Oppanna.com

ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   01/06/2020    8 ಒಪ್ಪಂಗೊ

ಸ್ವಯಂವರ ಭಾಗ 51

ಅಂದು ಯುಗಾದಿ. ನಮ್ಮ ಹಿಂದೂ ಸಂಸ್ಕೃತಿಯ ಹೊಸ ವರ್ಷದ ಆಚರಣೆ. ಬೇವು ಬೆಲ್ಲ ಹಂಚಿ ಹಳೆಯ ಕೈಕ್ಕೆ ನೆಂಪುಗಳ ಮರದು ಬೆಲ್ಲದ ಹಾಂಗಿದ್ದ ಚೀಪೆ ಬದ್ಕು ಎಲ್ಲರದ್ದೂ ಆಗಲಿ ಹೇಳಿ ದೇವರತ್ರೆ ಪ್ರಾರ್ಥಿಸುವ ಶುಭದಿನ.

ಅಂದು ಸುಪ್ರಿಯನ ಮನೆಲಿ ಪೂಜೆ. ಪೂಜೆ ಮಾಂತ್ರ ಅಲ್ಲ, ಮತ್ತೊಂದು ವಿಶೇಶ ಕೂಡ ಇದ್ದು. ಅದು….
“ಸುಪ್ರಿಯನ ಬದ್ಧ”

ಎಲ್ಲೋರ ಮೋರೆಲೂ ಸಂತೋಶ,ಸಂಭ್ರಮ. ಹಳೆ ನೆಂಟಸ್ಥಿಕೆ ಹೊಸತ್ತು ಮಾಡುವ ಕಾರಣ ಹೆಚ್ಚು ಗೌಜಿ ಮಾಡಿದ್ದವಿಲ್ಲೆ.
“ನವಗೆ ದೊಡ್ಡ ಗೌಜಿ, ಆಡಂಬರ ಎಲ್ಲ ಬೇಡ, ಧಾರ್ಮಿಕ ಕಾರ್ಯಕ್ರಮಂಗೊ ಸರಿಯಾಗಿ ಆಯೆಕು. ಮತ್ತೆ ಬಾಕಿದ್ದ ವಿಶಯಂಗೊ” ಸುದೀಪನ ಅಪ್ಪ ಹೇಳಿದ್ದಕ್ಕೆ ಸುಪ್ರಿಯನ ಅಪ್ಪನೂ ಒಪ್ಪಿದವು.

ಸುಪ್ರಿಯಂಗಂತೂ ಉದಿಯಪ್ಪಂದಲೇ ಕಾಲು ನಿಂದಲ್ಲಿ ನಿಲ್ಲುತ್ತಿಲ್ಲೆ. ಅಂಬಗಂಬಗ ಗೇಟಿನತ್ರಂಗೇ ಅದರ ಕಣ್ಣು ಹೋಗಿಂಡಿದ್ದತ್ತು.

“ಹೋ…..ನಿನಗೆ ಈಗಲೇ ಇಷ್ಟು ಅಸಕ್ಕಾವ್ತರೆ ಅವನತ್ರೆ ನಿನ್ನೇ ಬಪ್ಪಲೆ ಹೇಳ್ತಿತೆ” ಅಣ್ಣ ತಮಾಶೆ ಮಾಡಿಯಪ್ಪಗ ಅದರ ಮೋರೆ ಕೆಂಪು ಕೆಂಪಾದರೂ
“ನಿನಗೆ ಬೇರೆ ಕೆಲಸ ಇಲ್ಲೆ,ಆನು ಅವರ ಕಾವದಲ್ಲ ಹೇಳಿ ನಿನಗೆ ಗೊಂತಿದ್ದು.. ನೀನೀಗ ಆರನ್ನೂ ಕಾವದಲ್ಲಾದಿಕ್ಕು..ಕಳ್ಳ..ಪುಚ್ಚೆ ಹಾಂಗೆ ಕಣ್ಣು ಮುಚ್ಚಿ ಹಾಲು ಕುಡುದಿಕ್ಕಿ ಗೊಂತಾಗ ಗ್ರೇಶಿದ್ದ° ………!!!!”   ಅವನ ನೋಡಿ ಒಂದು ಕಣ್ಣು ಮುಚ್ಚಿ  ನೆಗೆ ಮಾಡಿ, ಅಣ್ಣನ ತಮಾಶೆ  ಮಾಡಿದ ಕೂಸಿನ ಮನಸಿಲ್ಲಿ ಕಳೆದ ಒಂದು ವಾರಲ್ಲಿ ನಡದ ಕೆಲವು ವಿಶಯಂಗೊ ಸಿನೆಮಾ ಪರದೆಲಿ ಮೂಡಿ ಬಂದಾಂಗೆ ಬಂತು.

ಅಂದು ಸುದೀಪನತ್ರೆ ಎಲ್ಲ ವಿಶಯ ಹೇಳಿದ ಕಾರಣ ಅವ ಸುಶೀಲನ ಮೂಲ ಹುಡ್ಕಲೆ ಹೆರಟ. ಕೇಶವಣ್ಣನ ಕಂಡು ಅವರ ತಂಗೆಯ ವಿಶಯ ತಿಳುದಪ್ಪಗ ಅವಕ್ಕಾದ ಕೊಶಿಯ ವರ್ಣಿಸುಲೇ ಎಡಿಯ..

“ನಿಜವಾಗಿ ಎನ್ನ ತಂಗೆ ಈ ಊರಿಲ್ಲಿ ಇದ್ದಾ…ಸುಗುಣಶೀಲಾ ಎನ್ನ ತಂಗೆ.. ಎಲ್ಲೋರು ಸುಶೀಲ ಹೇಳುದು ಅದರ. ಎಂಗೊ ಸುಶೀ ಹೇಳುದು..ಒಂದರಿ ಕಂಡು ಮಾತಾಡೆಕು. ಅದರ, ಮಕ್ಕಳ ಇಲ್ಲಿಗೆ ಕರಕ್ಕೊಂಡು ಬರೆಕು ,..ಇಷ್ಟನ್ನಾರ ಎಷ್ಟು ಬಂಙ ಬಯಿಂದೋ ಏನೋ…..” ಅವರ ಮಾತುಗಳಲ್ಲಿ ತಂಗೆಯ ಮೇಗೆ ಇಪ್ಪ ಪ್ರೀತಿ ತುಂಬಿಂಡಿದ್ದತ್ತು.

ಸುದೀಪ ಅಂಬಗಳೇ ಸುಪ್ರಿಯಂಗೆ ಪೋನು ಮಾಡಿದ°. ಅದು ಹಾಸ್ಟೆಲಿಂದ ಸೀದಾ ಅವನ ಆಸ್ಪತ್ರೆಗೆ ಬಂತು. ಅಲ್ಲಿಂದ ಕೇಶವನನ್ನು ಕರಕ್ಕೊಂಡು ವಿಜಯ ಇಪ್ಪಲ್ಲಿಗೆ ಹೋದವು. ಅದರ ಕಂಡಪ್ಪಗಳೇ ಕೇಶವನ ಕಣ್ಣಿಲ್ಲಿ ನೀರು ತುಂಬಿದ್ದು
“ಎನ್ನ ಕೊಂಗಾಟದ ಸೊಸೆ, ಎಷ್ಟು ವರ್ಷಾತು ನೋಡದ್ದೆ,ಈಗ ಎನ್ನ ನೆಂಪಿರ ಅಲ್ಲದಾ. ….ಅಂದರೂ  ಎನಗೆ ನಿನ್ನ ಕಾಂಬಲೆ ಸಿಕ್ಕಿತ್ತನ್ನೇ….” ವಿಜಯಂಗೆ ಆಶ್ಚರ್ಯ ಆತು. ಅದರ ಅಬ್ಬೆ ಹಳೇ ಕತೆಯೆಲ್ಲ ಹೇಳಿರೂ ಅಜ್ಜನಮನೆ ಇದೇ ಊರು ಹೇಳಿ ಹೇಳಿತ್ತಿದ್ದಿಲ್ಲೆ. ಆದರೆ ಡಿಗ್ರಿಗೆ ಸೇರುಗ ಮಾಂತ್ರ ಈ ಊರೇ ಆಯೆಕೂಳಿ ಅವು ಇಪ್ಪ ಆಶ್ರಮದ ಮುಖ್ಯಸ್ಥನತ್ರೆ ಹೇಳಿಕ್ಕಿ ಇಲ್ಯಾಣ ಕೋಲೇಜಿಂಗೆ ಸೇರ್ಸಿದ್ದು. ಒಬ್ಬನೇ ಅಪ್ಪದಕ್ಕೆ ತಮ್ಮನನ್ನು ಇಲ್ಲೇ ಶಾಲಗೆ ಹಾಕಿದ್ದು. ಆದರೂ ಅಬ್ಬೆ ಈ ಆಶ್ರಮಕ್ಕೆ ಬಪ್ಪಗ ಮತ್ತೂ ಒಂದು ವರ್ಷ ಕಳುದ್ದು. ಈಗ ಇವು ಬಂದು ‘,ಆನು ನಿನ್ನ ಸೋದರಮಾವ’ ಹೇಳುಗ ಅದಕ್ಕೂ ಮಾತಾಡ್ಲೆ ಎಡಿಗಾಯಿದಿಲ್ಲೆ.

ಶಾಲಗೋಪಗ,ಕೋಲೇಜಿಂಗೆ ಹೋಪಗ ಎಲ್ಲ ಬೇರೆ ಮಕ್ಕಳ ಮನೆಯವರ,ನೆಂಟ್ರುಗಳ ಕಾಂಬಗ ಎನಗು ಆರಾರು ಇತ್ತಿದ್ದರೇಳಿ ಆಗಿಂಡಿದ್ದತ್ತು. ಸುಪ್ರಿಯನ ಗುರ್ತ ಆದ ಮತ್ತೆ ಅದು ಮನೆಯವರ ಶುದ್ದಿ ಹೇಳುಗ ಬದುಕಿಲ್ಲಿ ಕಳಕ್ಕೊಂಡ ಪ್ರೀತಿಯ ಮೌಲ್ಯ ಅರ್ಥ ಆಗಿಂಡಿದ್ದತ್ತು. ಆದರೆ ಅಬ್ಬೆ ಸಣ್ಣ ಪ್ರಾಯಲ್ಲಿ ಮಾಡಿದ ಒಂದು ತಪ್ಪಿಂದಾಗಿ ಮಕ್ಕೊ ಕೂಡ ಬಂಙ ಬಪ್ಪ ಹಾಂಗಾತು. ಈ ಊರಿಂಗೆ ಬಪ್ಪಗಳೇ ಅಬ್ಬೆ ಹೇಳಿದ್ದು

“ಆರು ಎಷ್ಟು ಚಂದಕೆ ಮಾತಾಡಿರೂ ನೀನು ಸೋಲಲಾಗ, ಆನು ಮಾಡಿದ ತಪ್ಪು ನಿನ್ನ ಬದುಕಿಂಗೂ ಕಪ್ಪು ಚುಕ್ಕೆ ಆತು. ಇಲ್ಲದ್ರೆ ನಿನಗೂ ಬೇರೆ ಮಕ್ಕಳ ಹಾಂಗೆ ಅಬ್ಬೆ,ಅಪ್ಪ ಹೇಳಿ ಕೊಶೀಲಿ ಇಪ್ಪಲಾವ್ತಿತು.ಹಾಂಗಾಗಿ ಪ್ರೀತಿ, ಪ್ರೇಮದ ಬಲೆಗೆ ಬೀಳೆಡ, ನಿನ್ನ ಜಾಗ್ರತೆ ನಿನಗೆ ಯೇವಗಲೂ ಬೇಕು”

ಅಬ್ಬೆ ಅಷ್ಟು ಹೇಳದ್ರೂ ವಿಜಯಂಗೆ ಆ ವಿಶಯ ಸರೀ ಗೊಂತಿದ್ದತ್ತು. ಆ ಕಾರಣಕ್ಕೆ ಅದಕ್ಕೆ ಫ್ರೆಂಡುಗೊ ಕಮ್ಮಿ. ಎಲ್ಲೋರಿಂದಲು ರಜ ದೂರ ನಿಂಬ ಅದಕ್ಕೆ ಸುಪ್ರಿಯ ಫ್ರೆಂಡಾದ್ದು ಕೂಡ ವಿಶೇಷವೇ. ಅದರ ಕ್ಲಾಸಲ್ಲ, ಅದರೊಟ್ಟಿಂಗೆ ಹಾಸ್ಟೆಲ್ ಲಿ ಇಪ್ಪದಲ್ಲ, ಅಂದರೂ…..!! ಬಹುಶಃ ಎಲ್ಲ ದೇವರ ಇಚ್ಛೆ ಆದಿಕ್ಕು….! ಇಲ್ಲದ್ರೆ ಇಷ್ಟು ವರ್ಷ ಅದರತ್ರೆ ಯಾವುದೇ ವಿಶಯ ಹೇಳದ್ರೂ ಅದು ತಪ್ಪು ದಾರಿಲಿ ಹೋಪ ಅಂದಾಜು ಕಾಂಬಗ ಹಳೆ ಕತೆ ಹೇಳಿ ಅದರ ಮನಸ್ಸು ಬದಲ್ಸುವ ಪ್ರಯತ್ನ ಮಾಡಿದ್ದೆಂತಕೆ..!. ಅದು ಯಶಸ್ಸಾದ್ದು ಕೂಡ ಪುಣ್ಯವೇ. ಇಲ್ಲದ್ರೆ ಅಮ್ಮನ,ಎಂಗಳ  ಬದುಕಿನ ಹಾಂಗಾವ್ತಿತು ಅದರ ಬದ್ಕು. ಸುದೀಪನ ಹಾಂಗಿದ್ದ ಯೋಗ್ಯ ಮಾಣಿ ಇಪ್ಪಗ ಕೂಡ ಅದರ ಮನಸ್ಸು ಎಲ್ಲೋ ಹೋದ್ದು ಸಾಕು. ಆದರೆ ದೇವರು ದೊಡ್ಡವ°. ಈಗ ಅದಕ್ಕೆ ಸುದೀಪನ ಶುದ್ದಿ ಮಾಂತ್ರ ಇಪ್ಪದು ಮಾತಾಡ್ಲೆ.ಮೂರು ಶಬ್ದ ಮಾತಾಡುಗ ಅದರ್ಲಿ ಎರಡು ಶಬ್ದವೂ ಸುದೀಪನ ವಿಶಯವೇ..‌ ಎನ್ನ ಬದುಕಿಲ್ಲಿ ಹಾಂಗಿದ್ದ ಕ್ಷಣಂಗೊ ಖಂಡಿತ ಇಲ್ಲೆ. ಹಾಂಗಾಗಿ ಅದರ ಕೊಶಿಯೇ ಎನ್ನ ಕೊಶಿ ಹೇಳಿ ಜಾನ್ಸಿಂಡಿಪ್ಪದು….’

“ಎಂತ ಮೋಳೇ…ಎನ್ನ ನೆಂಪಿದ್ದ ನಿನಗೆ? ತಮ್ಮ ಎಲ್ಲಿದ್ದ?” ಮಾವನ ಪ್ರಶ್ನೆಗೆ ಉತ್ತರ ಹೇಳದ್ದೆ ಅವರ ಮೋರೆಯನ್ನೇ ನೋಡಿತ್ತದು. ಸಣ್ಣಾದಿಪ್ಪಗ ಮಾವ ತೆಚ್ಚಿ ಕೊಂಗಾಟ ಮಾಡಿದ ನೆಂಪು ಯೇವದೋ ಕಪ್ಪು ಬಿಳಿ ಸಿನೆಮಾದ ದೃಶ್ಯದ ಹಾಂಗೆ ನೆಂಪಾತು. ಮಾವನ ಮದುವೆ ಸಮಯಲ್ಲಿ ಜವುಳಿ ತೆಗವಲೆ ಕರಕ್ಕೊಂಡು ಹೋದ್ದು,ಚಿನ್ನದ ಚೈನು ಕಟ್ಟಿದ್ದು……! ಮತ್ತೆ….ಮತ್ತೆ…..ಅಬ್ಬೆಯೊಟ್ಟಿಂಗೆ ಆ ಮನೆಂದ ಹೆರ ಬಂದದು……!!
ಎಲ್ಲ ನೆಂಪಪ್ಪಗ ಕಣ್ಣೀರ ಧಾರೆ ಕೆಪ್ಪಟೆಲಿ ಅರುದತ್ತು.
ಕೊರಳಿಲ್ಲಿಪ್ಪ ಚೈನು ತೆಗದು ಹೆರ ಹಾಕಿಯಪ್ಪಗ ಕೇಶವಂಗೆ ಆ ಚೈನಿನ ಗುರ್ತ ಸಿಕ್ಕಿತ್ತು.

“ಇದೇ ಚೈನು ಅಂದು ನಿನಗೆ ಕೊಟ್ಟದಾನು. ಈಗಲೂ ಇದ್ದನ್ನೇ. ಅಂಬಗ ಸುಶೀ ಎಂಗಳ ಮರದ್ದಿಲ್ಲೆ ಖಂಡಿತ….
ನಾವೀಗಳೇ ಸುಶೀಯ ನೋಡ್ಲೆ ಹೋಪನ ಡಾಕ್ಟರೇ.. ಎನ್ನ ತಂಗೆಯ ನೋಡದ್ದೆ ಎನಗೆ…..” ಕೇಶವ ಸಣ್ಣ ಮಕ್ಕಳ ಹಾಂಗೆ ಹೇಳುಗ ನೋಡಿಂಡು ನಿಂದ ಸುಪ್ರಿಯನ ಕಣ್ಣಿಲ್ಲೂ ನೀರು ಬಂತು. ಅವು ಅಂಬಗಳೇ ವಿಜಯನನ್ನೂ ,ತಮ್ಮನನ್ನೂ ಕರಕ್ಕೊಂಡು ಆಶ್ರಮಕ್ಕೆ ಹೋದವು.

ಆರು ಬಂದದೂಳಿ ಮದಲೇ ಹೇಳದ್ದ ಕಾರಣ ಸುಶೀಲಂಗೆ(ಸುಗುಣ) ಇವು ಎದುರು ಬಂದು ನಿಂದಪ್ಪಗಳೇ ಅಣ್ಣ ಬಂದದು ಹೇಳಿ ಗೊಂತಾದ್ದು. ಫಕ್ಕನೆ ಅಣ್ಣನ ಕಂಡಪ್ಪಗ ಎಂತ ಮಾಡೆಕೂಳಿ ಆಯಿದಿಲ್ಲೆ ಅದಕ್ಕೆ.
“ಇದೇ ಊರಿಲ್ಲಿ ಇದ್ದರೂ ನಿನಗೆ ಈ ಅಣ್ಣನ ನೋಡೆಕೂಳಿ ಆಯಿದಿಲ್ಲೆ ಅಲ್ಲದಾ ತಂಗೇ….” ಕೇಶವನ ಹೃದಯಂದ ಬಂದ ಆ ಪ್ರಶ್ನೆಗೆ ಉತ್ತರ ಹೇಳ್ಲೆಡಿಯದ್ದೆ ತಲೆಕೆಳ ಹಾಕಿತ್ತು.

“ಅಂದು ನಿಂಗೊ ಕಾಣೆಯಾದ ಮತ್ತೆ ಆನು ನಿಂಗಳ ಹುಡ್ಕಿದ್ದಕ್ಕೆ ಲೆಕ್ಕಮಣ್ಣೊ ಇಲ್ಲೆ.ಎಲ್ಲಿಗೆಲ್ಲ ಹೋಯಿದೆ….ಆರತ್ರೆಲ್ಲ ಕೇಳಿದ್ದೆ….ಅಯ್ಯೋ ದೇವರೇ…..! ನಿನ್ನ ಅಣ್ಣ ನಿನಗೆ ರಕ್ಷಣೆ ಕೊಡುಗೂಳಿ ಗೊಂತಿದ್ದರೂ ನೀನು ಹೇಡಿ ಹಾಂಗೆ ಓಡಿ ಹೋದ್ದಾ…….! ನಿನಗೆ ಹಿಂಸೆ ಕೊಡ್ಲೆ ಬಂದ ಆ ಕಂಡುಗೊಕ್ಕೆಲ್ಲ ದೇವರೇ ಶಿಕ್ಷೆ ಕೊಟ್ಟ° ಸುಶೀ..ಕಳ್ಳ ಬಟ್ಟಿ ಸಾರಾಯಿ ಕುಡುದು ಎಲ್ಲ ಪಡ್ಚ ಆದವು…!!”

ಸುಶೀಲ° ಅಣ್ಣನ ಮಾತು ಕೇಳಿ ಮಾತು ಬಾರದ್ದವರ ಹಾಂಗೆ ನಿಂದತ್ತು. ದೇವರೇ ದಿನೇಸ ಈಗ ಇಲ್ಲೆಯಾ..! ಓಹ್.. ಇನ್ನು ಧೈರ್ಯಲ್ಲಿ ಬದ್ಕುಲಕ್ಕು. ಅಂದು ಅಣ್ಣನ ಮದುವೆ ಹೇಳಿ ಅದು ಬಂದ ಕಾರಣ ಮನೆಂದ ಹೆರ ಇಳುದ್ದು. ಸಾವ ಆಲೋಚನೆ ಒಂದರಿ ಬಂದರೂ ಇಬ್ರು ಮಕ್ಕಳ ಕರಕ್ಕೊಂಡು ಸಾವಲೆ ಹೆರಟ್ರೆ ಒಂದು ವೇಳೆ ಮಕ್ಕೊ ಒಳುದು ಅಬ್ಬೆ ಸತ್ತರೆ,ಅಬ್ಬೆ ಸತ್ತು ಮಕ್ಕೊ ಒಳುದರೇಳಿ ಹೆದರಿಕೆ ಆತು. ದೇವರು ಆಯುಶ್ಯ ಕೊಟ್ಟಷ್ಟು ಕಾಲ ಧೈರ್ಯಲ್ಲಿ ಬದ್ಕುದು ಹೇಳಿ ಅಣ್ಣ ಕೊಟ್ಟ ಪೈಸೆಯನ್ನು,ಮಗಳಿಂಗೆ ಮಾಡ್ಸಿದ ಚಿನ್ನವನ್ನು, ಆ ಉಗ್ರಾಣಲ್ಲಿಪ್ಪ ಬೇಗಿಲ್ಲಿ ಹಿಡಿವಷ್ಟು ಅಂಗಿ ವಸ್ತ್ರಂಗಳನ್ನು ತೆಕ್ಕೊಂಡು ಹಿಂದಾಣ ಬಾಗಿಲ್ಲೇ ಆಗಿ ಮನೆ ಬಿಟ್ಟು ಹೆರಟದು.

“ನಾವೀಗ ಎಲ್ಲಿಗೆ ಹೋಪದಮ್ಮಾ” ಕೇಳಿದ ಮಗಳ ಮಂಕಾಡ್ಸಿ ಬಾಯಿ ಮುಚ್ಸಿ ಆ ಮೂರು ಸಂಧಿ ಹೊತ್ತಿಲ್ಲಿ ಆರಿಂಗೂ ಕಾಣದ್ದಾಂಗೆ ಮಕ್ಕಳನ್ನು ಕರಕ್ಕೊಂಡು ಡಾಮರು ಮಾರ್ಗದ ಕರೇಲಿ ಬಂದು ನಿಂದದು.

ಸುರುವಿಂಗೆ ಡಾಕ್ಟರ್ ಪೂರ್ಣಿಯ ಕಾಂಬ ಹೇಳಿ ಗ್ರೇಶಿರೂ ಅಲ್ಲಿಗೆ ಹೋದರೆ ಅಣ್ಣಂಗೆ ಗೊಂತಕ್ಕು. ವಾಪಾಸು ಮನಗೆ ಕರಕ್ಕೊಂಡು ಬಕ್ಕು. ಒಂದರಿ ಕಾಣೆಯಾದ ಜೆನ ಇನ್ನೊಂದರಿ ಕಾಣೆಯಪ್ಪಗ ಊರಿನವು ಎಂತ ಹೇಳುಗು ಹೇಳಿ ಅಂದಾಜಿದ್ದ ಕಾರಣ ಇನ್ನು ಪುನಾ ಈ ಊರಿಂಗೆ ಬಪ್ಪಲಾಗ ಹೇಳುವ ಅಂದಾಜಿಲ್ಲಿ ಮುಂದೆ ಮುಂದೆ ನೆಡದತ್ತು. ಅಷ್ಟಪ್ಪಗ ಒಂದು ಜೀಪು ಬಂದು ಹತ್ತರೆ ನಿಂದತ್ತು. ಅದರಲ್ಲಿ ಒಂದೆರಡು ಹೆಮ್ಮಕ್ಕೊ ಇದ್ದ ಕಾರಣ ಅವು ಹತ್ತಲೆ ಹೇಳಿಯಪ್ಪಗ ಧೈರ್ಯಲ್ಲಿ ಹತ್ತಿತ್ತು. ಅವು ಈ ಊರಿಂಗೆ ಪ್ರವಾಸ ಬಂದ ಮಹಾರಾಷ್ಟ್ರಲ್ಲಿ ಇಪ್ಪ ಕನ್ನಡಿಗರು. ಈ ಊರಿಂಗೆ ಪ್ರವಾಸ ಬಂದವು.

ಕನ್ನಡ ಮಾತಾಡುವ ಬ್ರಾಹ್ಮಣರೇ ಆದ ಕಾರಣ ಅವರತ್ರೆ ಎಲ್ಲಾ ಕತೆಯನ್ನು ಹೇಳಿಕ್ಕಿ “ಎನಗೆ ಇನ್ನೊಬ್ಬರ ಹಂಗಿಲ್ಲದ್ದೆ ಬದ್ಕುಲೆ ಒಂದು ದಾರಿ ತೋರ್ಸೆಕು” ಹೇಳಿ ಕೇಳಿತ್ತು. ಅಣ್ಣಂಗೆ ಆನು ಎಲ್ಲಿದ್ದೇಳಿ ಗೊಂತಪ್ಪಲಾಗ.ಅವಂಗೆ ಗೊಂತಾದರೆ ಎಷ್ಟು ಬಂಙ ಆದರೂ ಮನಗೆ ಕರಕ್ಕೊಂಡು ಹೋಕು.ಹಾಂಗಾಗಿ ದೂರ ಆದಷ್ಟು ಒಳ್ಳೆದೂಳಿ ಕೂಡ ಹೇಳಿತ್ತು.

ಆ ಜೀಪಿಲ್ಲಿದ್ದವು ಸದಾನಂದ ಹೇಳಿ. ಅವಕ್ಕೆ ವ್ಯಾಪಾರ. ಅವರ ಹೆಂಡತಿ ಉಮಾ. ಉಮನ ಅಪ್ಪಚ್ಚಿಯ ಮಗ ಅಣ್ಣ ಅಮೇರಿಕಾಲ್ಲಿ ಡಾಕ್ಟರ್. ಅವಕ್ಕೆ ಮಕ್ಕೊ ಇಲ್ಲೆ. ಅವು ರತ್ನಗಿರಿಲಿ ಒಂದು ಅಬಲಾಶ್ರಮ ನಡೆಶುತ್ತಾ ಇತ್ತಿದ್ದವು. ಸುಶೀಯ ಕತೆ ಕೇಳಿದ ಸದಾನಂದ ಅದರನ್ನೂ ಮಕ್ಕಳನ್ನು ಅಲ್ಲಿಗೆ ಸೇರ್ಸಿದವು. ಅಬ್ಬೆ ಅಪ್ಪ ಇಲ್ಲದ್ದ ಮಕ್ಕೊ, ಗೆಂಡ ಬಿಟ್ಟ, ಮದುವೆ ಆಗದ್ದ,ಬೇರೆ ಬೇರೆ ಕಾರಣಂದಾಗಿ ಮನೆ ಬಿಟ್ಟು ಹೋಯೆಕಾಗಿ ಬಂದ ಸುಮಾರು ಹೆಮ್ಮಕ್ಕಳೊಟ್ಟಿಂಗೆ ಸುಶೀಲನೂ,ಮಕ್ಕಳೂ ಸೇರಿದವು. ಅಲ್ಯಾಣ ಮೆನೇಜರ್ ವಾರಿಜ ಸುಶೀಲನ ಚೆಂದಕೆ ನೋಡಿಕೊಂಡವು. ಮಗ ರಜ ದೊಡ್ಡಾದ ಕೂಡ್ಲೇ ಅದು ಬಿ.ಎ., ಎಂ.ಎ ಕಲ್ತತ್ತು.ಒಳ್ಳೆ ಮಾರ್ಕಿಲ್ಲಿ ಪಾಸೂದೆ ಆತು. ಆಶ್ರಮದವು ನಡೆಶುವ ಶಾಲೆಲಿ ಟೀಚರಾಗಿ ಕೆಲಸ ಮಾಡ್ಲೂ ಸುರು ಮಾಡಿತ್ತು.

ಆಶ್ರಮಲ್ಲಿ ಇದ್ದ ಕಾರಣ ವಿಜಯಂಗೆ ಸಣ್ಣಾದಿಪ್ಪಗಲೇ ಎಲ್ಲಾ ಕೆಲಸವೂ ಅಭ್ಯಾಸ ಆತು. ಹೊಲಿಗೆ, ಸಾಬೂನು ತಯಾರಿ,ಊದುಬತ್ತಿ ಮಾಡುದು…..ಹೀಂಗೆ ಹೆಚ್ಚಿನ ಕೆಲಸವೂ ಅದಕ್ಕೆ ಸುಲಭಲ್ಲಿ ಕಲ್ತಾತು. ಮಗಳು ದೊಡ್ಡಾಗಿಂಡು ಬಂದಾಂಗೆ ಸುಶೀಲಂಗೆ ಎದೆಲಿ ಚಳಿ ಕೂಬಲೆ ಸುರುವಾತು.
‘ಎನ್ನ ಹಾಳುಬುದ್ಧಿಂದಾಗಿ ಮಗಳಿಂಗೂ ಬಂಙ ಆತು.ಅದಕ್ಕೊಂದು ಚೆಂದದ ಬದ್ಕು ಕಟ್ಟಿ ಕೊಡುದು ಹೇಂಗೆ? ಆಶ್ರಮಲ್ಲೇ ಇದ್ದರೆ ಅದಕ್ಕೆ ಸರಿಯಾದ ಬದ್ಕು ಸಿಕ್ಕ. ಆರ ಮದುವೆಯಾದರೂ ‘ಅದು ಆಶ್ರಮದ ಕೂಸು’ ಹೇಳುವ ಹಣೆಪಟ್ಟಿ ಬೀಳುಗು. ಮಕ್ಕಳನ್ನು ಕರಕ್ಕೊಂಡು ಬೇರೆ ಹೋಪೋಳಿ ಆದರೂ ಕಷ್ಟವೇ. ಮಕ್ಕಳ ಅಪ್ಪ° ಆರು ಕೇಳಿರೆ ಎಂತ ಹೇಳುದು……! ಇದೇ ಅದರ ನಿತ್ಯ ಸಂಕಟಕ್ಕೆ ನೂಕಿತ್ತು.
ಅಂತೂಇಂತೂ ಮಗಳಿಂಗೆ ಪಿಯುಸಿ ಆದ ಕೂಡ್ಲೇ ಆ ಊರು ಬಿಡುವ ಅಂದಾಜಿ ಮಾಡಿತ್ತದು. ಅಂದರೂ ಅಪ್ಪನಮನಗೆ ಹೋಯೆಕೂಳಿ ಆಯಿದಿಲ್ಲೆ. ಅಣ್ಣ, ಅಕ್ಕನ ಚೆಂದದ ಸಂಸಾರದ ಎಡೇಲಿ ಆನೊಂದು ಕಪ್ಪು ಚುಕ್ಕಿಯ ಹಾಂಗೆ ಎಂತಕೇಳಿ ಜಾನ್ಸಿತ್ತದು. ಅಬ್ಬಗೆ ಹೇಂಗೂ ಕಂಡ್ರಾಗ,ಅಷ್ಟಪ್ಪಗ ಅಣ್ಣಂಗೆ ಉಭಯ ಸಂಕಟ. ಹಾಂಗಾಗಿ ಮಗಳ ಡಿಗ್ರಿಗೆ ಸೇರ್ಸುಗ ಇಲ್ಲಿ ಸೇರ್ಸಿರೂ ಅಪ್ಪನಮನೆಯ ಹೊಡೆಂಗೆ ತಿರುಗಿ ನೋಡದ್ದದು. ಮಗಳು ಇಲ್ಲಿ ಸೇರಿ ಒಂದು ವರ್ಷಪ್ಪಗ ಸುಶೀಲನೂ ಇದೇ ಊರಿಲ್ಲಿಪ್ಪ ಆ ಆಶ್ರಮದ ಬ್ರೇಂಚಿಂಗೆ  ಮೆನೇಜರ್ ಆಗಿ ಸೇರಿತ್ತು.ಅಂದರೂ ಅಲ್ಲಿಪ್ಪವಕ್ಕೆ ವಿಜಯ ಅದರ ಮಗಳು ಹೇಳಿ ಗೊಂತಿಲ್ಲೆ. ಎನ್ನ ಬದುಕಿನ ಕರಿನೆರಳು ಮಗಳ ಬದ್ಕಿಂಗೆ ಬೀಳ್ಲಾಗಾಳಿ ಅದರ ಮಾತೃಹೃದಯ ನಿತ್ಯ ದೇವರತ್ರೆ ಪ್ರಾರ್ಥಿಸಿಂಡಿದ್ದತ್ತು…..

“ಸುಶೀ……”ಎಷ್ಟು ಬಂಙ ಬಂದೆ ನೀನು..ಒಂದರಿಯಾದರೂ ಮನಗೆ ಪೋನು ಮಾಡಿದ್ದರೆ ಆನು ಬಂದು ಕರಕ್ಕೊಂಡು ಬತ್ತಿತಿಲ್ಯಾ? ಮನೆಲಿ ಅಬ್ಬೆಯೊಟ್ಟಿಂಗೆ ಸರಿಯಾಗದ್ರೆ ಬೇರೊಂದು ಮನೆ ಮಾಡಿ ಕೊಡ್ತಿತಿಲ್ಯಾ? ನಿನ್ನ ಮನಸ್ಸು ಇಷ್ಟು ಗಟ್ಟಿಯಾದ್ದೇಕೆ? ಆನೆಷ್ಟು ಹುಡ್ಕಿದೆ..ಪೂರ್ಣಿ ಡಾಕ್ಟರ ಹತ್ರಂಗೆ ಐದಾರು ಸರ್ತಿ ಹೋಯಿದೆ. ಎಲ್ಲೆಲ್ಲಿ ಹೋದರೂ ನೀನು ಜೀವಂತ ಇದ್ದೆ ಹೇಳಿ ಕೂಡ ಗೊಂತಾಗದ್ದಷ್ಟು ಶೂನ್ಯವಾದ ಉತ್ತರವೇ ಸಿಕ್ಕಿದ್ದು..ಅಂತೂ ದೇವರು ಕೈ ಬಿಟ್ಟಿದಾಯಿಲ್ಲೆ ನಮ್ಮ.. ಈಗಲೇ ಹೆರಡು,ಅಲ್ಲಿ ಅಬ್ಬೆ ಕಣ್ಣನೀರು ಹಾಕಿ ಕಾಯ್ತಾಯಿದ್ದು.ನಿನ್ನ ಬೈದ್ದದು ತಪ್ಪಾತೂಳಿ ನಿತ್ಯ ಕೂಗುತ್ತು……”

ಕೇಶವನ ಮಾತು ಕೇಳಿಯಪ್ಪಗ ಸುಶೀಲ ಅಣ್ಣನ ಕೈ ಹಿಡುದು ಕೂಗಿತ್ತು. ಅವ° ಅದರ ಹೆಗಲು ತಟ್ಟಿ ಸಮದಾನ ಮಾಡಿರೂ ಅವಂಗೂ ದುಃಖ ತಡವಲೇ ಆಯಿದಿಲ್ಲೆ.
“ಎನಗೆ ಈ ಆಶ್ರಮದ ಬದುಕೇ ಕೊಶಿಯಿದ್ದಣ್ಣಾ..ಆನು ಮನಗೆ ಬತ್ತಿಲ್ಲೆ. ಎನ್ನ ಮಕ್ಕಳ ನೀನು ಕರಕ್ಕೊಂಡು ಹೋಗು.ಎನ್ನ ಮಗಳಿಂಗೆ ಒಬ್ಬ ಒಳ್ಳೆ ಮಾಣಿಯ ಹುಡ್ಕಿ ಮದುವೆ ಮಾಡ್ಸು. ಆದರೆ ಅದಕ್ಕೆ ಅಬ್ಬೆ ಅಪ್ಪ ಇಲ್ಲೆ ಹೇಳೆಕು ನೀನು. ಆನದರ ಅಬ್ಬೆ ಹೇಳಿ ಗೊಂತಾದರೆ ಅದಕ್ಕೆ ಮುಂದೆ ಗೆಂಡನ ಮನೆಲಿ ಬದ್ಕುಲೆ ಕಷ್ಟ ಅಕ್ಕು” ಸುಶೀಲ ಕೂಗಿಂಡು ಹೇಳುದು ಕೇಳುಗ ಸುಪ್ರಿಯ ಸುದೀಪನ ಮೋರೆಯನ್ನೇ ನೋಡಿತ್ತು.

ಅಂದು ಅವು ಎಷ್ಟು ಒತ್ತಾಯ ಮಾಡಿರೂ ಸುಶೀಲ ಕೇಶವನೊಟ್ಟಿಂಗೆ ಹೆರಟಿದಿಲ್ಲೆ.
“ಎನಗೆ ಹಾಂಗೆ ಕೂದಲ್ಲಿಂದ ಎದ್ದಿಕ್ಕಿ ಬಂದ ಹಾಂಗೆ ಬಪ್ಪಲೆಡಿಯ ಅಣ್ಣಾ. ಆನು ಇನ್ನೊಂದು ದಿನ ಖಂಡಿತ ಬತ್ತೆ” ಹೇಳಿದ ಕಾರಣ ಅವೆಲ್ಲ ವಾಪಾಸು ಸುದೀಪನ ಕಾರಿಲ್ಲಿ ಊರಿಂಗೆ ಬಂದವು.
ತಮ್ಮನೊಟ್ಟಿಂಗೆ ರೂಮಿಂಗೆ ಹೋವ್ತೆ ಹೇಳಿದ ವಿಜಯನ ಕೇಶವ ಬಿಟ್ಟಿದನೇ ಇಲ್ಲೆ.
“ಎಷ್ಟೋ ವರ್ಷ ಬಂಙ ಬಂದ ನಂತರ ಸಿಕ್ಕಿದ ನಿಧಿಗೊ ನಿಂಗೊ.ನಿಂಗೊಗೆ ಎಂತ ಬೇಕಾರೂ ಆನು ತೆಗದು ಕೊಡುವೆ. ರೂಮಿಲ್ಲಿ ಇಪ್ಪ ನಿಂಗಳ ಅಗತ್ಯದ ವಸ್ತುಗಳ ತೆಕ್ಕೊಳ್ಳಿ. ನಾವೀಗಳೇ ನಮ್ಮ ಮನಗೆ ಹೋಪೋ°” ಹೇಳಿ ಅವರ ಮನಗೆ ಕರಕ್ಕೊಂಡು ಹೋದ°.

ಸುಪ್ರಿಯಂಗೆ ಇಷ್ಟೆಲ್ಲ ಘಟನೆ ನೋಡುಗ ಮಾತಾಡ್ಲೇ ಎಡಿಯದ್ದಷ್ಟು ಎದೆ ಭಾರ ಆತು. ಸುಶೀಯತ್ರೆ ಕೇಶವಂಗೆ ಎಷ್ಟು ಪ್ರೀತಿ. ಸಣ್ಣ ಮಕ್ಕೊ ಚಾಕಲೇಟ್ ಸಿಕ್ಕಿರೆ ಕೂಡ ಇಷ್ಟು ಕೊಶಿಯಾಗ.ಅಷ್ಟು ಸಂತೋಶಲ್ಲಿ ವಿಜಯನನ್ನು, ತಮ್ಮನನ್ನು ಕರಕ್ಕೊಂಡು ಹೋದವನ್ನೇ. ಆರೂ ಇಲ್ಲೇಳಿ ಸಂಕಟ ಪಟ್ಟುಕೊಂಡಿದ್ದ ವಿಜಯಂಗೆ ಈಗ ಅಜ್ಜಿ, ಸೋದರಮಾವ,ಅತ್ತೆ,ದೊಡ್ಡಮ್ಮ……ಓಹ್…. ದೇವರೇ ಒಂದು ವಾರದ ಹಿಂದೆ ಇದರ ಕಲ್ಪನೆ ಕೂಡ ಇತ್ತಿದ್ದಿಲ್ಲೆ. ಇನ್ನು ವಿಜಯನ ಬದುಕಿಲ್ಲಿ ಯೇವಗಲೂ ಸಂತೋಶ ಮಾಂತ್ರ ತುಂಬಿಕೊಂಡಿರಲಿ..

“ಗಂಟೆ ಎಂಟಾತು.ನಿನ್ನ ಎಲ್ಲಿ ಬಿಡೆಕು?” ಸುದೀಪ ಕೇಳಿಯಪ್ಪಗಳೇ ಅದಕ್ಕೆ ಇರುಳು ಎಂಟು ಗಂಟೆ ಆತೂಳಿ ಗೊಂತಾದ್ದು.
“ಓಹ್! ಇನ್ನೀಗ ಹಾಸ್ಟೆಲಿಂಗೆ ಹೋಪಲೆಡಿಯ. ಅಬ್ಬೆ ಹತ್ರೆ ಹೇಳೆಕು.ಮನಗೆ ಬಯಿಂದೆ ಹೇಳ್ಲೆ. ಇಲ್ಲದ್ರೆ ನಾಳಂಗೆ ಬೈಗು ಎನ್ನ…..”

“ಮನಗೆ ಬಿಡೆಕ ನಿನ್ನ?” ಸುದೀಪನ ಪ್ರಶ್ನೆಗೆ ಉತ್ತರ ಕೊಡದ್ದೆ ಅವನ ಮೋರೆ ನೋಡಿತ್ತು.
‘ಎನಗೆ ಎಲ್ಲಿಗೂ ಹೋಯೆಕೂಳಿ ಆವ್ತಿಲ್ಲೆ, ನಿನ್ನೊಟ್ಟಿಂಗೇ ಇರೆಕೂ’ ಮನಸ್ಸು ಹೇಳಿದ ಮಾತಿಂಗೆ ದೆನಿ ಸೇರ್ಸುವಷ್ಟು ಧೈರ್ಯ ಅದಕ್ಕಿಲ್ಲೆ.

“ಅಂಬಗ ಎನ್ನೊಟ್ಟಿಂಗೆ ಬತ್ತೆಯಾ?, ನಾಳಂಗೆ ಒಟ್ಟಿಂಗೆ ಬಪ್ಪ°” ಅದಕ್ಕೇ ಕಾವ ಹಾಂಗೆ ಬೇಗ ಒಪ್ಪಿಯಪ್ಪಗ ಅವಂಗೆ ಮನಸಿಲ್ಲಿ ನೆಗೆ ಬಂದರೂ ತಡಕ್ಕೊಂಡ.
‘ನಿನ್ನ ಮನಸ್ಸು ಎನಗೆ ಗೊಂತಾಗದ ಕೂಸೇ..’ ಅವನ ಮನಸಿನ ಮಾತು ಕೂಡ ಬಾಯಿಲಿ ಬಯಿಂದಿಲ್ಲೆ.

“ಎನಗೆ ಹಾಸ್ಟೆಲಿಂಗೆ ಹೋದರೆ ಇಂದು ಖಂಡಿತ ಒರಕ್ಕು ಬತ್ತಿತಿಲ್ಲೆ ಭಾವಾ° , ವಿಜಯನ ಬದ್ಕು ನೇರ್ಪ ಆತನ್ನೇಳಿ ಎಷ್ಟು ಕೊಶಿಯಾವ್ತು ಗೊಂತಿದ್ದಾ.ಅದಕ್ಕೆ ಒಂದೇ ಬಿಟ್ಟಿಂಗೆ ಎಲ್ಲೋರು ಸಿಕ್ಕಿದವನ್ನೇ.ಅದು ಜಾನ್ಸುಗಳೇ ಕೊಶೀ..”

“ಹೋ..ಹಾಂಗೆ ಒರಕ್ಕು ಬಾರದ್ದಾ….” ಅವನ ಕುಶಾಲಿನ ನೆಗೆ ಕಾಂಬಗ ಅದಕ್ಕೆ ‘ಎನ್ನ ಮನಸಿಲ್ಲಿಪ್ಪದು ಅವಂಗೆ ಗೊಂತಾತಾ’ಳಿ ಆತು.

“ಎನ್ನೊಟ್ಟಿಂಗೆ ಬಂದರೆ ಒರಕ್ಕು ಬಕ್ಕಾ” ಅವ ಕೇಳಿದ್ದಕ್ಕೆ ಎರಡೂ ಕೈಲಿ ಮೋರೆ ಮುಚ್ಚಿತ್ತದು.

“ಹ್ಹ..ಹ್ಜ….ಇದಾ..ಪ್ರಿಯಾ..ಇಲ್ಲಿ ನೋಡು” ಅವ° ಅದರ ಮೋರೆಂದ ಕೈ ತೆಗದ°.

“ಭಾವಾ°…ಅದೂ…..ಅದೂ…..” ಅಷ್ಟು ಹೇಳಿಕ್ಕಿ ಸುಮ್ಮನೆ ಹೆರ ನೋಡಿತ್ತು. ಅವ° ನೆಗೆ ಮಾಡಿಂಡೇ ಸುರೇಶಂಗೆ ಪೋನು ಮಾಡಿ ಸುಪ್ರಿಯನ ಮನಗೆ ಕರಕ್ಕೊಂಡು ಹೋಪ ವಿಶಯ ಹೇಳಿದ°.

“ಇದೀಗ ಯೇವಗಲೂ ಸುದೀಪನೊಟ್ಟಿಂಗೆ ತಿರುಗುತ್ತನ್ನೇ. ಪರೀಕ್ಷೆ ಮುಗಿವನ್ನಾರ ಕಾವದಕ್ಕಿಂತ ಬೇಗ ಮದುವೆ ಮಾಡಿ ಕಳುಸುದೊಳ್ಳೆದಾ ಕಾಣ್ತು” ಸುರೇಶ ಹೇಳಿದ್ದು ಕೇಳಿ ಶೋಭ ಗೆಂಡನತ್ರೆ ಹೇಳಿದವು.
“ಇಷ್ಟು ದಿನ ಅದುವೇ ಸುದೀಪನ ಹೆಸರು ಹೇಳಿರೆ ದರ್ಸಿಂಡಿದ್ದದು. ಈಗ ಹೇಂಗೆ ಅಷ್ಟು ಇಷ್ಟ ಆದ್ದೋ. ಎಂತಾದರೂ ಒಳ್ಳೆದೇ ಆತು. ಆನೀಗಳೇ ಅತ್ತಿಗ್ಗೆ ಪೋನು ಮಾಡ್ತೆ” ಹೇಳಿಕ್ಕಿ ಅಂಬಗಳೇ ಸುದೀಪನ ಅಬ್ಬಗೆ ಪೋನು ಮಾಡಿ ವಿಶಯ ತಿಳಿಶಿದವು.
“ಆನೂ ಅದನ್ನೇ ಹೇಳೆಕೂಳಿ ಇತ್ತಿದ್ದೆ ಅತ್ತಿಗೇ. ಅದರ ಪರೀಕ್ಷೆ ಎಡೇಲಿ ಉಪದ್ರಪ್ಪದು ಬೇಡಾಳಿ ಇವು ಗಡಿಬಿಡಿ ಮಾಡೆಡ ಹೇಳಿದವು. ನಿಂಗೊಗೆ ತೊಂದರೆ ಆಗದ್ರೆ ನಾಡ್ದಿಂಗೆ ಪೂಜೆ ದಿನವೇ ಬದ್ದ ಮಾಡುವನಾ” ಅವು ಗೆಂಡನತ್ರೆ ಕೂಡ ಒಂದು ಮಾತು ಕೇಳದ್ದೆ ದಿನ ನಿಗಂಟು ಮಾಡಿದ್ದದೇ..
“ಹೋ..ಧಾರಳ ಅಕ್ಕು. ಇನ್ನಂಬಗ ಭಾವ ಭಾವಂದ್ರು ಮಾತಾಡ್ಲಿ. ಆದಷ್ಟು ಬೇಗ ಮುಹೂರ್ತ ನೋಡ್ಲಕ್ಕು.ಬದ್ದ ಕಳುದು ತಿಂಗಳುಗಟ್ಲೆ ಮುಂದೆ ಕೊಂಡೋಪದು ಬೇಡ ” ಹೇಳಿದವು.

“ನಿಂಗಳೇ ನಿಗಂಟು ಮಾಡಿದ ಮತ್ತೆ ಎಂಗೊಗೆಂತ ಕೆಲಸ” ಹೇಳಿ ಅವರದ್ದೂ ಒಪ್ಪಿಗೆ ಸಿಕ್ಕಿತ್ತು. ಬದ್ಧ ಕಳುದು ಹದಿನೈದು ದಿನಲ್ಲಿ ಮದುವೆ ಹೇಳಿಯೂ ಎರಡೂ ಮನೆಯವು ಆ ಕ್ಷಣಲ್ಲೇ  ಸೇರಿ ನಿಗಂಟು ಮಾಡಿದವು.

ಸುಪ್ರಿಯನ ಕರಕ್ಕೊಂಡು ಸುದೀಪ ಬಂದಪ್ಪಗ ಅತ್ತೆಯ ಬಾಯಿಂದ ಈ ವಿಶಯ ಗೊಂತಾತದಕ್ಕೆ.

“ಶ್ಶೋ..ಭಾವಾ° ಇಷ್ಟು ಬೇಗವಾ…..” ಅವನ ಮೋರೆ ನೋಡಿತ್ತು. ಬಾಯಿಲಿ ಹೇಳದ್ದ ನೂರು ಮಾತುಗಳ ಅರ್ಥ ಅವನ ಒಂದು ಕಣ್ಣ ನೋಟಲ್ಲಿ ಸಿಕ್ಕಿತ್ತದಕ್ಕೆ..

ಅತ್ತಗಂತೂ ಬದ್ಧ,  ಮದುವೆ ತಯಾರಿಯ ಸಂಭ್ರಮ. ಸುಪ್ರಿಯನತ್ರೆ ಅದರ ಇಷ್ಟಂಗಳ ಎಲ್ಲ ಕೇಳಿ ಪಟ್ಟಿ ಮಾಡಿದವು. ಅತ್ತೆಯ ಪ್ರೀತಿ, ಕೊಶಿ ಕಾಂಬಗ ಸುಪ್ರಿಯಂಗೆ ಹಳೆಯ ಕಾಟು ವಿಶಯಂಗೊ ಎಲ್ಲ ಮರದು ಮನಸಿಲ್ಲಿ ಬರೀ ಸುದೀಪ ಮಾಂತ್ರ ತುಂಬಿದ°. ಕಣ್ಣು ಮುಚ್ಚಿರೂ,ಒಡದರೂ ಅವನ ರೂಪ ಮಾತ್ರ ಅದರ ಮನಸಿಲ್ಲಿ ಕಾಂಬಲೆ ಸುರುವಾತು.

ಇರುಳು ಇದು ಅತ್ತೆ,ಮಾವನತ್ರೆ ಪಟ್ಟಾಂಗ ಹೊಡಕ್ಕೊಂಡಿಪ್ಪಗ ಸುದೀಪ ಪೋನಿಲ್ಲಿ ಎಂತೋ ಕಾರ್ಯವಾದ ವಿಶಯವ ಸುರೇಶನತ್ರೆ ಮಾತಾಡಿಂಡಿದ್ದದು ಸುಪ್ರಿಯಂಗೆ ಗೊಂತೇ ಆಯಿದಿಲ್ಲೆ.

ಮನೆಲಿ ಪೂಜೆ, ಬದ್ದ ಎಲ್ಲ ಇಪ್ಪ ಕಾರಣ ವಿಜಯನ ಬಪ್ಪಲೇ ಬೇಕೂಳಿ ಒತ್ತಾಯ ಮಾಡಿಕ್ಕಿ, ಅಪ್ಪನ ಮೂಲಕ ಕೇಶವನ ಮನಗೂ ಹೇಳಿಕೆ ಹೇಳ್ಸಿತ್ತು ಸುಪ್ರಿಯ. ಓದಲೆ ರಜೆ ಸಿಕ್ಕಿದ ಕಾರಣ ಬದ್ಧದ ಮುನ್ನಾಳ ದಿನ ಹಾಸ್ಟೆಲಿಂದ ಪಡಿಬಿಡಾರ ಕಟ್ಟಿಂಡು ಅಣ್ಣನೊಟ್ಟಿಂಗೆ ಮನಗೆ ಹೋಪಗ ಕೂಡ ಅವನ ಮೋರೆಲಿ ಹೊಳವ ನೆಗೆಯ ಗುಟ್ಟು ಕನಸಿನ ಲೋಕಲ್ಲಿ ಸುದೀಪನೊಟ್ಟಿಂಗೆ ತೇಲುವ ಅದಕ್ಕೆ ಅಂದಾಜಾಯಿದಿಲ್ಲೆ.

ವಿಜಯನು ಮಾವನ ಮನೆ ಸೇರಿದ ಮತ್ತೆ ತುಂಬ ಕೊಶಿಲಿಪ್ಪದು ಕಾಂಬಗ  ಒಡದ ಮನಸ್ಸುಗಳ ಜೊತೆ ಸೇರ್ಸಿದೆ ಹೇಳುವ ಸಂತೋಶ ಅದಕ್ಕೆ. ವಿಜಯ ಮಾವನ ಮನೆಲಿ ಇಪ್ಪ ಕಾರಣ ಅಲ್ಲಿಗೆ ಸರಿಯಾಗಿ ಪೋನಿಂಗೆ ರೇಂಜು ಸಿಕ್ಕದ್ದೆ ಮದ್ಲಾಣಾಂಗೆ ಅದರತ್ರೆ ಮಾತಾಡ್ಲೆಡಿಯದ್ದೆ ರಜ ಉದಾಸೀನ ಆದರೂ ಈಗ ಮನಸ್ಸು ತುಂಬ ಸುದೀಪನೇ ಇಪ್ಪ ಕಾರಣ ಹೆಚ್ಚು ತಲೆಬೆಶಿ ಮಾಡಿದ್ದಿಲ್ಲೆ ಅದು.

ಮನಗೆತ್ತಿಕ್ಕಿ ವಿಜಯನ ವಿಶಯ ಎಲ್ಲ ಅಬ್ಬೆ ಹತ್ತರೆ ವಿಸ್ತಾರವಾಗಿ ಹೇಳೆಕು ಗ್ರೇಶಿರೂ ಅಬ್ಬಗೆ ಪೂಜೆ, ಬದ್ದದ ಸಾಹಿತ್ಯ ಮಾಡ್ಲಿಪ್ಪ ಕಾರಣ ಹೆಚ್ಚು ಮಾತಾಡ್ಲೂ ಆಯಿದಿಲ್ಲೆ. ಇರುಳು ಒರಗುಲೆ ಹೆರಟಿಕ್ಕಿ ನಿತ್ಯಾಣ ಹಾಂಗೆ ಸುದೀಪಂಗೆ ಪೋನು ಮಾಡಿಯಪ್ಪಗ ಒಂದು ಗುಟ್ಟು ಹೇಳಿದ°

“ನಾಳೆಂಗೆ ಮತ್ತೊಂದು ವಿಶೇಶ ಕೂಡ ಇದ್ದು ಪ್ರಿಯಾ..ನಿನ್ನತ್ರೆ ಹೇಳದ್ದೆ ನಿನಗೊಂದು ಸರ್ ಪ್ರೈಸ್ ಕೊಟ್ಟದು ಎಂಗೊ. ನಾಳೆ ನಿನ್ನ ಅಣ್ಣಂಗು ಮದುವೆ ನಿಶ್ಚಯ ಇದ್ದು”
“ಹ್ಹೇಂ……ಎನಗೆ ಗೊಂತಾಗದ್ದೆ…..!!ಮನುಗಿದಲ್ಲಿಂದ ಎದ್ದು‌ ಕೂದತ್ತದು..” ಅದೇವಗ ನಿಗಂಟಾದ್ದು.ಎನ್ನತ್ರೇಕೆ ಹೇಳಿದ್ದಿಲ್ಲೆ. ನೀನೂದೆ ಹೇಳಿದ್ದಿಲ್ಲೆ ಅಲ್ದಾ….” ಅದಕ್ಕೆ ದುಃಖ ಬಂದು ಮಾತಾಡ್ಲೇ ಎಡಿಗಾಯಿದಿಲ್ಲೆ. ಅಣ್ಣನ ಮದುವೆ ಬಗ್ಗೆ ಎಷ್ಟು ಕನಸಿತ್ತು. ಯೇವದೋ ಕೂಸಿನ ಅಣ್ಣಂಗೆ ಮದುವೆ ಮಾಡ್ಸುವ ಬದಲು…….!! ಇನ್ನೀಗ ಹೇಳಿ ಎಂತ ಪ್ರಯೋಜನ! ಒಂದೇ ಒಂದು ತಂಗೆ ಇದ್ದರೂ ಅದರತ್ರೆ ಹೇಳದ್ದೆ ಕೂದ್ದು ಸಾಕು. ಅಣ್ಣನ ಬೇಂಕಿಲ್ಲಿ ಕೆಲಸ ಮಾಡುವ ಆರಾರಾದಿಕ್ಕಾ, ಅಲ್ಲದ್ರೆ ಇಷ್ಟು ಬೇಗ ನಿಗಂಟು ಮಾಡವು…..

“ಏಕೆ ಮಾತಾಡ್ತಿಲ್ಲೆ. ಆರೂಳಿ ಗೊಂತಾತ? ”

“ಎನ್ನತ್ರೆ ಆರೂ ಈ ವಿಶಯ ಹೇಳಿದ್ದವಿಲ್ಲೆ….” ಅಷ್ಟು ಹೇಳಿಯಪ್ಪಗ ಕೂಗಲೆ ಬಂತದಕ್ಕೆ. ಅಣ್ಣಂಗೆನ್ನತ್ರೆ ತುಂಬ ಪ್ರೀತಿ ಇದ್ದು ಜಾನ್ಸಿದ್ದೆ. ಅವ ಕೂಡ ಒಂದು ಮಾತು ಹೇಳದ್ದೆ……”

“ಈ ಇರುಳು ಕೂಗಿರೆ ಎನಗೆ ಇಲ್ಲಿಂದ ಬಂದು ಮಂಕಾಡ್ಸುಲೆ ಎಡಿಯ. ನಿನ್ನತ್ರೆ ಹೇಳೆಡ ಹೇಳಿದ್ದು ಆನೇ. ಇದಾ…ಈಗ ನೀನೂದೆ ಗೊಂತಾಗದ್ದಾಂಗೆ ಕೂರೆಕು. ನಿನ್ನತ್ರೆ ಹೇಳದ್ರೆ ನಿನಗೆ ಬೇಜಾರಕ್ಕೂಳಿ ಈ ಇರುಳಾನು ಪೋನು ಮಾಡಿದ್ದು” ಹೇಳಿ ಆ ವಿಶಯ ಹೇಳಿಯಪ್ಪಗ ಸುಪ್ರಿಯಂಗೆ ನಂಬಲೇ ಎಡಿಗಾಯಿದಿಲ್ಲೆ.

“ನಿಜವಾಗಿಯೂ ಅಪ್ಪಾ..ಎನಗೇಕೆ ಅಂದಾಜಾಯಿದಿಲ್ಲೆ, ಛೇ….,ಎಷ್ಟು ಪೆದ್ದು ಆನು…..ಆದರೆ ಎನಗೀಗ ಎಷ್ಟು ಕೊಶಿ ಆವ್ತು ಗೊಂತಿದ್ದಾ. ಎಲ್ಲದಕ್ಕೂ ಕಾರಣ ನೀನಲ್ಲದಾ ಭಾವಾ°. ನಿನ್ನ ಈ ಉಪಕಾರಕ್ಕೆ ಎಂತ ಕೊಟ್ಟರೂ ಕಮ್ಮಿಯೇ……”

“ನೀನೀಗ ಎಂತದೂ ಕೊಡೆಡ, ಆದರೆ ನಾಳಂಗೆ ಹತ್ತು ಜನ ಸೇರುಗ ಎನ್ನ “ನೀನು,ಹೋಗು,ಬಾ” ಹೇಳಿ ಎಲ್ಲ ಹೇಳಿರೆ ಇದ್ದನ್ನೇ ಮಡುಗೆ ನಿನ್ನ….. ಹ್ಹ….ಹ್ಹ… ” ಅವ° ಹಾಂಗೆ ಹೇಳಿ ಅದರ ನೆಗೆ ಮಾಡ್ಸಿಕ್ಕಿ ಪೋನು ಮಡುಗಿದ°.

ವಿಜಯನ ಸುರೇಶಂಗೆ ಮಾತಾಡ್ಸಿದ್ದು ಅವನೇ. ಸುರೇಶಂಗೆ ಮದಾಲು ಪೋನು ಮಾಡಿ ಕೇಳಿಯಪ್ಪಗ ಅವ° “ವಿಜಯನ ಸುಮಾರು ಸರ್ತಿ ನೋಡಿ ಗೊಂತಿದ್ದು, ಅಮ್ಮ, ಅಪ್ಪ ಅಕ್ಕು ಹೇಳಿರೆ ಎನ್ನಂದಡ್ಡಿಯಿಲ್ಲೆ” ಹೇಳಿದ°

ಹಾಂಗೆ ಅವ° ಅವರಲ್ಲಿಗೆ ಬಂದು ವಿಷಯ ಹೇಳಿಯಪ್ಪಗ ಶೋಭಂಗೆ ತುಂಬ ಕೊಶಿಯಾತು
” ಅಲ್ಲದ್ರೂ ಆನು ಮನಸಿಲ್ಲಿ ಗ್ರೇಶಿಂಡಿದ್ದ ವಿಶಯ ಇದು, ಆದರೆ ವಿಜಯ ಇನ್ನೂ ಕಲಿಯೆಕು ಹೇಳ್ತು ಹೇಳಿ ಸುಪ್ರಿಯ ಹೇಳಿದ ಕಾರಣ ಸದ್ಯಕ್ಕೆ ಈ ವಿಚಾರ ಮಾತಾಡುದು ಬೇಡಾಳಿ ಜಾನ್ಸಿದ್ದು. ನೀನು ಹೇಳಿದ ಮತ್ತೆ ಮಾವನ ಒಪ್ಪಿಗೆ ಇದ್ದರೆ ಸಾಕು” ಹೇಳಿದವು.

“ನದೀ ಮೂಲ, ಸ್ತ್ರೀ ಮೂಲ, ಋಷಿ ಮೂಲ ಎಲ್ಲ ಹುಡ್ಕಿಂಡು ಹೋಪಲಾಗಾಡ, ಹಾಂಗಾಗಿ ಅದರ ಅಬ್ಬೆ ಹೇಂಗೇ ಇರಲಿ, ಇದರ ಕಾಂಬಗ ಒಳ್ಳೆ ಕೂಸಿನ ಹಾಂಗೆ ಕಾಣ್ತು. ಆನೂದೆ ಸುಪ್ರಿಯನೊಟ್ಟಿಂಗೆ ಒಂದೆರಡು ಸರ್ತಿ ಕಂಡಿದೆ ಅದರ, ಸುರೇಶಂಗೆ ಅಕ್ಕಾರೆ ಎಂಗಳಂದಡ್ಡಿಯಿಲ್ಲೆ” ಹೇಳಿ ಮಾವನೂ ಹೇಳಿದ ಮತ್ತೆ ಮದಾಲು ಸುಶೀಲನತ್ರೆ ಈ ವಿಚಾರ ಮಾತಾಡಿದ್ದು

“ಎನ್ನ ಮಗಳಿಂಗೆ ಆನು ಜಾನ್ಸಿರೆ ಕನಸಿಲ್ಲಿ ಕೂಡ ಹೀಂಗಿದ್ದ ಸಂಬಂಧ ಸಿಕ್ಕ, ಮದುವೆ ಕಳುದ ಮತ್ತೆ ಬೇಕಾರೆ ಕಲಿಯಲಿ. ದೇವರೇ ಎನ್ನ ಮಗಳಿಂಗೆ ಹೀಂಗಿದ್ದ ಪೊದು ಬಂದದೇ ಪುಣ್ಯ” ಹೇಳಿ ಸೆರಗಿಲ್ಲಿ ಕಣ್ಣೀರು ಉದ್ದಿತ್ತು.
ವಿಜಯಂಗೂ ಸುರೇಶನ ವಿಶಯ ಹೇಳಿಯಪ್ಪಗ ಬೇಡ ಹೇಳಿದ್ದಿಲ್ಲೆ. ಸುಪ್ರಿಯನ ಮೂಲಕ ಅವನ ಒಳ್ಳೆ ಗುಣಂಗೊ ಗೊಂತಿದ್ದದಕ್ಕೆ. ತಂಗೆ ಹೇಳಿರೆ ಪ್ರಾಣ ಅವಂಗೆ, ಯಾವುದೇ ದುರಭ್ಯಾಸ ಇಲ್ಲದ್ದ, ಕಾಂಬಲೂ ಚಂದ ಇಪ್ಪ, ಎಲ್ಲಕ್ಕಿಂತ ಮುಖ್ಯವಾಗಿ ವಿಜಯನ ಬಗ್ಗೆ ಎಲ್ಲಾ ವಿಶಯ ಗೊಂತಿಪ್ಪ ಅವನ ಬೇಡ ಹೇಳ್ಲೆ ಅದರ ಮನಸ್ಸು ಒಪ್ಪಿದ್ದಿಲ್ಲೆ.
“ಅಮ್ಮ ಹೇಳಿದಾಂಗೆ” ಹೇಳಿತ್ತು ಅದೂದೆ.

“ಆನು ಹುಡ್ಕಿರೆ ಎನ್ನ ಒಪ್ಪಕ್ಕಂಗೆ ಹೀಂಗಿದ್ದ ಮನೆ ಸಿಕ್ಕ, ಇದೀಗ ರಜ ಗಡಿಬಿಡಿ ಆದರೂ ಈ ಕುಳವಾರು ಎಂಗೊಗೂ ಅಕ್ಕು” ವಿಜಯನ ಸೋದರ ಮಾವನ ಒಪ್ಪಿಗೆ ಕೂಡ ಸಿಕ್ಕಿದ ಮತ್ತೆ ಒಂದು ದಿನ ಸುದೀಪನೇ ಅವರಲ್ಲಿಗೆ ಸುರೇಶನ,ಅತ್ತೆಮಾವನ ಕರಕ್ಕೊಂಡು ಹೋದ°.
“ಸುಪ್ರಿಯಂಗೆ ಒಂದು ಸರ್ ಪ್ರೈಸ್ ಮಾಡುವ,ಅದರತ್ರೆ ಈಗ ಹೇಳುದು ಬೇಡ” ಹೇಳಿ ಅವ° ಹೇಳಿಯಪ್ಪಗ ನೆಗೆ ಮಾಡಿಂಡೇ ಎಲ್ಲೋರು ಒಪ್ಪಿದವು.

ಸುಶೀಲನೂ ಅಪ್ಪನಮನಗೆ ಬಂದ ಕಾರಣ ಅಲ್ಲಿ ಹೋಗಿ ಕೂಸು ನೋಡಿಕ್ಕಿ, ಎಲ್ಲ ತೀರ್ಮಾನ ಮಾಡಿಕ್ಕಿಯೇ ಬಂದದವು.
ಶಾರದಕ್ಕಂಗೆ ಸಂತೋಶ ತಡವಲೇ ಎಡಿಯ.
“ನಿಂಗಳಿಂದಾಗಿ ಎನ್ನ ಮಗಳು ಸಿಕ್ಕಿತ್ತು ಡಾಕ್ಟರೇ, ಈಗ ಪುಳ್ಳಿಯ ಮದುವೆಯೂ ನಿಗಂಟಾತು. ಮಗಳ ಮದುವೆ ನೋಡುವ ,ಮಾಡುವ ಪುಣ್ಯ ಇಲ್ಲದ್ರೂ ಈಗ ಪುಳ್ಳಿಯ ಮದುವೆ ನೋಡ್ಲೆಡಿತ್ತನ್ನೇ,ಅಷ್ಟು ಸಾಕೆನಗೆ. ಇವು ಸಾವಲಪ್ಪಗ ” ಸುಶೀಯ ಕೈ ಬಿಡೆಡ” ಹೇಳಿದ್ದಕ್ಕೆ, ಇನ್ನೆಂದೂ ಮಗಳ ದೂರ ಮಾಡ್ತಿಲ್ಲೆ ಡಾಕ್ಟರೇ ” ಅಬ್ಬೆಯ ಮಾತು ಕೇಳಿ ಸುಶೀಲನ ಸೆರಗಿಲ್ಲಿ ಕಣ್ಣುದ್ದಿತ್ತು.
ಹಾಂಗೇ ಸುಪ್ರಿಯನ ಬದ್ಧದ ದಿನವೇ ಇವರದ್ದೂ ಬದ್ದ ಮಾಡ್ಲೆ ಅಂದಾಜು ಮಾಡಿದವು.

“ಎನ್ನ ಅಣ್ಣನ ಮದುವೆ ಆವ್ತರೂ ಎನ್ನತ್ರೊಂದು ಮಾತು ಹೇಳಿದ್ದಿಲ್ಲೆ ಕಳ್ಳಿ” ಕಾರಿಂದ ಇಳುದ ವಿಜಯನ ಅಪ್ಪಿ ಅದರತ್ರೆ ಚಪ್ಡಿ ಕೋಪ ತೋರ್ಸಿತ್ತು ಸುಪ್ರಿಯ°.

“ಇದಾ  ಸುಪ್ರಿಯ ಜನ ಬದಲಿ ಸ್ವಾಗತ ಮಾಡೆಡ, ನೀನಿಗ ಹಾಂಗೆ ಎದುರುಗೊಂಬೆ ಹೇಳಿ ಸುದೀಪ ಕಾಯ್ತಾಯಿದ್ದ ಪಾಪ. ಸುರೇಶಂಗೆ ವಿಜಯನ ನೋಡ್ಲೆ ಅವಕಾಶ ಮಾಡಿಕೊಡು ಮಾರಾಯ್ತೀ,ನೀನೇ ಹೋಗಿ ಪಟ್ಟಾಂಗ ಹೊಡದರೆ ಪಾಪ ಅವ° ಎಂತ ಮಾಡುದು…..” ಪುಟ್ಟತ್ತೆ ಕುಶಾಲು ಮಾಡಿಯಪ್ಪಗ ಸುಪ್ರಿಯನ ಮೋರೆ ಕೆಂಪಾಗಿ ಸುದೀಪನ ಓರೆಕಣ್ಣಿಲ್ಲಿ ನೋಡಿತ್ತು. ವಿಜಯಂಗೂ ನಾಚಿಕೆ ಆಗಿ ಸುರೇಶನ ನೋಡಿ ತಲೆತಗ್ಸಿತ್ತು.

ಸುಶೀಲನ ಮನಸ್ಸು ತಂಪಾತು. ಸುಪ್ರಿಯನ ಮನೆ,ಅವರ ಮನೆಯವರ ಪ್ರೀತಿಯ ನಡವಳಿಕೆ, ಸುರೇಶನ ಗುಣ…..ಎಲ್ಲವೂ…..
ಮಗಳ ಬದುಕಿಲ್ಲಿ ಇನ್ನು ಮುಂದೆ ಸೌಭಾಗ್ಯ ಮಾತ್ರ ತುಂಬಿಕೊಂಡಿರಲಿ ಹೇಳಿ ಪೂಜೆ ಅಪ್ಪಗ ದೇವರತ್ರೆ ಪ್ರಾರ್ಥಿಸಿತ್ತು.

ಹದಿನೈದು ದಿನಲ್ಲಿ ಸುಪ್ರಿಯನ ಮದುವೆ ಹೇಳಿಯೂ ಪರೀಕ್ಷೆ ಕಳುದ ಮತ್ತೆ ಸುರೇಶನ ಮದುವೆ ಹೇಳಿಯೂ ತೀರ್ಮಾನ ಮಾಡಿಯಪ್ಪಗ ಕೇಶವಂಗೆ ಸಮದಾನ ಆತು.
“ಆಡಂಬರ ಮಾಡಿದ್ದೂಳಿ ಗ್ರೇಶುಲಾಗ, ಎನ್ನ ತಂಗೆ ಮಗಳ ಮದುವೆ ಗಡ್ದಿಲ್ಲಿ ಮಾಡೆಕೂಳಿ ಆಸೆ ಎನಗೆ. ಅಪ್ಪ ಇರ್ತಿದ್ದರೆ ಇದಕ್ಕಿಂತಲೂ ಲಾಯ್ಕಲ್ಲಿ ಮಾಡಿಕೊಡ್ತಿತವು. ಹಾಂಗಾಗಿ ಈ ವಿಶಯಲ್ಲಿ ನಿಂಗೊ ಎಂತದು ಹೇಳ್ಲಾಗ ” ಹೇಳಿ ಕೈ ಮುಗುದು ಕೇಳಿಯಪ್ಪಗ ಸುಶೀಲನ ವಿಶಯ ಗೊಂತಿದ್ದ ಕಾರಣ ಅವರ ಮನಸಿಂಗೆ ಬೇಜಾರ ಮಾಡ್ಸಲೆ ಆರಿಂಗೂ ಮನಸ್ಸು ಬಯಿಂದಿಲ್ಲೆ.

ಸುಪ್ರಿಯನ ಮದುವೆ ಸರಳವಾಗಿ ಮಾಡಿ ಆ ಪೈಸೆಯ ಆಶ್ರಮಕ್ಕೆ ಕೊಡುದೂಳಿ ಸುದೀಪ ಹೇಳಿಯಪ್ಪಗ ಸುಪ್ರಿಯಂಗೆ ಅವನ ಬಗ್ಗೆ ತುಂಬ ಅಭಿಮಾನ ಉಕ್ಕಿ ಬಂತು.
ಅಂತೂ,ಇಂತೂ ಎಲ್ಲೋರ ನೆಗೆ,ತಮಾಶೆ,ಕುಶಾಲುಗಳ ಎಡೇಲಿ ಲಗ್ನಪತ್ರಿಕೆ ಬರದವು. ಸುಶೀಲಂಗೆ ಇದೆಲ್ಲ ಕನಸಿನ ಹಾಂಗೆ ಆಗಿಂಡಿದ್ದತ್ತು. ಅವರ ಮಾತು,ಕೊಶಿ ನೋಡುಗ ಅದಕ್ಕೆ ಸಂತೋಶಲ್ಲಿ ಮಾತೇ ಹೆರಡದ್ದೆ ಕಣ್ಣು ತುಂಬಿ ಬಂದಪ್ಪಗ ಆರಿಂಗೂ ಕಾಣದ್ದಾಂಗೆ ಸೆರಗಿಲ್ಲಿ ಕಣ್ಣುದ್ದಿತ್ತು.

“ನೀನೆಂತ ಆಲೋಚನೆ ಮಾಡೆಡ, ಎನ್ನ ಅಣ್ಣ ಅತ್ತಿಗೆ ನಿನ್ನ ಮಗಳ ಕೊಂಗಾಟಲ್ಲಿ ನೋಡುಗು,ಇನ್ನು ನೀನು ಕಣ್ಣೀರು ಹಾಕೆಡ, ಇಂದು ಯುಗಾದಿ. ಹಳೇ ವಿಶಯಂಗಳ ಮರದು ಹೊಸತ್ತಿನ ಮಾಂತ್ರ ಆಲೋಚನೆ ಮಾಡು, ಆ ಮಕ್ಕಳ ನೋಡು, ಅವರ ಕೊಶಿಲಿ ನಾವೂದೆ ಸೇರುವ°” ಪುಟ್ಟತ್ತೆ ಹೇಳಿಯಪ್ಪಗ ಸುಶೀಲ ಅತ್ಲಾಗಿ ನೋಡಿತ್ತು.

“ಅಂತೂ ನೀನು ಸ್ವಯಂವರಕ್ಕೆ ಹೆರಟ ಕಾರಣ ನೋಡು ಅಣ್ಣಂಗೂ ಬೇಗ ಕೂಸು ಸಿಕ್ಕಿತ್ತು” ಸುದೀಪ ಸುಪ್ರಿಯನ ಕಿಮಿಲಿ ಗುಟ್ಟು ಹೇಳಿದ°. ಅದು ಅವನತ್ರೆ ಎಂತೋ ಹೇಳೆಕೂಳಿ ಮೋರೆ ತಿರುಗುಸುಗ ರಜಾ ದೂರ ಸುರೇಶನೂ ,ವಿಜಯನೂ ನೆಗೆ ನೆಗೆ ಮಾಡಿ ಮಾತಾಡುದು ಕಂಡು ಅವರ ಸುದೀಪಂಗೆ ತೋರ್ಸಿ
“ನಮ್ಮಿಂದ ಬಲ ಇದ್ದವು ಅವು” ಹೇಳಿತ್ತು. ಸುಪ್ರಿಯ ಹೇಳಿದ್ದು ಕೇಳದ್ರೂ ಅವರ ವಿಶಯವೇ ಮಾತಾಡಿದ್ದೂಳಿ ಗೊಂತಾಗಿ ಇಬ್ರೂ ಇತ್ಲಾಗಿ ನೋಡಿ ನೆಗೆ ಮಾಡಿದವು. ಅವರ ಆ ನೆಗೆಲಿ ಚೆಂದದ ಭವಿಷ್ಯದ ಬಣ್ಣ ಬಣ್ಣದ ರಂಗೋಲಿ ಹೊಳವದು ಕಾಂಬಗ ಸುಶೀಲಂಗೆ ಸಂತೋಷಲ್ಲಿ ಮತ್ತೊಂದರಿ ಕಣ್ಣು ತುಂಬಿ ಬಂತು.

ಶುಭಂ..

 “““ *****~~~~~

ಹರೇರಾಮ

ಎನ್ನ ಸ್ವಯಂವರ ಧಾರಾವಾಹಿ ಇಂದು ಮುಕ್ತಾಯ ಆವ್ತು. ಈ ಧಾರಾವಾಹಿಯ ಬೈಲಿಲ್ಲಿ ಪ್ರಕಟಿಸುಲೆ ಮುತುವರ್ಜಿ ವಹಿಸಿದ ಎಳ್ಯಡ್ಕ ಮಹೇಶಣ್ಣ ಮತ್ತೆ ಎನಗೆ ಸದಾ ಮಾರ್ಗದರ್ಶಕರಾಗಿಪ್ಪ ಶರ್ಮಣ್ಣ ಇಬ್ರಿಂಗೂ ತುಂಬು ಹೃದಯದ ಧನ್ಯವಾದಂಗೊ.

ಒಂದು ಕಥೆ ಓದಿ ಅಭಿಪ್ರಾಯ ಹೇಳಿರೆ, ವಿಮರ್ಶೆ ಮಾಡಿರೆ ಮಾತ್ರ ಒಬ್ಬ ಲೇಖಕಂಗೆ ಮುಂದೆ ಬಪ್ಪಲೆಡಿಗಷ್ಟೆ. ಬೈಲಿನ ಓದುಗ ಬಂಧುಗೊ ತುಂಬಾ ಪ್ರೀತಿಂದ ಈ ಕೆಲಸ ಮಾಡಿದ್ದಿ. ಈ ಧಾರಾವಾಹಿಲಿ ಬಂದ ಸುಶೀಲ,ಕೇಶವ, ಸುಪ್ರಿಯ, ವಿಜಯ ಎಲ್ಲರನ್ನೂ ಮನಃ ಪೂರ್ವಕ ಸ್ವೀಕರಿಸಿ, ಆ ಕಥಾಪಾತ್ರಂಗಳ ನೋವು ನಲಿವುಗಳ ಸ್ವಯಂ ಅನುಭವಿಸಿದಷ್ಟು ಸಹಜವಾಗಿ ಇವರ ಒಪ್ಪಿಕೊಂಡಿದಿ. ಆ ಎಲ್ಲಾ ಬಾಂಧವರಿಂಗೂ ಎನ್ನ ಕೃತಜ್ಞತೆಗೊ.
ಈ ಕೊನೆಯ ಕಂತನ್ನು ಕೂಡ ನಿಂಗೊ ಪ್ರೀತಿಂದ ಒಪ್ಪಿಕೊಂಡು ನಿಂಗಳ ಅಮೂಲ್ಯ ಅಭಿಪ್ರಾಯಂಗಳ ಬೈಲಿನ ಮೂಲಕ ಹಂಚುವಿ ಹೇಳಿ ಗ್ರೇಶುತ್ತೆ.

ಎಲ್ಲಾ ಬಾಂಧವರಿಂಗೂ ಮತ್ತೊಂದರಿ ಹೃದಯ ತುಂಬಿದ ಧನ್ಯವಾದಂಗೊ

  ಪ್ರಸನ್ನಾ ವಿ ಚೆಕ್ಕೆಮನೆ
  ಧರ್ಮತ್ತಡ್ಕ

ಪ್ರಸನ್ನಾ ಚೆಕ್ಕೆಮನೆ

8 thoughts on “ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ

  1. ಪ್ರಸನ್ನಕ್ಕೋ…
    ಧಾರಾವಾಹಿಕಥೆಲಾಯ್ಕಕ್ಕೆ ಬಂಯ್ದು .ತುಂಡುತುಂಡು ಕಥಗಳ ಓದಿ”ಛೆ..ಇನ್ನು ಸೋಮವಾರಕ್ಕೊರೇಂಗೆ ಕಾಯದ್ದೇ ಬೇರೆ ದಾರಿಇಲ್ಲೆನ್ನೇ”ಳಿ ಆಗಿಂಡಿತ್ತಿದ್ದು.
    ಇಂದೀಗ ಕೊನೇಭಾಗವ ಓದಿ ಅವರೊಟ್ಟಿಂಗೆ ಆನುದೇ ಸಂತೋಷಲ್ಲಿ ಕಣ್ಣು ಉದ್ದಿಗೊಂಡೆ.(“ಇಲ್ಲಿಆರಿಂಗೂಕಾಣದ್ದಾಂಗೆ”.)

  2. ತುಂಬಾ ಲಾಯ್ಕಲ್ಲಿ ಮೂಡಿ ಬಯಿಂದು ಕತೆ.ಇದು ಕತೆ ಹೇಳಿ ಎಲ್ಲಿಯೂ ಅನ್ನಿಸಿದ್ದಿಲ್ಲೆ.ನಮ್ಮ ಕಣ್ಣೆದುರೇ ನಡೆದ ಘಟನೆ ಹಾಂಗೆ ಕಂಡತ್ತು.ಒಂದರಿ ಓದಿದರೆ ಎರಡು ದಿನ ಅದೇ ಗುಂಗಿಲಿ ಇಪ್ಪ ಹಾಂಗೆ ಮಾಡ್ತು.ತುಂಬಾ ಮನೋಜ್ಞವಾಗಿತ್ತು.ಸುಶೀಲಂಗೆ ಮಕ್ಕೊಗೆ ಕೊನೆಗೂ ಒಳ್ಳೆ ಜೀವನ ಸಿಕ್ಕಿತ್ತು….. ಎಂಗೊಗೋಸ್ಕರ ಇನ್ನೊಂದು ಕತೆ ಬರೆರಿ ಪ್ರಸನ್ನಕ್ಕಾ…

  3. ಸ್ವಯಂವರ ಕಾದಂಬರಿ ಭಾರಿ ಲಾಯ್ಕಲಿ ಮೂಡಿ ಬೈಂದು. ಜೀವನಕ್ಕೆ ಬೇಕಾದ ಒಳ್ಳೆ ಮೌಲ್ಯಗಳ ಎತ್ತಿ ಹಿಡಿದು ತೋ ರುಸಿದ್ದು. ಅಪ್ಪ ಅಮ್ಮನ ಅತಿಮುದ್ದು , ಅದರ ದುರುಪಯೋಗ , ಮುಗ್ಧತೆಯ ದುರುಪಯೋಗ, ಮುಂದಿನ ಅನಾಹುತ … ಪಶ್ಚಾತ್ತಾಪ ಎಲ್ಲವೂ ನೈಜ ಕಣ್ಣೆದುರೇ ನಡೆದ ಹಾಂಗೆ ಆತು. ಪ್ರತಿಯೊಂದು ಹಂತಲೂ ನವಗೆ ಉತ್ತಮ ಪಾಠ ಕಲ್ಸಿದ ಹಾಂಗಿತ್ತು ಕಥೆ. ಮುಂದೆ ಸುಶೀಲ ನ ಕಥೆಯೇ ಸುಪ್ರಿಯನ ಕಣ್ಣು ತೆರಶುದು ತುಂಬಾ ಮಾದರಿ ಆತು.
    ಕಥೆಯ ಎಡಲಿ ಸಮಾಜಲಿ ಈಗ ಗೊಂತಿದ್ದೋ ಗೊಂತಿಲ್ಲದ್ದೆಯೋ ಇಪ್ಪ ಸಮಸ್ಯೆಗಳ ತಂದು ಬುದ್ಧಿ ಹೇಳುವ ಪ್ರಯತ್ನವೂ ಖುಷಿ ಆತು ಉದಾಹರಣೆಗೆ ಮೊಬೈಲ್ ನೋಡ್ತಾ ದಾರೀಲಿ ಕಣ್ಣೆದುರೇ ಅಪ್ಪದು ನಮ್ಮರಿವಿಂಗೆ ಬತ್ತ್ತಿಲ್ಲೆ ಹೇಳುದು , ಒಳ್ಳೇವರ ಸಹವಾಸ ಒಳ್ಳೆದನ್ನೆ ಕೊಡ್ತು ….. ಹೀಂಗೆ…. ಈ ಕಥೆ ಓದಿದ ವು ಖಂಡಿತ ಇಂತಹ ದುಸ್ಸಾಹಸಕ್ಕೆ ಕೈ ಹಾಕವು ಬಹುಶಃ.
    ಒಟ್ಟಾರೆಯಾಗಿ ಎಲ್ಲ ಪಾತ್ರಗಳೂ ಕಥೆಗಳು ಪೂರ್ಣವಾಗಿ ಮೂಡಿ ಬಂದು ಸುಖಾಂತ್ಯ ಕಂಡತ್ತು. ನಮ್ಮ ಮನೇಲೇ ಮದುವೆ ನಡೆದ ಹಾಂಗಾತು. ಅಷ್ಟು ಖುಷಿ ಆತು ಓದಿ.

    ಹವ್ಯಕ ಭಾಷೆಯ ಸಾಹಿತ್ಯಕ್ಕೆ ಈ ಕಾದಂಬರಿ ಉತ್ತಮ ಕೊಡುಗೆ. ಇನ್ನು ಇಂತಹ ಸಾಹಿತ್ಯ ಪ್ರಸನ್ನಕ್ಕನ ಕೈಲಿ ಮೂಡಿ ಬರಲಿ , ನಮ್ಮ ಸಮಾಜ ಅದರ ಪ್ರಯೋಜನ ಪಡುವ ಹಾಂಗಾಗಲಿ .
    ಹರೆ ರಾಮ

  4. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿತ್ತು…ಕಥೆ ಮುಗುತ್ತು.,.ಒಳ್ಳೆ ಲಾಯ್ಕಲ್ಲಿ ಮೂಡಿ ಬೈಂದು…ನೈಜವಾಗಿ…ನಮ್ಮದೇ ಜೀವನಲ್ಲಿ nadattha ಇದ್ದೋ ಹೇಳುವಷ್ಟು ಸೂಪರ್ ಆಗಿತ್ತು….ಕಥೆ ಒಳವೆ ನಾವು ಮುಳುಗಿದ್ದು….. ಕಥೆಲಿ ಯಾವ ಪಾತ್ರ ಗಳದ್ದು ಎಂತಾತು ಹೇಳುವ ಪ್ರಶ್ನೆ ಬಾಕಿ ಇಲ್ಲೆ….ಎಲ್ಲರೂ ಒಂದಪ್ಪ ಹಾಂಗೆ….ಎಲ್ಲೋರನ್ನು ಅರ್ಥ ಮಾಡಿಕೊಂಡ ಹಾಂಗೆ….ಕಥೆ ಬರದ್ದು ಶೈಲಿ ಭಾರಿ ಲಾಯ್ಕ…ಮುಂದೆಯೂ ಹೀಂಗೆ ಒಳ್ಳೊಳ್ಳೆ ಕಥೆ ಮನ ಮುಟ್ಟುವ ಹಾಂಗೆ, ಬುದ್ದಿ ಬಪ್ಪ ಹಾಂಗಿಪ್ಪದು ಮೂಡಿ ಬರಲಿ…ನಿನ್ನ ಲೇಖನಿಲಿ ಪ್ರಸನ್ನ……..

  5. ತುಂಬಾ ಲಾಯಕಲ್ಲಿ ಕೊಂಡೋಯ್ದಿ ಕತೆಯ.. ಓದುವಾಗ ನಿಜ ಜೀವನಲ್ಲಿ ನಡೆದ ಘಟನೆ ಹೇಳಿಯೇ ಆಯ್ಕೊಂಡಿತ್ತು. ಕತೆ ಹೇಳಿ ಆಯ್ದೇಲ್ಲೆ. ಇಷ್ಟು ಬೇಗ ಮುಗುತ್ತನ್ನೇ ಹೇಳಿ ಆವ್ತಾ ಇದ್ದು.. ಇನ್ನುದೇ ತುಂಬಾ ಕತೆಗೂ ಬೈಲಿಂಗೆ ಬತ್ತಾ ಇರಲಿ.

  6. Thumba chandakke moodi banthu full kathe.
    Mareyalaradda neethiya kathe.Thumbu kutumbada,ondondu adharanga supriya,keshava,shaila,sudeepa.
    Supriyana,vijayana,jeevana sukallippangaddu kushiyathu.
    Totaly super…..Tq…prasannakka.
    Innondu katheya neeriksheli…,.

  7. Ellavu sukhanthya atu.. supriya, vijaya ibra baduku hasanaathu.. susheelana abbege kadegaalalli magala more nodule sikkittu, hange pulliya maduvede kanneduru nadavaaga mudi jeevakke nemmadi…
    Ella sangathigalannu naijavagi, adbhutavagi vivarisiddi chikki.. prati sanchikeliyu kuthoohala hutsi manasili moodida savira prashnegokkella uttara sikkiddu vishesha.. iladre vijayana gathi entatu, susheela innenta madugu heludu prashneyagiye olithithu.. apoorvavagi moodibaindu ..🙏

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×