Oppanna.com

ಸ್ವಯಂವರ : ಕಾದಂಬರಿ : ಭಾಗ 36 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   10/02/2020    5 ಒಪ್ಪಂಗೊ

ದಿನೇಸ ಮನಗೆ ಬಾರದ್ದೆ ಒಂದು ತಿಂಗಳೇ ಆದಿಕ್ಕು. ಹಗಲು ಎಲ್ಲಿಗಾರು ಕೆಲಸಕ್ಕೆ ಹೋದರೆ ಬಪ್ಪಗ ಕುಡುದಿಕ್ಕಿ ಬಂದು ಜಾನುವಿನ ಮನಗೇ ಹೋಪದದು. ಸುಶೀಲಂಗೆ ಉಂಬಲೆ ತಿಂಬಲೆ ಎಂತದೂ ತಂದು ಹಾಕದ್ದೆ, ಅದು ಬರೀ ಎಲುಗು ಚೋಲಿ ಮಾತ್ರ ಆಗಿ ಅದರ ಚೆಂದವೇ ಹೋದ ಕಾರಣ ದಿನೇಸಂಗೆ ಅದರ ಮೋರೆ ನೋಡ್ಲೆ ಸಾನೂ ಮನಸ್ಸು ಬಂದೊಂಡಿತ್ತಿದ್ದಿಲ್ಲೆ. ಸಾಲದ್ದಕ್ಕೆ ಇದರ ಕಂಡಪ್ಪಗ ಸುಶೀಲಂಗೆ ಕೋಪವೇ ಬಪ್ಪದೂದೆ. ಎಂತಾರು ಹೇಳಿ ಬೈವಗ ಇದೂದೆ ಸುಶೀಯ ಬೈದು , ಬಡುದು, ಮೆಟ್ಟಿ ಹಿಂಸೆ ಕೊಟ್ಟು ಕೊಶಿ ಪಟ್ಟುಕೊಂಡಿದ್ದತ್ತು. ಹಾಂಗೆ ಮಾಡಿರೆ ಆಚೀಚ ಮನೆಲಿಪ್ಪ ಕೆಲವು ಜೆನಂಗೊ ದಿನೇಸನ ಜೋರು ಮಾಡಿಂಡಿತ್ತಿದ್ದವು
” ನೀನು ಹೀಂಗೆ ಹಿಂಸೆ ಕೊಟ್ಟರೆ ಅದು ಸಾಯಿಗು. ಮತ್ತೆ ಜೈಲಿಲ್ಲಿ ಕೂರೆಕಕ್ಕು. ಅದರ ಅಪ್ಪನಮನೆಯವು ಈಗ ಬಾರದ್ರೂ ಅದಕ್ಕೆಂತಾರಾದರೆ ಬಾರದ್ದಿರವು”
ಹಾಂಗಾಗಿ ದಿನೇಸ ಸುಶೀಲನ ಶುದ್ದಿಗೆ ಬಪ್ಪದು ಕಮ್ಮಿ ಮಾಡಿದ್ದು.

ಅಂದು ಕಿಚ್ಚಿನ ಕೊಳ್ಳಿಲಿ ತಂಗಮ್ಮ ಬಡುದ ಮತ್ತೆ ಸುಶೀಲ ಹೇಂಗಿದ್ದೂಳಿ ಸಾನೂ ನೋಡ್ಲೆ ಬಯಿಂದಿಲ್ಲೆ ಅದು. ಸುಶೀ ದಿನಾಗಳು ಎಲ್ಲಿಗೋ ಹೋವ್ತು ಹೇಳಿ ಕೆಲವು ದಿನಂದ ಆಚೀಚ ಮನೆಯವು ಮಾತಾಡುದು ಕೇಳಿದ್ದದು. ಮಾರ್ಗಂದ ಆಚೊಡೆಲಿ ಕೆಲವು ಶ್ರೀಮಂತರ ಮನೆ ಇದ್ದು. ಇಲ್ಲಿಪ್ಪವರ ಆರನ್ನೂ ಅವು ಮನೆ ಕೆಲಸಕ್ಕೆ ದಿನಿಗೇಳ್ತವಿಲ್ಲೆ. ಬಹುಶಃ ಸುಶೀಲನ ಕ್ರಮ ನೋಡುಗ ಅದು ಇಲ್ಯಾಣದ್ದಲ್ಲ ಹೇಳಿ ಗೊಂತಾತಾದಿಕ್ಕು. ಇನ್ನದಕ್ಕೆ ಚೋರು ಹಾಕುವ ಕೆಲಸ ಇಲ್ಲೆ ಹೇಳಿ ಸಮದಾನ ಪಟ್ಟು ಕೊಂಡಿದ್ದ ದಿನೇಸ ಎರಡು ದಿನ ಮದಲು ಜಾನುವಿನ ಮನಗೆ ಹೋಪಗ ಇತ್ಲಾಗಿ ತಿರುಗಿ ನೋಡಿತ್ತು. ಮಗಳ ಕೈ ಹಿಡುದು ನಡಶಿಂಡು ಅದರತ್ರೆ ಕೊಂಗಾಟಲ್ಲಿ ಮಾತಾಡುವ
ಮಿಂಚಿನ ಬಳ್ಳಿಯ ಹಾಂಗೆ ಹೊಳವ ಸುಶೀಲನ ಕಂಡಪ್ಪಗ ಅದಕ್ಕೆ ಒಂದರಿ ಝುಮ್ ಹೇಳಿ ಆತು.
‘ಅಬ್ಬಾ ಎಷ್ಟು ಚಂದ ಇದು! ಆ ಕರಿ ಜಾನುವಿನ ಒಟ್ಟಿಂಗೆ ಇದ್ದ ಕಾರಣ ಇದರ ತಿರುಗಿ ಸಾನು ನೋಡದ್ದೆ ಸುಮಾರು ದಿನ ಆತು. ಕೆಲಸಕ್ಕೆ ಹೋದಲ್ಲಿ ಲಾಯ್ಕಲ್ಲಿ ತಿಂಬಲೆ ಕೊಡ್ತವು ಕಾಣ್ತು’ ಹೀಂಗೇ ಗ್ರೇಶಿಂಡು ಅಂದು ಜಾನುವಿನ ಮನಗೆ ಹೋದರೂ ಅದರ ತಲೆಲಿ ಸುಶೀಯ ನೆಗೆ ಮೋರೆಯೇ ತುಂಬಿ ನಿಂದೊಂಡಿದ್ದತ್ತು. ಮರದಿನವುದೆ ಹೊತ್ತೋಪಗ ಕೆಲಸಂದ ಬಂದಿಕ್ಕಿ ಸುಶೀಯನ್ನೇ ಕಾದು ಕೂದು ನೋಡಿತ್ತು. ಅಷ್ಟಪ್ಪಗ ಅಲ್ಲಿಗೆ ತಂಗಮ್ಮ ಬಂತು.

“ನಿನ್ನ ಹೆಂಡತಿಯ ಹಾಂಗೆ ನೋಡುದೆಂತಕೆ? ಇಲ್ಲಿ ಈ ಕರಿ ಕರಡಿಯೊಟ್ಟಿಂಗೆ ನೆಗರು! ಅಲ್ಲಿ ಅದು ನೋಡು ಹೇಂಗಿದ್ದೂಳಿ. ಆ ಮನೆ ಹೊಡೆಂಗೆ ಬರೆಡ ನೀನು. ಅದು ಒಂದು ದಿನ ಮಗಳ ಕರಕ್ಕೊಂಡು ಆರೊಟ್ಟಿಂಗಾರು ಓಡಿ ಹೋಕು. ಮತ್ತೆ ನಿನಗೆ ಅದರ ಅಪ್ಪನ ಆಸ್ತಿಯೂ ಸಿಕ್ಕ. ಅದಿಲ್ಲೇ ಇದ್ದರೆ ಯೇವಗಾದರು ಅವು ಬಂದು ಕರಕ್ಕೊಂಡು ಹೋಕು. ನಿನಗೆ ರಜವೂ ಬುದ್ಧಿ ಇಲ್ಲೆ. ಅದಕ್ಕೀಗ ಎನ್ನ ಬೈಗಳೆಲ್ಲ ಯೇವ ಲೆಕ್ಕವೂ ಇಲ್ಲೆ….” ಕೋಪಲ್ಲಿ ದರ್ಸಿಂಡೇ ಹೇಳಿತ್ತು ತಂಗಮ್ಮ.
ಸುಶೀಲ ಅದರತ್ರೆ ಇಪ್ಪ ಯೇವ ವಸ್ತುವನ್ನೂ ತಂಗಮ್ಮಂಗೆ ಕೊಡ್ತಿಲ್ಲೆ ಹೇಳಿ ಕೋಪವೂ ಇದ್ದತ್ತು ಅದಕ್ಕೆ. ಪೂರ್ಣಿ ಕೊಟ್ಟ ಸೀರೆ ಎಲ್ಲ ತಂಗಮ್ಮನ ಮುಟ್ಲೆ ಸಾನು ಬಿಡದ್ದೆ ಜೋರು ಮಾಡಿದ್ದತ್ತು ಸುಶೀಲ. ಸಾಲದ್ದಕ್ಕೆ ದಿನ ಹೋದಾಂಗೆ ಗೆನಾ ಆಗಿ ಚೆಂದ ಚೆಂದ ಕಾಂಬ ಅದರ ನೋಡುಗ ತಂಗಮ್ಮನ ಹೊಟ್ಟೆ ಉರಿವಲೆ ಸುರುವಾತು.

ಅಬ್ಬೆ ಹೇಳಿದ ಮಾತು ದಿನೇಸನ ಮನಸಿಂಗೆ ಸರೀ ನಾಟಿತ್ತು. ಅಂದು ಕೆಲಸ ಬಿಟ್ಟು ಬಂದು ನುಗ್ಗಿದ್ದದೇ ಸುಶೀಲ ಇಪ್ಪ ಮನಗೆ.
ಇಷ್ಟು ದಿನ ದಿನೇಸ ಮನಗೆ ಬಾರದ್ದ ಕಾರಣ ನೆಮ್ಮದಿಲಿ,ಕೊಶೀಲಿ ಇದ್ದ ಸುಶೀಲಂಗೆ ಇಂದದರ ಇಲ್ಲಿ ಕಂಡಪ್ಪಗ ಹೆದರಿ ಜೀವ ಹೋದಾಂಗಾತು. ತಂಗಮ್ಮಂಗೆ ಮಗ ಬಂದದು ಭಾರೀ ಕೊಶೀ. ನೆಗೆ ನೆಗೆ ಮಾಡಿ ಮಾತಾಡ್ಸಿಕ್ಕಿ , ತಪ್ಪಿ ಕೂಡ ಒಪ್ಪಕ್ಕನ ಹತ್ತರೆ ಮಾತಾಡದ್ದ ಜೆನ ಇಂದು ಅದರನ್ನು ಕರಕ್ಕೊಂಡು ಹೆರ ಹೋತು.
“ಒಪ್ಪಕ್ಕಾ….ಹೋಗೆಡ ಮಗಳೂ..” ಹೇಳಿ ಮಗಳ ದಿನಿಗೇಳಿದ ಸುಶೀಲನ ಅಡ್ಡ ತಳ್ಪಿ ಬಾಯಿ ಮುಚ್ಚಿತ್ತು ದಿನೇಸ..
“ಎಲ್ಲಿಗೆ ಹೋಪದು? ಆನು ನಿನ್ನ ಗೆಂಡ ಬಂದದು….” ಅದರ ಬಾಯಿಂದ ಬಪ್ಪ ವಾಸನೆಗೆ ಕಾರ್ಲೆ ಬಪ್ಪಷ್ಟು ಹೇಸಿಗೆ ಆತು ಸುಶೀಲಂಗೆ. ಆದರೆ ಆ ಹೊತ್ತಿಲ್ಲಿ ಅದಕ್ಕೆ ಎಂತ ಮಾಡ್ಲೂ ಎಡಿಯದ್ದ ಅಸಹಾಯಕ ಪರಿಸ್ಥಿತಿ ಬಂತು. ಹೆರ ಹೋಪಲೆಡಿಯದ್ದ ಹಾಂಗೆ ದಿನೇಸ ಅಡ್ಡ ನಿಂದಿದು. ಒಳ ಹೋಪದು ಹೇಳಿ ಹೋಪದೆಲ್ಲಿಗೆ? ಇಪ್ಪದೇ ಒಂದು ಒಳ. ಬೇರೆ ಬಾಗಿಲು ಸಾನೂ ಇಲ್ಲೆ..

ಎಂತ ಮಾಡುದು ಹೇಳಿ ಆಲೋಚನೆ ಮಾಡುಗ ದಿನೇಸಂಗೆ ಹತ್ತರೆ ಬಂದಾಗಿದ್ದತ್ತು. ಅದರ ನೂಕಿ ಓಡ್ಲೆ ನೋಡಿರೂ ಅದರ ಶಕ್ತಿಯ ಮುಂದೆ ಸುಶೀಲ ಸೋತು ಹೋತು.
“ಎನ್ನ ಕೈಗೆ ಸಿಕ್ಕದ್ದೆ ತಪ್ಸುತ್ತೆ ನೀನಲ್ಲದಾ…” ಹೇಳಿಂಡು ದಿನೇಸ ಅದರ ಕೊರಳೊತ್ತಿತ್ತು. ಸುಶೀಲಂಗೆ ಮತ್ತೆಂತದೂ ಗೊಂತೇ ಆಯಿದಿಲ್ಲೆ……!!!!!!!!

ಎಷ್ಟೋ ಹೊತ್ತು ಕಳುದಪ್ಪಗ ಅದಕ್ಕೆ ಎಚ್ಚರಿಕೆ ಆತು. ಮೈ ಹನ್ಸುಲೆ ಸಾನು ಎಡಿಯದ್ದಷ್ಟು ಬೇನೆ. ಹೇಂಗೋ ಎದ್ದು ಕೂದತ್ತು. ದಿನೇಸ ರಜ ದೂರ ಬಿದ್ದು ಒರಗುದು ಕಾಂಬಗ ಅದರ ತಲಗೆ ಕಡವ ಕಲ್ಲು ಹೊತ್ತು ಹಾಕಿ ಕೊಲ್ಲೆಕು ಹೇಳುವಷ್ಟು ಕೋಪ ಬಂತು. ಆದರೆ ಅದಕ್ಕೆ ಕೂದಲ್ಲಿಂದ ಎದ್ದು ನಿಂಬಲೆ ಸಾನೂ ತ್ರಾಣ ಇದ್ದತ್ತಿಲ್ಲೆ.

‘ಬಣ್ಣದ ಮಾತಾಡಿ ಎನ್ನ ಬದುಕು ಹಾಳು ಮಾಡಿದ ದುಷ್ಟ!! ….. ಇದರೊಟ್ಟಿಗೆ ಆನು ಓಡಿ ಬಂದದಲ್ಲದಾ..ಅಬ್ಬೆ, ಅಪ್ಪ°, ಅಣ್ಣ, ಅಕ್ಕ….. ಅಂಬಗ ಅವರೆಲ್ಲೋರ ಒಳ್ಳೆ ಮನಸ್ಸಿನ ಪ್ರೀತಿಂದ ಹೆಚ್ಚು ಇಷ್ಟ ಆದ್ದದು ಇದರ ಕಪಟ ಪ್ರೀತಿಗೆ!! ಮೋಸಗಾರ, ವಂಚಕ, ದುಷ್ಟ… ‌‌!’ ಎಲ್ಲ ನೆಂಪಾಗಿ ಎಕ್ಕಿ ಎಕ್ಕಿ ಕೂಗಿತ್ತು ಸುಮಾರು ಹೊತ್ತು.
ಅಷ್ಟಪ್ಪಗ ದಿನೇಸ ಎದ್ದು ಕೂದತ್ತು. ಸುಶೀಲನ ನೋಡಿ ದೊಡ್ಡಕೆ ನೆಗೆ ಮಾಡಿಂಡು ಹತ್ತರೆ ಬಂತು. ಸುಶೀಗೆ ಹೆದರಿ ಜೀವವೇ ಹೋದ ಹಾಂಗಾಗಿ ಕಣ್ಣು ಮುಚ್ಚಿತ್ತು.
“ನಿನ್ನ ಕೈಲಿ ಈಗ ಸುಮಾರು ಪೈಸೆಯೂ ಇಕ್ಕನ್ನೇ..!! ಎಲ್ಲ ಎಲ್ಲಿ ಹುಗ್ಸಿ ಮಡುಗಿದ್ದೆ‌.ಬೇಗ ಕೊಡು” ಹಾಂಗೆ ಹೇಳಿಂಡೇ ಸುಶೀಲ ಗೋಣಿಲಿ ತುಂಬುಸಿ ಮಡುಗಿದ ವಸ್ತ್ರಂಗಳ ಪೂರಾ ನೆಲಕ್ಕಕ್ಕೆ ಸೊರುಗಿತ್ತು. ಸಣ್ಣ ಸಣ್ಣ ಕಟ್ಟಂಗಳ ಕೂಡ ಬಿಡುಸಿ ನೋಡಿಯಪ್ಪಗ ಅದಕ್ಕೆ ಸಿಕ್ಕಿದ್ದದು ಬರೀ ಐವತ್ತು ರುಪಾಯಿ!!
ಕೂದಲ್ಲಿಂದಲೇ ಎಲ್ಲ ನೋಡಿತ್ತು ಸುಶೀಲ°. ಅಪ್ಪನಮನೆಂದ ತಂದ ಪೈಸೆಯ ಅಂದು ಪಂಕಜನತ್ರೆ ಕೊಟ್ಟಿಕ್ಕಿ ಬಂದದು ಅದು. ದೇವರೇ ಎನಗೆ ಒಳ್ಳೆ ಬುದ್ಧಿ ಕೊಟ್ಟದು. ಇಲ್ಲದ್ರೆ ಈಗ ಇಡೀ ಪೈಸಿನ ಕಟ್ಟವೇ ಹೋವ್ತಿತು.
ಒಂದು ತಿಂಗಳಿನ ಸಂಬಳ ಪಂಕಜ ಕೊಟ್ಟಪ್ಪಗ ಸುಶೀಲ ತೆಕ್ಕೊಂಬಲೆ ಒಪ್ಪಿದ್ದಿಲ್ಲೆ.
“ಎನಗೆ ಇಷ್ಟೆಲ್ಲ ಬೇಡ, ಎನ್ನ ಖರ್ಚೆಲ್ಲ ಇಲ್ಲಿಯೇ ಹೋವ್ತು. ಮಗಳ ಶಾಲಗೆ ಸೇರ್ಸುಲಪ್ಪಗ ಸಾಕೆನಗೆ ಪೈಸೆ. ಅಗತ್ಯ ಬಂದರೆ ನಿಂಗಳ ಕೈಂದ ತೆಕ್ಕೊಂಬೆ. ಈಗ ನಿಂಗಳತ್ರೆ ಇರಲಿ”
ಪಂಕಜ ನೆಗೆ ಮಾಡಿದವು “ನೀನೇ ತೆಗದು ಮಡುಗು, ಮಗಳ ಭವಿಷ್ಯಕ್ಕೆ ಆತು. ಎಂಗಳ ಕೈಲಿ ಇದ್ದರೆ ನಿನಗೆ ಬೇಕಪ್ಪಗ ಸಿಕ್ಕದ್ರೆ ಎಂತ ಮಾಡ್ತೆ? ನೀನು ಪೈಸೆ ಬೇಕೂಳಿ ಬಂದ ದಿನ ಎಂಗೊ ಎಲ್ಲಿಗೋ ಹೋಗಿರ್ತೆಯ, ಅಲ್ಲದ್ರೆ ಪೂರ್ಣಿಗೆ ಇನ್ನೊಂದು ಆಸ್ಪತ್ರೆಗೆ ವರ್ಗಾವಣೆ ಆತು. ಅಲ್ಲದ್ರೆ ಒಂದೊಂದರಿ ಮಗಳ ಮನಗೆ ಹೋಪ ಕ್ರಮವೂ ಇದ್ದು. ಅಲ್ಲಿಗೆ ಹೋದರೆ ಆರು ತಿಂಗಳು ಕಳಿಯದ್ದೆ ಬಪ್ಪಲಿಲ್ಲೆ…. ಹೀಂಗೆಲ್ಲ ಅಪ್ಪಗ ಎಂಗೊ ತೆಗದು ಮಡುಗಿರೆ ನಿನಗೆ ಬಂಙ”
ಸುಶೀಲಂಗೆ ಎಂತ ಮಾಡುದು ಹೇಳಿ ತಲಗೆ ಹೋಗದ್ದಾಂಗಾತು. ಬಪ್ಪಗ ತಂದ ಪೈಸೆಯನ್ನೇ ಆ ಪೀನಾರಿ ತಂಗಮ್ಮನ ಕಣ್ಣಿಂಗೆ ಕಾಣದ್ದಾಂಗೆ ಹುಗ್ಸಿ ಮಡುಗುದು ಭಾರೀ ಬಂಙಲ್ಲಿ. ಮತ್ತೆ ಈ ಪೈಸೆಯ ಎಲ್ಲಿ ಮಡುಗುದು? ಬಪ್ಪಗ ಪೈಸೆ ತಂದ ವಿಶಯ ಅವಕ್ಕೆ ಗೊಂತಿಲ್ಲೆ. ಆದರೆ ಇಲ್ಲಿ ಕೆಲಸಕ್ಕೆ ಬಂದರೆ ಸಂಬಳ ಕೊಡುಗು ಹೇಳಿ ಹೇಂಗೂ ಗೊಂತಿದ್ದು. ಅಷ್ಟಪ್ಪಗ ಅಲ್ಲಿಪ್ಪ ಪೈಸೆಯ ಕೂಡ ಹೆಚ್ಚು ಜಾಗ್ರತೆಲಿ ಮಡುಗೆಕಾವ್ತು. .

“ಎಂತ ಮಾತಾಡ್ತಿಲ್ಲೆ? ಪೈಸೆ ಬೇಡ ಹೇಳುವ ಜೆನವ ಸುರೂ ನೋಡುದಾನು” ಪಂಕಜ ಮತ್ತೂದೆ ಹೇಳಿಯಪ್ಪಗ ಸುಶೀಲ ಇಪ್ಪ ವಿಶಯವ ಎಲ್ಲ ಅವರತ್ರೆ ಹೇಳಿತ್ತು.
ಅಂಬಗ ಅವ್ವೇ ಅದಕ್ಕೊಂದು ಪರಿಹಾರ ಹೇಳಿದವು
“ನೀನು ಆ ಪೈಸೆಯನ್ನು ಇಲ್ಲಿ ತಂದು ಕೊಡು. ಆನು ಇವರತ್ರೆ ಅದರ ಬ್ಯಾಂಕಿಲ್ಲಿ ಹಾಕಲೆ ಹೇಳ್ತೆ. ಹಾಂಗಾದರೆ ಮತ್ತೆ ಆರ ಹೆದರಿಕೆಯೂ ಇಲ್ಲೆ. ಇಲ್ಲಿಂದ ಕೊಡುವ ಪೈಸೆಯೂ ತಿಂಗಳು ತಿಂಗಳು ಅದರೊಟ್ಟಿಂಗೆ ಹಾಕಿ ಬಿಟ್ರಾತನ್ನೇ. ಅದೇ ಸುಲಭ” ಪಂಕಜನ ಮಾತು ಕೇಳಿ ಸುಶೀಲಂಗೆ ಸಮದಾನ ಆತು.
ಈ ವಿಷಯ ಪೂರ್ಣಿಗೆ ಗೊಂತಿಲ್ಲೆ. ನಾರಾಯಣ್ ಎರಡು ದಿನಕ್ಕೆ ಮಗನ ಮನಗೆ ಹೋಗಿತ್ತಿದ್ದವು. ಪಂಕಜ ಕೂಡ ಅವರೊಟ್ಟಿಂಗೆ ಹೋಪ ಜೆನವೇ. ಆದರೆ ಅವಕ್ಕೆ ಎರಡು ದಿನಂದ ಜೋರು ಬಚ್ಚುತ್ತು ಹೇಳಿದ ಕಾರಣ ಸೊಸೆ ಪೂರ್ಣಿ ಹೋಪಲೆ ಬಿಟ್ಟಿದಿಲ್ಲೆ
” ಈ ಸರ್ತಿ ಇಷ್ಟು ಬಚ್ಚುಗ ಹೋಪದು ಬೇಡ ಅತ್ತೇ. ನಾವೊಂದರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡ್ಸಿಕ್ಕಿ ಬಪ್ಪೋ°”
“ಅವರೊಟ್ಟಿಂಗೆ ಹೋಪದು ಬೇಡ ಹೇಳ್ತರೆ ಹೋವ್ತಿಲ್ಲೆ. ಹಾಂಗೆ ಹೇಳಿ ಈ ಸಣ್ಣ ಸಣ್ಣ ಬಚ್ಚುದಕ್ಕೆಲ್ಲ ಡಾಕ್ಟರ ಹತ್ರಂಗೆ ಹೋಯೆಕೂಳಿಲ್ಲೆ. ನಿಂಗೊಗೆ ಡಾಕ್ಟರಕ್ಕೊಗೆ ರಜ ಹೆಚ್ಚು ಹೊತ್ತು ಕೂದರೂ,ನಿಂದರೂ, ಒರಗಿರೂ ಎಂತಾರು ರೋಗವೋ ಹೇಳಿಯೇ ಹೆದರಿಕೆ ಅಪ್ಪದು” ಹೇಳಿ ನೆಗೆ ಮಾಡಿದ ಕಾರಣ ಪೂರ್ಣಿಯೂ ಅದರ ಹೆಚ್ಚು ಗುಮಾನ ಮಾಡಿದ್ದಿಲ್ಲೆ.

“ನಿಂಗೊ ಮಗನಲ್ಲಿಗೆ ಹೋದರೆ ಈ ಸರ್ತಿ ಎನಗೆ ಉದಾಸೀನ ಆಗ. ಸುಶೀಲನೂ ಮಗಳೂ ಇದ್ದ ಕಾರಣ ಹೊತ್ತು ಹೋಪದೇ ಗೊಂತಾವ್ತಿಲ್ಲೆ. ನಮ್ಮ ಪುಳ್ಳಿಯಕ್ಕಳ ಕಾಂಬಲೆ ಅವಕ್ಕೆ ರಜೆ ಸಿಕ್ಕುವನ್ನಾರ ಕಾಯೆಕಷ್ಟೆ. ಬೋರ್ಡಿಂಗ್ ಶಾಲಗೆ ಹಾಕಿರೆ ಇದೇ ಬಂಙ‌….”

ಯೇವಗಲೂ ಒಟ್ಟಿಂಗೆ ಬಪ್ಪ ಹೆಂಡತಿ ಬಾರದ್ದಿಪ್ಪಗ ನಾರಾಯಣ್ ಗೆ ಹೋಪಲೆ ಮನಸ್ಸಿಲ್ಲದ್ರೂ ಮಗನ ಯಾವುದೋ ವಿಷಯಕ್ಕೆ ಅರ್ಜೆಂಟಾಗಿ ಕಾಂಬಲಿದ್ದ ಕಾರಣ ಹೋಯೆಕಾಗಿ ಬಂತು.

ಪೈಸೆಯ ವಿಶಯ ಮಾತಾಡಿದ ಮರದಿನವೇ ಸುಶೀಲ ಮನೆಲಿ ಕಟ್ಟಿ ಮಡುಗಿದ ಪೈಸೆಯ ಜಾಗ್ರತೆಲಿ ತಂದು ಪಂಕಜನ ಕೈಲಿ ಕೊಟ್ಟತ್ತು. ಅವು ಅದರ ಎಣುಸಿ ನೋಡಿದವು

“ಇದರಲ್ಲಿ ನಾಲ್ಕು ಸಾವಿರದ ಏಳುನೂರು ಇದ್ದು. ಮುನ್ನೂರು ಸೇರ್ಸಿ ಭರ್ತಿ ಮಾಡಿ ಬೇಂಕಿಂಗೆ ಕಟ್ಲೆ ಹೇಳ್ತೆ”
“ನಿಂಗೊಗೆ ಗೊಂತಿದ್ದ ಹಾಂಗೆ ಮಾಡಿ ಅಮ್ಮಾ..ಎನಗೆ ಬೇಂಕಿನ ವಿಶಯ ಎಂತದೂ ಗೊಂತಿಲ್ಲೆ” ಹೇಳಿತ್ತು ಸುಶೀಲ°.
“ಎನ್ನ ಕೈಗೆ ಪೈಸೆ ಕೊಟ್ಟ ಮತ್ತೆ ಅದರ ಪೂರ್ತಿ ಜವಾಬ್ದಾರಿ ಎನ್ನದು. ಇವರತ್ರೆ ಮಾತಾಡಿಕ್ಕಿ ಎಲ್ಲ ವ್ಯವಸ್ಥೆ ಮಾಡ್ತೆ. ನೀನೆಂತ ಹೆದರೆಡ” ಹೇಳಿ ಸುಶೀಲನ ಬೆನ್ನು ತಟ್ಟಿ ಧೈರ್ಯ ತುಂಬಿದವು.
ಅಂದು ಪೂರ್ಣಿಗೆ ಆಸ್ಪತ್ರೆಲಿ ಎಂತೋ ಮೀಟಿಂಗ್ ಇದ್ದು ಹೇಳಿ ಅದು ಉಂಬಲೆ ಬಯಿಂದಿಲ್ಲೆ. ಹಾಂಗಾಗಿ ಸುಶೀಲನೂ ಮಗಳೂ ಸುಮಾರು ಹೊತ್ತು ಅಲ್ಲೇ ಇತ್ತಿದ್ದವು.
ಅಂಬಗ ಅಲ್ಲಿಗೆ ಬಳೆ ಮಾರಿಂಡು ಬಂದ ಅಜ್ಜಿ ಕೈಂದ ಸುಶೀಲನ ಎರಡೂ ಕೈ ತುಂಬಾ ಬಳೆ ಹಾಕ್ಸಿದವು ಪಂಕಜ.
ಒಪ್ಪಕ್ಕನ ಪುಟ್ಟು ಕೈಗೂ ಬಣ್ಣದ ಬಳೆ ಹಾಕ್ಸಿ ನೋಡಿ ಸಂತೋಷ ಪಟ್ಟವು.
“ಬಳೆ, ಹೂಗು ಎಲ್ಲ ಯೇವಗಲೂ ಬೇಕು. ಅದು ಹೆಮ್ಮಕ್ಕಳ ಲಕ್ಷಣ” ಹೇಳಿಂಡು ಅವರ ಮನೆಲೇ ಇಪ್ಪ ಹಬ್ಬಲ್ಲಿಗೆ ಹೂಗಿನ ಕೊಯಿದು ಮಾಲೆ ಕಟ್ಟಿ ಅವ್ವೇ ಸುಶೀಲನ ತಲಗೆ ಸೂಡ್ಸಿದ್ದು.
ಹಬ್ಬಲ್ಲಿಗೆ ಇಷ್ಟ ಇಲ್ಲದ್ರೂ ಪಂಕಜ ಸೂಡ್ಸಿದ ಕಾರಣ ಸುಶೀಲ ಎಂತದೂ ಹೇಳಿದ್ದಿಲ್ಲೆ.
ಅವರ ಹಳೇ ಕತೆಗಳ ಎಲ್ಲ ಸುಶೀಲನತ್ರೆ ಹೇಳಿ, ಅಂದು ವಿಶೇಷವಾಗಿ ಸೀವು ಮಾಡಿ ಒಪ್ಪಕ್ಕಂಗೆ ಅವ್ವೇ ಕೊಟ್ಟಿದವು.
“ಎನ್ನ ಪುಳ್ಳಿಯಕ್ಕೊಗೆಲ್ಲ ಹೀಂಗೆ ಬಾಯಿಗೆ ಕೊಟ್ಟ ನೆಂಪೇ ಇಲ್ಲೆನಗೆ. ಈಗ ಒಪ್ಪಕ್ಕನೇ ಎನ್ನ ಪುಳ್ಳಿಯಕ್ಕಳಿಂದಲೂ ಹೆಚ್ಚು ಕೊಂಗಾಟ ಮಾಡ್ಲೆ ಸಿಕ್ಕಿದ್ದದು..ನಮ್ಮದೆಲ್ಲ ಯೇವ ಜನ್ಮದ ಋಣಾನುಬಂಧವೋ ಏನೋ….”
“ಸುಮಾರು ಹೊತ್ತಾತಕ್ಕಾ.. ಆನು ಹೆರಡ್ತೆ. ಇಲ್ಲದ್ರೆ ಆ ದಿನೇಸನಾ, ತಂಗಮ್ಮನ ಈ ಮನೆ ಹುಡ್ಕಿಂಡು ಬಂದು ಗಲಾಟೆ ಮಾಡಿರೆ ನಿಂಗೊಗೆ ಕಷ್ಟ” ಹೇಳಿಂಡು ಒಪ್ಪಕ್ಕನ ತೆಚ್ಚಿಂಡು ಹೆರಟತ್ತು.
“ಇದಾ..ಐವತ್ತು ರುಪಾಯಿ ನಿನ್ನ ಕೈಲಿ ಇರ್ಲಿ. ಫಕ್ಕನೆ ಅಗತ್ಯ ಬಂದರೆ ಆರತ್ರೆ ಕೇಳ್ತೆ ನೀನು ” ಹೇಳಿಂಡು ಸುಶೀಲನ ಕೈಗೆ ಪೈಸೆ ಕೊಟ್ಟಿಕ್ಕಿ, ಮತ್ತೊಂದರಿ ಒಪ್ಪಕ್ಕನ ಕೊಂಗಾಟ ಮಾಡಿಕ್ಕಿ ಬಿಟ್ಟದವು.
“ಪೂರ್ಣಿ ಅಕ್ಕ ಬಪ್ಪನ್ನಾರ ಒಬ್ಬನೇ ಕೂಬಲೆ ಹೆದರಿಕೆ ಆಗನ್ನೇ” ಹೇಳಿ ಸುಶೀಲ ಕೇಳಿಯಪ್ಪಗ ನೆಗೆ ಮಾಡಿಂಡೇ
“ಎಲ್ಲರೂ ಒಬ್ಬೊಬ್ಬನೇ ಇಪ್ಪದು. ಇನ್ನೊಬ್ಬ ಇದ್ದವು ಹೇಳುದು ನಮ್ಮ ಮನಸಿಂಗೆ ನಾವೇ ಕೊಡುವ ಒಂದು ಧೈರ್ಯ ಅಷ್ಟೇ. ಎನಗೆ ಎಂತ ಹೆದರಿಕೆಯೂ ಇಲ್ಲೆ” ಹೇಳಿ ಕೈ ಬೀಸಿ ಕಳ್ಸಿತ್ತಿದ್ದವು.
ಸುಶೀಲ ಅದೇ ಕೊಶೀಲಿ ಮನಗೆ ಬಂದು ಮಗಳೊಟ್ಟಿಂಗೆ ಆಡಿಂಡಿಪ್ಪಗಳೇ ದಿನೇಸ ಬಂದದು..

ಆಲೋಚನೆಯ ಸುಳಿಂದ ಸುಶೀಲ ಹೆರ ಬಪ್ಪಗ ದಿನೇಸ ಇತ್ತಿದ್ದಿಲ್ಲೆ. ಒಪ್ಪಕ್ಕ ಮಾತ್ರ ಆಚಮನೆಂದ ಓಡಿಂಡು ಬಂದು “ಅಬ್ಬೇ..” ಹೇಳಿ ಕೊರಳು ಅಪ್ಪಿತ್ತು.
ಆ ಕ್ಷಣಲ್ಲಿ ಸುಶೀಲ ಮೈ ಮನಸ್ಸಿನ ಬೇನೆ ಮರದು ಎದ್ದು ನಿಂದತ್ತು.
ಮಗಳಿಂಗೆ ಹಶು ಆವ್ತಾದಿಕ್ಕು. ಇಂದು ಪಂಕಜನ ಮನಗೆ ಬೇಗ ಹೋಯೆಕು. ನಾರಾಯಣ್ ಎರಡು ದಿನ ಕಳುದು ಬಪ್ಪದು ಹೇಳಿಂಡಿತ್ತವು. ಅವರ ಮಗ ದೊಡ್ಡ ಆಸ್ಪತ್ರೆ ತೆಗೆತ್ತವಾಡ. ಅವನ ಫ್ರೆಂಡ್ ಕಟ್ಸಿದ ಆಸ್ಪತ್ರೆ ಆಡ. ಆ ಫ್ರೆಂಡ್ ಅಮೇರಿಕಾಕ್ಕೆ ಹೋಪ ಕಾರಣ ಆರಿಂಗಾರು ಮಾರುವ ಅಂದಾಜಿಲ್ಲಿ ಇಪ್ಪಗ, ಆಪರೇಷನ್ ಮಾಡ್ಲೆ ಎಲ್ಲ ಹೊಸ ಹೊಸ ನಮೂನೆಯ ಸೌಕರ್ಯ ಇಪ್ಪ ಆ ಆಸ್ಪತ್ರೆಯ ನಾರಾಯಣ್ ಅವರ ಮಗಂಗೇ ತೆಗವಲಕ್ಕು ಹೇಳಿ ಆಗಿ , ಅದಕ್ಕೆ ಪೈಸೆ ವ್ಯವಹಾರ ಎಂತೋ ಆಯೆಕೂಳಿ ಅಪ್ಪನ ಬಪ್ಪಲೆ ಹೇಳಿದ್ದದು’ ಹೇಳಿ ಪಂಕಜ ಹೇಳಿತ್ತಿದ್ದವು.

ತಂಗಮ್ಮ ಎಲೆ ತಿಂದು ಬಾಯಿ ಕೆಂಪು ಮಾಡಿ ನೆಗೆ ಮಾಡಿಂಡು ಮನೆಯೊಳಾಂಗೆ ಬಪ್ಪಗ ಸುಶೀಲಂಗೆ ಹೆರಟಾಗಿದ್ದತ್ತು.
“ದಿನಾಗಳು ಸವಾರಿ ಹೋಪದೆಲ್ಲಿಗೋ ಮಹಾರಾಣಿಯದ್ದು?” ತಂಗಮ್ಮ ಅಷ್ಟು ಕೇಳಿಯಪ್ಪಗ ಸುಶೀಲಂಗೆ ಎಲ್ಲಿಲ್ಲದ್ದ ಕೋಪ ಬಂದು ಮಾತಾಡಿಂಡು ಹತ್ತರೆ ಬಂದ ಅದರ ದೂಡಿ ಹಾಕಿಕ್ಕಿ, ತಿರುಗಿ ನೋಡದ್ದೆ ಮಗಳನ್ನು ತೆಚ್ಚಿಂಡು ಹೆಚ್ಚು ಕಮ್ಮಿ ಓಡಿದ ಹಾಂಗೆ ಮಾಡಿಂಡು ಪಂಕಜನ ಮನಗೆ ಹೋದ್ದದು…..

ಆದರೆ…….!!!!!
ಅಲ್ಲಿ ಒಳಾಂಗೆ ಹೋಪಲೆಡಿಯದ್ದಷ್ಟು ಜನರ ಕಂಡಪ್ಪಗ ‘ಎಂತಾತಪ್ಪಾ’ ಳಿ ರಜ ಹೆದರಿಕೆ, ರಜ ಆಶ್ಚರ್ಯಲ್ಲಿ ಒಳ ಹೋದ ಸುಶೀಲಂಗೆ ಕಂಡದು ಅಲ್ಲಿ ತೆಂಕ ಹೊಡೆಂಗೆ ತಲೆ ಹಾಕಿ ಮನುಶಿ ,ಮೈಗೆ ಬೆಳಿ ವಸ್ತ್ರ ಹೊದೆಶಿ ಮನುಶಿದ ಪಂಕಜನ. ತಲೆ ಮೇಲ್ಕಟೆ ತೆಂಗಿನಕಾಯಿ ಗಡಿಲಿ ತುಪ್ಪ ಹಾಕಿ ಹೊತ್ಸಿದ ದೀಪವನ್ನೂ ಕಾಂಬಗ ಸುಶೀಯ ಮೈಲಿಪ್ಪ ಶಕ್ತಿ ಎಲ್ಲ ಕರಗಿ ಹೋದಾಂಗಾಗಿ ಕಣ್ಣು ಕಸ್ತಲೆ ಬಂದು ಕೆಳಾಂಗೆ ಉರುಳಿತ್ತದು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

5 thoughts on “ಸ್ವಯಂವರ : ಕಾದಂಬರಿ : ಭಾಗ 36 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಚೆ. ಬೆಳ್ಳಲ್ಲಿ ಸಿಕ್ಕಿ ಕೊಚ್ಚಿ ಹೋಪಗ ತಾಂಗಲೆ ಸಿಕ್ಕಿದ ಒಂದು ಮರದ ದಿಮ್ಮಿಯೂದೆ ಪ್ರವಾಹಕ್ಕೆ ಸಿಕ್ಕಿ ತೇತೊಂಡು ಹೋದ ಹಾಂಗಾತಾನೆ, ಪಂಕಜ್ಜಕ್ಕನ ಮರಣ. ಸುಶೀಲನ ಪೈಸೆಯುದೆ ಹೋತು ಬೆಳ್ಳಕ್ಕೆ.

  2. ದೇವರು ಬಂದ ಹಾಂಗೆ ಸುಶಿ ಜೀವನಲ್ಲಿ ಪಂಕಜ ಬಂದದು..ಅದು ಇದರ ವಿಧಿಗೆ ಇಷ್ಟ ಆಯ್ದಿಲ್ಲೆ ಕಾಂತು… ಇನ್ನೆಂತ ಮಾಡುಗು ಸುಶಿ..ಅದೊಂದು ದಿನೇಶ..ಇದು ಒಳ್ಳೆದಪ್ಪಡು ಕಾಂಬಾಗ ಹೊಟ್ಟೆ ಉರಿತ್ತು ಅದಕ್ಕೆ… ಛೆ ಸುಷಿಗೆ ಎಂತಕೆ ಕಷ್ಟ…ಪೈಸೆ ಎಂತ ಆವುತ್ತೋ..ಎಂತಾರು ದೇವರ ಅನುಗ್ರಹ ಸುಷಿ ಮೇಲೆ ಇರಲಿ…ಒಳ್ಳೆ ತಿರುವು ಕೊಡಿ… ಭಾರಿ ಲಾಯ್ಕಲ್ಲಿ ಬರದ್ದೆ…ನೋವು ನಲಿವುಗಳ ಮಿಶ್ರಣ. ..ಸುಷಿ ದೂಡಿ ಹಾಕಿದ ತಂಗಮ್ಮ ಎಂತಾದರು ತೊಂದರೆ ಇಲ್ಲೆ ಕಾಂತು…ಸುಷಿಗೆ ಒಳ್ಳೆ ದಾರಿ ತೋರ್ಸಿ..

  3. ಪಾಪಿ ಹೋದಲ್ಲಿ ಮೊಣಕಾಲು ನೀರು ಹೇಳಿ ಆತನ್ನೇ.ಸುಶೀಲಂಗೆ ರಜಾ ಒಳ್ಳೇದಾವುತ್ತಾ ಹೇಳಿ ಗ್ರೇಶುವಾಗ ಅಜ್ಜಿಯೇ ತೀರಿ ಹೋದವನ್ನೇ.ಅದು ಪಂಕಜಮ್ಮನತ್ರೆ ಪೈಸೆ ಕೊಟ್ಟದೂ ಕಳೆದುಹೋಕ್ಕಾಳಿ ಕಾಣ್ತು.ಅಂತೂ ಎಂತಾ ಗ್ರಾಚಾರ ಸುಶೀಲಂಗೆ.

  4. Ondu henninge manasiladre adara muttuvava gandase alla enna prakaara.. adu hendatiye agali… Adara kasta sukha ke agadda praani, iddaru onde sattaru onde.. ee kshanalli adake vaidhavya barali heli bayasude utthama.. onti adaru nemmadi kanali aa hennu jeeva..adbhuta baraha chikki..

  5. Raktha sambanda alladru ammana hange preethi torsiyondidda pankaja hoda mate susheela na bhavishyada adipaayave biddattu.. innu munde ellavu olle dinangale bhaavisidda sushee inenta maadugu?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×