Oppanna.com

ಸ್ವಯಂವರ : ಕಾದಂಬರಿ : ಭಾಗ 24 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   18/11/2019    2 ಒಪ್ಪಂಗೊ

ಮರದಿನ ಉದಿಯಪ್ಪಗ ಸೂರ್ಯ ಮೂಡಿ ಬಂದದೇ ಆ ಊರಿನವಕ್ಕೆ ಎರಡು ವಿಶೇಷ ಶುದ್ದಿ ತಿಳಿಶಿಂಡು.ಎರಡೂ ಶುದ್ದಿಗಳೂ ಚಂದ್ರಣ್ಣನ ಮನೇದೇ!!!!

ಒಂದು ಭಾಮೆಯಕ್ಕ ತೀರಿ ಹೋದ ಶುದ್ದಿಯಾದರೆ ಮತ್ತೊಂದು ಚಂದ್ರಣ್ಣನ ಕೊಂಗಾಟದ ಮಗಳು ಸುಶೀಲೆ ಕಾಣೆ ಆಯಿದು!! ಮನೆ ಕೆಲಸದ ಆಳಿನೊಟ್ಟಿಂಗೆ ಓಡಿ ಹೋಯಿದು!!
ಊರಿನವೆಲ್ಲೋರೂ ಮನಗೆ ಬಂದವು. ನೆಂಟ್ರುಗಳೂ ಬಂದವು.ಎಲ್ಲೋರಿಂಗು ಸುಶೀಲ ಕಾಣೆಯಾದ ಶುದ್ದಿಯೇ ಮಾತಾಡ್ಲಿಪ್ಪದು.

“ಇಲ್ಲಿ ಕೆಲಸಕ್ಕಿದ್ದ ಆಳಿನೊಟ್ಟಿಂಗೆ ತಿರುಗಿಂಡಿದ್ದತ್ತು.ಅದರೊಟ್ಟಿಂಗೆ ಓಡಿ ಹೋದ್ದಾಡ” ಹೇಳಿ ಒಬ್ಬ° ಹೇಳಿರೆ
“ಮನೆಯವಕ್ಕೆ ಅಷ್ಟು ಸ್ವಯ ಇಲ್ಯಾ? ಪ್ರಾಯಕ್ಕೆ ಬಂದ ಕೂಸುಗೊ ಇಪ್ಪ ಮನೆಲಿ ಸಣ್ಣ ಪ್ರಾಯದ ಆಳುಗಳ ತಂದು ಕೂರ್ಸುಲಾಗ ಹೇಳಿ ಶಾರದಕ್ಕಂಗಾದರೂ ಬುದ್ದಿ ಬೇಕಾತು”

“ಅದಪ್ಪು.. ಎಂಗಳಲೆಲ್ಲ ಆಳುಗೊಕ್ಕೆ ಬಳ್ಸಲೆ ಸಾನು ಕೂಸುಗಳ ಕಳ್ಸುಲಿಲ್ಲೆಪ್ಪಾ..ಒಟ್ಟಾರೆ ಚಂದ್ರಣ್ಣನ ಗ್ರಹಚಾರ” ಹೀಂಗೇ ಒಬ್ಬೊಬ್ಬ° ಅವಕ್ಕವಕ್ಕೆ ತೋರಿದ ಹಾಂಗೆ ವಿಮರ್ಶೆ ಮಾಡಿದವು.

ವಿಶಯ ಗೊಂತಾದ ಕೂಡ್ಲೇ ಶೈಲನ ಮನೆಯವು ಎಲ್ಲೋರು ಬಂದವು.ಎಂತ ಮಾಡೆಕು ಹೇಳಿ ಅರಡಿಯದ್ದೆ ಶೂನ್ಯಕ್ಕೆ ನೋಡಿಂಡು ಕೂದ ಶಾರದೆಯ ಸಮದಾನ ಮಾಡ್ಲೆಡಿತ್ತೋ ನೋಡಿತ್ತು ಶೈಲ

“ಕೂಗೆಡಬ್ಬೇ..ಪೋಲೀಸ್ ಕಂಪ್ಲೇಂಟ್ ಕೊಡುವೊ°. ಸುಶೀ ಎಲ್ಲಿದ್ದರೂ ಅವು ಹುಡ್ಕಿ ಕರಕ್ಕೊಂಡು ಬಕ್ಕು” ಶೈಲ ಅಷ್ಟು ಹೇಳಿಯಪ್ಪಗ ಇಷ್ಟೊತ್ತು ತಳಿಯದ್ದೆ ಕೂದೊಂಡಿದ್ದ ಶಾರದೆಯ ಕಣ್ಣು ಕೆಂಪಾಗಿ ಅದು ಕೋಪಲ್ಲಿ ಹಲ್ಲುಮುಟ್ಟೆ ಕಚ್ಚಿತ್ತು
“ಯೇವ ಪೋಲಿಸಿಂಗೂ ಹೇಳುದು ಬೇಡ, ಅದು ಬೇಕೂಳಿ ಹೋದ್ದಲ್ಲದಾ,ಅಬ್ಬೆ ಅಪ್ಪನ ಕಣ್ಣು ತಪ್ಸಿಕ್ಕಿ ಹೋದ್ದಲ್ಲದಾ…..ಹೋಗಲಿ..ಇನ್ನದು ಈ ಮನಗೆ ಬಪ್ಪದು ಬೇಡ,ನಾಯಿ ಮುಟ್ಟಿದ ಅಳಗೆಯ ವಾಪಾಸು ತಪ್ಪಲಿಲ್ಲೆ.ಅದುವೇ ಸ್ವಯಂವರ ಮಾಡ್ಯೊಂಡು ಹೋದ್ದಲ್ಲದಾ, ಹಾಂಗೇ ಹೋಗಲಿ!!”

ಮದುವೆಯಾಗಿ ಇಷ್ಟು ವರ್ಷ ಒಂದರಿ ಸಾನೂ ಸ್ವರ ದೊಡ್ಡ ಮಾಡಿ ಮಾತಾಡಿ ಗೊಂತಿಲ್ಲದ್ದ ಶಾರದೆಯ ಬಾಯಿಂದ ಹೀಂಗಿದ್ದ ಮಾತುಗಳ ಕೇಳಿ ಚಂದ್ರಣ್ಣಂಗೂ ದುಃಖ ತಡವಲೇ ಎಡ್ತಿದಿಲ್ಲೆ ‌.ಹೂಗಿನ ಹಾಂಗಿದ್ದ ಮನಸ್ಸಿನ ಶಾರದೆಯ ಹೃದಯ ಕಲ್ಲಿನಷ್ಟು ಗಟ್ಟಿಯಾಯೆಕಾರೆ ಆ ಮನಸಿಂಗೆ ಎಷ್ಟು ಬೇನೆ ಆದಿಕ್ಕು ಹೇಳಿ ಅಂದಾಜಾತವಕ್ಕೆ.

ಭಾಮೆಯಕ್ಕನ ಮುಂದಾಣ ಕಾರ್ಯಂಗಳ ಮಾಡ್ಲೆ ಚಂದ್ರಣ್ಣನ ಅಣ್ಣಂದ್ರು,ಅಕ್ಕತಂಗೆಕ್ಕೊ ಎಲ್ಲ ಸೇರಿದವು.ಬಂದವೆಲ್ಲ ಬಾಯಿಗೊಂದರ ಹಾಂಗೆ ಮಾತಾಡಿದವು.ಚಂದ್ರಣ್ಣನ ಅಜಾಗ್ರತೆಯ ಬಗ್ಗೆಯೇ ಎಲ್ಲೋರು ಮಾತಾಡಿದ್ದು‌.ಒಟ್ಟಿಂಗೆ ಶಾರದೆಗೆ ಮಗಳ ಮೇಗೆ ಸರಿಯಾಗಿ ಗಮನ ಇತ್ತಿದ್ದಿಲ್ಲೆ ಹೇಳಿಯೂ ಮಾತು ಬಂತು. ಅಕೇರಿಗೆ ಪುರೋಹಿತರು ಬಂದಪ್ಪಗ ಎಲ್ಲೋರು ಮಾತು ನಿಲ್ಸಿ ಮುಂದಾಣ ಕ್ರಿಯೆ ಮಾಡ್ಲೆ ಸೇರಿದವು.

ಚಂದ್ರಣ್ಣಂಗೆ ಮಾಂತ್ರ ಮನಸ್ಸಿಲ್ಲಿ ಎಂತದೋ ಗಲಿಬಿಲಿ ಆಗಿಂಡಿದ್ದತ್ತು. ತಲೆ ಒಳ ಎಲ್ಲ ಮಸರು ಕಡವ ಹಾಂಗೆ, ಕೈ ಕಾಲಿಂಗೆ ಬಲ ಇಲ್ಲದ್ದ ಹಾಂಗೆ, ಆರ ಮೋರೆಯನ್ನು ನೋಡುವ ಧೈರ್ಯ ಇಲ್ಲದ್ದೆ ಒಂದು ಕರೇಲಿ ಕೂದವು.

ಭಾಮೆಯಕ್ಕನ ದೇಹ ಪಂಚಭೂತಲ್ಲಿ ಲೀನ ಆಗಿ ಹೋತು.ಮನಗೆ ಬಂದವೆಲ್ಲ ಹೆರಟವು.
“ಇನ್ನೆಂತ ಮಾಡುದು ಚಂದ್ರಾ? ಸುಶೀಲೆಯ ಹುಡ್ಕುಸುಲಿದ್ದೋ ಅಲ್ಲ ಹಾಂಗೇ ಬಿಡುದೋ? ನಮ್ಮ ಮನೆತನಕ್ಕೆ ಮಸಿ ಬಳುದಿಕ್ಕಿ ಹೋತದು.ಇನ್ನೀಗ ನಮ್ಮ ಮನೆಯ ಕೂಸುಗಳ ಜಾತಕ ಕೇಳುವ ಸಮಯಲ್ಲಿ ಮದಾಲು ಬಪ್ಪದು ಈ ವಿಶಯ ಆದಿಕ್ಕು” ಚಂದ್ರಣ್ಣನ ದೊಡ್ಡ ಅಣ್ಣ ಹೇಳಿದವು.

“ಎನಗೊಂದೂ ಅರ್ಥಾವ್ತಿಲ್ಲೆ ಅಣ್ಣಾ..ಹೀಂಗಕ್ಕೂಳಿ ಎನಗಂದಾಜಾಯಿದಿಲ್ಲೆ‌.ಅದರ ಜಾತಕಲ್ಲಿ ಎಂತೋ ಸಣ್ಣ ದೋಷ ಇದ್ದು ಹೇಳಿ ಅಂದು ಜೋಯಿಶ ಮಾವ° ಹೇಳಿತ್ತಿದ್ದವು.ಎನಗದು ನೆಂಪೇ ಆಗದ್ದದು ಎನ್ನ ಗ್ರಾಚಾರ.” ಹೇಳಿಂಡು ಸಣ್ಣ ಮಕ್ಕಳ ಹಾಂಗೆ ಕೂಗಿದವು.

“ಜೋಯಿಶ ಮಾವ° ಹೇಳಿದ ವಿಶಯ ಲೊಟ್ಟೆ ಅಪ್ಪಲಿದ್ದೋ.’ತಲೆಲಿ ಬರದ್ದದು ಎಲೆಲಿ ಉದ್ದಿರೆ ಹೋಗ’ ಹೇಳಿ ನಮ್ಮಬ್ಬೆ ಯೇವಗಲೂ ಹೇಳ್ಲಿದ್ದು.ಇದೆಲ್ಲ ನೋಡ್ಲೆ ಅಬ್ಬೆ ಇಲ್ಲದ್ದದೇ ಒಳ್ಳೆದಾತು.ಹೋದ್ದು ಹೋತು.ಇನ್ನು ಅಬ್ಬೆಯ ಬೊಜ್ಜ ಹೇಂಗೆ ಮಾಡುದೂಳಿ ಆಲೋಚನೆ ಮಾಡುವೊ° ಅಂಬಗ” ಹೇಳಿಂಡು ಹೆಗಲಿಲ್ಲಿಪ್ಪ ಶಾಲಿಲ್ಲಿ ಮೋರೆ ಉದ್ದಿಕ್ಕಿ ಅಲ್ಲಿಂದೆದ್ದು ನೆಡದವು.

“ಅಪ್ಪಾ°.. ನಿಂಗೊ ನಿನ್ನೆ ಇರುಳಿಂದ ಮತ್ತೆ ಎಂತದೂ ತಿಂದಿದಿಲ್ಲೇಡ,ಈಗ ರಜಾ ಅವಲಕ್ಕಿ, ಸಜ್ಜಿಗೆ ಆದರೂ ತಿನ್ನಿ.ಅಬ್ಬಗೆ ಹೇಂಗೋ ಕೊಟ್ಟೆ” ಶೈಲ ಅಪ್ಪನತ್ರೆ ಬಂದು ನಿಂದತ್ತು.
ಚಂದ್ರಣ್ಣ ಮಗಳ ಮೋರೆ ನೋಡಿದವು.ಕಣ್ಣಿಂದ ದಿಳಿದಿಳಿನೆ ನೀರಿಳುದತ್ತು.ಇನ್ನಾಣ ವಾರ ಶೈಲನ ಕೋಡಿ ನಿಗೆಂಟು ಮಾಡಿದ್ದವು.ಹೇಂಗೆ ಹೋಪದು? ನಾಳಂಗೆ ಊರಿನವರ ಮುಂದೆ ತಲೆ ನೆಗ್ಗಿ ನಡವಲೆಡಿಯದ್ದಾಂಗಾತಿಲ್ಯೋ?

“ರಜ್ಜ ತಿನ್ನಿ ಅಪ್ಪಾ°..ಅದು ತಟ್ಟೆಲಿ ಹಾಕಿ ತಂದು ಕೊಟ್ಟರೂ ಅವಕ್ಕೆ ತಿಂಬಲೆಡಿಗಾಯಿದಿಲ್ಲೆ.ಸುಶೀಲ ಇನ್ನೂ ಮನೆಯೊಳವೇ ಎಲ್ಯಾದರು ಇಕ್ಕು ಹೇಳಿ ಆಗಿಂಡಿದ್ದತ್ತು.
ಅಬ್ಬಗೆ ಉಸಿಲು ಬಿಡ್ಲೆ ಬಂಙಪ್ಪಗ ಒಳಾಂದ ಕಾಶೀ ತೀರ್ಥ ತಪ್ಪಲೆ ಹೋಪಗ ಹತ್ತರೆ ನಿಂಬಲೆ ಶಾರದೆಯ ದಿನಿಗೇಳಿದ್ದದು.
‘ಸುಶೀ ಹೆರ ಹೋಯಿದು. ಹೊಟ್ಟೆ ಬೇನೆ ಆವ್ತಾಡ. ಹೆದರಿಕೆ ಆವ್ತು ಹೇಳಿ ಒಟ್ಟಿಂಗೆ ಬಂದದಾನು. ಲೇಟ್ರಿನಿಂದ ಹೆರ ಬಪ್ಪಗ ಎನ್ನ ಕಾಣದ್ರೆ ಬೊಬ್ಬೆ ಹಾಕಲೂ ಸಾಕು” ಹೇಳಿಂಡು ಅದು ಒಳ ಬಂತು.

“ಕರೆಂಟ್ ಬೆಣಚ್ಚು ಇಪ್ಪಗ ಎಂತರ ಹೆದರಿಕೆ? ಈಗ ಬಕ್ಕದು.ನೀನು ಅಬ್ಬೆತ್ರೆ ನಿಲ್ಲು” ಹೇಳಿಕ್ಕಿ ಕಾಶೀ ತೀರ್ಥ ತಂದು ಅಬ್ಬೆಯ ಬಾಯಿಗೆ ಎರದ್ದದರ್ಲಿ ಎಷ್ಟು ಒಳ ಹೋಯಿದು ಗೊಂತಿಲ್ಲೆ.
ತೀರ್ಥ ಪುನಾ ದೇವರೊಳ ಮಡುಗಿಕ್ಕಿ ಬಪ್ಪಗ ಅಬ್ಬೆಯ ಉಸಿಲು ನಿಂದಿದು.

“ಅತ್ತೆ ಎನ್ನನ್ನೇ ನೋಡಿಂಡಿದ್ದಲ್ಲಿಗೆ ……..” ಹೇಳಿ ಶಾರದೆ ಜೋರು ಕೂಗಿತ್ತು.ಅಬ್ಬೆಯ ಪ್ರೀತಿ ಅನುಭವಿಸಿ ಗೊಂತಿಲ್ಲದ್ದ ಅದಕ್ಕೆ ಭಾಮೆಯಕ್ಕ ಅತ್ಯೋರಾದ್ದಲ್ಲ.ಸ್ವಂತ ಅಬ್ಬೆಂದಲೂ ಹೆಚ್ಚು ಪ್ರೀತಿ ಕೊಟ್ಟಿದವು.ಹಾಂಗಾಗಿ ರಜ ಹೊತ್ತು ಅದಕ್ಕೆ ಎಂತ ಮಾಡ್ಲೂ ಎಡ್ತಿದಿಲ್ಲೆ.

ಚಂದ್ರಣ್ಣಂಗೂ ಹಾಂಗೇ ಆದ್ದು. ಅಪ್ಪನ ಸಣ್ಣ ಪ್ರಾಯಲ್ಲಿ ಕಳಕ್ಕೊಂಡ ಕಾರಣ ಎಲ್ಲದಕ್ಕೂ ಅವಕ್ಕೆ ಅಬ್ಬೆಯೇ ಮುಂದೆ. ಆ ಅಬ್ಬಗೆ ಎಷ್ಟು ಪ್ರಾಯಾದರೂ ಅಬ್ಬೆ ಈ ಲೋಕ ಬಿಟ್ಟು ಹೋತು ಹೇಳುಗ ಒಂದರಿಂಗೆ ಎದೆಲಿ ಸಂಕಟ ಆತು. ಹಾಂಗೆ ಹೇಳಿ ಅದನ್ನೇ ಆಲೋಚನೆ ಮಾಡಿಂಡು ಕೂಬ ಹೊತ್ತಲ್ಲನ್ನೇ..ಪುರೋಹಿತರಿಂಗೆ ಪೋನು ಮಾಡೆಕು‌.ನೆರೆಕರೆಲಿ ಆರಿಂಗಾರು ತಿಳಿಶೆಕು.ಅವು ಮತ್ತೆ ಬಾಕಿದ್ದವಕ್ಕೆ ತಿಳುಶುಗು.ಹಾಂಗೇ ಮಾವಿನಮರ ಕಡಿವಲೆ ಹೊಲೆಯರ ಬಪ್ಪಲೆ ಹೇಳೆಕು………! ಎಲ್ಲ ವಿಶಯ ಒಟ್ಟಿಂಗೆ ತಲಗೆ ಬಂದು ಯೇವದರ ಮದಾಲು ಮಾಡುದೂಳಿ ಆಲೋಚನೆ ಮಾಡಿಂಡಿಪ್ಪಗಳೇ ಶಾರದೆ ಫಕ್ಕನೆ “ಸುಶೀ ಇನ್ನೂ ಬಯಿಂದಿಲ್ಲೇಕೇಳಿ’ ಹೆರ ಹೋದ್ದು.

” ಸುಶೀಯ ಕಾಣ್ತಿಲ್ಲೇಳಿ..ಎಲ್ಲಿಗೋದಿಕ್ಕು ಈ ಇರುಳು? ” ಅಬ್ಬೆಯ ಹತ್ತರೆ ಕೂದೊಂಡಿದ್ದವು ಫಕ್ಕನೆ ಎದ್ದು ಬಂದು ಇಡೀ ಮನೆ ಹುಡ್ಕಿದವು.
“ಸುಶೀ……ಸುಶೀಲಾ…..ಮಗಳೂ…ಎಲ್ಲಿದ್ದೇ..?” ಶಾರದೆಯೂ ಮರ್ಲು ಹಿಡುದವರ ಹಾಂಗೆ ಬೊಬ್ಬೆ ಹಾಕಿಂಡು ಹುಡ್ಕಲೆ ಸುರು ಮಾಡಿತ್ತು.
ಅಂದರೂ ಅಲ್ಲೆಲ್ಲಿಯೂ ಅದರ ಸುಳಿವೇ ಇಲ್ಲೆ‌.
ಎದೆಲಿ ಝುಮ್ ಅಪ್ಪಲೆ ಸುರುವಾತವಕ್ಕೆ.ಆಗ ಬೈದ್ದದು ಹೆಚ್ಚಾತೋ,ಪಾಪದ ಕೂಸು.ಇಷ್ಟರವರೆಗೆ ಅದರ ಕೊಂಗಾಟ ಮಾಡಿದ್ದಷ್ಟೆ ಹೊರತು ಬೈದ್ದಿಲ್ಲೆ.ಈ ಸರ್ತಿ ಬೈದ್ದು ಮಾತ್ರಲ್ಲ,ಪೆಟ್ಟುದೆ ಕೊಡೆಕಾಗಿ ಬಂತು.ಹಾಂಗೆಲ್ಯಾರು ಕೋಪಲ್ಲಿ ಕೆರೆಗೋ,ಬಾವಿಗೋ ಹಾರಿರೆ…..!!
ಮನಸಿಲ್ಲಿ ಹಾಂಗೆ ಬಂದದೂದೆ ಆ ನೆಡಿರುಳೇ ಅವು ಲೈಟು ತೆಕ್ಕೊಂಡು ತೋಟಕ್ಕೆ ಓಡಿದವು

“ಇಷ್ಟೊತ್ತಿಂಗೆ ಎಲ್ಲಿಗೆ ಹೀಂಗೆ?” ಹೇಳಿ ಕೇಳಿದ ಶಾರದೆಯತ್ರೆ ಕೂಡ ‘ನೀನಬ್ಬೆ ಹತ್ತರೆ ನಿಲ್ಲು. ಬೇರೆಲ್ಲೂ ಹೋಗೆಡ’ ಹೇಳಿ ಮಾಂತ್ರ ಹೇಳಿದ್ದಷ್ಟೆ.
ತೋಟಲ್ಲಿಪ್ಪ ಐದೂ ಕೆರೆಗಳ ಹತ್ರಂಗೂ ಹೋಗಿ ನೋಡಿದವು.ಅಲ್ಲೆಲ್ಲಿಯೂ ಸುಶೀಯ ಶುದ್ದಿಲ್ಲೆ.ಗುಡ್ಡೆಲಿಪ್ಪ ಪೊಟ್ಟು ಬಾವಿಗಳನ್ನು ಒಂದರಿ ನೋಡಿಕ್ಕಿ ಬಪ್ಪೋ° ಹೇಳಿ ಹೆರಟರೂ ಮನೆಲಿ ಶಾರದೆ ಒಬ್ಬನೇ ಹೇಳಿ ಅಲ್ಲಿಂದಲೇ ವಾಪಾಸು ಮನಗೆ ಬಂದಪ್ಪಗ ಶಾರದೆ ಕೈಲೊಂದು ಕಾಗದ ಹಿಡುದು ಶಿಲೆಯಾಂಗೆ ಕೂದೊಂಡಿದ್ದದು ಕಂಡತ್ತವಕ್ಕೆ.

“ಇದಾ..ನೋಡಿ.. ಸುಶೀ ಬರದ್ದದು. ನಾವದರ ಹುಡ್ಕುದು ಬೇಡಾಡ.ಎಂತ ಮಾಡ್ಯೊಂಡತ್ತಿದು ನೋಡಿ..” ಅಷ್ಟು ಹೇಳಿ ಸೆರಗಿನ ಬಾಯಿಗೆ ಚಳ್ಳಿ ಶಬ್ದ ಬಾರದ್ದಾಂಗೆ ಕೂಗಿತ್ತದು.
ಚಂದ್ರಣ್ಣ ಕಾಗದ ಓದಿದವು.

“ಅಬ್ಬಗೂ ಅಪ್ಪಂಗೂ ಎನ್ನ ವಂದನೆಗೊ.ಎನ್ನ ಬದುಕಿನ ಎನಗೆ ಬೇಕಾದಾಂಗೆ ರೂಪಿಸುಲೆ ನಿಂಗ ಬಿಡ್ತಿಲ್ಲೇಳಿ ಗೊಂತಾದ ಕಾರಣ ಆನು ಮನೆಬಿಟ್ಟು ಹೋವ್ತೆ. ನಿಂಗೊಗೆಲ್ಲ ದಿನೇಸ ಆಳಾದಿಕ್ಕು.ಎನಗೆ ಹಾಂಗಲ್ಲ. ಅದೆನ್ನ ” ಸ್ವಯಂವರ!!!!
ಆನೇ ಹುಡ್ಕಿಕೊಂಡ ಎನ್ನ ವರ° ಅದು‌.ಎನ್ನ ಬದುಕಿನ್ನು “ಸ್ವಯಂವರನೊಟ್ಟಿಂಗೆ.ನಿಂಗೊ ಆರೂ ಎನ್ನ ಹುಡ್ಕೆಡಿ.ಎನ್ನ ಸ್ವಯಂವರ ನಿಂಗೊಗೆ ಒಪ್ಪಿಗೆ ಹೇಳಿ ಗೊಂತಾದ ಆನು ಮತ್ತೆ ಮನಗೆ ಬಪ್ಪದು.ಒಳ್ಳೆ ಮನಸಿಂದ ಆಶೀರ್ವಾದ ಮಾಡಿ”

‌‌‌ ನಿಂಗಳ ಸುಶೀ..

ಕಾಗದ ಓದಿಯಪ್ಪಗ ಆರೋ ತಲಗೆ ಬಡುದ ಹಾಂಗಾಗಿ ಅಲ್ಲೇ ಕೂದವು ಚಂದ್ರಣ್ಣ. ರಜ ಹೊತ್ತಿಂಗೆ ಮತಿ ತಪ್ಪಿ ಹಾಂಗಾತು.
” ಹೀಂಗೆ ಕೂದರೆ ಹೇಂಗೆ? ಅತ್ತೆಯ ಮುಂದಾಣ ಕಾರ್ಯಂಗೊ ಆಗೆಡದೋ” ಹೇಳಿ ಶಾರದೆ ಹೆಗಲು ಕುಲುಕ್ಸಿ ಕೇಳಿಯಪ್ಪಗ ಅವು ಈ ಪ್ರಪಂಚಕ್ಕೆ ಬಂದದು.

“ಕೇಶವಂಗೆ ಪೋನು ಮಾಡು.ಅವನ ಈಗ ನೋಡೆಕೆನಗೆ” ಶಾರದೆ ಹತ್ರೆ ಚಂದ್ರಣ್ಣ ಮದಾಲು ಹೇಳಿದ್ದು ಅದನ್ನೇ.
ಶಾರದಗಾದರೆ ಸುಶೀಲ ಕಾಣೆಯಾದ ಮತ್ತೆ ಕೈ ಕಾಲು ದರ್ಸುಲೆ ಸುರುವಾದ್ದು ಇನ್ನೂ ನಿಂದಿದಿಲ್ಲೆ..ಹೇಂಗೋ ಆಚಮನೆ ಕಿಟ್ಟಣ್ಣನ ನಂಬರ್ ಒತ್ತಿಕ್ಕಿ ಎಂತದೋ ಹೇಳಿತ್ತು. ಆ ಹೊತ್ತಿಂಗೆ ಆದ ಕಾರಣ ಶಾರದೆ ಹೇಳಿದ್ದೆಂತರಾಳಿ ಅರ್ಥಾಗದ್ರೂ ಅವು ಅಂಬಗಳೇ ಮಗನನ್ನು ಕರಕ್ಕೊಂಡು ಬಂದವು.

ಕಿಟ್ಟಣ್ಣ ಬಂದ ಮತ್ತೆ ಅವ್ವೇ ಮುಂದೆ ನಿಂದು ಬಾಕಿ ವ್ಯವಸ್ಥೆ ಮಾಡಿದ್ದು.

“ಅಪ್ಪಾ° ನಿಂಗ ಹೀಂಗೆ ಎಂತದೂ ಬೇಡ ಹೇಳಿರೆ ಹೇಂಗೆ?” ಶೈಲ ಮತ್ತೂ ಒತ್ತಾಯ ಮಾಡಿಯಪ್ಪಗ ಒಂದು ತುತ್ತು ಬಾಯಿಗೆ ಹಾಕಿದವು.
“ಕೇಶವ° ಬಂದನೋ?,ಎಲ್ಲೋರು ಹೋದವೋ?” ಶೈಲನತ್ರೆ ಕೇಳಿದವು.

“ಅವ° ಹೆರಟಿದಾಡ.ಈಗ ಎತ್ತುಗು.ಉದಿಯಪ್ಪಗ ಆರು ಗಂಟೆ ಬಸ್ಸಿಂಗೆ ಹೆರಡ್ತೆ ಹೇಳಿದ್ದಾ°ಡ.ಈಗ ಐದು ಗಂಟೆ ಆತು .ರಜ್ಜೊತ್ತಿಲ್ಲಿ ಎತ್ತುಗು.ಆನು ಬಸ್ಸಿಳಿವಲ್ಲಿಗೆ ಹೋಗಿಂಡು ಬತ್ತೆ ಮಾವ° ” ಹೇಳಿಕ್ಕಿ ಅಳಿಯ ರಾಮಚಂದ್ರ ಮೆಟ್ಟು ಹಾಕಿ ಹೆರಟಪ್ಪಗ ಎಂತೋ ಹೇಳ್ಲೆ ಹೆರಟ ಚಂದ್ರಣ್ಣನ ಬಾಯಿಂದ ಮಾತು ಹೆರಡದ್ದೆ ಎಲ್ಲಿಯೋ ಸಿಕ್ಕಿ ಹಾಕಿದ ಅನುಭವ ಆತು…

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

2 thoughts on “ಸ್ವಯಂವರ : ಕಾದಂಬರಿ : ಭಾಗ 24 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಸುಶೀಲೆ ಹೇಳುವ ಹೆಸರಿಂಗೇ ಮಸಿ ಬಳುದತ್ತಾನೆ ಸುಶೀಲೆ. ಇನ್ನದರ ಜೀವನ ನಾಯಿಜೀವನ ಆಗಿಅಪ್ಪಗ ಬುದ್ದಿ ಬಪ್ಪದಾಯ್ಕು. ಕಳುದವಾರವೇ ಸುಶೀಲೆ ಓಡಿಹೋಗೆಕಾಗಿತ್ತು. ಒಂದುವಾರ ತಡ ಆತು !! ಕತೆಗೆ ಕಾದೊಂಡಿತ್ತಿದ್ದೆ.

  2. ಮನಸ್ಸು ಹಾಳು ಮಾಡಿದ್ದರ ಇನ್ನು ಸರಿ ಮಾಡ್ಳೆ ಎಡಿ ಗು ಹೇಳಿ ಕಾಂತಿಲ್ಲೆ…ಒಟ್ಟಾರೆ ಚಂದ್ರಣ್ಣ ನ ಗ್ರಹಚಾರ ಹಾಳು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×