Oppanna.com

ಖಾಲಿ ಭರಣಿ

ಬರದೋರು :   ಶ್ಯಾಮಣ್ಣ    on   07/08/2014    9 ಒಪ್ಪಂಗೊ

ಶ್ಯಾಮಣ್ಣ

baraniಒಂದು ದಿನ
ಜಡಿಗುಟ್ಟಿ ಸೊರುಗುವ ಮಳೆಯ
ಹಿಡುದು ತಂದು
ಮನೆಯ ಅಟ್ಟದ ಮೂಲೆಯ
ಭರಣಿಲಿ ಹಾಕಿ
ಮುಚ್ಚಲಿನ ಮುಚ್ಚಿ
ಆರಿಂಗೂ ಸಿಕ್ಕದ್ದ ಹಾಂಗೆ,
ಹುಗ್ಗುಸಿ ಮಡುಗಿದೆ.

ಹುಡ್ಕಿದವು ಎಲ್ಲೋರು
ಮಳೆ ಇಲ್ಲೆ, ಕಾಣೆ ಆಯಿದು
ಕಾಲಿಂಗೆ ಎತ್ತಿನ ಗಾಡಿಯ ಚಕ್ರ, ರಿಕ್ಷದ ಚಕ್ರ,
ಕಾರು ಲಾರಿ ಬಸ್ಸಿನ ಚಕ್ರವ ಕಟ್ಟಿ,
ತಿರುಗಿದವು, ಹುಡ್ಕಿದವು
ಮಳೆ ಕಾಣೆ, ಸಿಕ್ಕಿದ್ದಿಲ್ಲೆ.

ಮತ್ತೊಂದು ದಿನ
ನೆತ್ತಿ ಹೊಟ್ಟುಸಿ ಬೆಶಿ ಏರಿಸಿದ ಬೆಶಿಲಿನ ತಂದು
ಅದೇ ಭರಣಿಯ ಒಳ ಹುಗ್ಗುಸಿ ಮಡುಗಿದೆ.

ಬೆಶಿಲಿಲ್ಲೆ, ಹೇಳಿದವು,
ಬೂತ ಕನ್ನಟಿ ಹಾಕಿ ಹುಡ್ಕಿದವು
ಕೊಡೆ ಮಡುಸಿ, ಧೂಳು ಕಾಲಿಂಗೆ ಮೆಟ್ಟಿ
ಹುಡ್ಕಿದವಯ್ಯ ಹುಡ್ಕಿದವು
ಸಿಕ್ಕಿದ್ದಿಲ್ಲೆ ಬೆಶಿಲು.

ಉದಿಯಪ್ಪಗ ಎದ್ದು ಹೆರ ಬಂದರೆ
ಮಲ್ಲಿಗೆ ಉದುರಿದ ಹಾಂಗಿಪ್ಪ
ಮೈಂದು, ಚಳಿಗೆ ಕೈಕ್ಕಾಲು ಮರಕಟ್ಟುಸುವ
ಆ ಮೈಂದಿನ ಹಿಡುದು ತಂದು
ಅದೇ ಭರಣಿಲಿ ತುಂಬುಸಿ
ಹುಗ್ಗುಸಿ ಮಡುಗಿದೆ

ಚಳಿ ಇಲ್ಲೆ, ಮೈಂದು ಬೀಳ್ತಿಲ್ಲೆ
ಎಂತಕೆ ಇಕ್ಕು ಹೇಳಿ
ತಲೆ ಬೆಶಿ ಮಾಡಿದವಯ್ಯ
ಎನಗೆ ನೆಗೆ, ಹುಡ್ಕಲಿ,
ಹೂಗು ಅರಳೆಕ್ಕಾರೆ, ಹಣ್ಣು ಬೆಳೆಯಕ್ಕಾರೆ
ಬೇಕೇ ಬೇಕಯ್ಯ ಮೈಂದು, ಚಳಿ
ಹುಡ್ಕಲಿ ಹುಡ್ಕಲಿ ಸಿಕ್ಕುಗೋ ಅವಕ್ಕೆ?

ಒಂದು ದಿನ ಮಳೆ ಬಂತು
ಬೆಶಿಲು ಬಂತು, ಮೈಂದು ಕೂಡ ಬಿದ್ದತ್ತು
ಎನಗೆ ಆಶ್ಚರ್ಯ!
ಹೇಂಗಪ್ಪಾ ಇದು?

ಒಳ ಹೋಗಿ ಭರಣಿಯ ಮುಚ್ಚಲು
ತೆಗದು ಒಳ ನೋಡಿದರೆ
ಭರಣಿ ಖಾಲಿ.

9 thoughts on “ಖಾಲಿ ಭರಣಿ

  1. ತುಂಬಾ ಲಾಯಕ ಇದ್ದು ಮನೋಜ್ಞವಾಗಿದ್ದು

  2. ವಿಶೇಷವಾಗಿಯೂ ಲಾಯಕವಾಗಿಯೂ ಮೂಡಿಬೈಂದು. ಶ್ಯಾಮಣ್ಣ ಭಾವಂಗೆ ವಿಶೇಷ ಒಪ್ಪ.

  3. ಈ ಕವನ ಈ ವರೆಗೆ ನಮ್ಮ ಒಪ್ಪಣ್ಣನ ಬೈಲಿಲಿ ಬಂದ ಕವನಗಳಲ್ಲಿ ಅತ್ಯಂತ ಸಾಂಕೇತಿಕವಾದ ಅರ್ಥಗರ್ಭಿತವಾದ ಕವನ. ಮಹೇಶಣ್ಣ ಅದಕ್ಕೆ ಸರಿಯಾದ ವ್ಯಾಖ್ಯಾನ ಕೊಟ್ಟಿದವು.ಇದರ ಬರೆದ ಶ್ಯಾಮಣ್ಣ ಅಭಿನಂದನೆಗೆ ಪಾತ್ರರು.ಇದರ ಬರೆವಾಗ ಅವಕ್ಕೆ ಅಂದಾಜಿ ಆಗಿರ ಇದಕ್ಕೆ ಎಷ್ಟೆಲ್ಲಾ ಅರ್ಥ ಕಟ್ಟುಗು ಹೇಳಿ !

  4. ಶ್ಯಾಮಣ್ಣಾ!
    ಈ ಕವನದ ಭರಣಿಲ್ಲಿ ಅರ್ಥವನ್ನೂ ಹುಗ್ಗುಸಿ ಮಡುಗಿದ್ದಿ!
    ಶ್ಯಾಮಣ್ಣನ ಈ ಕವನಲ್ಲಿಪ್ಪ ರಹಸ್ಯ ತತ್ತ್ವ ಎಂತದಪ್ಪಾ!

    ಮಳೆ, ಬೆಶಿಲು, ಚಳಿ ಗಳ ಹಿಡುದು ಮಡುಗಿ ಬಾರದ್ದ ಹಾಂಗೆ ಮಾಡುದು ಮನುಷ್ಯನೇ ಹೇಳಿಯೋ!
    ಲೋಕಕ್ಕೆ ಬೇಕಾದ್ದರ ಹುಗ್ಗುಸಿ ಮಡುಗಲೆಡಿಯ ಹೇಳಿಯೋ?
    ಸಾರ್ವಜನಿಕ ಸಂಪತ್ತಿನ ಹುಗ್ಗುಸಿರೆ ತನ್ನಿಂತಾನೆ ಬಯಲಕ್ಕು ಹೇಳಿಯೋ!
    `ಕಾಲ’ಧನವ `ಕಾಳಧನ’ ದ ಹಾಂಗೆ ಹುಗ್ಗುಸಿರೆ ಎಂತಕ್ಕು ಹೇಳಿಯೋ!
    ಹುಗ್ಗುಸಿದವಂಗೆ ಗೊಂತಾಗದ್ದ ಹಾಂಗೆ ಕಪ್ಪು ಹಣವೂ (`ಕಾಳಧನವೂ’) ಹೀಂಗೆಯೇ ಬಯಲಕ್ಕು ಹೇಳಿಯೋ!
    `ಬೇಕಪ್ಪಗ ಕೊಡುವೆ ಉಪ್ಪಿನಕಾಯಿಯ ಹಾಂಗೆ’ ಹೇಳಿ ಕಾಲಮಾನವ ಭರಣಿಲ್ಲಿ ಕಟ್ಟಿ ಮಡುಗಿದ್ದದೋ!
    `ಹಾಳು’ ಮಳೆ, `ಕೆಟ್ಟ’ ಬೆಶಿಲು, `ಕಡು’ ಚಳಿ ಹೇಳಿ ಬೈದರೂ ಅದು ಬೇಕು ಹೇಳಿಯೋ!
    ಸುಲಭಲ್ಲಿ ಸಿಕ್ಕುವ ಪ್ರಾಕೃತಿಕ ಸಂಪತ್ತು ಕಾಣದ್ದೆ ಆದರೆ ಮಾಂತ್ರ ಅದರ ಬೆಲೆ ಗೊಂತಪ್ಪದು ಹೇಳಿಯೋ!
    ಫ್ರೀ ಆಗಿ ಸಿಕ್ಕುವ ಮಳೆ ಬೆಶಿಲು ಚಳಿಗಳ ಮಹತ್ತ್ವ ತಿಳಿಸಲೆ ಶ್ಯಾಮಣ್ಣ ಮಾಡಿದ ಕವನ ಲೀಲೆಯೋ!

  5. ಅಕ್ಷರ ಕಾವ್ಯಕ್ಕೆ ಚಿತ್ರ ಕಾವ್ಯ ರೈಸಿದ್ದು ಶಾಮಣ್ಣ

  6. ಹುಗ್ಗುಸಿ ಮಡಗಿದ ಭರಣಿಯ ಮುಚ್ಚೆಲಿನ ತೆಗದವಕ್ಕೆ ಒಂದು ನಮಸ್ಕಾರ . ಎಡಿಯಪ್ಪಾ ನಮ್ಮ ಶ್ಯಾಮಣ್ಣನ ಕತೆಲಿ.. ಅಲ್ಲ ಅಲ್ಲ ಕವನಲ್ಲಿ !! ನವ್ಯ ಕವನಕ್ಕೆ ಭವ್ಯ ಚಿತ್ರ ..

  7. ಯಪ್ಪಾ, ಈ ಶಾಮಣ್ಣ ಸಣ್ಣ ಆಸಾಮಿ ಅಲ್ಲ. ಪದ್ಯವುದೆ ಚಿತ್ರವುದೆ ಬೊಂಬಾಟ್ ಆಯಿದು. ಶಾಮಣ್ಣನ ಕಾಣದ್ದೆ ತುಂಬಾ ಸಮಯ ಆಗಿತ್ತು. ಪುನ: ಕಂಡು ಕೊಶಿ ಆತು.

  8. ಆಹಾಂ …. ಅದಾ.. ಜೂನ್ ತಿಂಗಳಿಡೀ ಮಳೆ ಬಾರದ್ದು ಏಕೆ ಹೇಳಿ ಈಗ ಗೊಂತಾತಿಲ್ಲೆಯೋ ? ಅದು ಅವಂದೇ ಕಿತಾಪತಿ !ಖಾಲಿ ಭರಣಿ ಇಲ್ಲಿ ಬೇಕಾಡ.. ಇತ್ತಲಾಗಿ ಕಳುಸಿಕ್ಕಿ .

    * ಶಾಮಣ್ಣಾ… ಕವನ, ಚಿತ್ರ ಎರಡುದೇ ಸೂ……ಪರ್ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×