Oppanna.com

ಸ್ವಯಂವರ : ಕಾದಂಬರಿ : ಭಾಗ 11 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   05/08/2019    2 ಒಪ್ಪಂಗೊ

ಭಾಮೆಯಕ್ಕಂಗೆ ತುಂಬ ಕೊಶಿಯಾತು. ಇಷ್ಟು ಆಸ್ತಿ, ಜಾಗೆ ಇಪ್ಪಗ ಕೇಶವ° ಒಬ್ಬನೇ ಆದರೆ ಹೇಂಗೆ ನಡೆಶಿಯೊಂಡು ಬಪ್ಪದು? ಇನ್ನೊಬ್ಬ° ಮಗನೂ ಇದ್ದರೆ ಅವಂಗೊಂದು ಜೆತೆ ಆತು.ಕೂಸು ಶೈಲ ಹೇಂಗಾರೂ ಮದುವೆ ಮಾಡಿ ಕೊಡ್ಲಿಪ್ಪದು. ಮಕ್ಕಳತ್ರೆ
“ನಿಂಗೊಗೊಬ್ಬ° ತಮ್ಮ ಬತ್ತ° ಆಡ್ಲೆ” ಹೇಳಿದವು.
“ತಮ್ಮನೇ ಆಯೆಕಾ? ತಂಗೆ ಆಗದಾ? ಎಂಗಳ ಕ್ಲಾಸಿನ ಸುಗುಣಂಗೆ ತಂಗೆ ಹುಟ್ಟಿದ್ದು” ಹೇಳಿತ್ತು ಶೈಲ.

ಭಾಮೆಯಕ್ಕ° ಮಾತಾಡಿದ್ದವಿಲ್ಲೆ.
“ಕೂಸೋ ಮಾಣಿಯೋ ಆರಾದರೆಂತ ಶಾರದೆಗೆ ಹೆಚ್ಚು ಬಂಙ ಆಗದ್ರಾತು” ಹೇಳಿ ಸರಸತ್ತೆ ಎಡೇಲಿ ಹೇಳಿಯಪ್ಪಗ ಭಾಮೆಯಕ್ಕ ಅಪ್ಪೂಳಿ ತಲೆಯಾಡ್ಸಿದವು.

ಈ ಸರ್ತಿ ಶಾರದೆಗೆ ರಜ ಬಂಙವೇ ಆತು‌.ಶಾಲಗೆ ಹೋಪ ಮಕ್ಕಳ ನೋಡೆಕು‌.ಸರಸತ್ತೆಯ ಆರೋಗ್ಯ ಅಷ್ಟು ಸರಿಯಿಲ್ಲೆ.ಅವರನ್ನು ನೋಡ್ಯೊಳೆಕು.ಹಟ್ಟಿಲಿ ನಾಕು ದನಗಳ ಕರವಲಿದ್ದು.ಆಳುಗೊ, ಹೆಣ್ಣುಗೊ ಹೇಳಿ ನಿತ್ಯಕ್ಕೆ ನಾಲ್ಕೈದು ಜೆನಕ್ಕೆ ಬೇಶಿ ಹಾಕೆಕು.ಭಾಮೆಯಕ್ಕ ಸೇರಿರೂ ಅವಕ್ಕೆ ಮದ್ಲಾಣಾಂಗೆ ಮಾಡ್ಲೆಡಿತ್ತಿಲ್ಲೆ. ಶಾರದೆಗೂ ಅವರ ಬೊಡುಶುದೆಂತಕೇಳಿ ಬಂಙ ಆದರೂ ಮಾಡುದು‌.ಹೆರಾಂಗೆ ಆಳುಗೊ, ಹೆಣ್ಣುಗೊ ಇದ್ದರೂ ಮನೆಯೊಳಾಣ ಕೆಲಸಕ್ಕೆ ಹೆಮ್ಮಕ್ಕಳೇ ಆಯೆಕಷ್ಟೆ.

ಹಾಂಗೂ ಹೀಂಗೂ ದಿನತುಂಬಿ ಶಾರದೆಗೆ ಒಂದು ಮಗಳು ಹುಟ್ಟಿತ್ತು. ಮಾಣಿಯ ನಿರೀಕ್ಷೆಲಿದ್ದ ಭಾಮೆಯಕ್ಕ ಒಂದರಿ ಚಪ್ಪೆ ಆದರೂ ಹೆರಾಂಗೆ ಯೇವದನ್ನೂ ತೋರ್ಸಿಕೊಂಡಿದವಿಲ್ಲೆ. ತಂಗೆ ಹುಟ್ಟಿತ್ತು ಹೇಳಿ ಶೈಲಂಗೂ ,ಕೇಶವಂಗೂ ಭಾರೀ ಕೊಶಿ. ಬೆಳಿ ಬೆಳಿಯಾಗಿ ಸುರುಳಿ ಸುರುಳಿ ತಲೆಕಸವಿಪ್ಪ ಆ ಕೂಸಿನ ಕಂಡವಕ್ಕೆಲ್ಲ ಒಂದರಿ ತೆಚ್ಚೆಕು ಹೇಳಿ ಆಗ್ಯೊಂಡಿದ್ದತ್ತು.

ಚಂದ್ರಣ್ಣಂಗೂ ಕುಞಿ ಮಗಳೂಳಿ ಅದರತ್ರೆ ಹೆಚ್ಚು ಕೊಂಗಾಟ.ಆರು ತಿಂಗಳಪ್ಪಗ ಬಾರ್ಸ ಮಾಡ್ಲೆ ಅಂದಾಜು ಮಾಡಿಕ್ಕಿ ಜೋಯಿಶ ಮಾವನಲ್ಲಿಗೆ ಮುಹೂರ್ತ ಕೇಳ್ಲೆ ಹೋದವು ಚಂದ್ರಣ್ಣ. ಜೋಯಿಶ ಮಾವ° ಹೇಳಿರೆ ಬೇರೆ ಆರೂ ಅಲ್ಲ.ಚಂದ್ರಣ್ಣನ ದೊಡ್ಡ ಅಣ್ಣ ಮಹಾಲಿಂಗಣ್ಣನ ಹೆಂಡತಿ ಯೆಶೋದೆಯ ಅಪ್ಪ°.

ಮಗಳು ಹುಟ್ಟಿದ ದಿನ,ಸಮಯ ಹೇಳಿಕ್ಕಿ ಒಂದು ಜಾತಕ ಮಾಡಿಕೊಡೆಕು’ ಹೇಳಿಯಪ್ಪಗ ಜೋಯಿಶ ಮಾವ° ಕೊಶೀಲಿ ಒಪ್ಪಿದವು.
“ನಿಂಗಳ ಮನೆಯ ಎಲ್ಲಾ ಮಕ್ಕಳ ಜಾತಕವನ್ನು ಆನೇ ಮಾಡಿಕೊಟ್ಟದಲ್ದೋ” ಹೇಳಿಕ್ಕಿ ಪಂಚಾಂಗ ತೆಗದು ಎಂತದೋ ಬರದು ಕಳದು,ಕೂಡಿಸಿ ಮಾಡಿಕ್ಕಿ ಜೋಯಿಶ ಮಾವ° ಒಂದು ರೀತಿಯ ಮೋರೆ ಮಾಡಿಂಡು ಕೂದವು.

“ಎಂತಾತು ಮಾವ° ? ಎಂತಾರು ದೋಶ ಇದ್ದಾ? ನಿಂಗೊ ಹೇಳಿ” ಚಂದ್ರಣ್ಣಂಗೆ ಅವು ಹಾಂಗೆ ಕೂದ್ದ ಕಾಂಬಗ ಎಂತೋ ಇದ್ದು ಹೇಳಿ ಆತು.

“ಎಂತ ಇದ್ದರೂ ಹೇಳಿ ಮಾವ° .ಜಾತಕ ಮಾಡುದು ನಿಂಗೊ ಆದರೂ ಅದರ ನಕ್ಷತ್ರ, ಹೊತ್ತು ಬದಲ್ಸುಲೆಡಿಯನ್ನೇ….”

ಜೋಯಿಶ ಮಾವ° ಮತ್ತೊಂದರಿ ಅವು ಬರದ ಜಾತಕವ ಸರಿಯಾಗಿ ನೋಡಿಕ್ಕಿ ಕನ್ನಡ್ಕ ತೆಗದು ಉದ್ದಿಂಡು ಮಾತಾಡ್ಲೆ ಸುರು ಮಾಡಿದವು

“ಕೂಸಿನ ಜಾತಕಲ್ಲಿ ಈಗ ಎಂತ ದೋಷವೂ ಇಲ್ಲೆ‌.ಆದರೂ ಹದ್ನೇಳು,ಹದ್ನೆಂಟೊರುಶಪ್ಪಗ ಎಂತೋ ಸಣ್ಣ ಕಂಟಕ ಇದ್ದು‌.ಅದು ಜೀವಾಪಾಯದ್ದಲ್ಲ.ಆದರೆ ಮನೆತನದ ಹೆಸರಿಂಗೆ ಮಸಿಬಳಿವ ಹಾಂಗಿದ್ದ ಲಕ್ಷಣ. ಈಗಲೇ ಸರೀ ಹೇಳ್ಲೆಡಿಯ.ಕೂಸು ರಜಾ ದೊಡ್ಡಪ್ಪಗ ಬೇಕಾರೆ ಇನ್ನೊಂದರಿ ಜಾತಕ ಸರೀ ವಿಮರ್ಶೆ ಮಾಡಿ ನೋಡುವೊ°”
“ಮನೆತನದ ಹೆಸರಿಂಗೆ ಮಸಿ” ಹೇಳುದು ಕೇಳುಗ ಚಂದ್ರಣ್ಣಂಗೆ ಒಂದರಿ ಝಿಮ್ ಆತು.ಮುಂದೆ ಎಂತ ಆಪತ್ತು ನಡೆತ್ತೋ ದೇವರೇ..ಕೂಸಿನ ಭವಿಷ್ಯ ಹಾಳಾಗದ್ದಾಂಗೆ ಮಾಡು’ ಹೇಳಿ ಮನಸಿಲ್ಲೇ ಜಾನ್ಸಿಂಡು ಜೋಯಿಶ ಮಾವನನ್ನೇ ನೋಡಿದವು.

ಚಂದ್ರಣ್ಣನ ಭಾವ ಅವಕ್ಕೆ ಅರ್ಥಾತು.
“ನೀನೆಂತ ಹೆದರೆಡ,ಇದರ್ಲಿ ಕಂಡದರ ಬಗ್ಗೆ ಒಂದು ಸೂಚನೆ ಕೊಟ್ಟದಷ್ಟೆ‌.ಹಾಂಗೇ ಆಯೆಕೂಳಿ ಎಂತದೂ ಇಲ್ಲೆ.ಗ್ರಹಸ್ಥಿತಿ ಬದಲುಗ ಹೀಂಗೇ ಅಕ್ಕು ಹೇಳಿ ಹೇಳ್ಲೆಡಿಯ”

ಚಂದ್ರಣ್ಣಂಗೆ ಗೊಂತಿದ್ದು ಜೋಯಿಶಮಾವ° ಇದರ ಅಂತೇ ಹೇಳಿದ್ದೂಳಿ.ಅಂದರೂ ಮಾತಾಡಿದ್ದಾ°ಯಿಲ್ಲೆ.’ತಲೆಲಿ ಬರದ್ದು ಎಲೆಲಿ ಉದ್ದಿರೆ ಹೋಕೋ’ ಹೇಳಿ ಮನಸಿಲ್ಲೆ ಜಾನ್ಸಿಂಡು ಅವಕ್ಕೆ ದಕ್ಷಿಣೆ ಕೊಟ್ಟು,ಕಾಲು ಹಿಡುದಿಕ್ಕಿ ಹೆರಟವು.

“ನೀನೀಗಲೇ ಮುಂದಾಣದ್ದರ ಜಾನ್ಸಿ ಮಂಡೆಬೆಚ್ಚ ಮಾಡೆಕೂಳಿಲ್ಲೆ.ದೇವರಿದ್ದ ಎಲ್ಲ ಸರಿಯಾವ್ತು.ಈಗ ಆನು ಹೇಳಿದ ಜಾತಕ ಸರಿ ಇದ್ದು ಹೇಳಿ ಆಯೆಕಾರೆ ಕೂಸಿನ ಮೋರೆಲಿ ಒಂದು ಕೆಂಪು ಚಂದ್ರಕಲೆ ಇಕ್ಕು. ಅದಿಲ್ಲದ್ರೆ ತೊಂದರೆ ಇಲ್ಲೆ”

ಚಂದ್ರಣ್ಣಂಗೆ ಮತ್ತೊಂದರಿ ಝಿಮ್ ಆತು.ಕೂಸು ಹುಟ್ಟಿದ ಸಮಯಲ್ಲಿ ಅದರ ಮೀಶುಲೆ ಬಂದ ಹೆಣ್ಣು ಸಾನು “ಇದೆಂತಾದ್ದು ಕುಂಞಕ್ಕನ ಮೋರೆಲಿ ಹೀಂಗೆ ಕೆಂಪು ಕಲೆ” ಹೇಳಿ ಹೇಳಿದ್ದದು ಫಕ್ಕನೆ ನೆಂಪಾತವಕ್ಕೆ.
ಅಂಬಗ ಮನೆ ಹೆಮ್ಮಕ್ಕೊ ಎಲ್ಲೋರು ಅದರ ನೋಡಿ ಅದೆಂತಾದ್ದಾದಿಕ್ಕು ‘ ಹೇಳಿ ಮಾತಾಡಿ ಚರ್ಚೆ ಮಾಡಿತ್ತಿದ್ದವು.
“ಅಂಬಗ ಇದು ದೇವರೇ ಕೊಟ್ಟ ಪ್ರಸಾದ ಆಗಿಕ್ಕು” ಹೇಳಿ ಮನಸು ಗಟ್ಟಿ ಮಾಡ್ಯೊಂಡು ಮನಗೆ ಬಂದವು.

ಮನಗೆ ಬಂದು ಶಾರದೆ ಹತ್ರೆ ಮಾತ್ರ ಗುಟ್ಟಾಗಿ ಈ ಶುದ್ದಿ ಹೇಳಿದವು
“ನಮ್ಮ ಮಗಳು ದೊಡ್ಡಪ್ಪಗ ರೆಜ ಜಾಗ್ರತೆ ಹೆಚ್ಚು ಮಾಡೆಕು.ಗೋಷ್ಬಾರಿ ವಿಶಯ ಅಲ್ಲ ಆನು ಹೇಳಿದ್ದು. ಅಬ್ಬಗೆ ಅದು ಯೇವಗಲೂ ನೆಂಪಿರೆಕಾದ್ದು”

ಶಾರದೆಗೂ ಒಂದರಿ ಹೆದರಿಕೆ ಆತು.ಈ ಕೂಸಿಂದಾಗಿ ಎಂತಾವ್ತೋ ದೇವರೇ’ ಹೇಳಿರೂ ಚಾಮಿ ಕುಂಞಿ ಹಾಂಗೆ ಒರಗಿದ ಮುದ್ದು ಮಗಳ ಕಾಂಬಗ ಅದೆಲ್ಲ ಮರದೇ ಹೋತು.

ಗೌಜಿಲಿ ಬಾರ್ಸ ಮಾಡಿದವು ಚಂದ್ರಣ್ಣ. ಕೂಸಿಂಗೆ ಸುಶೀಲಾ ಹೇಳಿ ಹೆಸರು ಮಡುಗುವ° ಹೇಳಿ ಚಂದ್ರಣ್ಣನ ತಂಗೆ ಹೇಳಿಯಪ್ಪಗ ಎಲ್ಲೋರಿಂಗು ಆ ಹೆಸರು ಒಪ್ಪಿತ್ತು.

ಶೈಲಂಗೂ ,ಕೇಶವಂಗೂ ತಂಗೆ ಹೇಳಿರೆ ಭಾರೀ ಕೊಂಗಾಟ.ಶಾಲೆ ಬಿಟ್ಟು ಬಂದಿಕ್ಕಿ ಅದರೊಟ್ಟಿಂಗೆ ಆಟ.ತಂಗೆ ಹಿಡುದು ನಿಂಬಗ ಬೀಳದ್ದಾಂಗೆ,ಒಂದೊಂದೇ ಹಜೆ ಮಡುಗಿ ನಡವಲೆ ಕಲಿವಗ ಇನ್ನೂ ಬೇಗ ನಡವ ಹಾಂಗೆ, ಜಾಲಿಲ್ಲೆಲ್ಲ ಓಡುಗ ಅಲ್ಲಲ್ಲಿ ಬಿದ್ದು ತಾಗ್ಸದ್ದ ಹಾಂಗೆ ಅಣ್ಣನೂ,ಅಕ್ಕನೂ ಅದರ ಜಾಗ್ರತೆಲಿ ನೋಡ್ಯೊಂಡವು.ಅದಕ್ಕೂ ಅಣ್ಣ, ಅಕ್ಕ ಶಾಲೆಂದ ಬಂದವು ಹೇಳಿ ಗೊಂತಾದರೇ ಭಾರೀ ಕೊಶಿ.

ವರುಶ ಉರುಳಿ ಶೈಲನೂ ,ಕೇಶವನೂ ದೊಡ್ಡ ಶಾಲೆಲಿ ಕಲಿವ ಹೊತ್ತಿಂಗೆ ಸುಶೀಲ ಒಂದನೇ ಕ್ಲಾಸಿಂಗೆ ಕಲಿವಲೆ ಶಾಲಗೆ ಸೇರಿತ್ತು.ರಜ ಗೆಂಟು,ತರ್ಕ ಇಪ್ಪ ಕೂಸು ಸುರುವಿಂಗೆ ಒಂದು ವಾರ ಶಾಲಗೆ ಹೋವ್ತಿಲ್ಲೆ ಹೇಳಿ ಹಠ ಮಾಡಿರೂ ಮತ್ತೆ ಸರಾಗ ಹೋಪಲೆ ಸುರು ಮಾಡಿತ್ತು.

ಇಬ್ರು ಮಕ್ಕಳೂ ಹತ್ತನೇ ಕ್ಲಾಸಿಲ್ಲಿ ಒಳ್ಳೆ ಮಾರ್ಕು ತೆಗದು ಪಾಸಾದವು.ಕಲಿವಲೆ ಹೆಚ್ಚು ಉಶಾರಿ ಶೈಲನೇ.ಕೇಶವನಿಂದಲೂ ಒಳ್ಳೆತ ಮಾರ್ಕು ಸಿಕ್ಕಿದ್ದದು ಅದಕ್ಕೇ.
“ಈಗಾಣ ಕಾಲಲ್ಲಿ ಕೂಸುಗಳ ಕೋಲೇಜಿಂಗೆ ಕಳ್ಸದ್ದಿಪ್ಪಲಾಗ.ಕೂಸುಗೊ ಕಲಿಯೆಕು.ಎಲ್ಲಿಗೆ ಹೋದರೂ ನಮ್ಮ ಜಾಗ್ರತೆಲಿದ್ದರಾತು” ಭಾಮೆಯಕ್ಕನೇ ಮಗನತ್ರೆ ಹೇಳಿಯಪ್ಪಗ ಶಾರದೆಗೆ ಕೊಶಿಯಾತು. ಅದಕ್ಕೂದೆ ಅಷ್ಟೊಳ್ಳೆತ ಕಲಿವ ಮಗಳ ಕೋಲೇಜಿಂಗೆ ಕಳ್ಸೆಕೂಳಿ ತುಂಬ ಆಶೆಯಿದ್ದತ್ತು.ಈಗ ಅತ್ತೆಯ ಬಾಯಿಂದಲೇ ಅದು ಬಂದಪ್ಪಗ ಮತ್ತೆ ಕೇಳೆಕೋ….!

ಮಕ್ಕಳ ಇಬ್ರನ್ನೂ ಪುತ್ತೂರು ಕೋಲೇಜಿಂಗೆ ಸೇರ್ಸಿದವು ಚಂದ್ರಣ್ಣ. ಮಕ್ಕೊಗೆ ದಿನಾಗಳೂ ಹೋಗಿ ಬಪ್ಪಲೆ ಬಸ್ಸಿನ ಹೊತ್ತುದೆ ಸರಿಯಾಗಿ ಇದ್ದತ್ತು.

ಶಾರದೆಗೆ ಮೂರು ಮಕ್ಕಳನ್ನು ಶಾಲಗೆ ಕಳ್ಸುವ ಅಂಬ್ರೆಪ್ಪು ಯೇವಗಳೂ.ಅದರೆಡೆಲಿ ಈಗ ಕೂದಲ್ಲೇ ಆದ ಸರಸತ್ತೆಯ ಚಾಕರಿಯನ್ನು ಮಾಡೆಕಾಗಿ ಬಂದುಕೊಂಡಿದ್ದತ್ತು.ಇದರೆಡೆಲಿ ಅಬ್ಬಗೆ ಸಕಾಯ ಮಾಡುದು ಶೈಲನೇ. ಅದು ಒಳ್ಳೆ ಗುಣ ಕೂಸು.ಹೆಚ್ಚು ಮಾತಿಲ್ಲದ್ರೂ ಅದರದ್ದು ನೆಗೆ ಮೋರೆ.ತಂಗಗೆ ಪಾಠ ಹೇಳಿ ಕೊಡ್ಲೆ ಶೈಲನೇ ಗಟ್ಟಿಗೆತ್ತಿ.ಆರು ಎಂತ ಹೇಳಿರೂ ಪುಸ್ತಕ ಬಿಡ್ಸಿ ಕೂರದ್ದ ಸುಶೀಲ° ಅಕ್ಕ ಹೇಳಿರೆ ಬೇಗ ಓಡಿಂಡು ಬಕ್ಕು..
ಅಂದರೂ ಅದರ ಕೆಲವು ಸರ್ತಿ ಸುಶೀಲ ಹಠ ಮಾಡ್ಲೆ ಸುರುಮಾಡಿರೆ ಮಾತ್ರ ಮನೆಯವಕ್ಕೆಲ್ಲ ಬಂಙ.ಅದಕ್ಕೆ ಎಂತಾರು ಆಯೆಕಾರೆ ಆರ್ಭಟೆ ಕೊಟ್ಟುಕೊಂಡು ಕೂರುಗು.ಆ ಕೆಲಸ ಆರ ಕೈಲಾದರು ಮಾಡ್ಸಿದ ಮತ್ತೆಯೇ ಅದಕ್ಕೆ ಸಮದಾನ.ಚಂದ್ರಣ್ಣಂಗೆ ಮಗಳ ಹಠ ನೋಡುಗ ನಾಲ್ಕು ಪೊಳಿ ಕೊಡೆಕು ಹೇಳುವಷ್ಟು ಪಿಸ್ರು ಬಂದರೂ ‘ ‘ಸಣ್ಣ ಕೂಸು ಅರಡಿಯದ್ದೆ ಮಾಡುದಲ್ದಾ’ ಳಿ ಎರಡು ಅಜ್ಜಿಯಕ್ಕೊ ಸಮದಾನ ಹೇಳುಗ ಮತ್ತೆ ಮಾತಾಡಿಂಡಿತ್ತಿದ್ದವಿಲ್ಲೆ.ಪುಟ್ಟು ಕೂಸು ಸುಶೀಲನ ಹಠಂದಾಗಿ ಒಂದರಿ ಎಂತಾತು ಗೊಂತಿದ್ದಾ…..?

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 11 – ಪ್ರಸನ್ನಾ. ವಿ. ಚೆಕ್ಕೆಮನೆ

    1. ಹರೇರಾಮ ಅಕ್ಕಾ ,ಧನ್ಯವಾದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×