ಮೊಬೈಲು ಪುರಾಣ….
ಅಪ್ಪು, ಈಗಾಣ ಕಾಲಲ್ಲಿ ಈ ಸಂಚಾರವಾಣಿ (ಮೊಬೈಲು) ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಹೋಯ್ದು ಹೇಳಿರೆ ಲೊಟ್ಟೆ ಅಲ್ಲ ಅಲ್ಲದಾ?. ಅದರಲ್ಲೂ ಈಗಾಣ ಹೊಸ ನಮೂನೆಯ ಸ್ಮಾರ್ಟ್ ಫೋನು ಕುಂಞಿ ಮಕ್ಕಳಿಂದ ಹಿಡುದು ಕಣ್ಣು ಸರಿ ಕಾಣದ್ದ ಪ್ರಾಯಸ್ಥರು ಕೂಡಾ ಹಿಡ್ಕೊಂಡು ತಿರುಗುದೇ ಕಾಣ್ತಪ್ಪ. ಅಲ್ಲ, ಆನುದೇ ಅದೇ ಸಾಲಿಂಗೆ ಸೇರಿದ್ದು ಹೇಳುಲೆ ನಾಚಿಕೆ ಎಂತ ಇಲ್ಲೆ ಆತಾ. ಟೆಲಿಫೋನು ಆಫೀಸಿಂಗೆ ಕೆಲಸಕ್ಕೆ ಹೋಯ್ಕೊಂಡು ಇಪ್ಪಗ, ಹಳೆ ಕಾಲದ ಮೊಬೈಲು ಬಂದ ಸಮಯ. ಒಬ್ಬಿಬ್ಬರ ಕೈಲಿ ಇರ್ತಿತ್ತು ಅಷ್ಟೆ. ಅವರ ಕೈಲಿ ನೋಡಿ, ಅದರಲ್ಲಿ ಹೇಂಗಪ್ಪಾ ಮಾಡುದು ಹೇಳಿ ಪೆಂಗನ ಹಾಂಗೆ ಕಣ್ಣು ಬಾಯಿ ಬಿಟ್ಟು ನೋಡಿಗೊಂಡು ಇತ್ತಿದ್ದೆ ಆನು. ಅದರ ಪೇಟೆಂದ ತೆಗವಲೆ ಹೆರಟಿದಿಲ್ಲೆ. ಎಂತಕ್ಕೆ ಗೊತ್ತಿದ್ದಾ? ಅಷ್ಟು ಸಣ್ಣದು ಅತ್ತಿತ್ತೆ ಕೈಲಿ ಹಿಡ್ಕೊಂಡು ಹೋಪಗ ಎಲ್ಲೆಲ್ಲ್ಯಾರು ಮಡಿಗಿ ಹೋದರೆ ಹೋತನ್ನೆ..ಎಂಗೊ, ಹೆಮ್ಮಕ್ಕೊಗೆ ಅದರ ಮಡುಗುಲೆ ಕಿಸೆ ಇಲ್ಲೆನ್ನೆ..!
ಒಂದು ದಿನ ನೋಡ್ತೆ, ಎಂಗಳ ಆಫೀಸಿನ ಗೇಟಿನ ಎದುರೆ ಇಪ್ಪ ಹೂಗು ಮಾರ್ತ ಗೂಡಂಗಡಿ ಜೆನದ ಹತ್ತರೆ ಮೊಬೈಲು..! ಅದರ ನೋಡಿ ಎನ್ನ ಮರ್ಯಾದೆಯೇ ಹೋದಂಗಾತು ಎನಗೆ..! ಎನ್ನ ಕೆಳ ಕೆಲಸ ಮಾಡುವೋರೂ ಜುಂ ಹೇಳಿ ಮೊಬೈಲು ಹಿಡ್ಕೊಂಡು ತಿರುಗುಲೆ ಸುರುಮಾಡಿದವು. ಆನು ಅಷ್ಟು ಕೇರ್ ಮಾಡಿದ್ದಿಲ್ಲೆ ಹೇಳುವೊ°. ರಜ ಸಮಯ ಅಪ್ಪಗ ಎಂಗಳ ಕೆಲಸಕ್ಕೆ ಬೇಕಾಗಿ ಕಡ್ಡಾಯವಾಗಿ ಮೊಬೈಲು ತೆಕ್ಕೊಂಬಾಂಗೆ ಆತು. ಅದರಲ್ಲಿ ಒಂದು ಶಬ್ದ ಬರವಲೆ ಬಂದ ಬಂಙವ ಯೋಚಿಸಿರೆ ಈಗ ನಾಚಿಕೆ ಆವುತ್ತು .ಅದರೊಟ್ಟಿಂಗೆ ಇನ್ನೊಂದು ವಿಷಯ… ಆ ಮೊಬೈಲಿನ ರಿಂಗ್ ಟೋನ್ ಕತೆ ಕೇಳುದೆ ಬೇಡ. ಎಲ್ಲಾ ತರದ ಹಾಡುಗಳೂ ಕೇಳುಗು. ಅದರ ಕಿರಿಕಿರಿ ಬೇಡ ಮಾರಾಯ್ರೆ!
ಇನ್ನೊಂದು ವಿಷಯ ಯೋಚಿಸಿರೆ ಈಗಳೂ ಬಿದ್ದು ಬಿದ್ದು ನೆಗೆ ಮಾಡುವ ಹೇಳಿ ಆವುತ್ತು ಆತಾ. ಎಂತ ಗೊಂತಿದ್ದಾ ? ಎನಗೆ ಅಭ್ಯಾಸ ಅಪ್ಪಲೆ ಹೇಳಿ, ಸುರೂವಿಲ್ಲಿ ಅಳಿಯ ಒಂದು ಸೆಟ್ ಕೊಟ್ಟಿತ್ತಿದ್ದ°. ಬೆಂಗ್ಳೂರಿಂಗೆ ಒಬ್ಬನೇ ಹೋಪ ಕೆಲಸ ಇದ್ದತ್ತು. ಮೊಬೈಲು ಸರಿಯಾಗಿ ಉಪಯೋಗಿಸುಲೂ ಗೊಂತಿತ್ತಿಲ್ಲೆ. ಬೇಗಿಲ್ಲಿ ಜಾಗ್ರತಗೆ ಹಾಕಿಗೊಂಡು ಹೋದೆ. ಬೆಂಗ್ಳೂರಿಲ್ಲಿ ಸಿಟಿ ಬಸ್ಸು ಹತ್ತಿ ಕೂದು ರಜ ಹೊತ್ತಪ್ಪಗ ಟ್ರಿನ್.. ಟ್ರಿನ್.. ಹೇಳಿ ಶಬ್ದ ಕೇಳಿತ್ತು. ಎನ್ನ ಮೊಬೈಲು ರಿಂಗ್ ಆದ್ದು ಹೇಳಿ ಗ್ರಹಿಸಿ ತೆಗದರೆ, ಅದರಲ್ಲಿ ಹೇಂಗೆ ಮಾತಾಡುದು ಹೇಳಿ ಗೊಂತಾಗದ್ದೆ ಬೆಪ್ಪಿ ಹಾಂಗೆ ಕೈಲಿ ಹಿಡ್ಕೊಂಡು ಕೂದೆ.ಅಷ್ಟಪ್ಪಗ ಶಬ್ದ ನಿಂದತ್ತು. ಹೀಂಗೇ ಸುಮಾರು ಸರ್ತಿ ಆತು.ಈ ಗಾಬರಿಲಿ ಆನು ಬೇರೆಂತರನ್ನೂ ಗಮನಿಸುಲೇ ಹೋಗಿತ್ತಿಲ್ಲೆ. ಮೊಬೈಲಿಲ್ಲೇ ಎನ್ನ ಕಣ್ಣು! ಆನು ಇಳಿವ ಜಾಗೆ ಬಪ್ಪಗಳೂ ಅದೇ ಶಬ್ದ ಬಂತು. ಆಗಳೇ ಆನು ಗಮನಿಸಿದ್ದು, ಅದು ಕಂಡೆಕ್ಟರ್ ಬಸ್ಸು ನಿಲ್ಲುಸುಲೆ ಮಾಡಿದ ಬೆಲ್ ಹೇಳಿ! ಇಂಥಾ ಪಡ್ಪೋಸಿ ಆಗಿತ್ತಿದ್ದೆ ನೋಡಿ ಆನು..!
ಇರಲಿ, ಇನ್ನು ನಮ್ಮ ಹೊಸ ಸೆಟ್ಟು ವಿಷಯಕ್ಕೆ ಬಪ್ಪೊ. ಹಾಂ.. ಎಲ್ಲೋರ ಕೈಲಿ ಈ ಟಚ್ ಸ್ಕ್ರೀನಿನ ಫೋನು ಬಪ್ಪಗ, ಆನಿನ್ನೂ ಹಳೇ ಓಬೀರಾಯನ ಕಾಲದ ನೋಕಿಯ ಪೋನು ಹಿಡ್ಕೊಂಡೇ ತಿರುಗುತ್ತಾ ಇತ್ತಿದ್ದೆ ಆಫೀಸಿಲ್ಲಿ. ಎನ್ನ ಸಮಸ್ಯೆ ಅದೇ… ಅಷ್ಟು ಕ್ರಯದ ಫೋನು ಎಲ್ಲೆಲ್ಯಾರು ಮಡಿಗಿ ಇಡ್ಕಿ ಹೋದರೆ ಹೇಳಿ. ನಿವೃತ್ತಿ ಆದ ಮೇಲೆಯೇ ಅಂಥಾ ಫೋನು ತೆಗವದು ಹೇಳಿ ಆನೇ ಎನಗೆ ಶರತ್ತು ಹಾಕಿಗೊಂಡಿತ್ತಿದ್ದೆ. ಹಾಂಗೆಯೇ ನಿವೃತ್ತಿ ಆದ ಮೇಲೆ ಮಗನೇ ಅಜಪ್ಪಿ, ಎನಗೆ ಅಪ್ಪಾಂಗಿಪ್ಪದರ ತೆಕ್ಕೊಂಡು ಬಂದಾತು. ಮತ್ತೆ, ಅದರ ಹಿಂದೆ ಮುಂದೆ ಗೊಂತಿಲ್ಲದ್ದ ಎನಗೆ ಪಾಠ ಆಯೆಕ್ಕನ್ನೆ. ಅಂತೂ ಇಂತೂ ಎನಗೆ ಎಷ್ಟು ಬೇಕೋ ಅಷ್ಟು ಕಲ್ತಾತು. ಆದರುದೇ ಒಂದೊಂದರಿ ಎಂತದೋ ಮಾಡ್ಳೆ ಹೋಗಿ ಎಂತದೋ ಆಯ್ಕೊಂಡಿತ್ತು! ಇದು ರಜ ರಗಳೆಯೆ ಹೇಳುವಾಂಗಿತ್ತು. ಎಷ್ಟಾದರೂ ಈಗಾಣ ಮಕ್ಕೊ ಅದರೆಲ್ಲೆಲ್ಲ ಭಾರೀ ಉಷಾರಪ್ಪ! ಅವು ಎಂಗಳ ನೆಗೆ ಮಾಡ್ತಾಂಗೆ ಆವುತ್ತಷ್ಟೆ!
ಎನಗಂತೂ ಈ ವಾಟ್ಸಾಪ್ ಬಂದ ಮೇಲೆ ಅದರ ನೋಡಿ ಆಶ್ಚರ್ಯವೋ ಆಶ್ಚರ್ಯ ಆತಾ..! ಗುಡ್ ಮಾರ್ನಿಂಗ್, ಗುಡ್ ನೈಟ್ ಎಲ್ಲಾ ತುಂಬಾ ಚೆಂದಕ್ಕೆ ಹೂಗಿನ ಮತ್ತೆ ಪ್ರಕೃತಿ ಚಿತ್ರಂಗಳ ಮೇಲೆ ಬರದು ಕಳಿಸುದರ ನೋಡುದೇ ಖುಷಿ. ಅದರ ನೋಡಿ, ಆನುದೇ ಹಾಂಗೇ ಕಳುಸುಲೆ ಕಲಿಯೆಕ್ಕು ಹೇಳಿ ಉಮೇದು ಬಂತು. ಆರತ್ತರೋ ಕೇಳಿಯಪ್ಪಗ ಗೊಂತಾತು ಗುಟ್ಟು…ಅದು ಸ್ವಂತದ್ದಲ್ಲ ಹೇಳಿ. ಎನ್ನ ಆಸೆಯ ಪುಗ್ಗೆ ಠಪಾರನೆ ಹೊಟ್ಟಿತ್ತದ! ಅಂಬಗ ಆನು ಯೋಚಿಸಿದೆ, ಆನೇ ಫೊಟೋ ತೆಗದು ಅದರಲ್ಲಿ ಒಂದೆರಡು ಒಳ್ಳೆ ಮಾತುಗಳ ಸಾಲು ಬರದರೆ ಹೇಂಗೆ ಹೇಳಿ. ಮೊಬೈಲಿಲ್ಲಿ ಕನ್ನಡ ಬರವಲೆ ಮಗನತ್ತರೆ ಕೇಳಿ ಕಲ್ತು ಎನ್ನ ಪ್ರಯತ್ನ ಸುರು ಮಾಡಿಯೇ ಬಿಟ್ಟೆ. ಹಾಂಗೆಯೇ ಎರಡರಿಂದ ನಾಲ್ಕು ಸಾಲು, ಎಂಟು ಸಾಲು ಹೇಳಿ ಸಣ್ಣ ಸಣ್ಣ ಚುಟುಕು ಕವನದ ರೂಪಲ್ಲಿ ಬರವಲೆ ಸುರುಮಾಡಿಯಪ್ಪಗ, ಅದರ ನಾಲ್ಕು ಜೆನ ಸರಿಯಾಯಿದು ಹೇಳಿಯಪ್ಪಗ ರಜ ಧೈರ್ಯ ಬಂತು ನೋಡಿ! ಹಾಂಗಾಗಿ, ಎನಗೆ ಬರವಲೆ ಪ್ರೇರಣೆಯಾದ ಮೊಬೈಲಿಂಗೆ ಆನು ಚಿರಋಣಿ ಹೇಳಿಯೇ ಹೇಳುಲಕ್ಕು. ಈ ವಾಟ್ಸಾಪಿಂದ ಅಬ್ಬಾ..ಎಷ್ಟೊಂದು ಅನುಕೂಲತಗೊ! ಇಡೀ ಪ್ರಪಂಚಕ್ಕೆ ಎಲ್ಲಿಗೆ ಬೇಕಾರೂ ಮಾತಾಡುದು ಬಿಡಿ, ಆಚೆ ಹೊಡೆಯಾಣೋರ ನೋಡಿ ಮಾತಾಡುಲುದೇ ಆವುತ್ತನ್ನೆ. ಅಮೆರಿಕಲ್ಲಿಪ್ಪ ಮಕ್ಕೊ, ಪುಳ್ಳ್ಯಕ್ಕಳೊಟ್ಟಿಂಗೆ ಎದುರೆ ಇದ್ದ ಹಾಂಗೇ ಮಾತಾಡಿ ಖುಶಿ ಪಡುಲೆ ತೊಂದರೆ ಇಲ್ಲೆ,,,ಮುಟ್ಳೆ ಮಾಂತ್ರ ಸಿಕ್ಕುತ್ತವಿಲ್ಲೆ ಹೇಳಿ ಕೊರತ್ತೆ ಅಷ್ಟೆ!
ಹೀಂಗೇ ಒಂದು ದಿನ ಎನ್ನ ಪ್ರೀತಿಯ ಮೊಬೈಲು ಇಡಿಕ್ಕಿ ಹೋತು.. ಅಲ್ಲಪ್ಪಾ, ಎನ್ನದೇ ತಪ್ಪು. ಮಾತಾಡಿಕ್ಕಿ ಅದರ ಪುನಃ ಬೇಗಿಂಗೆ ಹಾಕದ್ದೆ, ಅಲ್ಲಿಯೇ ಬಿಟ್ಟಿಕ್ಕಿ ನಡದರೆ, ಅರನ್ನಾರೂ ದೂರುಲಿದ್ದ ಮತ್ತೆ ..ಹೇಳಿ?
” ಅಮ್ಮಂಗೆ ಹೊಸ ಮೊಬೈಲಿನ ಯೋಗ !”…ಮಗ, ಮಗಳು ಉವಾಚ. ಅದು ಬರೆಕ್ಕಾರೆ ಕಾಯೆಕ್ಕು ಹತ್ತು ದಿನ ಭರ್ತಿ..ಮಗ ಬೆಂಗ್ಳೂರಿಂದ ಬಪ್ಪಗ ತಪ್ಪ ಯೋಜನೆ. ಅಷ್ಟ್ರ ವರೆಗೆ ಫೋನು ಪಥ್ಯ?? ಅಲ್ಲ.. ಹಳೆ ನೋಕಿಯಲ್ಲಿ ಮಾತಾಡುಲೆ ತೊಂದರೆ ಇಲ್ಲೆ, “ಆರೂ ಇಲ್ಲದ್ದರೆ ಬೇಳೆ ಅಜ್ಜಿ” ಹೇಳುವ ಗಾದೆ ಹಾಂಗೆ! ಆದರೆ ಮಾತಾಡುಲಿಪ್ಪೋರ ಎಲ್ಲಾ ನಂಬ್ರಂಗಳುದೇ ಅದರಲ್ಲೇ ಇತ್ತು..ಮೊದಲಾದರೆ ದೂರವಾಣಿ ಇಪ್ಪೋರ ಮನೆಲಿ ಬೇಕಾದೋರ ನಂಬ್ರ ಎಲ್ಲಾ ಒಂದು ಪುಸ್ತಕಲ್ಲಿ ಬರದು ಮಡಿಕ್ಕೊಂಡು ಇರ್ತಿತ್ತು. ಈಗೆಲ್ಲಿದ್ದು ಅದೆಲ್ಲ? ನಿಜ ಹೇಳ್ತರೆ, ಈಗ ಆರಿಂಗೂ ಅವರವರ ನಂಬ್ರ ಕೂಡಾ ಗೊಂತಿಲ್ಲೆ ಆತಾ. ಅದರನ್ನೂ ಆ ಫೋನಿಲ್ಲೇ ಹುಡ್ಕೆಕ್ಕಾವುತ್ತು! ಎಂತಾ ಆಭಾಸ ಅಲ್ಲದಾ? ಇನ್ನು ಮೊಬೈಲಿಲ್ಲಿ ಫೋನು,ಕೆಮರ, ಲೈಟು, ವಾಚು ಅಲ್ಲದ್ದೆ, ಅದು ಒಂದು ಸಣ್ಣ ಕಂಪ್ಯೂಟರ್ ನ ಹಾಂಗೆ.. ಸಕಲ ಸಂಪತ್ತೂ ಇದ್ದು. ಅದರ ಕಂಡು ಹಿಡುದೋರಿಂಗೆ ಒಳ್ಳೆ ಮೆಡ್ಲು ಕೊಡ್ಲಕ್ಕು ಅಲ್ಲದಾ?
ವೈಜ್ಞಾನಿಕವಾಗಿ ಮುಂದುವರಿದ ಈ ಕಾಲಲ್ಲಿ ಇದೆಲ್ಲಾ ಬೇಕು ನಿಜ.. ಆದರೆ “ಅತಿ ಆದರೆ ಅಮೃತವೂ ವಿಷ” ಹೇಳ್ತಾಂಗೆ ಇದರ ಉಪಯೋಗವೂ ಮಿತಿ ಮೀರ್ಲಾಗನ್ನೆ. ತುಂಬಾ ಸವಲತ್ತು ಇಪ್ಪ ಈ ಉಪಕರಣವ ಸರಿಯಾಗಿ ಉಪಯೋಗಿಸಿತ್ತು ಕಂಡ್ರೆ ಭಾರೀ ಒಳ್ಳೆ ಅನುಕೂಲಂಗಳೇ ಇದ್ದು. ಅದರನ್ನೇ ಗುರುಟಿಗೊಂಡು ಕೂಪೋರೇ ಎಲ್ಲೋರೂ ಈಗ. ಎಲ್ಲಿ ಹೋದರೂ ಜೆನ ಅದರ ನೋಡಿಗೊಂಡು ಕೂದತ್ತು ಕಂಡ್ರೆ ಹತ್ತರಂದ ಗುಂಡು ಹಾರ್ಸಿರೂ ಗೊಂತಾಗ. ಅಂತರ್ಜಾಲ ಸಂಪರ್ಕ ಇದ್ದತ್ತು ಕಂಡ್ರೆ ಮತ್ತೆ ಕೇಳೆಕ್ಕ? ಅದರಲ್ಲಿ ಸಿನೆಮಾ ನೋಡಿಗೊಂಡು, ಆಟಂಗಳ ಆಡಿಗೊಂಡು ಹೊತ್ತು ಕಳವದೇ ಕೆಲಸ. ನಿಜ ಹೇಳ್ತರೆ ಎನ್ನ ಕೈಲಿಯೂ ದಿನಲ್ಲಿ ಆಗಾಗ ರಜ ಹೊತ್ತು ಮೊಬೈಲು ಇರುತ್ತು, ಹೀಂಗೆ ಬರವಲೆ ಎಲ್ಲ ಬೇಕಾವುತ್ತದ. ಎಂಗೊ ಹೆಮ್ಮಕ್ಕೊಗೆ ಒಂದು ಕಷ್ಟ ಹೇಳಿದರೆ ಅಡಿಗೆ ಮಾಡಿಗೊಂಡಿಪ್ಪಗ ಫೋನು ಬಂದರೆ ಕೇಳೆಡ ಮತ್ತೆ! ಕೈಲಿಪ್ಪ ಎಣ್ಣೆಯೊ,ತುಪ್ಪವೊ,ಉಪ್ಪು, ಬೆಲ್ಲ,ಹುಳಿ ವಗೈರಗೊ ಅರ್ಜೆಂಟಿಂಗೆ ತೊಳದರೆ ಸರೀ ಹೋಗದ್ದೆ ಅದರಲ್ಲೇ ಮೊಬೈಲು ಹಿಡ್ಕೊಂಡ್ರೆ ಅದರಲ್ಲಿ ಎಲ್ಲಾ ಅಡಿಗೆ ಸಾಮಾನುಗಲೂ ಹಿಡುದು ಅವಸ್ಥೆ ಬೇಡ! ಹಾಂಗಾಗಿ ಆನು ಅದಕ್ಕೊಂದು ದಪ್ಪ ಕವರು ಹಾಕಿ ಜಾಗ್ರತೆ ಮಾಡುದು. ಫೋನಿಲ್ಲಿ ಆದ ಹೀಂಗಿಪ್ಪ ಭಯಂಕರ ವೇಗದ ದೊಡ್ಡ ಬೆಳವಣಿಗೆಯ ನೋಡಿರೆ ತುಂಬಾ ಆಶ್ಚರ್ಯ ಆವುತ್ತಪ್ಪ! ಇನ್ನೂ ಎಂತೆಲ್ಲಾ ಅಪ್ಪಲಿದ್ದೋ ದೇವರಿಂಗೇ ಗೊಂತು! ಇಂತಿಪ್ಪಲ್ಲಿಗೆ ಸದ್ಯಕ್ಕೆ ಈ ಮೊಬೈಲು ಪುರಾಣಕ್ಕೆ ಮಂಗಳ ಹಾಡುವ ಆಗದಾ..?
ಬರದ್ದು: ಶಂಕರಿ ಶರ್ಮ, ಪುತ್ತೂರು.
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಅದಾ ಪೆಂಗನ° ದಿನಿಗೇಳಿದ್ದು…
ಯೇ ಶಂಕರಿಅತ್ತೆ. ಪೆಂಗ° ಹಾಂಗೆಲ್ಲ ಮಾಡ್ತನಿಲ್ಲೆ. ಗೆನಾಕೆ ನೋಡುತ್ತ°. ನಿಂಗಳ ಸ್ಮಾರ್ಟ್ ಪೋನ್ ಕೊಟ್ಟು ನೋಡಿ ಎನಗೆ.
ಇದ್ದಾರಪ್ಪ ….ಹೊಸ ಅಳಿಯ ,,!,..?
ಬಹುಮುಖ ಪ್ರತಿಭೆ ಯ ಶಂಕರಿ ಅಕ್ಕಂಗೆ ಶುಭಾಶಯಗಳು. ಹಾಸ್ಯ ರಂಗಲ್ಲಿ, ನಾಟಕಲ್ಲಿ, ಪ್ರವಚನ ಕೇಳೋದಲ್ಲಿ , ಮಕ್ಕೊಗೆ ಹೇದು ಕೊಡೋದಲ್ಲಿ ಅಗ್ರಗಣ್ಯೆತ್ತಿಯಾದ ಶಂಕರಿ ಅಕ್ಕನ ಕಾರ್ಯ ಶ್ಲಾಘನೀಯ. ನಿನ್ನ ಪ್ರಾಮಾಣಿಕತೆಗೆ ನಮನ.
ಹಾಂಗೆಲ್ಲ ಇಲ್ಲೆಪ್ಪ…ನಿಂಗಳ ಪ್ರೀತಿ
ಪೂರ್ವಕ ಅಭಿಮಾನಕ್ಕೆ ಧನ್ಯವಾದಂಗೊ ಅಣ್ಣ
ಪಷ್ಟಾಯಿದು ಶಂಕರಿ ಅಕ್ಕ.
ಧನ್ಯವಾದಂಗೊ ಅಣ್ಣ
ನಿಂಗಳ ಮೊಬೈಲ್ ಪುರಾಣ ಲಾಯ್ಕಾಯಿದು..ಎಲ್ಲರ ಕಥೆಯೂ ಇದೇ….ಒಬ್ಬೊಬ್ಬ ಒಂದೊಂದು ತರ ‘ಮಂಗ’ ಆವುತ್ತವು….ಹೇಳಿಗೊಂಬಲಿಲ್ಲೆ ಅಷ್ಟೆ…!!ಈಗಲೂ ಕೈಲಿಪ್ಪ ಮೊಬೈಲಿನ ಅರ್ಧಾಂಶದಷ್ಟೂ ಉಪಯೋಗ ಎನಗೆ ಗೊಂತಿಲ್ಲೆ..
ಅಪ್ಪು…ಹೊಸತು ಕಲಿವಲಪ್ಪಗ ಎಲ್ಲೋರಿಂದೂ ಇದೇ ಕಷ್ಟ.