ಚಂದ್ರಣ್ಣನ ಮನೆಂದ ತೋಟಕ್ಕೆ ಹೋಪ ದಾರಿ ಕರೇಲಿ ತೋಡಿನ ಹತ್ತರೆ ಒಂದು ಬೆಳಿ ಸಂಪಗೆ ಸೆಸಿ ತಂದು ನೆಟ್ಟಿತ್ತಿದ್ದವು ಅವರ ಅಪ್ಪ°. ಸಪೂರಕೆ ಉದ್ದಕೆ ಹೋದ ಆ ಸೆಸಿಲಿ ಹಲವು ವರ್ಷ ಆದರೂ ಹೂಗು ಬಿಟ್ಟಿದೇಯಿಲ್ಲೆ.ಆ ವರ್ಷ ತೋಡಿನ ಹೊಡೆಲಿ ಸಣ್ಣ ಗೆಲ್ಲಿನ ಕೊಡೀಲಿ ಏಳೆಂಟು ಹೂಗು ಬಿಟ್ಟತ್ತು.ಸಣ್ಣ ಹೂಗಾದರೂ ಅದಕ್ಕೆ ತುಂಬ ಪರಿಮ್ಮಳ.ಹೂಗರಳಿದ್ದು ಕಂಡು ಭಾಮೆಯಕ್ಕಂಗೆ ಕೊಶಿಯಾತು.
“ಎಷ್ಟೊರ್ಷಾತು ತಂದು ನೆಟ್ಟು.ಇನ್ನು ಹೂಗಾಗ ಗ್ರೇಶಿತ್ತಿದ್ದೆ. ಕೊಯ್ವಲೆ ಎಡಿತ್ತರೆ ದೇವರ ಪೂಜಗೆ ಹಾಕಲಾವ್ತಿತು.ಅಷ್ಟೆತ್ತರಲ್ಲಿಪ್ಪ ಕಾರಣ ಕೊಯ್ವಲೆಡಿಯ.ಅಂದರೂ ತಂದು ನೆಟ್ಟದಕ್ಕೆ ಹೂಗಾತನ್ನೇಳಿ ಸಮದಾನ”.
” ಅದರ ಬೇಕಾರೆ ಆನು ಕೊಯ್ದು ಕೊಡುವೆ ಅಜ್ಜೀ” ಹೇಳಿದ° ಕೇಶವ°..
“ಎಂತದೂ ಬೇಡ, ಅಷ್ಟೆತ್ತರದ ಮರಕ್ಕೆ ಯೇವ ಧೈರ್ಯಲ್ಲಿ ಹತ್ತುದು? ಹೂಗೂ ಬೇಡ,ಸೊಪ್ಪೂ ಬೇಡ” ಭಾಮೆಯಕ್ಕ ರಜ ಕೋಪಲ್ಲಿ ಹೇಳಿದವು.
ಅವು ಮಾತಾಡುದರ ಕೇಳಿಂಡು ಅಲ್ಲೇ ಹತ್ತರೆ ನಿಂದೊಂಡಿದ್ದತ್ತು ಸುಶೀಲ.
“ಎನಗೆ ಬೇಕು ಬೆಳಿ ಸಂಪಗೆ..ಈಗಳೇ ಕೊಯ್ದು ಕೊಡಣ್ಣಾ” ಳಿ ಹಠ ಮಾಡ್ಲೆ ಸುರುಮಾಡಿತ್ತು.
ಭಾಮೆಯಕ್ಕ ಪುಳ್ಳಿಯ ಸಮಾ ಬೈದವು
“ನಿನಗೆ ಕೊಂಡಾಟ ಹೆಚ್ಚಿಗಾತು ಕೂಸೇ.ಆ ಬರೆಕರೆಲಿಪ್ಪ ಮರಕ್ಕೆ ಹತ್ತಿ ಹೂಗು ಕೊಯ್ವದು ಅಷ್ಟು ಸುಲಭಲ್ಲ.ಆ ತೋಡಿಂಗೊ ಮಣ್ಣಾ ಬಿದ್ದರೆ ಸೊಂಟ ಮುರಿಗು” .
ಅದರ ಸ್ವಂತ ಹಠ ಹೇಂಗೂ ಇದ್ದು,ಅದರೊಟ್ಟಿಂಗೆ ಅಜ್ಜಿಯ ಬೈಗಳೂ ಸೇರಿಯಪ್ಪಗ ಸುಶೀಲಂಗೆ ಮತ್ತೂ ಹಠ ಹೆಚ್ಚಿಗಾತು.ದೊಡ್ಡಕೆ ಆರ್ಬಾಯಿ ಕೊಟ್ಟು ಕೂಗುವ ತಂಗೆಯ ಸಮದಾನ ಮಾಡ್ಲೆ ನೋಡಿದ° ಕೇಶವ°
“ಸುಶೀ..ನೀನುಶಾರಿಯಲ್ದಾ? ಅಜ್ಜಿ ಹತ್ತರೆ ಆನಂತೇ ಕೊಯ್ದು ಕೊಡೆಕಾ ಕೇಳಿದ್ದಷ್ಟೆ. ಎನಗೆ ಆ ಮರಕ್ಕೆ ಹತ್ತುಲೆಡಿಗಾ? ಇನ್ನಾಣ ವರ್ಷ ಕೆಳಾಣ ಗೆಲ್ಲಿಲ್ಲಿ ಹೂಗಕ್ಕು.ಅಂಬಗ ನಿನಗೆ ಕೊಯ್ದು ಕೊಡುವೆ”.
ಆದರೆ ಅಷ್ಟು ಸುಲಬಲ್ಲಿ ತರ್ಕ ನಿಲ್ಸುವ ಕೂಸಲ್ಲ ಸುಶೀಲ.
” ಅದೆಲ್ಲ ಆಗ.ಈಗಲೇ ಕೊಯ್ದು ಕೊಡು.ಇಲ್ಲದ್ರೆ ಆನೇ ಆ ಮರಕ್ಕೆ ಹತ್ತುತ್ತೆ” ಹೇಳಿಂಡು ಹೆರಟದೇ. ಶೈಲ ಅದರ ಕೈ ಹಿಡುದು ಹೋಗದ್ದಾಂಗೆ ತಡದತ್ತು.ಅಕ್ಕನ ನೂಕಿ ದೂರ ಮಾಡಿಕ್ಕಿ ಕೋಪಲ್ಲಿ ದರ್ಸಿಂಡು ಓಡಿತ್ತದು.ಈಗ ಕೇಶವಂಗೂ ಹೆದರಿಕೆ ಆತು. ಪಾಪ! ತಂಗಗೆ ಹೂಗು ಹೇಳಿರೆ ಭಾರೀ ಕೊದಿ.ಮರ ಹತ್ತುತ್ತೆ ಹೇಳಿ ಓಡಿಂಡು ಹೋಪಗ ಎಂತಾರಾದರೆ..!
“ಓಡೆಡ ಸುಶೀ….ಆನು ಕೊಯ್ದು ಕೊಡ್ತೆ” ಹೇಳಿ ದೊಡ್ಡಕೆ ಹೇಳಿದ.
“ಅಂಬಗ ಕೊಯ್ದು ಕೊಡ್ತೆಯಾ?” ಅಲ್ಲಿಂದಲೇ ಕೇಳಿತ್ತದು.
“ಅಪ್ಪು ಮಾರಾಯ್ತೀ….ಹಾಂಗೆ ಓಡೆಡಾ”
ಕೇಶವ° ಅದರ ಹಿಂದಂದಲೇ ಓಡಿದ.ಸೀದಾ ಹೋಗಿ ಮರ ಹತ್ತಿ ನಾಲ್ಕು ಸಂಪಗೆ ಹೂಗು ಕೊಯ್ದ.
“ಹೂಗು ಕೆಳ ಹಾಕಿರೆ ಮಣ್ಣಾವ್ತು. ನಿನ್ನ ಕಿಸೆಲಿ ಹಾಕು.ಇಳುದ ಮತ್ತೆ ಕೊಟ್ರೆ ಸಾಕು” ಸುಶೀಲ ದೊಡ್ಡಕೆ ಬೊಬ್ಬೆ ಹಾಕಿಂಡು ಹೇಳಿತ್ತು.
ಆದರೆ…. .!! ಅವನ ಗ್ರಾಚಾರ ಸರಿಯಿತ್ತಿದ್ದಿಲ್ಲೆ.ಹೂಗಿನ ಅಂಗಿ ಕಿಸೆಲಿ ಹಾಕಲೆ ನೋಡುಗ ಅವನ ಕೈ ಜಾರಿತ್ತು.
“ಅಯ್ಯೋ ಅಬ್ಬೇ.….” ಹೇಳಿ ಕೆಳ ಉರುಳಿದ°.
“ಅಣ್ಣ ತೋಡಿಂಗೆ ಬಿದ್ದಾ” ಹೇಳಿ ಸುಶೀಲ ಕೂಗಿಂಡು ಬೊಬ್ಬೆ ಹಾಕಿತ್ತು.ಅವ° ಬಿದ್ದ ಶಬ್ದವೂ,ಸುಶೀಲನ ಕೂಗಾಟವೂ ಕೇಳಿ ಚಂದ್ರಣ್ಣ ಓಡಿ ಬಂದವು.ಬಂದು ನೋಡುಗ ಅವ° ತೋಡಿಂಗೆ ಬಿದ್ದು ಬೋಧವೇ ಇಲ್ಲೆ.
ಅವರ ಬೊಬ್ಬೆಗೆ ಆಚಮನೆ ಮಾಬಲ,ಕಿಟ್ಟಣ್ಣ,ಅವರ ಮಕ್ಕೊ ಎಲ್ಲ ಓಡಿಂಡು ಬಂದವು .ಎಲ್ಲೋರು ಸೇರಿ ಕೇಶವನ ತೋಡಿಂದ ಮೇಲಂಗೆ ನೆಗ್ಗಿ ಕರಕ್ಕೊಂಡು ಬಂದವು.
ಮನಗೆ ಎತ್ತಿ ಮೋರಗೆ ನೀರು ಹಾಕಿಯಪ್ಪಗ ಕಣ್ಣೊಡದ ಕೇಶವಂಗೆ ಬಲದ ಕಾಲು ಹನ್ಸುಲೂ ಎಡಿಯದ್ದಷ್ಟು ಬೇನೆ.ರಜ್ಜ ಹೊತ್ತಿಲ್ಲಿ ಕಾಲು ಬೀಗಿ ದಪ್ಪ ಆತು.
“ಇನ್ನು ನೋಡಿಂಡು ಕೂಬದು ಬೇಡ ಚಂದ್ರಣ್ಣ, ಈಗಲೇ ಆಸ್ಪತ್ರೆಗೆ ಕರಕ್ಕೊಂಡು ಹೋಪದೊಳ್ಳೆದು.ಕಾಲಿಂಗೆ ಒಳ್ಳೆತ ತಾಗಿದಾಂಗೆ ಕಾಣ್ತು, ಪಾಪ ಮಾಣಿ ಎಂತಕೆ ಆ ಮರಕ್ಕೆ ಹತ್ತಿದನೋ” ಕಿಟ್ಟಣ್ಣ ಹೇಳಿದವು.ಅಂಬಗಳೇ ಆಳುಗಳ ಕಳ್ಸಿ ಜಮಾಲುವಿನ ಜೀಪು ತರ್ಸಿ ಕೇಶವನ ಅದರ್ಲಿ ಹೇಂಗೋ ಹತ್ಸಿ ಕೂರ್ಸಿದವು.ಅಷ್ಟಪ್ಪಗ ಇಷ್ಟು ಹೊತ್ತು ಸುಮ್ಮನೇ ನಿಂದೊಂಡಿದ್ದ ಸುಶೀಲ ಓಡಿ ಅವನತ್ರಂಗೆ ಬಂದು ಅವನ ಅಂಗಿ ಕಿಸಗೆ ಕೈ ಹಾಕಿ ಅದರ್ಲಿದ್ದ ಎರಡು ಸಂಪಗೆ ಹೂಗಿನ ತೆಕ್ಕೊಂಡತ್ತು.
“ಈ ಕೂಸಿನ ಹಾಂಕಾರವೇ.ಇದರಿಂದಾಗಿ ಈಗ ಅವ° ಬೀಳುವ ಹಾಂಗಾದ್ದು.ಅದಕ್ಕೆರಡು ಪೊಡ್ಸದ್ರಾಗ.ಇದರ ಒಂದು ಹೂಗಿನ ಬ್ರಾಂತು ಇಂದೇ ನಿಲ್ಸೆಕೆನಗೆ” ಭಾಮೆಯಕ್ಕ ಪುಳ್ಳಿಯ ಎಳದು ಅದರ ಬೆನ್ನಿಂಗೆರಡು ಬಿಗುದವು.
“ಬೇಡ ಅಜ್ಜೀ ಅದು ಸಣ್ಣ, ಅದಕ್ಕೆ ಬೀಳುಗು ಹೇಳಿ ಗೊಂತಾಗಿರ” ಅಷ್ಟು ಬೇನೆ ಇದ್ದರೂ ಕೇಶವ ಹೇಂಗೋ ಹೇಳಿದ°.ಶಾರದೆಯೂ ,ಶೈಲನೂ ಅಂತೇ ಕಣ್ಣನೀರು ಹಾಕಿಂಡು ನಿಂದವು.ಸುಶೀಲನ ಹಠದ ಬುದ್ದಿ ಗೊಂತಿದ್ದ ಕಾರಣ ಶಾರದೆಗೆ ಅದರ ಬೈಯೆಕು ಹೇಳಿ ಕಂಡ್ರೂ ಮತ್ತೆ ಅದರ ಮಂಕಾಡ್ಸುದು ಸುಲಭಲ್ಲ ಹೇಳಿ ಕೋಪ ತಡಕ್ಕೊಂಡು ನಿಂದತ್ತು.
ಕೇಶವನ ಕರಕ್ಕೊಂಡು ಚಂದ್ರಣ್ಣ ಆಸ್ಪತ್ರೆಗೆ ಹೋದವು.ಮನೆಲಿಪ್ಪವೆಲ್ಲ ಎಂತ ಮಾಡುದು ಹೇಳಿ ಅಂದಾಜಾಗದ್ದೆ ದೇವರ ಜೆಪ ಮಾಡುಗ ಸುಶೀಲ ಮಾತ್ರ ಸಂಪಗೆ ಹೂಗು ಸೂಡ್ಲೆ ಎರಡು ಜೆಡೆ ಕಟ್ಟಿ ಕೊಡು ಹೇಳಿ ಹಠ ಮಾಡ್ಲೆ ಸುರು ಮಾಡಿತ್ತು.
ಸರಸತ್ತೆಗೆ ಹೆಚ್ಚು ನಡವಲೆ ಎಡಿಯದ್ದ ಕಾರಣ ಕೂದಲ್ಲೇ ಬೆಂದಿಗೆ ಕೊರದೋ,ಅಕ್ಕಿಂದ ಬತ್ತ ಹೆರ್ಕಿಯೋ,ಮೆಣಸಿನ ತೊಟ್ಟು ತೆಗವದೋ..ಹೀಂಗೇ ಎಂತಾರು ಲಾಯಿಲೊಟ್ಟು ಕೆಲಸ ಮಾಡಿ ಕೊಟ್ಟು ಕೊಂಡಿತ್ತಿದ್ದವು.ಅಂದರೂ ಅವರ ಮೀಶಲೆ,ತಲೆಕಟ್ಲೆ, ಬಳ್ಸಲೆ,ವಸ್ತ್ರ ತೊಳವಲೆ ಎಲ್ಲ ಶಾರದೆಯೇ ಆಯೆಕು. ಹಾಂಗಾಗಿ ಸುಶೀಲ ಹೇಳಿಯಪ್ಪಗ ಬೇಗ ಬಂದು ಅದರ ಕೆಲಸ ಮಾಡಿಕೊಡುದು ಶೈಲ..ಇಂದು ಕೇಶವ ಬಿದ್ದ ಕಾರಣ ಅದಕ್ಕೂ ಎಂತೋ ಬೇಜಾರಾಗಿ ಸುಶೀಲನ ತಲೆಕಟ್ಲೆ ಬಾರದ್ದೆ ಉಪ್ಪರಿಗೆಯ ಅದರ ಉಗ್ರಾಣಲ್ಲಿ ಹೋಗಿ ಕೂಯಿದು.
ಸುಶೀಲ ಎರಡು ಜೆಡೆ ಕಟ್ಟೆಕು ಹೇಳಿ ಕೂಗುಗ ಸರಸತ್ತೆ ಪಾಪಪುಣ್ಯ ಕಂಡತ್ತು “ಅದರ ಸುಮ್ಮನೇ ಕೂಗ್ಸುದು ಬೇಡ, ಆನೇ ಜೆಡೆ ಕಟ್ಟಿ ಕೊಡ್ತೆ, ನೀನು ಬಾ ಮೋಳೇ..” ಹೇಳಿ ಮೆಲ್ಲಂಗೆ ಹೆರಟವು.ಎಂತ ಗ್ರಾಚಾರವೋ ಗೊಂತಿಲ್ಲೆ.ಕಾಲು ಅಡಿಮೊಗಚ್ಚಿದ ಹಾಂಗಾಗಿ ಮನೆ ಜೆಗುಲಿಂದ ಕೆಳಾಂಗೆ ಬಿದ್ದವು.ಪಾಪ ಅವಕ್ಕೆ ಬಿದ್ದಲ್ಲಿಂದ ಏಳ್ಲೇ ಎಡ್ತಿದಿಲ್ಲೆ.ಸುಶೀಲ ಅದರ ನೋಡಿಂಡು ನಿಂದುಕೊಂಡಿದ್ದತ್ತು.ದೊಡ್ಡಕೆ ಕೈ ತಟ್ಟಿ ನೆಗೆ ಮಾಡ್ಲೆ ಸುರು ಮಾಡಿತ್ತು
“ದೊಡ್ಡಜ್ಜಿ ಬಿದ್ದವು..ದೊಡ್ಡಜ್ಜಿ ಬಿದ್ದವು”
ಒಳ ಎಂತೋ ಕೆಲಸಲ್ಲಿದ್ದ ಶಾರದೆಗೆ ಮಗಳು ಹೀಂಗೆ ನೆಗೆ ಮಾಡುದೆಂತಕೇಳಿ ಗೊಂತಾಯಿದಿಲ್ಲೆ. ಮಾಡಿಂಡಿದ್ದ ಕೆಲಸವ ಅರ್ಧಲ್ಲಿ ಬಿಟ್ಟಿಕ್ಕಿ ಬಂದು ನೋಡುಗ ಸರಸತ್ತೆ ಜಾಲಿಲ್ಲಿ..!!
“ಅಯ್ಯೋ…. ಅತ್ತೇ…..” ಹೇಳಿ ಓಡಿಂಡು ಬಂದು ಅವರ ನೆಗ್ಗಿತ್ತು.ಅಷ್ಟಪ್ಪಗ ಶೈಲನೂ ಬಂತು.ಇಬ್ರೂ ಸೇರಿ ಅವರ ಮನೆ ಒಳ ತಂದು ಕೂರ್ಸಿದವು.ಮೈ ಕೈಗೆ ಗಾಯ ಆಗದ್ರೂ ಕಾಲಪಾದ ರೆಜಾ ಬೀಗಿತ್ತು.ಶೈಲ ಅಂಬಗಳೇ ಕಡಂಜದ ಎಣ್ಣೆ ತಂದು ಅವರ ಪಾದಕ್ಕೆ ಕಿಟ್ಟಿ ಬೆಶಿ ಬೆಶಿ ನೀರು ತಂದು ಶೇಖ ಕೊಟ್ಟತ್ತು.ಅದರ ಕೊಂಡಾಟದ ಸೇವೆ ನೋಡಿ ಸರಸತ್ತೆಯ ಕಣ್ಣಿಲ್ಲಿ ನೀರು ಬಂತು.
ಕೇಶವನ ಮೊಳಪ್ಪಿನ ಎಲುಬು ಸೆರೆ ಬಯಿಂದು ಹೇಳಿ ಕಾಲಿಂಗೆ ಪ್ಲಾಸ್ಟರ್ ಹಾಕ್ಸಿ ಚಂದ್ರಣ್ಣ ಮನಗೆ ಕರಕ್ಕೊಂಡು ಬಪ್ಪಗ ಇಲ್ಲಿ ಸರಸತ್ತೆ ಬಿದ್ದು ಕಾಲು ಬೇನೆ.ಮತ್ತೊಂದರಿ ಅದೇ ಆಸ್ಪತ್ರೆಗೆ, ಅದೇ ಡಾಕ್ಟರನ ಹತ್ರಂಗೆ ಬಂದ ಜೀಪಿಲ್ಲೇ ವಾಪಾಸು ಹೋದವು.
ಪಾದದ ಎಲುಬಿಂಗೆ ಪೆಟ್ಟಾಯಿದು.ಸೊಂಟಕ್ಕೂ ರೆಜ ತಾಗಿದ್ದು ಹೇಳಿ ಡಾಕ್ಟರ° “ಒಂದು ತಿಂಗಳು ಮನುಗಿಂಡಿರೆಕು ” ಹೇಳಿ ಬೇನಗೆ ಮದ್ದು ಮಾತ್ರೆ ಎಲ್ಲ ಕೊಟ್ಟ°.
ಶಾರದೆಗೀಗ ಒಟ್ಟು ಬಂಙ.ಸರಸತ್ತೆಯ ಚಾಕರಿ ಆಯೆಕು. ಮಗನನ್ನು ನೋಡ್ಯೊಳೆಕು. ಭಾಮೆಯಕ್ಕನ ಆರೋಗ್ಯವೂ ಸಾದಾರಣ.ಅಂಬಗಂಬಗ ಸೆಮ್ಮ,ದಮ್ಮುಕಟ್ಟುದು ಬಂದು ಅವಕ್ಕೆ ಮನೆ ಕೆಲಸಕ್ಕೆ ಸೊಸಗೆ ಸಕಾಯ ಮಾಡ್ಲೆ ಬಂಙ ಆಗಿಂಡಿದ್ದತ್ತು .
ಈಗ ಅಬ್ಬಗೆ ಬಲದ ಕೈಯಾಗಿ ನಿಂದದು ಶೈಲ.ಕೇಶವನ ಕೆಲಸ ಎಲ್ಲ ಅದುವೇ ಮಾಡಿತ್ತು.ಅವನ ಏಳ್ಸುದು,ಹಲ್ಲು ತಿಕ್ಸುದು,ಕಾಪಿ,ಊಟ ಕೊಡುದು ಎಲ್ಲ ಅದುವೇ. ಮನಗೆ ಕೆಲಸಕ್ಕೆ ಬಪ್ಪ ಆಳಿನತ್ರೆ ಹೇಳಿ ಅವನ ಮೀಶುಲೆ ಏರ್ಪಾಡು ಕೂಡ ಮಾಡಿತ್ತು.ಒಟ್ಟಿಂಗೆ ದೇವರ ಪೂಜೆ ಸಾಹಿತ್ಯ,ಸುಶೀಲನ ಕೆಲಸ ಎಲ್ಲವನ್ನೂ ಅದುವೇ ಹೇಂಗೋ ಮಾಡಿಂಡು ಅಬ್ಬಗೆ ಹೆಚ್ಚು ಬಂಙ ಆಗದ್ದಾಂಗೆ ನೋಡಿಕೊಂಡಿದ್ದತ್ತು.
ಅಂಬಗ ಶೈಲ, ಕೇಶವ ಇಬ್ರೂ ಒಂದನೇ ವರ್ಷ ಪಿಯುಸಿ ಕಳುದು ರಜೆಲಿ ಇತ್ತಿದ್ದವು. ಈಗ ಫಲಿತಾಂಶ ಬಂತು.ಇಬ್ರಿಂಗೂ ಒಳ್ಳೆ ಮಾರ್ಕೂ ಇದ್ದು.ಆದರೆ ಎರಡನೇ ಪಿಯುಸಿಗೆ ಕೇಶವಂಗೆ ಸೇರ್ಲೆ ಎಡಿಗಾಯಿದಿಲ್ಲೆ.ಮನೆಯೊಳವೇ ಮೆಲ್ಲಂಗೆ ದಂಟು ಕುಟ್ಟಿಂಡು ನಡವ ಅವಂಗೆ ಕೋಲೇಜಿಂಗೆ ಹೋಪಲೆ ಎಡಿಯ ಹೇಳಿ ಚಂದ್ರಣ್ಣ ತೀರ್ಮಾನ ಮಾಡಿದವು.
“ಕೇಶವ ಬಾರದ್ರೆ ಆನೊಬ್ಬನೇ ಕೋಲೇಜಿಂಗೆ ಹೋಪದೇಂಗೆ?” ಶೈಲಂಗೆ ಇಷ್ಟು ದಿನ ಅವನೊಟ್ಟಿಂಗೆ ಶಾಲಗೆ,ಕೋಲೇಜಿಂಗೆ ಹೋಗಿಕ್ಕಿ ಈಗ ಫಕ್ಕನೆ ಒಬ್ಬನೇ ಹೋಪಲೆ ಮನಸ್ಸೇ ಬಯಿಂದಿಲ್ಲೆ. ಆದರೆ ಚಂದ್ರಣ್ಣ, ಕೇಶವ° ,ಭಾಮೆಯಕ್ಕ ಎಲ್ಲೋರೂ ಅದಕ್ಕೆ ಧೈರ್ಯ ತುಂಬಿದವು
“ಅವಂಗೆ ಬೇಕಾಗಿ ನೀನುದೆ ಒಂದು ವರ್ಷ ಹಾಳು ಮಾಡೆಡ.ಒಬ್ಬನೇ ಹೋಗಿ ಅಭ್ಯಾಸ ಆದರೆ ಮಾತ್ರ ಹೆಮ್ಮಕ್ಕೊಗೆ ಧೈರ್ಯ ಬಪ್ಪದು” .
ಹಾಂಗೆ ಒಂದೇ ಬಳ್ಳಿಯ ಹೂಗುಗಳ ಹಾಂಗೆ ಒಟ್ಟಿಂಗೆ ಆಟ,ಪಾಠಲ್ಲಿ ಜತೆಯಾಗಿದ್ದ ಶೈಲನೂ,ಕೇಶವನೂ ಈಗ ಬೇರೆ ಬೇರೆ ಆಯೆಕಾಗಿ ಬಂತು.ಶೈಲ ಬಿ.ಎಸ್ಸಿ ಕಲಿವಲೆ ಒಬ್ಬನೇ ಪುತ್ತೂರು ಕೋಲೇಜಿಂಗೆ ಸೇರಿತ್ತು.ಕೇಶವಂಗೆ ಒಂದು ವರ್ಷ ನಷ್ಟ ಆತನ್ನೇಳಿ ತುಂಬ ಬೇಜಾರ ಆತು.ಇದಕ್ಕೆಲ್ಲ ಕಾರಣ ಆದ ಸುಶೀಲ° ಮಾತ್ರ “ಞಾನೊನ್ನುಮರಿಯಿಲ್ಲೇ ರಾಮನಾರಾಯಣ” ಹೇಳಿ ಒಂದು ಮಲೆಯಾಳ ಗಾದೆ ಇದ್ದು ,ಹಾಂಗೆ ‘ಆರಿಂಗೆಂತಾದರಂತ,ಎನಗದೆಲ್ಲ ಗೊಂತಿಲ್ಲೆ, ಎನಗೆ ಹೀಂಗೇ ಆಯೆಕು’ ಹೇಳುವ ತರ್ಕ ಬಿಟ್ಟಿದೇಯಿಲ್ಲೆ.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 11: https://oppanna.com/kathe/swayamvara-11-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಪ್ರಸನ್ನ, ಧಾರಾವಾಹಿ ಲಾಯಿಕಿದ್ದು. ಕುತೂಹಲದ ಕತೆ ಓದಿಸಿಗೊಂಡು ಹೋವುತ್ತಾ ಇದ್ದು…
ಹರೇರಾಮ ಶಂಕರಿಯಕ್ಕಾ, ಧನ್ಯವಾದ
ಕಥೆ ಅಂತೂ ಲಾಯ್ಕಲ್ಲಿ ಕುತೂಹಲಲ್ಲಿ ಓದಿಸಿಗೊಂಡು ಹೋವ್ತಾ ಇದ್ದು ಪ್ರಸನ್ನಕ್ಕೋ….. ಸುಖಾಂತ್ಯ ಆದರೆ ಸಾಕಪ್ಪಾ ದೇವರೇ ಹೇಳಿ ಕಾಣ್ತು…