ಪುಳ್ಳಿಮಾಣಿ ಕಂಪ್ಯೂಟರಿಲಿ ಸೆಸಿ ನೆಡ್ತನಡ..!

June 18, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಸರ್ತಿಯುದೇ ಆಚಕರೆ ತರವಾಡು ಮನೆ ಶುದ್ದಿ.
ಮನಸ್ಸಿಂಗೆ ಹತ್ತರಾಣ ಶುದ್ದಿ ಎಷ್ಟು ಮಾತಾಡಿರೂ ಬೊಡಿತ್ತಿಲ್ಲೆ ಇದಾ..! 😉

ಕಟ್ಟಾ ಕೃಷಿಕ° ಶಂಬಜ್ಜ° ಆ ತರವಾಡು ಮನೆ-ಜಾಗೆಯ ಎಷ್ಟು ಅಭಿವೃದ್ಧಿಗೆ ತೆಕ್ಕೊಂಡೋದವು ಹೇಳ್ತದರ ನಾವು ಮೊದಲೇ ಮಾತಾಡಿದ್ದು.
ಹಡಿಲು ಬಿದ್ದ ಆ ತೋಟವ ಹಸಿರು ಮಾಡಿ, ಸಾರಡಿತೋಡಿಂದ ಜೊಟ್ಟೆಮೊಗಚ್ಚಿ, ಜಾಲಕರೆಯ ನೀರಗುಂಡಿಗೆ ಎರ್ಕುಸಿ, ತೋಟ, ನೆಟ್ಟಿಕಾಯಿ, ಎಲೆಬಳ್ಳಿ, ಮೆಣಸು – ಎಲ್ಲ ಮಾಡ್ತ ಹಾಂಗೆ ವೆವಸ್ತೆ ಮಾಡಿ, ಇಡೀ ಜಾಗೆಯ ಹಸುರು ಮಾಡಿ – ತುಂಬ ಕೆಲಸ ಮಾಡಿತ್ತಿದ್ದವು, ಆ ಕಾಲಲ್ಲಿ!

ಅವರ ಮಗ° ರಂಗಮಾವಂದೇ ಏನೂ ಚಿಲ್ಲರೆ ಜೆನ ಅಲ್ಲ!
ಶಂಬಜ್ಜ° ಮಾಡಿ ಮಡಗಿದ್ದರ ಅದೇ ರೀತಿ ಮುಂದುವರುಸಿದ್ದಲ್ಲದ್ದೇ, ಮತ್ತುದೇ ಮೇಲೆ ತೆಕ್ಕೊಂಡು ಹೋಪಲೆ ನೋಡ್ತವು.
ಜೊಟ್ಟೆಮೊಗಚ್ಚುದರ ಪಂಪಿನಕೊಟ್ಟಗೆ ಮಾಡಿ ನೀರಿನ ಒಳ್ಳೆತ ಅಬಿವುರ್ದಿ(ಅಭಿವೃದ್ಧಿ) ಮಾಡಿದ್ದವು.
ಮೇಗಾಣ ಕೆಲವು ತಟ್ಟುಗಳಲ್ಲಿ ಅಡಕ್ಕೆ ಸೆಸಿ ಮಡಗಿದ್ದೋ, ವೆನಿಲ್ಲ, ಏಲಕ್ಕಿ ಮಾಡಿದ್ದೋ, ಗೆಣಮೆಣಸು ಮಡಗಿದ್ದೋ – ಇದೆಲ್ಲ ರಂಗಮಾವನದ್ದೇ ಜೆಂಬಾರ.
ಮಣ್ಣಿನ ಗಿಟ್ಟೆಗಿಟ್ಟೆಲಿದೇ ರಂಗಮಾವನ ಬೆಗರಿದ್ದು.
ಈಗಳೂ ಬೊಡಿತ್ತಷ್ಟು ಕೆಲಸ ಮಾಡುಗು. ’ಕೆಲಸಕ್ಕೆ ಜೆನವೇ ಸಿಕ್ಕುತ್ತವಿಲ್ಲೆ’ ಹೇಳಿ ಒಂದು ಬೇಜಾರು ಇದ್ದರೂ, ‘ಮಾಪ್ಳೆಗೊಕ್ಕೆ ಆದರೂ ಕೊಟ್ಟಿಕ್ಕಿ ಒಂದಾರಿ ಇಲ್ಲಿಂದ ಹೋತಿಕ್ಕುವೊ°’ ಹೇಳಿ ಪಿಸುರಿಲಿ ಬೊಡುದಪ್ಪಗ, ಅಂಬಗಂಬಗ ಹೇಳಿರೂ, ಮನಸ್ಸಿಂದ ಹೇಳ್ತವಿಲ್ಲೆ.
ಅಲ್ಯಾಣ ಬೂತದ ಚಾಕ್ರಿಯೋ, ಜಾಗೆಕರೆ ತೋಡನ್ನೋ ಎಲ್ಲ ನೋಡುವಗ ’ಆನು ಸಾವದು ಇದೇ ಜಾಗೆಲಿ’ ಹೇಳಿ ಮನಸ್ಸು ಮಾಡಿಗೊಂಗು.
ಹೆಸರಿಂಗೆ ದಕ್ಕಿತ ಆದರೂ ಗೆದ್ದೆ ಒಳಿಶಿಗೊಂಡಿದವು, ಕ್ರಮಕ್ಕೆ ಹೂಡ್ಳೆ. ಏಣಿಲು, ಸುಗ್ಗಿ ಮಾಂತ್ರ ಮಾಡುದು..
ಅದರ ಮೇಗಂದ, ಸಮಯ ಬಪ್ಪಗ ಎಡಿಗಾದಷ್ಟು ನೆಟ್ಟಿ ತರಕಾರಿ ಮಾಡುಗು. ಸೌತ್ತೆಯೋ, ಕುಂಬ್ಳವೋ, ಚೆಕ್ಕರ್ಪೆಯೋ, ಹೀಂಗೆಂತಾರು!
~

ಶಾಂಭಾವ°; ರಂಗಮಾವನ ಮಗ° – ಪಾತಿಅತ್ತೆಯ ಮುದ್ದಿನ ಕಣ್ಣು.
ಕಾಂಬಲೆ ರಜಾ ಪಾತಿಅತ್ತೆಯ ಅಪ್ಪನ ಹಾಂಗೆ ಅಡ, ಹಾಂಗಾಗಿ ಪ್ರೀತಿ ರಜಾ ಜಾಸ್ತಿ. ಸಣ್ಣ ಇಪ್ಪಗಳೇ ಹಾಂಗೆ, ನೆಡದರೆ ಬೇನೆ ಆಗಿ ಹೋಕು- ಹೇಳಿ ಬೆಳಶಿತ್ತು.
ಒಬ್ಬನೇ ಮಗ° ಇದಾ, ಹಾಂಗಾಗಿ ಬಾರೀ ಕೊಂಗಾಟಲ್ಲಿ ಸಾಂಕಿದ್ದು!
ರಂಗಮಾವ° ಪಾತಿಅತ್ತೆಯ ಕೊಂಗಾಟ ಮಾಡಿದ್ದರಿಂದಲೂ ಜಾಸ್ತಿ, ಪಾತಿ ಅತ್ತೆ ಶಾಂಭಾವನ ಕೊಂಗಾಟ ಮಾಡಿದ್ದಡ! 😉
ರಂಗಮಾವ° ತೋಟಕ್ಕೆ ಹೋದರೂ ಈ ಮಾಣಿ ಹೋಗ°, ಸಣ್ಣ ಇಪ್ಪಗ. ದೊಡ್ಡ ಆದ ಮತ್ತೆ ಅದೇ ಪಾಟ ಅಲ್ಲದೋ ಬಪ್ಪದು, ಇಂದಿಂಗೂ ಅವ° ತೋಟಕ್ಕೆ ಹೋಪದು ಕಮ್ಮಿಯೇ.
ಅವನ ಮಗನ ಆಟದ ಚೆಂಡು ತೋಟದೊಳದಿಕ್ಕಂಗೆ ಹೋದರೆ ಒಂದರಿ ಜೋಡು ಹಾಯ್ಕೊಂಡು ಅದರ ತಪ್ಪಲೆ ಹೋಕು – ಅಷ್ಟೇ.
ಅವಂಗೊಂದು ಹೆಂಡತ್ತಿ – ವಿದ್ಯಕ್ಕ°. ರಂಗಮಾವ° ಮಾಡಿದ ಚೆಕ್ಕರ್ಪೆ ಬಳ್ಳಿಲಿ ಅರೆವಾಶಿ ಮುಗುಶುದು ಇದುವೇ!
ಬಾರೀ ಆರಾಮಕ್ಕೆ ಬದುಕ್ಕಿದ್ದು – ಅಮೇರಿಕಲ್ಲಿಪ್ಪ ಅದರ ಅಕ್ಕನ ಮನೆಯ ಹಾಂಗೇ ಈ ಮನೆಯೂ ಇರೆಕ್ಕು ಹೇಳಿ ಗ್ರೇಶಿಗೊಂಡು ಇದ್ದು!
~

ಅವಕ್ಕುದೇ ಒಬ್ಬನೇ ಮಗ°, ಇಷ್ಟ್ರೊರೆಗೆ! ಇನ್ನು ಆಗ ಹೇಳ್ಳೆಡಿಯ, ಅದಿರಳಿ!
ವಿನು ಹೇಳಿ ಹೆಸರು. ಒಂದನೇ ಕ್ಲಾಸು ಈಗ. ಇಂಗ್ರೋಜಿ ಶಾಲಗೆ ಹೋಪದು, ಚೀಲ ನೇಲುಸಿಗೊಂಡು.
ಬರವಲೆ ಕಂಡಾಬಟ್ಟೆ ಇರ್ತಿದಾ, ಹಾಂಗಾಗಿ ಅವಂಗೆ ಹೇಳಿಯೇ ಒಂದು ಕೋಣೆ ಮಡಗಿದ್ದು, ಮದಲಿಂಗೆ ಶಂಬಜ್ಜ ಒಯಿವಾಟು ಬರಕ್ಕೊಂಡಿದ್ದ ಕೋಣೆ ಅದು!
ಮಾಣಿಗೆ ಇಂಜಿನಿಯರು ಕಲುಶುದಡ, ವಿದ್ಯಕ್ಕನ ತಮ್ಮನ ಹಾಂಗೇ!
ಮಾಣಿಗೂ ಆ ಆಸಕ್ತಿ ಬರೆಕ್ಕು ಹೇಳ್ತ ಉದ್ದೇಶಲ್ಲಿ ಸಣ್ಣ ಇಪ್ಪಗಳೇ ಅವನ ತಲಗೆ ತುಂಬುಸಿಗೊಂಡು ಇದ್ದು – ನೀನು ದೊಡ್ಡ ಇಂಜಿನಿಯರು ಅಪ್ಪದು, ನೀನು ಇಂಜಿನಿಯರು ಆದ ಮತ್ತೆ ದೊಡ್ಡ ಕಾರು ತೆಗವ°, ಹಾಂಗೆ ಮಾಡುವ°, ಹೀಂಗೆ ಮಾಡುವ° – ಇತ್ಯಾದಿ..
ಇಂಜಿನಿಯರು ಆಯೆಕ್ಕಾರೆ ಎಂತೆಲ್ಲ ಇರೆಕ್ಕೋ – ಅದರ ಎಲ್ಲ ಈಗಳೇ ಅವನ ತಲಗೆ ತುರುಕ್ಕಿಯೊಂಡು ಇದ್ದು ಆ ವಿದ್ಯಕ್ಕ°!
ಹೆರ ಹೋಗಿ ಮಣ್ಣು ಹಿಡುಸಿಗೊಂಡು ಹೊತ್ತು ಕಳದರೆ ಇಂಜಿನಿಯರು ಅಪ್ಪಲೆಡಿಯ ಹೇಳ್ತಲೆಕ್ಕಲ್ಲಿ, ಜಾಲಿಲಿ ಆಟ ಆಡ್ಳೆ ಇಲ್ಲೆ!
ಹಾಂಗಾಗಿ ಅವ° ಮನೆ ಒಳವೇ ಬೆಳೆತ್ತಾ ಇದ್ದ°, ಚೆಂದಕೆ – ರೂಪತ್ತೆಯ ಪ್ರಿಜ್ಜಿನೊಳದಿಕೆ ಮಡಗಿದ ನಿಂಬೆಹುಳಿಯ ಹಾಂಗೆ!!
ಮನೆಲಿ ಆರಿಲ್ಲದ್ರೂ ಆ ಮಾಣಿ ಇರ್ತ°, ನಿಘಂಟು.
~
ಅದರೊಟ್ಟಿಂಗೆ ಮೊನ್ನೆ ಮೊನ್ನೆ ಕಂಪ್ಯೂಟರು ತೆಗದುಕೊಟ್ಟವಡ, ಸಿದ್ದನಕೆರೆ ಅಪ್ಪಚ್ಚಿ ಹೇಳಿದ್ದು!
ಹೊಸಾ ನಮುನೆಯ  ತೆಳ್ಳಂಗೆ – ವಿದ್ಯಕ್ಕನ ಹಾಂಗೆ- ಟೀವಿ ಇಪ್ಪ, ಅಡ್ಡಾದಿಡ್ಡಿ ವಯರು ಇಲ್ಲದ್ದ ಕರಿ ಕಂಪ್ಯೂಟರಡ.
ನೀಲಿಬಲ್ಬು ಪಳಪಳ ಹೊಳವಗ ಕಂಪ್ಯೂಟರು ಹೊಸತ್ತು ಎಂತವಂಗೂ ಹೇಳಿ ಅನುಸಿ ಹೋವುತ್ತಡ!
ಕಂಪ್ಯೂಟರು ಆಡುವ ಆಸಕ್ತಿ ಹೋಗದ್ದೆ ಇರಳಿ ಹೇಳ್ತ ಲೆಕ್ಕಲ್ಲಿ ಯೇವದೋ ದೊಡ್ಡ ದೊಡ್ಡ ಆಟಂಗೊ ಎಲ್ಲ ಹಾಕಿ ಕೊಡುಸಿದನಡ ಶಾಂಬಾವ°.
ಕಾರು ಬಿಡುದೋ, ಯುದ್ಧಮಾಡುದೋ, ಮನೆ ಕಟ್ಟುದೋ, ಹೀಂಗೆಂತಾರು ಆಡುಗಡ.
ಅವ° ಒಳ್ಳೆತ ಉಶಾರಿ ಅಡ! ಯೇವ ಆಟ ಆದರೂ ಒಂದೇ ಸರ್ತಿ ಕಲ್ತುಗೊಂಗಡ, ನೋಡಿದ್ದರಲ್ಲಿಯೇ!
ಈಗ ಇಂಟರುನೆಟ್ಟುದೇ ಬಯಿಂದಲ್ಲದೋ – ಹಾಂಗಾಗಿ ಒಂದೆರಡಲ್ಲ, ಸಾವಿರಾರು ಆಟಂಗೊ ಸಿಕ್ಕುತ್ತಡ, ಬೇಕಾಬಿಟ್ಟಿ ಆಡ್ಳೆ..!

~
ರಂಗಮಾವ° ನವಜೀವನಲ್ಲಿ ಹತ್ತನೇ ಒರೆಂಗೆ ಕಲ್ತಿದವು – ಆ ಕಾಲಲ್ಲೇ!
ಅಂಬಗ ಎಲ್ಲ ಫೋರ್ಮು ಲೆಕ್ಕ ಇದಾ!
ಸಿಕುಸ್ತ್ ಫೋರ್ಮ್ (VI Form) ಹೇಳಿತ್ತುಕಂಡ್ರೆ ಈಗಾಣ ಎಸೆಲ್ಸಿ, ಆದರೆ ಅಂಬಗ ಅದಕ್ಕೆ ಈಗಾಣ ಇಂಜಿನಿಯರಿನಷ್ಟಕೆ ಬೆಲೆ ಇತ್ತು!
ಅಂಬಗ ಎಲ್ಲ ಹಾಂಗೇ ಇದಾ – ಊರಿಲಿ ಒಂದೋ ಬದಿಯಡ್ಕದ ನವಜೀವನ ಶಾಲೆ; ಅಲ್ಲದ್ದರೆ ದೊಡ್ಡಜ್ಜನ ಮನೆ ಹತ್ರಾಣ ರಾಜಾಸು.
ನಮ್ಮ ಊರಿಂಗಂತೂ ನವಜೀವನವೇ ಪ್ರಸಿದ್ದ. ಅಲ್ಲಿ ಕಲ್ತದು ಹೇಳಿತ್ತುಕಂಡ್ರೆ ಅದೊಂದು ಗೌರವವೇ.
~
ವಿದ್ಯೆ ಇದ್ದರುದೇ, ಕೃಷಿಯೇ ನವಗೆ ಜೀವ-ಜೀವನ ಹೇಳ್ತದರ ಘಟ್ಟಿಗೆ ನಂಬಿದೋರು ಶಂಬಜ್ಜ°. ಅದನ್ನೇ ಮಗಂಗೂ ಹೇಳಿದವು.
ಸಣ್ಣದಿಪ್ಪಗಳೇ ಮಗನನ್ನೂ ತೋಟಕ್ಕೆ ಕರಕ್ಕೊಂಡು ಹೋಗಿ ಸಣ್ಣಸಣ್ಣ ಕೆಲಸ ಮಾಡುಸಿಗೊಂಡು, ಕೆಲಸ ಕಲುಶಿಗೊಂಡು ಇತ್ತಿದ್ದವು.
ಕಾಂಬುಅಜ್ಜಿ ಮದಲಿಂದಲೇ ಶಂಬಜ್ಜ° ಬಂದ ಬಂಙಂಗಳ ಎಲ್ಲ ವಿವರುಸಿ ಹೇಳಿ ಹೀಂಗೀಂಗೆ ಜೀವನ ಹೇಳಿ ಹೇಳಿಕೊಟ್ಟುಗೊಂಡು ಇತ್ತಿದ್ದವು.
ನಾವು ಬಂದ ಬಂಙ ಮಗ ಬಪ್ಪಲಾಗ – ಒಳ್ಳೆ ಕೃಷಿ ಮಾಡಿಗೊಂಡು ಚೆಂದಲ್ಲಿ ಬದುಕ್ಕೆಕ್ಕು ಹೇಳ್ತದು ಅವರ ಆಸೆ.
ಅದಕ್ಕೆ ಬೇಕಾದ ಹಾಂಗೆಯೇ ಬೆಳೆಶಿದವುದೇ.
ರಂಗಮಾವ° ಹಾಂಗೆ ಬೆಳದರೆ ವಿನು ಹೀಂಗೆ ಬೆಳೆತ್ತಾ ಇದ್ದ°…

~
ಇಂಟರುನೆಟ್ಟಿಲಿ ಮೋರೆಪುಟ ಹೇಳಿ ಒಂದಿದ್ದಡ, ಆರು ಬೇಕಾರುದೇ ಬಂದು ಅವರವರ ಪುಟ ಮಾಡಿಗೊಂಬಲಾವುತ್ತಡ.
ಓರುಕುಟ್ಟುತ್ತ ವಿಚಾರ ಅಂದು ಮಾತಾಡಿದ ಹಾಂಗೆ – ಇದು ಅದರ ಅಜ್ಜ° ಅಡ!

ಪುಳ್ಳಿಮಾಣಿಯ ಮೋರೆಪುಟಲ್ಲಿ ಕಾಣ್ತ ಆಟದ ಮುಖಪುಟ - ಅದರ್ಲಿ ಕಾಂಬದು ಅವನ ಚೆಂಙಾಯಿಗೊ..

ಅಲ್ಲಿ ವಿನುವಿನ ಪುಟವೂ ಮಾಡಿದ್ದವಡ! ಈಗ ಅವನೇ ಕಂಪ್ಯೂಟರು ಹಾಕಿ, ಮೋರೆಪುಟಲ್ಲಿ ಒಕ್ಕುಲೆ ಅರಡಿತ್ತಡ!
ಆ ಮೋರೆಪುಟಲ್ಲಿ ಒಂದು ಆಟ ಇದ್ದಡ. ಫಾರ್ಮುವಿಲ್ಲೆ (FarmVille) – ಹೇಳಿ ಹೆಸರಡ. ಮೋರೆಪುಟಲ್ಲಿ ಪುಟ ಮಾಡಿದ ಕೂಡ್ಳೇ ಅದರ ಆಡ್ಳಕ್ಕಡ.

ಹೇಂಗೆ ಆಡುದು?

~
– ಅಲ್ಲಿ ನವಗೆ ಹೇಳಿ ರಜಾ ಜಾಗೆ ಕೊಡ್ತವಡ, ದೊಡ್ಡ ಎಕ್ರೆಗಟ್ಳೆ ಜಾಗೆ ಏನಲ್ಲ; ಕಂಪ್ಯೂಟರಿನ ಟೀವಿಲಿ ಕಾಂಬಷ್ಟು ದೊಡ್ಡದು.
ಅದು ನವಗೇ ಇಪ್ಪದು! ನಮ್ಮೆದುರು ಇಪ್ಪಷ್ಟು ಹೊತ್ತು. ಆ ಸಣ್ಣ ಜಾಗೆಲಿ ನಾವು ಕೃಷಿ ಮಾಡೆಕ್ಕಡ.
ಸೆಸಿ ನೆಟ್ಟು, ನೀರು ಬಿಟ್ಟು, ಗೊಬ್ಬರ ಹಾಕಿ, ಕಳೆ ತೆಗದು, ಚೆಂದ ಮಾಡಿ..
ಕೃಷಿ ಮಾಡಿರೆ ಸಾಲ, ಅಲ್ಲಿ ಸಿಕ್ಕಿದ್ದರ ಪೇಟಗೆ ತೆಕ್ಕೊಂಡೋಗಿ ಮಾರೆಕ್ಕಡ, ಮಾರಿ ಬಂದ ಪೈಸೆಲಿ ಮನೆ ಸಾಮಾನು ತರೆಕ್ಕಡ.
ಮನೆ ಕಟ್ಟೆಕ್ಕಡ, ದನ ಸಾಂಕೆಕ್ಕಡ, ನೆರೆಕರೆಯೋರಿಂಗೆ ಒಳ್ಳೆದು ಮಾಡೆಕ್ಕಡ, ಚೆಂದದ ಮನೆ ಕಟ್ಟೆಕ್ಕಡ, ಗಾರ್ಡನು – ಹೂಗಿನತೋಟ ಮಾಡೆಕ್ಕಡ, ಇತ್ಯಾದಿ ಇತ್ಯಾದಿ..

ನೆಟ್ಟಿಕಾಯಿಯೋ, ಹತ್ತಿಯೋ, ಬದನೆಯೋ – ಎಂತಾರು ನೆಟ್ಟಿ ಮಾಡ್ಳಕ್ಕಡ.
ಇಂದು ಉದಿಯಪ್ಪಗ ಬಿತ್ತಿರೆ, ಮೂರು-ನಾಲ್ಕು ದಿನಲ್ಲಿ ಅದು ಬೆಳೆತ್ತಡ. ಬೆಳವಲೆ ನೀರು, ಗೊಬ್ಬರ ಹೇಂಗೂ ಬೇಕನ್ನೆ!
ಇಂದು ಬಿತ್ತಿರೆ – ನಾಳೆ, ನಾಳ್ತು – ಆಚನಾಳ್ತು ಕೊಯಿವಲಾತಿದಾ – ಅದೇ ದಿನ ಕೊಯ್ಯೆಕ್ಕಡ, ಅಲ್ಲದ್ರೆ ಬೆಳೆ ಪೂರ ಹಾಳಾವುತ್ತಡ!
ಇಂದು ಕಂಪ್ಯೂಟರು ಬುಡಲ್ಲಿ ಕೂದತ್ತು ಕಂಡ್ರೆ, ಆಚನಾಳ್ತು ಕೂರದ್ದೆ ಗೊಂತಿಲ್ಲೆ! ಅಲ್ಲದ್ರೆ ಬೆಳದು ಬಿತ್ತಿದ್ದು ಪೂರಾ ಹಾಳಾಗಿ ಹೋವುತ್ತಿದಾ!!

ಹಾಂಗಾಗಿ ಪುಳ್ಳಿಮಾಣಿಯ ತಲೆಲಿ ಈ ಗೆಡುಗಳದ್ದೇ ಚಿಂತೆ. ಕೆಲವು ಸರ್ತಿ ಶಾಲೆಲಿಪ್ಪಗ – ’ಓ! ನೆಟ್ಟ ನೆಟ್ಟಿಗೆ ನೀರು ಬಿಡೆಕಷ್ಟೆ’ ಹೇಳಿ ನೆಂಪಪ್ಪಲಿದ್ದಡ.
ಶಾಲೆ ಬಿಟ್ಟಕೂಡ್ಳೇ ಹರುದುಬಿದ್ದೊಂಡು ಬಂದು ಕಂಪ್ಯೂಟರು ಬುಡಲ್ಲಿ ಕೂರ್ತನಡ!

ಪುಳ್ಳಿಮಾಣಿ; ಮನೆ ಕಟ್ಟುತ್ತ ಗವುಜಿ!!

ನಿನ್ನೆ / ಮೊನ್ನೆ ನೆಟ್ಟ ತರಕಾರಿಯ ಪೋಚಕಾನ (ಆರೈಕೆ) ಮಾಡ್ತನಡ. ಕೊಯಿವಲಾದರೆ ಕಟಾವು ಮಾಡ್ತನಡ.
ಮಾಡುದು ಮಾಂತ್ರ ಅಲ್ಲ, ಅದರ ಹತ್ತರಾಣೋರಿಂಗೆಲ್ಲ ಹೇಳಿ ಹೇಳಿ ಉಬ್ಬಿಗೊಳ್ತನಡ.

ಒಳ್ಳೆ ಕೃಷಿ ಬಂದರೆ ರಂಗಮಾವನ ಅನುಕರಣೆ ಮಾಡ್ತನಡ.
ಅವನ ಸಾಕುಪ್ರಾಣಿಗಳ ಚೆಂದಲ್ಲಿ ನೋಡಿಗೊಳ್ತನಡ, ಕಂಡು ದನಗೊ ಬಂದರೆ ಬೇಗ ಓಡುಸುತ್ತನಡ, ಕೃಷಿ ಹಾಳಪ್ಪಲಾಗನ್ನೇ…!!!

ಅವ° ಮಾಡಿದ್ದರಲ್ಲಿ ಬೆಳೆ ತುಂಬಾ ಲಾಯಿಕು ಬತ್ತಡ. ಪೇಟೆಲಿ ಮಾರಿ ಒಳ್ಳೆ ಪೈಸೆ ಮಾಡಿದ್ದನಡ –
ದನ ಸಾಂಕಿದ್ದನಡ, ಹಾಲು ಮಾರಿ ಒಳ್ಳೆತ ಪೈಸೆ ಮಾಡಿದ್ದನಡ –
ನಮ್ಮ ನೆರೆಕರೆಗೆ ನಮ್ಮ ಚೆಂಙಾಯಿಗಳ ಸೇರುಸುಲಿದ್ದಡ ಹಾಂಗೆ ಮೋರೆಪುಟಲ್ಲಿಪ್ಪ ಅವನ ಚೆಂಙಾಯಿಗಳ ಪೂರ ಅವನ ನೆರೆಕರೆಗೆ ಸೇರುಸಿಗೊಂಡಿದನಡ –
ಈಗ ಒಂದು ಮನೆಕಟ್ಟುತ್ತ ಏರ್ಪಾಡಿಲಿ ಇದ್ದನಡ, ತರವಾಡುಮನೆ ಒಳದಿಕೆ ಕೂದಂಡು; ಇಂಟರ್ನೆಟ್ಟಿಲಿ!
ಮನೆ ಎದುರಾಣ ಗಾರ್ಡನು – ಅದು ಇದು ಎಲ್ಲ ಮಾಡಿ ಆಯಿದಡ!
ಮನೆ ಹೇಂಗಾಯೆಕ್ಕು ಹೇಳಿ ಅವನ ಅಮ್ಮನತ್ರೂ ಸಲಹೆ ಕೇಳ್ತನಡ – ಅಮೇರಿಕಲ್ಲಿರ್ತ ದೊಡ್ಡಮ್ಮನ ಮನೆಂದಲೂ ಲಾಯಿಕಕ್ಕೆ ಕಟ್ಟುತ್ತನಡ!!

~

ರಂಗಮಾವಂಗೆ ಹೂಗಿನ ಸೆಸಿ ನೆಡುದರಲ್ಲಿ, ನೆಟ್ಟಿಕಾಯಿ ಮಾಡುದರಲ್ಲಿ ಎಲ್ಲ ತುಂಬ ಆಸಕ್ತಿ ಸಣ್ಣದಿಪ್ಪಗಳೇ.
ತರವಾಡುಮನೆಯ ಎದುರು ಎಡದ ಹೊಡೆಲಿ ಸಣ್ಣ ಹೂಗಿನ ತೋಟವನ್ನೇ ಮಾಡಿತ್ತಿದ್ದವು ಪ್ರೀತಿಯ ಪಾತಿಯೊಟ್ಟಿಂಗೆ ಸೇರಿಗೊಂಡು.
ಮನೆಯ ಹಿಂದಾಣ ಹಿತ್ತಿಲಿಲಿ ತೊಂಡೆ – ಬಸಳೆ ಚಪ್ಪರ, ಅಳತ್ತೊಂಡೆ -ಸೌತ್ತೆ – ಕೆಂಬುಡೆ ಬಳ್ಳಿ, ಒಂದು ಹೊಡೆಲಿ ಬದನೆ -ಬೆಂಡೆ, ಇನ್ನೊಂದು ಹೊಡೆಲಿ ಮೆಣಸು – ಹೀಂಗೆ ತರಾವರಿ ತರಕಾರಿಗಳ ಬೆಳೆಗು. ಮನೆಗೆ ಬೇಕಪ್ಪ ನೆಟ್ಟಿಕಾಯಿ ಎಲ್ಲ ಅಲ್ಲಿಯೇ ಅಕ್ಕು, ಈಗಾಣೋರ ಹಾಂಗೆ ಪೇಟೆಂದ ತಾರವು.
ಸಾಲು ಮಾಡಿ, ಬಿತ್ತಿ ಅದು ಹುಟ್ಟುವಲ್ಲಿಯೊರೆಂಗೆ ಕಾದು ಮತ್ತೆ ದಿನಂಪ್ರತಿ ನೀರು, ಸಗಣನೀರು, ಗೊಬ್ಬರ ಎಲ್ಲ ಹಾಕುಗು.
ಕಮ್ಮಿಲಿ ಎರಡು ತಿಂಗಳಾದರೂ ಬೇಕಕ್ಕು ಬೆಳೆ ಬಪ್ಪಲೆ. ಅಲ್ಲಿಗೊರೆಗೆ ತಾಳ್ಮೆಲಿ ಕಾದು ಅದರ ಪೋಚಕಾನ ಮಾಡುಗು.
ಬೆಳೆ ಬಂದ ಮತ್ತೆ ಮನೆಗೆ ಆಗಿ ಒಳುದ್ದದಿದ್ದರೆ ಪೇಟಗೆ ತೆಕ್ಕೊಂಡು ಹೋಕು. ಬಂದ ಪೈಸೆಯ ಅಬ್ಬೆ-ಅಪ್ಪನತ್ತರೆ ಕೊಡುಗು.

ರಂಗಮಾವಂಗುದೇ ಶಾಲೆಲಿ ಒಂದೊಂದರಿ ಈ ಗೆಡುಗಳದ್ದೇ ಚಿಂತೆ. ಅವಕ್ಕೂ ‘ನೆಟ್ಟ ನೆಟ್ಟಿಗೆ ನೀರು ಬಿಟ್ಟಿದಿಲ್ಲೆ’ ಹೇಳಿ ನೆಂಪಕ್ಕು.
ಕಂಡುದನಗೊ ಬಂದು ಹಾಳುಮಾಡ್ತವೋ – ಹೇಳ್ತದುದೇ ಅವರ ಚಿಂತನೆ ಆಯ್ಕೊಂಡಿತ್ತು!

ರಂಗಮಾವನ ಬಳ್ಳಿಲಿ ಗೆನಾ ಚೆಕ್ಕರ್ಪೆ!

ಆದರೆ ಇದು ಸಹಜ, ಪ್ರಾಕೃತಿಕ. ನಿಜವಾಗಿ ಅನುಬವಕ್ಕೆ ಬಪ್ಪಂತದ್ದು. ವಿನುವಿನದ್ದು ಕಲ್ಪನೆ ಮಾತ್ರ. ಅದು ಅವಾಸ್ತವ (Virtual).
ಯೋಚನೆ, ಚಿಂತೆ ಎಲ್ಲ ಒಂದೇ ರೀತಿ. ಆದರೂ ವಾಸ್ತವ-ಅವಾಸ್ತವದ್ದು ಎಷ್ಟು ವಿತ್ಯಾಸ!
~

ರಂಗಮಾವ°, ಶಂಬಜ್ಜ° – ಇಬ್ರುದೇ ಇದನ್ನೇ ಮಾಡಿದ್ದಲ್ಲದೋ?
ಜೀವನಪೂರ್ತಿ ಇದೇ ಕೆಲಸ ಮಾಡಿ ಮಾಡಿ ಚೆಂದದ ಒಂದು ಮನೆಕಟ್ಟಿದವು.
ತೋಟಲ್ಲಿ ಮೈ ಪೂರ ಕುರೆಕುರೆ ಮಾಡಿಗೊಂಡು, ಮಣ್ಣು ಮೆತ್ತಿಗೊಂಡು; ಮನೆ ಒಳದಿಕೆ ಶುಭ್ರವಾಗಿ ಕಳದ್ದವು.

ಪುಳ್ಳಿಮಾಣಿಯ ಬೆಳವಣಿಗೆಯೇ ಮಣ್ಣು, ಕುರೆಗಳಿಂದ ದೂರ ಆವುತ್ತಾ ಇದ್ದು.
ಆದರೂ ಅವನ ಮನಸ್ಸು ನೆಟ್ಟಿಕಾಯಿ, ಗುರುಟಾಟ, ಮನೆ ಕಟ್ಟುದು, ಅದು ಇದು – ಇದರ್ಲೇ ಇದ್ದು.
ಅಂತೆ ಅಲ್ಲ, ನಮ್ಮ ಅಜ್ಜಕಾನಬಾವಂಗೆ ’ನಮ್ಮ ಆಟಂಗಳ ಅಭಾವ ಆವುತ್ತಾ ಇದ್ದು’ ಹೇಳಿ ಅನುಸಿ ಬೇಜಾರಾದ್ದು.
ಇಪ್ಪ ಸಂಗತಿಯೇ,
ಮದಲಾಣವು ಸಣ್ಣಾಗಿಪ್ಪಗ ನಿಜವಾದ ನೆಟ್ಟಿಕಾಯಿ ಮಾಡಿ ಆಡಿಗೊಂಡಿತ್ತಿದ್ದವು,
ಕೋಲು – ಕುತ್ತಾಂಕೋಲು ಮಡಗಿ, ಮಾಡು ಮಾಡಿ ಸೊಪ್ಪು ಮಡಗಿ ಮನೆ ಕಟ್ಟಿದವು, ಮಣ್ಣಿಲಿ ಹೊಡಚ್ಚಿ ಆಡಿದವು, ದನಗಳ ಅಡಿಂಗೆ ಹೋಗಿ ಹಾಲು ಕುಡುದವು!
ಈಗಾಣ ಮಕ್ಕೊಗೆ ಆ ಭಾಗ್ಯವೇ ಇಲ್ಲೆ!
ಅದಕ್ಕೆ ಮಕ್ಕೊ ಕಾರಣವಾ? ಅಲ್ಲ ಅವರ ಹೆತ್ತವು ಕಾರಣವೋ?
ಯೋಚನೆ ಮಾಡೆಕ್ಕಲ್ಲದಾ?

ಪುಳ್ಳಿಮಾಣಿಗೆ ರಂಗಮಾವನಿಂದಲೂ ಜಾಸ್ತಿ ನೆಟ್ಟಿಕಾಯಿ ಆವುತ್ತಡ!
ಆದರೂ ಮದ್ಯಾನ ಬೆಂದಿಗೆ ರಂಗಮಾವನ ನೆಟ್ಟಿಕಾಯಿಯನ್ನೇ ಉಂಬದು!

ಒಂದೊಪ್ಪ: ಕನ್ನಾಟಿ ಒಳದಿಕೆ ಇರ್ತದೇ ಮಕ್ಕೊಗೆ ಹೇಳಿಕೊಡುದರಿಂದ, ಸಮಾಜದ ಒಳದಿಕೆ ಇರ್ತದು ಹೇಳಿಕೊಡುದು ಒಳ್ಳೆದು.
ಎಂತ ಹೇಳ್ತಿ?

ಸೂ: ಅದೆಲ್ಲ ಸರಿ, ಒಪ್ಪಣ್ಣಂಗೂ ಮೋರೆಪುಟಲ್ಲಿ ಒಂದು ಪುಟಮಾಡಿಕೊಟ್ಟಿದವು ಚೆಂಙಾಯಿಗೊ. ಇದಾ, ಇಲ್ಲಿದ್ದು:
http://www.facebook.com/oppanna
ಈಗಾಗಳೇ ಚೆಂಙಾಯಿ ಅಲ್ಲದ್ರೆ ಈಗಳೇ ಆಗಿಬಿಡಿ.

ಅಲ್ಲಿ ಕಾಂಬೊ°..

ಪುಳ್ಳಿಮಾಣಿ ಕಂಪ್ಯೂಟರಿಲಿ ಸೆಸಿ ನೆಡ್ತನಡ..!, 5.0 out of 10 based on 12 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಶಾಂತತ್ತೆ
  ಅಮ್ಮ

  sooperiddu…odi kushi aatu…
  eegaana makko maadude heenge…hiriyara hange samskara samskriti ella baaradru raja aadaru bekappa.nammastake heligondu koorekkaste.makko kelekkanne.entha heliru, “raja kaludu batte” athavaa “aanu busy”….
  matte maadte heluva ready-made answer iddu.
  maggiyu ille shlokavu ille bekare
  abbe appa helekkaste.idu elliyavarege kodi muttugu heli gonthille?.
  innadaru hiriyarelloru makkala bagge care tekkolekku heli kaanuttu.kannatiya ola
  ellavu iddu.adude beku,… samajada oladikke ippadu modalu matte kannati ola ippadu
  entha helte oppanno? elladakku limitirali aste.

  [Reply]

  VA:F [1.9.22_1171]
  Rating: +2 (from 2 votes)
 2. ಸುವರ್ಣಿನೀ ಕೊಣಲೆ
  Suvarnini Konale

  ವಾಸ್ತವಕ್ಕೂ ಕಾಲ್ಪನಿಕತೆಗೂ ಈಗಾಣ ಮಕ್ಕೊಗೆ ವ್ಯತ್ಯಾಸವೇ ಗೊಂತಾವ್ತಿಲ್ಲೆ :( ಪರೀಕ್ಷೆಲಿ 100% ಮಾರ್ಕು ತೆಗೆತ್ತವು ಆದರೆ…ಜೀವನದ ಕಲೆ ರಜ್ಜವೂ ಗೊಂತಿಲ್ಲೆ ಹೇಳುದೇ ದುಃಖದ ವಿಷಯ :( ಅಜ್ಜಿ ಹೇಳ್ತ ಕಥೆಗೊ ಅವಕ್ಕೆ ಅವೈಜ್ಞಾನಿಕ ಹೇಳಿ ಅನ್ಸುತ್ತು..ಆದರೆ spiderman, superman, Harry Potter ಎಲ್ಲವುದೇ ನೂರಕ್ಕೆ ನೂರು ಸತ್ಯ ಹೇಳಿ ವಾದಕ್ಕೆ ನಿಲ್ತವು. ಇನ್ನು ನಮ್ಮ ಆಚಾರ ವಿಚಾರಂಗೊ, ಸಂಸ್ಕೃತಿ ಗೊಂತೇ ಇಲ್ಲೆ ಹೆಚ್ಚಿನವಕ್ಕೆ.ಭೀಮ ಆರು ಹೇಳಿ ಕೇಳಿರೆ “ಚೋಟಾ ಭೀಮ್” ಹೇಳಿ ಹೇಳ್ತವು !! ಹಳ್ಳಿಗೆ ಬಪ್ಪ ಪೇಟೆಯ ಮಕ್ಕೊ ತೊಂಡೆ ಚಪ್ಪರ ನೋಡಿ “ಅಮ್ಮ, ಇಲ್ಲಿ ನೋಡು ಮಾರ್ಕೆಟ್ಟಿಂದ ತಂದು ಅಂಟುಸಿದ್ದವು” ಹೇಳಿ ಹೇಳ್ತವು !! ಇದಕ್ಕೆಲ್ಲಾ ನಾವು ಮಕ್ಕಳ, ಪೇಟೆ ವಾತಾವರಣವ ದೂರಿರೆ ಆಗ, ಇದಕ್ಕೆ ನಾವೇ ಮುಖ್ಯ ಕಾರಣ. ಅಪ್ಪ ಅಮ್ಮಂದ್ರು ರಜ್ಜ ಕಾಳಜಿ ತೆಕ್ಕೊಂಡ್ರೆ, ಮಕ್ಕಳ ಬೆಳಶುವಗ ಜಾಗೃತೆ ಮಾಡಿರೆ ನಮ್ಮ ಮಕ್ಕೊ ಎಲ್ಲಾ ರೀತಿಂದಲೂ ಬೆಳೆಗು ಹೇಳಿ ಎನ್ನ ಅಭಿಪ್ರಾಯ. ಕೆಲವು ಜನಕ್ಕಂತೂ “ಎನ್ನ ಮಗಂಗೆ ಕನ್ನಡ ಬತ್ತೇ ಇಲ್ಲೆ” ಹೇಳಿ ಹೇಳಿಗೊಂಬಲೆ ಹೆಮ್ಮೆ!! ಎಷ್ಟು ನಾಚಿಕೆಯ ವಿಷಯ ಇದು ಅಲ್ಲದಾ? ಇನ್ನಾಣ generation ನಮ್ಮ ಸಂಸ್ಕೃತಿಯ, ಜೀವನ ಶೈಲಿಯ ಮುಂದುವ್ರೆಶಿಗೊಂಡು ಹೊಯಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ
  ಮಹೇಶ

  ಹೀಂಗಿಪ್ಪ ಆಟ ಕಂಪ್ಯುಟರಿಲ್ಲಿ ಸಿಕ್ಕುತ್ತು ಹೇಳಿರೆ ತುಂಬ ಒಳ್ಳೆದು. ಇದರ ಉಪಯೋಗಿಸಿ ಒಳ್ಳೆ ಅಭಿರುಚಿ ಯ ಬೆಳಸಲೆ ಎಡಿಗು. ಕೃಷಿಯ ಬಗ್ಗೆ ಕ್ಲಾಸಿಲ್ಲಿ ಪಾಠ ಮಾಡ್ಲೆ/ತಿಳಿವಲೆ ಸುಲಭ ಅಕ್ಕು!.

  ಮನೆಲ್ಲಿ ಒಳ್ಳೆ ಕೃಷಿಯ ಪರಂಪರೆ ಇಪ್ಪ ಮಕ್ಕೊಗುದೆ ಇದುವೇ ಆಯೇಕಾಗಿ ಬಂದದು ವಿಪರ್ಯಾಸ :(

  [Reply]

  VA:F [1.9.22_1171]
  Rating: +1 (from 1 vote)
 4. ಗುಣಾಜೆ ಮಹೇಶ

  ಒಪ್ಪಣ್ಣ, ಲೇಖನ ಒಳ್ಳೆ ಇದ್ದು. ಈಗಾಣವು ಮಕ್ಕಳ ಮುದ್ದು ಮಾಡೂದರೊಟ್ಟಿಂಗೆ ಅವಕ್ಕೆ ತೋಟದ ಕೆಲಸದ ಬಗ್ಗೆ ಹೇಳಿಕೊಡೆಕು. ಈ ಲೇಖನ ಓದಿ ಕೆಲವರಿಂಗಾದರೂ ಜ್ಣಾನೋದಯ ಅಕ್ಕು ಹೇಳಿ ಆನು ಭಾವಿಸುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 5. ಡಾ.ಸೌಮ್ಯ ಪ್ರಶಾಂತ

  ಪುಳ್ಳಿ ಮಾಣಿ ಗಣಕಯಂತ್ರಲ್ಲಿ ಆದರೂ ಕೃಷಿ ಮಾಡುವ ಆಸಕ್ತಿ ತೋರ್ಸಿದನ್ನೇ,ಒಂದು ರೀತಿಲಿ ನೋಡಿದರೆ ಮೆಚ್ಚೆಕ್ಕಾದ್ದೆ.. ಈಗಣ ಕಾಲಲ್ಲಿ ಆರಿಂಗೂ ಕೃಷಿ ಮಾಡುವ ಆಸಕ್ತಿ ಇಲ್ಲದ್ದಿಪ್ಪಗ ಗಣಕಯಂತ್ರಲ್ಲಿ ಆದರೂ ಕೃಷಿ ಮಾಡುವ ಹೇಳಿ ಕಂಡತ್ತನ್ನೇ,ಅದುವೇ ವಿಶೇಷ… :) ಆದರೆ ಒಪ್ಪಣ್ಣ ಹೇಳಿದ ಮಾತು ನೂರು ಶೇಖಡ ಸತ್ಯ..ಕೊದಿಲಿಂಗೆ ಮಾತ್ರ ರಂಗಮಾವನ ನೆಟ್ಟಿಕಾಯಿಯೇ ಆಯೆಕ್ಕು…
  ಇದರಲ್ಲಿ ಮಕ್ಕಳ ತಪ್ಪಿಲ್ಲೆ.. ಪೇಟೆಲಿ ಬೆಳವ ಮಕ್ಕೊ ಒಂದು ಚೂರು ಕೃಷಿ ಕಲಿಯೆಕ್ಕು ಹೇಳಿ ಆದರೂ ಜಾಗೆ ಎಲ್ಲಿ ಸಿಕ್ಕುತ್ತು? ಫಾರ್ಮ್ವ್ ವಿಲ್ಲೆಲಿ ಕೊಟ್ಟಾಂಗೆ ಪೇಟೆಲಿ ಆರಾರು ರಜ ಜಾಗೆ ಕೊಟ್ಟರಕ್ಕಿದಾ ಕೃಷಿ ಮಾಡ್ಲೆ…ಇಲ್ಲಿಯಾಣ ಮಕ್ಕೊಗೆ ಹಾಲು ಎಲ್ಲಿಂದ ಸಿಕ್ಕುದು ಹೇಳಿ ಕೇಳಿದರೆ ’ನಂದಿನಿ ತೊಟ್ಟೆಂದ’ ಹೇಳ್ತವು.. ಒಂದು ಲೆಕ್ಕಲ್ಲಿ ಅದು ಸರಿಯೆ,ಅವು ದಿನ ಉದಿಯಪ್ಪಗ ಹಾಲು ನಂದಿನಿ ತೊಟ್ಟೆಲಿ ಬಪ್ಪದೆ ನೋಡುದು..ಅವು ಯಾವತ್ತೂ ಹಾಲು ಕರವದರ ನೋಡದ್ರೆ ಅವಕ್ಕಾರು ಹೇಂಗೆ ಗೊಂತಪ್ಪದು ಹಾಲಿನ ಮೂಲ ಯಾವುದು ಹೇಳಿ…
  ಇಲ್ಲಿಯಾಣ ಮಕ್ಕೊಗೆ ಕೃಷಿ ನೋಡುವ ಅವಕಾಶವೇ ಇಲ್ಲೆ…
  ಒಪ್ಪಣ್ಣ ನೀನೇ ಹೇಳು,ಇಲ್ಲಿ ಬೆಳವ ಮಕ್ಕೊಗೆ ಕೃಷಿಯ ಬಗ್ಗೆ ಹೇಂಗೆ ಜ್ಞಾನ ಕೊಡ್ಲಕ್ಕು ಹೇಳಿ..ಅದೂ ಊರಿಲಿ ಆಸ್ತಿ ಇಲ್ಲದ್ದೋರಿಂಗೆ…ಮಕ್ಕೊ ಸ್ವತಃ ನೋಡಿದರೆ ಅವಕ್ಕೆ ವಿಷಯ ಅರ್ಥ ಅಪ್ಪದು… ನಾವೆಲ್ಲಾ ಈ ವಿಷಯದ ಬಗ್ಗೆ ಬೇಜಾರು ಮಾಡುದಕ್ಕಿಂತ ಒಟ್ಟಿಂಗೆ ಸೇರಿ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿವನಾ??

  [Reply]

  VA:F [1.9.22_1171]
  Rating: 0 (from 0 votes)
 6. ಸರ್ಪಮಲೆ ಮಾವ

  ಕಂಪ್ಯೂಟರು, ಇಂಟರ್ನೆಟ್, ಒರ್ಕುಟ್ಟು, ಮೋರೆಪುಸ್ತಕ, ಟಿ.ವಿ., ಮೊಬೈಲು, ಮೆಸ್ಸೇಜು ಎಲ್ಲವೂ ಉಪಯೋಗ ಇಪ್ಪಂತಾದ್ದೆ. ಆದರೆ ದಿನದ ೨೪ ಗಂಟೆಯೂ ಅದಲ್ಲೇ ಗುರುಟೆಂಡಿದ್ದರೆ ಹೇಂಗೆ? ನಿಜವಾದ ಜನ ಸಂಪರ್ಕವೇ ಇಲ್ಲದ್ದೆ ವಾಸ್ತವ ಜಗತ್ತಿನ ಪರಿಚಯವೇ ಆಗ. ರಂಗಮಾವನೂ, ವಿದ್ಯತ್ತೆಯೂ ವಿನುವಿನ ಒಬ್ಬನೇ ಮಗ ಹೇಳಿ ಅತಿ ಮುದ್ದು ಮಾಡಿ ಬೆಳೆಶಿದ ರೀತಿಯೇ ತಪ್ಪು. ಇಂದು ಎಷ್ಟೋ ಮನೆಗಳಲ್ಲಿ ಆವುತ್ತಾ ಇಪ್ಪದು ಇದೇ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ನೆಗೆಗಾರ°ವಿದ್ವಾನಣ್ಣಕಳಾಯಿ ಗೀತತ್ತೆಚೂರಿಬೈಲು ದೀಪಕ್ಕಬಂಡಾಡಿ ಅಜ್ಜಿಅನು ಉಡುಪುಮೂಲೆಜಯಶ್ರೀ ನೀರಮೂಲೆಶ್ಯಾಮಣ್ಣಕಜೆವಸಂತ°ಅನುಶ್ರೀ ಬಂಡಾಡಿದೊಡ್ಡಮಾವ°ರಾಜಣ್ಣಬೊಳುಂಬು ಮಾವ°ಮಾಲಕ್ಕ°ಶೇಡಿಗುಮ್ಮೆ ಪುಳ್ಳಿಪವನಜಮಾವಬೋಸ ಬಾವಗಣೇಶ ಮಾವ°ಮಂಗ್ಳೂರ ಮಾಣಿಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಗೋಪಾಲಣ್ಣನೀರ್ಕಜೆ ಮಹೇಶಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ