Oppanna.com

ಆರು ಹೊಣೆ-2019 ನೆ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪಡದ ಕತೆ

ಶ್ರೀಮತಿ ಜ್ಯೋತಿ ರವಿರಾಜ್ ವಿಟ್ಲ

ಬರದೋರು :   ವಿಜಯತ್ತೆ    on   15/01/2020    0 ಒಪ್ಪಂಗೊ

ಆರು ಹೊಣೆ ??

2019 ನೆ  ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪಡದ ಕತೆ
-ಶ್ರೀಮತಿ ಜ್ಯೋತಿರವಿರಾಜ್ ವಿಟ್ಲ

 

ಶ್ರೀಮತಿ ಜ್ಯೋತಿ ರವಿರಾಜ್ ವಿಟ್ಲ
ಶ್ರೀಮತಿ ಜ್ಯೋತಿ ರವಿರಾಜ್ ವಿಟ್ಲ

ಇರುಳಿಡೀ ವರಕ್ಕು ಬಾರದ್ದೆ ಹೊಡಚ್ಚಿ, ಹೊಡಚ್ಚಿ ಉದಿಯಪ್ಪಗ ನಾಲ್ಕು ಗಂಟೆ ಹೊತ್ತಿಂಗೆ ಒಳ್ಳೆ ವರಕ್ಕು ಎನಗೆ. ಗಂಟೆ ಆರೂವರೆಯಪ್ಪಗ ಫಕ್ಕನೆ ಎಚ್ಚರಿಕೆ ಆತು. ಗಡಿಬಿಡಿಲಿ ಎದ್ದೆ. ಅಂದು ಅಣ್ಣನ ಮಗಳು ಭಾಗ್ಯನ ಮಾಣಿ ಕಡೆಯವು ನೋಡುಲೆ ಬಪ್ಪದು. ಚಂದದ ಕೂಸು ಭಾಗ್ಯ. ಕೆಲಸಕ್ಕೆ ಹೋವುತ್ತಾ ಇದ್ದು. ಅದಕ್ಕೆ ಎನ್ನತ್ರ ರಜ್ಜ ಕೊಂಡಾಟ ,ಪ್ರೀತಿ ಜಾಸ್ತಿ. ಆನು  ಈ ಸೋದರತ್ತೆಗೆ ಮಗ ಇಲ್ಲೆನ್ನೆ , ಎಷ್ಟು ಪ್ರೀತಿ ಮಾಡಿದರೂ , ನಿನ್ನ ಸೊಸೆ ಮಾಡಿಕೊಂಬಲೆ ” ಹೇಳಿ ಅದರ ಬಾಯಿಗೆ ಕೋಲು ಹಾಕುದು. ಕೂಸಿನ ತಯಾರು ಮಾಡುವ ಹೇಳಿ ಅದರ ಕೋಣೆಗೆ ಹೋದೆ. ಅದು ಆಗಲೇ ಹೆರಟಿತ್ತು. ಅದು ಎಷ್ಟು ಸಾಮಾನ್ಯವೋ ಅಷ್ಟೇ ನೇರ. ಅಣ್ಣ, ಅತ್ತಿಗೆ, ತಮ್ಮ, ಭಾಗ್ಯ ಆನು ಎಲ್ಲರೂ ಮಾಣಿ ಕಡೆಯವರ ನಿರೀಕ್ಷೆಯಲ್ಲಿತ್ತೆಯೊ. ಆನು ಗೆಂಡ ಇಲ್ಲದ್ದೊಳು. ಹಾಂಗಾಗಿ ಮೂಲೇಲಿ ಕೂದೆ. ನಾಯಿ ಜೋರು ಕೊರಪ್ಪಿತ್ತು. ಮಾಣಿ, ಅವನ ಅಪ್ಪ, ಅಮ್ಮ, ಒಳ ಬಪ್ಪದರ ಕಂಡಿಲಿ ಮೆಲ್ಲ ಇಣುಕಿ ನೋಡಿದೆ. ಅರೆಬರೆ ಚಿತ್ರಣ ಎನಗೆ ಕಂಡದು. ಆದರೂ ಮಾಣಿ ಕಾಂಬಲೆ ಮೋಸ ಇಲ್ಲೆ ಹೇಳಿ ಗ್ರಹಿಸಿದೆ. ಎಲ್ಲರೂ ಮಾತಾಡಿಕೊಂಡು ಇತ್ತವು. ಎನ್ನ ಮನಸ್ಸು ಮಾತ್ರ ಹಿಂದೆ-ಹಿಂದೆ, ಸುಮಾರು ಐವತ್ತು ವರ್ಷಗಳ ಹಿಂದಂಗೆ ಜಾರಿತ್ತು.

ನಟ್ಟ ಮಧ್ಯಾಹ್ನದ ಹೊತ್ತು. ಆಚೆಕರೆ ರಾಜಣ್ಣ ಪ್ರತ್ಯಕ್ಷ. ಅವು ಬತ್ತರೆ ಉಂಬ ಹೊತ್ತಿಂಗೆ ಬಕ್ಕಷ್ಟೆ ಹೇಳಿ ಗ್ರೇಶುತ್ತಾ  ಏನು ರಾಜಣ್ಣ ,ಆಸರಿಂಗೆ ಬೇಕಾ ?” ಕೇಳಿದೆ. ರಜ್ಜ ಕೊಡು , ಮಜ್ಜಿಗೆ ನೀರು ಅಕ್ಕು ” ಹೇಳಿದವು . ಒಳ ಓಡಿದೆ. ಅಷ್ಟರಲ್ಲಿ ಅಪ್ಪ ತೋಟಂದ ಬಂದವು. ಆಸರಿಂಗೆ ತಪ್ಪಗ  ರಾಜಣ್ಣ , ಅಪ್ಪನತ್ರ ಇದಾ, ಒಪ್ಪಣ್ಣ, ನಾಳೆ ಒಂದು ಕುಳವಾರು ಕರಕೊಂಡು ಬತ್ತೆ , ನಮ್ಮ ಕೂಸಿಂಗೆ ,ಒಳ್ಳೆ ಕುಳವಾರು..ಹೇಳಿದವು .ಎನ್ನ ಕೆಮಿ ಕುತ್ತ ಆತು .ಎದೆಲಿ ಬಡಬಡ! ಎನಗೆ ಅಲ್ಲದ ಹೇಳಿದ್ದು ರಾಜಣ್ಣ ! ಅಂತು ಕತ್ತಲಪ್ಪಗ ಏರ್ಪಾಡು ಸುರುವಾತು. ಅಮ್ಮ ಹೇಳಿತ್ತು , ಒಪ್ಪಕ್ಕ ,ನೀನು ಉದಿಯಪ್ಪಗ ಬೇಗ ಎದ್ದು , ಮಿಂದು ಸೀರೆ ಸುತ್ತು..ಮಾಣಿ ಕಡೆಯವು ಬತ್ತವಲ್ಲ ! ಹರ್ಕಟೆ ಲಂಗ ,ರವಕೆ, ಹಾಕಿಯೊಂಡು ಇರೆಡ. ಅಂದು ಮನೆಲಿ ಸೋದರತ್ತೆಯೂ ಇತ್ತಿದ್ದವು . ಹಾಂಗಾಗಿ ಅಮ್ಮಂಗೆ ಧೈರ‍್ಯ ಆತು . ಆದರೆ ಎನಗೆ ಇಷ್ಟು ಬೇಗ ಮದುವೆ ಬೇಡ ಇತ್ತು . ಅಮ್ಮ ,ಅತ್ತೆ ,ಎಲ್ಲಾ ಗಾಣದೆತ್ತಿನ ಹಾಂಗೆ ದುಡಿವದು ನೋಡಿ ಬೇಜಾರಾಗಿತ್ತು . ಎಂಟನೇ ಕ್ಲಾಸಿಂಗೆ ಹೋಗಿ ,ಮತ್ತೆ ಶಾಲೆ ಬಿಟ್ಟಿದೆ. ಅಪ್ಪ ಸಾಕು ಓದಿದ್ದು ,ತುಂಬಾ ಕಲ್ತರೆ ಮಾಣಿ ಸಿಕ್ಕ ಮತ್ತೆ ಹೇಳಿ ಮನೆಕೆಲಸಕ್ಕೆ ಹಾಕಿದವು . ಅಂಬಗ ಎನಗೆ ಹನ್ನೆರಡು ವರ್ಷ ಅಷ್ಟೆ. ಆದರೂ ಎಲ್ಲರೂ ಅಪ್ಪನ ಕೆಮಿ ತುಂಬುಸುಗು , ಕೂಸಿಂಗೆ ಮದುವೆ ಪ್ರಾಯ ಆತು ಹೇಳಿ. ಅಪ್ಪಂಗೆ ಮೊದಲಿಂದಲೂ ಹಿತ್ತಾಳೆ ಕೆಮಿ. ಅವರಿವರ ಮಾತು ಕೇಳುದು. ಹೆದರುದು. ಮೊನ್ನೆ ಜೋಯಿಶಮಾವ  ಅಪ್ಪನತ್ರ , ಈ ವರ್ಷ ಒಪ್ಪಕ್ಕಂಗೆ ಮದುವೆಯೋಗ ಇದ್ದು..ಹೇಳಿತ್ತವಡ. ಮತ್ತೊಂದು ಗುಟ್ಟಿನ ಸಂಗತಿ ಎನ್ನ ಕೆಮಿಗೆ ಬಿದ್ದತ್ತು. ಅದು…ಅಪ್ಪ ,ಅಮ್ಮ ,ಗುಟ್ಟಿಲ್ಲಿ ಕೋಣೆಲಿ ಮಾತಾಡಿಕೊಂಡು ಇತ್ತವು . ಅಪ್ಪ , ಅಮ್ಮನತ್ರ  ಇದಾ , ನಿನಗೊಂದು ಸಂಗತಿ ಹೇಳ್ತೆ ಕೇಳು , ಒಪ್ಪಕ್ಕನ ಯೋಗ ಏನೂ ಒಳ್ಳೆದಿಲ್ಲೆಡ . ಅಲ್ಲದ್ದೆ ಮೂರು ಜನ ಮಾಣಿಯಂಗೊ ನವಗೆ.ಒಂದು ಕೂಸು, ಹಾಂಗೆ ಇದ್ದರೆ ಮನೆಗೆ ಭಾರೀ ಕಷ್ಟಡ. ರಾವಣ, ಕುಂಭಕರ್ಣ, ವಿಭೀಷಣ,ಶೂರ್ಪನಖಿ ಇದ್ದ ಹಾಂಗಡ..ಆ ಮನೆಗೆ ಏಳಿಗೆ ಇಲ್ಲೆಡ..ಹಾಂಗಿಪ್ಪಗ ಒಪ್ಪಕ್ಕನ ಬೇಗ ಮದುವೆ ಮಾಡಿ ಕೊಡುದು ಒಳ್ಳೇದು ಅಲ್ಲದಾ….?ಅದರ ಕೇಳಿ ಎನಗಾದ ಬೇಜಾರ ಅಷ್ಟಿಷ್ಟಲ್ಲ. ಕೂಗಿದೆ…ಕೂಗಿದೆ..ಆನು ಎಂತ ತಪ್ಪು ಮಾಡಿದ್ದೆ ? ಈ ಮನೇಲಿ ಆನು ಹುಟ್ಟಿದ ಮೇಲೆ ಎಂತ ನಷ್ಟವೂ ಆಯಿದಿಲ್ಲೆ. ಎಲ್ಲಾ ಕೆಲಸ ಮಾಡಿಯೊಂಡು , ಎಲ್ಲರತ್ರ ನೆಗೆ ಮಾಡಿಯೊಂಡು ಓಡಾಡ್ತೆ. ಶೂರ್ಪನಖಿ ಹಾಂಗೆ ಒಂದು ದಿನ ಮಾಡಿದ್ದಿಲ್ಲೆ. ಅಪ್ಪ ,ಅಮ್ಮ ಎಂತಕೆ ಹೀಂಗೆ ಹೇಳ್ತವು ?..ಛೇ..ಬೇಜಾರಿಲ್ಲಿ ಮೋರೆ ಸಣ್ಣ ಆತು.

ಉದಿಯಪ್ಪಗಲೇ ಬೇಗ ಮಿಂದು ಹೊಸ್ತಿಲಿಂಗೆ ಹೊಡಾಡಿ ,ದೇವರೊಳ ಹೊಡಾಡಿ..ಕೋಣೆಗೆ ಹೋಗಿ ಅತ್ತೆಯೊಟ್ಟಿಂಗೆ ಸೀರೆ ಸುತ್ತುಲೆ ಹೆರಡುಲೆ ಸುರು ಮಾಡಿದೆ. ಮನಸ್ಸಿಲ್ಲಿ ಹೆದರಿಕೆ..ಇಷ್ಟು ದಿನ ಹೀಂಗಾತು, ಇನ್ನು ಹೇಂಗೊ ? ಆಚೆಕರೆ ಗೀತಾ, ಸುಮಾ ಎಲ್ಲರ ಮದುವೆ ಈ ವರ್ಷವೇ ಕಳುದ್ದು..ಎಲ್ಲರೂ ಖೊಷಿಲಿ ಇದ್ದವು…ಎನ್ನತ್ರ ರವಕ್ಕೆ ಇತ್ತಿಲ್ಲೆ ,ಅಮ್ಮನ ಕಪ್ಪು ರವಕ್ಕೆ ತೆಕ್ಕೊಂಡು ಬಂದೆ. ಅಷ್ಟಪ್ಪಗ ಅತ್ತೆ ಹೇಳಿತ್ತು  ಕಪ್ಪು ರವಕ್ಕೆ ಬೇಡ, ಅಪಶಕುನ, ಬೇರೆ ತಾ..ಮತ್ತೆ ಅಮ್ಮನತ್ರ ಇದ್ದದು ಬೆಳಿ ರವಕೆ ಮಾಂತ್ರ. ಅದು ರಜ್ಜ ದೊಡ್ಡ ಇತ್ತು. ಅಂತೂ ಪಿನ್ನು ಹಾಕಿ..ಹಾಕಿ..ಬೆಳಿ ರವಕ್ಕೆದೆ ಕೆಂಪು ಸೀರೆದೆ ಸುತ್ತಿದೆ. ಕೈಗೆ ಕೆಂಪು ಬಳೆ, ಕಾಲಿಂಗೆ ಗೆಜ್ಜೆ, ತಲೆಕೂದಲು ಬಗತ್ತಲೆ ಮಾಡಿ, ಗಟ್ಟಿ ಕಟ್ಟಿ ಅದಕ್ಕೆ ಮಲ್ಲಿಗೆ ಸೂಡಿದೆ. ಅಷ್ಟೊತ್ತಿಂಗೆ ಸೋದರತ್ತೆ ಜೇನುಮೇಣ, ಅಚ್ಚು ಎಲ್ಲಾ ತಂದು ಪೈಸೆಯಷ್ಟು ಅಗಲದ ದೊಡ್ಡ ಬೊಟ್ಟು ಹಾಕಿತ್ತು. ಕನ್ನಟಿಲಿ ಮೋರೆ ನೋಡಿದೆ. ತುಂಬಾ ಲಕ್ಷಣ ಇದ್ದೆ ಆನು ಹೇಳಿ ಮನಸ್ಸಿಲ್ಲಿ ಗ್ರೇಶಿದೆ. ಸೋದರತ್ತೆ ಹೇಳಿತ್ತು..ಥೇಟ್ ಒಪ್ಪಣ್ಣನೇ ಕೂಸು!..ಲಕ್ಷಣದ ಕೂಸು..ಎನ್ನ ಮೋರೆಲಿ ಸದಾ ನೆಗೆಯಿತ್ತು. ಮೃದು ಸ್ವಭಾವ ಎನ್ನದು. ರಜ್ಜ ಹಲ್ಲೆತ್ತರ ಎನಗೆ.ಹಾಂಗೆ ನೆಗೆ ಮಾಡಿದ ಹಾಂಗೆ ಕಂಡುಕೊಂಡಿತ್ತು! ಅಪ್ಪ ಹೇಳಿಕೊಂಡಿತ್ತವು, ಕೂಸುಗೊ ಅಪ್ಪನ ಹಾಂಗಿದ್ದರೆ ಅದೃಷ್ಟ ಅಡ! ಈ ವಿಷಯಲ್ಲಿ ಆದರೂ ಅದೃಷ್ಟ ಬರಲಿ ಹೇಳಿ ಗ್ರೇಶಿಯೊಂಡು ಹೆರಟೆ.

ಹೆರಂದ ನಾಯಿ ಬೊಬ್ಬೆ ಕೇಳುಲೆ ಸುರುವಾತು. ಎನ್ನ ಎದೆಲಿ ಡವಡವ ಜೋರಾತು. ಮಾಣಿದೆ, ಅವನ ಅಮ್ಮಂದೆ,ರಾಜಣ್ಣಂದೆ ಇತ್ತವು ಹೆರ. ಅಣ್ಣ,ತಮ್ಮಂದ್ರು ಅಪ್ಪ, ಅಮ್ಮ, ಹೆರ ಹೋದವು. ಸೋದರತ್ತೆ, ಆನು ಒಳ ಇತ್ತೆಯೊ. ಕೂಸು ಬರಲಿ ಹೇಳಿ ದೆನುಗೋಳಿದವು. ಕಾಪಿ ತೆಕ್ಕೊಂಡು ಹೋದೆ. ನೋಡುಲೆ ಸಪೂರ ಆನು. ಹಾಂಗಾಗಿ ಸೀರೆಲಿ ಬಚ್ಚಿದ ಹಾಂಗೆ ಕಾಣುಗಷ್ಟೆ..ಗ್ರೇಶಿದೆ. ಮೆಲ್ಲಂಗೆ ಕಾಪಿ ತೆಕ್ಕೊಂಡು ಚಾವಡಿಗೆ ಬಂದೆ. ತಲೆ ನೆಗ್ಗದ್ದೆ ಅವರ ಕಾಲು ನೋಡಿಯೊಂಡು ಕಾಪಿ ಕೊಟ್ಟು ಅಲ್ಲೇ ಚಿಟ್ಟೆಲಿ ಕೂದೆ. ಕೂದ್ದಲ್ಲಿಂದಲೇ ಮೆಲ್ಲಂಗೆ ರಜ್ಜ ತಲೆ ನೆಗ್ಗಿ ಮಾಣಿ ಕಡೆಂಗೆ ನೋಡಿದೆ. ಎದೆ ಧಸಕ್ಕ ಹೇಳಿತ್ತು! ಬರೇ ಅಜ್ಜ ಅವ! ಎನ್ನ ಅಪ್ಪನ ಪ್ರಾಯ ಆದಿಕ್ಕು ಗ್ರೇಶಿದೆ..ನೂರು ಬಾಣ ಒಂದರಿಗೆ ಎದೆಗೆ ಕುತ್ತಿದ ಹಾಂಗಾತು..ಅವನ ತಲೆಕಸವು ಎಲ್ಲಾ ಬೆಳಿ,ಕಪ್ಪು ಮಿಶ್ರ..ಮೋರೆಲಿ ಶುಧ್ದ ಕ್ರೂರತೆ ! ಹೊಟ್ಟೆ ನೋಡಿರೆ ಪೆರ್ಜೀವ ಹಾರಿದ ಹಾಂಗಾತು..ಶಿವ ಶಿವಾ..ಹಲ್ಲೂ ಎತ್ತರ ! ದೇವರೇ ಈ ಮಾಣಿ ಸತ್ತರೂ ಬೇಡ ಹೇಳಿ ಎನ್ನೆದೆ ಚೀರಿ ಹೇಳಿತ್ತು. ತಿಂಬ ಹಾಂಗೆ ನೋಡುವ ಅವರ ನೋಟ , ಎನಗೆ ತುಂಬಾ ಹೆದರಿಕೆ ತುಂಬಿಸ್ಸಿತ್ತು ಮನಸ್ಸಿಲ್ಲಿ. ಅಷ್ಟಪ್ಪಗ ಮಾಣಿ ಅಮ್ಮ ಕೂಸಿಂಗೆ ಹಾಡು ಬತ್ತಾ ? ಹೇಳಿ ಏಕರೆ ಸುರು ಮಾಡಿದವು. ಅದಕ್ಕೆ ಸರಿಯಾಗಿ ಅಪ್ಪ  ಅದಕ್ಕೆ ಒಳ್ಳೇ ಸ್ವರ ಇದ್ದು , ಹಾಡು ಹೇಳು ಒಪ್ಪಕ್ಕ ” ಹೇಳಿದವು..ಪ್ರದರ್ಶನದ ಬೊಂಬೆ ಹಾಂಗೆ ಕೂದ ಆನು ಮೆಲ್ಲಂಗೆ ಬಾಯಿ ಒಡದೆ.. ಇದು ಬಾಪೂಜಿ ಬೆಳಗಿದ ಭಾರತ… ಮೂರನೇ ಕ್ಲಾಸಿಲ್ಲಿ ಎನ್ನ ಕನ್ನಡ ಟೀಚರು ಕಲಿಸಿದ ಪದ್ಯ ಹೇಳಿದೆ. ಅವು ಸಾಕು..ಸಾಕು ಹೇಳಿದವು. ಆನು ಆರ ಮೋರೆಯೂ ನೋಡದ್ದೇ ಒಳ ಓಡಿದೆ. ಕೋಣೆಗೆ ಹೋಗಿ ಎನ್ನ ಅಲಂಕಾರ ನೋಡಿಯೊಂಡು ಆನೇ ಕೂಗಿದೆ. ತಲೆಯ ಗೋಡೆಗೆ ಜೆಪ್ಪಿ..ಜೆಪ್ಪಿ ಸಾಯೆಕು ಹೇಳಿ ಗ್ರೇಶಿದೆ.. ಆ ಅಜ್ಜಂಗೆ ಎನ್ನ ಕೊಡುದಡ ! ಅವಂಗೆ ಎರಡನೇ ಮದುವೆ ಅಡ ! ಮೊದಲಣ ಹೆಂಡತಿ ಕಾಯಿಲೆ ಬಂದು ಸತ್ತದಡ..ಮಕ್ಕೊ ಆಯಿದಿಲ್ಲೆಡ.. ಎಲ್ಲಾ ಹೆರಂದ ಒಂದೊಂದೇ ಕೆಮಿಗೆ ಬೀಳುತ್ತಾ ಇತ್ತು. ಒಂದಾರಿ ಅಪ್ಪಂಗೆ ಅವರ ಅಟ್ಟುಸಲಾಗದ ಮನೆಂದ, ಛೇ….! ಅಂತೂ ಇಂತೂ ರಜ್ಜ ಹೊತ್ತಪ್ಪಗ ಅವು ಹೋದವು. ರಾಜಣ್ಣ, ಅಪ್ಪನತ್ರ ಒಂದೇ ಸಮ ತಲೆ ತಿಂಬಲೆ ಸುರುಮಾಡಿದ …ಮಾಣಿ ಒಳ್ಳೆಯವ..,ಭಾರೀ ಆಸ್ತಿ, ಬದುಕು ಇದ್ದು, ಒಬ್ಬನೇ ಮಗ..ಈ ಪಾರ್ಟಿ ಬಿಟ್ಟರೆ ಬೇರೆ ಒಳ್ಳೆದು ಸಿಕ್ಕ..ಹೇಳಿ. ಅಪ್ಪ, ಅಮ್ಮ,ಅಣ್ಣ, ತಮ್ಮಂದ್ರು,ಅತ್ತೆ ಎಲ್ಲಾ ಮಾತಾಡಿಯೊಂಡಿತ್ತವು. ಎನ್ನತ್ರ ಆರೂ ಕೇಳ್ತವೇ ಇಲ್ಲೆ ! ಆನು ಸೀದಾ ಅವರತ್ರ ಹೋಗಿ  ಆ ಮಾಣಿ ಬೇಡ, ಅಜ್ಜನ ಹಾಂಗಿದ್ದ,. ಹೇಳಿದೆ. ಅದಕ್ಕೆ ಅಪ್ಪ  ಒಳ್ಳೇ ಕುಳವಾರು , ನಿನಗೆ ಅದೆಲ್ಲಾ ಗೊಂತಾಗ! ಎಂಗೊಗೆ ಒಪ್ಪಿಗೆ ಇದ್ದು . ಹಿರಿಯರು ಹೇಳುದು ನಿನ್ನ ಒಳ್ಳೇದಕ್ಕೆ ಗ್ರೇಶಿಯೊಂಗೊ..ಹೋಗು, ಒಳ ಹೋಗು..ಮದುವೆಂದ ಮೊದಲು ರಜ್ಜ ಅಡುಗೆ ಕೆಲಸ ಕಲಿ ಹೇಳಿದವು. ಅಮ್ಮನ ಮೋರೆ ನೋಡಿರೆ ಅಲ್ಲಿ ಬರೀ  ಹತಾಶೆ, ನಿರಾಸೆ..ಅಸಹಾಯಕತೆ.! ಅನಿವಾರ‍್ಯತೆ..ಆರೂ ಇಲ್ಲೆ ಎನಗೆ…ಒಬ್ಬನೇ ಮಗಳು ಆನು ! ಆದರೆಂತ ಎನ್ನ ಸ್ವಂತ ಅಭಿಪ್ರಾಯ ಕೇಳದ್ದೇ ಬಾವಿಗೆ ಹಾಕುತ್ತವನ್ನೇ..! ಇನ್ನು ಆರತ್ರೂ ಹೇಳಿಯೂ ಪ್ರಯೋಜನ ಆಗ ಹೇಳಿ ಗ್ರೇಶಿ ,,ಹಣೆಲಿ ಬರದ ಹಾಂಗೆ ಆಗಲಿ ಹೇಳಿ ಸುಮ್ಮನಾದೆ.

ಆ ದಿನವೂ ಬಂತು. ಎನ್ನ ಮದುವೆ ದಿನ.! ದಿನಾ ಕೊರಗಿ ಕೊರಗಿ ಆನು ಸಣ್ಣಾಗಿ ಹೋಗಿತ್ತೆ. ಎಂಗಳ ನೆರೆಲಿ ಎಲ್ಲಾ ಹೇಳಿಯೊಂಡಿತ್ತವು  ಮದುವೆ ನಿಘಂಟಾದರೆ ಕೂಸು ತೋರ ಅಕ್ಕು ಹೇಳಿ..ಆದರೆ ಎನಗೆ ಯಾವ ಸಂಭ್ರಮವೂ ಬೇಡ, ಮುಂದಣ ದಿನ ಹೇಂಗೆ ಕಳಿಗು ಹೇಳಿಯೇ ಪ್ರತಿ ಕ್ಷಣ ತಲೆಲಿ ಯೋಚನೆ. ಸುಮ್ಮನೆ ಎಲ್ಲದಕ್ಕೂ ಕುರಿಯ ಹಾಂಗೆ ತಲೆ ತಗ್ಗಿಸಿ ಮದುವೆ ಆದೆ. ಊರಿಲ್ಲಿ ನೂರು ಜನ ನೂರು ತರ ಮಾತಾಡಿದವು. .ಎನ್ನ ಮದುವೆಯ ವಿಷಯಲ್ಲಿ. ಎನ್ನ ಮನಸ್ಸೇ ಸತ್ತ ಹೋದ ಮೇಲೆ ಕೇಳುವ ಕೆಮಿ ಯಾವ ಲೆಕ್ಕ.! ಅಪ್ಪ, ಅಮ್ಮಂಗೂ ಒಳ ಒಳ ಹೆದರಿಕೆ ಆವುತ್ತಾ ಇದ್ದು ಹೇಳಿ ಅವರ ಮೋರೆ ನೋಡಿ ಅರ್ಥ ಆಗಿಯೊಂಡಿತ್ತು. ಸಟ್ಟುಮುಡಿ ಕಳುದು ಅಪ್ಪಚ್ಚಿ ಮಗಳು ಎನ್ನ ಒಟ್ಟಿಂಗೆ ಕುರುಂಟು ಕೂದ ಕಾರಣ ರಜ್ಜ ಧೈರ‍್ಯ ಆತು. ಎರಡು ದಿನ ಅಪ್ಪಗ ಅಪ್ಪಚ್ಚಿ ಬಂದು , ಅದರ ಕರಕೊಂಡು ಹೋದವು. ಅಂದು ಎನಗೆ ಎಲ್ಲಿಲ್ಲದ ಹೆದರಿಕೆ.,ಸಂಕಟ..ಇರುಳಪ್ಪಗ ಎಂತ ಅಕ್ಕು ಹೆದರಿಕೆ ! ಎರಡು ದಿನ ತಂಗೆಯೊಟ್ಟಿಂಗೆ ಮನುಗಿತ್ತೆ. ಇಂದು ಆನು ಎಲ್ಲಿ ಮನುಗೆಕ್ಕು ? ಅತ್ತೆಯತ್ರ ಹೋದೆ, ಕೇಳಿದೆ ಮೆಲ್ಲ.. ಆನು ಎಲ್ಲಿ ಮನುಗೆಕ್ಕು ಇರುಳಪ್ಪಗ ? ಅದಕ್ಕೆ ಅತ್ತೆ  ಅಲ್ಲಿ ಗೆಂಡನ ಹತ್ರ ಮನುಗು, ಅದೂ ಗೊಂತಿಲ್ಲೆಯಾ ? ಅಬ್ಬೆ ಹೇಳಿದ್ದಿಲ್ಲೆಯಾ ? ಕೇಳಿದವು . ಅವರ ಸ್ವರಕ್ಕೆ ಎನ್ನ ಎದೆ ಜೋರು-ಜೋರು ಬಡಿವಲೆ ಸುರುವಾತು. ಉಂಡಿಕ್ಕಿ ಪಾತ್ರೆ ತೊಳೆದು ಅವರ ಕೋಣೆಗೆ ಹೋದೆ. ಆ ಭೂಪ ! ಈಗಷ್ಟೇ ಉಂಡದು.. ಗೊರಕೆ ಹೊಡಕೊಂಡು ಇತ್ತಿದ್ದವು..ಅಬ್ಬಾ..ಬಚಾವ್ ! ಹೇಳಿ ಅಲ್ಲೇ ಹತ್ರ ಸುರುಂಟಿ ಮನುಗಿದೆ. ಒಂದು ಕ್ಷಣವೂ ವರಕ್ಕು ಬಯಿಂದಿಲ್ಲೆ ಇರುಳಿಡೀ ಹೆದರಿಕೆಲಿ. ಐದು ಗಂಟೆ ಆಯೆಕಾರೆ ಎದ್ದು ಅಡುಗೆ ಮನೆಗೆ ಬಂದೆ. ದೀಪ ಹೊತ್ತಿಸಿ ಒಲೆಂದ ಬೂದಿ ತೆಗವಲೆ ಸುರು ಮಾಡಿಯಪ್ಪಗ  ಅತ್ತೆ ಬಂದವು. ಬೇಗ ಮಿಂದಿಕ್ಕಿ ದೋಸೆಗೆ ಕಡೆ ಹೇಳಿದವು. ಕೆಲಸ ರಜ್ಜ, ರಜ್ಜ ಅಭ್ಯಾಸ ಇತ್ತು ಎನಗೆ. ಮಾತಾಡದ್ದೆ ಮಿಂದಿಕ್ಕಿ, ದೇವರಿಂಗೆ ಹೊಡಾಡಿ , ದೋಸೆಗೆ ಕಡವಲೆ ಸುರು ಮಾಡಿದೆ. ದೋಸೆ ಎರೆದು ,ದೋಸೆ ಕಾಪಿ ಗೆಂಡಂಗೆ ಬಳಿಸಿ ದೆನುಗೋಳಿದೆ. ಹುಂ..ಹಾಂ ! ಅಷ್ಟೇ ಮಾತಾಡುದು ಅವು..ಹಗಲಿಡೀ ತೋಟಲ್ಲಿ,,ಇಲ್ಲದ್ರೆ ಮನೆಲಿದ್ದರೆ ವರಗುದು.,ಅತ್ತೆಯತ್ರ ಒಂದೆರಡು ಗುಟ್ಟಿನ ಮಾತುಗೊ ಅಷ್ಟೇ ಅವರ ದಿನಚರಿ.  ಅತ್ತೆ ಅಂಬಗಂಬಗ ಕೆಲಸ ಜೋರಿಲ್ಲಿ ಹೇಳಿಯೊಂಡಿತ್ತವು. ಒಂದು ದಿನ ಪ್ರೀತಿ ಕಂಡಿದಿಲ್ಲೆ ಆ ಮನೆಲಿ.ಕೆಲಸದಾಳಿನ ಹಾಂಗೆ ಎನ್ನ ಅವಸ್ಥೆ.! ಇರುಳಪ್ಪಗ ಕೆಲಸ ಮುಗಿಸಿ ಹೋಪಾಗ ಗೆಂಡ ಸದಾ ಗೊರಕೆ ಹೊಡಕೊಂಡು ವರಗಿಯೊಂಡು ಇರ‍್ತವು. ಅದೇ ಒಂಚೂರು ನೆಮ್ಮದಿ.! ಒಂದು ದಿನವೂ ಮೈ ಮುಟ್ಟಿದ್ದವಿಲ್ಲೆ.! ಆದರೆ ಅಂದು ಮನುಗುಲೆ ಬಂದಪ್ಪಗ ಅವು ಕೇಳಿದವು  ನೀನು ದೊಡ್ಡ ಆಯಿದೆಯಾ ? ಎನಗೆ ಸರಿ ಅರ್ಥ ಆಗದ್ರೂ ಹೆದರಿಕೆಲಿ ಇಲ್ಲೆ ಹೇಳಿದೆ. ಆ ವಿಷಯ ಎಲ್ಲಾ ಅಮ್ಮ ಎನಗೆ ಹೇಳಿತ್ತಿಲ್ಲೆ..ಎಲ್ಲಾ ತಾನಾಗಿ ಗೊಂತಕ್ಕು ಹೇಳುವ ಭಾವ ಅವರದ್ದು.,ಆದರೆ ಸೋದರತ್ತೆ ರಜ್ಜ ಹೇಳಿತ್ತವು. ಈಗ ಎನ್ನ ತಲೆಲಿ ಅದೂ ಒಂದು ತಲೆ ಬೆಶಿ ಸುರುವಾತು. ಅಷ್ಟು ಕೇಳಿಕ್ಕಿ ಅವು ವರಗಿದವು. ಒಂದು ವಾರ ಕಳುದಪ್ಪಗ  ಆನು ಮೊದಲ ಸರ್ತಿ ಮೈ ನೆರದೆ. ಹೆದರಿ ಅತ್ತೆಯತ್ರ  ಕೇಳಿದೆ. ಅವು ಖೊಷಿಪಟ್ಟವು. ಅಷ್ಟು ದಿನಲ್ಲಿ ಅವರ ಮೋರೆಲಿ ಕಾಣದ್ದ ಸಂತೋಷ ಇಂದು ಇತ್ತು. ಹಾಂಗೆ ಮಾಡು, ಹೀಂಗೆ ಮಾಡು ,ಅದು ಮಾಡುಲೆ ಆಗ, ಇದು ಮಾಡುಲೆ ಆಗ, ಇಡೀ ದಿನ ಕೇಳಿ ಕೇಳಿ, ಎನಗೆ ಸಾಕಾತು. ಇರುಳಪ್ಪಗ ಹೆರ ಕೊಟ್ಟಗೆಲಿ ಮನುಗಿದೆ ನೆಮ್ಮದಿಲಿ. ಒಂದು ದಿನ ಮನೆ ಕೆಲಸದಾಳು ನೀಲಪ್ಪನ ಗುರ್ತ ಆತು. ಮಾತಾಡಿ, ಮಾತಾಡಿ, ಅದರತ್ರ ಆತ್ಮೀಯತೆ ಆತು. ಪ್ರಾಯದ ಅಜ್ಜ ಅದು.. ಆದರೆ ಅನುಭವಸ್ಥ. ಎನ್ನ ಪಾಪ ಹೇಳಿ ಕಂಡು ಎಲ್ಲಾ ಕತೆ ಆ ಮನೆದು ಬಿಡಿಸಿ ಹೇಳಿತ್ತು. ಅದರತ್ರ ಕೇಳಿದೆ ಮೊದಲಣ ಹೆಂಡತಿ ಹೇಂಗೆ ಸತ್ತದು ಹೇಳಿ..ಗುಟ್ಟಿಲ್ಲಿ ಹೇಳಿತ್ತು..ನೋಡಿ ಅಕ್ಕಾ, ಅದು ಭಾರೀ ದೊಡ್ಡ ಕತೆ. ಇವು ಭಯಂಕರ ಕೆಟ್ಟ ಜನಂಗೊ. ಮೊದಲಣ ಹೆಂಡತಿ ಹೆತ್ತಿದಿಲ್ಲೆ..ಬಸರಿಯೇ ಆಯಿದಿಲ್ಲೆ..ಒಂದು ವರುಷ ಕಾದವು. ಮತ್ತೆ ಒಂದಿರುಳು ಅಬ್ಬೆ,ಮಗ ಸೇರಿ ಅದರ ಕತೆ ಮುಗಿಸಿದವು. ನೀನು ಜಾಗ್ರತೆಲಿರು.. ಹೇಳಿಯಪ್ಪಗ ಭೂಮಿ ಬಾಯಿಬಿಡಲಾಗದ ಹೇಳಿ ಕಂಡತ್ತು. ಎಂತಕೆ ಆನು ದೊಡ್ಡ ಆದಪ್ಪಗ ಅವಕ್ಕೆ ಖೊಷಿ ಆದ್ದು ಹೇಳಿ ಗೊಂತಾತು. ಆ ದಿನಂದ ಎನ್ನ ಚಿಂತೆಗೆ ಎಣೆಯೇ ಇಲ್ಲದ ಹಾಂಗಾತು. ಗೆಂಡ ಹೇಳುವ ಅಜ್ಜನೊಟ್ಟಿಂಗೆ  ದಾಂಪತ್ಯ ಜೀವನ ಸುರುವಾತು. ತಿಂಗಳು-ತಿಂಗಳು ಅತ್ತೆಗೆ ಮುಟ್ಟು ನಿಂದಿದ ಹೇಳಿ ಆತುರ..ಮೊದಲಿಂದಲೂ ಜೀವನ ನರಕ ಆತು. ಅಪ್ಪನ ಮನೆಂದ ಒಂದೆರಡು ಸರ್ತಿ ಅಪ್ಪ,ಅಮ್ಮ ಬಂದರೂ ಎನ್ನ ಅಲ್ಲಿಗೆ ಕೂಪಲೆ ಕಳಿಸಿದ್ದವಿಲ್ಲೆ.. ಬಸರಿಯಾದರೆ ಕಳುಸುತ್ತೆ ಹೇಳಿ ಅತ್ತೆ ಹೇಳಿದವು. ವರುಷ ಒಂದಾದರೂ ಆನು ಬಸರಿಯೇ ಆಯಿದಿಲ್ಲೆ..ಅದೊಂದು ದಿನ ಇರುಳಪ್ಪಗ ಅತ್ತೆ, ಮಗ ಗುಟ್ಟಾಗಿ ಮಾತಾಡುದರ ಆನು ಕೇಳಿದೆ. ಅತ್ತೆ ,ಮಗನತ್ರ ಮಗಾ, ನಿನ್ನ ಹೆಂಡತಿ ಬಂಜೆ, ಗೊಡ್ಡು,..ಅದು ಹೆರ‍್ತಿಲ್ಲೆ. ಅದರ ಕತೆ ಮುಗುಸುವಾ..ಹೇಳಿದವು. ಅವರ ಮೋರೆಲಿದ್ದ ಕ್ರೌರ‍್ಯ ನೋಡಿ ,ಆನು ನಿಂದಲ್ಲೇ ಬೆಗರಿ ಚೆಂಡಿ ಆದೆ. ನೀಲಪ್ಪಜ್ಜನತ್ರ ಎಲ್ಲಾ ವಿಷಯ ಹೇಳಿದೆ. ಅದು ಅಕ್ಕಾ, ಇಂದೇ ಇಲ್ಲಿಂದ ಓಡಿ ,ಬದುಕಿಯೊಳ್ಳಿ..ಇಲ್ಲಿ ಹೇಂಗಾರೂ ಎಂತಾರೂ ಹೇಳಿ ರಜ್ಜ ಹೊತ್ತು ನಿಂಗಳ ಸುದ್ದಿಗೆ ಬಾರದ್ದ ಹಾಂಗೆ ನೋಡಿಕೊಳ್ತೆ ” ಹೇಳಿತ್ತು. ಹಾಕಿಯೊಂಡಿದ್ದ ಅದೇ ಸೀರೆಲಿ ,ಎಂತವೂ ತೆಕ್ಕೊಳದ್ದೆ  ಅಪ್ಪನ ಮನೆಗೆ ಓಡುಲೆ ಸುರುಮಾಡಿದೆ. ಹಾಂಗೆ ಸಾಯೆಕು, ಹೀಂಗೆ ಸಾಯೆಕು ,ಹೇಳಿ ದಿನಾ ಗ್ರೇಶುವ ಎನಗೆ ನಿಜವಾಗಿ ಸಾವು ಬತ್ತು ಹೇಳಿಯಪ್ಪಗ ಹೇಂಗಾರೂ ಬದುಕೆಕು ಹೇಳಿ ಓಡುವ ಧೈರ‍್ಯ ನೆನಸಿ ವಿಚಿತ್ರ ಆತು. ಅದು ಎಷ್ಟು ಹೊತ್ತು ಓಡಿದ್ದೆನೋ,,ನೆಡದ್ದೆನೋ..ಹೇಂಗೋ ಊರಿಂಗೆ ಎತ್ತಿದೆ. ಅಲ್ಲಿಂದ ಒಂದೇ ಓಟ ಅಪ್ಪನ ಮನೆಗೆ. ಹೇಂಗೆ ಬಂದೆ ಗೊಂತಿಲ್ಲೆ., ಬಾಗಿಲ ಬುಡಲ್ಲಿ ಹೋಗಿ ಬಿದ್ದಿತ್ತೆ. ಕಣ್ಣು ಬಿಟ್ಟು ನೋಡಿಯಪ್ಪಗ ಮನೆಯವೆಲ್ಲ ಎಂತಾತು ? ಎಂತಾತು ? ಹೇಳಿ ಗಾಬರಿಲಿ ಕೇಳಿದವು. ಎಲ್ಲಾ ವಿಷಯ ನಿಧಾನಕೆ ಹೇಳಿದೆ.. ಇನ್ನು ಆ ಮನೆಗೆ ಹೋವುತ್ತಿಲ್ಲೆ ಹೇಳಿದೆ. ಎಲ್ಲರೂ ಸುಮ್ಮನೆ ಹೋದವು. ಅಪ್ಪಂಗೂ ಅಬ್ಬೆಗೂ ತುಂಬಾ ತಲೆಬೆಶಿ ಆತು. ವಾಪಾಸು ರಾಜಣ್ಣನ ಹತ್ರ ಮಾತಾಡಿ ಅಲ್ಲಿಗೇ ಹೋಗು..ಮರ‍್ಯಾದೆ ಪ್ರಶ್ನೆ ಅಲ್ಲದಾ ? ಕೇಳಿದವು ಅಪ್ಪ. ಆನು ಒಪ್ಪಿದ್ದಿಲ್ಲೆ. ಅಂದು ಇರೆಕಾದ ಧೈರ‍್ಯ , ಇಂದು ಬಂತು ಎನಗೆ..ಈ ಮನೆ ಬಿಟ್ಟು ಎಲ್ಲಿಗೂ ಹೋಗೆ ಹೇಳಿ ಹಟಹಿಡುದೆ. ಅಕೇರಿಗೆ ಒಪ್ಪಿದವು ಎಲ್ಲರೂ.

ಆನು ಓಡಿಬಂದರೂ ಅತ್ತೆ, ಗೆಂಡ ವಾಪಾಸು ಕರಕ್ಕೊಂಡು ಹೋಪಲೆ ಬಯಿಂದವೇ ಇಲ್ಲೆ..ಆನೂ ಸುಮ್ಮನಾದೆ. ಮನೆಕೆಲಸ ಮಾಡಿಕೊಂಡು ಎನ್ನಷ್ಟಕ್ಕೆ ಇತ್ತೆ. ಊರಿನವು ಹತ್ತಾರು ರೀತಿಲಿ ಕೊಂಕು ಮಾತಾಡಿಯೊಂಡು ಇತ್ತವು. ನೀರಿಲ್ಲಿ ಮುಂಗಿದವಂಗೆ ಚಳಿ ಎಂತರ ಹೇಳಿ ಎಲ್ಲವೂ ಸಹಿಸಿಯೊಂಡು ಸುಮ್ಮನಾದೆ. ನಿಧಾನಕ್ಕೆ ಮನೆಯವು ಹೊಂದಿಕೊಂಡವು. ಆದರೆ ಅಣ್ಣ , ತಮ್ಮಂದ್ರು, ಪ್ರಾಯಕ್ಕೆ ಬಂದ ಹಾಗೆ ಅಪ್ಪಂಗೆ ಮತ್ತೆ ಚಿಂತೆ ಸುರುವಾತು. ಅವಕ್ಕೆ ಕೂಸು ಸಿಕ್ಕುಲೆ ಕಷ್ಟ ಆನು ಈ ಮನೆಲಿ ಇದ್ದರೆ ಹೇಳಿ ಎನಗೂ ಚಿಂತೆ ಆತು. ಕಡೆಂಗೂ ಅಪ್ಪ ಒಂದು ತೀರ್ಮಾನಕ್ಕೆ ಬಂದು ಅಪ್ಪನ ಜಾಗೆಲಿ ಎನಗೊಂದು ಮನೆ, ತೋಟ ಕೊಡುಲೆ ತೀರ್ಮಾನ ಮಾಡಿದವು. ಹೇಂಗೂ ಆನು ತೋಟದ ಕೆಲಸ ಮಾಡಿಯೊಂಡು ಇತ್ತೆ. ಒಬ್ಬ ಆಳಿನ ಮಾಡಿಯೊಂಡು ಜೀವನ ನೆಡಸುಲೆ ಎನಗೆ ಕಷ್ಟಾಗ ಹೇಳಿ ಕಂಡತು. ಒಂದು ರೀತಿಲಿ ಅಪ್ಪನ ಈ ನಿರ್ಧಾರ ಎನಗೆ ಒಳ್ಳೇದೆ ಆತು.,ಎನ್ನಷ್ಟಕ್ಕೇ ಹೊಸ ಜೀವನ ಸುರುಮಾಡಿದೆ. ಧೈರ‍್ಯ ತಂದುಕೊಂಡೆ. ಹದಿನಾರು-ಹದಿನೇಳು ವರುಷಲ್ಲೇ ಬದುಕು ಹೀಂಗೇ ಹೇಳಿ ಅಭ್ಯಾಸ ಮಾಡಿಯೊಂಡೆ. ಇನ್ನು ಎಷ್ಟು ವರ್ಷ ಆನು ಹೀಂಗೆ ಏಕಾಂಗಿಯಾಗಿ ಬದುಕೆಕು ಹೇಳಿ ಚಿಂತೆ ಆದರೂ ಆ ನರಕಂದ ಇದೇ ಮೇಲು ಹೇಳಿ ಕಂಡತ್ತು.

ಹತ್ತಾರು ವರುಷಂಗೊ ಹೀಂಗೆ ಕಳುದತ್ತು.. ಅಣ್ಣ ತಮ್ಮಂದ್ರಿಂಗೆ ಮದುವೆ ಆಗಿ ಮಕ್ಕೊ ಆದವು. ಎನಗಾವ ಸುಖ ಇಲ್ಲದ್ದರೂ ಹೆಜ್ಜೆ, ಮಜ್ಜಿಗೆ ,ಉಪ್ಪು ಉಂಡು ಎನ್ನಷ್ಟಕ್ಕೆ ಇಪ್ಪ ಸುಖ ಸಿಕ್ಕಿತ್ತು. ಊರವಕ್ಕೆ ಎನ್ನ ಸುದ್ದಿ ಮಾತಾಡಿ ಬಚ್ಚಿತ್ತು ..ಎನ್ನ ಸಾಧನೆ ಅವರ ಬಾಯಿ ಮುಚ್ಚಿಸಿತ್ತು. ಅದೊಂದು ದಿನ ಅಕಸ್ಮತ್ತಾಗಿ ಆನು , ಅಪ್ಪನ ಮನೆಲಿ ಇಪ್ಪ ಹೊತ್ತಿಲ್ಲಿ ರಾಜಣ್ಣ ಬಂದವು. ಎನ್ನ ಮೋರೆ ನೋಡಿ ಅವಕ್ಕೆ ಪಾತಾಳಕ್ಕೆ ಕುಸಿದ ಹಾಂಗಾತು. ಪಶ್ಚಾತ್ತಾಪ ಅವರ ಮೋರೆಲಿ ಎದ್ದು ಕಂಡೊಡಿತ್ತು. ಅಪ್ಪನತ್ರ ಮೆಲ್ಲಂಗೆ ಒಪ್ಪಕ್ಕನ ಗೆಂಡ ನಿನ್ನೆ ತೀರಿಕೊಂಡವು..ಹೇಳಿಕ್ಕಿ ಹೋದವು. ಹಾಲು ಕುಡುದಷ್ಟು ಸಂತೋಷ ಎನಗೆ..ಯಾವುದೇ ಬೇಜಾರ ಎನ್ನ ಮೋರೆಲಿ ಕಂಡಿರ ಆರಿಂಗೂ. ವಿಧವೆಯ ಹಾಂಗೆ ಬಳೆ, ಬೊಟ್ಟು, ಬಣ್ಣದ ಸೀರೆ ಎಲ್ಲ ಬಿಟ್ಟು ಆನು ಕೂಯಿದಿಲ್ಲೆ..ಆನು ಹಾಂಗೆಲ್ಲ ಮಾಡೆ ಹೇಳಿ ಅಪ್ಪಂಗೆ ಹೇಳಿದೆ. ಎನ್ನ ಈಗಣ ಧೈರ‍್ಯದ ಮಾತಿಂಗೆ ಆರೂ ಎಂತದೂ ಮಾತಾಡಿದ್ದವಿಲ್ಲೆ.. ಎನ್ನ ದು:ಖದ ತೀವ್ರತೆ ಎಷ್ಟು ಹೇಳಿ ಎಲ್ಲರಿಂಗೂ ಗೊಂತ್ತಿತ್ತು. ಗೆಂಡ ಸತ್ತ ಸುದ್ದಿ ಎನ್ನ ಮೇಲೆ ಯಾವುದೇ ಪ್ರಭಾವ ತಯಿಂದಿಲ್ಲೆ. ನಿರ್ಲಿಪ್ತ ಮನಸ್ಸಿಂದ ಮನೆಗೆ ಬಂದೆ.

ಫಕ್ಕನೆ ಎಚ್ಚರ ಆತು.  ಒಳಂದ ಭಾಗ್ಯನ ಬೊಬ್ಬೆ ಕೇಳಿತ್ತು..ಅಪ್ಪ ,ಎನಗೆ ಆ ಮಾಣಿ ಆಗ , ಎನಗೆ ಇಷ್ಟ ಇಲ್ಲೆ..ಎನ್ನ ಒಪ್ಪಿಗೆಯಿಲ್ಲದ್ದೆ ಮದುವೆ ಮಾಡೆಡಿ .. ಅಷ್ಟಪ್ಪಗ ಅಣ್ಣ  ಆತು ಮಗಳೇ.. ಹೇಳಿದ.  ಕಾಲಾಯ ತಸ್ಮೈ ನಮ: ” ಹೇಳುತ್ತವು. ಮನಸ್ಸು ಭಾರ ಆತು. ಅಂದು ಭಾಗ್ಯನದ್ದೇ ಸ್ಥಿತಿಲಿ ಆನು ಇತ್ತೆ. ಆದರೆ ಆನು ಹರಕೆಯ ಕುರಿಯಾದೆ. ಭಾಗ್ಯಗಿಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಇದ್ದು..ಎನಗೆ ಆ ಭಾಗ್ಯ ಇಲ್ಲೆ..ಎನ್ನ ಅಭಿಪ್ರಾಯ ಆರೂ ಕೇಳಿದ್ದವಿಲ್ಲೆ ಅಂದು.  ಎಲ್ಲರೂ ಅವರವರ ಸಂಸಾರಲ್ಲಿ ಸುಖವಾಗಿದ್ದವು ಇಂದು. ಆನು ಮಾಂತ್ರ ಏಕಾಂಗಿ..! ಹಾಂಗಾರೆ ಎನ್ನ ಬದುಕು ಹೀಂಗಪ್ಪಲೆ ಆರು ಹೊಣೆ ?? ಅಪ್ಪನಾ? ಅಬ್ಬೆಯಾ ? ಗೆಂಡನಾ? ಅತ್ತೆಯಾ ? ರಾಜಣ್ಣನಾ ? ಕಾಲವಾ ? ಸಮಾಜವಾ ? ಹೀಂಗೆ ಪ್ರಶ್ನೆ ಮಾಡುತ್ತಾ ಹೋದೆ..ಅಲ್ಲ ಎನ್ನ ಹಣೆಬರಹವಾ ? ಉತ್ತರವೇ ಸಿಕ್ಕಿದ್ದಿಲ್ಲೆ….ಏನೇ ಆಗಲಿ..ಎನ್ನ ಜೀವನ ಎನಗೆ ಹೇಳಿ ಧೈರ‍್ಯಂದ ಮನೆಗೆ ಬಂದೆ..ಹೊಸ್ತಿಲು ದಾಂಟಿ ಒಳ ಕಾಲು ಮಡಗುವಾಗ ಜೇಡನ ಬಲೆ ಮೋರೆಗೆ ಸಿಕ್ಕಿ ತುಂಡಾತು..ಅಬ್ಬ ಹೇಳಿ ಅಲ್ಲೇ ಕೂದೆ..ತುಂಡಾದ ಬಲೆಯ ಮತ್ತೆ ಕಟ್ಟುಲೆ ಸುರುಮಾಡಿತ್ತು ಜೇಡ,. ಎನ್ನ ಎಲ್ಲಾ ಪ್ರಶ್ನೆಗೆ ಉತ್ತರ ಹೇಳುವ ಹಾಂಗೆ.!!

~~***~~

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×