Oppanna.com

ರೇಡಿಯಲ್ಲಿ ಒಂದು ಕವನವಾಚನ

ಬರದೋರು :   ಶರ್ಮಪ್ಪಚ್ಚಿ    on   08/12/2018    0 ಒಪ್ಪಂಗೊ

ರೇಡಿಯಲ್ಲಿ ಒಂದು ಕವನವಾಚನ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ

“ಆಕಾಶವಾಣಿ, ಮಂಗಳೂರು ಇದೀಗ ಶ್ರೀ…… ಇವರಿಂದ ಸ್ವ ರಚಿತ ಕವನಗಳ ವಾಚನ” ಹೀಂಗೆ ರೇಡಿಯಲ್ಲಿ ಬಪ್ಪದರ ನಾವೆಲ್ಲ ಕೇಳ್ತು.

ಕವನ ಇಷ್ಟ ಇಪ್ಪವಾದರೆ ಸುರುವಿಂದ ಅಕೇರಿ ವರೆಗೂ ಕೇಳಿಂಡು ಕೂರ್ತವು. ಕೆಲವು ಜನ ಕೂಡ್ಲೇ ರೇಡಿಯೋದ ಕೆಮಿ ತಿರ್ಪಿ ನಿಲ್ಸಿಕ್ಕಿ ” ಹರಟೆ ಆರಿಂಗೆ ಬೇಕಿದು” ಹೇಳಿ ಎದ್ದಿಕ್ಕಿ ಹೋವ್ತವು. ಕವನ ವಾಚನ ಮಾಡುವವು ನಮ್ಮ ನೆಂಟ್ರೋ, ಗುರ್ತದವೋ ಆದರೆ ರೇಡಿಯೋದ ಬುಡಲ್ಲಿ ಕೂದು ಕೇಳುವ ಕ್ರಮವೂ ಇದ್ದು.

ಇದು ಎಲ್ಲೋರಿಂಗೂ ಗೊಂತಿದ್ದು. ಇನ್ನು ಪುನಃ ಹೇಳ್ಲೆಂತಯಿದ್ದು ಹೇಳಿ ಗ್ರೇಶೆಡಿ.ಆನೀಗ ಹೇಳುವ ವಿಷಯ ಈಗಾಣದ್ದಲ್ಲ.ಕೆಲವು ವರ್ಷ ಮದ್ಲಾಣದ್ದು.ಕೆಲವು ಹೇಳಿರೆ ಒಂದೂ….ಹತ್ತಿಪ್ಪತೈದು ವರ್ಷ ಹಿಂದಾಣ ಒಂದು ಕವನ ವಾಚನದ ಕಥೆ. ಅದೂದೆ ರೇಡಿಯಲ್ಲಿ..!!!!!

ಆನು ಹೈಸ್ಕೂಲ್ ಗೆ ಹೋಪ ಸಮಯ ಅದು.ಅಂಬಗ ಎಂಗಳ ಊರಿಲ್ಲಿ ತಿಮ್ಮಕ್ಕಜ್ಜಿಯ ಗೊಂತಿಲ್ಲದ್ದವು ಆರೂ ಇಲ್ಲೆ.ಒಳ್ಳೆ ಮನಸಿನ ಹೆಮ್ಮಕ್ಕೊ.ಆರಿಂಗೆ ಏವಗ ಬೇಕಾರೂ ಸಕಾಯಕ್ಕೆ ಬಕ್ಕು. ಮನಸಿಂಗೆ ಕಂಡದರ ಟಪ್ಪನೆ ಎದುರಂದಲೇ ಹೇಳುದು ಅವರ ಒಂದು ಅಭ್ಯಾಸ.

“ನಮಗೆ ಕಂಡದರ,ಅವು ಮಾಡಿದ್ದರ ಅಲ್ಲದೋ ಹೇಳುದು.ಬೇರೆಂತ ಅಲ್ಲನ್ನೇ….” ಆರಾರು ಎಂತಕಜ್ಜೀ ಹಾಂಗೆ ಕಣ್ಣಿಂಗೆ ಕೈ ಹಾಕಿದಾಂಗೆ ಹೇಳುದು ಕೇಳಿರೆ ಅವರ ಉತ್ತರ ಇದು.

ಎಂಗಳ ಮನೆ ಹತ್ತರೆ ಅವರ ಮನೆ ಆದ ಕಾರಣ ಎಂಗೊಗೆಲ್ಲ ತಿಮ್ಮಕ್ಕಜ್ಜಿ ಹೇಳಿರೆ ಭಾರೀ ಪ್ರೀತಿ. ಒಟ್ಟಿಂಗೆ ಅವರ ಕುಶಾಲು ಮಾಡ್ಲೂ ಲಾಯ್ಕ ಆಗಿಂಡಿತ್ತು.

ಅಜ್ಜಿಗೊಂದು ಮಗಳು. ಆ ಮಗಳಿಂಗೂ ಒಂದು ಮಗಳು ‌.ಅಜ್ಜಿ ಏವಗಲೂ ಹೇಳುದು ಅಜ್ಜಿಯ ಮಗಳ ವಿಷಯ ಅಲ್ಲ.ಮಗಳ ಮಗಳ ವಿಶಯ. ಅದು ಕಲಿವಲೆ ಭಾರೀ ಉಶಾರಿನ ಕೂಸು.ಕಾಂಬಲೂ ಚೆಂದ ಇದ್ದು.

ಕನ್ನಡ ಬಿ.ಎ.ಲಿ ಫಸ್ಟು ರೇಂಕುದೆ ಸಿಕ್ಕಿತ್ತು ಅಜ್ಜಿ ಪುಳ್ಳಿಗೆ. ಹಳೇ ಕಾಲ ಆದ ಕಾರಣ ಆದಷ್ಟು ಬೇಗ ಪುಳ್ಳಿಗೆ ಮದುವೆ ಮಾಡ್ಸೆಕು ಹೇಳಿ ಅಜ್ಜಿಯ ಆಶೆ.ಅಂದರೂ ಅಳಿಯನತ್ರೆ ಹೇಳುಗ ಮಗನತ್ರೆ ಹೇಳಿದಾಂಗೆ ಹೇಳ್ಲಾವ್ತೋ..!!

ಅಂದರೂ ಅಜ್ಜಿ ಮಗಳ ಮನಗೆ ಹೋಗಿ ನಾಕು ದಿನ ನಿಂದು ಪುಳ್ಳಿಗೆ ಆದಷ್ಟು ಬೇಗ ಮದುವೆ ಮಾಡ್ಸೆಕು ಹೇಳಿ ಅಳಿಯನ ಒಪ್ಪುಸಿಕ್ಕಿ ಬಂದವು.

ಹಾಂಗಾಗಿ ಎರಡು ತಿಂಗಳಾಯೆಕಾರೆ ಪುಳ್ಳಿಗೆ ಮದುವೆ ನಿಗಂಟಾತು.ಮಾಣಿಗೆ  ಕನ್ನಡ ಎಂ.ಎ.ಆಯಿದಾಡ.ಅವ ಕೋಲೇಜಿನ ಮಕ್ಕೊಗೆ ಪಾಠ ಮಾಡುದಾಡ ,ಅಷ್ಟು ಮಾತ್ರ ಅಲ್ಲ ಅಂವ ಪದ್ಯ ಬರೆತ್ತಾಡ…..”

ಊರಿಲ್ಲೆಲ್ಲ ಹೆಚ್ಚು ಪ್ರಚಾರ ಸಿಕ್ಕಿದ್ದದು ಈ ಅಕೇರಿಯಾಣ ಶುದ್ದಿಗೆ.”ಮಾಣಿ ಪದ್ಯ ಬರೆತ್ತ” ಹೇಳಿರೆ ಅದೆಂತ ಸಾಮಾನ್ಯವೋ..!!

ಕತೆ ಬರವವು ಆದರೆ ಅಪರೂಪಕ್ಕೆ ಕೆಲವು ಜನರ ನೆಂಟ್ರ ಪೈಕಿಲಿ ಇದ್ದವು.ಈ ಪದ್ಯ ಬರವವು  ಮಾತ್ರ ಭಾರೀ ಹೊಸತ್ತು..

” ಕತೆ ಬರವ ಹಾಂಗೆ ಸುಲಭಲ್ಲಾಡ ಪದ್ಯ ಬರವದು.ಅದಕ್ಕೆ ಬೇಕಾದ ಹಾಂಗಿದ್ದ ಶಬ್ದ ಸಿಕ್ಕೆಕು.ಅದರ ಅರ್ಥವೂ ಸರಿಯಾಗಿ ಸೇರಿ ಬರೆಕು.ಪುರಂದರ ದಾಸ ಎಲ್ಲ ಬರದ್ದದು ಗೊಂತಿಲ್ಯೋ..ಹಾಂಗಿದ್ದದು ಈ ಪದ್ಯ ಹೇಳಿರೆ…..”ತಿಮ್ಮಕ್ಕಜ್ಜಿ ಪುಳ್ಳಿಯ ಮದುವೆ ಅಪ್ಪ ಮಾಣಿಯ ಹೊಗಳುಗ ಎಂಗಳ ಹಾಂಗಿದ್ದ ಮಕ್ಕೊ ಅಜ್ಜಿಯ ಎದುರು ಬಟ್ಲು ಬಾಯಿ ಮಂಗನ ಹಾಂಗೆ ಬಾಯಿ ಬಿಟ್ಟು ಕೊಂಡು ಕೂದು ಕೇಳಿಂಡಿತ್ತಿದ್ದೆಯ.

ರಜಾ ಹೆಚ್ಚು ಓದುವ ಮರ್ಲಿಪ್ಪ ಎನಗಂತೂ ಅಜ್ಜಿಯ ಮಗಳ ಅಳಿಯ ಅಪ್ಪವ ಒಬ್ಬ ಮಹಾನ್ ವ್ಯಕ್ತಿ ಹೇಳಿ ಆತು.ಹಾಂಗಾಗಿಯೇ ಅವರ ಬದ್ದದ ಹೇಳಿಕೆ ಬಂದಪ್ಪಗ ಆನುದೆ ಓಂಗಿಯೊಂಡು ಹೋದೆ.

ಪದ್ಯ ಬರವವ ಹೇಳಿ ಹೆಚ್ಚು ವಿಶೇಶ ಎಂತದೂ ಕಂಡಿದಿಲ್ಲೆ ಎನಗೆ ಮದಿಮ್ಮಾಯನ  ಮೋರೆಲಿ.

ಕೂಸಿನ ಪೈಕಿಯವಕ್ಕೆಲ್ಲ ಪದ್ಯ ಬರವವ ಹೇಳುದೇ ರಜ ಪೋರ್ಸಿನ ಸಮಾಚಾರ ಆತು.ಎಲ್ಲೋರಿಂಗೂ ಮದಿಮ್ಮಾಯನ ಒಂದರಿ ನೋಡುವ ಆಶೆ.ಪದ್ಯ ಬರವವ ಹೇಂಗೆ ಮಾತಾಡ್ತ ಹೇಳುವ ಕುತೂಹಲ.

ಬದ್ದದ ದಿನವೇ ಎಂಗೊಗೆಲ್ಲ ಒಂದು ವಿಶೇಶ ಶುದ್ದಿ ಗೊಂತಾತು. ಅದೆಂತರ ಗೊಂತಿದ್ದಾ…. ‌
ಮದಿಮ್ಮಾಯ ರೇಡಿಯಲ್ಲಿ ಪದ್ಯ ಹೇಳ್ತಾಡ.

ಬದ್ದದ ಮರದಿನವೇ ಹೋಪದಾಡ.ಕೊಡೆಯಾಲಲ್ಲಿ ಮಂಗಳೂರು ಆಕಾಶವಾಣಿ ಇದ್ದಲ್ಲದಾ?ಅಲ್ಲಿಗೆ ಹೋಗಿ ಅವ ಬರದ ಪದ್ಯಂಗಳ ಅವನೇ ಓದುದಾಡ.

ಎಲ್ಲರಿಂಗೂ ಇದೂದೆ ದೊಡ್ಡ ವಿಶಯವೇ ಅಲ್ಲದೋ..ಅಂಬಗ ಹೆಚ್ಚಿನವರ ಮನೆಲೂ ರೇಡಿಯೋ ಇದ್ದು.ಅದರ್ಲಿ ಬುಧವಾರ ಬಪ್ಪ ತಾಳಮದ್ದಳೆಯ ಒಂದು ದಿನವೂ ತಪ್ಪುಸದ್ದೆ ಕೇಳುಗು ಹೆಚ್ಚಿನ ಮನೆಯವುದೆ.

ಆದರೆ ಈ ಕವನವಾಚನ ಹೇಳುವ ಕಾರ್ಯಕ್ರಮ ಕೇಳಿದವು ಕಮ್ಮಿ. ಅದು ಎಂಟು ಗಂಟಗೆ ಆದ ಕಾರಣ ಇಪ್ಪಲೂ ಸಾಕು.ಅಷ್ಟೊತ್ತಿಂಗೆ ಹೆಚ್ಚಾಗಿ ಉಂಬ ಹೊತ್ತು ಆಗಿರ್ತು.ಅಲ್ಲದ್ರೆ ಬೇರೆಂತಾರು ಶಾಲೆ ಮಕ್ಕೊ ಓದುವ ಹೊತ್ತು ಹೇಳಿಯೋ ಎಂತೋ ಗೊಂತಿಲ್ಲೆ. ಆ ಹೊತ್ತಿಲ್ಲಿ ರೇಡಿಯೋ ಮುಟ್ಟುದು ಕಮ್ಮಿ.

ಮದಿಮ್ಮಾಯನ ಪದ್ಯ ಇಪ್ಪಗ ಕೇಳದ್ದಿಪ್ಪದೇಂಗೆ?ಸಾಲದ್ದಕ್ಕೆ ತಿಮ್ಮಕ್ಕಜ್ಜಿ ಊರಿಡೀ ಇದೇ ಶುದ್ದಿ ಹೇಳಿಂಡು ಬಂದ ಕಾರಣ ಎಲ್ಲರಿಂಗೂ ಅವ ಬರದ ಪದ್ಯವ ಕೇಳುವ ಆಶೆ.

ಇಂಥಹ ದಿನ ಪದ್ಯ ಬಪ್ಪದು ಹೇಳಿ ಗೊಂತಾತು. ಅವ ಹೇಳುವ ಪದ್ಯಕ್ಕೆ “ಸ್ವ ರಚಿತ ಕವನವಾಚನ ” ಹೇಳುದಾಡ ಹೇಳಿ ತಿಮ್ಮಕ್ಕಜ್ಜಿ ಎಂಗಳಲ್ಲಿಗೆ ಬಂದಿಪ್ಪಗ ಎನ್ನ ಅಜ್ಜಿ ಹತ್ರೆಯೂ ಹೇಳುದು ಕೇಳಿದ್ದೆ ಆನು.

ಆ ಒಳ್ಳೆ ದಿನ ಓಡಿ ಬಂತಿದಾ..ಗ್ರಹಚಾರಕ್ಕೆ ಆ ದಿನ ತಿಮ್ಮಕ್ಕಜ್ಜಿ ಮನೆಯ ರೇಡಿಯ ಮಾತಾಡ್ತಿಲ್ಲೇಡ.ಅದಕ್ಕೆ ಬಡುದು,ಹೆಟ್ಟಿ ಎಲ್ಲ ನೋಡಿರೂ ಕೊಂಯೀ….” ಹೇಳುವ ಒಂದು ಶಬ್ದ ಮಾತ್ರ ಬಪ್ಪದು ಕಂಡು ಅಜ್ಜಿಗೆ ಭಯಂಕರ ಬೇಜಾರಾತು.

ತೋಟಕ್ಕೆ ಅಡಕೆ ಹೆರ್ಕಲೆ ಬಂದ ತಿಮ್ಮಕ್ಕಜ್ಜಿ ಎಂಗಳಲ್ಲಿಗೆ ಬಂದು ಈ ವಿಶಯ ಹೇಳಿಯಪ್ಪಗ ಎನ್ನ ದೊಡ್ಡಪ್ಪ ಹೇಳಿದವು
“ನಿಂಗೊ ಇಲ್ಲಿಗೆ ಬನ್ನೀ ಅತ್ತೇ..ನಾವೆಲ್ಲ ಒಟ್ಟಿಂಗೆ ಕೂದು ಕೇಳುವ”

ಅಜ್ಜಿಗೆ ಭಾರೀ ಕೊಶಿಯಾತು.ಎನ್ನ ಅಜ್ಜಿಯುದೆ ಇದ್ದವನ್ನೇ ಅವಕ್ಕೆ ಪಟ್ಟಾಂಗಕ್ಕೆ.
” ಅಕ್ಕು ಒಪ್ಪಕುಞಿ(ಎನ್ನ ದೊಡ್ಡಪ್ಪನ ಎಲ್ಲೋರೂ ದಿನಿಗೇಳುದೇ ಹಾಂಗೆ) ಇರುಳು ಉಂಡಿಕ್ಕಿ ಬತ್ತೆ” ಹೇಳಿದವು.

“ಇಲ್ಲಿ ಉಂಬಲಕ್ಕಜ್ಜೀ..” ಎಂಗಳೂ ಒತ್ತಾಯ ಮಾಡಿದೆಯ.ಅಜ್ಜಿ ಒಪ್ಪಿದವು.

ಎಂಟು ಗಂಟೆ ಅಪ್ಪಗ ಎಂಗಳ ಮನೆಯವೆಲ್ಲ ರೇಡಿಯದ ಹತ್ತರೆ ಬಂದು ಕೂದಾತು.ತಿಮ್ಮಕ್ಕಜ್ಜಿಯೂ ಎಲೆ ಅಡಕೆ ಬಾಯಿಗೆ ಹಾಕಿಂಡು ಆ ರೇಡಿಯೋ ಹೇಳುವ ಸಣ್ಣ ಪೆಟ್ಟಿಗೆ ಮುಂದೆ ಎನ್ನ ಅಜ್ಜಿ ಹತ್ತರೇ ಕೂಯಿದವು.ಪುಳ್ಳಿಯ ಮದುವೆ ಅಪ್ಪ ಮಾಣಿಯ ಪದ್ಯ ಕೇಳುದಲ್ಲದೋ…..

ಎಂಗೊ ಎಲ್ಲ ಕೂದೊಂಡಿದ್ದ ಹಾಂಗೇ ರೇಡಿಯದ ಹೆಣ್ಣು

” ಇದು ಆಕಾಶವಾಣಿ ಮಂಗಳೂರು..ಈಗ ಶ್ರೀ…… ಇವರಿಂದ ಸ್ವ ರಚಿತ ಕವನಗಳ ವಾಚನ” ಹೇಳಿಯಪ್ಪಗ ಅಜ್ಜಿ ರಜ ಕೈ ಕಾಲು ಬಿಡ್ಸಿ ಸರ್ತ ಕೂದವು.ಪದ್ಯ ಕೇಳ್ಲೆ.ಎಂಗಳೂ ಹಾಂಗೇ.ತಿಮ್ಮಕ್ಕಜ್ಜಿ ಹಾಂಗಲ್ಲದ್ರೂ ಪದ್ಯ ಕೇಳ್ಲೆ ಕೆಮಿ ಕುತ್ತ ಮಾಡಿ ಕೂದುಕೊಂಡೆಯೊ.

ಅಷ್ಟಪ್ಪಗ ಅದಾ ಬಂತದಾ..ಮದಿಮ್ಮಾಯನದ್ದೇ ಸ್ವರ.ರೇಡಿಯೋದ ಒಳಾಂದ.

ಕವನದ ಶೀರ್ಷಿಕೆ 
” ಅವಳು ನನ್ನನ್ನೇ ನೋಡುತ್ತಾಳೆ”

ಆ ಹೆಸರು ಕೇಳಿಯಪ್ಪಗ ಅಜ್ಜಿಯ ಮೋರೆಯ ಬಣ್ಣ ರಜಾ ಬದಲಿದಾಂಗೆ ಕಂಡತ್ತು.

ಒಟ್ಟಿಂಗೆ ಪದ್ಯ ಸುರುವಾತು.

“ನೋಡುತ್ತಾಳೆ ನೋಡುತ್ತಾಳೆ
ಅವಳು ನನ್ನನ್ನೇ ನೋಡುತ್ತಾಳೆ

ಮುಡಿಗೆ ಮಲ್ಲಿಗೆ ಮುಡಿದ
ಅವಳು ನನ್ನನ್ನೇ ನೋಡುತ್ತಾಳೆ

ಹವಳದ ತುಟಿಯರಳಿಸಿ ನಕ್ಕು
ಅವಳು ನನ್ನನ್ನೇ ನೋಡುತ್ತಾಳೆ

ಕೆಂಪು ಸೀರೆಯುಟ್ಟ ಚೆಲುವೆ
ಅವಳು ನನ್ನನ್ನೇ ನೋಡುತ್ತಾಳೆ

ಹಸಿರು ಬಳೆಗಳ ಕುಣಿಸುತಲಿ
ಅವಳು ನನ್ನನ್ನೇ ನೋಡುತ್ತಾಳೆ

ಕಾಲ್ಗೆಜ್ಜೆಯ ದನಿ ಹೊಮ್ಮಿಸಿ
ಅವಳು ನನ್ನನ್ನೇ ನೋಡುತ್ತಾಳೆ

ನೋಡುತ್ತಾಳೆ ನೋಡುತ್ತಾಳೆ
ಅವಳು ನನ್ನನ್ನೇ ನೋಡುತ್ತಾಳೆ…..”

ತಿಮ್ಮಕ್ಕಜ್ಜಿ ಕೂದಲ್ಲಿಂದ ರಪಕ್ಕ ಎದ್ದು ನಿಂದು “ಸಾಕು ಈ ರೇಡಿಯ ಇನ್ನು ಆರೂ ಕೇಳೆಕೂಳಿಲ್ಲೆ” ಹೇಳಿ ಅದರ ಕೆಮಿ ತಿರ್ಪಿ ನಿಲ್ಸಿಕ್ಕಿ

“ಅವಳು ನನ್ನನ್ನೇ ನೋಡುತ್ತಾಳಾಡ..ಇದೆಂತರ ಪದ್ಯವಾ?ಇದರ ಹೇಳ್ಲೆ ಅವ ರೇಡಿಯಕ್ಕೆ ಹೋಯೆಕಾತ.ಎನ್ನ ಪುಳ್ಳಿ ಅವನ ನೋಡಿಕ್ಕು.ಅಂದರೂ ಅವ ಹೀಂಗೆ ನಾಚಿಕೆಗೆಟ್ಟವರ ಹಾಂಗೆ ಅಲ್ಲಿ ಹೋಗಿ ಹೇಳಿದನ್ನೇ.ಇವಂಗೆಂತ ಪೋಕಾಲ ಬಯಿಂದೂಳಿ….
ಪದ್ಯ ಬರವಲೆ ಅರಡಿಯದ್ರೆ ತಳೀಯದ್ದೆ ಮನೆಲಿ ಕೂದರಾತು.ಹೀಂಗೆ ರೇಡಿಯಲ್ಲಿ ಹೇಳಿಕ್ಕಿ ಬಪ್ಪ ಅಗತ್ಯ ಇದ್ದತ್ತಾ?
ಇದೀಗ ಊರಿಡೀ ಗೊಂತಪ್ಪದು ಬೇಡಾಳಿ ಆನು ರೇಡಿಯ ನಿಲ್ಸಿದ್ದು”  ಮೋರೆ ಎಲ್ಲ ಕೆಂಪು ಕೆಂಪು ಮಾಡಿ ಕಣ್ಣು ದೊಡ್ಡ ಮಾಡಿ ಅಜ್ಜಿ ದೊಡ್ಡಕೆ ಹೇಳುಗ ಎಂಗಳ ರೇಡಿಯೋ ನಿಲ್ಸಿರೆ ಎಂಗೊಗೆ ಮಾತ್ರ ಕೇಳದ್ದಿಪ್ಪದು ಹೇಳಿ ಪಾಪದ ಅಜ್ಜಿಗೆ ಗೊಂತೇ ಇತ್ತಿದ್ದಿಲ್ಲೆ ಕಾಣ್ತು.

ಎನ್ನ ಅಜ್ಜಿ, ದೊಡ್ಡಪ್ಪ,ಎನ್ನ ಅಬ್ಬೆ ಎಲ್ಲ ಎಷ್ಟು ಸಮಧಾನ ಮಾಡಿರೂ ಅಜ್ಜಿಗದು ಹಿತ ಆಯಿದೇ ಇಲ್ಲೆ.

“ಬದ್ದದ ದಿನ ಎನ್ನ ಪುಳ್ಳಿ ಅವನ ನೋಡಿಕ್ಕು.ಇಲ್ಲೇದು ಹೇಳ್ತಿಲ್ಲೆ.ಈಗ ಮದ್ಲಾಣ ಕಾಲದಾಂಗೆ ಮಂಟಪಲ್ಲೇ ಮಾಣಿಯ ನೋಡುವ ಕ್ರಮ ಇಲ್ಲೆನ್ನೇ.ಅದರ ಇವ ರೇಡಿಯದೊಳ ಹೋಗಿ ಹೇಳಿ ಊರಿಡೀ ಗೊಂತಪ್ಪ ಹಾಂಗೆ ಮಾಡಿದ.
ಥಕ್….ಇದೆಲ್ಲ ಬೇಕಾತೋ?ಅವರವರ ಮೋರಗೆ ಅವ್ವವ್ವೇ ಮಸಿ ಬಳುದ ಹಾಂಗಾತಿಲ್ಯಾ?ಇದೆಂತ ಪದ್ಯವೋ..ಪೇಪರು ಓದಿದಾಂಗೆ ಓದಿದ್ದವ ಎನ್ನ ಪುಳ್ಳಿ ಬದ್ದದ ದಿನ ಕೆಂಪು ಸೀರೆ ಸುತ್ತಿ ಅವನ  ನೋಡಿದ್ದರನ್ನೇ ಅಲ್ದಾ?”
ಅಜ್ಜಿಯ ಪಿಸುರು ಅಷ್ಟು ಬೇಗ ಕಮ್ಮಿ ಆಯಿದೇ ಇಲ್ಲೆ.ಆ ಒಂದು ಕವನವಾಚನಂದ ಅವರ ಪುಳ್ಳಿಯ ಮರ್ಯಾದೆಗೆ ಕೊರತೆ ಆತೂಳಿ ಗ್ರೇಶಿದ ತಿಮ್ಮಕ್ಕಜ್ಜಿ ಆ ದಿನ ಉಂಡಿದವೇ ಇಲ್ಲೇ.

ಎಂಗೊಗೆ ನೆಗೆಯೂ ಬತ್ತು.ಅಜ್ಜಿಯ ಅವಸ್ಥೆ ನೋಡುಗ ಅಯ್ಯೋ ಹೇಳಿಯೂ ಆವ್ತು.

ಆ ದಿನ ಎಂಗಳಲ್ಲಿ ಉಣ್ಣದ್ದ ಅಜ್ಜಿ ಎರಡು ದಿನ ಸರಿಯಾಗಿ ಉಂಡಿದವಿಲ್ಲೇಡ.
ಮತ್ತೆ ಅವರ ಮನಸು ಹೇಂಗೆ ಸರಿಯಾತೋ ಹೇಳಿ ಎನಗೆ ಗೊಂತಿಲ್ಲೆ.

ಈಗ ಅಜ್ಜಿ ಇಲ್ಲೆ.ಆದರೂ ಅಜ್ಜಿಯ ಪುಳ್ಳಿಯ ಗಂಡನ ಕಾಂಬಗ ಎಲ್ಲ ಇದೇ ಕವನವೇ ಎಂಗೊಗೆಲ್ಲ ನೆಂಪಪ್ಪದು. ‘ ಅವಳು ನನ್ನನ್ನೇ ನೋಡುತ್ತಾಳೆ’ ಹೇಳುವ ಅಡ್ಡ ಹೆಸರೇ ಅವಂಗೆ ಬಂತು.
ಅವಕ್ಕೆ ಗೊಂತಿದ್ದೋ ಇಲ್ಲೆಯೋ ಗೊಂತಿಲ್ಲೆ.ಈಗ ಕೆಲಸಂದ ನಿವೃತ್ತಿ ಆಗಿ ಹಲವಾರು ಕವನಸಂಕಲನ ಬಿಡುಗಡೆ ಮಾಡಿ, ಮಕ್ಕೊ, ಪುಳ್ಳಿಯಕ್ಕೊ ಇಪ್ಪ ಆ ಕವಿ ಮಹಾಶಯನ ಬೇಗ ಗೊಂತಾಯೆಕಾರೆ ” ಅವಳು ನನ್ನನ್ನೇ ನೋಡುತ್ತಾಳೆ” ಹೇಳಿಯೇ ಆಪ್ತ ವಲಯಲ್ಲಿ ಹೇಳೆಕಾವ್ತು.

ಆ ದಿನದ ತಿಮ್ಮಕ್ಕಜ್ಜಿಯ ಕೋಪ,ದುಃಖ, ಸಂಕಟ ಎಲ್ಲ  ಅರ್ಥ ಆಗದ್ರೂ ಈಗಲೂ ಆರಾರು ಆಕಾಶವಾಣಿಲಿ ಕವನವಾಚನ ಇದ್ದು ಹೇಳುಗ ತಿಮ್ಮಕ್ಕಜ್ಜಿಯನ್ನೂ,ಈ ಒಂದು ಘಟನೆಯೂ ನೆಂಪಾಗಿ ಸಣ್ಣಕೆ ನೆಗೆ ಬಾರದ್ದಿರ್ತೇ ಇಲ್ಲೆ.

– ಪ್ರಸನ್ನಾ ವಿ ಚೆಕ್ಕೆಮನೆ

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×