Oppanna.com

‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ

ಬರದೋರು :   ವಿಜಯತ್ತೆ    on   18/09/2021    0 ಒಪ್ಪಂಗೊ

ಲೇಖಕಿ- ರಜನಿ ಭಟ್ ಕಲ್ಮಡ್ಕ,
.

ಬಾಜಿರೆ ಕಂಬದತ್ರ ಗಡ್ಡಕ್ಕೆ ಕೈಕೊಟ್ಟು ಹೆರಜೆಗಿಲಿಯ ಚಿಟ್ಟೆಲಿ ಕೂದುಗೊಂಡು ಜಾಲಿಲಿ ಬೀಳುವ ಮಳೆಯನ್ನೇ ನೋಡಿಗೊಂಡಿತ್ತು ಆರತಿ. ಪಟಪಟ ಉದುರುವ ಹನಿಗ ದೊಡ್ಡ ಗಾತ್ರ ಪಡಕ್ಕೊಂಡು ಬತ್ತ‌ ಹಾಂಗೆ ಜಾಲಿಲಿ ನೀರು ತುಂಬಿಗೊಂಡು ಮಳೆ ಶಬ್ದವೇ ಬದಲಿತ್ತು. ಅದರ ಕಣ್ಣು ಈಗ ಮಾಡಿಂದ ಬೀಳುವ ನೀರ ಧಾರೆಗೆ ಗ್ಲಾಸ್ ಹಿಡ್ಕೊಂಡು ಆಡುವ ಮಕ್ಕಳತ್ರ  ಹೋತು. “ಪುಟ್ಟ ,ಹೀಂಗೆ ಗ್ಲಾಸ್ ಹಿಡ್ಕ.  ನವಗೆ ಕಾಫಿ-ಚಹಾ ಮಾಡಿ ಅಜ್ಜಿಗೆ ಅಜ್ಜಂಗೆ ಎಲ್ಲೋರಿಂಗೂ ಕೊಡೆಕು” ನೀತು  ಪ್ರಣವನ ಕೈ ಸರಿಯಾಗಿ ನೀರಿನ ಧಾರೆಗೆ ಹಿಡಿದು ಹೇಳುದರ ನೋಡುದರಲ್ಲೇ ಮುಳುಗಿತ್ತು ಆರತಿ.

ನೀತು ತಮ್ಮನ ಕೈ ಹಿಡಿದು ಆರತಿಯ ಹತ್ತರೆ ಬಂದು ಅವನ  ಕೈಂದ  ಗ್ಲಾಸು ತೆಗೆದು” ಅಮ್ಮಂಗೆ ಕಾಫಿ ಕೊಡು” ಹೇಳಿತ್ತು. ಅದರ ತೆಕ್ಕೊಂಡು ಆರತಿ ಅವರ ಇಬ್ಬರ ಮೋರೆ ನೋಡಿಗೊಂಡು ಇತ್ತು. “ಚಿಕ್ಕಮ್ಮ, ಅದರ ಕುಡಿರಿ ಪ್ರಣವ ಮಾಡಿದ ಕಾಫಿ” ನೀತು ಆರತಿಗೆ  ಹೇಳಿ ಅಪ್ಪಗ ಆರತಿ ಕುಡುದ ಹಾಂಗೆ ಮಾಡಿ “ಲಾಯ್ಕಿದ್ದು ಮಗ ನೀನು ಮಾಡಿದ್ದು ” ನೆಗೆ ಮಾಡಿಗೊಂಡು  ಹೇಳಿ ಮಗನ ತಲೆ ನೇವರಿಸಿತ್ತು. “ಥ್ಯಾಂಕ್ಸ್ ಅಮ್ಮ” ಪ್ರಣವಂಗೆ  ಈಗ ಭಾರಿ ಖುಷಿ ಅಮ್ಮಂಗೆ  ಅವನೇ ಕಾಫಿ ಮಾಡಿ ಕೊಟ್ಟಾಳಿ.
ಅಷ್ಟಪ್ಪಗ ಪಾರ್ವತಮ್ಮ  ಹೆರ ಜಗಿಲಿಗೆ ಬಂದು ಪುಳ್ಳಿಯಕ್ಕಳ ಹತ್ರ ಕೊಂಡಾಡಲಿ ಹೇಳಿದವು. “ನೀತು, ನೀನು ತಮ್ಮನ ಜಾಗ್ರತೆ ನೋಡಾತ. ಅವನೊಟ್ಟಿಗೆ ಆಟ ಆಡೆಕ್ಕು. ಪ್ರಸಾದ ,ಎಲ್ಲಿದ್ದೆ ಮಗ ನೀನು ಅಲ್ಲಿ ಬರೆತ್ತರುದೆ ಒಂದು ಕಣ್ಣು ಮಕ್ಕಳ ಮೇಲೆ ಬೇಕದ.  ಕುಮಾರ ,ಜಾಲಿಲಿ ಈ  ಮಳೆಗೆ ಹೋಗೆಡ ” ಪುಳ್ಳಿಯಕ್ಕಳ ಅವಾಗವಾಗ ನೋಡಿಗೊಳ್ಳದ್ರೆ ಅಜ್ಜಿಗೆ ಸಮಾಧಾನವೇ ಇಲ್ಲೇ!
“ಎಂಥ ಆರತಿ ಇಲ್ಲಿ ಕೂದ್ದು? ಎಂತ ಗೋಪಾಲನ ನೆಂಪಾವ್ತಾ.” ಅತ್ತೆ  ಒಬ್ಬನೇ ಕೂದು ಮಳೆ ನೋಡಿಕೊಂಡಿಪ್ಪ ಸೊಸೆಯ ಒಳ ಬಪ್ಪಲೆ ಹೇಳಿದವು.
”  ಬತ್ತೆ ಅತ್ತೆ . ಪ್ರಣವ ನೀರಿಲಿ ಆಡಿಗೊಂಡು ಇತ್ತಿದ್ದ.  ಹಾಂಗೆ ನೋಡಿಕೊಂಡು ಕೂದ್ದು”  ಹೇಳಿ  “ರಜಾ ಕಳುದು ಬತ್ತೆ ಮಳೆಲಿ ಮಕ್ಕಳ ಆಟ ನೋಡುಲೇ ಎನಗೆ ಸಿಕ್ಕದ್ದು ಇಲ್ಲಿ ನೋಡ್ಲೆ  ಲಾಯ್ಕ  ಆವುತ್ತು.”ಹೇಳಿತ್ತು.

“ಆತು. ನೀನು ನೋಡು. ನೀನು ಪ್ರಣವನ ಬಗ್ಗೆ ಎಂಥ ಚಿಂತೆ ಮಾಡೆಡ.  ಅವ ಹುಷಾರಾವ್ತಾ ಆತ” ಸೊಸೆಯತ್ರ ಸಮಾಧಾನ ಹೇಳಿ ಹೆರ  ಮಡುಗಿದ ಗ್ಲಾಸ್ ತೆಕ್ಕೊಂಡು ಮತ್ತೊಂದರಿ ಪುಳ್ಳಿಯಕ್ಕಳ ಹತ್ತರೆ ಜಾಗ್ರತೆ ಹೇಳಿ ಒಳ ಹೋದವು
ಆರತಿಗೆ ಮಳೆ ,ಮಳೆ ಆಟ ಎಲ್ಲಾ ಇಲ್ಲಿ ಹಳ್ಳಿಗೆ ಬಂದು ಗೊಂತಾದ್ದು. ಅದು ಮಗಂದಾಗಿ. ಹೆಂಗಿದ್ದ ಆನು ಹೆಂಗಾದೆ ಈಗ . ಹೂಂ ” ಮಳೆಯ ನೋಡುತ್ತಾ ಇದ್ದ ಹಾಂಗೆ ಆರತಿಗೆ ಅದರ ಗತ ಜೀವನದ ನೆನಪು  ಗರಿ ಬಿಚ್ಚು ಲೆ ಸುರು ಆತು.

***


ಆರತಿ ಬೆಂಗಳೂರಲ್ಲಿ ಹುಟ್ಟಿ ಬೆಳದ್ದು .ಅದರ ಅಪ್ಪ ಮಹಾಬಲ ಶರ್ಮ ದೊಡ್ಡ ವ್ಯಾಪಾರಿ. ವಾರದ 2 ದಿನ ಮನೇಲಿ ಇದ್ದರೆ ಒಳುದ ಐದು ದಿನ ಹೆರವೇ ಇಪ್ಪದು. ವ್ಯಾಪಾರ ವಹಿವಾಟಿಲಿ ಮಗಳು, ಮನೆ ಹೆಂಡತಿ ಹೇಳಿರೆ ಹೆಚ್ಚು ಟಚ್ ಬರೀ ಫೋನಿಲಿ. ಅಮ್ಮ ದೀಪಿಕ ಶರ್ಮ. ಉದ್ಯಪ್ಪಗ ಸಮಾಜ ಸೇವೆ ಹೇಳಿ ಕಾರು ಬಿಟ್ಟುಗೊಂಡು ಹೋದರೆ. ಬಪ್ಪದು ಇರುಳು . ಆ ಕ್ಲಬ್ಬು ಈ ಕ್ಲಬ್ಬು ಹೇಳಿ ಇಡೀ ದಿನ ಹೆರವೇ ಇದ್ದು ಗಂಡ ಮನೆಲಿಪ್ಪ ದಿನ ಮಾತ್ರ ಬೇಗ ಬಪ್ಪ ಪಾರ್ಟಿ ಆರತಿ ಸಣ್ಣದಿಪ್ಪಗ ಅಪ್ಪನ ಅಮ್ಮ ಸಾವಿತ್ರಿ ಅಜ್ಜಿ ಮನೆಲಿ ಇತ್ತಿದ್ದವು ಅವರ ಸೆರಗಿನ ಎಡೆಲಿ ಆರತಿ ಬೆಳದ್ದು.
ಆರತಿಗೆ ಹಿಂದೆ ಮುಂದೆ ಒಡಹುಟ್ಟಿದೋರು ಆರೂ ಇಲ್ಲೆ.  ದೀಪಿಕಾಗೆ ತುಂಬಾ ಸರ್ತಿ ಸಾವಿತ್ರಮ್ಮ ಹೇಳಿದವು “ನೋಡು ದೀಪಿಕ,  ಮಕ್ಕ ಇಬ್ಬರಾದರೂ ಬೇಕು . ಇಲ್ಲದ್ದರೆ ಆರತಿಗೆ ಆಡ್ಲೆ ಆರಿದ್ದವು ? ನಿಂಗ ಇಬ್ರುದು ಹೆರವೇ ಇಪ್ಪಲಾತು. ಅವಾಗ ಮನೇಲಿ ಈ ಮುದುಕಿ ಒಟ್ಟಿಂಗೆ ಎಷ್ಟು ಅಡುಲೆ ಎಡಿಗು ಪಾಪ” ಹೇಳಿ ಬುದ್ಧಿವಾದ ಹೇಳಿದರೂ ದೀಪಿಕಾ ಅತ್ತೆಯತ್ತರೆ ಪೆದಂಬೇ ಮಾತಾಡಿದ್ದು.
“ಅತ್ತೆ ಈಗಣ ಕಾಲ ನಿಂಗಳ ಕಾಲದ ಹಾಂಗಾ? ನಿಂಗಳ ಕಾಲಲ್ಲಿ ನಾಯಿ ಕುಂಞಿ ಹಾಕಿದ ಹಾಂಗೆ ಹತ್ತಿಪ್ಪತ್ತು ಮಕ್ಕ . ಮತ್ತೆ ಅವರ ಎಲ್ಲಾ ನೋಡುವ ಜವಾಬ್ದಾರಿ ದೊಡ್ಡ ಮಗಂಗೆ. ಅವ ಕಷ್ಟ ಬಪ್ಪದು. ದೊಡ್ಡ ಮಗಂಗೆ ಅವನ ಕುಟುಂಬಕ್ಕೆ ಯಾವಾಗಲೂ ನೆಮ್ಮದಿ ಇಪ್ಪಲಿಲ್ಲೆ . ಈಗ ಒಂದೇ ಮಗು ಇನ್ನು ಆನು ಹೆತ್ತು  ಅದರ ಚಾಕ್ರಿ ಮಾಡಿಗೊಂಡು ಕೂಪಲೆ ಎನ್ನಂದ ಎಡಿಯ. ಎನಗುದೆ ಎನ್ನ ಜೀವನ ಇದ್ದು. ಎನ್ನ ಇಷ್ಟ ಅದಕ್ಕೆ ಸಮಯ ಕೊಡಕು ” ಇಷ್ಟು ಹೇಳಿದ ಮೇಲೆ ಸಾವಿತ್ರಮ್ಮ ಹೇಳುದರ ನಿಲ್ಸಿದ್ದವು‌.  ಮತ್ತೆ ಎಂದುದೆ ಬುದ್ಧಿ ಹೇಳುಲೆ ಹೋಯಿದವಿಲ್ಲೆ. ಇಪ್ಪ ಒಂದು ಪುಳ್ಳಿಯ ನೋಡಿಕೊಂಡು ಅದಕ್ಕೆ ಭಜನೆ ಪದ್ಯ ಕಥೆ ಎಲ್ಲವನ್ನು ಹೇಳಿ ಕೊಟ್ಟು ಗೊಂಡೆ ಇತ್ತಿದ್ದವು.

ದೊಡ್ಡ ಆದ ಹಾಗೆ ಚೆಂದದ ಗೊಂಬೆಯ ಹಾಂಗೆ ಬೆಳೆದ ಮಗಳು ಆರತಿಯ ದೀಪಿಕಾ ಹೆರ ಕರಕ್ಕೊಂಡು ಹೋಪಲೆ ಸುರು ಮಾಡಿತ್ತು. ಅದು ಆರತಿಗೆ ಇಷ್ಟ ಇತ್ತಿಲ್ಲೆ ಅಜ್ಜಿಯ ಒಟ್ಟಿಂಗೆ ಇದ್ದರೆ ಅದಕ್ಕೆ ತುಂಬಾ ದೊಡ್ಡ ಪ್ರಪಂಚವೇ ಸಿಕ್ಕುತ್ತಿತ್ತು. “ನಾಲ್ಕು ಜನ ನಿನ್ನ ನೋಡಕ್ಕೆ ಅಜ್ಜಿಯ ಹಾಂಗೆ ಮನೆ ಒಳವೆ ಕೂದರೆ ಅಜ್ಜಿಯ ಹಾಂಗೆ ಆವ್ತೆ.”ಹೇಳಿ ಬಲವಂತಂದ ಎಳಕೊಂಡು ಹೋಪಲೆ ಸುರು ಮಾಡಿತ್ತು . 
ಅಮ್ಮನ ಹೆದರಿಕೆಂದ ಸುರು ಆದ ಸುತ್ತಾಟ ಕ್ರಮೇಣ ಆರತಿಗೆ ಇಷ್ಟ ಅಪ್ಪಲೆ ಸುರು ಆತು.ಬಗೆಬಗೆಯ ಅಂಗಿಗಳ ಹಾಕುವುದು  ಹೋಟೆಲ್ ಸುತ್ತುವುದು, ಪಾರ್ಕ್ ಹೋಟೆಲಲ್ಲಿ ಪಾರ್ಟಿ ಮಾಡುದು ಹಿಂಗೆಲ್ಲಾ ಅದರ ಬದುಕು ಒಳಂದ ಹೆರವೆ ಹೆಚ್ಚಾತು. ಚಂದದ ಗೊಂಬೆ ಹಾಂಗಿತ್ತ ಆರತಿಗೆ ಬಗೆಬಗೆಯ ಡ್ರೆಸ್ ಲಿ ಫೋಟೋ ತೆಗವದು,  ಅದರ  ಫೇಸ್ಬುಕ್ಕಿಗೆ ಹಾಕುವದು ಸ್ಟೇಟಸ್ ಇತ್ಯಾದಿ ಹಾಕುದು ಬಹಳ ಇಷ್ಟ ಅಪ್ಪಲೆ ಸುರು ಆತು. ಇದರಿಂದ ಅದರ ಗೆಳತಿ ಗೆಳೆಯರ ಬಳಗವು ಹೆಚ್ಚು ಆತು. ಒಂಥರಾ ಹೊಸತನವ ಅಪ್ಪಿತ್ತು.
ಆರತಿ ಇಂಜಿನಿಯರಿಂಗ್ ಕಾಲೇಜು ಸೇರಿ ಅಪ್ಪಗ ಬೇಜಾರ ಆದ್ದು ಸಾವಿತ್ರಮ್ಮಂಗೆ. ಒಬ್ಬನೇ ಮನೆಲಿದ್ದು ಕೊರಗಿ ರೋಗಕ್ಕೆ ತುತ್ತಾದವು.  ಅದೊಂದು ದಿನ ಅವು ಇಹಲೋಕ ತ್ಯಜಿಸಿದವು.
ಆರತಿ ಇಂಜಿನಿಯರಿಂಗ್ ಕಾಲೇಜ್ ಲಿ ಓದಿಗೊಂಡು ಇಪ್ಪಗ ಗೋಪಾಲ ರಾಮ್ ಹೇಳುವ ಲೆಕ್ಚರರ್ ಪಾಠ ಮಾಡ್ಲೆ ಬಂದಿತ್ತಿದ್ದ‌. ಅವಾ ಹೊಸದಾಗಿ m-tech ಮುಗಿಸಿ ತಾತ್ಕಾಲಿಕವಾಗಿ ಸೇರಿದವ.  ಒಂದು ಕ್ಷಣಕ್ಕೆ ಆರೂ ತಿರುಗಿ ನೋಡುವ ವ್ಯಕ್ತಿತ್ವ ಅವಂದು. ಕ್ಲಾಸ್ ಲಿ ಪಾಠವ ಕೇಳುತ್ತಾ ಗೋಪಾಲ ಆರತಿಗೆ ಇಷ್ಟ ಆದ. ಆದರೆ  ಹೇಂಗೆ  ಹೇಳುದು? ಹೇಂಗಾರು ತಿಳಿಸಕ್ಕೋಳಿ ಅದು ಕಾದು ಕೂದುಗೊಂಡು ಇತ್ತು
ಒಂದು ದಿನ ನೋಟ್ಸ್ ಲಿ ಅದರ ಇಷ್ಟವ ಬರದು ಮಡುಗಿ ಕೊಟ್ಟತ್ತು. ನೋಟ್ಸ್   ಎಲ್ಲರದ್ದು ಸಿಕ್ಕಿತ್ತು ಎನ್ನದು ಎಂತ ಸಿಕ್ಕಿದ್ದಿಲ್ಲೆ ಹೇಳಿ ಗ್ರೇಶಿಗೊಂಡಿಪ್ಒಗ ಎಟೆಂಡರ್ ಬಂದು ಸ್ಟಾಪ್ ರೂಮಿಗೆ ಬರೆಕ್ಕಡ ಹೇಳಿದ.

” ಆನು ಒಳ ಬಪ್ಪಲಕ್ಕ?” ಬಾಗಿಲತ್ರ ನಿಂದುಗೊಂಡು ಕೇಳಿತ್ತು.
” ಬನ್ನಿ” ಗೋಪಾಲ್ ಬಾಗಿಲಿಂಗೆ ನೋಡದ್ದೆ ಹೇಳಿದ.
” ಎನ್ನ ನೋಟ್ಸ್ ಸಿಕ್ಕಿದಿಲ್ಲೆ. ಅದಕ್ಕೆ ಬಂದೆ ಆನು” ನಿಂದುಗೊಂಡೆ ಹೇಳಿತ್ತು.
“ಓ ಅದಾ ನಿಂಗ ಕಾಲೇಜಿಂಗೆ ಬಪ್ಪದು ಎಂತಕೆ? ಕಲಿವಲಾ ಅಲ್ಲ ಕಲಿಶುವೋರ ಬುಟ್ಟಿಗೆ ಹಾಕುಲಾ? ನೋಡಿ, ಈ ಲವ್ ಗಿವ್ ಎಲ್ಲ ಎನ್ನಂತೋರಿಂಗೆ ಹೇಳಿದ್ದಲ್ಲ. ಪೈಸೆ ಇಪ್ಪೋರಿಂಗೆ ಆಟ ಇದು. ಎನ್ನಂಥ ಬಡವಂಗೆ ಹೇಳಿದ್ದಲ್ಲ,ಮನೆ ಅಪ್ಪ ಅಮ್ಮ‌ಅಣ್ಣಂದಿರುಲ ಮರತ್ತು ಆನು ಒಂದು ತಿಂಗಳು ಕಂಡ ಹುಡುಗಿಯ ಬಲೆಗೆ ಬೀಳೆಕ್ಕಾ? ಎನಗೆ ಜವಾಬ್ದಾರಿ ಇದ್ದು. ಲವ್ ಮಾಡ್ಲಾಗ ಹೇಳ್ತಿಲ್ಲೆ. ಆನಿಲ್ಲೇಳಿ ಹೇಳುಲೆ ಅಷ್ಟೆ ಈ ಪುಸ್ತಕ ಇಲ್ಲಿ ಮಡುಗಿದ್ದು. ಅವಗ ನಿಂಗ ಹೇಂಗೂ ಇಲ್ಲಿಗೆ ಬತ್ತಿ. ಅವಗ ಹೇಳುವಾಳಿ ಅಷ್ಟೆ, ಕ್ಷಮಿಸಿ ” ಮುಗುಳು ನೆಗೆ ಬೀರಿಕ್ಕಿ ಚಂದಲ್ಲಿಯೇ ನೋಟ್ಸ್ ದೇ ಆ ಪತ್ರವ ತಿರುಗಿ ಕೊಟ್ಟ.
ಯಾಕೊ ಆರತಿಯ ಮನಸ್ಸಿಂಗೆ ಅದು ಭಯಂಕರ ನಾಟಿತ್ತು. ನೋಟ್ಸ್ ತೆಕ್ಕೊಂಡು ಹೋಗಿ ಬ್ಯಾಗ್ ಲಿ ಹಾಕಿ ಯೋಚನೆ ಮಾಡ್ಲೆ ಸುರು ಮಾಡಿತ್ತು. ” ಎನಗೆ ಗೋಪಾಲ್ ಸರ್ ಅವರ ತುಂಬಾ ಇಷ್ಟ ಆದ್ದು ನಿಜ. ಹಾಂಗೇಳಿ ಆನು ಶ್ರೀಮಂತಳಾಗಿ ಎನಗೆ ಇದು ಆಟ ಹೇಳಿ ಗ್ರೇಸಿದ್ದವು. ಅಲ್ಲ, ಇದು ನಿಜವಾದ ಪ್ರೀತಿ. ಆನು ಇಂದಿಂದ ಒಳ್ಳೆ ರೀತಿಲಿಯೇ ಇರೆಕ್ಕು. ಕಲ್ತು ಒಳ್ಳೆ ಉದ್ಯೋಗ ಹಿಡಿಯಕ್ಕು. ಅವಕ್ಕೆ ಮೆಚ್ಚುಗೆ ಅಪ್ಪ ಹಾಂಗೆ ಇರೆಕ್ಕು. “ಹೇಳಿ ತೀರ್ಮಾನ ಮಾಡಿ ಮರುದಿನಂದಲೇ ಹಾಂಗೆ ಬದಲಾತು.
ಬದಲಾದ ಆರತಿಯ ಕಂಡಿಕ್ಕಿ ದೀಪಿಕಂಗೆ ರೇಗಿತ್ತು. ” ಇದೆಂತ ನೀನು ಹೀಂಗೆ ಬದಲಾದ್ದು ಮಗ? ನಿನ್ನ ಕಲ್ತಾಯಿಕ್ಕಿ ಅಮೇರಿಕವೋ ಆಸ್ಟ್ರೇಲಿಯಾವೊ ಹೋಪೋಳು. ಅಲ್ಲಿ ಇಪ್ಪದು ಹೇಂಗೆ, ನೀನು‌ ಹೀಂಗೆ ಚೂಡಿದಾರ ಹಾಕಿ‌ ಹೆರ ಹೋದರೆ ಮಹಾಬಲ ಶರ್ಮರ ಮಗಳಾ ಇದು ಕೇಳುವ ಹಾಂಗೆ ಮಾಡೆಡ ಮಗಳೋ..ನಿನ್ನ ಮೇಲೆ ನಿನ್ನಜ್ಜಿ ದೆವ್ವ ಬಂದ ಹಾಂಗೆ ಮಾಡ್ತೆ ನೀನು.” ಕೋಪಲ್ಲಿ ಹೇಳಿ ಅಪ್ಪಗ ಆರತಿ ಬರೀ ನೆಗೆ ಮಾಡಿತ್ತಷ್ಟೆ.ವಿನಃ ಬದಲಾಯಿದಿಲ್ಲೆ. ದೀಪಿಕ ದಿನವೂ ಮಗಳ ಬದಲುಸುಲೆ‌ ನೋಡಿರುದೆ ಆರತಿ ಬದಲಾಗದ್ದಿಪ್ಪಗ “ಆತು, ಎಂತ ಬೇಕಾರು ಮಾಡು “ಹೇಳಿ ಬಿಟ್ಟತ್ತು.
 ಆರತಿ ಈಗ  ಸಣ್ಣ ಇಪ್ಪಗ ಅಜ್ಜಿ ಹೇಂಗೆ ಇರೆಕ್ಕೋಳಿ ಹೇಳಿ ಕೊಟ್ಟಿತ್ತಿದ್ದವೋ ಹಾಂಗೆ ಇಪ್ಪಲೆ ಸುರು ಮಾಡಿತ್ತು. ಹಿರಿಯರಿಂಗೆ ಗೌರವ, ಮೃದು ಮಾತು,ಬಡವರ ಕಂಡರೆ ಕನಿಕರ ತೋರುದು ಇದರಿಂದ ಆರತಿಯ ಎಲ್ಲರುದೆ ಹಚ್ಚುಲೆ ಸುರು ಮಾಡಿದವು.

ಆರತಿ ಬದಲಾದ್ದು ಗೋಪಾಲ ಗಮನಿಸಿಗೊಂಡು ಇತ್ತಿದ್ದ.  ಅವ ಮನಸ್ಸಿನ  ಒಳಂದಲೇ ಅದರ  ಪ್ರೀತಿಸುಲೆ ಸುರು ಮಾಡಿದ. ಆದರೆ ಅದರ ತೋರುಸುಲೆ ಎಡಿಯದ್ದ ಪರಿಸ್ಥಿತಿ. ಅವಂಗೆ ಗೊಂತಿದ್ದು ಆರತಿಯ ನೆಲೆ ಬೆಲೆ. ಆನು ಒಬ್ಬ ಕೃಷಿಕನ ಮಗ. ಪ್ರೀತಿಸುವಗಳುದೆ ಆಕಾಶಕ್ಕೆ ಏಣಿ ಕಟ್ಟದ್ದ ಹಾಂಗಿಪ್ಪ ಆಶೆಗಳ ಎನಗೆ ಪೂರೈಸುಕೆ ಎಡಿಯದ್ದೋನು. ಹಾಂಗಾಗಿ ದೂರ ಇಪ್ಪದೇ ಒಳ್ಳೆದು ಹೇಳಿ ಪ್ರೀತಿಯ ಮನಸ್ಸಿಲೇ ಮಡಿಕೊಂಡಿತ್ತಿದ್ದ.
ಒಂದು ದಿನ ಸಡನ್ ಗೋಪಾಲ ಸರ್ ಜಾಗಗೆ ಬೇರೆ ಲೆಕ್ಚರರ್ ಬಪ್ಪದು ಸುರು ಮಾಡಿ ಅಪ್ಪಗ ಗೊಂತಾತು ಅವು ಬೇರೆ ಕಡೆ ಹೋಯಿದ ಹೇಳಿ. ಆರತಿಗೆ ತುಂಬಾ ಕೂಗುಲೆ ಬಂತು. ಮನೆಗೆ ಬಂದಿಕ್ಕಿ ಇರುಳಿಡೀ ಕೂಗಿಕೊಂಡೆ ಇತ್ತು . ‘ಅನು ಎಷ್ಟು ಬದಲಾದೆ ನಿಂಗಾಗೆ ಬೇಕಾಗಿ ,ಎನ್ನ ಬದಲಿಸಿದ ನಿಂಗಳ ಜೀವನಕ್ಕೆ ಬರಕೊಳಿ ಎಷ್ಟು ಆಸೆ ಪಟ್ಟೆ. ನಿಂಗ ಹೋದರು ಅನು ಹೀಂಗೆ ಇಪ್ಪದು. ಎನಗೆ ಮದುವೆ ಆಗದ್ದರು ತೊಂದರೆ ಇಲ್ಲ’ ಏನೆಲ್ಲ ಯೋಚಿಸುತ್ತಾ ಅವನದೇ ನೆನಪಿಲಿ‌ ವರಕ್ಕಿಂಗೆ ಜಾರಿತ್ತು.****
ಅದೊಂದು ದಿನ ದೀಪಿಕಾಗೆ ಪೋನ್  ಬಂತು.
“ದೀಪಿಕ ನ ಇದು”
“ಅಪ್ಪು ಆರು?”
“ಅನು ವಿಶಾಲ ಹೇಳಿ. ನಿಂಗಳ ಫ್ರೆಂಡು ಸುಮನ ಹೇಳಿದ್ದಲ್ಲದ ಅದರ  ಫ್ರೆಂಡ್ . ನಿಂಗಳ ಮಗಳ ಕಳೆದ ವರುಷ ಫಾರ್ಚುನ್ ಹೋಟೆಲ್ ಪಾರ್ಟಿಲಿ ನೋಡಿತ್ತಿದ್ದೆ. ನಿಂಗ  ಮಗಳ ಮದುವೆ ಮಾಡುವ ಆಲೋಚನೆ ಇದ್ದರೆ ಎನ್ನ ಮಗಂಗೆ ಮಾತಾಡ್ಸುವಾಳಿ ಪೋನ್ ಮಾಡಿದ್ದು.”
” ಈಗ ಅದರ ಇಂಜಿನಿಯರಿಂಗ್ ನ ಅಕೆರಿಯಣ ಸೆಮ್. ಇದು ಕಳುದ ಕೂಡ್ಲೇ ಮದುವೆ ಮಾಡ್ಲೆ  ಅಂದಾಜು ಮಾಡಿದ್ದೆಯ. ಆನು ಹೀಂಗೆ ಹೇಳ್ತೇಳಿ ಎಂತ ಗ್ರೇಸೆಡಿ. ಅದರ ಅಮೇರಿಕ್ಕಲ್ಲಿಪ್ಪೋರಿಂಗೆ ಕೊಡುದು” ಕಡ್ಡಿ ತುಂಡಾದ ಹಾಂಗೆ ದೀಪಿಕ ಹೇಳಿ ಅಪ್ಪಗ ವಿಶಾಲ ಹೇಳಿತ್ತು ” ಎನ್ನ ಮಗ ಅಮೇರಿಕಲ್ಲೇ ಇಪ್ಪದು. ದೊಡ್ಡ ಹುದ್ದೆ, ಕಾರು ಮನೆ ಆಳುಕಾಳು ಎಂಗಗೆ ವರುಷಕ್ಕೆ ಹೋಪ ವ್ಯವಸ್ಥೆ ಎಲ್ಲಾ ಇದ್ದು”
ಅವಗ ದೀಪಿಕನ ಕೆಮಿ ಕುತ್ತ ಆತು ಮಾತು ನಯ ಆತು. ” ಹಾಂಗಾರೆ ಒಂದರಿ ನೋಡೆಕ್ಕನ್ನೆ ಮಾಣಿಯ” ಹೇಳಿ ಕೇಳಿಯೇ ಬಿಟ್ಟತ್ತು.
” ನಿಂಗಗೆ ಈಗಲೇ ನೋಡೆಕ್ಕೋಳಿ ಆದರೆ ಅವನ ಎಲ್ಲಾ ವಿವರಂಗ ಮ್ಯಾಟ್ರಿಮೋನಿಲಿದ್ದು. ಒಳುದ್ದು ಬೇಕಾರೆ ಅವನತ್ರ ಕೇಳಿ ನಿಂಗಗೆ ರಜ ಹೊತ್ತಿಲಿ ಕಳುಸುತ್ತೆ ಆಗದ” ಹೇಳಿ ಮ್ಯಾಟ್ರಿಮೊನಿ ಸೈಟ್ ಹೇಳಿಕ್ಕಿ ವಿಶಾಲ ಪೋನ್ ಮಡುಗಿತ್ತು.
ದೀಪಿಕಂಗೆ ಅವನ ನೋಡೆಕ್ಕೋಳಿ ಮಗಳ ರೂಮಿಂಗೆ ಓಡಿತ್ತು. ” ಮಗಳೋ ಈ ಸೈಟ್ ಓಪನ್ ಮಾಡು ನಿನಗೊಂದು ತೋರ್ಸುತ್ತೆ” ಹೇಳಿ ಮಗಳತ್ರ ನೋಡುಲೆ ಹೇಳಿತ್ತು. ಅಮ್ಮನ ಮೊಬೈಲ್ ತೆಗದು ಆರತಿ  ಸೈಟ್ ನೋಡಿತ್ತು.ಮೋರೆ ಬಿಳುಚಿತ್ತು.
” ಅಮ್ಮಾ..ಎನಗೆ ಈಗ ಮದುವೆ ಬೇಡ. ಆನು ನೋಡ್ತಿಲ್ಲೆ” ಹೇಳಿಗೊಂಡೆ ಅಮ್ಮಂಗೆ ಬೇಕಾಗಿ ಕೆಳಕೆಳ ಹೋವ್ತಾ ಇಪ್ಪಗ ಅಲ್ಲಿ ಗೋಪಾಲ ರಾಮ ಹೇಳಿ ಹೆಸರು ಪೊಟೊ ನೋಡಿ ನಿಲ್ಸಿತ್ತು ಆರತಿ.
” ಇವ ಅಲ್ಲಾಳಿ.ಇನ್ನುದೆ ಕೆಳಹೋಗು.ಶ್ರೀವತ್ಸ ಹೇಳಿ ಹೆಸರು ಕೆಳ ಹೋಗು..” 
ದೀಪಿಕ ಅವನ ಐಡಿ ಕಂಡಪ್ಪಗ ನಿಲ್ಸುಲೆ ಹೇಳಿತ್ತು.
” ಇವನೇ ಇದ. ಎಷ್ಟು ಶ್ರೀಮಂತರು. ನೋಡು ಕಾಂಬಲುದೆ ಚಂದ ಇದ್ದ. ಮಗಳೋ..ನೋಡು ಇದ ಇವನ ” ದೀಪಿಕ ಎಂತ ಹೇಳಿತ್ತೋ ಆರತಿಗೆ ಗೊಂತೇ ಆಯಿದಿಲ್ಲೆ. ಅದಕ್ಕೆ ಅಮ್ಮ ಒಂದರಿ ಇಲ್ಲಿಂದ ಹೋದರೆ ಸಾಕೋಳಿ ಕಂಡುಗೊಂಡಿತ್ತು. ಅದಕ್ಕೆ  ಗೋಪಾಲ ರಾಮನ ಐಡಿ ನೋಡೆಕ್ಕಿತ್ತು. 
” ಅಕ್ಕಮ್ಮ, ನೀನು ಮೊಬೈಲ್ ಇಲ್ಲಿ ಮಡುಗಿ ಹೋಗು. ರಜ ಕಳುದು ನೋಡ್ತೆ ಆತ” ಹೇಳಿ ಅಪ್ಪಗ ದೀಪಿಕಂಗೆ ಭಾರೀ ಖುಷಿ ಆಗಿ ಮೊಬೈಲ್ ಮಗಳಿಂಗೆ ಕೊಟ್ಟಿಕ್ಕಿ ಹೆರ ಹೋತು.
ಆರತಿ ಗೋಪಾಲನ ಡೀಟೈಲ್ಸ್ ನೋಡಿತ್ತು. ಅಮೇರಿಕಾಲ್ಲಿ ಕೆಲಸಲ್ಲಿದ್ದಾಳಿತ್ತು. ” ನಿಂಗ ಎನ್ನ ಮರತರುದೆ ಆನು ನಿಂಗಳ ಮರತಿದಿಲ್ಲೆ, ಎನಗೆ ಜೀವನ ಹೇಳಿ ಇದ್ದರೆ ಅದು ನಿಂಗಳ ಒಟ್ಟಿಂಗೆ ಮಾತ್ರ” ಹೇಳಿಗೊಂಡು ಅವನ ಪೊಟೊವ ಕಣ್ಣಿಂಗೆ ಒತ್ತಿತ್ತು.
ದೀಪಿಕಂಗೆ ಖಡಾಖಂಡಿಯವಾಗಿಯೂ ಆನು ಮದುವೆ ಆವ್ತರೆ ಗೋಪಾಲ ರಾಮನನ್ನೇ ಹೇಳಿ ಮಗಳು ಆರತಿ ಹೇಳಿ ಅಪ್ಪಗ ಬೇರೆ ದಾರಿ ಇಲ್ಲದ್ದೆ ದೀಪಿಕ ಅವನ ಬಗ್ಗೆ ವಿಚಾರ್ಸಿತ್ತು.
ಮಂಗಳೂರು ಹತ್ತರೆ ಇಪ್ಪ ಪೆರ್ಲಗುರಿ ಹೇಳುವ ಹಳ್ಳಿಲಿ ರಾಮಚಂದ್ರ ಭಟ್ ಪಾರ್ವತಿ ಅಮ್ಮನ ನಾಲ್ಕು ಜನ ಮಾಣಿಯಂಗಳಲ್ಲಿ ಗೋಪಾಲ ರಾಮ ಅಕೆರಿಯವ‌. ಅವನ ಬಿಟ್ಟು ಒಳುದೋರಲ್ಲಿ ಇಬ್ರು ಊರಿಲಿಯೇ ಮಾಷ್ಟ್ರಕ್ಕ. ದೊಡ್ಡ ಮಗ ತೋಟ ನೋಡಿಗೊಂಡಿತ್ತಿದ್ದ. ಅವರದ್ದು ಕೂಡುಕುಟುಂಬ. ಪಾಲು ಆಗದ್ದೆ ಇರೆಕ್ಕೋಳಿ ಮನೆಯ ಎಲ್ಲರ ಆಸೆಯುದೆ. ಮಕ್ಕ ಪುಳ್ಳಿಯಕ್ಕ ಹೇಳಿ ಕಲರವವೇ ಮನೆಯ ಒಳ ಇತ್ತಿದ್ದು.ಸಣ್ಣವ ಗೋಪಾಲರಾಮ ಕಲ್ತು ಕಾಲೇಜಿಲಿ ಲೆಕ್ಚರರ್ ಆಗಿಪ್ಪಗ ಅಮೇರಿಕಂದ ಒಳ್ಳೆ ಆಫರ್ ಬಂದು ಅಲ್ಲಿಗೆ ಹಾರಿದ್ದ.
ದೀಪಿಕಂಗೆ ಇದು ಇಷ್ಟವೇ ಇತ್ತಿಲ್ಲೆ. ಮಗಳ ಹಠಕ್ಕೆ ಒಪ್ಪಿದ್ದು ಒಂದೇ ಕಾರಣಕ್ಕೆ ಅಳಿಯಪ್ಪ ಮಾಣಿ ಅಮೇರಿಕಾಲಿದ್ದಾಳಿ.
ಅಂತೂ ಜಾತಕ ಅತ್ಲಾಗಿ ಇತ್ಲಾಗಿ ಹೋಗಿ ಎಲ್ಲ ಅಕ್ಕೋಳಿ ಆಗಿ ಬದ್ಧಕ್ಕೆ ಗೋಪಾಲ ಅಮೇರಿಕಾಂದ ಬಂದ. ಎಲ್ಲರುದೆ ಸ್ಟೂಡೆಂಟನ್ನೇ ಮದುವೆ ಅಪ್ಪದೋಳಿ ತಮಾಷೆ ಮಾಡಿದವು. ಆದರೆ ಅವರಿಬ್ಬರ ಮನಸಿಲಿದ್ದ ಪ್ರೀತಿ ಅವು ಸರಿಯಾಗಿ  ವ್ಯಕ್ತ ಪಡಿಸಿದ್ದು ಬದ್ದದ ದಿನವೇ ಹೇಳುಲಕ್ಕು.
ಮದುವೆ ಕಳುತ್ತು. ಆರತಿ ಅಮೇರಿಕಾಕ್ಕೆ ಹಾರಿತ್ತು.ಅನುರೂಪ ದಂಪತಿಗಳಾಗಿ ಗೋಪಾಲ ಆರತಿದೆ ಇತ್ತಿದ್ದವು.ಆರತಿ ಮದುವೆ ಆಗಿ ಒಂದು ವರುಷಲ್ಲೇ ಮಾಣಿ ಬಾಬೆಗೆ ಜನ್ಮಕೊಟ್ಟತ್ತು.
ದೀಪಿಕಂಗೆ ಆರತಿಯ ಬಾಣಂತನಕ್ಕೆ ಹೋಗಿ ಬಂದದು ಅಮೇರಿಕದ ಬಗ್ಗೆ ಎಲ್ಲರತ್ರ ಕೊಚ್ಚುದೇ ಕೆಲಸ. ಆದರೆ ಆರತಿ ಕಷ್ಟವ ಅನುಭವಿಸುಲೆ ಸುರು ಮಾಡಿದ್ದು ಈಗಲೇ.. ಅದಕ್ಕೆ ಮಗು ಎಲ್ಲರ ಹಾಂಗೆ ಇಲ್ಲೇಳಿ ಕಾಂಬಲೆ ಸುರು ಆಗಿತ್ತು.
ಅಮೇರಿಕಲ್ಲಿ ಡಾಕ್ಟರ್ ಹತ್ರ ತೋರ್ಸಿ ಅಪ್ಪಗ ಮಗುವಿಂಗೆ ಎಂತ ಸಮಸ್ಯೆ ಹೇಳಿ ಗೊಂತಾವ್ತಿಲ್ಲೆ. ಮಗು ರಜ ದೊಡ್ಡ ಆಗಲಿ ಅವಗ ಹೇಳುಲಕ್ಕಷ್ಟೆ ಹೇಳಿ ಕಳುಹಿಸಿದವು. ಆದರೆ ಅಮ್ಮ ಆದ ಆರತಿಗೆ ಮಗ ಮಕ್ಕಳ ಮಾಮೂಲಿ ಆಡುವ ಆಟಲ್ಲಿದೆ ಹಿಂದೆ ಇದ್ದಾಳಿ ಕಂಡತ್ತು.ಗೋಪಾಲ ಉದ್ಯಪ್ಪಗ ಹೋದರೆ ಕಸ್ತಲಪ್ಪಗಳೇ ಬಪ್ಪದು. ಅವನತ್ರ ಹೆಚ್ಚು ಹೇಳುಲೂ ಎಡಿಯದ್ದ ಪರಿಸ್ಥಿತಿ ಆರತಿಗೆ. ಊರಿಲಿ ದೀಪಿಕ ಮಾತ್ರ ಅಳಿಯನ ದುಡಿಮೆಯ ಬಗ್ಗೆಯೇ ಕಣ್ಣು ಇದ್ದದ್ದು ಅಲ್ಲದ್ದೆ ಪುಳ್ಳಿಯ ಬಗ್ಗೆ ತಲೆಬಿಸಿಯೇ ಇಲ್ಲೆ.
” ಅಮ್ಮ, ಆನು ರಜ ಸಮಯ ಊರಿಂಗೆ ಬತ್ತೆ”ಮಗಳು ಹೇಳಿ ಅಪ್ಪಗ ದೀಪಿಕಂಗೆ ಭಾರೀ ಖುಷಿ ಆತು. ” ನಿನ್ನ ಕಾಯ್ತಾ ಇದ್ದೆ ಬಾ ಮಗಳೋ” ಹೇಳಿ ಕಾದು ಕೂದತ್ತು.
ಗೋಪಾಲ ಹೆಂಡತಿ ಮಗನ ಊರಿಂಗೆ ಕಳಿಸಿದ.
ಊರಿಂಗೆ ಬಂದಪ್ಪಗ ದೀಪಿಕಂಗೆ ಪುಳ್ಳಿಯ ನೋಡಿ ಕಕ್ಕಾಬಿಕ್ಕಿ. ಅದು ಎಲ್ಲರತ್ರ ಮಗಳು ಪುಳ್ಳಿ ಬಂದಿಪ್ಪಗ ಪಾರ್ಟಿ ಮಾಡುವ ಹೇಳಿತ್ತು. ಆದರೆ ಈಗ ಹೀಂಗಿಪ್ಪ ಮಗುವಿನ ಫ್ರೆಂಡ್ ಸರ್ಕಲ್ ಲಿ ತೋರ್ಸಿರೆ ಎನಗೆ ಮರ್ಯಾದೆ ಕಮ್ಮಿ ಅಕ್ಕೋಳಿ ” ಆರತಿ, ಪ್ರಣವನೊಟ್ಟಿಂಗೆ ಕೆಲಸದ್ದರ ಬಿಟ್ಟಿಕ್ಕಿ ಹೋಪ. ಎನ್ನ ಪ್ರೆಂಡ್ಸ್ ಗ ಇವನ ನೋಡಿರೆ ಅವಕ್ಕೆ ಎಂತ ಉತ್ತರ ಕೊಡುದು” ಅಮ್ಮ ಹಾಂಗೆ ಹೇಳಿ ಅಪ್ಪಗ ಆರತಿಗೆ ತುಂಬಾ ಬೇಜಾರಾತು. ಆರತಿ ಬತ್ತಿಲ್ಲೆ ಬತ್ತಿಲ್ಲೇಳಿ ಬಗೆತ್ತರ ಹೇಳಿರುದೆ ದೀಪಿಕ ಮಗಳ ಎಳಕ್ಕೊಂಡು ಹೋತು. ಪಾರ್ಟಿ ಮುಗಿಶಿ ಬಂದಪ್ಪಗ ಮಗನ ನೋಡಿರೆ ಅವ ಕೆಲಸದ್ದರೊಟ್ಟಿಂಗೆ ಕೇಳದ್ದೆ ಭಯಂಕರ ರಂಪ ಮಾಡಿತ್ತಿದ್ದ. ಮಗನ ಆರತಿ ಅದರ  ಎದೆಗೆ ಅಪ್ಪಿ” ಅಮ್ಮಾ, ಎನಗೆ ಈ ಪಾರ್ಟಿ ಎಲ್ಲ ಬೇಡಮ್ಮ.  ಎನಗೆ ಎನ್ನ ಮಗನ ಬಗ್ಗೆಯೇ ಯೋಚನೆ”ಹೇಳಿ ಎನ್ನ ಇನ್ನು ಹೀಂಗೆ ದೆನಿಗೇಳಡಾಳಿ ದಯನೀಯವಾಗಿ ಹೇಳಿತ್ತು.
ಆರತಿಯ ಗೆಳತಿ ಶ್ರೀವಿದ್ಯ ಆಯುರ್ವೇದಿಕ್ ಡಾಕ್ಟರ್. ಅದು ಒಂದು ದಿನ ಆರತಿಯ ನೋಡ್ಲೆ ಬಂದಿತ್ತು. ಅದರತ್ರ ಮಗನ ಬಗ್ಗೆ ಹೇಳಿ ” ಎಂತಾಳಿ ಗೊಂತಾವ್ತಿಲ್ಲೆ ಎನ್ನ ಮಗ ಯಾಕೆ ಹೀಂಗೆಯೊ? ಬೆಳವಣಿಗೆಯ ಸಮಸ್ಯೆಯಾ ಬೌದ್ಧಿಕ ಸಮಸ್ಯೆಯಾ? ಡಾಕ್ಟರ್ ಲ್ಲಿಗೆ ಹೋಪಾಳಿರೆ ಅಮ್ಮ‌ಬೈತ್ತು. ಅಪ್ಪನತ್ರ ಹೇಳಿರೆ ಅಮ್ಮನತ್ರ ಹೇಳು ಮಗಳೋ ಹೇಳ್ತವು. ಈಗ ಎನಗೆ ಎನ್ನಜ್ಜಿಯ ನೆಂಪು ಅವ್ತು. ಅವರೊಟ್ಟಿಂಗೆ ಅಷ್ಟಾದರೂ ಬೆಳದ ಕಾರಣ ಆನು ಹೀಂಗಾರುದೆ ಇದ್ದೆ. ಇಲ್ಲದ್ದರೆ ಆನುದೆ ಅಮ್ಮನ ಹಾಂಗೆ ಆವ್ತಿತೆ”ಹೇಳಿ ಕೂಗಿತ್ತು.
” ಕೂಗೆಡ ಆರತಿ. ಇಂಥದ್ದಕ್ಕೆ ಮದ್ದು ಮಾಡುದಲ್ಲ. ಮಕ್ಕಳ ಮಕ್ಕಳೊಟ್ಟಿಂಗೆ ಬೆರವಲೆ ಬಿಡೆಕ್ಕು.ಎನ್ನತ್ರ ಒಂದು ಪೆಷೆಂಟ್ ಬಂದಿತ್ತು. ಆ ಮಗುದೆ ಶಾರೀರಿಕ ಮಾನಸಿಕ ಬೆಳವಣಿಗೆಲಿ ರಜ ಹಿಂದೆ ಇದ್ದ. ಅದರ ಮನೆಲಿ ಎಲ್ಲರುದೆ ಒಳ್ಳೆಯವೇ. ಹಾಂಗಾಗಿ ಆ ಮಗು ಎಲ್ಲರೊಟ್ಟಿಂಗೆ ಬೆರವಲೆ ಸುರು ಮಾಡಿದ ಮೇಲೆ ಹುಶಾರಾಯಿದ. ಹಾಂಗಾಗಿ ನೀನು ನಿನ್ನ ಮನಗೆ ಹೋಗು. ಅಲ್ಲಿ ಮಕ್ಕ ಇದ್ದವಲ್ಲದ. ಅವರೊಟ್ಟಿಂಗೆ ಬೆರದರೆ ಹುಶಾರಕ್ಕು” ಹೇಳಿ ದಾರಿ ತೋರ್ಸಿತ್ತು.
ಶ್ರೀವಿದ್ಯ ಹೇಳಿದ ಹಾಂಗೆ ಆರತಿ ಅಮ್ಮನತ್ರ ಅದರ ಮನಗೆ ಹೋಪ ಬಗ್ಗೆ ಪ್ರಸ್ತಾಪಿಸಿತ್ತು.
” ಇದು ನಿನ್ನ ಮನೆ ಅಲ್ದ ಮಗಳೋ” ಮಗಳು ಕೈಬಿಟ್ಟು ಹೋವ್ತೋಳಿ ಆತು ದೀಪಿಕಂಗೆ.
” ಇದು ಎನ್ನ ಅಪ್ಪ ಅಮ್ಮನ ಮನೆ. ಎನ್ನ ಮನೆಲಿ ಎನ್ನ ಅತ್ತೆ ಮಾವ ಅಕ್ಕ ಭಾವಂದಿರು ಮಕ್ಕ ಎಲ್ಲರೂ ಎನ್ನನ್ನು ಪ್ರಣವನನ್ನೂ ಕಾಯ್ತಾ ಇದ್ದವು” ಹೇಳಿ ಬ್ಯಾಗ್ ಕಟ್ಟಿತ್ತು.


**


ಕಾರು ಡಾಮರ್ ಮಾರ್ಗಂದ ಒಳರೋಡಿಂಗೆ ತಿರುಗಿತ್ತು.ಹಸಿರು ಹಸಿರಾದ ಹಳ್ಳಿ. ಅಲ್ಲಲ್ಲಿ ಮೇವ ದನ ಎಮ್ಮೆಗಳನ್ನೆ ನೋಡಿಗೊಂಡಿತ್ತ ಪ್ರಣವ.
ಕಾರು ಗೇಟಿನ ಎದುರು‌ಬಂದು ನಿಂದಪ್ಪಗ ಮಕ್ಕ ಓಡಿ ಬಂದು ಗೇಟ್ ತೆಗದವು. ಸೊಂಟಕ್ಕೆ ಕುತ್ತಿದ್ದ ಸೀರೆಯ ಕೆಳಮಾಡಿ ಪಾರ್ವತಿ ಅಮ್ಮ ಜಾಲಿಂಗೆ ಬಂದವು. ರಾಮಚಂದ್ರ ಶರ್ಮರು ತೋಟಕ್ಕೆ ಹೋಗಿ ಬಂದದಷ್ಟೆ. ಗಾಳಕುರುವೆಲಿದ್ದ ಪೂಂಬಾಳೆ ಅಡಕ್ಕೆ ಬೇರೆ ಬೇರೆ ಮಾಡಿ ಕೈ‌ತೊಳದು ಕಾರಿನ ಹತ್ರ ಬಂದವು.
ಮಕ್ಕಳ ಕಂಡಿಕ್ಕಿ ಆರತಿಗೆ ಭಾರೀ ಖುಷಿ ಆತು. ಅತ್ತೆ ಮಾವನ ನೋಡಿಕ್ಕಿ ನೆಗೆ ಮಾಡಿಗೊಂಡೆ ಅವರತ್ರ ಬಂತು.
” ಎನ್ನ ತಮ್ಮ..ತಮ್ಮನ ಆನು ಎತ್ತುತ್ತೇ ” ಹೇಳಿ ಭಾವನ ಮಗಳು ನೀತು ಪ್ರಣವನ ಎತ್ತಿಗೊಂಡೆ ಒಳ ಓಡಿತ್ತು.
ಬ್ಯಾಗ್ ತೆಗವಲೆ ದೊಡ್ಡ ಭಾವ ಓಡಿ ಬಂದವು ”  ಆರತಿ ಕಷ್ಟ ಆತಾ ಪ್ರಯಾಣ” 
ಒಳ ಬಂದಪ್ಪಗ ಮೂರು ಜನ ಅಕ್ಕಂದಿರುದೆ ಮಾತಾಡ್ಸುಲೆ ಹೆರಬಂದವು.
ಎದುರು ಇಳಿಸಿ ಕಟ್ಟಿದ ಹೆರಜೆಗಿಲಿ, ಹಳೆಯ ಹಂಚಿನ ಮನೆ. ಅಲ್ಲಲ್ಲಿ ಮಣ್ಣಿನ ಗೋಡೆಯ ಮೂಲೆಲಿ ವರಳೆ ಪುಂಚ ಕಟ್ಟಿದ್ದತ್ತು. ಅಲ್ಲಲ್ಲಿ ಸಾಲಿಗ, ಹಲ್ಲಿಗಳುದೆ ಎಂಗ ಇದ್ದೆಯ ಇಲ್ಲಿ ಹೇಳಿಗೊಂಡಿತ್ತಿದ್ದವು. ಮದುವೆ ಆಗಿ ಇಲ್ಲಿ ಎರಡು ದಿನ ಮಾತ್ರ ಇದ್ದದು ಹಾಂಗಾಗಿ ಇದಕ್ಕೆಲ್ಲ ಹೆಚ್ಚು ಗಮನ ಕೊಡ್ಲೆ ಆಗಿತ್ತಿದ್ದಿಲ್ಲೆ. ಈಗ ಈ ಮನೆಲಿ ಹೇಂಗಿಪ್ಪದಪ್ಪಾಳಿ ಆತು ಆರತಿಗೆ. ಆದರೆ ಮಗಂಗೆ ಬೇಕಾಗಿ ಇರೆಲೇಬೇಕಷ್ಟೆ ಹೇಳಿ ಗಟ್ಟಿ ಮನಸ್ಸು ಮಾಡಿ ಆರತಿ ಬೇರೆ ಯೋಚನೆ ಮಾಡ್ಲೇ ಹೋತಿಲ್ಲೆ.
ಮನೆಯೋರ ಉಪಚಾರವೇ ಉಪಚಾರ. ಚಿಕ್ಕಮ್ಮನುದೆ ತಮ್ಮನುದೆ ಬಂದ ಕಾರಣ ಪಾಯಸ ಆಯೆಕ್ಕೋಳಿ ಆತು. ಎಲ್ಲರೂ ಸೇರಿ ಬಾಳೆ ಎಲೆಲಿ ಮಧ್ಯಾಹ್ನ ಉಂಡವು. ಪ್ರಣವನ ನೆಲಲ್ಲಿ ಬಿಡದ್ದೆ ಇದ್ದತ್ತು ನೀತು. ಅದಕ್ಕೆ ಮಕ್ಕಾಳಿರಾತು.ಮಕ್ಕಳ ಹೇಂಗೆ ಬೇಕಾರು ಮಂಕಡ್ಸಿ ಕೊಂಗಾಟ ಮಾಡಿ ಸುಧಾರ್ಸುವ ಕೂಸು.
ಗೋಪಾಲನ ದೊಡ್ಡ ಅಣ್ಣನ ಮಗ ದೊಡ್ಡವ ಪ್ರಸಾದ ಅವ ಆತು ಅವನ ಕೆಲಸ ಆತು. ಸಣ್ಣವ ಕುಮಾರ ಮಹಾ ಪೋಕ್ರಿ. ಎರಡನೆ ಅಣ್ಣಂಗೆ ಮಕ್ಕ ಇಲ್ಲೆ. ಸಣ್ಣ ಅಣ್ಣನ ಮಗಳು ನೀತು ಮನೆಯೋರ ಕಣ್ಮಣಿ.
ಸೊಸೆ ಪುಳ್ಳಿ ಬಂದಪ್ಪಗ ಮನೆಲಿಪ್ಪ ಲಾಯಿಕ ರೂಮನ್ನೇ ಅತ್ತೆ ಕೊಟ್ಟವು.ಅದರಲ್ಲಿ ಇದ್ದ ಎರಡನೆ ಭಾವನುದೆ ಅಕ್ಕನುದೆ ಉಂಬಜೆಗಿಲಿ ಹತ್ತರೆ ಇದ್ದ ಕೋಣೆಗೆ ಶಿಫ್ಟ್ ಆದವು.
ಮನೆಯೋರ ಪ್ರೀತಿ, ಮುಗ್ಧ ಮನಸ್ಸು ಎಲ್ಲವೂ ಆರತಿಗೆ ಹಿಡುದಿತ್ತು.ದಿನಂದ ದಿನಕ್ಕೆ ಅದು  ಮನೆಲಿ ಹೊಂದಿಗೊಂಬಲೆ ಸುರು ಆತು.ಪ್ರಣವನುದೆ ನೀತು ಒಟ್ಟಿಂಗೆ ಒಳ್ಳೆ ಹೊಂದಿಗೊಂಡ.ಅವನ ಎಲ್ಲೋರು ಎತ್ತೂವೋರೆ. ಕೆಳ ಬಿಡದ್ದೆ ಹೊತ್ತುಗೊಂಡೆ ದೊಡ್ಡಪ್ಪಂದಿರು ನಡವೋರು. ಹಾಂಗಾಗಿ ಈಗ ಅವನೇ ಮನೆಯ ಕೊಂಡಾಟದ ಮಾಣಿ ಆದ.
ಮಕ್ಕಳೊಟ್ಟಿಂಗೆ ಆಡುಲೆ ಸುರು ಮಾಡಿ ಅವು ಹೇಳಿಕೊಟ್ಟ ಹಾಂಗೆ  ಅಜ್ಜ ಅಜ್ಜಿ ದೊಡ್ಡಪ್ಪ ದೊಡ್ಡಮ್ಮ ಅಣ್ಣ ಅಕ್ಕ ಹೇಳುದರ ಕಲ್ತ. ಹತ್ತರೆ ಇಪ್ಪ ತೋಡಿಂಗೆ ಆರತಿ ಕರಕ್ಕೊಂಡು ಹೋವುತಿತು.ಅದರಲ್ಲಿ ನೀರಿಲಿ ಆಡ್ತಿತು. ಅದರ ನೋಡಿ ಅವನುದೆ ಆಡ್ಲೆ ಸುರು ಮಾಡಿದ. ನೀತು ದೋಣಿ ಮಾಡಿದ್ದರ ನೀರಿಲಿ ಬಿಡ್ತಿತ. ದೊಡ್ಡ ದೊಡ್ಡಪ್ಪನೊಟ್ಟಿಂಗೆ ಗೆದ್ದಗೆ ಹೋಗಿ ಪೈರು ಮುಟ್ಟಿಕ್ಕಿ ಅದರ ಪರಿಮಳ ಮೂಸ್ತಿದ್ದ. ಹೊತ್ತೋಪಗ ಅಜ್ಜಿ ಒಟ್ಟಿಂಗೆ ದೀಪ ಹೊತ್ತಿಸಿಕ್ಕಿ ಎಲ್ಲರ ಒಟ್ಟಿಂಗೆ ಭಜನೆಗೆ ಕೂರ್ತಿತ.ತುಲಸಿಗೆ ದೀಪ ಮಡುಗಿ ಹರೇರಾಮ ನಾಮ ಹೇಳುವಲ್ಲಿವರೆಗೆ ಪ್ರಣವ ಹುಶಾರಾದ.
ಎರಡು ತಿಂಗಳಿಲಿ ಪ್ರಣವನ ಬೆಳವಣಿಗೆ ಬಹಳವಾಗಿ ವೃದ್ಧಿ ಆತು. ” ಬಹುಶಃ ಆನು ಅಮ್ಮನ ಮಾತು ಕೇಳ್ತಿದ್ದರೆ ಎನ್ನ ಮಗನ ಕಳಕ್ಕೊಳೆಕ್ಕಿತ್ತು. ಕೂಡು ಕುಟುಂಬಲ್ಲಿ ಸಂಸ್ಕಾರ , ಸಂಸ್ಕೃತಿ, ಹಂಚಿ ತಿಂಬದು, ಜೀವನದ ಮೌಲ್ಯಂಗ ಎಲ್ಲವೂ ಕಲಿವಲಾವ್ತು.ಒಬ್ಬನೆ ಬೆಳದೆ ಎನಗೆ ಇದೆಲ್ಲ ಸಿಕ್ಕಿದ್ದು ಈ ಮನೆಲಿ. ಆನು ಇಂಜಿನಿಯರಿಂಗ್ ಕಲ್ತಿದೆ. ಆದರೆ ಜೀವನದ ಮೌಲ್ಯಂಗಳ ಕಲಿವಲೆ ಆಯಿದೇ ಇಲ್ಲೆ. ಎನ್ನಮಗಂದಾಗಿ ಇದರ ಎಲ್ಲ ಕಲ್ತೆ. ಈ ದೊಡ್ಡ ಸಂಸಾರ ಎನ್ನ ಮನೆ ಹೇಳುಲೆ ಹೆಮ್ಮೆ ಆವುತ್ತು. ಈ ಮನೆಯೋರ ಕಾಂಬಗ ನಿಜಕ್ಕೂ ಧನ್ಯತೆಯ ಅನುಭವ. ಇವು ಈಗ ಇಲ್ಲಿ ಇರ್ತಿದ್ದರೆ ಪ್ರಣವನ ಬೆಳವಣಿಗೆ ಬಾಯಿಲಿ ಹೇಳುದರಿಂದ  ಹೆಚ್ಚು ಪ್ರತ್ಯಕ್ಷ  ನೋಡಿರೆ ಎಷ್ಟು ಖುಷಿ ಪಡ್ತಿದ್ದವೋ..”ಎಲ್ಲವೂ ನೆಂಪಾಗಿ ಅದರ ಕಣ್ಣು ತುಂಬಿ ಬಂತು. ಅದರ ಉದ್ದಿಕ್ಕಿ ಕೂದುಗೊಂಡಿದ್ದ ಬಾಜಿರೆ ಕಂಬಂದ ಮೇಲಂದ ಎದ್ದು ಹೆರಟತ್ತು. 
ಸೊಸೆ ಒಳ ಬತ್ತೆ ಹೇಳಿದ್ದಲ್ಲದ್ದೆ ಬಯಿಂದಿಲ್ಲೇಳಿ ಪಾರ್ವತಿ ಅಮ್ಮ ಹೆರ ಬಂದವು. ಸೊಸೆಯ ಕಣ್ಣಿಲಿ ನೀರು ತುಂಬಿದ್ದು ಕಂಡು ” ಎಂತಬ್ಬೋ, ಗೋಪಾಲನ ನೆಂಪಾತ.  ಗೋಪಾಲ ಬಪ್ಪಲೆ‌ ಹೆಚ್ಚು ದಿನ ಇಲ್ಲೆನ್ನೆ ಇನ್ನು. ಬಪ್ಪತಿಂಗಳು ಅವನೊಟ್ಟಿಂಗೆ ಅಮೇರಿಕಾಕ್ಕೆ ಹೋಪಲಕ್ಕಾತ.” ಹೇಳಿ ಸೊಸೆಯ ಸಮಾಧಾನ ಮಾಡಿದವು.
” ಅಪ್ಪು ಅತ್ತೆ. ಅವು ಇಲ್ಲಿಗೆ ಬಂದರೆ ಒಂದೆರಡು ತಿಂಗಳು ಇರ್ತವು. ಆನು ಅವರೊಟ್ಟಿಂಗೆ ಈ ಸರ್ತಿ ಹೋಗದ್ದೆ, ಮತ್ತೆ ಒಂದೆರಡು ತಿಂಗಳು ಇದ್ದಿಕ್ಕಿ ಹೋವ್ತೆ ಅಕ್ಕಾ?ಮತ್ತೆಂತ ಇಲ್ಲೆ ಪ್ರಣವ ಮತ್ತುದೆ ಹುಶಾರಕ್ಕು ಇಲ್ಲಿದ್ದರೆ”
” ಅಕ್ಕಪ್ಪಾ… ಇದು ನಿನ್ನದೇ ಮನೆ ಅಬ್ಬೋ. ಎಂಗಗೆ ನೀನು ಪ್ರಣವನೂ ಇಪ್ಪದು ಸಂತೋಷವೇ. ನಿಂಗ ಹೋದರೆ ಎಂಗ ಎಲ್ಲ ಹೇಂಗೆ ಇಪ್ಪೆಯೋ ಹೇಳಿ ನಿನ್ನೆ ಮಾವನತ್ರ ಹೇಳಿದ್ದಷ್ಟೆ. ಇನ್ನು ಅಷ್ಟು ದಿನಕ್ಕಾದರುದೆ ಪುಳ್ಳಿಯೊಟ್ಟಿಂಗೆ ಆಡ್ಲಕ್ಕಲ್ಲದ” ಅತ್ತಗೆ ಸೊಸೆ ಪುಳ್ಳಿ ಕೂರ್ತೆಯ ಹೇಳಿದ್ದು ಭಾರೀ ಖುಷಿ ಆಗಿ ಆನಂದ ಭಾಷ್ಪವೇ ಸುರುದತ್ತು.
” ಅಕ್ಕಾ.. ಅದು ಎನ್ನ ದು ಕೊಡು” ನೀತುವ ಹಿಂದಂದ ಓಡಿ ಆಡುವ ಪ್ರಣವನ ಕಂಡಿಕ್ಕಿ ಆರತಿ ” ಎನ್ನ ಮಗ ಸಿಕ್ಕಿದ್ದು ಎನಗೆ ಈ ಮನೆಂದ. ಈ ಮನೆಯ ಮೇಲೆ ಎನಗೆ ಎಷ್ಟು ಋಣ ಇದ್ದೋ ಹೇಳುಲೆಡಿಯದ್ದಷ್ಟು” ಹೀಂಗೆ ಗ್ರೇಶಿಗೊಂಡಿದ್ದ ಆರತಿಯ ಕಣ್ಣಿಂದ ಉದುರಿದ ಹನಿ ನೀರು ಅದರ ಎದುರು ಪುಳ್ಳಿಯಕ್ಕಳ ಆಟ ನೋಡ್ತಾ ಇಪ್ಪ  ಅತ್ತೆಯ ಸೆರಗಿಲಿ ಬಿದ್ದು ಆರಿಹೋತು.

ಲೇಖಕಿ: ರಜನಿ ಭಟ್ ಕಲ್ಮಡ್ಕ

 ಕಥಾಸ್ಪರ್ಧೆಯ ಸಂಚಾಲಕಿ: ವಿಜಯಾಸುಬ್ರಹ್ಮಣ್ಯ ಕುಂಬಳೆ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×