ದೇವಕಿ ಅಕ್ಕ ಹೇಳಿದ ಹಾಂಗೆ ಚಂದ್ರಣ್ಣನೂ,ಶಾರದೆಯೂ ಡಾಕ್ಟರ ಹತ್ತರಂಗೆ ಹೋಗಿ ಬಂದು ನಾಲ್ಕು ತಿಂಗಳಾಯೆಕಾರೆ ಶಾರದೆಗೆ ಕುದಿ ತಪ್ಪಿತ್ತು. ಭಾಮೆಯಕ್ಕಂಗೆ ಭಾರೀ ಸಂತೋಶಾತು.ಅವರ ದೊಡ್ಡ ಮಕ್ಕೊಗೆಲ್ಲ ಮಕ್ಕೊ ಆಗಿ ಪುಳ್ಯಕ್ಕಳ ನೋಡಿದರೂ ಸಣ್ಣ ಮಗನ ಮಕ್ಕಳ ಆಡ್ಸೆ ಅವಕ್ಕೂ ಕೊದಿಯಾಗಿಂಡಿದ್ದತ್ತು.
ಬೇಂಗದ ಕೆತ್ತೆ ಕಷಾಯ,ಕುರುಂತೋಟಿ ಕಷಾಯ ಎಲ್ಲ ಮಾಡಿ ಕೊಟ್ಟು ಸೊಸೆಗೆ ಹೆಚ್ಚು ಬಂಙ ಆಗದ್ದಾಂಗೆ ಹೆಚ್ಚಿನ ಕೆಲಸ ಎಲ್ಲ ಅವ್ವೇ ಮಾಡಿದವು.ಏಳನೇ ತಿಂಗಳಿಲ್ಲಿ ಗೌಜಿಲಿ ಕೋಡಿಯೂ ಕಳುದತ್ತು.ಶಾರದೆಯ ಅಪ್ಪ° ಅದರ ಅಪ್ಪನಮನೆಗೆ ಕರಕ್ಕೊಂಡು ಹೋಪಲೆ ಬಂದಪ್ಪಗ ಭಾಮೆಯಕ್ಕಂಗೆ ಸೊಸೆಯ ಕಳ್ಸಲೆ ಮನಸಿಲ್ಲೆ. ಸಾಲದ್ದಕ್ಕೆ ಡಾಕ್ಟರ ಚಂದ್ರಣ್ಣನ ಹತ್ತರೆ ಗುಟ್ಟಿಲ್ಲಿ
“ಎರಡು ಮಕ್ಕೊ ಇದ್ದವು.ಹಾಂಗಾಗಿ ರಜ ಹೆಚ್ಚು ಜಾಗ್ರತೆ ಮಾಡೆಕು” ಹೇಳಿಯೂ ಹೇಳಿದ ಕಾರಣ ಭಾಮೆಯಕ್ಕಂಗೆ ಮತ್ತೂ ರಜಾ ಹೆದರಿಕೆ. ಅಪ್ಪನಮನೆಗೆ ಹೋದರೆ ಅಲ್ಲಿ ಫಕ್ಕನೆ ಎಂತಾರಾಯೆಕಾರೆ ಹತ್ತರೆ ಡಾಕ್ಟರಕ್ಕೊ ಇಲ್ಲೆ.
“ಇಲ್ಯಾದರೆ ಡಾಕ್ಟರ° ಹತ್ತರೆ ಇದ್ದ°.ಸಾಲದ್ದಕ್ಕೆ ರಜ ಹೆಚ್ಚು ಜಾಗ್ರತೆ ಮಾಡ್ಲೂ ಹೇಳಿದ್ದಾಡ.ಈಗ ಇಲ್ಲೇ ಇರಲಿ ಆಗದೋ?”
ಶಾರದೆಯ ಅಪ್ಪನೂ, ಚಿಕ್ಕಮ್ಮನೂ ಮತ್ತೆ ಹೆಚ್ಚು ಒತ್ತಾಯ ಮಾಡಿದ್ದವಿಲ್ಲೆ.ಅವಕ್ಕೆ ಡಾಕ್ಟರನ ವಿಶಯ ಎಲ್ಲ ಎಂತದು ಗೊಂತೂ ಇಲ್ಲೆ.ಅಪ್ಪನಮನೆಗೆ ಕರಕ್ಕೊಂಡು ಹೋಪದು ಹೇಳಿ ಗಂಟೆ ಗಟ್ಲೆ ಬಸ್ಸಿಂಗೆ ಕಾದು ನಿಂದು ,ನಾಲ್ಕೈದು ಮೈಲು ನಡಶಿಂಡು ಕರಕ್ಕೊಂಡು ಹೋಪದಕ್ಕಿಂತ ಇಲ್ಲೇ ಇರಲಿ ಹೇಳಿ ಅವಕ್ಕೂ ಕಂಡತ್ತು.
ಹಾಂಗೆ ಅತ್ತೆಯ ಕೊಂಗಾಟದ ಆರೈಕೆಲಿ ಕೊಶೀಲಿದ್ದ ಶಾರದೆಗೆ ಎಂಟ ತಿಂಗಳು ಕಳಿವಗಳೇ ರಜಾ ಹೊಟ್ಟೆ ಬೇನೆ ಸುರುವಾತು. ಎರಡು ಮಕ್ಕೊ ಇದ್ದಕಾರಣ ಹೆರಿಗೆ ರಜಾ ಬೇಗ ಅಕ್ಕು ಹೇಳಿ ಡಾಕ್ಟರ° ಹೇಳಿದ ಕಾರಣ ಅಂಬಗಳೇ ಅದರ ಆಸ್ಪತ್ರೆಗೆ ಕರಕ್ಕೊಂಡು ಹೋದವು.
ಮನೆಲಿ ನಿಂಬಲೆ ಭಾಮೆಯಕ್ಕನ ದೂರದ ಸಂಬಂಧಿ ಸರಸತ್ತೆಯ ಕರಕ್ಕೊಂಡು ಬಯಿಂದವು. ಗೆಂಡ, ಮಕ್ಕೊ, ಸಂಸಾರ ಹೇಳಿ ಇಲ್ಲದ್ದ ಸರಸತ್ತೆಗೆ ಹೋದಲ್ಲಿಯೇ ಮನೆ.ನೆಂಟ್ರುಗೊ ಎಲ್ಲ ಅವರವರ ಅಗತ್ಯ ಇಪ್ಪಗ ಸರಸತ್ತೆಯ ಕರಕ್ಕೊಂಡು ಹೋವ್ತವು. ಅಲ್ಯಾಣ ಅಗತ್ಯ ಮುಗಿವಗ ಮತ್ತೊಂದು ಮನಗೆ.ಹೀಂಗೇ ಅವರ ಬದುಕು.ಒಳ್ಳೆ ಗುಣದ ,ಕೆಲಸಲ್ಲಿ ಚುರುಕಾದ ಸರಸತ್ತೆ ಬಂದದು ಭಾಮೆಯಕ್ಕಂಗೆ ಆನೆಬಲ ಬಂದ ಹಾಂಗಾತು.
ಧೈರ್ಯಲ್ಲಿ ಮನೆಬಿಟ್ಟಿಕ್ಕಿ ಸೊಸೆಯೊಟ್ಟಿಂಗೆ ಆಸ್ಪತ್ರೆಗೆ ಹೋದವು.
ಆಸ್ಪತ್ರೆಗೆ ಹೋದ ಮರದಿನವೇ ಶಾರದೆಗೆ ಆರೋಗ್ಯವಾಗಿಪ್ಪ ಎರಡು ಮಕ್ಕೊ ಹುಟ್ಟಿದವು.ಎರಡು ಮಕ್ಕೊ ಇದ್ದವು ಹೇಳಿ ಗೊಂತಪ್ಪಗ ಶಾರದೆಗೆ ಕೊಶಿಯೋ,ಹೆದರಿಕೆಯೋ ಎಲ್ಲಾ ಒಟ್ಟಿಂಗೆ ಆಗಿ ಕಣ್ಣಿಲ್ಲಿ ನೀರು ತುಂಬಿತ್ತು.
“ಹಸಿ ಬಾಳಂತಿ ಕಣ್ಣೀರು ಹಾಕಲಾಗ.ಮಕ್ಕಳ ಕೊಡ್ಲೆ ತಡವು ಮಾಡಿದ ದೇವರು ಕೊಡುಗ ಎರಡು ಮಕ್ಕಳ ಒಟ್ಟಿಂಗೆ ಕೊಟ್ಟ° ” ಹೇಳಿ ಭಾಮೆಯಕ್ಕ ಸೊಸೆಗೆ ಧೈರ್ಯ ತುಂಬಿದವು.
ಹತ್ತುದಿನ ಆಸ್ಪತ್ರೆಲಿ ನಿಲ್ಸಿಕ್ಕಿ ಡಾಕ್ಟರ° ಅವರ ಮನಗೆ ಕಳ್ಸಿದ್ದು.ಎರಡು ಮಕ್ಕೊ ಇಪ್ಪ ಕಾರಣವೂ,ಅಪ್ಪನಮನೆಲಿ ರಜ ಸೌಕರ್ಯ ಕಮ್ಮಿ ಆದ ಕಾರಣವೂ ಶಾರದೆ ಬಾಳಂತನವೂ ಮನೇಲೇ ಅಕ್ಕು ಹೇಳಿ ಭಾಮೆಯಕ್ಕ ಹೇಳಿತ್ತು.
“ಎರಡು ಮೂರು ತಿಂಗಳು ಕಳಿಯಲಿ ಅಣ್ಣಾ..ಮತ್ತೆ ಬೇಕಾರೆ ಮಗಳನ್ನು, ಪುಳ್ಯಕ್ಕಳನ್ನು ಕರಕ್ಕೊಂಡು ಹೋಗಿ ನಾಕು ದಿನ ಕೂರ್ಸಿಕ್ಕಿ ಕರಕ್ಕೊಂಡು ಬಂದರೆ ಸಾಕು” .
ಅವಕ್ಕೂದೆ ಅದು ಒಪ್ಪಿಗೆ ಆತು.
ಮಕ್ಕಳ, ಅಬ್ಬೆಯ ಆರೋಗ್ಯ ಸರೀ ಇದ್ದೂಳಿ ಗೊಂತಾದ ಮತ್ತೆ ಶಾರದೆಗೆ ಮಕ್ಕಳ ಹೇಂಗೆ ನೋಡೆಕಾದ್ದು ಹೇಳಿಯೆಲ್ಲ ಹೇಳಿಕೊಟ್ಟಿಕ್ಕಿ ಆಸ್ಪತ್ರೆಂದ ಬಿಟ್ಟವು.
ಒಂದು ಕೂಸುದೆ ,ಒಬ್ಬ° ಮಾಣಿಯುದೆ ಆದ ಕಾರಣ ಶಾರದೆಗೂ ಕೊಶಿ.ಇನ್ನು ಆರೂದೆ “ಎರಡೂ ಕೂಸೇಯೋ ಅಂಬಗ” ಹೇಳಿ ಕೇಳ್ಲಿಲ್ಲೆ.’ಇಬ್ರನ್ನೂ ಎರಡು ಕಣ್ಣುಗಳ ಹಾಂಗೆ ನೋಡ್ಯೊಂಬೆ’ ಹೇಳಿ ಮನಸಿಲ್ಲೇ ಹೇಳಿತ್ತದು.
ಭಾಮೆಯಕ್ಕನ ನೇತೃತ್ವಲ್ಲಿ ಸರಸತ್ತೆಯ ಉಪಚಾರಲ್ಲಿ ಶಾರದೆಯ ಬಾಳಂತನ ಚೆಂದಕೆ ಕಳುದತ್ತು.ಮಕ್ಕಳ ಮೀಶಲೆ,ಬಾಳಂತಿ ಮೀಶಲೆ ಎಲ್ಲ ಮನಗೆ ಕೆಲಸಕ್ಕೆ ಬಪ್ಪ ಮಿಣ್ಣಕ್ಕು ಹೇಳುವ ಹೆಣ್ಣುದೆ ಇದ್ದ ಕಾರಣ ಆರಿಂಗೂ ದೊಡ್ಡ ಬಂಙ ಆಯಿದಿಲ್ಲೆ.
ಚಂದ್ರಣ್ಣಂಗೂ ಮಕ್ಕಳ ಹತ್ತರೆ ಕೂದರೆ ಹೊತ್ತು ಹೋದ್ದದೇ ಗೊಂತಾಗಿಂಡಿತ್ತಿಲ್ಲೆ.ಇಷ್ಟು ದಿನ ಒರಗಿದ ಹಾಂಗಿದ್ದ ಮನೆಲಿ ಈಗ ಮಕ್ಕಳ ಕಲರವ.
ಆರು ತಿಂಗಳಿಲ್ಲಿ ಶಾರದೆಯ ಅಪ್ಪ° ಮಕ್ಕೊಗೆ ಬಾರ್ಸ ಮಾಡ್ಲೆ ಒಪ್ಪಿಗೆ ಕೇಳಿ, ಮಗಳ ಪುಳ್ಯಕ್ಕಳ ಕರಕ್ಕೊಂಡು ಹೋದವು.ತುಂಬಾ ಸಮಯಂದ ಅಪ್ಪನಮನೆಗೆ ಹೋಗದ್ದ ಶಾರದೆಗೂ ಅಲ್ಲಿಗೆ ಹೋಪಲೆ ಆಶೆಯಾಗಿಂಡಿದ್ದತ್ತು.
“ಕೂಸಿಂಗೆ ಶೈಲಜಾ ಹೇಳಿ ಹೆಸರು ಮಡುಗುವೊ°, ಮಾಣಿಗೆ ಕೇಶವಕೃಷ್ಣ ಹೇಳಿ ಅಕ್ಕೋ'” ಮಕ್ಕೊಗೆ ಹೆಸರು ಅಂದಾಜು ಮಾಡಿದ್ದದು ಚಂದ್ರಣ್ಣನ ಅಕ್ಕತಂಗೆಕ್ಕೊ.ಆ ಹೆಸರು ಎಲ್ಲರಿಂಗೂ ಕೊಶಿಯಾತು.
ಈಗ ಮನೆಲಿ ನಿತ್ಯವೂ ಹಬ್ಬದ ಗೌಜಿ ಹಾಂಗೆ ಆಗಿಂಡಿದ್ದತ್ತು. ಇಬ್ರು ಮಕ್ಕಳ ಆಟ ನೋಡುದೇ ಚೆಂದ.ಅದರೊಟ್ಟಿಂಗೆ ಅವರ ಉಣ್ಸುದು,ಮೀಶುದು,ಅವರ ಸಣ್ಣ ಸಣ್ಣ ಲೂಟಿ ಕಂಡು ನೆಗೆ ಮಾಡುದು…… ಹೀಂಗೇ ದಿನ ಉರುಳಿದ್ದೇ ಗೊಂತಾಗಿಂಡಿತ್ತಿದ್ದಿಲ್ಲೆ. ಭಾಮೆಯಕ್ಕಂಗೆ ಸರಸತ್ತೆ ಇಪ್ಪ ಕಾರಣ ಕೆಲಸ ಎಷ್ಟೋ ಹಗುರಾಗಿಂಡಿದ್ದತ್ತು.ಇಲ್ಲದ್ರೆ ಗದ್ದೆ ಬೇಸಾಯ ಸಮಯಲ್ಲಿ, ತೋಟಕ್ಕೆ ಮದ್ದು ಬಿಡುವ ಸಮಯಲ್ಲೆಲ್ಲ ಹೆಚ್ಚಿಗೆ ಆಳುಗೊ ಇಪ್ಪಗ ಬಂಙ ಆವ್ತಿತು. ಅವರ ಅಲ್ಲಿಂದ ಕಳ್ಸಲೂ ಅವಕ್ಕೆ ಮನಸು ಬಯಿಂದಿಲ್ಲೆ. ಮಕ್ಕೊ ರೆಜ ದೊಡ್ಡಪ್ಪನ್ನಾರ ಶಾರದೆಗೆ ಎಲ್ಲಾ ಕೆಲಸಕ್ಕೂ ಗ್ರೇಶಿದಾಂಗೆ ಸೇರ್ಲೆಡಿಯಾಳಿ ಗೊಂತಿದ್ದವಕ್ಕೆ.ಮಕ್ಕೊಗೆ ಹೆಚ್ಚು ಗೆಂಟು,ತರ್ಕ ಇಲ್ಲದ್ರೂ ಅವಕ್ಕೆ ಬೇಕಾದ ಹೊತ್ತಿಲ್ಲಿ ಆಯೆಕಾದ್ದರ ಮಾಡಿಕೊಡೆಕನ್ನೆ.
ಸರಿಯಾದ ನೆಂಟ್ರುಗೊ ಹೇಳಿ ಆರೂ ಇಲ್ಲದ್ದ ಅವರ ಇಲ್ಲಿಯೇ ಕೂರ್ಸುವನಾಳಿ ಮಗನತ್ರೆ ಕೇಳಿ ಒಪ್ಪಿಗೆ ತೆಕ್ಕೊಂಡವು.
“ನಿಂಗೊ ಇನ್ನು ಎಲ್ಲಿಗೂ ಹೋಗೆಡಿ ಸರಸತ್ತೆ.ಇದುವೇ ನಿಂಗಳ ಮನೆ ಹೇಳಿ ಗ್ರೇಶಿ” ಒಂದು ದಿನ ಉಂಡಿಕ್ಕಿ ಎಲೆತಟ್ಟೆ ಬುಡಲ್ಲಿ ಕೂದು ಎಲಗೆ ಸುಣ್ಣ ಉದ್ಯೊಂಡಿಪ್ಪಗ ಭಾಮೆಯಕ್ಕ ಮಾತು ತೆಗದವು. ಸುರುವಿಂಗೆ ಒಪ್ಪದ್ರೂ ಅಕೇರಿಗೆ ಶಾರದೆಯೂ ಬಂದು ಹೇಳಿಯಪ್ಪಗ ಅವಕ್ಕೆ ಕೊಶಿಯಾತು. ಈ ಪುಟ್ಟು ಮಕ್ಕಳ ಒಟ್ಟಿಂಗೆ ಇದ್ದು, ಫಕ್ಕನೆ ಅವರ ಬಿಟ್ಟಿಕ್ಕಿ ಹೋಪಲೆ ಅವರ ಮನಸುದೆ ಒಪ್ಪಿತ್ತಿಲ್ಲೆ.
“ಎನಗೆ ಆರೂ ಇಲ್ಲೆ .ಎಷ್ಟೋ ಮನಗೆ ಬಾಳಂತನಕ್ಕೆ ಹೋಯಿದೆ.ಅಲ್ಯಾಣ ಕೆಲಸ ಮುಗುದಪ್ಪಗ ಇನ್ನೊಂದು ಮನಗೆ.ಅಂದರೂ ಎನಗೆಂತದೂ ಆಯಿದಿಲ್ಲೆ. ಏಕೋ ಈ ಪುಳ್ಯಕ್ಕಳ ಬಿಟ್ಟಿಕ್ಕಿ ಹೋಪಲೆ ಎನಗೂ ಮನಸ್ಸು ಬತ್ತಿಲ್ಲೆ. ನಿಂಗಳೇ ಇಲ್ಲಿ ನಿಲ್ಲು ಹೇಳಿದ ಮತ್ತೆ ಈ ತೊಂಡಿಗಿನ್ನೆಂತಾಯೆಕಾದ್ದು” ಸರಸತ್ತೆ ಸೆರಗಿಲ್ಲಿ ಕಣ್ಣನೀರು ಉದ್ದಿಂಡೇ ಒಪ್ಪಿದವು.
ಮಕ್ಕೊ ನಡವಲೆ ಸುರು ಮಾಡಿದವು.ಅಲ್ಲಿ ಇಲ್ಲಿ ಓಡುದು,ಬೀಳುದು,ತಾಗ್ಸುದು,ಕೂಗುದು ..ಹೇಳಿ ಗೌಜಿಯೋ ಗೌಜಿ.ಎರಡು ಅಜ್ಜಿಯಕ್ಕಳೂ ಅವರ ಹಿಂದಂದ ಓಡುಗ ಚಂದ್ರಣ್ಣ ಶಾರದೆ ಹತ್ತರೆ
“ನೋಡು, ಪುಳ್ಯಕ್ಕಳೊಟ್ಟಿಂಗೆ ಓಡುಗ ಅಜ್ಜಿಯಕ್ಕೊಗೂ ಹದ್ನಾರೊರುಶ”
ಶಾರದೆಗೂ ನೆಗೆ,ಕೊಶಿ..ಮಕ್ಕಳ ನೋಡ್ಲೆ ಅವು ಇಲ್ಲದ್ರೆ ಶಾರದೆಗೆ ಬೊಡಿಪ್ಪ ಆವ್ತಿತು. ಆ ದೊಡ್ಡ ಮನೆಯ ಒಂದೊಂದು ದೊಡ್ಡ ದೊಡ್ಡ ಉಗ್ರಾಣಂಗಳ ಒಳ ಎಲ್ಯಾದರು ಮಕ್ಕೊ ಹೋಗಿ ಬಾಕಿಯಾದರೂ ಗೊಂತಾಗ.ಉಪ್ಪರಿಗೆ ಮೆಟ್ಲು ಹತ್ತುದು,ಇಳಿವದು ಹೇಳಿ ಆಟ ಆಡುಗ ಬಿದ್ದರೇ……’ ಈ ಅಜ್ಜಿಯಕ್ಕೊ ಇದ್ದ ಕಾರಣ ಅದಕ್ಕೆ ಮಕ್ಕೊ ಎಂತ ಮಾಡುಗು ಹೇಳುವ ಆಲೋಚನೆಯೇ ಇತ್ತಿದ್ದಿಲ್ಲೆ.
ಸರಸತ್ತೆ ಮಕ್ಕೊಗೆ ಎಣ್ಣೆ ಕಿಟ್ಟಿ ಮೀಶುಗ,ಉಣ್ಸುಗ,ತೊಟ್ಲಿಲ್ಲಿ ಮನುಶಿ ತೂಗುಗ ಎಲ್ಲ ಮದಲು ಅವು ಕೇಳಿ ಕಲ್ತ ಹಾಡುಗಳ ಎಲ್ಲ ಹೇಳುಗು.
“ಈ ಸರಸತ್ತೆ ಹಾಡೇಳುದಾ ಅಲ್ಲ ಕೂಗುದಾಳಿ ಗೊಂತಾವ್ತಿಲ್ಲೆ” ಹೇಳಿ ಚಂದ್ರಣ್ಣ ಕುಶಾಲಿಂಗೆ ಕೆಲವು ಸರ್ತಿ ಹೇಳುವ ಕ್ರಮಯಿದ್ದು.
ಹೀಂಗೇ ದಿನ ಉರುಳಿ ಮಕ್ಕೊ ದೊಡ್ಡಾಗಿ ಶಾಲಗೆ ಹೋಪಲೂ ಸುರು ಮಾಡಿದವು.ಸರಸತ್ತೆಗೆ ಈಗ ಮದ್ಲಾಣಾಂಗೆ ಕೆಲಸ ಮಾಡ್ಲೆಡಿತ್ತಿಲ್ಲೆ. ಭಾಮೆಯಕ್ಕಂಗೆ ಎಡಿತ್ತರೂ ಒಂದೊಂದರಿ ಬೇರೆ ಮಕ್ಕಳ ಮನಗೊಕ್ಕೆಲ್ಲ ಹೋಗಿ ಒಂದೆರಡು ತಿಂಗಳು ನಿಂದಿಕ್ಕಿ ಬಪ್ಪದು.
“ಈಗ ಶಾರದೆಗೆ ಎಲ್ಲಾ ಕೆಲಸವು ಅರಡಿತ್ತು.ಮಕ್ಕಳೂ ಶಾಲಗೋಪಲೆ ಸುರು ಮಾಡಿದವು.ಹಾಂಗೆ ನಾಕು ನಾಕು ದಿನ ನಿನ್ನ ಅಣ್ಣಂದ್ರ ಮನೆಲೂ ಕೂದಿಕ್ಕಿ ಬತ್ತೆ” ಹೇಳಿ ಚಂದ್ರಣ್ಣನತ್ರೆ ಹೇಳಿಕ್ಕಿಯೇ ಹೆರಡುದು ಭಾಮೆಯಕ್ಕ.
“ಹೋಗಬ್ಬೇ..ನಾಕು ದಿನಲ್ಲದ್ರೆ ಒಂದು ವಾರ ಕೂರು” ಹೇಳಿ ಚಂದ್ರಣ್ಣನೂ ಅಬ್ಬೆಯ ಕೊಶೀಲಿ ಕಳ್ಸುವ ಕ್ರಮ.
ಮಕ್ಕೊ ನಾಲ್ಕನೇ ಕ್ಲಾಸಿಂಗೆ ಎತ್ತಿದವು.ಇಬ್ರೂ ಕಾಂಬಲೆ ಒಂದೇ ಹಾಂಗೆ ಇದ್ದರೂ ಶೈಲಜನ ಬಣ್ಣ ರಜ ಕಪ್ಪು. ಕೇಶವ ಶುಭ್ರ ಬೆಳಿ.
“ಈ ಮಾಣಿಯ ಬಣ್ಣವ ಕೂಸಿಂಗೆ ಕೊಡೆಕಾತು” ಹೇಳಿ ಕೆಲವು ನೆಂಟ್ರುಗೊ ಕುಶಾಲು ಮಾತಾಡುವ ಕ್ರಮವೂ ಇದ್ದು.
ಹೀಂಗೇ ಚೆಂದಕೆ ಕೊಶಿಲಿ ದಿನ ಉರುಳಿಂಡಿಪ್ಪಗಲೇ ಶಾರದೆಗೆ ಮತ್ತೊಂದರಿ ಕುದಿ ತಪ್ಪಿತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 09 : https://oppanna.com/kathe/swayamvara-09-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಬಾರೀ ಲಾಯ್ಕಿದ್ದು ಅಬ್ಬೆ ಅಪ್ಪನ ಮಾತು ಮೀರಿ ಓಡಿ ಹೋವುತ್ತವಕ್ಕೆ ಬುದ್ಧಿ ಹೇಳುವ ಹಾಂಗೆ ಇದ್ದು ಇನ್ನಾಣ ವಾರದ ನಿರೀಕ್ಷೆಲಿ
ಕತೆ ಲಾಯಿಕಲ್ಲಿ ಮುಂದೆ ಹೋವ್ತಾ ಇದ್ದು.
ಇನ್ನಾಣ ಸಂಚಿಕೆಯ ನಿರೀಕ್ಷೆಲಿ