Oppanna.com

ಸ್ವಯಂವರ : ಕಾದಂಬರಿ : ಭಾಗ 38 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   24/02/2020    3 ಒಪ್ಪಂಗೊ

ಸ್ವಯಂವರ 38

“ಇಲ್ಲಿ ನಿಂಗೊಗೆ ವಿಶೇಷ ಉಪಚಾರ ಸಿಕ್ಕಲೆ ಕಾರಣ ಎಂತಾಳಿ ಈಗ ಗೊಂತಾತು. ಎಷ್ಟು ಬಂಙ ಬಂದರೂ ನಿಂಗೊ ಎಲ್ಯೋ ರಜ ಪುಣ್ಯ ಮಾಡಿದ್ದಿ. ಇಲ್ಲದ್ರೆ ನಿಂಗಳ ಸ್ಥಿತಿಲಿ, ಒಟ್ಟಿಂಗೆ ಆರೂ ಇಲ್ಲದ್ದೆ ಬಂದವರ ಆಸ್ಪತ್ರೆಯವು ಅಡ್ಮಿಟ್ ಮಾಡುಗಾ?” ಇಷ್ಟರವರೆಗೆ ಸುಶೀಲನ ಕತೆ ಕೇಳಿಂಡು ತಳಿಯದ್ದೆ ಕೂದ ನರ್ಸ್ ಪ್ರಮೀಳಾ ಹೇಳಿತ್ತು.

“ಎಂತ ಪುಣ್ಯವೋ..ಆ ದೇವರಿಂಗೇ ಗೊಂತು. ಒಂದು ಮಗಳ ಸಾಂಕುದು ಹೇಂಗೇಳಿ ತಲೆಬೆಶಿ ಮಾಡಿಂಡಿತ್ತಿದ್ದೆ. ಈಗ ಅದರೊಟ್ಟಿಂಗೆ ಇದರನ್ನೂ ನೋಡೆಕು.. ‌..” ಸುಶೀಲ ಹಾಂಗೆ ಹೇಳಿಂಡು ಕೂಗಿತ್ತು.

“ಎಷ್ಟು ಸಮಯಂದ ಹೀಂಗೇ ಕಣ್ಣನೀರು ಹಾಕುತ್ತಿ. ಸಾಕು ಕೂಗಿದ್ದು, ಈ ಮಗ ಹುಟ್ಟಿಯಪ್ಪಗ ನಿಂಗಳ ದೆಸೆ ಬದಲಿತ್ತು ಹೇಳಿ ಸಮದಾನ ಪಟ್ಟು ಕೊಳ್ಳಿ. ಡಾಕ್ಟರ್ ಸುಲೋಚನ ನಿಂಗಳ ಬಗ್ಗೆ ಹೆಚ್ಚು ಗಮನ ಕೊಡೆಕು ಹೇಳಿದ್ದವು. ಅವು ಪೂರ್ಣಿ ಡಾಕ್ಟರ ಅತ್ತಿಗೆ. ಅವರ ಗಂಡ ಪ್ರದೀಪ್ ದೆ ಇಲ್ಲಿಯೇ ಡಾಕ್ಟರ್ ಆಗಿದ್ದವು. ಅವ್ವೇ ನಿಂಗಳ ಹೆರಿಗೆ ಮಾಡ್ಸಿದ್ದಾಡ. ಅಮೇರಿಕಾಲ್ಲಿ ಹತ್ತು ವರ್ಷ ಕೆಲಸ ಮಾಡಿಕ್ಕಿ ಇಲ್ಲಿಗೆ ಬಂದವು. ಅವರ ಬೇರೆ ಬೇರೆ ಆಸ್ಪತ್ರೆಗೆ ದಿನಿಗೇಳ್ತವು. ಇಂದು ಅವು ಇಲ್ಲಿ ಇದ್ದದು ನಿಂಗಳ ಪುಣ್ಯ ಹೇಳುದಾನು”

ಸುಶೀಲಂಗೆ ಪ್ರಮೀಳನ ಮಾತಿಂದ ಸಮದಾನ ಆಯಿದಿಲ್ಲೆ. ಅದರ ತಲೆಲಿ ಪೂರಾ ಅಣ್ಣ, ಅಕ್ಕ,ಅಪ್ಪ ಅಬ್ಬೆ ತುಂಬಿಕೊಂಡಿತ್ತಿದ್ದವು. ಅಣ್ಣನ ಕಂಡ ಹಾಂಗಾದ್ದು, ಅಕ್ಕನ ಮಾತು ಕೇಳಿದಾಂಗಾದ್ದು ಎಲ್ಲ ಸತ್ಯವಾ…..! ಇದೀಗ ಯೇವ ಜಾಗೆ! ಒಪ್ಪಕ್ಕ ಆರೊಟ್ಟಿಂಗೆ ಇದ್ದೋ ಗೊಂತಿಲ್ಲೆ…….!!

“ನಿಂಗೊ ರಜಾ ನೀರು ಕುಡಿಯಿರಿ, ಮಾತಾಡಿ ಬಚ್ಚಿತ್ತಾದಿಕ್ಕು” ಪ್ರಮೀಳಾ ಅರ್ಧ ಗ್ಲಾಸು ನೀರು ತಂದು ಸುಶೀಲನ ಬಾಯಿಗೆ ಕೊಟ್ಟತ್ತು. ಒಂದು ಕೈಲಿ ವಯರು ಸಿಕ್ಸಿಂಡಿದ್ದ ಕಾರಣ ಅದು ಏಳುವ ಪ್ರಯತ್ನ ಮಾಡದ್ದೆ ಅಂತೇ ಬಾಯೊಡದತ್ತು. ಕಣ್ಣೀರು ಮಾತ್ರ ದಿಳಿದಿಳಿನೆ ಇಳ್ಕೊಂಡೇ ಇದ್ದತ್ತು.
“ಸಾಕು ಕೂಗಿದ್ದು. ಹುಟ್ಟಿಸಿದ ದೇವರು ಬದ್ಕುಲೆ ಒಂದು ದಾರಿ ತೋರ್ಸುತ್ತ°. ದುಃಖಿಸಿ ಎಂತ ಪ್ರಯೋಜನ ಇಲ್ಲೆ” ಪ್ರಮೀಳ ಸುಶೀಲನ ಕಣ್ಣೀರು ಉದ್ದಿತ್ತು
“ನಿಂಗಳ ಆರೋಗ್ಯ ಇನ್ನೂ ಸರಿಯಾಯಿದಿಲ್ಲೆ. ನಾಲ್ಕೈದು ದಿನ ಆದರೂ ನಿಂಗೊ ಇಲ್ಲಿಯೇ ಇರೆಕಕ್ಕು. ಬೇಗ ಗುಣಾದರೆ ಬೇಗ ಮನಗೆ ಹೋಪಲೆಡಿಗಷ್ಟೆ”.
ಅದು ‘ಮನೆಗೆ ಹೋಪಲಕ್ಕು’ ಹೇಳುದು ಕೇಳಿಯಪ್ಪಗ ಸುಶೀಲಂಗೆ ಒಂದು ಥರಾ ಆತು. ಕೈ ಕಾಲಿನ ಬಲವೇ ಹೋದಾಂಗಾಗಿ, ಮೋರೆ ರಜಾ ಓರೆ ಮಾಡಿ ರಜಾ ವಿಚಿತ್ರ ರೀತಿಲಿ ಹೇಂಗೆಂಗೋ ಮಾಡುವ ಅದರ ಕಂಡಪ್ಪಗ ಪ್ರಮೀಳಂಗೆ ಹೆದರಿಕೆ ಆತು. ಅದು ಅಂಬಗಳೇ ಮತ್ತೊಂದು ನರ್ಸ್ ನ ದಿನಿಗೇಳಿ ಡಾಕ್ಟರನ ಬಪ್ಪಲೆ ಹೇಳಿತ್ತು.
ಅಷ್ಟಪ್ಪಗ ಉದಿಯಾದ ಕಾರಣ ಡಾಕ್ಟರ್ ಸುಲೋಚನನೇ ಬೇಗ ಬಂದವು. ಪೂರ್ಣಿಗೆ ಬೇಕಾಗಿ ಅವಕ್ಕೆ ಸುಶೀಲನ ಹೆಚ್ಚು ಜಾಗ್ರತೆ ಮಾಡ್ಲೇ ಬೇಕಾಯಿದು.
ಡಾಕ್ಟರ್ ಬಂದು ಪರೀಕ್ಷೆ ಮಾಡಿಕ್ಕಿ ಅದರ ಒಂದರಿ ನರರೋಗ ತಜ್ಞನ ಹತ್ತರಂಗೆ ಕರಕ್ಕೊಂಡು ಹೋಪಲೆ ಹೇಳಿಕ್ಕಿ, ಒಂದೆರಡು ಇಂಜೆಕ್ಷನ್ ದೆ ಕೊಟ್ಟಿಕ್ಕಿ ಹೋದವು.

ಪ್ರಮೀಳ ಅದರ ಡ್ಯೂಟಿ ಮುಗಿವಲಪ್ಪಗ ಒಂದರಿ ಸುಶೀಲಂಗೆ ಮಗನ ತಂದು ಕೊಟ್ಟತ್ತು. ಡಾಕ್ಟರ್ ಕೊಟ್ಟ ಇಂಜೆಕ್ಷನಿನ ಪವರಿಂದಾಗಿ ಅದಕ್ಕೆ ಭಾರೀ ನಿತ್ರಾಣವೂ ಆಗಿಂಡಿದ್ದತ್ತು. ಸುಮ್ಮನೇ ಹಾಲು ಕೊಟ್ಟಿಕ್ಕಿ ಕಣ್ಣು ಮುಚ್ಚಿ ಮನುಗಿತ್ತು.
“ಎನ್ನ ಕೆಲಸದ ಹೊತ್ತು ಮುಗುದತ್ತು. ಇನ್ನು ಇರುಳು ಬಪ್ಪದಾನು‌ . ಅಷ್ಟಪ್ಪಗ ಬಂದು ಮಾತಾಡ್ಸುತ್ತೆ. ನಿಂಗಳ ಆರೋಗ್ಯದ ಕಡೆಂಗೆ ಗಮನ ಕೊಡಿ. ಹತ್ತು ಗಂಟಗೆ ನಿಂಗಳ ಬೇರೆ ಡಾಕ್ಟರ ಬಂದು ಪರೀಕ್ಷೆ ಮಾಡುಗು. ಆನು ಹೆರಡ್ತೆ.ನಿಂಗಳ ಮಗಳು ಎಂತ ಮಾಡ್ತೂಳಿ ಆನು ನೋಡಿಕ್ಕಿ ಹೋವ್ತೆ. ಹೆದರೆಡಿ” ಹೇಳಿಕ್ಕಿ ಹೋಪಗ ಕೂಡ ಸುಶೀಲ ಹೆಚ್ಚು ಮಾತಾಡಿದ್ದಿಲ್ಲೆ. ಕಣ್ಣೊಡದು ನೋಡುವಷ್ಟು ತ್ರಾಣ ಇದ್ದತ್ತಿಲ್ಲೆ ಅದಕ್ಕೆ.

ಮತ್ತೆ ಅದಕ್ಕೆ ಎಚ್ಚರಿಕೆ ಅಪ್ಪಗ ಬೇರೆಲ್ಲೋ ಮನುಗಿಂಡಿದ್ದತ್ತು. ಕೈಲಿಪ್ಪ ವಯರು ಇನ್ನೂ ಹಾಂಗೇ ಇದ್ದ ಕಾರಣ ಕೈ ಹನ್ಸುಲೆ ಎಡಿಯದ್ದೆ ಅಂತೇ ತಲೆ ತಿರುಗಿಸಿ ಅತ್ಲಾಗಿತ್ಲಾಗಿ ನೋಡಿತ್ತು. ಹತ್ತರೆ ನಿಂದುಕೊಂಡಿಪ್ಪ ನರ್ಸು ಬಂದು ” ಎಂತಾವ್ತು ” ಕೇಳಿರೂ ಮಾತಾಡಿದ್ದಿಲ್ಲೆ.

“ನಿಂಗೊಗೆ ಎಚ್ಚರಿಕೆ ಅಪ್ಪಗ ಹೇಳೆಕು ಹೇಳಿದ್ದವು ಡಾಕ್ಟರ್. ಈಗ ಎಂತಾವ್ತು?” ಈ ನರ್ಸುದೆ ಕೊಂಗಾಟಲ್ಲಿಯೇ ಕೇಳಿದ್ದದು.
ಇವರ ಮಾತುಗೊ ಎಷ್ಟು ಚಂದ.. ಕೇಳುಗಳೇ ಮನಸಿಂಗೆ ತಂಪಾವ್ತು. ನರ್ಸಿಂಗ್ ಕಲಿವಗಳೇ ಇವರ ಹೃದಯಲ್ಲಿ ಪ್ರೀತಿಯ ಹೂಗಿನ ಬಿತ್ತು ಹಾಕುತ್ತವಾದಿಕ್ಕು. ಕಲ್ತಪ್ಪಗ ಅದು ಸೆಸಿಯಾಗಿ ,ಹೂಗರಳಿ ಆಸ್ಪತ್ರೆಲಿಪ್ಪ ರೋಗಿಗಳ ಮನಸಿಂಗೂ ಆ ಹೂಗಿನ ಪರಿಮ್ಮಳ ಬಪ್ಪದು.

“ಎನ್ನ ಮಗಳೆಲ್ಲಿದ್ದೂ….” ಸುಶೀಲಂಗೆ ಈಗಳೂ ಮಗಳದ್ದೇ ಆಲೋಚನೆ. ಅದೆಲ್ಲಿಕ್ಕು. ಎಂತ ಮಾಡ್ತಾದಿಕ್ಕು? ಎಂಥಾ ಅವಸ್ಥೆ ಆತು ಎಂಗಳದ್ದು. ಗತಿಗೋತ್ರ ಇಲ್ಲದ್ದವರ ಹಾಂಗೆ ಹೀಂಗೆ ಒಬ್ಬನೇ ಇಲ್ಲಿ ಮನುಗೆಕಾದ ಸ್ಥಿತಿ.

“ಮಗಳ ವಿಶಯಲ್ಲಿ ಎಂತ ಬೇಜಾರ ಮಾಡೆಡಿ. ಅದು ಮೇಗೆ ಇದ್ದು. ಅದಕ್ಕೆ ಊಟ,ತಿಂಡಿ ಕೊಡ್ಲೆ ಪ್ರಮೀಳಕ್ಕ ಹೇಳಿದ್ದವು. ನಿನ್ನೆ ಆನು ನಿಂಗೊ ಇದ್ದಲ್ಲೇ ಇದ್ದದು”

“ಅಂಬಗ ಆನು ಈಗ ಇಪ್ಪದೆಲ್ಲಿ? ಇದು ಹೆರಿಗೆ ವಾರ್ಡ್ ಅಲ್ಲದಾ?” ಸುಶೀಲಂಗೆ ಈಗ ಸರಿಯಾಗಿ ಎಚ್ಚರಿಕೆ ಆತು.
“ಅಲ್ಲ.. ಈಗ ಡಾಕ್ಟರ್ ಸತೀಶ್ ಬತ್ತವು. ನಿಂಗಳ ಒಂದರಿ ಪರೀಕ್ಷೆ ಮಾಡೆಕಾಡ. ಮತ್ತೆ ಮಗನ ಹತ್ತರಂಗೆ ಹೋಪಲಕ್ಕು ‌”

‘ಎಷ್ಟು ಡಾಕ್ಟರಕ್ಕೊ ಎನ್ನ ಪರೀಕ್ಷೆ ಮಾಡುದು!! ಎಂತಾವ್ತೆನಗೆ. ಕೆಲವು ಸರ್ತಿ ತಲೆ ಹಾಳಾದಾಂಗಪ್ಪದು ಎಂತದರಿಂದಾಳಿ ಈಗ ಬಂದ ಡಾಕ್ಟರನ ಹತ್ತರೆ ಕೇಳೆಕು. ಡಾಕ್ಟರನತ್ರೆ ಕೇಳಿ ಎಂತ ಪ್ರಯೋಜನ? ಮದ್ದು ಬರದು ಕೊಟ್ಟರೆ ಅದರ ತೆಗವಲೆ ಪೈಸೆ ಎಲ್ಲಿದ್ದು!! ಈ ಮಕ್ಕಳನ್ನು ಕಟ್ಟಿಕೊಂಡು ಆನು ಹೋಪದಾದರೂ ಎಲ್ಲಿಗೆ!! ಆರಿದ್ದವು ಎನ್ನ ಕರಕ್ಕೊಂಡು ಹೋಪವು! ಯೇವದಾರು ಮನೆಲಿ ಕೆಲಸಕ್ಕೆ ನಿಂಬಲೆ ಸಾನೂ ಎಡಿಯ ಈಗ!! ….

“ಅಮ್ಮಾ…….” ಮೈ ಸರಿಯಾಗಿ ಹನ್ಸುಲೆಡಿಯದ್ದೆ ಕಾಲೆಲ್ಲ ಕೊಚ್ಚೆ ಕಟ್ಟಿದಾಂಗಪ್ಪಗ ಮೆಲ್ಲಂಗೆ ನರಳಿತ್ತು ಸುಶೀಲ.
‘ಅಬ್ಬೆ ,ಅಪ್ಪಾ…..ನಿಂಗೊಗೆ ಆನು ಕೊಟ್ಟ ದುಃಖಕ್ಕೆ ಸರಿಯಾದ ಶಿಕ್ಷೆಯನ್ನೇ ಅನುಭವಿಸುತ್ತಾಯಿದ್ದೆ..ಒಂದೇ ಒಂದರಿ ನಿಂಗಳ ಕಾಲು ಹಿಡುದು ಕ್ಷಮೆ ಕೇಳುವ ಅವಕಾಶ ಎನಗೆ ಸಿಕ್ಕುಗಾ…!! ಅಣ್ಣಾ…ನೀನು ಇದೇ ಆಸ್ಪತ್ರೆಲಿ ಇದ್ದೆಯಾ..ಆರೊಟ್ಟಿಂಗೆ ಬಂದದು ನೀನು…. ಒಂದರಿ ಎನ್ನ ಹತ್ತರೆ ಬಂದು ಮಾತಾಡ್ಸಲಾವ್ತಿತಿಲ್ಯಾ..! ಇನ್ನೆಂದೂ ಈ ತಂಗೆ ಬದುಕಿಲ್ಲಿ ತಪ್ಪು ಮಾಡ್ತಿಲ್ಲೆ ಅಣ್ಣಾ.. ಎನ್ನ ಕ್ಷಮಿಸೂ..’ ಮನಸಿಲ್ಲಿಯೇ ಹೀಂಗೆಲ್ಲ ಆಲೋಚನೆ ಮಾಡ್ತಾ ಮನುಗಿದ ಅದರ ಹತ್ರಂಗೆ ಡಾಕ್ಟರ್ ಬಂದವು. ಸುಶೀಲನ ಪರೀಕ್ಷೆ ಮಾಡ್ಲೆ ಡಾಕ್ಟರ್ ಅದರ ಕೈ ಹಿಡುದ್ದಷ್ಟೆ. ಅಷ್ಟಪ್ಪಗ ಅವು ಇಪ್ಪಲ್ಲಿಗೆ ಮತ್ತೊಂದು ರೋಗಿಯ ರಜ ಗಡಿಬಿಡಿಲಿ ನಾಲ್ಕೈದು ನರ್ಸುಗೊ ಕರಕ್ಕೊಂಡು ಬಂದವು. ಆ ರೋಗಿಯ ಸುಶೀಲನ ಹತ್ತರೆ ಇಪ್ಪ ಮತ್ತೊಂದು ಹಾಸಿಗೆಲಿ ಮನುಶಿಯಪ್ಪಗ ಡಾಕ್ಟರ ಸುಶೀಲನ ಬಿಟ್ಟು ಅವರ ಹೊಡೆಂಗೆ ತಿರುಗಿ ನಿಂದದಷ್ಟೆ.

“ಅಪ್ಪಾ…‌..ಎನ್ನಪ್ಪಾ……” ಹೇಳಿ ಇಡೀ ಆಸ್ಪತ್ರೆ ನಡುಗುವಷ್ಟು ದೊಡ್ಡಕೆ ಆರ್ಬಾಯಿ ಹಾಕಿಂಡು, ಕೈಲಿಪ್ಪ ವಯರಿನ ಎಲ್ಲ ಎಳದಿಡ್ಕಿ ಸುಶೀಲ ಮನುಗಿದಲ್ಲಿಂದ ಎದ್ದು ನಿಂದತ್ತು. ಎರಡು ಮೂರು ಜನ ನರ್ಸುಗೊ ಸೇರಿರೂ ಅದರ ಹಿಡುದು ನಿಲ್ಸುಲೆ ಎಡ್ತಿದಿಲ್ಲೆ. ನೆಲಕ್ಕಲ್ಲಿ ಬಿದ್ದು ಕೈ ಕಾಲು ಬಡುದು ವಿಕಾರವಾಗಿ ಮೋರೆ ಮಾಡುವ ಸುಶೀಲನ ಕಂಡ ಡಾಕ್ಟರಿಂಗೆ ಕೂಡ ಒಂದು ಕ್ಷಣ ಎಂತ ಮಾಡೆಕೂಳಿ ಅಂದಾಜಾಗದ್ದಾಂಗಾತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

3 thoughts on “ಸ್ವಯಂವರ : ಕಾದಂಬರಿ : ಭಾಗ 38 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಸುಶಿ ಅಪ್ಪ ಅಮ್ಮ ಎಲ್ಲರ ನೆನೆಸಿ ಕಣ್ಣೀರು ಹಾಕುವಾಗ ಓದುವವರ ಕಣ್ಣು ತುಂಬಿ ಬಪ್ಪ ಹಾಂಗೆ ಬರದ್ದೆ…ಅದರ ನೋಡುವ ವೈದ್ಯರು ದೇವರೇ…ಇವರ ನರ್ಸ್…. ಎಂಥ ಒಳ್ಳೆ ಸಹವಾಸ ಸಿಕ್ಕಿತ್ತು ಈಗ.. ಇನ್ನು ಮುಂದೆ ಅದರ ಜೀವನ ಸರಿ ಆದರೆ ಸಾಕು..ಸುಷಿಯ ಈ ಪರಿಸ್ಥಿತಿ ಲಿ ಅದರ ಅಪ್ಪನ ಯಾವ ರೀತಿಲಿ ಕಾಣೆಕ್ಕಾ ತು… ಛೆ.ಅಪ್ಪ ಮಗಳು ಸರಿಯಾದ ರೀತಿಲಿ ಒಂದಾದರೆ ಸಾಕು..ಅದರ ಮಕ್ಕಳ ಒಳ್ಳೆ ಪ್ರಜೆ ಮಾಡೆಕ್ಕರೆ ಅದಕ್ಕೆ ಆರದ್ದಾರು ಸಪೋರ್ಟ್ ಬೇಕು..ದೇವರಿದ್ದ..ಮುಂದಾಣ ಭಾಗಕ್ಕೆ ಕಾಯುವ…

  2. Eradu makkala nodigomba , kasta sahisuva shakti aa devaru susheelange kodali… Adu madida thappindaagi hetha makkala sariyagi nodigombale editto illeyo.. entade adaru vaidhyara devaringe holisudu summane alla… susheelana vishayli adarannu adara maguvina jeevavannu aa devare doctor mate nurse roopali bandu olishiddu.. paapa adara appana avaste innentado.. anaarogyavo illa magalu hoda dukhalli kusudu hoddo?!..

  3. ಅಯ್ಯೋ ಸುಶೀಲನ ಕತೆ ಓದುವಾಗ ಕಣ್ಣಿಲಿ ನೀರು ಬತ್ತು.ಇನ್ನಾದರೂ ಅದರ ಜೀವನ ಸರಿ ಆಗಲಿ ಹೇಳಿ ಆಶಿಸುತ್ತೆ…
    ಪ್ರಸನ್ನಕ್ಕಾ ಇದು ಕತೆ ಹೇಳಿ ಅನ್ಸುತ್ತೇ ಇಲ್ಲೆ.ಕಣ್ಣೆದುರೇ ಘಟನೆಗೊ ನಡೆದ ಹಾಂಗೆ ಆವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×