ಬರದೋರು :   ಪ್ರಸನ್ನಾ ಚೆಕ್ಕೆಮನೆ    on   24/08/2019    8 ಒಪ್ಪಂಗೊ

ಇಡೀ ಅರಮನೆ ಹೊಸ ಮದಿಮ್ಮಾಳಿನ ಹಾಂಗೆ ತಳಿರುತೋರಣಲ್ಲಿ ಅಲಂಕರಿಸಿಂಡು ಭಾರೀ ಚೆಂದ ಕಾಣ್ತು ‌.ಎಲ್ಲಿ ನೋಡಿರೂ ಜೆನಂಗೊ ಹೊಸ ಅಂಗಿ,ವಸ್ತ್ರ ಹಾಕಿ ತಿರುಗುತ್ತವು.ಅರಮನೆಯ ಇಡೀ ಸುತ್ತಿಂಗೆ ಮುತ್ತಿನ ತೋರಣ ಕಟ್ಟಿದ್ದವು,ಬೇರೆ ಬೇರೆ ನಮೂನೆಯ ಚಿನ್ನದ ಕಮಾನುಗೊ,ಮಾಲೆಗೊ ಅಲ್ಲಲ್ಲಿ ಫಳಫಳ ಹೊಳೆತ್ತು.ಮಲ್ಲಿಗೆ ಹೂಗಿನ ರಾಶಿಯೇ ಕುಂಡಿನಪುರ ಮುಂಗುವಷ್ಟಿದ್ದು.
“ಚೇದಿಂದ ದಿಬ್ಬಾಣ ಬಂತಾಡ” ಆಪ್ತ ಸಖಿ ಬಂದು ಕಿಮಿಲಿ ಗುಟ್ಟಾಗಿ ಹೇಳಿಯಪ್ಪಗ ರುಕ್ಮಿಣಿಯ ಎದೆಲಿ ಅವಲಕ್ಕಿ ಕುಟ್ಟಿದ ಹಾಂಗಪ್ಪಲೆ ಸುರುವಾತು.

“ಏಕೆ ಅವನ ಕಾಣ್ತಿಲ್ಲೆ? ಎನ್ನ ಕಾಗದ ಸಿಕ್ಕಿದ್ದಿಲ್ಯಾ? ಅಲ್ಲಾ……ಎನಗೆ ಅವನ ಇಷ್ಟಾದರೆ ಸಾಕಾ? ಅವಂಗೆ ಆನು ಇಷ್ಟಾಗೆಡದಾ? ಹಾಂಗೇನಾದರು ಇಕ್ಕಾ?” ಮೋರಗೆ ಹಾಕಿದ ಅವಗುಂಠನವ ಸರಿ ಮಾಡಿಕ್ಕಿ ಮೆಲ್ಲಂಗೆ ಅಂತಃಪುರದ ಗಿಳಿ ಬಾಗಿಲಿಲ್ಲೇ ಹೆರ ನೋಡಿತ್ತು ರುಕ್ಮಿಣಿ.
ಅದು ಗ್ರೇಶಿದ ಮೋರೆ ಅಲ್ಲಿ ಕಾಣದ್ದಿಪ್ಪಗ ದುಃಖ ತಡವಲೆ ಎಡ್ತಿದಿಲ್ಲೆ. ತಾವರೆಯ ಎಸಳಿನ ಹಾಂಗಿದ್ದ ಅದರ ಕಣ್ಣಿಂದ ಮುತ್ತಿನ ಹನಿಯ ಹಾಂಗೆ ಕಣ್ಣನೀರ ಧಾರೆ ಇಳುದತ್ತು.

“ಕೂಗೆಡ ರಾಜಕುಮಾರೀ..ಎನ್ನ ಎಡಕಣ್ಣು ಅದುರುತ್ತಾಯಿದ್ದು.ನಿನಗೆ ಒಳ್ಳೆದೇ ಅಕ್ಕಷ್ಟೆ.ಮಕ್ಕಳ ಕಷ್ಟ ಅಬ್ಬಗಲ್ಲದೆ ಬೇರಾರಿಂಗೆ ಅರ್ಥಪ್ಪದು ಹೇಳು? ನಿನ್ನ ಪ್ರಾರ್ಥನೆ ಖಂಡಿತ ದೇವಿಗೆ ಮುಟ್ಟುಗು‌…”

“ಆದರೂ….ಎನಗೇಕೋ ಹೆದರಿಕೆ ಸಖೀ..ಅವನ ಶುದ್ದಿಯೇ ಇಲ್ಲೆ.ಬ್ರಾಹ್ಮಣೋತ್ತಮ ಹೋಗಿ ಎರಡು ದಿನ ಕಳುತ್ತು.ಇಂದಿರುಳು ಕಳುದು ನಾಳಂಗುದಿಯಪ್ಪಗ ಅವ° ಬಾರದ್ರೆ ಆನು ಖಂಡಿತ ಬದ್ಕೆ..ಅವ° ಇಲ್ಲದ್ದ ಈ ಜೀವನವೇ ಎನಗೆ ಬೇಡ” ರುಕ್ಮಿಣಿ ಮತ್ತೂ ಕೂಗಿತ್ತು.

“ಬೇಡದ್ದ ಆಲೋಚನೆಗಳ ಬಿಟ್ಟು ಒಳ್ಳೆ ಆಲೋಚನೆ ಮಾಡು.ಅವ° ಖಂಡಿತ ಬಕ್ಕು”
ಸಖಿಯ ಮಾತು ಕೇಳಿರೂ ರುಕ್ಮಿಣಿಯ ಮನಸ್ಸಿಂಗೆ ರಜವೂ ಸಮದಾನ ಆಯಿದಿಲ್ಲೆ.

ಹೇಂಗೆ ಸಮದಾನ ಅಪ್ಪದು? ಅದು ಕನಸು ಮನಸಿಲ್ಲೂ ಧ್ಯಾನಿಸುವ,ಪ್ರೀತಿಸುವ,ಮದುವೆ ಆವ್ತರೆ ಅವನ ಮಾಂತ್ರ ಹೇಳಿ ನಂಬಿದ ಆ ನೀಲಮೇಘ ಶ್ಯಾಮನ ಶುದ್ದಿ ಗೊಂತಾಗದ್ದೆ ಅದಕ್ಕೆ ರೆಪ್ಪೆ ಮುಚ್ಚಲೆ ಸಾನು ಎಡಿಯ.

ವಿದರ್ಭ ಕುಂಡಿನಪುರದ ರಾಜ ಭೀಷ್ಮಕನ ಕೊಂಗಾಟದ ಮಗಳು ಈ ರುಕ್ಮಿಣಿ. ರೂಪ,ಗುಣಂಗಳಲ್ಲಿ ಸಾಕ್ಷಾತ್ ಶ್ರೀಲಕ್ಷ್ಮಿಯ ಹಾಂಗಿದ್ದ ಕೂಸು. ಭೀಷ್ಮಕಂಗೆ ಎರಡು ಜೆನ ಮಕ್ಕೊ.ಒಬ್ಬ° ಮಾಣಿ,ಒಂದು ಕೂಸು. ರುಕ್ಮಿ, ರುಕ್ಮಿಣಿ. ಎರಡೂ ಜೆನರನ್ನೂ ಒಂದೇ ರೀತಿ ಕೊಂಗಾಟ ಮಾಡಿರೂ ಅವರ ಗುಣ ಮಾತ್ರ ಹಗಲು, ಇರುಳು ಹೇಳುವಷ್ಟು ವೆತ್ಯಾಸ.

ಯೇವಗಲೋ ಒಂದು ದಿನ ಬೀಷ್ಕಕನ ಆಸ್ಥಾನಕ್ಕೆ ನಾರದ ಮಹರ್ಷಿಗೊ ಬಂದಿತ್ತಿದ್ದವು.ರುಕ್ಮಿಣಿಗದು ಸರೀ ನೆಂಪಿದ್ದು.
“ನಾರಾಯಣ, ನಾರಾಯಣ..” ಹೇಳಿ ಹರಿನಾಮ ಸ್ಮರಣೆ ಮಾಡಿಂಡು ಬಂದ ಮಹಾಮುನಿಗಳ ಅಬ್ಬೆಯೂ,ಅಪ್ಪನೂ ಯಥೋಚಿತವಾಗಿ ಪಾದಪೂಜೆ ಮಾಡಿ ,ಅವಕ್ಕೆ ಬೇಕು ಬೇಕಾದ ಹಾಂಗಿದ್ದ ಉಪಚಾರವನ್ನೂ ಮಾಡಿದ್ದವು.ನಾರದ ಮಹರ್ಷಿ ಹೇಳಿರೆ ಬ್ರಹ್ಮನ ಮಾ‌ನಸ ಪುತ್ರ° ಹೇಳಿ ರುಕ್ಮಿಣಿಗೆ ಹೇಳುದು ಕೇಳಿ ಗೊಂತಿದ್ದು. ಮೂರೂಮುಕ್ಕಾಲು ಘಳಿಗೆಲಿ ವಿಶ್ವ ಪ್ರದಕ್ಷಿಣೆ ಮಾಡುವ ಅವಕ್ಕೆ ಗೊಂತಿಲ್ಲದ್ದ ವಿಶಯವೇ ಇಲ್ಲೇಡ.ಹಾಂಗಿದ್ದ ಮಹಾತ್ಮರು ಅವು.

ನಾರದನ ಕಂಡಪ್ಪಗ ಭೀಷ್ಮಕಂಗೆ ಒಂದು ವಿಶಯ ಕೇಳೆಕೂಳಿ ಆತು.ಕೊಂಗಾಟದ ಮಗಳಿಂಗೆ ಇನ್ನು ಕೆಲವು ಸಮಯಪ್ಪಗ ಮದುವೆ ಮಾಡ್ಸೆಕು.ಅಷ್ಟಪ್ಪಗ ಈ ಪ್ರಪಂಚಲ್ಲಿ ಮಗಳಿಂಗೆ ಸರಿಯಾಗಿ ಜೊತೆಯಪ್ಪ ಮಾಣಿ ಆರೂಳಿ ತಿಳಿಯೆಕು ಹೇಳುವ ಆಶೆ.

ಭೀಷ್ಮಕನ ಪ್ರಶ್ನೆ ಕೇಳಿ ನಾರದರು ಸಣ್ಣಕೆ ನೆಗೆ ಮಾಡಿದವು.ಅವಕ್ಕೆ ಸಣ್ಣ ಕೂಸು ರುಕ್ಮಿಣಿಯ ಕಾಂಬಗಳೇ ಅಂದಾಜಾಯಿದು.ಇದು ಸಾಮಾನ್ಯ ರಾಜಕುಮಾರಿ ಅಲ್ಲ,ಭೂಮಿಗೆ ಧರ್ಮದ ರಕ್ಷಣೆ ಮಾಡ್ಲೆ ಬೇಕಾಗಿ ಅವತರಿಸಿದ ಶ್ರೀಹರಿಯ ಹೆಂಡತಿ ಮಹಾಲಕ್ಷ್ಮಿ ಇದು.ಅಷ್ಟಪ್ಪಗ ಮತ್ತೆ ಹರಿ ವಲ್ಲಭೆ ಶ್ರೀಹರಿಯನ್ನೇ ಸೇರೆಕಾದ್ದಲ್ಲದೋ!?.ಅವು ಅಲ್ಲಿಯೂ,ಇಲ್ಲಿಯೂ ಒಟ್ಟಿಂಗೆ ಇರೆಕಾದವು.ಅದರ್ಲಿ ವೆತ್ಯಾಸಪ್ಪಲಿದ್ದೋ? ಹಾಂಗೇಳಿ ಅದರ ಹಾಂಗೇ ರಾಜನತ್ರೆ ಹೇಳಿದ್ದವಿಲ್ಲೆ.

“ಮಗಳ ಮದುವೆ ವಿಶಯಲ್ಲಿ ನೀನೆಂತದೂ ಆಲೋಚನೆ ಮಾಡೆಡ.ಅದಕ್ಕೆ ಸರಿಯಾದ ಮದಿಮ್ಮಾಯ ದ್ವಾರಕೆಯ ಬಲರಾಮನ ತಮ್ಮ ಶ್ರೀಕೃಷ್ಣ.ಅವಂಗೇ ನಿನ್ನ ಮಗಳ ಮದುವೆ ಮಾಡಿ ಕೊಡು” ಹೇಳಿಕ್ಕಿ ಮಹರ್ಷಿಗೊ ಹೋದವು.
ಅವು ಹೇಳಿದ ಒಂದು ವಾಕ್ಯ ರುಕ್ಮಿಣಿಯ ಮನಸಿಂಗೆ ನಾಟಿತ್ತು.’ದ್ವಾರಕೆಯ ಶ್ರೀಕೃಷ್ಣ ರುಕ್ಮಿಣಿಗೆ ಸರಿಯಾದ ಮಾಣಿ”
ಅಂದಿಂದ ಮತ್ತೆ ಯೇವಗಲೂ ಅದಕ್ಕೆ ಕೃಷ್ಣನ ಕತೆ ಕೇಳೆಕು.ಆಪ್ತ ಸಖಿಯರತ್ರೆ ದಿನಾಗಳೂ ಕೃಷ್ಣನ ಶುದ್ದಿಯನ್ನೇ ಮಾತಾಡುಗದು. ಬೇರೆ ಊರಿಂದ ಕುಂಡಿನೆಯ ಆಸ್ಥಾನಕ್ಕೆ ಬಂದ ಬ್ರಾಹ್ಮಣರ ಕಂಡರೆ ಅದು ಸಖಿಯರ ಗುಟ್ಟಿಲ್ಲಿ ಕಳ್ಸುಗು.
“ಹೋಗಿ ಅವಕ್ಕೆ ಶ್ರೀಕೃಷ್ಣನ ವಿಶಯ ಎಂತಾರು ಗೊಂತಿದ್ದಾ ಕೇಳು”
ಅವು ಹೋಗಿ ಬಂದಿಕ್ಕಿ ಅವು ಹೇಳುವ ಕತೆಗಳ ಸಖಿ ರುಕ್ಮಿಣಿಗೆ ಹೇಳುಗ ಮೈಯೆಲ್ಲಾ ಕೆಮಿಯಾಗಿ ಕೃಷ್ಣನ ಕತೆ ಕೇಳುಗದು.

“ಮಥುರೆಯ ವಸುದೇವ,ದೇವಕಿಯರ ಮಗ° ಆಡ, ಹುಟ್ಟಿದ್ದು ಸೆರೆಮನೆಲಿ,ಬೆಳದ್ದದು ಗೋಕುಲದ ನಂದಗೋಪ,ಯೆಶೋದೆಯರ ಮಗ° ಆಗಿ.ಸಣ್ಣಾದಿಪ್ಪಗ ಲಾಗಾಯ್ತು ರಾಕ್ಷಸರ ಕೊಂದು ಜೆನಂಗೊಕ್ಕೆ ಉಪಕಾರ ಮಾಡಿದವ°. ಭಾರೀ ಚೆಂದಕೆ ಕೊಳಲೂದುತ್ತಾಡ°, ಕಾಳಿಯ ಸರ್ಪನ ತಲೆ ಮೆಟ್ಟಿ ಕೊಣುದ್ದಾ°ಡ,ಗೋವರ್ಧನ ಗುಡ್ಡೆ ನೆಗ್ಗಿದ್ದಾಡ°,ಸೋದರ ಮಾವ° ಕಂಸನ ಕೊಂದಿದಾಡ°….ಹೀಂಗೇ ಆ ಕೃಷ್ಣನ ಎಷ್ಟೆಷ್ಟೋ ಕತೆಗೊ ಅದಕ್ಕೆ ಗೊಂತಿದ್ದು.ಈ ಕತೆಗಳ ಕೇಳುಗ ಅದಕ್ಕೆ ಭಾರೀ ಕೊಶಿಯಪ್ಪದು.ಅದು ಹುಟ್ಟುವಂದ ಎಷ್ಟೋ ವರ್ಶ ಮದಲೇ ನಡದ ವಿಶಯ ಆದರೂ ತನ್ನ ಕಣ್ಣೆದುರು ಕಂಡ ಹಾಂಗೆ ಸಖಿಯರು ಹೇಳಿದ್ದರ ವಾಪಾಸು ಅವಕ್ಕೇ ಹೇಳುವ ಜೆನ ಅದು..ಅದರೊಟ್ಟಿಂಗೆ ಅವ° ರಜಾ ಪೋಕ್ರಿ ಆಡ, ಬೆಣ್ಣೆ ಕದ್ದಿದಾಡ°, ಸೀರೆ ಕದ್ದಿದಾಡ°..ಹೀಂಗಿದ್ದ ಕತೆ ಕೇಳುಗಳೇ ಅದಕ್ಕೆ ನೆಗೆ ಬಪ್ಪದು. ಮನಸಿಲ್ಲಿಯೇ ಅದರ ಕಲ್ಪನೆ ಮಾಡಿ ಕೊಶಿ ಪಡುಗು.

ಹೀಂಗೇ ಹಗಲಿರುಳು ಕೇಶವನ ಸ್ಮರಣೆಲಿ ಮುಂಗಿದ ಅದಕ್ಕೆ ಅವಂಗೆ ಮದುವೆ ಆಯಿದಿಲ್ಲೆ ಹೇಳುವ ವಿಶಯವೂ ಗೊಂತಿದ್ದು. ಹಾಂಗಾಗಿ ಆನು ಮದುವೆ ಆವ್ತರೆ ಅವನನ್ನೇಳಿ ಮನಸಿಲ್ಲಿ ಗಟ್ಟಿ ಅಂದಾಜು ಮಾಡಿತ್ತು.

ಹಾಂಗೆ ಅದುವೇ ತೀರ್ಮಾನ ತೆಕ್ಕೊಂಬಲೆ ಒಂದು ಕಾರಣವೂ ಇದ್ದು.ಅದಕ್ಕೆ ಕಾರಣ ಅಣ್ಣ ರುಕ್ಮಿ. ಅವನ ಯೇವಗಲೂ ರಜ ಹಠಮಾರಿ,ಕೋಪಿಷ್ಟ.ಅಪ್ಪ° ಹೇಳುದರ ವಿರುದ್ದವೇ ಮಾಡುದುದೆ.ಅವನ ಜತೆಕ್ಕಾರಂಗೊ ಮಾಗಧ,ಶಿಶುಪಾಲ° ಹೀಂಗಿದ್ದವು.ಅವಕ್ಕೆಲ್ಲ ಕೃಷ್ಣನ ಹೆಸರು ಕೇಳಿರೇ ಆಗ’ ಹೇಳಿ ರುಕ್ಮಿಣಿ ಸಖಿಯರ ಮೂಲಕ ತಿಳುದ್ದು. ಸಾಲದ್ದಕ್ಕೆ ಅಂದು ನಾರದ ಮಹರ್ಷಿ ಹೇಳಿದ ವಿಶಯವ ಅಪ್ಪ° ಅಣ್ಣನತ್ರೆ ಹೇಳುದರ ಗುಟ್ಟಾಗಿ ಬಾಗಿಲ ಎಡೇಲಿ ನಿಂದು ಕೇಳಿದ್ದು ರುಕ್ಮಿಣಿ. ಆ ವಿಶಯ ಅಪ್ಪ° ಹೇಳಿದ್ದಕ್ಕೆ ಎಷ್ಟು ಕೋಪ್ಸಿ ಹಾರಿದ್ದ°.
“ನಾವು ಕ್ಷತ್ರಿಯರು, ಅವು ಯಾದವರು ಅವರೊಟ್ಟಿಂಗೆ ಎಂತರ ಸಂಬಂಧ,ಸಾಲದ್ದಕ್ಕೆ ಅವ° ಗೋವಳ, ದನಗಳ ಮೇಶುವವಂಗೆ ಎನ್ನ ತಂಗೆಯ ಕೊಡ್ಲೆ ಆನು ಖಂಡಿತ ಒಪ್ಪೆ.ನಿಂಗೊ ಹಾಂಗಿದ್ದ ಕನಸು ಕಾಣೆಕೂಳಿಲ್ಲೆ.ಎನ್ನ ತಂಗೆಯ ಆರಿಂಗೆ ಮದುವೆ ಮಾಡಿ ಕೊಡೆಕೂಳಿ ಆನು ತೀರ್ಮಾನ ಮಾಡುವೆ”  ಆ ಮಾತು ಕೇಳಿ ರುಕ್ಮಿಣಿಗೆ ಒಳ್ಳೆತ ಹೆದರಿಕೆ ಆಯಿದು.ಆದರೂ ಅಣ್ಣ ಎನ್ನ ಒಪ್ಪಿಗೆ ಕೇಳದ್ದೆ ಮದುವೆ ನಿಗೆಂಟು ಮಾಡುಗೂಳಿ ಅದಕ್ಕೆ ಅಂದಾಜಾಯಿದಿಲ್ಲೆ.

ಕಳುದವಾರ ಸಖಿಯರು ಬಂದು ಹೇಳಿಯಪ್ಪಗಳೇ ಅದಕ್ಕೆ ಈ ವಿಶಯ ಗೊಂತಾದ್ದು.  ಚೇದಿಯ ದಮಘೋಷ ರಾಜನ ಮಗ° ಶಿಶುಪಾಲನೊಟ್ಟಿಂಗೆ ನಿಂಗಳ ಮದುವೆ ಹೇಳಿ ಅಣ್ಣನ ತೀರ್ಮಾನ ಆಯಿದು. ಶಿಶುಪಾಲ ಅಣ್ಣನ ಜತೆಕ್ಕಾರ° ಆಡ.ಇನ್ನಾಣ ವಾರ ಮದುವೆ ಆಡ.

ಎದಗೆ ಆರೋ ಪಿಶಾತಿಲಿ ಕುತ್ತಿದಷ್ಟು ಸಂಕಟ ಆತದಕ್ಕೆ. ಸೀದಾ ಹೋಗಿ ಅಬ್ಬೆಯತ್ರೆ ಕೇಳಿತ್ತು.ಇದೆಂತಬ್ಬೆ ಹೀಂಗೇಳಿ.

“ಎನಗೆ ಗೊಂತಿಲ್ಲೆ ಮಗಳೂ,ಎಂಗೊ ಹೇಳಿರೆ ನಿನ್ನಣ್ಣ ಕೇಳ್ತಾಯಿಲ್ಲೆ, ಆನೆ ನಡದ್ದೇ ದಾರಿ ‘ ಹೇಳುವ ಅವನ ಕ್ರಮ ನಿನಗೂ ಗೊಂತಿದ್ದನ್ನೇ.ಅಪ್ಪ° ತುಂಬ ಹೇಳಿದವು.ಅವನ ವಿರುದ್ಧ ಮಾತಾಡಿರೆ ಅವ° ಎಂತ ಮಾಡ್ತ ಹೇಳಿ ನಿನಗೂ ಗೊಂತಿದ್ದನ್ನೇ. ಎಂಗೊಗೆ ಎಂತ ಮಾಡುದು ಹೇಳಿಯೇ ಅರಡಿತ್ತಿಲ್ಲೆ ಮೋಳೇ..ಇದುವೇ ನಿನ್ನ ಯೋಗ ಹೇಳಿ ಗ್ರೇಶಿಗೋ” ಅಬ್ಬೆಯ ಬಾಯಿಂದ ಅಷ್ಟು ಮಾತು ಬಂದದೂದೆ ಮತ್ತೆ ರುಕ್ಮಿಣಿ ಅಲ್ಲಿ ನಿಂದಿದಿಲ್ಲೆ.ಸೀದಾ ಅದರ ಅಂತಃಪುರಕ್ಕೆ ಬಂದು ಹಾಸಿಗೆಲಿ ಕಮುಚ್ಚಿ ಮನುಗಿ ಜೋರು ಕೂಗಿತ್ತು.
“ಕೃಷ್ಣಾ‌‌..ನಿನಗೆ ಎನ್ನ ಪ್ರೀತಿ ಅರ್ಥಾವ್ತಿಲ್ಯಾ? ಎಷ್ಟೋ ಜೆನರ ಮನಸಿನ ಅರ್ಥ ಮಾಡಿ ಅವಕ್ಕೆ ಸಕಾಯ ಮಾಡಿದವಾಡ° ನೀನು.ಎನ್ನ ಈ ಕಷ್ಟಂದ ಹೆರ ತಪ್ಪಲೆಡಿಯದೋ? ಸಾಂದೀಪ ಋಷಿಗಳ ಮಗನ ಯಮಲೋಕಕ್ಕೆ ಹೋಗಿ ಜೀವಂತವಾಗಿ ಕರಕ್ಕೊಂಡು ಬಂದವಂಗೆ ಎನ್ನ ಪ್ರೀತಿ ಗೊಂತಾಗದಾ? ಎಷ್ಟೋ ಜೆನಂಗೊ ಇಲ್ಲಿಂದ ಅಲ್ಲಿಗೂ,ಅಲ್ಲಿಂದ ಇಲ್ಲಿಗೂ ಹೋಗಿ ಬಂದು ಮಾಡ್ತವು.ಅವರಲ್ಲಿ ಒಬ್ಬ° ಆದರೂ ” ರುಕ್ಮಿಣಿ ನಿನ್ನ ಪ್ರೀತಿಸುತ್ತು,ಅದು ಮದುವೆ ಆದರೆ ನಿನ್ನ ಮಾತ್ರ ” ಹೇಳುವ ಶಪಥ ಮಾಡಿದ್ದೂಳಿ ಹೇಳಿದ್ದವಿಲ್ಯಾ? ಅಯ್ಯೋ ಎನ್ನ ಗ್ರಾಚಾರವೇ……” ಕೂಗಿ ಕೂಗಿ ಅದಕ್ಕೆ ಉಂಬಲೆ ತಿಂಬಲೆ ಮೆಚ್ಚದ್ದಾಂಗಾತು. ಆಭರಣ ಅಲಂಕಾರಂಗೊ ಬೇಡಾಳಿಯಾತು.ಎಷ್ಟು ಹೊತ್ತಿಂಗೂ “ಕೃಷ್ಣಾ….ಕೃಷ್ಣಾ.. ಒಂದೇ ಜೆಪ.

ಸಖಿಯರಿಂಗೂ ರಾಜಕುಮಾರಿಯ ಬೇಜಾರ, ಸಂಕಟ ನೋಡಿ ದುಃಖ ಬಂತು. ಆದರೂ ಅವಕ್ಕೆ ಸಮದಾನ ಹೇಳುದು ಬಿಟ್ಟು ಬೇರೆಂತ ಮಾಡ್ಲೆಡಿಗು

” ರಾಜಕುಮಾರಿ.. ಕೂಗೆಡ,ನಮ್ಮ ಮನೆದೇವರು ಶಾಂಭವಿಯ ನಂಬು, ಆ ದುರ್ಗೆ ನಿನ್ನ ಕೈ ಬಿಡ” ಹೇಳಿ ದೇವಿಗೆ ಶರಣಪ್ಪಲೆ ಹೇಳಿದವು.
ಭೀಷ್ಮಕನ ಮನೆ ದೇವರು ದುರ್ಗೆ.ಅವನ ಉದ್ಯಾನವನದ ತಲೇಲಿ ಒಂದು ದೇವಿಯ ದೇವಸ್ಥಾನವೂ ಇದ್ದು‌.ಅರಮನೆಯ ಹೆಮ್ಮಕ್ಕೊಗೆ ಹೋಪಲೆ ಅನುಕೂಲಪ್ಪಾಂಗೆ ಕಟ್ಟುಸಿದ್ದು.ಹೆರಾಣವರ ಕಣ್ಣಿಂಗೆ ಕಾಣದ್ದಾಂಗೆ ಅಂತಃಪುರಲ್ಲಿಪ್ಪವಕ್ಕೆ ದೇವಸ್ಥಾನಕ್ಕೆ ಹೋಗಿ ಬಪ್ಪಲೆ ಸುಲಬಾಗಿಂಡಿದ್ದತ್ತು.

ರುಕ್ಮಿಣಿಯೂ ಒಂದೊಂದರಿ ಅಲ್ಲಿಗೆ ಹೋಪ ಕ್ರಮ ಇದ್ದು. ಎಂತಾರು ವಿಶೇಶ ಇದ್ದರೆ ಮನೆದೇವರಿಂಗೆ ಮದಾಲು ಪೂಜೆ ಮಾಡ್ಸಿಕ್ಕಿಯೇ ಮುಂದುವರಿವದು ಅವರ ಕ್ರಮ.ಬೇರೆ ಆರಿಂಗೆ ಪ್ರವೇಶ ಇಲ್ಲದ್ರೂ ಪಂಡಿತರಾದ ಬ್ರಾಹ್ಮರಿಂಗೆ ಅಲ್ಲೆಲ್ಲ ಹೋಪ ಅವಕಾಶ ಇದ್ದತ್ತು.

ಸಖಿಯರು ಹೇಳಿದ ಮತ್ತೆ ರುಕ್ಮಿಣಿ ಆ ದೇವಿಯನ್ನೇ ನಂಬಿತ್ತು.ಶ್ರೀಕೃಷ್ಣನನ್ನೇ ಮದುವೆ ಆಯೆಕೂಳಿ ದಿನನಿತ್ಯ ಜೆಪ ಮಾಡಿತ್ತು. ಮದುವೆ ದಿನ ಹತ್ತರೆ ಬಂದಾಂಗೆ ಅದರ ಸಂಕಟ ಹೇಳ್ಲೋಮಣ್ಣೋ ಎಡಿಯ. ಊಟ, ಒರಕ್ಕು ಇಲ್ಲದ್ದೆ ಕೃಷ್ಣನ ಜೆಪ ಮಾಂತ್ರ ‌.
ಅಷ್ಟಪ್ಪಗಳೇ ಅದು ಆ ಬ್ರಾಹ್ಮಣನ ಕಂಡದು.ದೇವಸ್ಥಾನಕ್ಕೆ ಹೋಗಿಂಡು ಬಪ್ಪಗ ಎದುರು ಸಿಕ್ಕಿದ ಅವನ ಕಾಲಿಂಗೆ ಹೊಡಾಡಿ ದಕ್ಷಿಣೆ ಕೊಟ್ಟತ್ತು ರುಕ್ಮಿಣಿ. ಬ್ರಾಹ್ಮಣರ ಗೌರವಿಸುದು ಅಲ್ಲಿ ಮದಲಿಂದಲೂ ನೆಡಕ್ಕೊಂಡು ಬಂದ ಕ್ರಮ.
ಯೇವಗಲೂ ಕೊಶೀಲಿಪ್ಪ ರಾಜಕುಮಾರಿಯ ಕಣ್ಣಿಂದ ನೀರಧಾರೆಯೇ ಅರಿವದು ಕಾಂಬಗ ಆ ಬ್ರಾಹ್ಮಣೋತ್ತಮಂಗೆ ಕಾರಣ ಗೊಂತಾಯೆಕೂಳಿ ಆತು. ಬ್ರಾಹ್ಮಣ ಕೇಳಿದ್ದದೇ ತಡವು ಇಷ್ಟು ಹೊತ್ತು ಎದೆಲಿ ಕಟ್ಟಿ ಮಡುಗಿದ ಸಂಕಟ ಪೂರಾ ರುಕ್ಮಿಣಿ ಕಣ್ಣೀರಿನ ರೂಪಲ್ಲಿ ಹೆರ ಹಾಕಿತ್ತು

“ಎನಗೆ ಕೃಷ್ಣ ಇಲ್ಲದ್ದೆ ಬದ್ಕುಲೆಡಿಯ,ಆನು ಮದುವೆ ಆವ್ತರೆ ಅವನ ಮಾಂತ್ರ.ಶಿಶುಪಾಲನ ಮದುವೆಪ್ಪಲೆ ಎನಗೆ ಮನಸ್ದಿಲ್ಲೆ.ಈ ಮದುವೆ ನೆಡದರೆ ಆನು ಕಂಡಿತ ಜೀವಂತ ಇರೆ.ಎನಗೆ ಶ್ರೀಹರಿಯ ಹೆಂಡತಿಯಾಗಿ ಮಾಂತ್ರ ಜೀವನ ಬೇಕಾದ್ದು.ಆದಷ್ಟು ಬೇಗ ಬಂದು ಕೃಷ್ಣ ಎನ್ನ ಕರಕ್ಕೊಂಡು ಹೋಯೆಕೂಳಿ ಆನು ಪ್ರಾರ್ಥಿಸುದು‌.ಇಲ್ಲದ್ರೆ ಸಾವದು ಬಿಟ್ಟು ಬೇರೆ ದಾರಿಯೇ ಕಾಣ್ತಿಲ್ಲೆನಗೆ…..” ರುಕ್ಮಿಣಿಯ ಸಂಕಟ ಕೇಳಿಯಪ್ಪಗ ಆ ಬ್ರಾಹ್ಮಣನ ಮನಸ್ಸಿಂಗೂ ಬೇಜಾರಾತು. ಅಕೇರಿಗೆ ಅವ°  ಒಂದು ಉಪಾಯ ಹೇಳಿದ°.
“ರಾಜಕುಮಾರೀ..ನಿನ್ನ ಮನಸಿಲ್ಲಿಪ್ಪದರ ಎಲ್ಲ ಒಂದು ಓಲೆಲಿ ಬರದು ಕೊಡು.ಆನೀಗಳೇ ದ್ವಾರಕೆಗೆ ಹೋಗಿ ಅದರ ಕೃಷ್ಣಂಗೆ ಕೊಡ್ತೆ.ನಿನಗೆ ಅವನತ್ರೆ ಪ್ರೀತಿ ಇದ್ದೂಳಿ ಅವಂಗೆ ಗೊಂತಿಲ್ಲದ್ರೆ ಅವ° ಇಲ್ಲಿ ಬಪ್ಪದಾದರೂ ಹೇಂಗೆ! ? ಆನು ಎನಗೆ ಎಡಿಗಾದಷ್ಟು ಬೇಗ ನೆಡಕ್ಕೊಂಡು ದ್ವಾರಕೆಗೆ ಹೋವ್ತೆ.ಕೃಷ್ಣ ಖಂಡಿತ ಬಕ್ಕು, ಅವನ ಗುಣ ಭಾರೀ ಒಳ್ಳೆದು” ಅವನ ಮಾತು ಕೇಳಿಯಪ್ಪಗ ರುಕ್ಮಿಣಿಗೆ ರೆಜ ಸಮದಾನ ಆತು.
ಅಂಬಗಳೇ ಅಂತಃಪುರಕ್ಕೆ ಬಂದು ಮದಾಲು ಲೇಖನಿ ತೆಗದು ತಾಳೆಗರಿಲಿ ಮನಮೋಹನ ಕೃಷ್ಣಂಗೆ ಕಾಗದ ಬರದತ್ತು. ಅದರ ಮನಸ್ಸಿನ ಎಲ್ಲಾ ಪ್ರೀತಿಯನ್ನು ಅಕ್ಷರಲ್ಲಿ ತುಂಬುಸಿಕ್ಕಿ,ಅಕೇರಿಗೆ ಒಂದು ವಾಕ್ಯ ಬರದತ್ತು “ಆನು ನಾಡ್ದು ಉದಿಯಪ್ಪಗ ದೇವಿಯ ದೇವಸ್ಥಾನಕ್ಕೆ ಹೋವ್ತೆ.ಆ ಹೊತ್ತಿಂಗೆ ನೀನು ಬಂದೆನ್ನ ಕರಕ್ಕೊಂಡು ಹೋಯೆಕು ‌.ಬಾಕಿ ಸಮಯಲ್ಲಿ ಬೆಂಗಾವಲಿಂಗೆ ಅಂಗರಕ್ಷಕರೂ ಇರ್ತವು.ಹಾಂಗಾಗಿ ಆ ದಿನ ನಿನ್ನ ಕಾಯ್ತೆ.ಎಲ್ಯಾದರು ನೀನು ಬಾರದ್ರೆ ಈ ರುಕ್ಮಿಣಿ ಮತ್ತೆ ಜೀವಲ್ಲಿ ಇರ”.
ಆ ಬ್ರಾಹ್ಮಣ ಅಂಬಗಳೇ ಆ ಓಲೆಯ ಅಂಗವಸ್ತ್ರಲ್ಲಿ ಭಾರೀ ಜಾಗ್ರತೆಲಿ ಕಟ್ಟಿ ತೆಕ್ಕೊಂಡು ದ್ವಾರಕೆಯ ಹೊಡೆಂಗೆ ನೆಡದ್ದ.ಇಂದಿಂಗೆ ಮೂರನೇ ದಿನ.ಇನ್ನೂ ಅವನ ಕಾಣದ್ದೇಕೇಳಿ ಬೇಜಾರ ರುಕ್ಮಿಣಿಗೆ.

ಹೋಪಲೆ ಒಂದೂವರೆ ದಿನ,ಬಪ್ಪಲೆ ಒಂದೂವರೆ ದಿನ ಬೇಕಾದ್ದು.ಹಾಂಗಾಗಿ ಇಂದು ಹೊತ್ತೋಪಗಾರೂ ಅವ° ಬಕ್ಕೂಳಿ ಗ್ರೇಶಿದ್ದದು. ಅರಮನೆಯ ಹೆರ ಎಲ್ಲ ಬೇರೆ ಬೇರೆ ರಾಜ್ಯದ ರಾಜಂಗೊ ಬಯಿಂದವು. ಅವಕ್ಕೆಲ್ಲ ಉಪಚಾರ ಮಾಡುವ ಗಡಿಬಿಡಿಲಿದ್ದವು ಅಬ್ಬೆ ಅಪ್ಪ°  ಹೇಳಿ ಗೊಂತಿದ್ದದಕ್ಕೆ‌.
ಮರುದಿನಕ್ಕೆ ಸುತ್ತಲೆ ಬೇಕಾದ ಪೀತಾಂಬರವ ಆಗಳೇ ಅಬ್ಬೆಯ ದಾಸಿ ತಂದು ಮಡುಗಿದ್ದು.ಆಭರಣದ ರಾಶಿಯೇ ಇದ್ದಾಡ.ರುಕ್ಮಿಣಿ ಅದರೆಲ್ಲ ನೋಡಿದ್ದೇಯಿಲ್ಲೆ.ನೋಡ್ಲೆ ಮನಸಿಲ್ಲೆ ಅದಕ್ಕೆ. ಈಗ ನೋಡೆಕಾದ್ದು ಒಂದೇ ಮೋರೆ.ಕಾಣೆಕಾದ್ದು ಒಬ್ಬನ ಮಾಂತ್ರ ‌.ಆದರೂ ಅವರ ಇನ್ನೂ ಕಾಣ್ತಿಲ್ಲೇಕೆ?

ಭೀಷ್ಮಕಂಗೆ ಮಗಳ ಮದುವೆಯ ಸಂಭ್ರಮ ‌.ಒಂದೇ ಮಗಳು ಕೊಂಗಾಟದ ಮಗಳು ಹೇಳಿಯಾದರೂ ಮಗನ ಇಷ್ಟಪ್ರಕಾರದ  ಮದುವೆ ಇದು,ಮಗಳಿಂಗೆ ಮನಸ್ಸಿಲ್ಲೇಳಿಯೂ ಗೊಂತಿಪ್ಪಗ ಹೆಚ್ಚು ಸಂತೋಶ ಆವ್ತಿಲ್ಲೆ. ಮಗ ಶಿಶುಪಾಲಂಗೆ ಕೊಡುದೂಳಿ ಹೇಳಿರೂ ಭೀಷ್ಮಕಂಗೆ ಮಗಳ ಕೃಷ್ಣಂಗೆ ಮದುವೆ ಮಾಡಿ ಕೊಡ್ಲೆ ಮನಸಿಪ್ಪದು.ಆದರೆ ಎಂತ ಮಾಡುದು? ಆ ಯೋಗ ಇಲ್ಲದ್ರೆ.!! ಮಗ° ಎಂತದೇ ಹೇಳಿರೂ ಭೀಷ್ಮಕ ಒಂದು ಸಣ್ಣ ಉಪಾಯ ಮಾಡಿದ್ದ°. ರುಕ್ಮಿಣಿಯ ಸ್ವಯಂವರ ಹೇಳಿಯೇ ಅವ° ಎಲ್ಲೋರಿಂಗು ಹೇಳಿಕೆ ಹೇಳಿದ್ದು. ರುಕ್ಮಿ ದ್ವಾರಕೆಗೆ ಹೇಳಿಕೆ ಹೇಳ್ಲೆ ಒಪ್ಪ°. ಆದರೆ ಈ ಸ್ವಯಂವರ ಹೇಳಿರೆ ಬಪ್ಪವಕ್ಕೆ ದೊಡ್ಡ ಹೇಳಿಕೆಯ ಅಗತ್ಯ ಇರ್ತಿಲ್ಲೆ.ಆ ಒಂದು ಕ್ರಮ ಇಪ್ಪ ಕಾರಣ ವಿಶಯ ಗೊಂತಾಗಿಯಾದರೂ ಬಲರಾಮ,ಶ್ರೀಕೃಷ್ಣ ಬಂದರೆ ……..!! ಮತ್ತೆ ಮಗಳ ಯೋಗ ಇಪ್ಪ ಹಾಂಗಾವ್ತು ಹೇಳಿ ಅವನ ಆಲೋಚನೆ.ಮನಸಿಲ್ಲಿ ಬೇಜಾರ ,ಅಸಮಾಧಾನ ಇದ್ದರೂ ಬಂದವರ ಕ್ರಮ ಪ್ರಕಾರ ಉಪಚಾರ ಮಾಡ್ಲೇ ಬೇಕನ್ನೇ.ಹಾಂಗೆ ಅವ° ದಮಘೋಷನ ಕುಟುಂಬವ ಸಂತೋಶಲ್ಲಿ ಎದುರುಗೊಂಡು ಸತ್ಕಾರ ಮಾಡಿದ°.ಅವರೊಟ್ಟಿಂಗೆ ಬಂದ ಬೇರೆಯವಕ್ಕೂ ಯೇವದೇ ಕೊರತೆ ಆಗದ್ದಾಂಗೆ ನೋಡ್ಯೊಂಡ°.
ಮಗಳು ಎಂತ ಮಾಡ್ತೋ ಹೇಳಿ ಮನಸಿಲ್ಲಿದ್ದರೂ ರಾಜ ಆದ ಕಾರಣ ಅವಂಗೆ ಹಾಂಗೆಲ್ಲ ಫಕ್ಕ ಒಳ ಹೋಗಿ ಮಗಳ ಕಂಡಿಕ್ಕಿ ಬಪ್ಪಲೆ ಎಡಿಯ ‌.ಹಾಂಗಾಗಿ ಅವ° ಅಸಹಾಯಕನ ಹಾಂಗೆ ಮನಸಿಲ್ಲೇ ವ್ಯೆಥೆ ಪಟ್ಟ°.

ಕೃಷ್ಣನ ಧ್ಯಾನಲ್ಲೇ ಇರುಳಿಡೀ ಕೂದ ರುಕ್ಮಿಣಿಗೆ ಎಷ್ಟೊತ್ತಿಂಗೆ ಒರಕ್ಕು ಬಂತೋ ಗೊಂತಿಲ್ಲೆ. ಅರಮನೆಯ ಮಂಗಳವಾದ್ಯದ ದೆನಿ ಕೇಳಿಯಪ್ಪಗ ಫಕ್ಕನೆ ಎಚ್ಚರಿಕೆಯಾಗಿ ಎದ್ದು ಕೂದತ್ತು.
‘ಎಲ್ಲಿದ್ದ° ಕೃಷ್ಣ? ?’ ಅಂಬಗ ಎನಗೆ ಕಂಡದು ಕನಸಾ? ಅಲ್ಲ ಎನ್ನ ಭ್ರಮೆಯಾ? ‘ ಒಂದೂ ಅರ್ಥಾಯಿದಿಲ್ಲೆ ಅದಕ್ಕೆ. ಅಂದರೂ ರಜ ಹೊತ್ತು ಮದಲೇ ಕಂಡ ಆ ಚಿತ್ರಂಗಳ ಮನಸಿಲ್ಲಿ ಮತ್ತೊಂದರಿ ನೆಂಪು ಮಾಡ್ಲೆಡಿತ್ತಾಳಿ ನೋಡಿತ್ತು‌.
ಬ್ರಾಹ್ಮಣ ದ್ವಾರಕೆಗೆ ಹೋಗಿ ಕೃಷ್ಣಂಗೆ ಓಲೆ ಕೊಟ್ಟಪ್ಪಗ ಅವ° ಬ್ರಾಹ್ಮಣಂಗೆ ಭಾರೀ ವಿಶೇಶವಾದ ಉಪಚಾರ ಮಾಡಿ “ಇಂದಿಲ್ಲಿ ನಿಲ್ಲಿ,ನಾಳಂಗುದಿಯಪ್ಪಗ ದಾರುಕನೊಟ್ಟಿಂಗೆ ರಥಲ್ಲಿ ಕಳ್ಸುತ್ತೆ ನಿಂಗಳ.ಈಗ ಈ ವಿಶಯ ಅಣ್ಣನತ್ರೆ ಮಾತಾಡಿಕ್ಕಿ ಬತ್ತೆ ಹೇಳಿಕ್ಕಿ ಹೋದ°. ಬಲರಾಮಂಗೆ ವಿಶಯ ಗೊಂತಪ್ಪದೂದೆ
” ನಿನ್ನ ಅಷ್ಟು ಪ್ರೀತಿಸುವ ಕೂಸಿನ ನೀನು ಖಂಡಿತ ಮದುವೆ ಆಯೆಕು. ನಮ್ಮ ಯಾದವ ಸೇನೆಯನ್ನೇ ತೆಕ್ಕೊಂಡು ನಾಳಂಗೆ ವಿದರ್ಭಕ್ಕೆ ಹೋಪೋ°.ನೀನು ಕೂಸಿನ ರಥಲ್ಲಿ ಕೂರ್ಸಿಂಡು ಬಾ..ಅವು ಯುದ್ಧಕ್ಕೆ ಬಂದರೆ ಆನುದೆ,ನಮ್ಮ ಸೈನ್ಯವುದೆ ಸಾಕು”

ಹಾಂಗೆ ಎಲ್ಲಾ ಸೇನೆಯ ಸಮೇತ ಮದಿಮ್ಮಾಯನ ಕರಕ್ಕೊಂಡು ,ಆ ಬ್ರಾಹ್ಮಣನ ದಾರುಕ ಸಾರಥಿಯಾಗಿಪ್ಪ ರಥಲ್ಲಿ ಕೂರ್ಸಿಂಡು  ದ್ವಾರಕೆಯವೆಲ್ಲ ಕುಂಡಿನಪುರದ ಹೆರಾಣ ಹೊಡೆಲಿದ್ದವು……’
ಎಂತರ ಇದು!! ಇದೆಲ್ಲ ಆರು ಹೇಳಿದ್ದು!? ಎನ್ನ ಮನಸಿಲ್ಲಿ ಹೀಂಗಿದ್ದ ಆಲೋಚನೆ ಬಪ್ಪಲೆ ಕಾರಣಯೆಂತ? ದೇವೀ ಇದೆಲ್ಲವೂ ಸತ್ಯವಾಗಿರಲಿ ಹೇಳಿ ಗ್ರೇಶಿಂಡು ಎದ್ದು ನಿಂದಪ್ಪಗ ಅಬ್ಬೆಯ ಅಂತಃಪುರದ ದಾಸಿಗೊ ಮಂಗಳಸ್ನಾನ ಮಾಡ್ಲೆ ಬನ್ನೀ ” ಹೇಳಿ ಕರಕ್ಕೊಂಡು ಹೋದವು.ರುಕ್ಮಿಣಿಗೆ ಯೇವದರಲ್ಲೂ ಮನಸಿಲ್ಲೆ. ಕೃಷ್ಣ ಬಾರದ್ರೆ ಎಂತ ಮಾಡುದು? ಆ ಬ್ರಾಹ್ಮಣ ಏಕೆ ಬಯಿಂದಾಯಿಲ್ಲೆ? ಉದೆಕಾಲಕ್ಕೆ ಕಂಡದು ಕನಸೋ? ಅದು ಸತ್ಯ ಅಕ್ಕೋ……'” ಅದೇ ಆಲೋಚನೆ ತಲೆಲಿ ತುಂಬಿದ ಕಾರಣ ಸಖಿಯರು ಮಾಡುವ ಅಲಂಕಾರ ಯೇವದೂ ತಲಗೇ ಹೋಯಿದಿಲ್ಲೆ. ಒಂದು ಬೊಂಬೆ ಹಾಂಗೆ ನಿಂದದು ಮಾಂತ್ರ.

“ರಾಜ ಸ್ವಯಂವರ ಹೇಳಿರೂ ಅಲ್ಲಿ ಸಣ್ಣ ಪ್ರಾಯದ ,ಯೋಗ್ಯ ಅರಸಂಗೊ ಆರೂ ಬಯಿಂದವಿಲ್ಲೆ. ಶಿಶುಪಾಲಂಗೆ ಬಾಸಿಂಗ ಕಟ್ಟುತ್ತಾಯಿದ್ದವು.ಬಹುಶಃ ಇದೆಲ್ಲ ನಿಂಗಳ ಅಣ್ಣನ ಏರ್ಪಾಡು” ಅಂತರಂಗದ ಸಖಿ ಬಂದು ಕೆಮಿಲಿ ಗುಟ್ಟಾಗಿ ಹೇಳಿತ್ತು.
ರುಕ್ಮಿಣಿ ಮಾತೇ ಬಾರದ್ದವರಾಂಗೆ ನಿಂದತ್ತು.
“ಎನ್ನ ಪ್ರೀತಿ ನಿಜವಾದ್ದದಲ್ಲಾದಿಕ್ಕು,ಇಲ್ಲದ್ರೆ ಕೃಷ್ಣ ಬತ್ತಿತ°. ಅಯ್ಯೋ ಎನ್ನ ಜನ್ಮವೇ…..‌ಈಗ ದೇವಸ್ಥಾನಕ್ಕೆ ಹೋದರೆ ಮತ್ತೆ ಈ ಅಂತಃಪುರಕ್ಕೆ ಬಪ್ಪಲಿಲ್ಲೆ ಖಂಡಿತ. ಕೃಷ್ಣ ಬಂದರೆ ಅವನೊಟ್ಟಿಂಗೆ ಹೋಪದು. ಇಲ್ಲದ್ರೆ…….ಇಲ್ಲದ್ರೆ…….” ಕಣ್ಣೀರ ಧಾರೆ ದಿಳಿದಿಳಿನೆ ಇಳುದತ್ತು.

“ದೇವಸ್ಥಾನಕ್ಕೆ ಹೋಗಿಂಡು ಬರೆಕಾಡ, ನಿಂಗಳ ಅಬ್ಬೆ ಹೇಳಿದ್ದವು” ದಾಸಿಗೊ ಬಂದು ಹೇಳಿಯಪ್ಪಗ ಕೈ ಕಾಲಿಲ್ಲಿ ಶಕ್ತಿ ಇಲ್ಲದ್ದವರಾಂಗೆ ನಿದಾನಕೆ ಹೆರಟತ್ತು.
ಅದರ ಮನಸಿಲ್ಲಿ ಬೇಜಾರ ಇದ್ದರೂ,ಮೋರೆ ಕುಂಞಿ ಕುಂಞಿ ಆದರೂ ಅದರ  ಚೆಂದ ಕಮ್ಮಿ ಆಯಿದಿಲ್ಲೆ. ಮದಿಮ್ಮಾಳ ಆಯತಲ್ಲಿ ಮುತ್ತು ರತ್ನದ ಆಭರಣ ಹಾಕಿ,ಪಟ್ಟೆ ಪೀತಾಂಬರ ಸುತ್ತಿದ ರುಕ್ಮಿಣಿಯ ಅಂದು ನೋಡಿದವಕ್ಕೆ ಅದರನ್ನೇ ನೋಡ್ತಾಯಿಪ್ಪೋ° ಹೇಳುವಷ್ಟು ಚೆಂದ ಕಂಡತ್ತು‌.ನಿತ್ಯ ಕಾಂಬ ಸಖಿಗೊಕ್ಕೇ ಹಾಂಗಪ್ಪಗ ಮತ್ತೆ ಬೇರೆಯವರ ಕಣ್ಣಿಂಗೆ ಹೇಂಗೆ ಕಾಂಗು?
ಅರಮನೆ ಬಾಗಿಲಿಂದ ಹೆರ ಇಳುದು ಉದ್ಯಾನವನಕ್ಕೆ ಎತ್ತುವ ಮದಲೇ ರುಕ್ಮಿಣಿಗೆ ಅವನ ಕಂಡತ್ತು.ಓಡೋಡಿ ಸೇಂಕಿಂಡು ಬಂದ°. ಅವ° ಬೇರೆ ಆರೂ ಅಲ್ಲ.ಅದು ದ್ವಾರಕೆಗೆ ಕಳ್ಸಿದ ಬ್ರಾಹ್ಮಣ. ಅವನ ಕಂಡದೂದೆ ಸೂರ್ಯನ ಕಂಡ ತಾವರೆ ಹೂಗಿನ ಹಾಂಗೆ ಅದರ ಮೋರೆಲಿ ಹೊಳಪು ಬಂತು.

“ರಾಜಕುಮಾರಿ.. ಯೇವ ಯೋಚನೆಯೂ ಮಾಡೆಡ.ಎಲ್ಲಾ ಸರಿಯಾತು.ಶ್ರೀಹರಿ ವಲ್ಲಭೆಯಪ್ಪ ಮುಹೂರ್ತ ಹತ್ತರೆ ಬಂತು.ಕೃಷ್ಣನ ಪಟ್ಟಮಹಿಷಿಯಾಗಿ ಸತ್ಪುತ್ರರ ಅಬ್ಬೆಯಾಗಿ ಬದ್ಕು.ನಿನಗೆ ಒಳ್ಳೆದಾಗಲಿ” ಅವನ ಮಾತು ಕೇಳಿದ್ದದೇ ತಡ ಕೊರಳಿಲಿಪ್ಪ ಬಂಗಾರಿನ ಮಾಲೆಯ ತೆಗದು ಅವಂಗೆ ಕೊಡ್ಲೆ ಹೋತದು.
“ಬೇಡ ರಾಜಕುಮಾರಿ, ಎನಗೆ ಬೇಕಾದಷ್ಟು ಉಡುಗೊರೆ, ದಕ್ಷಿಣೆ ದ್ವಾರಕೆಂದ ಸಿಕ್ಕಿದ್ದು‌.ನೀನು ಈಗ ಮದಿಮ್ಮಾಳು ಎನ್ನ ಆಶೀರ್ವಾದ ರೂಪಲ್ಲಿ ಅದು ನಿನ್ನತ್ರೆ ಇರಲಿ” ಹೇಳಿಕ್ಕಿ ಆ ಬ್ರಾಹ್ಮಣ ಹೋದ°.

ರುಕ್ಮಿಣಿಯ ಸಂತೋಶ ತಡವಲೇ ಎಡಿಯ.ಕೃಷ್ಣ ಬತ್ತ°. ಎನ್ನ ಕರಕ್ಕೊಂಡು ಹೋವ್ತ°. ದುಷ್ಟ ಶಿಶುಪಾಲನ ಕೈಂದ ಎನ್ನ ರಕ್ಷಿಸುತ್ತ°. ಅದೇ ಸಂತೋಶಲ್ಲಿ ದೇವಸ್ಥಾನಕ್ಕೆ ಹೋಗಿ ಕೈ ಮುಗುದು ಪ್ರಾರ್ಥನೆ ಮಾಡಿತ್ತು.ಒಟ್ಟಿಂಗೆ ಇಪ್ಪ ಸಖಿಯರತ್ರೆಲ್ಲ ಬ್ರಾಹ್ಮಣ ಹೇಳಿದ ವಿಶಯ ಹೇಳಿಯಪ್ಪಗ ಅವಕ್ಕೂ ಕೊಶಿಯೇ.

ದೇವರ ಪ್ರಸಾದ ತೆಕ್ಕೊಂಡು ದೇವಸ್ಥಾನಕ್ಕೆ ಮತ್ತೊಂದು ಸುತ್ತು ಬಂತು.ಕೃಷ್ಣ ಎಷ್ಟೊತ್ತಿಂಗೆ ಬಕ್ಕೋ ಅದಕ್ಕೆ ಗೊಂತಿಲ್ಲೆ. ಇನ್ನೂ ಹೆಚ್ಚು ತಡವು ಮಾಡುವ ಹಾಂಗಿಲ್ಲೆ ‌.ಇಂದು ಮದುವೆಪ್ಪ ರಾಜಕುಮಾರಿ ಕುಲದೇವತೆಯ ಅನುಗ್ರಹ ಪಡವಲೆ ಹೋದರೂ ಆದಷ್ಟು ಬೇಗ ಬಪ್ಪಲೇ ಬೇಕು ಹೇಳಿ ಅರಮನೆಂದ ಆದೇಶ ಬಯಿಂದು. ಮದುವೆ ಮುಹೂರ್ತ ತಪ್ಪಿ ಹೋಪಲಾಗನ್ನೇ‌…..!!

ಎಲ್ಲಿದ್ದ°? ಎಲ್ಲಿದ್ದ°? ಅದು ದೇವಸ್ಥಾನಂದ ಹೆರ ಬಂದು ಅತ್ಲಾಗಿತ್ಲಾಗಿ ನೋಡಿಂಡು ಕೃಷ್ಣನ ಹುಡ್ಕಿತ್ತು.ಉಹೂಂ…..ಎಲ್ಲಿಯೂ ಕಾಣ್ತಿಲ್ಲೆ. ಅಂಬಗ..ಅಂಬಗ……ಅದರ ಕಣ್ಣು ತುಂಬಲೆ ಸುರುವಾತು. “ದೇವೀ……” ಹೇಳಿ ದೇವಸ್ಥಾನದ ಹೊಡೆಂಗೆ ಮೋರೆ ಮಾಡಿ ಕೈ ಮುಗುಕ್ಕೊಂಡು ನಿಂದದಕ್ಕೆ ಕಣ್ಣುಮುಚ್ಚಿ ಒಡವ ಒಳ ಎಂತಾತೂಳಿ ಗೊಂತಾಯೆಕಾರೆ ರೆಜ ಹೊತ್ತು ಬೇಕಾಗಿ ಬಂತು.

ಹಿಂದಂದ ಬಂದ ಕೃಷ್ಣ ಅದರ “ಬಾ..” ಹೇಳಿ ನೆಗ್ಗಿ ರಥಲ್ಲಿ ಕೂರ್ಸಿ ಮಿಂಚಿನ ಹಾಂಗೆ ರಥ ಓಡ್ಸಿದ್ದದೇ‌.‌ ಸಂತೋಶವೋ,ದುಃಖವೋ ಯೇವ ಭಾವ ಹೇಳಿ ಅರಡಿಯದ್ದೆ ರುಕ್ಮಿಣಿ ಅವನ ನೋಡಿತ್ತು. ಕಣ್ತುಂಬ ನೋಡಿತ್ತು‌.ನೀಲಿ ಮುಗಿಲಿನ ಬಣ್ಣದ ಆ ವಾಸದೇವನ ಮತ್ತೆ ಮತ್ತೆ ನೋಡಿತ್ತು.ಋಷಿಮುನಿಗೊ ವರ್ಣಿಸುವ ಗೋಪಾಲಕೃಷ್ಣ, ಗೋವರ್ಧನ ಗಿರಿಧಾರಿ ಇವನೇ..ಆಹಾ..ಎಷ್ಟು ಚಂದ!! ಅವನ ಚೆಂದಕ್ಕೆ ಕಿರೀಟ ಮಡುಗಿದ ಹಾಂಗಿಪ್ಪ ನವಿಲುಗರಿ…..!!
“ಆದಷ್ಟು ಬೇಗ ದ್ವಾರಕೆಗೆ ಹೋಗಿ, ಇಲ್ಲಿ ಆನು ವೆವಸ್ಥೆ ಮಾಡ್ತೆ” ಬಲರಾಮ ದೊಡ್ಡಕೆ ಹೇಳುದು ಕೇಳುಗಳೇ ಅದಕ್ಕೆ ದೊಡ್ಡ ಸೈನ್ಯ ಅವರ ಹಿಂದಂದ ಅಟ್ಸಿಂಡು ಬಪ್ಪದು ಗೊಂತಾದ್ದು.
“ಹೆದರೆಡ, ಆನಿದ್ದೆ….” ಕೃಷ್ಣನ ಪ್ರೀತಿಯ ಮಾತು ಅದಕ್ಕೆ ಧೈರ್ಯ ಕೊಟ್ಟತ್ತು.ಅವು ಎಷ್ಟು ಬೇಗ ಹೋದರೂ ಅದರ ಅಣ್ಣ ರುಕ್ಮಿ ಅಟ್ಸಿಂಡು ಬಂದು ಯುದ್ಧ ಮಾಡಿದ.ಅವ° ಯುದ್ಧ ಮಾಡುಗ ಕೃಷ್ಣನೂ ತಿರುಗಿ ಯುದ್ಧ ಮಾಡದ್ದೆ ಬೇರೆ ನಿವೃತ್ತಿಲ್ಲೆನ್ನೇ.
ಯುದ್ಧಲ್ಲಿ ಸೋತು ಹೋದ ಅಣ್ಣನ ಕೊಲ್ಲಲೆ ಕೃಷ್ಣ ಕತ್ತಿ ತೆಗದಪ್ಪಗ ರುಕ್ಮಿಣಿ ಕೂಗಿಂಡು ಬೇಡಿತ್ತು
“ಎನ್ನ ಒಬ್ಬನೇ ಒಬ್ಬ° ಅಣ್ಣ ಅವ°. ಅವನ ಕೊಲ್ಲಡಿ”
ರುಕ್ಮಿಣಿಯ ಮಾತಿಂಗೆ ಒಪ್ಪಿ ಅವನ ಕೊಲ್ಲದ್ದರೂ ಮಂಡೆಯೂ,ಮೀಸೆಯೂ ಬೋಳ್ಸಿ ಮರ್ಯಾದೆ ತೆಗದು ಬಿಟ್ಟ° ಕೃಷ್ಣ ‌.

ಅಣ್ಣನ ಈ ಸ್ಥಿತಿಗೆ ಒಂದರಿ ಸಂಕಟ ಆದರೂ ಅವ° ಕೃಷ್ಣನ ಮದುವೆಪ್ಪಲೆ ಕೊಶೀಲಿ ಒಪ್ಪಿಗೆ ಕೊಟ್ಟಿದ್ದರೆ ಹೀಂಗೆಲ್ಲ ಆವ್ತಿತೇಯಿಲ್ಲೇಳಿ ಮನಸಿಲ್ಲಿ ಜಾನ್ಸಿತ್ತದು. ಕೃಷ್ಣ ಕಾಂಬಲೆ ಮಾಂತ್ರ ಚೆಂದ ಅಲ್ಲ, ಯುದ್ದವಿದ್ಯೆಲೂ ಉಶಾರಿದ್ದ° ಹೇಳಿ ಮತ್ತೂ ಸಂತೋಶಾತು.

ಶ್ರೀಹರಿಯ ರಥಲ್ಲಿ ಅವನೊಟ್ಟಿಂಗೆ ಹರಿವಲ್ಲಭೆಯಾಗಿ ರುಕ್ಮಿಣಿ ದ್ವಾರಕೆಗೆ ಹೋಪಗ ಸಾಕ್ಷಾತ್ ಶ್ರೀಮನ್ನಾರಾಯಣನೇ ಶ್ರೀಲಕ್ಷ್ಮಿಯೊಟ್ಟಿಂಗೆ ಹೋವ್ತ ಹೇಳಿ ದೇವತೆಗೊ ಆಕಾಶಂದ ಹೂಗಿನ ಮಳೆಯನ್ನೇ ಸೊರುಗಿದವು‌.

ಪ್ರಸನ್ನಾ ವಿ ಚೆಕ್ಕೆಮನೆ
ಧರ್ಮತ್ತಡ್ಕ

ಪ್ರಸನ್ನಾ ಚೆಕ್ಕೆಮನೆ

8 thoughts on “ಹರಿವಲ್ಲಭೆ

  1. ನಮ್ಮ ಭಾಷೆಲಿ ಬರದ ಪೌರಾಣಿಕ ಕತೆ…ಹೊಸ ಪ್ರಯತ್ನ. ಲಾಯಿಕಾಯಿದು ಪ್ರಸನ್ನ.

  2. ಓದಿಂಡು ಹೋಪಗ, ಕಣ್ಣೆದುರು ನಡೆತ್ತ ಹಾಂಗಿಪ್ಪ ಅನುಭವ ಕೊಡ್ತು. ರುಕ್ಮಿಣಿಯ ಭಾವನೆಗಳ ತುಂಬಾ ಚಂದಕೆ ನಿರೂಪಣೆ ಆಯಿದು. ಇನ್ನಷ್ಟು ಹೀಂಗಿಪ್ಪ ಕತೆಗೊ ನಮ್ಮ ಭಾಷೆಲಿ ಬರಲಿ

  3. ಪೌರಾಣಿಕ ಕಥೆಯ ನಮ್ಮ ಭಾಷೆಲಿ ಓದುವದೇ ಖುಷಿ. ಒಳ್ಳೆ ಸಿನೆಮಾ ಕತೆ ಹಾಂಗೇ ಆಯಿದು ರುಕ್ಮಿಣೀ ಸ್ವಯಂವರ. ಪ್ರಸನ್ನಕ್ಕ ಬರವ ಶೈಲಿಯ ಮೆಚ್ಚಲೇ ಬೇಕು.

    1. ಹರೇರಾಮ ಅಣ್ಣಾ, ನಿಂಗಳ ಮೆಚ್ಚುಗೆಗೆ ತುಂಬು ಹೃದಯದ ಧನ್ಯವಾದ..

  4. ಹರೇರಾಮ ಅಕ್ಕಾ, ಪುರಾಣ ಕತೆಯ ಹವ್ಯಕಲ್ಲಿ ಬರವ ಒಂದು ಪ್ರಯತ್ನ ಮಾಡಿದ್ದು. ನಿಂಗಳ ಮೆಚ್ಚುಗೆಗೆ ಧನ್ಯವಾದ

  5. ಪುರಾಣ ನಮ್ಮ ಭಾಷೇಲಿ ಓದಿದ್ದು ತುಂಬಾ ಖುಷಿ ಆತು…ಲಾಯ್ಕ ಇದ್ದು

    1. ಹರೇರಾಮ ಅಕ್ಕಾ, ಪುರಾಣ ಕತೆಯ ಹವ್ಯಕಲ್ಲಿ ಬರವ ಒಂದು ಪ್ರಯತ್ನ ಮಾಡಿದ್ದು. ನಿಂಗಳ ಮೆಚ್ಚುಗೆಗೆ ಧನ್ಯವಾದ

    2. ನಮ್ಮ ಭಾಷೆಲಿ ಬರದ ಪೌರಾಣಿಕ ಕತೆ…ಹೊಸ ಪ್ರಯತ್ನ. ಲಾಯಿಕಾಯಿದು ಪ್ರಸನ್ನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×