Oppanna.com

ಹಟ್ಟಿಯ ಅಬ್ಬೆಯ ಕರೆಗಂಟೆ

ಬರದೋರು :   ವಿಜಯತ್ತೆ    on   02/06/2016    12 ಒಪ್ಪಂಗೊ

ಬಯಲಿನ ಆತ್ಮೀಯ ಓದುಗ ಬಂಧುಗಳೇ,
ಆನು ಐದು ವರ್ಷ ಹಿಂದೆ ಸಂಯುಕ್ತ ಕರ್ನಾಟಕಕ್ಕೆ ಕನ್ನಡ ನುಡಿಲಿ ಬರ್ದಿತ್ತಿದ್ದ ಕತೆ. ನಮ್ಮ ಶೀಲನ ಕತೆ ಓದಿಯಪ್ಪಗ ಹೀಂಗಿದ್ದ ಕತೆ ಆನು ಬರದ್ದೂ ಒಂದಿದ್ದು ಹೇಳಿದ್ದಕ್ಕೆ ನಮ್ಮ ಒಪ್ಪಣ್ಣನೂ ಶೀಲನೂ ಇಬ್ರೂ ಅದರ ಬಯಲಿಲ್ಲಿ ಹಾಕಿ ಹೇಳಿದ ಕಾರಣ ಹಾಕಿದ್ದೆ. ಶ್ರೀ ಗುರುಗೊ ಆಶೀರ್ವಚನಲ್ಲಿ ಒಂದಾರಿ  “ತಾಯಿ ಮತ್ತು ತಾಯ್ನಾಡಿನ ಒಟ್ಟಿಂಗೆ ಗೋಮಾತೆಯನ್ನೂ ಸೇರ್ಸಿಗೊಳೆಕ್ಕು. ಆಕಳಿನ ಆರ್ಥನಾದಕ್ಕೆ ಕೆಲವು ಸೂಕ್ಷ್ಮ ಅರ್ಥಂಗೊ ಇದ್ದು” ಹೇಳಿತ್ತಿದ್ದವು. ಆ ಪ್ರೇರಣೆಂದ ಈ ಕತೆ ಎನ್ನ ಕೈಲಿ  ಸೃಷ್ಟಿ ಆತು.
ಓದಿ ಅಭಿಪ್ರಾಯ ಹೇಳೆಕ್ಕಾಗಿ ವಿನಂತಿ.
~
ವಿಜಯತ್ತೆ

ಕರೆಗಂಟೆ ಕೊಡುವ ಹಟ್ಟಿಯ ಅಬ್ಬೆ – ಹವ್ಯಕ ಕತೆ:

ಉದಿಯಪ್ಪಗ ಏಳು ಗಂಟೆಯ ಸಮಯ. “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಆಕಾಶವಾಣಿಲಿ ಸ್ಮೃತಿವಾಕ್ಯ ಪ್ರಸಾರ ಆವುತ್ತಾ ಇದ್ದತ್ತು.
ಮನೆಕೂಸು ಸಿರಿಗೌರಿ ಅಟ್ಟುಂಬೊಳ ಬಂದು “ಅಮ್ಮಾ, ಎನ ರಜ ಕಾಫಿಕೊಡಮ್ಮ “ ಹೇಳುವಗ “ಇಂದು ಕಾಲೇಜಿದ್ದೊ ಸಿರಿ?” – ಪಿ.ಯು.ಸಿ ಕಲಿತ್ತ ಮಗಳತ್ರೆ ಮಹಾಲಕ್ಷ್ಮಿಯ ಪ್ರಶ್ನೆ.
“ಇಂದು ರಜೆಯಾದರೂ ಆ ಹೊತ್ತಿಂಗೆ ರಜ ಕಾಫಿ ಕುಡಿಯೆಕ್ಕೂಳಿ ಆವುತ್ತಮ್ಮ ಎನಗೆ.!.”
ಅಷ್ಟೊತ್ತಿಂಗೆ ಹಟ್ಟಿಂದ ‘ಅಬ್ಬೆ’ ..ಹುಂಮ್ಮ..ಹ್ಞೂಂ…ಹುಮ್ಮಾ…ಹೇಳಿ ಕೂಗುದು ಕೇಳಿತ್ತು.

“ನೋಡಮ್ಮ ಹಟ್ಟಿಂದ ಅಬ್ಬೆಯು ಕೂಗುತ್ತದ”.
“ನೋಡಬ್ಬೋ …, ನಿನ್ನ ಮಗಳಿಂಗೆ ಹೊಟ್ಟೆ ತುಂಬುಸುತ್ತೆ. ಎನ್ನ ಮಗಳಿಂಗೆ ಹಶು ಆವುತ್ತಿಲ್ಲ್ಯೋ ಕೇಳ್ತದ ಅಬ್ಬೆ”. ಮಹಾಲಕ್ಷ್ಮಿ ಸಮಜಾಯಿಷುವಾಗ-
“ಎನ್ನ ಊಹನೆ ಬೇರೆಯೇ ಇದ್ದು”. ಹೇಳಿದ್ದು ಅಲ್ಲೇ ಮೂಲೆಲಿ ಮಸರು ಕಡಕ್ಕೊಂಡಿತ್ತಿದ್ದ ರೇವತಮ್ಮ.ಮಹಾಲಕ್ಷ್ಮಿಯ ಅತ್ತೆ. “ಎಂತರಜ್ಜಿ ನಿಂಗಳ ಊಹನೆ!?”. ಪುಳ್ಳಿ ಅಜ್ಜಿಯೆಡೆಂಗೆ ತಿರುಗಿ ಕೇಳಿತ್ತು.

“ಅದಾಬ್ಬೋ..!,ಈಗ ರೇಡಿಯಲ್ಲಿ ಬಂದೊಂಡಿತ್ತಿದ್ದಿಲ್ಲ್ಯಾ ,ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ !, ಹೆತ್ತಬ್ಬೆ ಮತ್ತೆ ಹೊತ್ತಮ್ಮ ಸ್ವರ್ಗಕ್ಕಿಂತ ಮಿಗಿಲು ಹೇಳಿ. ಅದರೊಟ್ಟಿಂಗೆ ಎನ್ನನ್ನೂ ಸೇರ್ಸೆಡದೋ ಆನು ನಿಂಗಳೆಲ್ಲಾ ಸಾಂಕಿದ ಅಬ್ಬೆ ಅಲ್ಲದಾ? ಕೇಳುತ್ತದ ನಮಗೆ ಜಾಯಿ ಕೊಟ್ಟು ನಿತ್ಯ ಸಾಂಕುವ ಅಬ್ಬೆ!. ಅರ್ಥಾತ್ ಹೆತ್ತಮಾತೆ, ಹೊತ್ತಮಾತೆ, ಪೊರೆದಮಾತೆ ಈ ಮೂರನ್ನೂ ಒಟ್ಟಿಂಗೇ ಹೇಳೆಕ್ಕೂಳಿ ಗೋಮಾತೆಯ ಪರವಾಗಿ ಎನ್ನ ವಾದ”.
“ಅಬ್ಬಬ್ಬ… ಅಜ್ಜಿಯ ಯೋಚನಾ ಲಹರಿ ಎಷ್ಟು ಅದ್ಭುತ!!. ನಮ್ಮಜ್ಜಿಗೊಂದು ಪ್ರಶಸ್ತಿ ಕೊಡ್ಳೇ ಬೇಕು” ಹೇಳಿದ ಪುಳ್ಳಿ ಎದ್ದು ಹೋಗಿ ಅಜ್ಜಿಯ ಅಪ್ಪಿ ಹಿಡುದತ್ತು.

ಮಹಾಲಕ್ಷ್ಮಿ ಹೊಡೆಂಗೆ ತಿರುಗಿದ ಅಜ್ಜಿ, “ಕಂಜಿ ಬಿಡು ಲಕ್ಷ್ಮಿ, ಅದಕ್ಕೆ ಹಶುವಾವುತ್ತಾಯಿಕ್ಕು” ರೇವತಮ್ಮನ ತುಡಿತ.
ಅಂದು ಆದಿತ್ಯವಾರವಾದ್ದರಿಂದ ಸಿರಿಗೌರಿಗೆ ಕಾಲೇಜಿಂಗೆ ಹೋಪ ಗಡಿಬಿಡಿ ಇಲ್ಲೆ. ಹಾಂಗೆ ಅದುದೆ ಅಮ್ಮನೊಟ್ಟಿಂಗೆ ಹಟ್ಟಿಗೆ ಹೆರಟತ್ತು. ಅಜ್ಜಿಯ ನೆತ್ತರಿನ ಗುಣ ಪುಳ್ಳಿಗೂ ರಜ ಬಯಿಂದು.

ಹಣಕಾಸು ಸಂಸ್ಥೆ ಒಂದರ ಉದ್ಯೋಗಿಯಾದರೂ ಗ್ರಾಮೀಣ ಪ್ರದೇಶಲ್ಲಿದ್ದ ಗಣಪತಿ ಭಟ್ಟರಿಂಗೆ ನಾಲ್ಕೈದೆಕ್ರೆ ಅಡಕ್ಕೆ ತೋಟ, ಅದಕ್ಕೆ ಹೊಂದಿಗೊಂಡು ಮನೆ, ಹಸುಗಳ ಹಟ್ಟಿ,ಇದ್ದು.
ಸಾವಯವ ಕೃಷಿಯನ್ನೇ ಮಾಡ್ತಾ ಇದ್ದಿದ್ದವು. ಹೆಂಡತಿ ಮಹಾಲಕ್ಷ್ಮಿ, ಮಗ ಶ್ರೀಕಾಂತ, ಮಗಳು ಸಿರಿಗೌರಿ, ಸಂಸ್ಕೃತ ಜ್ಞಾನ ರಜ ಇದ್ದ ವಯೋವೃದ್ಧೆ ಅಬ್ಬೆ ರೇವತಮ್ಮ – ಇವಿಷ್ಟು ಜೆನ ಆ ಮನೆಲಿ.
ಮಕ್ಕೊ ಇಬ್ರೂ ಕಾಲೇಜು ಕಲಿತ್ತೊವು. ರೇವತಮ್ಮನಿಂದ ಇತ್ತೀಚೆಗೆ ಮಸರು – ಮಜ್ಜಿಗೆ ಕೆಲಸ ಬಿಟ್ಟರೆ ಬೇರೆಂತೂ ಮಾಡ್ಳೆ ಎಡಿತ್ತಿಲ್ಲೆ.

ಬಳ್ಳಿ ಬಿಟ್ಟಪ್ಪದ್ದೆ ಕಂಜಿ ಬೀಲ ನೆಗ್ಗಿ ಓಡಿಯೊಂಡು ಹಟ್ಟಿಗೆ ಬಂದು ಹಸುಗಳ ಗುಂಪಿಲ್ಲಿದ್ದ ತನ್ನಮ್ಮನ ಹುಡುಕ್ಕಿ ಕೆಚ್ಚಲಿಂಗೆ ಬಾಯಿಹಾಕಿ ಹಾಲು ಚೀಪಲೆ ತೊಡಗಿತ್ತು.
ಅಬ್ಬೆ ಹಸು ತನ್ನ ಕಂದನ ನೆಕ್ಕಿಯೊಂಡು ಉಚ್ಚು ಹೊಯಿದತ್ತು. ಮಹಾಲಕ್ಷ್ಮಿ ಒಂದು ಮಣ್ಣಿನ ಪಾತ್ರೆಲಿ ಗೋಮೂತ್ರವ ಶೇಖರಿಸಿತ್ತು. ಆ ಮನೆಲಿಯೂ ಗೋಅರ್ಕ ಮಾಡ್ತವು. ಬಿ.ಪಿ, ಮಧುಮೇಹ,ಅಲ್ಲದ್ದೆ ಕ್ಯಾನ್ಸರ್ ಹೇಳ್ತ ಮಹಾಮಾರಿ ರೋಗವೂ ಗೋಅರ್ಕಂದ ಗುಣಾವುತ್ತೂಳಿ ಅದಕ್ಕೊಳ್ಳೆ ಬೇಡಿಕೆ ಇದ್ದಾಡ.

ಎರಡು ತಿಂಗಳ ಹೆಣ್ಣುಕಂಜಿ ದಷ್ಟ-ಪುಷ್ಟವಾಗಿತ್ತು. ಕೊರಳಿಲ್ಲಿ ಗೆಜ್ಜೆ ನೇತೊಂಡಿದ್ದ ಕಾರಣ ಅದು ಅಬ್ಬೆಯ ಕೆಚ್ಚಲಿಂಗೆ ಬಾಯಿಹಾಕಿ, ಗುದ್ದಿ, ಗುದ್ದಿ ಮಲೆ ಚೀಪುವಗ, ಗೆಜ್ಜೆಯ ನಾದದೊಟ್ಟಿಂಗೆ ಅದರ ಗುದ್ದಾಟದ ಅಬ್ಬರವೂ ಸೇರಿ ನೋಡ್ಳೆ, ಕೇಳ್ಲೆ ಒಂದು ಪುಳಕಿತ ಸನ್ನಿವೇಶ ಹೇಳ್ಲಕ್ಕು!.ಅದ್ರನ್ನೇ ನೋಡಿಗೊಂಡಿದ್ದ ಸಿರಿಗೌರಿ “ಅಮ್ಮಾ.,ಈ ಕಂಜಿ ಹಾಂಗೊಂದು ಅಬ್ಬೆಯ ಕೆಚ್ಚಲಿಂಗೆ ಗುದ್ದೀರೆ ಅದಕ್ಕೆಷ್ಟು ಬೇನೆ ಅಕ್ಕಲ್ಲೋ!?”.ಮುಗ್ಧ ಪ್ರಶ್ನೆ ಹಾಕಿತ್ತು.

“ಅದುವೇ ಪುಟ್ಟಿ, ಅಮ್ಮನ ವಾತ್ಸಲ್ಯ ಹೇಳಿರೆ!!.ಹಾಲು ಕೆಚ್ಚಲಿಂಗಿಳಿವಲೆ ಅದು ಹಾಂಗೆ ಗುದ್ದುವದು. ಹೆರಿಗೆಯ ಬೇನೆ ಸಹಿಸುತ್ತ ಹೆತ್ತಬ್ಬೆ; ಹಾಂಗಿದ್ದ ಸಣ್ಣ-ಪುಟ್ಟ ಬೇನೆಗಳ ಸಹಿಸುದೆಂತದು ಮಹಾ!?. ಜಗತ್ತಿಲ್ಲಿ ವಾತ್ಸಲ್ಯದ ಗನಿ ಹೇಳಿರೆ, ಹೆತ್ತಬ್ಬೆ!.ಹಾಂಗಾಗಿಯೇ ಮಾತೃದೇವೋಭವ ಹೇಳಿ ಮದಾಲು ಹೆತ್ತಬ್ಬಗೆ ವಂದನೆ ಮಾಡುದು ಲೋಕಲ್ಲಿ. ಶ್ರೀ ಶಂಕರಾಚಾರ್ಯರು ರಚಿಸಿದ ದೇವ್ಯಪರಾಧಕ್ಷಮಾಪಣಾ ಸ್ತೋತ್ರವ ಅಜ್ಜಿ ನಿನಗೆ ಬಾಯಿಪಾಠ ಮಾಡ್ಸಿದ್ದವನ್ನೆ?, ’ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಲೋಕಲ್ಲಿ ಕೆಟ್ಟಮಗ ಹುಟ್ಟುಗು. ಆದರೆ ಕೆಟ್ಟ ಅಬ್ಬೆ ಇಪ್ಪಲೇ ಇರ!! ಹೇಳಿದ್ದೊವು.
ಇತ್ತೀಚಗೆ ನಮ್ಮ ಶ್ರೀ ಗುರುಗೊ ಜಗದ ಸುಕ್ಷೇಮಕ್ಕಾಗಿ ಜಾಗತಿಗ ಹಬ್ಬ ವಿಶ್ವಗೋಸಮ್ಮೇಳನ ಹೇಳಿ ಮಾಡಿತ್ತಿದ್ದವು.ಅವು ಹೇಳುದು ’ಗಾವೋ ವಿಶ್ವಸ್ಯಮಾತರಃ’ ಗೋವು ವಿಶ್ವಜನನಿ. ಗೋ ಉತ್ಪನ್ನಂಗಳಲ್ಲಿ ಕಂಡಾಬಟ್ಟೆ ಪ್ರಯೋಜನವೂ ಲಾಭವೂ ಇದ್ದಡ!.ಗೋಮೂತ್ರ ರೋಗಹರ, ಕೀಟನಾಶಕವಾಗಿ ಉಪಯೋಗ, ಗೋಮಯಂದ ಸಾಬೂನು,ಕೂದಲಿಂಗೆ ಹಾಕುವ ಶಾಂಪೂ,ಕೆಲವು ಚರ್ಮರೋಗಂಗಳ ಮದ್ದುಗಳಲ್ಲಿ ಬಳಕೆ. ಮತ್ತೆ ನಮ್ಮ ಕೃಷಿಗೆ ಸಾವಯವ ಗೊಬ್ಬರವಾಗಿ ಉಪಯೋಗ ಹೇಂಗೂ ಇದ್ದನ್ನೆ!. ಮನುಷ್ಯರ ಮಕ್ಕೊ ಒಂದು ನಿರ್ಧಿಷ್ಟ ಅವಧಿ ವರೆಗೆ ಅಮ್ಮನ ಹಾಲು ಕುಡುದರೆ; ಹಸುವಿನ ಹಾಲು ಜೀವನ ಪರ್ಯಂತ ಉಪಯೋಗುಸುತ್ತವು.

ಅಮ್ಮನ ಮಾತುಕೇಳಿದ ಮಗಳಿಂಗೆ ಹಸುವಿನತ್ರೆ ಹಸನಾದ ಅಭಿಮಾನ ಹುಟ್ಟಿತ್ತಲ್ಲದ್ದೆ; ತಾನುದೆ ಹಾಲು ಕರೆಕು ಹೇಳ್ವ ಉತ್ಸಾಹ ಹುಟ್ಟಿ; “ಅಮ್ಮಾ.., ಎನಗೆ ಹಾಲುಕರವಲೆಡಿತ್ತಾ ನೋಡೆಕ್ಕಾ?”.ಸಿರಿಗೌರಿ ತನ್ನ ಅಭಿಲಾಶೆ ವ್ಯಕ್ತಪಡಿಸಿಯಪ್ಪಗ ಅಮ್ಮ, ತನ್ನ ಮನದೊಳವೆ ಲೆಕ್ಕಹಾಕಿತ್ತು. ಕೂಸಿನತ್ರೆ ಕರವ ಚೆಂಬುಕೊಟ್ಟು ಕರವಲೆ ಕೂರ್ಸಿರೆ ಹಾಲು ಕಮ್ಮಿ ಸಿಕ್ಕುಗಾಯಿಕ್ಕು. ತೊಂದರೆ ಇಲ್ಲೆ. ಈಗಾಣ ಕೂಸುಗೊ ತಾನು ಮಾಡ್ತೇಳಿ ಮುಂದೆ ಬಪ್ಪವೇ ಕಮ್ಮಿ!.ಆದರೆ ಎಲ್ಲೋರಾಂಗಲ್ಲ ಎನ್ನಮಗಳು. ಬೇರೆ ಮನೆ ಬೆಳಗುವ ಕೂಸಿಂಗೆ ಆಕೆಲಸ ಗೊಂತಿಲ್ಲೆ, ಈ ಕೆಲಸ ಗೊಂತಿಲ್ಲೇದಪ್ಪಲಾಗ, ಗೊಂತಿದ್ದರೆ ಅಗತ್ಯ ಬಂದ್ರೆ ಮಾಡ್ಳಕ್ಕನ್ನೆ! ತನ್ನೊಳವೇ ಲೆಕ್ಕ ಹಾಕೆಂಡಿಪ್ಪಗ

“ಎಂತ್ರಮ್ಮ ಆನು ಕೇಳಿದ್ದಕ್ಕೆ ಮಾತಾಡದ್ದೆ ಆಲೋಚನೆ ಮಾಡ್ತೆ!?”.

“ಏನಿಲ್ಲೆ, ನಮ್ಮಬ್ಬೆ ಪಾಪದ ದನ. ಮೆಟ್ಟುಗುಳಿ ಅಲ್ಲ. ಕಂಜಿಯ ನಕ್ಕೆಂಡಿಕ್ಕದು. ಮುಕ್ಕಾಲುವಾಶಿ ಕರದೆ. ಇನ್ನು ರಜ ಕರೆ ಅಭ್ಯಾಸ ಮಾಡ್ಳೆ ತಕ್ಕ. ಆನು ಇಲ್ಲೇ ಇದ್ದು ಹೇಳಿಕೊಡ್ತೆ.”

ಸಿರಿಗೌರಿ ದನದ ಕೆಚ್ಚಲಿನತ್ರೆ ತುರ್ಕಾಲಿಲ್ಲಿ ಕೂದತ್ತು.

“ನೋಡು ಹೆಬ್ಬೆರಳು ಎದುರಿಂಗೂ ಆಚ ನಾಲ್ಕು ಬೆರಳಿನ ದನದ ಮಲೆಯ ಹಿಂದಣ ಹೊಡೆಂಗೆ ಹಿಡಿದು ಹೆಬ್ಬೆರಳಿಂಗೆ ರಜ ಶಕ್ತಿ ಹಾಕಿ ಮೆಲ್ಲಂಗೆ ಕೆಳಾಂಗೆ ಜಾರ್ಸು. ದನವ ಕರವಗ ನಿಯಮವೂ ಇದ್ದು. ಕಂಜಿ ಹುಲ್ಲು ತಿಂಬಲಪ್ಪನ್ನಾರ ಎರಡು ಮಲೆಹಾಲು ಕಂಜಿಗೆ ಬಿಡೆಕು. ಹುಲ್ಲು ತಿಂಬಲೆ ಸುರುಮಾಡಿದ ಮೇಲೆ ಒಂದು ಮಲೆಹಾಲು ಬಿಟ್ಟರೆ ಸಾಕು. ಕರದಿಕ್ಕಿ ಏಳುವಗ ದನಕ್ಕೆ , ಕಂಜಿಗೆ , ಮೈ ಮುಟ್ಟಿ ನಮಸ್ಕಾರ ಮಾಡೆಕ್ಕು”. ಕರವ ವಿಧಾನ ಹೇಳಿಕೊಟ್ಟತ್ತು ಮಹಾಲಕ್ಷ್ಮಿ ಮಗಳಿಂಗೆ.
ಸುರುವಿಲ್ಲಿ ಅರಡಿಯದ್ದೆ ಬಿಂದು,ಬಿಂದುವಾಗಿ ಹಾಲು ಬಿದ್ದರೆ ಕ್ರಮೇಣ ಧಾರೆಯಾಗಿ ಬೀಳ್ಲೆ ತೊಡಗಿತ್ತು.ಅಂತೂ ಚೆಂಬು ತುಂಬಿ ಬಂತದ ನೊರೆಹಾಲು!!. “ಅಮ್ಮ.,ಕೈಬೇನೆ ಅಪ್ಪಲೆ ಸುರುವಾತು”. ಎದ್ದತ್ತು ಮಗಳು.

“ಸುರು-ಸುರುವಿಂಗೆ ಹಾಂಗೆ ಮಗಳೆ. ಮತ್ತೆ ಅಭ್ಯಾಸ ಆಗಿಹೋವುತ್ತು. ಇದೆಂತೂ ಬ್ರಹ್ಮವಿದ್ಯೆ ಅಲ್ಲ.”

“ಅಜ್ಜೀ..,ಅಜ್ಜೀ ನೋಡಜ್ಜಿ ಆನು ಹಾಲು ಕರವಲೆ ಕಲ್ತೆ!” ಚೆಂಬುತುಂಬ ತುಂಬಿದ ನೊರೆಹಾಲಿನೊಟ್ಟಿಂಗೆ ಒಳ ಓಡಿದ ಪುಳ್ಳಿ ಮಹಾಸಾಧನೆ ಸಂಬ್ರಮದ ಸುದ್ದಿಯ ಮನೆ ತುಂಬೆಲ್ಲ ಕೇಳುವಾಂಗೆ ಅಜ್ಜಿಗೆ ಒಪ್ಪುಸಿತ್ತು. ಅಲ್ಲೆಲ್ಲೋ ಇದ್ದ ಶ್ರೀಕಾಂತ ಓಡಿಯೊಂಡು ಬಂದು “ನಮ್ಮ ಕೂಸಿಂಗಿನ್ನು ಮಾಣಿಯ ಹುಡುಕ್ಕುತ್ತಕ್ಕಡ್ಡಿಯಿಲ್ಲೆ. ಅಂತೂ ಮನೆ ಹುಡುಕ್ಕುವಾಗ ಕರವ ದನ ಇದ್ದ ಮಾಣಿಗೇ ಮೊದಲ ಪ್ರಾಶಸ್ತ್ಯ! ಅಥವಾ ಗೋಪಾಲಕನೇ ಆದರೆ ಇನ್ನೂ ಒಳ್ಳೆದು “ ಹೇಳಿ ತಂಗೆಯ ಕೀಟಲೆ ಮಾಡ್ತಾ ಬಂದ ಅಣ್ಣ.
“ ನೋಡಜ್ಜಿ…, ಅಣ್ಣನ ಅಧಿಕ ಪ್ರಸಂಗ! ಅವನ ಕೊರಳಿಂಗೆ ಗೊಲ್ಲತಿಯ ಕಟ್ಟೆಕ್ಕು.” ಹುಸಿ ಕೋಪ ತೋರ್ಸಿತ್ತು ತಂಗೆ.
“ ಬೇಡ ಶ್ರೀಕಾಂತು.., ಅದರ ಚೇಷ್ಟೆ ಮಾಡೆಡ. ಗೋಪಾಲಕ ಅಲ್ಲ. ಗೋಪಾಲಕೃಷ್ಣನ ಹಾಂಗಿದ್ದವಂಗೇ ಎನ್ನ ಪುಳ್ಳಿಯ ಕೊಡುದು.” ಅಜ್ಜಿಯ ಸಮರ್ಥನೆ.

“ಅದೆಲ್ಲ ಹೋಗಲಿ ಅಜ್ಜಿ, ನಮ್ಮ ಈ ದನಕ್ಕೆ ಅಬ್ಬೆ ಹೇಳಿ ಹೆಸರು ಮಡಗಿದ್ದು!. ಎಂತಕೆ!?.” ಸಿರಿಗೌರಿಯ ಪ್ರಶ್ನೆ.
“ಅಬ್ಬೆ ಹೇಳಿರೆ ಜನನಿ ಹೇಳಿ ಅರ್ಥ. ಇದು ಅಂತಿಂಥ ಹಸುವಲ್ಲ!.ಇದು ಹಾಲುಕೊಟ್ಟು ಈ ಮನೆಯವರ ಸಾಂಕಿದ್ದು. ನಮ್ಮ ಬೆಳೆಭೂಮಿಗೆ ಗೊಬ್ಬರ ಕೊಟ್ಟಿದು. ಜೀವ ಒಳಿಶಿದ್ದು. ಅಪ್ಪ ಅಪಘಾತವ ತಪ್ಪುಸಿದ್ದು. ಸಂದರ್ಭ ಬಪ್ಪಾಗ ಕರೆಗಂಟೆ ಹಾಂಗೆ ದೆನಿಗೇಳಿ ನಮ್ಮ ಎಚ್ಚರುಸುವ ದಿವ್ಯಶಕ್ತಿಯೂ ಇದಕ್ಕಿದ್ದು. ಇದಕ್ಕೆ ಅಬ್ಬೆ ಹೇಳಿ ಹೆಸರು ಮಡಗಲೆ ಇನ್ನೊಂದು ಕಾರಣವೂ ಇದ್ದು.
ಕೇಳು. ನಮ್ಮ ಶ್ರೀಕಾಂತು ಹುಟ್ಟಿಪ್ಪಾಗ ನಿನ್ನಮ್ಮಂಗೆ ಬಾಣಂತಿ ಜ್ವರ ಬಂದು ಕಂಗಾಲಾಗಿ ಅದರ ಎದೆಹಾಲು ಸಂಪೂರ್ಣ ಬತ್ತಿತ್ತು. ಇನ್ನು ಮಾಣಿಯ ಹೇಂಗೆ ಸಾಂಕಿದೊಡ್ಡಮಾಡುದು ಹೇಳ್ವ ಚಿಂತೆ . ನಿನ್ನಜ್ಜನ ಮನೆಲಿ ಅಮ್ಮಂಗೆ, ಮಗುವಿಂಗೆ ಇಬ್ರಿಂಗೂ ಕೊಡ್ಳೆ ಹಾಲಿಂಗೆ ತತ್ವಾರ ಹೇಳಿ . ಇಲ್ಲಿಗೆ ಕರಕ್ಕೊಂಡು ಬಂದಿಯೊಂ. ಪುಟ್ಟ ಶ್ರೀಕಾಂತಂಗೆ ವಿಚಿತ್ರ ರಂಪಾಟ ಇತ್ತು. ಅಂಬಗೆಲ್ಲ ಹಟ್ಟಿ ಬೈಪ್ಪಣಗೆ ಕರಕ್ಕೊಂಡು ಬಂದು ನಿನಗೆ ಕುಡಿವಲೆ ಹಾಲುಕೊಡುವ ಅಂಬೆ ಇದೂಳಿ ತೋರ್ಸಿ ಮಂಕಾಡ್ಸೆಂಡಿತ್ತಿದ್ದೆ. ಅವ ಅವನ ಬಾಲ ಭಾಷೆಲಿ ಅಂಬೆ ಬದಲಿಂಗೆ ’ಅಬ್ಬೆ’ ಹೇಳ್ತಾ ಇದ್ದಿದ್ದಂ. ಅಂದಿಂದ ಇದು ಎಲ್ಲೋರಿಂಗೂ ಅಬ್ಬೆ ಆತು.”

ರೇವತಮ್ಮ ಮತ್ತೆ ಮಾತು ಮುಂದುವರ್ಸಿ “ಇನ್ನೊಂದಾರಿ ನಡೆದ ಘಟನೆ ಕೇಳು. ನೀನು ಎರಡು ವರ್ಷದ ಕೂಸು. ಒಂದಿನ ಆಡ್ತಾ ಆಡ್ತಾ, ಹಟ್ಟಿ ಹತ್ರೆ ಹೋಗಿ; ದನಗೊಕ್ಕೆ ನೀರು ಹಾಕ್ತ ಸಿಮೆಂಟಿನ ತೊಟ್ಟಿಗೆ, ತಲೆಯಡಿಯಾಗಿ ಬಿದ್ದಿದ್ದೆ.ಅದರ ಗಮನಿಸಿದ ಈ ಅಬ್ಬೆ ಒಂದೇ ಸಮ ಕರೆಗಂಟೆ ಹಾಂಗೆ ಕೆಲವಲೆ ತೊಡಗಿತ್ತು. ಆ ಸೂಕ್ಷ್ಮ ಗೊಂತಾದ ಆನು ಬೇಗನೆ ಓಡೋಡಿ ಬಂದು ನೋಡುವಗ ನಿನ್ನ ತಲೆ ನೀರಿನೊಳ ಮುಂಗಿ ಕಾಲೆರಡು ಮೇಗೆ ಕಂಡೊಂಡಿತ್ತು.ಬೇಗ ನಿನ್ನ ನೆಗ್ಗಿ ನೀರು ಕಾರ್ಸಿ ಆರೈಕೆ ಮಾಡಿದಿಯೊಂ. ಅಬ್ಬೆ ಅಂಬಗ ಎಚ್ಚರುಸದೆ ಇದ್ದಿದ್ರೆ ನಿನ್ನ ಪ್ರಾಣ ಸಿಕ್ಕುತಿತಿಲ್ಲೆ. ಗೋವಿನ ಸೂಕ್ಷ್ಮ ಭಾಷೆ ನಾವು ಅರ್ತೊಳೆಕ್ಕು. ಗೋವಿಂಗೆ ಅಪಘಾತವ ತಪ್ಪುಸುವ ಶಕ್ತಿ ಇದ್ದಾಡ”. ಮಕ್ಕೊ ಇಬ್ರೂ ಬಿಟ್ಟಬಾಯಿ,ಬಿಟ್ಟ ಕಣ್ಣಿಂದ ಅಜ್ಜಿ ಹೇಳುತ್ತರನ್ನೇ ಕೇಳಿಯೊಂಡಿತ್ತಿದ್ದವು.

“ನೋಡಿ ಮಕ್ಕಳೇ ಈ ಅಬ್ಬಗೆ ಹತ್ತು ಮಕ್ಕೊ ಆತು. ಇನ್ನೂ ಒಂದೆರಡು ಕಂಜಿಗಳ ಹೆರುವ ತಾಕತ್ತು ಅದಕ್ಕಿದ್ದು.”

ಅಜ್ಜಿ ಬಾಯಿಂದ ಅಬ್ಬೆ ಕತೆ ಇಷ್ಟು ಕೇಳಿದ ಮತ್ತೆ ಶ್ರೀಕಾಂತಂಗೂ ಒಂದರಿ ಹಟ್ಟಿಗೋಗಿ ಅಬ್ಬೆಯ ಹೊಸರೂಪಲ್ಲಿ ನೋಡುವ ಮನಸ್ಸಾತು. ಅವನೊಟ್ಟಿಂಗೆ ತಂಗೆಯೂ ಹೆಜ್ಜೆಹಾಕಿತ್ತು. “ಅಣ್ಣ.., ನಿನಗೆ ಹಾಲುಕೊಟ್ಟು ಪೋಷಣೆ ಮಾಡಿದ ಮಹಾತಾಯಿ, ಈ ನಮ್ಮ ಅಬ್ಬಗೆ ನಮಸ್ಕಾರಮಾಡು. ತಂಗೆ ಅಣ್ಣಂಗೆ ಹೇಳಿರೆ; ನಿನ್ನ ಪ್ರಾಣ ಕಾಪಾಡಿದ ಅಬ್ಬೆಇದು ಇದಕ್ಕೆ ನಮಸ್ಕಾರ ಮಾಡು. ಪರಸ್ಪರ ಹೇಳಿಗೊಂಡವು.

ಅಂದು ಸಂಜೆ ಗಣಪತಿಭಟ್ರು ,ಮಕ್ಕಳು, ಮಹಾಲಕ್ಷ್ಮಿ ಸಹಿತ ಟಿ.ವಿ ನೋಡುತ್ತಿದ್ದೊವು.ಇದ್ದಕ್ಕಿದ್ದ ಹಾಂಗೆ ಅಬ್ಬೆಯ ಕೂಗು ಕೇಳಿತ್ತು.ಅಪ್ಪಾಂ.., ಹಟ್ಟಿಂದ ಹಸು ಕೂಗುತ್ತು ಕೇಳ್ತಾಂಗಾವುತ್ತು!. ಸಿರಿಗೌರಿ ಅಪ್ಪನತ್ರೆ ಹೇಳುವಗ “ನಿನಗೆ ಭ್ರಮೆಯೊ!?”. ಹೇಳಿರೂ ಕೆಮಿಕೊಟ್ಟು ಕೇಳುವಗ; ಅಪ್ಪೂಳಿ ಕಂಡತ್ತು.ಎಲ್ಲೋರು ಹಟ್ಟಿ ಹತ್ರಂಗೆ ಓಡಿದೊವು.
ನೋಡುವಗ ಹಟ್ಟಿಯ ಹತ್ರೆ ಇಪ್ಪಮೆಟ್ಟಿಲ್ಲಿ ಅಜ್ಜಿ ಬಿದ್ದಿದೊವು.

ಗೆಣಪ್ಪಣ್ಣನೂ ಶ್ರೀಕಾಂತನೂ ಅಜ್ಜಿಯ ನೆಗ್ಗಿ ತಂದು ಚಾವಡಿಲಿ ಮನುಷಿದವು. ನೀರು ಕುಡುಶಿದವು. ರಜ್ಜ ಹೊತ್ತಿಲಿ ರೇವತಮ್ಮನ ಕಣ್ಣೆರಡೂ ಹೊರಳಿ ಬಂದು, ಕೊರಳು ಮಾಲಿತ್ತು. ಅಜ್ಜಿ ಈ ಲೋಕಂದ ನಿರ್ಗಮಿಸಿದೊವು ಹೇಳಿ ಗೊಂತಪ್ಪಗ ಎಲ್ಲೋರು ಬೊಬ್ಬೆಹಾಕಿ ಕೂಗಿದೊವು.

ಸಮಾಧಾನ ಮಾಡಿಗೊಂಡು “ಅಬ್ಬೇ ನೀನು ಜೀವ ಒಳಿಶಲೆ ಸಮರ್ಥಳು ಮಾಂತ್ರ ಅಲ್ಲ ಜೀವ ಹೋಪ ಸೂಚನೆಯನ್ನೂ ಕೊಡ್ತ ಸೂಕ್ಷ್ಮತೆ ಇಪ್ಪೋಳು. ಕಣ್ಣು ತುಂಬಿಗೊಂಡು ಹೇಳಿದ ಸಿರಿಗೌರಿ ಮುಂದುವರ್ಸಿ “ಹೆತ್ತಮಾತೆ, ಹೊತ್ತಮಾತೆ, ಒಟ್ಟಿಂಗೆ ಗೋಮಾತೆಯೂ ಸೇರಲಿ. ಮೂರೂ ಜೆನಕ್ಕೂ ಒಟ್ಟಿಂಗೆ ನಮನ. ಈ ರೂಪಲ್ಲಿ ಶ್ರದ್ಧಾಂಜಲಿ ಅಜ್ಜಿಗೆ”.

ಗುರುಗೊ ಹೇಳಿದಮಾತು, ಅಜ್ಜಿಯ ವಾದ ಅದೆಷ್ಟು ನಿದರ್ಶನ ಆತು. ಎಲ್ಲೋರ ಮನಸ್ಸಿಂಗೂ ಹೊಕ್ಕತ್ತು.

~*~

12 thoughts on “ಹಟ್ಟಿಯ ಅಬ್ಬೆಯ ಕರೆಗಂಟೆ

  1. ಉಂಡೆಮನೆ ಕುಮಾರ ,ಬೊಳುಂಬು ಗೋಪಾಲ,ಜಯಲಕ್ಷ್ಮಿ, ರಘುಮುಳಿಯ ಎಲ್ಲೋರಿಂಗು ಧನ್ಯವಾದಂಗೊ. ಹಾಂಗೇ ಬೊಳುಂಬು gOpaalana nirIkShage spaMdhisuvo

  2. ಉಂಡೆಮನೆ ಕುಮಾರ ,ಬೊಳುಂಬು ಗೋಪಾಲ,ಜಯಲಕ್ಷ್ಮಿ, ರಘುಮುಳಿಯ ಎಲ್ಲೋರಿಂಗು ಧನ್ಯವಾದಂಗೊ

  3. ಒಳ್ಳೆ ಕಥೆ ,ವಿಜಯತ್ತೆ ಧನ್ಯವಾದ .

  4. ಕಥೆ ತುಂಬಾ ಲಯಿಕಿದ್ದು ವಿಜಯತ್ತೆ.

  5. ಅಬ್ಬೆಯ ಕತೆಯುದೆ ಮನಸ್ಸಿಂಗೆ ತುಂಬಾ ತಟ್ಟಿತ್ತು. ಕತೆಯೋದಿಯಪ್ಪಗ ಆರಿಂಗಾದರೂ ಗೋವಿನ ಮೇಗೆ ಪ್ರೀತಿ ಹುಟ್ಟದ್ದೆ ಇರ.
    ಕತೆಯ ಎಡೆ ಎಡೆಲಿ ಗೋವಿನ ಪ್ರಾಮುಖ್ಯತೆಯ, ವಿವರಂಗಳ ಕೊಟ್ಟದೂ ಲಾಯಕಾಯಿದು. ವಿಜಯಕ್ಕ, ನುಡಿಗಟ್ಟುಗಳ ಹಾಂಗೆ ಗಟ್ಟಿ ಕತೆಗಳುದೆ ಬೈಲಿಂಗೆ ಬರಳಿ.

  6. ಒಳ್ಳೆ ಕಥೆ, ಧನ್ಯವಾದಂಗೊ..

  7. ಶರ್ಮಭಾಂಗೆ , ಚೆನ್ನೈಭಾವಂಗೆ , ಕೂಳಕ್ಕೋಡ್ಳು ಪಾರ್ವತಿಗೆ ಹೃತ್ಪೂರ್ವಕ ಧನ್ಯವಾದಂಗೊ .ಕತೆ ಬರದರೆ ಬಯಲಿಲ್ಲಿ ಓದುತ್ತವನ್ನೇ ಸಂತೋಷಾತು .

  8. ಮನುಷ್ಯರ ಮತ್ತೆ ಗೋವುಗಳ ಅವಿನಾವ ಸಂಬಂಧ ತುಂಬಾ ಚೆಂದಕೆ ಮೂಡಿ ಬಯಿಂದು ಕತೆಲಿ.
    ವಿಜಯತ್ತಿಗೆಗೆ ಧನ್ಯವಾದಂಗೋ

  9. ಕರೆಗಂಟೆ ಕೊಡುವ ಹಟ್ಟಿಯ ಅಬ್ಬೆ – ಹವ್ಯಕ ಕತೆ: – ಒಪ್ಪ

  10. ವಿಜಯಕ್ಕನ ಕಥೆ ಹೇಳಿದರೆ ಹಾಂಗೆ. ಅಷ್ಟು ನೀಟಾಗಿಕ್ಕು.ಬಹಳ ಲಾಯಿಕಯಿದು ವಿಜಯಕ್ಕ.ಆತಾ.

  11. ಶೀಲಾ ,ನೀನು ಓದಿ ಮೆಚ್ಚಿದ್ದಕ್ಕೆ , ಎನ್ನ ಮೇಗಣ ನಿನ್ನ ಅಭಿಮಾನಕ್ಕೆ ಮನ ತುಂಬಿದ ಧನ್ಯವಾದಂಗೊ.ಹಾಂಗೇ ಮೊನ್ನೆಯ ನಿನ್ನ ಕತೆಯ ಮುಂದಾಣ ಭಾಗ ಎದುರು ನೋಡ್ತೆ.

  12. ವಿಜಯಕ್ಕಾ, ಹೃದಯಸ್ಪರ್ಶಿ ಕಥೆ. ಒಟ್ಟೊಟ್ಟಿಂಗೆ ಎರಡೆರಡು ಸರ್ತಿ ಓದಿದೆ. ನಿಂಗಳ ಹೀಂಗಿಪ್ಪ ಬರವಣಿಗೆಂದ ನಮ್ಮ ಈ ಬೈಲು ಫಲವತ್ತಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×