‘ಅಡಿಗೆ ಸತ್ಯಣ್ಣ’ – 48 (ಮುಳಿಯ ವಿಶೇಷಾಂಕ)

ಮುಳಿಯ ಭಾವನಲ್ಲಿ ಮನ್ನೆ ಹೊಸ ಮನೆ ಒಕ್ಕಲದಾ. ಎಲ್ಲೋರ ಸಹೃದಯ ಸಹಕಾರಂದ, ಗುರುದೇವತಾನುಗ್ರಹಂದ ಎಲ್ಲವೂ ಲಾಯಕಕ್ಕೆ, ಚೆಂದಕ್ಕೆ ಕಳುದ್ದದು ನವಗೂ ಹೆಮ್ಮೆಯೂ ಕೊಶಿಯೂ ಆತು. ಬೈಲ ಅಲ್ಪ ಜೆನಂಗ ಜೆಂಬ್ರಲ್ಲಿ ಕಂಡತ್ತು. ಯಕ್ಷಗಾನವೂ ಇದ್ದತ್ತು. ಭಾರೀ ರೈಸಿದ್ದು ಹೇಳ್ಸು ಯಕ್ಷಗಾನ ಕಲಾವಿದರು ಮನಗೆತ್ತೆಕ್ಕಾರೆ ಮದಲೆ ಬೊಳುಂಬು ಮಾವ ಪಟ ಸಹಿತ ಶುದ್ದಿ ಬೈಲಿಲ್ಲಿ ಹೇಳಿದ್ದರಿಂದಲಾಗಿ ಮನೆ ಒಕ್ಕಲಿಂಗೆ ಹೋದವು ಮನಗೆ ಎತ್ತೆಕ್ಕಾರೆ ಅಲ್ಯಾಣ ವರ್ತಮಾನ ಗೊಂತಾಯ್ದು. ಬೈಲ ಅನುಪ್ಪತ್ಯ ಆದ ಕಾರಣ ಅಡಿಗೆ ಸತ್ಯಣ್ಣ ಬಳಗದ ಅಡಿಗೆಯೂ, ಬೇಲೆನ್ಸು ಭಾವ ಬಳಗದ ಸುಧರಿಕೆಯೂ. ಹೆರಡುವಾಗ ಎಲೆತಟ್ಟೆಯೂ ಮನಾರ, ಮಾಷ್ಟ್ರು ಮಾವನ ಎಲೆಪೆಟ್ಟಿಗೆಯೂ ಮನಾರ ಆಯ್ದು ಹೇದು ಎಸ್. ಅಕ್ಕ° ಹೇಳ್ಯೊಂಡಿತ್ತಿದ್ದವು. ಹೇದರೆ ಅಷ್ಟೂ ಮನಾರ ಸುಧರಿಕೆ ಮಾಡಿದ್ದವು ಹೇದು. ಅಡಿಗೆ ಸತ್ಯಣ್ಣ ಮುಳಿಯ ಮನೆಒಕ್ಕಲು ಕಳ್ಶಿಕ್ಕಿ ಬಂದು ಹೇದ ವರ್ತಮಾನ ಇಂದು ಇಲ್ಲಿ –

 

1.

ಮುಳಿಯ ಭಾವನ ಮನೆ ಒಕ್ಕಲು.  ಬೈಲ ಅನುಪ್ಪತ್ಯ ಆದ ಕಾರಣ ಅಡಿಗೆ ಸತ್ಯಣ್ಣಂದೇ ಅಡಿಗೆ

ಬೈಲ ನೆರಕರೆಗೆ ಹೇಳಿಕೆ ಎಡಿಗಾಟ್ಟು ಹೇಳಿಕೆ ಎತ್ತಿಸಿದ್ದವು. ತೆರಕ್ಕಿನೆಡೆಲಿ ಒಂದೊರೆಡು ಬಿಟ್ಟು ಹೋದ್ದಿಕ್ಕು. ಅಂದರೂ ಸಾರ ಇಲ್ಲೆ. ದೊಡ್ಡ ಜೆಂಬ್ರ ಅಪ್ಪಲ್ಲಿ ಒಂದೆರಡು ಹಾಂಗೆ ಅಪ್ಪದಿದ್ದು.

ಕುಟುಂಬ ಸಮೇತ ಸತ್ಯಣ್ಣಂಗೆ ಹೇಳಿಕೆ ಇತ್ತಿದ್ದ ಕಾರಣ ಶಾರದಕ್ಕನೂ ಮನೆ ಒಕ್ಕಲಿಂಗೆ ಹೆರಡ್ತಾ ಇದ್ದವು. ರಂಗಣ್ಣ ಆಗಳೇ ಬಂದು ಕೂಯ್ದ ಸತ್ಯಣ್ಣನೊಟ್ಟಿಂಗೇ ಹೋಪದು ಹೇದು

ಹೆರಟಾದರೂ ರಂಗಣ್ಣ ಏಳ್ತು ಕಾಣ್ತಿಲ್ಲೆ. ಮೇಜಿಲಿ ಅಟ್ಟಿ ಓಶಿಯೊಂಡಿದ್ದ ಹೇಳಿಕೆ ಕಾಗದಂಗಳ ಅರಟಿಗೊಂಡಿತ್ತಿದ್ದ°

ಸತ್ಯಣ್ಣ ಕೇಟ° – ‘ಎಂತ್ಸೋ, ನೀನು ಹೆರಡ್ತ ಅಂದಾಜಿ ಇಲ್ಲ್ಯೋ ಇಂದು?!, ಎಂತರ ಹುಡುಕ್ಕುಸ್ಸು ನೀನು?’

ರಂಗಣ್ಣ ಹೇದ° – ‘ಅಲ್ಲ ಮಾವ, ಈ ಮುಳಿಯ ಮನೆ ಒಕ್ಕಲ ಹೇಳಿಕೆ ಕಾಗದ ಎಲ್ಲಿದ್ದು ಹೇದು. ಈಗೀಗ ಮದುವೆ, ಉಪ್ನಾನ, ಬಾರ್ಸ, ಹೋಮ ಎಲ್ಲವೂ ಹಾಲುಗಳಲ್ಲೇ ಅಪ್ಪದಿದಾ. ನಾಳಂಗೆ ಮನೆ ಒಕ್ಕಲು ಏವ ಹಾಲಿಲ್ಲಿ ಹೇದು ಒಂದರಿ ನೋಡಿಕ್ಕಿತೇ ಹೇದು’!!

ಸತ್ಯಣ್ಣ ಹೇದ° – “ಇಲ್ಲೆ ಇಲ್ಲೆ, ಮನೆ ಒಕ್ಕಲೂ, ತಿಥಿಯೂ ಸದ್ಯಕ್ಕೆ ಮನೆಗಳಲ್ಲೇ ಅಪ್ಪದು. ಅದೂ ಹಾಲಿಲ್ಲಿ ಸುರುವಾದರೆ ನವಗೆ ಮತ್ತೆ ಮನಗೆ ದಾರಿ ಕೂಡ ಮರದಿಕ್ಕುಗು” 😀

~~

2.

ಮುಳಿಯ ಭಾವನಲ್ಲಿ ಮನೆಒಕ್ಕಲು ಮೊನ್ನೆ ಆದರೂ ಕೃಷಿ ಅಂದೇ ಸುರು ಆಯಿದು.

ಜಾಗೆಲಿ ತರಕಾರಿಗಳ ಸಾಲೇ ಸಾಲು.

ಕ್ಯಾರೆಟ್ಟು, ಮೂಲಂಗಿ, ಬಸಳೆ, ಮೆಂತೆಸೊಪ್ಪು, ಅಳತ್ತೊಂಡೆ, ಹರುವೆ….. ಯೇವುದಿದ್ದು ಯೇವುದಿಲ್ಲೆ!adige satyanna 5

ರಂಗಣ್ಣಂಗೆ ಬಗೆ ಬಗೆ ತರಕಾರಿ ನೋಡಿ ಇನ್ನಾಣ ಬೈಲಿನ ಕಾರ್ಯಕ್ರಮ ಇಲ್ಲಿಯೇ ಮಾಡಿದರೆ ಈ ತರಕಾರಿಗಳನ್ನೇ ಅಡಿಗೆ ಮಾಡಿದರಾತು ಹೇಳಿ ಕಂಡತ್ತು.

ಸತ್ಯಣ್ಣನ ಹತ್ರೆ ಕೇಟ- “ಮಾವ, ಇಷ್ಟು ಬಗೆ ತರಕಾರಿ ನಮ್ಮಲ್ಲಿ ಮಾಡ್ಳೆ ಎಡಿಗು ಹೇದು ಅಂದಾಜು ಇತ್ತಿಲ್ಲೆಪ್ಪೊ. ಮುಳ್ಳಿಯದೋರ ಕೃಷಿಪ್ರೀತಿ ಮೆಚ್ಚೆಕ್ಕಾದ್ದೆ.

ಸತ್ಯಣ್ಣ ಹೇದ° – “ನಿನ್ನ ಕಣ್ಣು ಬಿದ್ದತ್ತಾ ತರಕಾರಿ ಮೇಗೆ? ಇನ್ನು ಮುಳಿಯ ಭಾವನ ಹತ್ರೆ ಮಂತರ್ಸಿ ಕಟ್ಟುಲೆ ಹೇಳೆಕ್ಕಷ್ಟೇ ಅವರ ಬೇಲಿಗೆ. ಇನ್ನು ತರಕಾರಿಗ ಲಾಯ್ಕಲ್ಲಿ ಬಂದರೆ ಭಾಗ್ಯವೇ!!”

“ಎಂತರ ಮಾವ ನಿಂಗೊ ಹೀಂಗೆ ಹೇಳುದು? ಆನು ಕಣ್ಣು ಹಾಕಿದ್ದದಲ್ಲ! ಅವರ ಕೃಷಿಲಿ ಇಷ್ಟು ಲಾಯ್ಕ ಬೆಳೆ ಬಂದದರ ಹೇದ್ದದು ಅಷ್ಟೆ. ಅವು ಬೆಳೆಯೆಕ್ಕು ಇನ್ನುದೇ! ಸಮಾಜಲ್ಲಿ ಎಲ್ಲೋರಿಂಗೂ ಮಾದರಿ ಆಗೆಡದೋ? ಹೇದು ಹೇದ್ದದು. – ರಂಗಣ್ಣನ ನಿಷ್ಕಲ್ಮಶ ಮಾತು.

ಸತ್ಯಣ್ಣ ಹೇದ°- “ಆತಪ್ಪಾ! ನಿನ್ನ ಕಣ್ಣು ಮುಟ್ಟ ಆತ ಮಿನಿಯಾ. ಪೇಟೆಲಿ ಇದ್ದರೂ ಕೃಷಿಯ ಮುನ್ನಡೆಶಿ ಬಂದ ಇಡೀ ಕುಟುಂಬವ ನಾವು ಮೆಚ್ಚೆಕು. ಇನ್ನು ಹೋಪಲ್ಲಿ ಎಲ್ಲ ಇವರ ಬಗ್ಗೆ ಹೇಳಲೇ ಬೇಕು. ಪೇಟೆಲಿ ಇದ್ದುಗೊಂಡು ಹಳ್ಳಿ ಬೆಳೆಶಿದ ಸಾಧನೆ ಇವರದ್ದು! ಹೆರಿಯರಾದ ಕೇಶವಯ್ಯರಿಂದ ಹಿಡುದು ಕುಂಞಿಮಾಣಿಯ ವರೆಗೆ ಎಲ್ಲೋರಿಂಗೂ ಸಾಹಿತ್ಯದ ಹಾಂಗೆ ಕೃಷಿಯೂ ನೆತ್ತರಿಲಿ ಬಯಿಂದು. ವಾಸ್ತುಹೋಮಾದಿ ಕಾರ್ಯಂಗ ಆಗಿ ಒಕ್ಕಲಾದ ಮನೆ ಇನ್ನೂ ಬೆಳಗಲಿ..”

ಸತ್ಯಣ್ಣನ ಮಾತು ಕೇಟಪ್ಪಗ ರಂಗಣ್ಣಂಗೂ ಹೃದಯ ತುಂಬಿ ಬಂತು, ದೊಂಡೆ ಒಣಗಿತ್ತು ಒಂದು ಕ್ಷಣಕ್ಕೆ. 😀

~
3.

ಮುಳಿಯದವರ ತರವಾಡು ಮನೆಯ ಒಕ್ಕಲಿಂಗೆ ಆರೆಲ್ಲ ಹೋದ್ದದು ಹೇಳ್ತ ಶುದ್ದಿ ಬೈಲಿಲಿಡೀ ಗೊಂತಾಯಿದನ್ನೇ!

ಹೋದವಕ್ಕೆ ಮುಳಿಯ ಬೈಲು ಇಡೀಕ ತಿರುಗದ್ದೆ ಆವುತ್ತಾ?!

ಹಾಂಗೆ ರಜಾ ತೋಟಕ್ಕೆ ನೆಡದತ್ತು.

ಮನೆಂದ ಸುರು ಆಗಿ ಜಾಗೆ ತಲೇಲಿ ಇಪ್ಪ ಕೆರೆಯೊರಗೆ ಮೆರವಣಿಗೆ ಹೋತು!

ವಾಪಾಸು ಬಪ್ಪಗ ಅಭಾವನೂ, ದೊಡ್ಡಭಾವನೂ ಬೇಲಿ ಕರೆ ಕರೆಂಗೆ ಹೋಪದು ಕಂಡತ್ತು.

ಟೀಕೆ ಮಾವ ಕೇಟವು. ಇವೆರಡು ಇದೆತ್ಲಾಗಿ ಹೋಪದು ಹೇದು?!!

ಅಂಬಗ ಸತ್ಯಣ್ಣ ಹೇದ°- “ಮುಳಿಯ ಭಾವನ ಲಾಯ್ಕದ ಜಾಗೆ ಕಂಡು ಅದರಂದ ಅತ್ಲಾಗಿಯಾಣ ಜಾಗೆ ಮಾರ್ತವೋ ಹೇಳಿ ಕೇಳ್ಳೆ ಹೆರಟದಾದಿಕ್ಕೋ! ಉಮ್ಮ!!” 😀

ಸತ್ಯಣ್ಣ ಹೇಳ್ತರ ಕೇಟು ರಂಗಣ್ಣ ಎಂತ ಜಾನ್ಸಿದನೋ ಏನೋ! ಉಮ್ಮ!! 😀

 

“`

4.

ಮುಳಿಯದ ಮನೆ ಒಕ್ಕಲಿಂಗೆ ಬೈಲಿನ ಹಲವು ಜೆನ ಸೇರಿತ್ತಿದ್ದವು ಅಪ್ಪೋ.

ಅಭಾವ, ತೆಕ್ಕುಂಜ ಮಾವ, ಯೆನಂಕೋಡ್ಲಣ್ಣ, ಒಪ್ಪಣ್ಣ…… ಅಲ್ಲದ್ದೆ ಸತ್ಯಣ್ಣ – ರಂಗಣ್ಣ ಮುನ್ನಾಣ ದಿನವೇ ಸೇರಿತ್ತಿದ್ದವು.

ಅಡಿಗೆ ಕೊಟ್ಟಗೆಲಿ ಕೆಲವು ಪಾತ್ರ ಸಾಮಾನುಗೊ ಅಗತ್ಯ ಬೇಕಾಗಿ ಬಂತು ಸತ್ಯಣ್ಣಂಗೆ.

ಇಪ್ಪದರ ತೊಳೆಯದ್ದೆ ಉಪಯೋಗ್ಸುಲೆ ಎಡಿಯ.

ಹಾಂಗೆ ಅಭಾವನತ್ರೆ ಹೇಳಿದ್ದಕ್ಕೆ ಮನೆ ಕೆಲಸದವು ಸಿಕ್ಕುಗೋ ಹೇದು ಹುಡ್ಕಿಯೊಂಡು ಬಂದ ಜಾಲ ಕರೆಗೆ.

ಅಲ್ಲಿ ತೆಕ್ಕುಂಜ ಮಾವ ಮುಳಿಯ ಭಾವಂದ್ರ ಹತ್ರೆ ಎಂತದೋ ಲೊಟ್ಟೆ ಹೊಡಕ್ಕೊಂಡು ಇಪ್ಪದು ಕಂಡತ್ತು.

ಅಭಾವ ಬಂದಪ್ಪಗ ಸತ್ಯಣ್ಣನೂ ಬೈರಾಸು ಕುಡುಗಿಗೊಂಡು ಅಲ್ಲಿಗೆತ್ತಿದ .

ಮುಳಿಯದ ಸಣ್ಣ ಭಾವ ಕೆಲಸದ ಆಳು ಮಲ್ಲೇಶನ ದೆನುಗೇದವು.

ಅದು ತೋಟದ ದಾರಿ ಕರೆಲಿಪ್ಪ ಮನೆಂದ ಹೆರಟು ಬಂತು.

ಬಪ್ಪ ದಾರಿಲಿ ಕಸ್ತಲೆ. ಜಾಲ ಕರೆಲಿ ಬೆಣಚ್ಚಿಂಗೆ ಬಂದಪ್ಪಗ ಮುಳಿಯದ ದೊಡ್ಡ ಭಾವ “ಮಲ್ಲೇಶ ಈಗ ಕೆಲಸ ಮಾಡ್ತ ಪರಿಸ್ತಿತಿಲಿ ಕಾಣ್ತಿಲೆ. ನೀನು ಬೇರೆ ಎಂತಾರು ವೆವಸ್ತೆ ಮಾಡು” ಹೇದು ಸಣ್ಣ ಭಾವನತ್ರೆ ಹೇದವು.

“ಅದೆಂತ್ಸರ ಭಾವ,ಕೆಲಸ ಮಾಡ್ತ ಪರಿಸ್ತಿತಿಲಿ ಇಲ್ಲೆ ಹೇದರೆ.ನಿಂಗೊ ಹೇಂಗೆ ಅಂದಾಜಿ ಮಾಡಿದಿ?” ಸತ್ಯಣ್ಣಂಗೆ ತಿಳ್ಕೊಂಬ ಕುತೂಹಲ.

“ಇದಾ ಸತ್ಯಣ್ಣ, ಕಸ್ತಲೆ ದಾರಿಲಿ ಸೀದ ಸರ್ತ ನಡಕ್ಕೊಂಡು, ಬೆಣಚ್ಚಿಪ್ಪಲ್ಲಿ ಮಾಲ್ಯೊಂಡು ಬಪ್ಪ ಜೆನ ಸಮಾ ಉರ್ಪಿದ್ದು ಹೇಳಿಯೇ ಲೆಕ್ಕ, ಎಂತ ..?!” ಹೇದು ಮುಳಿಯದ ದೊಡ್ಡ ಭಾವ ಹೇಳಿಯಪ್ಪದ್ದೆ,

“ಅದಾಗಿಕ್ಕು,ಹೊತ್ತೋಪಗ ಅಪ್ಪ° ಎಲ್ಲ ಕೆಲಸದವಕ್ಕೆ ಕವರಿಲಿ ತುಂಬುಶಿ ಬಟವಾಡೆ ಮಾಡ್ಯೊಂಡಿತ್ತಿದ್ದವು. ಗೆಂಡು ಆಳುಗೊ ಎಲ್ಲ ಸೇರಿ ಹೆರ ಹೋಗಿ ಬಯಿಂದವು” ಹೇದ ಮುಳಿಯ ಸಣ್ಣ ಭಾವ. 😀

ಇಷ್ಟೆಲ್ಲ ಕೇಟಪ್ಪಗ ಅಡಿಗೆ ಸತ್ಯಣ್ಣ ಬೆಣಚ್ಚಿಪ್ಪ ಜಾಲಿಂದ ಸರ್ತ  ಅಡಿಗೆ ಆವುತ್ತಲ್ಲಿಂಗೆ ಸೀದ ನಡದ°. 😀

“`
5.

ಮುಳಿಯ ಫಾರ್ಮ್ ಹೌಸಿನ ಗೃಹ ಪ್ರವೇಶ ಗಡದ್ದಾಗಿ ಕಳುದತ್ತು.

ಮುನ್ನಾಣ ದಿನವೇ ಸತ್ಯಣ್ಣ, ರಂಗಣ್ಣ ಹಾಜರಿ ಹಾಕಿದ್ದವು ಹೇಳೊದು ಗೊಂತಿಪ್ಪದೆ.

ಮರದಿನ ಉದೆಗಾಲಕ್ಕೆ ಎದ್ದು ಒಬ್ಬೊಬ್ಬನೆ ಮಿಂದು ತಯಾರಾಯೆಕ್ಕು ಹೇದು ಬಟ್ಟ ಮಾವ ಹೇದಿತ್ತಿದ್ದವು.

ಎಲ್ಲೊರಂದ ಮದಾಲು ಎದ್ದದು ಸತ್ಯಣ್ಣ. ಮತ್ತೆ ಬಟ್ಟ ಮಾವ. ಅವು ಮಿಂದಪ್ಪದ್ದೆ ರಂಗಣ್ಣನೂ ಹಸೆ ಮಡಸಿ ಮೀಯ್ತಕೊಟ್ಟಗ್ಗೆ  ಹೋದ.

ಎಲ್ಲ ಹೊಸ ನಮುನೆ ವೆವಸ್ತೆಗೊ ಅಲ್ಲಿತ್ತಿದ್ದು. ಬಾಗಿಲಿಂಗೆ ಗ್ಲಾಸಿನ ಕೂರ್ಸಿತ್ತಿದ್ದವು. ಒಂದು ಗಳಿಗೆ ರಂಗಣ್ಣ ನೋಡಿ ಎಲ್ಲಿದ್ದೆ ತಾನು ಹೇಳ್ವದು ಮರತ್ತೋದ. ಮಿಂದಿಕ್ಕಿ ಬಪ್ಪದು ರಜ್ಜ ತಡವೇ ಅತು.

‘ಎಂತ ಬಾಳಂತಿ ಮೀಯಾಣವೋ ನಿನ್ನದು’ ಹೇದು ಸತ್ಯಣ್ಣ ಪರಂಚಲೆ ಶುರು ಮಾಡಿದ°.

ರಂಗಣ್ಣ ಬೆಪ್ಪು ಮೋರೆ ಮಾಡ್ಯೊಂಡು ನಿಂದ°. ಎಂತದೋ ಸಮ ಇಲ್ಲೆ ಹೇದು ಸತ್ಯಣ್ಣನ ಸೂಕ್ಷ್ಮ ಮತಿಗೆ ಅರ್ಥ ಆತು.
“ಎಂತ ಆತು ರಂಗೊ, ನೀನೆಂತ ಮಾತಾಡ್ತಿಲ್ಲೆ”

“ಮೀವಗ ಬಾಗಿಲಿನ ಚಿಲಕ ಎಳವದು ಹೇಂಗೆ ಗೊಂತಾಯ್ದಿಲ್ಲೆ. ಹಾಂಗೇ ಬಾಗಿಲೆರೆಶಿ ಮಿಂದುಗೊಂಡಿಪ್ಪಗ ಆ ಬಟ್ಟಮಾವ ಬಾಗಿಲು ನೂಕಿ ಬರೆಕ್ಕೆ.? ಎಲ್ಲ ಕಂಡತ್ತಾಯಿಕ್ಕು ಛೆ!!.” 🙁

“ಮೀವಗ ಚಿಲಕ ಎಳೆಯೆಕ್ಕು ಹೇದು ಗೊಂತಿಲ್ಯೋ ಹೆಬಗಾ ನಿನಗೆ ?!”. ಗೊಂತಾಯಿದಿಲ್ಲೆ ಹೇದರೆ ಕೇಟತ್ತಪ್ಪ. ಹೋಗಲಿ., ಈಗ ಬಟ್ಟ ಮಾವ ಮಂಡ್ಲ ಹಾಕುತ್ತಾ ಇದ್ದವು, ಎಂತ ಕಂಡಿರ ಅವಕ್ಕೆ. ನೀನು ಹೋಗು ಕಾಯಿ ಕೆರವಲೆ ಶುರು ಮಾಡು. ಅದನ್ನೇ ಗ್ರೇಶಿಕೊಂಡು ಕಡವ ಕಲ್ಲಿನ ಕಂಜಿ ಎಡಕ್ಕಿಂಗೆ ಬೆರಳು ಕೊಟ್ಟಿಕೆಡಾ” ಹೇದಿಕ್ಕಿ ಸತ್ಯಣ್ಣ ಇಡ್ಲಿ ಬೇಶುಲೆ ಶುರು ಮಾಡ್ಲೆ ಹೆರಟ° 😀

““

6.

ಮುಳಿಯ ಮನೆಒಕ್ಕಲಿಲಿ ಊಟಕ್ಕೆ ಬಗೆಬಗೆ ಸ್ವೀಟುಗೊ.

ಜಿಲೇಬಿ, ಬಾದಾಮಿ ಬರ್ಫಿ, ಪಾಯಿಸ ತಿಂದ ರಂಗಣ್ಣಂಗೆ ಒರಕ್ಕು ತೂಗಲೆ ಸುರು ಆತು.

ಉಂಡಾದಪ್ಪದ್ದೇ ಬಚ್ಚಲು ತಣಿಯಲೆ ಮನುಗಿಯೂ ಆತು. ಮನುಗಿದಲ್ಲೇ ಒರಕ್ಕೂ ಬಂತು.

ಎದ್ದಕೂಡ್ಳೇ ಚಾಯವೂ ಆತು. ಚಾಯದ ಬೆನ್ನಾರೆ ದಕ್ಷಿಣೆ ಬಟ್ವಾಡೆ ಆತು. ಇನ್ನು ಹೆರಡುದೇ.
ಹೆರಡುವಾಗ ಮುಳಿಯದಕ್ಕ ಬೂದುಬಣ್ಣದ ಕುಂಞಿಕುಂಞಿ ತೊಟ್ಟೆ ಹಿಡ್ಕೊಂಡು ಬಂದವು, ಎಲ್ಲೋರಿಂಗೂ ಒಂದೊಂದು ಕಟ್ಟು ಕೊಟ್ಟವು.

ಒರಕ್ಕು ಪೂರ ಬಿರಿಯದ್ದ ರಂಗಣ್ಣಂಗೆ ಅದು ಸ್ವೀಟಿನ ಕಟ್ಟ ಹೇದು ಗೊಂತಾತು. ಅವ್ವೇ ಮಾಡಿದ ಮೂರೂ ಬಗೆ ಸ್ವೀಟಿನ ತಿಂದು ರುಚಿ ನೋಡಿ ಆಯಿದು, ಇನ್ನು ಪುನಾ ತಿಂತದು ರುಚಿ ಇದ್ದೋ – ಹೇದು “ಎನ ಬೇಡ ಅಕ್ಕಾ” ಹೇದ° ರಂಗಣ್ಣ°. “ಇದಾ, ತೆಕ್ಕೊಳಿ ರಂಗಣ್ಣಾ” ಹೇದರೂ “ಬೇಡ, ಎನಗೆ ಆ..ಗಳೇ ತಿಂದಾಯಿದು” – ಹೇದು ದೊಡ್ಡಜೆನ ಆದ.
“ಅಪ್ಪಾ, ಸರಿ” ಹೇದು ಸತ್ಯಣ್ಣಂಗೂ, ಒಳುದೋರಿಂಗೂ ಕೊಟ್ಟುಗೊಂಡು ಅಕ್ಕ ಮುಂದುವರುದವು.

ಹೆರಟಾತು, ಗುಡ್ಡೆಹತ್ತಿದ ಬಚ್ಚಲು ತಣಿಯಲೆ ಸತ್ಯಣ್ಣ ಅವಂಗೆ ಸಿಕ್ಕಿದ ಕಟ್ಟ ಬಿಚ್ಚಿದ.

ಕಟ್ಟದೊಳಾಣ ಐಟಮ್ಮು ನೋಡಿ ರಂಗಣ್ಣಂಗೆ ಮೋರೆ ಹುಳಿ ಹುಳಿ ಆತು. ಎಂತಕೆ?

ಅದು ಹಂತಿಲಿ ತಿಂದ ಮೂರು ಬಗೆಯೂ ಅಲ್ಲ, ಕಟ್ಟದೊಳ ಇದ್ದದು ನರನ್ಸು ಮಾವ ಮಾಡಿದ “ಲಾಡು”!!

ಬೇಡಾ ಹೇದ್ದದು  ‘ಕೆಟ್ಟತ್ತನ್ನೆ ಮುಕುಟಾ!’ ಹೇದು ರಂಗಣ್ಣನ ಬಾಯಿಲಿ ನೀರು!.

ಇವ° ಬಾಯಿ ಚೆಪ್ಪಾರ್ಸುತ್ತ ಅವಸ್ಥೆ ನೋಡ್ಳೆಡಿಯದ್ದೆ ಸತ್ಯಣ್ಣ ಅರ್ಧಲಾಡು ರಂಗಣ್ಣನ ಕೈಲಿ ಮಡಗಿಂಡು ಹೇದ° – “ಹೆರಡ್ಳಪ್ಪಗ ಕಟ್ಟಿ ಕೊಟ್ಟದರ ಮತಾಡದ್ದೆ ತೆಕ್ಕೊಳೇಕು ಹೇಳ್ಸು ಇದಕ್ಕೇ ಇದಾ”. 😀

~~

7.

ಮುಳಿಯ ಮನೆ ಒಕ್ಕಲಿಂಗೆ ಅಡಿಗೆ ಸತ್ಯಣ್ಣ ಅಡಿಗೆಯೋನಾಗಿ ಅವ° ಒಬ್ಬ ಮಾಂತ್ರ ಅಲ್ಲ ಬಂದ್ಸು.

ಬೈಲ ನೆಂಟರಿಷ್ಟರು ಹೇಳ್ತ ಲೆಕ್ಕಲ್ಲಿ ಒಟ್ಟಿಂಗೆ ಶಾರದಕ್ಕನೂ ಬೈಂದು

ಕೊಡೆಯಾಲಕ್ಕೆ ಹೋವ್ಸು ಬೈಕಿಂದ ಹೆಚ್ಚಿಗೆ ಬಸ್ಸೇ ಒಳ್ಳೆದು ಹೇದು ಬೈಕ ವಿಟ್ಳ ನೀರ್ಪಾಜೆ ಅಕ್ಕನಲ್ಲಿ ಮಾಡಕರೇಲಿ ಬಿಟ್ಟಿಕ್ಕಿ ಬಸ್ಸಿಲ್ಲಿ ಬಂದ್ಸು ರಂಗಣ್ಣನೂ ಶಾರದಕ್ಕನೂ ಸತ್ಯಣ್ಣನೂ ಒಟ್ಟಿಂಗೆ.

ಬಾಕಿದ್ದೋರು ಸೀದಾ ಅಲ್ಲಿಗೆ ಬಂದು ಸೇರ್ಲೆ ಮಾತಾಡಿಗೊಂಡದು .

ಕೊಡೆಯಾಲಲ್ಲಿ ಒಂದರಿ ಇಳುದು ಅದೆಂತ್ಸೋ ಅಂಗಡಿಂದ ತೆಗವಲಿದ್ದು ಹೇದು ಅಂಗಡಿ ಒಳ ಹೊಕ್ಕು ತೆಗದು ಪಕೀಟಿಂದ ಪೈಸೆ ಕೊಟ್ಟಿಕ್ಕಿ ಹೆರಬಂದು ಮಾರ್ಗ ಅಡ್ಡದಾಂಟ್ಳೆ ಹೊಣಕ್ಕೊಂಡಿಪ್ಪಗ ಶಾರದಕ್ಕ ಅದೆಂತ್ಸೋ ಡಂಕಿ ಡಮಾಲನೆ ಅಡ್ಡ ಬಿದ್ದತ್ತು ಪಾಪ ನೆಡುಪೇಟೆ ಮಾರ್ಗದ ಕರೆಲಿ. 🙁

ಮೊಳಪ್ಪಿಂಗೆ, ಕೈಗೆ ಹರಂಕಿದ ಗಾಯ ಮಾಡ್ಯೊಂಡ ಶಾರದಕ್ಕನ ಏಳುಸಿ ಬೀಳೆಕ್ಕಾರೆ ಹೇಳ್ಳಾವ್ತಿತ್ತಿಲ್ಯ ಹೇದು ಸಣ್ಣಕೆ ಒಂದು ಗೌಜಿ ಮಾಡಿದ ಬೇನೆ ಮರವಲೆ ಅಡಿಗೆ ಸತ್ಯಣ್ಣ°.

‘ಹೆರ್ಕಲೆ ಎಷ್ಟು ಸಿಕ್ಕಿತ್ತು ಅತ್ತೆ!’ – ಹೇದು ರಂಗಣ್ಣನದ್ದೂ ಒಂದು ಒಗ್ಗರಣೆ ಅದರೆಡಕ್ಕಿಲಿ. 😀

ಅಂತೂ ಮನೆ ಒಕ್ಕಲಿಂಗೆ ಎತ್ತಿದ್ದಾತು.

ಮರದಿನ ಕಾಪಿ ತಿಂಡಿ ಎಲ್ಲ ಆದಿಕ್ಕಿ ಒಂದು ಮಿನುಟು ಪೇಪರು ಮೇಗಂದ ಮೇಗೆ ನೋಡ್ಯೊಂಡಿತ್ತಿದ್ದ ಅಡಿಗೆ ಸತ್ಯಣ್ಣ ಒಂದರಿಯೇ ಪೇಪರ ಅತ್ತೆ ಮಡುಸಿ ಹಾಕಿ ಎದ್ದ ಅಲ್ಲಿಂದ ಪಿಸುರಿಲ್ಲಿ ಏಳ್ತ ನಮೂನೆಲಿ.

ಬೊಳುಂಬು ಮಾವ° ಕೇಟವು – ‘ಎಂತಕೆ ಸತ್ಯಣ್ಣ ನಿಂಗೊಗೆ ಆ ಪೇಪರ ಮೇಗಂದ ಅಷ್ಟೊಂದು ಕೋಪ?!’

ಸತ್ಯಣ್ಣ° ಹೇದ° – ಅಲ್ಲ ಭಾವ°, ಅಷ್ಟು ದೊಡ್ಡ ಕೊಡೆಯಾಲ ಪೇಟೆಲಿ ನಿನ್ನೆ ಎನ್ನ ಹೆಂಡತಿ ಬಿದ್ದಿದು, ಈ ಪೇಪರ್ಲಿ ಅದರ ಶುದ್ದಿಯೇ ಬೈಂದಿಲ್ಲೆ!!. ಕಳ್ಳು ಕುಡುದು ಬಿದ್ದರ್ನೂ ಪಟ ಸಹಿತ ಹಾಕುತ್ತ ಈ ಪೇಪರಿನವಕ್ಕೆ ಪರಮೋಶಂದ ಹೆಮ್ಮಕ್ಕ ಬಿದ್ದ ಶುದ್ದಿ ಹಾಕೆಕು ಹೇದು ಕಂಡಿದೇ ಇಲ್ಲೆ ಇದಾ! 😀   

“ಪೇಪರ್ಲಿ ಎಲ್ಲ ಬಂದರೆ ಅದು ನಿಂಗೊಗೇ ಉಪದ್ರ ಸತ್ಯಣ್ಣ, ಎಲ್ಲೋರು ಮತ್ತೆ ಎಂತಾತು ಎಂತಾತು ಹೇದು ನಿಂಗೊಗೇ ಫೋನ್ ಮಾಡ್ಳೆ ಸುರುಮಾಡುಗು ಹೇದು ಹಾಕದ್ದಾಯ್ಕು” – ಬೊಳುಂಬು ಮಾವ ಹೇದಪ್ಪಗ ಅಡಿಗೆ ಸತ್ಯಣ್ಣಂಗೆ ರಜಾ ಸಮಾಧಾನ ಆತು. ತಾಳು ಬೆಂತೋ  ನೋಡ್ಳೆ ಸೌಟ ಹುಡ್ಕಲೆ ಸುರುಮಾಡಿದ° ಅಡಿಗೆ ಸತ್ಯಣ್ಣ° 😀

 

~~

8.

ಮುಳಿಯ ಮನೆ ಒಕ್ಕಲಿಂಗೆ ಬಂದ ನೆಂಟ್ರ ಪೈಕಿಲಿ ಬೈಲ ಮೋಳಜ್ಜಿಯೂ ಒಂದು.

ಎಲ್ಲೋರು ಮೋಳಜ್ಜಿ ಮೋಳಜ್ಜಿ ಹೇದು ಮೋಳಜ್ಜಿಯ ಮಾತಾಡ್ಸುವವೇ

ಪ್ರಾಯ ಸುಮಾರು ಎಪ್ಪತ್ತರ ಹತ್ರೆ ಆದರೂ ಮೋಳಜ್ಜಿಗೆ ಇದ್ದಲ್ಯಂಗೆ ಕೈಕಾಲು ಗಟ್ಟಿಯಾಗಿ ಉಷಾರಿದ್ದವು.

ರಂಗಣ್ಣಂಗೆ ಮೋಳು ಮೋಳು ಹೇದು ದೊಡ್ಡವು ಕುಂಞಿಮಕ್ಕಳ ದೆನಿಗೊಳ್ತದು ಕಂಡುಗೊಂತಿದ್ದು. ಇದೆಂತಕೆ ಅಜ್ಜಿಯ ಮೋಳು ಹೇಳ್ಸು ಹೇದು ಕಣ್ಣು ಕೆಮಿ ಮೂಗು ಅರಳಿತ್ತು.

ಸತ್ಯಣ್ಣ ಹೇದಮತ್ತೆ ಸಂಗತಿ ಗೊಂತಾತು  – ಈ ಮೋಳಜ್ಜಿ ಮದಲಿಂದಲೇ ಅದರಿಂದ ಸಣ್ಣಾಗಿಪ್ಪ ಆರೇ ಕೂಸುಗಳಾದರೂ ಎಂತ ಮೋಳು, ಎಂತ ಮೋಳೇ ಹೇದು ದೆನಿಗೊಂಬದು ಅಭ್ಯಾಸ. ಅದ್ಯಾವುದೋ ಒಂದು ಬಿಂಗಿ ಕೂಸಿಂಗೆ ಅದರ ‘ಮೋಳು’ ಹೇದ್ದದು ಸರಿಯಾಗದ್ದೆ ಈ ಅಜ್ಜಿಗೆ ‘ಮೋಳಜ್ಜಿ’ ಹೇದು ಹೆಸರು ಮಡಿಗಿತ್ತಡ!

ರಂಗಣ್ಣಂಗೆ ಯೇಚನೆ ಸುರುವಾತು… ಇನ್ನೊಬ್ಬನ ಅಡ್ಡಹೆಸರಿಂದ ದೆನಿಗೊಳ್ತರೆ ಜಾಗ್ರತೆ ಬೇಕು 😀

~~

9.

ಮುಳಿಯ ಮನೆ ಒಕ್ಕಲಿಂಗೆ ಹೋದಲ್ಲಿ ಒಂದು ಆಳು ಇದ್ದತ್ತು.

ಪ್ರಾಯ ದಣಿಯ ಆಗ, ಹೆಚ್ಚು ಕಮ್ಮಿ ರಂಗಣ್ಣನ ಪ್ರಾಯದಾಂಗೇ ಕಾಣುತ್ತು.

ಅದರಜ್ಜನ ಕಾಲಂದಲೇ ಮುಳಿಯ ಮನೆ ಚಾಕ್ರಿ ಮಾಡಿಗೊಂಡು ಬಂದ ಆ ಆಳಿನ ಅಪ್ಪನೂ, ಇದೂ ಇಬ್ರೂ ಮುಳಿಯ ನಿತ್ಯಾಣ ಕೆಲಸಕ್ಕೆ ಖಾಯಂ ಆಳುಗಳ ಲೆಕ್ಕ.

ಅದರ ಹೆಸರು ಎಂಕು. ಎಲ್ಲೋರು ಅದರ ಎಂಕು ಎಂಕು ಹೇದು ದೆನಿಗೊಂಡು ಕೆಲಸ ಹೇಳ್ಸು ಕಾಣುತ್ತು ರಂಗಂಗೆ.

ಕಾಯಿ ಕಡಕ್ಕೊಂಡಿತ್ತಿದ್ದ ರಂಗಣ್ಣಂಗೆ ಫಕ್ಕನೆ ಒಂದು ಯೋಚನೆ ಬಂತು, ಅಡಿಗೆ ಸತ್ಯಣ್ಣನೈಲಿ ಹೇದ° –

“ಮಾವ, ಎಂಕು ಪಣಂಬೂರಿಂಗೆ ಹೋದ್ಸು ಹೇದು ಹೇಳ್ತವನ್ನೆ. ಅದು ಇದೇ ಎಂಕುವೋ?!. ಎಂತ್ಸಕಡ ಹೇದು ಇದರತ್ತಯೇ ಕೇಟಿಕ್ಕುವನೋ?!”

ಸತ್ಯಣ್ಣ ಹೇದ° – “ಏ ಬೋಸ..!, ಎಂಕು ಪಣಂಬೂರಿಂಗೆ ಹೋದ್ಸು ನಿನ್ನಜ್ಜನೂ ಹೇಳ್ಯೊಂಡಿತ್ತಿದ್ದವು. ಈ ಎಂಕುವಿಂಗೆ ಪ್ರಾಯ ಎಟ್ಟಕ್ಕು ನೋಡು. ಹಾಂಗಾರೆ ಎಂಕು ಹೇಳ್ಸು ಚಿರಂಜೀವಿಯೋ?! ಆ ಎಂಕು ಬೇರೆ, ಈ ಎಂಕು ಬೇರೆ. ಇದರತ್ರೆ ಕೇಟ್ರೆ ಪಣಂಬೂರಿಂಗೆ ಹೋದ್ದು ಹಿಂಡಿ ತಪ್ಪಲೆ ಮುಳಿಯ ಜೀಪಿಲ್ಲಿ ಹೇದು ಹೇಳುಗು ನೋಡು”  😀

~~

10.

ಮುಳಿಯ ಮನೆಒಕ್ಕಲಿಂಗೆ ಬಂದೋರ ಪೈಕಿ ಯು ಕೆ ನಾರ್ಣಣ್ಣ ಕುಟುಂಬವೂ ಒಂದು

ಯು ಕೆ ಹೇದರೆ ಉತ್ತರ ಕನ್ನಡವೋ ಹೇದು ನೆಗೆ ಮಾಡ್ತವೂ ಇದ್ದವು ಅಡಿಗೆ ಸತ್ಯಣ್ಣ ಯು ಕೆ ಹೋಗಿ ಬಂದ ಕತೆ ಕೇಟು.

ಆದರೆ ಯು ಕೆ ನಾರ್ಣಣ್ಣ ಹೇದರೆ ಆ ದೂರದ ಯು ಕೆ ಲಿಯೇ ಇರ್ಸು ಉದ್ಯೋಗಲ್ಲಿ.

ಅವು ಯು ಕೆ ಹೋಗಿ ಎಟ್ಟು ಒರಿಶ ಆತು ಹೇದು ಇಸವಿ ಹಿಡುದು ಕೂದೊಂಡು ಲೆಕ್ಕ ಹಾಕೆಕ್ಕಷ್ಟೇ.  

ಹಾಂಗೇಳಿ ಅವಕ್ಕೆ ಊರ ಸಂಪರ್ಕವೇ ಇಲ್ಲೆ ಹೇದು ನಿಂಗೊ ಗ್ರೇಶಿರೆ ನಿಂಗಳೇ ಮಂಗ ಅಪ್ಪಿ. ಮನೆಲಿ ನಮ್ಮದೇ ಸಂಪ್ರದಾಯ, ಸಂಸ್ಕಾರ ಮಡಿಕ್ಕೊಂಡು ದೂರದ ನಮ್ಮೋರು ಆಗಿ ಇಂದಿಂಗೂ ಇದ್ದವು

ದೂರ ಹೇದಮತ್ತೆ ಒರುಶಕ್ಕೊಂದರಿ ಎಲ್ಲ ಬಪ್ಪಲೆ ಆವ್ತೋ! ಅಗತ್ಯ ಇಲ್ಲದ್ದೆ ಅಂತೇ ಬಪ್ಪಲೆ ಬೇರೆ ಎಂತ ಉದ್ಯೋಗ ಇಲ್ಲೆಯೋ!  – ಅದೆಲ್ಲ ಇರಳಿ ಕರೇಲಿ

ಅಂತೂ ಯು ಕೆ ನಾರ್ಣಣ್ಣ ಈ ಸರ್ತಿ ನಾಡದ್ದಿಂಗೆ ಮಾಣಿಗೆ ಉಪ್ನಾನ, ಊರ್ಲಿಯೇ ಮಾಡ್ಸು ಹೇದು ಅಟ್ಟು ದೂರಂದ ಊರಿಂಗೆ ಬಂದೋರು, ಮನೆ ಒಕ್ಕಲ ಹೇಳಿಕೆಯೂ ಇತ್ತಿದ್ದ ಕಾರಣ, ಉಪ್ನಾನ ಹೇಳಿಕೆಯೂ ಕೊಟ್ಟಾಂಗೆ ಆವ್ತು ಹೇದು ಮನೆ ಒಕ್ಕಲಿಂಗೆ ಕಾಲಂಟೇ ಬಂದಿತ್ತವು ಕುಟುಂಬ ಸಮೇತರಾಗಿ.

ಯು ಕೆ ಅಕ್ಕನದ್ದು ಒಳ ಹೆಮ್ಮಕ್ಕಳತ್ರೆ ಪಟ್ಟಾಂಗ ಆವ್ತಾ ಇಪ್ಪಾಂಗೆ ಯು ಕೆ ಅಣ್ಣಂದು ಹೆರ ಚಪ್ಪರಲ್ಲಿ ಬಂದೋರತ್ರೆ ಮಾತಾಡಿ ಸಂತೋಷ ಹಂಚಿಗೊಂಬದು, ಅಗತ್ಯದೋರಿಂಗೆ ಉಪ್ನಾನ ಹೇಳಿಕೆ ಹೇಳುವದು ಆಗಿಯೊಂಡಿತ್ತಿದ್ದು.  

ಅಂಬಗ ಮಾಣಿಯೋ?!

ಮಾಣಿಗೆ ವಿಶಾಲ ಬಯಲು, ತೋಟ, ನುಸಿ, ಉರುಸಣಿಗೆ, ಕಟ್ಟಪ್ಪುಣಿ, ಉರುವೇಲು, ತೋಡು, ಸಂಕ ಸಿಕ್ಕಿ ಕೊಶಿಯೋ ಕೊಶಿ. ಬಾಕಿ ಮಕ್ಕಳೊಟ್ಟಿಂಗೆ ಅಲ್ಲೆಲ್ಲ ಓಡ್ಯೊಂಡು ಲಾಗಹಾಕ್ಯೊಂಡು ರೆಕ್ಕೆ ಬಿಚ್ಚಿದ ಹಕ್ಕಿಯ ಹಾಂಗೆ ಕೊಶಿಪಟ್ಟುಗೊಂಡಿತ್ತಿದ್ದ°

ಅಡಿಗೆ ಸತ್ಯಣ್ಣ ಅಲ್ಲಿಂದಲೇ ಮಾಣಿಯತ್ರೆ ಕೇಟ°, ಏಯ್ ಎಂತ ಮಾಡ್ತ ಇದ್ದೆಯೋ ?!

ಮಾಣಿ ಓಣಿ ಕರೆಲಿ ಈಚಹೊಡೆಂದ ಆಚ ಹೊಡೆಂಗೆ  ಲಾಗ ಹಾಕಿ ಹೇದ° – “ಎಂಜೋಯಿಂಗ್ ಊರು” 😀

ಅಡಿಗೆ ಸತ್ಯಣ್ಣ ಹೇದ°, ಉಪ್ನಾನ ದಿನಕ್ಕೆ ಇವನ ಸೊಂಟಕ್ಕೆ ಬಳ್ಳಿ ಹಾಕಿ ಕೂರ್ಸೆಕ್ಕಷ್ಟೆಯೋ ನಾರ್ಣಣ್ಣ.! 😀

ನಾರ್ಣಣ್ಣ ಹೇದವು, ಏಯ್ ಇಲ್ಲೆಪ್ಪ,  ಈಗಂಗೆ ಮಾಣಿಗೆ ಇದೆಲ್ಲ ಹೊಸತ್ತಲ್ಲದ, ಇನ್ನೂ ಒಂದು ವಾರ ಇದ್ದನ್ನೇ, ನಾಡದ್ದಿಂಗೆ ಬಟ್ಟಮಾವನ ಜೊಟ್ಟು ಕಂಡಪ್ಪದ್ದೆ ಮಾಣಿ ಚಕ್ಕನಾಟಿ ಕೂದೊಂಡು ಒಪ್ಪಣ್ಣ ಅಕ್ಕು ನೋಡಿ  😀

~~

11.

ಮುಳಿಯ ಫಾರ್ಮ್ಸ್ ಮನೆ ಒಕ್ಕಲಿಲ್ಲಿ ಬೈಲಿನ ನೆಂಟ್ರುಗ ಊಟಕ್ಕೆ ಕೂದ್ದು ಎರಡ್ನೇ ಹಂತಿಗೆ.

ಅಡಿಗೆ ಸತ್ಯಣ್ಣನೂ, ರಂಗಣ್ಣನೂ ಅದೇ ಹಂತಿಲಿ ಸೇರಿಗೊಂಡವು.

ಇವರಿಬ್ಬರ ನೆಡುಕೆ ತೆಕ್ಕುಂಜ ಮಾವ ಕೂದ್ಸು.

ಒಪ್ಪಣ್ಣ ಶಾಲು ಹಾಕ್ಯೊಂಡು ಬಟ್ಟಮಾವನೊಟ್ಟಿಂಗೆ ಒಂದನೇ ಹಂತಿಲಿ ಕೂದು ಎದ್ದಿಕ್ಕಿ ಅಂಗಿ ಸುರ್ಕೊಂಡು ಈಗ ಬಟ್ಟಮಾವನ ಹತ್ರೆಯೇ ಚಾಪೆ ಗಟ್ಟಿಮಾಡಿ ಆಯ್ದು ಹೇದು ಕುಂಟಾಂಗಿಲ ಬಾವ ಆಗಳೇ ಹೇಯ್ದ.                     

ತಾಳು, ಅವಿಲು, ಮೆಣಸುಕಾಯಿ, ಸಾರು, ಕೊದಿಲು, ಮೇಲಾರ, ಪಾಯಸ ಸ್ವೀಟು ಬಂದಪ್ಪದ್ದೇ, ಮುಳಿಯ ದೊಡ್ಡ ಭಾವ ಊಟ ದಕ್ಷಿಣೆ ಕೊಡ್ಳೆ ಹೆರಟವು.

ಊಟ ದಕ್ಷಿಣೆ ಎಷ್ಟು?!… ಐದು–ಹತ್ತು ಅಲ್ಲ ಐವತ್ತು ರೂಪಾಯಿಯ ಪಿಟಿ ಪಿಟಿ ನೋಟು!

ಒಬ್ಬೊಬ್ಬಂಗೇ ಕೊಟ್ಟುಗೊಂಡು ಬಂದವು ಮುಳಿಯ ದೊಡ್ಡ ಭಾವ.

ರಂಗಣ್ಣಂಗೆ ಕೊಟ್ಟಾತು. ನಂತ್ರ ಕೂದ್ದು ತೆಕ್ಕುಂಜ ಮಾವ ಇದಾ.. ಹಾಂಗೆ ಎಡದ ಕೈ ಒಡ್ಡಿಕ್ಕಿ ಕೇಳಿದವು.. ಭಾವ ವಿಚಾರಣೆ ಇದ್ದೋ..?

ಮುಳಿಯ ಭಾವ ನೆಗೆ ಮಾಡಿಗೊಂಡು ಸತ್ಯಣ್ಣಂಗೆ ದಕ್ಷಿಣ ಕೊಟ್ಟವು..

ಸತ್ಯಣ್ಣ ಹೇದಾ°.. ಭಾವ ತೆಕ್ಕುಂಜ ಮಾವಂಗೆ ಬೇಜಾರು ಮಾಡಿಕ್ಕೆಡಿ 50ರ ನೋಟಿನ ಕಲರ್‌ ಜೆರಾಕ್ಸ್‌ ಮಾಡ್ಸಿಕ್ಕಿ ಕೊಟ್ಟಿಕ್ಕಿ.. 😀

ಹುಳಿ ನೆಗೆ ಮಾಡಿದ ತೆಕ್ಕುಂಜ ಮಾವ ಬಾಳೆ ಕರೇಲಿ ಇದ್ದ ಉಪ್ಪಿನ ಕಾಯಿ ಎಸರಿನ ಬೆರಲಿಲ್ಲಿ ಮುಟ್ಟಿ ನಕ್ಕಿಕ್ಕಿ ನೀರು ಕುಡುದು.. ಚೆಂಬಿಲ್ಲಿ ನೀರು ವಿಚಾರಣೆ ಮಾಡ್ಯೊಂಡು ಬಂದ ವೇಂಕಟಣ್ಣಂಗೆ ಗ್ಲಾಸು ನೆಗ್ಗಿ ಹಿಡ್ಕೊಂಡವು. 😀

~~

 

 

*** 😀 😀 😀  ***

 

 

 

ಚೆನ್ನೈ ಬಾವ°

   

You may also like...

9 Responses

 1. ತೆಕ್ಕುಂಜ ಕುಮಾರ ಮಾವ° says:

  ಅಡಿಗೆ ಸತ್ಯಣ್ಣ ಭಯಂಕರ ಸ್ಪೀಡಿಲಿದ್ದಪ್ಪ. ನವಗೆ ಓವರ್ ಟೇಕ್ ಮಾಡ್ಲೆ ಎಡಿಯಪ್ಪ.

 2. ಕೆ.ನರಸಿಂಹ ಭಟ್ ಏತಡ್ಕ says:

  ಅಡಿಗೆ ಸತ್ಯಣ್ಣನ ಒಗ್ಗರಣೆ ರೈಸಿದ್ದು ಚೆನ್ನೈ ಭಾವ.

 3. ಬೊಳುಂಬು ಗೋಪಾಲ says:

  ಮುಳಿಯದ ಮನೆ ಒಕ್ಕಲಿಲ್ಲಿ ಸತ್ಯಣ್ಣನ ಕಣ್ಣಾರೆ ಕಂಡ ಹಾಂಗಾತದ. ಚೆ. ಸತ್ಯಣ್ಣನ ಫೊಟೊ ಒಂದು ಹಿಡುದಿಕ್ಕಲೆ ಮರದತ್ತಾನೆ. ಸತ್ಯಣ್ಣ , ತೆಕ್ಕುಂಜ ಮಾವ ಉಂಬಲೆ ಕೂದ ಹಂತಿಲೇ ಆನುದೆ ಕೂದ ಕಾರಣ, ಊಟದ ದಕ್ಷಿಣೆಯ ಜೋಕಿನ ಗ್ರೇಶಿ ನೆಗೆ ಬಂದು ತಡೆಯ. ಆ ಜೋಕಿನ ಪ್ರತ್ಯಕ್ಷದರ್ಶಿ ಆನು. ಕುಮಾರ ಮಾವ ಹುಳಿ ನೆಗೆ ಮಾಡಿ ಉಪ್ಪಿನ ಕಾಯಿ ಎಸರು ನೆಕ್ಕಿದ್ದದು ಲಾಯಕಾಯಿದು.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯಿಕ ಆಯಿದು.ಸತ್ಯಣ್ಣ ಹೋದಲ್ಲೆಲ್ಲಾ ತಮಾಶೆಯೇ…

 5. ಯಮ್.ಕೆ says:

  ಅಲ್ಲಿ ಲಾಡು ಕಟ್ಟಿ೦ಗೆ ರ೦ಗಣ್ಣನ ಮೋರೆ ಹುಳಿಬಿದ್ದರೂ
  ,ಕಾಲ೦ಗುರ ನೋಡಿ ಗುರುತ ಮಾಡಿದಾ೦ಗೆ,
  ರ೦ಗ ಣ್ಣ ಪಾತ್ರೆ ಒಳ ಇದ್ದ ಸೌಟಿನ ರಾಶೀಯ
  ಹಿಡಿ ನೋಡದ್ದೆ ಮುಟ್ಟಿ .ಇದಾ ಇದು ಸಾರಿ೦ಗೆ .
  ಕೊದಿಲಿ೦ಗೆ,ಪಾಯಸಕ್ಕೆ ,ಸ್ವೀಟಿ೦ಗೆ ಹೇಳಿ ,
  ಕೊಟ್ಟು ಕೊ೦ಡು ಇದ್ದದು ಕ೦ಡ ಅಪ್ಪಗ,
  ಯಲಾ ಯಲಾ ಅನಿಸಿತ್ತು.

 6. ಕೆ. ವೆಂಕಟರಮಣ ಭಟ್ಟ says:

  ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *