- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು.
-ವಿಜಯಲಕ್ಷ್ಮಿ.ಕಟ್ಟದಮೂಲೆ.
ಜೂನ್ ತಿಂಗಳು ಇಪ್ಪತ್ತೇಳನೇ ತಾರೀಖು.ಕಸ್ತಲಪ್ಪಗ ಸಾಧಾರಣ ಏಳೂವರೆ ಗಂಟೆಗೆ ಆನು ನಿತ್ಯಾಣ ಹಾಂಗೆ ದೇವರ ನಾಮ ಹೇಳಿಕೊಂಡು ಇತ್ತಿದ್ದೆ.ಅಷ್ಟಪ್ಪಗ ಫೋನು ರಿಂಗಾತು. “ಹಲೋ..ಆನು ಆರು ಗೊಂತಾತಾ?” ಫೋನು ನೆಗ್ಗಿಯಪ್ಪಗ ಕೇಳಿದ ಸ್ವರ, ಎನಗೆ ಫಕ್ಕನೆ ಗೊಂತಾಯಿದಿಲ್ಲೆ.”ನಿಂಗೊ ವಿಜಯಕ್ಕ ಅಲ್ಲದೋ…?ಆನು ವಿಜಯಾ ಸುಬ್ರಹ್ಮಣ್ಯ.ಒಂದು ಸಂತೋಷದ ಸುದ್ದಿ. ನಿನಗೆ “ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ”ಲಿ ಪ್ರಥಮ ಬಹುಮಾನ ಬಯಿಂದು. ಅಭಿನಂದನೆಗೊ. “ಅನಿರೀಕ್ಷಿತವಾದ ಶುಭ ಶುದ್ದಿಯ ಕೇಳಿ, ಮನಸ್ಸಿಲ್ಲಿ ಸಾರ್ಥಕ ಭಾವನೆ ಮೂಡಿಕೊಂಡತ್ತು. ಗತ ದಿನಂಗಳ ನೆಂಪು, ಗರಿಬಿಚ್ಚಿದ ಹಕ್ಕಿಯ ಹಾಂಗೆ ಹಾರುಲೆ ಸುರು ಮಾಡಿತ್ತು.ಯಾವುದೇ ವಿಷಯ, ಒಳ್ಳೆದಾಗಲಿ, ಹಾಳಾಗಲಿ ಆದಪ್ಪಗ ಅದರ ಹಿಂದಾಣ(ಹಿನ್ನೆಲೆ) ಚಟುವಟಿಕೆಯ ವಿಮರ್ಶೆ ಮಾಡುವದು ಎನ್ನ ಹುಟ್ಟುಗುಣ .ಹಾಂಗೆಯೇ ಈ ಸಂದರ್ಭಲ್ಲಿ ಹಾರಿ ಬಂದ ದಾರಿಯ ಅವಲೋಕನೆ ಮಾಡುಲೆ ಹೆರಟೆ.
ನಾಲ್ಕು ವರ್ಷ ಮೊದಲಾಣ ಶುದ್ದಿ. ಎಂದ್ರಾಣ ಹಾಂಗೆ ಪೇಪರು ಬಿಡುಸಿ ಕೂದುಕೊಂಡು ಇಪ್ಪಗ,”ಕೊಡಗಿನ ಗೌರಮ್ಮ ಕಥಾಕಮ್ಮಟ” ಹೇಳುವ ಶಿರೋನಾಮೆ ಇಪ್ಪ ಹೊಡೆಂಗೆ ಎನ್ನ ದೃಷ್ಟಿ ಬಿದ್ದತ್ತು. ಎಂತದೋ ಒಂದು ಸೆಳೆತ! ಎನಗೂ ಹೋಯೆಕ್ಕು ಹೇಳುವ ಆಶೆ ಆತು. ಸಂಚಾಲಕಿ “ವಿಜಯಾ ಸುಬ್ರಹ್ಮಣ್ಯ”ಅವಕ್ಕೆ ಫೋನು ಮಾಡಿ ಕೇಳಿದೆ. ಅವರ ಪ್ರೋತ್ಸಾಹ ಪೂರ್ವಕ ಮಾತುಗೊ ಕಥಾ ಕಮ್ಮಟಕ್ಕೆ ಎನ್ನ ಹೆಸರು ಕೊಡುವ ಹಾಂಗೆ ಮಾಡಿತ್ತು. ಅಂತೂ ಆದಿನ ಬಂದೇ ಬಿಟ್ಟತ್ತು!.ಹೆದರಿಕೊಂಡೇ “ಭಾರತಿ ವಿದ್ಯಾಪೀಠ”, ಬದಿಯಡ್ಕ ಇದರ ಮೆಟ್ಲು ಹತ್ತಿದೆ.ಅಲ್ಲಿದ್ದೋರು ಎಲ್ಲೋರೂ ಸಣ್ಣ ಪ್ರಾಯದವು. ಎನ್ನ ಹಾಂಗೆ ಐವತ್ತು ದಾಂಟಿದವು ಆರಾದರೂ ಇದ್ದವೋ..?ಹೇಳಿ ಇಡೀ ಕಣ್ಣಾಡಿಸಿದೆ. ಊಹೂಂ…ಆರೂ ಇತ್ತಿದ್ದವಿಲ್ಲೆ. ಎಲ್ಲೋರೂ ಕಥೆ, ಪದ್ಯ, ಪ್ರಬಂಧ ಬರದವೇ ಅಲ್ಲಿದ್ದದು. ಹೀಂಗೇ..ಸಭೆಲಿ ಕೂದುಕೊಂಡು ಇಪ್ಪಗ,ಹತ್ತರೆ ಕೂದುಕೊಂಡು ಇತ್ತಿದ್ದ(ಹೆಮ್ಮಕ್ಕೊ) ತಂಗೆ,”ನಿಂಗೊ ಯಾವ ಪತ್ರಿಕೆಗೊಕ್ಕೆಲ್ಲ ಬರೆತ್ತಿ..?”ಹೇಳಿ ಕೇಳಿತ್ತು. ಎದೆ ಸಣ್ಣಕೆ ನಡುಗಿತ್ತು! “ಇಲ್ಲೆಪ್ಪಾ…ಆನು ಇಷ್ಟರವರೆಗೆ ಕಥೆ ಬರದ್ದೇ ಇಲ್ಲೆ.ಮಕ್ಕಳ ಪದ್ಯ, ಚುಟುಕು ಬರದ್ದೆ. ಅಂತೇ ಹೆಂಗೇ ಹೇಳಿ ನೋಡುವಾ..ಹೇಳಿ ಬಂದದು. ಈಗ ಹೆದರಿಕೆ ಆವುತ್ತು “ಹೇಳಿಕ್ಕಿ ಬೆಗರು ಉದ್ದಿಕೊಂಡೆ.” ಕವನ ಬರೆತ್ತವಕ್ಕೆ ಕಥೆ ಬರವಲೆ ಸುಲಭ.ನಿಂಗೊ ಧೈರ್ಯಂದ ಇರಿ.”ಹೇಳಿ ಎನಗೆ ವಿಶೇಷ ರೀತಿಲಿ ಪ್ರೋತ್ಸಾಹ ಕೊಟ್ಟ ಪ್ರಸಿದ್ಧ ಲೇಖಕಿಯಾದ ಪ್ರಸನ್ನಾ.ವಿ ಚೆಕ್ಕೆಮನೆ ಅದರ ಸರಳ ವ್ಯಕ್ತಿತ್ವ ಕಂಡು ಭಾರೀ ಖುಷಿಯಾತು. ಅದು ಹೇಳಿದ ಒಂದೇ ಒಂದು ವಾಕ್ಯ ಎನ್ನ ಮನಸ್ಸಿಲ್ಲಿ ಭದ್ರವಾಗಿ ಕೂದುಕೊಂಡತ್ತು. (ಈ ತಂಗಗೆ ೨೦೧೫ರ ಕೊಡಗಿನ ಗೌರಮ್ಮ ಪ್ರಶಸ್ತಿ ಬಂದದು ನೋಡಿ ಖುಷಿ ಪಟ್ಟವರಲ್ಲಿ ಆನೂ ಸೇರಿದ್ದೆ.) ಮಧ್ಯಾಹ್ನದ ವಿರಾಮದ ಸಮಯಲ್ಲಿ ಹಿರಿಯ ಬರಹಗಾರ್ತಿ ಸವಿತಾ ಯಸ್.ಭಟ್, ಅಡ್ವಾಯಿ,ಇವು ಮಾತಾಡಿಯೊಂಡೇ ಕಥೆ ಬರವದು ಹೇಂಗೆ ಹೇಳಿ ವಿವರಣೆ ಕೊಟ್ಟವು.ಇಷ್ಟೆಲ್ಲಾ ಅಪ್ಪಗ, ಹೆದರಿ ಮುದ್ದೆಯಾದ ಆಲೋಚನಾ ಶಕ್ತಿ ಮೆಲ್ಲಂಗೆ ಬಿಡಿಸಿಕೊಂಬಲೆ ಸುರುವಾತು. ಕಥಾಕಮ್ಮಟದ ಅಖೇರಿಗೆ ಕಥೆ ಬರವಲೆ ಕೂದ ಆ ಕೋಣೆಲಿ ಕೊಡಗಿನ ಗೌರಮ್ಮನ ಪ್ರೇರಣೆಯೋ ಏನೋ ಹೇಳ್ತ ಹಾಂಗೆ ಆನುದೆ ಒಂದು ಸಣ್ಣ ಕಥೆ ಬರದೆ!ಅದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬಂದ ಶ್ರೀಯುತ ಶ್ರೀನಿವಾಸ ಸೇರಾಜೆಯವು”ಒಳ್ಳೆ ಕಥೆ”ಹೇಳಿ ಪ್ರೋತ್ಸಾಹ ಕೊಟ್ಟದು ಎನಗೆ ಸಾಹಿತ್ಯ ಕ್ಷೇತ್ರಲ್ಲಿ ಹರಕ್ಕೊಂಡು ಹೋಪಲೆ ಎಡಿಗಾತು.ಇಲ್ಲಿಂದ ಸುರುವಾತು ಎನ್ನ ಬರವಣಿಗೆಯ ಬಾಲ್ಯ ಜೀವನ.
ಧರ್ಮಸ್ಥಳ ಮಂಜುನಾಥನ ಕೃಪಾಕಟಾಕ್ಷಂದ ಎನ್ನ ಪ್ರಪ್ರಥಮ ಕಥೆ “ಹರಕೆ” ಮಂಜುವಾಣಿ ಮಾಸಪತ್ರಿಕೆಲಿ ಪ್ರಕಟ ಆತು.ಈಗ ಮೂರು ವರ್ಷಂದ ಸುಮಾರು ಕಥೆಗೊ ರಚನೆ ಆತು. ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಗೆ ಮೊದಲು “ಹೊಂದಾಣಿಕೆ”, “ಗಾಯತ್ರಿ ಮಹಿಮೆ”, “ಸುಶೀಲೆ” ಹೇಳ್ವ ಮೂರು ಕಥೆ ಕಳುಸಿದ್ದೆ.ಈ ವರ್ಷಾಣ “ದೇಶ ಭಕ್ತಿ” ಕಥೆ ಪ್ರಶಸ್ತಿಯ ಗರಿಯ ತಂದುಕೊಟ್ಟತ್ತು. ಬಹುಮಾನಕ್ಕೆ ಎಂಗಳ ಆಯ್ಕೆ ಮಾಡಿದ ಖ್ಯಾತ ಸಾಹಿತಿ,ಶ್ರೀವಿ.ಬಿ ಕುಳಮರ್ವ,ಇವು ಕವನ ಸಿಂಚನ ಮಾಡಿ,ವಿಜೇತರಾದವಕ್ಕೆ ಶುಭ ಹಾರೈಸಿದ್ದು ಬಹಳಷ್ಟು ಖುಷಿ ಕೊಟ್ಟತ್ತು.ಹಾಂಗೆಯೇ ಕಾನತ್ತಿಲದ ಹಿರಿಯ ಪ್ರೊಫೆಸೆರ್ ಮಹಾಲಿಂಗ ಭಟ್ ಅವು ಮನತುಂಬಿ,ಎನ್ನ ಕಥೆಯ ತಿರುಳಿನ ಆಳವಾಗಿ ತಿಳುಕ್ಕೊಂಡು ಪ್ರಶಂಸೆಯ ಸುರಿಮಳೆಯ ಹರಿಸಿದ್ದವು.ಇದರಿಂದಾಗಿ ಎನಗೆ ಮುಂದೆ ಸಾಹಿತ್ಯಲ್ಲಿ ಮುಂದುವರಿವಲೆ ಅರ್ಹತೆ ಇದ್ದು ಹೇಳುವ ಆತ್ಮವಿಶ್ವಾಸ, ಧೈರ್ಯ ಮೂಡಿಬಯಿಂದು. ಪ್ರಶಸ್ತಿ ಬಂದಪ್ಪಗ ಎನ್ನ ಒಡನಾಡಿಗಳ ಹಾಂಗೆ ಇದ್ದ ಜಯಶ್ರೀ ಟೀಚರ್, ಶಶಿಪ್ರಭಾ ವರುಂಬುಡಿ, ಹಾಂಗೇ ಎನ್ನ ಯೆಜಮಾನ್ರ ಸೋದರತ್ತೆಯ ಮಗ ದಂಬೆಮೂಲೆ ಸತ್ಯನಾರಾಯಣ ಭಟ್..ಇವು ಎಲ್ಲ ಪ್ರತ್ಯೇಕವಾಗಿ ಫೋನು ಮಾಡಿ,ಅಭಿನಂದನೆ ಸಲ್ಲಿಸಿ,ಅವರ ಪ್ರೀತಿ,ವಿಶ್ವಾಸವ ತೋರಿಸಿಕೊಟ್ಟಿದವು.
ಜೀವನಲ್ಲಿ ನಾವು ಗ್ರೇಶಿದ್ದೆಲ್ಲಾ ಆವುತ್ತಿಲ್ಲೆ.ಹಾಂಗೆಯೇ ಯೋಗ ಇದ್ದರೆ ಆಗದ್ದದು ಯಾವುದೂ ಇಲ್ಲೆ.ಅಲ್ಲದೋ..?”ಪ್ರಶಸ್ತಿ ತೆಕ್ಕೊಂಬಲೆ ಸೆಪ್ಟೆಂಬರ್-೪ಕ್ಕೆ ಬೆಂಗಳೂರಿನ ಗಿರಿನಗರಕ್ಕೆ ಅಗತ್ಯವಾಗಿ ಬರೆಕ್ಕು..”ಹೇಳಿ ಸಂಚಾಲಕಿ ವಿಜಯಕ್ಕ ಒತ್ತಾಯಪೂರ್ವಕ ಹೇಳಿದವು.ಆದರೆ..ಎನಗೆ ಈ ಸೌಭಾಗ್ಯ ಖಂಡಿತಾ ಇಲ್ಲೆ ಹೇಳಿ ಗ್ರೇಶಿತ್ತಿದ್ದೆ. ಹಳ್ಳಿ ಹೆಮ್ಮಕ್ಕೊಗೆ ಎರಡು ದಿನಾಣ ಪ್ರಯಾಣ ಹೇಳಿರೆ ಕೆಲಸಂದ ಹಿಡುದು ಕಾವಲಿಂಗೆ ಜೆನ ಹುಡುಕ್ಕುವಲ್ಲಿವರೆಗೆ ಸಕಲ ಏರ್ಪಾಡು ಆಯೆಕ್ಕನ್ನೆ! “ನೀನು ಬಹುಮಾನ ತೆಕ್ಕೊಂಬಲೆ ಹೋಗಲೇಬೇಕು” ಹೇಳಿ ಹುರಿದುಂಬಿಸಿ,ಯಜಮಾನ್ರು ಕಳಿಸಿಕೊಟ್ಟವು.ಅದರೊಟ್ಟಿಂಗೆ ಎಂಗಳ ಗುರಿಕ್ಕಾರ್‌ರಾದ ಗಣಪತಿ ಭಟ್ ಇವು ವ್ಯವಸ್ಥೆ ಮಾಡಿಕೊಟ್ಟ ಕಾರಣ ಅಲ್ಲಿಗೆ ಹೋಪ ಸಿದ್ಧತೆ ಮಾಡಿಕೊಂಡೆ.ಸೆಪ್ಟೆಂಬರ್-೩ರಂದು ಕಸ್ತಲಪ್ಪಗ ಆರು ಗಂಟೆಗೆ ಎಂಟು ಜೆನರ ತಂಡ ಕಾರಿಲ್ಲಿ ಬೆಂಗಳೂರಿಂಗೆ ಹೆರಟತ್ತು. ನಾಲ್ಕು ಜೆನ ಗೆಂಡುಮಕ್ಕೊ,ಅಷ್ಟೇ ಹೆಮ್ಮಕ್ಕೊ.”ಇಷ್ಟು ದೂರ ಹೋಪಗ ಹೊತ್ತು ಕಳವದು ಹೇಂಗೆ..?”ಹೇಳಿ ಯೇಚನೆ ಮಾಡಿಕೊಂಡಿದ್ದ ಎನಗೆ, ಬೆಂಗಳೂರಿಂಗೆ ಎತ್ತಿದ್ದೇ ಗೊಂತಾಯಿದಿಲ್ಲೆ.ಹೆರಿ ನಾಗರಿಕಳಪ್ಪಲೆ ಕೆಲವೇ ವರ್ಷ ಬಾಕಿ ಇಪ್ಪ ಎನ್ನೊಟ್ಟಿಂಗೆ ಕಿರಿಯ ತಂಗೆಕ್ಕಳಾದ ಡಾ.ಅನ್ನಪೂರ್ಣೇಶ್ವರಿ,ಶ್ಯಾಮಲಾ ಪತ್ತಡ್ಕ,ಶಶಿಪ್ರಭಾ ವರುಂಬುಡಿ.ಇವು ಹೊಂದಿಕೊಂಡ ರೀತಿ,ಅವರ ಚತುರತೆಯ ಮಾತುಗಳ ಕೇಳಿಯೊಂಡು ಹೊತ್ತು ಹೋದ್ದದೇ ಗೊಂತಾಯಿದಿಲ್ಲೆ.ಅಕ್ಕ, ತಂಗೆಕ್ಕೊ ಹಳೆ ನೆಂಪುಗಳ ಹೊಸ ರೂಪಲ್ಲಿ ಹೆರ ತಂದು ನೆಗೆ ಸಮುದ್ರಲ್ಲಿ ಮುಳುಗಿ, ಪ್ರಯಾಣದ ಸಮಯವ ಅತ್ಯಮೂಲ್ಯವಾಗಿ ಉಪಯೋಗಿಸಿಕೊಂಡೆಯೋ. ಎಂಗಳೊಟ್ಟಿಂಗೆ ಗೆಂಡುಮಕ್ಕಳೂ ಸಹಕರಿಸಿದ್ದವು ಹೇಳಿ ಅಭಿಮಾನಪೂರ್ವಕವಾಗಿ ಹೇಳ್ಲೆ ಇಷ್ಟ ಪಡ್ತೆ. ಬೆಂಗಳೂರಿಂಗೆ ಉದೆಕಾಲ ೨.೩೦ಕ್ಕೆ ಎತ್ತಿಕ್ಕಿ,ಉದಿಯಪ್ಪಗಾಣ ಸವಿ ಒರಕ್ಕಿನ ಗುರಿಕ್ಕಾರ್ರ ಮಗ ವಿನಯ ಕೇಶವವ ಮನೆಲಿ ಮಾಡಿದೆಯೊ.ಮರದಿನ ೭-೩೦ಕ್ಕೆಅಲ್ಲಿಂದ ಹೊರಟೆಯೋ.ಅಲ್ಲಿಂದ ಗಿರಿನಗರಕ್ಕೆ ಅರ್ಧ ಗಂಟೆ ದಾರಿ.ಈ ಹೊತ್ತಿಲ್ಲಿಎನ್ನ ಮನಸ್ಸಿನ ತುಂಬಾ ನೂತನ ದಂಪತಿಗಳ ಆದರಾತಿಥ್ಯದ ಚಿತ್ರಣ ಮೂಡಿಕೊಂಡತ್ತು. “ಅತಿಥಿ ದೇವೋ ಭವ” ಹೇಳ್ತದು ಇಂದಿಂಗೂ ಆಚರಣೆಲಿ ಇದ್ದು.. ಹೇಳುವದು ಖಚಿತ ಆತು.
ಅಭಯ ಚಾತುರ್ಮಾಸ್ಯದ ಸಂಭ್ರಮಲ್ಲಿದ್ದ ಗಿರಿನಗರ ಶ್ರೀ ರಾಮಚಂದ್ರಾಪುರ ಮಠಕ್ಕೆ ಪ್ರವೇಶ ಮಾಡಿಯಪ್ಪದ್ದೆ ಶ್ರೀರಾಮನ ದರ್ಶನ ಮಾಡಿದೆಯೋ.ಉದಿಯಪ್ಪಗಾಣ ತಿಂಡಿ,ಕಾಫಿಯ ಸವಿದಿಕ್ಕಿ ಹೆರ ಬಪ್ಪಗ,ಪರಿಚಯಸ್ಥರೆಲ್ಲ ಎನಗೆ ಅಭಿನಂದನೆಗಳ ತಿಳುಶಿದವು. ಶ್ರೀಕರಾರ್ಚಿತ ಪೂಜೆಗೆ ಹೇಳಿ ಕಾದುಕೊಂಡಿದ್ದ ಭಕ್ತರ ಸಾಲಿಲ್ಲಿ ಎಂಗಳೂ ಕೂದೆಯೊ. ಇಡೀ ಹವ್ಯಕ ಮಂಡಲವ ಮುನ್ನಡೆಶುವ ಈಶ್ವರಿ ಬೇರ್ಕಡವು ಅವು ಅವರ ಎಡೆಬಿಡದ ಕೆಲಸಂಗಳ ನಡುವೆಯೂ ಎನಗೆ ಶುಭ ಅಭಿನಂದನೆಗಳ ಸಲ್ಲಿಸಿದವು. ಶ್ರೀಸನ್ನಿಧಿಯ ಎದುರು ಸುಶ್ರಾವ್ಯವಾಗಿ ಹೆಮ್ಮಕ್ಕೊ ಭಜನೆ ಮಾಡುವಗ ಆನೂ ಧ್ವನಿ ಸೇರಿಸಿದೆ. ಶ್ರೀರಾಮನ ಪೂಜೆಯ ಮಹಾಮಂಗಳಾರತಿ ಸ್ವೀಕರಿಸಿ ಕೃತಾರ್ಥಳಾದೆ. ಮಧ್ಯಾಹ್ನ ಹನ್ನೆರಡು ಗಂಟಗೆ ಗುರುಗೊ ಪೀಠಕ್ಕೆ ಬಂದವು. ಕೊಡಗಿನ ಗೌರಮ್ಮ ಪ್ರಶಸ್ತಿಯ ಶ್ರೀಗುರುಗಳ ದಿವ್ಯ ಹಸ್ತಂದ ಪಡಕ್ಕೊಂಡು ಆಶೀರ್ವಾದ ಪಡೆದ ಶುಭ ಘಳಿಗೆಲಿ ಮನಸ್ಸಿಲ್ಲಿ ಬೇಡಿಕೆಯೊಂದು ಮೂಡಿಕೊಂಡತ್ತು. “ಸಾಹಿತ್ಯ ಕ್ಷೇತ್ರಲ್ಲಿ ಪ್ರಪ್ರಥಮ ಮೆಟ್ಲಿಲ್ಲಿ ಆನು ನಿಂದಿದೆ. ಮೇಲಂಗೆ ಸುಮಾರು ಮೆಟ್ಲು ಕಾಣ್ತಾ ಇದ್ದು.ಒಂದೊಂದಾಗಿ ಮೇಲೇರುವ ಶಕ್ತಿಯ ಶ್ರೀಗುರುಗಳ ಅನುಗ್ರಹದೊಟ್ಟಿಂಗೆ ಭಗವಂತ ಹರಸಲಿ..”ಹೇಳಿ ಪ್ರಾರ್ಥಿಸಿಕೊಂಡೆ.ಈ ಎಲ್ಲ ಭಾಗ್ಯಕ್ಕೆ ಕಾರಣೀಭೂತರು ಕೊಡಗಿನ ಗೌರಮ್ಮ. ಅವರ ನೆಂಪಿಲ್ಲಿ ವರ್ಷಂಪ್ರತಿ ನೆಡಕ್ಕೊಂಡು ಬಪ್ಪ ಸ್ಪರ್ಧೆ ಹವ್ಯಕ ಹೆಮ್ಮಕ್ಕೊಗೆ ಸಾಹಿತ್ಯ ಕ್ಷೇತ್ರಲ್ಲಿ ಅತ್ಯುತ್ತಮವಾದ ಸ್ಥಾನಮಾನವ ದೊರಕಿಸಿ ಕೊಟ್ಟಿದು. ಕಸ್ತಲೆ ಕೋಣೆಲಿ ಇಪ್ಪ ವಸ್ತುಗೊ ಕಾಣೆಕ್ಕಾದರೆ ಅಲ್ಲಿಗೆ ಬೆಣಚ್ಚು ಕೊಡುವವು ಬೇಕಲ್ಲದೋ..?ಈ ಕೆಲಸವ ಹಲವಾರು ವರ್ಷಂದ ಈ ವೇದಿಕೆ ಮಾಡ್ತಾ ಇಪ್ಪದು ನಮ್ಮ ಪುಣ್ಯ. ಯಾವುದೇ ಪ್ರಶಸ್ತಿ ಬಂದಪ್ಪಗ ಪ್ರಶಸ್ತಿ ಸಿಕ್ಕಿದವರ ಭಾವಚಿತ್ರ ಪತ್ರಿಕೆಲಿ ಪ್ರಕಟ ಆವುತ್ತು.ಆದರೆ..ಈ ಪ್ರಶಸ್ತಿಯ ಹಿಂದೆ ಆರ ಸೇವೆ ಅಡಕವಾಗಿದ್ದು ಹೇಳುವದು ಮೂಲೆಲಿ ಕೂದುಕೊಂಡು ಇರ‍್ತು.ಇದಕ್ಕೆ ಜೀವಕೊಟ್ಟು ಎದುರಿಂಗೆ ತರೆಕ್ಕಾದ್ದದು ಪ್ರಶಸ್ತಿತೆಕ್ಕೊಂಡವರ ಕರ್ತವ್ಯ ಹೇಳಿ ಎನ್ನ ಅಭಿಪ್ರಾಯ. ತೆರೆಮರೆಲಿ ನಿಸ್ವಾರ್ಥಸೇವೆಲಿ ಅಹರ್ನಿಶಿ ಕೆಲಸ ಮಾಡುವ ಎಲ್ಲೋರಿಂಗು ಎನ್ನ ಮನತುಂಬಿದ ಕೃತಜ್ಞತೆಗೊ. ಕೊಡಗಿನ ಗೌರಮ್ಮ ಸ್ಪರ್ಧೆಯ ಸಂಚಾಲಕಿ ವಿಜಯಕ್ಕನ ಸಾಧನೆಯ ಹಾದಿಯ ನೆಂಪು ಮಾಡಿಯೊಂಡು ಆನು ವೇದಿಕೆಂದ ಕೆಳ ಇಳುದು ಬಂದೆ.
ಗಂಟೆ ೩.೩೦ ಆದರೂ ಬಫೆಲಿ ಉಂಬ ಕ್ರಮವ ಕರೆಂಗೆ ಮಡಗಿ,ಹಂತಿಲಿ ಉಂಬಲೆ ಶಾಂತ ರೀತಿಲಿ ಸಹಕರಿಸಿದ ಭಕ್ತ ಬಾಂಧವರ ಕಂಡು ಆಶ್ಚರ್ಯ ಆತು. ಪ್ರಸಾದ ಭೋಜನ ಸ್ವೀಕರಿಸಿ,ಮರಳಿ ಮನಗೆ ಹೆರಟೆಯೊ. ಉದೆಕಾಲ ೩ಗಂಟೆಗೆ ಆನು ಮನೆ ಮುಟ್ಟಿದೆ.ಮನೆಲಿ ವಿಷಯಂಗಳ ವಿವರುಸಿ ಹೇಳಿಯಪ್ಪಗ ಉದಿಯಾತದ!ಎದೆ ತುಂಬಾ ಸಂತೋಷದ ಭಾವನೆಗಳ ತುಂಬಿಕೊಂಡು,ಎಂದ್ರಾಣ ಹಾಂಗೆ ಕೆಲಸದ ಹೊಡೆಂಗೆ ಗಮನ ಕೊಟ್ಟೆ.
ವಿಜಯಲಕ್ಷ್ಮಿ.ಕಟ್ಟದಮೂಲೆ.
೨೦೧೭ರ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ.
ಮತ್ತೊಂದರಿ ಅಭಿನಂದನೆಗೊ. ಪ್ರಯತ್ನಕ್ಕೆ ಫಲ ಸಿಕ್ಕಿಯೇ ಸಿಕ್ಕುತ್ತು. ಇನ್ನುದೆ ತುಂಬಾ ಒಳ್ಳೊಳ್ಳೆ ಕಥೆಗೊ ಲೇಖನಂಗೊ ಮೂಡಿ ಬರಲಿ. ನಿಂಗಳ ಅನಿಸಿಕೆ ಲಾಯಕಾಯಿದು.
ಧನ್ಯವಾದ ಗೋಪಾಲಣ್ಣ.
ಒಳ್ಳೆದಾಯಿದು
ಧನ್ಯವಾದ.
ನಮಃ ., ಒಪ್ಪ.
ನಮಃ
ಲಾಯಕ ಆಯಿದು . ಹೊಸಬ್ಬರಿಂಗೆ ಪ್ರೇರಣೆ ಸಿಕ್ಕುಗು ಈ ಲೇಖನಂದ.
ಧನ್ಯವಾದಂಗೊ.
ಕಟ್ಟದಮೂಲೆ ವಿಜಯಕ್ಕನ ಮನದಾಳದ ಮಾತು ಓದುಗ ಮನಸು ತುಂಬಿ ಬಂತು.ಪ್ರಯತ್ನ ಪಟ್ಟರೆ ದೇವರ ಅನುಗ್ರಹ, ಗುರುಗಳ ಆಶೀರ್ವಾದಂದಾಗಿ ಕಾರ್ಯ ಕೈಗೂಡುತ್ತು ಹೇಳುವ ಸತ್ಯ ಅವರ ಮಾತಿಲ್ಲಿ ವ್ಯಕ್ತ ಆವ್ತು.ಅವು ಹೇಳಿದ ಘಟನೆ ಎನಗೆ ನೆಂಪಿಲ್ಲೆ. ಆದರೂ ಈ ಸಮಯಲ್ಲಿ ಅವು ಎನ್ನ ನೆಂಪು ಮಾಡಿದ್ದು ಕಾಂಬಗ ಅವರ ಆ ಪ್ರೀತಿಗೆ ಶರಣು ಹೇಳ್ತಾಯಿದ್ದೆ.ಇನ್ನಷ್ಟು ಕತೆಗೊ ಅವರ ಲೇಖನಿಂದ ಮೂಡಿ ಬರಲಿ….
ನಿನ್ನ ಶುಭ ಹಾರೈಕೆಗೆ ಕೃತಜ್ಞತೆಗೊ ಪ್ರಸನ್ನಾ….
ಬಿಟ್ಟು ಹೋದ್ದದು:ಪ್ರಥಮವಾಗಿ ಅಭಿನಂದಿಸಿದ ಪಳ್ಳತ್ತಡ್ಕ ಶ್ಯಾಮಲತ್ತಿಗೆಗೆ ಪ್ರತ್ಯೇಕ ಕೃತಜ್ಞತೆಗೊ.
ಪಳ್ಳತ್ತಡ್ಕ ಶ್ಯಾಮಲಾಕ್ಕಾ ಹೇದರೆ ಮುದ್ದು ಮಂಟಪದ owner allado.
ಅಪ್ಪು ಶಿವರಾಮಣ್ಣ.