ಪಟ(ಹ)ದ ಗುಡ್ಡೆ

May 22, 2015 ರ 12:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕತೆ ಗೊಂತಿಪ್ಪೋರಿಂಗೆ ಈ ಶುದ್ದಿಯ ತಲೆಗೆರೆ ನೋಡಿಪ್ಪಾಗಳೇ ಗೊಂತಕ್ಕು. ಗೊಂತಿಲ್ಲದ್ದೋರಿಂಗೆ – ಈ ಶುದ್ದಿ ಓದುವಾಗ ಹೇಂಗೂ ಗೊಂತಕ್ಕನ್ನೇ.
ಇದು ಹಳೇಕತೆ. ಶಂಬಜ್ಜ ಸಣ್ಣಾಗಿಪ್ಪಾಗಳೇ ಅವರ ಅಪ್ಪ – ಎಂಕಪ್ಪಜ್ಜ ಹೇಳಿಗೊಂಡಿತ್ತಿದ್ದವಾಡ. ಶಂಬಜ್ಜನಿಂದ ಮತ್ತೆ ರಂಗಮಾವಂಗೆ ಬಂದು, ಅವು ಅವರ ಪುಳ್ಳಿ ವಿನುವಿಂಗೆ ಹೇಳುವಾಗ ಒಪ್ಪಣ್ಣಂಗೆ ಕೇಳಿ ಗೊಂತಾದ್ಸು.
~
ನಮ್ಮೂರಿಲಿ ಮದಲಿಂಗೆ ಅಜ್ಜಂದ್ರ ಕಾಲಲ್ಲಿ ಹಲವೂ ಕತೆಗೊ ಇದ್ದತ್ತು. ನಮ್ಮ ಊರಿನ ಜೆನಜೀವನಕ್ಕೆ ಸಮ್ಮಂದಪಟ್ಟದು, ಅಥವಾ ನಮ್ಮ ಊರಿಲಿ ಬೆಳದು ಆಗಿ ಹೋದ ಮಹಾನ್ ವೆಗ್ತಿಗೊಕ್ಕೆ ಸಮ್ಮಂದಪಟ್ಟದೋ, ಒಂದು ನಮುನೆಲಿ ಅದು “ಜಾನಪದ ಕತೆ”ಗೊ. ಕಣ್ಯಾರ ಕಿಟ್ಟಣ್ಣ ದೇವಸ್ಥಾನ ಒಳಿಶಿಗೊಂಡದು, ಜಗಜಟ್ಟಿ ಬಾಚ ಕೊಪ್ಪರಂದ ಎಣ್ಣೆ ಹಿಂಡಿದ್ದು, ಕುಂಞಿಪ್ಪಕ್ಕಿ ಕುಂಬ್ಳೆಅರಸುವಿನ ಮನಸ್ಸು ಗೆದ್ದದು – ಹೀಂಗಿರ್ತ ಕತೆಗೊ. ಮದಲಿಂದ ನಮ್ಮ ಕುಂಞಿಮಕ್ಕೊಗೆ ಅದನ್ನೇ ಹೇಳಿಗೊಂಡು ಒರಗುಸಿದ್ದು ಅಮ್ಮಂದ್ರು. ಹೆಚ್ಚುಕಮ್ಮಿ ಡಿಂಗ ಬಪ್ಪನ್ನಾರವೂ ಈ ಕತೆಗೊ ಇದ್ದತ್ತು. ಆದರೆ ಈಗಾಣ ಟೀವಿ, ರೈಮ್ಸು, ಬಾಲಹನುಮನ ಎಡಕ್ಕಿಲಿ ಹೀಂಗಿರ್ತ ಕತೆಗೊ ಕಾಣೆ ಆಗಿಂಡು ಹೋಗಿ, ನಮ್ಮ ಹಳಬ್ಬರ ಗಮ್ಮತ್ತೇ ಮಾಯಕ ಆಯಿದು.

ಹಾಂಗಿರ್ತ ಕತೆಗಳಲ್ಲಿ ಒಂದು – ಈ ಪಟದ ಗುಡ್ಡೆ.
ಪಟ ಹೇದರೆ ಯೇನಂಕೂಡ್ಳಣ್ಣ, ಹಳೆಮನೆ ಅಣ್ಣ ತೆಗೆತ್ತ ಪಟ ಅಲ್ಲ, ಪಟ ಹೇದರೆ ಪಟಹ. ಪಟಹಕ್ಕೆ ಹಕಾರ ಇದ್ದರೂ ನಮ್ಮ ಅಜ್ಜಂದ್ರ ಬಾಯಿ ಉದಾಸಿನಲ್ಲಿ ಹಕಾರ ಮಾಯ ಆಗಿ “ಪಟ” ಆಗಿದ್ದತ್ತು.
ಹಾಂಗಾಗಿ ಈ ಪಟಹದ ಗುಡ್ಡೆಯೂ – ಪಟದ ಗುಡ್ಡೆ ಆಗಿಹೋತು!
~
ಅದಾ, ನಾವು ಕಳುದ ವಾರ ಮಾತಾಡಿದ್ದಲ್ಲದೋ, ಪಟಹದ ಬಗ್ಗೆ? ತೋಂ..ಪಟ..ತೋಂ..ಪಟ..ತೋಂ..ತೋಂ ಹೇಳುವ ತಾಳವಾದ್ಯದ ಬಗ್ಗೆ.. ಅದರ ತಾಳ ಸುರು ಅಪ್ಪದ್ದೇ, ತಂತ್ರಿಗೊ ತಂತ್ರ ತೂಗುವ ಬಗ್ಗೆ ಇತ್ಯಾದಿ? ನೆಂಪಿಲ್ಲದ್ದರೆ ಒಂದರಿ ಓದಿಕ್ಕಿ. (ಸಂಕೊಲೆ). ಆ ಶುದ್ದಿ ಹೇಳುವಾಗಳೇ ಒಪ್ಪಣ್ಣಂಗೆ ಈ ಕತೆ ನೆಂಪಾಯಿದು. ಆದರೂ, ಒಂದು ವಾರ ಕಾದ್ದು ಈ ಶುದ್ದಿ ಹೇಳುಲೆ. ಇಂದು ಹೇಳ್ತೆ.
~
ಪಟಹದ ತಾಳಕ್ಕೂ, ತಂತ್ರ ತೂಗುವ ವೇಗಕ್ಕೂ ಹೊಂದಾಣಿಕೆ, ಅತ್ತಿತ್ತೆ ನಂಬಾಣಿಕೆ ಬೇಕು – ಹೇಳ್ತ ತಾತ್ಪರ್ಯಕ್ಕೆ ಈ ಕಥೆ.
~

ಒಂದಾನೊಂದು ಕಾಲಲ್ಲಿ ಒಂದು ದೇವಸ್ಥಾನಲ್ಲಿ – ಯೇವದೋ ಒಂದು ದೇವಸ್ಥಾನ ಹೇದು ಕಲ್ಪನೆ ಮಾಡಿಗೊಳ್ಳಿ. ಅದು ಮಧೂರೇ ಆಯಿಕ್ಕು, ಅಲ್ಲದ್ದರೆ ಪುತ್ತೂರೇ ಆಗಿಕ್ಕು – ಒಂದು ದೇವಸ್ಥಾನಲ್ಲಿ ಜಾತ್ರೆ. ಒರಿಶಂಪ್ರತಿ ಜಾತ್ರೆ ಇರ್ತು, ಅದೆಂತ ವಿಶೇಷ ಹೇದು ಕೇಳುವಿ ನಿಂಗೊ. ಆದರೆ ಆ ಜಾತ್ರೆಲಿ ಒಂದು ವಿಶೇಷ ಆಗಿದ್ದತ್ತು. ಯೇವತ್ತೂ ಬತ್ತ ತಂತ್ರಿಗೊಕ್ಕೆ ಅದೇ ದಿನ ಇನ್ನೊಂದು ಒಪ್ಪಿಗೊಂಡದು ಇದ್ದ ಕಾರಣ ಬಪ್ಪಲಾಯಿದಿಲ್ಲೆ; ಅವರ ಪಗರಕ್ಕೆ ಅವರ ಮಗ – ಸದ್ಯ ಕಲ್ತು ಆಗಿ ತಂತ್ರಸಮುಚ್ಚಯ ಅಭ್ಯಾಸ ಮಾಡ್ತಾ ಇಪ್ಪ ವಿದ್ಯಾರ್ಥಿ – ಅಪ್ಪನ ಪಗರಕ್ಕೆ ಬಂದದು.

ಹೊಸ ಮಾಣಿ ತಂತ್ರಿ ಆವುತ್ತನಷ್ಟೇ. ಬೆಳವಣಿಗೆಯ ಹಂತಲ್ಲಿದ್ದನಷ್ಟೇ.
ತಂತ್ರ ತೂಗಲೆ ಅರಡಿತ್ತರೂ, ಪೂರ್ಣ ಪರಿಣತಿ ಆಗದ್ದ ಕಾರಣ ವೇಗ ಇಲ್ಲೆ ಪಾಪ. ಹೊಸಬ್ಬ ಆದ ಕಾರಣ ಅಪ್ಪನಷ್ಟು ಅನುಷ್ಠಾನವೂ ಇಲ್ಲೆಯೋ ಏನೋ. ಅನುಷ್ಠಾನ ಇದ್ದರೂ,ಅವನ ಅಪ್ಪನಷ್ಟು ಗಾಯತ್ರಿ ಮಾಡಿಪ್ಪಲೆ ಇಲ್ಲೆ, ಹಾಂಗಾಗಿ ತಪೋಶಕ್ತಿಯೂ ರಜ ಕಮ್ಮಿಯೋ ಏನೋ. ವೃತ್ತಿ ಆರಂಭಲ್ಲಿ ಎಲ್ಲೋರುದೇ ಹಾಂಗೇ ಅಲ್ಲದೋ .
ಬಟ್ಟಮಾವನ ಮಗ ಸುರೂ ಒಂದು ದೊಡ್ಡ ಹೋಮವೋ, ತ್ರಿಕಾಲಪೂಜೆಯೋ ಮಣ್ಣ ಮಾಡ್ತರೆ ಒಂದು ರಜ್ಜ ಹೊಸಬ್ಬರ ಲಕ್ಷಣ ಕಾಣದ್ದೆ ಇರ. ಮೇಸ್ತ್ರಿಯ ಮಗ ಸುರೂ ಕೆಲಸ ಮಾಡುವಾಗ ರಜ್ಜ ನಿಧಾನ ಆಗದ್ದಿರ. ಅಡಕ್ಕೆ ಕೊಯಿತ್ತ ಬಾಬುವ ಮಗ ಹತ್ತಲೆ ಸುರುಮಾಡ್ವಗ ರಜ್ಜ ತಡವಾಗದ್ದೆ ಇರ. ತಂತ್ರ ತೂಗುದರ್ಲಿಯೂ ಹಾಂಗೇ. ಇರಳಿ.

~

ಆದರೆ, ಆ ಮಾಣಿಯ ಅಪ್ಪ – ದೊಡ್ಡತಂತ್ರಿಗೊಕ್ಕೂ, ಪಟಹ ಬಾರ್ಸುವ ಮಾರಾಯಂಗೂ ಮೊದಲೇ ಒಂದು ನಮುನೆ ಸಮ್ಮಂದ ಸರಿ ಇದ್ದತ್ತಿಲ್ಲೇಡ. ವೃತ್ತಿಜೀವನಲ್ಲಿ ಬಂದ ದ್ವೇಷ ಅದು. ತಂತ್ರಿಗೊ ಹೇಳಿದಾಂಗೆ ಆತು, ತಾನು ಮಾಡಿದ್ದು ನೆಡೆತ್ತಿಲ್ಲೆ – ಹೇದು ಅದರ ಮನಸ್ಸಿಂಗೆ ಬಂದ ಅಹಂಭಾವ ಬೆಳದು ಬೆಳದು – ಒಂದು ದಿನ ಈ ತಂತ್ರಿಗೊಕ್ಕೆ ಕಲಿಶುತ್ತೆ – ಹೇದು ಹಠ ಮಡಗುವನ್ನಾರ ಬೆಳದತ್ತು. ಆದರೆಂತ ಮಾಡುದು? ಅನುಷ್ಠಾನಪರರೂ, ತಂತ್ರಶಿರೋಮಣಿಯೂ, ವಾಕ್ಚತುರನೂ ಆದ ಆ ತಂತ್ರಿಗಳ ಎಲ್ಲಿಯೂ ಬಗ್ಗುಸುಲೆ ಎಡಿಗಾಯಿದಿಲ್ಲೆ ಈ ಪಟಹದ ಮಾರಾಯಂಗೆ. ಸಮಯಸಾಧುಸಿ ಕಾದು ಕಾದು ಹೊಂಚುಹಾಕಿದ ಮಾರಾಯಂಗೆ ಇಂದು ಸಮಯ ಸಿಕ್ಕಿತ್ತು. ಅಪ್ಪಂಗೆ ಪುರುಸೊತ್ತು ಇಲ್ಲದ್ದೆ ಮಗನ ಕಳುಸಿಕೊಟ್ಟ ಸಮಯವ ತನ್ನ ಮನಸ್ಸಿಲಿದ್ದ ಸೇಡಿನ ತೋರ್ಸುಲೆ ಉಪಯೋಗುಸಿತ್ತು ಮಾರಾಯ.

ಪಟದ ಮಾರಾಯ ತಂತ್ರಿಗಳ ಮೇಗೆ ಅದರ ಕೋಪ ತೋರುಲೆ ಇಪ್ಪ ಅವಕಾಶ ಯೇವದು? ಅವಕ್ಕಿಬ್ರಿಂಗೆ ಇದ್ದಿದ್ದ ಸಂಪರ್ಕಸೇತು ಯೇವದೋ – ಅದುವೇ. ತಂತ್ರಿಗೊಕ್ಕೂ, ಪಟದ ಮಾರಾಯಂಗೂ ಇರೆಕ್ಕಾಗಿಪ್ಪ ಏಕಲಯ ಯೇವದು? ಗಣಂಗಳ ಸಂಪ್ರೀತಿಮಾಡುವ ಬಲಿಕಾರ್ಯಕ್ರಮ.

ದೇವರ ಹೊರುವೋರು ದೇವರ ಹೊತ್ತುಗೊಂಡು ನಿಂದಿದವು. ಹಿಂದಂದ ಕೊಡೆ ಹಿಡ್ಕೊಂಡು ಇದ್ದವು. ಊರ ನೂರಾರು ಸಮಸ್ತರು ಗೌಜಿ ನೋಡ್ಳೆ ಬಯಿಂದವು. ಮಾಣಿತಂತ್ರಿಗೊ ಶ್ರದ್ಧೆಲಿ ತಂತ್ರ ತೂಗುಲೆ ಸುರು ಮಾಡಿದ್ದವು. ಮಾರಾಯ ಪಟಹ ಸುರು ಮಾಡಿತ್ತು. ಸುರುವಿಂಗೆ ಮೆಲ್ಲಂಗೇ ಸುರುಮಾಡಿದರೂ, ತಂತ್ರಿಗಳ ಕಷ್ಟಬರುಸೇಕು – ಹೇಳ್ತ ಕಾರಣಕ್ಕೇ ಹೊಣಕ್ಕೊಂಡಿದ್ದ ಕಾರಣ – ತಾಳವ ಏರುಸಿತ್ತು. ವಿಲಂಬಿತ ಹೋಗಿ ಧ್ರುತ ಕ್ಕೆ ಎತ್ತಿತ್ತು. ಮಗುಮಾವನ ಕಾರಿನ ಹಾಂಗೆ ಮೆಲ್ಲಂಗಿದ್ದ ಪಟಹದ ತಾಳ ಈಗ ರೂಪತ್ತೆಯ ಕಾರಿನ ಹಾಂಗೆ ಬೇಗಬೇಗ ಅಪ್ಪಲೆ ಸುರು ಆತು.

ತಾಳ ಏರಿದ ಹಾಂಗೇ ಎಂತಾವುತ್ತು?
ಆಯಾ ತಾಳಕ್ಕೆ ಹೊಂದಿಗೊಂಡ ಗಣಂಗೊ ಬತ್ತವು.
ಬಂದ ಕೂಡ್ಳೆ ಎಂತಾಯೆಕ್ಕು? ಅವಕ್ಕೆ ಷೋಡಷೋಪಚಾರವೇ ಇತ್ಯಾದಿ ಪೂಜೆಗೊ ಸಿಕ್ಕೆಕ್ಕು, ಪತ್ರೆಸೊಪ್ಪೇ ಇತ್ಯಾದಿ ನೈವೇದ್ಯಂಗೊ ಸಿಕ್ಕೇಕು, ಒಟ್ಟಿಲಿ ತಂತ್ರಿಗೊ ತಂತ್ರವೂ ಬೇಗಬೇಗ ತೂಗೇಕು.
ಪಟದ ತಾಳ ಜೋರಾದರೆ ತಂತ್ರವೂ ಜೋರಾಯೇಕು. ಪಟದ ತಾಳ ನಿಧಾನ ಆದರೆ ತಂತ್ರತೂಗುದೂ ನಿಧಾನ ಆಯೇಕು.
ಆದರೆ, ಆ ದಿನ ಎಂತಾಗಿತ್ತು?
ತಂತ್ರಿಗೊ ಹೊಸಬ್ಬರು. ಪಟದ ಜೆನ ಹಳಬ್ಬ – ಹೆರಿಯತಂತ್ರಿಗಳ ಸಮಪ್ರಾಯದ್ದು.

ಜೋ..ರು ಬಾರ್ಸಿತ್ತು ತಾಳವ.
ತೆಕ್ಕೊಳೀ, ಗಣಂಗೊ ಬಂದವು ಬಂದವು, ಬಂದೇ ಬಂದವು. ಆದರೆ ಈ ಮಾಣಿತಂತ್ರಿಗೆ ಕೊಟ್ಟುಗೊಂಬಲೆ ಎಡಿಗಾಯಿದಿಲ್ಲೆ.
ವರ್ಷ ಇಡೀ ಜಾತ್ರೆ ದಿನಕ್ಕೆ ಕಾದ ಗಣಂಗೊಕ್ಕೆ ಆ ದಿನ ಬಪ್ಪಲೆ ಹೇಳಿಯೂ ಇನ್ನೂ ಸಿಕ್ಕದ್ದ ಕಾರಣ ಪಿಸುರು ಬಂತು.
ತಂತ್ರಿಮಾಣಿಯನ್ನೇ ತೆಕ್ಕೊಂಡು ಹೋಪಲೆ ಹೆರಟವು.

~

ಹೆರಿಯ ತಂತ್ರಿಗಳ ಗುರ್ತದೋರು, ತಂತ್ರ ಅರಡಿತ್ತ ಬಟ್ಟಮಾವ ಒಬ್ಬರು ಆ ದಿನ ಆ ದೇವಸ್ಥಾನದ ಕರೆಲಿ ಆಗಿ ಹೋಗಿಂಡು ಇತ್ತಿದ್ದವಕ್ಕೆ – ಮಾಮೂಲಿಂದಲೂ ಬೀಸಕ್ಕೆ ಪಟಹದ ತಾಳ ಕೇಳಿತ್ತು. ಎಂತಪ್ಪಾ ಇಷ್ಟು ಬೀಸಕ್ಕೆ ಬಡಿತ್ತೂ’ದು ಆಲೋಚನೆ ಬಂತು.
ಕೂಡ್ಳೇ ಅಂದಾಜಿ ಆತು, ಇಂದು ತಂತ್ರಿಗೊ ಇಂತಲ್ಲಿಗೆ ಹೋಯಿದವು, ಇಲ್ಲಿಗೆ ಬಯಿಂದವಿಲ್ಲೆ. ಅವರ ಮಗ ಬಂದದು ಹೊಸಬ್ಬ. ಈ ಮಾರಾಯ ಆ ಮಾಣಿಯ ಲಗಾಡಿ ತೆಗವಲೆ ಹೊಣೆತ್ತಾ ಇದ್ದು – ಹೇದು!!
ತಡವು ಮಾಡಿದ್ದವಿಲ್ಲೆ, ಸೀತ ದೇವಸ್ಥಾನಕ್ಕೆ ಬಂದವು, ಶುದ್ಧ ಆಗಿಂಡವು. ತಂತ್ರ ತೂಗಲೆ ನಿಂದ ಮಾಣಿಯ ಹತ್ತರಂಗೆ ಓಡಿದವು.

ಅದಾಗಲೇ ಪಿಸುರು ತುಂಬಿದ ಗಣಂಗೊ ಆ ಮಾಣಿತಂತ್ರಿಯ ಕೊಂಡೋಪಲೆ ನೆಲಕ್ಕಂದ ಮೇಲೆ ನೆಗ್ಗಿತ್ತಿದ್ದವಾಡ. ಬಟ್ಟಮಾವ ಬಂದದೇ, ಮಾಣಿಯ ಎಳದ್ದು ನೆಲಕ್ಕಲ್ಲಿ ನಿಲ್ಲುಸಿದವಾಡ, ಮಾಣಿತಂತ್ರಿಯ ಕೈಲಿದ್ದ ಕೈಬಟ್ಳಿನ – ತಂತ್ರಿಗಳ ಕೈಲಿಪ್ಪ ಕೌಳಿಗೆಗೆ ಕೈಬಟ್ಳು ಹೇಳ್ತವು – ಕೈಬಟ್ಳಿನ ಬಲುಗಿದವಾಡ.

ತಂತ್ರ ತೂಗಲೆ ಅರಡಿವ ಕಾರಣ, ಬಂದು ಕಾದು ನಿಂದ ಗಣಂಗೊಕ್ಕೆ ಸಂತೃಪ್ತಿ ಅಪ್ಪಷ್ಟು ಧಾರೆ ಎರದವು. ನೀರು, ಹೂಗು, ನೈವೇದ್ಯ, ಪತ್ರೆ ಎಲೆ, ಎಲ್ಲವುದೇ ಕೊಟ್ಟವು. ಕೊಟ್ಟೇ ಕೊಟ್ಟವು. ಅಗಾಧ ವೇಗಲ್ಲಿ ಕೊಟ್ಟವು. ಕೊಡುವ ವೇಗಲ್ಲಿ ಗಣಂಗೊ ಸಂತೋಷ ಆದವು. ಕಾದು ನಿಂದ ಗಣಂಗೊ ಪೂರ್ತಿ ಖುಷಿಪಟ್ಟವು.
ತಂತ್ರ ತೂಗುದು ನಿಲ್ಲುಸಿದ್ದವಿಲ್ಲೆ.
ಈಗ ನಿಧಾನ ಆದ್ಸು ಪಟಹದ ತಾಳವೇ ಸರಿ!
ಈಗ ಗಣಂಗೊಕ್ಕೆ ತಾಳ ಇಲ್ಲೆ, ಊಟ ತಯಾರಿದ್ದು.
ತಾಳಕ್ಕೆ ಕಾದು ಊಟಕ್ಕೆ ಬಂದರೆ ತಣಿತ್ತು. ಆದರೆ ತಂತ್ರಿದು ಏನೂ ತಪ್ಪಿಲ್ಲೆ, ಪಟದ ಮಾರಾಯ ಮೊದಲೇ ದಿನಿಗೆಳೇಕಾತು.

ಈಗ ಗಣಂಗೊಕ್ಕೆ ಕೋಪ ಬಂದದು ಮಾರಾಯನ ಮೇಗೆ.
ತೆಕ್ಕೊಳೀ – ತಂತ್ರಿಗಳ ಮಗನನ್ನೇ ಒಂದು ಕೋಲು ಎತ್ತರುಸಿದ್ದವಾಡ ಆ ದೇವಸ್ಥಾನದ ಗಣಂಗೊ, ಇನ್ನು ಕಳ್ಳುಕುಡಿತ್ತ ಮಾರಾಯನ ಬಿಡುಗೋ? ಬಿಡವು.
ಹಾಂಗೇ ಆತು.
ತಂತ್ರ ತೂಗಿಂಡಿದ್ದ ಹಾಂಗೇ – ಪಟಹ ಬಡಿತ್ತ ಮಾರಾಯ ಒಂದರಿಯ ಮೇಗಂಗೆ ಹಾರಿತ್ತಾಡ. ಜೆನಂಗೊ ನೋಡಿಂಡಿಪ್ಪ ಹಾಂಗೇ ಸೀತಾ – ಓ –ಅಲ್ಲಿ, ದೇವಸ್ಥಾನದ ಬಲದ ಹೊಡೆಲಿದ್ದ ದೊಡಾ ಗುಡ್ಡೆ ಕೊಡಿಯಂಗೆ ಹೋಗಿ ಬಿದ್ದತ್ತಾಡ.

ಹಾಂಕಾರಿ ಮಾರಾಯ ಆ ದಿನ ಗುಡ್ಡೆಕೊಡಿಯಂಗೆ ಬಿದ್ದ ಮತ್ತೆ ಆರುದೇ ಕಂಡಿದವಿಲ್ಲೆ. ಆದರೆ, ಅದು ಹೋಗಿ ಬಿದ್ದ ಜಾಗೆಂದ ನಿತ್ಯವೂ ಪಟಹ ಬಡುದ ಶಬ್ದ ಕೇಳಿಗೊಂಡು ಇದ್ದತ್ತಾಡ. ಹಾಂಗಾಗಿ ಆ ಗುಡ್ಡೆಗೆ ಪಟದ ಗುಡ್ಡೆ – ಹೇದು ಹೆಸರಿದ್ದಾಡ. ಆ ದಿನ ತನ್ನ ಮಗನ ಒಳಿಶಿದ ಆ ಭಟ್ಟಮಾವಂಗೆ ತಂತ್ರಿಗೊ ಬಹುಮಾನ ಕೊಟ್ಟವಾಡ. ಹಾಂಕಾರಿ ಪಟದ ಮಾರಾಯ ಇಲ್ಲದ್ದೆ ಆದ್ಸಕ್ಕೆ ಊರೋರು ಕುಶಿಪಟ್ಟವಾಡ.
~
ಹೇಂಗೆ ಕತೆ?
ಕೇಳುವಾಗ ರೋಮ ಕುತ್ತ ಆದರೂ ಒಂದು ನೀತಿ ಇದ್ದು, ನಮ್ಮ ಊರಿನ ಜಾನಪದ ಲಕ್ಷಣ ಇದ್ದು.
ಅದರೊಟ್ಟಿಂಗೆ, ಎರಡು ಜೆನ ಸೇರಿ ಕೆಲಸ ಮಾಡುವಾಗ ಹೇಂಗೆ ಹೊಂದಾಣಿಕೆ ಅಗತ್ಯ – ಹೇದು ಸೂಕ್ಷ್ಮಲ್ಲಿ ಹೇಳ್ತು. ಇನ್ನೊಬ್ಬನ ಮುಳುಂಗುಸುಲೆ ನಾವು ಹೆರಟ್ರೆ, ಆ ಮುಳುಗುನೀರು ನಮ್ಮ ಕೊರಳಿಂಗೇ ಬತ್ತು – ಹೇಳ್ತದನ್ನೂ ಈ ಕತೆ ಹೇಳಿಕೊಡ್ತು.

ಎಂತ ಹೇಳ್ತಿ?
~
ಒಂದೊಪ್ಪ: ದೇವರಿಂಗೆ ಎಲ್ಲೋರುದೇ ಬೇಕು. ಮಾಂತ್ರ ಅಲ್ಲ, ಎಲ್ಲೋರುದೇ ಒಂದೇ ತಾಳಲ್ಲಿ ಇರೆಕ್ಕು. ಹಾಂಗಾರೆ ಮಾಂತ್ರ ದೇವರಿಂಗೆ, ದೇವಗಣಂಗೊಕ್ಕೆ ಕುಶಿ ಅಕ್ಕು. ಅಲ್ಲದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಒಳ್ಳೆ ಅರ್ಥಪೂರ್ಣ ಕತೆ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ. ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 3. parvathimbhat
  parvathimhat

  ಮರದ ಹುಳು ಮರವನ್ನೇ ತಿ೦ಬದು ಹೇಳುವ ಗಾದೆ ನೆ೦ಪಾತು .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಪುಟ್ಟಬಾವ°ತೆಕ್ಕುಂಜ ಕುಮಾರ ಮಾವ°ಚುಬ್ಬಣ್ಣಪ್ರಕಾಶಪ್ಪಚ್ಚಿಮುಳಿಯ ಭಾವಶರ್ಮಪ್ಪಚ್ಚಿವೇಣೂರಣ್ಣಪುಣಚ ಡಾಕ್ಟ್ರುಬೊಳುಂಬು ಮಾವ°ವಿಜಯತ್ತೆಗಣೇಶ ಮಾವ°ಶ್ಯಾಮಣ್ಣಚೆನ್ನೈ ಬಾವ°ಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಅಡ್ಕತ್ತಿಮಾರುಮಾವ°ನೆಗೆಗಾರ°ಸರ್ಪಮಲೆ ಮಾವ°ವೇಣಿಯಕ್ಕ°ಅನಿತಾ ನರೇಶ್, ಮಂಚಿಅನು ಉಡುಪುಮೂಲೆಬಂಡಾಡಿ ಅಜ್ಜಿಅನುಶ್ರೀ ಬಂಡಾಡಿಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ