Oppanna.com

ಆನೇ….. ಮಾಡಿದ ಸೊರೆಕಾಯಿ ಕೊಟ್ಟಿಗೆ

ಬರದೋರು :   ಶರ್ಮಪ್ಪಚ್ಚಿ    on   09/09/2020    2 ಒಪ್ಪಂಗೊ

ಆನೇ….. ಮಾಡಿದ ಸೊರೆಕಾಯಿ ಕೊಟ್ಟಿಗೆ
-ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ
ಏ…ಪ್ರೇಮಾ….ಎಲ್ಲಿದ್ದೆಯಾ…ಇದೊಂದು ಕೈಲಿ ಮೊಬೈಲು ಹಿಡುದು ಗುರುಟುಲೆ ಕೂದರೆ ಇಡೀ ಊರು ಅಡಿಮೇಲು ಆದರೂ ಗೊಂತಾಗ.ಕೆಲಸ ಇಲ್ಲಿ ನಾಯಿ ತಿಂತು. “ಬೇಲೆದ ಕಳುವಗು ಬಾಲೆದಡ್ಡಿ “ಹೇಳಿ ಯಾವಾಗ ಎಂತ ಕೆಲಸ ಹೇಳ್ರೂ” ಮಾಣಿ  ಕೂಗುತ್ತ ಅತ್ತೆ..ಎಂತ ಮಾಡ್ಲೂ ಬಿಡುತ್ತಾ ಇಲ್ಲೇಳಿ” ರಾಗ ಬೇರೆ.ಎಂಗ ಎಲ್ಲಾ ಮಕ್ಕಳ ದೊಡ್ಡ ಮಾಡಿದ್ದಿಲ್ಲೆ ಆಯ್ಕು.ಎನ್ನ ಅಬ್ಬೆ ಹನ್ನೆರಡು ಹೆತ್ತಿದು.ಅವು ಎಂತ ಮಾಡೆಕ್ಕಂಬಗ?ಆನುದೇ ಹನ್ನೆರಡು ಅಲ್ಲದ್ರೂ ಆರು ಮಕ್ಕಳ ದೊಡ್ಡ ಮಾಡಿದ್ದೆ.ಎರಡು ಮಕ್ಕೊ ಅನಾರೋಗ್ಯ ಬಂದು ತೀರಿದವು.ಈಗಾಣವಕ್ಕೆ ಕೈ ಕಾಲಿಂಗೆ ಜನ ಆಯೆಕ್ಕು ಅಲ್ಲಡ. ಹೇಳಿ ಸುಖ ಇಲ್ಲೆ.. ಪರಂಚಿಗೊಂಡೇ ಗೌರಮ್ಮ ಸೊಸೆಯ ದೊಡ್ಡಕೆ ದಿನಿಗೇಳ್ತವು.
ಈ ಅತ್ತೆದೊಂದು ಕಿರಿಕಿರಿ ಏವಾಗ ನೋಡ್ರೂ…ಒಂದು ಗಳಿಗೆ ತಳಿಯದ್ದೆ ಕೂಪಲೆ ಬಿಡವು.ವರ್ಷ ಎಂಬತ್ತಾದರೂ ಕಾರ್ಬಾರಿಂಗೆಂತ ಕಮ್ಮಿ ಇಲ್ಲೆ.ಅವು ಮಾಡುದು ಇಷ್ಚೇ ನಿಗಾಂಟಿನ ಕೆಲಸ ಹೇಳಿ ಇದ್ದು.ಮತ್ತೆ ಎಲ್ಲಾ ಆನೇ ಮಾಡುದು.” ಕೋಪಲ್ಲಿ ಮಾಣಿಯ ತೂಗಿಗೊಂಡಿದ್ದ ಪ್ರೇಮಾ ತೊಟ್ಲ ಬಳ್ಳಿಯ ಮೆಲ್ಲಂಗೆ ಬಿಡ್ತು.ಮಾಣಿ ಕಣ್ಣೊಡದು ಉಙ..ಯೀ…ಯೀ..ಹೇಳಿ ಕೂಗುಲೆ ಸುರುಮಾಡ್ತ.ಇವನ ತೂಗಿ,ತೂಗಿ ಎನ್ನ ಕೈ ಬೇನೆ ಎದ್ದತ್ತು.ನಾಲ್ಕು ಬಳ್ಳಿ ಹಿಡುದು ತೂಗಿ ಅಭ್ಯಾಸ ಆಯಿದಿವಂಗೆ.ಇವ ವರಗುವ ಅಂದಾಜು ಕಾಣ್ತಿಲ್ಲೇಳಿ ಮಾಣಿಯ ಎತ್ತಿಗೊಂಡು ಎಂತ ಅತ್ತೇ…ಕೇಳಿಗೊಂಡು ಬತ್ತು.
ವರಗಿದ್ದಾ ಇಲ್ಲೆಯಾ ಇವ.ಆಗಂದ ತೂಗುದು ಕೇಳ್ತು.ಇಲ್ಲಿ ಕೆಳ ಬಿಡು ಅವನ.ಆಡಿಗೊಂಡು ಕೂರಲಿ.ಸೊಸೆಯ ಮೋರೆಯ ವಾರೆಗೆ ನೋಡಿಕೊಂಡು ಹೇಳ್ತು.
ಪ್ರೇಮಾ ಮಾಣಿಯ ಕೆಳಬಿಡ್ತು.ಆಟದ ಸಾಮಾನು ತಂದು ಅವನ ಎದುರು ಸೊರುಗುತ್ತು.
ಇಂದು ಎನ್ನ ಸೊರೆಬಳ್ಳಿಲಿ ಒಂದು ಸೊರೆ ಆಯಿದು. ನಾಳಂಗೆ ಕೊಟ್ಟಿಗೆ ಮಾಡ್ಲಕ್ಕು.ಆಳು ಬಂದರುದೇ ಬಿಡ್ಸಿ ಕೊಡ್ಲೆ ಸುಲಾಭ.ನಾಳಂಗೆ ಬೇಕಪ್ಪಷ್ಚೇ ಅಕ್ಕಿ ನೀರಿಲಿ ಹಾಕು.5 ಕುಡ್ತೆ ಹಾಕಿರೆ ಧಾರಾಳ ಸಾಕು.ಅಣ್ಣ ಇರುಳು 1 ಕೊಟ್ಟಿಗೆ ಬೆಶಿ ಬೆಶಿ ತಿಂಗು.ಅಣ್ಣಾ ಳಿ ಹೇಳುದು ಅವು ಮಗ ಪ್ರಕಾಶನ.ಅವನ ತಂಗೆಯಕ್ಕಳತ್ರೆ ಮಾತಾಡಿಗೊಂಡು ಅವನ ಅಣ್ಣಾ ಳಿ ಹೇಳುಲೆ ಸುರು ಆದ್ದು ಇಂದಿಂಗೂ ಅವ ಅಣ್ಣನೇ. ಎರಡು ದಿನಕ್ಕಾತು ಹೇಳಿ ಹೆಚ್ಚ ಅಕ್ಕಿ ನೀರಿಲಿ ಹಾಕಿಕ್ಕಡ ಇನ್ನು. ಸರಿ ಕೊಚ್ಚೇಲು ಮುಟ್ಟದ್ರೆ ಮೆತ್ಸಂಗೆ ಆಗ” ಅತ್ತೆದು ಆದೇಶ ಆತು.
ಗೌರಮ್ಮ ಸಣ್ಣ ಪ್ರಾಯಲ್ಲೇ ಗೆಂಡನ ಕಳಕೊಂಡು ನಾಲ್ಕು ಮಕ್ಕಳ ಹೇಂಗೂ ದೊಡ್ಡ ಮಾಡಿದ್ದವು.ಕಾರ್ಬಾರು ಮಾಡ್ಲೆ ಹಾಂಗೆ ಅಭ್ಯಾಸ ಆದ್ದು.
ಆತತ್ತೇ.ನಿಂಗೊ ಹೇಳಿದ್ದು ಒಳ್ಳೆದಾತು.ಆನು ನಾಳಂಗೆ ಕಾಫಿಗೆ ಎಂತ ಮಾಡುದಪ್ಪಾ? ಗ್ರೇಶಿಗೊಂಡಿತ್ತಿದ್ದೆ.ಈಗಲೇ ಅಕ್ಕಿ ಬೊದುಲುಲೆ ಹಾಕುತ್ತೆ.ಕರೆಂಟ್ ಇಪ್ಪಗಲೇ ಕಡದು ಮಡುಗಕ್ಕು.ಮುರುಸಂಧಿ ಅಪ್ಪಗ ಕರೆಂಟ್ ಅಂಬಗಂಬಗ ತೆಗೆತ್ತವು” ಹೇಳಿಗೊಂಡು ಅಕ್ಕಿ ನೀರಿಲಿ ಹಾಕುತ್ತು.
ಆನಂಬಗ ತೋಟಕ್ಕೆ ಹೋಗಿ ನಾಲ್ಕು ಕೀತು ಬಾಳೆಲೆ ತತ್ತೆ.ಕೊಡಿ ಬಾಳೆಯೂ ತರೆಕ್ಕು.ಈಗಾರೆ ಮಳೆ ಬಿಟ್ಟುಗೊಂಡಿದ್ದು.ಅಣ್ಣನೂ ಪೇಟೆಗೆ ಹೋಯಿದ.ಅವ ಇಪ್ಪಗ ಹೋಪಲೆ ಗೊಂತಿಲ್ಲೆ.
ನೀನೆಂತರ ನಿಂದುಗೊಂಡು ನೋಡುದು..? ಗೌರಮ್ಮ ಸೊಸೆಯನ್ನೇ ನೋಡಿಗೊಂಡು ಹೇಳಿದವು.
ಅಲ್ಲತ್ತೇ..ಆನು ಬಾಳೆ ಎಲೆ ತಯಿಂದೆ ಅತ್ತೆ.ಮಾಣಿ ವರಗಿಪ್ಪಗ ತೋಟಕ್ಕೋದೆ.ಉದ್ಯಪ್ಪಗಣ ತಿಂಡಿಗಾರೂ ಆವ್ತನ್ನೇಳಿ.ಸುಮಾರು ದೊಡ್ಡ ಎಲೆಯೂ ತಯಿಂದೆ.ಬಾಳೆಗೊ ಸುಮಾರು ಮೊಗಚ್ಚಿದ್ದು ನಿನ್ನಣ ಮಳೆಗಾಳಿಗೆ.ನಿಂಗೊ ಹೋಗೆಡಿ.ಅದೇ ಸಾಕು” ಪ್ರೇಮ ತನ್ನ ಘನಂದಾರಿ ಕೆಲಸಕ್ಕೆ ಅತ್ತೆ ಹೊಗಳುಗು ಗ್ರೇಶಿಗೊಂಡು ಅತ್ತೆಯ ಮೋರೆಯೇ ನೋಡ್ತು.
ಹಾ…ಸಾಕು..ಸಾಕು.ಕಂಡಿದೆ ನೀನು ತಂದ ಬಾಳೆಲೆಗಳ.ಎಲ್ಲಾ ಹರ್ಕಟೆಗೊ.ಕೋಣದಷ್ಚು ಅಗಲ ಇಲ್ಲೆ.ಬಾಳೆಲೆ ತಪ್ಪಲೂ ಅರಡ್ಯಕ್ಕು.ಅಂತೆ ಪೆನ್,ಪುಸ್ತಕ ಹಿಡ್ಕೊಂಡು ಕತೆ,ಕವನ ಗೀಚುದು,ಮೊಬೈಲಿಲಿ ಗುರುಟುದು ಮತ್ತೆ ಮಾಣಿ ಹಿಡ್ಕೊಂಡು ತಂಗನೆ ಮಂಗನೆ ಮಾಡುದು. ಇದೇ ಆತು ನಿನಗೆ.ಎನಗೆ ಬಾಳೆಲೆ ಆನೇ…..ತಂದರೇ ಸಮಾಧಾನ ಅಪ್ಪದು
ಬಸಳೆದೇ ಮುಂಡಿದೇ ಕೊರದು ಮಡುಗಿದ್ದೆ.ಬಸಳೆ ಬೆಂದಿ ಮಾಡಿ, ಮುಂಡಿ ತಾಳು ಮಾಡು. ” ಹೇಳಿ, ಹೇಳಿಗೊಂಡು ಸಣ್ಣ ಕೊಕ್ಕೆ ಹಿಡುಕೊಂಡು ಹೋದ್ದೇ ತೋಟಕ್ಕೆ ಗೌರಮ್ಮ.
ಹೋಗಿ. ಹೋಗಿ ನಿಂಗೊಗೆ ಹೇಳುದಕ್ಕೆ, ತಳಿಯದ್ದೆ ಕೂಪಲಕ್ಕು.ಬಾಕಿದ್ದವು ಎಂತ ಮಾಡಿರೂ ಸಮ ಅಪ್ಪಲಿಲ್ಲೆ. ಪ್ರಾಯದೋರ ಹಣೆಬರಾ ವೇ ಹೀಂಗೆ.ತಮ್ಮ ಹಟ ‌ಬಿಟ್ಟಿಕ್ಕವು.”ಆನೆ ನಡದ್ದೇ ದಾರಿ” ಹೇಳಿ ಮನಸಿಲೇ ಹೇಳಿಗೊಂಡು ಮಾಣಿಗೆ ಹೆಜ್ಜೆಯ ಅರದು ಕೊಟ್ಟು ಕರಕೊಂಡು ಕೋಣೆಗೆ ಹೋವ್ತು.ತೂಗಿ ವರಗುಸುತ್ತು.
ಮತ್ತೆ ಒಳ ಬಂದು ಬಸಳೆ ಬೆಂದಿದೇ ಮುಂಡಿ ತಾಳುದೇ ಮಾಡ್ತು.ಗಂಟೆ 1 ಆತು.ಅತ್ತೆಯ ಕಾಣ್ತಿಲ್ಲೆ.ಅತ್ತೆ ತೋಟಕ್ಕೆ ಹೋದರೆ ಏಡು ಹೋದಾಂಗೆ ಎಲ್ಲಾ ನೆಲಸಮ ಮಾಡಿಕ್ಕಿ ಬಕ್ಕು.ಅಂತೆ ಅಲ್ಲ ಇವು ಬೈವದು.ಗ್ರೇಶಿಗೊಂಡು ಅಡಿಗೆ ಮಾಡಿಕ್ಕಿ, ಅತ್ತೆ ಬಪ್ಪದನ್ನೇ ಕಾಯ್ತು ಪ್ರೇಮ
ಅಷ್ಟಪ್ಪಗ ಸೇಂಕಿಗೊಂಡು,ಬಂದ
ಗೌರಮ್ಮ”ಎಬ್ಬಾ..‌ಬಚ್ಚಿ ಸತ್ತತ್ತು.ಒಂದು ಬಾಳೆಲೆದೇ ಸರಿಕಟ್ಟಿಲ್ಲೆ.ಮದ್ದು..ಎಲ್ಲದರಲ್ಲಿಯೂ..ಕೊಡಿಬಾಳೆ ಆಕಾಶಲ್ಲಿಪ್ಪದು ಈ ಸಣ್ಣ ಕೊಕ್ಕೆಗೆ ಎಕ್ಕುದಾದರೂ ಹೇಂಗೆ? ಇಡೀ ತೋಟ ಹೋಗಿ ಇಷ್ಟು ಎಲೆ ತಪ್ಪಗ ಎನ್ನ ಜೀವವೇ ಹೋದಂಗಾತಪ್ಪಾ.”
ನೋಡು. ಆನು ತಂದ ಬಾಳೆಲೆಗಳ ನೋಡಿಕ್ಕು.ಎಳತ್ತೂ ಅಲ್ಲ,ಬೆಳದ್ದೂ ಅಲ್ಲದ ಹದಾದ ಬಾಳೆಲೆಗಳ ಹರಿಯದ್ದದರ ಹುಡುಕಿ ತರೆಕ್ಕು.ನೀನು ತಂದದು ಪೂರಾ ಹಣ್ಣಟೆ ಕೀತುಗೊ.ಅಂತೆ ನಾನು ತರುತ್ತೇನೆ ಹೇಳಿ ತೋಟಕ್ಕೆ ಹೋದರಾಗ” ಗೌರಮ್ಮ ಗತ್ತಿಲಿ ಹೇಳ್ತವು.
ಆತಪ್ಪಾ..ನಿಂಗೊ ಹೇಂಗೂ ಲಾಯಕ್ಕದ್ದೇ ತಯಿಂದಿ ಅನ್ನೇ.ಹೆಜ್ಜೆ ಒಲೆಲಿ ಕೆಂಡ ನಂದಿದ್ದಿಲ್ಲೆ.ಪಕ್ಕ ಹೊಗವಲೆ ಹಾಕಿರೆ ಬಾಡ್ಸಿಯೇ ಮಡಗುಲಕ್ಕು.”ಪ್ರೇಮ ಹೇಳ್ತು .
ಏನೂ ಬೇಡ.ಆನು ಮತ್ತೆ ಬಾಡ್ಸಿಗೊಂಬೆ.ತೋಟಂದ ಎಲೆ ತಂದ ಜನಕ್ಕೆ ಬಾಡ್ಸುಲೆ ಎಡಿಯದಾ? ನೀನು ಧಗಧಗ ಕಿಚ್ತು ಹಾಕಿ ಕರೆಂಚಿ ಹಾಕ್ಸೆಕ್ಕೋಳಿಲ್ಲೆ.ಮತ್ತೆ ಆನು ಪುನ ತೋಟಕ್ಕೆ ಓಡೆಕಕ್ಕು.ಅಡಿಗೆ ಆದರೆ ಉಂಬ ನಾವು.ಅಣ್ಣನ ಕಾದರೆ ಆಗ.ಎಷ್ಟು ಹೊತ್ತಾವ್ತು  ಆರಿಂಗೊಂತು “ಹೇಳ್ತವು ಗೌರಮ್ಮ.
ಅತ್ತೆ,ಸೊಸೆ ಊರ ಸುದ್ದಿ ಮಾತಾಡಿಗೊಂಡು ಉಣ್ತವು.ಅದರೆಡೆಲಿ ಇಂದು ಬಸಳೆ ಬೆಂದಿಗೆ ಉಪ್ಪು ಹೆಚ್ತಾಯ್ದಾಳಿ ಸಂಶಯ ಎನಗೆ.ಮತ್ತೆ ಈ ಮುಂಡಿ ತಾಳು ತಿಂದು ದೊಂಡೆ ತೊರುಸುಲೆ ಸುರು ಆತು.ಅಲ್ಲ ಎನ್ನ ಬಾಯಿಗೆ ಹಾಂಗಪ್ಪದಾ? ಅಲ್ಲ ನಿನಗೂ ತೊರುಸುತ್ತಾ? ಹುಳಿ ಸಜ್ಜಿಲಿ ಹಾಕೆಕ್ಕಾತು.ಅಣ್ಣ ಬಂದು ಇದರ ತಿಂದು ಎರಡ್ಡು ಬೈಯದ್ದಿರ.ಮಾಡ್ಲೆ ಅರಡಿಯಕ್ಕು.ಏವುದನ್ನೂ ನೋಡಿ ಕಲಿಯಕ್ಕು.”ಗೌರಮ್ಮಂಗೆ ದಿನಾ ಸೊಸೆಯ ಅಡಿಗೆಯ ಬಗ್ಗೆ ಕೊಂಕು ಮಾತಾಡದ್ರೆ ತಿಂದ ಅಶನ ಮೈಗೆ ಹಿಡಿಯ.ಪ್ರೇಮ ಪಾಪದ್ದು.ಪೆದಂಬು ಮಾತಾಡ.
ಅಂತೂ ಇಂತೂ ಅತ್ತೆ,ಸೊಸೆದು ಊಟ ಆತು.ಅತ್ತೆ ಅತ್ಲಾಗಿ ಹೋದವು.ಸೊಸೆ ಇತ್ಲಾಗಿ ಕೋಣೆಗೆ ಬಂದು ಮನುಗುತ್ತು.
ಮಾಣಿ ಕೂಗುವ ಸ್ವರಕ್ಕೆ ದಡಕ್ಕನೆ ಎದ್ದತ್ತು ಪ್ರೇಮ. ಗಂಟೆ ನೋಡ್ತು. 4 ಆತು.ಪಕ್ಕ ಮಾಣಿಯ ಎತ್ತಿಗೊಂಡು ಒಳ ಬತ್ತು.ಹಾಲು ಬೆಶಿ ಮಾಡಿ ಕೊಟ್ಟಿಕ್ಕಿ ಅದುದೇ ಒಂದು ಮುಕುಳಿ ಚಾಯ‌ ಕುಡಿತ್ತು.ಅತ್ತೆಗೆ ಕಾಫಿ ಅವೇ ಮಾಡಿ ಕುಡ್ಕೊಳ್ತವು ಹೇಳಿ ಗೊಂತಿದ್ದದಕ್ಕೆ.ಆದರುದೇ ” ನಿಂಗಳದ್ದು ಕಾಫಿ ಆತಾ ಅತ್ತೆ” ಕೇಳ್ತದು.
ಆನು ಈಗಲಾ? ಆಗಲೇ ಎದ್ದಿದೆ.ಮನುಗಿದ್ದು ನೆಪ ಮಾತ್ರ.ಕೆಲಸ ನಾಯಿ ತಿಂತಿಲ್ಲಿ.ಹಗಲು ಸಮಾ ವರಗಿರೆ ಅಕ್ಕಾ? ಆರಾರೂ ನೋಡಿದವು ಎಂತ ಹೇಳುಗು?  ಈಗ ದನ ಕರವದೂ ಇಲ್ಲೆ.ಸಾಂಕುಲೆಡಿಯಕ್ಕನ್ನೆ? ದನ,ಕಂಜಿ ಹೇಳಿ ಇದ್ದರೆ ಈ ನಮೂನೆ ವರಗುಲೆ ಎಡಿಗಾಯ್ಕು?ತೋಟಲ್ಲಿ ಕಾಲು ಹಾಕುಲೆ ಜಾಗೆ ಇಲ್ಲೆ.ಆ ನಮೂನೆ ಬಲ್ಲೆ ಕಟ್ಟಿದ್ದು. ಆನು ಹುಲ್ಲು ಎಷ್ಟು ಹೆರದಾಕುವೆ?ತೋಟಕ್ಕೆ ತೋಂಕುವ ನೀರು.ಈಗಾಣಾಂಗೆ ಸ್ವಿಚ್ ಹಾಕಿರೆ ರಟ್ಚಿಗೊಂಡಿತ್ತಿಲ್ಲೆ ಅಂಬಗ.ಅವು ಭೂತಕಾಲಕ್ಕೆ ಹೋದವು.
ಅತ್ತೇ….ಆನು ಸೋರೆಕಾಯಿ ಕೊಚ್ಚೆಕ್ಕಾ ಅಂಬಗ? ನಿಂಗಳ ಹಾಂಗೆ ನಾಜೂಕಿಲಿ ಅರಡಿಯದ್ರೂ ಎಡಿಗಾದಾಂಗೆ ಕೊಚ್ಚಿಕೊಡುವೆ.ಎಲ್ಲಿದ್ದತ್ತೆ ಸೊರೆ? ಕೇಳ್ತು ಪ್ರೇಮ.
ನೀನು ಕೊಚ್ಚಿ ಆತು ಉದ್ಧಾರ.ಆನು ಆಗಲೇ ಕೊಚ್ಚಿ ಮಡುಗಿದ್ದೆ.ಸಣ್ಣಕೆ ಕೊಚ್ಚೆಕ್ಕು.ಆನು ಕೊಚ್ಚಿಕ್ಕಿಯೇ ಒಲೆಗೆ ಕಿಚ್ಚು ಮಾಡಿದೆ.ನೀನು ಕೂದುಗೊಂಡು ನೋಡು ಈಗ.ಆನು ಹೇಂಗೆ ಬಾಳೆಲೆ ಬಾಡ್ಸುತ್ತೇಳಿ” ಗೌರಮ್ಮ ತಾಕೀತು ಮಾಡಿದವದಾ ಸೊಸೆಗೆ.
ಇದಾ…ಹೀಂಗೆ ಹದಾಕೆ ಕಿಚ್ಚು ಹಾಕೆಕ್ಕು.ಎಲೆಯ ತೆಕ್ಕೊಂಡು ಹೀಂಗೆ ಹಿಡಿಯಕ್ಕು.ಕಿಚ್ಚಿನ ರವಿ ಮಾತ್ರ ಎಲೆಗೆ ಬಡಿಯಕ್ಕು.ಕಿಚ್ಚಿಂಗೆ ತಾಂಟ್ಸಿದೆಯೋ ಎಲೆ ಕರಂಚುದೇ.ದಂಡುದೇ ಹೀಂಗೆ ಲಾಯ್ಕಲ್ಲಿ ಬಾಡ್ಸೆಕ್ಕು.ನೀನು ಅಕ್ಕಿಯ ಸಮಲ್ಸುವ ಗ್ರೈಂಡರ್ಂಗೆ ಹಾಕಿ ಕಡೆ ಹೋಗು.ಅದಾರೂ ಆಗಲಿ ಒಂದು ಕೆಲಸ ನಿನ್ನದು.
ಆನು ಮಿಕ್ಸಿಗೆ ಹಾಕುದು.ಆ ಸಮಲ್ಸುವ ಗ್ರೈಂಡರ್ ಎನಗೆ ಕ್ಲೀನ್ ಮಾಡುಲೆ ಬಂಙ ಆವುತ್ತು.ಮಾಣಿ ಈಗ ಆಡಿಗೊಂಡಿದ್ದ.ಪಕ್ಕ ಕಡದಿಕ್ಕುತ್ತೆ.4 ಸರ್ತಿ ಹಾಕೆಕಕ್ಕು ಅಕ್ಕಿಯ.ಹೇಳ್ತು ಪ್ರೇಮ
ಆನು ಹೇಳಿದಾಂಗೆ ನೀನು ಕೇಳೆ.ಒಂದೇ ಸರ್ತಿ ಗ್ರೈಂಡರ್ಂಗೆ ಹಾಕಿರೆ ಬೇಗ ಆವ್ತಿಲ್ಲೆಯಾ? ಮಿಕ್ಸಿಲಿ 4 ಸರ್ತಿ ಹಾಕಿ ಗರ್….ಗರ್..ಮಾಡುದಕ್ಕೆ? ಕೋಪಲ್ಲಿ ಹೇಳ್ತವು ಗೌರಮ್ಮ.
ನಿಂಗೊಗೆ ಯಾವುದಲ್ಲಿ ಕಡದರೆಂತ ಈಗ? ಕಡದು ಕೊಟ್ರೆ ಆತನ್ನೆ? ಪ್ರೇಮಂಗೂ ಕೋಪ ಬಂದರೆ ತಟಕ್ಕ ಹೇಳುದೇ.
ಒಟ್ರಾಶಿ ಕಡದರೆ ಆಗ.ಕೊಟ್ಟಿಗೆ ಮಾಡ್ಲೆ ಗಟ್ಟಿಗೆ ಕಡೆಯಕ್ಕು.ನೀರು ಸಜ್ಜಿಲಿ ಎರದರೆ ಹಿಟ್ಟು ನೀರಕ್ಕು.ಮಡುಸುವಗ ಹಿಟ್ಟು ಎಲೆಲಿ ನಿಲ್ಲ.ಓಡುಗು.ಹದ ಹಾಳಿತ ಗೊಂತಿರೆಕ್ಕು ಯಾವುದಕ್ಕೂ” ಗೌರಮ್ಮ ದೊಡ್ಡ ಸ್ವರಲ್ಲಿ ಹೇಳ್ತವು.
ಆತಪ್ಪಾ…ಆತು.ಇಂದು ಸುರು ಮಾಡುದಲ್ಲನ್ನೆ ಕೊಟ್ಟಿಗೆ? ಮಿಕ್ಸಿಲಿ ಕಡದು ಮಾಡಿದ್ದದು ಇದ್ದು.ಆನು ಗಟ್ಟಿಗೆ ಕಡದು ಕೊಡ್ತೆ ನೋಡಿ ಈಗ‌‌” ಹೇಳಿ ಪ್ರೇಮ ಅಕ್ಕಿಯ ಮೂರು ಸರ್ತಿ ತೊಳದು ರಜ,ರಜವೇ ಮಿಕ್ಸಿಗೆ ಹಾಕಿ ಕಡದು ಮಡುಗುತ್ತು.
ಕಲ್ಲಿಲಿ ಕೈಲಿ ಕಡದರೇ ಲಾಯ್ಕ ಅಪ್ಪದು. ಎಂಗಳ ಕಾಲಲ್ಲಿ ಮಿಕ್ಲಿ,ಪಿಕ್ಸಿ ಎಲ್ಲಿದ್ದತ್ತು? ಬಾವಿಂದ ಎಳವ ನೀರು,ಕಲ್ಲಿಲಿ ಕಡದೇ ಅಡಿಗೆ ಆಯೆಕ್ಕು. ಈಗಾಣವು ಎಲ್ಲದಕ್ಕೂ ಕರೆಂಟಿಂಗೆ ಕಾವಲಾತು.ಕರೆಂಟ್ ಬಾರದ್ರೆ ಬೋಳುಕೊದಿಲೇ ಗೆತಿ. ಹೇಳಿ ಸುಖ ಇಲ್ಲೆ” ಗೌರಮ್ಮಂದು ಪುನ: ಸುರುವಾತು.
ಇದಾ ಬಾಡ್ಸಿ ಮಡುಗಿದ್ದೆ ಎಲೆಗಳ.ಇನ್ನು ಲಾಯಿಕ್ಕಕೆ ಉದ್ದೆಕ್ಕು.ಬಾಳೆಲೆ ಉದ್ದುವ ಹರ್ಕು ತಾ ನೋಡಾ…ಹೇಳ್ತವು  ಅವು.
ಆನು ಉದ್ದುತ್ತೆ ಅತ್ತೇ…ಹೇಳ್ತು ಪ್ರೇಮ.
ಏನೂ ಬೇಕೋಳಿಲ್ಲೆ.ನೀನು ಉದ್ದಿ ಇನ್ನು ಹರುದರೆ ಆನು ತೋತ ಹಾಕೆಕಕ್ಕು”
ಅಷ್ಟಪ್ಪಗ ಮಾಣಿ ಕೂಗುಲೆ ಸುರು ಮಾಡಿದ.ಅವನ ಎತ್ತಿಗೊಂಡು ಕೋಣೆಗೆ ಹೋಗಿ ತೊಟ್ಟಿಲಿಂಗೆ ಹಾಕಿ ನಾಲ್ಕುಬಳ್ಳಿ ಹಿಡುದು ತೂಗಿ ಹೇಂಗೂ ವರಗುಸುತ್ತು.
ಪುನ ಬಂದು ಅತ್ತೆಯ ಎದುರು ಕೂರುತ್ತು.ಗೌರಮ್ಮ ಗತ್ತಿಲಿ ಹೇಳ್ತವು” ನೀನು ಒಂದರಿ ಹಿಡಿ ಹಾಕಿ ಲಾಯ್ಕಕ್ಕೆ ಉಡುಗು ನೋಡಾ..ಹೈೂಗೆ ಕಸವು ಇದ್ದರೆ ಹೋಗಲಿ”
ಪ್ರೇಮ ಉದ್ದದ ಹಿಡಿ ತೆಕೊಂಡು ಉಡುಗುತ್ತು.ಅಷ್ಟಪ್ಪಗ ಗೌರಮ್ಮ ಅತ್ತಿಯೋರ ಕಾರ್ಬಾರು ತೋರುಸಿ,” ಹಿಡಿಯ ಅಡ್ಡ ಹಾಕಿ ಅಡಿತಾರ್ಪಕೆ ಉಡುಗು.ಸೊಂಟ ರಜ ಬಗ್ಗಲಿ.ಇತ್ಲಾಗಿ ಕೊಡು ಆನೇ ಉಡುಗುತ್ತೆ ಹೇಳಿ ಅದರ ಕೈಯಿಂದ ಹಿಡಿ ತೆಕೊಂಡು ಉಡುಗುತ್ತವು.
ಪ್ರೇಮಂಗೆ ಒಳಂದ ಒಳ ಕೋಪ ಬತ್ತಾ ಇದ್ದು.ಆದರೆ ಎಂತ ಮಾಡುದು?ಮಾತಾಡ್ತಿಲ್ಲೆ.
ಇದಾ…ಹೀಂಗೆ ನೀರು ರಜ ಎಲೆಗೆ ಹಾಕಿ ಹದಾಕೆ ಉದ್ದೆಕ್ಕು ನಾಜೂಕಿಲಿ.ಹರಿವಲಾಗ.ನೀನು ಕಡದ ಹಿಟ್ಟು ತಂದು ಕೊಚ್ಚೇಲು ಬೆರುಸಿಮಡುಗು.ಅಷ್ಚಾದರೂ ಮಾಡು” ಹೇಳ್ತವು ಗೌರಮ್ಮ
ಆತತ್ತೇ..ಹೇಳಿ, ಹೇಳಿದಾಂಗೆ ಕೊಚ್ಚೇಲು ಬೆರುಸಿ ಮಡುಗಿತ್ತು
.
ಉಪ್ಪು ಹಾಕಿದ್ದೆನ್ನೇ? ಮೊನ್ನೆ ಮಾಡಿದ ಉಂಡೆಯ ಹಾಂಗೆ ಅಕ್ಕು ಮತ್ತೆ.” ಅತ್ತೆದು ರಾಗ.
ಮೊನ್ನೆ ಒಂದರಿ ಪ್ರೇಮ ಹಿಟ್ಟಿಂಗೆ ಉಪ್ಪು ಹಾಕುಲೆ ಮರದು ಅದರ ಕಾಸಿ ಉಂಡೆ ಬೇಶಿ ಮಡುಗಿದ್ದು ದೊಡ್ಡ ಸುದ್ದಿ ಆಗಿ ಟಿ.ವಿ ಚ್ಯಾನಲ್ ರೋರಾಂಗೆ ಇಡೀ ದಿನ ಎಳದ್ದೇ ಎಳದ್ದು.ಪ್ರೇಮಂಗೆ ಕಂಡಾವಟ್ಟೆ ಬೇಜಾರಾಗಿತ್ತಂಬಗ.ಹೋದೋರತ್ರೆ ಬಂದೋರತ್ರೆ ಸುದ್ದಿ ಅದುವೇ.
ಉಪ್ಪು ನೆಂಪಿಲಿ ಹಾಕಿದ್ದೆ ಅತ್ತೇ ಹೇಳ್ತು ಪ್ರೇಮ.ಒಂದರಿ ಮರದರೆ ಪ್ರತಿ ಸರ್ತಿ ಮರೆತ್ತಾ? ಹೇಳಿ ಮನಸಿಲೇ ಹೇಳಿಗೊಂಡತ್ತು.
ಈಗ ಹಿಟ್ಟು ಹಾಕುದು ಆರು? ಮಡುಸುದು ಆರು? ಕೇಳ್ತವು ಗೌರಮ್ಮ.
ಆನು ಹಾಕುತ್ತೆ ಅತ್ತೇ. ನಿಂಗೊ ಮಡುಸಿ ಆಗದಾ? ಪ್ರೇಮ ಕೇಳ್ತು.
ಇದಾ ಬಾಳೆಲೆಗೆ ನೀರು ಹೀಂಗೆ ರಜ ತಳುದು ಹಿಟ್ಟು ಹಾಕಿರೆ  ನಾಳಂಗೆ ಬಿಡುಸುಲೆ ಸುಲಾಭ ಆವ್ತು.ಹಾಂಗೇಳಿ ನೀರು ಪಚಪಚನೆ ಹಾಕುದಲ್ಲ.ಏವುದೇ ಕೆಲಸವ ನಯನಾಜೂಕಿಲಿ ಮಾಡೆಕ್ಕು. ಗೌರಮ್ಮಂದು ಸುರು ಆತು.
ಆತು.ಆನು ಹಾಕುತ್ತೆ ಹೇಳಿ 2 ಬಾಳೆಲೆ ಗೆ ಹಾಕುವಗ ಹಿಟ್ಟು ರಜಾ ನೀರಾತಾಳಿ.ಮಿಕ್ಸಿಲಿ ಕಡದರೆ ಮತ್ತೆ ಎಷ್ಚು ಸರಿ ಅಕ್ಕು? ಕೈಲಿ ಕಡದರೇ ಹದಹಾಳಿತ ಸಿಕ್ಕುದು.ಅದನ್ನೂ ಆನೇ ಕಡೆಯಕ್ಕು. ಮೊದಲು ಕಡಕೊಂಡಿತ್ತಿದ್ದೆ.ಒಟ್ಚಾರೆ ಹೇಳಿ ಸುಖ ಇಲ್ಲೆ ಹೇಳ್ತವು ಗೌರಮ್ಮ.
ಅತ್ತೆ..‌ಮಡುಸಿ ಆತೆರಡು.ಆದರೆ ಒಲೆಲಿ ಅಟ್ಟಿನಳಗೆಯೇ ಮಡುಗಿದ್ದಿಲ್ಲೆ.ಎನ್ನ ಕೈಲಿ ಹಿಟ್ಟು ಮೆತ್ತಿದ್ದು.ಕೈ ತೊಳದು ಮಡುಗೆಕ್ಕಾ ಅತ್ತೆ ಕೇಳ್ತು ಪ್ರೇಮ.
ಏನೂ ಬೇಡ.ಎನಗೆ ಅಷ್ಟುದೇ ಗೊಂತಿಲ್ಲೇಳಿ ಮಾಡಿದ್ದೆಯಾ ಹೇಂಗೆ? ಆನು ಎದ್ದಿಕ್ಕಿ ಮಡುಗುತ್ತೆ ಹೇಳಿಗೊಂಡು ಅಯ್ಯಮ್ಮಾ…ಕಾಲು ಕೊಕ್ಕೆ ಕಟ್ಟಿ ಬೇನೆಲಿ ಹನುಸುಲೆಡಿತ್ತಿಲ್ಲೆ ಹೇಳಿ ಅಸಬಡುಕೊಂಡು ಹೇಂಗಾರೂ ಏಳ್ತವು.ಎದ್ದಿಕ್ಕಿ ಅಟ್ಟಿನಳಗೆ ಒಲೆಲೆ ಮಡುಗಿ ನೀರು ಎರದು ತಟ್ಟೆ ಮಡುಗುತ್ತವು.ಇದಾ.‌ನೋಡಿಗೊ..ನೀರು ಈ ತಟ್ಟೆಂದ ಕೆಳ ನಿಲ್ಲೆಕ್ಕು.ಹೇಳಿಗೊಂಡು ಕಿಚ್ಚು ಹಾಕುತ್ತವು. ಮಳೆಗೆ ಚೆಂಡಿ ಆದ  ಸೌದಿ ಹೊತ್ತುತ್ತೇ ಇಲ್ಲೆ.ಓಟೆಲಿ ಊಪಿ,ಊಪಿ ಹೊಗೆ ಹೆರಟತ್ತು. ನಾಲ್ಕು ಅಡಕೆಸಿಪ್ಪೆ ಹಾಕುತ್ತವು.ಹೇಂಗೂ ಕೆಂಡ ಆಗಿ ಹೊತ್ತಿಕೊಂಡತ್ತು..ನೀರು ಕೊದಿವಲೆ ಸುರು ಆಗಿ ಗೊಯ್ಯನೆ ಸುರು ಆದ ಮತ್ತೆ ಮಡ್ಸಿದ್ದರ  ಮಡುಗೆಕ್ಕು.ಮೊದಲು ತಟ್ಟೆಗೆ ಬಾಳೆಲೆ ಹರ್ಕಟೆ ಆದರೂ ಅಕ್ಕು ಹೀಂಗೆ ಮಡುಗೆಕ್ಕು ಹೇಳಿ ಮಡುಗುತ್ತವು.ರಜ ಹೊತ್ತಪ್ಪಗ
ನೀರು ಕೊದಿವ ಶಬ್ದ ಕೇಳಿತ್ತು. ಪುನ ಕೂದು “ನೀನು  ನೋಡುದೆಂತರ? ಬೇಗ,ಬೇಗ ಹಾಕು ಹೇಳ್ತವು.‌
 “
ಹಾಕುತ್ತಾ ಇದ್ದೆನ್ನೆ.. ಇದಾ.. ಈ ಬಾಳೆಲೆ ಹರ್ಕಟೆಯಾಳಿ.ನೋಡಿ ಸರಿ.ಹೇಳ್ತು ಪ್ರೇಮ.
ಹಾ..ನೆವನಕ್ಕೆ ರಜಾ ಹರುದ್ದು.ಹಿಟ್ಟು ಹೆರಹೋಗದ್ದಾಂಗೆ ಮಡುಸುಲೆಡಿಗು.ಆದರೂ ಸಂಶಯ ಎಂತಕೆ? ಆನು ಪೋಕು ಮುಟ್ಟಿರೇಳಿ ಹೆಚ್ಚವೇ ತಯಿಂದೆ ಎಲೆ.ಬಾಡ್ಸಿಯೇ ಮಡುಗಿದ್ದೆ.ಇದಾ ಇದರ ಹಾಂಗೇ ನೆಗ್ಗಿ ಈ ಬಾಳೆಲೆಗೆ ಹಾಕಿ ಮಡಿಸಿರಾತು.ಮಂಡೆ ಬೆಶಿ ಮಾಡೆಕ್ಕೋಳಿಲ್ಲೆ. ಹೇಳಿ ಮತ್ತೊಂದು  ಎಲೆಲಿ ಮಡುಸಿ ಮಡುಗಿದವು.ಎಲ್ಲಾ ಮಡುಗಿದ ಮತ್ತೆ ಅಟ್ಟಿನಳಗೆ ಮುಚ್ಚೇಲು ಮುಚ್ಚಿದವು.
ಅಷ್ಟಪ್ಪಗ ಪ್ರೇಮನ ಮೊಬೈಲು ರಿಂಗಾತು.ಅದು ಪಾತ್ರ ತೊಳವಲೆ ಹಾಕಿ ಸೀದಾ ಓಡಿದ್ದೇ.ಅದರ ಅಕ್ಕನ ಕಾಲ್  ಅದು.ಹೀಂಗೇ ಲೋಕಾಭಿರಾಮ,ಸುಖ,ದು:ಖ ಮಾತಾಡಿಗೊಂಡವು ಅಕ್ಕತಂಗೆಯಕ್ಕೊ.ಮಾಣಿಗೆ ಗಡದ್ದು ವರಕ್ಕು.ಇಲ್ಲದ್ರೆ ಮಾತಾಡ್ಲೇ ಆವ್ತಿಲ್ಲೆ ಹೇಳಿ ಖುಷಿಲಿ ಮಾತಾಡಿದ್ದೇ ಮಾತಾಡಿದ್ದು. ರೇಂಜ್ ಹೋಗಿ ಕಟ್  ಅಪ್ಪಗ ಒಳಬಂತು.
ಪಾತ್ರೆ ಎಲ್ಲಾ ಅತ್ತೆ ತೊಳದು ಮಡುಗಿದ್ದವು.ಮೆಲ್ಲಂಗೆ” ಆತಲ್ಲಾ ಅತ್ತೇ.. ಕೆಲಸ? ಕೇಳ್ತು.
ನೀನು ಪೋನ್ ಬಂತೋಳಿ ಹರುದು ಬಿದ್ದು ಓಡಿದೆ.ಎನಗೆ ನಿನ್ನ ಹಾಂಗೆ ಕೆಲಸ ಅರ್ಧಂಬರ್ದ ಮಾಡಿಯೇ ಗೊಂತಿಲ್ಲೆ.ಮಾಡಿದ ಕೆಲಸ ನಿರ್ಮಲಲ್ಲಿ ಆಯೆಕ್ಕು.ಪಾತ್ರದೇ ತೊಳದು ಇಲ್ಲಿ ಚೆಂದಕೆ ಉದ್ದಿ, ಬಾಳೆಲೆ ಉದ್ದಿದ ಹರ್ಕು ಮತ್ತೆ ನೆಲ ಉದ್ದಿದ ಹರ್ಕುದೇ ತಿಕ್ಕಿ ಹಾಕಿ ಆರ್ಸಿದೆ.”ಗೌರಮ್ಮ ಹಂಗುಸಿ ಮಾತಾಡಿದವು.
“ಅಟ್ಟಿನಳಗೆ ಮುಚ್ಚೇಲು ಮೇಲೆ ಗುಂಡುಕಲ್ಲು ಮಡುಗಿದ್ದೆಂತಕೆ ಅತ್ತೆ? “ಆಶ್ಚರ್ಯಲ್ಲಿ ಕೇಳ್ತು ಪ್ರೇಮ.
ಅದಾ? ಅದು ಮುಚ್ಚೇಲು ರಜ ಲೂಸಿದ್ದು.ಹಾಂಗೆ ಕಿಚ್ಚು ಹೊತ್ತಿದ ಫೋರ್ಸಿಲಿ ಮುಚ್ಚೇಲು ರಟ್ಟುಲಾಗನ್ನೇ..ಅದಕ್ಕೆ.
ಕೊಟ್ಟಿಗೆ ಮಾಡ್ಲೆ ಮುನ್ನಾಣದಿನ ಮಾತ್ರ ರಜ ಕೆಲಸ ಅಪ್ಪದು ಅಷ್ಚೇ. ಮತ್ತೆ ನಾಳಂಗೆ ಒಂದು ಚಟ್ನಿ ಕಡದು ಕೊಟ್ಚಿಗೆ ಬಿಡುಸಿ ತಿಂದರಾತು” ಹೇಳ್ತವು ಗೌರಮ್ಮ.
ಪ್ಪೇಮ ಮೆಲ್ಲಂಗೆ ಅಲ್ಲಿಂದ ಜಾರಿ ಕೋಣೆ ಸೇರಿಗೊಂಡತ್ತು.ಅತ್ತೆದು ವಟವಟಾಳಿ ಮುಗಿವಲೆ ಮಣ್ಣಾ ಇಲ್ಲೆ.
ಕತ್ಸಲಪ್ಪಗ ಬಂದ ಪ್ರಕಾಶಂಗೆ ಅತ್ತೆ ಬೆಶಿ ಬೆಶಿ ಕೊಟ್ಟಿಗೆ ಬಿಡುಸಿಕೊಟ್ಟು” ಹೇಂಗಾಯಿದಣ್ಣಾ ಕೊಟ್ಚಿಗೆ! ಮೆತ್ಸಂಗೆ ಆಯಿದಾ? ಎನ್ನ ಸೊರೆಬಳ್ಳಿಲಿ ಆದ ಸುರುವಾಣ ಸೊರೆ ಇದು ” ಹೇಳ್ತವು.
ಹಾ.ಲಾಯಕ್ಕಾಯಿದು. ಹೇಳ್ತ ಪ್ರಕಾಶ.ಅವ ಅಷ್ಚೇ. ಕೇಳಿದ್ದಕ್ಕೆ ತಕ್ಕ ಉತ್ತರ.
ಮರುದಿನ ಪ್ರೇಮ ಚಟ್ನಿ ಕಡತ್ತು.ಕೊಟ್ಟಿಗೆ ಲಾಯಕ್ಕಾಯಿದು ಹೇಳ್ತು ಪ್ರೇಮ.
“ಲಾಯ್ಕಾಗದ್ದೆ ಮಾಡಿದ್ದಾರು?”
 ಗತ್ತಿಲಿ ಕೇಳ್ತವು ಗೌರಮ್ಮ.
 ಆಳುದೇ ಒಂದು ಬಯಿಂದು ತೋಟದ ಕೆಲಸಕ್ಕೆ.ಚಾಯ ಮಾಡಿ ಕೊಟ್ಟಿಗೆ ಒಂದು ಆಳಿಂಗೆ ಚಟ್ನಿ ಹಾಕಿ ಕೊಟ್ಟವು.
ಅದು ತಿಂಬಲೆ ಸುರುಮಾಡ್ತು. ಅಲ್ಲೇ ನಿಂದುಗೊಂಡ ಗೌರಮ್ಮನತ್ರೆ” ಅಕ್ಕೇ…ತುರೆತ್ತ ಅಡ್ಯ ಅತ್ತೇ? ಎಡ್ಡೆ ಆತುಂಡುಯೇ ” ಹೊಗಳ್ತು.
ಗೌರಮ್ಮ ಭಾರೀ ಖುಷಿಲಿ ” ಎಡ್ಡೆ ಆವಂದೆ ಬಕ್ಕ ಮಲ್ತಿನ ಏರು?ಉಂದು ಎನ್ನ ತುರೇತ್ತ ಬಳ್ಳಿಡಾಯಿನ ಸುರುತ್ತ ತುರೆ.” ಹೇಳಿದ ಗೌರಮ್ಮ ನೆಲಲ್ಲಿ ನಿಂದಿದವಿಲ್ಲೆ.
ಉಂದು ಇರೆ ಏರು ಕಣತ್ತಿನಿ? ಒಗ್ಗರಣೆ ಹಾಕಿತ್ತದು ಆಳು.
ಏರು ಕಣಪ್ಪೆರು? ಯೇನೇ…ಈ ಬತ್ತುದುಂಡ ಕಣತ್ತುದುವ.ಎಂಚಾಂಡಲಾ ಯೇನೇ ಪೋದು ಕಣತ್ತೆ. ಹೇಳಿ ಒಳ ಹೋವ್ತವು ಗೌರಮ್ಮ.
ಅಷ್ಟಪ್ಪಗ ಮಾಣಿಯ ಎತ್ತಿಗೊಂಡು ಹೆರ ಬಂದ ಪ್ರೇಮನ ನೋಡಿ ಆಳು” ಓ…ಎಲ್ಯಕ್ಕೇ..ಕಾಫಿ ಪರಿಯರಾ? ಕೇಳಿತ್ತು.
ಪ್ರೇಮ ಕೋಪಲ್ಲಿ ” ಕಾಫಿಲಾ ಪರಿಯೆ.ಅರಿ ಎನ್ನ ಕಂಡನಿ ಕಣತ್ತಿನೇಂದು ಅಡ್ಯಲಾ ತಿಂದೆ” ಹೇಳಿತ್ತು.
ಅಡ್ಯ ಪಂಡ ಅಡ್ಯನೇ..ಈತು ರುಚಿತ ತುರೆತ ಅಡ್ಯ ಯೇನು ಈತಿನೇಟ ತಿಂತ್ ಜ್ಜಿ.” ಹೇಳಿ ಹೊಗಳಿದ್ದೇ ಹೊಗಳಿದ್ದು.
ನಿಂಗೊ ಒಂದರಿ ತಿಂದಿಕ್ಕಿ .
ಮತ್ತೆ ಹೇಳಿ. ಆನೇ…. ಮಾಡಿದ ಸೊರೆಕಾಯಿ ಕೊಟ್ಟಿಗೆ ಹೇಂಗಾಯಿದು? ಹೇಳಿ.
ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಆನೇ….. ಮಾಡಿದ ಸೊರೆಕಾಯಿ ಕೊಟ್ಟಿಗೆ

  1. ಕತೆ ಸೂಪರ್.ಅತ್ತೆ ಎಷ್ಟು ಪಿರಿಪಿರಿ ಹೇಳಿದರೂ ಸೊಸೆ ಬಾಯಿಮುಚ್ಚಿ ಕೂರ್ತನ್ನೇ ಅದರ ಮೆಚ್ಚಕ್ಕು.ಎಲ್ಲರೂ ಹಾಂಗೆ ಇರ್ತಿದ್ದರೆ ಮನೆಲಿ ಜಗಳವೇ ಇರ.ಅತ್ತೆಯ ಪಾತ್ರ ತುಂಬಾ ನೈಜವಾಗಿ ಬಯಿಂದು.

  2. ಲಾಯಿಕ ಆಯಿದು ಸಂಧ್ಯಕ್ಕ, ಬೆಶಿ ಬೆಶಿ ಕೊಟ್ಟಿಗೆ ಜೊನಿ ಬೆಲ್ಲ ತುಪ್ಪ ಹಾಕಿ ತಿಂದ ಹಾಂಗೆ ಆತು ಎನಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×