Oppanna.com

ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ

ಬರದೋರು :   ವಿಜಯತ್ತೆ    on   01/09/2021    0 ಒಪ್ಪಂಗೊ

ಲೇಖಕಿ- ಕು| ಅಭಿಜ್ಞಾ ಭಟ್ ಬೊಳುಂಬು,
ಪೆರುಮುಖ,ಬದಿಯಡ್ಕ, ಕಾಸರಗೋಡು.

ಈಗ ಮಳೆಗಾಲ ಶುರುವಾತು. ಮಳೆಗಾಲಲ್ಲಿ ಎಲ್ಲೋರಿಂಗೂ ಇಷ್ಟ ಅಪ್ಪ ಕೆಲಸ ಯಾವುದು ಹೇಳಿ? ಧೋ.. ಹೇಳಿ ಮಳೆ ಸುರಿವಾಗ ಆ ಛಳಿಯ ವಾತಾವರಣಲ್ಲಿ ಆಗಲೇ ಹೊರುದ ಹಲಸಿನ ಹಪ್ಪಳವೋ, ಸೋಂಟೆಯೋ, ಅಥವಾ ಮತ್ತೆಂತಾರೂ ಕರುಕುರು ಎಣ್ಣೆತಿಂಡಿಯನ್ನೋ ಮಾಡಿ ಅದರೊಟ್ಟಿಂಗೆ ಬೆಶಿ ಬೆಶಿ ಕಾಪಿ ಕುಡಿವದಲ್ದಾ?
ಎನಗೂ ಹಾಂಗೆ! ಈ ಕಾಪಿ ಕುಡಿವದು ಹೇಳ್ರೆ ತುಂಬಾ ಇಷ್ಟ. ಅದೂ ಬೆಶಿಬೆಶಿ ಇರೆಕ್ಕು. ನಮ್ಮ ಊರದನದ ಹಾಲಿಲಿಯೇ ಮಾಡಿದರೆ ಅದರ ಟೇಸ್ಟ್ ಇದ್ದಲ್ದ? ಮತ್ತುದೇ ಹೆಚ್ಚು..
ಹೀಂಗೇ ಒಂದು ಅತ್ಯಂತ ಸೂಪರಾಗಿತ್ತ ಒಂದು ಕಾಪಿ ಕುಡುದ್ದದು ಆನು. ಈಗ ನೆಂಪಾತು ಅದು. ಅದೂ ಬೇರೇ ಊರಿಲ್ಲಿ. ಅದರ ಕಥೆ ಹೇಳ್ತೆ ಕೇಳಿ..


***

ಅದು ಬೇಸಗೆಯೇ, ಆದರೆ ಈ ಚಂಡಮಾರುತ ಬಂದು ಜೋರು ಮಳೆ. ಅಂದು ಆನು ಪೂರ್ತಿ ಚೆಂಡಿ. ಬಸ್ಸಿಳುದು ಒಂದೆರಡು ಹೆಜ್ಜೆ ನಡವದೂ, ಸರೀ ಮಳೆ ಶುರುವಾದ್ದೂ ಒಟ್ಟೊಟ್ಟಿಂಗೆ.  “ಒಂದು ಚೂರು ಹೊತ್ತು ಕಳುದು ಬಂದಿದ್ದರೆ ಎಂತಾವ್ತಿತು ಈ ಮಳೆಗೆ?” ಹೇಳಿ ಪರಂಚಿಯೊಂಡೇ ಚೂರು ಮುಂದೆ ನಡದೆ. ಇನ್ನೂ ಸುಮಾರು ಅರ್ಧ ಕಿ.ಮೀ ನಡೆಯೆಕ್ಕಿದಾ ಮನೆಗೊ ಇಪ್ಪಲ್ಲಿಗೆ ಹೋಯೆಕ್ಕಾರೆ‌! ಒಂದು ಹತ್ತು ಮೀಟರ್ ನಡೆಯೆಕ್ಕಾರೆ ಚಳಿಗೆ ಹಲ್ಲುಗೊ ಪೂರ್ತಿ ಕಟಕಟ ಹೇಳ್ಳೆ ಶುರುವಾತು. ಈಗ ಎಂತ ಮಾಡುದು ಹೇಳಿ ಅತ್ಲಾಗಿ ಇತ್ಲಾಗಿ ನೋಡಿದೆ. ಇಲ್ಲಿ ಬೇರೆ ಯಾವ ಅಂಗಡಿಗಳೂ ಕಾಣ್ತಿಲ್ಲೆ. ಎಲ್ಯಾರೂ ಹೋಗಿಪ್ಪಗ, ಹೇಳದ್ದೇ ಕೇಳದ್ದೆ ಮಳೆ ಬಂದರೆ – ಕೊಡೆ ಇಲ್ಲದ್ದಿಪ್ಪಾಗ ನಾವು ಅಂಗಡಿಯ ಜಗಲಿಲಿಯೇ ಅಲ್ದಾ ನಿಂಬದು?
ದಾರಿಲಿ ಬೇರೆ ಯಾರೂ ಇತ್ತಿದ್ದವಿಲ್ಲೆ. ಮಳೆ ನಿಂಬ ಲಕ್ಷಣ ಅಂತೂ ಕಾಣ್ತಿಲ್ಲೆ. ಮೋರೆ ಕೊಟ್ಟರೆ ಮೋರೆಯೇ ಬೇನೆ ಅಕ್ಕು, ಅಂಥಾ ದೊಡ್ಡ ದೊಡ್ಡ ಮಳೆಹನಿ ಅಷ್ಟು ಗಟ್ಟಿ ಬೀಳ್ತಾ ಇದ್ದು. ಎಲ್ಲಿಗೆ ಹೋಯೆಕ್ಕು ಹೇಳಿ ಗೊಂತಿಲ್ಲೆ, ಇದಂತೂ ಗೊಂತಿಲ್ಲದ್ದ ಊರು. ಹೀಂಗೆ ಮಳೆ ಬಂದರೆ ಆನು ಹೋಪದಾದರೂ ಎಲ್ಲಿಗೆ? ಎನ್ನ ಕೆಲಸವ ಆನು ಮಾಡುದು ಹೇಂಗೆ? ಇಲ್ಲಿ ಯಾರೂ ಇಲ್ಲದ್ದಿಪ್ಪಾಗ ಯಾರತ್ರೆ ಕೇಳೆಕ್ಕು ಆನು?
ಹೋ, ಹೇಳುದೇ ಮರದತ್ತು! ಆನು ಹೀಂಗೆ ಕಥೆ ಹೇಳಿಯೊಂಡು ಹೋದರೆ ನಿಂಗೊಗೆ ಎಂತದೂ ಅರ್ಥ ಆಗ. ಎಲ್ಲವೂ ಸಜ್ಜಿಗೆಬಜಿಲು ಅಕ್ಕು ಮತ್ತೆ. ಎನ್ನ ಪರಿಚಯ ಹೇಳ್ತೆ. ಎನ್ನ ಹೆಸರು ‘ಪ್ರಕೃತಿ’. ಒಬ್ಬ ಜರ್ನಲಿಸ್ಟ್. ಒಂದು ಚಾನೆಲ್‌ಲಿ ಕ್ರೈಮ್ ಸ್ಟೋರಿಗಳ ತಯಾರಿಸಿ ಅದರ ನಿರೂಪಣೆ ಮಾಡುವ ಕೆಲಸ ಎನ್ನದು‌.
ಅಂಬಗಂಬಗ ಬೇರೆ ಬೇರೆ ಊರುಗೋಕ್ಕೆ ಹೋಗಿ ಅಲ್ಲಿ ರಜ ರಿಸರ್ಚ್ ಮಾಡಿಗೊಂಡು, ಇತ್ಲಾಗಿ ಬಂದು ಅದರ ಕಥೆ ಬರದು ಮತ್ತೆ ಸ್ಕ್ರಿಪ್ಟ್ ಆಗಿ ಬದಲ್ಸಿ ಮತ್ತೆ ನಿರೂಪಣೆ ಮಾಡೆಕ್ಕು, ವಿಡಿಯೋ ರೆಕಾರ್ಡಿಂಗ್ ಆವ್ತು..
ಆದರೆ ಇಂದು ಆನು ಬಂದದು ಕ್ರೈಮ್‌ಗಳ ಬಗ್ಗೆ, ನಿಗೂಢ ಕಥೆಗಳ ಬಗ್ಗೆ ಎಲ್ಲಾ ರಿಸರ್ಚ್ ಮಾಡ್ಲೆ ಅಲ್ಲ. ಅತ್ಯಂತ ಸಾಮಾನ್ಯ ಜನರ ಇಂಟರ್‌ವ್ಯೂ ಮಾಡಿ ಅದರ ರೆಕಾರ್ಡು ಮಾಡಿಯೊಂಡು ಅದರ ಒಂದು ಕಥೆಯ ಹಾಂಗೆ ಬರೆಯೆಕ್ಕು ಹೇಳಿ ಬಂದೆ.
ನಿಜ ಹೇಳೆಕ್ಕಾರೆ, ಈ ಕೆಲಸ ಎನ್ನದು ಅಲ್ಲವೇ ಅಲ್ಲ. ಎಂತ ಮಾಡುದು, ಎನ್ನ ಕೊಲೀಗ್ ಸಂಧ್ಯಂಗೆ, ಈ ಬೇಸಗೆ ಶುರುವಪ್ಪಗ ಸಣ್ಣ ಅಲರ್ಜಿಯ ಹಾಂಗೆ ಜ್ವರ, ಸೆಮ್ಮ ಶುರುವಾಯ್ದಡ. ಆದ ಕಾರಣ ಅದರ ಕೆಲಸವ ಎನಗೆ ಕೊಟ್ಟು ಎನ್ನ ಇಲ್ಲಿಗೆ ಕಳುಸಿದವು.
ಮಳೆಲಿ ಚೆಂಡಿ ಆಗಿಯೊಂಡೇ ಹಾಂಗೆ ನೋಡುವಾಗ ಯಾರೋ ದಿನಿಗೇಳಿದ ಹಾಂಗಾತು. “ಓಯ್ ಮೇಡಮ್! ಎಂತ ಮಳೆಲಿ ಚೆಂಡಿ ಅಪ್ಪದು? ಬನ್ನಿ, ಇಲ್ಲಿ ನಿಲ್ಲಿ..” ತಿರುಗಿದರೆ ಅಲ್ಲೊಂದು ಸಣ್ಣ ಶೆಡ್ಡಿನ ಹಾಂಗೆ ಕಂಡತ್ತು. ಅತ್ಲಾಗಿ ಓಡಿದೆ, ಬ್ಯಾಗು ಚೆಂಡಿ ಆಗದ್ದಾಂಗೆ ನೋಡಿಯೊಂಡು. ಅಲ್ಲಿ ಹೋಗಿ ನಿಂದು, ಸಲ್ವಾರ್ನ ಕುಡುಗಿದೆ. ಅದು ಪಾಲಿಸ್ಟರ್, ಮೈಗೆ ಅಂಟಿ ನಿಂದಿದ್ದತ್ತು.
ನೋಡಿದರೆ ಅದೊಂದು ಹೋಟೇಲು. ಸುಮ್ಮನೇ ಅಲ್ಲಿ ತುಂಬ ಹೊತ್ತು ನಿಂಬಲೆ ಸರಿ ಆವ್ತಿಲ್ಲೆ ಅಲ್ಲದಾ? ಎಂತಾರೂ ತೆಕ್ಕೊಳ್ಳೆಕ್ಕನ್ನೇ! ಎಂತ ಹೇಳುದು ಹೇಳಿ ಆಲೋಚನೆ ಮಾಡಿದೆ. ಆ ಅಂಗಡಿಯ ಒಳ “ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ?” ಹೇಳಿ ಪದ್ಯ ಕೇಳಿಯೊಂಡಿತ್ತಿದ್ದು. “ಸರಿಯಾಗಿ ಬೈಂದು, ಹಿನ್ನೆಲೆ ಸಂಗೀತ!” ಹೇಳಿ ಎನ್ನಷ್ಟಕ್ಕೇ ಹೇಳಿಯೊಂಡೆ.
ಫೋನ್ ತೆಗದು ಎನ್ನ ಕೊಲೀಗ್ ಒಬ್ಬಂಗೆ ಫೋನ್ ಮಾಡಿದೆ. ಹಾಂಗೆ ಮಾತಾಡಿಯೊಂಡಿಪ್ಪಾಗ “ಒಂದ್ನಿಮಿಷ! ಮೇಡಮ್, ನಿಂಗ ಜರ್ನಲಿಸ್ಟಾ?” ಅಂಗಡಿಯ ಯೆಜಮಾನ ಕೇಳಿದ. ಅವನ ಕೈಲಿ ಒಂದು ಬೆಶಿಬೆಶಿ ಕಾಪಿಯ ಗ್ಲಾಸ್ ಇತ್ತಿದ್ದು.
“ಅಪ್ಪು” ಹೇಳಿದೆ ಆನು, ಆದರೆ ಬೆನ್ನಿಂಗೇ ಕಾಪಿ ಸಿಕ್ಕಿದ ಖುಷಿಯುದೆ.
“ಇದಾ, ಈ ಕಾಪಿ ತೆಕ್ಕೊಳ್ಳಿ. ಛಳಿ ಕಮ್ಮಿ ಆವ್ತು! ಅದು ಸರಿ, ನಿಂಗೋ ಕಥೆ ಎಂತಾರೂ ಬರವಲೆ ಬಂದದ? ನಿಂಗ ಮಾತಾಡುದು ಕೇಳಿತ್ತು.. ಆನೂ ಕಲ್ತದು ಜರ್ನಲಿಸಂ, ಈಗ ಹೋಟ್ಲು ಮಡುಗಿ ಕೂಯ್ದೆ..!”
ಹೇಳಿದ ಆ ಜೆನ.
ಆನು ಫೋನ್ ಮಡುಗಿದೆ. “ಓಹ್, ಅಪ್ಪಾ! ಅಂಬಗ ಆನು ನಿಂಗಳನ್ನೇ ಮಾತಾಡ್ಸುತ್ತೆ. ನಿಂಗಗೆ ಹೇಂಗಾದರೂ ಜರ್ನಲಿಸಂ ಗೊತ್ತಿರ್ತಲ್ದಾ, ಹಾಂಗೇ ಹೇಳಿ ಆತಾ ರಜ! ಎನಗೆ ಈ ಕೆಲಸಲ್ಲಿ ಅನುಭವ ಕಮ್ಮಿ..”
“ಎನ್ನ ಹೆಸರು ಪ್ರಕಾಶ್ ಹೆಳಿ! ಈ ಪತ್ರಿಕೋದ್ಯಮ ಹೇಳ್ರೆ ಎಂತ ಇಲ್ಲೆ, ಜನ ಹೇಳುದಕ್ಕೆ ರಜ ಉಪ್ಪುಕಾರಹುಳಿ ಎಲ್ಲಾ ಸೇರ್ಸಿ ಬರವದು ಅಷ್ಟೇ. ವೈಭವೀಕರಣ ಹೇಳ್ತವಲ್ದಾ? ಹಾಂಗೆ.
ಅಲ್ಲದ್ದೇ ಮತ್ತೆ ಈ ಟಿವಿ, ಮೀಡಿಯಾದ ಕೆಲಸ ಎಂತರ? ಸಿಕ್ಕಿದ್ದರ ಮಾವಿನಹಣ್ಣು ಗೊರಂಟು ಚೀಪುತ್ತ ಹಾಂಗೆ ಚೀಪುದು, ಹೇಳಿದ್ದನ್ನೇ ಹೇಳುದು. ಅಲ್ಲಿ ಎಂತ ಇಲ್ಲೆ ಹೇಳಿ ಅಪ್ಪಲಾಗ ಹೇಳಿ ಒಂದು ವಾಕ್ಯಲ್ಲಿ ಹೇಳುದರ ಒಂದು ಚೂರು ಉದ್ದ ಎಳದು, ಒಂದೆರಡು ಅಡ್ವೆರ್ಟೈಸ್ ತಂದು ನೋಡುವವರ ಕುತೂಹಲ ಕೆರಳುಸಿ, ನೋಡುವವು ನೋಡುವಷ್ಟು ನೋಡಿದ ಮತ್ತೆ ಇಪ್ಪ ವಿಷಯವ ಮುಗುಶುದು..
“ಅಂಬಗ, ಹೇಳಿ ಎಂತಾತು?” ಮಿಷಿನ್ ಎದುರು ಮಡುಗಿ ಕೂದೆ, ಕಾಪಿ ಕುಡುಕ್ಕೊಂಡು.
“ಎಂತ ಅಪ್ಪದು? ಎನ್ನ ಮೇಲಧಿಕಾರಿ ಒಂದು ಜನವ ಇಂಟರ್ವ್ಯೂ ಮಾಡ್ಲೆ ಹೇಳಿದ, ಮಾಡಿದೆ. ಮತ್ತೆ ಆ ಕಥೆಯ ಬರವಲೆ ಹೇಳಿದ..
ಮೊದಲು ಬೇರೆಯವ್ವು ಅದೇ ಕಥೆಯ ಬರದು ಕೊಟ್ಟವು, ಹೇಂಗೆ ಬರೆಯೆಕ್ಕು ಹೆಳಿ ಗೊಂತಾಗೆಡದಾ? ಅದರ ಓದಿಯಪ್ಪಗ ಆ ಕಥೆ ಗೊಂತಿದ್ದ ಎನ್ನ ಕಣ್ಣಿಲೇ ನೀರು ಬಂತು. ಅಷ್ಟು ಬದಲಾಯ್ದು ಕಥೆ! ಎನಗೆ ‘ಯಬ್ಬೋ..’ ಹೇಳಿ ಆತು. ಮತ್ತೆ ಕಥೆಯ ಪಬ್ಲಿಷ್ ಆದ ಮೇಲೆ ಆ ಕಥೆಂದಾಗಿಯೇ ಎಂಗಳ ಪತ್ರಿಕೆಗೆ ಒಂದು ಹತ್ತರಿಂದ ಹದಿನೈದು ಚಂದಾದಾರರು ಆದವು.
ಆಮೇಲೆ ಅಲ್ಲಿ ಒಂದೆರಡು ವರ್ಷ ಹೀಂಗೇ ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಿಟಿಕೆ ಮೆಣಸಿನಪುಡಿ, ನೀರಲ್ಲಿ ಕಿವಿಚಿದ ಹುಣಿಸೇಹಣ್ಣಿನ ರಸ ಸೇರಿಸಿದ ಕಥೆಗಳ ಬರದೆ.” ಹೇಳಿದವು ಪ್ರಕಾಶಣ್ಣ, ಎನಗೆ ಬೇಕಾಗಿ ನೀರುಳ್ಳಿಬಜೆ ಹಿಟ್ಟಿಂಗೆ ಉಪ್ಪು, ಮೆಣಸಿನ ಹೊಡಿ ಹಾಕಿಯೊಂಡು‌.
ಮಳೆ‌ ಜೋರಾಗಿತ್ತ ಕಾರಣ ಎಲ್ಲರೂ ಹೋಗಿತ್ತಿದ್ದವಡ, ಅವು ಮಾಂತ್ರ ಅಲ್ಲಿ ಇತ್ತದು.
“ಆಮೇಲೆ ಯಾವುದೋ ಒಂದು ಭೂತಬಂಗಲೆಯ ತೆಕ್ಕೊಂಡೆಯೋ.. ಅಲ್ಲಿ ಹಾಂಗಿಪ್ಪದು ಎಂತ ಮಣ್ಣಾಂಗಟ್ಟಿಯೂ ಇತ್ತಿದ್ದಿಲ್ಲೆ. ಇತ್ಲಾಗಿ ಯಾವುದೋ ಒಂದು ಹಳೆಯ ಮನೆಯ ಫೋಟೋಂಗಳನ್ನೂ, ವಿಡಿಯೋಗಳನ್ನೂ ಒಂಚೂರು ಗ್ರಾಫಿಕ್ಸ್‌ಲಿ ಎಡಿಟ್ ಮಾಡಿ ಹಳೇ ಭೂತಬಂಗಲೆಯ ಹಾಂಗೆ ಮಾಡಿದವು. ಯಾವುದೋ ಹಳೆಯ ಕಥೆಗಳ ಬರದು, ಅದರ ಒಳ್ಳೆ ಹೆದರಿಕೆ ಅಪ್ಪ ಹಾಂಗೆ ಹೇಳೆಕ್ಕಾಗಿತ್ತು..!” ಹೇಳಿದವು.
“ಮತ್ತೆ ಎಂತಾತು?” ಎನಗೆ ಅವರ ಬದುಕಿನ ಕಥೆಗಿಂತ ಈ ಚಾನೆಲಿನ ಕಾಮಿಡಿ ಕೇಳ್ಳೇ ಒಂಥರಾ ಕೊಶಿಯಾತು. ಹಾಂಗೇ ಕೇಳಿದೆ.
“ಆ ದಿನ ಒಂದು ಯಾವುದೋ ಒಂದು ಜಾಗೆಲಿ ಏಳು ತಲೆ ಇಪ್ಪ ಹಾವು ಕಂಡ ಬಗ್ಗೆ ಕಾರ್ಯಕ್ರಮದ ರೆಕಾರ್ಡಿಂಗ್ ಇತ್ತಿದ್ದು. ಒಂದು ಗಂಟೆ ಎಂತೆಲ್ಲಾ ಹೇಳಿ ಉದ್ದ ಎಳದೂ ಎಳದೂ – ಒಂದು ಗಂಟೆ ಮುಗಿವಲಪ್ಪಗ ಆ ನಿರೂಪಕ ಹೇಳಿದ,
‘ಇಲ್ಲಿ ಕಂಡ ಏಳು ತಲೆಯ ಸರ್ಪ!’ ಹೇಳಿ..
ಅವನ ಕೈಲಿ ಎಂತೋ ಇತ್ತು. ನೋಡ್ರೆ ಗೆಣಂಗು, ಏಳುಹೆಡೆಯ ಸರ್ಪದ ಆಕೃತಿಲಿ ಇತ್ತು! ಹೇಂಗಿದ್ದು?” ಆನು ತಲೆಗೆ ಕೈಮಡುಗಿದೆ. ಎನ್ನ ಕಾರ್ಯಕ್ರಮ ನೋಡುವವ್ವೂ ಹೀಂಗೇ ಹೇಳುಗಾ ಹೇಳಿ ತೋರಿತ್ತೆನಗೆ.
“ಏಳುಹೆಡೆಯ ಸರ್ಪ ಹೇಳಿಕ್ಕಿ, ಗೆಣಂಗು ತೋರ್ಸಿಯಪ್ಪಗಳೇ ಎನಗೆ ಎಲ್ಲಾ ಟೀಆರ್‌ಪಿಗೆ ಬೇಕಾಗಿ ಇಪ್ಪದು ಹೇಳಿ ತೋರಿತ್ತು. ಆನು ಕೆಲಸ ಬಿಟ್ಟೆ..”
“ಮತ್ತೆ? ನಿಂಗಳ ಕಥೆ ಹೇಳಿ!”
“ಅಲ್ಲಿ ಕೆಲಸ ಬಿಟ್ಟೆ, ಮತ್ತೆ ಎಂತ ಮಾಡೆಕ್ಕು ಗೊಂತಾಯ್ದಿಲ್ಲೆ. ಜರ್ನಲಿಸಂ ಕಲ್ತವಕ್ಕೆ ಜರ್ನಲಿಸಂ ಬಿಟ್ಟು ಬೇರೆ ಎಂತ ಕೆಲಸ ಸಿಕ್ಕುತ್ತು? ಮುಂದೆ ಕಲ್ತಿದ್ದರೆ ಯಾವುದಾದರೂ ಕಾಲೇಜಿಲಿ ಲೆಕ್ಚರರ್ ಅಪ್ಪಲಕ್ಕು, ಆದರೆ ಮನೆಯ ಪರಿಸ್ಥಿತಿ ಸರಿ ಇತ್ತಿದ್ದಿಲ್ಲೆ. ಮತ್ತೆ‌ ಆನೇ ಒಂದು ಮಾಸಿಕ ಪತ್ರಿಕೆ ಶುರುಮಾಡಿದೆ. ಎಂಗಳ ಪತ್ರಿಕೆ ನಷ್ಟಲ್ಲಿ ನಡಕ್ಕೊಂಡಿತ್ತು. ಹಾಂಗಾಗಿ ಈ ಊರಿಂಗೆ ಒಂದು ಸರ್ತಿ ಇಲ್ಲಿಗೆ ಬಂದು ಒಂದಷ್ಟು ಜನರಿಂಗೆ ಇದರ ಕೊಡೆಕ್ಕು ಹೇಳಿ ಮಾಡಿದೆ. ಅದಕ್ಕೆ ತುಂಬಾ ಊರಿಂಗೆ ಹೋಯಿಕ್ಕಿ ಬಂದು, ಮತ್ತೆ ಇಲ್ಲಿಗೂ ಬಂದೆ. ಹಾಂಗೆ ಬಂದವ ರಜ ಹೊತ್ತು ಇತ್ತಿದ್ದೆ, ಮಧ್ಯಾಹ್ನ ಉಂಬಲೆ ಗತಿ ಇಲ್ಲೆ ಹೇಳಿ ಆತು. ಇಲ್ಲಿ ಒಂದಾದರೂ ಅಂಗಡಿ ಇಪ್ಪದು ಬೇಡದೋ? ಆಗ ಇಲ್ಲಿ ಒಂಚೂರೂ ಅಭಿವೃದ್ಧಿಯೇ ಇತ್ತಿದ್ದಿಲ್ಲೆ. ಒಂದು ತುತ್ತು ಉಣ್ಣೆಕ್ಕಾರೆ ಹದಿನಾಲ್ಕು ಕಿಲೋಮೀಟರ್ ಹೋಯೆಕ್ಕಾಗಿ ಬಂತು.
ಅಪ್ಪ ಕೊಡ್ತಷ್ಟು ಕೊಟ್ಟವು, ಆದರೆ ಪತ್ರಿಕೆ ನಷ್ಟಲ್ಲಿ ನಡಕ್ಕೊಂಡಿತ್ತ ಕಾರಣ ಮತ್ತೊಂದು ದಿನ ನಿಂದತ್ತು‌. ಮತ್ತೆ ಆನು ಬಂದದು ಇಲ್ಲಿಗೆ‌. ಅಪ್ಪಂಗೂ ರಜ ಉಷಾರಿತ್ತಿದ್ದಿಲ್ಲೆ. ಅದಕ್ಕೆ ಜಾಗಬದಲಾವಣೆ ಹೇಳಿ ಇಲ್ಲಿಗೆ ಕರಕ್ಕೊಂಡು ಬಂದೆ. ಕರಕ್ಕೊಂಡು ಬಂದರೆ ಸಾಕಾ.. ಎಂತಾರೂ ಮಾಡೆಡದಾ? ಅದಕ್ಕೆ ಮತ್ತೆ ಇಲ್ಲಿ ಒಂದು ಸಣ್ಣ ಜ್ಯೂಸ್ ಸೆಂಟರ್’ ಮಡಗಿದೆ. ಒಂದರಿ ಎಲ್ಲರಿಂಗೂ ಇದೆಂತರ ಹೇಳಿ ನೋಡ್ಲೆ ಆತುರ. ಬಂದು ಇಷ್ಟ ಬಂದದು ತಿಂದು, ಕುಡುದು ಮಾಡಿಕ್ಕಿ ಹೋದವು.
ಮತ್ತೆ ಆನು ತಿರುಗಿ ನೋಡಿದ್ದೇ ಇಲ್ಲೆ. ಶುಚಿ, ರುಚಿ ಎರಡಕ್ಕೂ ಒಳ್ಳೆತ ಗಮನ ಕೊಟ್ಟೆ. ಲಾಯ್ಕಕೆ ಮಾಡಿದ ತಿಂಡಿ ಮತ್ತೆ ಪಾನೀಯ ತೆಕ್ಕೊಂಬಲೆ ಜನಕ್ಕೆ ಇಷ್ಟ ಆತು. ಎಷ್ಟೋ ಸರ್ತಿ ಹೊತ್ತೋಪಗ ಎಂತಾರೂ ಬೇಕು ಹೇಳಿ ಅಪ್ಪಗ ಹೀಂಗೆ ಬಂದು ಪಾರ್ಸೆಲ್ ಮಾಡಿಯೊಂಡು ಹೋವ್ತವು. ಮತ್ತೆ ಆ ಜ್ಯೂಸ್ ಸೆಂಟರಿನ ರಜ ದೊಡ್ಡ ಮಾಡಿ ಈ ಹೋಟೇಲ್ ಮಾಡಿದೆ.
ಓದಿದ್ದು ಜರ್ನಲಿಸಂ, ಆದರೆ ಮಾಡ್ತಾ ಇಪ್ಪದು ಬ್ಯುಸಿನೆಸ್. ದಿನ ಹೋದ ಹಾಂಗೆ ಅಂಗಡಿಗೋ ಎಲ್ಲಾ ಹೆಚ್ಚಾದರೂ ಎನಗೆ ಎಂತ ಕಮ್ಮಿಯೂ ಆಯ್ದಿಲ್ಲೆ. ಈ ಊರಿನ ಲೆಕ್ಕಕ್ಕೆ ಇದು ಅತ್ಯಂತ ಹಳೆಯ ಅಂಗಡಿ. ಅದಕ್ಕೆ ಹೆಚ್ಚಿನವು ಇಲ್ಲಿಗೇ ಬತ್ತವು.
ಮತ್ತೆ ಆನೊಂದು ಸಣ್ಣ ಪ್ರಯತ್ನಕ್ಕೆ ಕೈ ಹಾಕಿದೆ. ಇಲ್ಲಿಂದಲೇ ಅಂದು ನಿಂದು ಹೋದ ಮಾಸಿಕ ಪತ್ರಿಕೆಯ ಪುನಾ ಶುರುಮಾಡಿದೆ. ಇಲ್ಯಾಣ ಅಂಗಡಿಗಳಲ್ಲಿ ಎಲ್ಲ ಅದು ತುಂಬಾ ಫೇಮಸ್. ಬೇಕಾರೆ ಒಂದು ಓದಿ ನೋಡಿ..” ಹೇಳಿದ ಪ್ರಕಾಶಣ್ಣ ಅಲ್ಲೇ ಮಡುಗಿತ್ತಿದ್ದ ಆ ತಿಂಗಳಿನ ಒಂದು ಪುಸ್ತಕ ಕೊಟ್ಟವು.
ಮಂಗಳ, ಸುಧಾ ಹೇಳಿದ ಹಾಂಗೆ, ಸಣ್ಣಾದಿಪ್ಪಗ ಬಾಲಮಂಗಳ, ತುಂತುರು ಓದಿಯೊಂಡಿತ್ತ ಹಾಂಗೆ ಈಗಲೂ ಅಲ್ಲೇ ಕೂದು ಓದಿ ನೋಡಿದೆ‌. ಲಾಯ್ಕಿತ್ತು ಪುಸ್ತಕ‌.
“ಹ್ಮ್.. ಚಳಿ ಆವ್ತಾ ಇದ್ದು. ಎನಗೆ ಇನ್ನೊಂದು ಬೆಶಿಬೆಶಿ ಕಾಪಿ ಕೊಡ್ತಿರಾ..” ಕೇಳಿದೆ ಆನು.
ಅತ್ಲಾಗಿ ಕಾಪಿಗೆ ಕಾಪಿಯೂ ಆತು, ಹೆಚ್ಚು ಕಷ್ಟಪಡದ್ದೇ ಕಥೆ ಕೂಡಾ ಸಿಕ್ಕಿತ್ತು. ಇದರ ಇನ್ನಷ್ಟು ಸ್ಫೂರ್ತಿದಾಯಕ ಆಗಿ ಬರೆಯೆಕ್ಕು‌ ಹೇಳಿ ಆಲೋಚನೆ ಮಾಡಿದೆ ಆನು.
“ಒಂದು ಮಾತು, ಇನ್ನು ಆನುದೇ ಆಗಾಗ ಎಂತಾರೂ ಬರದು ಕಳು‌ಸುತ್ತೆ ಅಕ್ಕಲ್ಲದಾ?” ಆನುದೇ ಕೇಳಿದೆ. “ಅಕ್ಕು” ಹೇಳಿದವು.
ಅಷ್ಟು ಹೊತ್ತಿಂಗೆ ಇನ್ನೊಂದು ಬೆಶಿಬೆಶಿ ಗೋಳಿಬಜೆ ಬಂತು.
ಆನು ಸಿಟಿಂದ ಹೆರಟು ಸುಮಾರು ನಾಲ್ಕು ಗಂಟೆ ಆತು. ಮೂರು ಗಂಟೆಯ ಬಸ್ ಪ್ರಯಾಣ. ಮನೆಂದ ಉದಿಯಪ್ಪಗ ಹೆರಟ ಮೇಲೆ ಹೊಟ್ಟೆಗೆ ಎಂತದೂ ಹೋಯ್ದಿಲ್ಲೆ. ಹೊಟ್ಟೆಯೊಳ ಹೆಗ್ಗಣ ಹಾರಿದ ಹಾಂಗೆ ಆಗಿಯೊಂಡಿತ್ತು. ಆ ಹಶುವಿಂಗೆ ಎಂತದೂ ತಲೆಗೆ ಹೋಗಿಯೊಂಡಿತ್ತಿದ್ದಿಲ್ಲೆ. ಅದಕ್ಕೆ ನೀರುಳ್ಳಿಬಜೆಯ ಮತ್ತೆ ಒಂದು ಗೋಳಿಬಜೆಯೂ ಹೇಳಿದ್ದು.
ನಿಧಾನಕ್ಕೆ ಆ ಪ್ಲೇಟಿನ ಫೋಟೋ ತೆಗಕ್ಕೊಂಡೆ, ಬೇಕಾವ್ತಲ್ಲದಾ? ಹಾಂಗೇ ಆ ಮಾಸಿಕ ಪತ್ರಿಕೆಯ ಪಟವನ್ನೂ ತೆಗದೆ..

****

ಮಳೆ ನಿಲ್ಲುತ್ತ ಲಕ್ಷಣ ಕಾಣ್ತಿಲ್ಲೆ ಹೇಳಿ ಅಪ್ಪಗ ಪೆನ್ನು ಮತ್ತೆ ಪುಸ್ತಕ ತೆಕ್ಕೊಂಡು ರಜ ಬರವಲೆ ಶುರುಮಾಡಿದೆ. ಮಾಡ್ಲೆ ಬೇರೆ ಕೆಲಸ ಇಲ್ಲದ್ರೆ ಸಮಯ ಹೋಪದು ಹೇಂಗೆ? ಫೋನ್ ಸತ್ತಿದು, ಚಾರ್ಜಿಂಗೆ ಹಾಕಿಪ್ಪಾಗ ಮತ್ತೆಂತ ಮಾಡ್ಲೆ ಎಡಿಗು?
“ತೊಂದರೆ ಇಲ್ಲೆ, ಒಂಚೂರು ಉಪ್ಪುಕಾರ ಹಾಕಿದರೂ ತೊಂದರೆ ಇಲ್ಲೆ. ಆನದಕ್ಕೆ ಸ್ವಾತಂತ್ರ್ಯ ಕೊಡ್ತೆ..” ಹೇಳಿದವು.
ಅಬ್ಬಾ ಹೇಳಿ ಆತೆನಗೆ. ಅಂದು ಸಂಧ್ಯಾ ಹೇಳಿಯೊಂಡಿತ್ತು, ಆ ಕಥೆಗಳ ನಿಜವಾದ ವ್ಯಕ್ತಿಗೆ ಈ ವೈಭವೀಕರಣಕ್ಕೆ ಒಪ್ಪುಸುಲೇ ಕಷ್ಟ ಆವ್ತು ಹೇಳಿ. ಎನಗೆ ಆ ಕಷ್ಟ ಇತ್ತಿದ್ದಿಲ್ಲೆ.
“ಅದ್ಸರಿ, ನಿಂಗೊ ಎಲ್ಲಿ ಕೆಲಸ ಮಾಡುದು?”
ಆನು ಎಂಗಳ ಚಾನೆಲ್ ಹೆಸರು ಹೇಳಿದೆ. “ಹೋ, ಇಲ್ಲಿಯೇ ಆನುದೇ ಕೆಲಸ ಮಾಡಿ ಬಿಟ್ಟದು!”
ಆನು ಕೂದು ಬರವಲೆ ಶುರುಮಾಡಿದೆ..
“ಪ್ರಕಾಶ್ ಎಂಬವು ಜರ್ನಲಿಸಂ ಕಲಿತವು, ಜರ್ನಲಿಸಂನಲ್ಲಿ ಆಸಕ್ತಿ ಕಳಕೊಂಡ ಮೇಲೆ ಕೆಲಸ ಬಿಟ್ಟವು ಮತ್ತೆ ಸ್ವಂತವಾದ ಒಂದು ಮಾಸಿಕ ಪತ್ರಿಕೆ‌ ಶುರುಮಾಡಿ, ಅದು ತಲೆಯೆತ್ತದ್ದೆ, ಮತ್ತೆ ಅಭಿವೃದ್ಧಿ ಕಾಣದ ಒಂದು ಊರಿಲಿ ಕ್ಯಾಂಟೀನ್ ಶುರುಮಾಡಿ ಮತ್ತದು ದಿನಂದ ದಿನಕ್ಕೆ ಅಭಿವೃದ್ಧಿ ಹೊಂದಿ ಹೋಟೇಲ್ ಆತು. ಮತ್ತೆ ತಾನು ಅಂದು ಅರ್ಧಲ್ಲಿ ಕೈಬಿಟ್ಟಿತ್ತಿದ್ದ ಪತ್ರಿಕೆಯ ಪುನಾ ಶುರುಮಾಡಿ ಸಕ್ಸಸ್ ಆದವು”
ಇದು ಪೂರ್ತಿ ಕಥೆಯ ತಾತ್ಪರ್ಯ. ನಿಜ ಹೇಳೆಕ್ಕಾರೆ ಎಡೆಲಿ ಅಲ್ಲಲ್ಲಿ ಕಲ್ಪನೆಗಳ ಸೇರಿಸಿ ಬರದೆ. ಶಾಲೆಗೆ ಹೋಪಾಗ ಈ ಕಲೋತ್ಸವದ ಕಥಾರಚನೆ ಸ್ಪರ್ಧೆಲಿ ಭಾಗವಹಿಸಿತ್ತಿದ್ದರ ಸಂಪೂರ್ಣ ಉಪಯೋಗ ಇಂದು ಆತು.

***

ಎರಡು ಎರಡೂವರೆ ಗಂಟೆ ಕೂದು ಕಥೆ ಬರದು ವಾಟ್ಸಾಪಿಲಿ ಫೋಟೋ ಕಳ್ಸಿದೆ, ಎನ್ನ ಫ್ರೆಂಡಿಂಗೆ ಇಷ್ಟ ಆತು. “ಪರ್ಫೆಕ್ಟ್!” ಹೇಳಿ ಸಂದೇಶ ಕೊಟ್ಟ. ತಲೆಲಿ ಮೆಲ್ಲಂಗೆ ಒಂದು ಕೊಂಬು ಬಪ್ಪ ಲಕ್ಷಣ ಕಂಡತ್ತು, ಮೊದಲು ಬರದ ಕಥೆಗೆ ಇಷ್ಟು ಹೊಗಳಿಕೆ ಅಲ್ಲದಾ?
“ಇದೆಲ್ಲಾ ಇಪ್ಪದೇ.. ಒಂದೊಂದರಿ ನಾವು ಬರದ ಕಥೆ ಲಾಯ್ಕಿದ್ದು ಹೇಳಿ ಹೇಳಿಯೊಂಡೇ ಅದರ ಪೂರ್ತಿ ಬದಲ್ಸಿ ಹಾಕುತ್ತವು. ಓದುವ ನಮಗೆ ಮತ್ತೆ ಇದು ಎನ್ನ ಕಥೆ ಹೇಳಿ ಗುರ್ತವೇ ಸಿಕ್ಕ.. ಅಷ್ಟು ಬದಲಾಗಿರ್ತು!” ಹೇಳಿದವು ಪ್ರಕಾಶಣ್ಣ ಎನ್ನ ಕಥೆಯ ಮೇಗಂದ ಮೇಗೆ ಓದಿ.
“ಅದೇ, ಅದು ಎನಗೂ ಅನುಭವ ಆಯ್ದು. ಆನೇ ಬರದ ಕ್ರೈಮ್‌ ಸ್ಟೋರಿಗ ಸ್ಕ್ರಿಪ್ಟಿಲಿ ಪೂರ್ತಿ ಬೇರೆಯೇ!” ಆನುದೇ ನೆಗೆ ಮಾಡಿದೆ. ಮತ್ತೆ ಊಟ ಆತು.
“ನಿಂಗ ಎಂತಾರೂ ಬರದು ಕೊಡ್ತರೆ, ಈ ಈಮೇಲಿಂಗೆ ಕಳ್ಸಿ” ಹೇಳಿ ಪ್ರಕಾಶಣ್ಣ ಒಂದು ಈಮೇಲ್ ಕೊಟ್ಟವು. ಆತು ಹೇಳಿದೆ ಆನು.
ಕೆಲವು ಸರ್ತಿ ಈ ಬರದ ಕಥೆಗಳ ಚಾನೆಲಿಲಿ ರಿಜೆಕ್ಟ್ ಮಾಡ್ತವು, ಬೇರೆ ಬೇಕು ಹೇಳ್ತವು. ಹಾಂಗಿಪ್ಪ ಕಥೆಗಳ ಟೈಪ್ ಮಾಡಿ ಮಡುಗಿದ್ದು ಬೇರೆ ಫೈಲ್ ಮಾಡಿ ಮಡುಗಿತ್ತಿದ್ದೆ‌. ‘ಸುಮಾರು ಇದ್ದು, ಅದರಿಂದ ಎಂತ ಉಪಯೋಗ?’ ಹೇಳಿ ಎನಗೆ ಆನೇ ಕೇಳಿಯೊಂಡದಿದ್ದು, ಡಿಲೀಟ್ ಮಾಡ್ಲೆ.
ಆದರೆ ಆನೇ ಬರದ್ದದಲ್ಲದಾ? ಡಿಲೀಟ್ ಮಾಡ್ಲೆ ಮನಸ್ಸು ಕೇಳ್ತಿಲ್ಲೆ. ‘ಹೆತ್ತವಕ್ಕೆ ಹೆಗ್ಗಣ ಮುದ್ದು’ ಅಲ್ಲದಾ.. ಅದು ಲಾಯ್ಕಿದ್ದು ಹೇಳಿ ಎನ್ನ ಮನಸ್ಸು ಹೇಳ್ತು, ಅದಕ್ಕೆ ಡಿಲೀಟ್ ಮಾಡದ್ದೆ ಮಡುಗಿದ್ದು.
ಇಂದು ಹಾಂಗೆ ಮಡುಗಿದ್ದದಕ್ಕೂ ಸಾರ್ಥಕ ಆತು. ಪ್ರತೀ ತಿಂಗಳೂ ಒಂದೊಂದು ಕಳುಸುವ ಹೇಳಿ ಆತೆನಗೆ. ಅದಷ್ಟು ಮುಗಿವಾಗ ಇನ್ನೂ ಎಷ್ಟೋ ಕಥೆ ರೆಡಿ ಆಗಿರ್ತಲ್ಲದಾ! ಚಿಂತೆ ಮಾಡೆಕ್ಕು ಹೇಳಿ ಇಲ್ಲೆ! ಈಗ ಮಾಡ್ಲೆ ಬೇರೆ ಕೆಲಸ ಇಲ್ಲೆ. ಈ ಮಳೆ ಅಂತೂ ನಿಲ್ತೇ ಇಲ್ಲೆಪ್ಪಾ..
“ಚಂಡಮಾರುತಂಗ ಎಂತಕ್ಕಾರೂ ಬತ್ತವೋ! ಎಲ್ಲಿಗೂ ಹೋಪಲೆ ಗೊಂತಿಲ್ಲೆ. ಯಾವಾಗ ಯಳೆ ಬರೆಕ್ಕು, ಎಷ್ಟು ಮಳೆ ಬರೆಕ್ಕು ಹೇಳಿ ಲೆಕ್ಕವೇ ಇಲ್ಲೆ. ಒಟ್ರಾಸಿ ಮಳೆ ಸುರಿವದೇ!” ಹೇಳಿ ಪರಂಚಿಯೊಂಡು ಕೂದೆ.
ಅಷ್ಟು ಹೊತ್ತಿಲಿ ಯಾರೋ ಬಂದವು ಪ್ರಕಾಶಣ್ಣನೊಟ್ಟಿಂಗೆ ಮಾತಾಡ್ಲೆ ನಿಂದವು. ಪಾಪ ಅಡಕ್ಕೆ ಒಣಗುಲೆ ಹಾಕಿತ್ತಿದ್ದವಡ. ಎಲ್ಲಾ ಜಾಲಿಂದ ಬಾಚುವ ಮೊದಲೇ ಪೂರ್ತಿ ಚೆಂಡಿ ಆತಡ. ಇನ್ನೂ ಉದಿಯಪ್ಪಗಂದ ಮಳೆ ಬಂದದಕ್ಕೆ ಅವರ ಹತ್ತರೆ ಎಲ್ಲಿಯೋ ಗುಡ್ಡೆ ಜೆರುದ್ದಡ.. ರೋಡ್ ಮುಚ್ಚಿದ್ದು ಹೇಳಿದವು.
ಮೆಲ್ಲಂಗೆ ಕೇಳಿದೆ, “ಸಿಟಿಗೆ ಹೋಪ ದಾರಿಯಾ ಮುಚ್ಚಿದ್ದದು?”
“ಅಲ್ಲ, ಸಿಟಿಗೆ ಹೋಪದು ಮೂಡು ದಿಕ್ಕಿಲಿ. ಈಗ ಜೆರುದ್ದು ತೆಂಕದ ಗುಡ್ಡೆ, ಇಲ್ಲಿಂದ ತೆಂಕಕ್ಕೆ ಹೋಪಲೆ ಎಡಿಯದ್ದ ಹಾಂಗಾಯ್ದು..” ಹೇಳಿದವು ಆ ಸ್ಥಳೀಯರು.
‘ಅಬ್ಬಾ’ ಸಮಾಧಾನ ಆತೆನಗೆ‌. ಇನ್ನೂ ಇಲ್ಲಿಯೇ ಉಳಿಯೆಕಕ್ಕು ಹೇಳುವ ಅವಸ್ಥೆ ಇಲ್ಲೆನ್ನೇ ಹೇಳಿ. “ಬಸ್ ಎಷ್ಟೊತ್ತಿಂಗೆ?”
“ಹೊತ್ತೋಪಗ ಆರು ಗಂಟೆಗೆ‌!” ಉತ್ತರ ಬಂತು.
“ಯ್ಯೋ!” ಇನ್ನೂ ಎರಡು ಗಂಟೆ ಕಾಯೆಕ್ಕು! ಪ್ರಕಾಶಣ್ಣನ ಹಳೆಯ ಪತ್ರಿಕೆಗಳ ಹಿಡುಕ್ಕೊಂಡು ಕೂದೆ. ನೋಡುವ ಯಾವ್ದಾರೂ ಕ್ರೈಮ್ ಸ್ಟೋರಿಗೆ ವಿಷಯ ಸಿಕ್ಕುತ್ತಾ ಹೇಳಿ. ಮತ್ತೆ, ಚೂರು ಆಲೋಚನೆ ಮಾಡಿ ಮತ್ತೊಂದು ಕಾಪಿ ಕುಡುದೆ. ಮಧ್ಯಾಹ್ನದ ಊಟ ಆಗಿ ರಜ ಹೊತ್ತಾತಲ್ಲದಾ? ಕಥೆ ಬರದು ಮುಗುದಪ್ಪಗ ಎರಡೂಕಾಲು ಗಂಟೆ ಆಗಿತ್ತಿದ್ದು. ಮತ್ತೆಯೇ ಉಂಡದು. ಈಗ ಒಂದು ಕಾಪಿ.                        
ಉದಿಯಪ್ಪಗಂದ ಮೂರ್ನಾಲ್ಕು ಕಾಪಿ ಆತಪ್ಪಾ‌! “ಇನ್ನೊಂದು ಗ್ಲಾಸ್ ಕುಡುದರೂ ನಾಳೆ ಉಷ್ಣ ಆಗಿ ವರಗುಲಿಕ್ಕು ಪ್ರಕೃತಿ, ಇನ್ನೊಂದೂ ಕುಡಿಯಡ. ತಳಿಯದ್ದೆ ಕೂರಲ್ಲಿ‌!” ಹೇಳಿ ಮನಸ್ಸು ಬೈದಪ್ಪಗ ಸುಮ್ಮನೇ ಕೂದೆ. C°èwÛzÀÝ ಪುಸ್ತಕಂಗ ಲಾಯ್ಕಿತ್ತಿದ್ದವು. ಅಲ್ಲೇ ಪುಸ್ತಕದ ರ್ಯಾಕಿಲ್ಲಿ ಇತ್ತಿದ್ದ ಭೈರಪ್ಪನವರ ‘ಆವರಣ’ ಕಂಡತ್ತು. ಈಗಾಗಲೇ ಓದಿದ ಪುಸ್ತಕ ಆದರೂ ಹಿಡ್ಕೊಂಡು ಕೂದೆ. ತುಂಬಾ ಒಳ್ಳೇ ಪುಸ್ತಕ ಆತಾ.. ಓದದ್ದಿಪ್ಪವು ಓದಲೇ ಬೇಕು!

***

ಆತು ಹಾಂಗೂ ಹೀಂಗೂ ಆರೂವರೆ ಅಪ್ಪಾಗ ದೂರಲ್ಲಿ ಹಾರ್ನು ಕೇಳಿದ ಹಾಂಗಾತು. ಎದ್ದು ನಿಂದೆ. “ಅಲ್ಲಿ ಹತ್ತು ನಿಮಿಷ ನಿಲ್ತು, ನಿಧಾನಕ್ಕೆ ಹೋಗಿ..” ಹೇಳಿ ಪ್ರಕಾಶಣ್ಣ ಹೇಳಿದವು. ಆನು ಎಲ್ಲಾ ವಸ್ತು ತೆಕ್ಕೊಂಡಿದೆ ಹೇಳಿ ನೆಂಪು ಮಾಡಿಯೊಂಡು, ಬ್ಯಾಗಿಂಗೆ ಎಲ್ಲಾ ತುಂಬ್ಸಿ ಹೆರಟೆ.
ಮಳೆ ನಿಂದಿತ್ತಿದ್ದು. ಆದರೂ ಅಲ್ಲೇ ಇತ್ತಿದ್ದ ಮರಂಗಳ ಎಲೆಗಳಿಂದ ಬಿಂದು ಬಿಂದು ನೀರು ಬಿದ್ದೊಂಡಿತ್ತು. ಹೋಟೇಲಿನ ಮುಂದೆ ಬಸ್ ನಿಂದತ್ತು. ಇಳಿವಾಗ ಎನಗೆ ಇಲ್ಲಿ ಸ್ಟಾಪ್ ಇಪ್ಪದು ಗೊಂತಿತ್ತಿಲ್ಲೆನ್ನೇ.. ಬಸ್ ಅಲ್ಲೇ ಒಂದು ಟರ್ನ್ ತೆಗಕ್ಕೊಂಡು ಸಿಟಿಯ ಕಡೇಂಗೆ ಹೆರಟತ್ತು‌. ಕಿಟಿಕಿಯ ಹತ್ರೆ ಇಪ್ಪ ಸೀಟಿಲಿ ಕೂದಿತ್ತಿದ್ದ ಆನು ಹೋಟೇಲಿನ ಕಡೇಂಗೆ ನೋಡಿದೆ. ಪ್ರಕಾಶಣ್ಣ ಕೈಬೀಸಿದವು. ಒಂದು ಮುಗುಳ್ನಗೆ ಬಿಟ್ಟು ಕೈಬೀಸಿದೆ.                                                                                                                                        ಮಳೆ ಬಿಟ್ಟದಷ್ಟೇ. ತಂಪು ಗಾಳಿ ಬೀಸಿಯೊಂಡಿತ್ತಿದ್ದು. ಒಣಗಲಿ ಹೇಳಿ ಬಿಡುಸಿದ ಎನ್ನ ಕೂದಲು ಹಾರಲೇ ಶುರುವಾತು. ಅದರ ಹಿಡುದು ಕಟ್ಟಿ ಕೂರ್ಸಿದೆ. ಬಸ್ಸು ಊರು ಬಿಟ್ಟು ಸಿಟಿಯ ದಾರಿ ಹಿಡುದರೂ ಎನ್ನ ಮನಸ್ಸು ಹೋಟೇಲಿಂದ ಇತ್ಲಾಗಿ ಬೈಂದಿಲ್ಲೆ.
ಅಲ್ಲಿ ಆನು ತಿಳ್ಕೊಂಡ ಹೊಸ ವಿಷಯಂಗಳ ಎಲ್ಲಾ ಆಲೋಚನೆ ಮಾಡ್ಲೆ ಶುರುಮಾಡಿದೆ.     ‘ಆನು ಕೇಳದ್ದೇ ಮಾನವೀಯತೆಯ ದೃಷ್ಟಿಲಿ ಕಾಪಿ ಕೊಟ್ಟದು,
ಮತ್ತೆ ಅವ್ವಾಗಿಯೇ ಎನ್ನ ಅವಸ್ಥೆ ತಿಳ್ಕೊಂಡು ಅವರ ಕಥೆಯ ಎನಗೆ ಹೇಳಿದ್ದು,
ಮತ್ತೆ ಅದರ ವೈಭವೀಕರಿಸುಲೆ ಪರ್ಮಿಷನ್ ಕೊಟ್ಟದು,
ಅವರ ಪತ್ರಿಕೆಯ ಓದುಲೆ ಕೊಟ್ಟದು,
ಎಂತ ಬರೆಯೆಕ್ಕು ಹೇಳಿ ಗೊಂತಾಗದ್ದಿಪ್ಪಗ ಕಥೆಲಿ ಎಂತೆಲ್ಲಾ ಸೇರ್ಸುಲಕ್ಕು ಹೇಳಿ ಉಪಾಯಂಗಳ ಕೊಟ್ಟದು,
ಪತ್ರಿಕೋದ್ಯದ ಕೆಲವು ಸೂಕ್ಷ್ಮಂಗಳ ಹೇಳಿಕೊಟ್ಟದು,
ಕಥೆಗಳಲ್ಲಿ ನಾವು ಸೇರ್ಸುಲೆ ಗಮನಿಸೆಕ್ಕಾದ ಅಂಶಗಳ ತಿಳಿಸಿದ್ದು,
ಕಥೆಗಳ ವೈಭವೀಕರಿಸುವ ಕಲೆಯ ಎಲ್ಲಿ ಬಳಸೆಕ್ಕು – ಎಲ್ಲಿ ಅದರ ಸೇರ್ಸಿರೆ ಅದು ಸಹಜತೆ ಬಿಟ್ಟು ಹೋವ್ತಿಲ್ಲೆ ಹೇಳುದರ ಹೇಳಿದ್ದದು,
ಯಾವ ಥರದ ಕಥೆಗಳ ಜನ ಹೆಚ್ಚು ಇಷ್ಟಪಡ್ತವು ಹೇಳುವ ಸೂಕ್ಷ್ಮವ – ಯಾವ ರೀತಿ ತಿರುವುಗಳ (ಟ್ವಿಸ್ಟ್) ಕೊಡೆಕ್ಕು ಹೇಳುದರ ಹೇಳಿದ್ದದು….’ ಎಲ್ಲಾ ನೆಂಪಾತೆನಗೆ. ‘ಎಂಥಾ ಒಳ್ಳೆಯ ಮನಸ್ಸು’ ಹೇಳಿ ತೋರಿತ್ತು.
ಮತ್ತೆ ಅಲ್ಲಿಯಾಣ ಜನ ಎನ್ನತ್ರೆ ಮಾತಾಡಿದ ರೀತಿ, ಊರಿನ ಜನಂಗಳ ಜೀವನಶೈಲಿ, ಅವರ ಕೃಷಿ ಎಲ್ಲವೂ ಆ ಮಾತಿಲಿ ಹಾಸುಹೊಕ್ಕಾಗಿತ್ತದು, ಅವರ ಮಾತು ಹೇಳ್ರೆ ಮನೆಯ ಮತ್ತೆ ಕೃಷಿಗೆ ಸಂಬಂಧಪಟ್ಟದಾಗಿತ್ತದು..                              ಪ್ರತಿಯೊಬ್ಬರನ್ನೂ ‘ಅಣ್ಣ, ಅತ್ತಿಗೆ, ಅಕ್ಕ, ಭಾವಾ, ಮಾವ, ಅತ್ತೆ’ ಹೇಳಿ ಮಾತಾಡ್ಸಿಯೊಂಡಿತ್ತ ಅಲ್ಲಿಯಾಣ ಜನಂಗ, ಅಂಕಲ್, ಆಂಟಿ ಎಲ್ಲಾ ಬಿಟ್ಟು ‘ಅತ್ತೆ, ಮಾವ, ಅಪ್ಪಚ್ಚಿ, ಚಿಕ್ಕಮ್ಮ’ ಹೇಳಿ ಮಾತಾಡಿಯೊಂಡಿತ್ತ ಮಕ್ಕೊ!
ಅಬ್ಬಾ.. ಒಂದೊಂದು ಊರಿಲೂ ಒಂದೊಂದು ರೀತಿ. ಅವರ ಮಾತು, ಕೃತಿ, ನಡವಳಿಕೆ, ಜೀವನಶೈಲಿ ಎಲ್ಲಾ ಸಾತ್ವಿಕವಾಗಿತ್ತು. ಸಿಟಿಲಿ ಯಾರ ಬಗ್ಗೆಯೂ ಕೇರ್ ಮಾಡದ್ದೆ ಬದುಕುತ್ತ ಹಾಂಗೆ ಇಲ್ಲಿ ಬದುಕ್ಕುಲೆಡಿಯ! ಅದಕ್ಕೇ ಇಲ್ಲಿಯಾಣ ಜನಂಗಳ ಮನಸ್ಸು ತುಂಬಾ ಮೃದು, ಕಠಿಣ ಮನಸ್ಸಲ್ಲ ಇಲ್ಲಿಯಾಣವರದ್ದು! ಹಳ್ಳಿಲಿಪ್ಪ ಜನರ ಮನಸ್ಸು ತುಂಬಾ ಮೃದುವಾಗಿರ್ತು. ಹಾಂಗೇಳಿ ಅವಕ್ಕೆ ಮನೋಸ್ಥೈರ್ಯ ಇಲ್ಲೆ ಹೇಳಿ ಅಲ್ಲ. ಆ ವಿಶಯಕ್ಕೆ ಬಂದರೆ ನಮ್ಮ ಸಿಟಿಲಿಪ್ಪವ್ವೇ ತುಂಬಾ ವೀಕ್, ಸ್ಥೈರ್ಯ ಕಮ್ಮಿ. ಒಂದು ಹೇಳ್ಳೆ ಗೊಂತಿಲ್ಲೆ, ದಿಪ್ರೆಶನ್ನಿಂಗೆ ಹೋಗಿ ಆವ್ತು. ಆದರೆ ಇಲ್ಲಿಯಾಣವ್ವು ಹಾಗಲ್ಲ, ಹೆರವೂರಿನವ್ವು ಬಂಅದಪ್ಪಗ ಲಾಯ್ಕಕ್ಕೆ ನೋಡಿಗೊಳ್ತವು, ಮೃದುವಾಗಿ ಮಾತಾಡ್ಸುತ್ತವು, ಆದರೆ ಸಿಟಿಲಿಪ್ಪ ಕೆಲವರು?  ಎದುರಂದ ಜನ ಬಂದರೆ ತಪ್ಪುಸುಲೆ ನೋಡುದು.. ಎಂತದೇ ಹೇಳಲಿ, ಇಲ್ಲಿಯಾನವರ ಮನಸ್ಸಿನ ಹಾಂಗೆ, ಇಲ್ಲಿಯಾಣ ಪ್ರಕೃತಿಯೂ ಅಷ್ಟೇ ಚಂದ. ಗಾಳಿ, ನೀರು, ಮಣ್ಣು, ಆಹಾರ ಎಲ್ಲಾ ಶುದ್ಧ. ಇನ್ಥಾ ಊರಿಲಿಯೇ ಹುಟ್ಟಿ, ಇಲ್ಲಿಯೇ ಬೆಳದು, ಇಲ್ಲಿಯೇ ಬದುಕ್ಕೆಕ್ಕು ಹೇಳ್ರೆ ಪುಣ್ಯ ಮಾಡಿರೆಕ್ಕು!
ಹೇಳಿ ಆಲೋಚನೆ ಮಾಡಿಯೊಂಡಿತ್ತಿದ್ದೆ. ಅಲ್ಲಿ ಸುಮಾರು ಏಳೂವರೆ ಎಂಟು ಗಂಟೆ ಇತ್ತಿದ್ದೆ ಆನು. ಆ ಅವಧಿಲಿ ಆನು ಎಷ್ಟು ಹೊಸ ವಿಷಯಂಗಳ ತಿಳ್ಕೊಂಡಿತ್ತಿದ್ದೆ?
ಇನ್ನೊಂದರಿ ಇಲ್ಲಿಗೆ ಬಂದು ಇಲ್ಲಿಯಾಣ ಜೀವನಶೈಲಿಯ ಬಗ್ಗೆ ಒಂದು ಕಾರ್ಯಕ್ರಮ ಮಾಡೆಕ್ಕು ಹೇಳಿ ಆಲೋಚಿಸಿದೆ.
ಬಸ್ ಊರು ಬಿಟ್ಟು ತುಂಬಾ ದೂರ ಹೋತು. ಇಷ್ಟು ಹೊತ್ತು ಆಲೋಚನೆ ಮಾಡಿಯೊಂಡು ಸಮಯ ಕಳುದ್ದೇ ಗೊಂತಾಯ್ದಿಲ್ಲೆ. ಇನ್ನೊಂದು ಅರ್ಧ ಗಂಟೆ ಪ್ರಯಾಣ ಮಾಡಿರೆ ಇಳಿಯೆಕ್ಕಾದ ಸ್ಟಾಪ್ ಬತ್ತು. ಆ ಊರು ಬಿಟ್ಟು ಇಷ್ಟು ಹೊತ್ತಾದರೂ, ಬಸ್ ಇಷ್ಟು ದೂರ ಬಂದರೂ ಮನಸ್ಸಿಂದ ಹೋಟೇಲ್ ದೂರ ಹೋಯ್ದಿಲ್ಲೆ, ನಾಲಗೆಂದ ಕಾಪಿಯ ರುಚಿಯೂ!!

~*~*~

ಕು| ಅಭಿಜ್ಞಾ ಭಟ್ ಬೊಳುಂಬು

 ಕಥಾಸ್ಪರ್ಧೆಯ ಸಂಚಾಲಕಿ: ವಿಜಯಾಸುಬ್ರಹ್ಮಣ್ಯ ಕುಂಬಳೆ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×