ಶುಬತ್ತೆಯ ಮೊಟ್ಟೆಲಿ ಯೇವಗಳೂ ಒಂದು ನಾಯಿ ಇಕ್ಕು; ಲೇಪ್ಟೋಪಿನ ಹಾಂಗೆ.
ಕುಂಞಿ ಇಪ್ಪಾಗಳೇ ನೊಂಪಣ್ಣನ ಹಾಂಗೆ ಸಾಂಕಿದ ಆ ನಾಯಿ, ಈಗಳೂ ಹಾಂಗೇ ಇದ್ದು.
ಒಂದೇ ಒಂದು ದೂಳ ಹೊಡಿಯೂ – ಊಹೂಂ – ಮೈಲಿಡೀ ಹುಡ್ಕಿರೂ ಸಿಕ್ಕ, ಮೈಲಿ ಎಂತಗೆ – ಕಾಲ ಬೆರಳುಗಳ ಎಡೆಲಿಯೂ ಕಾಣ. ಮಣ್ಣ ನೆಲಕ್ಕೆ ಇಳುದರೆ ಅಲ್ಲದೋ ಮಣ್ಣು ಹಿಡಿಸ್ಸು! ಅಷ್ಟೂ ನೊಂಪಾಗಿ ಬೆಳದ್ದು ಆ “ಜಾತಿನಾಯಿ”ಯ ರೋಸಿ.
ತರವಾಡುಮನೆಲಿಯೂ ಒಂದು ನಾಯಿ ಇದ್ದು.
ಹಳ್ಳಿ ಕೆಲಸಂಗಳ ಎಡಕ್ಕಿಲಿ ಬೇಕುಬೇಕಾದ ಹಾಂಗೆ ಸೇರಿಗೊಂಡು ಮನೆಜೀವನಲ್ಲಿ ಬದ್ಕುತ್ತದು.
ರಂಗಮಾವನ ನಿತ್ಯ ಚಟುವಟಿಕೆಯ ಸರೀ ಅರ್ತ ಮಾಡಿಗೊಂಡು ಅವರ ಒಟ್ಟಿಂಗೇ ಇಪ್ಪದು ಆ ನಾಯಿ ಜಾತಿಯ ದಾಸು.
ಅಂದೊಂದರಿ ಇದೆರಡರ ಬಗ್ಗೆ ಮಾತಾಡಿತ್ತು ನಾವು. ನೆಂಪಿದ್ದೋ?
(https://oppanna.com/oppa/patiatteya-daasu-shubatteya-rosi)
ಅದಿರಳಿ.
~
ತರವಾಡುಮನೆಯ ದಾಸುವಿನದ್ದೇ ಜಾತಿಯ ನಾಯಿಗೊ ಬೈಲಿಲಿ ಹಲವಿದ್ದು.
ಅವರವರ ಮನೆಯ ಚೆಂದಕೆ ನೋಡಿಗೊಂಡು ಬತ್ತ ಸೇವಕಂಗೊ; ಅಪರೂಪದ, ಗುರ್ತ ಪರಿಚಯ ಇಲ್ಲದ್ದೋರು ಬಂದರೆ ಕೊರಪ್ಪಿ ಹೆದರುಸುತ್ತ ನಾಯಕಂಗೊ! ಹಾಂಗಿಪ್ಪ ಹಲವು ನಾಯಿಗಳಲ್ಲಿ ಮಾಷ್ಟ್ರುಮಾವನ ಮನೆಲಿಪ್ಪ “ಟಾಮಿನಾಯಿ”ಯೂ ಒಂದು.
ಬೈಲಿನ ನಾಯಿಗೊಕ್ಕೆಲ್ಲ ದಾಸು, ಕರಿಯ, ಬೊಳ್ಳಿ – ಹೇದು ನಮ್ಮೂರಿನ ಹೆಸರಿದ್ದರೂ – ಮಾಷ್ಟ್ರುಮಾವನ ಮನೆ ನಾಯಿಗೆಂತಕೆ ಟಾಮಿ ಹೇದು ಇಂಗ್ಳೀಶು ಹೆಸರು – ಕೇಳುವಿ ನಿಂಗೊ. ಒಪ್ಪಣ್ಣಂಗೂ ಹಾಂಗೇ ಅನುಸಿದ್ದು ಒಂದು ಕಾಲಲ್ಲಿ.
ಒಪ್ಪಣ್ಣಂಗೆ ನೆಂಪು ಬಪ್ಪ ಲಾಗಾಯ್ತು ಅಲ್ಲಿಗೆ ಬಂದ ಎಲ್ಲಾ ನಾಯಿಗೆ “ಟಾಮಿ” ಹೇಳಿಯೂ, ಎಲ್ಲಾ ಪುಚ್ಚೆಗೆ “ಬಿಲ್ಲಿ” ಹೇಳಿಯೂ ಹೆಸರು.
ಒಪ್ಪಣ್ಣ ಸಣ್ಣ ಇಪ್ಪಾಗ ಅರೆಕ್ಕೆಂಪು ಬಣ್ಣದ ಟಾಮಿ ಇದ್ದತ್ತು. ಅದು ಸತ್ತ ಮತ್ತೆ ಮಣ್ಣು ಬಣ್ಣದ ಟಾಮಿ ಇದ್ದತ್ತು, ಅದಾದ ಮತ್ತೆ ಕರಿ ಬಣ್ಣದ ಟಾಮಿ – ಹೀಂಗೆ ಅಲ್ಲಿ ಟಾಮಿಗಳೇ. ಟಾಮಿ ಹೇದರೆ ನಾಯಿ ಹೇಳಿ ಅರ್ತ. ಅಲ್ಲಿ ನಾಯಿಯೂ ಪುಚ್ಚೆಯೂ ಒಂದೊಂದೇ ಇಕ್ಕಷ್ಟೆ. ಒಂದು ಅಳುದ ಮೇಲೆ ಇನ್ನೊಂದು ತಪ್ಪದು. ಮಾಷ್ಟ್ರುಮಾವ° ಕಲ್ತ ಇತಿಹಾಸ ಪುಸ್ತಕಲ್ಲಿ ಐದನೇ ಜೋರ್ಜು, ಆರನೇ ಜೋರ್ಜು, ಎರಡ್ಣೇ ಎಲಿಜಬೆತ್ತು – ಹೇದು ಓದಿದ್ದಾರ ಪ್ರಭಾವವೋ ಏನೋ!
ಕಾರಣ ಎಂತೂ ಇಲ್ಲೆ; ನಾಯಿ ಹೊಸತ್ತು ಬಂದರೂ ಹೆಸರು ಹೊಸತ್ತು ಅಲ್ಲದ್ದರೆ ನವಗೆ ನೆಂಪು ಮಡಗಲೆ ಸುಲಬ ಒಪ್ಪಣ್ಣೋ – ಹೇಳುಗು ಮಾಷ್ಟ್ರುಮನೆ ಅತ್ತೆ.
ಯೇವದೇ ಕಾಲಲ್ಲಿ, ಯೇವದೇ ಹೊತ್ತಿಂಗೆ ಮಾಷ್ಟ್ರುಮಾವನ ಮನೆಲಿ ನಾಯಿ ಇದ್ದರೆ ಅದಕ್ಕೆ ಟಾಮಿ ಹೇಳಿಯೂ, ಪುಚ್ಚೆ ಇದ್ದರೆ ಅದಕ್ಕೆ ಬಿಲ್ಲಿ ಹೇಳಿಯೂ ಹೆಸರು – ನಿಘಂಟು.
~
ಟಾಮಿಯ ಪಟ್ಟಿಲಿ ಅಕೇರಿಗೆ ಕರಿ ಟಾಮಿಯ ಶುದ್ದಿ ತೆಗದೆ ಇದಾ – ಈ ಸರ್ತಿ ಅದರ ಬಗ್ಗೆಯೇ ಮಾತಾಡುವನೋ?
ಆಗಳೇ ಹೇಳಿದಾಂಗೆ, ಊರ ಜಾತಿಯ ನಾಯಿ; ಮೈಲಿ ಕೈಲಿ ಪೂರಾ ಮಣ್ಣು ಹಿಡಿಶೆಂಡು ಕುರೆಪ್ಪಾಟುವ ಹಾಂಗೆ ಇಕ್ಕು.
ಕೊಳಕ್ಕ° – ಹೇದು ಒಂದೊಂದರಿ ಮಾಷ್ಟ್ರಮನೆ ಅತ್ತೆ ಅದರ ಬೈವಲಿದ್ದು.
ತೀರ ಶುಬತ್ತೆಯ ರೋಸಿಯಷ್ಟು ನೊಂಪಣ್ಣ ಅಲ್ಲದ್ದರೂ – ಮಾಷ್ಟ್ರಮನೆ ಅತ್ತೆ ಬೈತ್ತಷ್ಟು ಕೊಳಕ್ಕ° ಅಲ್ಲ!
ಮನಗೆ ಬತ್ತೋರ ಗುರ್ತ ಸಿಕ್ಕದ್ದರೆ ಕೊರಪ್ಪಿ ಗುರ್ತ ಮಾಡಿಗೊಂಡು, ಗುರ್ತ ಇಪ್ಪೋರ ಒಳಮಾಡಿ, ಎತ್ತಿದ ಮತ್ತೆ ಆಸರಿಂಗೆ ತಪ್ಪನ್ನಾರ ಮಾತಾಡುಸುತ್ತ ಉಸ್ತುವಾರಿ!
ಎರಡ್ಣೇ ಸರ್ತಿ ಹೋದರೆ ’ಎನಗೆಂತಾರು ತಯಿಂದೆಯೋ ಈ ಸರ್ತಿ’ ಹೇದು ಬೇಗಿಂಗೆ ಬಾಯಿ ಹಾಕುತ್ತಷ್ಟೂ ಕಾರ್ಬಾರಿ. .
ಬೈಲಿಲೇ ನೆಡಕ್ಕೊಂಡು ಹೋಪಗ ಒಂದರಿ ಮನೆಮೆಟ್ಟುಕಲ್ಲು ಹತ್ತಿರೆ ಬೀಲ ಆಡುಸೆಂಡು ಮಾತಾಡ್ಳೆ ಬಕ್ಕು – ಅಷ್ಟೂ ಕಾನೇಶ್ಮಾರಿ. ಏನಾರು ಜೆಂಬ್ರವೋ ಮಣ್ಣ ಇದ್ದೊಂಡು ಸಂಕೊಲೆಲಿ ಕಟ್ಟಿ ಹಾಕಿರೆ ಹೋದ ಬಂದ ಎಲ್ಲೋರ ಹತ್ತರೆಯೂ ಹೇಳಿಗೊಂಬ ಬೇಜಾರಿ!
ಗುರ್ತ ಇಪ್ಪ ಅಪುರೂಪದೋರು ಮನಗೆ ಹೋದರೆ – ಜಾಲಬುಡ ಎತ್ತುವ ಮದಲೇ – ಬೀಲ ಆಡುಸೆಂಡು – ಹೆ ಹೆ ಹೆ ಹೆ – ಹೇಳಿಗೊಂಡು, ಕೈಕ್ಕಾಲು ನೆಗ್ಗಿ ತಲೆ ಒರೆಂಗೆ ಹಾರ್ಲಿದ್ದು. ಮನಗೆತ್ತಿಅಪ್ಪದ್ದೇ ತಿಂಡಿ ತಿಂಬಲೆ ಅಂಬೆರ್ಪು ಮಾಡ್ಳಿದ್ದು.
ಬಂದೋರಿಂಗೆ ಚಾಯ-ತಿಂಡಿ ತಪ್ಪದು ತಡವಾದರೆ ಟಾಮಿಗೆ ಸಂಕಟ ಅಪ್ಪದಿದಾ – ಹೇದು ಅತ್ತೆ ಪರಂಚುಗು ಒಂದೊಂದರಿ!
ಅಪ್ಪು, ನೆಂಟ್ರು ಬಂದಿಪ್ಪಾಗ ಆಸರಿಂಗೆ ಕೊಡ್ತರೋ, ದಿನ ನಿತ್ಯದ ಆಸರಿಂಗೆ ಕುಡಿತ್ತರೋ – ಒಟ್ಟಿಂಗಿಪ್ಪ ತಿಂಡಿ ಬೇಕೇಬೇಕು ಇದಕ್ಕೆ.
ಸುರುವಿಂಗೆ ಸಾಬೀತಿನ ಮಂದ್ರಸ್ವರಲ್ಲಿ ಕೇಳಿರೂ – ಹೊತ್ತಿಂಗೆ ಸರಿಯಾಗಿ ಹಾಕದ್ದರೆ ಮಧ್ಯಮವೂ ಕಳುದು ತಾರಕ್ಕೆ ಏರ್ತು. ಏನಾರು ಗಂಭೀರ ವಿಶಯಂಗಳ ಮಾತಾಡುವಗ “ಈ ಹರಟೆ ಒಂದರಿ ನಿಲ್ಲಲಿ” ಹೇದು ಮಾಷ್ಟ್ರುಮಾವ° ಕೈಲಿಪ್ಪ ರಸ್ಕು ಇಡ್ಕಿರೆ –ಇನ್ನೊಂದು ರಸ್ಕು ತುಂಡುಸುವ ಮದಲೇ ಪುನಾ ಕೊರಪ್ಪುಲೆ ಸುರುಮಾಡ್ತು.
ಕಾಪಿಕುಡುದ ಮತ್ತೆ ಹೊಡಿಕಸವಿನ ಎಲ್ಲವನ್ನೂ ಬರಗಿ ತೊಟ್ಟೆಲಿ ಹಾಕಿ “ತೆಕ್ಕೊಂಡೋಗು” ಹೇದರೆ ಹಿಡ್ಕೊಂಡು ದೂರ ಹೋಗಿ ತಿಂಗು.
ದೂರ ಎಲ್ಲಿ? – ಜೆಗಿಲಿಂದ ದೂ…ರ, ಜಾಲ ನೆಡೂ..ಕೆ!
ಹರಗಿದ ಅಡಕ್ಕೆಯ ಮೇಗೆ ಬಂದು ತಿಂಗು. ಒಣಗಿದ ಅಡಕ್ಕೆ ಬಾಚಲೆ ನೆಲ್ಲಿಕೋರಿ ಹಿಡಿವಗ, ಅಡಕ್ಕೆಯಷ್ಟೇ ಹರ್ಕಟೆ ತೊಟ್ಟೆಯೂ ಇರ್ತಾಡ ರಾಶಿಲಿ!
ಅದರಾ ಹೀಂಗಿರ್ತ ಕಾರ್ಬಾರುಗಳ ಹೇಳ್ತರೆ ಎಷ್ಟು ಬೇಕಾರೂ ಪಟ್ಟಿ ಮಾಡ್ಳೆಡಿಗು.
ಚೋದ್ಯಂಗಳ ಮಾಡ್ತದು ಕಾಂಬಗ “ಕಳ್ಳ°” ಹೇದು ಬೈದು ಹೋವುತ್ತು ನವಗೆ; ಅಪ್ಪೋ!
ಆಚಕರೆ ಪೂಜಾರಿಗಳಲ್ಲಿಂದ ಅಮ್ಮಕೋಳಿ ಅದರ ಹನ್ನೆರಡು ಕುಂಞಿಗಳ ಕಟ್ಟಿಂಡು ಹುಳುಹೆರ್ಕಲೆ ಬಂದರೆ – ಹೋಗಿ ಹಿಂದಾಣ ಕುಂಞಿಯ ಮೆಲ್ಲಂಗೆ ಸ್ವಾಹಾ ಮಾಡುಗು. ಮರದಿನ ಹನ್ನೊಂದೇ ಕುಂಞಿ ಇಪ್ಪದು ಹೇದು ಪೂಜಾರಿ ತಲೆಬೆಶಿ ಮಾಡುಗು; ಎರಡು ದಿನ ಆತು – ನಾಯಿ ಹೆಜ್ಜೆ ಉಂಡಿದಿಲ್ಲೆ – ಹೇದು ಮಾಷ್ಟ್ರಮನೆ ಅತ್ತೆ ತಲೆಬೆಶಿ ಮಾಡುಗು; ಒಳುದ ಹನ್ನೊಂದು ಪಿಳ್ಳೆಗೊ ಪುನಾ ಯೇವಗ ಬಕ್ಕು ಹೇದು ಟಾಮಿನಾಯಿ ತಲೆಬೆಶಿ ಮಾಡುಗು!!
ಇದಾ, ನಮ್ಮ ಶ್ರೀಅಕ್ಕ° ಒಂದೊಂದಾರಿ ಮಾಷ್ಟ್ರುಮಾವನ ಮನಗೆ ಬಪ್ಪಲಿದ್ದು.
ಬಪ್ಪಗ – ಮಾಷ್ಟ್ರುಮಾವಂಗೆ ಯೇವದಾರು ಪುಸ್ತಕವೋ; ಮಾಷ್ಟ್ರಮನೆ ಅತ್ತೆಗೆ ನಾಕು ಜೀಗುಜ್ಜೆಯೋ, ಮಾಷ್ಟ್ರಮಾವನ ಮಗಳಿಂಗೆ ಗೋಧಿ ಹಲುದ ಕಟ್ಟವೋ – ತಪ್ಪದರ ಒಟ್ಟಿಂಗೇ, ಟಾಮಿಗೊಂದು ಬಿಸ್ಕೇಟು ಕಟ್ಟ! ಪರಸ್ಪರ ಅಷ್ಟೂ ಗುರ್ತ ಅವಕ್ಕಿಬ್ರಿಂಗೆ.
ಬಿಸ್ಕೇಟು ತಂದ ಲೆಕ್ಕಲ್ಲಿಯೋ ಏನೋ – ಶ್ರೀಅಕ್ಕಂಗೆ ಒಂದರಿಯೂ ಕೊರಪ್ಪಿ ಜೋರು ಮಾಡಿದ್ದಿಲ್ಲೆಡ. ಕಳ್ಳ°! 😉
~
ಇಷ್ಟೆಲ್ಲ ಕುಶಾಲುಗಳ ಎಡಕ್ಕಿನ ಸಂಗತಿ ಎಂತರ ಹೇದರೆ, ಆ ಮನೆಯ ಎಲ್ಲೋರ ಕೊಂಡಾಟದ ಆ ನಾಯಿ ಕಳುದ ಆಯಿತ್ಯವಾರ ಸತ್ತತ್ತು. ಜಾಸ್ತಿ ನೆರಕ್ಕಿದ್ದಿಲ್ಲೆ, ಒಂದೇ ವಾರ ಅದರಷ್ಟಕ್ಕೇ ಮನುಗಿ, ಎಂತೂ ತಿನ್ನದ್ದೆ, ಡಾಗುಟ್ರ ಬಂದರೂ ಏಳದ್ದೆ ಇದ್ದತ್ತು.
’ಏನೋ ವಿಷ ಜಂತು ತಿಂದದಾಯಿಕ್ಕು’ ಪಳ್ಳತಡ್ಕ ಪಶುವೈದ್ಯರು ಹೇಳಿದವು. ಜೋರು ಮಳೆಬತ್ತ ಸಮಯ ನೋಡಿ ಹೆರಟಿಕ್ಕಿ ಹೋತಾಡ.
ಹತ್ತೊರಿಶ ಮನೆಲಿದ್ದ ನಾಯಿ ಸತ್ತಪ್ಪಗ ಹತ್ತು ದಿನ ಆದರೂ ಬೇಜಾರ ಅಪ್ಪದು ಇಪ್ಪದೇನ್ನೇ! ಅತ್ತೆಗೆ ತುಂಬ ಬೇಜಾರ ಈಗ.
ಕಾಪಿ ಕುಡಿವಗ ರಸ್ಕು ಕೇಳುಲೆ ಆರೂ ಇಲ್ಲೆ; ಮಂಗನ ಓಡುಸುವಗ ಬೊಬ್ಬೆ ಹೊಡವಲೂ ಆರೂ ಇಲ್ಲೆ! ಛೇ!!
ಅದರಿಂದ ಮತ್ತೆ ನಾಕುಸರ್ತಿ ಹೋದೆ ಮಾಷ್ಟ್ರುಮಾವನಲ್ಲಿಗೆ; ಏಯ್ – ಟಾಮಿನಾಯಿಯ ಚೆಲ್ಲಾಟ ನೆಂಪಾವುತ್ತದು ಕಮ್ಮಿ ಆಯಿದಿಲ್ಲೆ. ಇನ್ನು ಇನ್ನಾಣ “ಟಾಮಿ” ಬಂದ ಮತ್ತೆ ಪುನಾ ಸುರು ಅಕ್ಕೋ ಏನೋ!
~
ಈ ಕಳ್ಳ° ನಾಯಿ ಒಪ್ಪಣ್ಣಂಗೆ ಎಂತರಪ್ಪ ಶುದ್ದಿ ಹೇಳಿತ್ತು ಹೇದು ಅನುಮಾನ ಬಂತೋ?
ಅಪ್ಪು; ಒಂದಲ್ಲ – ಒಟ್ಟು ಮೂರು ಶುದ್ದಿಗೊ.
ಮೊನ್ನೆ ಆಯಿತ್ಯವಾರ ಹೊತ್ತೋಪಗ ಮಾಷ್ಟ್ರುಮಾವನ ಮನೆಂದ ಒಪಾಸು ಬಪ್ಪಾಗ – ಟಾಮಿಯ ಬಗ್ಗೆಯೇ ಆಲೋಚನೆ ಮಾಡಿಗೊಂಡು ಬಂದದು. ಇರುಳು ಮನುಗಿರೂ ಪಕ್ಕನೆ ಒರಕ್ಕು ಬಯಿಂದಿಲ್ಲೆ – ಇದೇ ಟಾಮಿಯ ಕಂಡುಗೊಂಡಿದ್ದತ್ತು.
ಬೈಲಿನ- ಬೈಲಿನ ಎಲ್ಲೋರ ಗುರ್ತಮಾಡಿದ್ದ ನಾಯಿ ಹೋತನ್ನೇ ಹೇದು.
ಮನುಗಿ ಸುಮಾರು ಹೊತ್ತಪ್ಪಗ – ಅರೆ ಒರಕ್ಕಿನ ಅಮಲು ಹಾಂಗೇ ಹಿಡುದತ್ತಲ್ಲದೋ ಟಾಮಿಯೇ ಬಂದು ಮಾತಾಡಿದ ಹಾಂಗಾತು.
ಅಂಬಗಳೇ ಅದು ಈ ಮೂರು ಶುದ್ದಿಗಳ ಹೇಳಿದ್ದು.
~
ಸುರುವಾಣದ್ದು – ಅದರ ಬಾಲ್ಯದ ಸಂಗತಿ.
ತೀರಾ ಶುಬತ್ತೆಯ ನಾಯಿಯಷ್ಟು ಮನಾರ ಇಲ್ಲದ್ದರೂ ಒಂದು ಮಟ್ಟಿಂಗೆ ನೊಂಪು ಇದ್ದತ್ತು ಆ ನಾಯಿ.
ಹತ್ತರೆ ಹೋಪಗಳೇ ನಾರುವಷ್ಟು ಹೊಲಸು ಇದ್ದತ್ತಿಲ್ಲೆ; ಅಕ್ಕಾದೋರು ಮುಟ್ಟಿಮಾತಾಡುಸುತ್ತಷ್ಟು ಮನಾರ ಇತ್ತು.
ಆ ಕರಿನಾಯಿ ಇಷ್ಟು ಮನಾರ ಆಯೇಕಾರೆ ಸುಮಾರು ಒರಿಶ ಹಿಡುದ್ದಾಡ.
ಸಣ್ಣ ಇಪ್ಪಾಗ– ಹೇಳಿ ಸುಕ ಇಲ್ಲೆ!
ನಾಯಿಕುಂಞಿಯ ತಂದ ಸಮಯಲ್ಲೇ ಅದೊಂದು ಅನಾರೋಗ್ಯದ ಮುದ್ದೆ ಆಗಿತ್ತಾಡ.
ಮೈಲಿಡೀ ಕಜ್ಜು, ಹೊಟ್ಟೆಲಿ ಹುಳುತುಂಬಿ ಹೊಟ್ಟೆ ಮಾಂತ್ರ ದೊಡ್ಡ, ಕೈಕ್ಕಾಲು ಪೂರ ಸಣ್ಣ ಸಣ್ಣ!
ಮನೆಯವಕ್ಕೆ ಸರಿ ಗುರ್ತವೂ ಆಯಿದಿಲ್ಲೆ ಇದಾ- ಹಾಂಗಾಗಿ ಅದರ ಪೋಚಕಾನಕ್ಕೂ ಆರೂ ಹೋಗಿಂಡಿತ್ತವಿಲ್ಲೆ.
ಹತ್ತರೆ ಬಂದರೆ ನಾರುಗು – ಎಲ್ಲೋರೂ ಬೈದು ಬಡುದು ಓಡುಸುತ್ತೋರೇ ಇಪ್ಪದು!
ಅದಾದರೂ ಎಲ್ಲಿ ಹೋಪದು ಪಾಪ. ಅದರ ಅಮ್ಮಂದೇ ಒಟ್ಟಿಂಗಿದ್ದಿದ್ದರೆ ಅದರಷ್ಟಕೆ ಇರ್ತಿತೋ ಏನೋ, ಅಮ್ಮ ಅದರ ಅಮ್ಮನ ಮನೆಲೇ ಇದ್ದು – ಕೆಲಸಕ್ಕೆ ಬತ್ತ ಗಿರಿಜನಲ್ಲಿ!
ಆದರೆ, ಆರಿಂಗೂ ಅದರ ಆಗದ್ದ ಆ ಸಮಯಲ್ಲಿ ಮಾಷ್ಟ್ರುಮನೆಅತ್ತೆ ಮಾಂತ್ರ ಅದರ ಆರೈಕೆ ಮಾಡಿದ್ದವಡ.
ಹುಳುವಿನ ಮದ್ದು ಕುಡುಶಿದ್ದಲ್ಲದ್ದೆ, ವಾರಕ್ಕೊಂದರಿ ಸಾಬೊನು ಹಾಕಿ ಮೀಶಿ, ಮೈ ಉದ್ದಿ, ಹೇನಿಂಗೆ ಪೌಡ್ರು ಹಾಕಿ. .
ಹೋ ರಾಮ! ಈ ಕಂತ್ರಿನಾಯಿಗೆ ಇಷ್ಟೆಲ್ಲ ಮಾಡ್ತದು ಕಾಂಬಗ- ಇದರಿಂದ ಏನಾರು ಉಪಯೋಗ ಇದ್ದೋ – ಹೇದು ಅವರ ಕಂಡೋರಿಂಗೆ ನೆಗೆಬಂದುಗೊಂಡಿತ್ತಾಡ! ಕಂಡೋರು ನೆಗೆಮಾಡಿದ್ದಕ್ಕೆ ಅತ್ತೆ ಬಿಟ್ಟಿದವಿಲ್ಲೆ; ಸರೀ ಹುಳಿಮಜ್ಜಿಗೆ, ಹುಳುವಿನ ಮದ್ದು, ಮೀಯಾಣ, ಆರೈಕೆ ಮಾಡಿ ಅಪ್ಪದ್ದೇ – ನಾಯಿ ಗೆನಾ ಆತು.
ಜಾಲಿಡೀ ಅತ್ತಿತ್ತೆ ಓಡ್ಳೆ ಸುರುಮಾಡಿತ್ತು. ಪೆಕ್ರನ ಹಾಂಗೆ ಪೆಕ್-ಪೆಕ್ ಹೇಳಿ ಬಂದೋರ ಜೋರುಮಾಡ್ತಷ್ಟು ಸ್ವರವೂ ಬಂತು.
ಎಲ್ಲೋರಿಂಗೂ ಅದರ ಅವತಾರ ಕಂಡ್ರೆ ನೆಗೆಯೇ ಬಪ್ಪದು ಆ ಸಮೆಯಲ್ಲಿ – ಒಪ್ಪಣ್ಣಂಗಿನ್ನೊ ಸರೀ ನೆಂಪಿದ್ದು.
ಮೈ ನೊಂಪಪ್ಪದ್ದೇ ಎಲ್ಲೋರಿಂಗೂ ಅದರ ಭಾರೀ ಕೊಶಿ. ನೆಗೆನೆಗೆಲೇ ಅದರ ಹತ್ತರೆ ಮಾಡಿಂಡವಡ.
ಟಾಮಿನಾಯಿ ಹೇಳಿದ ಸುರೂವಾಣ ಕತೆ ಇದೇ ಸನ್ನಿವೇಶಕ್ಕೆ ಸಮ್ಮಂದಿಸಿದ್ದು.
ನಾವು ಕಾಂಬಲೆ ಚೆಂದ ಇದ್ದಷ್ಟು ನಮ್ಮ ಪ್ರೀತಿ ಮಾಡ್ತೋರು ಹೆಚ್ಚಿರ್ತವು.
ಆದರೆ, ನಾವು ಅಸಾಮರ್ಥ್ಯ, ಅನಾರೋಗ್ಯಲ್ಲಿ ಇದ್ದರೆ – ಅಂಬಗ ಆರು ನಮ್ಮ ಪ್ರೀತಿಮಾಡ್ತವೋ – ಅಂತೋರ ನಾವುದೇ ಕೊನೆ ಒರೆಂಗೆ ಪ್ರೀತಿಮಾಡೇಕು – ಹೇದು.
ಟಾಮಿನಾಯಿಯೂ ಹಾಂಗೆ, ಆ ಮಾಷ್ಟ್ರಮನೆ ಅತ್ತೆಯ ಕೊನೆ ಒರೆಂಗೂ ಪ್ರೀತಿಲಿ ಕಂಡಿದು.
ಒಳುದ ಆರು ಎಂತ ಹೇಳಿರೂ ಪೆದಂಬು, ಪೀಕ್ಲಾಟ ಮಾಡಿದ್ದದು ಇದ್ದು; ಆದರೆ ಮಾಷ್ಟ್ರಮನೆ ಅತ್ತೆಗೆ ಒಂದರಿಯೂ ಪೆದಂಬೂ ಮಾಡಿದ್ದಿಲ್ಲೆ, ಎದುರು ಮಾತಾಡಿದ್ದಿಲ್ಲೆ! 🙂
ಅತ್ತೆ ಎಷ್ಟೇ ಹೊತ್ತಿಂಗೆ ತೋಟಕ್ಕೆ ಹೋಗಲಿ, ಅತ್ತೆಯ ಹಿಂದಂದ ಇದು ಹಾಜೆರ್; ಮಜ್ಜಾನದ ಊಟವೂ ಹಾಂಗೇ – ಅತ್ತೆ ಹಾಕುವನ್ನಾರ ಕಾಯಿಗು. ಆ ಮನೆಯ ಬೇರೆಆರಾರು ಸಂಕೊಲೆ ಹಿಡುದು ಕಟ್ಳೆ ದಿನಿಗೆಳಿರೂ ಬಾರ – ಅತ್ತೆ ದಿನಿಗೆಳಿರೆ ಮಾಂತ್ರ ಬಕ್ಕಷ್ಟೆ. ಹೊಸಬ್ಬರಿಂಗೆ ಕೊರಪ್ಪುದರ “ಒಂದಾರಿ ನಿಲ್ಲುಸು” ಹೇದು ಅತ್ತೆಯೇ ಹೇಳೇಕು – ಹಾಂಗಾರೆ ಮಾಂತ್ರ ನಿಲ್ಲುಸುಗಷ್ಟೆ!
ಅದರ ಬಡಬಾಲ್ಯಲ್ಲಿ ಪ್ರೀತಿಮಾಡಿದ ಮಾಷ್ಟ್ರಮನೆ ಅತ್ತೆಯ ಎಂದಿಂಗೂ ಮರದ್ದಿಲ್ಲೆ.
ಎಲ್ಲೋರುದೇ ದೂರ ಮಡಗಿಪ್ಪಗ ಹತ್ತರೆ ಮಾಡಿ ಪ್ರೀತಿತೋರುಸಿದ ನೆಂಪು ನಾಯಿಗೆ ಇರದೋ?
~
ಮಾಷ್ಟ್ರುಮಾವಂಗಾದರೂ ನಾಯಿಯ ಆಗ ಹೇಳಿ ಏನಿಲ್ಲೆ; ಉಂಬ ಬಾಳಗೆ ಬಾಯಿ ಹಾಕದ್ರೆ ಆತು ಅಷ್ಟೆ! ಆದರೆ, ನೆರೆಕರೆಯ ಎಲ್ಲೋರುದೇ ಹಾಂಗೆಯೋ?
ಈಚಮನೆ ಭಾವಂಗೆ ನಾಯಿಗಳ ಆಗಲೇ ಆಗ!
ಅಂದೇ ಹಾಂಗೆ – ರಾಮಜ್ಜನ ಕೋಲೇಜಿಂಗೆ ಹೋಗಿಂಡಿದ್ದ ಆ ಮಾಣಿಗೆ ಬಯಂಕರ ಕ್ಳೀನು. ಮಣ್ಣು ಧೂಳು ಕಂಡ್ರಾಗ ಇದಾ – ಹಾಂಗಾಗಿ ಈ ನಾಯಿಯನ್ನೂ!
ಬಂದಿಪ್ಪಗ ರಸ್ಕು ತಿಂತ ಗೌಜಿಲಿ ನಾಯಿ ಪಕ್ಕನೆ ಅವನ ಮುಟ್ಟಿರೆ – ಹತ್ತು ನಿಮಿಶ ಕೈ ತೊಳಗು. ಚಿಟ್ಟೆಕರೆಲಿ ಕೂದುಗೊಂಡಿಪ್ಪಾಗ ಬಂದು ಪ್ರೀತಿಲಿ ಕಾಲುನಕ್ಕಿರೆ ಅರ್ಧಗಂಟೆ ಕಾಲು ತೊಳಗು.
ಅವನ ಮುಟ್ಟಿರೆ ನಾಯಿಯೂ ಕೈಕ್ಕಾಲು ತೊಳದು ಬಕ್ಕೋ – ಗೊಂತಿಲ್ಲೆ! ಅದಿರಳಿ.
ಈಗ ಬೆಂಗುಳೂರಿಲಿ ಕೆಲಸಲ್ಲಿಪ್ಪ ಕಾರಣ ವಾರಕ್ಕೊಂದರಿಯೋ, ತಿಂಗಳಿಂಗೊಂದರಿಯೋ ಊರಿಂಗೆ ಬಕ್ಕಿದಾ; ಮಾಷ್ಟ್ರುಮಾವನ ಮನಗೂ ಬಕ್ಕು.
ಅಂಬಗಳೂ ಈ ನಾಯಿ ಆಗ. ಎದುರು ಕಂಡ್ರೆ ಬೈಗು; ಬಾಗಿಲ್ಲಿ ಮನುಗಿರೆ ಓಡುಸುಗು.
ದಿನಾಗುಳೂ ಇಲ್ಲಿ ಮನುಗುದು ಆನು; ಅಪುರೂಪಲ್ಲಿ ಬಂದ ಈ ಜೆನ ಆರು ಎನ್ನ ಬೈವಲೆ– ಹೇದು ನಾಯಿ ಯೋಚನೆ ಮಾಡುದೂ, ಮಾಷ್ಟ್ರುಮಾವನ ಮನೆ ನಾಯಿ ಮನುಷ್ಯರು ಹೇಳಿದಾಂಗೆ ಕೇಳ್ತಿಲ್ಲೆ – ಹೇದು ಅವ° ಯೋಚನೆ ಮಾಡುದೂ ಸೇರಿ;
ಇಬ್ರುದೇ ಆನುಮೇಲೆ- ಆನು ಮೇಲೆ ಹೇಳಿ ಮುಸುಕಿನ ಗುದ್ದಾಟ ಮಾಡುಸ್ಸು ಕಂಡುಗೊಂಡಿದ್ದತ್ತು ಒಪ್ಪಣ್ಣಂಗೆ.
ಅದಿರಳಿ.
~
ಎರಡ್ಣೇದು, ಅದರ ನೆಡು ಯೌವನಲ್ಲಿ ನೆಡದ ಕತೆ.
ಬಾಲ್ಯಕಾಲಲ್ಲಿ ಬಂದ ಅನಾರೋಗ್ಯದ ಅವಶೇಷ ಅದರ ಜೀವಮಾನ ಪೂರ್ತಿಯೂ ಇದ್ದತ್ತು.
ಒಂದೇ ಪೆಟ್ಟಿಂಗೆ ಒಂದು ದನದ ಕಂಜಿಯ ಕಚ್ಚಿ ಸಿಗಿತ್ತಷ್ಟು – ಏಯ್, ಅಷ್ಟೆಲ್ಲ ದೊಡ್ಡವೂ ಇತ್ತಿಲ್ಲೆ, ಶೆಗ್ತಿಯೂ ಇದ್ದತ್ತಿಲ್ಲೆ.
ಇದಕ್ಕೆ “ಆರೊರಿಶ, ಎಂಟೊರಿಶ” ಆತು ಹೇದರೆ ಆರೂ ನಂಬದ್ದ ಹಾಂಗೆ ಸಣ್ಣಸಣ್ಣವೇ ಇದ್ದತ್ತಷ್ಟೆ ಅದು.
ಏರು ಜವ್ವನಲ್ಲಿಯೂ ಅನಾರೋಗ್ಯ ಇಲ್ಲದ್ದಲ್ಲ.
ಒಂದೊಂದರಿ ಸಣ್ಣ ಗುಡ್ಡೆ ಹತ್ತಿ ಇಳುದರೂ – ಸೇಂಕಿಗೊಂಡಿತ್ತು. ಅತ್ತೆಯ ಒಟ್ಟಿಂಗೆ ತೋಟಕ್ಕೆ ಹೋಗಿ ಒಂದರಿ ಮಂಗನ ಓಡುಸೆಂಡು ಬಂದರೆ ಸಾಕೋಸಾಕು – ಹೆರಾಣ ಜೆಗಿಲಿಲಿ ಕಾಲುನೀಡಿ ಮನಿಕ್ಕೊಂಗು.
ಜಾಸ್ತಿ ಪ್ರಾಯ ಆದ್ಸು ಎನಗೋ ನಿನಗೋ – ಅತ್ತೆ ಕೇಳಿರೆ ಉತ್ತರ ಕೊಟ್ಟೊಂಬಲೂ ಎಡಿಯ ಅದರ ಕೈಂದ; ಅಷ್ಟೂ ಸೇಂಕುಗು! ಪಾಪ. 😉
ಮಳೆಗಾಲ ಬಂದರೆ ಹಲಸಿನಣ್ಣು ತಿಂಬ ಕೊದಿ; ಬೇಸಗೆಲಿ ಮಾಯಿನಣ್ಣೋ, ಪರಂಗಿಚೆಕ್ಕೆಯೋ, ಬಚ್ಚಂಗಾಯಿಯೋ – ಹೀಂಗಿರ್ಸು ಎಂತಾರು ತಿಂಬ ಕೊದಿ. ಆದರೆ, ಒಂತುಂಡು ತಿಂದರೆ ಸಾಕು – ನಾಕು ದಿನ ಸೆಮ್ಮಿಂಡಿದ್ದತ್ತು.
ಎಂತ ಮಾಡುದು – ಕೊದಿ ತಡೆಯೆಕ್ಕೇ!
ಅದರ ಒಟ್ಟೊಟ್ಟಿಂಗೆ, ಕೋಳಿಪಿಳ್ಳೆ ಕದ್ದು ತಿಂಬ ಕೊದಿಯೂ ಇದ್ದತ್ತು; ಕಳ್ಳಂಗೆ.
ಇದರೆಡಕ್ಕಿಲಿ, ಅಂಬಗಂಬಗ ಬಪ್ಪ ಸೋಣೆತಿಂಗಳ ಮಳೆಗಾಲ, ಮೈಂದು ಇಪ್ಪ ಛಳಿಗಾಲ, ತುಳುವನ ಹಣ್ಣು ತಿಂಬ ಬೆಳ್ಳಕಾಲ – ಎಲ್ಲವುದೇ. ಎಲ್ಲವನ್ನೂ ಸುದಾರ್ಸುವಗ ಸಾಕೋಸಾಕು ಅಕ್ಕು ಅದಕ್ಕೆ.
ಆರೋಗ್ಯ ಹಾಳಾದ ಹಾಂಗೇ, ಮೈ ಮನಾರವುದೇ ಹಾಳಾಗಿಂಡಿದ್ದತ್ತು. ಸಾಮಾನ್ಯ ದಿನಂಗಳಲ್ಲಿ ಇದ್ದಷ್ಟು ಮನಾರ – ಆ ಜೋರು ಸೆಮ್ಮದ ಸಮೆಯಲ್ಲಿ ಇದ್ದತ್ತಿಲ್ಲೆ.
ಒಂದೊಂದರಿ ಮಾಷ್ಟ್ರಮನೆ ಅತ್ತೆ ಮೀಶುಗು; ಆದರೆ, ಮಣ್ಣೊಡ್ಡನ ಮೀಶಿರೆ ಎಷ್ಟು ಹೊತ್ತು!? ಪುನಾ ಹೋಗಿ ಮಣ್ಣಿಲೇ ಹೊಡಚ್ಚುದಲ್ಲದೋ?! ಹಾಂಗಾಗಿ ಆರೋಗ್ಯ ಎಂದಿಂಗಾದರೂ ಅಷ್ಟಕ್ಕಷ್ಟೆ.
ಅದಿಷ್ಟಲ್ಲದ್ದೆ, ಒಂದು ಮಳೆಗಾಲ – ಬೇರೆ ನಾಯಿಗಳ ಒಟ್ಟಿಂಗೆ ಕಾದಲೆ ಹೋಗಿ ಕೈಕ್ಕಾಲು ಪೂರ ತಾಗುಸೆಂಡು ಬಂದಿತ್ತು.
ಮತ್ತೊಂದರಿ ಆರೋ ಕಲ್ಲಿಡ್ಕಿದ್ದೋ ಕಾಣ್ತು – ಕಾಲು ಮೋಂಟುಸೆಂಡು ನೆಡದತ್ತು; ಆ ಕಾಲುಬೇನೆ ಅಕೇರಿ ಒರೆಂಗೂ ಇದ್ದತ್ತು.
ಹೀಂಗೆಲ್ಲಾ ಮಾಡಿಂಡು ಕೂದರೆ ಆರಾರು “ನೊಂಪಣ್ಣ” ಹೇಳುಗೊ ಅದರ!?
ಎರಡ್ಣೇ ಕತೆ ಇದಕ್ಕೇ ಸಮ್ಮಂದಿಸಿದ್ದು.
ಆಗಳೇ ಹೇಳಿದಾಂಗೆ, ಗುರ್ತದೋರು ಆರಾರು ಬಂದರೆ ಅವರ ಗೆನಾ ಒಸ್ತ್ರದ ಮೇಗೆ ಇದರ ಮಣ್ಣು ಹಿಡ್ಕಟೆ ಕೈ ಮಡಗಿ, ಹೆ ಹೆ ಬನ್ನಿ ಬನ್ನಿ- ಹೇಳಿ ಮನೆ ಒಳಂಗೆ ಕರಕ್ಕೊಂಡು ಹೋಕು. ಎತ್ತಿದ ಕೂಡ್ಳೇ ಬೇಗು ತೆಗವದು ಕಾಣದ್ರೆ ನಾಕು ಸರ್ತಿ ಕೊರಪ್ಪಿ ನೆಂಪುಮಾಡುಗು “ಆನಿದ್ದೇ” ಹೇದು.
ಇಷ್ಟೆಲ್ಲ ಮಾಡುವಗ – ಟಾಮಿ ಭಾರೀ ಉಶಾರಿದ್ದಪ್ಪ – ಹೇಳಿ ಬಂದೋರು ಮಾತಾಡ್ಳೆ ಸುರು ಮಾಡಿಅಪ್ಪದ್ದೇ – ಸೀತ ಜಾಲಕೊಡೀಂಗೆ, ತೆಂಗಿನ ಮರದ ಬುಡಕ್ಕೆ ಹೋಕು.
ಎಂತಕೆ?
ಅಷ್ಟು ಹೊತ್ತು ಕೊರಪ್ಪಿ, ಹಾರಿದ್ದಕ್ಕೆ ಬಚ್ಚಿ, ದಮ್ಮುಕಟ್ಟಿದ ಹಾಂಗೆ ಆಗಿ, ದೊಂಡೆ ಒಳ ಕೆರಸಿ ಸೆಮ್ಮ ಬಂದು – ಕಾರು ಬಂದಾಂಗೆ ಆಗಿ – ಪಾಪ! ಕಂಗಾಲು.
ಮತ್ತೆ ಸರಿ ಅಪ್ಪಲೆ ರಜ್ಜ ಹೊತ್ತು ಬೇಕು ಅದಕ್ಕೆ.
ಆದರೆ, ಇಷ್ಟುದೇ ಅಪ್ಪಗ ಅದು ಎಲ್ಲೋರ ಎದುರೆ ಬಾರ – ದೂರ ತೆಂಙಿನ ಮರದ ಬುಡಲ್ಲಿಕ್ಕು; ಬಂದೋರಿಂಗೆ ಕಾಣೇಕಾರೆ ಚಾಯ ತಪ್ಪಲೆ ಪಾತ್ರ ತಟಪಟ ಕೇಳೇಕು ಒಳಾಂದ.
ಅದಕ್ಕೆ ಹೀಂಗಪ್ಪದು ಕೊರಪ್ಪಿರೆ ಮಾಂತ್ರ ಅಲ್ಲ, ಹಣ್ಣು ತಿಂತ ಸಮೆಯಲ್ಲಿ, ಮಳೆಗಾಲದ ಶೀತಕ್ಕೆ, ಛಳಿಗಾಲದ ಮೈಂದಿಂಗೆ – ಎಲ್ಲದಕ್ಕೂ ಹೀಂಗೆ ಆಗಿಂಡಿತ್ತು. ಆದರೆ, ಬಂದೋರ ಎದುರು ಒಂದರಿಯೂ “ಅನಾರೋಗ್ಯ”ವ ತೋರುಸಿಗೊಂಡಿದಿಲ್ಲೆ.
ಹಾಂಗಾಗಿ, ಎಷ್ಟೇ ಅನಾರೋಗ್ಯ ಇದ್ದರೂ, ನೆಡವಲೇ ಎಡಿಯದ್ದರೂ, ಕೊರಪ್ಪಲೇ ಎಡಿಯದ್ದರೂ, ಊಟವೇ ಮೆಚ್ಚದ್ದರೂ – ಬಂದೋರ ಎದುರು, ಪ್ರೀತಿ ಕೊಡ್ತೋರ ಎದುರು ಚೆಂದಕೇ ಮಾತಾಡಿಗೊಂಡಿತ್ತು.
ನಮ್ಮ ಬಂಙವ ಇನ್ನೊಬ್ಬನ ಹತ್ತರೆ ತೋರ್ಸಲಾಗ; ನೆಗೆನೆಗೆ ಮೋರೆಲಿ ಮಾತಾಡಿ ಎಲ್ಲೋರನ್ನೂ ಕೊಶಿ ಪಡುಸೇಕು – ಹೇಳ್ತದು ಟಾಮಿನಾಯಿಯ ಎರಡ್ಣೇ ತತ್ವ.
~
ಸುರುವಾಣದ್ದು ಬಾಲ್ಯ, ಎರಡ್ಣೇದು ಜವ್ವನ ಆದರೆ, ಮೂರ್ನೇದು ಯೇವದರ ಬಗ್ಗೆ ಇಕ್ಕು ಹೇಳ್ತದು ನಮ್ಮ ಬೋಚಬಾವಂಗೂ ಅರಡಿಗು.
ಮೂರ್ನೇ ಶುದ್ದಿ ಅಂತ್ಯದ ಬಗ್ಗೆಯೇ.
ನಿಂಗೊಗೆ ಹೇಳಿಕೆ ಇತ್ತೋ ಗೊಂತಿಲ್ಲೆ – ಆಚಮನೆ ಪುಟ್ಟಣ್ಣಂಗೆ ಆಯಿತ್ಯವಾರ ಮದುವೆ ಕಳಾತು; ಮಳೆಗಾಲ ಆದ ಕಾರಣ ಹದಾಕೆ ಏರ್ಪಾಡು. ಎಷ್ಟು ಹದಾಕೆ ಆದರೂ, ನೆರೆಕರೆಯೋರು ಬಾಗಿಲಾಕಿ ಹೋಗೆಡದೋ?
ದನಗೊಕ್ಕೆ ಆಸರಿಂಗೆ ಕೊಡ್ತ ಲೆಕ್ಕಲ್ಲಿ ಒಂದು ದಿನಕ್ಕೆ ಸುಂದರಿಯ ಬಂದು ಮನೆಪಾರ ಮಾಡ್ಳೆ ಒಪ್ಪುಸಿಕ್ಕಿ ಮಾಷ್ಟ್ರಮಾವನಲ್ಲಿಂದಲೂ ಹೆರಟವು; ಮನೆ ಬಾಗಿಲು ಹಾಕಿಂಡೇ.
ಟಾಮಿಗೆ ಉಶಾರಿಲ್ಲದ್ದೆ ಒಂದು ವಾರ ಆತಾಡ. ಎಂತದೂ ತಿಂತಿಲ್ಲೇಡ; ಮದುವೆಲಿ ಸಿಕ್ಕಿ ಮಾತಾಡುವಗ ಅತ್ತೆ ಹೇಳಿತ್ತಿದ್ದವು.
ಹೆಜ್ಜೆಮಜ್ಜಿಗೆ ಕಳುದ ವಾರವೇ ಬಿಟ್ಟತ್ತು, ಹಾಲು ಕೊಟ್ರೆ ಅದನ್ನೂ ಕುಡುದತ್ತಿಲ್ಲೆ, ತಿಂಡಿಗೊ – ಏಯ್, ಅದೂ ಬೇಡ. ಕಾಟಂಕೋಟಿ ತಿಂಡಿಗಳೂ ಬೇಡ, ನಮ್ಮ ಬಿಸ್ಕೇಟೂ ಬೇಡ, ಅಕೇರಿಗೆ ನೋಡಿರೆ ನಾಯಿ ಬಿಸ್ಕೇಟೂ ಬೇಡ!
ಸಲ್ಲೇಖನ ವ್ರತದ ಹಾಂಗೆ ಎಲ್ಲವನ್ನೂ ತ್ಯಜಿಸಿ ಕೂದಿತ್ತಾಡ ಈ ನಾಯಿ.
ಡಾಗುಟ್ರು ಕೊಟ್ಟ ಇಂಜೆಕ್ಷನು ಮಾಂತ್ರ ಅದರ ಶೆಗ್ತಿ; ಮೊನ್ನೆ ಆಯಿತ್ಯವಾರಕ್ಕೆ ಒಂದು ವಾರ ಆತಿದಾ.
ಮದುವೆಗೆ ಹೆರಡ್ತ ಗಡಿಬಿಡಿಲಿಯೂ ಉದಿಯಪ್ಪಗಾಣ ತೆಳ್ಳವು ತಿಂತೋ- ಹೇದು ಒಂದರಿ ನೋಡಿದವಡ ಮಾಷ್ಟ್ರಮನೆ ಅತ್ತೆ.
ಊಹೂಂ – ತಿಂದಿದಿಲ್ಲೆ.
ಮಾಷ್ಟ್ರುಮಾವನ ಮಗಳೂ ಕೊಟ್ಟು ನೋಡಿತ್ತು; ಅತ್ತೆ ಕೊಟ್ಟದನ್ನೇ ತಿಂದಿದಿಲ್ಲೆ, ಇನ್ನು ಅದು ಕೊಟ್ಟದರ ತಿಂಗೊ?!
ಮಾಷ್ಟ್ರುಮಾವನ ಹತ್ತರೆ ಬರೇ ನಾಯಿಬಿಸ್ಕೇಟುದೇ, ಕಾಟಂಕೋಟಿ ತಿಂಡಿಯೂ ಮಾಂತ್ರ ಕೇಳಿಂಡಿದ್ದದು. ಅದರ ಮೊನ್ನೆಯೇ ಬಿಟ್ಟಿತ್ತಿದ್ದು. ಅಂತೂ – ಆ ದಿನವೂ ಎಂತದೂ ತಿಂದಿದಿಲ್ಲೆ.
ಎಂತಾತಪ್ಪಾ ಇದಕ್ಕೇ? – ಹೇದು ಬೇಜಾರ ಮಾಡಿಗೊಂಡು ಹೆರಟೇ ಹೆರಟವು ಮದುವೆಗೆ.
ಮದುವೆಯ ಊಟ ಉಂಡಿಕ್ಕಿ ಬಪ್ಪಗ ನಾಯಿ ಮನುಗಿದಲ್ಲೇ. ಜೀವ ಇಲ್ಲದ್ದೆ. ಛೇ!
~
ಅತ್ತೆಗೆ ತುಂಬ ಬೇಜಾರಾತು. ಎಲ್ಲೋರಿಂಗೂ ಬೇಕಾದ ನಾಯಿಯ ಕೊನೆಗಾಲಕ್ಕೆ ಮನೆಯೋರು ಆರುದೇ ಇತ್ತಿದ್ದವಿಲ್ಲೆ; ಆ ದಿನ ಮನೆಕ್ಕಾವಲಿಂಗೆ ಬಂದ ಸುಂದರಿ ಮಾಂತ್ರ ಇದ್ದದಲ್ಲದೋ – ಹೇದು.
ಏನೂ ನೆರಕ್ಕಿದ್ದಿಲ್ಲೇಡ; ಮವುನಲ್ಲಿದ್ದದು ಮವುನಲ್ಲೇ ಹೋಯಿದು ಪಾಪ.
ಛೇ, ಮನೆಯ ಎಲ್ಲೋರನ್ನೂ ಚೆಂದಕೆ ನೋಡಿದ ಟಾಮಿ ಹೋಪಗ ಅತ್ತೆಯ ಕಾಣೇಕು ಹೇದು ಆಗಿರದೋ ಅದಕ್ಕೇ? ಪಾಪ!
ಟಾಮಿ ಮೂರ್ನೇ ಶುದ್ದಿ ಹೇಳಿದ್ದು ಇದನ್ನೇ.
ನಾವು ಎಷ್ಟೇ ಚೆಂದಕೆ, ಎಲ್ಲೋರ ಒಟ್ಟಿಂಗೆ ಮಾತಾಡಿಂಡಿದ್ದರೂ, ಆರತ್ತರೆ ಬೆರಕ್ಕೊಂಡಿದ್ದರೂ – ಕೊನೆಗಾಲಲ್ಲಿ ಆರೂ ಒದಗದ್ದೆ ಇಕ್ಕು. ಹಾಂಗಾಗಿ, ನಾಳಂಗೆ ಎಲ್ಲೋರುದೇ ಒದಗೆಕ್ಕು ಹೇದು ಇಂದು ಬದ್ಕುಲಾಗ; ಬದಲಾಗಿ – ಇಂದು ಎಲ್ಲೋರ ಹತ್ತರೆಯೂ ಚೆಂದಕಿರ್ತೆ ಹೇದು ಬದ್ಕೇಕು – ಹೇಳ್ತದು ಟಾಮಿನಾಯಿಯ ಅಭಿಪ್ರಾಯ.
~
ಅಮಲು ಅಮಲಿನ ಒರಕ್ಕು ಅಲ್ಲಿಗೇ ಗಟ್ಟಿ ಆತು. ಮರದಿನ ಎದ್ದು ಹಲ್ಲು ತಿಕ್ಕುವಗ ಆ ಕನಸು ಮತ್ತೆ ನೆಂಪಾತು.
ಟಾಮಿ ಹೇಳಿದ್ದನ್ನೇ ಬೈಲಿಂಗೆ ಹೇಳಿರೆ ಒಂದು ಶುದ್ದಿಯೇ ಆತನ್ನೇ – ಹೇದು ಅನುಸಿತ್ತು.
ಹಾಂಗೆ ಈ ವಾರಕ್ಕೆ ಅದನ್ನೇ ಹೇಳಿದ್ದು. ಆತೋ?
ಶುಬತ್ತೆ ನಾಯಿಯಷ್ಟು ಮನಾರ ಇಲ್ಲದ್ದರೂ, ಜೀವನ ಇಡೀ ಹದಾಮಟ್ಟಿಂಗೆ ಕಳದರೂ, ಪ್ರೀತಿಗೆ ಏನೂ ಕೊರತ್ತೆ ಆಯಿದಿಲ್ಲೆ. ಅದರ ಆಲೋಚನೆಗೊಕ್ಕೂ ಏನೂ ಕುಂದು ಬಯಿಂದಿಲ್ಲೆ.
ಹತ್ತರಾಣ ವಸ್ತು ಕಳಕ್ಕೊಂಡರೆ ಹೋದರೆ ಅದರ ಪ್ರೀತಿಯೇ ಕನಸಾಗಿ ಬಪ್ಪದಡ ಅಲ್ಲದೋ? ಈ ನಾಯಿಯೂ ಹಾಂಗೇ ಬಂದದಾಯಿಕ್ಕು.
ನಾಯಿಯ ಜೀವನಂದಲೂ ನಾವು ಕಲಿಯೇಕಾದ್ಸು ಹಲವಿದ್ದು. ಅಲ್ಲದೋ?
~
ಒಂದೊಪ್ಪ: ಕೆಲವು ಸರ್ತಿ “ನಾಯಿ ಪಾಡು”ದೇ ಜೀವನ ಕಲಿಶುತ್ತು. ಅಲ್ಲದೋ?
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ಅದ್ಭುತ !
ಇದು ಕನಸೋ ಕಲ್ಪನೆಯೋ ..ಆದರೆ ಜೀವನದ ವಾಸ್ತವದ ಸತ್ಯವ ಟಾಮಿ ಹೇಳಿದ್ದು. ಟಾಮಿಯೋ, ದಾಸುವೋ, ಮೋತಿಯೋ ಎಲ್ಲ ನಾಯಿಗಳನ್ನೂ ನಾವು ಪ್ರೀತಿ ಮಾಡ್ತು, ಸಾಂಕುತ್ತು. ಒಪ್ಪಣ್ಣ ವಿವರ್ಸಿದ ಪ್ರತಿಯೊಂದನ್ನೂ ನೋಡಿರ್ತು. ಆದರೆ ಒಪ್ಪಣ್ನಂಗೆ ಕಂಡ ಮೂರು ಸತ್ಯಂಗಳ ನಾವು ಕಾಣ್ತಿಲ್ಲೆ.
ಈ ಟಾಮಿ ನಾಯಿಯ ಶುದ್ದಿ ಓದುವಗ ಆನು ಸಾಂಕಿದ ಒಂದು ನಾಯಿ ಮತ್ತೆ ಲೆಕ್ಕ ಇಲ್ಲದ್ದಷ್ಟು ಪುಚ್ಚೆಗಳ ನೆಂಪಾತು…ಅವ್ವೆಲ್ಲ ಸತ್ತಪ್ಪಗಳೂ ವಾರಗಟ್ಲೆ ಕೂಗಿದ್ದೆ. ಅವ್ವಿಲ್ಲದ್ದೆ ಜೀವನ ಶೂನ್ಯ ಹೇಳ್ತ ಭಾವನೆ..ಅದಕ್ಕೆ ಕಾರಣ ಇಲ್ಲದ್ದಿಲ್ಲೆ.. ಜೀವನ ಶೂನ್ಯ ಹೇಳಿ ಕಾಂಬ ಹಲವು ಸಂದರ್ಭಲ್ಲಿ ಆ ಶೂನ್ಯವ ತುಂಬಿದ್ದು ಅವ್ವೇ ಅಲ್ಲದಾ?!
ಈ ಶುದ್ದಿಯೂ ಕಣ್ಣಿಲ್ಲಿ ನೀರು ಬರ್ಸಿತ್ತು ಒಪ್ಪಣ್ಣ….. ಒಪ್ಪ ಶುದ್ದಿಗೆ ಒಪ್ಪಂಗೊ..
ಟಾಮಿ ನಾಯಿ ಶುದ್ದಿ ಕೇಳುವಗ ಎಂಗಳ ರೋಸಿ ನಾಯಿ ನೆನೆಪ್ಪಾತು. ಆಗ ಎನಗೆ ಐದು ವರ್ಷ ಪ್ರ್ರಾಯ. ಎನ್ನ ತಂಗೆಗೆ ೩ ವರ್ಷ. ಆವಗ ಶಾಲೆ ಕಳದು ದೊಡ್ಡ ರಜೆ ಸಿಕ್ಕಿತ್ತು ಹೇಳಿ ಆದರೆ ಎಲ್ಲೋರು ಅಜ್ಜನ ಮನೆಲಿಯೇ ಟಿಕಾಣಿ ಹೂಡುದಿದ. ಹಾಂಗೆ ಎಂಗಳ ಮನೆಲಿ ಎಲ್ಲ್ಲಾಮಕ್ಕಳು ಸೇರಿತ್ತಿದ್ದವು. ದೊಡ್ಡ ಮಕ್ಕಳದ್ದು ಒಂದು ಗುಂಪು. ಸಣ್ಣ ಮಕ್ಕಳದ್ದು ಇನ್ನೊಂದು ಗುಂಪು. ದೊಡ್ಡ ಮಕ್ಕಳ ಗುಂಪು ಕೆರೆಗೆ ಈಜುಲು ಹೆರಟತ್ತು. ಸಣ್ಣಮಕ್ಕಳ ಗುಂಪು ಅವು ಈಜುದರ ನೋಡುಲೆ. ಸಣ್ಣಮಕ್ಕೊಗೆ ಈಜುಲೆ ಪರ್ಮಿಶನ್ ಇಲ್ಲೆ. ದೊಡ್ಡ ಮಕ್ಕಳೊಟ್ಟಿಂಗೆ ಎಂಗಳ ರೋಸಿ ನಾಯಿ. ಆನುದೆ ಎನ್ನ ತಂಗೆಯುದೆ ಸಣ್ಣ ಮಕ್ಕಳ ಗುಂಪಿಲಿ ಈಜುದರ ನೋಡಿಗೊಂಡಿತ್ತಿದ್ದೆಯ. ಮಕ್ಕೊಗೆ ಜಗಳ ಅಪ್ಪಲೆ ಎಸ್ಟು ಹೊತ್ತು ಬೇಕು. ಸುರು ಆತು ಎನಗುದೆ ತಂಗೆಗುದೆ ಜಗಳ. ಜಗಳಲ್ಲಿ ಕೊನೆಗೆ ಎನ್ನ ತಂಗೆ ಕೆರೆಲಿ. ಕೆರೆಲಿ ತುಂಬಾ ನೀರು. ತಂಗೆ ಮುಳುಗುದು ಕಾಣುತ್ತಾ ಇದ್ದು. ಎಂತ ಮಾಡುದು ಹೇಳಿ ಗೊಂತಾಯಿದಿಲ್ಲೆ. ಅಸ್ಟಪ್ಪಗ ಎಂಗಳ ರೋಸಿ ಎಲ್ಲಿತ್ತು ಹೇಳಿ ಗೊಂತಿಲ್ಲೆ. ರಪ್ಪನೆ ಬಂತು. ತಂಗೆಯ ತಲೆ ಕಸವಿಲಿ ಕಚ್ಚಿ ಹಿಡುದು ಎಳಕ್ಕೋಂಡು ಮೇಲೆ ಬಂತು. ನಂತರ ಆನು ಕೂಸಿನ ಮೇಲೆ ತಯಿಂದೆ ಹೇಳಿ ದೊಡ್ಡ ಜನರಾಂಗೆ ಬೌ ಬೌ ಹೇಳಿ ಕೊರವಲೆ ಸುರುಮಾಡಿತ್ತು. ಅಂದು ರೋಸಿ ನಾಯಿ ಇಲ್ಲದ್ದರೆ ಇಂದು ಎನ್ನ ತಂಗೆ ಇರುತ್ತಿತ್ತಿಲ್ಲೆ. ಆದರೆ ಈಗ ರೋಸಿ ನಾಯಿಯ ನೆನಪ್ಪು ಮಾತ್ರ ಇದ್ದು. ಎಂಗಳ ರೋಸಿ ನಾಯಿ ಇಲ್ಲೆ. (ರೋಸಿ ಒಂದು ಆಲ್ಸೇಶಿಯನ್ ಜಾತಿಯ ನಾಯಿ, ಅದರ ಎರಡು ಇಸ್ಟದ ವಿಶಯಂಗ ಹೇಳಿದರೆ ಒಂದು ಯೆನ್ನ ತಂಗೆ, ಇನ್ನೊಂದು ನೀರಿಲಿ ಈಜುದು)
ನಾಯಿಯ ಜೀವನಚಕ್ರ೦ದ ಕಲಿಯಲೇಬೇಕಾದ ಸತ್ವಯುತ ನೀತಿಗಳ ಮನಸ್ಸಿ೦ಗೆ ತಟ್ಟುವ ಹಾ೦ಗೆ ಬರದ್ದೆ ಒಪ್ಪಣ್ಣಾ.ತಾನು ಉ೦ಡು ಬದುಕ್ಕುವ ಮನೆಗೆ ಸೇವೆ ಸಲ್ಲುಸುವ ನಾಯಿಯ ನಿಯತ್ತು ಇ೦ದು ಮನುಷ್ಯರಿ೦ಗೆ ಕಮ್ಮಿ ಆಗಿ ಹೋಯಿದನ್ನೆ!
ಎ೦ಗಳಲ್ಲಿ ಕೆಲವು ‘ಹಿಟ್ಲರ್ ಮತ್ತೆ ಟೈಗರ್’ ಗೊ ಬ೦ದು ಹೋಯಿದವು.ಆ ದಿನ೦ಗಳ ನೆನಪ್ಪು ಮಾಡಿಕೊಟ್ಟತ್ತು.
ಧನ್ಯವಾದ.
ಒಪ್ಪಣ್ಣಾ,
ನಮ್ಮ ಜೀವನ “ನಾಯಿ ಪಾಡು” ಆಗದ್ದ ಹಾಂಗೆ ಇರೆಕಾರೆ ಎಂತ ಮಾಡೆಕ್ಕು ಹೇಳಿ ನಾಯಿಯ ಮೂರು ತತ್ವಂಗಳ ಮೂಲಕ ಹೇಳಿದ್ದು ಲಾಯಿಕ ಆಯಿದು.
[ನಾವು ಕಾಂಬಲೆ ಚೆಂದ ಇದ್ದಷ್ಟು ನಮ್ಮ ಪ್ರೀತಿ ಮಾಡ್ತೋರು ಹೆಚ್ಚಿರ್ತವು.
ಆದರೆ, ನಾವು ಅಸಾಮರ್ಥ್ಯ, ಅನಾರೋಗ್ಯಲ್ಲಿ ಇದ್ದರೆ – ಅಂಬಗ ಆರು ನಮ್ಮ ಪ್ರೀತಿಮಾಡ್ತವೋ – ಅಂತೋರ ನಾವುದೇ ಕೊನೆ ಒರೆಂಗೆ ಪ್ರೀತಿಮಾಡೇಕು – ಹೇದು.]
ಇದು ನಮ್ಮಲ್ಲಿಪ್ಪ ಪೈಸೆಗೂ ಅನ್ವಯ ಆವ್ತು. ಕೈಲಿ ಕಾಸು ಓಡ್ತಾ ಇದ್ದರೆ, ಹತ್ರೆ ಸುಳಿವ ಜೆನಂಗೊಕ್ಕೆ ಎಂತ ಕಮ್ಮಿ ಇರ್ತಿಲ್ಲೆ. ಅದುವೇ ಅವ° ಕಷ್ಟಲ್ಲಿ ಇದ್ದ ಹೇಳಿ ಆದರೆ ದೂರ ಮಾಡುವವೇ ಹೆಚ್ಚು. ಕಷ್ಟ ಕಾಲಲ್ಲಿ ಸಹಾಯ ಮಾಡಿದವರ ಮರವಲೆ ಆಗ ಹೇಳ್ತ ಪಾಠವೂ ಆವ್ತು.
[ನಮ್ಮ ಬಂಙವ ಇನ್ನೊಬ್ಬನ ಹತ್ತರೆ ತೋರ್ಸಲಾಗ; ನೆಗೆನೆಗೆ ಮೋರೆಲಿ ಮಾತಾಡಿ ಎಲ್ಲೋರನ್ನೂ ಕೊಶಿ ಪಡುಸೇಕು – ಹೇಳ್ತದು ಟಾಮಿನಾಯಿಯ ಎರಡ್ಣೇ ತತ್ವ.] ಜೀವನಲ್ಲಿ ಕಷ್ಟ ಬಂದಪ್ಪಗ ಹತ್ರಾಣವರ ಹತ್ರೆ ಹೇಳಿ ಹಂಚಿಯೊಂಡರೆ ಮನಸು ಹಗುರ ಅಪ್ಪದು ನಿಜ. ಆದರೆ ಕಷ್ಟಂಗೊ ಎಲ್ಲಾ ಎನಗೇ ಬಂದದು ಹೇಳಿ ಗ್ರೆಶಿಂಡು ಇದ್ದರೆ ನೆಮ್ಮದಿ ಇಕ್ಕಾ? ನಮ್ಮಂದ ಹೆಚ್ಚು ಕಷ್ಟಲ್ಲಿ ಇಪ್ಪವರ ನೋಡಿ, ನಾವು ಅವಕ್ಕಿಂತ ಸುಖಿಗೊ ಹೇಳಿ ಗ್ರೇಶಿದರೆ ನೆಮ್ಮದಿ ಸಿಕ್ಕುಗು ಹೇಳ್ತ ಪಾಠವೂ ಆವ್ತು.
[ನಾವು ಎಷ್ಟೇ ಚೆಂದಕೆ, ಎಲ್ಲೋರ ಒಟ್ಟಿಂಗೆ ಮಾತಾಡಿಂಡಿದ್ದರೂ, ಆರತ್ತರೆ ಬೆರಕ್ಕೊಂಡಿದ್ದರೂ – ಕೊನೆಗಾಲಲ್ಲಿ ಆರೂ ಒದಗದ್ದೆ ಇಕ್ಕು. ಹಾಂಗಾಗಿ, ನಾಳಂಗೆ ಎಲ್ಲೋರುದೇ ಒದಗೆಕ್ಕು ಹೇದು ಇಂದು ಬದ್ಕುಲಾಗ; ಬದಲಾಗಿ – ಇಂದು ಎಲ್ಲೋರ ಹತ್ತರೆಯೂ ಚೆಂದಕಿರ್ತೆ ಹೇದು ಬದ್ಕೇಕು – ಹೇಳ್ತದು ಟಾಮಿನಾಯಿಯ ಅಭಿಪ್ರಾಯ.]- ಒಳ್ಳೆ ಪಾಠ. ಇಂದ್ರಾಣ ದಿನ ನಮ್ಮದು. ಎಲ್ಲರೊಟ್ಟಿಂಗೆ ಚೆಂದಕೆ ಇಪ್ಪಲೆ ನಮ್ಮ ಕೈಂದ ಎಂತ ಖರ್ಚು ಮಾಡೆಕ್ಕು ಹೇಳಿ ಇಲ್ಲೆ. ಒಳ್ಳೆ ಮನಸ್ಸು ಮುಖ್ಯ, ನಾವು ಸಂಘ ಜೀವಿಗೊ.ಪರಸ್ಪರ ಸಹಕಾರ, ಪ್ರೀತಿ ವಿಶ್ವಾಸ ಮುಖ್ಯ. ಅದರ ಒಳುಶಿಗೊಂಡರೆ ಜೀವನಲ್ಲಿ ನೆಮ್ಮದಿ ಖಂಡಿತಾ
ನಾಯಿಯ ಸ್ವಭಾವಕ್ಕೆ ಹೊಂದಿಸಿ, ಕೆಲವು ತಮಾಶೆಗೊ ಕೊಶಿ ಆತು
[ಮರದಿನ ಹನ್ನೊಂದೇ ಕುಂಞಿ ಇಪ್ಪದು ಹೇದು ಪೂಜಾರಿ ತಲೆಬೆಶಿ ಮಾಡುಗು; ಎರಡು ದಿನ ಆತು – ನಾಯಿ ಹೆಜ್ಜೆ ಉಂಡಿದಿಲ್ಲೆ – ಹೇದು ಮಾಷ್ಟ್ರಮನೆ ಅತ್ತೆ ತಲೆಬೆಶಿ ಮಾಡುಗು; ಒಳುದ ಹನ್ನೊಂದು ಪಿಳ್ಳೆಗೊ ಪುನಾ ಯೇವಗ ಬಕ್ಕು ಹೇದು ಟಾಮಿನಾಯಿ ತಲೆಬೆಶಿ ಮಾಡುಗು!!]
ಅವನ ಮುಟ್ಟಿರೆ ನಾಯಿಯೂ ಕೈಕ್ಕಾಲು ತೊಳದು ಬಕ್ಕೋ – ಗೊಂತಿಲ್ಲೆ! ಅದಿರಳಿ
ದಿನಾಗುಳೂ ಇಲ್ಲಿ ಮನುಗುದು ಆನು; ಅಪುರೂಪಲ್ಲಿ ಬಂದ ಈ ಜೆನ ಆರು ಎನ್ನ ಬೈವಲೆ– ಹೇದು ನಾಯಿ ಯೋಚನೆ ಮಾಡುದೂ
ಒಪ್ಪಣ್ಣ ನಾಯಿಯ ಎಷ್ಟು ಹಚ್ಚಿಗೊಂಡಿದ ಹೇಳ್ತಕ್ಕೆ ಈ ಒಂದು ಮಾತೇ ಸಾಕು
[ಅರೆ ಒರಕ್ಕಿನ ಅಮಲು ಹಾಂಗೇ ಹಿಡುದತ್ತಲ್ಲದೋ ಟಾಮಿಯೇ ಬಂದು ಮಾತಾಡಿದ ಹಾಂಗಾತು.]
ಮಾಷ್ಟ್ರು ಮಾವನಲ್ಲಿಗೆ ಹೊಸ ಟಾಮಿ ಬರಲಿ, ಮತ್ತೆ ಅಲ್ಲೊಂದು ವಿಶ್ವಾಸದ ಜೀವಕ್ಕೆ ನೆಲೆ ಸಿಕ್ಕಲಿ.
ಹವ್ಯಕರ ಹಾಸು- ಹೊಕ್ಕು ಆಗಿಪ್ಪ ಪ್ರಾಣಿಗೊ ಹೇಳಿದರೆ ದನ, ನಾಯಿ, ಪುಚ್ಚೆಗೊ.
ಒಪ್ಪಣ್ಣ,
ಟಾಮಿ ನಾಯಿಗೆ ಒಂದು ಭಾವನಾತ್ಮಕ ವಿದಾಯ ಕೊಡುದರೊಟ್ಟಿ೦ಗೆ ನಾವು ಜೀವನಲ್ಲಿ ಅಳವಡಿಸಿಗೊಳ್ಳೆಕ್ಕಾದ ಮೌಲ್ಯಂಗಳನ್ನು ತಿಳ್ಕೊಂಬ ಹಾಂಗೆ ಮಾಡಿದ್ದೆ. ಎಲ್ಲೊರ ಹಾ೦ಗೆ ಹವ್ಯಕರುದೆ ಕಾಲನ ಚಕ್ರಲ್ಲಿ ಸಿಕ್ಕಿಗೊ೦ಡದು, ೨ ಅತ್ತೆಕ್ಕಳನ್ನು ,೨ ನಾಯಿಗಳನ್ನು ಹೋಲ್ಸಿರೆ ಗೊ೦ತಾವುತ್ತು. ಟಾಮಿ ನಾಯಿಯ ಪಾತ್ರದ ಚಿತ್ರಣ ನಾಯಿ ಸತ್ತರೂ ಜೀವ೦ತಿಕೆ ಮಡಿಕ್ಕೊ೦ಬಲ್ಲಿ ಯಶಸ್ವಿ ಆಯಿದು.
ಕೆಲವು ಸರ್ತಿ “ನಾಯಿ ಪಾಡು”ದೇ ಜೀವನ ಕಲಿಶುತ್ತು. ಅಲ್ಲದೋ?
ಒಪ್ಪಣ್ಣನ ಹಾಂಗೆ ಕಲ್ತು ಕಲಿಶುವವಕ್ಕೆ ಎಲ್ಲ ಕಡೆಯೂ ಗುರುಗಳ ಕಾಣುತ್ತು… “ಪ್ರಕೃತಿಯೇ ಗುರು” ತತ್ವವ ಅಳವಡಿಸಿಗೊಂಡರೆ ಜೀವನಲ್ಲಿ ಯಾವತ್ತೂ ಸೋಲಿಲ್ಲೇ…
ಮಾಷ್ಟ್ರುಮನೆಅತ್ತೆ ಅದರ ಅದೆಷ್ಟು ಪ್ರೀತಿಲ್ಲಿ ಬೆಳೆಸಿದ್ದವು ಹೇಳಿ ಒಪ್ಪಣ್ಣ ವಿವರುಸಿದರಲ್ಲಿ ಅರ್ಥ ಆವುತ್ತು… ಅಷ್ಟೊಂದು ಭಾವನಾತ್ಮಕ ಸಂಬಂಧ ಬೆಳೆಸಿಗೊಂದರೆ ನಾಯಿಯಾದರೂ,ಗಿಡ ಮರ ಆದರೂ ಅದರ ಸುಖ ದುಃಖಗಳ ಜೊತೆ ನಮ್ಮ ಆಂತರ್ಯವೂ ಮಿಡಿತ್ತು. ಇಂತಹ ಭಾವನಾತ್ಮಕ ಸಂಬಂಧಗಳೇ ‘ವಿಶ್ವ ಪ್ರೇಮ’ ಬೆಳೆಸುಲೆ ಸಹಕಾರಿ.
ಮಾಷ್ಟ್ರುಮನೆಅತ್ತೆ ಯ ಹತ್ತರೆ ಎನ್ನ ಪರವಾಗಿಯೂ ಸಮಾಧಾನ ಹೇಳು. ಶ್ರೀ ಅಕ್ಕ ಹೇಳುವ ಹಾಂಗೆ ಆದಷ್ಟು ಬೇಗ ಹೊಸ ಟಾಮಿ ಸಿಕ್ಕಲಿ…
ಒಪ್ಪಣ್ಣಾ…..,
ಈ ವಾರದ ಶುದ್ದಿ ನಿಜವಾಗಿಯೂ ಬೇಜಾರದ್ದೆ! ಮನಸ್ಸಿಂಗೆ ಮುಟ್ಟುವ ಹಾಂಗೆ ಬರದ್ದೆ ಕೂಡಾ!
ನಮ್ಮ ಟಾಮಿಯ ಬಗ್ಗೆ ಎಲ್ಲವೂ ಬಯಿಂದು. ಶರೀರ ಪ್ರಕೃತಿಲಿ ಬರೇ ಸಣ್ಣ ಸಣ್ಣ ಇದ್ದರೂ ಅದರ ಪ್ರೀತಿ ಮಾಂತ್ರ ಅದರಂದ ಹತ್ತು ಪಟ್ಟು ದೊಡ್ಡದು.
ಮನಗೆ ಆರೇ ಬರಲಿ, ಆರು ಎಂತಕ್ಕೆ ಬಂದವು, ಎಂತೆಲ್ಲ ತತ್ತವು? ತನಗೆ ಎಂತ ಇದ್ದು ಹೇಳಿ ತಿಳ್ಕೊಳ್ಳದ್ದರೆ ಆಗ ಅದಕ್ಕೆ ಕಳ್ಳಂಗೆ!
ಜಾಲಿಂದ ಕರ್ಕೊಂಡು ಅದುವೇ ಹೋಕು ಮನೆ ಒಳಂಗೆ, ಆರು ಮಾತಾಡ್ಸುತ್ತಾ ಇದ್ದರೂ ಅದು ಮಾತಾಡ್ಸುದು ನಿಲ್ಸ!
ಕಾಲಿಂಗೆ ತಾಂಟಿಗೊಂಡೆ ಇಕ್ಕು ಅದಕ್ಕಿಪ್ಪದು ಸಿಕ್ಕುವನ್ನಾರ!
ಒಪ್ಪಣ್ಣ,
ಮಾಷ್ಟ್ರು ಮಾವನ ಸಣ್ಣ ಮಗ° ಹೇಳಿದರೆ ಅದಕ್ಕೆ ಜೀವ ಇದಾ! ಅವನ ಹತ್ತರೆ ಅದು ಇಪ್ಪ ರೀತಿ ನೋಡುವಾಗ ಆ ಪ್ರೀತಿಯ ಬಂಧವ ಎಂತ ಹೇಳೆಕ್ಕು ಹೇಳಿ ಗೊಂತಾವುತ್ತಿಲ್ಲೆ. ಅವ ಬೆಂಗ್ಳೂರಿಂದ ಬಪ್ಪಗ ಅವನ ತಲೆ ಕೊಡಿಯಂಗೆವರೆಗೆ ಹಾರಿ, ಪರಂಕಿ, ಕೊಂಡಾಟಲ್ಲಿ ಕಚ್ಚಿ ಎಲ್ಲಾ ಮಾಡುಗು, ಅದೇ ಅವ° ಪಾರೆ ಅಜ್ಜಿಯಲ್ಲಿಗೋ, ಯೇವುದಾರು ಜೆಂಬರಕ್ಕೋ ಮಣ್ಣ ಮಡಿಲಿ ಹೆರಟರೆ ಮತ್ತೆ ಮಾಂತ್ರ ಅವನ ಹತ್ತರೆಯೂ ಸುಳಿಯ! ಶುದ್ಧ ಹಾಳಾದರೆ ಹೇಳ್ತ ಒಂದು ಕಾಳಜಿ ಅದಕ್ಕೆ! ಆರಾರು ಹೇಳಿದ್ದವೋ ಗ್ರೇಶೆಕ್ಕು ಅದರ ವೆವಹಾರ ನೋಡುವಾಗ!!
ಮಾಷ್ಟ್ರುಮಾವನಲ್ಲಿ ಪುಟ್ಟು ಕಂಜಿಗಳ ಮನೆ ಒಳವೇ ಕಟ್ಟುದಿದಾ! ಮಾಮಾಸಮ ಬಂದಪ್ಪಗ ಪುಟ್ಟು ಕಂಜಿಯ ಕೊಂಡಾಟ ಮಾಡಿದರೆ ಮತ್ತೆ ಅಲ್ಲಿ ಬಾಕಿದ್ದವಕ್ಕೆ ಕೆಮಿ ಬಿಟ್ಟು ಕೂಪಲೆ ಮಣ್ಣ ಎಡಿಯ. ಅಷ್ಟೂ ಬೊಬ್ಬೆ ಅದರದ್ದು!! ಓ! ಇವ° ಆ ಕಂಜಿಯ ಮುಟ್ಟಿಕ್ಕಿದಾ° ಹೇಳಿ!! ಅವ° ವಾಪಾಸು ತಿರುಗಿ ಟಾಮಿಯ ಹತ್ರೆ ಮಾತಾಡುವನ್ನಾರ ಅಲ್ಲದ್ದರೆ ಶಾಂತತ್ತೆ ಗೌಜಿ ಮಾಡುವನ್ನಾರ ನಿಲ್ಸ ಅದರ ಬೊಬ್ಬೆಯ!! ಯಬ್ಬ ಅದರ ಪ್ರೀತಿಯೇ ಹೇಳಿ ನವಗೆ ಅನುಸುಗು.
ಮಾಷ್ಟ್ರು ಮಾವನಲ್ಲಿ ಅಂದು ಪೂಜೆ ಆದ್ದು ಗೊಂತಿದ್ದಲ್ಲದೋ, ಆ ದಿನ ಅದರ ಎಲ್ಲೋರೂ ಇಪ್ಪಲ್ಲಿಯೇ ಕಟ್ಟಿದ್ದದು ಟಾಮಿಯ. ಎಲ್ಲೋರಿಂಗೂ ಮಾತಾಡ್ಸುಲೆ ಆತು ಹೇಳಿ! ಟಾಮಿ ಆ ದಿನ ಮಾಮಾಸಮನ ಆರ ಹತ್ತರೆ ಮಾತಾಡ್ಲೂ ಬಿಟ್ಟಿದಿಲ್ಲೆ. ಅವ° ಆರ ಹತ್ತರೆಯೂ ಮಾತಾಡ್ಲಾಗಡ್ಡ!! ಇದರ ಅಟ್ಟಹಾಸ ತಡೆಯದ್ದೆ ಮತ್ತೆ ಶಾಂತತ್ತೆ ಅದರ ಆಚಿಕೆ ಕಟ್ಟಿದವಿದಾ! ಅಷ್ಟುದೇ ಪ್ರೀತಿ ಅದಕ್ಕೆ ಅವನ ಹತ್ತರೆ!
ಅವ° ಬಪ್ಪದೇ ಅಪ್ರೂಪ, ಬಂದಪ್ಪಗ ಅವ° ಅಷ್ಟು ಹೊತ್ತೂ ಅದರ ಒಟ್ಟಿಂಗೆ ಇರೆಕ್ಕು ಹೇಳ್ತ ಮನಸ್ಸು ಆ ಸಣ್ಣ ಜೀವಕ್ಕೆ! ಪಾಪ! ಬಂದು ಹೋಪನ್ನಾರ ಅವನ ಬೆನ್ನು ಬಿಡ ಅಷ್ಟುದೇ ಪ್ರೀತಿಯ ಮಡಿಕ್ಕೊಂಡಿದು ಅದು ಅವನ ಹತ್ತರೆ. ಅವಂಗೂ ಹಾಂಗೆ ಅವನ ಪುರುಸೋತ್ತಿಲಿ ಟಾಮಿಯ ಬಗ್ಗೆ ಮಾಡೆಕ್ಕಾದ್ದದರ ಮಾಡುದರ ಮಾಡಿಯೇ ಮಾಡಿದ್ದ°. ಅದು ಟಾಮಿಗೂ ಗೊಂತಿದ್ದು.
ಒಪ್ಪಣ್ಣ,
ಟಾಮಿಯ ಮೂರು ಶುದ್ದಿಗೋ ಅದರ ಜೀವನದ ಪಾಠ ನವಗೆ ಎಲ್ಲೋರಿಂಗೆ. ಅದಕ್ಕೆ ಎಷ್ಟೇ ಉಶಾರಿಲ್ಲದ್ದೆ ಸೆಮ್ಮಿಗೊಂಡು ಇದ್ದರೂ ಬಂದೋರ ಮಾತಾಡ್ಸುದರ ಬಿಟ್ಟಿದಿಲ್ಲೆ. ಅನಾರೋಗ್ಯ ತನ್ನದೇ ಒಂದು ಅಂಗ ಆಗಿ, ಅದರ ಪ್ರತ್ಯೇಕ ಮಡುಗುಲೇ ಇಲ್ಲೆ ಹೇಳಿ ಮದಲೇ ನಿಗಂಟು ಮಾಡಿದ್ದತ್ತೋ ಕಾಣುತ್ತು. ಎಷ್ಟು ಎಡಿಯದ್ದೆ ಆದರೂ ಅದರ ಕರ್ತವ್ಯಂಗಳ ಮಾಡದ್ದೆ ಕೂಯಿದೇ ಇಲ್ಲೆ. ಅದರ ಪೂರ್ಣ ಆಯುಸ್ಸು ಹೇಳಿ ಎಷ್ಟು ಪಡಕ್ಕೊಂಡು ಬಯಿಂದೋ ಅದರಲ್ಲಿ ಅದು ಒಂದು ನಿಮಿಷವನ್ನೂ ಅಂತೇ ಹೊತ್ತು ಕಳದ್ದಿಲ್ಲೆ. ಅಷ್ಟುದೇ ಎಚ್ಚರ ಮನಸ್ಸು ಆಗಿತ್ತು ಅದರದ್ದು.
ಒಪ್ಪಣ್ಣ,
[ಪರಸ್ಪರ ಅಷ್ಟೂ ಗುರ್ತ ಅವಕ್ಕಿಬ್ರಿಂಗೆ]
ಅಪ್ಪು. ಎನಗೂ ಟಾಮಿಗೂ ಭಾರೀ ಗುರ್ತ! ಗುರ್ತ ಆದ್ದದು ತೀರಾ ಇತ್ತೀಚಿಗೆ ಆದರೂ ಅದರ ಪ್ರೀತಿ ಕಾಂಬಗ ಎನ್ನ ಮೊದಲೇ ಗುರ್ತ ಇದ್ದತ್ತಾ ಹೇಳಿ ಹೇಳುವ ಹಾಂಗೆ ಇತ್ತು. ಕಾರು ಗೇಟಿನ ಹತ್ತರೆ ಎತ್ತೆಕ್ಕಾದರೆ ಟಾಮಿ ಅರ್ಧ ದಾರಿವರೆಗೆ ಬಕ್ಕು. ಕಾರಿಂದ ಇಳುದು ಮನೆ ಒಳಂಗೆ ಹೋಪನ್ನಾರವೂ ಒಟ್ಟಿಂಗೆ ಬಕ್ಕು. ಅದಕ್ಕೆ ಏನಾರು ಕೊಟ್ಟ ಮೇಲೆ ಅದರ ತಿಂದಿಕ್ಕಿ, ಬಾಕಿದ್ದೋರ ಹತ್ತರೆಯೂ ವಸೂಲು ಮಾಡಿಗೊಂಡು ಕೂರುಗು. ಕಾನಾವಣ್ಣಂಗೆ ಟಾಮಿಯ ಭಾರೀ ಪ್ರೀತಿ. ಅವ ಪ್ರತಿ ಸರ್ತಿ ಅಲ್ಲಿಗೆ ಹೋದಿಪ್ಪಗಳೂ ಮಾಮಾಸಮನ ಹತ್ತರೆ ಕೇಳುಗು, “ಮಮಾವ, ಈ ನಾಯಿಯ ಎನಗೆ ಕೊಡ್ತಿರಾ ಹೇಳಿ!”.
[ನಾವು ಎಷ್ಟೇ ಚೆಂದಕೆ, ಎಲ್ಲೋರ ಒಟ್ಟಿಂಗೆ ಮಾತಾಡಿಂಡಿದ್ದರೂ, ಆರತ್ತರೆ ಬೆರಕ್ಕೊಂಡಿದ್ದರೂ – ಕೊನೆಗಾಲಲ್ಲಿ ಆರೂ ಒದಗದ್ದೆ ಇಕ್ಕು. ಹಾಂಗಾಗಿ, ನಾಳಂಗೆ ಎಲ್ಲೋರುದೇ ಒದಗೆಕ್ಕು ಹೇದು ಇಂದು ಬದ್ಕುಲಾಗ; ಬದಲಾಗಿ – ಇಂದು ಎಲ್ಲೋರ ಹತ್ತರೆಯೂ ಚೆಂದಕಿರ್ತೆ ಹೇದು ಬದ್ಕೇಕು]
ಒಪ್ಪಣ್ಣ, ಟಾಮಿಯ ಈ ಮಾತು ತುಂಬಾ ಮಹತ್ವದ್ದು. ನಮ್ಮ ನಾಳೆಯನ್ನೂ ಆರೂ ಕಂಡಿದಿಲ್ಲೆ. ಪ್ರೀತಿ ಮಾಡುವೋರ ಪ್ರೀತಿಗೆ ಪ್ರೀತಿ ತೋರ್ಸಿಗೊಂಡು, ಸಮಯ ಹೊಂದುಸಿ ಎಲ್ಲೋರ ಒಟ್ಟಿಂಗೆ ಇದ್ದುಗೊಂಡು, ಪ್ರತಿಯೊಬ್ಬನ ಅಸ್ತಿತ್ವಕ್ಕೆ ಬೆಲೆ ಕೊಟ್ಟುಗೊಂಡು, ಇರೆಕ್ಕಪ್ಪದು ಪ್ರತಿಯೊಬ್ಬನ ಬಾಳ್ವೆ ಆಗಿರೆಕ್ಕು. ಒಂದು ನಾಯಿಗೆ ಪ್ರತಿಯೊಬ್ಬನ ಭಾವನೆಗೆ ಹೊಂದಿ ಬದುಕ್ಕುಲೆ ಎಡಿತ್ತಾದರೆ, ಇಷ್ಟು ಬುದ್ಧಿ ಶಕ್ತಿ ಇಪ್ಪ, ಸಕಲ ಸವಲತ್ತು ಇಪ್ಪ, ಎಲ್ಲಾ ದಿಕ್ಕೆ ಸಂಚಾರ ಮಾಡುವ, ಮನಸ್ಸಿಂಗೆ ಬಂದೋರ ಹತ್ತರೆ ಮಾತಾಡುವ, ಎಲ್ಲಾ ರೀತಿಯ ರಾಗ ದ್ವೇಷಂಗಳ ಪ್ರಕಟಪಡಿಸುಲೆ ಸಾಮರ್ಥ್ಯ ಇಪ್ಪ, ನಾಯಿಂದ ಹತ್ತು ಪಟ್ಟು ಹೆಚ್ಚು ಆಯುಸ್ಸು ಇಪ್ಪ ನವಗೆ, ನಾಯಿ ಅದರ ಇಡೀ ಆಯುಸ್ಸಿಲಿ ಮಾಡಿದ್ದದರ ಒಂದು ಅಂಶ ಮಾಡ್ಲೆ ಎಡಿತ್ತಾ?
ಒಪ್ಪಣ್ಣ, ಒಂದೊಪ್ಪಲ್ಲಿ ನೀನು ಹೇಳಿದ್ದದು ಜೀವನದ ಪಾಠ.
ಟಾಮಿ ಇನ್ನು ಇಲ್ಲೆ ಹೇಳುದು ಸತ್ಯವೇ ಆದರೂ ಆ ಸತ್ಯಕ್ಕೆ ಒಗ್ಗಿಗೊಂಬದು ರಜ್ಜ ಕಷ್ಟ. ಅದು ನವಗೆ ಕಲಿಶಿದ ಕೆಲವು ವಿಷಯಂಗ ಆದರೂ ನಮ್ಮ ಜೀವನಲ್ಲಿ ಬಂದರೆ ನಮ್ಮ ಬದುಕ್ಕುದೆ ಸಾರ್ಥಕ ಅಕ್ಕು. ಮಾಷ್ಟ್ರುಮಾವನ ಮನೆಗೆ ಗೇಟಿನ ಹತ್ತರೆ ಮುಟ್ಟುವಾಗ ಮೋಳಮ್ಮನ ನೆನಪ್ಪಿನ ಒಟ್ಟಿಂಗೆ ಇನ್ನು ಟಾಮಿಯ ನೆಂಪು ಕೂಡಾ ಯಾವತ್ತಿಂಗೂ ಅಕ್ಕು.
ಮಾಷ್ಟ್ರುಮಾವನ ಮನೆಗೆ ಇನ್ನೊಂದು ಟಾಮಿ ಬೇಗ ಬರಲಿ..
ಶಾಂತತ್ತೆಗೆ ಇನ್ನೊಂದು ಸಣ್ಣ ಟಾಮಿ ಸಿಕ್ಕಲಿ ಪ್ರೀತಿಲಿ ದೊಡ್ಡ ಮಾಡಿ ಕೊಂಡಾಟ ಮಾಡ್ಲೆ..
ಮಾಮಾಸಮಂಗೆ ಅವ ಮನೆಗೆ ಬಪ್ಪಗ ತಲೆ ಕೊಡಿಯಂಗೆ ಹಾರಿ ಪ್ರೀತಿ ಮಾಡ್ಲೆ ಇನ್ನೊಂದು ಟಾಮಿ ಬರಲಿ..
ಒಪ್ಪಣ್ಣ ಮಾಷ್ಟ್ರುಮಾವನಲ್ಲಿಗೆ ಹೋಪಗ ಕಾಲಿಂಗೆ ಸುಂದುಲೆ ಇನ್ನೊಂದು ಟಾಮಿ ಇರಲಿ..
ಶ್ರೀ ಅಕ್ಕನ ಈ ಒಪ್ಪಟಾಮಿಯ ಬೀಲಂದಲೂ ಉದ್ದ ಇದ್ದೋ ತೋರಿತ್ತು.
ಅಂತೂ ಚೆಂದದ ಒಪ್ಪಣ್ಣನ ಚೆಂದದ ಲೇಖನಕ್ಕೆ ಇದೂ ಒಂದು ಚೆಂದದ ಒಪ್ಪ.
🙂
ಒಪ್ಪಣ್ಣ ಈ ಬಾರಿಯ ಲೇಖನ ಚನ್ನಾಗಿ ಮನಮುಟ್ಟುವಂತೆ ಬರೆದಿದ್ದಿರಿ.. ಎಷ್ಟೋ ಬಾರಿ ಪ್ರಾಣಿಗಳಿಂದ ಮನುಷ್ಯ ಪಾಠ ಕಲಿಯಬೇಕಾಗುತ್ತದೆ. ಲೇಖನದಲ್ಲಿ ಹೇಳಿರುವ ೩ ಗುಣಗಳಂತೂ ಎಲ್ಲರಿಗೂ ಅನ್ವಯವಾಗುವಂತಹುದೇ.
ತಿಳಿ ಹಾಸ್ಯದೊಟ್ಟಿಂಗೆ ಮನಸ್ಸಿಂಗೆ ನಾಟುವ ಹಾಂಗೆ ಬರದ್ದು ಲಾಯಿಕ ಆಯಿದು.
ವಿಶ್ವಾಸಕ್ಕೆ ಇನ್ನೊಂದು ಹೆಸರು ನಾಯಿ.
ಹಾಂಗಾಗಿಯೇ ಒಂದು ಬೇಂಕಿನವು “ನಾಯಿ” ಯ ಅವರ ಲೋಗೋ ಆಗಿ ಮಡ್ಕೊಂಡಿದವು.
ಶೋಕೇಸಿನ ನಾಯಿಗಳಿಂದ ನಮ್ಮ ಟಾಮಿ ಟೈಗಿಗಳೇ ಎಶ್ಟೊ ಮೇಲಪ್ಪಾ….!
ಟಾಮಿಯ ಒಳ್ಳೆಯ ಗುಣಂಗಳ ಗುರುತಿಸಿ ತಿಳುಕೊಂಡ ಒಪ್ಪಣ್ಣ ಗ್ರೇಟ್! ಎಲ್ಲದರಲ್ಲಿಯೂ ಒಳ್ಳೆದನ್ನೇ ಕಾಂಬ ಗುಣ ಎಷ್ಟು ಜೆನಕ್ಕೆ ಇದ್ದು?
ಆದರೂ, ಶುಬತ್ತೆಯ ಬಗ್ಗೆ ನೀನು ಹೀಂಗೆ [‘ಶುಬತ್ತೆ ನಾಯಿಯಷ್ಟು ಮನಾರ ಇಲ್ಲದ್ದರೂ’!!?] ಬರವಲೆ ಅಕ್ಕೊ ಒಪ್ಪಣ್ಣೋ? ಹೆ ಹೆ ಹೆ ಹೆ..!!!
ಒಳ್ಳೆ ಶುದ್ದಿ. ಮಾಷ್ಟ್ರು ಮಾವನ ಮನೆಗೆ ಇನ್ನೊಂದು ಟಾಮಿ ಬಕ್ಕು.
ಮನೆಯ ಕಾವ ನಂಬಿಕಸ್ಥ ಜನ ಹೇಳಿರೆ ನಾಯಿ ಹೇಳಿ ಹೇಳ್ವದು ಸತ್ಯವೆ..ಶುಧ್ಧಿ ನಿಜವಾಗಿ ಅಧ್ಭುತ..ಪಾಪ ಟಾಮಿ ನಾಯಿ..ಅಂಬಗ ಶ್ರೀ ಅಕ್ಕಂಗೆ ವಿಷಯ ಗೊಂತಾತೋ??
ಶ್ರೀ ಅಕ್ಕಂಗೆ ವಿಷಯ ಗೊಂತಾಯಿದು ಬೆಟ್ಟುಕಜೆ ಮಾಣಿ!!
ಬೇಜಾರೂ ಆಯಿದು.. 🙁 🙁
ಶುದ್ದಿ ಲಾಯ್ಕಾಯ್ದು ಒಪ್ಪಣ್ಣ..!!..ಎಂಗಳ ಮನೆಲಿದ್ದ ಟಾಮಿಯ ನೆಂಪಾತು..ನಾಯಿ – ಪುಚ್ಚೆಗೊ ಎಷ್ಟು ಲಾಯ್ಕಲ್ಲಿ ಭಾವನಾತ್ಮಕ ಸಂಬಂಧ ಮಡಿಕ್ಕೊಳ್ತವು ..ಅಲ್ಲದಾ?
ತು೦ಬಾ ಲಾಯಿಕಾಯಿದು..೨ ನೇಶುದ್ದಿ ಓದುವಾಗ ತು೦ಬಾ ಬೇಜಾರಾತು.
ಎನ್ನ ತ೦ಗಿ ಇದಕ್ಕೆ ಸರಿಯಾದ ಉದಾಹರಣೆ ಹೇಳಿ ಆನಿಸಿತ್ತು. ಎನ್ನ ಮಗಳು, ಆನು ಹಾ೦ಗೆ ಹೀ೦ಗೆ ಬೇಜಾರು ಮಾಡಿಗೊ೦ಡರೆ “ಅಮ್ಮ “ವಿಜಿ ” ಯ ನೋಡಿ ಬುದ್ದಿ ಕಲಿ..” ಹೇಳಿ ಹೇಳುಗು.
ತು೦ಬಾ ಲಾಯಿಕದ ಶುಧ್ಧಿ .
ಟಾಮಿಯ ಜೀವನ ಶೈಲಿಲಿ ಅದು ತಿಳುಸಿಕೊಟ್ಟ ಮೂರು ನುಡಿಮುತ್ತುಗೊ ನಿಜವಾಗಿ ಅನುಕರಣೀಯ. ಕರಿ ಟಾಮಿಯ ಕೊನೆಕ್ಷಣಂಗಳ ಗ್ರೇಶಿ ಬೇಜಾರಾತು. ಕೃಷಿ ಭೂಮಿ ಇಪ್ಪವರ ಮನೆಯ ಒಂದು ಅಂಗ ನಾಯಿ. ಅದು ಮನೆಯ ಒಂದು ಸದಸ್ಯ ಆಗಿ ಇಪ್ಪದು ನಿಜ.
ಒಂದನೇ ಜಾರ್ಜು, ಎರಡನೇ ಜಾರ್ಜು ಹೇಳಿದ ಹಾಂಗೆ, ಒಂದನೇ ಟಾಮಿ, ಎರಡನೇ ಟಾಮಿ ಹೇಳಿ ನಾಯಿಗೆ ಹೆಸರು ಮಡಗಿದ್ದು ಲಾಯಕಾಗಿತ್ತು. ತಿಳಿಹಾಸ್ಯದೊಟ್ಟಿಂಗೆ ಶುದ್ದಿ ತಿಳುಸಿದ ಒಪ್ಪಣ್ನಂಗೆ ಧನ್ಯವಾದ.
ಹೃದಯಂಗಮ…ನಮ್ಮ ಜೀವಕ್ಕೆ ಜೀವ ಕೊಡುವ ಗೆಳೆಯ ನಾಯಿ-ಹೇಳಿ ಪಾಠಲ್ಲಿ ಓದಿದ್ದು ನೆಂಪಾತು.
ಎಂಗಳ ಮನೆಲಿ ಒಂದು ನಾಯಿ ಹದಿಮೂರು ವರ್ಷ ಇತ್ತು.ಅದಕ್ಕೆ ಇದ್ದ ಬುದ್ಧಿ,ಕ್ರಮ ಎಲ್ಲಾ ನೆಂಪಾತು.
ಒಪ್ಪಣ್ಣಂಗೆ ಅಭಿನಂದನೆ.
ಟಾಮಿ ನಾಯಿಯ ಮೂರು ಶುಧ್ಧಿಗಳ ಮೂರು ಅಭಿಪ್ರಾಯಂಗೊ ಎಷ್ಟು ಸತ್ಯ, ಎಷ್ಟು ಚಂದದ ವಾಕ್ಯಂಗೊ.?
ಇಡೀ ಶುಧ್ಧಿಯ, ಎಡೆ ಎಡೆಲಿ ತಮಾಶೆಯ ವಾಕ್ಯಂಗೊ ತುಂಬಾ ನೆಗೆ ತರಿಸಿರೂ ಹೆಚ್ಚಿನ ಭಾಗ ಎಲ್ಲಾ ಬೇಜಾರ ಬೇಜಾರ ಆತು ಮನಸ್ಸಿಂಗೆ.
ಮಾಷ್ಟ್ರುಮಾವನಲ್ಲಿಯ ಅತ್ತೆ ಮಾಡಿದ ಉಪಚಾರ, ನಾಯಿ ಅವರ ಮಾತಿಂಗೆ ಯಾವಾಗಲೂ ಬೆಲೆ ಕೊಟ್ಟದು, ನೆಂಟ್ರ ಎದುರು ತನಗೆ ಉಶಾರಿಲ್ಲದ್ದರ ತೋರ್ಸಿಗೊಂಬ ಕ್ರಮ ಇಲ್ಲದ್ದ ಟಾಮಿ ಬಗ್ಗೆ, ಇನ್ನೂ ಹೀಂಗೆ ಸುಮಾರು ಕಡೆ ಬೇಜಾರಲ್ಲಿ ಪಾಪ ಕಂಡತ್ತು.
ತುಂಬಾ ಮನಮುಟ್ಟುವ ಶುಧ್ಧಿ ಒಪ್ಪಣ್ಣಾ,
ಇನ್ನಾಣ ವಾರಕ್ಕೆ ಕಾಯಿತ್ತೆ,
~ಸುಮನಕ್ಕ…
ನಾಯಿಪಾಡು ಜೀವನ ಸಾಗುಸುತ್ತವಕ್ಕೂ ನಾಯಿ ಪಾಡು ಕತೆ ನಿಜಕ್ಕೂ ಮನಮುಟ್ಟುವಾಂಗೆ ಆತು. ನಾಯಿ ಜೀವನ ನೋಡಿ ಆದರೂ ನ್ಯಾಯ ಜೀವನ ಮಾಡೆಕು ಹೇಳಿ ಒಂದು ಪಾಠವೂ ಆತು. “ಮಾಸ್ಟ್ರುಮಾವ°-ಮಾಸ್ಟ್ರುಮನೆ ಅತ್ತೆ – ಮಾಸ್ಟೃಮನೆ ನಾಯಿ” ಒಪ್ಪಣ್ಣನ ಅತ್ತ್ಯುತ್ತಮ ಶುದ್ದಿಗಳಲ್ಲೊಂದು ಇದಾತು ಹೇಳಿತ್ತು – ಚೆನ್ನೈವಾಣಿ’.