Oppanna.com

ಗುರುವಂದನೆ-೨೦೧೫ ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ ಮೂರನೇ ಬಹುಮಾನಿತ ಕತೆ

ಬರದೋರು :   ವಿಜಯತ್ತೆ    on   29/12/2015    5 ಒಪ್ಪಂಗೊ

ಗುರುವಂದನೆ

2015 ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ  ಮೂರನೇ ಬಹುಮಾನಿತ ಕತೆ.

ಡಾ|| ಅಜಿತಾ ಶರ್ಮ

ಘಂಟೆ 6 ಆಗಿತ್ತು. ಮಧ್ಯಾಹ್ನ ಮಳೆ ಬಂದ ಕಾರಣ ಹವೆ ತಂಪಿತ್ತು. ಆದರೆ ಮಾರ್ಗ ಇಡೀ ಕೆಸರು-ಕೊಚ್ಚೆ. ದಾರಿಲಿ ನಡತ್ತವರ ಮೈಗೆ ಕೆಸರುನೀರು ರಟ್ಟದ್ದಾ೦ಗೆ ನಿಧಾನಕ್ಕೆ ಸ್ಕೂಟರ್ ಓಡ್ಸಿಗೊಂಡಿತ್ತಿದೆ. ಕಸ್ತಲಪ್ಪ ಮೊದಲು ಶೆಣೈ ಮಾಮ್ ಅಂಗಡಿಂದ ಮೈಸೂರು ಪಾಕುದೆ, ಮಿಕ್ಸ್ಚರುದೆ ಕಟ್ಟ್ಸಿಗೊಂಡು ಮನೆಗೆತ್ತೆಕ್ಕು. ಸ್ಕೂಟರ್ ನಿಲ್ಸಿ ಅಂಗಡಿಯ ಹತ್ರ ಹೋದರೆ ಅಂಗಡಿ ಬಂದ್. ಘಂಟೆ ನೋಡಿದೆ 6:05, ಸರಿ ಇನ್ನೂ ಹೊತ್ತಾಯಿದಿಲ್ಲೆ ಹೇಳಿ ‘ಉಡುಪಿ ಸ್ವೀಟ್ಸ್’ ಇಂಗೆ ಹೋಪದುಳಿ ತೀರ್ಮಾನ್ಸಿದೆ. ಸ್ಕೂಟರ್ ಶುರು ಮಾಡೆಕ್ಕು ಹೇಳುವಷ್ಟರಲ್ಲಿ ಯಾರೋ “ವೈಶಾಲಿ” ಹೇಳಿ ದಿನಿಗೇಳಿದವು. ಯಾರು ಹೇಳಿ ತಿರುಗಿ ನೋಡಿದರೆ ಲತಾ ಟೀಚರ್. ಸ್ಕೂಟರ್ ಸ್ಟಾಂಡ್ ಹಾಕಿ ಹೆಲ್ಮೆಟ್ ತೆಗದೆ. ಲತಾ ಟೀಚರಿನ ನೋಡಿ ಸುಮಾರು ವರ್ಷ ಕಳೆದಿತ್ತು. ಹತ್ತನೆ ಕ್ಲಾಸ್ ಮುಗಿದ ನಂತರ ಎನ್ನ ವಿದ್ಯಾಭ್ಯಾಸ ಎಲ್ಲ ದೂರದ ಮುಂಬೈ, ಜೈಪುರಲ್ಲಿ ಆದ ಕಾರಣ ಊರಿಂಗೆ ಬಪ್ಪದೆ ಅಪರೂಪ. ಮದುವೆ ಆದ ಮೇಲೆ ಇಪ್ಪದು ಪಾಂಡಿಚೆರಿಲಿ. ಶಾಲೆ ಕಡೆ ಹೋಗದ್ದೆ 15 ವರ್ಷಗಳೇ ಕಳೆದಿತ್ತು.

“ಹೇಂಗಿದ್ದೆ ವೈಶಾಲಿ, ನೋಡದ್ದೆ ಸುಮಾರು ಸಮಯಾತು. ಎಲ್ಲಿದ್ದೆ, ಎಂತ ಕೆಲಸ, ಮದುವೆ ಆಯಿದ? ಮೊನ್ನೆ ನಿನ್ನ ಕ್ಲಾಸಿನ ಜಯಶ್ರೀ, ವಸುಧಾ, ತ್ರಿವೇಣಿ ಎಲ್ಲಾ ಕಾಂಬಲೆ ಸಿಕ್ಕಿತ್ತಿದವು ಕೃಷ್ಣ ಮಠದ ಹತ್ರ. ಜಯಶ್ರೀ, ವಸುಧಾ ಇಬ್ರೂ ಮದುವೆ ಆಗಿ ಮಂಗಳೂರಿಲಿದ್ದವು. ಒಂದೆರಡು ಸರ್ತಿ ಕಾಂಬಲೆ ಸಿಕ್ಕಿದ್ದವು ಇದರ ಮೊದಲೆ. ತ್ರಿವೇಣಿ ಲಂಡನ್ಲಿದ್ದು, ಒಂದು ಮಗಳು, ಗಂಡ ಡಾಕ್ಟರ್..”, ಒಂದೇ ಉಸಿರಿಂಗೆ ಟೀಚರ್ ಹೇಳ್ತಾ ಇದ್ದವು. ಆಶ್ಚರ್ಯ ಆತು. ಲತಾ ಟೀಚರ್ ಸ್ವಭಾವತಃ ಮಿತಭಾಷಿ. “ಎಂಗಳ ಮನೆ ಇಲ್ಲಿಯೇ ಹತ್ರಲ್ಲಿ, ಖಂಡಿತಾ ಬರೆಕ್ಕು…” “ಆನು ಪಾಂಡಿಚೆರಿಲಿಪ್ಪದು ಟೀಚರ್, ಆನುದೆ ಎನ್ನ ಗಂಡ೦ದೆ ಇಬ್ರೂ ಡಾಕ್ಟರ್ಸ್. ಒಂದು ಮಗಳು, ಎಲ್.ಕೆ.ಜೀಲಿ ಓದ್ತಾ ಇದ್ದು. ನಿಂಗ ಹೇ೦ಗಿದ್ದಿ?”, ಕೇಳಿದೆ. ಟೀಚರ್ ಮುಖ ಇಳಿದೋತು. ಎಂತ ವಿಷಯಾಳಿ ಅರ್ಥ ಆಯಿದಿಲ್ಲೆ. ಅಷ್ಟರಲ್ಲಿ ಮಳೆ ಜಿನುಗುಲೆ ಶುರು. “ಓಹ್, ಮಳೆ ಜೋರು ಬಕ್ಕೀಗ. ಬಾ ಮಳೆ ಕಮ್ಮಿ ಅಪ್ಪವರೆಗೆ ಎನ್ನ ಮನೇಲಿ ನಿಂಬಲಕ್ಕು..”, ಹೇಳಿದವು ಟೀಚರ್. ಸುಮಾರು ವರ್ಷ ಕಳೆದು ಸಿಕ್ಕಿದ ಕಾರಣ ಸಂಕೋಚಂದ ಒಪ್ಪಿಗೊಂಡೆ.

ಲತಾ ಟೀಚರ್ ಹೇಳಿರೆ ಎಂಗಳ ಬ್ಯಾಚಿಲಿ ಎಲ್ಲರಿಂಗು ಪ್ರಾಣ. ‘ಸೋಶಿಯಲ್ ಸ್ಟಡೀಸ್’ ಕ್ಲಾಸ್ ಹೇಳಿರೆ ಎನಗೆ ಬೋರ್. ಯಾವ ರಾಜಂಗ ಎಷ್ಟನೇ ಇಸವಿ೦ದ ಎಷ್ಟನೇ ಇಸವಿವರೆಗೆ ಆಳಿಗೊಂಡಿತ್ತಿದವು, ಎಷ್ಟನೇ ಇಸವಿಲಿ ಯಾರು ಚಳುವಳಿ ಮಾಡಿದವು, ಭಾರತದ ಸಂವಿಧಾನಲ್ಲಿ ಎಷ್ಟು ಅನುಚ್ಛೇದ೦ಗ ಇದ್ದು ಹೇಳಿ ಎನಗೆ ನೆನಪುಳಿತ್ತೇ ಇಲ್ಲೆ. ಆದರೆ ಲತಾ ಟೀಚರ್ ಎಂಥಾ ಬೋರಿಂಗ್ ಕ್ಲಾಸನ್ನೂ ಸ್ವಾರಸ್ಯಕರವಾಗಿ ಬದಲಾಯಿಸುವ ತಾಕತ್ತಿಪ್ಪ ಮಾಂತ್ರಿಕರು. ಅವರ ಪಾಠ ಕೇಳಿದ ನಂತರ ಎನಗುದೆ ನಮ್ಮ ದೇಶದ ಪರಂಪರೆ ಬಗ್ಗೆ ಹೆಮ್ಮೆ ಉಂಟಾಗಿಯೊಂಡಿತ್ತು. ಎಂಗಳ ಶಾಲೆ, ದೊಡ್ಡ ಮಾವಿನ ಮರದ ಕೆಳ ಆಡಿಗೊ೦ಡಿತ್ತ ‘ಮೊಸಳೆ-ಮೊಸಳೆ’ ಆಟ, ಮಳೆ ನೀರು ಹರಿದು ಹೋಪಲೆ ಮಾಡಿದ ಸಣ್ಣ ಸುರಂಗವ ‘ಓಬವ್ವನ ಕಿಂಡಿ’ ಹೇಳಿ ನಾಮಕರಣ ಮಾಡಿ, ಅದರ ಒಳ ನುಸುಳಿಗೊಂಡು ಕ್ಲಾಸ್ ತಪ್ಪಿಸಿ ಆಟದ ಮೈದಾನಕ್ಕೆ ಪರಾರಿಯಾಗಿಯೊಂಡಿತ್ತದು, ಹಾಂಗೇ ಸಿಹಿ-ಸವಿ ನೆನಪುಗಳ ಸುಳಿಲಿ ತೇಲಿ ಹೋದೆ.

“ಬಾ, ಇದೇ ಎಂಗಳ ಮನೆ..”, ಲತಾ ಟೀಚರ್ ಹೇಳಿಯಪ್ಪಗ ಯೋಚನಾ ಲಹರಿ ಮುರಿದು ಮತ್ತೆ ವಾಸ್ತವಕ್ಕೆ ಮರಳಿದೆ. ಮನೆ ನೋಡುವಾಗಲೆ ಲತಾ ಟೀಚರಿನ ಅಭಿರುಚಿ ಎದ್ದು ಕಂಡುಗೊಂಡಿತ್ತು. ಸಣ್ಣ, ಚೊಕ್ಕಕಿಪ್ಪ ಹೂದೋಟ, ವಿವಿಧ ಹೂ-ಹಣ್ಣುಗಳ ಗಿಡಂಗ ಮನಸ್ಸಿಂಗೆ ಮುದ ಕೊಡುವಾ೦ಗಿತ್ತಿದವು. “ಹೇ ಫಿಯೋನಾ, ಅಮ್ಮ ಬಂದವು…”, ಪುಟ್ಟ ಪೋರಿಯ ಧ್ವನಿ. ಕಣ್ಣೆತ್ತಿ ನೋಡಿದೆ. ಮೋಟು ಜಡೆ ಎರಡು ಕುಣಿಶಿಗೊಂಡು ಲತಾ ಟೀಚರಿನ ಬಂದು ಅಪ್ಪಿಗೊಂಡತ್ತು. ಮುದ್ದಾದ ದುಂಡು ಮುಖ, ಬಟ್ಟಲು ಕಂಗಳುಗ, ದಾಳಿಂಬೆ ಬೀಜದಂತ ಹಲ್ಲುಗಳ ಪಂಕ್ತಿಗೆ ದೃಷ್ಟಿ ಇಟ್ಟಾಂಗೆ ಎದುರಾಣ ಎರಡು ಹಲ್ಲು ಮಾಯ! “ಇದು ಎನ್ನ ಸಣ್ಣ ಮಗಳು ಶಾಲ್ಮಲಿ-ಜೇನ್”, “ಶಾಲೂ, ಇವು ವೈಶಾಲಿ ಆಂಟಿ. ಎನ್ನ ಸ್ಟೂಡೆಂಟ್”, ಟೀಚರ್ ಪರಿಚಯ ಮಾಡಿದವು. ಟೀಚರಿನ ಗಂಡ ಕ್ರಿಶ್ಚಿಯನ್ ಮತದವು ಹೇಳಿ ನೆನಪಾತು. “ಹೆಲ್ಲೋ ವೈಶಾಲಿ ಆಂಟಿ, ಹೌ ಡೂ ಯೂ ಡೂ…”, ಅರಳು ಹುರಿದಾಂಗೆ ಇಂಗ್ಲೀಷಿಲಿ ಕೇಳಿತ್ತು. “ಐ ಆಮ್ ಗುಡ್, ಹೌ ಡೂ ಯೂ ಡೂ?”, ಕೇಳಿದೆ. “ಐ ಆಮ್ ಗುಡ್ ಟೂ…”. “ಅಮ್ಮಾ, ಫಿಯೋನಾ ಎನ್ನ ಟೆಡ್ಡಿ ಬೇರ್ ತೆಕ್ಕೊಂಡಿದು, ವಾಪಸ್ ಕೊಡ್ತಿಲ್ಲೆ..”, ರಾಗ ಎಳೆದತ್ತು. “ಆತು ಪುಟ್ಟ, ಆನು ಹೇಳ್ತೆ ಅದರ ಹತ್ರ”, ಹೇಳಿ ಪುಸಲಾಯಿದವು ಟೀಚರ್. “ವೈಶಾಲಿ, ಒಳ ಬಾ”, ಹೇಳಿ ಬಾಗಿಲು ದೂಡಿ ಒಳನಡೆದವು ಟೀಚರ್. ಆನೂ ಚಪ್ಪಲಿ ಹೆರಬಿಟ್ಟು ಅನುಸರಿಸಿದೆ.

ಒಳ ಹಾಲಿಲಿ ಕುರ್ಚಿ ಮೇಲೆ ಕೂದೆ. ಶಾಲ್ಮಲಿ ಒಟ್ಟಿಂಗೆ ಇನ್ನೊಂದು ಮುದ್ದು ಹುಡುಗಿಯ ಕಂಡೆ. “ಇದು ಎನ್ನ ದೊಡ್ಡ ಮಗಳು ಫಿಯೋನಾ-ವಾಣಿ, ಐದನೆ ಕ್ಲಾಸ್. ಶಾಲೂ ಈಗ ಯು.ಕೆ.ಜೀ. ವಾಣಿ, ಇವು ವೈಶಾಲಿ ಆಂಟಿ, ಎನ್ನ ಸ್ಟೂಡೆಂಟ್”, ಎನ್ನ ಪರಿಚಯ ಮಾಡ್ಸಿದವು ಟೀಚರ್. “ಹಾಯ್ ಫಿಯೋನಾ ಹೌ ಡೂ ಯೂ ಡೂ…”, ಶಾಲ್ಮಲಿ ಕೇಳಿದಾಂಗೆ ಆನುದೆ ಇಂಗ್ಲೀಷಿಲಿ ಕೇಳಿದೆ. ಫಿಯೋನಾ ಎನ್ನ ಕಂಡು ಮುಗುಳ್ನಗೆ ಬೀರಿ ಎರಡೂ ಕೈ ಜೋಡ್ಸಿ “ನಮಸ್ಕಾರ, ಆನು ಕ್ಷೇಮವಾಗಿದ್ದೆ, ನಿಂಗ…?”, ಹೇಳಿ ಅಚ್ಚ ಕನ್ನಡಲ್ಲಿ ಕೇಳಿತ್ತು. ಇದೆಂತ ಅಕ್ಕ-ತಂಗಿ ತದ್ವಿರುದ್ಧ ಹೇಳಿ ಆಶ್ಚರ್ಯ ಆತು. ಎನ್ನ ಮುಖ ಕಂಡು ಟೀಚರ್ ನಗಾಡಿ ಹೇಳಿದವು, “ಫಿಯೋನಾ ಅಚ್ಚ ಹಿಂದೂ ಸಂಸ್ಕೃತಿ ಪಾಲ್ಸುತ್ತು, ಹಾಂಗಾಗಿ ಕನ್ನಡಲ್ಲಿ ಮಾತಾಡಿದ್ದು. ಶಾಲ್ಮಲಿಗೆ ಕ್ರಿಶ್ಚಿಯನ್ ಸಂಸ್ಕಾರಂಗೋ, ಎನ್ನ ಗಂಡನ ಮನೆಯವರ ಕ್ರಮಂಗೋ”! ಅಷ್ಟರಲ್ಲಿ ಒಬ್ರು ಪ್ರಾಯದ ಹೆಮ್ಮಕ್ಕೊ ಬೆಡ್ ರೂಮಿ೦ದ ಹೆರ ಬಂದವು. “ಜಾನ್ ಎನ್ನ ಮಾತು ಕೇಳ್ತಾ ಇಲ್ಲೆ, ಊಟ ಮಾಡಿದ್ದಾಯಿಲ್ಲೆ, ಈಗ ಹಾಲಿನ ಗ್ಲಾಸ್ ತಟ್ಟಿ ಚೆಲ್ಲಿದಾ. ನೀನೇ ಚೂರು ಮಂಕಾಡ್ಸು ಅವನ…”, ಹೇಳಿ ಎನ್ನ ಕಂಡಪ್ಪಗ ಮಾತು ನಿಲ್ಸಿದವು. “ಅತ್ತೇ, ಇದು ವೈಶಾಲಿ ಹೇಳಿ, ಎನ್ನ ಸ್ಟೂಡೆಂಟ್ ಆಗಿತ್ತು. ವೈಶಾಲಿ, ಇವು ಎನ್ನ ಅತ್ತೆ”, ಹೇಳಿ ಪರಿಚಯಿಸಿದವು ಟೀಚರ್. “ನಮಸ್ತೆ”, ಹೇಳಿದೆ, ಅವುದೆ ನಮಸ್ತೆ ಮಾಡಿದವು.

“ಆಸರಿಂಗೆ೦ತಕ್ಕು?”, ಕೇಳಿದವು ಟೀಚರ್. “ಈಗ ಎಂತ ಬೇಡ ಟೀಚರ್, ಮನೇಲಿ ಕಾಫಿ ಕುಡಿದೇ ಹೊರಟದು”, ಹೇಳಿದೆ. “ಹಾಂಗೆ ಹೇಳಿದರಾವ್ತ?” “ವಾಣಿ ಚೂರು ನೀರು ತೆಕ್ಕೊಂಡು ಬಾ ಆಂಟಿಗೆ ಕುಡಿಯೊಲೆ”, ಹೇಳಿ ದೊಡ್ಡ ಮಗಳತ್ರೆ ಹೇಳಿದವು ಟೀಚರ್. “ಈಗ ಬಂದೆ..”, ಹೇಳಿ ಬೆಡ್ ರೂಮಿಂಗೆ ಹೋದವು ಟೀಚರ್. ಲತಾ ಟೀಚರಿನ ಅತ್ತೆ ಎನ್ನ ಹತ್ರ ಕೂದುಗೊಂಡು ಎಲ್ಲಿ ಮನೆ, ಯಾವ ಊರು, ಎಲ್ಲ ಕುಶಲೋಪರಿ ಕೇಳುಲೆ ಆರಂಭಿಸಿದವು. ಅಷ್ಟರಲ್ಲಿ ಫಿಯೋನಾ-ವಾಣಿ ನೀರು ತಂದು ಕೊಟ್ಟತ್ತು. ಕುಡಿತ್ತ ಇಪ್ಪಗ ಬೆಡ್ ರೂಮಿಂದ ಯಾರೋ ಕೂಗುವ ಶಬ್ದ ಕೇಳಿತ್ತು. ಆನು ಇಲ್ಲಿ ಇಪ್ಪದು ಉಚಿತವೋ ಅಲ್ಲದೋ ಹೇಳಿ ಯೋಚಿಸಿಗೊಂಡಿಪ್ಪಗಲೇ ಒಳಾನ ರೂಮಿಂದ ವೀಲ್ ಚೇರ್ ದೂಡಿಗೊಂಡು ಟೀಚರ್ ಬಂದವು. “ಇವ ಎನ್ನ ಮಗ ಪ್ರದೀಪ್-ಜಾನ್”, ಹೇಳಿದವು ಟೀಚರ್. ಮುದ್ದಾದ ಗುಂಡು ಮುಖ, ಆದ್ರೆ ಬುದ್ಧಿಮಾ೦ದ್ಯ. ಕಾಲುಗ ಎರಡೂ ನಿಷ್ಪ್ರಯೋಜಕವಾಗಿ ಅಲ್ಲಾಡಿಗೊಂಡಿತ್ತಿದವು. ಕೈಗ ಸೊಟ್ಟ೦ಗಿತ್ತಿದವು. “ಅವಂಗೆ ‘ಸೆರೆಬ್ರಲ್ ಪಾಲ್ಸಿ’ ಇದ್ದು”, ಟೀಚರ್ ಮೆಲ್ಲಂಗೆ ಹೇಳಿದವು. “ಜಾನ್, ವೈಶಾಲಿ ಆಂಟಿಗೆ ಹೆಲ್ಲೋ ಹೇಳು”, ನಿಧಾನಕ್ಕೆ ಬಿಡಿಸಿ ಹೇಳಿದವು ಟೀಚರ್ ಮಗನತ್ರ. ಎನ್ನ ನೋಡಿ ಮಂದಹಾಸ ಬೀರಿದ ಜಾನ್. “ಹೆಲ್ಲೋ ಜಾನ್”, ಹೇಳಿದೆ ಆನು.

ಲತಾ ಟೀಚರ್ ಅವರ ಅತ್ತೆ ನಿಂಬೆ ಪಾನಕ ತಂದು ಕೊಟ್ಟವು ಅಷ್ಟರಲ್ಲಿ. ಎನ್ನ ಬ್ಯಾಗಿಲಿ ಚಾಕಲೇಟ್ ಇಪ್ಪದು ನೆನಪಾಗಿ ತೆಗದು ಮಕ್ಕೊಗೆ ಕೊಟ್ಟೆ. ಶಾಲೂ, ವಾಣಿ ಇಬ್ರೂ ಖುಷಿಲಿ ತೆಕ್ಕೊಂಡವು. “ಧನ್ಯವಾದಂಗೋ”, ವಾಣಿ ಹೇಳಿತ್ತು. “ಏಯ್ ಶಾಲೂ ಆಂಟಿಗೆ ಥ್ಯಾಂಕ್ಸ್ ಹೇಳು”, ತಂಗಿಗೆ ಹೇಳಿತ್ತು. “ಥ್ಯಾಂಕ್ಸ್ ವೈಶಾಲಿ ಆಂಟಿ..”, ರಾಗ ಎಳೆದತ್ತು ಶಾಲೂ. “ಇದು ಜಾನ್ ಇಂಗೆ ಚಾಕಲೇಟ್”, ಹೇಳಿ ಟೀಚರ್ ಕೈಲಿ ಕೊಟ್ಟೆ. “ಅವಂಗೆ ಚಾಕಲೇಟ್ ಇಷ್ಟ, ಆದ್ರೆ ಹಲ್ಲು ತಿಕ್ಕುಲೆ ಬಿಡ್ತಾ ಇಲ್ಲೆ, ಹಲ್ಲೆಲ್ಲಾ ಕೆಟ್ಟು ಹೋಯ್ದು”, ಟೀಚರ್ ಮೆಲುದನಿಲಿ ಹೇಳಿದವು. “ಟ್ರೀಟ್ಮೆಂಟ್ ಯಾರತ್ರ ಮಾಡ್ಸುತ್ತ ಇದ್ದಿ ಟೀಚರ್?”, ಕೇಳಿದೆ. “ಡಾ|| ಸುಧಾಕರ್ ಹೇಳಿ ಮಕ್ಕಳ ತಜ್ಞರಿದ್ದವು, ಬಸ್ ಸ್ಟಾಂಡ್ ಹತ್ರ. ಅವರ ಟ್ರೀಟ್ಮೆಂಟ್. ಕಾಲಿಂದು ಎರಡು ಸರ್ಜರಿ ಆಯೆಕ್ಕು ಹೇಳಿದ್ದವು. ಕೈಗೆ ನಂತರ. ಹನ್ನೆರಡು ವರ್ಷ ಕಳಿದತ್ತು ಅವಂಗೆ ಆದರೂ ಮನಸ್ಸು ಆರು ವರ್ಷದವರ ಹಾಂಗೆ”, ಕಣ್ಣೀರು ಸುರಿಸಿಗೊಂಡು ಟೀಚರ್ ವಿವರಿಸಿದವು. “ಎನ್ನ ಗಂಡ ಬೈಕ್ ಆಕ್ಸಿಡೆಂಟ್ಲಿ 2 ವರ್ಷದ ಹಿಂದೆ ತೀರಿ ಹೋದವು. ಅತ್ತೆಗೂ ಪ್ರಾಯ ಆತು, ಆರೋಗ್ಯ ಸರಿ ಇಲ್ಲೆ. ಎನ್ನ ಒಬ್ಬನ ಸಂಬಳಲ್ಲಿ ಎಲ್ಲಾ ಖರ್ಚೂ ತೀರೆಕ್ಕು..”, ನಿಟ್ಟುಸಿರು ಬಿಟ್ಟವು ಟೀಚರ್.

ಟೀಚರ್ ಮನೆ ಪರಿಸ್ಥಿತಿ ಕಂಡು ಎನಗೂ ಕಣ್ಣಿಲಿ ನೀರು ಬಂತು. “ಆಪರೇಷನಿಂಗೆ ಎಷ್ಟು ಖರ್ಚಕ್ಕು ಹೇಳಿದ್ದವು ಟೀಚರ್?”, ಕೇಳಿದೆ. “ ಹೆಚ್ಚೂ ಕಡಿಮೆ 2-3 ಲಕ್ಷ ಬೇಕಕ್ಕು, ಎಲ್ಲಿಯೂ ಹಣ ಹೊಂದುಸುಲೆ ಎಡಿಗಾಯಿದಿಲ್ಲೆ”, ಅಳಲು ತೋಡಿಗೊಂಡವು ಟೀಚರ್. ಮಳೆ ಕಮ್ಮಿ ಆಗಿತ್ತಿದು, ಇನ್ನೊಂದರಿ ಬತ್ತೆ ಹೇಳಿ ಹೆರ ನಡೆದೆ. ಮನೆ ಮುಟ್ಟುವಾಗ ಮಗಳು ದಿಯಾ ಕಾದುಗೊಂಡಿತ್ತು. “ಅಮ್ಮಾ, ಮೈಸೂಲು ಪಾಕ್ ತಂದೆಯಾ”, ತೊದಲಿತ್ತು ದಿಯಾ. “ಇಲ್ಲೆ ಕಂದಾ, ಮಳೆ ಬಂತಲ್ಲಾ. ಸಾರಿ ಪುಟ್ಟು, ನಿನಗೆ ಚಾಕಲೇಟ್ ತಯಿ೦ದೆ ಇದಾ”, ಹೇಳಿ ಬ್ಯಾಗಿಂದ ತೆಗದು ಕೊಟ್ಟೆ. “ಎಂತ ಮಳೆ ಬಂದು ಲೇಟ್ ಆತಾ?”, ಕೇಳಿತ್ತು ಅಮ್ಮ. “ಹಾಂ, ಮತ್ತೆ ಶೆಣೈ ಮಾಮ್ ಅಂಗಡಿ ಬಂದ್ ಇತ್ತು. ಅಲ್ಲಿ ಲತಾ ಟೀಚರ್ ಸಿಕ್ಕಿದವು. ಅವರ ಮನೆಗೆ ಹೋಗಿ ಬಂದೆ. ಅಮ್ಮಾ, ಅವರ ಮನೆ ಪರಿಸ್ಥಿತಿ ನೋಡಿ ಬೇಜಾರು ಆತು. ಅವರ ಗಂಡ ತೀರಿ ಹೋಗಿ 2 ವರ್ಷ ಆತಡ. ಇಬ್ರು ಪುಟ್ಟು ಹುಡುಗಿಯರ ವಿದ್ಯಾಭ್ಯಾಸ ಆಯೆಕ್ಕು. ಮಗಂಗೆ ಸೆರೆಬ್ರಲ್ ಪಾಲ್ಸಿ. ಅವನ ಆಪರೇಷನ್ ಮಾಡ್ಸುಲೇ 2-3 ಲಕ್ಷ ಬೇಕಕ್ಕು. ಅವರ ಅತ್ತೆಗೂ ಆರೋಗ್ಯ ಸರಿ ಇಲ್ಲೆ ಅಡ ಪಾಪ”, ಹೇಳಿದೆ. “ಅಪ್ಪು, ಕಷ್ಟ ಇಪ್ಪವಕ್ಕೆ ಮತ್ತಷ್ಟು ಕಷ್ಟ ಬಪ್ಪದು ಜೀವನಲ್ಲಿ…”, ಹೇಳಿ ಅಮ್ಮಂದೆ ನಿಟ್ಟುಸಿರು ಬಿಟ್ಟವು.

ಇರುಳು ಎಷ್ಟು ಪ್ರಯತ್ನಪಟ್ಟರೂ ಒರಕ್ಕು ಬೈ೦ದಿಲ್ಲೆ. ಟೀಚರ್ ಮನೆಲಿ ನೋಡಿದ್ದೆಲ್ಲ ಕಣ್ಣಿಂಗೆ ಕಟ್ಟಿಗೊಂಡಿತ್ತು. ಘಂಟೆ ಎಷ್ಟಾತು ಹೇಳಿ ನೋಡ್ಲೆ ಮೊಬೈಲ್ ತೆಗದೆ. 12:30 ಆಗಿತ್ತು. ವಾಟ್ಸಾಪ್ ಲಿ 19 ಮೆಸೇಜ್ ಹೇಳಿ ಕಂಡತ್ತು. ಹೇ೦ಗೂ ಒರಕ್ಕು ಬತ್ತಿಲ್ಲೆನ್ನೆ ಹೇಳಿ ವಾಟ್ಸಾಪ್ ಓಪನ್ ಮಾಡಿದೆ. ಎನ್ನ ಕ್ಲಾಸಿನವರ ಗ್ರೂಪಿಲಿ ಮೆಸೇಜುಗ ಇತ್ತದು. 15 ಜನ ಆನ್-ಲೈನ್ ಹೇಳಿ ಕಂಡತ್ತು. ನಿಧಾನಕ್ಕೆ ಒಂದು ಯೋಚನೆ ಹೊಳದತ್ತು. ಗ್ರೂಪಿಲಿ ಎಲ್ಲರಿಂಗೂ ಲತಾ ಟೀಚರ್ ಹೇಳಿರೆ ಇಷ್ಟ. ಟೀಚರಿನ ಆನು ಕಂಡದು, ಅವರ ಮನೆ ಪರಿಸ್ಥಿತಿ ಎಲ್ಲವನ್ನೂ ಬಿಡಿಸಿ ಹೇಳಿದೆ. ನೀತಾ ಅರ್ಧಕ್ಕೇ ‘ಸಾಕು, ಇನ್ನು ಓದುಲೇ ಎಡಿತ್ತಿಲ್ಲೆ’ ಹೇಳಿ ಮೆಸೇಜ್ ಮಾಡಿತ್ತು. ‘ಲತಾ ಟೀಚರ್ ನಮ್ಮ ವ್ಯಕ್ತಿತ್ವ ರೂಪಿಸಿದವು. ಅವರಿಂದಾಗಿ ಇಂದು ನಾವೆಲ್ಲಾ ಇಷ್ಟು ಒಳ್ಳೆ ಬದುಕು ಬದುಕುತ್ತಾ ಇದ್ದೆಯಾ’, ಹೇಳಿ ಪ್ರಜ್ಞಾ, ‘ಅಪ್ಪು, ಲತಾ ಟೀಚರಿಂಗೋಸ್ಕರ ನಾವು ಎಂತ ಸಹಾಯ ಮಾಡಿದರೂ ಅದು ಕಮ್ಮಿಯೇ’, ಹೇಳಿ ಆಶಾ ಟೈಪ್ ಮಾಡಿದವು. ‘ಆನು ನಾಳೆ ಒಂದು ಬ್ಯಾಂಕ್ ಅಕೌಂಟ್ ಓಪನ್ ಮಾಡ್ತೆ, ಯಾರಿಂಗೆಲ್ಲ ಧನ-ಸಹಾಯ ಮಾಡ್ಲೆ ಇಷ್ಟ ಇದ್ದು ಅವು ಆ ಅಕೌಂಟಿಂಗೆ ದುಡ್ಡು ಕಳ್ಸಿ. ಆನು ಇನ್ನೂ 10 ದಿನ ಊರಿಲಿದ್ದೆ. ಅಷ್ಟರಲ್ಲಿ ಎಷ್ಟು ದುಡ್ಡು ಸಂಗ್ರಹ ಆವ್ತೋ ಅಷ್ಟರ ಆನು ಲತಾ ಟೀಚರ್ ಮಗನ ಆಪರೇಷನಿಂಗೆ ಹೇಳಿ ಅವಕ್ಕೆ ಅರ್ಪಿಸುತ್ತೆ’, ಹೇಳಿ ಟೈಪ್ ಮಾಡಿದೆ. ‘ಅಕ್ಕು, ಒಳ್ಳೆ ನಿರ್ಧಾರ. ನಿನ್ನೊಟ್ಟಿ೦ಗೆ ಎಂಗೆಲ್ಲಾ ಇದ್ದೆಯಾ’, ಹೇಳಿ ತ್ರಿವೇಣಿ, ವರ್ಷಾ, ಜ್ಯೋತ್ಸ್ನಾ, ಶಾರದಾ, ಎಲ್ಲರೂ ಟೈಪ್ ಮಾಡಿದವು. ಓದಿ ನೆಮ್ಮದಿಂದ ಒರಗಿದೆ. ಮರುದಿನ ವಯೋಲಾ, ಡಯಾನಾ, ಅಂಜುಮ್, ಅಮ್ರೀನ್, ಜಯಶ್ರೀ, ಶಿಪ್ರಾ, ಎಲ್ಲರದ್ದೂ ಸಮ್ಮತಿ ಬಂತು.

ಒಂದು ವಾರ ಕಳಿದು ಲತಾ ಟೀಚರ್ ಮನೆಗೆ ಹೋದೆ. ಎನ್ನ ನೋಡಿ ಟೀಚರಿಂಗೆ ಆಶ್ಚರ್ಯ. ಬಂದ ಕಾರಣ ವಿವರಿಸಿಯಪ್ಪಗ ಟೀಚರ್ ಮಾತಾಡಿದ್ದವಿಲ್ಲೆ. ಎನ್ನ ಮಾತಿಂದ ಅವರ ಸ್ವಾಭಿಮಾನಕ್ಕೆ ಧಕ್ಕೆ ಆತ ಹೇಳಿ ಕಸಿ-ವಿಸಿ ಆತು. ಟೀಚರ್ ಕಣ್ಣಿಂದ ಒಂದೇ ಹನಿ ನೀರು. “ವೈಶಾಲಿ, ಎನ್ನ ಕೈ-ಬಾಯಿ ಕಟ್ಟಿ ಹಾಕಿದೆಯಲ್ಲೇ! ನಿಂಗೆಲ್ಲ ಎನ್ನ ಸ್ಟೂಡೆಂಟ್ಸ್ ಅಲ್ಲ, ಎನ್ನ ಮಕ್ಕ ಹೇಳಿ ಪ್ರೀತಿಂದ ಪಾಠ ಮಾಡಿದೆ. ಇಂದು ನಿಂಗೊಗೆಲ್ಲ ಆನೇ ಜನ್ಮ ಕೊಟ್ಟ ಹಾಂಗೆ ಅನ್ಸುತ್ತು. ಎನ್ನ ಬದುಕು ಧನ್ಯ…”, ಮುಂದೆ ಟೀಚರಿಂಗೆ ಮಾತಾಡಲೆ ಎಡಿಗಾಯಿದಿಲ್ಲೆ, ಎನಗೆ ಕೇಳಲೂ ಎಡಿಗಾಯಿದಿಲ್ಲೆ. ಎನ್ನ ತಬ್ಬಿ ಹಿಡಿದು ಮನಸಾರೆ ಅತ್ತುಬಿಟ್ಟವು. ಎನ್ನ ಕಣ್ಣಿಲಿಯೂ ನೀರು. ಇಬ್ಬರ ಮನಸ್ಸೂ ತಿಳಿಯಾದ ಮೇಲೆ ಹರಸಿ ಕಳ್ಸಿದವು. ವಾಟ್ಸಾಪ್ ಲಿ ಮೆಸೇಜ್ ಕಳುಸಿದೆ, ‘ ಲತಾ ಟೀಚರಿಂಗೆ ಚೆಕ್ ಕೊಟ್ಟು ಬಂದೆ. ಒಟ್ಟು ಸಂಗ್ರಹ ಆದ್ದು 3,21,800/- ರೂಪಾಯಿ. ಸಹಕರಿಸಿದ ಎಲ್ಲರಿಂಗೂ ಧನ್ಯವಾದ’.

~~~~****~~~~~

 {ಕಳುಹಿಸಿದವು, ವಿಜಯಾಸುಬ್ರಹ್ಮಣ್ಯ,ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾಸ್ಪರ್ಧೆ}

 

5 thoughts on “ಗುರುವಂದನೆ-೨೦೧೫ ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಲಿ ಮೂರನೇ ಬಹುಮಾನಿತ ಕತೆ

  1. ಆಧುನಿಕ ತಂತ್ರಜ್ಞಾನದ ಧನಾತ್ಮಕ ಉಪಯೋಗವ ಸೊಗಸಾಗಿ ನಿರೂಪಣೆ ಮಾಡಿದ್ದಿ. ಅಭಿನಂದನೆಗಳು ಮತ್ತು ಶುಭಾಶಯಗಳು

  2. ನಿಜಾರ್ಥದ ಗುರುವ೦ದನೆ.. ಒಳ್ಳೆ ಕಥಾವಸ್ತು -ನಿರೂಪಣೆ.ಅಭಿನ೦ದನೆಗೊ.

  3. ಟೀಚರ ಬೇಜಾರಿನ ವಿಷಯ ಕೇಳಿ ದು:ಖ ಉಮ್ಮಳುಸಿ ಬಂತು. ಅವರ ವಿದ್ಯಾರ್ಥಿಗಳ ಒಳ್ಳೆ ಮನಸು ಕಂಡು ಬೇಜಾರಿಲ್ಲಿಯೂ ಕೊಶಿಯಾತು. ಬೇರೆ ತರದ ಕಥೆಯಾದರೂ ಲಾಯಕಿತ್ತು. ಡಾಕ್ಟ್ರಕ್ಕಂಗೆ ಅಭಿನಂದನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×