ಧನ್ಯವಾದ೦ಗೊ. ಕೆಡ್ದಸದ ದಿನ ಅಥವ ಕೆಡ್ಡಸದ ಲೆಕ್ಕಲ್ಲಿ ಕೆಡ್ದಸ ಮುಗುದ ಮೇಲೆ ಏನಾದರು ವಿಶೇಶ ಧಾರ್ಮಿಕ ಆಚರಣೆಗೊ,ಕಾರ್ಯಕ್ರಮ೦ಗೊ ಅಥವಾ ಪೂಜೆಗೊ ಹೇಳಿ ಇದ್ದ? ಇದ್ದರೆ ಆ ಬಗ್ಗೆ ಬೈಲಿಲಿ ಮಾಹಿತಿ ಸಿಕ್ಕುಗಾ?

  6. ಒಪ್ಪಣ್ಣ ಭಾವನ “ಕೆಡ್ವಾಸ” , ಹಳೆ ತಲೆಮಾರಿನ ಹಳ್ಳಿ ದಿನಂಗಳ ನೆನಪಿಂಗೆ ತಂತು. ಓದುತ್ತಾ ಹೊವ್ತಾಂಗೆ ಅದರ ಕಲ್ಪನೆ ಮನಪತಲಕ್ಕೆ ಚಿತ್ರ ರೂಪಲ್ಲಿ ಬಂತು.

    ಸಿನೆಮಲ್ಲಿ ಕೂಡ ಸಿಕ್ಕ ಹೀಂಗಿರ್ತ ದೃಶ್ಯಾವಳಿ. ಒಂದುಂದು ಹಬ್ಬ ಬಪ್ಪಗ ಅದರ ಬಗ್ಗೆ ಮಾಹಿತಿ ಇಲ್ಲಿ ಬರಲಿ ಹೇಳಿ ಎದುರು ನೋಡುತ್ತೆ.

  7. ಲೋಕವಿಡೀ ‘ಡೇ’ ಗಳ ಆಚರಿಸೊದರ್ಲಿ ಮುಳುಗಿದ ಈ ಕಾಲಲ್ಲಿ ಒಪ್ಪಣ್ನನ ‘ ಭೂಮಿದಿನ’ದ ಲೇಖನ ಸಮಯೋಚಿತ.ಎನಗೆ ಈ ವಿಷಯದ ಮಾಹಿತಿ ಇತ್ತಿಲ್ಲೆ,ಹೆಸರು ಗೊ೦ತಿತ್ತು,ಕೆಡ್ವಾಸ ಕಳುದು ಬೋ೦ಟೆಗೆ ಆಳುಗೊ ಹೋಕು ಹೇಳಿ ಗೊ೦ತಿತ್ತು,ಅಷ್ಟೆ.ಗೋಪಾಲಣ್ನ ಹೇಳಿದ ಮಾತು ವೈಜ್ನಾನಿಕ ಯೋಚನೆಗಳನ್ನೂ ತ೦ತು.
    ಅಮೆರಿಕದವು ಹೇಳಿದ್ದೆಲ್ಲಾ ವೇದವಾಕ್ಯ ಆದ ಈ ಕಾಲಲ್ಲಿ ನಮ್ಮ ಊರಿನೋರು ಪಾಲಿಸಿದ ಭೂಮಾತೆಯ ಮೇಗಾನ ಪ್ರೀತಿಯ ಪರಿಚಯಿಸಿದ ಈ ಲೇಖನ ನಮ್ಮಲ್ಲಿಯೂ ಪರಿಸರ ಪ್ರೇಮವ ಹೆಚ್ಚುಸಲಿ.

    1. ಮುಳಿಯಭಾವಾ..
      ಅಮೇರಿಕದವು ಹೇಳಿದ ವೇದವಾಕ್ಯ, ಬಟ್ಟಮಾವ ಹೇಳಿದ ವೇದಂದಲೇ ತೆಗೆತ್ತದೋ ಏನೋ – ಅಲ್ಲದೋ? 🙂

  8. ಭೂಮಿ ತಾಯಿಯ ನೆನೆಸಿಗೊಂಬ ಒಂದು ವಿಶೇಶ ಆಚರಣೆಯ ತಿಳಿಸಿ ಕೊಟ್ಟದು ಲಾಯ್ಕಾಯ್ದು!!!
    😀

  9. ಕಡ್ವಾಸ ನೆನಪು ಮಾಡಿ ಕೊಟ್ಟದಕ್ಕೆ ಧನ್ಯವಾದ೦ಗೋ..ಇ೦ದು ತ೦ಬಿಟ್ಟು೦ಡೆ ಮಾಡೆಕು,,

    1. ಏ ಶೋಬಕ್ಕ…..
      ಇ೦ದು ತ೦ಬಿಟ್ಟು೦ಡೆ ಮಾಡಿದಿರೋ ? ಹೇಂಗೆ ?
      ತಿಂದರಕ್ಕೋಳಿ ಆವುತ್ತು ….
      ಅಕ್ಕಿ ಹೊರುದು , ಹೊಡಿ ಮಾಡಿ ಬೆಲ್ಲ ಪಾಕಕ್ಕ ಹಾಕುದೊ ? ಹೇಳಿ ಎನ್ನ ಯಜಮಾಂತಿ ಕೇಳಿತ್ತು.
      ಹೇಂಗೆ ಮಾಡವದೂ ? ಹೇಳುಲೆಡಿಗೋ ?

      ಎಡಿಗಾದವೆಲ್ಲಾ ಮಾಡಲಿ ಆಗದೋ ?

      1. ಗೋಪಾಲಮಾವಾ..
        ತಂಬಿಟ್ಟುಂಡೆ ಮಾಡ್ತದು ಹೇಂಗೆ ಹೇಳಿ ನಮ್ಮ ಬಂಡಾಡಿಅಜ್ಜಿ ಬೈಲಿಂಗೆ ಹೇಳಿದ್ದವು,
        ಇದಾ, ಸಂಕೊಲೆ ಇಲ್ಲಿದ್ದು:
        https://oppanna.com/adige/tambittunde

        ನೋಡಿ, ಮಾಡಿ, ಹೇಂಗಿದ್ದು ಹೇಳಿ, ಲಾಯಿಕಿದ್ದರೆ ಬೈಲಿಂಗೆ ಹಂಚಿ, ಆತೋ? 🙂
        ಕಾದೊಂಡಿದ್ದೆಯೊ°…

  10. ಕೆಡ್ಡಸ ಅಥವಾ ಕೆಡ್ವಾಸ ಭೂಮಿತಾಯಿಯ ಮುಟ್ಟಿನ ಸಮಯ ಹೇಳಿ ಎನ್ನ ಅಜ್ಜಿ ಹೇಳುಗು.ಅದು ಮಕರ ತಿಂಗಳ ೨೭ರಿಂದ ಕುಂಭ ಸಂಕ್ರಾಂತಿ ವರೆಗ .೨೮ಕ್ಕೆ ನಡುಕೆಡ್ಡಾಸ.ಒಂದೊಂದರಿ ಮೂರು ರಾತ್ರಿ,ಒಂದೊದರಿ ಎರಡು ರಾತ್ರಿ ಆದ ಮೇಲೆ ಸಂಕ್ರಾಂತಿ ಬಕ್ಕು!ಅಜ್ಜಿ ಕೇಳುಗು ಈ ಸರ್ತಿ ಭೂಮಿ ಮೀವದು ಏವಗ ಹೇಳಿ!ಇದೆಲ್ಲಾ ಹಿರಿಯರ ನಂಬಿಕೆ-ಒಪ್ಪಣ್ಣ ಲಾಯಿಕ ಬರೆದ್ದಕ್ಕೆ ಅಭಿನಂದನೆ.
    ಕೃಷಿಕರಾದ ನಮ್ಮವು ತುಳುನಾಡಿಲಿ ನೆಲೆಸಿ ತಮ್ಮದಾಗಿಸಿ ಆಚರಿಸುವ ಹಬ್ಬ ಇದು.
    ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಇದ್ದಡ.ಸೇವಾಮೃತ ಪತ್ರಿಕೆಲಿ ನಮ್ಮವು ಆರೋ ಬರೆದ್ದವು ಹಿಂದೆ-ಆನು ಸಣ್ಣ ಇದ್ದ ಕಾರಣ ಈಗ ಹೆಸರು ನೆಂಪಿಲ್ಲೆ.ಅದು ಹೀಂಗೆ.-
    ಕೆಡ್ಡಸ ನಂತರ ಭೂಮಿಯ ಮೇಲ್ಭಾಗಲ್ಲಿ ನೀರು ಆರಲೆ ಸುರು ಆವುತ್ತು-ಸೆಕೆ ಹೆಚಾವುತ್ತು.ಆ ಮೇಲೆಯೆ ಅಂತರ್ಜಲ ಲೋಮನಾಳಾಕರ್ಷಣ[ಕಾಪಿಲ್ಲರಿ ಮೋಶನ್]ಮೂಲಕ ಮೇಲೆ ಬಪ್ಪಲೆ ಸುರು ಆವುತ್ತು.ಮೇಲೆಂದ ಒಣಗುವಾಗ ಅಡಿಲಿಪ್ಪ ನೀರು ಮಣ್ಣಿನ ಪದರಲ್ಲಿ ಮೇಲೆಮೇಲೆ ಬತ್ತು-ಅಲ್ಲದೊ?ಅದರಿಂದಾಗಿ ಬಾವಿ,ಕೆರೆ ಎಲ್ಲ ನಮಗೆ ನೀರು ಕೊಡುದು.ಹೀಂಗೆ ಪುಷ್ಪವತಿಯಾದ ಭೂಮಿ ಮುಂದೆ ವಸಂತ ಕಾಲಲ್ಲಿ ನಮಗೆ ಫಲ ಕೊಡುತ್ತು-ಮಳೆಗಾಲ ಬಂದಪ್ಪಾಗ ಇನ್ನೂ ಹೆಚು ಬೆಳೆ ಬೆಳೆಶುತ್ತು.
    ಇದರಲ್ಲಿ ಸತ್ಯ ಇದ್ದು ಹೇಳಿ ಕಾಣುತ್ತು.

    1. ಧಾರ್ಮಿಕ ಆಚರಣೆಯ ವೈಜ್ಞಾನಿಕ ವಿಶ್ಲೇಷಣೆ ಭಾರೀ ಚೆಂದ ಆಯಿದು ಗೋಪಾಲಣ್ಣ!
      ಕೊಶೀ ಆತು.

      { ಲೋಮನಾಳಾಕರ್ಷಣ }
      – ನಿಂಗಳ ನೆಂಪುಶೆಗ್ತಿಯ ಬಗ್ಗೆ ಒಪ್ಪಣ್ಣಂಗೆ ಆಶ್ಚರ್ಯ ಆತು. ಈಗಾಣೋರಿಂಗೆ ಇಂಗ್ಳೀಶು ಶಬ್ದಂಗೊ ನೆಂಪೊಳಿಗು, ಆದರೆ ಹೀಂಗಿರ್ತ ಸಮಾನಪದ ಕಷ್ಟವೇ! 🙂

  11. {..ನನ್ನೆರಿ, ತಂಬಿಟ್ಟುಂಡೆ ಚೀಪೆಯೊಟ್ಟಿಂಗೆ, ನುಗ್ಗೆಬದನೆ ಬೆಂದಿ ಮಾಡಿ ಹೊಟ್ಟೆ ತುಂಬ ಉಂಬನಾ?}

    ಅದಾ,.. ಹೀ೦ಗೆಲ್ಲಾ ಹೇಳಿ ಕೊದಿ ಬರ್ಶುದು.. 😛
    ಮತ್ತೆ ಆನು ಅಜಕ್ಕಾನ ಭಾವ ಎಲ್ಲಿಗ ಬಪ್ಪುದು?? 🙁
    “ಶ್ರೀಅಕ್ಕ ಮಾಡಿಮಡುಗುತ್ತೋ ಏನೋ” ಹೇಳಿ ಅಜಕ್ಕಾನ ಬಾವ ಹೇಳಿದ ಪೋನಿಲ್ಲಿ, 😉
    ನಾವು ಇನ್ನು ಓಡುದೆ ಶ್ರೀಅಕ್ಕನಲ್ಲಿಗೆ.. ಬೆಶಿ ಬೆಶಿ ಮಾಡಿ ಮಡುಗುತ್ತವಡ….. ಏ? 😀

    1. ಏ ಬೋಸ ಭಾವ.ನೀನು ತಿ೦ಬಲೇ ಹುಟ್ಟಿದ್ದೋ ಹೇಳಿ ಸ೦ಶಯ..

    2. { ಶ್ರೀಅಕ್ಕ “ಮಾಡಿಮಡುಗುತ್ತೋ” ಏನೋ }
      ಅಪ್ಪು ಮಾರಾಯ,
      ಒಲೆ ಊದುತ್ತ ಕಬ್ಬಿಣದ ಓಟೆಯ ಬೆಶಿ “ಮಾಡಿಮಡಗ್ಗು”, ನಿನ್ನ ಬೆನ್ನಿಂಗೆ!! ಜಾಗ್ರತೆ..
      😉

  12. ಒಪ್ಪಣ್ಣನ ಲೇಖನ ಲಾಯಕೆ ಆಯಿದು.. ಈ ವಿಚಾರ ಎನ ಗೊ೦ತಿತ್ತಿಲ್ಲೆ…
    ಹಾ ಮತ್ತೆ, {..ಭೂಮಿ ಪೂಜೆ} ಹೇಳಿಯಪ್ಪಗ ಒ೦ದು ವಿಚಾರ ಹೇಳುವೊ ಹೇಳಿ ಕ೦ಡತ್ತು…
    ನಾವು ದೀನ ಉದ್ಯಪ್ಪಗ, ನಾರಾಯಣ ನಾರಾಯಣ ಹೇಳಿ ಬಲ ಮಗ್ಗಿಲ್ಲಿ ಎದ್ದು,
    ಎರಡು ಕೈಯ ತಿಕ್ಕಿ, ಅದರ ಒ೦ದಾರಿ ನೋಡಿ ನಮ್ಮ ಕಣ್ಣಿ೦ಗೆ ಒತುತ್ತ ಕ್ರಮ…
    ಮತ್ತೆ ಮುಕ್ಯವಾಗಿ – ಭೂಮಿ/ ನೆಲಕ್ಕ ಮುಟ್ಟಿಕ್ಕಿ ನಮಸ್ಕಾರ ಮಾಡ್ತಲ್ಲಾದೊ??
    ಇದಕ್ಕೆ ಒ೦ದು ಕಾಣ ಎ೦ತರ ಹೇಳಿರೆ ನಾವು ದಿನ ಇಡೀ ಭೂಮಿ ತಾಯಿಯ ಮೇಲೆ ಚಪ್ಪಲಿ ಹಾಕಿ ನಡಕೊ೦ಡು ಹೋವುತ್ತು ,
    ಇದಕ್ಕೆ ನಾವು ಕ್ಷಮೇ ಕೇಳುತ್ತು ಹೇಳಿ ನೆಲಕ್ಕ ಮುಟ್ಟಿಕ್ಕಿ ನಮಸ್ಕಾರ ಮಾಡ್ತದು…
    ತಾಯಿಯ ಋಣ ತೀರ್ಸಲೇಡಿಗೊ, ಕ೦ಡಿಥಾ ಎಡಿಯಾ… ??? ಹಾ೦ಗಾಗಿ ಹೇಚ್ಚು ಹೇಳಿರೆ ತಾಯಿಗೆ ಕ್ಷಮೇ ಕೇಳ್ಕಷ್ಟೆ ಅಲ್ಲದೋ??

    1. [ತಾಯಿಗೆ ಕ್ಷಮೇ ಕೇಳ್ಕಷ್ಟೆ ಅಲ್ಲದೋ??]
      ಇದಕ್ಕೆ ಪೂರಕವಾಗಿ ಒಂದು ಶ್ಲೋಕ ಇದ್ದುಃ
      ಸಮುದ್ರವಸನೇ ದೇವಿ ಪರ್ವತಸ್ತನ ಮಂಡಿತೇ
      ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ

      1. ಅಪ್ಪಚ್ಚಿ ಸರಿ ಹೇಳಿದಿ..ಎದ್ದಾ೦ಗೆ ನಾವು – “ಕರಾಗ್ರೆ ವಸತೇ ಲಕ್ಷಮಿ,ಕರಮೂಲೆ ಸ್ತಿತೇ ಗೌರಿ…” ಹೇಳಿ ಕೈಯ ನೋಡಿ ಗೊ೦ಡು ಹೇಳೆಕು…ಅದು ಬರವಲೆ ಬಿಟ್ಟತ್ತು.. 🙂

        1. ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ
          ಕರತಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನ೦ ಹೇಳಿ ಅಲ್ಲದೋ ಚುಬ್ಬಣ್ಣಾ?

          ಲಕ್ಷ್ಮಿ ಹೇಳಿರೆ ಸ೦ಪತ್ತು ನಮ್ಮ ಕೈಯ ಕೊಡಿಲಿ ಇಪ್ಪದಾಡ, ಯಾವಗ ಬೇಕಾರು ನಷ್ಟ ಅಕ್ಕು, ಆದ ಕಾರಣ ಸ೦ಪತ್ತು ಬಪ್ಪಗ ಹೆಚ್ಚು ಹಾ೦ಕಾರ ಮಾಡ್ಳಾಗಾಡ. ಸರಸ್ವತಿ ಹೇಳಿರೆ ಜ್ನ್ಹಾನ ನಮ್ಮ ಕರಮದ್ಯಲ್ಲಿ, ಅ೦ಗೈಲಿ ಇಪ್ಪದಾಡ, ಆದ ಕಾರಣ ಜ್ನ್ಹಾನವೇ ಹೆಚ್ಚು ಭದ್ರ. ಜಾಸ್ತಿ ಡಾಮಹೇಶಣ್ಣ೦ಗೆ ಗೊ೦ತಿಕ್ಕಾಯ್ಕು..

          1. ಅಪ್ಪು ನಿ೦ಗೊ ಹೇಳಿದ್ದು ಸರಿಯೇ.. 🙂 ಹಾ ಮತ್ತೆ ಆನು ಷ್ಲೋಕವ ಇಲ್ಲಿ ಪೂರ್ತಿ ಬರವಲೆ ಹೋಯಿದಿಲ್ಲೆ..
            ಧನ್ಯವಾದ ಪೂರ ಬರದ್ದಕ್ಕೆ.. 😉

          2. ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ
            ಕರಮೂಲೇತು ಗೋವಿಂದಃ ಪ್ರಭಾತೇ ಕರದರ್ಶನ೦
            ಹೇಳಿ ಸಂಗ ಶಾಕೆಲಿ ಉದಿಯಪ್ಪಗ ಹೇಳಿಕೊಂಡಿತ್ತೆಯ.
            ಅಂಬಗ ಏವ ಶ್ಲೋಕ ಸರಿ?

  13. ಒಪ್ಪಣ್ಣಾ.. ಕೆಡ್ವಾಸದ ಬಗ್ಗೆ ಒಳ್ಳೆ ಲೇಖನಕ್ಕೆ ಧನ್ಯವಾದ೦ಗೊ.
    ಆನು ಸಣ್ಣ ಆಗಿಪ್ಪಗ ಕೆಡ್ವಾಸ ಹೇಳಿರೆ ಆರುದೆ ಎ೦ತ ಕೆಲಸವೂ ಮಾಡದ್ದೆ ರಜೆ ತೆಕ್ಕೊ೦ಬ ದಿನ (ಮೇ ಒ೦ದನೇ ತಾರೀಕಿನ ಹಾ೦ಗೆ!!) ಹೇಳಿ ಮಾ೦ತ್ರ ಗೊ೦ತಿದ್ದದು. ಚೂರು ದೊಡ್ಡ ಆದಪ್ಪಗ ಎಲ್ಲೆಲ್ಲಿ೦ದಲೋ ಯಾವ್ಯಾವುದೋ ಪುಸ್ತಕ ಓದಿ ಗೊ೦ತಾತು – ಕೆಡ್ವಾಸದ ಹಿ೦ದೆ ಇಪ್ಪ ಸ೦ಕಲ್ಪ / ವಿಶ್ವಾಸ ಎ೦ತರ ಹೇಳಿ.
    ಅ೦ಬಗ ಊರಿಲ್ಲಿ ಎಲ್ಲಿ ಬೇಕಾರು ಬದನೆ / ನುಗ್ಗೆ ಸಿಕ್ಕಲೆ ದಾರಿದ್ರ್ಯ ಇತ್ತಿಲ್ಲೆ. ನಮ್ಮ ನಮ್ಮ ಗುಡ್ಡೆಗಳಲ್ಲಿ ನುಗ್ಗೆ / ನೆಟ್ಟಿ ಹಿತ್ತಿಲಿಲ್ಲಿ ಬದನೆ ಇದ್ದತ್ತು, ಅ೦ಬಗ ಅದರ ಬೆಲೆಯೂ ಗೊ೦ತಿತ್ತಿಲ್ಲೆ. ಅಥವಾ ಇಲ್ಲದ್ರುದೆ ಬಟ್ಯನ ಹಾ೦ಗಿಪ್ಪವು ಮನೆಗೆ ತ೦ದುಕೊಟ್ಟ೦ಡು ಇತ್ತಿದ್ದದುದೆ ನೆ೦ಪಿದ್ದು.
    ಮತ್ತೂ ಕೆಲವು ವರ್ಷ ಕಳುದ ಹಾ೦ಗೆ ನೆಟ್ಟಿಕಾಯಿ ಮನೆಲೇ ಮಾಡುವದು ಕಮ್ಮಿ ಆತು. ಬೇನುಸೊಪ್ಪು ಕೂಡ ಅ೦ಗಡಿ೦ದ ತಪ್ಪ ಅಭ್ಯಾಸ ಸುರು ಆತು. ಮೊದಲೆಲ್ಲಾ ಕೆಡ್ವಾಸ ಅಥವಾ ಹಾ೦ಗಿರ್ತ ವಿಶೇಷ ದಿನ೦ಗಳಲ್ಲಿ ಮಾ೦ತ್ರ ಆಡ ಬಟ್ಯನ ಮನೆಲಿ ಕೋಳಿಬೆ೦ದಿ ಮಾಡುವದು. ಈಗ ಆರ್ಥಿಕವಾಗಿ ಎಲ್ಲರುದೆ ಹೆಚ್ಚು ಶಕ್ತಿ ಪಡಕ್ಕೊ೦ಡಿದವು, ಕೋಳಿಬೆ೦ದಿಗೆ ಬೇಕಾಗಿ ಕೆಡ್ವಾಸಕ್ಕೆ ಕಾದುಕೂರೆಕು ಹೇಳಿ ಇಲ್ಲೆ.
    ಅ೦ದರುದೆ ಕೆಡ್ವಾಸ ಬ೦ತು ಹೇಳಿರೆ ಎಲ್ಲರಿ೦ಗುದೆ ವಿಶೇಷ. ಊರಿಲ್ಲಿ ಬದನೆಗುದೆ ನುಗ್ಗೆಕೊ೦ಬಿ೦ಗುದೆ ಚಿನ್ನದ ಬೆಲೆ!! ಬಟ್ಯನ ಪುಳ್ಳಿಯಕ್ಕೊ ಹೇಳುಗು ಕೋಳಿಗುದೆ ರೇಟು ಜಾಸ್ತಿ ಆಯಿದು ಹೇಳಿ.
    ಈಗಾಣ ಕಾಲಲ್ಲಿ ಅವಕ್ಕವಕ್ಕೆ ಎಡಿತ್ತ ರೀತಿಲಿ ಮನೆಲೇ ಎ೦ತಾರು ನೆಟ್ಟಿಕಾಯಿ ಮಾಡ್ತ ತೀರ್ಮಾನ ಆದರು ತೆಕ್ಕೊ೦ಡು ಕೆಡ್ವಾಸ ಆಚರಿಸುವದು ಹೆಚ್ಚು ಅರ್ಥಪೂರ್ಣ ಅಕ್ಕು ಹೇಳಿ ಎನ್ನ ಅಭಿಪ್ರಾಯ. ಇದರಿ೦ದಾಗಿ ನಮ್ಮ ಸ್ವಾವಲ೦ಬನೆಯೂ ಜಾಸ್ತಿ ಅಕ್ಕು, ಪ್ರಕೃತಿಯ ಒಡನಾಟವು ಜಾಸ್ತಿ ಅಕ್ಕು.

    1. ಪೆರುವದಣ್ಣಾ..
      ಒಪ್ಪ ಭಾರೀ ಪಷ್ಟಾಯಿದು!
      ಆರ್ಥಿಕ ಸುಭದ್ರತೆ ಬಂದ ಹಾಂಗೇ, ಸಂಸ್ಕೃತಿಯ ಮರೆತ್ತವೋ ಜೆನಂಗೊ?
      ಒಂದರ್ಥಲ್ಲಿ ಹಾಂಗೇ ಕಾಣ್ತಲ್ದೋ?

      {ಬಟ್ಯನ ಪುಳ್ಳಿಯಕ್ಕೊ ಹೇಳುಗು ಕೋಳಿಗುದೆ ರೇಟು ಜಾಸ್ತಿ ಆಯಿದು ಹೇಳಿ. }
      – ಹ ಹ!! ನೆಗೆಬಂತೊಂದರಿ ಓದಿ.
      ಕೋಳಿಗೆಷ್ಟು ಕ್ರಯ ಹೇಳ್ತದು ನವಗರಡಿಯ, ಇದಾ.
      ಬಟ್ಯನ ಪುಳ್ಯಕ್ಕಳೇ ಹೇಳೆಕ್ಕಷ್ಟೆ. 🙂

  14. ತುಳು ನಾಡ ಸಂಸ್ಕೃತಿಯ ಒಂದು ಮರದು ಹೋವ್ತಾ ಇಪ್ಪ ಅಚರಣೆಯ ಬಗ್ಗೆ ಒಳ್ಳೆ ಲೇಖನ. ಕೆಡ್ವಾಸ ಯಾವಾಗ ಆವುತ್ತು, ಹೇಂಗೆ ಆಚರಿಸೆಕ್ಕು, ಎಂತಕೆ ಆಚರಿಸೆಕ್ಕು ಹೇಳಿ ತುಂಬಾ ವಿವರವಾಗಿ ಕೊಟ್ಟದಕ್ಕೆ ಧನ್ಯವಾದಂಗೊ
    ತಲೆ ತಲೆಮಾರಿಂದ ನಡಕ್ಕೊಂಡು ಬಂದೊಂಡಿತ್ತಿದ್ದ ಒಂದು ಆಚರಣೆ ಕಾಲ ಹೋದ ಹಾಂಗೆ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಂದ ಮರೆ ಆವ್ತಾ ಇದ್ದು ಸಮಾಜಂದ.
    ಭೂಮಿಯ ನಮ್ಮ ಅಬ್ಬೆಯ ಹಾಂಗೆ ನೋಡಿಗೊಳೆಕ್ಕು ಹೇಳಿ ಅಂದ್ರಾಣವರ ಅನುಭವಂಗಳ ಆಚರೆಣೆ ರೂಪಲ್ಲಿ ತಂದದರ ರೆಜ ಆದರೂ ಅನುಸರಿಸಿದ್ದರೆ, ಈಗಾಣ “ಜಾಗತಿಕ ತಾಪಮಾನ” ತೊಂದರೆ ಇರ್ತಿತಿಲ್ಲೆ ಹೇಳಿ ಕಾಣುತ್ತು.
    ಎಲ್ಲದನ್ನೂ ಮೂಢ ನಂಬಿಕೆ ಹೇಳಿ ನಮ್ಮ ತಲೆಗೆ ಅರದು ಮೆತ್ತಿದ್ದರ ತೊಳದು ತೆಗೆಕಾರೆ, ಪುನಃ ಪಡುವಂತಾಗಿಯಾಣವು ನವಗೆ ಪಾಠ ಮಾಡಿ ಆಯೆಕ್ಕಕ್ಕೋ?
    ‘ಕೋಟಿ’ ಹೇಳಿಕೆ ಹೇಳ್ಲೆ ಬಂದದರ ಓದುವಾಗ ಎನ್ನ ಮನೆ ಜಾಲಿಲ್ಲಿ ಕೂದು ಹೇಳಿದ ಹಾಂಗೆ ಅನುಭವ ಆತು. ಆ ಸನ್ನಿವೇಶ ಅಷ್ಟು ಲಾಯಿಕಕೆ ಬಯಿಂದು.
    [ಭೂಮಿ! ನಾವೊಳುಶಿರೆ ನಮ್ಮ ಒಳುಶುಗು!!] ಮತ್ತೆ ಒಂದೊಪ್ಪ ಲಾಯಿಕ ಆಯಿದು.

  15. ಪ್ರಾಯಶಃ ಈ ಆಚರಣೆ ನಮ್ಮ ತುಳು ನಾಡಿಂಗೆ ಸೀಮಿತವೋ ಹೇಳಿ ಕಾಣುತ್ತು…..ಹಿರಿಯರ / ಪ್ರಾಜ್ನರ ಅಭಿಪ್ರಾಯಕ್ಕೆ ಸ್ವಾಗತ .
    ಹೀಂಗೆ ಇನ್ನು ಕೆಲವು… ಆಟಿ ಕಳೆಂಜ, ಸೋಣೆ ಜೋಗಿ , ಕನ್ಯಾಪು (ಇರುಳು)…. ನಲಿಕೆ ಯವು ಹೇಳಿದರೆ ಭೂತ ಕಟ್ಟುವ ದಿಕ್ಕಂಗೊ ನಡೆಸುವ ಪಾಡ್ದನ ಆಧಾರಿತ ಸಾಂಸ್ಕೃತಿಕ / ಧಾರ್ಮಿಕ ಆಚರಣೆಗೊ.
    ಪತ್ತನಾಜೆ ಶುದ್ಧ ತುಳು ಶಬ್ದ. ವಿಷು ಶಂಕ್ರಾಂತಿ ಕಳದು ೪೦ ದಿನ ಅಥವಾ ವೃಷಭ ಶಂಕ್ರಾಂತಿ ಕಳದು ಹತ್ತನೇ ದಿನ “ಪತ್ತ್ ನಾಜೆ.
    ತಂಬಿಲ…, ಭೂತಾರಾಧನೆ…. ಇವಕ್ಕೆಲ್ಲಾ ಸಾಮಾನ್ಯ ವಾಯಿದೆ (ಗಡು) ಪತ್ತನಾಜೆ . (ಯ ಒಳ )
    ಆ ಮೇಲೆ ಮಳೆಕಾಲಕ್ಕೆ ಸ್ವಾಗತ ಕೋರುವ ಸಿದ್ದತೆ….ಹಾಂಗೆ ಮೇಳ ದವು ಸೇವೆ ಆಟ ಮಾಡಿ ಗೆಜ್ಜೆ ಬಿಡುಸುವ ದಿನ ಅದು.
    ಪಂಚಾಂಗ ಸಂಸ್ಕೃತ ಆಧಾರಿತ ಆರ್ಯ ಪದ್ದತಿ , ಅದು ನಮ್ಮದು…. ಇದು ಇಲ್ಲಿ ನಾವು ನೆಲೆಯೂರಿದ ಈ ತುಳು ಮಣ್ಣಿನ ಸಂಸ್ಕೃತಿ ಹೇಳಿ ಎನ್ನ ಅಭಿಪ್ರಾಯ.

    1. ದೊಡ್ಡಮಾವನ ಒಳ್ಳೆ ಪ್ರಶ್ನೆಗೆ ನಿಂಗಳ ಒಳ್ಳೆ ರೀತಿಲಿ ಉತ್ತರ.
      ಪಂಚಾಂಗಕ್ಕೆ ಕೆಲವು ಸ್ಥಳೀಯ ಆಚರಣೆಗೊ ಎತ್ತಿದ್ದು, ಆದರೆ ಇದೆರಡು ಎತ್ತದ್ದಿಲ್ಲೆ.

      ಎರುಮುಂಜ ಜೋಯಿಶಜ್ಜನತ್ರೆ ಮಾತಾಡುವೊ° ಒಂದರಿ 🙂

  16. ಕೆಡ್ವಾಸವೂ, ಪತ್ತನಾಜೆಯೂ ಇಷ್ಟು ಮುಖ್ಯ ಆಚರಣೆಗೊ, ಆದರೊ…
    ಪಂಚಾಂಗಂಗಳಲ್ಲಿ ಇದು ಯೇವಗ ಬತ್ತು ಹೇಳಿ ಏಕೆ ಬರೆತ್ತವಿಲ್ಲೆ…?

  17. ಒಪ್ಪಣ್ಣೋ! ದಿನ ಹೋದ ಹಾಂಗೆ ಮರೆ ಆವ್ತಾ ಇಪ್ಪ ಆಚರಣೆಗಳ ಬಗ್ಗೆ ಬೆಳಕು ಚೆಲ್ಲುತ್ತ ಕಾರ್ಯ ನಿನ್ನಂದ ಆವ್ತಾ ಇಪ್ಪದು ತುಂಬಾ ಕೊಶಿಯ ಸಂಗತಿ.. ಕೆಡ್ಡಾಸ ಹೇಳಿ ಆಳುಗೊ, ಎನ್ನ ಅಜ್ಜ, ಅಪ್ಪ ಎಲ್ಲ ಹೇಳುದು ಕೇಳ್ತೆ ವರ್ಶವೂ.. ಆದರೆ ಆ ಆಚರಣೆಯ ಅರ್ಥ ಆಗಲ್ಲಿ ಅದರ ಪ್ರಾಮುಖ್ಯತೆ ಆಗಲ್ಲಿ ಹೇಳಿದೋರಾರೂ ಇಲ್ಲೆ! ಅಥವಾ ಕೇಳುವ/ಹೇಳುವ ತಾಳ್ಮೆ ಈಗಾಣ ಗಡಿಬಿಡಿಯ ಜೀವನಲ್ಲಿ ಇಲ್ಲೆ.. ಎನ್ನ ಮನೆ ಸುತ್ತ ಮುತ್ತ ಎಲ್ಲ ಕೆಡ್ವಾಸದ ಆಚರಣೆ ನಿಧಾನಕ್ಕೆ ಕಮ್ಮಿ ಆವ್ತಾ ಇದ್ದು ಇತ್ತೀಚೆಗೆ.. ನಮ್ಮ ಸುತ್ತ ಇಪ್ಪ ಚರಾಚರ ವಸ್ತುಗೊ ಎಲ್ಲವನ್ನೂ ಭಗವಂತನ ಪ್ರತಿಫಲನ ಹೇಳ್ತ ಹಾಂಗೆ ನೋಡುದು ನಮ್ಮ ಸನಾತನ ಸಂಸ್ಕೃತಿ ಅಲ್ಲದಾ.. ಭೂಮಿತಾಯಿ ಹೇಳುವ ನಮ್ಮವರ ಕಲ್ಪನೆಯೇ ಮನಸ್ಸಿಂಗೆ ಅನಿರ್ವಚನೀಯ ಅನುಭವ ಕೊಡ್ತು.. ಎಂತಕೆ ಹೇಳಿರೆ ಅಮ್ಮನ ಪ್ರೀತಿಗೆ, ಅಮ್ಮನ ಸಹನೆಗೆ ಅಮ್ಮನೇ ಸಾಟಿ.. ಭೂಮಿಯೂ ಹಾಂಗೆಯೇ..
    ಒಟ್ಟಿಲಿ ಹಲವಾರು ಸಮಯಂದ ಎನ್ನ ಮನಸ್ಸಿಲಿದ್ದ ಪ್ರಶ್ನೆಗೆ ಉತ್ತರ ಕೊಟ್ಟೆ ನೀನು ಒಪ್ಪಣ್ಣೋ! ಕೆಡ್ವಾಸದ ಆಚರಣೆಯ ಬಗ್ಗೆ ಚೆಂದಕ್ಕೆ, ಹದಾ ತಮಾಷೆ ಸೇರ್ಸಿ ಬರದ ರೀತಿ ತುಂಬಾ ಇಷ್ಟ ಆತು.. ಧನ್ಯವಾದಂಗೋ,, ಶುಕ್ರವಾರ ಬಪ್ಪಲೆ ಕಾದು ಕೂಪ ಹಾಂಗಾಯ್ದು ಈಗೀಗ! ಒಪ್ಪಣ್ಣನ ಲೇಖನ ಓದಲೆ.. (ನಗೆಭಾವ ಬೇರೆ ಗ್ರೇಶುಗು, ಪಳ್ಳಿಗೋಪಲಿದ್ದೋ ಹೇಳಿ)..
    ಹಿಂಗಿಪ್ಪ ಲೇಖನಂಗೋ ಇನ್ನೂ ಬರಳಿ.. ನಮ್ಮ ಬಯಲು ಇನ್ನೂ ಎತ್ತರಕ್ಕೇರಲ್ಲಿ..
    ಹರೇರಾಮ!

    1. ಬಲ್ನಾಡುಮಾಣೀ!
      ಇಂತಾ ಒಳ್ಳೊಳ್ಳೆ ಒಪ್ಪಂಗಳೂ, ಮಾಹಿತಿಗಳೂ ಬಂದರೆ ನಮ್ಮ ಬೈಲು ’ಬಲ್ಲ(ವರ)ನಾಡು’ ಅಪ್ಪದರ್ಲಿ ಸಂಶಯ ಇಲ್ಲೆ! 🙂
      ಹರೇರಾಮ

  18. ಊರಿಲ್ಲಿಪ್ಪಗ “ಕೆಡ್ವಾಸ” ಹೇಳ್ತ ಆಚರಣೆ ಕೇಳಿದ್ದಿದ್ದೆ. ಅಂದು ಆಳುಗೊ ಎಲ್ಲ ರಜೆ ಹಾಕುತ್ತ ವಿಷಯವೂ ಗೊಂತಿತ್ತು. ಕೆಡ್ವಾಸ ಹೇಳಿರೆ ಭೂಮಾತೆಗೆ ಪೂಜೆ ಮಾಡ್ತ ಸಮಯ, ಭೂತಾಯಿ ಯ ರಜೆಯ ಸಮಯ ಹೇಳಿ ಗೊಂತಾತು. ಇದರಲ್ಲಿ ಇಷ್ಟೊಂದು ವಿಷಯಂಗೊ ಇದ್ದು ಹೇಳಿ ಒಪ್ಪಣ್ಣನ ಲೇಖನ ನೋಡಿಯೇ ಗೊಂತಾದ್ದು. ಒಳ್ಳೆ ಲೇಖನ.
    ಕೋಟಿ ಡೋಲು ಬಡುದ ಕ್ರಮ, ಅದು ತುರ್ಕಾಲ್ಲಿ ಕೂದು ಸುಣ್ಣ ಹೊಗೆಸಪ್ಪು ತಿಂದದು ವಿವರಣೆ ಲಾಯಕಾಯಿದು. ಎಲ್ಲವೂ ಕಣ್ಣಿಂಗೆ ಕಂಡತ್ತು. ತುರ್ಕಾಲು ಶಬ್ದ ಪುನಃ ನೆಂಪಾತು. ಇದರ ಸಂಧಿ ವಿಂಗಡಣೆ ಹೇಂಗಪ್ಪಾ ? ಮುಳಿಯದವಂಗೆ/ ವರ್ಮುಡಿ ಮಾವಂಗೆ ಗೊಂತಿದ್ದೊ ?
    ಹಳೇ ಕಾಲಕ್ಕು ಈಗಾಣ ಕಾಲಕ್ಕೂ ಎಷ್ಟು ವೆತ್ಯಾಸ ಅಲ್ಲದೊ. ಕೋಟಿ ದುಡಿ ಬಡುಕ್ಕೊಂಡು ಮನೆ ಮನೆಗೆ ಹೋಗಿ ಕೆಡ್ವಾಸದ ನೆಂಪು ಮಾಡುತ್ತ ವಿಷಯ. ಅದಕ್ಕೆ ಅದರಲ್ಲಿ ಇಪ್ಪ ಕಾಳಜಿ ನೋಡಿ ಗೌರವ ಬಂತು. ಕೋಟಿ ಈಗಾಣ ಇಂಟರ್ನೆಟ್ಟಿನ ಯುಗಲ್ಲ್ಲಿ ಆದರೆ ಎಲ್ಲೋರಿಂಗು ಒಂದು ಇ- ಮೈಲು ಹಾಕಿ ಸುಮ್ಮನೇ ಕೂರ್ತಿತೋ ಹೇಳಿ !
    ಭೂಮಿಯ ತಂಪು ಒಳಿಶೇಕು ಹೇಳಿ ಅಮೇರಿಕದವು ಹೇಳಿರೆ ನಾವು ಕೇಳ್ತು, ಕೋಟಿ ಹೇಳಿರೆ ಏಕೆ ಕೇಳ್ಳಾಗ? ಕಡೇಣ ಒಪ್ಪ ಅಂತೂ ಮನಸ್ಸಿಂಗೆ ತಟ್ಟಿತ್ತು.

    1. ಬೊಳುಂಬುಮಾವನ ಒಪ್ಪ ಒಪ್ಪ ಕೊಶೀ ಆವುತ್ತು!
      { ಒಂದು ಇ- ಮೈಲು ಹಾಕಿ ಸುಮ್ಮನೇ ಕೂರ್ತಿತೋ ಹೇಳಿ }
      – ಈ ಗೆರೆ ಎನಗೆ ಕೊಶೀ ಆದ್ಸು.

      ಅಲ್ಲದ್ದರೂ ಹಾಂಗೇ ಮಾಡ್ತಿತಷ್ಟೆ. ಒಂದು ಈಮೈಲು ಕಳುಸಿ, ಎನ್ನ ಬೇಲೆ ಮುಗೀಂಡ್ – ಹೇಳಿ ಕೂರ್ತಿತು.
      ಪಾತಿಅತ್ತೆ ಓನ್-ಲೈನು-ಟ್ರಾನ್ಫರು ಮಾಡ್ತಿತು –
      ಹೇಳಿ ಅಜ್ಜಕಾನಬಾವ ಬಿಂಗಿ ಮಾತಾಡಿದ.

  19. ಸಾದಾರಣವಾಗಿ ಹಳ್ಲಿಗಳಲ್ಲಿ ಕೆಡ್ವಾಸದ ಭಕ್ತಿಯಿಂದ ಆಚರಿಸುತ್ತವು. ಆದರೆ ಕೆಲವು ಜನಂಗವುಕ್ಕೆ ಇದರ ಬಗ್ಗೆ ವಿಶಯವೇ ಗೊಂತಿಲ್ಲೆ.ಆದರು ಜೆನಂಗೊ ಇದರ ಆಚರಣೆ ಬಿಟ್ತಿದವಿಲ್ಲೆ.

  20. ಭೂಮಿಗೂ ಮನುಷ್ಯಂಗೂ ಇಪ್ಪ ಅವಿನಾಭಾವ ಸಂಬಂಧವ ನಾವು ಕೆಡ್ವಾಸ ಆಚರಣೆ ಮಾಡುದರ ಮೂಲಕ ಮಾಡ್ತು.ಎಂಗೊ ಸಣ್ಣಕಿಪ್ಪಗ ನೇಮುವಿನ ಅಪ್ಪಚ್ಚಿ ಮೋಂಟ ಮನಗೆ ಬಂದು ಹಳೆ ವಸ್ತ್ರ ಒಂದು ಸೇರು ಅಕ್ಕಿ ಕಾಯಿ ತೆಕ್ಕೊಂಡು ಹೋಕ್ಕು.ಆ ಪದ್ಧತಿ ಈಗ ಇಲ್ಲೆ.ಹೇಳಿರೆ ಮೋಂಟ ಇಲ್ಲೆ.ಅದರ ಮುಂದಾಣವು ಈಗ ಎಲ್ಲಿಯೋ ಗೊರ್ಮೆಂಟು ಜೋಬ್ ಲಿ ಇದ್ದವು..ಹಾಂಗಾದ ಕಾರಣ ಕೆಡ್ಡಸ ಆಚರಣೆ ಹೇಂಗೆ ಆಯಿಗೊಂಡಿತ್ತು ಹೇಳುದರ ಶುದ್ಧಿ ಹೇಳುದರ ಮೂಲಕ ಚೆಂದಕೆ ವಿವರಣೆ ಕೊಟ್ಟಿದೆ ಒಪ್ಪಣ್ಣಾ… ಶುದ್ಧಿ ಓದಿಯಪ್ಪಗ ಒಂದರಿ ಬಾಲ್ಯದ ನೆಂಪು ಆತು.ಇನ್ನು ಬಹುಶ್ಶ ಹಾಂಗಿಪ್ಪ ಪದ್ಧತಿ ಸಮಷ್ಟಿಲಿ ಆಚರಣೆ ಮಾಡುವ ಮೂಲಕ ಮಾಂತ್ರ ಒಳಿಶಿಗೊಂಬಲೆ ಎಡಿಗು ಅಷ್ಟೇ!!!ಸಮಯೋಚಿತ ಶುದ್ಧಿಗೆ ಧನ್ಯವಾದ.

    1. ಗಣೇಶಮಾವಾ..
      ಸಮಾಜದ ಕಳಕಳಿಯ ಒಂದು ಒಪ್ಪಲ್ಲಿ ತೋರುಸಿದ್ದಿ ನಿಂಗೊ.
      { ಮೋಂಟ ಇಲ್ಲೆ.ಅದರ ಮುಂದಾಣವು ಈಗ ಎಲ್ಲಿಯೋ ಗೊರ್ಮೆಂಟು ಜೋಬ್ ಲಿ ಇದ್ದವು }
      – ಇದುವೇ ಅಲ್ಲದೋ ಪರಿವರ್ತನೆ ಹೇಳಿತ್ತುಕಂಡ್ರೆ!

      ಕೋಟಿಯ ಮನೆಲಿಯೂ ಅದೇ ಗತಿ, ನಿಂಗೊಗೆ ಅರಡಿಗು.. ಅಲ್ದೋ?
      ಅಷ್ಟೇ ಅಲ್ಲ, ಬಟ್ಟಮಾವಂದ್ರ ಮನೆಲಿಯೂ ಅದೇ ಗೆತಿ!! 🙁

  21. ಭಾರೀ ಲಾಯಿಕ್ಕಾಯಿದು ಒಪ್ಪಣ್ಣ.-
    ಕೆಡ್ವಾಸ ಸಮಯಲ್ಲಿ ಭೂಮಾತೆಯ ಆರೈಕೆ ಮಾಡುತ್ತ (ಹೂಡುವದು,ಗರ್ಪುದು,..ಇತ್ಯಾದಿ ಯಾವದೇ ಬೇನೆ ಮಾಡದ್ದೆ) ಎಣ್ಣೆ ಹೂ ಕಟ್ಟು ಗೌರವಿಸುವ ಸಂಪ್ರದಾಯ ಬದ್ದ ವಾಗಿಪ್ಪ ವೈಜ್ನಾನಿಕ ಪರಿಜ್ನಾನ ಅಮೇರಿಕದ ವಿಜ್ಣಾನಿಗೊಕ್ಕೆ ಬರೆಕ್ಕಾರೆ , ನಮ್ಮಲ್ಲಿಂದ ಕದ್ದು ಕೊಂಡು ಹೋಪಲೆ ಯಾವುದಾದರು ಗ್ರಂಥ ಂಗೊ ಸಿಕ್ಕೆಕ್ಕು.

    ಅದರ ಅವು ಓದಿ ಹೇಳಿದರೆ ಅದು ಮಾತ್ರ ನಮ್ಮ ಮೇದಾವಿ ಪ್ರಭೃತಿ ಗೊಕ್ಕೆ ಅರ್ಥ ಅಕ್ಕಷ್ಟೆ.

    ಕಾಲ ಕಾಲಕ್ಕೆ ,ಸೌರಮಾನ ,ಚಂದ್ರಮಾನ ತಿಥಿ ಗನುಗುಣ ವಾಗಿ ಬಪ್ಪ ವ್ರತ, ಹಬ್ಬ ಹರಿ ದಿನಂಗಳ ಆಚರಣೆ,… ಹವಾಮಾನ.. ಅದದಕ್ಕೇ ಇಪ್ಪ… ತಿಂಡಿ ತಿನಸು ಎಲ್ಲಾ …ಪ್ರತಿಯೊಂದಕ್ಕೂ ಬಹಳ ನಿಗೂಢ ಅರ್ಥ ಇದ್ದೇ ಇದ್ದು.
    ಅರ್ಥೈಸುಲೆ ತಲೆಗೆ ಕಷ್ಟ ಆದರೆ ಆ ಕೆಲಸವ ಹೃದಯಕ್ಕೆ ಬಿದೆಕ್ಕು.

    ಭಾವನಾತ್ಮಕವಾಗಿ ಶೃದ್ದೆಂದ ಆಚರಿಸಿದ ಕಾರ್ಯ ಅಂತಃಕರಣ ಶುದ್ದಿಗೆ ಸೋಪಾನ.
    ಪುಣ್ಯ ಸಂಚಯಂದ ಪಾರಮಾರ್ಥದ ಚಿಂತನ…

    ಮೌಡ್ಯ ಆವರಿಸಿಪ್ಪ ಮೂಢರು ಈ ಪವಿತ್ರ ಕೆಲಸವ ಮೂಢ ನಂಬಿಕೆ ಹೇಳಿ ಹೇಳಿದರೆ ಆರಿಂಗೆ ನಷ್ಟ ?

    1. ಪಕಳಕುಂಜ ಮಾವನ ಒಪ್ಪ ಕಂಡು ಒಪ್ಪಣ್ಣಂಗೆ ಆಶ್ಚರ್ಯವೇ ಆಗಿ ಹೋತು!!
      ಉದೆಕಾಲ ಮೂರೂವರೆಗೆ!!
      ಬಟ್ಯನ ಕೋಳಿಯೂ ಎದ್ದಿರ್ತಿಲ್ಲೆ ಆ ಹೊತ್ತಿಂಗೆ!! ಆಗಲಿ, ಕೊಶಿ ಆತು.

      { ಮೌಡ್ಯ ಆವರಿಸಿಪ್ಪ ಮೂಢರು ಈ ಪವಿತ್ರ ಕೆಲಸವ ಮೂಢ ನಂಬಿಕೆ ಹೇಳಿ ಹೇಳಿದರೆ ಆರಿಂಗೆ ನಷ್ಟ ? }
      – ಈ ಗೆರೆ ಒಪ್ಪಣ್ಣಂಗೆ ತುಂಬಾ ಕೊಶೀ ಆತು ಮಾವ.
      ನಾವು ಮೂಡರು ಹೇಳ್ತು, ಆದರೆ ಅವು ಅವರ ’ಬುದ್ಧಿಜೀವಿಗೊ’ ಹೇಳಿಗೊಂಬದನ್ನೇ? 😉

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×