ಅಬ್ಬೆ ಹೋದ ದಾರಿ ಹುಡ್ಕಿಂಡು ಒಬ್ಬನೇ ಕೂಗಿಂಡು ಮುಂದೆ ಮುಂದೆ ಹೋದ ಒಪ್ಪಕ್ಕಂಗೆ ರಜ್ಜ ದೂರ ಓಡಿಯಪ್ಪಗ ಬಚ್ಚಿತ್ತು. ಅದರ ಪುಟ್ಟು ಕಾಲಿಂಗೆ ಒಂದು ಮುಳ್ಳು ಕಂತಿ ನೆತ್ತರು ಬಪ್ಪಲೆ ಸುರುವಾತು. ಮುಂದೆ ಹೋಪಲೂ ಗೊಂತಿಲ್ಲೆ, ತಿರುಗಿ ಹಿಂದೆ ಹೋಪಲೂ ಗೊಂತಿಲ್ಲದ್ದೆ ಅಲ್ಲೇ ದಾರಿ ಕರೇಲಿ ಕೂದು ದೊಡ್ಡಕೆ ಕೂಗಲೆ ಸುರು ಮಾಡಿತ್ತು.
ಅಷ್ಟಪ್ಪಗ ಅಲ್ಲಿ ಎಲ್ಲಿತ್ತಿದ್ದವೋ ಗೊಂತಿಲ್ಲೆ, ಏಳೆಂಟು ನಾಯಿಗೊ ಅದರ ಹತ್ತರಂಗೆ ಬಂದು ಸುತ್ತು ಸುತ್ತು ತಿರುಗಲೆ ಸುರು ಮಾಡಿದವು. ಅವರ ಕಂಡಪ್ಪಗ ಒಪ್ಪಕ್ಕ ಮತ್ತೂ ಹೆದರಿ ಆರ್ಭಟೆ ಕೊಟ್ಟು ಕೂಗಿಂಡು ಓಡ್ಲೆ ನೋಡಿತ್ತು. ಆದರೆ ಎಡ್ತಿದೇ ಇಲ್ಲೆ. ಒಂದು ನಾಯಿ ಅದರ ಕಾಲಿಂಗೆ ಬಾಯಿ ಹಾಕಿಯಪ್ಪಗ ಬಾಕಿದ್ದವುದೆ ಹಿಂದಂದಲೇ ಬಂದವು.
ಆ ಬೊಬ್ಬೆ, ಗೌಜಿ ಕೇಳಿ ಅಲ್ಲೇ ಹತ್ತರೆ ದಾರಿಲಿ ಹೋಗಿಂಡಿದ್ದ ಒಂದು ಜೆನ ಅಲ್ಲಿಗೆ ಬಂದು ನಾಯಿಗಳ ಓಡ್ಸಿತ್ತು. ಒಪ್ಪಕ್ಕಂಗೆ ಹೆದರಿ ಎದ್ದು ನಿಂಬಲೂ ಎಡ್ತಿದಿಲ್ಲೆ. ಆ ಜೆನ ಹತ್ತರೆ ಬಂದು ನಾಯಿ ಕಚ್ಚಿದ ಕಾಲಿನ ಹಿಡುದು ನೋಡಿತ್ತು.
ಒಪ್ಪಕ್ಕ ಆರು, ಅದರ ಮನೆ ಎಲ್ಲಿ, ಅದು ಹೇಂಗೆ ಇಲ್ಲಿಗೆತ್ತಿದ್ದು ಗೊಂತಿಲ್ಲದ್ದ ಕಾರಣ ಆ ಜೆನಕ್ಕೂ ಎಂತ ಮಾಡುದು ಹೇಳಿ ಅರಡಿಯದ್ದಾಂಗಾತು. ಅಂದರೂ ಅದರ ಮೆಲ್ಲಂಗೆ ಕರಕ್ಕೊಂಡು ಅಲ್ಲೇ ಹತ್ತರೆ ಇಪ್ಪ ಅವರ ಮನಗೆ ಕರಕ್ಕೊಂಡು ಹೋತು. ಆ ಜೆನರ ಹೆಂಡತಿಯೂ ರೆಜ ಪಾಪಪುಣ್ಯ ಇಪ್ಪ ಹೆಮ್ಮಕ್ಕೊ ಆದ ಕಾರಣ ಒಪ್ಪಕ್ಕನ ಕೂಗದ್ದಾಂಗೆ ಮಂಕಾಡ್ಸಿತ್ತು. ಕಾಲಿನ ಗಾಯ ತೊಳದು ಚೆಂಡಿ ಪಸೆ ಉದ್ದಿಕ್ಕಿ ಒಳಾಂದ ಒಂದು ತುಂಡು ಬೆಲ್ಲ ತಂದು ಕೊಟ್ಟಪ್ಪಗ ಇಷ್ಟರವರೆಗೆ ಬೆಲ್ಲ ತಿಂದೇ ಗೊಂತಿಲ್ಲದ್ದ ಒಪ್ಪಕ್ಕ ಕಾಲು ಬೇನೆ ಮರದು ಕೊಶೀಲಿ ನೆಗೆ ಮಾಡಿತ್ತು.
“ಆರ ಬಾಲೆಯೋ ಏನೋ.ಇಲ್ಯಾಣ ಜೆನಂಗೊಕ್ಕೆ ಮಕ್ಕಳ ಬಗ್ಗೆ ಯೇವ ಗುಮಾನವೂ ಇಲ್ಲೆ. ಎಲ್ಲೆಲ್ಲಿಯೋ ಬಿಟ್ಟಿಕ್ಕಿ ಹೋಪದು, ಆ ನಾಯಿಗೊ ಇದರ ಕಚ್ಚಿದ್ದರೆ ಎಂತಾವ್ತಿತು!! ಅಬ್ಬಾ….ದೇವರೇ ಆ ಹೊತ್ತಿಂಗೆ ಅಲ್ಲಿ ಎನ್ನ ಎತ್ತುವಾಂಗೆ ಮಾಡಿದ್ದು”
“ಅಪ್ಪು. ಪಾಪ, ಸಣ್ಣ ಬಾಲೆ, ಚೆಂದ ಇದ್ದು. ಎಷ್ಟು ಬೇನೆ ಆತೋ ಏನೋ? ನಿಂಗೊ ಒಂದರಿ ನಮ್ಮ ಪೂರ್ಣಿಗೆ ಪೋನು ಮಾಡಿ, ರಜ್ಜ ಬೇಗ ಬರ್ಲಿ.ಎಲ್ಯಾದರು ಮರ್ಲು ನಾಯಿಯೋ ಮತ್ತೊ ಕಚ್ಚಿದ್ದಾದರೆ ಇಂಜೆಕ್ಷನು ಕೊಡ್ಸೆಕಕ್ಕು. ಅದಾದರೆ ಡಾಕ್ಟರು” ಆ ಹೆಮ್ಮಕ್ಕೊ ಹೇಳಿಯಪ್ಪಗ ಅವರ ಗೆಂಡ “ನೀನು ಹೇಳಿದ್ದು ಸರಿ” ಹೇಳಿಕ್ಕಿ ಅಂಬಗಳೇ ಆರಿಂಗೋ ಪೋನು ಮಾಡಿದವು.
“ಅಲ್ಲಿಂದ ಆಗಲೇ ಹೆರಟಿದಾಡ, ಈಗ ಬಕ್ಕು” ಹೇಳಿಂಡು ಅವು ಪೋನು ಮಡುಗೆಕಾರೆ ಮದಲೇ ಮೂರು ನಾಲ್ಕು ಜೆನ ರಜ ಗಡಿಬಿಡಿಲಿ ಬಂದು “ಡಾಕ್ಟರ್ ಇಲ್ಯಾ,?” ಕೇಳಿದವು.
“ಈಗ ಬಕ್ಕು, ಎಂತ ವಿಷಯ ?” ಹೇಳಿ ಕೇಳಿಂಡು ಮನೆಂದ ಹೆರ ಇಳುದ ಅವಕ್ಕೆ ಒಂದು ಹೆಮ್ಮಕ್ಕೊ ಬೋದ ತಪ್ಪಿ ಬಿದ್ದದರ ಇವರ ಮನೆಯ ಕಾರು ಶೆಡ್ಡಿನ ಹತ್ತರೆ ತಂದು ಮನುಶಿದ್ದು ಕಂಡತ್ತು.
“ಇದಾರು? ಇಲ್ಲಿಗೆ ಕರಕ್ಕೊಂಡು ಬಂದದೆಂತಕೆ? ಆಸ್ಪತ್ರೆಗೆ ಕರಕ್ಕೊಂಡು ಹೋಗಿ, ಹೀಂಗಿದ್ದದರ ಇಲ್ಲಿ ಎಂತ ಮಾಡ್ಲೂ ಎಡಿಯ” ಹೇಳಿ ಅವು ರೆಜ ಅಸಮಾಧಾನಲ್ಲಿ ಹೇಳಿಯಪ್ಪಗ ಅವರಲ್ಲಿ ಒಂದು ಜೆನ
“ಇದು ಆರು, ಎಲ್ಯಾಣದ್ದು ಒಂದೂ ಎಂಗೊಗೂ ಗೊಂತಿಲ್ಲೆ . ಡಾಕ್ಟರ್ ಇದ್ದವು ಗ್ರೇಶಿ ಇಲ್ಲಿಗೆ ತೆಕ್ಕೊಂಡು ಬಂದದು” ಹೇಳಿತ್ತು.
ಇವರ ಮಾತು ಕೇಳಿಂಡಿದ್ದ ಆ ಮನೆ ಹೆಮ್ಮಕ್ಕೊ ಹೆರ ಬಂದು ಅಲ್ಲಿ ಮನುಶಿದ ಹೆಣ್ಣಿನ ನೋಡಿತ್ತು.
“ಮೋರಗೆ ರೆಜಾ ನೀರು ತಳಿತ್ತೆ. ಎಂತಾದ್ದೋ ಏನೋ. ಹೀಂಗಿದ್ದವರ ಆಸ್ಪತ್ರೆಗೆ ಸೀದಾ ಕರಕ್ಕೊಂಡು ಹೋಯೆಕಾತು. ಮನೆಲಿ ಒಬ್ಬ° ಡಾಕ್ಟರ್ ಇದ್ದರೆ ಅದೇ ಆಸ್ಪತ್ರೆ ಹೇಳಿ ಇವರ ಲೆಕ್ಕ” ಹೇಳಿಂಡೇ ಒಳಾಂದ ಒಂದು ಸಣ್ಣ ಪಾತ್ರಲ್ಲಿ ನೀರು ತಂದು ಅದರ ಮೋರಗೆ ತಳುದತ್ತು.
ಅಷ್ಟಪ್ಪಗ ಅದು ಮೆಲ್ಲಂಗೆ ಕಣ್ಣೊಡದು ನೋಡಿತ್ತು. ಫಕ್ಕನೆ ಅವಕ್ಕೆ ಒಳ ಇಪ್ಪ ಒಪ್ಪಕ್ಕನ ನೆಂಪಾತು. ಅದಕ್ಕೂ ಇದಕ್ಕೂ ಎಂತಾರು ಸಂಬಂಧ ಇದ್ದಾ ಏನಾ ಹೇಳಿ ಆಲೋಚನೆ ಮಾಡಿಕ್ಕಿ ಒಪ್ಪಕ್ಕನ ದಿನಿಗೇಳಿತ್ತು.
ಬೇನೆ ಆದ ಕಾಲಿನ ಮೋಂಟಿಸಿಂಡು ಹೆರ ಬಂದ ಒಪ್ಪಕ್ಕ° ಅಲ್ಲಿ ಅಬ್ಬೆ ಮನುಗಿದ್ದು ಕಂಡು ಹತ್ತರೆ ಹೋಗಿ ಅದರ ಮೈಗೆ ಬಿದ್ದು ಕೂಗಲೆ ಸುರು ಮಾಡಿತ್ತು.
“ಹೋ..ಅಂಬಗ ಇದು ಈ ಕೂಸಿನ ಅಬ್ಬೆ ಆದಿಕ್ಕು. ಇಲ್ಲದ್ರೆ ಅಷ್ಟು ಸುಲಭಲ್ಲಿ ಅದು ಹತ್ತರೆ ಹೋವ್ತಿತಿಲ್ಲೆ. ರಜ ನೀರು ಮೋರಗೆ ಹಾಕುತ್ತೆ” ಹೇಳಿಂಡೇ ಅವು ಒಂದು ಪಾತ್ರಲ್ಲಿ ನೀರು ತಂದು ಸುಶೀಲನ ಮೋರಗೆ ಹಾಕಿದವು.
ಮೆಲ್ಲಂಗೆ ಕಣ್ಣೊಡದು ನೋಡಿತ್ತು ಸುಶೀಲ°. ಎಲ್ಲಿಪ್ಪದು ಹೇಳಿ ಅಂದಾಜಾಗದ್ದೆ ಫಕ್ಕನೆ ಏಳ್ಲೆ ನೋಡಿರೂ ನಿತ್ರಾಣಂದಾಗಿ ಅರ್ಧ ಕೂಬಲೆ ನೋಡಿರೂ ಅಲ್ಲಿಗೇ ಬಿದ್ದ ಹಾಂಗಾತು.
“ಅಯ್ಯೋ.. ಇದೆಂತ ಹೀಂಗಾದ್ದು ..ಥಕ್..ಹೀಂಗೆ ಹಂದುಲೆಡಿಯದ್ದವರ ನಮ್ಮ ಮನೆಲಿ ತಂದು ಬಿಟ್ರೆ ನಾವೆಂತ ಮಾಡುದು? ……” ಆ ಹೆಮ್ಮಕ್ಕೊ ಹಾಂಗೆ ಹೇಳಿಂಡು ಸುಶೀಲಂಗೆ ಕುಡಿವಲೆ ರಜ ನೀರು ಕೊಟ್ಟತ್ತು.
ಬೆನ್ನಿನ ಗಾಯ ಭಗಭಗ ಹೊಗವ ಹೊತ್ತಿಂಗೆ ತಂಪು ನೀರು ಸಿಕ್ಕಿದ್ದದು ಅದಕ್ಕೆ ಅಮೃತ ಕುಡುದಷ್ಟೇ ತಂಪಾತು. ಮಗಳ ಮೆಲ್ಲಂಗೆ ಕರೇಲಿ ಕೂರ್ಸಿಕ್ಕಿ ಹೇಂಗಾರು ಎದ್ದು ಕೂದತ್ತು. ಅಷ್ಟಪ್ಪಗ ಆ ಹೆಮ್ಮಕ್ಕೊಗೆ ಇದರ ಗಾಯ ಕಂಡತ್ತು
” ಹ್ಹೇಂ…!! ಇದೆಂತಾದ್ದು? ಬೆನ್ನಿಂಗೆ ಕಿಚ್ಚು ತಾಗುದೇಂಗೆ? ಇದೆಂತಾರು ವರದಕ್ಷಿಣೆ ಕೇಸಾ ಹೇಂಗೆ? ಪೂರ್ಣಿ ಹತ್ತರೆ ನೋಡುಗ ಜಾಗ್ರತೆ ಹೇಳಿ ಹೇಳೆಕು. ಎಲ್ಯಾದರು ಪೋಲೀಸು, ಕೇಸು ಹೇಳಿ ಎಲ್ಲ ಆದರೆ ಅವರ ಹಿಂದಂದ ನಲಿಪ್ಪೆಕಕ್ಕು.
“ಆತು, ಅದೆಲ್ಲ ಪೂರ್ಣಿಗೆ ಗೊಂತಕ್ಕು. ನೀನು ಸುಮ್ಮನೇ ಅವರ ಎದುರಂದ ಬೊಬ್ಬೆ ಹಾಕೆಡ, ಬೇಕಾರೆ ಒಳ ಎಂತಾರಿದ್ದರೆ ಅವಕ್ಕೆ ರಜ ತಿಂಬಲೆ ಕೊಡು” ಮನೆ ಯಜಮಾನ ಹಾಂಗೆ ಹೇಳಿಯಪ್ಪಗ ಅವಕ್ಕೆ ಸುಶೀಲನ ಎದುರಂದ ಹಾಂಗೆ ಹೇಳಿ ತಪ್ಪು ಮಾಡಿದೆ ‘ ಹೇಳಿ ಆತು.
“ಓ..ಆತು. ಎನಗೆ ಹೀಂಗೆ ಗಾಯ ಕಾಂಬಗ ಫಕ್ಕನೆ ಹೇಳಿ ಹೋತು. ಸಾರಯಿಲ್ಲೆ, ಎಂತಾದ್ದು ಬೆನ್ನಿಂಗೆ? ಎನ್ನ ಸೊಸೆ ಈಗ ಬಕ್ಕು, ಅದು ಡಾಕ್ಟರು. ಅದು ಬಂದಪ್ಪಗ ನೋಡುಗು. ಈಗ ಒಳಾಂಗೆ ಬಾ..” ಹೇಳಿ ಸುಶೀಲನ ಮೆಲ್ಲಂಗೆ ಏಳ್ಸಿ ಭಾರೀ ಜಾಗ್ರತೆಲಿ ಮನೆಯೊಳಾಂಗೆ ಕರಕ್ಕೊಂಡು ಬಂತು.
‘ಯೇವ ಜನ್ಮದ ದೊಡ್ಡಬ್ಬೆಯೋ,ಕಿರಿಯಬ್ಬೆಯೋ ಮತ್ತೋ ಆದಿಕ್ಕು ಇವು .ಇವರ ಪ್ರೀತಿ ಕಾಂಬಗ ಮನಸ್ಸು ತುಂಬಿ ಬಂತು ಸುಶೀಲಂಗೆ. ದಿನೇಸನ ಮದುವೆ ಆದ ಮತ್ತೆ ಆರೂದೆ ಇಷ್ಟು ಪ್ರೀತಿ ತೋರ್ಸಿತ್ತಿದ್ದವಿಲ್ಲೆ ಅದಕ್ಕೆ.
ಒಳಾಂಗೆ ಕರಕ್ಕೊಂಡು ಬಂದಪ್ಪಗ ಅಲ್ಲಿಪ್ಪ ಬೆಂಚಿಲ್ಲಿ ಕೂರದ್ದೆ ಕೆಳ ನೆಲಕ್ಕಲ್ಲೇ ಕೂದತ್ತು. ಅದರ ಹಾರಿ ಹರಡಿದ ತಲೆಕಸವು, ಹರ್ಕಟೆ ಸೀರೆ, ಅಲ್ಲಲ್ಲಿ ಹರುದು ನೇಲುವ ರವಕ್ಕೆ ಎಲ್ಲ ಕಾಂಬಗ ಆ ಹೆಮ್ಮಕ್ಕಳೂ ಹೆಚ್ಚು ಒತ್ತಾಯ ಮಾಡಿದ್ದಿಲ್ಲೆ. ಆರೋ ಏನೋ..ಅಂತು ಗೊಂತಿಲ್ಲದ್ದವರ ಯೇವ ಧೈರ್ಯಲ್ಲಿ ಸೀದಾ ಒಳಾಂಗೆ ಕರಕ್ಕೊಂಡು ಬಂದು ನೆಂಟ್ರಿಂಗೆ ಉಪಚಾರ ಮಾಡುವ ಮಾಡುದು? ಅಂದರೂ ಅಡಿಗೊಳಾಂಗೆ ಹೋಗಿ ಅವಕ್ಕೆ ಉದಿಯಪ್ಪಗ ಮಾಡಿದ ದೋಸೆ ನಾಲ್ಕೈದು ಒಳುದ್ದದರ ತಂದು ಒಂದು ಸಣ್ಣ ಬಾಳೆಲಿ ಹಾಕಿ ಕೊಟ್ಟತ್ತು. ಒಟ್ಟಿಂಗೆ ಎಂತೋ ಒಂದು ಕಾಯಿ ಹಾಕಿದ ಪರಿಮ್ಮಳದ ಬೆಂದಿಯೂ ಇದ್ದತ್ತು.
ಹತ್ತರೆ ಕೂದ ಮಗಳ ಮೋರೆ ನೋಡಿತ್ತು. ಕಾಲಿಂಗೆ ಗಾಯ ಆಯಿದು . ಅದಕ್ಕೆ ಅವು ವಸ್ತ್ರ ಕಟ್ಟಿದ ಕಾರಣ ಎಷ್ಟು ಗಾಯ ಆಯಿದು ಗೊಂತಿಲ್ಲೆ. ಪಾಪ ಮಗಳು! ಹಶುವಾಗಿ ಲೋಕಯಿಲ್ಲೆ! ಮದಾಲು ಅದಕ್ಕೆ ಕೊಡ್ತೆ ಹೇಳಿ ಅದರ ತೆಚ್ಚಿ ಕಾಲಿಲ್ಲಿ ಕೂರ್ಸಿತ್ತು.
“ಅವಕ್ಕೆ ಅಲ್ಲಿ ಕೊಟ್ಟದಾ? ಒಳ ಕೂರ್ಸಿ ಕೊಡೆಕಾತು” ಮನೆ ಯಜಮಾನ ಒಳಾಂದ ಹೇಳುದು ಕೇಳಿತ್ತು.
” ಆರು ಎಂತದು ಒಂದೂ ಗೊಂತಿಲ್ಲೆ, ಹಾಂಗಿದ್ದವರ ಅಡಿಗೊಳಾಂಗೆ ಕರಕ್ಕೊಂಡು ಬಂದು ಬಳ್ಸುದು ಹೇಂಗೇಳಿ ಆತು. ಕಾಂಬಗ ಪಾಪ ಕಾಣ್ತು, ಹಾಂಗೆ ಹೇಳಿ ಯೇವ ಜಾತಿ ಹೇಳಿ ಗೊಂತಿಲ್ಲೆ. ಹಾಂಗೆ ಹೆರ ಕೊಟ್ಟದಷ್ಟೆ”
ಸುಶೀಲನ ಮನಸಿಂಗೆ ಆ ಮಾತು ಕೇಳಿ ಒಂದರಿ ಚುಂಯಿ ಹೇಳಿ ಆತು. ಅಬ್ಬೆಯ ನೆಂಪಾಗಿ ಕಣ್ಣಿಲ್ಲಿ ನೀರುದೆ ಬಂತು. ಎಷ್ಟೊಳ್ಳೆ ಕುಲಲ್ಲಿ ಹುಟ್ಟಿರೂ ಹೀಂಗೆಲ್ಲ ಅನುಭವಿಸುಲಿಪ್ಪ ಯೋಗ ಇದ್ದಾದಿಕ್ಕು ಎನಗೆ. ಈ ಮನೆಯವರ ಕಾಂಬಗ ರಜ ಮೇಲು ಜಾತಿಯವರ ಹಾಂಗೆ ಕಾಣ್ತು. ಹಾಂಗಾಗಿ ಅವು ಎನಗೆ ಆಳುಗೊಕ್ಕೆ ಕೊಡುವ ಹಾಂಗೆ ಹೀಂಗೆ ಕೊಟ್ಟದು!!
ಅಬ್ಬಗೂ ಹೀಂಗೇ. ಎಲ್ಲರತ್ರೂ ಪಾಪಪುಣ್ಯ ಹೆಚ್ಚು. ಅವು ರಜ ಕಷ್ಟಲ್ಲಿದ್ದವು ಹೇಳಿ ಗೊಂತಾದರೆ ಸಾಕು, ಅವಕ್ಕೆ ಎಡಿಗಾದಷ್ಟು ಸಕಾಯ ಮಾಡುಗು. ಹಾಂಗೆ ಸಕಾಯ ಮಾಡ್ಲೆ ಅಪ್ಪನತ್ರೆ ಒಪ್ಪಿಗೆ ಕೂಡ ಕೇಳ ಅಬ್ಬೆ. ಅಷ್ಟೂ ಒಳ್ಳೆ ಮನಸ್ಸು. ಈ ಜನ್ಮಲ್ಲಿ ಇನ್ನು ಅಬ್ಬೆಯ ಕಾಂಬಲೆಡಿಗೋ..ಅಬ್ಬೆಪ್ಪನ ಕಾಲಿಂಗೆ ಹೊಡಾಡಿ ‘ಆನು ಮಾಡಿದ್ದು ತಪ್ಪಾತು’ ಹೇಳ್ಲೆಡಿಗೋ..! ಬೇಡ, ಎಂತದೂ ಬೇಡ! ಈ ಜನ್ಮ ಇಲ್ಲಿಯೇ ಮುಗಿಯಲಿ! ಇನ್ನೊಂದು ಜನ್ಮ ಇದ್ದರೆ ಅವರ ಮಗಳಾಗಿ ಹುಟ್ಟಿ ಅವರ ಸೇವೆ ಮಾಡಿ ಈ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಬೆ…’ ಹೀಂಗೆಲ್ಲ ಗ್ರೇಶಿಂಡೇ ಹಶುವಾಗಿ ಬಚ್ಚಿ ಕೂದ ಮಗಳ ಬಾಯಿಗೆ ದೋಸೆ ಕೊಡ್ತಾಯಿಪ್ಪ ಸುಶೀಲನ ಕಣ್ಣಿಂದ ನೀರು ಧಾರೆ ಧಾರೆಯಾಗಿ ಕೆಳ ಬಿದ್ದು ಕೊಂಡೇ ಇದ್ದತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 32: https://oppanna.com/kathe/swayamvara-32-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಯಬ್ಬ, ಕೆಲವು ಜನ ಆದರೂ ಒಳ್ಳೆಯ ಮನಸ್ಸಿನವು ಇದ್ದವು ಹೇಳಿ ಆತು. ನೋಡೋ, ಮುಂದೆ ಎಂತಾವುತ್ತು ಹೇಳಿ. ಒಳ್ಳೆ ಇಂಟರೆಸ್ಟಿಂಗ್ ಕಥೆ.
Innu hecchina kasta sahisuva shakti shusheelange ira.. devara roopalle ee maneyavvu idara kaapaadugaali kantu… Innadaru sushee ge nemmadiya jeevana sikkali heli praarthane.. karuneye illada janara naduve paapa punya torsuva ondu kutumba iddanne heluva samaadhana
ಈ ಭಾಗ ಓದುವಾಗ ಸುಶಿಯ ಕಷ್ಟ ಎಲ್ಲ ಕಳುದತ್ತನ್ನೆ ಹೇಳುವ ಭಾವನೆ ಬತ್ತು..ಆದರೆ ಹಾಳಾದ ಜೀವನ ಸರಿ ಆಗ…ಒಳ್ಳೆ ಮನುಷ್ಯರ ಸಂಪರ್ಕ ಸಿಕ್ಕಿತ್ತು…ಇನ್ನೂ ಮುಂದಾಣ ಭಾಗಕ್ಕೆ ಕಾಯ್ತಾ ಇದ್ದೆ…ಒಳ್ಳೆ ತಿರುವು…ಲಾಯ್ಕಿದ್ದು
ತುಂಬಾ ಲಾಯ್ಕ ತಿರುವಿನೊಟ್ಟಿಂಗೆ ಹೋವುತ್ತಾ ಇದ್ದು ಕಥೆ.ಇನ್ನೂ ಒಂದು ವಾರ ಕಾಯಕ್ಕನ್ನೇ ಮುಂದಾಣದ್ದು ಗೊಂತಾಯಕ್ಕಾರೆ.