Oppanna.com

ಸುಟ್ಟವಿನ ಕತೆ : ಪ್ರಸನ್ನಾ ಚೆಕ್ಕೆಮನೆ

Suttavu

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   24/07/2019    10 ಒಪ್ಪಂಗೊ

ಮಧ್ಯಾಹ್ನ ಉಂಡಿಕ್ಕಿ ಒಂದರಿ ತಲೆ ಅಡ್ಡ ಹಾಕಿ ಮನುಗಿರೂ ಶ್ರೀಶಂಗೆ ಒರಕ್ಕು ಬಯಿಂದಿಲ್ಲೆ. ಸತ್ಯ ಹೇಳಿರೆ ಅವ° ಒರಗಲೆ ಮನುಗಿದವನೇ ಅಲ್ಲ.ಅಲ್ಲಿ ಮನುಗಿಂಡು  ಹೆಂಡತಿ ರೇಖ ಎಂತ ಮಾಡ್ತು ಹೇಳಿ ನೋಡುದೇ ಅವನ ಉದ್ದೇಶ.ಉಗ್ರಾಣದ ಬಾಗಿಲು ರಜಾ ಓರೆ ಮಾಡಿಕ್ಕಿ ಮಗಳತ್ರೆ
“ಒಪ್ಪಕ್ಕೋ..ಹಲಸಿನಹಣ್ಣು ಕೊರದು ,ಸೊಳೆ ಎಳಕ್ಕಿ,ಆದು ಮಡುಗಿದ್ದೆ.ಸುಟ್ಟವು ಮಾಡ್ತರೆ ಮಾಡ್ಲಕ್ಕು” ಹೇಳಿ ದೊಡ್ಡಕೆ ಹೇಳಿದ್ದದೇ ಹೆಂಡತಿಗೆ ಕೇಳ್ಲೆ ಬೇಕಾಗಿ.
ಒಳ ಎಂತೋ ಒತ್ತರೆ ಮಾಡಿಂಡಿದ್ದ ರೇಖನುದೆ ಅವಂಗೆ ಕೇಳುವಾಂಗೆ ಉತ್ತರ ಕೊಟ್ಟದುದೆ  ಮಗಳತ್ರೆ….!!
“ಹಲಸಿನ ಮೇಳಕ್ಕೆ ಒಬ್ಬನೇ ಹೋಗಿ ತಿಂದ ಸುಟ್ಟವು ಸಾಕಾಯಿದಿಲ್ಲೇದಿಕ್ಕು.ಎನಗಿಂದು ಸುಟ್ಟವು ಮಾಡ್ಲೆಡಿಯ.ಬೇರೆ ಕೆಲಸ ಇದ್ದೂಳಿ ಹೇಳು ಮಗಳೂ‌….”
“ಶ್ಯೆಲ…..ಗ್ರಾಚಾರವೇ…..” ಅವಂಗೆ ಎಂತ ಹೇಳೆಕೂಳಿ ಅರಡಿಯದ್ದೆ ಸುಮ್ಮನೇ ಮನುಗಿದ.ಅಲ್ಲಿಂದಲೇ ರೇಖ ಪಾತ್ರಲ್ಲಿಪ್ಪ ಸೊಳೆ ತೆಕ್ಕೊಂಡು ಹೋವ್ತೋ ಹೇಳಿ ಅಂಬಗಂಬಗ ಕೊರಳು ಓರೆ ಮಾಡಿ ನೋಡ್ಲೆ ಸುರು ಮಾಡಿದ°.
“ನಿಂಗೊ ಇಬ್ರೂ ಎನ್ನತ್ರೆ ಹೀಂಗೆ ಪರಂಚುದೆಂತಕೆ!? ನಿಂಗೊಗೆ ಮಾತಾಡ್ಲಾಗದಾ?” ಮೂರನೇ ಕ್ಲಾಸಿಲ್ಲಿ ಕಲಿವ ಒಪ್ಪಕ್ಕ° ಅಜ್ಜಿಯಕ್ಕೊ ಮಾತಾಡುವಾಂಗೆ ಮಾತಾಡುದು ಕೇಳಿ ನೆಗೆ ಬಂದರೂ ನೆಗೆ ಮಾಡಿ ಅದರ ಅಮ್ಮನ ಇನ್ನೂ ಹೆಚ್ಚು ಕೋಪ ಬರ್ಸುದು ಬೇಡ ಹೇಳಿ ಕಣ್ಣು ಮುಚ್ಚಿ ಕಷ್ಟ ಪಟ್ಟು ನೆಗೆ ತಡಕ್ಕೊಂಡು ಮನುಗಿದವ°.
ಹಲಸಿನ ಮೇಳ ನೋಡ್ಲೆ ಹೋದವೆಲ್ಲ ಭಾರೀ ಕೊಶೀಲಿ ಅದರ ಸಂಭ್ರಮವ ವರ್ಣನೆ ಮಾಡ್ತರೆ ಶ್ರೀಶಂಗೆ ಮಾಂತ್ರ ಆ ವಿಶಯಲ್ಲಿ ‘,ಚ’ ಕಾರ ಎತ್ತಲೆ ಹೆದರಿಕೆ….,!
ಅದಕ್ಕೊಂದು ಕಾರಣವೂ ಇದ್ದು….!.ಮಹಾನಗರಲ್ಲಿ ಕೆಲಸಲ್ಲಿಪ್ಪ ಅವ° ತಿಂಗಳಿಂಗೊಂದರಿ ಊರಿಂಗೆ ಹೋಪ ಕ್ರಮ.ಅಬ್ಬೆ ಅಪ್ಪನ ಒಬ್ಬನೇ ಮಗ° ಆದ ಕಾರಣ ಹೋದಿಪ್ಪಗ ಒಂದು ದಿನ ನಿಂದು ಅವಕ್ಕೆ ಬೇಕಾದಾಂಗೆ ಎಲ್ಲ ನೋಡಿ, ಮಾಡಿ ವ್ಯೆವಸ್ಥೆ ಮಾಡಿಕ್ಕಿ ಬಪ್ಪದವ°.ಅಷ್ಟಪ್ಪಗೆಲ್ಲ ಎಡೇಲಿ ಸಮಸ್ಯೆ ಬಪ್ಪದು ಹೆಂಡತಿಂದಾಗಿ.
ಪ್ರತಿ ತಿಂಗಳು ಊರಿಂಗೆ ಹೋದರೂ ಅದಕ್ಕೆ ಅಪ್ಪನಮನೆಗೆ ಹೋಪಲೇ ಬೇಕು.
“ಯೇವಗಲೂ ಎಂತಕೆ ಹೋಪದು, ಅಲ್ಲಿಗೆ ಹೋದರೆ ಎನಗೆ ಎನ್ನ ಅಬ್ಬೆ ಅಪ್ಪನ ಬೇಕಾದಾಂಗೆ ನೋಡ್ಲೆ, ಎಲ್ಲಿಗಾದರು ಕರಕ್ಕೊಂಡು ಹೋಪಲೆ ದಿನ ಸಿಕ್ಕುತ್ತಿಲ್ಲೆ. ಎರಡು ತಿಂಗಳಿಂಗೊಂದರಿ ಹೋದರೆ ಸಾಕು.ಅಲ್ಲಿ ನಿನ್ನಬ್ಬೆಪ್ಪ° ಮಾಂತ್ರ ಇಪ್ಪದಲ್ಲನ್ನೇ..ಅಣ್ಣನೂ ಇದ್ದ.ಅವ° ಲಾಯ್ಕ ನೋಡ್ಯೊಳ್ತ°.ಮತ್ತೆಂತಾಯೆಕಾದ್ದು?” ಈ ಮಾತು ಕೇಳಿರೆ ರೇಖಂಗೆ ಕೋಪ ಬಕ್ಕು.
“ಮಗ° ಆದರೂ ಮಗಳಾದರು ಒಂದೇ. ಅಷ್ಟು ದೂರಂದ ಊರಿಂಗೆ ಬಂದ ಮತ್ತೆ ಅಬ್ಬೆಪ್ಪನ ನೋಡದ್ದೆ ಹೋಪದೇಂಗೆ? ಹೋಪದು ಬೇಡ’ ಹೇಳ್ಲೆ ನಿಂಗೊಗೆ ಮನಸ್ಸಾದರು ಬತ್ತನ್ನೇ….ಅಪ್ಪಂಗೆ ನಿಂಗೊ ಹೇಳಿರೆ ಎಷ್ಟು ಪ್ರೀತಿ ಹೇಳಿ ಗೊಂತಿಲ್ಯ?”
ಹೀಂಗೇ ಹೇಳಿ ಮಾತಿಲ್ಲಿ ಕಟ್ಟಿ ಹಾಕುವ ಜೆನ ಅದು.ಅದು ಯೇವದಾದರು ಕೆಲಸ ಮಾಡ್ಲೆ ಹೆರಟ್ರೆ ” ಬೇಡ ” ಹೇಳ್ಲಾಗ.ಹಾಂಗಾರೆ ಅದು ಭಾರೀ ಒಳ್ಳೆ ಜೆನ.ಯೇವ ಕೆಲಸ ಬೇಕಾರೂ ಮಾಡುಗು.ಅಡಿಗೆ ಕೆಲಸಲ್ಲಿ ಅದರ ಮೀರ್ಸಿದವಿಲ್ಲೆ ‘ ಹೇಳ್ಲಕ್ಕು. ಅದರ್ಲೂ ಹಲಸಿನಹಣ್ಣು ಸುಟ್ಟವು ಮಾಡ್ಲೆ ಅದು ಎತ್ತಿದ ಕೈ. ಶ್ರೀಶನ ಅಪ್ಪನೇ ಎಷ್ಟೋ ಸರ್ತಿ
“ಹಲಸಿನಹಣ್ಣು ಸುಟ್ಟವು ರೇಖ ಮಾಡಿದಾಂಗೆ ಮಾಡ್ಲೆ ಆರಿಂಗೂ ಅರಡಿತ್ತಿಲ್ಲೆ. ಅದರ ರುಚಿ,ಪರಿಮ್ಮಳ ಸರಿಯಾಗಿ ಸಿಕ್ಕೆಕಾರೆ ಅದುವೇ ಮಾಡೆಕು” ಹೇಳಿ ಹೊಗಳುಗು.
ಅವನ ಅಬ್ಬಗೂ ಸೊಸೆಯತ್ರೆ ತುಂಬಾ ಪ್ರೀತಿ, ಅಭಿಮಾನ. ಅತ್ತಗೆ ಮಾವಂಗೆ ಹೇಂಗೆ ಬೇಕೋ ಹಾಂಗೆ ನೋಡಿ, ಕೇಳಿ ಮಾಡಿಕೊಡುವ ಜೆನ ಅದು.
“ಶ್ರೀಶಂಗಾರು ಹೇಳಿರೆ ಅಂದಾಜಾಗ.ಅದಕ್ಕೆಲ್ಲ ರೇಖನತ್ರೆ ಹೇಳೆಕಷ್ಟೆ” ಹೇಳಿ ಎಂತಾರು ಅಗತ್ಯದ ಕೆಲಸ ಇದ್ದರೆ ಅವನಬ್ಬೆ ಅದರತ್ರೆ ಹೇಳುದು.
ಈಗ ಮಗಳು ಅವನಿಜಾ ಮೂರನೇ ಕ್ಲಾಸಿಂಗೆ ಎತ್ತಿದ ಕಾರಣ ಮದ್ಲಾಣಾಂಗೆ ಊರಿಂಗೆ ಬಪ್ಪಲೆಡಿತ್ತಿಲ್ಲೆ ಅವಕ್ಕೆ. ಸಾಲದ್ದಕ್ಕೆ ಅದು ಡೇನ್ಸು ಕ್ಲಾಸು,ಸಂಗೀತ ಎಲ್ಲ ಕಲಿತ್ತುದೆ.ಅಷ್ಟಪ್ಪಗ ಅದರ ಕರಕ್ಕೊಂಡು ಹೋಪಲೆ ರೇಖನೇ ಆಯೆಕಷ್ಟೆ ‌.
ಅಂದರೂ ಎಂತಾರು ವಿಶೇಶ ಇದ್ದರೆ ಕೂಡ್ಲೇ ಬತ್ತವು.ಶ್ರೀಶ ಮಾತ್ರ ಬಪ್ಪದರ ತಪ್ಸುತ್ತಾ°ಯಿಲ್ಲೆ.
ಈ ಸರ್ತಿ ಮಗಳಿಂಗೆ ರಜೆಯಿಪ್ಪಗ ಊರಿಂಗೆ ಬಂದು ಸುಮಾರು ದಿನ ಕೂದು, ನೆಂಟ್ರ ಮನಗೆಲ್ಲ ಹೋಗಿ ಬಯಿಂದು ರೇಖ.ಊರಿಂಗೆ ಹೋದ ಶುದ್ದಿಯೆಲ್ಲ ಗೆಂಡನತ್ರೆ ಹೇಳುದೇ ಕೆಲಸ ಅದಕ್ಕೆ.
“ಒಂದರಿ ಹರಟೆ ನಿಲ್ಸುತ್ತಿಯೋ..ಎಷ್ಟು ಸರ್ತಿ ಹೇಳಿದ್ದನ್ನೇ ಹೇಳುದು” ಹೇಳಿ ಶ್ರೀಶ ಹತ್ತು ಸರ್ತಿ ಹೇಳಿದ ಮತ್ತೆ ಆ ವಿಶಯ ಮಾತಾಡುದು ರಜಾ ಕಮ್ಮಿ ಆದ್ದದು.
ಪ್ರತಿವೊರ್ಶವೂ ಇವು ಊರಿಂಗೆ ಹೋಪಗ ಹಲಸಿನಕಾಯಿ ಬೆಳದಿರ್ತು.ಈ ಸರ್ತಿ ಏಕೋ ಕುಜುವೆ ಬಿಡುಗ ತಡವಾಗಿ ಹಪ್ಪಳ, ಸುಟ್ಟವು, ಕೊಟ್ಟಿಗೆ ..ಎಂತದೂ ಮಾಡ್ಲಾಯಿದಿಲ್ಲೆ  ‘ ಹೇಳುದೇ ಭಾರೀ ಬೇಜಾರಿನ  ಸಂಗತಿ..!!
ಅಷ್ಟಪ್ಪಗಲೇ ಊರಿಲ್ಲಿ ಹಲಸಿನ ಮೇಳದ ಗೌಜಿ ಸುರುವಾದ್ದು.ವ್ಯಾಟ್ಸಾಪ್ ಗುಂಪುಗಳಲ್ಲೆಲ್ಲ ಹಲಸಿನ ಮೇಳದ್ದೇ ಶುದ್ದಿ‌.ಊರಿಂದ ಆರು ಪೋನು ಮಾಡಿರೂ ಹಾಂಗೇ
“ಇಷ್ಟು ಹಪ್ಪಳ ಮಾಡಿಯಾತು.ಇಷ್ಟು ಹಲಸಿನಕಾಯಿಯ ಸೊಳೆ ಹೊರುದೆಯ°, ಬೇಳೆರೊಟ್ಟಿ ಮಾಡ್ಲಿದ್ದು,ಬಿಸ್ಕೆಟು ಮಾಡ್ಲಿದ್ದು….ಕೇಕು ಮಾಡ್ಲಿದ್ದು……” ರೇಖಂಗೆ ಯೇವ ಶುದ್ದಿಯನ್ನಾರು ಗೆಂಡನ ಹತ್ತರೆ ಹೇಳದ್ದಿಪ್ಪಲೆಡಿತ್ತಿಲ್ಲೆ.ಹಾಂಗಾಗಿ ಆ ಶುದ್ದಿ ಪೂರಾ ಶ್ರೀಶಂಗೂ ಗೊಂತಾತು.ಅವನ ಮೊಬೈಲಿಲ್ಲಿ ವ್ಯಾಟ್ಸಾಪ್ ಇದ್ದರೂ ಅವ° ಅದರ ನೋಡುವ ಕ್ರಮವೇ ಇಲ್ಲೆ ಹೇಳ್ಲಕ್ಕು.ಅತೀ ಅಗತ್ಯಕ್ಕೆ ಮಾತ್ರ ವ್ಯಾಟ್ಸಾಪ್ ಉಪಯೋಗಿಸುವ ಜೆನ ಅವ°.
“ನಾವುದೆ ಹಲಸಿನ ಮೇಳಕ್ಕೆ ಹೋಪನಾ” ಕೇಳಿತ್ತು ರೇಖ ಒಂದು ದಿ‌ನ.ಮಗಳಿಂಗೆ ಶಾಲೆ ಸುರುವಾಗಿ ಹೆಚ್ಚು ದಿನ ಆಯಿದಿಲ್ಲೆ. ಅದಕ್ಕೆ ಶಾಲೆ ಇಪ್ಪ ದಿನವೇ ಈ ಮೇಳ ಇಪ್ಪದೂದೆ.ಅಂತೇ ರಜೆ ಮಾಡ್ಸಿ ಹಲಸಿನಮೇಳಕ್ಕೆ ಕರಕ್ಕೊಂಡು ಹೋಪಲೆ ಶ್ರೀಶಂಗೂ ಮನಸು ಬಯಿಂದಿಲ್ಲೆ .
“ಸಣ್ಣ ಕ್ಲಾಸಲ್ಲದ ತೊಂದರೆ ಇಲ್ಲೆ.ಒಂದರಿ ಹೋಗಿಂಡು ಬಪ್ಪೋ°, ಎನ್ನ ಫ್ರೆಂಡುಗೊ ಎಲ್ಲೋರು ಬತ್ತವಾಡ” ಹೇಳಿ ರೇಖ ಹೇಳಿರೂ ಅವ° ಒಪ್ಪಿದ್ದಾ°ಇಲ್ಲೆ.
“ಆತಂಬಗ ಬೇಡ” ಹೇಳಿ ಅದೂದೆ ಒಪ್ಪಿತ್ತು.ಅಂತೇ ಒಂದರಿ ಊರಿಂಗೆ ಹೋಗಿ ಬಪ್ಪಲೆ ಖರ್ಚುದೆ ಅಲ್ಲದಾ ಹೇಳಿ ಮನಸಿಲ್ಲೇ ಸಮದಾನ ಮಾಡಿಕೊಂಡತ್ತು.
ಹಾಂಗಿಪ್ಪಗಲೇ ಶ್ರೀಶನ ಫ್ರೆಂಡು ಆದಿತ್ಯ ಪೋನು ಮಾಡಿದ್ದು.
“ನಮ್ಮ ಕ್ಲಾಸಿಲ್ಲಿ ಕಲ್ತ ನವೀನನ ಮನೆ ಒಕ್ಕಲು.ನಿನಗೂ ಹೇಳಿಕೆ ಹೇಳಿ ನಿನ್ನನ್ನೂ ಕರಕ್ಕೊಂಡೇ ಬಪ್ಪಲೆ ಹೇಳಿದ್ದ°, ಈಗಲೇ ಹೆರಡು”
ಆದಿತ್ಯ ಹೇಳಿರೆ ರೇಖಂಗೂ ತುಂಬ ಅಭಿಮಾನ.ಆದಿತ್ಯಣ್ಣ” ಹೇಳಿಯೇ ಅದು ಅವನ ದೆನಿಗೇಳುದು.ಇವರ ಮನಗೆ ಹತ್ತರೆ ಅವರ ಮನೆ.ಅಪರೂಪಕ್ಕೆ ಒಂದೊಂದರಿ ಅವ° ಇಲ್ಲಿಗೆ ಬಂದು ರೇಖನ ಸವಿಯಡುಗೆಯ ಪಾಕ ಸವಿದು ಹೊಗಳಿಕ್ಕಿ ಹೋಪ ಅಭ್ಯಾಸವೂ ಇದ್ದು. ಅವನ ಹೆಂಡತಿ ರಶ್ಮಿಯೂ,ರೇಖನೂ ಆತ್ಮೀಯ ಫ್ರೆಂಡುಗೊ.ಹಾಂಗಾಗಿ ಅವ° ಕೇಳಿಯಪ್ಪಗ “ಹೋಗೆಡಿ” ಹೇಳ್ಲೆ ರೇಖಂಗೂ ಆಯಿದಿಲ್ಲೆ.
“ಮದಲೇ ಗೊಂತಾಗಿದ್ದರೆ ಎಂಗಳೂ ಹೆರಡ್ತಿತೆಯ°.ಹಲಸಿನ ಮೇಳಕ್ಕೆ ಹೋಪ ಯೋಗಯಿಲ್ಲೆ.ನಿಂಗೊ ಊರಿಂಗೆ ಹೋದ ಮತ್ತೆ ಅಲ್ಲಿಗೆ ಹೋಗದ್ದರೈ” ಹೇಳಿ ಪರಂಚ್ಯೊಂಡು ಅವನ ಕಳ್ಸಿತ್ತು.
“ನಿಂಗಳ ಬಿಟ್ಟಿಕ್ಕಿ ಆನೆಲ್ಲಿಗೂ ಹೋವ್ತಿಲ್ಲೆ. ಎನಗೆ ಹಾಂಗಿದ್ದಕ್ಕೆಲ್ಲ ಹೋಪಲೆ ಮನಸ್ಸಿಲ್ಲೇಳಿ ನಿನಗೆ ಗೊಂತಿದ್ದನ್ನೇ.ಸುಮ್ಮನೇ ಏನಾರು ಹೇಳೆಡ.ಎಂಗೊ ಮನೆ ಒಕ್ಕಲು ಕಳುದ ಕೂಡ್ಲೇ ಹೆರಡುದೇ..” ಹೇಳಿ ಅದರ ಬಾಯಿಮುಚ್ಚಿಸಿಕ್ಕಿಯೇ ಅವ° ಕಾರು ಹತ್ತಿದ್ದು.
ಅಂದರೂ ಊರಿಂಗೆ ಬಂದು ಮನೆ ಒಕ್ಕಲು ಕಳುದು ಹೆರಟಪ್ಪಗ ಅಲ್ಲೆಲ್ಲ ಹಲಸಿನ ಮೇಳದ್ದೇ ಶುದ್ದಿ.
“ಅಲ್ಲಿ ಅದಿದ್ದು,ಇದಿದ್ದು,ಹಾಂಗಿದ್ದು,… ಹೀಂಗಿದ್ದು…..ಮನೆಒಕ್ಕಲಿಂಗೆ ಬಂದವು ಕೆಲವು ಜೆನ ಅಲ್ಲಿಗೆ ಹೋಗಿಂಡು ಬಂದವಾದರೆ ,ಇನ್ನು ಕೆಲವು ಜೆನ ಉಂಡಿಕ್ಕಿ ಹೋಪವು..
ಹಾಂಗೆ ಎಲ್ಲೋರ ಬಾಯಿಲೂ “, ಹಲಸು  ಹಲಸು..” ಕೇಳಿಯಪ್ಪಗ ಇವಕ್ಕೂದೆ ಹೋಯೆಕೂಳಿ ಆಗದ್ದಿಕ್ಕೋ?
ಉಂಡ ಕೂಡ್ಲೇ ಆದಿತ್ಯ ಶ್ರೀಶನತ್ರೆ “ಹಲಸಿನ ಮೇಳಕ್ಕೆ ಹೋಗಿಂಡೇ ಹೋಪೋ°” ಹೇಳಿದ°.
“ಬೇಡ ಮಾರಾಯಾ..ಆನಿಲ್ಲೆ,ರೇಖಂಗೆ ಗೊಂತಾದರೆ ಅನರ್ಥಕ್ಕು.ಮನ್ನೆಂದಲೇ ಕರಕ್ಕೊಂಡು ಹೋಯೆಕು ಹೇಳಿ ಹಠ ಮಾಡಿಂಡಿದ್ದದರ ಹೇಂಗೋ ತಳಿಯದ್ದೆ ಕೂರ್ಸಿದ್ದು.ಅದರ ಬಿಟ್ಟಿಕ್ಕಿ ಹೋಯಿದೆ ಹೇಳಿ ಗೊಂತಾದರೆ ಮತ್ತೆ ಆನು ಉಪಾಸ ಕೂರೆಕಕ್ಕು”
“ಯ್ಯೆಬ್ಬೋ…ಅತ್ತಿಗೆಯ ಎನಗೆ ಗೊಂತಿಲ್ಯಾ? ಹಾಂಗೆಂತ ಮಾಡ.ಆನಲ್ದ ಕರಕ್ಕೊಂಡು ಹೋಪದು. ನೀನು ಒಟ್ಟಿಂಗೆ ಬಪ್ಪದು ಅಷ್ಟೇ ‌‌‌” ಆದಿತ್ಯ ಧೈರ್ಯ ತುಂಬಿದ. ಅಂದರೂ ಶ್ರೀಶಂಗೆ ಧೈರ್ಯ ಇಲ್ಲೆ.ಅಕೇರಿಗೆ ಶ್ರೀಶ ಹಲಸಿನ ಮೇಳಕ್ಕೆ ಹೋದರೂ ಹೆರ ನಿಂಬದು.ಆದಿತ್ಯ ಮಾತ್ರ ಅಲ್ಲಿ ಒಳ ಹೋಗಿ ನೋಡಿಕ್ಕಿ ಬಪ್ಪದು ಹೇಳುವ ಒಪ್ಪಂದಲ್ಲಿ ಇಬ್ರೂ ಹೆರಟವು.
ಅಲ್ಲಿ ಹೋದಪ್ಪಗ ಕಂಡಾಪಟ್ಟೆ ಜೆನಂಗೊ,ಗೌಜಿಯೋ ಗೌಜಿ.ಆದಿತ್ಯ “ನೀನು ಬಾ” ಹೇಳಿ ಒತ್ತಾಯ ಮಾಡಿರೂ ಶ್ರೀಶಂಗೆ ಒಳ ಹೋಪಲೆ ಮನಸ್ಸು ಬಯಿಂದಿಲ್ಲೆ. ರೇಖನ ಕರಕ್ಕೊಂಡು ಬಂದಿದ್ದರೆ ಅದಕ್ಕೆಷ್ಟು ಕೊಶಿಯಾವ್ತಿತು ‘ ಹೇಳಿ ಗ್ರೇಶಿಂಡು ಅಲ್ಲೇ ಹೆರ  ಬಪ್ಪವರ ಹೋಪವರ ನೋಡಿಂಡು ನಿಂದ.ಕೆಲವು ಜೆನ ಗುರ್ತದವು ಬಂದು ಮಾತಾಡ್ಸಿರೂ ಹೆಚ್ಚು ಮಾತಾಡ್ಲೆ ಕೂಡ ಸಮದಾನ ಇತ್ತಿದ್ದಿಲ್ಲೆ ಅವಂಗೆ.
ಅಲ್ಲೇ ಹತ್ತರೆ ಯೇವದೋ ಟಿವಿ ಚಾನೆಲ್ ನವುದೆ ಬಂದವರ ಎಲ್ಲ ಮಾತಾಡ್ಸಿಂಡಿತ್ತಿದ್ದವು.ಟಿವಿಯವು ಬಂದಪ್ಪಗ ಹೆಚ್ಚಿನವಕ್ಕೂ ಅವರೆದುರು ಹೋಪಲೆ ,ಮಾತಾಡ್ಲೆ ಆಶೆ.ಇದರ ಎಲ್ಲ ನೋಡಿಂಡು ನಿಂದವಂಗೆ ಆದಿತ್ಯ ಒಳ ಹೋಗಿ ಒಂದೂವರೆ ಗಂಟೆ ಕಳುದರೂ ಬಾರದ್ದಿಪ್ಪಗ ಮಂಡೆಬೆಚ್ಚ ಅಪ್ಪಲೆ ಸುರುವಾತು.
‘ಇಷ್ಟೊತ್ತಾರು ಈ ಅಸಾಮಿಯ ಕಾಣ್ತಿಲ್ಲೇಕೆ? ಬೇಗ ಬಂದಿದ್ದರೆ ಬೇಗ ಹೋಪಲಾವ್ತಿತು,ಎಲ್ಲಿದ್ದನೋ ಏನೋ’ ಹೇಳಿ ಗ್ರೇಶಿಂಡು ಅವನ ಹುಡುಕ್ಕಲೆ ಹೆರಟ°.ಇವ° ಅಲ್ಲಿಂದ ನಾಕು ಮೆಟ್ಟು ಮುಂದೆ ನಡದಪ್ಪಗ ಟಿವಿಯವು ಇವನ ನಿಲ್ಸಿ ಮಾತಾಡ್ಸಿದವು.
“ಹಲಸಿನ ಮೇಳದ ಬಗ್ಗೆ ನಿಂಗಳ ಅಭಿಪ್ರಾಯ ಎಂತರ?ನಿಂಗೊ ಹಲಸಿನಕಾಯಿ ಉಪಯೋಗುಸ್ತೀರಾ?ಬೇಳೆಯ ಎಂತ ಮಾಡ್ತಿ?…..” ಹೀಂಗೇ ಅದೂ ಇದೂ ಕೇಳುಗ ಉತ್ತರ ಹೇಳದ್ದೆ ಗೊಂತಿದ್ದಾ?
“ಹಲಸಿನ ಮೇಳಕ್ಕೆ ಬೇಕಾಗಿ ನಿಂಗೊ ಇಂದು ಊರಿಂಗೆ ಬಂದದಾ?ನಿಜಕ್ಕೂ ಗ್ರೇಟ್” ಹೇಳಿ ಅವು ಹೊಗಳುಗ ಒಂದು ತಟ್ಟೆಲಿ ನಾಕು ಸುಟ್ಟವು ತೆಕ್ಕೊಂಡು ಆದಿತ್ಯ ಬಂದ° ‌ಮೋರೆಲಿ ದೊಡ್ಡ ರಾಜ್ಯವ ಗೆದ್ದಷ್ಟು ಸಂಭ್ರಮ.
“ಇದಾ..ಇಷ್ಟು ಹೊತ್ತು ಕಾದು ನಿಂದದಕ್ಕೆ ಇದು ಮಾತ್ರ ಸಿಕ್ಕಿದ್ದಷ್ಟೆ.ಹೆಚ್ಚಿನ ‘ಐಟಮುದೆ ‘ ಖಾಲಿ ಆಯಿದು. ಬೆಶಿ ಬೆಶಿ ಮಾಡಿ ಕೊಡುವಲ್ಲಿ ರಶ್ಶೋ…ರಶ್ಶು….ಇಲ್ಲಿಗೆ ಬಂದದಕ್ಕೆ ಎಂತಾರು ಒಂದಿಷ್ಟು ತಿಂದಿಕ್ಕಿ ಹೋಗದ್ರೆ ಹೇಂಗಕ್ಕು” ಎರಡು ಸುಟ್ಟವು ಇವಂಗೂ ಕೊಟ್ಟ°.ಟಿವಿಯವು ಮಾತಾಡ್ಸುದು ಹೇಳುಗ ಅವಂಗೆ ರಜ ಎಳಕ್ಕ ಬಂತು..ಭಾರೀ ಚೆಂದಕೆ
“ಎಂಗೊ ಹಲಸಿನ ಮೇಳ ನೋಡ್ಲೆ ಬೇಕಾಗಿ ಊರಿಂಗೆ  ಬಂದದು. ಈಗ ತಿಂಬ ಈ ಸುಟ್ಟವಿನಷ್ಟು ರುಚಿಯ ಸುಟ್ಟವು ಇಷ್ಟರವರೆಗೆ ತಿಂದಿದಿಲ್ಲೆ. ಅನುಭವಸ್ಥರ ಸವಿಪಾಕದ ರುಚಿ ಇದರ್ಲಿ ಇದ್ದು ಹೇಳಿಂಡು ಅವರ ಮುಂದೆಯೇ ಕಚ್ಚಿ ಕಚ್ಚಿ ತಿಂದ.ಅವ° ತಿಂಬಗ  ಟಿವುಯವು ಇವನತ್ರೂದೆ
” ನಿಂಗಳೂ ತಿನ್ನಿ” ಎಂಗೊ ಇಬ್ರದ್ದೂ ಪಟ ತೆಗೆತ್ತೆಯೊ° ಹೇಳಿದವು.ಹಾಂಗೆ ಪಟ ತೆಗದೂ ಆತು. ಮತ್ತೆ ಅಲ್ಲಿಂದ ಮೆಲ್ಲಂಗೆ ಹೆರಟವು. ಅಷ್ಟಪ್ಪಗ ಅಲ್ಲಿ ರಾಶಿ ರಾಶಿ ಹಲಸಿನಕಾಯಿ ಕಂಡತ್ತು.
“ಇನ್ನು ಮನಗೆ ಹೋಗಿ ಹಲಸಿನಕಾಯಿ ತೆಗದು ಕೊಂಡೋಪಗ ಸುಮಾರು ಹೊತ್ತಕ್ಕು.ಇಲ್ಲಿಂದಲೇ ಒಂದು ಲಾಯ್ಕದ ಹಲಸಿನಕಾಯಿ ತೆಕ್ಕೊಂಬನಾ ಕಾಣ್ತು” ಹೇಳಿದ ಆದಿತ್ಯ. ಶ್ರೀಶಂಗೂ ಅದು ಸರಿ ಹೇಳಿ ಕಂಡತ್ತು. ಹಾಂಗೆ ಇಬ್ರೂ ಒಂದೊಂದು ಹಲಸಿನಕಾಯಿಯನ್ನೂ ತೆಕ್ಕೊಂಡು ಹೆರಟವು.
ಹಲಸಿನಕಾಯಿ ಕಂಡಪ್ಪಗ ರೇಖ ಅವನತ್ರೆ “ಹಲಸಿನ ಮೇಳಂದ ತಂದದಾ?” ಕೇಳಿತ್ತು.ಸತ್ಯ ಹೇಳಿರೆ ಅದರ ಬೈಗಳು ತಿನ್ನೆಕಕ್ಕು.ಹೇಳದ್ರೆ ಅದಕ್ಕೆ ಹೇಂಗಾರು ಗೊಂತಾದರೂ ಕಷ್ಟ ಹೇಳಿ ಅವ° ಮಾತಾಡಿದ್ದಾ°ಇಲ್ಲೆ.
‘ಅಂದರೂ ಅವು ಹೋದ ವಿಷಯ ಆದಿತ್ಯನತ್ರೆ ಬಾಯಿ ಬಿಡ್ಲಾಗ” ಹೇಳಿ ಮದಲೇ ಹೇಳಿದ ಕಾರಣ ರಜ ಧೈರ್ಯವು ಇದ್ದತ್ತು..ರೇಖ ಸುಮಾರು ಸರ್ತಿ ಕೇಳಿಯಪ್ಪಗ “ಹೋಯಿದಿಲ್ಲೆ, ನಿನ್ನ ಕರಕ್ಕೊಂಡು ಹೋಗದ್ದ ಮತ್ತೆ ಆನೊಬ್ಬನೇ ಹೋಪದೇಂಗೆ?” ಹೇಳಿ ಅದರ ರಜ ಹೊಗಳಿದ.ಅದಕ್ಕೆ ತುಂಬಾ ಕೊಶಿಯಾದ್ದು ಕಂಡು ಅವಂಗೂ ಸಂತೋಷಾತು.ಒಂದು ಸಣ್ಣ ಲೊಟ್ಟೆ ಹೇಳಿದ್ದರಿಂದಾಗಿ ಎಂತ ನಷ್ಟವೂ ಆಯಿದಿಲ್ಲೆ ಅದರ ಬದಲು ಹೆಚ್ಚು ಕೊಶಿಯೇ ಆದ್ದದು ಹೇಳಿ ಜಾನ್ಸಿಂಡಿದ್ದವನ ಗ್ರಾಚಾರ ಎಂತೋ ಸರಿಯಿತ್ತಿದ್ದಿಲ್ಲೆ ಕಾಣ್ತು.
ಊರಿನ ಟಿವಿಲಿ ಇವು ಸುಟ್ಟವು ತಿಂಬ ಪಟವ ಮತ್ತೆ ಮತ್ತೆ ಹಾಕಿ “ದೂರದ ಪೇಟೆಂದಲೂ ಹಲಸಿನ ಮೇಳ ನೋಡ್ಲೆ ಬೇಕಾಗಿ ಬಯಿಂದವು” ಹೇಳಿ ಹಲಸಿನ ಮೇಳದ ಗೌಜಿಯ ವಿವರ್ಸಿದವು.ಅದರ ಆರೋ ವೀಡಿಯೋ ತೆಗದು ರೇಖಂಗೆ ಕಳ್ಸಿದವು.ಸಾಲದ್ದಕ್ಕೆ ಪೇಪರಿನವು ಕೂಡ ಇವರಿಬ್ರ ಪಟವನ್ನೇ ಸ್ಪೆಶಲ್ ಕಾಲಂ ಮಾಡಿ ಹಾಕಿ ಇವರ ಅಭಿಪ್ರಾಯವ ಎಲ್ಲ ಬರದವು.
ಅದೆಲ್ಲವೂ ವ್ಯಾಟ್ಸಾಪ್ ಮುಖಾಂತರ ರೇಖನ ಮೊಬೈಲಿಂಗೆ ಬಾರದ್ದಿರ್ತೋ? ಅಷ್ಟೇ ಸಾಕಾತು ಮನೆಯ ನೆಮ್ಮದಿ ಹಾಳಪ್ಪಲೆ‌‌.
“ಎನ್ನ ಬಿಟ್ಟಿಕ್ಕಿ ಹೋಪಲೆ ಮನಸ್ಸು ಬಯಿಂದಿಲ್ಲೆ ಹೇಳಿ ಅಂತೇ ಹೇಳಿದ್ದಲ್ಲದಾ? ಅಲ್ಲಿಗೆ ಹೋಗಿ ಸುಟ್ಟವು ತಿಂದದು ಇಡೀ ಊರಿಂಗೆ ಪ್ರಚಾರ ಆದಿಪ್ಪಗ ಎನ್ನತ್ರೆ ಮಾಂತ್ರ ಲೊಟ್ಟೆ ಹೇಳಿದ್ದದು ” ಹೇಳಿ ರೇಖಂಗೆ ಭಯಂಕರ ಕೋಪ ಬಂತು.ಎಂಥಾ ಕೋಪ ಹೇಳಿರೆ ಅವ° ಕೇಳಿದ ಪ್ರಶ್ನೆಗೊಕ್ಕೆಲ್ಲ ಉತ್ತರವೇ ಇಲ್ಲೆ..ಅಷ್ಟೂ ಅಗತ್ಯ ಇಪ್ಪದರ ಮಗಳ ಮುಖಾಂತರ ಕೇಳುದು.ಎದುರೆದುರು ಕೂದರೂ ಮಾತೇ ಇಲ್ಲೆ.ಚಾಯ ಮಾಡಿ ತಂದು ಮಡುಗಿಕ್ಕಿ ಮಗಳತ್ರೆ “ಇದಾ ಚಾಯ ಮಾಡಿ ಮಡುಗಿದ್ದೆ ಮಗಳೂ..ಬೇಕಾದವಕ್ಕೆ ಕುಡಿವಲಕ್ಕು” ಹೇಳಿ ದೊಡ್ಡಕೆ ಹೇಳಿರೆ ಅದು ಶ್ರೀಶಂಗೆ ಹೇಳಿ ಲೆಕ್ಕ. ಉಂಬಲೆ, ತಿಂಬಲೆ ಮೇಜಿಲ್ಲಿ ಒಟ್ಟಿಂಗೆ ಬಟ್ಲು ಮಡುಗಿರೂ ನಿತ್ಯದ ಹಾಂಗೆ ಅಲ್ಲ…!! ಮತ್ತೆ ಹೇಂಗೆ ಇವ° ಮಾತಾಡುದು!!?
ಒಂದು ವಾರಪ್ಪಗ ಶ್ರೀಶಂಗೆ ಬೊಡುದೇ ಹೋತು.ಈ ಹಲಸಿನ ಮೇಳ,ಸುಟ್ಟವು, ಟಿವಿ,ಪೇಪರು…..ಎಲ್ಲರತ್ರೂ ಕೋಪ ಬಪ್ಪಲೆ ಸುರುವಾತು. ಅವನ ನೆಮ್ಮದಿಯ ಬದುಕಿನ ಹಾಳು ಮಾಡಿದ್ದದೇ ಹಲಸಿನಹಣ್ಣು ಹೇಳುವಷ್ಟು ಬೇಜಾರ ಅವಂಗೆ ‌.
ವಿಶಯ ಆದಿತ್ಯಂಗೂ ಗೊಂತಾತು. ಶ್ರೀಶನೇ ಪೋನು ಮಾಡಿ ಹೇಳಿದ°.
“ನಿನ್ನಂದಾಗಿ ಎನ್ನ ಬದುಕು ನೋಡು ಎಲ್ಲಿಗೆತ್ತಿತ್ತು ? ಮಾತಿಲ್ಲೆ,ಕತೆಯಿಲ್ಲೆ,ಎಂತದೂ ಇಲ್ಲೆ.ನೇರ್ಪ ಮೋರೆ ನೋಡದ್ದೆ ಒಂದು ವಾರಾತು.ಹೀಂಗೇ ಆದರೆ ಎನಗೆಂತ ಮಾಡೆಕೂಳಿ ಅರಡಿತ್ತಿಲ್ಲೆ”.
ಆದಿತ್ಯ ಜೋರು ನೆಗೆ ಮಾಡಿದ°.
” ಇಷ್ಟೇಯಾ? ಕೋಪ್ಸಿಂಡು ಅಪ್ಪನಮನೆಗೆ ಹೋಯಿದಿಲ್ಲೆನ್ನೇ.ನಿಂಗಳ ಸಮಸ್ಯೆ ಆನು ಸರಿ ಮಾಡ್ತೆ.ನಾಳಂಗೆ ಆದಿತ್ಯವಾರ ಅಲ್ಲದಾ? ನಿಂಗಳಲ್ಲಿ ಹೊತ್ತೋಪಾಣ ಚಾಯ”
“ನೀನಲ್ದ ಎನ್ನ ಕರಕ್ಕೊಂಡು ಹೋದ್ದು.ಇನ್ನು ನಿನ್ನತ್ರೂ ಕೋಪ ಇದ್ದೋ ಏನೋ ಬಪ್ಪಗ ರಜಾ ಜಾಗ್ರತೆ ಮಾಡು” ಶ್ರೀಶಂಗೆ ಮತ್ತೂ ಹೆದರಿಕೆ ‌.
“ಅತ್ತಿಗೆ ಹಾಂಗೆಲ್ಲ ಬೈವ ಜೆನ ಅಲ್ಲ.ನೀನೆಂತಕೆ ಇಷ್ಟು ಹೆದರುದು? ಮನ್ನೆ ತಂದ ಹಲಸಿನಕಾಯಿ ಹಣ್ಣಾಯಿದಾ?”
“ನೀನೊಂದರಿ ಹಲಸಿನಕಾಯಿ ಶುದ್ದಿ ಹೇಳೆಡ.ಅದರಿಂದಲೇ ಇಡೀ ಹಾಳಾದ್ದು”
“ಅದರಿಂದ ಹಾಳಾದರೆ ಅದರಿಂದಲೇ ಸರಿ ಮಾಡುವ°. ಮುಳ್ಳಿನ ಮುಳ್ಳಿಂದಲೇ ತೆಗೆಕಾಡ” ಆದಿತ್ಯನ ಕುಶಾಲು ಕೇಳುಗ ಶ್ರೀಶಂಗೆ ಎದೆಲಿ ಪಿಟಿಪಿಟಿ ಅಪ್ಪಲೆ ಸುರುವಾತು.
“ನೀನು ಹಲಸಿನಹಣ್ಣು ಕೊರದು,ಆದು ಮಡುಗಿಕ್ಕಿ ಮಗಳತ್ರೆ ಸುಟ್ಟವು ಮಾಡೆಕಾಡ ಹೇಳು.ಬಾಕಿಯೆಲ್ಲ ಆನು ಬಂದಿಕ್ಕಿ ಸರಿ ಮಾಡುವೆ”
ಹಾಂಗೆ ಆದಿತ್ಯ ಹೇಳಿದ ಕಾರಣ ಶ್ರೀಶ ಹಲಸಿನಹಣ್ಣು ಕೊರದು,ಆದು ಮಡುಗಿಕ್ಕಿ ಮಗಳತ್ರೆ ಸುಟ್ಟವು ಮಾಡ್ಲೆ ಹೇಳಿದ್ದು. ಈಗ ರೇಖನ ಬೈಗಳು ತಿಂದಪ್ಪಗ ಆದಿತ್ಯನ ಬಪ್ಪದು ಬೇಡಾಳಿ ಹೇಳುದೇ ಒಳ್ಳೆದೂಳಿ ಕಂಡತ್ತವಂಗೆ.
ಮೊಬೈಲು ತೆಗದು ಮೆಸೇಜ್ ಮಾಡಿದ°.ಅಂದರೂ ಆದಿತ್ಯ ಇವಂಗೆ ಧೈರ್ಯ ಹೇಳಿಂಡು ಅಲ್ಲಿಂದ ಹೆರಟ°.
ಅವ° ಬಪ್ಪಗ ಶ್ರೀಶ ಎಂತದೂ ಗೊಂತಿಲ್ಲದ್ದವರ ಹಾಂಗೆ ಹೆರ ಬಂದು ಸ್ವಾಗತ ಮಾಡಿದ°.
ಅವನೂದೆ ಹಾಂಗೇ.ಅವನಿ ಹತ್ತರೆ ಕೂದು ಶಾಲೆ ಶುದ್ದಿ ಕೇಳಿದ°.ರೇಖನತ್ರೆ ಯೇವಗಾಣ ಹಾಂಗೇ ಕುಶಾಲು ಮಾತಾಡಿ ಅದೂ ಇದೂ ಹೇಳಿ ನೆಗೆ ಮಾಡ್ಸಿದ°.ರೇಖನುದೆ ಹಾಂಗೆ ಅವನ ಮನೆಶುದ್ದಿಯೆಲ್ಲ ಕೇಳಿ ಪಟ್ಟಾಂಗ ಹೊಡದತ್ತು.ಅಂದರೂ ಶ್ರೀಶಂಗೆ ಅವರೊಟ್ಟಿಂಗೆ ಸೇರ್ಲೆ ಎಡಿಗಾತಿಲ್ಲೆ.ಎಡೇಲಿ ಮಾತಾಡ್ಲೆ ಹೋಗಿ ಹೆಂಡತಿಯ ಪಿರಿಪಿರಿ ಕೇಳುದೆಂತಕೆ?
ಆದಿತ್ಯ ಮದ್ಲಾಣಾಂಗೆ ಅಡಿಗೊಳಾಂಗೆಲ್ಲ ಬಂದು
” ಇಲ್ಲೆಂತ ಹಲಸಿನಹಣ್ಣು ಕೊರದು ಮಡುಗಿದ್ದೀರನ್ನೇ? ಸುಟ್ಟವು ಮಾಡ್ಲಿದ್ದಾ ಹೇಂಗೆ?” ಕೇಳಿಯಪ್ಪಗ ಶ್ರೀಶ° ಇಂದ್ರಾಣ ಕತೆ ಆತು ಹೇಳಿ ಗ್ರೇಶಿದ°.
ಆದಿತ್ಯನತ್ರೆ ಕಣ್ಣ ಭಾಶೆಲಿ “ಆ ಶುದ್ದಿ ಬೇಡ” ಹೇಳಿರೂ ಅವ° ಅದೇ ಭಾಶೆಲಿ ಇವಂಗೆ ಧೈರ್ಯ ಹೇಳಿದ°.
“ಕಳ್ದೊರ್ಷ ಆನು ಬಂದಿಪ್ಪಗ ನಿಂಗೊ ಮಾಡಿದ ಸುಟ್ಟವು ಎಷ್ಟು ಲಾಯ್ಕ ಆಯಿದು ಗೊಂತಿದ್ದಾ ಅತ್ತಿಗೇ. ನಿಂಗೊ ಎಂತ ಹಾಕುದು ಪರಿಮ್ಮಳಕ್ಕೆ? ಏಲಕ್ಕಿಯಾ? ಶುಂಠಿ ಹೊಡಿಯಾ? ನಿಂಗೊ ಅಂದು ಮನಗೆ ಕೊಂಡೋಪಲೆ ಕೊಟ್ಟದಲ್ಲದಾ? ಅಂದು ರಶ್ಮಿಯ ಅಬ್ಬೆ ಅಪ್ಪ° ಊರಿಂದ ಬಂದಿತ್ತಿದ್ದವು. ” ಭಾರೀ ರುಚಿಯಿದ್ದು” ಹೇಳಿ ಅವ್ವೇ ಎಲ್ಲವನ್ನೂ ಕಾಲಿ ಮಾಡಿದವು.ಎನಗೆ ಮತ್ತಂಗೆ ತಿಂಬಲೆ ಒಂದೂ ಒಳುದ್ದಿಲ್ಲೇತಾ!!”
“ಹ್ಹ..ಹ್ಹ…ಅಂಬಗ ಎನ್ನ ಸುಟ್ಟವು ಅಷ್ಟು ರುಚಿಯಾಯಿದಾ?” ರೇಖ ನೆಗೆ ಮಾಡಿಂಡು ಕೇಳಿತ್ತು.
“ಅದು ಬೇರೆ ಹೇಳೆಕಾ? ಹಲಸಿನಹಣ್ಣು ಸುಟ್ಟವು ನಿಂಗೊ ಮಾಡುವ ಹಾಂಗೆ ಎಲ್ಲೋರಿಂಗು ಮಾಡ್ಲೆ ಖಂಡಿತ ಎಡಿಯ. ಹಾಂಗೆ ಆರಾರು ಒಂದಿಬ್ರಿಂಗೆ ಎಡಿಗಾಯಿಕ್ಕು.ಅಂದರೂ ಎನ್ನ ಪೈಕಿಲಿ,ರಶ್ಮಿಯ ಪೈಕಿಲಿ ……ಅಲ್ಲ..ಸಾಧಾರಣ ಎನಗೆ ಗೊಂತಿಪ್ಪವರ ಪೈಕಿಲಿ ಆರಿಂಗೂ ನಿಂಗಳಷ್ಟು ಲಾಯ್ಕಲ್ಲಿ ಸುಟ್ಟವು ಮಾಡ್ಲೆ ಅರಡಿತ್ತಿಲ್ಲೆ. ಇಂದಾನು ಬಂದದೊಳ್ಳೆದಾತು.ನಿಂಗೊ ಸುಟ್ಟವು ಮಾಡ್ಲೆ ಹೆರಟಾಂಗೆ ಕಾಣ್ತು” ಅಷ್ಟು ಹೇಳಿಕ್ಕಿ ಶ್ರೀಶನ ಮೋರೆ ನೋಡಿ ಒಂದು ಕಣ್ಣು ಮುಚ್ಚಿ ” ಹೇಂಗಾಯಿದು ” ಹೇಳಿ ಸಣ್ಣ ನೆಗೆಯುದೆ.
“ಸುಟ್ಟವು ಮಾಡ್ಲೇ ಹೆರಟದು.ನಿಂಗೊ ಮಾತಾಡಿಂಡು ಕೂರಿ,ಒಂದಿಪ್ಪತ್ತು ನಿಮಿಷಲ್ಲಿ ಸುಟ್ಟವು ಮಾಡಿ ತತ್ತೇ” ಅವನ ಹೊಗಳಿಕೆಲಿ ರೇಖ ರಜಾ ಉಬ್ಬಿತ್ತು ಕಾಣ್ತು.
“ಎಂತಾರು ಸೇರೆಕಾರೆ ಹೇಳಿ ಅತ್ತಿಗೇ, ಮನ್ನೆ ಎಂಗೊ ಹಲಸಿನಮೇಳಕ್ಕೆ ಹೋದಿಪ್ಪಗ ತಿಂದ ಸುಟ್ಟವು ನಿಂಗೊ ಮಾಡುವ ಸುಟ್ಟವಿನ ಹತ್ತರಂಗೂ ಬಾರ ಆತಾ.ಅಂಬಗಳೇ ಶ್ರೀಶನತ್ರೆ ಹೇಳಿದ್ದೆ .ಇಲ್ಲಿ ಸುಟ್ಟವು ತಿಂದ ತಪ್ಪಿಂಗೆ ಇನ್ನು ಅತ್ತಿಗೆ ಮಾಡಿದ ಸುಟ್ಟವು ತಿನ್ನದ್ರೆ ಅಗಾಳಿ”
ರೇಖ ಆದಿತ್ಯನ ಮಾತು ಕೇಳಿ ನೆಗೆ ಮಾಡಿಂಡು ಸುಟ್ಟವು ಮಾಡ್ಲೆ ಹೆರಟತ್ತು.
“ಆನುದೆ ಒಪ್ಪಕ್ಕನುದೆ ಒಂದರಿ ವಾಕಿಂಗು ಹೋಗಿಂಡು ಬತ್ತೆಯ°.ನೀನಿಲ್ಲಿ ಅತ್ತಿಗೆಗೆ ಎಂತಾರು ಸಕಾಯಕ್ಕೆ ಸೇರು” ಹೇಳಿಕ್ಕಿ ಅವ° ಮಗಳನ್ನು ಕರಕ್ಕೊಂಡು ಹೆರ ಹೋದಪ್ಪಗ ಶ್ರೀಶಂಗೆ ಎಂತ ಮಾಡೆಕೂಳಿ ಅಂದಾಜಾಯಿದಿಲ್ಲೆ. ರೇಖಂಗೆ ಸಕಾಯ ಮಾಡ್ಲೆ ಹೋಗಿ ಮೌನಮುನಿಯ ಹಾಂಗೆ ನಿಂಬದಕ್ಕಿಂತ ಟಿವಿಯಾದರೂ ನೋಡುವ° ಹೇಳಿ ಅಂತೇ ಚಾನಲ್ ಬದಲ್ಸಿಂಡು ಕೂದ°.
ರಜಾ ಹೊತ್ತಪ್ಪಗ ಒಳಾಂದ ರೇಖನ ಸ್ವರ.
“ಇದಾ..ಒಂದರಿ ಇಲ್ಲಿಗೆ ಬನ್ನೀ” ..
ಇದೆಂತರ ಕನಸೋ ಹೇಳಿ ಆತವಂಗೆ.ಒಂದು ವಾರ ಮಾತಾಡದ್ದೆ ಕೂದ ಜೆನ ಈಗ ಫಕ್ಕನೆ ಹೀಂಗೆ ದಿನಿಗೇಳ್ತನ್ನೇ.ಅದೂದೆ ಹಲಸಿನಹಣ್ಣಿನಷ್ಟೇ ಸೀವಿನ ಸ್ವರ.ಆದಿತ್ಯ ಬಪ್ಪಲಾತು ಹೇಳಿ ಆದಿಕ್ಕಾ? ಅಲ್ಲ ಅದರ ಮನಸು ಸರಿಯಾದಿಕ್ಕಾ?’ ಹೇಳಿ ಅಂದಾಜಾಗತ್ತೆ ಟಿವಿ ಆಫ್ ಮಾಡಿಕ್ಕಿ ಸುಮ್ಮನೇ ಕೂದ°.
“ಒಂದರಿ ಬನ್ನೀ ಹೇಳಿರೆ ಬಪ್ಪಲೂ ಹೆದರಿಕೆಯಾ? …ಈ ಸುಟ್ಟವು ಹೇಂಗಾಯಿದು ಹೇಳಿ” ರೇಖ ಕೈಲಿ ಸುಟ್ಟವು ಹಿಡ್ಕೊಂಡೇ ಬಂದು ಅವನ ಬಾಯಿಗೆ ಕೊಟ್ಟತ್ತು.ಅವಂಗೆ ನಂಬಿಕೆ ಬಯಿಂದೇಯಿಲ್ಲೆ.ರಜ ಹೊತ್ತು ಮದಲೇ ಕೂಡ “ಬೇಕಾರೆ ಉಂಬಲೆ ಬಪ್ಪಲಕ್ಕು,ಬಟ್ಲು ಮಡುಗಿದ್ದೆ ಹೇಳಿ ಹೇಳು ಮಗಳೂ” ಹೇಳಿ ಮಗಳತ್ರೆ ಉಂಬಲೆ ಬಪ್ಪಲೆ ಹೇಳ್ಸಿದ ಜೆನ ಈಗ ಬಂದು ಸುಟ್ಟವು ಬಾಯಿಗೆ ಕೊಡ್ತು ಹೇಳಿ ಆದರೆ‌……..!!!!!
“ಎಂತರ ಆಲೋಚನೆ ಇದರ ತಿನ್ನಿ ಮದಾಲು….” ರೇಖ ನೆಗೆ ಮಾಡಿಂಡು ಹೇಳ್ಯಪ್ಪಗ ಅದರ ಮೋರೆಯನ್ನೇ ನೋಡಿದ° ಅವ°.
“ಅದೆಂತ ಹೊಸಬ್ಬರ ನೋಡಿದ ಹಾಂಗೆ ನೋಡುದು? ಇಲ್ಲಿ ಬನ್ನೀ ನೋಡ° ” ರೇಖ ಅವನ ಕೈ ಹಿಡ್ಕೊಂಡೇ ಅಡಿಗೊಳಾಂಗೆ ಕರಕ್ಕೊಂಡು ಬಂತು. ಅಂದರೂ ಅವಂಗೆ “ಚ” ಕಾರ ಎತ್ತಲೆ ಆಯಿದಿಲ್ಲೆ. ಸುಮ್ಮನೇ ಅದರ ನೋಡಿಂಡು ನಿಂದ°.
“ನಿಂಗೊಗೆ ಸುಟ್ಟವು ತಿನ್ನೆಕೂಳಿ ಆದರೆ ಎನ್ನತ್ರೆ ಸೀದಾ ಹೇಳ್ಲಾವ್ತಿತಿಲ್ಯಾ? ಅದಕ್ಕೆ ಬೇಕಾಗಿ ಆದಿತ್ಯನ ಬರ್ಸೆಕಾತ?ಆನು ಮಾತಾಡದ್ರೂ ನಿಂಗೊಗೆ ಮಾತಾಡ್ಲಾವ್ತಿತಿಲ್ಯಾ?ಅದರ ಆನು ಹೇಳಿಕೊಡೆಕಾ? ಎನ್ನ ಬಿಟ್ಟಿಕ್ಕಿ ಹೋದ್ದೆಂತಕೇಳಿ ಕೋಪ ಮಾಡಿರೆ ನಿಂಗೊಗೂ ಎನ್ನ ಬೈವಲಾವ್ತಿತಿತು. ‘ ಎಲ್ಲಾ ದಿಕಂಗೂ ನಿನ್ನ ಕರಕ್ಕೊಂಡು ಹೋಯೆಕೂಳಿದ್ದಾ’ ಕೇಳೆಕಾತು. ಇಷ್ಟು ಪಾಪ ಆಗಿ ಹೋದಿರನ್ನೇ……” ರೇಖ ಸುಟ್ಟವು ಎಳಕ್ಕಿಂಡು ಅವನತ್ರೆ ಕುಶಾಲು ಮಾತಾಡ್ಲೆ ಸುರು ಮಾಡಿತ್ತು.
“ನಿಂಗೊ ಮೇಳಕ್ಕೆ ಹೋದ್ದು,ಅಲ್ಲಿ ಎಂತ ಮಾಡಿದ್ದಿ ‌.‌..‌.ಎಲ್ಲಾ ಎನಗೆ ಗೊಂತಾಯಿದು. ಆದರೂ ನಿಂಗೊ ಎನಗೆ ಇಷ್ಟು ಹೆದರ್ತಿ ಹೇಳಿ ಗೊಂತಾದ್ದದು ಈಗಲೇ.ಅಬ್ಬಾ..ಮದುವೆ ಆಗಿ ಇಷ್ಟೊರ್ಷಾದರೂ ಎನ್ನ ಅರ್ಥ ಮಾಡಿದ್ದಿಲ್ಲೆನ್ನೇ ಹೇಳಿ ಬೇಜಾರಾವ್ತು ‌…..” ನೆಗೆ ಮಾಡಿಂಡು ಮಾತಾಡ್ತರೂ ಅದರ ಕಣ್ಣಿಲ್ಲಿ ನೀರು ತುಂಬಿಯಪ್ಪಗ ಅವಂಗೆ ತಡದ್ದಿಲ್ಲೆ
“ಛೇ..ಹೆದರಿಕೆ ಅಲ್ಲ.ಅದು ಪ್ರೀತಿ….. ನಿನ್ನತ್ರೆ ಎನಗಿಪ್ಪದು ಪ್ರೀತಿ ಮಾಂತ್ರ. ನಮ್ಮ ಪ್ರೀತಿಸುವವು ಕೊಶೀಲಿರೆಕೂಳಿ ಗ್ರೇಶುದು ತಪ್ಪಾ ಹೇಳು.ಆನು ಹೋದ್ದದು ನಿನಗೆ ಬೇಜಾರಾತು ಹೇಳಿಯಪ್ಪಗ ಎಂತ ಮಾಡೆಕೂಳಿ ಅಂದಾಜಾಯಿದಿಲ್ಲೆ. ತಪ್ಪು ಮಾಡಿಕ್ಕಿ ಸಮರ್ಥಿಸುವ ಕ್ರಮ ಎನಗಿಲ್ಲೆನ್ನೇ.ಅದು ಬಿಡು.ಈಗ ಅದೆಲ್ಲ ಹಳತ್ತು.ಈಗ ಕಣ್ಣು ತುಂಬಿದ್ದೆಂತಕೆ ಹೇಳು?” ಅವ° ಅಷ್ಟು ಹೇಳ್ಯಪ್ಪಗ ಅದಕ್ಕೆ ಕಣ್ಣೀರು ಧಾರೆಯಾಗಿ ಬಂತು.ಚೂಡೀದಾರದ ಶಾಲಿಲ್ಲಿ ಅದರ ಉದ್ದಿಂಡು ಅವನ ನೋಡಿ ನೆಗೆ ಮಾಡಿತ್ತು
“ಎನಗೂ ಹಾಂಗೇ. ನಿಂಗಳತ್ರೆ ತುಂಬಾ ಪ್ರೀತಿ ಅಲ್ಲದಾ?ಒಂದರಿ ಸುಮ್ಮನೇ ಕೋಪ ಬಂದ ಹಾಂಗೆ ಮಾಡಿದೆ.ಆದರೆ ನಿಂಗೊ ಅದರ ಸತ್ಯ ನಂಬಿ ಮತ್ತೂದೆ ದೂರ ಹೊದಿ.ಅಷ್ಟಪ್ಪಗ ಅದರ ಸರಿ ಮಾಡ್ಲೆ ಅರಡಿಯದ್ದೆ ಹೀಂಗೆಲ್ಲ ಆತು……”
ಅವನ ಮನಸ್ಸು ಈಗ ಹಗೂರಾತು.ಇಷ್ಟು ದಿನ ಎದೆಲಿ ಕಟ್ಟಿ ಮಡುಗಿದ ದೊಡ್ಡ ಬಂಡೆಕಲ್ಲು ಕರಗಿ ಹೋದ ಅನುಭವ.
“ಈ ಸುಟ್ಟವು ತಿನ್ನು.ನಮ್ಮ ಇಷ್ಟು ದಿನ ದೂರ ಮಾಡಿದ್ದದುದೆ ಇದುವೇ.ಈಗ ಒಂದು ಮಾಡಿದ್ದುದೆ ಇದುವೇ……” ಅವ° ಕೊಶೀಲಿ ಅದರ ಬಾಯಿಗೆ ಸುಟ್ಟವು ಕೊಟ್ಟದೂದೆ ಬಾಗಿಲ ಹೊಡೇಂದ ದೊಡ್ಡಕೆ ಚಪ್ಪಾಳೆಯೂ ನೆಗೆಯೂ ಕೇಳಿತ್ತು.
“ಆಹಾ…..ಸುಟ್ಟವು ತಿಂದಾತ?ನಿಂಗೊಗೆ ರಾಜಿಯಾತ? ಎಂಗೊ ಬಪ್ಪಲಕ್ಕಾ?” ಅಲ್ಲಿ ಫಕ್ಕನೆ ಆದಿತ್ಯನನ್ನೂ,ಮಗಳನ್ನೂ ಕಂಡಪ್ಪಗ ರೇಖ ಕೆಂಪು ಕೆಂಪಾಗಿ ಶ್ರೀಶನ ನೋಡಿತ್ತು.ಅದರ ಮೋರೆಲಿ ಪ್ರೀತಿಯ ಕೆಂಪು ಗುಲಾಬಿ ಅರಳಿದ್ದು ಕಂಡತ್ತವಂಗೆ.

~~~***~~~

ಪ್ರಸನ್ನಾ ವಿ ಚೆಕ್ಕೆಮನೆ
ಧರ್ಮತ್ತಡ್ಕ

 

ಪ್ರಸನ್ನಾ ಚೆಕ್ಕೆಮನೆ

10 thoughts on “ಸುಟ್ಟವಿನ ಕತೆ : ಪ್ರಸನ್ನಾ ಚೆಕ್ಕೆಮನೆ

  1. ಧನ್ಯವಾದ ಅಣ್ಣಾ..

  2. Kathe odisikondu hovuthu.
    Baravanigeya shaili katheya munduvarisuva reeti adakkondu olleya antya yellavu etimitiyalli eddu.
    Khushi aatu.

    1. ಹರೇರಾಮ, ಕತೆಯ ಓದಿ ಅಭಿಪ್ರಾಯ ಹೇಳಿದ್ದಕ್ಕೆ ಧನ್ಯವಾದ ಅಣ್ಣಾ

    1. ಧನ್ಯವಾದ ಅಣ್ಣಾ..

  3. ತುಂಬಾ ಚೆನ್ನಾಗಿ ಮೂಡಿಬತ್ತಾಯಿದ್ದು. ಫೊಲೋ ಅಪ್ ಅದ್ಭುತ.
    ಫ್ರೆಶರ್ಸ್ಗಗೊಕ್ಕೆ ಉದ್ಯೋಗ ಮಾಹಿತಿಯು ಅವರವರ ಅರ್ಹತೆ (ಡಿಗ್ರಿ) ಗೆ ಸಮವಾಗಿ ಸಾದ್ಯವಾದರೆ ಮಾಹಿತಿಯೂ ಒದಗಿ ಬಂದರೆ ಮನೆಲಿ ಕಿರಿಯರಿಂಗೆ ಹಿರಿಯರಿಂಗೆ ಉಪಕಾರಕ್ಕು ಎನ್ನ ಅಭಿಪ್ರಾಯ.
    ಮುಂದೆಯೂ ಸುಕ್ಷೇಮವಾಗಿ ಹವ್ಯಕರ ಭಾಗ್ಯದ ಬೆಳಕಾಗಲಿ.

  4. ಸುಟ್ಟವಿನ ಕತೆ ಸೂಪರ್ ಆಯಿದು. ಒಳ್ಳೆ ನೈಜತೆ ಇದ್ದು. ಕಡೆಯಾಣ ರಾಜಿ ಆದ ಬಗೆ ಮನಸ್ಸಿನ ತಟ್ಟಿತ್ತು.

    1. ಹರೇರಾಮ, ಸುಟ್ಟವಿನ ಕತೆ ಮೆಚ್ಚಿದ್ದಕ್ಕೆ ಧನ್ಯವಾದ

  5. ತುಂಬಾ ನೈಜವಾಗಿ ಕಥೆ ಮೂಡಿ ಬಯಿಂದು. ಲಾಯ್ಕಾಯಿದು ಬರದ್ದು … ಅಂತೂ ಸುಖಾಂತ್ಯ ಆತನ್ನೇ… ಸಮಾಧಾನ ಆತು… ತುಂಬಾ ಖುಷಿಯಾತು…

    1. ಧನ್ಯವಾದ ಜಯಕ್ಕಾ, ನಿಂಗಳ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×