Oppanna.com

ಕೊಡಗಿನ ಗೌರಮ್ಮ ಕಥಾಸ್ಪರ್ಧೆ ನಡೆದುಬಂದ ದಾರಿ

ಬರದೋರು :   ವಿಜಯತ್ತೆ    on   18/11/2013    6 ಒಪ್ಪಂಗೊ

ಕೊಡಗಿನ ಗೌರಮ್ಮ ಕಥಾಸ್ಪರ್ಧೆ ನಡೆದುಬಂದ ದಾರಿ

ಕೊಡಗಿನ ಗೌರಮ್ಮ ಸಾಹಿತ್ಯ ಕ್ಷೇತ್ರಲ್ಲಿ ಮಿಂಚಿ ಮರೆಯಾದ ಬೆಳ್ಳಿ ಚುಕ್ಕೆ. ಇದರೊಟ್ಟಿಂಗೆ ಹವ್ಯಕ ಮಹಿಳಾ ಸಮಾಜಲ್ಲಿಯೂ ಒಂದು ಬೆಳ್ಳಿ ರೇಖೆ! ಹವ್ಯಕ ಸಮೂಹಲ್ಲಿ, ಮೊದಲ ಬರಹಗಾರ್ತಿ, ಮೊದಲ ಕತೆಗಾರ್ತಿ.  ಹೇಳಿ ಹೆಸರು ಮಾಡಿ  ಮರವಲಾಗದ್ದ, ಮರವಲೆಡಿಯದ್ದ, ಅವಿಸ್ಮ್ರರಣೀಯ ಹೆಮ್ಮಕ್ಕೊ. ಸ್ವರ್ಗೀಯಳಾದ ಅಬ್ಬೆಯ ಹೆಸರಿಲ್ಲಿ ನಿರಂತರ ನಿಂಬಹಾಂಗೆ  ಒಂದು ಕಥಾಸ್ಪರ್ಧಾ ವೇದಿಕೆ ಮಾಡೆಕ್ಕೂಳಿ ಅವರ  ಸುಪುತ್ರ ಶ್ರೀಯುತ  ಬಿ.ಜಿ.ವಸಂತಣ್ಣಂಗೆ ಮನಸ್ಸಿಲ್ಲಿ  ಮೂಡಿ ಸಮಯ ಕೂಡಿ ಬಪ್ಪಲೆ ಕಾಯ್ತಾ ಇತ್ತಿದ್ದವು. ಅದು ಹೇಂಗೆ ಆರಮೂಲಕ  ಕೈಗೂಡಿತ್ತು  ನೋಡುವೊ°.
 ಕಥಾಸ್ಪರ್ಧೆ ಅಂಕುರ;–ಏತಡ್ಕ ಕೇಶವಭಟ್ಟರು [ಡಾ| ವೈ.ವಿ.ಕೃಷ್ಣಮೂರ್ತಿಯವರ ದೊಡ್ಡಪ್ಪ] ಮಡಿಕೇರಿಲಿ ಕಾಫಿತೋಟ ಮಾಡಿಗೊಂಡು ಅಲ್ಲಿ ವಾಸವಾಗಿದ್ದಿದ್ದವು.ಆ ಸಮಯಲ್ಲಿ ಅದೇ ಊರಿಲ್ಲಿ ಕಾಫಿ ಎಸ್ಟೇಟಿನ ಒಡಮಸ್ಥರಾದ  ಬಿ.ಜಿ.ವಸಂತಣ್ಣನ ಬೇಟಿ ಆತು.ದಿನ ಹೋದಹಾಂಗೆ ಆತ್ಮೀಯತೆ ಬೆಳದತ್ತು, ಸ್ನೇಹಿತರಾದವು. ಹೀಂಗೆ ಮಾತಾಡುತ್ತಿಪ್ಪಗ ಒಂದುದಿನ  ವಸಂತಣ್ಣ ಅವರಮನಸ್ಸಿಲ್ಲಿಪ್ಪ ಯೋಜನೆ ಸ್ನೇಹಿತನತ್ರೆ ಹೇಳಿಗೊಂಡವು. ಅಂಬಗ ಕಾಸರಗೋಡು ಜಿಲ್ಲೆಲಿ ’ಹವ್ಯಕಯುವವೇದಿಕೆ ಹೇಳಿಒಂದು ಸಮಿತಿ ಕಾರ್ಯಚಟುವಟಿಕೆಲಿದ್ದತ್ತು. ಈ ಹವ್ಯಕಯುವವೇದಿಕೆಲಿ  ಡಾ|ಕೃಷ್ಣಮೂರ್ತಿ ಯವು,  ಯುವವೇದಿಕೆಯ ಅಧ್ಯಕ್ಷರಾಗಿದ್ದಿದ್ದವು. ಏತಡ್ಕ ಕೇಶವಭಟ್ಟರು ಕೃಷ್ಣಮೂರ್ತಿಯವರ ಗಮನಕ್ಕೆ ತಂದವು.ಸಮಿತಿಲಿ  ಶ್ರೀಯುತ ಚಂದ್ರಶೇಖರಭಟ್ ಏತಡ್ಕ, ಪಜಿಲ ಜಯಪ್ರಕಾಶ, ಪಂಜಿತ್ತಡ್ಕ ಸತ್ಯನಾರಾಯಣ ಶರ್ಮ, ಕು.ಸು. ಪೈಸಾರಿ, ಈಶ್ವರಭಟ್,ರಮ್ಯಾಗಾರ್ಮೆಂಟ್ಸ್ ,ಮೊದಲಾದವು ಇತ್ತಿದ್ದವು.ಎಲ್ಲರೂ ಸೇರಿ ಮಾತಾಡಿ, ಹವ್ಯಕ ಹೆಮ್ಮಕ್ಕೊಗೆ  ಕೊಡಗಿನಗೌರಮ್ಮನ ಹೆಸರಿಲ್ಲಿ, ಒಂದು ಕಥಾಸ್ಪರ್ಧಾವೇದಿಕೆ ರೂಪೀಕರಣ ಮಾಡುವ ನಿರ್ಣಯ ಮಾಡಿದವು. ಹೀಂಗೆ ೧೯೯೬ರಲ್ಲಿ ಒಂದು ಸಣ್ಣಕಥಾಸ್ಪರ್ಧೆ ಅಖಿಲ ಭಾರತ ಮಟ್ಟಲ್ಲಿ,  ಹವ್ಯಕ ಮಹಿಳೆಯರಿಂಗಾಗಿ  ಕೊಡಗಿನಗೌರಮ್ಮ ದತ್ತಿನಿಧಿ[ ಗೌರಮ್ಮನ ಮಗ ಒಂದಿಷ್ಟು ಠೇವಣಿ ಬೇಂಕಿಲ್ಲಿ ಮಡಗಿದ್ದವು.] ಹಾಂಗೂ ಕಾಸರಗೋಡು ಜಿಲ್ಲಾ ಹವ್ಯಕ ಯುವವೇದಿಕೆಯ ಸಹಯೋಗಲ್ಲಿ ಕಥಾಸ್ಪರ್ಧೆ ರೂಪುಗೊಂಡತ್ತು.
ಬೆಳವಣಿಗೆ;– ೨೦೦೦ನೇ ಇಸವಿವರೆಗೆ ಇದರ ಸಂಪೂರ್ಣ ಜವಾಬ್ದಾರಿ ಯುವವೇದಿಕೆ ವಶಲ್ಲಿದ್ದತ್ತು. ಕಥೆಯ ಸಂಚಾಲಕತ್ವದ ಜವಾಬ್ದಾರಿಯ ವರ್ಷಕ್ಕೊಬ್ಬನ ಹಾಂಗೆ ಒಬ್ಬೊಬ್ಬ ನೋಡಿಗೊಂಡವು. ಈನಿಟ್ಟಿಲ್ಲಿ ಸಂಚಾಲಕರಾಗಿ ಡಾ|ಮಹಾಲಿಂಗೇಶ್ವರಶರ್ಮ,ಕುಳಮರ್ವ,  ಸತ್ಯನಾರಾಯಣಭಟ್ ಪಂಜಿತ್ತಡ್ಕ, ರಾಮಕೃಷ್ಣಭಟ್ ಗೋಕುಲ ನೀರ್ಚಾಲು, ಕುಮಾರ ಯಸ್.ಪೈಸಾರಿ, ಈಶ್ವರಭಟ್ ರಮ್ಯಗಾರ್ಮೆಂಟ್ಸ್ ಮೊದಲಾದ ಮಹನೀಯರು ಸೇವೆಸಲ್ಲಿಸಿದ್ದವು. ೨೦೦೧ರಲ್ಲಿ ನಮ್ಮ ಶಂಕರಾಚಾರ್ಯ ಗುರುಪೀಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಗೋಕರ್ಣಮಂಡಲಲ್ಲಿ ಸಮಿತಿ ರೂಪೀಕರಣ ಮಾಡಿದವು. ಈ ಹೊತ್ತಿಂಗೆ, ಮಹಿಳೆಯರಿಂಗಾಗಿ ಇಪ್ಪ ಕಥಾಸ್ಪರ್ಧೆಯ  ಮಹಿಳೆಯರೇ ವಹಿಸಲಿ ಹೇಳಿ ಮಹನೀಯರಿಂದ ಬೇಡಿಕೆ ಬಂತು. ಮಹಿಳಾಧ್ಯಕ್ಷೆ  ಈಶ್ವರಿ ಬೇರ್ಕಡವು ಈ ಕಥಾಸ್ಪರ್ದೆಗೆ ಸಂಚಾಲಕಿಯಾಗಿ ಎನ್ನ ನೇಮಿಸಿದವು. ಅಲ್ಲಿಂದಿತ್ತೆ  ಈ ಹದಿಮೂರು ವರ್ಷಂದ   ಪ್ರಾಮಾಣಿಕವಾಗಿ ಸಾಹಿತ್ಯ ಸೇವೆಮಾಡಿದ ತೃಪ್ತಿ ಎನ್ನದು. ಇದೀಗ ಹದಿನೆಂಟನೇ ವರ್ಷ ಕಥಾಸ್ಪರ್ದಗೆ. ೨೦೦೬ರಲ್ಲಿ ಹತ್ತುವರ್ಷದ ಆಚರಣೆ ಮಾಡಿ ಒಂದು ಕಥಾಸಂಕಲನ ಮಾಡೀರೆಂತಾ?ಹೇಳಿ ಆತೆನಗೆ . ಶ್ರೀಯುತ ವಸಂತಣ್ಣನ ಮುಂದೆ ಎನ್ನ ಅಭಿಲಾಶೆಯ ಹೇಳಿಗೊಂಡೆ. ಅವು ಸಂತೋಷಲ್ಲಿ ಒಪ್ಪಿಗೆ ಕೊಟ್ಟವು. ಬೇರ್ಕಡವು ಈಶ್ವರಿಗೂ ಸಂತೋಷಾತು. ಹಾಂಗೆ ವಸಂತಣ್ಣನ ಆರ್ಥಿಕ ಸಹಕಾರಂದ , ಮುಜುಂಗಾವು  ಶಿಕ್ಷಣ ಸಂಸ್ಥೆ ವಠಾರಲ್ಲಿ ಕಾರ್ಯಕ್ರಮ ಸುಸೂತ್ರವಾಗಿ, ’ಹತ್ತೆಸಳು’ ಕಥಾಸಂಕಲನವೂ ಬಿಡುಗಡೆ ಆತು. ಹತ್ತೆಸಳಿಲ್ಲಿ ಹತ್ತುವರ್ಷದ ಹತ್ತು ಪ್ರಶಸ್ತಿ ವಿಜೇತ ಕತಗೊ ಇದ್ದು.  [ ೧೯೯೯ರಲ್ಲಿ ಎನಗೆ ಪ್ರಶಸ್ತಿ ಬಯಿಂದು ]  ಕಥಾಸ್ಪರ್ಧೆಯ ನಿಯಮಂಗೊ, ಕಥೆಯ ಸ್ವರೂಪ, ಮೌಲ್ಯಮಾಪನ ಮಾಡುವ ರೀತಿ-ನೀತಿ, ಹೀಂಗಿದ್ದೆಲ್ಲ ಹೊಸ ಲೇಖಕಿಯರಿಂಗೆ  ಇಲ್ಲಿ ಹೇಳುಸ್ಸು ಒಳ್ಳೆದು ಕಾಣುತ್ತು.
ಕಥೆಯ ಸ್ವರೂಪ ಹಾಂಗೂ ನಿಯಮಂಗೊ;- ೧.ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ, ಹವ್ಯಕ ಹೆಮ್ಮಕ್ಕೊ ,ಹವ್ಯಕ ಭಾಷೆಲಿ,[ಹವ್ಯಕಭಾಷೆ, ಉತ್ತರ ಕನ್ನಡ ,ದಕ್ಷಿಣ ಕನ್ನಡ  ಏವದೂ ಅಕ್ಕು.] ಹಸ್ತಪ್ರತಿ ಸಾದಾರಣ ಎಂಟು ಪುಟದ  ಒಳಾಣ ಕಥೆ ಕಾಗದದ ಒಂದೇ ಹೊಡೆಲಿ ಬರೆಕು.೨. ಹೆಸರು, ವಿಳಾಸ ಬೇರೆಯೇ ಕಾಗದಲ್ಲಿ ಬರದು ಜೋಡಿಸಿರೆಕು. ೩.ಬೇರೆಲ್ಲಿಯೂ ಪ್ರಕಟ ಆಗದ್ದ ಸಾಮಾಜಿಕ ಕಥೆ ಆಯೆಕ್ಕು. ೪..ವಯೋಮಿತಿ ಇಲ್ಲೆ. ಆದರೆ ಇಷ್ಟರವರೆಗಿನ ಪ್ರಥಮ ಬಹುಮಾನಿತರಿಂಗೆ ಅವಕಾಶ ಇಲ್ಲೆ. ೫  ಸ್ಪರ್ದಗೆ ಬಂದ ಕಥೆಯ ಪ್ರಕಟ ಮಾಡುವದು, ಸಂಕಲನ ಮಾಡುವ ಹಕ್ಕು ಸಮಿತಿಗಿದ್ದು.
ಹವ್ಯಕ ಸಂಸ್ಕೃತಿ, ಆಚಾರ-ವಿಚಾರ, ನೀತಿ, ನಿಯಮ, ಒಟ್ಟಾರೆ ಜೀವನದಮೌಲ್ಯಂಗೊ ಒಳುಶಿ ಬೆಳೆಶುವದೇ ಕಥಾಸ್ಪರ್ಧೆಯ ಉದ್ದೇಶ.
ಮೌಲ್ಯಮಾಪನ;– ಕತೆ ಆಹ್ವಾನಕ್ಕೆ ಪ್ರತಿ ಜೂನ್ ತಿಂಗಳಿಲ್ಲಿ  ಸಾದಾರಣ ಪ್ರಮುಖ ದಿನಪತ್ರಿಕೆಲಿ ಪ್ರಕಟಣಗೆ ಕೊಡ್ತೆ. ಕತೆ ಎನ್ನ ಕೈ ಸೇರ್ಲೆ ಕೊನೆ ದಿನ  ಅಗೋಸ್ತುತಿಂಗಳಕೊನೆ. ಕತೆ ಎನ ಬಂದು ಸೇರಿಯಪ್ಪದ್ದೆ  ಕತಗೆ ಅನುಕ್ರಮವಾಗಿ ನಂಬರ್ ಹಾಕ್ತೆ. ತಲಪಿದ ಬಗ್ಗೆ ಕತೆಗಾರ್ತಿಗೊಕ್ಕೆ ಕಾರ್ಡ್ ಕಳುಸುತ್ತೆ. ಕತೆ ಬರದ ಕಾಗದಲ್ಲಿ ನಂಬರು ಮಾಂತ್ರ ಬೀಳ್ತಷ್ಟೆ.  ಕತೆ ನಂಬರು,ಶಿರೋನಾಮೆ, ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಈ ವಿವರಂಗೊ ಎನ್ನತ್ರೆ ಇರುತ್ತು. ಮೌಲ್ಯಮಾಪನ ಮಾಡ್ತವಕ್ಕೆ ನಂಬರು ಹೊತ್ತ ಕತೆ ಮಾಂತ್ರ ಹೋಪದು.  ಮಾರ್ಕು ಹಾಕಲೆ ಬೇರೆಯೇ ಶೀಟ್ ಪೇಪರ್ ಕೊಡ್ತೆ. ಮೂರು ಜೆನಕ್ಕೂ ಬೇರೆ-ಬೇರೆ ಶೀಟ್ ಕೊಡುವಕಾರಣ ಒಬ್ಬ ಹಾಕಿದ ಮಾರ್ಕು ಮತ್ತೊಬ್ಬಂಗೆ ಗೊಂತಾಗ. ಮೂರು ಜೆನರೂ ಮೌಲ್ಯಮಾಪನ ಮಾಡಿದ ಮತ್ತೆ ಕೂಡ್ಸಿ ನೋಡಿ  ಪ್ರಥಮ, ದ್ವಿತೀಯ, ತೃತೀಯ ಆಯ್ಕೆ. ಹಾಂಗಾಗಿ  ಇದು ನ್ಯಾಯಯುತವಾದ ಆಯ್ಕೆ. ಹೋದ ವರ್ಷ ತೀರ್ಪುಗಾರರಾಗಿದ್ದವರಿಂಗೆ  ಈ  ವರ್ಷ ಕೊಡ್ಲಿಲ್ಲೆ. ಹೀಂಗೆ ನಿಯಮಂಗೊ.
ತುಂಬಾಜೆನ ಅಕ್ಕ-ತಂಗೆಕ್ಕೊ ಎನ್ನತ್ರೆ “ನಿಂಗಳೇ ಮಾರ್ಕು ಹಾಕುವದಾ?, ಆನು ಎಷ್ಟು ಸರ್ತಿ ಬರದೆ ಇನ್ನೂ ಬಹುಮಾನ ಬಯಿಂದೇ ಇಲ್ಲೆ! ಹೇಳ್ತವು. ನಮ್ಮ ಭಾಷೆಲಿ ಎಡಿತ್ತಿಲ್ಲೆ ಕನ್ನಡಲ್ಲಿ ಬರವೆ. ಹೇಳ್ತವು. ನಾವು ದಿನಾ ಮಾತಾಡುವ  ಅಬ್ಬೆ  ಭಾಷೆಲಿ ಬರವಲೆಡಿಯದ್ರೆ  ಮತ್ತೆ  ಕಲ್ತ  ಭಾಷೆಲಿ ಬರವದೇಂಗೆ? ಉಮ್ಮಪ್ಪ!ಇಲ್ಲಿ  ಸೋದರಿಯರಿಂಗೊಂದು  ಪಿಸುಮಾತು… ನಾವು ಬಹುಮಾನದ  ಒಂದೇ ದೃಷ್ಟಿಂದ  ಬರವಲಾಗ. ನಮ್ಮ ಸಾಹಿತ್ಯ ಬೆಳವಣಿಗೆ ಆಗಲಿ ಗ್ರೇಶಿಗೊಂಡು ಬರೆಯಿ. ಕತೆಯ ಒಂದೇ ದಿನಲ್ಲಿ ಗೀಚಿ ಬಿಡುವದಲ್ಲ, ಬರದ್ದದರ ಮತ್ತೆ-ಮತ್ತೆ ನಾವೇ ಓದಿಗೊಂಡು  ತಿದ್ದಿ-ತಿದ್ದಿ ಬರೆಕು. ಅಂಬಗ ಶೈಲಿ ಒಳ್ಳೆದಾವುತ್ತು. ಬರೆತ್ತವು ತುಂಬಾ ಓದೆಕ್ಕಾವುತ್ತು.ಸಾಹಿತ್ಯ ಕ್ಷೇತ್ರ ಒಂದೆರಡು ದಿನಲ್ಲಿ ಪ್ರಬುದ್ದತೆ ಅಪ್ಪ ಕೆಲಸ ಅಲ್ಲ. ಒಳ್ಳೆ ತಾಳ್ಮೆ ಬೇಕು. ಗುರಿ ಬೇಕು. ನಿರಂತರ ಶ್ರಮ ಪಡೆಕು. ಕೈ ಹಿಡಿತ ಸಾದ್ಸೆಕ್ಕು. ಇದೇ ಇಪ್ಪದು.
ಈ ವರೆಗಿನ ಪ್ರಶಸ್ತಿ ವಿಜೇತೆಯರು.;–೧ ಶ್ರೀಮತಿಯರಾದ,  ಸವಿತಾ ಅಡ್ವಾಯಿ, ೨.ಜಯಾಯಾಜಿ,ಶಿರಾಲಿ,೩. ವಿಜಯಾಸುಬ್ರಹ್ಮಣ್ಯ,ಕುಂಬಳೆ,೪. ಅನುಪಮಾಪ್ರಸಾದ್,ಸೀತಂಗೋಳಿ, ೫.ದುರ್ಗಾರತ್ನರವಿಶಂಕರ್ ೬. ಗೀತಾ ಕೊಂಕೋಡಿ,೭. ಸರಸ ಬಿ.ಕೃಷ್ಣ  ಕಮ್ಮರಡಿ, ೮,ಸುಮತಿ,ಕೆ.ಸಿ.ಭಟ್, ಆದೂರು.೯. ಅರುಣ ಜಿ.ಭಟ್ ಪೆರುವಾಯಿ.೧೦. ಶೈಲಾಕುಮಾರಿ, ಮಂಗಳೂರು. ೧೧ಸರಸ್ವತಿ ಶಂಕರ್ ಬೆಂಗಳೂರು. ೧೨.ಶಶಿಕಲಾ ಹೊಸದುರ್ಗ, ೧೩.ಶೀಲಾಲಕ್ಷ್ಮಿ ಕಾಸರಗೋಡು .೧೪. ಗಿರಿಜಾಹೆಗ್ಗಡೆ[ಗಾಂವ್ಕರ್],೧೫. ಸಮುದ್ಯತಾವೆಂಕಟರಾಮ  ೧೬,ಲಲಿತಾಲಕ್ಷ್ಮಿ,ಸಿದ್ದಾಪುರ.೧೭, ಜಯಲಕ್ಷ್ಮಿ,ಮುಕ್ವೆ ,೧೮. ಅನಿತಾನರೇಶ್,ಮಂಚಿ.
ಸಾಹಿತ್ಯಕ್ಕೇರ್ಲೆ ಸೋಪಾನ;-= ನಂಬುತ್ತೀರೊ ಬಿಡುತ್ತೀರೊ! ಈಸ್ಪರ್ದಾವೇದಿಕೆಲಿ  ಪ್ರಶಸ್ತಿ ಪಡದವು ಹೆಚ್ಹಿನವೂ ಮತ್ತೆ ಇತರ ಸಾಹಿತ್ಯ ಕ್ಷೇತ್ರಲ್ಲಿ ಪ್ರಭುದ್ದತೆ ಸಾದ್ಸಿದ್ದವು. ಹೆಸರು ತೆಗದ್ದವು. ಇದಕ್ಕೆ ಆನೂ ಹೊರತಲ್ಲ. ಸಂತೋಷಲ್ಲಿ ಹೇಳ್ತೆ. ದ್ವಿತೀಯ ಬಹುಮಾನಿತರೂ ಬೆಳಕಿಂಗೆ ಬಯಿಂದವು. ಇದಕ್ಕೆ ಉತ್ತಮ ಉದಾಹರಣೆ  ಶ್ರೀಮತಿ ಪ್ರಸನ್ನ  ಚೆಕ್ಕೆಮನೆ.  ಶ್ರೀಮತಿ ಅನುಪಮ ರಾಘವೇಂದ್ರ.ಉಡುಪುಮೂಲೆ. ಪಾರ್ವತಿ ಕೂಳಕ್ಕೋಡ್ಲು  , ಹೀಂಗೆ ಕೆಲಾವು ತಂಗೆಯಕ್ಕೊ ಇದ್ದವು.  ಈ ಸದಾವಕಾಶದ ಪ್ರಯೋಜನ ಎಲ್ಲರೂ  ಪಡಕ್ಕೊಳಿ  ಕಿರಿಯರನ್ನೂ ಪ್ರೋತ್ಸಾಹಿಸಿ  ಹೇದೊಂಡು  ಮುಂದಾಣವಕ್ಕೆ ಶುಭ ಹಾರೈಸುತ್ತೆ.

|| ಹರೇರಾಮ||

“ಮಿಂಚಿನ ಹಾಂಗೆ ಮಿಂಚಿ ಮರೆ ಆದ “ಕೊಡಗಿನ ಗೌರಮ್ಮ” – ಶ್ರೀ ಅಕ್ಕ ಬರದ ವಿಶೇಷ ಲೇಖನ ಇಲ್ಲಿದ್ದು.

 

6 thoughts on “ಕೊಡಗಿನ ಗೌರಮ್ಮ ಕಥಾಸ್ಪರ್ಧೆ ನಡೆದುಬಂದ ದಾರಿ

  1. ವಿಜಯಕ್ಕ ಹೇಳಿದ್ದು ನಿಜ.ಈ ಸ್ಪರ್ಧೆಲಿ ಬಹುಮಾನ ಬ೦ದ ಮೇಲೆಯೇ ಎನಗೆ ಬರವಲೆ ಧೈರ್ಯ ,ಉತ್ಸಾಹ ಬ೦ದದು.ಹವ್ಯಕ ಮಹಿಳೆಯರಿ೦ಗೆ ಇದು,ಒ೦ದು ಬಹಳ ಲಾಯಿಕ ವೇದಿಕೆ. ಎಲ್ಲೋರಿ೦ಗೂ ಪ್ರೋತ್ಸಾಹ ಕೊಡುವ ವಿಜಯಕ್ಕ೦ಗೆ ಧನ್ಯವಾದ೦ಗೊ.

  2. ಹರೇರಾಮ, ನರಸಿಂಹಣ್ಣ, ನಾವು-ನಾವು ಗೊಂತಿಲ್ಲದ್ದೆ ಎಂತ? ನಮ್ಮ- ತಂಗೆಕ್ಕೊಗೆ ರಜ ಬೆನ್ನು ತಟ್ಟೆಡದೋ ಎಂತ ಹೇಳ್ತಿ? ಮತ್ತೆಂತ ವಿಶೇಶ?

  3. ನಿಂಗಳ ಅಭಿಮಾನಕ್ಕೆ ಧನ್ಯವಾದಂಗೊ ನರಸಿಂಹಣ್ಣ, ಈ ವೇದಿಕೆಲಿ ಬಹುಮಾನ ಪಡೆಯದ್ದವು ಬೇರೆ ಸಾಹಿತ್ಯ ಕ್ಷೇತ್ರಲ್ಲಿ ಇಲ್ಲೆ ಹೇಳಿ ಅಲ್ಲ. ಕೆಲವು ಜೆನಕ್ಕೆ ಹುಟ್ಟು ಪ್ರತಿಭೆ ಇರ್ತು. ನಮ್ಮ ಲಕ್ಶ್ಮಿಪ್ರಸಾದ್ ತಂಗೆ ಇದ್ದ ಹಾಂಗೆ! ಇನ್ನು ಕೆಲವು ಜೆನಕ್ಕೆ ಪ್ರೋತ್ಸಾಹ ಬೇಕಾವುತ್ತು.ಎನ್ನ ಹಾಂಗೆ. ಆ ರೀತಿಂದ ಹೇಳಿದೆಯಷ್ಟೆ.

    1. ನಿಂಗಳ ಸ್ಪಷ್ಟೀಕರಣಕ್ಕೆ ಧನ್ಯವಾದಂಗೊ ವಿಜಯಕ್ಕ.ನಿಂಗಳ ಮಾತಿನ ಖಂಡನೆ ಮಾಡುವ ಉದ್ದೇಶಂದ ಹಾಂಗೆ ಬರದ್ದದಲ್ಲ.ದ್ವಿತೀಯ ಬಹುಮಾನದ ವಿಷಯ ಬಂದ ಕಾರಣಂದ ಹಾಂಗೆ ಹೇಳಿದೆ ಅಷ್ಟೆ.ನಿಂಗಳ ಸಾಮರ್ಥ್ಯವ ಏಳು ವರ್ಷ ಮದಲೇ ತಿಳುದವ ಆನು.(ಪ್ರಥಮ ಹವಿಗನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭಲ್ಲಿ)ಹರೇ ರಾಮ.

  4. ನೆಡದು ಬಂದ ದಾರಿಯ ತಿರುಗಿ ನೋಡುವದು ಭಾರೀ ಉತ್ತಮ ಕೆಲಸ.ಮೌಲ್ಯಮಾಪನ ಪಾರದರ್ಶಕವಾಗಿಪ್ಪದು ಸಂತೋಷ.ಹೀಂಗೇ
    ಮುಂದುವರಿಯಲಿ ಹೇದು ಹಾರೈಕೆ.ಸಾಹಿತ್ಯಕ್ಕೇರ್ಲೆ ಸೋಪಾನ-ಸತ್ಯ.ಬಹುಮಾನ ಪಡೆಯದ್ದವೂ ಬೇರೆ ಸಾಹಿತ್ಯ ಕ್ಷೇತ್ರಲ್ಲಿ ಸಾಧನೆ ಮಾಡಿಯೊಂಡಿದ್ದವು.ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×