ಮಧ್ಯಕಾಲೀನ ಕನ್ನಡದ ಮೇರು ಕೃತಿ “ಸೋಮೇಶ್ವರ ಶತಕ”ದ ಆಯ್ದ ಪದ್ಯಂಗಳ ಶರ್ಮಪ್ಪಚ್ಚಿ ಅರ್ಥಸಹಿತ ವಿವರಣೆ ಕೊಡ್ತವು. ಹೊಸಬೆಟ್ಟು ಶ್ರೀಶಣ್ಣ ಮಧುರವಾಗಿ ಹಾಡಿ, ಪದ್ಯಂಗಳ ಇನ್ನಷ್ಟು ಹತ್ತರೆ ಮಾಡ್ತವು.
ಕಳುದ ಸರ್ತಿ ಪ್ರಕಟ ಆದ ಐದು ಪದ್ಯಂಗೊ ಇಲ್ಲಿದ್ದು.
ಮುಂದಾಣ (16 – 20) ಈ ಸರ್ತಿ. ಎಲ್ಲೋರುದೇ ಓದಿ ಅರ್ತುಗೊಂಬೊ!
ಸೋಮೇಶ್ವರ ಶತಕ:
ಗಮಕ ವಾಚನ: ಶ್ರೀಶಣ್ಣ
ಅರ್ಥ ವಿವರಣೆ: ಶರ್ಮಪ್ಪಚ್ಚಿ
ತೆರನಂ ಕಾಣದ ಬಾಳ್ಕೆಯಲ್ಪಮತಿ ಕ್ಷುದ್ರಾರಂಭಮಲ್ಪಾಶ್ರಯಂ |
ಕಿರುದೋಟಂ ಕಡೆವಳ್ಳಿ ಬೀಳುಮನೆ ಮುಂಗೆಯ್ವಾರ್ಭಟಂ ಸಾಲದಾ ||
ದೊರೆ ಕಾರ್ಯಂ ಘೃತಮಿಲ್ಲದೂಟದ ಸುಖಂ ದುರ್ಮಾರ್ಗರೊಳ್ ಸ್ನೇಹಮುಂ |
ಬರಿಗೈಯಂ ಸುರಿದಂತೆಲೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೬||
ಇಲ್ಲಿ ಕವಿ ಹೇಂಗಿಪ್ಪ ಜೀವನ ವ್ಯರ್ಥ ಹೇಳಿ ಹೇಳಿದ್ದ°
ಯಾವುದೇ ರೀತಿ ನೀತಿ ಇಲ್ಲದ್ದ ಬದುಕು, ಸಂಕುಚಿತ ಬುದ್ಧಿ, ನೀಚರು ಮಾಡುವಂತಹ ಕಾರ್ಯಂಗಳ ಮಾಡುವದು, ನೀಚರ ಆಶ್ರಯಿಸಿಗೊಂಬದು, ತೀರಾ ಅಕೇರಿಗೆ ಇಪ್ಪ ಹಳ್ಳಿಲಿ ಆರನ್ನೂ ಹತ್ತರೆ ಮಾಡದ್ದ ಜೀವನ, ಹಾಳಾಗಿ ಬೀಳುತ್ತಾ ಇಪ್ಪ ಮನೆಲಿ ವಾಸ ಮಾಡುವದು, ಆರಂಭ ಶೂರತ್ವ, ಸಾಲ ಮಾಡಿ ಆಡಂಬರ ಮಾಡುವದು, ದುರ್ಮಾರ್ಗಲ್ಲಿ ನೆಡವವರ ಸ್ನೇಹ, ಇದೆಲ್ಲವೂ ಜೀವನ ವ್ಯರ್ಥ ಅಪ್ಪಲೆ ಇಪ್ಪ ಸಾಧನಂಗೊ.
ಪೊರೆದೇಂ ಬಾಳವೆ ಪಂದಿನಾಯ್ಗಳೊಡಲಂ ಮಾತಾಡವೇ ಭೂತಗಳ್ |
ತರುಗಳ್ ಜೀವಿಗಳಲ್ಲವೇ ಪ್ರತಿಮೆಗಳ್ ಕಾದಾಡವೇ ತಿತ್ತಿಗಳ್ ||
ಮೊರೆಯುತ್ತೇನುಸಿರಿಕ್ಕವೇ ಗ್ರಹ ಗೃಹಂ ಚೆಲ್ಲಾಗಿರಲ್ ಸೇರದೇ |
ನಿರಲೇಕಜ್ಞರನೇಕದಿಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೭||
ಮೂಢಂಗೊ ಹಲವು ಜೆನಂಗೊ ಇದ್ದು ಎಂತ ಪ್ರಯೋಜನ ಹೇಳಿ ಇಲ್ಲಿ ಕವಿ ಹೇಳ್ತಾ ಇದ್ದ°
ಹಂದಿ ನಾಯಿಗೊ ಕೂಡಾ ಹೊಟ್ಟೆ ತುಂಬಿಸಿಗೊಂಡು ಬದುಕುತ್ತವಿಲ್ಲೆಯೋ? ಕಾಡು ಪಿಶಾಚಿಗೊ ಮಾತಾಡ್ತವಿಲ್ಲೆಯೋ? ಗಿಡ ಮರಂಗೊಕ್ಕೆ ಜೀವ ಇಲ್ಲೆಯೋ?, ಸೂತ್ರ ಹಿಡುದು ಕೊಣಿಶಿರೆ, ಗೊಂಬೆ ಕೂಡಾ ಕೊಣಿತ್ತಿಲ್ಲೆಯೋ?, ಕಮ್ಮಾರನ ಶಾಲೆಲಿ ಇಪ್ಪ ತಿದಿಗೆ ಗಾಳಿ ಹಾಕಿರೆ ಅದು ಕೂಡಾ ಶಬ್ದ ಮಾಡುತ್ತಾ ಉಸಿರಾಡುತ್ತಿಲ್ಲೆಯೋ? ಮನೆ ಲಾಯಿಕ ಇದ್ದು ಅಲ್ಲಿ ಜೆನಂಗೊ ಇಲ್ಲದ್ದರೆ ಅದು ಪಿಶಾಚಿಗೊ ಬಂದು ಸೇರಲೆ ಅನುಕೂಲ ಮಾಡಿ ಕೊಟ್ಟ ಹಾಂಗೆಯೇ ಅಲ್ಲದೋ? ಇವುಗಳ ಹಾಂಗೆ ಮೂಢರು ಎಷ್ಟು ಇದ್ದರೆ ಎಂತ ಪ್ರಯೋಜನ? ಅವು ಆರಿಂಗೆ ಉಪಕಾರಕ್ಕೆ ಸಿಕ್ಕುಗು?
(ಆಜ್ಞರು =ಮೂಢಂಗೊ)
ಜಡನಂ ಮೂರ್ಖನ ಕೋಪಿಯಂ ಪಿಸುಣನಂ ದುರ್ಮಾರ್ಗಿಯಂ ಪೆಂಡಿರಂ |
ಬಡಿದುಂ ಬೈವನ ನಂಟರುಣ್ಣಲುಡಲುಂಟಾಗಿರ್ದುದಂ ತಾಳದಾ ||
ಕಡು ಪಾಪಿಷ್ಥನ ಜಾಣ್ಮೆಯಿಲ್ಲದನಿಷ್ಟಂ ಮಾಳ್ಪನಂ ನೋಡಿಯುಂ |
ನುಡಿಸಲ್ ಸಜ್ಜನರೊಲ್ವರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೮||
ಸುಸಂಸ್ಕೃತ ಜೆನಂಗೊ ಅರ ಹತ್ರೆ ಮಾತಾಡ್ಲೆ ಇಷ್ಟ ಪಡುತ್ತವಿಲ್ಲೆ ಹೇಳಿ ಕವಿ ಹೇಳಿದ್ದ°
ಸೋಮಾರಿಯ, ಹಟಮಾರಿಯ, ಕೋಪಿಷ್ಟನ, ಚಾಡಿಕೋರನ, ದುರಾಚಾರಿಯ, ಹೆಂಡತಿಯ ಯಾವಗಲೂ ಬೈಕ್ಕೊಂಡು ಬಡ್ಕೊಂದು ಇಪ್ಪವನ, ಉಂಬಲೆ ತಿಂಬಲೆ, ಉಟ್ಟುಗೊಂಬಲೆ ಅನುಕೂಲ ಇಪ್ಪ ನೆಂಟರ ನೋಡಿ ಅಸೂಯೆ ಪಡುವವನ, ಜಾಣತನವಿಲ್ಲದ್ದವನ, ಯಾವಗಲೂ ಬೇರೆಯವಕ್ಕೆ ಕೆಟ್ಟದ್ದನ್ನೇ ಬಯಸುವವನ, ಹೀಂಗಿಪ್ಪವರ ಸಂಗವ ಆರು ಬಯಸುತ್ತವಿಲ್ಲೆ.
ಸತಿಯಾಲಾಪಕೆ ಸೋಲ್ವ ಜೂಜಿಗೆ ಖಳರ್ ಕೊಂಡಾಡುತಿರ್ಪಲ್ಲಿಗಂ |
ಅತಿ ಪಾಪಂ ಬಹ ಕಾರ್ಯಕಲ್ಪ ವಿಷಯಕ್ಕಂ ದಾಸಿಯಾ ಗೋಷ್ಠಿಗಂ ||
ಪ್ರತಿ ತಾನಿಲ್ಲದ ಮದ್ದು ಮಂತ್ರ ಮಣಿಗಂ ಸಂದೇಹಮಪ್ಪಲ್ಲಿಗಂ |
ಮತಿವಂತರ್ ಮರುಳಪ್ಪರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೯||
ಬುದ್ಧಿಶಾಲಿಗೊ ಯಾವದಕ್ಕೆಲ್ಲಾ ಮರುಳುಗಟ್ಟುತ್ತವಿಲ್ಲೆ ಹೇಳಿ ಕವಿ ಹೇಳ್ತ°
ಹೆಂಗಸರ ವೈಯ್ಯಾರದ ಮಾತಿಂಗೆ, ಜೀವನಲ್ಲಿ ಸೋಲುವಾಂಗಿಪ್ಪ ಜೂಜಾಟಕ್ಕೆ, ನೀಚರ ಹೊಗಳಿಕೆಗೆ, ಪಾಪಕಾರ್ಯಂಗೊಕ್ಕೆ, ನೀಚ ಕೆಲಸಂಗೊಕ್ಕೆ, ಸೇವಕಿಯರ ಸಹವಾಸಕ್ಕೆ, ಮದ್ದು ಮಂತ್ರಂಗಳಿಂದ ಕೆಡುಕು ಉಂಟಾದಪ್ಪಗ ಅದರ ಸರಿ ಮಾಡ್ಲೆ ಎಡಿಯದ್ದ ಹಾಂಗಿಪ್ಪ ಮದ್ದು ಮಂತ್ರಂಗೊಕ್ಕೆ, ಸಂಶಯ ಬತ್ತ ಹಾಂಗಿಪ್ಪ ಜಾಗಗೊಕ್ಕೂ ಬುದ್ಧಿಶಾಲಿಗೆ ಮರುಳುಗಟ್ಟುತ್ತವಿಲ್ಲೆ.
ಸುಡು ಸೂಪಂ ಘೃತಮಿಲ್ಲದೂಟವ ಪರಾನ್ನಾಪೇಕ್ಷೆಯಾಜಿಹ್ವೆಯಂ |
ಸುಡು ದಾರಿದ್ರ್ಯದ ಬಾಳ್ವೆಯಂ ಕಲಹ ಕೋಪಂ ಮಾಳ್ಪ ಸಂಗಾತಿಯಂ ||
ಸುಡು ತಾಂಬೂಲವಿಹೀನ ವಕ್ತ್ರವ ಪರಸ್ತ್ರೀ ನೋಡುವಾ ಕಣ್ಗಳಂ |
ನುಡಿದುಂ ತಪ್ಪುವ ರಾಜನಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೨೦||
ಯಾವುದರ ಅತಿ ನಿಕೃಷ್ಟ ಹೇಳಿ ತಿಳ್ಕೊಳೆಕ್ಕು ಹೇಳಿ ಕವಿ ಇಲ್ಲಿ ವಿವರುಸುತ್ತ°
ತುಪ್ಪ, ತೋವೆ ಇಲ್ಲದ್ದ ಊಟ, ಬೇರೆಯವರ ಮನೆಯ ಊಟವನ್ನೇ ಯಾವಾಗಲೂ ಬಯಸುತ್ತಾ ಇಪ್ಪ ನಾಲಗೆ, ದಾರಿದ್ರ್ಯದ ಜೀವನ, ಯಾವಾಗಲೂ ಕೋಪಿಸಿಂಡು ಜಗಳ ಮಾಡ್ತಾ ಇಪ್ಪ ಹೆಂಡತಿಯ, ತಾಂಬೂಲ ಹಾಕದ್ದ ಬಾಯಿಯ, ಪರಸ್ತ್ರೀಯ ವಕ್ರದೃಷ್ಠಿಂದ ನೋಡುವ ಕಣ್ಣುಗಳ, ಕೊಟ್ಟ ಮಾತಿಂಗೆ ತಪ್ಪುವ ರಾಜನ, ಇವೆಲ್ಲದರ ನಿಕೃಷ್ಟರು ಹೇಳಿ ತಿಳ್ಕೊಳೆಕ್ಕು.
(ವಕ್ತ್ರ= ಬಾಯಿ)
~~~***~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
{ತಾಂಬೂಲ ಹಾಕದ್ದ ಬಾಯಿಯ} ಇದರ ಕೇಳಿಯಪ್ಪಗ ಬೈಲಿನ ಇಬ್ರು ಕೊಶಿಲಿ ನೆಗೆ ಮಾಡಿದ ಹಾ೦ಗಾತನ್ನೆ..
ಓದಿ,ಕೇಳಿಯಪ್ಪಗ ಸೂಕ್ಷ್ಮ೦ಗೊ ಮನಸ್ಸಿ೦ಗೆ ಮುಟ್ಟಿತ್ತು.
ಅಪ್ಪಚ್ಚಿಗೂ,ಶ್ರೀಶಣ್ಣ೦ಗೂ ಧನ್ಯವಾದ.
ವಿವರಣೆ ಚೊಲೋ ಆಯ್ದು ಅಪ್ಪಚ್ಚಿ .. ಸರಳ ಆಳ 🙂
ಅಪ್ಪಚ್ಚಿ,
ಹರೇ ರಾಮ; ಬಾರಿ ಲಾಯಕಕ್ಕೆ ಬತ್ತಾ ಇದ್ದು. ಹಾಡಿದ್ದದೂ ಲಾಯಕಾಯಿದು. ನಿ೦ಗೊಗೆ ಇಬ್ರಿ೦ಗೂ ಒಟ್ಟಿ೦ಗೆ ಧನ್ಯವಾದ೦ಗೊ. ನಮಸ್ತೇ…
ಲಾಯ್ಕಾಯಿದು ಅಪ್ಪಚ್ಚೀ 🙂
ಈ ಶತಕಂಗಳಲ್ಲಿ ಜೀವನಾನುಭವದ ಎಲ್ಲ ವಿಚಾರಂಗಳೂ ಬತ್ತು .ಹಾಡಿದವಕ್ಕೂ ವಿವರಿಸಿದವಕ್ಕೂ ಧನ್ಯವಾದ .ನಾವೆಲ್ಲರೂ ತಿಳಿಯೆಕಾದ ತುಂಬಾ ವಿಚಾರಂಗೊ ಇಲ್ಲಿದ್ದು.
ಒಳ್ಳೆಯ ರಸದೌತಣ.
ನಿ೦ಗಳ ಕೊಡುಗೆಗೆ ಧನ್ಯವಾದ.
ಎಲ್ಲರಿ೦ಗೂ ದೀಪಾವಳಿಯ ಶುಭಾಷಯ೦ಗೊ.
ಒಳ್ಳೆ ಲಾಯಕ ಆಯ್ದು. ಹಾಡಿದ್ದೂ ತುಂಬ ಲಾಯಕ ಆಯ್ದು. ಶರ್ಮಪ್ಪಚ್ಚಿ – ಶ್ರೀಶಣ್ಣ ಕೂಟುಗಟ್ಟಿಂಗೆ ಅಭಿನಂದನೆ