ಸ್ವಯಂವರ ಭಾಗ 23
ಮಗ° ಸರಿಯಾಗಿ ಮಾತಾಡದ್ದದು ಚಂದ್ರಣ್ಣನ ಮನಸಿಂಗೆ ಒಂದು ರೀತಿ ಆತು.ಎಂತಾರು ಕಾರಣ ಇಲ್ಲದ್ರೆ ಅವ° ಹಾಂಗೆ ಮಾಡ° ಹೇಳಿ ಒಳ ಮನಸ್ಸು ಹೇಳಿತ್ತು.ಹಾಂಗಾಗಿ ಅಂದಿಂದ ಮತ್ತೆ ಸುಶೀಲಂಗೆ ಗೊಂತಾಗದ್ದ ಹಾಂಗೆ ,ದಿನೇಸಂಗೂ ಅರಡಿಯದ್ದ ಹಾಂಗೆ ಅವರ ಒಂದು ಕಣ್ಣು ಅವರಿಬ್ರ ಮೇಲೆ ಮಡುಗಿದವು.
ಸುರುವಿಂಗೆ ಒಂದೆರಡು ದಿನ ಸುಶೀಲ° ಒಳ್ಳೆತ ಜಾಗ್ರತೆ ಮಾಡಿತ್ತು.ಆದರೆ ದಿನಾಗಳು ಕದ್ದುಕೊಂಬವ° ಒಂದು ದಿನ ಸಿಕ್ಕಿ ಬೀಳದ್ದಿರ್ತನೋ?’ ಹಾಂಗಾತು ಕತೆ.
ಕೇಶವ° ಹೋಗಿ ಎಂಟು ದಿನ ಆಯೆಕಾರೆ ಸುಶೀಲ ದಿನೇಸನೊಟ್ಟಿಂಗೆ ಸೈಕಲಿಲ್ಲಿ ಕೂದೊಂಡು ಬಪ್ಪಗ ನಾಕು ಜೆನರ ಎದುರೇ ಸಿಕ್ಕಿ ಬಿದ್ದತ್ತು.ಈ ಸರ್ತಿ ಅವು ಮಾತಾಡದ್ದೆ ಅದರ ಎಳಕ್ಕೊಂಡು ಬಂದು ಉಗ್ರಾಣಲ್ಲಿ ಹಾಕಿ ಹೆರಾಂದ ಬಾಗಿಲು ಹಾಕಿದವು.
ಕೇಶವನ ಮಾತು ಕಿಮಿಗೆ ಹಾಕಿದ್ದಿಲ್ಲೆ ಹೇಳಿ ಅವಕ್ಕೆ ಒಳ್ಳೆತ ಬೇಜಾರಾತು. ಸಾಲದ್ದಕ್ಕೆ ಸುಶೀಲನೂ ದಿನೇಸನೂ ಒಟ್ಟಿಂಗೆ ಸೈಕಲಿಲ್ಲಿ ಬಪ್ಪದರ ನೋಡಿದ ಜೆನಂಗೊ ಎಂತ ಹೇಳುಗೂಳಿ ಅವಕ್ಕೆ ಅಂದಾಜಿದ್ದು.
ಇನ್ನು ಸುಶೀಲನ ಕೋಲೇಜಿಂಗೆ ಕಳ್ಸುಲಿಲ್ಲೆ ಹೇಳಿ ನಿರ್ಧಾರ ಮಾಡಿ ಶಾರದೆಯತ್ರೂ ಹೇಳಿದವು
“ಇನ್ನಿದರ ಮನೆಯ ಮೆಟ್ಟುಕಲ್ಲು ಇಳಿವಲೆ ಬಿಡೆಡ.ಉಂಬಲೆ ತಿಂಬಲೆ ಸಾನು ಅಲ್ಲಿಗೇ ಕೊಂಡೋಗಿ ಕೊಟ್ಟಿಕ್ಕು.ಇತ್ಲಾಗಿ ಬಪ್ಪದು ಬೇಡ ಅದು.ಮನೆಯ ಮರ್ಯಾದೆ ತೆಗವಲೆ ಹುಟ್ಟಿದ ಮಾರಿ” ಚಂದ್ರಣ್ಣನ ಕೋಪಕ್ಕೆ ಶಾರದೆ ಕೂಡ ನೆಡುಗಿತ್ತು.
ಚಂದ್ರಣ್ಣ ಅಂಬಗಳೇ ದಿನೇಸನನ್ನೂ,ತಂಗಮ್ಮನನ್ನೂ ದಿನಿಗೇಳಿ ಪೆಟ್ಟಿಗೆ ಕಟ್ಲೆ ಹೇಳಿದವು
“ಇಷ್ಟು ದಿನ ನಿಂಗೊ ಇಲ್ಲಿ ಸಕಾಯ ಮಾಡಿದ್ದು ಸಾಕು.ಇನ್ನು ಈ ಹೊಡೆಂಗೆ ತಲೆ ಮಡುಗುಲೆಡಿಯ,ಈಗಳೇ ಹೆರಡಿ” ಕೆಂಪು ಕಣ್ಣು ಮಾಡಿಂಡು ಹೇಳಿಯಪ್ಪಗ ತಂಗಮ್ಮ ಕೂಗಿಂಡು ಚಂದ್ರಣ್ಣನ ಕಾಲು ಹಿಡುದತ್ತು
“ಎಂಗೊಗೆ ಅಶನ ಕೊಟ್ಟ ದನಿಗೊ ನಿಂಗೊ.ಎಂತೋ ಎನ್ನ ಮಗ ಅರಡಿಯದ್ದೆ ತಪ್ಪು ಮಾಡಿದ್ದು ಹೇಳಿ ನಿಂಗೊ ಹೀಂಗೆ ಕೋಪ್ಸೆಡಿ.ಅದಕ್ಕೆ ಆನು ಬುದ್ದಿ ಹೇಳ್ತೆ.ಈ ಮನೆಂದ ಹೆರ ಹಾಕಿರೆ ಎಂಗೊಗೆ ಬೇರೆ ಆಶ್ರಯವೇ ಇಲ್ಲೆ.ಎಂಗಳ ಪಾಲಿಂಗೆ ಕಣ್ಣಿಂಗೆ ಕಾಂಬ ದೇವರು ನಿಂಗೊ……” ಹೇಳಿ ಸೆರಗಿಲ್ಲಿ ಕಣ್ಣು ಮೂಗು ಉದ್ದಿಂಡು ಎಕ್ಕಿ ಎಕ್ಕಿ ಕೂಗಿತ್ತು.
ಚಂದ್ರಣ್ಣನ ಕೋಪ ರೆಜವೂ ಇಳುದ್ದಿಲ್ಲೆ.ಹಾಂಗಾಗಿ ಮಾತಾಡಿದ್ದವಿಲ್ಲೆ.
“ಏ ಮಗಾ..ಉಪ್ಪು ತಿಂದ ಮನಗೆ ದ್ರೋಹ ಮಾಡಿದೆಯ ನೀನು? ಈ ದೇವರು ನಮ್ಮ ಹೆರ ಹಾಕಿರೆ ನಾವು ಹೋಪದೆಲ್ಲಿಗೆ? ನವಗಾರಿದ್ದವು.ಈಗಲೇ ಹೋಗಿ ಅಣ್ಣನ ಕಾಲು ಹಿಡಿ.ತಪ್ಪಾತು ಹೇಳು.ಹಾಂಗಾರೂ ನಾವು ಮೂರು ಹೊತ್ತು ಉಂಬ ಹಾಂಗಾಗಲಿ” ದಿನೇಸನ ಚಂದ್ರಣ್ಣನ ಎದುರು ತಂದು ನಿಲ್ಸುಕ್ಕಿ ಹೇಳಿತ್ತದು.
ದಿನೇಸ ಚಪ್ಪೆ ಆದಾಂಗೆ ಮಾಡಿಂಡು “ಎನ್ನದು ತಪ್ಪಾತು.
ಎಂಗಳ ಕ್ಷಮಿಸಿ” ಹೇಳಿತ್ತು.
“ಮರ್ಯಾದಿಗೆ ಇಲ್ಲಿಂದ ಜಾಗೆ ಕಾಲಿ ಮಾಡಿ.ಎನಗೆ ಬೇರೆಂತದೂ ಹೇಳ್ಲಿಲ್ಲೆ” ಹೇಳಿಕ್ಕಿ ಅಲ್ಲಿಂದ ಎದ್ದು ಒಳ ಹೋದವು ಚಂದ್ರಣ್ಣ.
ತಂಗಮ್ಮನೂ ದಿನೇಸನೂ ಮೋರೆ ಮೋರೆ ನೋಡಿಕ್ಕಿ ತಲೆ ತಗ್ಗುಸಿಕ್ಕಿ ಹೆರಟವು.ರೆಜ್ಜ ಮುಂದೆ ಹೋದ ತಂಗಮ್ಮ ವಾಪಾಸು ಬಂದಿಕ್ಕಿ “ಆನೊಂದರಿ ದೊಡ್ಡ ಅಮ್ಮನ ಕಾಲು ಹಿಡುದಿಕ್ಕಿ ಬತ್ತೆ” ಹೇಳಿತ್ತು.ಅತ್ತೆ ಹತ್ತರೆ ನಿಂದೊಂಡಿದ್ದ ಶಾರದೆ ಮಾತಾಡಿದ್ದಿಲ್ಲೆ.
“ಅಕ್ಕ° ಎಂಗಳ ಕ್ಷಮಿಸಿ. ಎನ್ನ ಮಗ° ಎಂತೋ ತಪ್ಪು ಮಾಡಿದ್ದಕ್ಕೆ ಎನಗೂ ಈ ಗತಿ ಬಂತು.ಎನಗಾರೂ ಇಲ್ಲೆ.ಯೇವಗಾದರು ಒಂದರಿ ನಿಂಗಳ ನೋಡೆಕೂಳಿ ಆದರೆ ಆನು ಬಪ್ಪೆ.ಅಂಬಗ ಗುರ್ತಯಿಲ್ಲದ್ದ ಹಾಂಗೆ ಮಾಡೆಡಿ” ಕೂಗಿಂಡು ಹೇಳಿಯಪ್ಪಗ ಶಾರದೆಯ ಮನಸ್ಸು ಕರಗಿತ್ತು.ಇಷ್ಟು ದಿನ ಅತ್ತೆಯ ಚಾಕರಿ ಮಾಡಿದ ಜೆನ ಅಲ್ಲದಾ?
“ನೀನು ಹಾಂಗೆಲ್ಲ ಬೇಜಾರ ಮಾಡೆಡ.ನಿನ್ನ ಮಗ° ಕೆಲಸ ಮಾಡಿ ನಿನ್ನ ಸಾಂಕುಗು.ಇದಾ..ಅತ್ತೆಯ ಎರಡು ಸೀರೆ ಕೊಡ್ತೆ,ನಿನಗಾತು.ಇದರ್ಲಿ ರಜಾ ಪೈಸೆಯೂ ಇದ್ದು.ಮಗಂಗೆ ಕೆಲಸ ಸಿಕ್ಕುವನ್ನಾರ ನಿನ್ನ ಸಣ್ಣ ಕರ್ಚಿಂಗೂ ಅಕ್ಕು” ಹೇಳಿ ರೆಜ ಪೈಸೆಯನ್ನು ಕೊಟ್ಟತ್ತು.
“ಅಕ್ಕಾ….ನಿಂಗೊ ಸಾಕ್ಷಾತ್ ಮಹಾಲಕ್ಷ್ಮಿ!! ನಿಂಗಳ ಹಾಂಗಿದ್ದವರ ಸೇವೆ ಮಾಡ್ಲೆ ಎಂಗೊಗೆ ಅವಕಾಶ ಸಿಕ್ಕಿದ್ದೇ ಪುಣ್ಯ.. ಆನೊಂದರಿ ಕುಞ್ಞಕ್ಕನ ನೋಡ್ಲಕ್ಕಾ? ಆನು ಅವರತ್ರೆ ಮಗನ ಲೆಕ್ಕಲ್ಲಿ ಕ್ಷಮೆ ಕೇಳೆಕು.ದಮ್ನಯ್ಯ…ಈ ಜನ್ಮಲ್ಲಿ ನಿಂಗಳ ಉಪಕಾರ ಮರೆಯೆ.ಈಗ ಕ್ಷಮೆ ಕೇಳದ್ರೆ ಆನಿಪ್ಪನ್ನಾರವೂ ಈ ಬೇನೆ ಮನಸಿಂದ ಹೋಗ”
ಶಾರದೆಯ ಮನಸ್ಸು ಹೂಗಿನ ಹಾಂಗಿಪ್ಪದು.ಅದು ತಂಗಮ್ಮನ ಚೆಂದದ ಮಾತಿಂಗೆ ಮರುಳಾಗಿ ಹೋತು.
“ಪಾಪ!! ಸುಶೀ ಹೇಳಿರೆ ಎಷ್ಟು ಕೊಂಗಾಟ ತಂಗಮ್ಮಂಗೆ.ಈಗ ಒಂದರಿ ಅದರತ್ರೆ ಮಾತಾಡೆಕು ಹೇಳಿದ್ದರಲ್ಲಿ ತಪ್ಪಿಲ್ಲೆ.ಹೇಂಗೂ ಮನೆ ಬಿಟ್ಟು ಹೋಪವು.ಹಾಂಗಾಗಿ
” ನಿಲ್ಲು, ಈಗ ಸುಶೀಯ ಕರಕ್ಕೊಂಡು ಬತ್ತೆ” ಹೇಳಿಕ್ಕಿ ಅದರ ಉಗ್ರಾಣದ ಹತ್ತರೆ ಹೋಗಿ ಚಂದ್ರಣ್ಣ ಹಾಕಿದ ಸಂಕೋಲೆ ತೆಗದು ಸುಶೀಯ ಹೆರ ದಿನಿಗೇಳಿತ್ತು.
“ಆನು ಬತ್ತಿಲ್ಲೆ. ಎನ್ನ ಕೊಲ್ಲೆಕೂಳಿ ಅಲ್ಲದ ಅಪ್ಪ° ಇಲ್ಲಿ ಹಾಕಿದ್ದು.ಹಾಂಗೇ ಮಾಡಿ” ಹೇಳಿ ತಲೆ ಕಸವೆಲ್ಲ ಬಿಡ್ಸಿ ಕುಡುಗಿಕ್ಕಿ ಎದ್ದು ನಿಂದತ್ತು.
ಅದರ ಅವತಾರ ನೋಡುಗ ಶಾರದೆಗೆ ಬೇಜಾರ, ಕೋಪ ಎರಡೂ ಬಂತು.ತಳಿಯದ್ದೆ ಕೋಲೇಜಿಂಗೆ ಹೋಗಿ ಬಂದಿದ್ದರೆ ಹೀಂಗೆಲ್ಲ ಅನುಭವಿಸೆಕಾತ.ಅಂದರೂ ಕೋಪ ತೋರ್ಸದ್ದೆ
“ಕೆಳ ಇಳುದು ಬಾ..ತಂಗಮ್ಮಂಗೆ ನಿನ್ನ ಒಂದರಿ ನೋಡೆಕಾಡ” ಹೇಳಿತ್ತು.
“ಎನಗಾರನ್ನೂ ನೋಡೆಡ” ಹೇಳಿ ಕಡಂದಲು ಕುಟ್ಟಿದ ಮೋರೆಯ ಹಾಂಗೆ ಮಾಡಿಂಡು ಕೂದತ್ತದು.
“ಒಂದರಿ ಬಾ ಮೋಳೇ.ಅದೀಗ ಹೋವ್ತು.ಒಂದರಿ ಮಾತಾಡೆಕೂಳಿ ಆದರೆ ಇನ್ನು ಕಾಂಬಲೆ ಸಿಕ್ಕುತ್ತೋ ಇಲ್ಯೋ ಗೊಂತಿಲ್ಲೆ” ಶಾರದೆ ಅಷ್ಟು ಹೇಳಿಯಪ್ಪಗ ದೊಡ್ಡ ಜೆನರ ಹಾಂಗೆ ಮೆಲ್ಲಂಗೆ ಉಗ್ರಾಣಂದ ಹೆರ ಬಂತು.
ತಂಗಮ್ಮ ಭಾರೀ ಕೊಂಡಾಟ ಮಾಡುವ ಹಾಂಗೆ ಸುಶೀಲನ ಕೈಯೆಲ್ಲ ಹಿಡ್ಕೊಂಡು ಸಣ್ಣಕೆ ಎಂತೋ ಹೇಳಿದ್ದದು ಶಾರದೆಗೆ ಕೇಳದ್ರೂ ಸುಶೀಲನ ಮೋರೆ ಹೂಗು ಅರಳಿದ ಹಾಂಗೆ ಅರಳಿತ್ತು.
“ಇದೆಂತಕೆ ಇವರ ಮತ್ತೆ ಪುನಾ ಒಳ ಬಿಟ್ಟದು? ನಿನಗೂ ಹೇಳಿರೆ ಭಾಶೆಯಿಲ್ಲದ್ದಾಂಗಾತ? ಸಾಲದ್ದಕ್ಕೆ ಮಗಳನ್ನು ಕರಕ್ಕೊಂಡು ಬಂದು ಪ್ರದರ್ಶನ ಮಾಡುವ ಅಗತ್ಯ ಇದ್ದತ್ತಾ? ಅಷ್ಟು ಪ್ರೀತಿ ಇದ್ದರೆ ಮಗಳ ಅವರೊಟ್ಟಿಂಗೆ ಕಳ್ಸು” ಅಬ್ಬೆಯ ನೋಡ್ಲೆ ಬಂದ ಚಂದ್ರಣ್ಣಂಗೆ ಅಲ್ಲಿ ಮಗಳ ಕೈ ಹಿಡ್ಕೊಂಡು ನಿಂದ ತಂಗಮ್ಮನ ಕಂಡಪ್ಪಗ ಕೋಪ ದರ್ಸಿತ್ತು.
“ಸೂಟೆ,ನಿನ್ನ ಆರು ಹೆರ ಬಿಟ್ಟದು?” ಹೇಳಿ ಸುಶೀಲನ ಕೈ ಹಿಡುದು ದರದರ ಎಳಕ್ಕೊಂಡೇ ಉಗ್ರಾಣಕ್ಕೆ ವರೆಗೆ ಹೋಗಿ ಅದರೊಳಾಂಗೆ ದೂಡಿ ಬಾಗಿಲು ಹಾಕಿದವು.
“ಇನ್ನು ಮುಂದೆ ಎನ್ನತ್ರೆ ಕೇಳದ್ದೆ ಇದರ ಹೆರ ಬಿಟ್ರೆ ನೀನುದೆ ಮನೆಂದ ಹೆರ ಹೋಯೆಕು” ಹೆಂಡತ್ತಿಯನ್ನೂ ಸಮಾ ಜೋರು ಮಾಡಿಕ್ಕಿ ಬಚ್ಚಿದ ಹಾಂಗಾಗಿ ಅಲ್ಲೇ ಚಿಟ್ಟೆಲಿ ಕೂದವು ಚಂದ್ರಣ್ಣ.
ಏಕೋ ಕೇಶವನ ನೆಂಪಾತವಕ್ಕೆ.ಅವ° ಅಂದೇ ಸೂಚನೆ ಕೊಟ್ಟರೂ ಅವನ ಮಾತಿಂಗೆ ರೆಜ ಕೂಡ ಬೆಲೆ ಕೊಟ್ಟಿದಿಲ್ಲೆನ್ನೇ.ಸಾಲದ್ದಕ್ಕೆ ಅವನನ್ನೇ ತಪ್ಪುಗಾರ° ಆಗಿ ಮಾಡಿದ್ದುದೆ.
ಎದೆ ,ಮನಸ್ಸು ಎಲ್ಲ ಭಾರ ಆದಾಂಗಾಗಿ “ಆನು ರೆಜಾ ಮನುಗುತ್ತೆ” ಹೇಳಿ ಭಾಮೆಯಕ್ಕ ಮನುಗಿದ ಉಗ್ರಾಣದ ಕರೇಲಿಪ್ಪ ಇನ್ನೊಂದು ಮಂಚಲ್ಲಿ ಸುಮ್ಮನೇ ಮನುಗಿದವು.
“ಎಂತಾತು ನಿಂಗೊಗೆ? ಕುಡಿವಲೆ ಎಂತಾರು ಬೇಕಾ? ಇಷ್ಟರವರೆಗೆ ನಿಂಗಳ ಇಷ್ಟು ನಿತ್ರಾಣಾದಾಂಗೆ ಕಂಡಿದಿಲ್ಲೆನ್ನೆ” ಶಾರದೆಗೂ ಗೆಂಡ° ಹೊತ್ತಲ್ಲದ್ದ ಹೊತ್ತಿಲ್ಲಿ ಹಾಂಗೆ ಮನುಗಿದ್ದು ಕಂಡು ಎಂತೋ ಆತು.
“ಎನಗೆಂತಾಯಿದಿಲ್ಲೆ,ನೀನು ನಿನ್ನ ಕೆಲಸಕ್ಕೆ ಹೋಗು.ಸುಶಿಯ ಮಾಂತ್ರ ಯೇವ ಕಾರಣಕ್ಕೂ ಹೆರ ಬಿಡೆಡ” ಹೇಳಿಕ್ಕಿ ಕಣ್ಣು ಮುಚ್ಚಿ ಮನುಗಿದವು.
ಶಾರದೆಗೆ ಗೆಂಡನ ಕ್ರಮ ಹೊಸತ್ತು.ಅಂದರೂ ಕಂಡಾಪಟ್ಟೆ ಬಚ್ಚಿತ್ತಾದಿಕ್ಕು ಹೇಳಿ ಅದರ ಕೆಲಸಕ್ಕೆ ಹೋತು.
ಆರೋ ನೆರಕ್ಕುವ ಶಬ್ದ ಕೇಳಿ ಚಂದ್ರಣ್ಣ ಕಣ್ಣೊಡದು ನೋಡಿದವು.ಎದ್ದು ನೋಡುಗ ಭಾಮೆಯಕ್ಕ ಎಂತೋ ಹೇಳ್ಲೆ ನೋಡ್ತವು.ಆದರೆ ಹೇಳ್ಲೆಡಿತ್ತಿಲ್ಲೆ.
“ಇದಾ..ಕೇಳಿತ್ತಾ ರೆಜ ನೀರು ತೆಕ್ಕೊಂಡು ಬಾ” ಚಂದ್ರಣ್ಣ ಅಂಬಗಳೇ ಎದ್ದು ಅಬ್ಬೆಯ ತಾಂಗಿ ಏಳ್ಸಿದವು.ಶಾರದೆ ತಂದ ನೀರನ್ನು ಕುಡುಶಿದವು.ಎರಡು ಮುಕ್ಳಿ ನೀರು ಕುಡುದಿಕ್ಕಿ “ಸಾಕು” ಹೇಳುವ ಹಾಂಗೆ ಕೈ ಬಾಶೆ ಮಾಡಿದವು ಭಾಮೆಯಕ್ಕ.
“ಅಬ್ಬಗೆಂತೋ ಆವ್ತು. ಈಗಲೇ ಆಸ್ಪತ್ರೆಗೆ ಕರಕ್ಕೊಂಡು ಹೋಪೋ° ” ಹೇಳಿ ಚಂದ್ರಣ್ಣ ಎದ್ದಪ್ಪಗ ಭಾಮೆಯಕ್ಕ ಕೈ ಬಾಶೆಲಿ ತಡದವು.
‘ಎಲ್ಲಿಗೂ ಕರಕ್ಕೊಂಡು ಹೋಪದು ಬೇಡ’ ಹೇಳುವಾಂಗೆ ಅಬ್ಬೆ ಕೈ ಮುಗುದು ಕಣ್ಣಿಲ್ಲಿ ನೀರು ತುಂಬಿ ಬೇಡಿಕೊಂಬ ಹಾಂಗೆ ಕಾಂಬಗ ಚಂದ್ರಣ್ಣಂಗೂ ಸಂಕಟ ಆತು.
“ಆನಿಂದು ಇಲ್ಲೇ ಮನುಗುತ್ತೆ. ನೀನು ಸುಶೀಯ ಹತ್ತರೆ ಹೋಗು.ಅದು ಹೆರ ಹೋವ್ತರೆ ನೀನುದೆ ಒಟ್ಟಿಂಗೆ ಹೋಯೆಕು. ಅದರ ಒಬ್ಬನೇ ಬಿಡೆಡ.ರೆಜ ಸಮಯ ಹೀಂಗೆ ಇದ್ದರೆ ಅದರ ಮನಸ್ಸು ನೇರ್ಪ ಅಕ್ಕಷ್ಟೆ” ಚಂದ್ರಣ್ಣ ಹೇಳಿದ್ದಕ್ಕೆ ಶಾರದೆ ಒಪ್ಪಿತ್ತು.
ಭಾಮೆಯಕ್ಕನ ಅಕೇರಿಯಾಣ ಕ್ಷಣ ಹತ್ತರೆ ಬಂತು ಹೇಳಿ ಚಂದ್ರಣ್ಣಂಗೆ ಗೊಂತಾತು. ಅಣ್ಣಂದ್ರಿಂಗೆ,ಅಕ್ಕತಂಗೆಕ್ಕೊಗೆ ಎಲ್ಲ ಪೋನು ಮಾಡಿ “ಅಬ್ಬಗೆ ಹುಷಾರಿಲ್ಲೆ” ಹೇಳಿದವು.
ಎಲ್ಲೋರು “ನಾಳಂಗೆ ಬತ್ತೆಯ°” ಹೇಳಿ ಚಂದ್ರಣ್ಣಂಗೆ ಧೈರ್ಯ ತುಂಬಿದವು.
ಸುಶೀಲನ ಒಟ್ಟಿಂಗೆ ಅದರ ಉಗ್ರಾಣಲ್ಲಿ ಮನುಗಿರೂ ಶಾರದೆಗೆ ಒರಕ್ಕು ಬಯಿಂದೇ ಇಲ್ಲೆ.ಅತ್ತೆಯ ಆರೋಗ್ಯವೇ ತಲೆಲಿ ಇದ್ದದು. ಇರುಳೆಂತಾರು ಕುಡಿವಲ ಮಣ್ಣೋ ಕೇಳಿರೆ ಬೆಶಿ ಮಾಡಿ ಕೊಡೆಕಕ್ಕು.ಈ ಸುಶೀಂದಾಗಿ ಒಂದರಿ ಹೆರ ಹೋಗಿ ನೋಡುವ ಹಾಂಗೂ ಇಲ್ಲೆ.
ರೆಜ ಹೊತ್ತು ಅತ್ಲಾಗಿತ್ಲಾಗಿ ಹೊಡಚ್ಚಿಕ್ಕಿ ಮಗಳು ಒರಗಿದ್ದಾಳಿ ಲೈಟಾಕಿ ನೋಡಿತ್ತು.ಸುಶೀಗೆ ಒಳ್ಳೆ ಒರಕ್ಕು. ಅತ್ತೆಯ ನೋಡದ್ದೆ ಮನಸ್ಸು ತಡೆಯದ್ದೆ ಮೆಲ್ಲಂಗೆ ಎದ್ದು ಬಾಗಿಲು ತೆಗದು ಹೆರ ಹೋತು.ಸಂಕೋಲೆ ಹಾಕಿಕ್ಕಿಯೇ ಹೋದ್ದದು.
ಚಂದ್ರಣ್ಣ ಅಬ್ಬೆಯ ಹತ್ತರೆ ಒರಗದ್ದೆ ಕೂದೊಂಡಿತ್ತಿದ್ದವು.ಭಾಮೆಯಕ್ಕ ಕಣ್ಣು ಮುಚ್ಚಿ ಮನುಗಿಂಡಿದ್ದರೂ ಎಂತೋ ಸಂಕಟ ಆವ್ತು ಹೇಳಿ ಮೋರೆ ನೋಡುಗಳೇ ಗೊಂತಾಗಿಂಡಿದ್ದತ್ತು.
“ನೀನೆಂತಕೆ ಈಗ ಬಂದದು? ಅಲ್ಲಿ ಸುಶೀ ಒಬ್ಬನೇ ಅಲ್ಲದಾ?” ಚಂದ್ರಣ್ಣಂಗೆ ಶಾರದೆ ಅಷ್ಟೊತ್ತಿಂಗೆ ಬಂದದು ಸಮದಾನ ಆಯಿದಿಲ್ಲೆ.
“ಎನಗೇಕೋ ಒಂದರಿ ಅತ್ತೆಯ ನೋಡೆಕೂಳಿ ಆತು. ಇನ್ನು ಹೋವ್ತೆ” ಹೇಳಿ ವಾಪಾಸು ಮನುಗುಲೆ ಬಪ್ಪಗ ಸುಶೀಲ ಎದ್ದು ಕೂದೊಂಡಿದ್ದು.
“ಎಂತಕೆ ಎದ್ದು ಕೂದ್ದು?” ಕೇಳಿಂಡು ಲೈಟು ಹಾಕಿತ್ತು ಶಾರದೆ. ಉಗ್ರಾಣಲ್ಲಿ ಎಂತೋ ಪರಡಿದ ಹಾಂಗೆ ಮಾಡುವ ಸುಶೀಲನ ಈ ಕ್ರಮ ಅದಕ್ಕೆ ಹೊಸತ್ತರ ಹಾಂಗೆ ಕಂಡತ್ತು.
“ಎನಗೆ ಹೊಟ್ಟೆ ಬೇನೆ ಆವ್ತಮ್ಮಾ..ಒಂದರಿ ಹೆರ ಹೋಯೆಕು. ನೀನು ಹೆರಾಂದ ಬಾಗಿಲು ಹಾಕಿರೆ ಆನೆಂತ ಮಾಡೆಕು? ಎನ್ನ ಅಷ್ಟುದೆ ನಂಬಿಕೆ ಇಲ್ಲೆ ಅಲ್ದಾ ನಿಂಗೊಗೆ” ಅದು ಕೂಗಲೆ ಸುರು ಮಾಡಿತ್ತು.
ಶಾರದೆಗೆ ‘ಅಯ್ಯೋ’ ಹೇಳಿ ಆತು.ಮಗಳ ಅಂತೇ ಬೊಡುಶಿದಾಂಗಾತನ್ನೇ.ಪಾಪ! ಹೊಟ್ಟೆ ಬೇನೆ ತಡವಲೆಡಿತ್ತಿಲ್ಲೆ ಕಾಣ್ತು’
ಹತ್ತರೆ ಕೂದು ಅದರ ಬೆನ್ನುದ್ದಿತ್ತು.
“ಅಬ್ಬೇ…..” ಹೇಳಿ ಶಾರದೆಯ ಕೊರಳು ಅಪ್ಪಿ ಹೆಗಲಿಲ್ಲಿ ತಲೆ ಮಡುಗಿತ್ತದು.
“ಉಷ್ಣಾತಾದಿಕ್ಕು.ಜೀರೆಕ್ಕಿ ಓಡು ಕಶಾಯ ಮಾಡಿ ತತ್ತೆ.ಅಷ್ಟರವರೆಗೆ ಸುಮ್ಮನೆ ಮನಿಕ್ಕ” ಹೇಳಿಕ್ಕಿ ಪುನಾ ಉಗ್ರಾಣಂದ ಹೆರ ಬಂತು.ಅದರ ಹಿಂದಂದಲೇ ಬಂತು ಸುಶೀಲನುದೆ.
“ಎಂತ ಮಗಳೂ.ಹೆರ ಬಂದದೆಂತಕೆ?”
“ಎನಗೊಂದರಿ ಹೆರ ಹೋಯೆಕಬ್ಬೇ..ನೀನುದೆ ಬಾ.ಎನಗೆ ಒಬ್ಬನೆ ಹೆರ ಹೋಪಲೆ ಹೆದರಿಕೆ ಆವ್ತು”
“ಹೆದರೆಡ ಆನು ನಿನ್ನೊಟ್ಟಿಂಗೆ ಬತ್ತೆ” ಹೇಳಿ ಮಗಳೊಟ್ಟಿಂಗೆ ಶಾರದೆಯೂ ಹೆರ ಬಂತು.
“ಇದಾ..ಒಂದರಿ ಬಾ ಇಲ್ಲಿಗೆ” ಅದೇ ಹೊತ್ತಿಂಗೆ ಚಂದ್ರಣ್ಣ ರೆಜಾ ದೊಡ್ಡಕೆ ಹೆಂಡತಿಯ ದಿನಿಗೇಳಿದವು.
ಅವರ ಸ್ವರಲ್ಲಿಪ್ಪ ವೆತ್ಯಾಸ ಗೊಂತಪ್ಪಗ ಶಾರದೆಗೆ ಎಂತಾತಪ್ಪಾ ಹೇಳಿ ಹೆದರಿಕೆ ಆಗಿ ಮಗಳು ಹೆರ ಬಪ್ಪಗ ಪುನಾ ಬಂದೆತ್ತುವೆ.ಎಂತಕೆ ದಿನಿಗೇಳಿದ್ದೂಳಿ ಒಂದರಿ ನೋಡಿಕ್ಕಿ ಬತ್ತೆ ಹೇಳಿ ಗ್ರೇಶಿಕ್ಕಿ ಸುಶೀಲನ ಬಿಟ್ಟಿಕ್ಕಿ ಮನೆಯೊಳಾಂಗೆ ಹೋತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 22: https://oppanna.com/kathe/swayamvara-22-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ದಗಣೆ ಸುಶೀಲ ಎಂತೊ ಕೆಣಿ ಮಾಡ್ತಾ ಇದ್ದು. ಒಳ್ಳೆ ಕುತೂಹಲ ಹುಟ್ಟುಸಿತ್ತು ಕತೆ.