- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ತಮಸೋಮಾ ಜ್ಯೋತಿರ್ಗಮಯ
2015 ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಿತ ಕತೆ., ಲೇಖಕಿಃ ಶ್ರೀಮತಿ ಅದಿತಿ ಎಂ.ಎನ್. ಪುಣೆ.
“ಉಸ್ಸಪ್ಪಾ…..ಸಾಕಾಗಿ ಹೋತು ಎಂಥಾ ಬಿಸ್ಲು ದೇವರೇ.!.”
ಬಾಗಿಲ ಮೂಲೆಲಿ ಜೋಡು ಇರ್ಸಿ ಫ್ಯಾನ್ ಸುಚ್ಚು ಹಾಕಿ ಕುರ್ಶಿಲಿ ಬಂದು ಕೂತವು ಮಾಬ್ಲಣ್ಣ.
“ಛೆಕ್, ಕರೆಂಟು ಇಲ್ಲದ್ದೆ ಎಷ್ಟು ಹೊತ್ತಾತು ಪಾರ್ವತೀ?”
“ಕರೆಂಟು ಹೋಗಿ ಆತು ಗಂಟೆ ಎರಡು. ಬೀಸಾಳೆ ಕೊಡೆಕ್ಕಾ” ಹೇಳಿಕೊಂಡು ಪಾರ್ವತಿ ಒಂದು ಕೈಲಿ ಬೀಸಾಳೆಯನ್ನೂ ಮತ್ತೊಂದು ಕೈಲಿ ಎರಡು ಗ್ಲಾಸು ನಿಂಬೆಹುಳಿ ಸರ್ಬತ್ತಿನ ತಟ್ಟೆಯನ್ನೂ ಹಿಡುಕೊಂಡು ಬಂದು ನೋಡ್ತು, ಇವ್ವು ಒಬ್ಬರೇ. “ಅಂವ ಎಲ್ಲಿ?” ಕೇಳಿ ಅತ್ತ ಇತ್ತ ನೋಡಿತ್ತು.
“ಅಂವ ಬಂದ ಕೂಡ್ಲೇ ಹೋದ ಕೋಣೆಗೆ” ಸರ್ಬತ್ತಿನ ನೀರಿನ ಹಾಂಗೆ ದೊಂಡೆಗೆ ಹೊಯ್ದು ಶರ್ಟು ಬಿಚ್ಚಿ ವಸ್ತ್ರ ಮೇಲೆ ಕಟ್ಟಿ ಕಾಲು ತೊಳಿಲೆ ಅಬ್ಬಿಗೆ ಹೊರಟವು ಮಾಬ್ಲಣ್ಣ.
ಮಗಂಗೆ ಸರ್ಬತ್ತು ಕೊಟ್ಟು ಬಂದ ಪಾರ್ವತಿ ಅಬ್ಬಿಯ ಬಾಗಿಲಿಲಿ ನಿತ್ತು ಕೇಳಿತ್ತು “ಎಂತ ಹೇಳಿದ ಡಾಟ್ರ? ಇನ್ನು ಇಷ್ಟು ದಿನ ಮದ್ದು ತೆಕ್ಕೊಳೆಕ್ಕಡ?”
ಮೋರೆಯ ಚೆಂಡಿ ಹರ್ಕಿಲಿ ಉದ್ದಿಕೊಂಡು ಅಬ್ಬಿಂದ ಹೆರ ಬಂದ ಮಾಬ್ಲಣ್ಣ,
“ಇನ್ನೊಂದು ಆರು ತಿಂಗಳು ಮಾಡೆಕ್ಕಾಗಿ ಬಕ್ಕಡ. ತಕ್ಕ ಮಟ್ಟಿಗೆ ಗುಣ ಆಯ್ದು ಹೇಳಿದ. ಇದಾ ಬಿಸ್ಲಿಗೆ ಕಣ್ಣು ಬಾಡ್ತು ಚೂರು ಮನುಗುತ್ತೆ. ಊಟಕ್ಕೆ ಎರಡು ಗಂಟೆಗೆ ಎಬ್ಬುಸು ಸಾಕು” ಹೇಳಿ ಕೋಣೆ ಒಳ ಚಾಪೆ ಹಾಸಿಕೊಂಡವು.
“ಸದ್ಯ! ಡಾಟ್ರ ಅಷ್ಟು ಹೇಳಿದ ಅನ್ನೇ” ಹೇಳಿದ ಪಾರ್ವತಿ ‘ಮಗ ಮೊದಲಾಣ ಹಾಂಗೆ ಆದ್ರೆ ನೆಮ್ಮದಿ’ ಹೇಳಿ ಗ್ರೇಸಿಕೊಂಡು ಅಡಿಗೆ ಕೋಣೆಗೆ ಹೋತು.
ಪಾರ್ವತಿ ಮತ್ತು ಮಾಬ್ಲಣ್ಣ ದಂಪತಿ ಇಪ್ಪುದು ಪಂಜಳ ಹೇಳುವಲ್ಲಿ. ಪುತ್ತೂರು ಪೇಟೆಂದ ಒಂದು ನಾಕೈದು ಮೈಲು ಅಕ್ಕು. ಮಾಬ್ಲಣ್ಣ ಚಿನ್ನದಂಗಡಿಲಿ ಲೆಕ್ಕ ಬರಿವ ಕೆಲಸಲ್ಲಿದ್ದವು. ಮತ್ತೆ ಚೂರು ಕೃಷಿ ಭೂಮಿಯೂ ಇದ್ದು. ಹದಾ ಮಟ್ಟಿಲಿ ಅಧುನಿಕ ಸೌಲಭ್ಯಗ ಇಪ್ಪ ಸಣ್ಣ ಸ್ವಂತ ಮನೆಯೂ ಇದ್ದು. ಶ್ರೀಮಂತ ಅಲ್ಲದ್ರೂ ಕೊರತೆ ಇಲ್ಲೆ. ಇವ್ಕೆ ಒಬ್ಬನೇ ಮಗ ನವೀನ. ಪಾಠಲ್ಲಿಯೂ ಆಟೋಟಲ್ಲಿಯೂ ಮೊದಾಲಿಂದಲೂ ಭಾರೀ ಉಷಾರಿ. ಹಾಂಗೆ ಲಾಯ್ಕಲ್ಲಿ ಓದಿ ಇಂಜಿನಿಯರ್ ಆಯ್ದ. ಬೆಂಗಳೂರಿಲಿ ಒಂದು ದೊಡ್ಡ ಕಂಪನಿಲಿ ಕೆಲಸವೂ ಸಿಕ್ಕಿ ವರ್ಷ ಐದು ಆಯ್ದು. ಸಂಬಳವೂ ಒಳ್ಳೆತ ಇದ್ದು. ಇವಂಗೆ ಇನ್ನು ಕೂಸು ನೋಡಿ ಮದುವೆ ಮಾಡೆಕ್ಕೂಳಿ ಅಬ್ಬೆಪ್ಪನ ಯೋಚನೆ ಇತ್ತು. ಒಂದು ಮೂರು ತಿಂಗಳ ಹಿಂದೆ ಅಂವ ಮನೆಗೆ ಬಂದಿಪ್ಪಗ ಮದುವೆ ಈಗಳೇ ಬೇಡಲೇ ಬೇಡ ಹೇಳಿ ಭಯಂಕರ ಹಟ ಹಿಡುದು ಹೋಯ್ದ. ಈ ಸರ್ತಿ ಬಂದಿಪ್ಪಗ ಆದರೂ ಇವಂಗೆ ಮದುವೆ ಆಲೋಚನೆ ಬಗ್ಗೆ ಒಂದು ನಿರ್ಧಾರ ಮಾಡ್ಲೆ ಹೇಳೆಕ್ಕು ಹೇಳಿ ಗ್ರೇಸಿಕೊಂಡಿತ್ತಿದ್ದವು.
ಹಾಂಗೆ ಮಗ ಮನೆಗೆ ಬಂದಿಪ್ಪಗ, ಒಂದು ದಿನ ಇರುಳು ಊಟ ಎಲ್ಲಾ ಆಗಿಯಾದ ಮೇಲೆ ಮೆಲ್ಲುಗೆ ವಿಷಯ ಪ್ರಸ್ತಾಪ ಮಾಡಿದವು.
“ನವೀನ, ಇದಾ ನಿನಿಗೆ ಪ್ರಾಯ ೨೭ ಆತು. ಬೆಂಗಳೂರು ಪೇಟೆಲಿ ಇನ್ನು ಎಷ್ಟು ದಿನ ಒಬ್ಬನೇ ದಿನ ನೂಕುತ್ತೆ? ಒಂದು ಮದುವೇಳಿ ಆದರೆ ನಿನಿಗೂ ಒಳ್ಳೇದು ಇಲ್ಲಿ ಎಂಗೊಗೂ ನೆಮ್ಮದಿ”
“ಆನು ಅಂದೇ ಹೇಳಿದ್ದೆ ಎನಿಗೆ ಈಗಳೇ ಮದುವೆ ಬೇಡಾಳಿ. ಎನಿಗೆ ಎಂತ ಮಹಾ ಪ್ರಾಯ ಆದ್ದು? ಎನಿಗೆಂತ ಕಷ್ಟ ಇಲ್ಲೆ ಅಲ್ಲಿ”
“ಕೂಸು ಹುಡ್ಕಿ ಹೊಂದಾಣಿಕೆ ಎಲ್ಲ ಅಪ್ಪಗ ಇನ್ನೂ ಒಂದು ಆರು ತಿಂಗಳೋ ಒಂದು ವರ್ಷವೋ ಮುಂದೆ ಹೋವ್ತು. ಮೊನ್ನೆಯೇ ಆ ಶಂಕರಣ್ಣ ಸಿಕ್ಕಿ ಒಂದೆರಡು ಕೂಸುಗಳ ವಿವರ ಕೊಟ್ಟಿದ, ನಿನಿಗೆ ಹೊಂದಿಕೆ ಅಕ್ಕು ಕಾಣ್ತು, ಪಟ ನೋಡು ಒಂದು ಸರ್ತಿ, ಪಾರ್ವತೀ ಪೆಟ್ಟಿಗೆಲಿ ಇರ್ಸಿದ ಪಟ ತಾ ಇಲ್ಲಿ”
ಇನ್ನು ವಿಷಯ ಬಾಯಿ ಬಿಡದ್ರೆ ಮದುವೆ ಮಾಡಿಯೇ ಕಳುಸಿ ಬಿಡುಗು ಹೇಳಿ ನವೀನ ಬಾಂಬ್ ಸಿಡಿಸಿ ಬಿಟ್ಟ,
“ನೋಡಿ ಅಪ್ಪಾ, ಎನಿಗೆ ನಿಂಗ ಕೂಸು ಹುಡ್ಕುದು ಬೇಡ. ಆನೇ ಹುಡ್ಕಿಕೊಂಡಿದೆ. ಎಂಗಳ ಕಂಪನಿಲಿಯೇ ಕೆಲಸ ಮಾಡ್ತು. ಎಂಗ ಇಬ್ಬರೂ ಒಬ್ಬಕೊಬ್ಬನ ಇಷ್ಟ ಪಡ್ತ್ಯ. ಪ್ರೀತಿಸುತ್ಯ”
ಊಹೆಯೇ ಮಾಡದ್ದ ಸುದ್ದಿ ಕೇಳಿ ಕಣ್ಣು ನೀರು ಹಾಕಿಕೊಂಡು ಅಬ್ಬೆ ಕೇಳಿತ್ತು, “ಇದೆಂತ ಹೇಳುದು ನವೀನ ನೀನು? ಎಂಗ ಇಲ್ಲಿ ಇಲ್ಲ್ಯಾ ನಿನ್ನ ಪಾಲಿಗೆ? ಮದುವೆ ಆಯೆಕ್ಕು ಹೇಳಿ ಒಂದು ಮಾತು ಹೇಳಿದ್ದರೆ ಎಂಗಳೇ ಕೂಸಿನ ಈ ಮೊದಲೇ ನೋಡ್ತಿತ್ತನ್ನೇ”
“ನೋಡು ಅಮ್ಮ, ಜಾತಿ ಗೀತಿ ಎಲ್ಲ ಆನು ನೋಡ್ತಿಲ್ಲೆ, ಅದು ಯಾವ ಜಾತೀಳಿ ಎನಿಗೆ ಗೊತ್ತೂ ಇಲ್ಲೆ, ಅದು ಆಂಧ್ರದ ಕೂಸು. ಆನು ಮತ್ತು ಅದು ಈಗಾಗಲೇ ೨ ವರ್ಷಂದ ಲಿವಿನ್ ರಿಲೇಶನ್ ಶಿಪ್ ಲಿ ಇದ್ಯ.” ಮತ್ತೊಂದು ಬಾಂಬ್ ಬಿತ್ತು.
“ಎಂತದು ಮಾರಾಯ ಅದು, ಲಿವಿನ್ ಹೇಳಿದ್ರೆ?” ಆದಷ್ಟು ಮನಸಿನ ಹದಕ್ಕೆ ತಂದುಕೊಂಡು ತುಂಬಿದ ಕಣ್ಣಿಲಿ ಮಾಬ್ಲಣ್ಣ ಕೇಳಿದವು.
“ಮದುವೆ ಆಗದ್ದೆ ಗಂಡು ಹೆಣ್ಣು ಒಟ್ಟಿಗೇ ಒಂದೇ ಮನೇಲಿ ಗಂಡ ಹೆಂಡತಿಯ ಹಾಂಗೆಯೇ ಬದ್ಕುದಕ್ಕೆ ಲಿವಿನ್ ರಿಲೇಶನ್ ಶಿಪ್ ಹೇಳುದು. ಆನು ಮತ್ತು ಅದು ಹಾಂಗೆ ಇಪ್ಪುದು. ಎಂಗೊಗೆ ಮದುವೆಯ ಬಂಧ ಸಧ್ಯಕ್ಕೆ ಬೇಡ ಅಪ್ಪ. ಹಾಂಗೆಯೇ ಎಂಗ ಚೆಂದಕ್ಕೆ ಇದ್ಯ.”
ವಿವರಣೆ ಕೇಳಿ ಮಾಬ್ಲಣ್ಣನ ದುಃಖ ಕೋಪಕ್ಕೆ ತಿರುಗಿ ನಖಶಿಖಾಂತ ಏರಿತ್ತು.
“ಛೀ!! ಹೀಂಗೂ ಇದ್ದಾ? ಇಷ್ಟು ಕೊಳ್ಕಾಗಿ ಜೀವನ ಮಾಡದ್ರೆ ಎಂತ? ಎಂಗಳ ಮಗನಾಗಿ, ನೀನು ಹೀಂಗೆಲ್ಲ ಮಾಡುವೆ ಹೇಳಿ ಆನು ಗ್ರೇಸಿದ್ದಿಲ್ಲೆ. ಏನೋ ಹೇಳದ್ದೆ ಬೇರೆ ಜಾತಿಯ ಕೂಸಿನ ಕಟ್ಟಿಕೊಂಡಿದಾಳಿ ಗ್ರೇಸಿರೆ ಇವನದ್ದು ಕಥೆ ಬೇರೆಯೇ. ನೀನು ಈ ಕ್ಷಣವೇ ಅದರ ಮನೆಯಿಂದ ಹೆರ ಹೋಪ್ಲೆ ಹೇಳು. ಅದರ ಮರ್ತು ಬಿಡು. ಇಲ್ಯಣ ನಮ್ಮೋರ ಕೂಸಿನ ಮದುವೆ ಆಗಿ ಕರ್ಕೊಂಡು ಹೋಗು. ಇಲ್ಲದ್ರೆ ನಿನ್ನ ಪಾಲಿಗೆ ಅಬ್ಬೆಪ್ಪ ಇಲ್ಲೆ ಹೇಳಿ ಗ್ರೇಸಿಕೋ” ಹೇಳಿ ಮಾಬ್ಲಣ್ಣನೂ ದನಿ ಏರಿಸಿದವು.
“ನಿಂಗ ಹಳೇ ಕಾಲದವ್ವು ಅಪ್ಪ, ನಿಂಗೊಗೆ ಇದೆಲ್ಲ ಅರ್ಥ ಆಗ. ಎಂಗೊಗೆ ಒಬ್ಬಕ್ಕೊಬ್ಬನ ಮೇಲೆ ತುಂಬಾ ಪ್ರೀತಿ ಇದ್ದು. ಲಿವಿನ್ ರಿಲೇಶನ್ ಶಿಪ್ ಲಿ ಚೂರು ಸಮಯ ಕಳುದರೆ ಒಬ್ಬಕ್ಕೊಬ್ಬನ ಒಳ್ಳೆತ ಅರ್ಥ ಮಾಡಿಕೊಂಬ್ಲಾವ್ತು. ಇಬ್ರಿಗೂ ಒಳ್ಳೆ ಹೊಂದಾಣಿಕೆ ಆದ ಮೇಲೆ ಮದುವೆಯ ಬಗ್ಗೆ ಯೋಚನೆ ಮಾಡುದು ಹೇಳಿ ಎಂಗ ಇಬ್ರು ನಿರ್ಧಾರ ಮಾಡಿದ್ಯ. ಹಾಂಗಾಗಿ ಏನೇ ಆಗ್ಲಿ, ನಿಂಗ ಎಂತದೇ ಹೇಳಿ ಆನು ಅದರ ಬಿಡುಲೆ ತಯಾರಿಲ್ಲೆ, ಅಷ್ಟೆ.” ಹೇಳಿ ನವೀನ ಎದ್ದು ಹೋಗಿ ಹಾಸಿಗೆಲಿ ಉರುಳಿದ.
ಆದರೆ ಅವನ ಅಬ್ಬೆಪ್ಪಂಗೆ ಮಾತ್ರ ನಿದ್ದೆ ಕಣ್ಣಿಗೆ ಸುಳ್ದಿಲ್ಲೆ. ಇದು ಎಂತ ಆಗಿ ಹೋತೂಳಿ ಬೇಜಾರ ಮಾಡಿಕೊಂಡವು. ನಾಳೆ ಅವಂಗೆ ಸಮಾಧಾನಲ್ಲಿ ಬುದ್ಧಿವಾದ ಹೇಳೆಕ್ಕು, ಹೇಂಗಾದ್ರು ಮಾಡಿ ಸರಿ ದಾರಿಗೆ ತರೆಕ್ಕು, ಇಲ್ಲದ್ರೆ ಕಥೆ ಆಗ ಹೇಳುವ ನಿರ್ಧಾರ ಮಾಡಿದವು.
ಬೆಳ್ಗಪ್ಪಗ ಕಾಪಿ ಕುಡುದಾಗಿ ಮಾಬ್ಲಣ್ಣ ಮಗನ ಹತ್ರ ಕರುದು ಹೇಳಿದವು,
“ನೋಡು ನವೀನ, ಪೇಟೆಲಿ ನೀನು ಹೇಳಿದ ಕ್ರಮಲ್ಲಿ ಎಷ್ಟೂ ಇಕ್ಕು. ಆದರೆ ಇದೆಲ್ಲಾ ಒಳ್ಳೇದಲ್ಲ. ಪೋಕಾಲಕ್ಕೆ ಹೀಂಗೆ ವಿಪರೀತ ಬುದ್ಧಿ ಬಪ್ಪುದು. ಹೇಳುದು ಕೇಳು. ನಮ್ಮವರ ಕೂಸಿನ ಮದುವೆ ಆಗು, ಚೆಂದಕ್ಕೆ ಇರು. ಮದುವೆ ಆದರೆ ಆ ಸಂಬಂಧಲ್ಲಿ ಒಂದು ಬದ್ಧತೆ ಹೇಳುದು ಇರ್ತು. ಸುಲಾಬಲ್ಲಿ ಬಿಡ್ಲಾವ್ತಿಲ್ಲೆ. ಜವಾಬ್ದಾರಿ ಇರ್ತು. ಜೀವನ ಹೇಳಿರೆ ಸುಮ್ಮನೆ ಮಕ್ಕಳಾಟದ ಹಾಂಗೆ ಅಲ್ಲ. ಬದುಕಿನ ಹೇಸಿಗೆ ಮಾಡಿಕೊಂಬ್ಲಾಗ. ಈಗ ನಿನ್ನ ವಿಚಾರಲ್ಲಿ ನೀನು ಹೇಳಿದ ಹಾಂಗೆ ಇಬ್ರಿಗೂ ಹೊಂದಾಣಿಕೆ ಆವ್ತಿಲ್ಲೆ ಹೇಳಿ ಆದ್ರೆ ಎಂತ ಮಾಡ್ತೆ? ಅಥವ ಅದು ನಿನ್ನ ಬಿಟ್ಟು ಹೋದ್ರೆ?”
“ಹಾಂಗೆಲ್ಲ ಎನ್ನ ಬಿಟ್ಟು ಹೋಪ ಜನ ಅಲ್ಲ ಅದು. ಎಂಗ ಇಬ್ರೂ ಒಳ್ಳೆ ಹೊಂದಾಣಿಕೆಲಿ ಇದ್ಯ. ಆನು ಅದರ ಹತ್ರ ಈ ಸರ್ತಿ ಮದುವೆಯ ವಿಷಯ ಮಾತಾಡ್ತೆ. ಮದುವೇಳಿ ಆದರೆ ಅದನ್ನೇ. ಇದರ ಬಗ್ಗೆ ಆನು ಹೆಚ್ಚು ಚರ್ಚೆ ಮಾಡ್ತಿಲ್ಲೆ, ನಿರ್ಧಾರ ಮಾಡಿ ಆಯ್ದು” ಹೇಳಿ ಕಣ್ಣಿಗೆ ಕೈ ಹೆಟ್ಟಿದ ಹಾಂಗೆ ಹೇಳಿ ಕೋಣೆ ಒಳ ಹೋದ ನವೀನ.
ಯಾವುದೇ ತರದ ಮಾತಿಗೆ ಬಗ್ಗದ್ದ ಮಗನ ನೋಡಿ ಹೊಟ್ಟೆ ಬೆಂದು ಹೋತು ಅಬ್ಬೆಪ್ಪಂಗೆ.
“ನಾವೆಂತ ಮಾಡುದು ಹೀಂಗೆ ಹಟ ಹಿಡುದರೆ? ಪ್ರಾಯದ ಅಮಲಿಲಿ ದೊಡ್ದವ್ವು ಹೇಳಿದ್ದು ಕೆಮಿಗೆ ಕೇಳ್ತಿಲ್ಲೆ. ತಾನು ಮಾಡಿದ್ದೇ ಸರಿ ಹೇಳುವ ಭಾವನೆಲಿ ಅಂವ ಇದ್ದ. ಹಣೆಲಿ ಬರುದ ಹಾಂಗೆ ಆವ್ತು, ಆ ದೇವರೇ ಇವಂಗೆ ಬುದ್ಧಿ ಕೊಡೆಕ್ಕಷ್ಟೆ” ಹೇಳಿ ಮರುಗಿದವು ಮಾಬ್ಲಣ್ಣ ದಂಪತಿ.
ಇದೆಲ್ಲಾ ಆಗಿ ನವೀನ ಬೆಂಗಳೂರಿಗೆ ತಿರುಗಿ ಹೋಗಿ ಹದಾಕೆ ಆರು ತಿಂಗಳಾಗಿತ್ತು. ಒಂದು ದಿನ ಮಾಬ್ಲಣ್ಣ ತನ್ನ ಕೆಲಸ ಬಿಟ್ಟು ಭಾರೀ ಗಡಿಬಿಡಿಲಿ ಮನೆಗೆ ಓಡಿ ಬಂದು,
“ಪಾರ್ವತೀ ಆನು ಇಂದೇ ಇರುಳು ಬಸ್ಸಿಲಿ ಬೆಂಗಳೂರಿಗೆ ಹೋಯೆಕ್ಕು. ನವೀನನ ದೋಸ್ತಿ ಒಬ್ಬ ಎನ್ನ ಮೊಬೈಲಿಗೆ ಫೋನ್ ಮಾಡಿದ. ನವೀನಂಗೆ ಎಂತದೋ ಅಸೌಖ್ಯ, ಕೂಡಲೇ ಬನ್ನಿ ಹೇಳಿದ, ತನ್ನ ಎಡ್ರೆಸ್ ಕೊಟ್ಟಿದ, ಅವನ ಮನೆಲಿಯೇ ನವೀನ ಇದ್ದ ಅಡ.” ಹೇಳಿ ಎರಡು ದಿನಕ್ಕೆ ಬೇಕಪ್ಪ ವಸ್ತ್ರ ಮತ್ತು ಬಾಕಿ ಸಾಮಾನು ಜೋಡುಸುಲೆ ಸುರು ಮಾಡಿದ.
“ಎಂತಾತು ನವೀನಂಗೆ ಹೇಳಿ. ಎಂತಾರು ಮಾಡಿಕೊಂಡನ ಕಡೆಗೆ?” ಗಾಬರಿಲಿ ಕಣ್ಣುನೀರು ಹಾಕುಲೆ ಸುರು ಮಾಡಿತ್ತು ಪಾರ್ವತಿ.
“ಸುಮ್ಮನೆ ಎಂತ ಎಲ್ಲ ಗ್ರೇಸಿಕೊಂಡು ಕಣ್ಣುನೀರು ಹಾಕೆಡ. ಆನು ಹೋಗಿ ನೋಡಿಕೊಂಡು ಬತ್ತೆ. ಅಲ್ಲಿವರೆಗೆ ಚೂರು ಸಮಾಧಾನಲ್ಲಿ ಇರು. ನಿನ್ನ ಒಟ್ಟಿಗೆ ಮನುಗುಲೆ ಶಂಕರಣ್ಣನ ಮಗಳು ಇರುಳು ಬತ್ತು. ಆನು ಅವನ ಹತ್ರ ಮಾತಾಡಿದ್ದೆ.”
“ಆತು ಹೋಗಿ ಬನ್ನಿ, ಅವಂಗೆ ಕೆಟ್ಟದ್ದು ಆಗದ್ರೆ ಅಷ್ಟೇ ಸಾಕು” ದುಗುಡಲ್ಲಿ ಹೇಳಿದ ಪಾರ್ವತಿ ಮಗಂಗೆ ಎಂತ ಆಗದ್ದಿರಲಿ ಹೇಳಿ ಮನಸ್ಸಿಲಿ ಹರಕ್ಕೆ ಹೇಳಿಕೊಂಡತ್ತು. ಎಷ್ಟೇ ಆಗ್ಲಿ, ಮಗ ಅಲ್ದಾ? ಅವಂಗೆ ಅಸೌಖ್ಯ ಹೇಳಿ ಅಪ್ಪಗ ಎಲ್ಲ ಮರ್ತು ಮಗನ ಬಗ್ಗೆ ಮನಸು ಕಾಳಜಿ ಮಾಡಿತ್ತು.
ಮಾಬ್ಲಣ್ಣ ಬೆಂಗಳೂರಿಲಿ ಇಳಿವಾಗ ನವೀನನ ದೋಸ್ತಿ ಅಲ್ಲಿ ಮೊದಲೇ ಬಂದಿತ್ತಿದ್ದ. ತನ್ನ ಮನೆಗೆ ಕರ್ಕೊಂಡು ಹೋದ. ಅಲ್ಲಿ ಮಗನ ಅವಸ್ಥೆ ನೋಡಿ ಮಾಬ್ಲಣ್ಣ ಭಾರೀ ಸಂಕಟ ಪಟ್ಟ. ಗಡ್ಡ ಮೀಸೆ ಬಿಟ್ಟು ಸರಿ ತಲೆಯೂ ಬಾಚದ್ದೆ ಎಂತದೋ ಚಿಂತೆಲಿ ನವೀನ ಕಿಟಕಿ ಹೊಡೆ ನೋಡಿಕೊಂಡು ಕೂತಿದ. ತನ್ನ ಅಪ್ಪ ಬಂದದಾದ್ರೂ ಅವನ ಗಮನಕ್ಕೆ ಬಂತೋ ಇಲ್ಯೋ.
ನವೀನನ ದೋಸ್ತಿ ಎಲ್ಲಾ ವಿಷಯವ ವಿವರಿಸಿ ಹೇಳಿದ.
ನವೀನ ಕೆಲಸಕ್ಕೆ ಸೇರಿದ ಒಂದು ವರ್ಷಲ್ಲಿ ಆಂಧ್ರಂದ ಬಂದ ಕೂಸು ಇವನ ಆಫೀಸಿಗೆ ಹೊಸತ್ತಾಗಿ ಸೇರಿಕೊಂಡತ್ತು. ಉಮ್ಮ ಅದೆಂತಾ ಮೋಡಿಯೋ, ಇಂವ ಅದರ ಗೆಳೆತನ ಮಾಡಿದ ಸುರುವಿಂಗೆ. ಸಮಯ ಹೋದ ಹಾಂಗೆ ಒಟ್ಟೊಟ್ಟಿಗೆ ತಿರುಗುಲೆ ಸುರು ಮಾಡಿದವು. ಇಬ್ರುಸಾ ಖುಷಿಲಿ ಇತ್ತಿದ್ದವು. ಒಂದು ಮನೆಯನ್ನೂ ಮಾಡಿ ಇಬ್ರೂ ಒಟ್ಟಿಗೆ ಇಪ್ಲೆ ಸುರು ಮಾಡಿದವು. ಸಾಧಾರಣ ಎರಡು ವರ್ಷದ ಮೇಲಾತು ಹಾಂಗೆ ಒಟ್ಟಿಗೆ ಇಪ್ಪುದು. ಮೊದುಲಿಗೆ ಎಲ್ಲದೂ ಚೆಂದಕ್ಕೆ ಇತ್ತು, ಭಾರೀ ಅನ್ಯೋನ್ಯಲ್ಲಿ ಇತ್ತಿದ್ದವು. ಆಫಿಸಿಗೆ ಒಟ್ಟಿಗೇ ಬಪ್ಪುದು, ಒಟ್ಟಿಗೇ ಹೋಪುದು. ಮನೆ ಖರ್ಚಿನ ಹಂಚಿಕೊಂಡು ಇತ್ತಿದ್ದವು. ನವೀನ ಅದರ ತುಂಬಾ ಇಷ್ಟ ಪಟ್ಟುಕೊಂಡು ಇತ್ತಿದ್ದ.
ಈಗ ಮನೆಲಿ ಮದುವೆಯ ಪ್ರಸ್ತಾಪ ಬಂದಪ್ಪಗ ಅಂವ ಇಲ್ಲಿ ಬಂದು ಇದರ ಹತ್ರ ಮದುವೆಯ ವಿಷಯ ಹೇಳಿದ. ಆದರೆ ಅದು ಪೂರಾ ಉಲ್ಟಾ ಹೊಡುದತ್ತು. ‘ಆನು ನಿನಿಗೆ ಇನ್ನೊಂದು ಎರಡು ದಿನಲ್ಲಿ ವಿಷಯ ತಿಳುಸುವಾಳಿ ಇತ್ತಿದ್ದೆ. ಎನಿಗೆ ನಿನ್ನ ಗೆಳೆತನ ಸಾಕಾತು. ಎನಿಗೆ ನಿನ್ನ ಒಟ್ಟಿಗೆ ಪೂರಾ ಜೀವನ ಸಾಗುಸುಲೆ ಕಷ್ಟ ಆವ್ತು. ಮದುವೆಯ ಸುದ್ದಿ ಮರ್ತು, ಎನ್ನ ಪಾಡಿಗೆ ಎನ್ನ ಬಿಡು. ಮುಂದಿನ ವಾರ ಆನು ಮನೆ ಖಾಲಿ ಮಾಡ್ತೆ’ ಹೇಳಿತ್ತು. ಹಾಂಗೆ ಅದು ಇವನ ಬಿಟ್ಟು ಬೇರೆ ಹೋಯ್ದು. ಆದರೆ ನವೀನಂಗೆ ಅದರ ಬಿಡುವ ಮನಸಿಲ್ಲೆ. ಇಂವ ಎಷ್ಟೇ ದಮ್ಮಯ್ಯ ಹಾಕಿದ್ರೂ, ಕೇಳಿಕೊಂಡರೂ ಅದು ಬಿಟ್ಟು ಹೋಯ್ದು. ಕೆಲಸವನ್ನೂ ಬದಲಿಸಿದ್ದು. ಇಂವ ಒಬ್ಬಂಟಿ ಆಯ್ದ. ಆ ಮೇಲಿಂದ ಇಂವ ಆಫೀಸಿಲಿ ಸರಿ ಕೆಲಸವೂ ಮಾಡದ್ದೆ, ಊಟ ತಿಂಡಿಯೂ ಸರಿ ಮಾಡದ್ದೆ ಈ ಸ್ಥಿತಿಗೆ ಬಂದಿದ.
ಮೊದಲು ಒಳ್ಳೆ ಕೆಲಸ ಮಾಡಿಕೊಂಡಿದ್ದ ಕಾರಣ ಒಂದೇ ಪೆಟ್ಟಿಗೆ ಕೆಲ್ಸಂದ ತೆಗೆಯದ್ದೆ ಸಧ್ಯಕ್ಕೆ ಒಂದಾರು ತಿಂಗಳು ರಜೆ ತೆಕ್ಕೊಂಬಲೆ ಹೇಳಿದ್ದವು. ಇವನ ಇಲ್ಲಿ ಡಾಟ್ರನ ಹತ್ರಕ್ಕೆ ಕರ್ಕೊಂಡು ಹೋಪಾಳಿ ಹೇಳಿದ್ರೆ ಇಂವ ಹೊರಡುತ್ತಿಲ್ಲೆ. ಇಷ್ಟೆಲ್ಲಾ ರಾಮಾಯಣ ಆದ ಕಾರಣ ಈಗ ಸುದ್ದಿ ಮುಟ್ಟುಸಿದ್ದು.
ಮಗನ ಕಥೆ ಕೇಳಿ ಭಾರೀ ದುಃಖ ಆತು. ಆ ದುಃಖಲ್ಲೇ ಮಗನ ಊರಿಗೆ ಕರ್ಕೊಂಡು ಬಂದವು. ಇಲ್ಲಿಯೂ ಸುರುವಿಗೆ ಡಾಟ್ರನ ಹತ್ರ ಹೋಪುಲೆ ಒಪ್ಪಿದ್ದಿಲ್ಲೆ. ಅಬ್ಬೆಪ್ಪ ಸತತ ಪ್ರಯತ್ನ ಮಾಡಿ ಮದ್ದು ಮಾಡ್ಲೆ ಅವನ ಮನ ಒಲುಸಿದವು. ಹಾಂಗೆ ಮಂಗಳೂರು ಪೇಟೆಲಿ ಡಾಟ್ರನ ಹತ್ರ ತೋರಿಸಿಯೂ ಆತು. ಡಿಪ್ರೆಶನ್ ಆಯ್ದು ಹೇಳಿ ಮಾತ್ರೆ ಮದ್ದು ಉಪಚಾರ ಮಾಡಿ ಈಗ ಚೂರು ಸರಿ ದಾರಿಗೆ ಬಂದಿದ. ಇನ್ನು ಆರು ತಿಂಗಳಿಲಿ ಪೂರ್ತಿ ಸರಿ ಅಕ್ಕು ಹೇಳಿದ್ದ ಡಾಟ್ರ.
ಆರು ತಿಂಗಳ ಮತ್ತೆ
“ಎಂತ ನವೀನ ಆಫಿಸಿನವ್ಕೆ ಫೋನ್ ಮಾಡಿದ್ಯಾ? ಕೆಲಸಕ್ಕೆ ಪುನಾ ಯಾವಾಗ ಬತ್ತೆ ಹೇಳಿದ್ದೆ?”
“ಆನು ಮುಂದಿನ ವಾರಂದ ಪುನಾ ಬತ್ತೆ ಹೇಳಿದ್ದೆ ಅಪ್ಪ”
“ಆಗಲಿ, ಹಳತ್ತರ ತಲೆಲಿ ನೆಂಪು ಮಾಡಿಕೊಂಡು ಕೊರಗೆಡ. ಲಾಯ್ಕಲ್ಲಿ ಕೆಲಸ ಮಾಡು, ಆರೋಗ್ಯ ನೋಡಿಕೋ.”
“ಆತು ಅಪ್ಪ.” ಹೇಳಿದ ನವೀನ ಮಾತು ಮುಂದುವರಿಸಿದ,
ಇನ್ನೊಂದು ಮಾತು ಅಪ್ಪ, ಆನೀಗ ಬೆಂಗಳೂರಿಗೆ ಹೋಗಿ ಒಂದು ಮೂರು ತಿಂಗಳು ಕೆಲಸಕ್ಕೆ ಹೊಂದಿಕೊಳ್ತೆ. ಮತ್ತೆ ನಿಂಗಳೇ ಒಂದು ಕೂಸು ಹುಡ್ಕಿ. ಆ ಕೂಸಿನ ಮದುವೆಯಾಗಿ ಒಟ್ಟಿಗೆ ಚೆಂದಲ್ಲಿ ಇರ್ತೆ.” ಹೇಳಿ ತಲೆ ತಗ್ಗಿಸಿದ ನವೀನ.
“ಆಗಲಿ. ಮನುಷ್ಯ ತಪ್ಪು ಮಾಡುದು ಸಹಜ. ಆದರೆ ಅದರ ತಿದ್ದಿಕೊಂಡು ನಡಿಯುದು ದೊಡ್ಡದು” ಹೇಳಿದ ಮಾಬ್ಲಣ್ಣ ಪ್ರೀತಿಲಿ ಮಗನ ತಲೆ ಸವರಿದ.
******
{ಕಳುಹಿಸಿದವರು, ವಿಜಯಾಸುಬ್ರಹ್ಮಣ್ಯ,ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾಸ್ಪರ್ಧೆ}
Super…
ಅದಿತಿ…, ಕಥೆಯ ಥೀಮ್ ಲಾಯಕಿದ್ದು. ಹೆಚ್ಚು ಉದ್ದ ಎಳೆಯದ್ದೆ short & sweet ಆಗಿ ಹೇಳಿದ ರೀತಿಯೂ ಇಷ್ಟ ಆತು. keep it up.
ಇಂದ್ರಾಣ ಸಾಮಾಜಿಕ ಜೀವನಶೈಲಿ, ಅದರ ಹಿಂದಿಪ್ಪ ಸಮಸ್ಯೆಯ, ಕಥೆಯ ಮೂಲಕ ನಿರೂಪಿಸಿದ ಅದಿತಿಯಕ್ಕಂಗೆ ಅಭಿನಂದನೆ . ಪಂಜ ,ಚೊಕ್ಕಾಡಿಯ ಭಾಷೆಯ ಇನ್ನೂ ಗಟ್ಟಿಯಾಗಿ ಬರವ ಶಕ್ತಿ ನಿಂಗೊಗೆ ಇದ್ದು ಹೇಳ್ತದು ಸ್ಪಷ್ಟ , ಬರೆಯಿ – ಭಾಷೆಯ ಬೆಳೆಸಿ .
ಎಲ್ಲವಕ್ಕೂ ಧನ್ಯವಾದಗ 🙂
ಕಡೇಂಗಾದರುದೆ ಬುದ್ದಿ ಬಂತಾನೆ ಮಾಣಿಗೆ. ಜವ್ವನಿಗರ ಕಣ್ಣು ತೆರಶುವ ಕಥೆ. ಅಭಿನಂದನೆಗೊ ಬರದ ಅದಿತಿಯಕ್ಕಂಗೆ.
ಕಥಾ ಸ್ಪರ್ದೆಗೆ ಬಂದ ಎಲ್ಲ ಕಥೆಗಳನ್ನು ಇಲ್ಲಿ ಪ್ರಕಟಿಸಿ
ಲಾಯ್ಕಿದ್ದು ಕಥೆ …ಬಹುಮಾನ ಗಿಟ್ಟಿಸಿಕೊಂಡ ಅದಿತಿಗೆ ಅಭಿನಂದನೆಗೊ .
ಒಳ್ಳೆ ಕಥೆ.ಬಹುಮಾನ ಪಡದ ಅದಿತಿಗೂ ,ಕಥೆ ಹಾಕಿದ ವಿಜಯಕ್ಕ೦ಗೂ ಅಭಿನ೦ದನೆ ,ಧನ್ಯವಾದ೦ಗೊ .