Oppanna.com

ಸೋಮೇಶ್ವರ ಶತಕ (11-15)

ಬರದೋರು :   ಶರ್ಮಪ್ಪಚ್ಚಿ    on   29/10/2012    7 ಒಪ್ಪಂಗೊ

ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು.
ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು.
ಮುಂದಾಣ (11 – 15) ಈ ಸರ್ತಿ. ಎಲ್ಲೋರುದೇ ಓದಿ ಅರ್ತುಗೊಂಬೊ!

ಸೋಮೇಶ್ವರ ಶತಕ:

ಗಮಕ ವಾಚನ: ಶ್ರೀಶಣ್ಣ
ಅರ್ಥ ವಿವರಣೆ: ಶರ್ಮಪ್ಪಚ್ಚಿ

ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ|
ಜನಕಂ ಸತ್ಫಲಕಂಜನಾದಿಯನುಲೇಪಂಗಳ್ಗೆ ಸಮ್ಮೋಹ ಸಂ ||
ಜನಕಾನಂದಕೆ ರಾಜ ಭೋಗಕೆ ಸುವಿದ್ಯಂಗಳ್ಗದಾರಾದೊಡಂ |
ಮನದೊಳ್ ಕಾಮಿಸದಿರ್ಪರೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೧||

 ಇಲ್ಲಿ ಮನುಷ್ಯನ ಮನಸ್ಸು ಯಾವುದರ ಇಚ್ಚೆ ಪಡುತ್ತು ಹೇಳಿ ಕವಿ ಹೇಳ್ತ°
ಹಣ, ಧಾನ್ಯ, ಅಲಂಕಾರ, ವಸ್ತ್ರ, ಒಳ್ಳೆ ಪರಿಮಳ ಇಪ್ಪ ಹೂಗು, ಮೃಷ್ಟಾನ್ನ ಭೋಜನ, ರುಚಿಯಾದ ಹಣ್ಣು, ಕಾಡಿಗೆ ಇತ್ಯಾದಿ ಲೇಪ ಹಚ್ಚುವ ಪರಿಮಳ ದ್ರವ್ಯಂಗೊ, ಮೋಹ ಹುಟ್ಟುಸುವ ಸಂತೋಷ, ರಾಜ ಭೋಗ, ಒಳ್ಳೆ ವಿದ್ಯೆ, ಇವೆಲ್ಲದರ ಮನಸಿಲ್ಲಿ ಬಯಸದ್ದೆ ಇಪ್ಪವು ಆರೂ ಇಲ್ಲೆ (ಅಂಜನ=ಕಾಡಿಗೆ, ಅನುಲೇಪ= ಮೈಗೆ ಹಚ್ಚಿಗೊಂಬ ಸುಗಂಧ ದ್ರವ್ಯ, ಸಮ್ಮೋಹ ಸಂಜನಕ= ಮನಸ್ಸಿನ ಮರುಳು ಮಾಡುವ, ಕಾಮಿಸು=ಬಯಸು)

ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್|
ಲವಣಂ ಕೇಳಲು ಬಾಲ ಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್||
ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವಾ ಜನ್ಮಂಗಳೊಳ್ ಮಾನುಷಂ|
ಕವಿತಾವಿದ್ಯೆ ಸುವಿದ್ಯೆಯೊಳ್ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೨||

ಯಾವದು ಶ್ರೇಷ್ಠ ಹೇಳಿ ಕವಿ ಇಲ್ಲೆ ಹೇಳ್ತ°
ರುಚಿಯಾದ ಹಣ್ಣುಗಳಲ್ಲಿ ಒಳ್ಳೆ ಸೀವು ಇಪ್ಪ ಮಾವು, ನವರಸಂಗಳಲ್ಲಿ ಶೃಂಗಾರವೂ, ಸಂಬಾರ ಪದಾರ್ಥಂಗಳಲ್ಲಿ  ಉಪ್ಪೂ, ಮಾತುಗಳಲ್ಲಿ ಸಣ್ಣ ಮಕ್ಕಳ ಮಾತೂ,ಭಾಗ್ಯಂಗಳಲ್ಲಿ ಆರೋಗ್ಯ ಭಾಗ್ಯವೂ, ದೇವರುಗಳಲ್ಲಿ ಶಿವನೂ, ಬಿಲ್ಲು ಹಿಡುದು ಯುದ್ಧ ಮಾಡುವ ಶೂರರಲ್ಲಿ ಮನ್ಮಥನೂ, ಜನ್ಮಂಗಳಲ್ಲಿ ಮನುಷ್ಯ ಜನ್ಮವೂ, ವಿದ್ಯೆಗಳಲ್ಲಿ ಕವಿತ್ವ ವಿದ್ಯೆಯೂ ಶ್ರೇಷ್ಠ ಆಗಿ ಇಪ್ಪದು.
(ಇನಿಮಾವು= ಸೀವುಇಪ್ಪ ಮಾವು, ಅಂಗಜ= ಮನ್ಮಥ)

ಮಳೆಯೇ ಸರ್ವಜನಾಶ್ರಯಂ ಶಿವನೇ ದೇವರ್ಕಳ್ಗೆ ತಾನಾಶ್ರಯಂ|
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ||
ಬಳೆಯೇ ಸರ್ವ ಭೂಷಣಕ್ಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ|
ಕೆಳೆಯೇ ಸರ್ವರೊಳುತ್ತಮಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೩||

ಯಾವದು ಶ್ರೇಷ್ಠ ಹೇಳಿ ಕವಿ ಇಲ್ಲೆ ಹೇಳ್ತ°
ಎಲ್ಲಾ ಜೆನಂಗೊಕ್ಕೂ ಮಳೆಯೇ ಆಧಾರ, ಎಲ್ಲಾ ದೇವತೆಗೊಕ್ಕೆ ಶಿವನೇ ಆಶ್ರಯದಾತ, ಎಲ್ಲರ ಜೀವನಕ್ಕೆ ಬೆಳೆಯೇ ಕಾರಣ, ಎಲ್ಲಾ ಜೆನಂಗೊಕ್ಕೂ ಬಡವನೇ ಕೆಲಸಕ್ಕೆ ಒದಗುವವ°, ಒಡವೆಗಳಲ್ಲಿ ಬಳೆಯೇ ವಿಭೂಷಣ, ಉತ್ಸವಂಗಳಲ್ಲಿ ಪುತ್ರೋತ್ಸವವೇ ಶ್ರೇಷ್ಠ, ಎಲ್ಲರಲ್ಲಿಯೂ ಗೆಳೆಯನೇ  ಉತ್ತಮ. (ಸೂತ್ಸವಂ= ಒಳ್ಳೆಯ ಉತ್ಸವ, ಕೆಳೆ=ಗೆಳೆಯ )

ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಸೆಗೆಯ್ವಲ್ಲಿ ಬಲ್|
ಪುಲಿಗಳ್ ಸಿಂಗಗಳಿಕೈಯಲ್ಲಿ ಪೆರವೆಣ್ಣಿರ್ದಲ್ಲಿ ಕುಗ್ರಾಮದೊಳ್ ||
ಗೆಲವಂ ತೋರದೆ ದುಃಖಮಪ್ಪ ಕಡೆಯೊಳ್ ಭೂತಂಗಳಾವಾಸದೊಳ್ |
ಸಲೆ ಬಲ್ಲರ್ ನಿಲೆ ಸಲ್ಲದೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೪||

 ವಿವೇಕ ಇಪ್ಪವು ಎಲ್ಲೆಲ್ಲಿ ವಾಸ ಮಾಡ್ಲೆ ಆಗ ಹೇಳ್ತರ, ಕವಿ ಇಲ್ಲಿ ತಿಳಿಶಿ ಕೊಟ್ಟಿದ°
ಸರಿಯಾಗಿ ಬೆಳೆ ಆಗದ್ದ ರಾಜ್ಯಲ್ಲಿ,  ಯಾವಾಗಲೂ ತೆರಿಗೆ ಸಂಗ್ರಹವನ್ನೇ ಗುರಿಯಾಗಿಸಿಗೊಂಡಿಪ್ಪ ರಾಜನ ರಾಜ್ಯಲ್ಲಿ, ಹುಲಿಗೊ ಸಿಂಹಂಗೊ ಹೆಚ್ಚಾಗಿಪ್ಪ ಜಾಗೆಗಳಲ್ಲಿ, ಪರಸ್ತ್ರೀ ಇಪ್ಪ ಜಾಗೆಲಿ, ಯಾವದೇ ಅನುಕೂಲತೆಗೊ ಇಲ್ಲದ್ದ ಕುಗ್ರಾಮಲ್ಲಿ, ಮನಸ್ಸಿಂಗೆ ಗೆಲುವು ಕೊಡದ್ದೆ ದುಃಖವೇ ಉಂಟಪ್ಪ ಜಾಗೆಗಳಲ್ಲಿ, ಭೂತ ಪಿಶಾಚಿಗೊ ವಾಸವಾಗಿಪ್ಪಲ್ಲಿ, ವಾಸ ಮಾಡುವದು ಆಗದ್ದ ಕೆಲಸ.

ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ|
ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನಾಪತ್ತಿನೊಳ್ ||
ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ |
ತೃಣವೇ ಪರ್ವತವಲ್ಲವೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೫||

ಸಮಯಕ್ಕಪ್ಪಗ ಸಿಕ್ಕದ್ದ ಸಹಾಯ, ಎಷ್ಟು ದೊಡ್ಡದಾದರೂ ಅದರಿಂದ ಎಂತ ಪ್ರಯೋಜನ ಹೇಳಿ ಕವಿ ಇಲ್ಲಿ ಹೇಳ್ತ°
ಉಪಯೋಗಕ್ಕೆ ಸಿಕ್ಕದ್ದ ಹಣ, ಪ್ರಾಯಲ್ಲಿ ಸಾಂಕದ್ದ ಮಗ, ಪೈರು ಒಣಗುತ್ತಾ ಇಪ್ಪ ಕಾಲಲ್ಲಿ ಬಾರದ್ದ ಮಳೆ, ಕಷ್ಟಕಾಲಲ್ಲಿ ಬಂದು ವಿಚಾರುಸದ್ದ ನೆಂಟ್ರು ಇವೆಲ್ಲವೂ ಪ್ರಯೋಜನಕ್ಕೆ ಇಲ್ಲದ್ದವು.ಸರಿಯಾದ ಕಾಲಕ್ಕೆ ಸಿಕ್ಕಿದ ಸಣ್ಣ ಸಹಾಯ ಆದರೂ ಅದು ದೊಡ್ಡದೇ.

(ಇನ್ನೂ ಇದ್ದು)

~~~

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

7 thoughts on “ಸೋಮೇಶ್ವರ ಶತಕ (11-15)

  1. ಸತ್ವಪೂಣ೯ ಸಾಹಿತ್ಯದ ರಸದೌತಣ ಘೃತಮಿಪ್ಪ ಊಟದಷ್ಟೇ ಸವಿ. ಶ್ರೀಶಣ್ಣ ಮತ್ತೆ ಶರ್ಮಪ್ಪಚ್ಚಿ ಅವಕ್ಕೆ ಧನ್ಯವಾದಂಗೊ.

  2. ಉಣದಿರ್ಪಾ ಧನಮಿರ್ದೊಡೇನು?-ಉಣ್ಣದ್ದೆ ಕಟ್ಟಿ ಮಡುಗಿದ ಪೈಸೆ ಎಂತಕೆ?-ಸರ್ವಜ್ನ ಹೇಳಿದ ಹಾಂಗೆ -ಉಣ್ಣದೊಡವೆಯ ಗಳಿಸಿ ಮಣ್ಣೊಳಗೆ ಬಚ್ಚಿಟ್ಟು ಚೆನ್ನಾಗಿ ನೆಲನ ಸಾರಿಪನ ಬಾಯೊಳಗೆ ಮಣ್ಣು ಕಾಣಯ್ಯ-ಹಳೆ ಕವಿಗೊ ಒಂದೆ ವಿಷಯ ಹೇಳುವ ಕ್ರಮ ಎಷ್ಟು ವಿಶಿಷ್ಟ ಆಗಿದ್ದು ಅಲ್ಲದೊ?

  3. ವಿವರಣೆ ಚೆಂದ ಆಯಿದು. ಧನ್ಯವಾದಂಗೊ .

  4. ಶರ್ಮಪ್ಪಚ್ಚಿಗೆ ಧನ್ಯವಾದ.. ವಿವರಣೆ ಲಾಯಕ್ಕಾಯ್ದು ..
    “ಸರಿಯಾದ ಕಾಲಕ್ಕೆ ಸಿಕ್ಕಿದ ಸಣ್ಣ ಸಹಾಯ ಆದರೂ ಅದು ದೊಡ್ಡದೇ.” ಅಪ್ಪಪ್ಪು

  5. ಒಳ್ಳೆ ಕಾರ್ಯ ಅಪ್ಪಚ್ಹಿ. ಮನೋಹರ ಆಯ್ದು. ಅಮೃತವಾಹಿನಿ ಕೆಮಿಗೆ ಹೊಕ್ಕಿದಾತು ಶ್ರೀಶಣ್ಣ.

  6. ಹರೇ ರಾಮ;ಶರ್ಮ ಅಪ್ಪಚ್ಚಿ, ಸೋಮೇಶ್ವರ ಶತಕದ ವಿವರಣೆ ಹಾ೦ಗೂ ಶ್ರೀಶಣ್ಣನ ಗಮಕ ವಾಚನ ಎರಡುದೆ ಲಾಯಕಾಗಿ ಬತ್ತಾ ಇದ್ದು. ಒಳ್ಳೆ ಕೆಲಸ ಮಾಡ್ತಾ ಇದ್ದಿ. ನಿ೦ಗೊಗಿಬ್ರಿ೦ಗು ಧನ್ಯವಾದ೦ಗೊ……………; ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×