ಮೊನ್ನೆ ಗಾಯತ್ರಿಯ ತಂಗೆಯ ಪುಣ್ಯಾಯಕ್ಕೆ ಹೋಪಲಿತ್ತು. ಒಟ್ಟಿಂಗೆ ಸತ್ಯನಾರಾಯಣ ಪೂಜೆಯೂ ಇದ್ದ ಕಾರಣ ಉಂಡೆಪಚಾದ ಇತ್ತು.
ತೀರ್ತಪ್ರಸಾದ ಕೊಟ್ಟೊಂಡು ಬಂದದು ನಮ್ಮ ನೆಡುಗಳ ರವಿಯಣ್ಣ ಅಲ್ಲದೋ – ಸುಲಾಬಲ್ಲಿ ಎರಡುಂಡೆ ಸಿಕ್ಕಿತ್ತು!
ಜಡಿಮಳೆಯ ಛಳಿಗೆ ಜೀಗುಜ್ಜೆಪೋಡಿಯೂ, ಎಡೆಡೇಲಿ ಚೀಪೆಗೆ ಸೆಕೆಗೆ ಜಿಲೇಬಿಯೂ ತಿಂದಾತು; ಕುಂಞಿಬಾಬೆಗೆ ಜೇನ ನಕ್ಕುಸಿಕ್ಕಿ, ಗಾಯತ್ರಿಗೆ ಟಾಟಮಾಡಿಕ್ಕಿ ಅಲ್ಲಿಂದ ಹೆರಟಾತು.
ಹೋಪಗ ಜೀಪಿಲಿ ಹೋದರೂ, ಬಪ್ಪಗ ಕಲ್ಮಡ್ಕನಂತನ ಬೈಕ್ಕಿಲಿ ಬಂದದು.
ಕಳುದವಾರ ಅನಂತಂಗೆ ರೂಪತ್ತೆ ಸಿಕ್ಕಿದ ಶುದ್ದಿ ಬೈಲಿಲಿ ಮಾತಾಡಿದ್ದರ ಅಜ್ಜಕಾನಬಾವ° ಹೇಳಿದ್ದನಾಡ.
ಒಪ್ಪಣ್ಣ, ರೂಪತ್ತೆಗೆ ಎನಿಗೆ ಹೇಳಿದ ಬೇಜಾರಾದ ಸಂಗ್ತಿ ಕೇಳಿದ್ರೆ ಬೈಲಿಲಿ ಕುಶಿಆಗ್ತಡ, ಅಪ್ಪಾ? – ಕೇಳಿದ°.
ಛೆಛೆ, ಇಲ್ಲೆಪ್ಪ – ಎಲ್ಲೋರಿಂಗೂ ನಿನ್ನ ಹಾಂಗೇ ಬೇಜಾರಾಯಿದು – ಹೇಳಿದೆ! 😉 ಬೇಜಾರಲ್ಲೇ ಒಂದರಿ ಹೊಟ್ಟೆತುಂಬ ನೆಗೆಮಾಡಿದ°.
~
ನಿಡುಗಳ ಗುಡ್ಡೆಹತ್ತಿ, ಕರಿಮಾರ್ಗಕ್ಕೆ ಸೇರಿ, ದೊಡ್ಡಮಾರ್ಗದ ಬೇಳಕ್ಕೆ ಎತ್ತುವಗ.. ಅದಾ, ಮಳೆಹನ್ಕಲೆ ಸುರು ಆತು.
ಒಪ್ಪಣ್ಣಂಗೆ ಆದರೆ ಹತ್ತರೆ ದಾರಿ, ಅನಂತಂಗೆ ಹಾಂಗಲ್ಲ; ಈ ಮಳಗೇ ಕಲ್ಮಡ್ಕಕ್ಕೆ ಹೋಯೇಕು ಪಾಪ! ಹಾಂಗೆ ಪ್ಲೇಶ್ಟಿಗಿನ ಕಿಡಿಂಜೆಲು (ರಯಿನುಕೋಟು) ಹಿಡ್ಕೊಂಡೇ ಬಯಿಂದ°.
ಬೈಲಿಂಗೆ ಇಳಿತ್ತ ಮಾರ್ಗದ ಹತ್ತರೆ ಎತ್ತುವಗ, ಆನು ಇಲ್ಲೇ ಇಳ್ಕೊಳ್ತೆ, ಯೇವದಾರು ಮಾಡಡಿಲಿ ನಿಂದು, ಮಳೆಬಿರುದ ಮತ್ತೆ ಹೋವುತ್ತೆ, ನೀನು ಈ ಮಳಗೇ ಹೋಯೇಕಲ್ಲದೋ, ಬೇಗ ಮನಗೆತ್ತಿಗೊ – ಹೇಳಿದೆ.
ದಾಕ್ಷಿಣಿ ಎಂತೂ ಇಲ್ಲದ್ದೆ, ‘ಅಕ್ಕಂಬಗ ಇನ್ನೊಂದರಿ ಕಾಂಬೊ’ ಹೇಳಿಕ್ಕಿ ಹೆರಟೆಯೊ°.
ಮಳೆಲೆಕ್ಕದ ಮಾರ್ಗರಿಪೇರಿ ನೆಡೆತ್ತಾ ಇದ್ದು. ಕಡವಕಲ್ಲುಕಂಜಿಯಷ್ಟು ದೊಡ್ಡ ಕರ್ಗಲ್ಲುಗೊ ಮಾರ್ಗದ ಗುಂಡಿಗೊಕ್ಕೆ ಹಾಕಿಂಡು, ಮಾರ್ಗ ಎತ್ತರುಸುತ್ತಾ ಇದ್ದವು.
ಮಾರ್ಗರಿಪೇರಿ ಸಮಯ ಹೇಳಿತ್ತುಕಂಡ್ರೆ ಜೆನಜೀವನ ತುಂಬಾ ಕಷ್ಟ, ಆದರೆ ರಿಪೇರಿ ಆದ ಮತ್ತೆ ಅಷ್ಟೇ ಕೊಶಿಯೂ ಆವುತ್ತು. ಅಲ್ಲದೋ? 🙂
ಅದಿರಳಿ.
ರಜ್ಜ ಮಳೆಕಮ್ಮಿ ಆದ್ದೇ, ಆನಂದನ ಅಂಗುಡಿಲಿ ರಜ್ಜ ಹೊತ್ತುನಿಂದು, ಬೈಲಕರೆ ಡಾಮರುಮಾರ್ಗಂದ ಬೀಸಬೀಸಕೆ ನೆಡದು ಬೈಲಿಂಗೆತ್ತಿದೆ.
ಮಳೆಬಿರಿವನ್ನಾರ ಇಲ್ಲೆಲ್ಯಾರು ನಿಂದು ಮತ್ತೆ ಹೋತಿಕ್ಕುವೊ°..
ಬಪ್ಪಗ ಬೈಲಮಾರ್ಗಲ್ಲಿ ಸರ್ತ ಇಳುದರೆ ಸಿಕ್ಕುತ್ತದು ಮಾಷ್ಟ್ರುಮಾವನ ಮನೆ. ಬಲತ್ತಿಂಗೆ ಇಳುದರೆ ನೆರಿಯದೊಡ್ಡಪ್ಪನ ಮನೆ!
ನೆರಿಯದೊಡ್ಡಪ್ಪನ ಮನಗೆ ಕಳುದವಾರ ಹೊಸತ್ತು ಟೀವಿ ತಯಿಂದವು.
ಹೊಸಾ ನಮುನೆ ಟೀವಿ ಅಡ ಅದು. ಶುಬತ್ತೆಯಷ್ಟೇ ತೋರ ಇಪ್ಪ ಶುಬತ್ತೆ ಟೀವಿಯ ನಮುನೆದು ಅಲ್ಲಡ, ಒಸ್ತ್ರಒಗೆತ್ತ ಕಲ್ಲಿನಷ್ಟೇ ದಪ್ಪದ್ದಾಡ!
ಹಳೆಕ್ರಮದ ಹಾಂಗೆ ಮೇಜಿಲಿ ಮಡಗದ್ದೆ, ಗೋಡಗೆ ಅಂಟುಸಲೆ ಆವುತ್ತಾಡ – ಮೊನ್ನೆ ಅಜ್ಜಕಾನಬಾವ° ನೋಡಿಕ್ಕಿಬಂದವ ಹೇಳಿತ್ತಿದ್ದ°.
ಅವನ ಪೂರ್ತ ನಂಬಿಕ್ಕಲೂ ಗೊಂತಿಲ್ಲೆ ಇದಾ! 😉
ಹಾಂಗೆ ಒಂದರಿ ನೋಡಿದ ಹಾಂಗೂ ಆತು – ಹೇಳಿಗೊಂಡು ಬಲತ್ತಿಂಗೆ ಹೋವುತ್ತ ಮಾರ್ಗಲ್ಲೆ ಇಳುದೆ!
~
ಮಳೆಯ ಲೆಕ್ಕಲ್ಲಿಯೋ ಏನೊ – ಎಲ್ಲೋರುದೇ ಮನೆಒಳವೇ ಇದ್ದಿದ್ದವು; ಟೀವಿ ತಂದದಪ್ಪು ಹೇಳಿ ಅಂದಾಜಿ ಆತು! 😉
ಹೇಂಗಿಪ್ಪ ಟೀವಿ, ಒಂದರಿ ನೋಡಿಕ್ಕುವೊ° – ಹೇಳಿಗೊಂಡು ಅಣ್ಣನ ಕೈಲಿ ಕೇಳಿದೆ.
ಮುಚ್ಚಿಮಡಗಿದ ಅರುಶಿನ ಒಸ್ತ್ರ ತೆಗದು ತೋರುಸಿದ – ಆರಿಂಚಿನ ನಾಕು ಆಣಿಯ ಜೆಗಿಲಿ ಗೋಡಗೆ ಬಡುದು, ಕರಿಟೀವಿಯ ನೇಲುಸಿತ್ತಿದ್ದವು, ಗಡಿಯಾರ ನೇಲುಸಿದ ಹಾಂಗೆ.
ಕರೆಯೇವದು, ಟೀವಿಯೇವದು – ಹೇಳಿ ಗೊಂತಾಗದ್ದ ನಮುನೆ ಕಾರ್ಗಾಣ ಕಪ್ಪಟೆ. ಈಗಾಣದ್ದೆಲ್ಲ ಹಾಂಗೇ ಬಪ್ಪದಡ.
ಗೋಡಗೇ ಅಂಟುಸುತ್ತ ನಮುನೆ ಆದಕಾರಣ ಇದರ್ಲಿ ಜಾಗೆ ಹಾಳಪ್ಪಲಿಲ್ಲೆ ಇದಾ – ಹೇಳಿದ.
ಹ್ಮ್, ಜಾಗೆ ಹಾಳಾಗದ್ರೂ ಹೊತ್ತು ಹಾಳಾವುತ್ತು – ಹೇಳಿದವು ನೆರಿಯದೊಡ್ಡಪ್ಪ ಪೇಪರು ಓದುತ್ತರ ಎಡಕ್ಕಿಲಿ.
ಅವು ಹೇಳಿರೆ ಒಂದು ಮಾತು, ಎರಡು ತುಂಡು!
ನೇರ ನಿಷ್ಠುರ ಮಾತಿಂಗೆ ಹೆಸರು ಹೋದ ಅವರ ವೆಗ್ತಿತ್ವ ಈಗಾಣ ಸುಮಾರು ಜೆನಂಗೊಕ್ಕೆ ತಲೆಬೆಶಿ ಆವುತ್ತು, ಜಮದಗ್ನಿ ಗೋತ್ರದ ಕೇಜಿಮಾವನ ಹಾಂಗೆ! 😉
~
ಆರೇಆಗಲಿ, ಒಂದೇ ನಮುನೆ ಹೇಳಿದ್ದರನ್ನೇ ಹೇಳಿದರೆ ಆಗ ದೊಡ್ಡಪ್ಪಂಗೆ.
ಎಷ್ಟೇ ಒಳ್ಳೆ ಮಾತು ಆಗಿರಳಿ, ಮುಖ್ಯವಾದ್ದೇ ಆಗಿರಳಿ, ಒಂದು ಮಾತು ಒಂದೇ ಸರ್ತಿ ಬರೇಕು, ಎರಡ್ಣೇ ಸರ್ತಿ ಬಂದರೆ ಅದರ ತೂಕ ಹಾಳಾತು – ಹೇಳ್ತವು.
ಇದು ನಿಂಗೊಗೆ ಅರಡಿಗು, ಒಪ್ಪಣ್ಣಂಗರಡಿಗು; ಆದರೆ ಟೀವಿಯೋರಿಂಗೆ ಅರಡಿಗೋ? ಇಲ್ಲೆಪ್ಪ.
ಉದಿಯಾಂದ ಇರುಳೊರೆಗೆ ಹೇಳಿದ್ದನ್ನೇ ಹೇಳುಗು, ಕೇಳಿಕೇಳಿ ಬೊಡಿತ್ತು. ಮದಲಿಂಗೆ ಗ್ರಾಂಪೋನು ಟೇಪು ಒಂದನ್ನೇ ತಿರುಗುಸಿದ ಹಾಂಗೆ – ಈ ಕಾರಣಲ್ಲೇ ಟೀವಿಯ ನಂದುಸಿ ಮುಚ್ಚಿ ಮಡಗಿದ್ದು.
ಎರಡೇ ದಿನಲ್ಲಿ ದೊಡ್ಡಪ್ಪಂಗೆ ಬೊಡುದ್ದು, ಅಂಬಗ ಪೆರ್ಲದಣ್ಣ ನಾಕೊರಿಶಂದ ನೋಡಿಂಡು ಬತ್ತಾ ಇದ್ದ, ಅವಂಗೆ ಬೊಡುದ್ದಿಲ್ಲೆಯೋ?!
ಉಮ್ಮಪ್ಪ! ಲೋಕೋಭಿನ್ನರುಚಿಃ!!
~
ಬಾಣಲೆಯಷ್ಟುದೊಡ್ಡ ತಪಲೆಯ ಮಾಡಿನ ಪಕ್ಕಾಸಿಂಗೆ ಸಿಕ್ಕುಸಿದ್ದವು, ಹಸಿ ಸಿಮೆಂಟು ಮಳೆನೀರಿಂಗೆ ಕರಗದ್ದ ಹಾಂಗೆ ಹಾಕಿದ ತೊಟ್ಟೆ ಕಾಣ್ತು.
ಮದಲಾಣ ನಮುನೆ ಜಾಲಿಡೀಕ ಕಾಣ್ತ ನಮುನೆ ಡಿಶ್ಶು ಅಲ್ಲಡ ಇದು, ಬೈಲಿನ ಸುಮಾರು ಮನೆಲಿ ಈಗ ಹೀಂಗಿರ್ತದು ಬಯಿಂದು.
ಹೊಸಟೀವಿಲಿ ಪಟ ಹೇಂಗೆ ಕಾಣ್ತು – ನೋಡ್ಳೆ ಒಂದರಿ ಟೀವಿ ಹಾಕಿದ.
ಕೈಲಿ ಹಿಡುದ ರಿಮೋಟಿನ ಗುರುಟಿ, ಎಂತದೋ ಮಾಡುಸಿ, ಕನ್ನಡ ಚೇನಲು ಕಾಣ್ತ ನಮುನೆ ಮಾಡಿದ.
ಕೆಂಪುಕೆಂಪು ಕಾಣ್ತ ಕಲರುಟೀವಿಯೇ ಇದುದೇ.
~
ಅವು ಹಾಕಿದ್ದು ಬೆಶಿಶುದ್ದಿ ಕೊಡ್ತ ಚೇನಲು. ಪಾರೆಮಗುಮಾವಂಗೂ ಈ ಚೇನಲು ಭಾರೀ ಕೊಶಿ. ಅಂದೊಂದರಿ ಶಬರಿಮಲೆ ಶುದ್ದಿ ಮಾತಾಡುವಗ ನಾವು ಮಾತಾಡಿದ್ದಲ್ಲದೋ? (ಸಂಕೊಲೆ).
ನೆರಿಯದೊಡ್ಡಪ್ಪಂಗೆ ಮತ್ತೊಂದರಿ ಕೋಪ ಬಂದಹಾಂಗಾತು. ಉದಿಯಾಂದ ಅದನ್ನೇ ತೋರುಸುತ್ತವು, ಅದೇ ಮಾತು ಹೇಳ್ತವು, ಇವ್ವೆಂತ ಶುದ್ದಿ ಹೇಳುದೋ – ಅಲ್ಲ ಬರದ್ದರ ಬಾಯಿಪಾಟ ಮಾಡುದೋ – ಹೇಳಿಗೊಂಡು!
ಅದರ್ಲಿ ಬಪ್ಪ ಶುದ್ದಿ ಅಪುರೂಪದ ವಿಶಯವೇ ಆದರೂ, ಅಷ್ಟುಸರ್ತಿ ಹೇಳಿದ ಕಾರಣ ದೊಡ್ಡಪ್ಪಂಗೆ ಬೊಡುದಿದ್ದತ್ತು!
ಅಪುರೂಪದ ಮಾಂಬುಳ ತಿನ್ನೇಕು, ಆದರೆ ಅದನ್ನೇ ತಿಂದರೆ ಅಜೀರ್ಣ ಆಗದೋ!?
~
ಹೇಳಿದಾಂಗೆ, ಟೀವಿಲಿ ಅನಂತಶಯನದ ನೆಲಮಾಳಿಗೆಲಿ ನಿಧಿ ಸಿಕ್ಕಿದ ಶುದ್ದಿಯೇ ಬಂದುಗೊಂಡಿದ್ದದು.
ಬೈಲಬಾವಂದ್ರು ಮೊನ್ನೆಂದಲೇ ಮಾತಾಡಿಗೊಂಡಿದ್ದ ಶುದ್ದಿಯ “ಬೆಶಿಶುದ್ದಿ” ಮಾಡಿ ಹೇಳಿಗೊಂಡಿತ್ತಿದ್ದವು ಈ ಟೀವಿಯವು.
– ಸುಬಗಣ್ಣ ಮೊನ್ನೆಂದರಿ ತಣುದ ಚಪಾತಿಯ ಅಟ್ಟಿನಳಗೆಲಿ ಬೇಶಿಕ್ಕಿ “ಬೆಶಿ ಚಪಾತಿ ಇದ್ದು, ಬನ್ನಿ” ಹೇಳಿ ಸಮೋಸ ಕಳುಸಿದ ನಮುನೆ! ;-(
ಒಂದರಿ ವಾರ್ತೆ ಓದುತ್ತವ ಹೇಳುದು, ಅದಾದ ಮತ್ತೆ ಮತ್ತೊಬ್ಬ ಅರಮನೆ ಒಳಂದ ಮೊಬಯಿಲುಪೋನು ಮಾಡಿ ಹೇಳುದು, ಇನ್ನೊಂದರಿ ಅನಂತಶಯನದ ಜಾಲಿಲಿ ಕೆಮರ ಮಡಗಿ ಹೇಳ್ತದು!
ಹೊಸತ್ತಲ್ಲ, ಹೇಳಿದ್ದರನ್ನೇ ಹೇಳುದು, ರೂಪತ್ತೆಯ ನಮುನೆ! 🙂
~
ನೆರಿಯದೊಡ್ಡಪ್ಪಂಗೆ ಟೀವಿಲಿ ಕೇಳಿದ್ದು ಗೊಂತಿದ್ದು. ಅಷ್ಟು ಸರ್ತಿ ಕೇಳಿರೆ ಬೋಚಬಾವಂಗೂ ಅರಡಿಗು.
ಅದು ಮಾಂತ್ರ ಅಲ್ಲದ್ದೆ ದೊಡ್ಡಪ್ಪನ ಹೆರಿಯೋರು ಹೇಳಿಗೊಂಡಿದ್ದ ಬಾಯಿಕತೆಗಳೂ ಗೊಂತಿದ್ದು; ಹಾಂಗೆ ನೋಡ್ತರೆ, ನಮ್ಮೋರ ಜೆನಜೀವನಲ್ಲಿ ತೆಂಕ್ಲಾಗಿಯಾಣ, ಅನಂತಶಯನದ ಕತೆಗೊ ದಾರಾಳ ಇದ್ದು / ಇದ್ದತ್ತು.
ಅನಂತಶಯನಲ್ಲಿ ಹಾಂಗಾತಡ, ಹೀಂಗಾತಡ, ಅರಸು ಮಾರ್ತಾಂಡ ವರ್ಮ ಹಾಂಗೆಹೇಳಿತ್ತಡ, ಹೀಂಗೆ ಮಾಡಿತ್ತಡ – ಎಲ್ಲವುದೇ ಸುಮಾರು ನೀತಿಕತೆಗಳ ನಮುನೆಲಿ ಅಂಬಗಂಬಗ ಕೇಳಿಗೊಂಡಿರ್ತು ಹಳಬ್ಬರು ಮಾತಾಡುವಗ.
ಹಾಂಗೆ ನೆರಿಯದೊಡ್ಡಪ್ಪನ ಹತ್ತರೆಯೇ ಮಾತಾಡ್ತದು ಒಳ್ಳೆದಾತು ಗ್ರೇಶಿಗೊಂಡೆ.
ಅವ್ವಾದರೂ ಹೊಸವಿಶಯ ಎಂತರ ಹೇಳ್ತದು? ಪುನಾ ಟೀವಿಯೋರು ಹೇಳಿದ್ದರ ಕೇಳಿ ಹೇಳಿರೆ ನಿಂಗೊಗೂ ಪಿಸುರು ಬಕ್ಕು.!
ಮೊನ್ನೆಂದಲೇ ಬೈಲಿಲಿ ಮಾತಾಡುದು ಕೇಳಿಕೇಳಿ ಒಪ್ಪಣ್ಣಂಗೂ ರಜ ಅಂದಾಜಿ ಆಯಿದು.
ಅನಂತಶಯನದ ಗುಂಡದೊಳಾಣ ಮೂರ್ತಿಯ ಕಾಲಡಿಲೆ ಇದ್ದಿದ್ದ ಬೀಗವ ತೆಗದು, ನೆಲಮಾಳಿಗೆಗೆ ಇಳುದರೆ ಅಲ್ಲಿ ಆರು ಕೋಣೆಗೊ ಇದ್ದಾಡ; ಕೋಣೆಗೊ ಎಷ್ಟು ದೊಡ್ಡ ಹೇಳ್ತ ಸಂಗತಿ ಒಪ್ಪಣ್ಣಂಗರಡಿಯ..
ಈ ಕೋಣೆಗಳಲ್ಲಿ ಅಗಾಧ ಸಂಪತ್ತು ಇಪ್ಪದಡ.
ಅನಂತಶಯನಲ್ಲಿ ನಿಧಿ ಇದ್ದಾಡ – ಹೇಳ್ತದು ದೊಡ್ಡಪ್ಪಂಗೂ ಗೊಂತಿದ್ದು. ಎಲ್ಲಿಪ್ಪದು ಹೇಳಿ ಗೊಂತಿಲ್ಲದ್ದರೂ, ದೊಡಾ ಬಂಡಾರ ಇದ್ದು ಹೇಳ್ತದು ಕತೆಗಳಲ್ಲಿ ಜನಜನಿತ ಆಗಿಂಡು ಇದ್ದು.
ಒಂದರಿ ಮಾರ್ತಾಂಡವರ್ಮನ ಅಳಿಯ ಕೇಳಿತ್ತಡ, ಎನಗೆ ಬಂಡಾರ ನೋಡೇಕು – ಹೇಳಿಗೊಂಡು.
ಅಷ್ಟಪ್ಪಗ ಅಳಿಯನ ಕೈಗೆ ಬೆಡಿಕೊಟ್ಟು – ಇದಾ, ಮದಾಲು ಎನಗೆ ಬೆಡಿಬಿಡು, ಮತ್ತೆ ನೋಡು – ಹೇಳಿತ್ತಾಡ.
ಹೇಳಿತ್ತುಕಂಡ್ರೆ, ಅಲ್ಯಾಣ ನಿಧಿ ಸಂಗ್ರಹಣೆ ಏಕಮುಖ, ಕೇವಲ ಒಳ ಹೋಪದು ಮಾಂತ್ರ.
ಅದು ಎಷ್ಟಾತು ಹೇಳ್ತದರ ಸ್ವತಃ ರಾಜನೇ ನೋಡ್ಳಿಲ್ಲೆ, ಅದು ದೇವರಿಂಗೆ ಇಪ್ಪದು ಹೇಳ್ತ ಅರ್ತ – ಇದು ಅಜ್ಜಿಕತೆ.
ನೆಡದ್ದೇ ಆಯಿಪ್ಪಲೂ ಸಾಕು, ನವಗರಡಿಯ.
ಹೇಳಿದಾಂಗೆ, ಈ ಅನಂತಶಯನವನ್ನೇ ಈಗಾಣ ಆಧುನಿಕ ರಾಜಕೀಯಲ್ಲಿ ತಿರು ಅನಂತಪುರಂ – ಹೇಳ್ತವಾದರೂ, ಮದಲಾಣ ಹಳಬ್ಬರಿಂಗೆ ಅದು ಅನಂತಶಯನವೇ!
~
ಮೊನ್ನೆ ಯೇವದೋ ಒಂದು ಅಧಿಕಾರಿ ಕೋರ್ಟಿಂಗೆ ಹಾಕಿತ್ತಡ, ಅನಂತಶಯನದ ನಿಧಿಯ ಲೆಕ್ಕಾಚಾರ ಆಯೇಕು – ಹೇಳಿಗೊಂಡು.
ಶಾಸ್ತ್ರಪ್ರಕಾರ ಆಯೇಕೋ ಬೇಡದೋ ಹೇದು ನಿಗಂಟು ಮಾಡ್ಳೆ ಅಲ್ಲಿ ಧರ್ಮಪಂಡಿತ, ಸ್ಮೃತಿಕಾರ ಇಪ್ಪದೋ – ಏವದೋ ಪುರ್ಬುಕೋಲೇಜಿಲಿ ಕಾನೂನು ಕಲ್ತು ಬಂದ ಜೆನ ಇಪ್ಪದು.
ಜಡ್ಜಂದೇ ’ಅಪ್ಪಪ್ಪು, ಆಯೇಕು’ ಹೇಳಿತ್ತಡ. ಆತು, ಒಂದು ದಿನ ಕೊಟ್ಟುಕೋಂಗೊಟ್ಟು ಹಿಡ್ಕೊಂಡು ಬಂದವು, ನೆಲಮಾಳಿಗೆ ಗರ್ಪಲೆ.
ಒಂದೊಂದೇ ಬಾಗಿಲುಗಳ ತೆಗದರೆ ಮತ್ತಾಣದ್ದು ಸಿಕ್ಕುಗಷ್ಟೆ ಅಡ. ಇನ್ನಾಣ ಬಾಗಿಲು ಎಲ್ಲಿರ್ತದು ಹೇಳ್ತ ಸುಳಿವೂ ಸಿಕ್ಕದ್ದ ನಮುನೆ ಮಾಡಿದ್ದವಡ.
ಅಂದ್ರಾಣ ಅರಸುಗೊ ಎಷ್ಟು ಗಟ್ಟಿ ಬಂದವಸ್ತು ಮಾಡಿ ಹೇಮಾರ್ಸಿ ಮಡಗಿದ್ದವು ಹೇಳಿತ್ತುಕಂಡ್ರೆ, ಇವರ ಸಾಮಾನ್ಯದ ಸಲಕರಣೆಗೊ ಸಾಕೇ ಆಯಿದಿಲ್ಲೇಡ!
ಮಾಂಬಳದ ಹಾಂಗೆ ಉಕ್ಕಿನ ತಗಡುಗಳ ಮಡಗಿ, ಅದರ ಏನೆಲ್ಲ ಮಾಡಿ ಸಾದಾರ್ಣದವಂಗೆ ತೆಗದಿಕ್ಕಲೆ ಎಡಿಯದ್ದ ನಮುನೆ ಮಾಡಿ ಹಾಕಿದ್ದವಡ.
ಮತ್ತೆ ಗೇಸುವೆಳ್ಡು ಇದ್ದಲ್ಲದೋ – ಆ ಜೆನರ ಬರುಸಿ, ಒಂದೊಂದೇ ತುಂಡುಮಾಡಿದ್ದಡ.
ಅಂಬಗಾಣ ಇಂಜಿನಿಯರುಗೊ ಯೇವ ಕೋಲೇಜಿಲಿ ಕಲ್ತದಪ್ಪಾ!! ಅಲ್ಲದೋ?
ಹೇಳಿದಾಂಗೆ, ಹೇಮಾರ್ಸಿಮಡಗುವಗ, ಒಳಾಣ ಸೊತ್ತು ಎಷ್ಟು ಮುಖ್ಯದ್ದೋ, ಹೆರಾಣ ಕವಚ ಅಷ್ಟೇ ಬಂದವಸ್ತು ಆಗಿರ್ತು, ಅಲ್ಲದೋ?!
~
ನೆಲಮಾಳಿಗೆಯೊಳ ಆರು ಕೋಣೆ ಇದ್ದತ್ತಾಡ, ಎಲ್ಲದರ್ಲಿಯೂ ನಿಧಿ – ನಿಧಿ – ನಿಧಿ!
ಅಷ್ಟ್ರಒರೆಂಗೆ ನೆರಿಯದೊಡ್ಡಪ್ಪನ ಹಾಂಗಿರ್ತೋರಿಂಗೆ ಮಾಂತ್ರ ಗೊಂತಿದ್ದಿದ್ದ ಆ ’ಬಂಡಾರದ ಗುಟ್ಟು’ ಈಗ ಲೋಕತ್ರ ಗೊಂತಾತು.
ಟೀವಿಯೋರಿಂಗೆ ಬೇರೆಂತ ಕೆಲಸವೂ ಇಲ್ಲೆ, ಎಲ್ಲ ಕೆಮರವನ್ನುದೇ ತೆಂಕ್ಲಾಗಿ ಹಿಡುದವಡ.
ಬಂಡಾರ ಒಡವಲೆ ಕೋರ್ಟಿಂದ ನಿಯಮಿತ ಆದೋರು ಮದಲಿಂಗೆ ಜಡ್ಜ ಆಗಿದ್ದೋರಡ; ಈಗ ರಿಠೇರ್ಡು.
ಅವು ಆರು ಕೋಣೆಲಿ, ಒಂದೊಂದನ್ನೇ ತೆಗದ ಹಾಂಗೆ – ಅದರ ಕ್ರಯ ಎಷ್ಟಕ್ಕು ಹೇಳ್ತರ ಆಲೋಚನೆ ಮಾಡಿ ಹೆರಾಂಗೆ ಹೇಳಿದವಡ.
ಅವು ಟೀವಿಯೋರಿಂಗೆ ಹೇಳಿ, ಟೀವಿಯೋರು ಸಮಸ್ತರಿಂಗೂ ಹೇಳಿ ಹೇಳಿ ಹೇಳಿ ಹೇಳಿ ಹೇಳಿ….
ದೊಡ್ಡಪ್ಪಂಗೆ ಮತ್ತೊಂದರಿ ಪಿಸುರು ಎಳಗಿತ್ತು.
ಐದು ಕೋಣೆ ನಿಧಿಯ ಒಟ್ಟು ಕ್ರಯಮಾಡಿದ್ದದು ಒಂದು ಲಕ್ಷಕೋಟಿ ಮೌಲ್ಯ ಆತಡ – ಹೇಳಿದವು ದೊಡ್ಡಪ್ಪ.
~
ಇವು ನಿಧಿ ತೆಗದ ಒಯಿವಾಟು ದೊಡ್ಡಪ್ಪಂಗೆ ಏನೂ ಸಮದಾನ ಆದ ಹಾಂಗಿಲ್ಲೆ.
ಮದಲಿಂಗೆ ರಾಜರ ಕಾಲಲ್ಲಿ ಹಾಂಗೇ ಅಡ,
ಒಬ್ಬ ರಾಜಂಗೆ ಹಲವಾರು ಸಾಮಂತರುಗೊ, ತುಂಡರಸಂಗೊ. ಅವು ಅವರ ರಾಜ್ಯಲ್ಲಿ ತೆರಿಗೆ ಸಂಪಾಲುಸಿ ರಾಜಕೀಯ ಮಾಡ್ತದು.
ಒರಿಶಾವಧಿ ದೊಡ್ಡರಾಜಂಗೆ ಕಪ್ಪಕಾಣಿಕೆಗಳ ಎತ್ತುಸೇಕು. ಈ ಕಾಣಿಕೆಗಳ ಸಂಪಾಲುಸಿ ಮಡಗುದು ದೊಡ್ಡ ರಾಜನ ಕಾರ್ಯ.
ಕೆಲವು ಜೆನ ಅದರ ಮುಡುಚ್ಚಿ (ಹಾಳುಮಾಡಿ) ವಿಲಾಸಮಾಡಿಗೊಂಡಿತ್ತಿದ್ದವಡ, ಮತ್ತೆ ಕೆಲವು ಜೆನ ಅದರ’ಕಷ್ಟಕಾಲಲ್ಲಿ ಕೊಡು’ ಹೇಳಿಗೊಂಡು ದೇವರ ಕಾಲಬುಡಲ್ಲಿ ಹೇಮಾರ್ಸಿ ಮಡಗ್ಗಡ.
ಅನಂತಶಯನದ ಅರಸುದೇ ಹೀಂಗೇ ಮಾಡಿದ್ದಾಡ.
ಸಿಕ್ಕಿದ ಸುವಸ್ತುಗೊ, ಸಂಪತ್ತುಗೊ ಎಲ್ಲವನ್ನುದೇ ತೆಗದು ರಾಜ್ಯದ ಕೇಂದ್ರಸ್ಥಾನದ ದೇವಸ್ಥಾನಲ್ಲಿ ತೆಗದು ಮಡಗಿತ್ತಾಡ.
ಅದರಿಂದ ಮತ್ತಾಣ ರಾಜರುಗೊ ಆ ಸಂಪತ್ತಿನ ಕಮ್ಮಿ ಆಗದ್ದ ನಮುನೆ ನೋಡಿಗೊಂಡು, ಇನ್ನೂ ದೊಡ್ಡಮಾಡಿಗೊಂಡೇ ಹೋದವಡ.
ತಲೆಮಾರುಗಳ ಕಾಲ ಈ ನಿಧಿಸಂಗ್ರಹಣೆ ಆಗಿ ಆಗಿ ಅನಂತಶಯನನ ಕಾಲಬುಡಲ್ಲಿ ತಂದು ತಂದು ಹಾಕಿದವಡ.
ಏನಾರು ಬರಗ್ಗಾಲ, ಪ್ರಕೃತಿವಿಕೋಪ, ಬೆಳೆನಾಶ, ಅತಿವೃಷ್ಟಿ, ಅನಾವೃಷ್ಟಿ ಆದಲ್ಲಿ ಈ ಸಂಪತ್ತಿನ ಉಪಯೋಗುಸಿ ಹತ್ತರಾಣ ರಾಜ್ಯಂದ ಆಹಾರಂಗಳ ವಿಕ್ರಯಮಾಡಿ ತಪ್ಪಲಕ್ಕಾನೇ?!
~
ಇಷ್ಟಾಗಿ, ದೊಡ್ಡಪ್ಪ ಒಂದು ಸಂಗತಿ ಹೇಳಿದವು:
ಸಮಾಜಲ್ಲಿ ನಾಕು ನಮುನೆ ಜೆನಂಗೊ ಅಡ. ಬೇಡಿ ತಿಂತವ°, ದುಡುದು ತಿಂತವ°, ಕೂದು ತಿಂತವ°, ಮನುಗಿ ತಿಂತವ° ಹೇಳಿಗೊಂಡು.
- ದೇವಸ್ಥಾನಂಗಳ ಎದುರೆಯೋ ಮಣ್ಣ ಕೂದಂಡು, ಆರಾರ ಪೈಸೆಯ ನಿರೀಕ್ಷೆಲಿ ಜೀವನ ತೆಗೆತ್ತವ ಬೇಡಿ ತಿಂತವ° ಅಡ.
ಸ್ವಂತ ದುಡಿವ ಶೆಗ್ತಿ ಇಲ್ಲದ್ದೋರು ಈ ಕಾರ್ಯ ಮಾಡ್ತದಡ.- ತನ್ನ ಜೀವನಲ್ಲಿ ಒಂದು ಅಶನದ ದಾರಿ ಹುಡ್ಕಿ, ತನ್ನತನಲ್ಲೇ ಪೈಶೆ ಸಂಪಾಲುಸಿ ಅದರಲ್ಲಿ ಜೀವನ ತೆಗೆತ್ತವ ದುಡುದು ತಿಂಬವ°.
ಮೈಕೈಗಟ್ಟಿ ಇಪ್ಪನ್ನಾರ ದುಡುದು ತನ್ನ ಮಕ್ಕೊಗೆ ಇದರಿಂದ ಹೆಚ್ಚು ಸುಖ ಕೊಡ್ತ ಕಾರ್ಯ ಇವನ ಜೀವನದ ಗುರಿ ಆಡ. ಜಾಸ್ತಿ ಶ್ರೀಮಂತ ಅಲ್ಲದ್ದರೂ, ದುಡುದು ಹೊಟ್ಟೆತುಂಬುಸುತ್ತದು ಈ ವರ್ಗ ಅಡ. ಸಮಾಜದ ಹೆಚ್ಚಿನಪಾಲುದೇ ಈ ವರ್ಗಲ್ಲೇ ಇದ್ದವಾಡ.- ಹೆರಿಯೋರು ಮಾಡಿದ ಅಗಾಧ ಸಂಪತ್ತಿನ ಚೆಂದಕೆ ವಿನಿಯೋಗಿಸಿಗೊಂಡು, ನಾಳೇಣ ಚಿಂತೆ ಇಲ್ಲದ್ದೆ ಜೀವನ ಸಾಗುಸುತ್ತವ ಕೂದು ತಿಂಬವ°.
ಅರ್ಥಾತ್, ಇವ° ಕೂದಲ್ಲೇ ಕೂದೊಂಡಿದ್ದರೂ, ಏನೂ ದುಡಿಯದ್ದರೂ ಇವನ ಜೀವನ ಆರಾಮಲ್ಲಿ ತೆಗವಷ್ಟು ಸಂಪತ್ತು ಶ್ರೀಮಂತಿಕೆ ಇದ್ದು – ಹೇಳಿಗೊಂಡು.- ಆದರೆ, ಅಖಂಡ ಸಂಪತ್ತಿನ ಒಡೆಯರಾಗಿ, ಇನ್ನು ಮುಂದಕ್ಕೂ ಅದೇ ನಮುನೆ ಸಂಪತ್ತು ಬೆಳೆತ್ತಾ ಇಪ್ಪ ವೆಗ್ತಿಗೊಕ್ಕೆ ಮನುಗಿ ಉಂಬವ° ಹೇಳ್ತದಡ.
ಮದಲಾಣ ಕಾಲಲ್ಲಿ ರಾಜರಿಂಗೆ ಈ ಮಾತು ಅನ್ವಯ ಆಗಿಂಡು ಇತ್ತಾಡ. ಆಗರ್ಭ ಶ್ರೀಮಂತರಾಗಿದ್ದೊಂಡು, ಏನೂ ಮಾಡದ್ದೇ ಕೇವಲ ರಾಜಕೀಯ ಚಿಂತನೆಗಳ ಮಾಡಿಂಡು, ನೆಮ್ಮದಿಲಿ ಮನುಗಿ ಒರಗಿಂಡು ಜೀವನಲ್ಲಿ ಕೊಶಿಕಾಣ್ತೋರು.
ಈ ನಮುನೆಯೋರು ತುಂಬಾ ಕಮ್ಮಿ ಇಪ್ಪದಾಡ.
ಹಾಂಗಿರ್ತ ಒಂದು ರಾಜಕುಟುಂಬ ಅನಂತಶಯನದ್ದು ಅಡ.
~
ಆದರೆ, ಆ ರಾಜಪೀಠಕ್ಕೇ ಒಂದು ದೇವರು ಬೇಕಲ್ಲದೋ – ಆ ದೇವರುದೇ ಮನಿಗಿಂಡಿಪ್ಪೋನಡ.
ಶಯನ ಮಾಡ್ತ ಅನಂತ – ಅನಂತಶಯನ ಹೇಳರೆ ಅವನೇ ಅಡ.
ಅವನಿಂದಾಗಿಯೇ ಆ ಊರಿಂಗೆ- ರಾಜ್ಯಕ್ಕೆ ಆ ಹೆಸರು ಬಂತಾಡ.
ದೊಡ್ಡಪ್ಪ ಒಂದು ಕತೆ ಹೇಳುಗು:
ನಮ್ಮ ಬೈಲಿಲಿ ಅನಂತಪುರ ದೇವಸ್ಥಾನ ಇದ್ದಲ್ಲದೋ – ಅಲ್ಲಿ ಒಬ್ಬ ಲೂಟಿಮಾಣಿ ಪೂಜೆಬಟ್ರಿಂಗೆ ವಿಷ್ಣುಸಹಸ್ರನಾಮ ಹೇಳುವಗ ಲೂಟಿಕೊಟ್ಟೊಂಡಿತ್ತಿದ್ದನಾಡ,
ಒಂದರಿ ಬಟ್ರು ಕೂದಲ್ಲಿಂದಲೇ ಕೈಲಿ ಮೆಲ್ಲಂಗೆ ನೂಕಿದನಾಡ. ಈ ಮಾಣಿ ಬಿದ್ದು, ಓಡ್ಳೆ ಸುರುಮಾಡಿದನಾಡ – ಸೊರಂಗಲ್ಲಿ.
ಚೆಲ, ಇದಾರಪ್ಪಾ – ಇಲ್ಲದ್ದ ಸೊರಂಗ ಸೃಷ್ಟಿಮಾಡಿ ಓಡೇಕಾರೆ –ಬಟ್ರಿಂಗೆ ಗಡಿಬಿಡಿಅಪ್ಪಲೆ ಸುರುಆತು.
ಹಿಂದಂದ ಓಡಿದವು, ಅಷ್ಟಪ್ಪಗ ಗೊಂತಾತು – ಅವ ಸಾಕ್ಷಾತ್ “ಅನಂತ”ನೇ ಹೇಳಿಗೊಂಡು.
ಓಡಿಓಡಿ ಸಿಕ್ಕಿದನಾಡ, ಮರದಡಿಲಿ ಮನಿಕ್ಕೊಂಡು.
ಹಶುವಿಲಿದ್ದಿದ್ದ ಆ “ಮಾಣಿ”ಗೆ ಒಂದು ಮಾಯಿನಣ್ಣು ಕೊಟ್ಟವಡ, ನೇವೇದ್ಯಕ್ಕೆ ತಿಂಬಲೆ.
ಆ ಗಡಿಬಿಡಿಗೆ ನೈವೇದ್ಯಕ್ಕೆ ಹರಿವಾಣ ಎಲ್ಲಿದ್ದು – ಹತ್ತರೆ ಇದ್ದಿದ್ದ ಕರಟಲ್ಲಿ ಮಡಗಿ ನೈವೇದ್ಯ ಮಾಡಿದನಡ.
ಇಂದಿಂಗೂ ಅಲ್ಲಿ ಮಾಯಿನಣ್ಣು ನಿತ್ಯ ನೈವೇದ್ಯ ಇದ್ದಾಡ, ಚಿನ್ನದ ಕರಟಲ್ಲಿ ಮಡಗಿಂಡು! – ಹೇಳಿದವು ದೊಡ್ಡಪ್ಪ.
ಈಗಾಣ ’ಕೇರಳಲ್ಲಿ’ ಅನಂತಶಯನ ಆಚಕೊಡಿ, ಅನಂತಪುರ ಈಚಕೊಡಿ, ಎಲ್ಲಿಂದೆಲ್ಲಿಗೆ ಸಮ್ಮಂದ!!
ಅಲ್ಲದೋ!
~
ಏನೇ ಆಗಲಿ,
ಇಷ್ಟೊರಿಶಂದ ಮನುಗಿದ ದೇವರ ಕಾಲಬುಡಲ್ಲಿದ್ದ ನಿಧಿಯ ಕ್ರಯಲೆಕ್ಕಮಾಡಿ ಬೇಡದ್ದ ತಲೆಬೆಶಿ ಎಂತಕೆ ಕಟ್ಟಿಗೊಂಡವೋ ಈ ಸರಕಾರದೋರು.
ಇಷ್ಟು ಸಮೆಯ ಸ್ವತಃ ಅನಂತಶಯನನೇ ಕಾಪಾಡಿಗೊಂಡು ಬಂದ°. ನಮ್ಮ ಬರೆಗ್ಗಾಲಲ್ಲಿ ಕೊಡ್ಳೆ ಹೇಳಿಗೊಂಡು – ಬರಗಾಲ ಬಯಿಂದಿಲ್ಲೆ, ಅದು ಬೇರೆ ವಿಶಯ!
ಆದರೆ, ಆ ರಹಸ್ಯ ಭಾಂಡಾಗಾರದ ಒಳ ನಾವಿಳುದು, ಬೀಗಒಡದು, ಮೌಲ್ಯಮಾಪನ ಮಾಡಿದ ಮೇಗೆ – ಅವನ ಜೆವಾಬ್ದಾರಿ ಅಲ್ಲ.
ನಾವೇ ಕಾಪಾಡಿಗೊಂಡು ಬರೇಕು, ಅಲ್ಲದೋ?
ಅನಂತ ಸಂಪತ್ತು ಮಡಿಕ್ಕೊಂಡು ಆರಾಮಲ್ಲಿ ಮನುಗಿದ್ದ ದೇವರ ಕಾಲಡಿಂದ ಸಂಪತ್ತಿನ ಹೆರತೆಗದು ಹಾಕಿದ ಕ್ರಮ ಸರಿಅಲ್ಲ – ಹೇಳ್ತದು ನೆರಿಯದೊಡ್ಡಪ್ಪನ ವಾದ.
~
ನಿಧಿ ಇದ್ದು ಹೇಳ್ತದು ಲೋಕಪ್ರಚಾರ ಆಗಿದ್ದರೆ ಸಾಕಿತ್ತು, ಅದರ ಮೌಲ್ಯ ಲೆಕ್ಕ ಹಾಕುತ್ಸು ಎಂತ್ಸಕೇ?
ಇನ್ನು ಆ ನಿಧಿಯ ಸರ್ಕಾರ ತೆಕ್ಕೊಂಬಲೂ ಸಾಕಡ್ಡ, ಹಾಂಗಾರೆ ಎಷ್ಟು ಪಳ್ಳಿ ಕಟ್ಳಕ್ಕಲ್ಲದೋ?!
ಮಯಿಸೂರಿಲಿ ಒಂದು ಚರ್ಚು ಇದ್ದು, ಅದಕ್ಕೆ ಹೋದೋರು ಬಂದೋರು ಎಲ್ಲೋರುದೇ ಪೈಶೆ ಹಾಕುತ್ತವು, ಅದರ ಲೆಕ್ಕ ಸರಕಾರಕ್ಕೆ ಸಿಕ್ಕುಗೋ – ಕೇಳಿದವು.
~
ಮಳೆಬಿಟ್ಟಪ್ಪಗ ಮನಗೆತ್ತಿದೆ.
ಭೂಮಿತಂಪಾದರೂ ಮನಸ್ಸು ಬೆಶಿ ಏರಿಗೊಂಡೇ ಇದ್ದತ್ತು. ಅದೇ ದಿನ ಇರುಳು ಪೆರ್ಲದಣ್ಣ ಪೋನುಮಾಡಿಪ್ಪಗ ಇನ್ನೊಂದು ಸಂಗತಿ ಹೇಳಿದ,
ಅನಂತಶಯದ ಒಯಿವಾಟಿಂದಲೂ ದೊಡ್ಡ ಒಯಿವಾಟು ವಿಜಯನಗರಕ್ಕೆ ಇದ್ದತ್ತಾಡ.
ಅಲ್ಲಿಂದ ಹೆಚ್ಚಿನ ಶ್ರೀಮಂತಿಕೆ, ಸಂಪತ್ತು – ಎಲ್ಲವುದೇ ವಿಜಯನಗರ ಸಾಮ್ರಾಜ್ಯಲ್ಲಿ ಇದ್ದತ್ತು, ಹಾಂಗಾರೆ ಎಷ್ಟು ಚಿನ್ನಂಗೊ ಇದ್ದಿಕ್ಕು!?
ಎಲ್ಲವುದೇ ಬ್ಯಾರಿ ಆಕ್ರಮಣಂಗಳಲ್ಲಿ ದರೋಡೆ ಆಗಿ ಹೋಯಿದು.
ಮಹಮ್ಮದ್ ಘಜ್ನಿ ಅಂತೂ – ಹದ್ನೇಳು ಸರ್ತಿ ಭಾರತಕ್ಕೆ ಬಂದು; ಪ್ರತಿಸರ್ತಿಯೂ ದೇವಸ್ಥಾನಂಗಳ ಗುಂಡದೊಳ ಮೂರ್ತಿ ಒಡದು, ಬಂಡಾರ ದೋಚಿಗೊಂಡಿತ್ತು.
ಆ ಮಟ್ಟಿಂಗೆ ಅನಂತ ಶಯನದ ಅರಸುಗಳ ಬಂದವಸ್ತು ಮೆಚ್ಚಲೇ ಬೇಕಾದ್ದು – ಹೇಳಿದ.
ಒಪ್ಪಣ್ಣಂಗೆ ಅಪ್ಪನ್ನೇ ಕಂಡತ್ತು.
ನಿಂಗೊ ಎಂತ ಹೇಳ್ತಿ!?
ಒಂದೊಪ್ಪ: ಮನುಗಿದ್ದ ದೇವರ ಎದ್ದುಕೂಪ ಹಾಂಗೆ ಮಾಡದ್ರೆ ಸಾಕು ಈ ಸರಕಾರ – ಹೇಳಿದವು ನೆರಿಯದೊಡ್ಡಪ್ಪ.
ಸೂ:
- ಚಿತ್ರ: ಅಂತರ್ಜಾಲ ಕೃಪೆ
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಇಲ್ಲಿ ಒಪ್ಪ೦ಗಳ ಓದಿಯಪ್ಪಗ ಎಷ್ಟೋ ಜೆನ ಸ೦ಪತ್ತಿನ ಸದ್ವಿನಿಯೂಗದ ಬಗ್ಯೆ ಬರದ್ದದು ಓದಿದೆ ಸಮಾಜಲ್ಲಿ ಸದ್ವಿನಿಯೂಗ ಹೆಳುವದು ಒಬ್ಬೊಬ್ಬ೦ಗೆ ಒ೦ದೊ೦ದು ರೀತಿ.ಎನಗೆ ಹೆ೦ಡತ್ತಿಗೆ ಚಿನ್ನ ತ೦ದು ಕೊಡ್ತದು ಇನ್ನೊಬ್ಬ೦ಗೆ ಇನ್ನೊ೦ದು ಹಾ೦ಗಾಗಿ ಅದು ಪದ್ಮನಾಭನ ಸೊತ್ತಾಗಿ ಪದ್ಮನಾಭನಲ್ಲೇ ಇರಳಿ ಹೆಳಿ ಎನ್ನ ಅಭಿಪ್ರಾಯ.ಅಲ್ಲ ಎನ್ನ ಅಬಿಪ್ರಾಯ ಕೇಳಿ ಆರು ಎ೦ತೂ ಮಾಡ್ಲಿಲ್ಲೆ.ಒಪ್ಪ೦ಗಳೊಟ್ಟಿ೦ಗೆ
sooper oppanna.
samayakke sariyada shuddi.
alliyana sampattina anantha shayanane kaapadekkaste kaapadugude.
ellavude sulalithavaagi sari akku.
devaringe yavadude kasta allanne.
devara badukku devare olishiyongu.
good luck
ಸಕಾಲಿಕ ಲೇಖನ,ಮಾಹಿತಿಯುಕ್ತ ಪ್ರತಿಕ್ರಿಯೆ. ಓದಿದ ಮೇಲೆ ಯೋಚನೆ ಆತು.”ಆಪದ್ಧನ” ಹೇಳಿ ದೇವರ ಪಾದಲ್ಲಿ ಸ೦ಗ್ರಹ ಮಾಡಿದ ಈ ಸೊತ್ತು ನಮ್ಮ ದೇಶದ ಒಳವೇ ತು೦ಬಿಪ್ಪ ಭ್ರಷ್ಟ೦ಗಳ ಕೈಗೆ ಸಿಕ್ಕಿ ಕರಗದ್ದರೆ ಸಾಕು . ಶೇಷಶಯನನೇ ಕಾಪಾಡೆಕ್ಕು,ಅಷ್ಟೇ.
ಈ ರಾಜ ಕುಟು೦ಬದ ನಿಷ್ಠೆಗೆ ತಲೆಬಾಗೆಕ್ಕು.ಅವಕ್ಕೆ ಸಕಲವೂ ಗೊಂತಿದ್ದರೂ ಸ್ವಾರ್ಥ ಯೋಚನೆ ಮಾಡಿದ್ದವಿಲ್ಲೆ.
ಆಪದ್ಧನ ಸಂಗ್ರಹ ಮಾಡಿ, ಮುಂದೆ ಆರೇ ಅಧಿಕಾರ ಬಂದರೂ ಸಿಕ್ಕುತ್ತ ನಮುನೆಲಿ ರಾಜ್ಯದ ಪ್ರಧಾನ ದೇವಸ್ಥಾನಲ್ಲಿ ಸಂಗ್ರಹ ಮಾಡಿದ ರಾಜರು ನಿಜವಾಗಿಯೂ “ರಾಜಕಾರಣ” ಅರಡಿಗಾದೋರು, ಅಲ್ಲದೋ?
ಒಪ್ಪ ಒಪ್ಪಕ್ಕೆ ಒಪ್ಪಂಗೊ.
ಒಳ್ಳೆಯ ಸಂದರ್ಭೋಚಿತ ಲೇಖನ. ಒಪ್ಪ ಆಯಿದು.
{ಮನುಗಿದ್ದ ದೇವರ ಎದ್ದುಕೂಪ ಹಾಂಗೆ ಮಾಡದ್ರೆ ಸಾಕು ಈ ಸರಕಾರ…}
ಈ ಒಪ್ಪ ಸೂಪರು ಆಯಿದು. ಈಗಾಣ ಜೆನಂಗೊ ಪೈಸೆ ಸಿಕ್ಕುತ್ತರೆ ದೇವರಿಂಗೆ ಪ್ಯಾಂಟು, ಕೂಲಿಂಗ್ ಗ್ಳಾಸು ಹಾಕಲುದೇ ಹಿಂಜರಿಯವು.
ಹ ಹ, ಲಾಯಿಕಾಯಿದು ಒಪ್ಪ!
ಚೆನ್ನೈಬಾವನ ಊರಿಲಿ ಕರುಣಾದೇವರು ಕೂಳಿಂಗ್ಳಾಸು ಹಾಕುತ್ತಲ್ಲದೋ ಈಗಳೇ? 😉
ತಿರುವಾ೦ಕೂರಿನ ರಾಜ೦ಗೊ ಸ೦ಪತ್ತಿನೊಟ್ಟ್೦ಗೆ ದಾನಧರ್ಮಲ್ಲಿಯೂ ಎತ್ತಿದ ಕೈ.ಮದಲಿ೦ಗೆ ಮುರಜೆಪ ಹೇಳಿ ಮಾಡ್ಸಿ ಹತ್ತು ಸಾವಿರ ಬ್ರಾಹ್ನಮಣರಿ೦ಗೆ ಊಟ ಕೊಟ್ಟೊಡಿತ್ತಿದ್ದವು ಮಾ೦ತ್ರ ಅಲ್ಲ ಒ೦ದೊ೦ದು ಗಚಿನ್ನದ ಪಾವಲಿಯನ್ನೂ ಕೊಟ್ಟೊ೦ಡಿತ್ತಿದ್ದವಾಡ.ಹಾ೦ಗೆ ಅಲ್ಲಿಪ್ಪ ದೊಡ್ಡ ದೊಡ್ಡ ಪಾತ್ರ೦ಗಳಲ್ಲಿ ಅಡುಗೆ ಮಾಡ್ಲೆ ಹಾಕೇಕಾದ ಸಾಮಾನುಗಳ ಲೆಕ್ಕಾಚಾರ ಅದದು ಪಾತ್ರ೦ಗಳಲ್ಲೇ ಇದ್ದು.(ಹುಳಿ,ಮೆಣಸು,ಉಪ್ಪು ಇತ್ಯಾದಿ ಗಳದ್ದು)ನಿಜವಾಗಿಯೂನೋಡೇಕಾದ ಅದ್ಬುತ ಸಾನ್ನಿದ್ಯ ಆ ಅನ೦ತಶಯನನದ್ದು.ಒಟ್ಟಿ೦ಗೆ ಮೆಚ್ಹೇಕಾದ್ದದು ಆ ರಾಜ ಮನೆತನದವರ ಭಕ್ತಿಯ.ಅನ೦ತ ಶಯನಾ ನಿನ್ನ ಭಕ್ತರಾದ ಈ ತಿರುವಾ೦ಕೂರಿನ ರಾಜರುಗೊ ಒಳುಸಿ ಬೆಳಸಿದ ಈ ಸೊತ್ತು ಸರ್ವಸ್ವವು ಆ ರಾಜ೦ಗಳ ಸುಪರ್ದೀಲೇ ನಿನ್ನದೇ ವಶಲ್ಲಿ ಇಪ್ಪ ಹಾ೦ಗೂ ಈ ಬ್ರಷ್ಟ ರಾಜಕಾರಣಿಗೊ ಎಲ್ಲಿಯಾರೂ ಅದರಹತ್ತರೆ ಬ೦ದರೂ ನಿನ್ನ ಹಾಸಿಗೆ ಆದ ಆ ಅದಿಶೇಷನ ಕಳುಸಿ ಅವರ ವ೦ಶ ನಿರ್ವ೦ಶ ಆವುತ್ತ ಹಾ೦ಗೂ ಮಾಡು ಹೇಳಿ ಕೇಳಿಯೋಳುತ್ತೆ.ಒಪ್ಪ೦ಗಳೊಟ್ಟಿ೦ಗೆ
ದಾನದರ್ಮದ ಕತೆ ಆಚಮನೆ ದೊಡ್ಡಪ್ಪನೂ ಹೇಳಿಗೊಂಡಿತ್ತಿದ್ದವು.
ಅಲ್ಲಿ ಆದ ಯೇವದೋ ಒಂದು ಮಹಾ ಕಾರ್ಯಕ್ರಮಕ್ಕೆ ನಮ್ಮ ಬೈಲಿಂದಲೂ ಕೆಲವು ಒಯಿದೀಕರು ಹೋಯಿದವಡ, ಹೇಳಿತ್ತಿದ್ದವು.
ಬೈಲಿಲಿ ನೆಂಪು ಮಾಡಿದ್ದಕ್ಕೆ ಒಪ್ಪಂಗೊ.
ಈ ಲಿಂಕ್ ಗಳಲ್ಲಿ ಕೊಟ್ಟದರ ಓದಿದರೆ ಈ ಸಂಪತ್ತಿನ ದುರುಪಯೋಗ ಅಕ್ಕೊ ಹೇಳಿ ಸಂಶಯ ಬತ್ತು.ಕೆಲವರು ಅವು ತಿಳಿಕ್ಕೊಂಡ ಇತಿಹಾಸವೇ ಸರಿ ಹೇಳಿ ಬರೆದ್ದವು.ಮೀಸೆ ಮತ್ತೆ ಎದೆ ಮುಚ್ಚಿದ್ದಕ್ಕೆ ತೆರಿಗೆ ಹಾಕಿದರೆ ಇಷ್ಟು ಸಂಪತ್ತು ಶೇಖರ ಅಕ್ಕೊ?ಹೆಚ್ಚಿಗೆ ಹೇಳಿದರೆ ಆವಾಗ ಎಷ್ಟು ಕಾಸಿನ ತೆರಿಗೆ ಇದ್ದಿಕ್ಕು-ಎಷ್ಟು ವಹಿವಾಟು ಇದ್ದಿಕ್ಕು-ಜನಸಂಖ್ಯೆ ಇದ್ದಿಕ್ಕು-ಯಾವ ಕಲ್ಪನೆಯೂ ಬರೆದ್ದವಕ್ಕೆ ಇಲ್ಲೆ!ಒಟ್ಟಾರೆ ಬರವದು-ಬರವದು-ಇಷ್ಟೆ.ಈ ದುಷ್ಪ್ರಚಾರ ಬೇಕಾತಿಲ್ಲೆ.
ಖ೦ಡಿತವಾಗಿಯೂ ನಿ೦ಗೊ ಹೇಳಿದ ಮಾತಿನ ಒಪ್ಪೆಕ್ಕಾದ್ದೆ..
ಕೆಲವು ಜನ ಇದ್ದವು ಮಾವಾ.. “ದೋಷೈಕ ದೃಕ್” ಹೇಳ್ತ ಹಾ೦ಗಿಪ್ಪವು. ಬೇರೆ ಎಷ್ಟೋ ಧನಾತ್ಮಕ ವಿಷಯ೦ಗೊ ಇವಕ್ಕೆ ಸಿಕ್ಕಿದ್ದಿಲ್ಲೆ. ಎಲ್ಲಿ೦ದಲೋ ಹುಡ್ಕಿ ಎ೦ತಾರು ಋಣಾತ್ಮಕ ವಿಷಯ೦ಗಳ ತೆಕ್ಕೊ೦ಡು ಬತ್ತವು.
ಮೊದಲು ಒ೦ದು ಜನ ಇತ್ತಡ- ಎ೦ತ ಕ೦ಡ್ರೂ ಇದು ಸರಿ ಇಲ್ಲೆ ಹೇಳಿ ಹೇಳ್ತ ಅಭ್ಯಾಸ. ಆ ಜನದ ಗೆಳೆಯ ಹೇ೦ಗಾರು ಈ ಜನರ ಹತ್ರೆ ಒಳ್ಳೇದಾಯಿದು ಹೇಳಿ ಹೇಳುಸೆಕು ಹೇಳಿ ಶ್ರಧ್ಧೆ ವಹಿಸಿ ಒ೦ದು ಮನೆ ಕಟ್ಟಿಸಿ ಆ ಜನದ ಹತ್ರೆ ಕೇಳಿತ್ತಡ, ಹೇ೦ಗಾಯಿದು ಹೇಳಿ. ಆ ಜನಕ್ಕೆ ಎಷ್ಟು ಹುಡ್ಕಿರೂ ಎ೦ತ ಕೊರತ್ತೆ ಕ೦ಡಿದಿಲ್ಲೆ, ಕಡೇ೦ಗೆ ಹೇಳಿತ್ತಡ- ಮನೆ ತೊ೦ದರೆ ಇಲ್ಲೆ, ಆದರೆ ಮುರಿವಲೆ ತು೦ಬ ಕಷ್ಟ ಅಕ್ಕು ಹೇಳಿ. ಹೀ೦ಗಿರ್ತ ಮೊಸರಿಲ್ಲಿ ಕಲ್ಲು ಹುಡುಕ್ಕುತ್ತ ಜನ೦ಗಳ ಎ೦ತ ಮಾಡುವದು?
ನಮ್ಮ ಭಾರತ ಭೂಮಿ ಎಷ್ಟು ಸಂಪತ್ತಿನ ದೇಶ ಆಗಿತ್ತು ಹೇಳುದಕ್ಕೆ ಇದುವೇ ಸಾಕ್ಷಿ.ಭೂಮಿಯ ಅಡಿಲಿ ಲೋಕದ ಹಿತಕ್ಕೋಸ್ಕರ ಭಗವಂತನೇ ಕಾದೊಂಡು ಇಪ್ಪ ಸಂಪತ್ತು.ಭೂಮಿಯ ಮೇಲೆ ಕೃಷಿ ಸಂಪತ್ತು.ಆ ಮೂಲಕ ದೇಶದ ಪ್ರತಿಯೊಬ್ಬನ ಹಸಿವು ತಣಿಶುವ ಸಂಪತ್ತು.ಯುವ ಜೆನಂಗೊಕ್ಕೆ ವಿದ್ಯೆಯ ಅನುಗ್ರಹಿಸಿ ಪ್ರಪಂಚದ ನಾನಾ ಮೂಲೆಲಿ ಕೆಲಸ ಮಾಡುವ ಮೂಲಕ ನಮ್ಮ ಭಾರತ ಅನೇಕ ರೀತಿಲಿ ಸಂಪತ್ತಿನ ದೇಶ ಆಯಿದು ಹೇಳುದರ್ಲಿ ಎರಡು ಮಾತು ಇಲ್ಲೆ..ನಮ್ಮ ಗುರುಗ ಒಂದು ಪ್ರವಚನಲ್ಲಿ ಹೇಳಿಯೊಂಡು ಇದ್ದ ಮಾತು ನೆಂಪಾವ್ತು .ಬೆಳಕಿನ ಹೊಡೆಂಗೆ ಹೋಪ ದೇಶ ನಮ್ಮದು.ಅದಕ್ಕೆ “ಭಾ”,ಹೇಳಿ ಹೇಳ್ತವು.ಅದರಲಿ ನಿರತರಾಗಿಪ್ಪವು ಭಾರತರು.ಈ ಮಾತು ಈಗ ಎಷ್ಟು ಸತ್ಯ ಹೇಳಿ ಅನ್ಸುತ್ತು ಅಲ್ದಾ?ಸರ್ಪಮಲೆ ಮಾವ ಕೊಟ್ಟ ಸಂಕೊಲೆಲಿ ತುಂಬಾ ವಿಷಯ ಇದ್ದು.ಧನ್ಯವಾದ ಮಾವ,
ಸಾಂದರ್ಭಿಕ ಲೇಖನವ ಚೆಂದಕೆ ವಿವರಣೆ ಕೊಟ್ಟದಕ್ಕೆ ಒಪ್ಪಣ್ಣಾ,ನಿನಗೆ ಅನಂತ ಧನ್ಯವಾದಂಗೋ..
ಅನಂತಪುಅರಕ್ಕೂ ನಮ್ಮ ಹೊಡೆಂಗೆ ಇಪ್ಪ ಸಂಮಂದ ಈ ಕೆಳಾಣ ಕೊಂಡಿಲಿ ಇದ್ದು.
http://www.udayavani.com/news/80967L15-%E0%B2%85%E0%B2%A8-%E0%B2%A4%E0%B2%B6%E0%B2%AF%E0%B2%A8–%E0%B2%95%E0%B2%B0-%E0%B2%B5%E0%B2%B3–%E0%B2%9C-%E0%B2%B2-%E0%B2%B2-%E0%B2%97%E0%B2%B3-%E0%B2%B8-%E0%B2%AC-%E0%B2%A7.html
ಸಂಪತ್ತಿನ ಭಾರಂದಾಗಿ “ಭಾರ”ತ ಆಗಿದ್ದ ದೇಶ ಈಗ ಸ್ವಿಸ್ ಬೇಂಕಿಲಿ ಮಡಗಿ ಸಂಪತ್ತು ಒಪಾಸು “ಬಾರ”ದ್ದ ದೇಶ ಆತಿಲ್ಲೆಯೋ – ಅದೇ ಬೇಜಾರು.
ಎಂತ ಹೇಳ್ತಿ?
{ ಅಲ್ಯಾಣ ನಿಧಿ ಸಂಗ್ರಹಣೆ ಏಕಮುಖ, ಕೇವಲ ಒಳ ಹೋಪದು ಮಾಂತ್ರ. } ಇದರ ಇತಿಹಾಸ ಸಂಕ್ಷಿಪ್ತವಾಗಿ ಇಲ್ಲಿದ್ದು (ಕೆಳಾಣ ಸಂಕೋಲೆ ಹಿಡುದು ಹೋಗಿ)
http://news.in.msn.com/national/article.aspx?cp-documentid=5277696&page=0
ಮಾವಾ,
ಕೆಲವು ಕತೆಗೊ ಇರ್ತು. ಈಗಾಣ ಕಾಲದ ವಿಮರ್ಶೆ ನೋಡಿರೆ ಅದು ಒಳಿಯ.
ತನ್ನ ದೇಹದ ಅಂಗಾಂಗವ ಹಾನಿ ಮಾಡಿರೆ ಆ ವೆಗ್ತಿ ಒಳಿಗೋ?
ಹಳೆ ಕತೆಗಳ ಎಡಕ್ಕಿಲಿ ಕೆಲವು ಜೆನ ಅಕ್ಕಾದೋರು, ಆಗದ್ದೋರು ಲೊಟ್ಟೆ ಕತೆಗಳ ಸೇರುಸುತ್ತವು. ಸತ್ಯಾಸತ್ಯತೆಯ ತೆಕ್ಕೊಳ್ತವನೇ ತಿಳ್ಕೊಳೇಕಟ್ಟೆ.
ಅಲ್ಲದೋ?
ಒಪ್ಪಣ್ಣ,
ತಿಳಿ ಹಾಸ್ಯದೊಟ್ಟಿಂಗೆ ಒಂದು ಗಂಭೀರ ವಿಶಯವ ಶುದ್ದಿ ರೂಪಲ್ಲಿ ಕೊಟ್ಟದು ಲಾಯಿಕ ಆಯಿದು.
ದೇಶದ ಸಂಪತ್ತಿನ, ದೇವರ ಸಂಪತ್ತು ಹೇಳಿ ಕಾಪಾಡಿಂಡು ಬಂದ ಮೊದಲಾಣ ಕಾಲದ ರಾಜರ ಅಭಿಮಾನದೊಟ್ಟಿಂಗೆ ಈಗಾಣ ಕಾಲದ ರಾಜಕಾರಿಣಿಗಳ ಹೋಲುಸಲೆ ಸಾಧ್ಯ ಇಲ್ಲೆ ಅಲ್ಲದಾ? ಎಲ್ಲವೂ ತನ್ನದೇ, ತನಗಾಗಿ ಹೇಳಿ ಎಡಿಗಾಷ್ತು ದೇಶಲ್ಲಿ, ಹೆರದೇಶಲ್ಲಿ ಸಂಗ್ರಹಿಸುವ ರಾಜಕಾರಿಣಿಗೊಕ್ಕೆ ಈ ಶುದ್ದಿ ಸಿಕ್ಕಿ ತುಂಬಾ ಕೊಶೀ ಆದಿಕ್ಕು.
ಈ ಸಂಪತ್ತಿನ ಕಾವಲೆ ಇದು ವರೆಗೆ ಆ ಅನಂತಶಯನ ಇದ್ದರೆ, ಇನ್ನು ಇದರ ಕಾಪಾಡ್ಲೆ ಎಷ್ಟು ಖರ್ಚು ಮಾಡೆಕ್ಕು ಹೇಳಿ ಗೊಂತಿಲ್ಲೆ. ಅಷ್ಟೆಲ್ಲಾ ಮಾಡಿರೂ, ಅದು ಅಲ್ಲಿಯೇ ಒಳಿಗು ಹೇಳ್ಲೆ ಬತ್ತಿಲ್ಲೆ.
ಆರೋ ಕೆಲವು ಜೆನಮ್ಗೊ ಕದ್ದೊಂಡು ಹೋವ್ತವು ಹೇಳ್ತ ನೆಲೆಲಿ, ಇಡೀ ಸಂಪತ್ತಿನ ಲೆಕ್ಖ ಹಾಕೆಕ್ಕಾದ ಅಗತ್ಯ ಇತ್ತಿದ್ದೋ?. ಅವರ ಹಿಡುದು ಶಿಕ್ಷಿಸಿ, ಕಳ್ಲತನ ಆಗದ್ದ ಹಾಂಗೆ ನೋಡಿದ್ದರೆ ಸಾಕಾವ್ತಿತಿಲ್ಲೆಯಾ? ಅಥವಾ ಲೆಕ್ಖ ಹಾಕೆಕ್ಕಾರೂ, ಆರಿಂಗೂ ಸುಲಾಭಲ್ಲಿ ಹೋಪಲೆ ಎಡಿಯದ್ದ ನೆಲ ಮಾಳಿಗೆಯ ಸಂಗ್ರಹವ ತನಿಖೆ ಮಾಡ್ತ ಅಗತ್ಯ ಇತ್ತಿದ್ದೋ ಹೇಳಿ ಕಾಂಬದು ಎನಗೆ.
ಈ ಲೇಖನಕ್ಕೆ ಪೂರಕ ಮಾಹಿತಿ ಕೊಟ್ಟ ಗಣೇಶ ಪೆರ್ವ, ಮೋಹನಣ್ಣ ಮತ್ತೆ ತೆಕ್ಕುಂಜ ಕುಮಾರಂಗೆ ಧನ್ಯವಾದಂಗೊ
ಅಪ್ಪಚ್ಚೀ, ದೇವಾಭಿಮಾನ, ರಾಜಾಭಿಮಾನ, ರಾಜ್ಯಾಭಿಮಾನ – ಮೂರುದೇ ಇದ್ದ ಕಾರಣ ಆ ಸಂಪತ್ತು ಒಳುದತ್ತು.
ಅಂಬಗಳೇ ಅದರ ಭದ್ರತೆಗೆ ವಿಶೇಷ ಕಟ್ಟುಪಾಡುಗೊ ಇದ್ದತ್ತಾಡ.
ಅಭಿಮಾನದ ಆ ಕಾಲಲ್ಲಿ ಒಳ್ಕೊಂಡು ಬಂತು ಹೇಳಿಗೊಂಡು, ಪೈಶೆಯ ಮೋರೆಯನ್ನೇ ಕಾಣ್ತ ಈ ಕಾಲಲ್ಲಿ ಒಳಿಗೋ? ಅನಂತಂಗೆ ಬೇಕಾರೆ ಒಳಿಗಟ್ಟೆ. ಅಲ್ಲದೋ? 🙂
ಒಪ್ಪಣ್ಣೋ…………….,
ಚಿನ್ನಲ್ಲಿ ತುಂಬಿದ ದೇವರ ಚಿನ್ನದ ಹಾಂಗಿಪ್ಪ ಶುದ್ದಿ!!
ಒಪ್ಪಣ್ಣ,
ಅಂಬಗಾಣ ಅರಸು ಮಾರ್ತಾಂಡ ವರ್ಮನ ದೂರದರ್ಶಿತ್ವ ನಿಜವಾಗಿಯೂ ಸರ್ವ ಕಾಲಕ್ಕೂ ಮಾದರಿ ಅಲ್ಲದೋ? ವಿದೇಶದ ಕೊಳ್ಳೆಕ್ಕಾರಂಗೋ ಹೊಡಕ್ಕೊಂಡು ಹೋಗದ್ದ ಹಾಂಗಿಪ್ಪ ವೆವಸ್ತೆ ಮಾಡಿ ಎಷ್ಟು ಮುತುವರ್ಜಿ ತೆಕ್ಕೊಂಡು ದೇವಸ್ಥಾನವ ಕಟ್ಟುಸಿದ್ದು? ರಾಜ್ಯ ಇಡೀಕವ ಸಂಪತ್ತು ಸಮೇತ ದೇವರಿಂಗೆ ಸಮರ್ಪಣೆ ಮಾಡಿ, ದೇವರ ಪೈಸ ಮುಟ್ಟದ್ದೆ ರಾಜವಂಶದ ಮಸಾಲೆ ವಹಿವಾಟಿಂದ ವ್ಯವಹಾರ ನಡೆಯೆಕ್ಕು ಹೇಳಿ ಕಟ್ಟಪ್ಪಣೆ ಮಾಡಿದ್ದು ಈಗಾಣವಕ್ಕೆ ಒಂದು ಮಾದರಿ ಅಲ್ಲದೋ? ಬಹುಶ ದೇವರೇ ರಾಜಸಿಂಹಾಸನದ ಅಧಿಪತಿ ಆದ ಕಾರಣ ನಂತರ ಬಂದ ಬ್ರಿಟಿಷರಿಂಗೂ ತಿರುವಾಂಕೂರು ರಾಜರ ಎಂತ ಮಾಡ್ಲೂ ಎಡಿಗಾಯಿದಿಲ್ಲೆಯಾ ಹೇಳಿ!! ದೇವರೇ ರಾಜ° ಆದರೆ ರಾಜ್ಯಕ್ಕೆ ರಾಜ° ಶಾಶ್ವತ ಅಲ್ಲದೋ? ಈಗ ಇಪ್ಪ ಸಿಂಹಾಸನಾರೂಢನ ಕಾಲ ಆಗಿ, ಮತ್ತೆ ವಶ ಮಾಡುವ ಹೇಳಿ ಯೋಚನೆಯೇ ಬಾರ ಅಪ್ಪೋ!!! ಅದೂ ಅಲ್ಲದ್ದೆ, ಬ್ರಿಟಿಷರ ದತ್ತುಪುತ್ರಂಗೆ ಹಕ್ಕಿಲ್ಲೆ ಹೇಳಿ ಬಂದ ಕಾನೂನೂ ಅಲ್ಲಿ ಅನ್ವಯ ಆಗ!! ನಿಜವಾಗಿ ಮಾರ್ತಾಂಡ ವರ್ಮ ಅರಸುವಿಂಗೆ ಮುಂದೆ ಹೀಂಗೇ ಅಕ್ಕು ಹೇಳ್ತ ಯೋಚನೆ ಇತ್ತೋ ಎಂತದೋ ಅದು ಆ ರಾಜಂಗೂ, ಅನಂತಶಯನಂಗೂ ಮಾಂತ್ರ ಗೊಂತಿಕ್ಕಷ್ಟೇ!!!
ದೇವರಿಂಗೆ ಹೇಳಿ ದೇವರ ಭಾಂಡಾಗಾರಲ್ಲೇ ಮಡಗಿದ ಸಂಪತ್ತಿನ ಆ ರಾಜವಂಶದವ್ವು ಹಾಂಗೇ ಒಳಿಶಿಗೊಂಡು ಬಂದದು ನಿಜವಾಗಿಯೂ ಅದ್ಭುತವೇ!! ನಮ್ಮ ಈಗಾಣ ಕಾಲಲ್ಲಿ ದೇವರ ಪೈಸೆಯನ್ನೂ ತಿಂಬಲೆ ನೋಡ್ತವಕ್ಕೆ ಈ ರಾಜರಿಂದ ಕಲಿವಲೆ ಬೇಕಾದಷ್ಟಿದ್ದು. ಇಷ್ಟು ವರ್ಷ ಆದರೂ ಹಳೆ ಸಂಪ್ರದಾಯವ, ಅದೇ ವೆವಸ್ತೆಯ ಒಳಿಶಿ, ಬೆಳೆಶಿ ಬಯಿಂದವಲ್ಲದಾ!! ಧನ ಸಂಪತ್ತು, ಸಾಹಿತ್ಯ,ಕಲೆಗಳ ಸಂಪತ್ತು ಎಲ್ಲವನ್ನೂ ಸೇರ್ಸಿಗೊಂಡೇ ಬಂದವು ಇಂದಿನವರೆಗೆ! ಬಹುಶ ಆ ರಾಜಮನೆತನಲ್ಲಿ ಒಬ್ಬಂದ ಇನ್ನೊಬ್ಬಂಗೆ ಈ ಎಲ್ಲ ಗುಣಂಗಳೂ ಯೇವ ವೆತ್ಯಾಸವೂ ಇಲ್ಲದ್ದೆ ಹರುದು ಬಯಿಂದನ್ನೆ, ಇದು ಅನಂತಶಯನನ ಆಶೀರ್ವಾದವೇ ಆದಿಕ್ಕು ಅಲ್ಲದಾ ಒಪ್ಪಣ್ಣ?
ನೀನು ಹೇಳಿದ ಹಾಂಗೆ ಇಷ್ಟು ವರ್ಷಂದ ದೇವರು ಕಾದ ಸಂಪತ್ತಿನ ಮೌಲ್ಯ ಹಿಡಿವಲೆ ಸಿಕ್ಕುಗೋ ನವಗೆ? ನಮ್ಮ ಮನೆಗಳಲ್ಲೇ ಇಪ್ಪ ಹಿರಿಯೋರ ಕೂಡಿಮಡಿಗಿದ್ದದು ನವಗೆ ಸಿಕ್ಕಿದರೆ ಅದರ ಮೌಲ್ಯ ಹಿಡಿವಲೆ ಎಡಿಗಾ? ನಮ್ಮ ಹಿರಿಯೋರ ಶ್ರಮದ ಬೆಲೆ ಕಾಣ್ತಿಲ್ಲೆಯಾ ಅದರಲ್ಲಿ ನವಗೆ? ಹಾಂಗೆ ಇದರಲ್ಲಿಯೂ ದೇವರ ಸತ್ವ, ಅಂಶ ಇದ್ದ ಹಾಂಗೆ ಆವುತ್ತಿಲ್ಲೆಯಾ?
ಒಪ್ಪಣ್ಣ, ನೀನು ಹೇಳಿದ ಹಾಂಗೆ ನಮ್ಮ ದೇಶದ ಎಲ್ಲಾ ರಾಜರೂ ಹೀಂಗೇ ಅವರವರ ಸಂಪತ್ತಿನ ರಕ್ಷಣೆ ಮಾಡಿದ್ದಿದ್ದರೆ ನಮ್ಮ ದೇಶ ಇಂದಿಂಗೂ ಸಂಪದ್ಭರಿತವೇ ಆಗಿರ್ತಿತ್ತು!!! ಅಲ್ಲದಾ? ಒಂದೊಪ್ಪ ಲಾಯ್ಕಾಯಿದು. ಮನಿಗಿದ ದೇವರು ಅಲ್ಲಿಂದಲೇ ಕಣ್ಣೊಡದರೇ ಸಾಕನ್ನೆ!!
ಮಹಾವಿಷ್ಣು ಇಪ್ಪದು ಅಲ್ಲಿ ತ್ರಿಮೂರ್ತಿಗಳ ರೂಪ ಒಳಗೊಂಡು!! ಭೂಮಿಯ ಹೊತ್ತಿಪ್ಪದು ಆದಿಶೇಷ! ಅನಂತಶಯನ ಹೇಳಿ ಹೆಸರಿಪ್ಪದೂ ಶೇಷಂದಾಗಿಯೇ!! ಭೂಮಿಗೆ ದುಷ್ಟಶಿಕ್ಷಕ ಶಿಷ್ಟ ರಕ್ಷಕ ಆಗಿ ಅವತಾರ ಎತ್ತಿದ್ದುದೇ ಶ್ರೀಮನ್ನಾರಾಯಣನೇ ಅಲ್ಲದಾ?
ಕಾಲವೇ ಉತ್ತರ ಹೇಳುಗು!! ಅಲ್ಲದೋ?
ಅನಂತಶಯನನ ಆದಿಶೇಷನ ಕಲ್ಪನೆಯೊಟ್ಟಿಂಗೆ ಚೆಂದದ ಒಪ್ಪ ಕೊಟ್ಟಿದಿ ಶ್ರೀಅಕ್ಕ.
ರಾಜವಂಶದ ಬಗ್ಗೆ ಹೇಳ್ತರೆ ಸುಮಾರಿದ್ದು, ಒಬ್ಬೊಬ್ಬಂದು ಒಂದೊಂದು ಕತೆ – ಹೇಳ್ತ ನಮ್ಮ ಕುಡ್ಪಲ್ತಡ್ಕ ಬಾವ.
ಅವನ ಸಂಗೀತ ಶಾಲಗೆ ಒಂದು ಅರಸು ಬತ್ತಾಡ. ಇದೇ ಕುಟುಂಬದ್ದು.
ಈಗಾಣ ರಾಜಕಾರಣಿಗೊ ಆಗಿದ್ದರೆ “ಅನಂತಶಯನ ದೇವಾಲಯದ ಅಡಿಯಲ್ಲಿ ಆರು ಕಾಲಿಕೋಣೆಗಳು ಪತ್ತೆ” ಹೇಳಿ ಪೇಪರಿಲಿ ಬತ್ತ ನಮುನೆ ಮಾಡ್ತಿತವೋ ಏನೋ.
ಅಲ್ಲದೋ? 🙁
ಸಕಾಲಿಕ ಒಳ್ಳೆಯ ಲೇಖನ. ನಮ್ಮೂರಿನ ಅನಂತಪುರಕ್ಕೂ ಅನಂತಶಯನಕ್ಕೂ ಸಂಬಂಧ ಇದ್ದ ಕಾರಣ ಅಲ್ಯಾಣ ನಿಧಿಲಿ ಒಂದು ಸಣ್ಣ ಪಾಲಿನ ನಮ್ಮ ಅನಂತಪುರ ದೇವಸ್ಥಾನಕ್ಕೆ ಕೊಟ್ಟರೆ ಒಳ್ಳೆದಾವುತ್ತಿತು !
ಮಾವಾ°,
{ ನಮ್ಮ ಅನಂತಪುರ ದೇವಸ್ಥಾನಕ್ಕೆ ಕೊಟ್ಟರೆ}
ಒಳ್ಳೆ ಕಲ್ಪನೆ, ಕೊಟ್ಟರೆ ತುಂಬಾ ಒಳ್ಳೆದು.
ಗುಣಾಜೆಪಳ್ಳಿಗೆ ಕೊಡದ್ದರೆ ಸಾಕು – ಹೇಳಿ ಕುಂಞಿ ಮೊನ್ನೆ ಬೊಬ್ಬೆ ಹೊಡದ್ದು ಕೇಳಿದ್ದಿಲ್ಲೆಯೋ? 😉
ಅನಂತಶಯನನ ಅಗಾಧ ಸಂಪತ್ತಿನ ಲೆಕ್ಕಹಾಕಿ ಲೋಕಪ್ರಚಾರ ಮಾಡಿದ್ದು ಬೇಜಾರದ ಸಂಗತಿ. ಲೆಕ್ಕಕೇಳಿದವಕ್ಕೆ ಮಾತ್ರ ಕೊಟ್ಟು ಸುಮ್ಮನೆ ಕೂರೆಕ್ಕಾತು. ಇನ್ನೀಗ ಕಳ್ಳರು ಕದಿಗು ಹೇಳುವ ಹೆದರಿಕೆಂದಲೂ ಹೆಚ್ಚಿಗೆ ನಮ್ಮ ಮಂತ್ರಿಮಹಾಶಯಂಗಳ ಬಗ್ಗೆಯೇ ಹೆದರಿಕೆ.
ಹ್ಮ್, ಒಪ್ಪಣ್ಣ ವಿವರ್ಸಿದ ಶೈಲಿ ಎಲ್ಲ ಎಂದಿನಂತೆ ಲಾಯ್ಕಾಯ್ದು.
ಅಲ್ಲ, ಆ ಮೊಮ್ಮದ್ ಗಜ್ನಿ ಹದ್ನೇಳು ಸರ್ತಿ ಬಂದು ಬಂದು ದೋಚಿಗೊಂಡು ಹೋಯ್ದನ್ನೆ ನಮ್ಮ ದೇಶದ ದೇವಸ್ಥಾನಂಗಳಂದ. ಅಂಬಗ ನಮ್ಮ ಸಂಪತ್ತು ಎಷ್ಟಿದ್ದಿಕ್ಕಪ್ಪ!
ಗಜ್ನಿ ಮಮ್ಮದೆ ಒಂದರ್ತಲ್ಲಿ ಗುಜ್ರಿ ಮಮ್ಮದೆಯ ಹಾಂಗೇ ಅಲ್ಲದೋ?
ಇಬ್ರುದೇ ಹದ್ನೇಳು ಸರ್ತಿ ಬತ್ತವು – ಎಂತಾರಿದ್ದೋ ಓಂಗಲೆ! 🙁
ಸಂಪತ್ತಿನ ದೋಚಲೆ ಎಲ್ಲೋರುದೇ ಉಶಾರಿಯೇ! 🙁
ಆನು ಸಣ್ಣಾಗಿಪ್ಪಗ ಅನ೦ತಶಯನಲ್ಲಿ ದೊಡ್ಡ ಕೊಪ್ಪರಿಗೆಗೊ ಇದ್ದಡ ಹೇಳಿ ಕೇಳಿತ್ತಿದ್ದೆ. ಆಲ್ಲಿಗೆ ಕಲ್ತೊ೦ಡಿಪ್ಪಗ ಆಶನದ ದೊಡ್ಡ ದೊಡ್ಡ ಕೊಪ್ಪರಿಗೆಗಳ ನೋಡಿಯೂ ಇತ್ತಿದ್ದೆ. ಆದರೆ ಹೀ೦ಗಿಪ್ಪ ‘ಕೊಪ್ಪರಿಗೆ’ಗಳ ಆಯಿಕ್ಕು ಹೇಳಿದ್ದು ಹೇಳ್ತದು ಮಾ೦ತ್ರ ಗ್ರೇಶಿತ್ತಿದ್ದಿಲ್ಲೆ! ಆ೦ಬಗ ಹಿ೦ದೆ ನಮ್ಮ ದೇಶಲ್ಲಿ ಇತ್ತಿದ್ದ ಸ೦ಪತ್ತು ಎಷ್ಟಾಯಿಕ್ಕು ಹೇಳಿ ಅ೦ದಾಜು ಆವುತ್ತಿಲ್ಲೆ!
ಅಜ್ಜಂದ್ರ ಆಡುಮಾತಿಲಿ ಸುಮಾರು ಗುಟ್ಟುಗೊ ಇರ್ತು. ಸರಿಯಾಗಿ ಚಿಂತನೆ ಮಾಡದ್ದರೆ ಹೆರಬಾರ. ಅಲ್ಲದೋ?
ಪೀಯಸ್ ಮಹೇಶಣ್ಣನ ಒಪ್ಪಕ್ಕೆ ಒಪ್ಪಂಗೊ!
ಉತ್ತಮ ಮಾಹಿತಿಗೊ ಇಪ್ಪ ಲಾಯಿಕದ ಲೇಖನ ಚಂದಕ್ಕೆ ಓದ್ಸಿಗೊಂಡು ಹೋತು.
ದೊಡ್ಡಪ್ಪ ಹೇಳಿದ ಕತೆಯ ಮೂಲಕವೂ ಸುಮಾರು ಸಂಗತಿ ಗೊಂತಾತು.
ಲಾಯಿಕಾಯಿದು ಒಪ್ಪಣ್ಣೊ…
ಸುಮನಕ್ಕ…
ಸುಮನಕ್ಕಾ..
ದೊಡ್ಡಪ್ಪನ ಹತ್ತರೆ ಇನ್ನೂ ಸುಮಾರು ಈ ನಮುನೆ ಕತೆಗೊ ಇದ್ದು.
ಆಚಮನೆದೊಡ್ಡಪ್ಪ, ಒರ್ಕೊಂಬು ದೊಡ್ಡಪ್ಪ, ಪಳ್ಳತಡ್ಕ ದೊಡ್ಡಪ್ಪ – ಎಲ್ಲೋರುದೇ ಸೇರಿರೆ ಮತ್ತೆ ಕಾಲ ಒರಿಶ ಮೂವತ್ತು ಹಿಂದೆ ಹೋದ ಹಾಂಗೆ.
ಅಲ್ಲದೋ? 🙂
ಆಕ್ರಮಣಕಾರಂಗಳಂದ ರಕ್ಶಣೆ ಆದ ಸಂಪತ್ತಿನ ನಮ್ಮ ಆಳುವ ಕಳ್ಳಂಗ swiss bank ಲಿ ಮಡುಗದ್ದರೆ ಸಾಕು..ಅನಂತ ಶಯನ ನೀನೇ ಕಾಪಕ್ಕಸ್ಟ್ಟೆ..ಒಪ್ಪಣ್ಣೋ ಬರದ್ದು ಬಾರೀ ಪಸ್ಟ್ಟಾಯಿದು…
ಮಾವಾ°, ರಾಜರು ಹಾಳಾಗದ್ದ ಹಾಂಗೆ ದೇವಸ್ಥಾನಲ್ಲಿ ಮಡಗಿದವು, ರಾಜಕಾರಣಿಗೊ ಹಾಳಾಗದ್ದ ಹಾಂಗೆ swiss bankಲಿ ಮಡಗುತ್ತವು – ಹೇಳಿ ಗುಣಾಜೆಕುಂಞಿ ಹೇಳ್ತದು ಎಷ್ಟು ಸತ್ಯ, ಅಲ್ಲದೋ? 🙁
ಅನಾದಿ ಕಾಲಂದಲೂ ದೇವರ ಭಂಡಾರವ ತಿರುವಾಂಕೂರಿನ ರಾಜರುಗೊ, ರಾಜ ಮನೆತನದವು ರಕ್ಷಣೆ ಮಾಡಿಗೊಂಡು ಬಂದದು ದೊಡ್ಡ ಸಾಹಸವೆ ಸರಿ. ಟಿಪ್ಪುವಿನ ಚರಿತ್ರೆಲಿ(ಟಿಪ್ಪುವಿನ ನಿಜ ಸ್ವರೂಪ) ತಿರುವಾಂಕೂರಿನ ಯುದ್ದದ ವಿಷಯ ಬತ್ತು .1789 ರಲ್ಲಿ ತಿರುವಾಂಕೂರಿಂಗೆ ಆಕ್ರಮಣ ಮಾಡಿಪ್ಪಗ ರಾಜ ಬಲರಾಮ ವರ್ಮ ಟಿಪ್ಪುವಿನ 15000 ಯೋಧರ ಪಡೆಯ ಧೂಳೀಪಟ ಮಾಡುತ್ತು. ಸ್ವತಃ ಟಿಪ್ಪು ಸಾವಿನ ದವಡೆಂದ ಪಾರಾಗಿ ತಪ್ಪಿಸಿಗೊಳ್ಳುತ್ತು. ಮತ್ತೆ 1790 ರಲ್ಲಿ ವಾಪಾಸು ಮುತ್ತಿಗೆ ಹಾಕಿಪ್ಪಗ ಬಲರಾಮ ವರ್ಮ ಅನಿವಾರ್ಯವಾಗಿ ಸೋಲೆಕ್ಕಾಗಿ ಬತ್ತು. ಇಂಥಾ ಅಪಾರ ಭಂಡಾರ ಆ ಕಾಲಲ್ಲಿಯೇ ಇದ್ದಿಕ್ಕು, ಅಲ್ಲದ್ದೆ ಇದು ಲೂಟಿ ಆಗದ್ದೆ ಒಳುದ್ದದು ದೊಡ್ಡ ಪವಾಡವೆ. ಈಗ, ಭ್ರಷ್ಟರೇ ಇಪ್ಪಸಮಯಲ್ಲಿಯೂ ರಾಜಮನೆತನದವು ಇದರ ಹಾಂಗೇ ಒಳುಶಿಗೊಂಡು ಬಂದದು ಅತಿ ದೊಡ್ಡ ಪವಾಡ.!!! ಈ ಅಪಾರ ಭಂಡಾರ ಕೆಲವೇ ಜೆನರ ಕೈಗೆ ಸಿಕ್ಕದ್ದೆ , ಸಮಾಜದ ಉದ್ದಾರಕ್ಕೆ ಸದ್ವಿನಿಯೋಗ ಅಪ್ಪಲೆ ವ್ಯವಸ್ತೆ ಮಾಡುವ ಹಾಂಗೆ ಒಳ್ಳೆ ಬುಧ್ದಿಯ ಸಂಬಂಧ ಪಟ್ಟವಕ್ಕೆ ಆ ಅನಂತಶಯನ ಕರುಣಿಸಲಿ ಹೇಳಿಗೊಂಡು ಪ್ರಾರ್ಥನೆ.
ಸಕಾಲಿಕವಾದ ಶುದ್ದಿ ಕೊಟ್ಟಿದೆ ಒಪ್ಪಣ್ಣ, ಒಟ್ಟಿಂಗೆ ಗಣೇಶಣ್ಣನೂ ಪೂರಕ ಮಾಹಿತಿ ಕೊಟ್ಟಿದವು. ಇಬ್ರಿಂಗೂ ಅಭಿನಂದಿಸುತ್ತೆ.
ಟಿಪ್ಪುವಿನ ನಿಜಸ್ವರೂಪ ತಿಳಿಶಿಕೊಟ್ಟದು ಕೊಶೀ ಆತ ತೆಕ್ಕುಂಜೆಮಾವಾ!
ಭ್ರಷ್ಟರ ನೆಡುಕೆ ಸೊತ್ತು ಒಳಿಶಿಗೊಂಡು ಬಂದ ರಾಜರಿಂಗೆ, ರಾಜರಿಂಗೆ ಹಾಂಗೆ ಪ್ರೇರೇಪಣೆ ಮಾಡಿಗೊಂಡು ಬಂದ ಅನಂತಶಯನಂಗೆ, ನಮೋನಮಃ, ಅಲ್ಲದೋ?
ನಿಂಗೊಗೆ ಪುಸ್ತಕ ಓದುತ್ತ ಆಸಗ್ತಿ – ನಿಂಗಳ ಒಪ್ಪಲ್ಲಿ ಎದ್ದು ಕಾಣ್ತು.
ಹರೇರಾಮ..
ಒಪ್ಪಣ್ಣದ ಅಪ್ಪಿ ಲೈಕ್ ಆಯ್ದೋ,
ಎಲ್ಲ ಪತ್ರಿಕೆಯವೂ ಅಲ್ಲಿ ಸಂಪತ್ತು, ಮೂಲ, ರಹಸ್ಯ ಇತ್ಯಾದಿಗಳ ಬಗ್ಗೇನೆ ಬರೆ ಇದ್ದ, ನಂಗಳ ದೇಶ ತುಂಬ ಇಪ್ಪ ಲಕ್ಷಾಂತರ ದೇವಸ್ಥಾನದಲ್ಲೂ ಇವೆಲ್ಲ ಇತ್ತು, ಹೊತ್ತುಹೋದ, ಕದ್ದುಹೋದ, ಲೂಟಿಮಾಡಿದ, ಬಾಚಿಮುಕ್ಕಿದ… ತುರುಷ್ಕರ, ಮಹಮ್ಮದೀಯರ, ಬ್ರಿಟೀಶರ, ಡಚ್ಚರ, ಫ್ರೇಂಚ ಎಲ್ಲಾ ಮ್ಲೇಚ್ಛರ ಬಗ್ಗೆ ಯಾರೂ ಬರ್ದಾಂಗ್ ಇಲ್ಲೆ ಅಲ್ದಾ ? ವಾಮಪಂಕ್ತಿಯ ಪತ್ರಿಕೆಯವರಿಗೆ ಅಲ್ಪಸಂಖ್ಯಾತರಿಗೆ ಬೇಜಾರಾಗೋಕು ಹೇಳ ಮುಜುಗರವ ಎಂಥ ಎನ !
ಕಾಂತಣ್ಣಾ,
ನಮ್ಮ ಸಂಪತ್ತಿನ ಅಗಾಧತೆಯ ನಾವು ಮರೆತ್ತಾ ಇದ್ದು.
ಇದೊಂದು ಅನಂತಪುರಲ್ಲಿ ನಮ್ಮ ಕೈಗೆ ಸಿಕ್ಕಿದ್ದು. ಇನ್ನು ವಿಜಯನಗರಲ್ಲಿ ಹೇಂಗೆ ಇದ್ದಿಕ್ಕು, ಅಲ್ಲದಾ?
{ ವಾಮಪಂಕ್ತಿಯ ಪತ್ರಿಕೆಯವರಿಗೆ ಅಲ್ಪಸಂಖ್ಯಾತರಿಗೆ }
– ದೇಶವ ಅರ್ದ ಹಾಳು ಮಾಡಿದ್ದೇ ಇವು. ಅಲ್ದಾ?
ಒಪ್ಪಣ್ಣೋ,ಒ೦ದಾರಿ ಆ ಅನ೦ತಶಯನನ ದರ್ಶನ ಒ೦ದು ದಿನ ಅಲ್ಲಿ ನಿ೦ದು ನೋಡಿಕ್ಕಿಬರೇಕು.ಅಲ್ಲಿ ಸ೦ಪತ್ತು ಹೇ೦ಗೆ ಒಳುತ್ತು ಹೇಳಿ ಗೊ೦ತಾಯೇಕಾರೆ.ಅಲ್ಲಿಯಾಣ ರಾಜ೦ಗೊ ಇ೦ದೂ ನಿತ್ಯ ದೇವಸ್ಥನಕ್ಕೆ ಭೇಟಿ ಕೊಡ್ತವು ಎಲ್ಲಿಯಾರೂ ಬಪ್ಪಲಾಗದ್ರೆ ದಿನಕ್ಕೆ ತಪ್ಪು ಕಾಣಿಕೆಯಾಗಿ ರುಪಯಿ ನೂರಾಇವತ್ತ್೦ದು ಅವ್ವೆ ದುಡುದ ಪೈಸೆ೦ದ ಹಾಕುತ್ತವು.ಎಲ್ಲಿಯಾದರು ನಮ್ಮ ರಾಜ ಕಾರಣಿಗಳ ಕೈಗೆ ಈ ಪೈಸೆ ಸಿಕ್ಕಿದ್ರೆ ಯೆವಎಲ್ಲ ನಮುನೆಲಿ ಎಡಿಗೊ ಹಾ೦ಗೆಲ್ಲ ಅದರ ಅವರ ಮಕ್ಕಳ ಮೊಮ್ಮಕ್ಕಳ ಹೆಸರಿ೦ಗೆ ಮಾಡ್ತೀತವು.ರ್ಅಜವ೦ಶದವಕ್ಕೆ ಇ೦ದೂ ಅಲ್ಲಿ ಪೈಸೆ ಇದ್ದದು ಗೊನ್ತಿದ್ದತ್ತು ಆದರೆ ಅವ್ವು ದೇವಸ್ಆನಕ್ಕೆ ಬ೦ದರೆ ಪುನಹ ಹೋಪಾಗ ಕಾಲು ಕೂಡಾ ಅಲ್ಲಿಯೆ ಕುಡುಗಿಕ್ಕಿ ಹೋವುತ್ತ ಹಾ೦ಗಿಪ್ಪವು.ಎಲ್ಆ ರಾಜ೦ಗೊ ಅವ್ರ ಭ೦ಡಾರಲ್ಲಿ ಹಣ ಸ೦ಗ್ರಹ ಮಾಡೀರೆ ಇವ್ವು ದೇವರನ್ನೇ ಭ೦ಡಾರ ಮಾಡಿದ೦ತಹಾ ಭಕ್ತರು.ಈ ಸ೦ಪತ್ತು ಎನ್ನ ಲೆಕ್ಕಲ್ಲಿ ಹಾಳು ಮಾದದ್ದೆ ಒಳುಸುತ್ತ ಜವಾಬ್ದಾರಿಯೊಟ್ಟಿ೦ಗೆ ಅರಸುಗೋಕ್ಕೆ ಸಲ್ಲೆಕು.ರ್ಅಜಕಾರಣಿಗಳೊ ಇನ್ನಾರೋ ಕೈ ಹಾಕಿರೆ ಏವಗ ಈ ಸೊತ್ತೆಲ್ಲ ರಿಶ್ನಾರ್ಪನಣ ಅಕ್ಕು ಹೆಳಿ ಹೇಲ್ಲೆಡಿಯ.ಒಪ್ಪ೦ಗಳೊಟ್ಟಿ೦ಗೆ
ಮೋಹನಮಾವಂಗೆ ಒಪ್ಪಂಗೊ.
ರಾಜರು ನಿತ್ಯವೂ ಬಂದು, ಬಪ್ಪಲೆಡಿಯದ್ದರೆ ತಪ್ಪುಕಾಣಿಕೆ ಕೊಟ್ಟು, ರಾಜ್ಯದ ಚಕ್ರಾಧಿಪತಿಯ ಆಶೀರ್ವಾದ ಕೇಳ್ತ ಕ್ರಮವ ಬೈಲಿಂಗೆ ನೆಂಪುಮಾಡಿದಿ ನಿಂಗೊ- ಕೊಶೀ ಆತು.
ಕೃಷ್ಣಾರ್ಪಣ ಆಗದ್ದ ಹಾಂಗೆ ಕೃಷ್ಣನೇ ಕಾಯೆಕ್ಕಟ್ಟೆ! ಅಲ್ಲದೋ? 😉
Sakaalika oppa, oppanna…Indirammange vasane badididdare 77ra emergencili maya madtitu, rajasthanada chinnangala mayaka madidange!, soniya yava upaya madtu ratsule heli nodekkaddu!!!
ಯೋಗದ ಹರೀಶಣ್ಣಂಗೆ ಒಪ್ಪಂಗೊ.
ರಾಜಸ್ಥಾನದ ಚಿನ್ನಂಗಳ ಬಗ್ಗೆ ಎಂತ ಕತೆ? – ಬೈಲಿಂಗೆ ಹೇಳ್ತಿರೋ? 🙂
ಕಾಯ್ತಾ ಇರ್ತೆ.
Rajasthanada kelavu aramneli ippa ton katle chinnangala Emergency timeili Indira gandhi swizinge saagsiddu heli allige 10 varsha modalu hodippaga, allina sumaru janago helida kathe…
{ಒಂದು ದಿನ ಕೊಟ್ಟುಕೋಂಗೊಟ್ಟು ಹಿಡ್ಕೊಂಡು ಬಂದವು…}
ಎನಗೆ ಕೊಟ್ಟು ಪೂಂಗೊಟ್ಟು ಹೇಳಿರೆ ಗೊಂತಿದ್ದು,
ಇದು ಕೊಟ್ಟುಕೋಂಗೊಟ್ಟು ಹೇಳಿರೆ ಎಂತರ…?
ಒಪ್ಪಣ್ಣಂಗೆ ಮಾಷ್ಟ್ರುಮಾವನ ಸಣ್ಣ ಮಗನ ಮಾವಗಳ ಮನೆಯ ನೆಂಪಾತೋ… 🙂
ಅನಂತಪದ್ಮನಾಭನ ಸಂಪತ್ತು ತನಿಖೆ ಮಾಡ್ಳೆ ಕಾರಣ ಆದ್ಸು ಅಧಿಕಾರಿಗೊ ಅಲ್ಲ.
ಸುಂದರರಾಜನ್ ಹೇಳ್ತ ಬ್ರಾಮ್ಮಣ ಒಕೀಲ.
2007ರಲ್ಲಿ ತಿರುವಾಂಕೂರಿನ ರಾಜ ಮನೆತನದವು ನೆಲಮಾಳಿಗೆಯ ಬಾಗಿಲು ತೆಗದು ಸಂಪತ್ತಿನ ಫೋಟೋ ತೆಗವಲೆ ಹೆರಟ ವಿಷಯ ಈಗ ಇಷ್ಟು ದೊಡ್ಡ ಆದ್ಸು.
ಅಷ್ಟು ಭದ್ರ ಕೋಣೆಯ ಒಳ ಇಪ್ಪ ರತ್ನ ಖಚಿತ ಕಿರೀಟದ ಪಟ ತಿರುವಾಂಕೂರಿನ ರಾಣಿ ಬರದ ಪುಸ್ತಕಲ್ಲಿ ಹೇಂಗೆ ಬಂತು ಹೇಳ್ತ ವಿಚಾರ ಈಗಳೂ ಇತಿಹಾಸ ತಜ್ಞಂಗೊಕ್ಕೆ ಕನುಫ್ಯೂಸು ಬಂದಂಡು ಇದ್ದಡ.
ಒಂದು ಲೆಕ್ಕಲ್ಲಿ ಈಗಾಣ ತನಿಖೆ ಒಳ್ಳೆದಾತು,
ಅಲ್ಲದೆ ಇದ್ದರೆ, ತಿರುವಾಂಕೂರಿನ ಮುಂದಾಣ ರಾಜಂಗಳ ಕಾಲಲ್ಲಿ ಸಂಪತ್ತು ನಾಶ ಆಗಿ ಹೋಪ ಸಾಧ್ಯತೆ ಬತ್ತೀತೋ ಏನೋ..?
ಹಾಂಗಪ್ಪಲಾಗ,
ದೇವರ ಚಿನ್ನ, ದೇವರಿಂಗೇ ಇಪ್ಪದು.
ಪದ್ಮನಾಭಾ,
ಕಾಪಾಡು, ಕಾಪಾಡು…!
ಕೊಂಗೊಟ್ಟು ಬೇರೆ ಕೋಂಗೋಟು ಬೇರೆ!!
ಕೊಂಗೊಟ್ಟು ಹೇಳಿರೆ ನಿಂಗಳ ಪುಂಗೊಟ್ಟು.
ಕೋಂಗೋಟು ಹೇಳಿರೆ ದೊಡ್ಡಮಾವನ ಮಾವಗಳ ಮನೆ!! 😉
ರಾಣಿ ಬರದ ಪುಸ್ತಕದ ಬಗ್ಗೆ ಗೊಂತಾದರೆ ಬೈಲಿಂಗೆ ಹೇಳಿಕ್ಕಿ, ಆತೋ? 🙂
ಅರಸರ ಕಾಲದ ಭಾರತ ಹೇ೦ಗಿದ್ದತ್ತು ಹೇಳಿ ಗೊ೦ತಾತದ.ಚಿನ್ನವ ಸೇರಿಲ್ಲಿ ತೂಗಿ ಕೊಟ್ಟೋ೦ಡಿತ್ತವಡಲ್ಲದೋ. ಅನ೦ತಶಯನನ ಮೂಲ ಅನ೦ತಪುರಲ್ಲಿಯೂ ನಿಧಿಗೊ ಇದ್ದಡ, ಪ್ರಶ್ನೆಲಿ ಕ೦ಡುಬ೦ದ ವಿಶಯ.ಅಲ್ಲಿಪ್ಪ ಗುಹೆ ಮಾನವ ನಿರ್ಮಿತ,ಅದರೊಳ ಹೋಗಿ ಹುಡ್ಕಲೆ ಇಕ್ಕೆರಿ ರಾಜವ೦ಶಸ್ಥರು ಸ್ಟೇ ತೈ೦ದವಡ.
ಡೀಕೇಶಾಂಬಾವಾ,
ಅನಂತಪುರದ ಬಗ್ಗೆ ವಿಶಯ ಎತ್ತಿದ್ದು ಒಳ್ಳೆದಾತು.
ಮೊನ್ನೆ ಟೀವಿಲಿ ಬಂದುಗೊಂಡಿತ್ತಡ, ಅಪ್ಪೋ?
ಅನಂತಪುರಲ್ಲಿ ಇಪ್ಪದಪ್ಪೋ? ಬಬಿಯನ ಕೈಲಿ ಕೇಳೆಕ್ಕಟ್ಟೆ! 😉
ಎನಗೂ ಅಪ್ಪನೇ ಕಂಡತ್ತು…
ಮದಲಾಣ ಕಾಲಲ್ಲಿ ಕ್ಷೇತ್ರಪಾಲರು ಹೇಳಿ ಇತ್ತಿದ್ದವಡ ಕ್ಷೇತ್ರ ರಕ್ಷಣೆ ಮಾಡ್ಲೆ. ಈಗಳೂ ಇನ್ನು ಹಾಂಗೇ ಏನಾರು ಮಿಲಿಟ್ರಿ ಜೆನಂಗಳ ಮಡುಗೆಕಾವುತ್ತೋ ಏನೋ?
{ಅಂದೊಂದರಿ ಶಬರಿಮಲೆ ಶುದ್ದಿ ಮಾತಾಡುವಗ ನಾವು ಮಾತಾಡಿದ್ದಲ್ಲದೋ? (ಸಂಕೊಲೆ).} – ಓ ಇಲ್ಲಿ ಸಂಕೋಲೆ ತುಂಡಾಯಿದು.
ಹಾಂ..!! ಈಗ ಸರಿ ಆತಿದಾ. :):):)
ಮಂಗ್ಳೂರುಮಾಣೀ..
ಸಂಕೊಲೆಯ ಕೊಳಿಕ್ಕೆ ಪೀಂಕಿದ್ದಕ್ಕೆ ತಿಳಿಶಿಕೊಟ್ಟದಕ್ಕೆ ತುಂಬಾ ಕೊಶಿ ಆತು.
ಅಷ್ಟು ಸೂಕ್ಷ್ಮವಾಗಿ ಶುದ್ದಿ ಕೇಳಿರೆಮಾಂತ್ರ ತಾನೇ – ಇದೆಲ್ಲ ತಲಗೆ ಹೋಪದು.
ಕೊಶೀ ಆತು ಒಪ್ಪಣ್ಣಂಗೆ.
🙂
🙂
ಒಪ್ಪಣ್ಣನ ಚಂದದ ಬರಹ….
ವಿದ್ವಾನಣ್ಣನ ಒಪ್ಪ ಆಶೀರ್ವಾದ, ಪ್ರೋತ್ಸಾಹಕ್ಕೆ ಸದಾಋಣಿ.
ಹರೇರಾಮ.
ಆಕ್ರಮಣಕಾರರು ಕೊಂಡೋಗದ್ದ ಹಾಂಗೆ ಕಾಪಾಡಿದ್ದು ಅರಸರ ದೊಡ್ಡ ಸಾಧನೆ.ಇಲ್ಲದ್ದರೆ ಕೊಹಿನೂರು ವಜ್ರದ ಹಾಂಗೆ ಇದೂ ಹೋವುತ್ತಿತ್ತು.
ಇದು ದೇವರ ಸೊತ್ತು.ಅದರ ಮಾರೆಕು ಹೇಳುದು ತಪ್ಪು.
ಗೋಪಾಲಣ್ಣನ ಒಳ್ಳೆ ಒಪ್ಪಕ್ಕೆ ಒಪ್ಪಂಗೊ.
ಕೊಹಿನೂರು ವಜ್ರದ ಬೇಜಾರದ ಕತೆ ಕೇಳಿರೆ ಕರುಳು ಕರಗಿ ಬತ್ತು. ಅಲ್ಲದೋ?
ಅಂದು ಬ್ರಿಟಿಶರ ಕೈಂದ ನಮ್ಮ ರಾಜರು ಒಳಿಶಿದ್ದವು.
ಆದರೆ, ಈಗಾಣ ರಾಜರ ಕೈಂದ ಆರು ಒಳಿಶುತ್ತನಾಡ???
ಅನಂತಶಯನಲ್ಲಿ ಎಂಗೊಗೂ ಪಾಲು ಇದ್ದು ಹೇಳಿ ತಮಿಳುನಾಡು ಹೇಳ್ಳೆ ಸುರುಮಾಡಿ ಆಯ್ದು. ಎಷ್ಟೇ ಇದ್ದರೂ ಇಷ್ಟರ ವರೆಂಗೆ ಗೊಂತಿಪ್ಪವಕ್ಕೆ ಮಾತ್ರ ಗೊಂತಿದ್ದುಗೊಂಡು ಭದ್ರವಾಗಿ ಇದ್ದತ್ತು. ಈಗ ಲೋಕಕ್ಕೇ ಹಬ್ಬಿತ್ತಿಲ್ಯೋ . ಇನ್ನು ಘಜನಿಯ ಪುಳ್ಯಕ್ಕೋ , ನೆರೆಕರೆ ಪಾಲುಗಾರಕ್ಕೋ, ಸ್ಥಳೀಯ ಕಾವಲುಗಾರಕ್ಕೋ ಎಲ್ಲೋರಿಂಗೂ ವರಕ್ಕಿರ. ತಿರುಪತಿಲಿ ಅದೆಷ್ಟೋ ಸ್ವಾಹ ಆದಾಂಗೆ ಇದೂ ಸ್ವಾಹಾ ಆಗಿ ಮತ್ತೆ ಟಿ.ವಿ.ಲಿ ದುರ್ದೈವ ಘಟನೆ, ಛೀಮಾರಿ ಕೆಲಸ ಹೇಳಿ ೪ ಜೆನ ಕೂದು ಕಾದಲಕ್ಕು ಕಾಕಗಳ ಹಾಂಗೆ.
ಅನಂತ ಪದ್ಮನಾಭ- ನೀನೇ ಕಾಪಾಡು (ಎದ್ದು ಕೂದೂ ಅಕ್ಕು, ಮನಿಗಿದಲ್ಲೇ ರೆಸ್ಟ್ ತೆಕ್ಕೊಂಡೂ ಅಕ್ಕು).
ತಕ್ಕ ಸಮಯಲ್ಲಿ ಈ ಸೂಕ್ತ ಶುದ್ದಿ ಬೈಲಿಲಿ ಬಂದದು ಮೆಚ್ಚಿ ಒಪ್ಪ.
ಚೆನ್ನೈಭಾವಾ..
ತೆಮುಳುನಾಡು ಎಂಗೊಗೂ ಪಾಲಿದ್ದು ಹೇಳಿತ್ತಡ – ಎಂತಗೆ? ಜೆಯಲಲಿತಂಗೆ ಚಿನ್ನದ ಬಳೆ ಮಾಡುಸಲೋ? ಉಮ್ಮಪ್ಪ!
ರಾಮನ ಸೇತುವೆ ಬೇಡದ್ದೋರಿಂಗೆ ಅನಂತನ ಚಿನ್ನ ಎಂತಕಪ್ಪಾ, ಅಲ್ಲದೋ?
ಬೇಜಾರಾವುತ್ತು ಒಂದೊಂದರಿ ಇದರ ಕೇಳುವಗ!
ಸಕಾಲಿಕ ಶುದ್ದಿಗೆ ಒಪ್ಪ೦ಗೊ ಒಪ್ಪಣ್ಣಾ…
ಈ ವಿಷಯಕ್ಕೆ ಕಾರಣ ಎ೦ತ ಕೇಳಿರೆ, ಹಲವು ವರ್ಶ ಮೊದಲೆ ದೇವಸ್ಥಾನದ ದೀಪ೦ಗಳ, ಹರಿವಾಣ೦ಗಳ, ಕಲಶ೦ಗಳ ಎಲ್ಲ ಇದರ ಮೊಕ್ತೇಸರರು ಹೇಳ್ತ ಈ ರಾಜಕುಟು೦ಬದವು ಕದ್ದು ಮಾರ್ತವು ಹೇಳಿ ಕೆಲವು ಜನ ಭಾರೀ ದೇವಭಕ್ತರು(?) ದೂರು ಎಲ್ಲ ಕೊಟ್ಟಿತ್ತಿದ್ದವು. ಇದು ಕೆಲವು ಮಲಯಾಳ೦ ಚೇನೆಲುಗಳಲ್ಲಿ ಬಪ್ಪಲೂ ಬಯಿ೦ದು.
ಇದರೆಲ್ಲ ನೋಡಿ೦ಡಿತ್ತಿದ್ದ ಒಬ್ಬ ಬಡ ಬ್ರಾಹ್ಮಣ ಐ ಪಿ ಎಸ್ ಉದ್ಯೋಗಸ್ಥ ಇತ್ತಿದ್ದ. ಅವನ ಅಬ್ಬೆ ಅಪ್ಪ೦ಗೆ ಸೌಕ್ಯ ಇಲ್ಲೆ ಹೇಳಿ ಆದಪ್ಪಗ ಅವರ ನೋಡಿಗೊ೦ಬಲೆ ಬೇಕಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಿರುವನ೦ತಪುರಲ್ಲಿ ಅಪ್ಪ ಅಬ್ಬೆಯ ಒಟ್ಟಿ೦ಗೆ ಬ೦ದು ಸೆಟ್ಲ್ ಆದವ. ಈಗಳುದೆ ಅವು ಇಪ್ಪದು ಅನ೦ತಪದ್ಮನಾಭಸ್ವಾಮಿ ದೇವಸ್ಥಾನದ ಪರಿಸರಲ್ಲೇ. ವರ್ಶ ೭೦ರ ಮೇಲೆ ಆತು ಕಾಣ್ತು
ಅವು ಇದರ ಎಲ್ಲ ನೋಡಿ ಸುಪ್ರೀ೦ ಕೋರ್ಟಿಲ್ಲಿ ಕೇಸು ಕೊಟ್ಟವು. ದೇವಸ್ಥಾನದ ಸ೦ಪತ್ತು ಎಷ್ಟು ಇದ್ದು ಹೇಳಿ ಒ೦ದು ಲೆಕ್ಕ ಬೇಕು. ಅ೦ಬಗ ಆರಾರು ಕದ್ದರೂ ಕಳ್ಳದ್ರೂ ಗೊ೦ತಕ್ಕನ್ನೆ. ಇದರ ಕೊನೇಯಾಣ ಫಲವೇ ಈಗಾಣ ಲೆಕ್ಕಾಚಾರ೦ಗೊ. ನಿಜವಾಗಿ ಹೇಳಿರೆ ಇದು ‘ನಿಧಿ’ ಅಲ್ಲ. ಬದಲಾಗಿ ಸ೦ಪತ್ತು ಹೇಳ್ಳಕ್ಕಾಯ್ಕು. ‘ನಿಧಿ’ ಹೇಳಿರೆ ಅನಿರೀಕ್ಷಿತವಾಗಿ ಯಾವ ಮೂಲ೦ದ ಹೇಳಿ ಗೊ೦ತಿಲ್ಲದ್ದೆ ಸಿಕ್ಕುತ್ತ ಅಮೋಘ ಸ೦ಪತ್ತಲ್ಲದೊ?
ಅಲ್ಲಿಯಾಣ ರಾಜ೦ಗೊ ಒ೦ದು ಕಾಲಲ್ಲಿ, ಇಡೀ ರಾಜ್ಯವೇ ನಿನ್ನದು, ಎ೦ಗೊ ನಿನ್ನ ದಾಸ೦ಗೊ, ನಿನ್ನ ಪ್ರತಿನಿಧಿಯಾಗಿ ರಾಜ್ಯ ಭಾರ ಮಾಡ್ತಿಯೊ ಅಷ್ಟೆ ಹೇಳಿ ಸ೦ಕಲ್ಪಿಸಿ ರಾಜ್ಯದ ಒಟ್ಟೂ ಸ೦ಪತ್ತಿನ ಪದ್ಮನಾಭನ ಪಾದ೦ಗೊಕ್ಕೆ ಸಮರ್ಪಿಸಿದ್ದವಾಡ. ಇದರಿ೦ದ ಮತ್ತೆ, ಈಗಾಣ ರಾಜ ಕೂಡ, ದೇವಸ್ಥಾನಕ್ಕೆ ಬ೦ದರೆ ಹೆರ ಹೋಪಗ ಕೂದು ಕಾಲಿನ ತಟ್ಟಿ ಕುಡುಗಿಕ್ಕಿ ಹೋಪದು – ಅಲ್ಲಿಯಾಣ ಒ೦ದು ಮಣ್ಣಿನ ಕಣ ಕೂಡ ರಾಜ ಹೆರ ತೆಕ್ಕೊ೦ಡು ಹೋದಹಾ೦ಗೆ ಅಪ್ಪಲಾಗ ಹೇಳಿ. ಅಲ್ಲಿ ಅಮೋಘ ಸ೦ಪತ್ತಿನ ರಾಶಿ ಇದ್ದು ಹೇಳಿ ರಾಜ ಕುಟು೦ಬದವಕ್ಕೂ, ಹಲವು ಪ್ರಮುಖರಿ೦ಗೂ ಮೊದಲೇ ಗೊ೦ತಿದ್ದತ್ತು. ೯೦-ರ ದಶಕಲ್ಲಿ ಸುಪ್ರೀ೦ ಕೋರ್ಟಿಲ್ಲಿ ಈ ಬಗ್ಗೆ ಅ೦ದಾಜು ಲೆಕ್ಕವೂ ಅವು ಕೊಟ್ಟಿತ್ತಿದ್ದವು. ಎ೦ತದೇ ಆದರೂ ಈಗಾಣ ಕಾಲಲ್ಲಿಯುದೆ ಸ೦ಪತ್ತು ಕ೦ಡಪ್ಪಗ ತಲೆ ತಿರುಗದ್ದೆ, ಅದಕ್ಕೆ ಕೈ ಹಾಕದ್ದೆ ಕಾಪಾಡಿದ ಅವರ ಮೆಚ್ಚೆಕೇ.. ದೇವರು ಎಲ್ಲೋರಿ೦ಗುದೆ ಒಳ್ಳೇದು ಮಾಡ್ಲಿ
ಒೞೆ ಒಪ್ಪಃ)
ಗಣೇಶಣ್ಣ ತುಂಬಾ ವಿವರ ಕೊಟಿದಿ….
ಪೆರುವದಣ್ಣಾ..
ಒಳ್ಳೆ ಒಪ್ಪ! ಎಷ್ಟೊಂದು ಮಾಹಿತಿಗೊ. ಎಷ್ಟೊಂದು ವಿಚಾರಂಗೊ, ಎಷ್ಟೊಂದು ವಿವರಣೆಗೊ.
ಅಂಬಗ ಶುದ್ದಿಯನ್ನೇ ಬರೆತ್ತಿತಿರನ್ನೇ ನಿಂಗೋ?
ಒಪ್ಪವೇ ಇಷ್ಟು ಚೆಂದ ಕೊಟ್ಟೋರು ಶುದ್ದಿ ಇನ್ನೆಷ್ಟು ಚೆಂದಕೆ ಬರೆಯಿ ಅಪ್ಪಾ ನಿಂಗೊ!! 🙂
ಕಾದೊಂಡಿರ್ತೆ. ಹರೇರಾಮ
ತಿರುಪತಿ ವೆಂಕಟ್ರಮಣ ದೇವರಿಂದಲುದೆ ಶ್ರೀಮಂತಾಡ ಈಗ ಅನಂತಶಯನ 🙂
“ಆ ರಹಸ್ಯ ಭಾಂಡಾಗಾರದ ಒಳ ನಾವಿಳುದು, ಬೀಗಒಡದು, ಮೌಲ್ಯಮಾಪನ ಮಾಡಿದ ಮೇಗೆ – ಅವನ ಜೆವಾಬ್ದಾರಿ ಅಲ್ಲ. ನಾವೇ ಕಾಪಾಡಿಗೊಂಡು ಬರೇಕು, ಅಲ್ಲದೋ?” – ಇದೇ ದೊಡ್ಡ ಸಮಸ್ಯೆ ಇನ್ನು, ಲೆಕ್ಕ ಮಾಡ್ಲೆ ಹೋದವೆಲ್ಲ ಒಂದೆರಡು ಸಣ್ಣ ಸಣ್ಣ ಗಟ್ಟಿಗಳ ಮೆಲ್ಲಂಗೆ ಕಿಸಗೆ ಇಳಿಶುಗೊಂಡು ಹೋಗವನ್ನೆ ?
ಮತ್ತೆ ಇನ್ನು ಇದರ ಸರ್ಕಾರ ತೆಕ್ಕೊಂಡು ಏವ ಏವ ಕಂತ್ರಿಗ ಎಷ್ಟೆಶ್ಟು ಹೊಡವಲಿದ್ದಾ ಏನ ?
ಇದರ ಎಲ್ಲ ಅಣ್ಣಾ ಹಜಾರೆ ಹತ್ರೆ ಮಡುಗಿರೆ ಮಡಿಕ್ಕೊಂಗಾ ಏನೋಪ್ಪ ?
ಉಮ್ಮ ಇನ್ನೆಂತ ಆವ್ತೊ ಕಾಲವೇ ಉತ್ತರ ಹೇಳೆಕ್ಕಷ್ಟೆ …..
ಎಂತಾದರುದೆ ಸುಮ್ಮನೆ ಹಾಳಾಗದ್ರೆ ಸಾಕು… ನವಗೆ ಸಂತೋಷ 🙂
ಲಾನಣ್ಣಾ…
ಶುದ್ದಿಗೆ ಮೊದಲಾಗಿ ಒಪ್ಪಕೊಟ್ಟದಕ್ಕೆ ಒಪ್ಪಂಗೊ!
ಯೇವ ಕಂತ್ರಿಗಳೂ ಬೇಡ, ಹಜಾರೆ ಅಣ್ಣಂದ್ರೂ ಬೇಡ – ಎಲ್ಲವನ್ನೂ ಅನಂತಶಯನನೇ ಕಾಪಾಡಲಿ ಹೇಳಿ ಬಿಟ್ಟಿದ್ದರೆ ಎಂತ ಆವುತಿತು – ಅಲ್ಲದೋ?
ಕಂತ್ರಿಗಳ ಪಾಲಿಂಗೆ ಕೊಟ್ಟಿದ್ದರೆ ಈಗ ಒಂದು ರೋಳ್ಡುಗೋಳ್ಡು ಬಾಕಿ ಒಳಿತ್ತಿತೋ ಏನೋ – ಪಟಕ್ಕಪ್ಪಗ. ಅಲ್ಲದೋ? 🙂