Oppanna.com

ಶ್ರೀಮದ್ಭಗವದ್ಗೀತಾ – ಚತುರ್ಥೋsಧ್ಯಾಯಃ – ಶ್ಲೋಕಂಗೊ 11 – 20

ಬರದೋರು :   ಚೆನ್ನೈ ಬಾವ°    on   07/06/2012    2 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥೧೧॥

ಪದವಿಭಾಗ

ಯೇ ಯಥಾ ಮಾಮ್ ಪ್ರಪದ್ಯಂತೇ ತಾನ್ ತಥಾ ಏವ ಭಜಾಮಿ ಅಹಮ್ । ಮಮ ವರ್ತ್ಮಾ ಅನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥

ಅನ್ವಯ

ಯೇ ಯಥಾ ಮಾಮ್ ಪ್ರಪದ್ಯಂತೇ, ತಾನ್ ತಥಾ ಏವ ಅಹಂ ಭಜಾಮಿ । ಹೇ ಪಾರ್ಥ!, ಮನುಷ್ಯಾಃ ಸರ್ವಶಃ ಮಮ ವರ್ತ್ಮಾ ಅನುವರ್ತಂತೇ ॥

ಪ್ರತಿಪದಾರ್ಥ

ಯೇ – ಆರೆಲ್ಲ, ಯಥಾ – ಹೇಂಗೆ, ಮಾಮ್ – ಎನ್ನ, ಪ್ರಪದ್ಯಂತೇ – ಶರಣುಹೊಂದುತ್ತವೋ, ತಾನ್ – ಅವಕ್ಕೆ, ತಥಾ – ಹಾಂಗೆಯೇ, ಏವ – ಖಂಡಿತವಾಗಿಯೂ, ಅಹಮ್ – ಆನು, ಭಜಾಮಿ – ಪ್ರತಿಫಲ ನೀಡುತ್ತೆ, ಹೇ ಪಾರ್ಥ! – ಏ ಪೃಥೆಯ ಮಗನೇ! (ಪಾರ್ಥನೇ!), ಮನುಷ್ಯಾಃ – ಎಲ್ಲ ಮನುಷ್ಯರು,  ಸರ್ವಶಃ – ಸಕಲ ವಿಧಂಗಳಲ್ಲಿಯೂ, ಮಮ – ಎನ್ನ , ವರ್ತ್ಮಾ – ದಾರಿಯ, ಅನುವರ್ತಂತೇ – ಅನುಸರುಸುತ್ತವು.

ಅನ್ವಯಾರ್ಥ

ಆರು ಎನ್ನ ಹೇಂಗೆ ಶರಣಾವುತ್ತವೋ ಹಾಂಗೇ ಆನು ಅವಕ್ಕೆ ಅನುಗ್ರಹಿಸುತ್ತೆ. ಪಾರ್ಥನೇ!, ಎಲ್ಲರೂ ಎಲ್ಲ ರೀತಿಗಳಲ್ಲಿಯೂ ಎನ್ನ ಮಾರ್ಗವನ್ನೇ ಅನುಸರುಸುತ್ತವು.

ತಾತ್ಪರ್ಯ / ವಿವರಣೆ

ಪ್ರತಿಯೊಬ್ಬ ಮನುಷ್ಯನೂ ಕೃಷ್ಣನ ವಿವಿಧ ಅಭಿವ್ಯಕ್ತಿಗಳ ವಿವಿಧ ರೂಪಲ್ಲಿ ಕೃಷ್ಣಂಗಾಗಿ ಹುಡುಕಾಡುತ್ತವು. ಇಡೀ ವಿಶ್ವವೇ ಅವನದ್ದಾದ್ದರಿಂದ ನಿರಾಕಾರನಾಗಿ, ಅಗೋಚರನಾಗಿ ಸರ್ವಾಂತರ್ಯಾಮಿಯಾಗಿ ಪರಮಾತ್ಮ ಭಾಗಶಃ ಸಾಕ್ಷಾತ್ಮಾರನಾಗಿದ್ದ°. ಆದರೆ ಸಾಮಾನ್ಯ ಜನಕ್ಕೆ ಅವನ ಸಾಕ್ಷಾತ್ಕಾರ ಆಗ. ಪರಿಶುದ್ಧ ಭಕ್ತಂಗೆ ಮಾತ್ರ ಅವನ ಸಂಪೂರ್ಣ ಸಾಕ್ಷಾತ್ಕಾರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನ ಗುರಿ ಆ ಪರಮಾತ್ಮನ ಸಾಕ್ಷಾತ್ಕಾರ. ಆದ್ದರಿಂದ ಭಕ್ತರು ಪರಮಾತ್ಮನ ಯಾವ ರೀತಿಲಿ ಬಯಸುತ್ತವೋ ಅವಕ್ಕೆ ಆ ರೀತಿಲಿ ತೃಪ್ತಿ . ಆದ್ದರಿಂದಲೇ ಸಂಪೂರ್ಣ, ಪರಿಪೂರ್ಣ ಭಕ್ತಂಗೆ ಅವನ ನಿಜ ಸಾಕ್ಷಾತ್ಕಾರ ಸಾಧ್ಯ. ಅರ್ಥಾತ್ ಕೃಷ್ಣ (ಭಗವಂತನ)ನ ಸಾಕ್ಷಾತ್ಕಾರ ಬಯಸುವವಂಗೆ ಭಗವಂತ ತನ್ನನ್ನೇ ನೀಡುತ್ತ°. ಆಧ್ಯಾತ್ಮಿಕ ಜಗತ್ತಿಲ್ಲಿ ಭಗವಂತ ತನ್ನ ಪ್ರಭುವಾಗಿರೆಕು ಹೇಳಿ ಬಯಸಿದರೆ, ಸಖನಾಗಿ ಇರೆಕು ಹೇಳಿ ಬಯಸಿದರೆ, ಪತಿಯಾಗಿ, ಪುತ್ರನಾಗಿ, ತಂದೆಯಾಗಿ …. ಈ ರೀತಿಯಾಗಿ ಯಾವ ಅಭಿವ್ಯಕ್ತಿಲಿ ಭಗವಂತ ತನ್ನೊಂದಿಂಗೆ ಇರೆಕು ಹೇಳಿ ಇಚ್ಛಿಸುತ್ತವೋ ನಿಜ ಭಕ್ತರಿಂಗೆ ಆ ರೂಪಲ್ಲಿ ಭಕ್ತರೊಂದಿಂಗೆ ಭಗವಂತ ಇರುತ್ತ°. ಪರಿಶುದ್ಧ ಭಕ್ತರು ಭಗವಂತನ ಪ್ರೇಮಪೂರ್ವಕ ಸೇವೆಲಿ ಅವನ ದಿವ್ಯಾನಂದವ ಪಡೆತ್ತವು. ನಿರಾಕಾರವಾದಿಗಳ, ಆಧ್ಯಾತ್ಮಿಕ ಹತ್ಯೆ ಮಾಡುವವರ ಪರಮಾತ್ಮ ತನ್ನ ಪ್ರಭೆಲಿ ಲೀನಗೊಳುಸುತ್ತ°. ಆದ್ದರಿಂದ ಅವಕ್ಕೆ ಭಗವಂತನ ಅಲೌಕಿಕ ವೈಯಕ್ತಿಕ ಸೇವೆಲಿ ಆನಂದವ ಕಾಂಬಲೆ ಸಾಧ್ಯ ಇಲ್ಲೆ. ಪುನಃ ಅವ್ವು ಐಹಿಕ ಜಗತ್ತಿಂಗೆ ಮರಳಿ ಬತ್ತವು. ಅವಕ್ಕೆ ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶ ಇಲ್ಲೆ. ಬದಲು, ಭೌತಿಕ ಲೋಕಲ್ಲಿ ಕರ್ಮಪ್ರವೃತ್ತನಪ್ಪಲೆ ಮತ್ತೊಂದು ಅವಕಾಶ ಭಗವಂತ ಕೊಡುತ್ತ°. ಫಲಾಪೇಕ್ಷೆಂದ ಕರ್ಮ ಮಾಡುವವಕ್ಕೆ ಯಜ್ಞೇಶ್ವರನಾಗಿ ಭಗವಂತ° ಅವರ ನಿಯತ ಕರ್ಮಂಗನುಗುಣವಾಗಿ ಅವು ಅಪೇಕ್ಷಿಸಿದ  ಫಲಂಗಳ ಕೊಡುತ್ತ°. ಯೋಗ ಸಿದ್ಧಿಯ ಬಯಸುವ ಯೋಗಿಗೊಕ್ಕೆ ಅವ°  ಅನುಗ್ರಹ ಮಾಡುತ್ತ°. ಒಟ್ಟಿಲ್ಲಿ, ಪ್ರತಿಯೊಬ್ಬನೂ ಆಧ್ಯಾತ್ಮಿಕ ಯಶಸ್ಸಿಂಗೆ ಭಗವಂತನ ಕರುಣೆಯೊಂದನ್ನೇ ಅವಲಂಬಿಸಿರೆಕ್ಕು. ಎಲ್ಲ ಬಗೆಯ ಆಧ್ಯಾತ್ಮಿಕ ಪ್ರಕ್ರಿಯೆಗೊ ಒಂದೇ ಮಾರ್ಗಲ್ಲಿ ಸಿಕ್ಕುವ ಯಶಸ್ಸಿನ ವಿವಿಧ ಪ್ರಮಾಣಂಗೊ ಅಷ್ಟೇ. ಆದ್ದರಿಂದ ಮನುಷ್ಯ° ಕೃಷ್ಣಪ್ರಜ್ಞೆಂದ ಅತ್ಯುನ್ನತ ಪರಿಪೂರ್ಣತೆಯ ಸಾಧುಸದೇ ಇದ್ದರೆ, ಎಲ್ಲ ಪ್ರಯತ್ನ ಅಪೂರ್ಣವಾಗಿ ಉಳಿತ್ತು. ಒಬ್ಬ ಮನುಷ್ಯಂಗೆ ಆಸೆಯೇ ಇಲ್ಲದಿರಲಿ, ಅಥವಾ ಎಲ್ಲಾ ಫಲಾಪೇಕ್ಷೆಯಿರಲಿ ಅಲ್ಲದ್ರೆ ಮುಕ್ತಿಯ ಅಪೇಕ್ಷೆಯೇ ಇರಲಿ , ಅವ° ಸಂಪೂರ್ಣ ಪರಿಪೂರ್ಣತೆಗಾಗಿ ದೇವೋತ್ತಮ ಪರಮ ಪುರುಷನ ಆರಾಧಿಸುಲೆ ಎಲ್ಲ ಪ್ರಯತ್ನಂಗಳ ಮಾಡೆಕು. ಈ ಮಾರ್ಗ ಕೃಷ್ಣಪ್ರಜ್ಞೆಲಿ ತಂದು ನಿಲ್ಲುಸುತ್ತು.

ದೇವರ ಉಪಾಸನಗೆ ಸರಿಯಾದ ದಾರಿ ಯಾವುದು ? ಒಬ್ಬೊಬ್ಬ ಒಂದೊಂದು ರೀತಿಲಿ ಉಪಾಸನೆ ಮಾಡುತ್ತ°. ಅದರಿಂದ ಮತ್ತೊಬ್ಬಂಗೆ ಗೊಂದಲ , ಆವೇಶ. ಆದರೆ, ಆರಾರು ಯಾವ್ಯಾವ ರೀತಿಲಿ ಉಪಾಸನೆ ಮಾಡುತ್ತವೊ, ಭಗವಂತ° ಅವಕ್ಕೆ ಹಾಂಗೆಯೇ ಅನುಗ್ರಹಿಸುತ್ತ. ನಾವು ಯಾವ ರೂಪಂದ ಉಪಾಸನೆ ಮಾಡಿದರೂ ಅದು ವಿಶ್ವರೂಪಿಯಾದ ಭಗವಂತನನ್ನೇ ಸೇರುತ್ತು. ಯಾವ ರೂಪವ ಕಲ್ಪಿಸಿ ಪೂಜಿಸಿರೂ, ಯಾವ ಮಂತ್ರಂದ ಪೂಜಿಸಿದರೂ, ಯಾವ ಸ್ಥಳಲ್ಲಿ ಕೂದು ಪೂಜಿಸಿರೂ, ಯಾವ ಹೆಸರಿಂದ ಪೂಜಿಸಿರೂ ಅದು ಅವಂಗೇ ಸೇರುತ್ತು. ಎಲ್ಲಿ ಕೂದು ಪೂರ್ಣ ಅರ್ಪಣಾಭಾವಂದ ಭಗವಂತನ ನೆನೆದರೂ ಅದು ಅವಂಗೆ ಸೇರುತ್ತು. ಅವ° ವಿಶ್ವರೂಪಿ, ವಿಶ್ವಂಭರ. ಯಾವ ಭಕ್ತಿಂದ, ಭಾವಂದ  ನಾವು ಅವನ ಪೂಜಿಸುತ್ತೋ ಆ ಭಾವಕ್ಕನುಗುಣವಾಗಿ ಅವ° ನಮ್ಮ ಕಾಪಾಡುತ್ತ°.  

ಶ್ಲೋಕ

ಕಾಂಕ್ಷಂತಃ ಕರ್ಮಾಣಾಂ ಸಿದ್ಧಿಂ ಯಜಂತ ಇಹ ದೇವತಾಃ ।
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ ॥೧೨॥

ಪದವಿಭಾಗ

ಕಾಂಕ್ಷಂತಃ ಕರ್ಮಣಾಮ್ ಸಿದ್ಧಿಮ್ ಯಜಂತೇ ಇಹ ದೇವತಾಃ । ಕ್ಷಿಪ್ರಮ್  ಹಿ ಮಾನುಷೇ ಲೋಕೇ ಸಿದ್ಧಿಃ ಭವತಿ ಕರ್ಮಜಾ ॥

ಅನ್ವಯ

ಕರ್ಮಣಾಂ ಸಿದ್ಧಿಂ ಕಾಂಕ್ಷಂತಃ, ಮನುಷ್ಯಾಃ ಇಹ ದೇವತಾಃ ಯಜಂತೇ, ಹಿ ಮಾನುಷೇ ಲೋಕೇ ಕರ್ಮಜಾ ಸಿದ್ಧಿಃ ಕ್ಷಿಪ್ರಂ ಭವತಿ ॥

ಪ್ರತಿಪದಾರ್ಥ

ಕರ್ಮಣಾಮ್ – ಕಾಮ್ಯಕರ್ಮಂಗಳ, ಸಿದ್ಧಿಮ್ – ಸಿದ್ಧಿಯ, ಕಾಂಕ್ಷಂತಃ  ಮನುಷ್ಯಾಃ – ಅಪೇಕ್ಷಿಸಿಗೊಂಬ ಮನುಷ್ಯರು, ಇಹ – ಈ ಐಹಿಕ ಪ್ರಪಂಚಲ್ಲಿ, ದೇವತಾಃ – ದೇವತೆಗಳ, ಯಜಂತೇ – ಯಜ್ಞಾದಿಗಳಿಂದ ಪೂಜಿಸುತ್ತವು,     ಕ್ಷಿಪ್ರಮ್ – ಬಹುಬೇಗನೆ, ಹಿ – ಖಂಡಿತವಾಗಿಯೂ, ಮಾನುಷೇ – ಮಾನವ ಸಮಾಜಲ್ಲಿ, ಲೋಕೇ – ಈ ಜಗತ್ತಿಲ್ಲಿ, ಸಿದ್ಧಿಃ – ಯಶಸ್ಸು, ಭವತಿ – ಉಂಟಾವುತ್ತು, ಕರ್ಮಜಾ – ಕಾಮ್ಯಕರ್ಮಂದ.

ಅನ್ವಯಾರ್ಥ

ಈ ಜಗತ್ತಿಲ್ಲಿ ಜನಂಗೊ ಫಲಾಪೇಕ್ಷಿತ ಕರ್ಮಂಗಳಲ್ಲಿ ಸಿದ್ಧಿಯ ಬಯಸುತ್ತವು. ಆದ್ದರಿಂದ ದೇವತೆಗಳ ಪೂಜಿಸುತ್ತವು. ಈ ರೀತಿಯಾಗಿ ಈ ಜಗತ್ತಿಲ್ಲಿ ಫಲಾಪೇಕ್ಷಿತ ಕರ್ಮಂದ ಜನಂಗೊ ಶೀಘ್ರವಾಗಿ ಸಿದ್ಧಿಯ ಪಡೆತ್ತವು.

ತಾತ್ಪರ್ಯ / ವಿವರಣೆ

ಐಹಿಕ ಜಗತ್ತಿಲ್ಲಿ ವಿವಿಧ ರೂಪಲ್ಲಿ ದೇವತೆಗಳ ಭಗವಂತನ ವಿವಿಧ ರೂಪಂಗೊ ಹೇಳಿ ತಪ್ಪು ಕಲ್ಪನೆ ಮಡಿಕ್ಕೊಂಡಿದ್ದವು. ವಾಸ್ತವವಾಗಿ ಅದು ಭಗವಂತನ ವಿವಿಧ ರೂಪಂಗಳಲ್ಲ, ಅವು ಭಗವಂತನ ವಿಭಿನ ಅಂಶಂಗೊ. ದೇವರು ಒಬ್ಬನೇ , ಅಂಶಂಗೊ ಹಲವು. ವಿಭಿನ್ನಾಂಶಂಗೊ ಇಪ್ಪ ದೇವತೆಗೊಕ್ಕೆ ಈ ಐಹಿಕ ಜಗತ್ತಿಲ್ಲಿ ಬೇರೆ ಬೇರೆ ಮಟ್ಟದ ಅಧಿಕಾರಂಗಳ ವಹಿಸಿಕೊಟ್ಟಿದ ಪರಮಾತ್ಮ°. ಭಗವಂತನೂ ದೇವತೆಗಳೂ ಒಂದೇ ಮಟ್ಟ ಹೇಳಿ ಹೇಳುವದು ತಪ್ಪು ಕಲ್ಪನೆ. ಅವೆಲ್ಲ ಭಗವಂತ, ಪರಮಾತ್ಮ , ಶ್ರೀಕೃಷ್ಣಂಗೆ ಸಮಾನ ಅಲ್ಲ. ಪರಮಾತ್ಮ ಒಬ್ಬನೇ, ಸರ್ವಶಕ್ತ, ಅದ್ವಿತೀಯ. ಬ್ರಹ್ಮ ಶಿವ ಎಲ್ಲ ದೇವತೆಗಳುದೇ ಭಗವಂತನ ಪೂಜಿಸುವವೆ (ಶಿವ ವಿರಂಚಿನುತಂ). ‘ಇಹದೇವತಾಃ’ – ಹೇಳಿರೆ ಇಹಲೋಕದ ಪ್ರಬಲ ಮನುಷ್ಯ ಅಥವಾ ದೇವತೆ. ಆದರೆ ನಾರಾಯಣ,  ವಿಷ್ಣು, ಕೃಷ್ಣ ಈ ಲೋಕಕ್ಕೆ ನೇರ ಸೇರುತ್ತವಿಲ್ಲೆ. ಭೌತಿಕ ಪ್ರಪಂಚಲ್ಲಿ ಇದ್ದ ಹಾಂಗೆ ಕಂಡರೂ ಭೌತಿಕ ಸೃಷ್ಟಿಂದ ಬೇರೆಯೇ ಆಗಿ ಇಪ್ಪದು. ಭೌತಿಕ ಪ್ರಪಂಚಲ್ಲಿ ಇಪ್ಪ ಎಲ್ಲವನ್ನೂ ಮೀರಿದವ ಭಗವಂತ°. 

ಭೌತಿಕ ಜಗತ್ತಿಲ್ಲಿ ಜನಂಗೊ ವಿವಿಧ ಪಲಾಪೇಕ್ಷಗೆ ವಿವಿಧ ದೇವತೆಗಳ ಪೂಜಿಸುತ್ತವು. ಅವಕ್ಕೆ ನೇರವಾಗಿ , ಸುಲಭವಾಗಿ, ತಕ್ಷಣವಾಗಿ ಫಲ ಬೇಕು. ಆದರೆ ಇದು ತಾತ್ಕಾಲಿಕ ಉಪಶಮನದ ದಾರಿ. ವಿವೇಕಿಯಾದವ ಸದಾಅ ಕೃಷ್ಣಪ್ರಜ್ಞೆಲಿ ಇರುತ್ತ°. ಅವನ ಗುರಿ ಪರಮಾತ್ಮ ದೇವದೇವೋತ್ತಮ ಪರಮ ಪುರುಷ ಭಗವಂತ°.   ಈ ಭೌತಿಕ ಜಗತ್ತಿಲ್ಲಿ ದೇವತಾರಾಧಕರು ಮತ್ತು ದೇವತೆಗೊ ಅಲ್ಪಕಾಲದವು.  ತಕ್ಷಣ ಫಲಾಪೇಕ್ಷೆಂದ ಜನಂಗೊ ತಾತ್ಕಾಲಿಕ ದಾರಿಯಾದ ದೇವತಾ ಪೂಜೆಗೊ, ಬಲಿಷ್ಠ ವ್ಯಕ್ತಿ ಪೂಜೆಗೊ ಹೇಳಿ ಆರಾಧಿಸುತ್ತವು. ಆದರೆ ಇವೆಲ್ಲವೂ ತಾತ್ಕಾಲಿಕ. ಒಬ್ಬಾತ ರಾಜಕೀಯ ನಾಯಕನ ಪೂಜಿಸಿ ಸರ್ಕಾರಿ ಪದವಿಯ ಗಿಟ್ಟಿಸಿಗೊಂಬಲೆಡಿಗು. ಆದರೆ ಅದೆಷ್ಟು ದಿನಕ್ಕೆ ಸುಖ ಕೊಡುಗು ಹೇಳ್ವ ಮುಂದಾಲಚನೆ ಮಾಡುತ್ತವಿಲ್ಲೆ.  ಐಹಿಕ ವಸ್ತು ನಾಶ ಅಪ್ಪಗ ಆ ಗಿಟ್ಟಿಸಿಗೊಂಡದ್ದೂ ನಾಶ ಆವುತ್ತು. ಆ ನಾಯಕನೂ ಸ್ಥಾನವ ಕಳಕ್ಕೊಂಡಿರುತ್ತ°. ಜಗನ್ನಿಯಾಮಕ° ಭಗವಂತನಿಂದ ಆದೇಶಂದ ಹಲವೊಂದು ಕಾರ್ಯಂಗಳ ನಿಯತವಾಗಿ ನಡವಲೆ ನೇಮಕ ಮಾಡಿದ್ದ°. ಆದರೆ ಅವರ ನಡಸುವದು ಪರಮಾತ್ಮನೇ. ಆದ್ದರಿಂದ ಕೃಷ್ಣ° ಹೇಳುತ್ತ° – ಇಂದ್ರಿಯಭೋಗವ ಬಯಸಿ ಜನಂಗೊ ದೇವತಾ ಪೂಜೆ ಮತ್ತು ವ್ಯಕ್ತಿ ಪೂಜೆಲಿ ತೊಡಗುತ್ತವು. ಅವಕ್ಕೆ ಬೇಕಾದ್ದು ತಕ್ಷಣ ಪರಿಹಾರ . ಆದರೆ ಅದು ಶಾಶ್ವತ ಅಲ್ಲ.

ಐಹಿಕ ಸುಖವ ಬಯಸಿ ವಿವಿಧ ದೇವತೆಗಳ ವಿವಿಧ ಫಲಕ್ಕಾಗಿ ಪೂಜಿಸುವದು ಶಾಶ್ವತವಾದ ಮೋಕ್ಷ ಮಾರ್ಗದತ್ತ ನಮ್ಮ ಕೊಂಡೋಗ. ಇಂದ್ರಿಯ ಭೋಗಕ್ಕಾಗಿ ಮಾಡುವ ಪೂಜೆ ಭಗವಂತನ ಪೂಜೆ ಎನಿಸಿಗೊಳ್ಳುತ್ತಿಲ್ಲೆ. ದೇವತೆಗೊ ಮೋಕ್ಷಮಾರ್ಗದತ್ತ ನಡವಲೆ ಸಹಾಯ ಮಾಡುಗು, ಆದರೆ, ಸರ್ವಶಕ್ತ ಭಗವಂತನ ಎಚ್ಚರ ಸದಾ ಬಹಳ ಮುಖ್ಯ. ಭಗವಂತನ ಯಾವ ರೂಪಲ್ಲಿ ಪೂಜಿಸಿದರೂ ಐಹಿಕ ಭೋಗಕ್ಕಾಗಿ ಪೂಜಿಸದೆ ಆ ಸರ್ವಾಂತರ್ಯಾಮಿ ಭಗವಂತನ ಸೇರುವ ಅನುಸಂಧಾನಂದ ಪೂಜಿಸುವದು ಅಧ್ಯಾತ್ಮ ಸಾಧನೆ ಅತೀ ಮುಖ್ಯ ವಿಚಾರ. ಭಗವಂತನ ಯಾವ ರೂಪಲ್ಲಿ ಬೇಕಾರು ಪೂಜಿಸಲಕ್ಕು ಆದರೆ ಅದರೆ ಗುರಿ ಆಧ್ಯಾತ್ಮ ಸಾಧನೆ ಆಗಿರೆಕು. ದೇವತೆಗಳ ಮುಖೇನ ಅಥವಾ ದೇವತೆಗಳಲ್ಲೇ ಭಗವಂತನ ಕಾಂಬದು ತಪ್ಪಲ್ಲ. ಭಗವಂತ ಸರ್ವಾಂತರ್ಯಾಮಿ. ಅವ ಇಲ್ಲದ್ದ ಜಾಗೆ ಇಲ್ಲೆ. ಆದರೆ ಅದರ ಬಿಟ್ಟು ದೇವತೆಗಳನ್ನೇ ಭಗವಂತ ಹೇಳಿ ಪೂಜಿಸಿದರೆ ಅದರ ದೇವತೆಗಳೂ ಒಪ್ಪವು.  ಹಾಂಗಾಗಿ ದೇವರು ಒಬ್ಬನೆ. ದೇವತೆಗೊ ಹಲವು. ದೇವರು ಒಬ್ಬನೆ – ನಾಮ ಹಲವು, ರೂಪ ಹಲವು, ಎಲ್ಲರಲ್ಲೂ ಎಲ್ಲೆಲ್ಲಿಯೂ ಆ ದೇವನೊಬ್ಬನೆ. 

ಈ ಇಡೀ ಜಗತ್ತೇ ಭಗವಂತನದ್ದು. ಈ ಮನುಕುಲದ ಸೃಷ್ಟಿ ಈ ಭೂಮಿಲಿ ಭಗವಂತನಿಂದಾದ್ದು. ಹಾಂಗಾರೆ, ಒಬ್ಬೊಬ್ಬ ಒಂದೊಂದು ರೀತಿ, ಸ್ವಭಾವ ಎಂತಕೆ ?

ಶ್ಲೋಕ

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ॥೧೩॥

ಪದವಿಭಾಗ

ಚಾತುರ್ವರ್ಣ್ಯಮ್ ಮಯಾ ಸೃಷ್ಟಮ್ ಗುಣ-ಕರ್ಮ-ವಿಭಾಗಶಃ । ತಸ್ಯ ಕರ್ತಾರಮ್ ಅಪಿ ಮಾಮ್ ವಿದ್ಧಿ ಅಕರ್ತಾರಮ್ ಅವ್ಯಯಮ್ ॥

ಅನ್ವಯ

ಮಯಾ ಗುಣ-ಕರ್ಮ-ವಿಭಾಗಶಃ ಚಾತುರ್ವರ್ಣ್ಯಂ ಸೃಷ್ಟಂ । ತಸ್ಯ ಕರ್ತಾರಮ್ ಅಪಿ ಮಾಮ್ ಅವ್ಯಯಂ ಅಕರ್ತಾರಂ ವಿದ್ಧಿ ॥

ಪ್ರತಿಪದಾರ್ಥ

ಮಯಾ – ಎನ್ನಂದ, ಚಾತುರ್ವರ್ಣ್ಯ, – ಮಾನವ ಸಮಾಜದ ನಾಲ್ಕು ವರ್ಣಂಗೊ (ವಿಭಾಗಂಗೊ),  ಗುಣ-ಕರ್ಮ-ವಿಭಾಗಶಃ – ಗುಣ ಕರ್ಮ ವಿಭಾಗದ ಪ್ರಕಾರ,  ಸೃಷ್ಟ, – ಸೃಷ್ಟಿಸಲ್ಪಟ್ಟದ್ದು, ತಸ್ಯ – ಅದರ, ಕರ್ತಾರಮ್ – ಕರ್ತೃ (ಅಪ್ಪ°/ ಮಾಡಿದವ°/ಸೃಷ್ಟಿಕರ್ತ°), ಅಪಿ – ಆಗಿದ್ದರೂ, ಮಾಮ್ – ಎನ್ನ,  ಅವ್ಯಯಮ್ – ಬದಲುಸಲೆಡಿಯದ್ದವ°, ಅಕರ್ತಾರಮ್ – ಕರ್ತಾರ ಅಲ್ಲ ಹೇದು, ವಿದ್ಧಿ – ನೀನು ತಿಳುಕ್ಕೊ,

ಅನ್ವಯಾರ್ಥ

ಐಹಿಕ ಪ್ರಕೃತಿಯ ಗುಣತ್ರಯಂಗೊಕ್ಕೆ ಅನುಗುಣವಾಗಿ ಮತ್ತು ಅವುಗಳ ಕರ್ಮಕ್ಕನುಗುಣವಾಗಿ ಮನುಷ್ಯ ಸಮಾಜವ ನಾಲ್ಕು ವರ್ಣಂಗಳಾಗಿ ಸೃಷ್ಟಿಮಾಡಿದವ° ಆನು ಹೇಳಿ ನೀನು ತಿಳುಕ್ಕೊ. ಯಾವುದರಿಂದಲೂ ಬದಲಾವಣೆಗೊಳ್ಳದ (ಅವಿಕಾರಿ) ಆನು ಅದರ ಮಾಡಿದರೂ ನಿಜವಾಗಿ ಏನನ್ನೂ ಮಾಡುತ್ತಿಲ್ಲೆ ಹೇಳಿ ತಿಳಿ. (ಬದಲಾವಣೆಗೊಳ್ಳದ ಆನು ಅದರ ನಿರ್ಮಿಸಿದವ° ಮತ್ತು ಎನ್ನ ಆರೂ ನಿರ್ಮಿಸಿಲ್ಲೆ ಹೇದು ತಿಳಿ).

ತಾತ್ಪರ್ಯ / ವಿವರಣೆ

ಎಲ್ಲವನ್ನೂ ಸೃಷ್ಟಿಸಿದವ° ಭಗವಂತ°. ಎಲ್ಲವೂ ಅವಂದ ಜನಿತವಾದ್ದು. ಅವನೇ ಎಲ್ಲದಕ್ಕೂ ಆಧಾರ ಮತ್ತು ಅಂತ್ಯವು ಅವನಲ್ಲೇ ಹೋಗಿ ಸೇರುತ್ತು. ಆದ್ದರಿಂದ ಸಾಮಾಜಿಕ ವ್ಯವಸ್ಥೆಲಿ ನಾಲ್ಕು ವರ್ಣಂಗಳ ಸೃಷ್ಟಿಸಿದವ° ಅವನೆ. ಬುದ್ಧಿಶಾಲಿಗಳ ವರ್ಗವಾದ ಮೊದಲ ವಿಭಾಗವ ಪಾರಿಭಾಷಿಕವಾಗಿ ಬ್ರಾಹ್ಮಣರು ಹೇಳಿ ಕರೆಯಲ್ಪಟ್ಟತ್ತು. ಇವರ ಸಾತ್ವಿಕ ಗುಣಂದ ಆ ಹೆಸರು. ಮತ್ತಾಣ ವರ್ಗ ಆಢಳಿತ ವರ್ಗ – ಕ್ಷತ್ರಿಯರುಗೊ ಹೇಳಿ ಹೆಸರಿಸಲ್ಪಟ್ಟತ್ತು. ಇವ್ವು ರಜೋಗುಣದವು. ಮೂರನೇದಾಗಿ ತಮೋಗುಣಲ್ಲಿಪ್ಪವರ ವೈಶ್ಯರು ಹೇಳಿ ಹೆಸರಿಸಿತ್ತು. ಐಹಿಕ ನಿಸರ್ಗದ ತಮೋಗುಣದವರ ಕಾರ್ಮಿಕ (ಶೂದ್ರ) ವರ್ಗವಾಗಿ ವಿಂಗಡಿಸಲಾತು.

ಮನುಷ್ಯ ಸಮಾಜಲ್ಲಿ ಈ ನಾಲ್ಕು ವಿಭಾಗಂಗಳ ಸೃಷ್ಟಿಸಿದ್ದು ಭಗವಂತ ಆದರೂ ಅವ° ಈ ನಾಲ್ಕರ ಯಾವ ಒಂದರ ಭಾಗವೂ ಅಲ್ಲ. ಎಂತಕೆ ಹೇಳಿರೆ, ಮನುಷ್ಯರು ಸಮಾಜಲ್ಲಿ ಬದ್ಧಜೀವಿಗಳ ಒಂದು ಭಾಗ. ಆದರೆ, ಭಗವಂತ ಬದ್ಧಜೀವಿಯಲ್ಲ. ಮನುಷ್ಯ ಸಮಾಜವು ಬೇರೆ ಯಾವುದೇ ಪ್ರಾಣಿ ಸಮಾಜದಂತೆಯೇ ಇದ್ದು. ಆದರೆ, ಮನುಷ್ಯನ ಪ್ರಾಣಿಗಳ ಅಂತಸ್ತಿಂದ ಮೇಲೆತ್ತಲೆ, ಕೃಷ್ಣಪ್ರಜ್ಞೆಯ ವ್ಯವಸ್ಥಿತ ಬೆಳವಣಿಗೆಗಾಗಿ ಭಗವಂತ° ಮೇಲೆ ಹೇಳಿದ ವಿಭಾಗಂಗಳ ಮಾಡಿದ. ಯಾವುದೇ ಮನುಷ್ಯಂಗೆ ಕರ್ಮದ ವಿಷಯಲ್ಲಿ ಇಪ್ಪ ಪ್ರವೃತ್ತಿಯು ಅವ° ಗಳಿಸಿಗೊಂಡ ಐಹಿಕ ಪ್ರಕೃತಿಯ ಗುಣಂಗೊಕ್ಕೆ ಅವಲಂಬಿಸಿಗೊಂಡಿರುತ್ತು. ಆದರೂ ಕೃಷ್ಣಪ್ರಜ್ಞೆಲಿ ಇಪ್ಪವ° ಬ್ರಾಹ್ಮಣನಿಂದಲೂ ಉತ್ತಮ. ಗುಣಕ್ಕೆ ಅನುಸಾರವಾಗಿ ಬ್ರಾಹ್ಮಣರಿಂಗೆ ಪರಮ ಸತ್ಯವಾದ ಬ್ರಹ್ಮನ ಜ್ಞಾನ ಇಕ್ಕು ಹೇಳಿ ನಿರೀಕ್ಷಿಸಲಕ್ಕು. ಆದರೆ, ಆದರೆ ಅವರಲ್ಲಿ ಅನೇಕರು ಬ್ರಹ್ಮಜ್ಞಾನ ಪಡದಿರುತ್ತವಿಲ್ಲೆ. ಬ್ರಾಹ್ಮಣನ ಮಿತವಾದ ಜ್ಞಾನವ ಮೀರಿ ದೇವೋತ್ತಮ ಪರಮ ಪುರುಷನಾದ ಭಗವಂತನ ತಿಳ್ಕೊಂಡವ ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ°. ಕೃಷ್ಣಪ್ರಜ್ಞೆಯು ರಾಮ, ನರಸಿಂಹ, ವರಾಹ ಮುಂತಾದ ಭಗವಂತನ ಎಲ್ಲ ಸ್ವಾಂಶ ವಿಸ್ತರಣೆಯ ಒಳಗೊಳ್ಳುತ್ತು. ಮಾನವ ಸಮಾಜದ ಈ ನಾಲ್ಕು ವಿಭಾಗಂಗಳ ವ್ಯವಸ್ಥೆಗೆ ಭಗವಂತ° ಅತೀತನಾಗಿದ್ದ°.

ಬನ್ನಂಜೆಯವು ಇದರ ಸುಂದರವಾಗಿ ವಿವರುಸುತ್ತವು. ಕೃಷ್ಣ ಹೇಳುತ್ತ°- ಗುಣಕರ್ಮವಿಭಾಗಶಃ ಆನು ನಾಲ್ಕು ವರ್ಣಂಗಳ ಸೃಷ್ಟಿ ಮಾಡಿದೆ ಹೇಳಿ. ಅರ್ಥಾತ್ ಸಮಾಜಲ್ಲಿ ಹೇಳಿಪ್ಪ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಈ ಚಾತುರ್ವರ್ಣ್ಯ ಹೇಳ್ವದರ ಸಮಾಜಲ್ಲಿ ತಪ್ಪಾಗಿ ಅರ್ಥಮಾಡಿಗೊಂಡದೇ ಹೆಚ್ಚು. ಭಗವಂತನೇ ನಾಲ್ಕು ವರ್ಣಂಗಳ ಸೃಷ್ಟಿಸಿದರೆ ಈ ವರ್ಣಭೇದ ಭಾರತವ ಬಿಟ್ಟು ಬೇರೆ ದೇಶಲ್ಲಿ ಏಕಿಲ್ಲೆ. ಮೂಲಭೂತವಾಗಿ ನೋಡಿರೆ ಭಗವಂತ ಇಲ್ಲಿ ಹೇಳಿಪ್ಪದು ಚಾತುರ್ವರ್ಣ್ಯ (ಚತುರ್ ವರ್ಣಃ) ಹೇಳಿರೆ ನಾಲ್ಕು ವರ್ಣಂಗೊ (ಗುಂಪು, ಪಂಗಡ, ವರ್ಗ) ಹೇಳ್ವ ಅರ್ಥಲ್ಲಿ ಹೊರತು ನಾವು ಗ್ರೇಶಿಗೊಂಡಿಪ್ಪ ಜಾತಿ ಅಲ್ಲ. ವರ್ಣ ಮತ್ತು ಜಾತಿಯ ಸಂಕೀರ್ಣವಾಗಿ ಬಳಸತೊಡಗಿ ಅದರ ಅರ್ಥವೇ ಅನರ್ಥ ಆಗಿ ಹೋತು. ಜಾತಿ ಹೇಳಿರೆ – ಹುಟ್ಟುಗುಣ ಸ್ವಭಾವ, ತ್ರಿಗುಣಂಗೊಕ್ಕೆ ಸಂಬಂಧ ಪಟ್ಟದ್ದು. ಇನ್ನೊಂದು ಅರ್ಥಲ್ಲಿ ಜಾತಿ ಹೇಳಿರೆ ಯಾವ ಮನೆತನಲ್ಲಿ ಹುಟ್ಟಿದ್ದು ಆ ಜಾತಿ. ಬ್ರಾಹ್ಮಣನ ಮನೆಲಿ ಹುಟ್ಟಿದವ ಬ್ರಾಹ್ಮಣ ಜಾತಿ, ಕ್ಷತ್ರಿಯ ಪಂಗಡಲ್ಲಿ (ಮನೆತನಲ್ಲಿ) ಹುಟಿದವ ಕ್ಷತ್ರಿಯ ಜಾತಿ..  ., ಆದ್ದರಿಂದ ಇಲ್ಲಿ ವರ್ಣ ಹೇಳಿರೆ ಮೂಲ ಹುಟ್ಟು ಪ್ರಕೃತಿ ಸ್ವಭಾವ ಹೇಳಿ ಅರ್ಥೈಸೆಕು.

ಇನ್ನು ವರ್ಣ ಹೇಳಿರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಹೇಳಿರೆ ಎಂತರ?!. ನಾವು ಸಾಮಾನ್ಯವಾಗಿ ಹೇಳುವದಿದ್ದು “ಅವನ ಬಣ್ಣ ಬಯಲಾತು” ಹೇಳಿ., ಹೇಳಿರೆ, ಅವನ ನಿಜ ವ್ಯಕ್ತಿತ್ವ ಬಯಲಾತು ಹೇಳ್ವ ಅರ್ಥಲ್ಲಿ ಆವ್ತು. ಇಲ್ಲಿ ಬಣ್ಣ ಹೇಳಿ ಹೇಳ್ಳೆ ಇನ್ನೊಂದು ಕಾರಣವೂ ಇದ್ದು. ನಮ್ಮ ಸ್ವಭಾವಕ್ಕೆ ಬಣ್ಣ ಇದ್ದು . ಇದು ಅಗೋಚರ. ಸಾತ್ವಿಕ – ಬೆಳಿ, ರಾಜಸ – ಕೆಂಪು, ತಾಮಸ – ಕಪ್ಪು. ಅಷ್ಟು ಮಾತ್ರವಲ್ಲದ್ದೆ, ನಮ್ಮ ಸ್ವಭಾವ ನಮ್ಮ ಒಳಾಣ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಂಗೊ ಹೊರಹೊಮ್ಮುತ್ತು. ಇದು ಅಗೋಚರ. ತುಂಬಾ ಕೋಪ ಬಂದಪ್ಪಗ ಮೈಂದ ಕೆಂಪು ಕಿರಣ, ಪ್ರಸನ್ನ ಮನಸ್ಸಿನವನಾಗಿಪ್ಪಗ ಹಸಿರು ಕಿರಣ, ಜ್ಞಾನದ ಆಳ ತಿಳುದ ಜ್ಞಾನಿಯ ಮೈಂದ ನೀಲ ಕಿರಣ…. ಹೀಂಗೆ ನಮ್ಮ ಒಳ ಸ್ವಭಾವವ ಪ್ರತಿನಿಧಿಸುತ್ತು. ಆ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ°.

ಇವಿಷ್ಟು ವಿಚಾರವ ಅರ್ಥೈಸಿಗೊಂಡರೆ ನವಗೆ ಒಂದು ವಿಚಾರ ಖಚಿತ ಪಡುಸಲಕ್ಕು. ಜಾತಿ- ಹುಟ್ಟಿದ ಮನಗೆ ಮತ್ತು ಅಬ್ಬೆ ಅಪ್ಪನ ಅವಲಂಬಿಸಿ ಬಪ್ಪದು. ವರ್ಣ ಹೇಳುವದು ನಮ್ಮ ಅಂತರಂಗ ಪ್ರಪಂಚ , ನಮ್ಮ ಮೂಲ ಸ್ವಭಾವ. ಈ ವರ್ಣವ ಪ್ರಪಂಚದ ಮೂಲೆ ಮೂಲೆಗಳಲ್ಲೂ ಕಾಂಬಲೆಡಿಗು. ಭಾರತಲ್ಲಿ ಶಾಸ್ತ್ರಕಾರರು ಇದರ ಗುರುತಿಸಿ ಅದಕ್ಕೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಹೇಳ್ವ ಹೆಸರು ಕೊಟ್ಟವು ಅಷ್ಟೇ. ಜಾತಿ ಜನ್ಮತಃ ಆದರೆ ವರ್ಣಂಗಳ ಗುಣಕರ್ಮಂದ ವಿಭಾಗಿಸಿಪ್ಪದು. ಬ್ರಾಹ್ಮಣನ ಮನೆಲಿ ಹುಟ್ಟಿದವ ಬ್ರಾಹ್ಮಣ. ಆದರೆ ಆತ° ಸ್ವಭಾವತಃ ಕ್ಷತ್ರಿಯನಾಗಿ ಇಪ್ಪಲೂ ಸಾಕು. ಒಂದೇ ಮನೆಲಿ ನಾಲ್ಕು ವರ್ಣದ ಮಕ್ಕೊ ಹುಟ್ಳೂ ಸಾಕು. ಬೆಸ್ತರ ಕೂಸಿಲ್ಲಿ ಹುಟ್ಟಿದ ವೇದವ್ಯಾಸ ಮಹಾಬ್ರಾಹ್ಮಣ. ಇದು ವರ್ಣವ ಅವಲಂಬಿಸಿ ಬಂದದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ – ವಿದುರ್, ಕ್ಷತ್ತಾ (ಕೆಲಸದ ಹೆಣ್ಣಿನ ಮಗ, ಶೂದ್ರ). ಇದು ಸಾಮಾಜಿಕ ರಾಜಕೀಯಂದ ಬಂದದು!. ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವ ಜೀವಕ್ಕೆ ಹುಟ್ಟುವಾಗಳೇ ಕೊಟ್ಟಿರುತ್ತ°. 

ಪುರುಷಸೂಕ್ತಲ್ಲಿ ಈ ನಾಲ್ಕು ವರ್ಣಂಗಳ ಆಯಾ ವರ್ಣದ ಕರ್ಮಕ್ಕನುಗುಣವಾಗಿ ದೇಹದ ನಾಲ್ಕು ಭಾಗವಾಗಿ ವಿವರಿಸಿದ್ದವು.  ಬ್ರಾಹ್ಮಣೋಸ್ಯ ಮುಖಮಾಸೀತ್ । ಬಾಹೂ ರಾಜನ್ಯಃ ಕೃತಃ । ಊರೂ ತದಸ್ಯ ಯದ್ವೈಶ್ಯಃ । ಪದ್ಭ್ಯಾಗ್ ಮ್ ಶೂದ್ರೋ ಅಜಾಯತ । ದೇಹಕ್ಕೆ ಪಂಚಾಂಗವಾಗಿಪ್ಪ ಮತ್ತು ಪೂಜೆಲಿ ಶ್ರೇಷ್ಠವಾಗಿಪ್ಪ ಪಾದವ ಶೂದ್ರಂಗೆ ಹೋಲಿಸಿದವು, ಇದು ದೇಹದ ಅಡಿಪಾಯ. ಶೂದ್ರ ಹೇಳಿರೆ ಇಲ್ಲಿ ದುಃಖಲ್ಲಿ ಕರಗಿದವ° ಎಂಬರ್ಥ. ಈತಂತೆ ಅರಸೊತ್ತಿಗೆ ಇಲ್ಲೆ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾಗುಣ ಮಹತ್ವದ್ದಾಗಿರುತ್ತು. ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾವನೂ ಏಕ ವರ್ಣದವ° ಅಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವ ಇರುತ್ತು. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಿಗೆ ಕಾಣಿಸುತ್ತೊ ನಾವು ಆ ವರ್ಣಕ್ಕೆ ಸೇರಿಗೊಂಡವು. ಶೂದ್ರ ಸ್ವಭಾವ ಎಷ್ಟು ಮುಖ್ಯ ಹೇಳಿರೆ ಈ ಸ್ವಭಾವ ಇಲ್ಲದ್ದೆ ಬೇರೆ ಸ್ವಬಾವಕ್ಕೆ ಬೆಲೆ ಇಲ್ಲೆ. (ಸಾಮಜಿಕ ಜೀವನಲ್ಲಿಯೂ ಅಷ್ಟೇ ತಾನೆ ಶೂದ್ರರು (ಕಾರ್ಮಿಕರು, ಕೆಲಸದ ಆಳುಗೊ) ಇಲ್ಲದ್ರೆ ಕೆಲಸ ಬಾಧಿತ ಆವುತ್ತು. ) ಯಾವಾಗಲೂ ನಾವು ಮಾಡುವ ಕರ್ಮವ ಸೇವಾ ಭಾವಂದ ಮಾಡೆಕು. ಬ್ರಾಹ್ಮಣನಾದವ ಸಮಾಜ ಸೇವೆಯ ಭಾವನೆಂದ ಜ್ಞಾನದಾನ ಮಾಡೆಕು. ಇಲ್ಲದ್ರೆ ಅದು ಜ್ಞಾನದಾನ ಎನಿಸುತ್ತಿಲ್ಲೆ. ವೈಶ್ಯನ ದೇಹದ ಸೊಂಟದ ಭಾಗಕ್ಕೆ ಹೋಲಿಸಿದವು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ. ಕ್ಷತ್ರಿಯರ ಸ್ವಬಾವ ತಮ್ಮ ತೋಳ್ಬಲಂದ ಸಮಾಜದ ರಕ್ಷಣೆ ಮಾಡುವದು ಮತ್ತು ಆಢಳಿತ. ಇನ್ನು ಬ್ರಾಹ್ಮಣ ಸ್ವಭಾವ., ಇವರ ಮೂಲಕರ್ಮ ಜ್ಞಾನದ ಮಾರ್ಗದರ್ಶನ. ಆದ್ದರಿಂದ ಅವರ ಮುಖಕ್ಕೆ (ಅರ್ಥಾತ್ ತಲಗೆ) ಹೋಲಿಸಿದವು. ಸ್ವಭಾವತಃ ಬ್ರಾಹ್ಮಣ ಎನಿಸಿದವ ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸತ್ಯ ನುಡಿ, ಸದಾಚಾರ, ಸದ್ಧರ್ಮ, ಸದಾ ಅಂತರಂಗ ಬಹಿರಂಗ ಶುದ್ಧಿ – ಈ ಮೂಲ ಗುಣಂಗಳ ಹೊಂದಿರುತ್ತ°.     

ಹೀಂಗೆ ಈ ನಾಲ್ಕು ವರ್ಣಂಗೊ ಸೇರಿರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣ ಅಪ್ಪಲೆ ಸಾಧ್ಯ. ಇಲ್ಲಿ ಮೇಲು ಕೇಳು ಹೇಳ್ವ ಭಾವನೆ ಅನಗತ್ಯ. ಎಲ್ಲೋರು ಮನುಷ್ಯ ಜೀವಿಗೊ ಅಷ್ಟೇ. ಇದು ಆಧ್ಯಾತ್ಮಿಕ ವರ್ಗೀಕರಣ ಮತ್ತು ವ್ಯವಸ್ಥೆ. ಭಗವಂತ° ಹೇಳಿದ್ದು – ಇದರ ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ಆನು ಈ ಭೂಮಿಲಿ ಸೃಷ್ಟಿಸಿದೆ”.

ಇಲ್ಲಿ ನಾವು ತಿಳಿಯೆಕ್ಕಾದ ಒಂದು ಮೂಲಭೂತ ಅಂಶ ಹೇಳಿರೆ – ಜೀವವ ಭಗವಂತ ಸೃಷ್ಟಿಸಿದ್ದನಿಲ್ಲೆ. ಜೀವ ಮತ್ತು ಜೀವಸ್ವಭಾವ ಅನಾದಿನಿತ್ಯ. ಜೀವದ ಸ್ವಭಾವಕ್ಕನುಗುಣವಾಗಿ ಅದಕ್ಕೆ ಬೇಕಾದ ದೇಹ, ಶಕ್ತಿ, ಪ್ರಪಂಚದ ನಿರ್ಮಾಣ ಮಾಡಿ, ಅದಕ್ಕೊಂದು ಅಸ್ತಿತ್ವವ ಕೊಟ್ಟು, ಜೀವಸ್ವಭಾವದ ವಿಕಾಸಕ್ಕೊಸ್ಕರ ಜೀವವ ಬಿತ್ತಿ ಬೆಳೆಶುವದು ಭಗವಂತ°. ಇಂತಹ ಭಗವಂತ° ಎಲ್ಲರ ಕರ್ತಾರ°. ಅವಂಗೆ ಇನ್ನೊಬ್ಬ ಕರ್ತಾರ° ಇಲ್ಲೆ. ಅವ° ಎಲ್ಲವುದರ ಕಾರಣ° ಆದರೆ ಅವಂಗೆ ಕಾರಣವಾದ ಇನ್ನೊಂದು ಕಾರಣ ಇಲ್ಲೆ. ಬದಲಾವಣೆಗೊಳ್ಳದ ಆನು ಅದರ ನಿರ್ಮಿಸಿದವ ಮತ್ತು ಎನ್ನ ಆರೂ ನಿರ್ಮಿಸಿಲ್ಲೆ ಹೇಳಿ ತಿಳುಕ್ಕೊ ಹೇಳಿ ಭಗವಂತ° ಅರ್ಜುನಂಗೆ ಹೇಳುತ್ತ°.

ಶ್ಲೋಕ

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ ।
ಇತಿ ಮಾಂ ಯೋsಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ॥೧೪॥

ಪದವಿಭಾಗ

ನ ಮಾಮ್ ಕರ್ಮಾಣಿ ಲಿಂಪಂತಿ ಮೇ ಕರ್ಮ-ಫಲೇ ಸ್ಪೃಹಾ । ಇತಿ ಮಾಮ್ ಯಃ ಅಭಿಜಾನಾತಿ ಕರ್ಮಭಿಃ ನ ಸಃ ಬಧ್ಯತೇ ॥

ಅನ್ವಯ

ಕರ್ಮ-ಫಲೇ ಮೇ ಸ್ಪೃಹಾ ನ , ಅತಃ ಕರ್ಮಾಣಿ ಮಾಂ ನ ಲಿಂಪಂತಿ । ಇತಿ ಯಃ ಮಾಂ ಅಭಿಜಾನಾತಿ, ಸಃ ಕರ್ಮಭಿಃ ನ ಬಧ್ಯತೇ ॥

ಪ್ರತಿಪದಾರ್ಥ

ಕರ್ಮ-ಫಲೇ – ಕಾಮ್ಯಕರ್ಮಲ್ಲಿ, ಮೇ – ಎನಗೆ, ಸ್ಪೃಹಾ – ಬಯಕೆ, ನ – ಎಂದಿಂಗೂ ಇಲ್ಲೆ,  ಅತಃ – ಹಾಂಗಾಗಿ,  ಕರ್ಮಾಣಿ – ಸಕಲವಿಧ ಕರ್ಮಂಗೊ, ಮಾಮ್  – ಎನ್ನ, ನ ಲಿಂಪಂತಿ – ಕಲುಷಿತಗೊಳುಸ (ಪರಿಣಾಮ ಬೀರ, ಅಂಟ),   ಇತಿ – ಹೀಂಗೆ, , ಯಃ -ಆರು, ಮಾಮ್ – ಎನ್ನ ಅಭಿಜಾನಾತಿ – ತಿಳಿತ್ತನೋ, ಸಃ – ಅವ°, ಕರ್ಮಭಿಃ – ಅಂತಹ ಕಾರ್ಯಂಗಳ ಪ್ರತಿಕ್ರಿಯೆಂದ,  ನ ಬಧ್ಯತೇ – ಸಿಲುಕಿಗೊಳ್ಳುತ್ತನಿಲ್ಲೆ.

ಅನ್ವಯಾರ್ಥ

ಯಾವ ಕರ್ಮವೂ ಎನ್ನ ಅಂಟುತ್ತಿಲ್ಲೆ. ಆನು ಯಾವುದೇ ಕರ್ಮಫಲವ ಬಯಸುತ್ತಿಲ್ಲೆ. ಎನ್ನ ವಿಷಯಲ್ಲಿ ಈ ಸತ್ಯವ (ಎನ್ನ ಈ ರೀತಿಯಾಗಿ), ಆರು ಅರ್ಥಮಾಡಿಗೊಳ್ಳುತ್ತವೋ ಅವಕ್ಕೂ ಫಲಾಪೇಕ್ಷೆಯ ಕರ್ಮಬಂಧನ ಇಲ್ಲೆ.

ತಾತ್ಪರ್ಯ / ವಿವರಣೆ

ಭಗವಂತ° ಈ ಐಹಿಕ ಜಗತ್ತಿನ ಸೃಷ್ಟಿಸಿದ್ದರೂ , ಈ ಐಹಿಕ ಜಗತ್ತಿಲ್ಲಿ ಯಾವ ಕರ್ಮವೂ ಅವನ ಅಂಟುತ್ತಿಲ್ಲೆ, ಅವಂಗೆ ಪರಿಣಾಮ ಬೀರುತ್ತಿಲ್ಲೆ. ಭಗವಂತ° ವಿಶ್ವವ ಸೃಷ್ಟಿ ಮಾಡಿದ° ಆದರೆ ಅದರಿಂದ ದೂರವೇ ಇರುತ್ತ° ಅರ್ಥಾತ್ ವಿಶ್ವದ ಕರ್ಮ ಬಂಧನಂದ ದೂರ ಇರುತ್ತ°. ಜೀವಿಗೊಕ್ಕೆ ಭೌತಿಕ ವಸ್ತುಗಳ (ಸಂಪತ್ತುಗಳ) ಮೇಲೆ ಪ್ರಭುತ್ವ ನಡೆಸುವ ಪ್ರವೃತ್ತಿ ಇರುತ್ತು. ಆದ್ದರಿಂದ ಅವ್ವು ಐಹಿಕ ಕರ್ಮಲ್ಲಿ, ಕರ್ಮಫಲಲ್ಲಿ ಸಿಕ್ಕಿಹಾಕಿಗೊಳ್ಳುತ್ತವು. ಜೀವಿಗೊ ತಮ್ಮ ತಮ್ಮ ಇಂದ್ರಿಯತೃಪ್ತಿಗಾಗಿ ಕಾರ್ಯಲ್ಲಿ ತೊಡಗುತ್ತವು. ಇದಕ್ಕೆ ಭಗವಂತ° ಹೊಣೆ ಅಲ್ಲ. ಸಾವಿನ ನಂತರ ಸ್ವರ್ಗವ ಮನುಷ್ಯರು ಬಯಸುತ್ತವು. ಸ್ವಯಂಪೂರ್ಣನಾದ ಭಗವಂತಂಗೆ ಹಾಂಗಿಪ್ಪ ಬಯಕೆಗೊ ಇಲ್ಲೆ. ಭಗವಂತ ಭೌತಿಕ ಕ್ರಿಯೆ ಮತ್ತು ಪ್ರತಿಕ್ರಿಯೆಂದ ದೂರು ಇರುತ್ತ°

ಭಗವಂತ° ಅವರವರ ಸ್ವಭಾವಕ್ಕೆ ತಕ್ಕಂತೆ, ಅವರವರ ಕರ್ಮಕ್ಕೆ ತಕ್ಕ ಹಾಂಗೆ (ಗುಣಕರ್ಮ ವಿಭಾಗಶಃ) ಪ್ರಪಂಚ ಹೇಳ್ವ ತೋಟವ ನಿರ್ಮಿಸಿ, ನಾಲ್ಕು ವರ್ಣದ ಮೋಕ್ಷಯೋಗ್ಯ ಮಾನವರ ಸೃಷ್ಟಿಯ ಈ ಭೂಮಿಲಿ ಮಾಡಿದ. ಮನುಷ್ಯನಾಗಿ ಹುಟ್ಟಿ ಆತ್ಮವ ಸತ್ಯವ ಅರಿವ ಕರ್ಮವ ಮಾಡೇಕ್ಕಾದ್ದು ಮನುಷ್ಯರ ಕರ್ಮ. ಆದರೆ ಈ ಲೋಕಲ್ಲಿ ರಾಗದ್ವೇಷಕ್ರೋಧಕ್ಕೆ ಬಲಿಯಾಗಿ ಮನುಷ್ಯರು ತಮ್ಮ ಮುಖ್ಯ ಕರ್ಮವ ಬಿಟ್ಟು ಇಂದ್ರಿಯ ತೃಪ್ತಿಗಾಗಿ ಕರ್ಮದತ್ತ ತೊಡಗುತ್ತವು. ಅವು ಮಾಡಿದ ಕರ್ಮಕ್ಕೆ ತಕ್ಕ ಫಲ ಭಗವಂತ ಕೊಡುತ್ತ° ಅಷ್ಟೆ. ಭಗವಂತಂಗೆ ಈ ಕರ್ಮಭೂಮಿಲಿ ಕಾಮ್ಯವೂ ಇಲ್ಲೆ ಕರ್ಮವೂ ಇಲ್ಲೆ ಅದರಿಂದ ಕರ್ಮದ ಪರಿಣಾಮವೂ ಇಲ್ಲೆ.

ಶ್ಲೋಕ

ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ ।
ಕುರು ಕರ್ಮೈವ ತಸ್ಮಾತ್ತ್ವಂ ಪೂರ್ವೈಃ ಪೂರ್ವತರಂ ಕೃತಂ ॥೧೫॥

ಪದವಿಭಾಗ

ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈಃ ಅಪಿ ಮುಮುಕ್ಷುಭಿಃ । ಕುರು ಕರ್ಮ ಏವ ತಸ್ಮಾತ್ ತ್ವಂ ಪೂರ್ವೈಃ ಪೂರ್ವತರಂ ಕೃತಂ ॥

ಅನ್ವಯ

ಏವಂ ಜ್ಞಾತ್ವಾ ಪೂರ್ವೈಃ ಮುಮುಕ್ಷುಭಿಃ ಅಪಿ ಕರ್ಮ ಕೃತಮ್ । ತಸ್ಮಾತ್ ತ್ವಂ ಪೂರ್ವೈಃ ಪೂರ್ವತರಂ ಕೃತಂ ಏವ ಕರ್ಮ ಕುರು ॥

ಪ್ರತಿಪದಾರ್ಥ

ಏವಮ್ – ಹೀಂಗೆ, ಜ್ಞಾತ್ವಾ – ಲಾಯಕಕ್ಕೆ ತಿಳುದು, ಪೂರ್ವೈಃ ಮುಮುಕ್ಷುಭಿಃ  – ಹಿಂದಾಣ ಮೋಕ್ಷಪಡೆದವರಿಂದ, ಅಪಿ – ಕೂಡ, ಕರ್ಮ – ಕರ್ಮವು, ಕೃತಮ್ – ಮಾಡಲ್ಪಟ್ಟತ್ತು,  ತಸ್ಮಾತ್ – ಹಾಂಗಾಗಿ, ತ್ವಮ್ – ನೀನು, ಪೂರ್ವೈಃ – ಪೂರ್ವಜರಿಂದ, ಪೂರ್ವತರಮ್ – ಪೂರ್ವಕಾಲಲ್ಲಿ, ಕೃತಮ್ – ಆಚರಿಸಲ್ಪಟ್ಟದ್ದರ, ಏವ – ನಿಶ್ಚಿತವಾಗಿಯೂ, ಕರ್ಮ – ವಿಧ್ಯುಕ್ತ ಕರ್ತವ್ಯವ, ಕುರು – ಮಾಡು.

ಅನ್ವಯಾರ್ಥ

ಹಿಂದಾಣಕಾಲದ ಎಲ್ಲ ಮುಕ್ತಾತ್ಮರುಗಳೂ ಎನ್ನ ದಿವ್ಯಸ್ವಭಾವವ ಹೀಂಗೆ ಅರ್ಥಮಾಡಿಗೊಂಡು ಕರ್ಮವ ಮಾಡಿದವು. ಹಾಂಗೇ  ನೀನೂ ಅವರ ಹೆಜ್ಜೆಯ ಅನುಸರುಸಿ ನಿನ್ನ ಕರ್ತವ್ಯವ ಮಾಡು.

ತಾತ್ಪರ್ಯ / ವಿವರಣೆ

ಮನುಷ್ಯರಲ್ಲಿ ಎರಡು ವಿಧ . ಒಂದು ಸಂಪೂರ್ಣ ಕೃಷ್ಣಪ್ರಜ್ಞೆಲಿ ಇಪ್ಪ ಸಾಧಕರು. ಇನ್ನೊಂದು ಕಲುಷಿತ ಐಹಿಕ ವಿಷಯಂಗಳಿಂದ ತುಂಬಿಗೊಂಡು ಮೋಕ್ಷವ ಬಯಸಿ ಕರ್ಮವ ಮಾಡುತ್ತವು. ಇಬ್ಬರಿಂಗೂ ಕೃಷ್ಣಪ್ರಜ್ಞೆ ಸಮಾನವಾಗಿ ಪ್ರಯೋಜನಕರ. ಕಲ್ಮಷಂದ ತುಂಬಿಗೊಂಡವು ಕ್ರಮಕ್ರಮವಾದ ಶುದ್ಧೀಕರಣ ಪ್ರಕ್ರಿಯೆಗೆ ಕೃಷ್ಣಪ್ರಜ್ಞೆಯ ಮಾರ್ಗವ ಅನುಸರುಸಲಕ್ಕು. ಭಕ್ತಿಸೇವೆಯ ನಿಯಂತ್ರಕ ತತ್ವಂಗಳ ಅನುಸರುಸಲಕ್ಕು. ಕಶ್ಮಲಂದ ಶುದ್ಧರಾದವು ಹಾಂಗೇ ಕೃಷ್ಣಪ್ರಜ್ಞೆಯ ಮುಂದುವರುಸಲಕ್ಕು. ಇದರಿಂದ ಇತರರೂ ಆ ಆದರ್ಶ ಚಟುವಟಿಕೆಯ ಗಮನಿಸಿ ಅನುಸರುಸಿ ಅದರ ಪ್ರಯೋಜನ ಪಡೆವಲಕ್ಕು. ಬುದ್ಧಿ ಇಲ್ಲದ್ದವು (ಅವಿವೇಕಿ, ವಿಚಾರಶೂನ್ಯರು) ಹೊಸತ್ತಾಗಿ ಕೃಷ್ಣಪ್ರಜ್ಞೆಯ ದೀಕ್ಷೆಯ ಪಡದವು ಕೃಷ್ಣಪ್ರಜ್ಞೆಯ ಮಹತ್ವವ ಅರ್ತುಗೊಂಬಲೆ ಅಸಾಧ್ಯರಾಗಿ ನಿವೃತ್ತರಪ್ಪಲೆ ಬಯಸುತ್ತವು. ಯುದ್ಧರಂಗಲ್ಲಿ ಕರ್ತವ್ಯಂಗಳ ನಿರ್ವಹಿಸುಲೆ ಸಾಧ್ಯ ಆವ್ತಿಲ್ಲೆ ಹೇಳ್ವ ಅರ್ಜುನನ ಮಾತುಗಳ ಕೃಷ್ಣ ಒಪ್ಪುತ್ತನಿಲ್ಲೆ. ಅರ್ಜುನ ಆ ರೀತಿ ಅಪ್ಪಲೆ ಬಯಸುತ್ತನಿಲ್ಲೆ ಕೃಷ್ಣ°. ಅದಕ್ಕಾಗಿ ಹೇಂಗೆ ಈಗ ಕರ್ತವ್ಯವ ಅರ್ತುಗೊಂಡು ಮಾಡೆಕು ಹೇಳಿ ವಿವರುಸುತ್ತ ಅರ್ಜುನಂಗೆ ಕೃಷ್ಣ°. ಕೃಷ್ಣಪ್ರಜ್ಞೆಯ ಚಟುವಟಿಕೆಯ ಬಿಟ್ಟು, ಕೃಷ್ಣಪ್ರಜ್ಞೆಯ ಹೊರಪ್ರದರ್ಶನ ಮಾಡಿಗೊಂಡು ದೂರ ಕೂಬದರಿಂದ ಕೃಷ್ಣಂಗಾಗಿ ಕಾರ್ಯಕ್ಷೇತ್ರಲ್ಲಿ ತೊಡಗುವುದೇ ಮುಖ್ಯ. ಈ ಮದಲೇ ಹೇಳಿದಾಂಗೆ, ಸೂರ್ಯದೇವತೆ ವಿವಸ್ವಾನನಂತಹ ಹಿಂದಾಣವರ ಅನುಸರುಸಿ ಕೃಷ್ಣಪ್ರಜ್ಞೆಲಿ ಕೆಲಸ ನೀ ಮಾಡು ಹೇಳಿ ಅರ್ಜುನಂಗೆ ಕೃಷ್ಣನ ಉಪದೇಶ. ಭಗವಂತನ ಈ ಹಿಂದಾಣ ಶಿಷ್ಯರು ಆರಾರು, ಆರಾರು ಮುಕ್ತಿ ಪಡದವು, ಹೇಂಗೆ ಪಡದವು ಹೇಳಿ ಕೃಷ್ಣಂಗೆ ಗೊಂತಿದ್ದು. ಆದ್ದರಿಂದ ಅರ್ಜುನ!, ನೀನೂ ಈ ಹಿಂದಾಣವರ ಆದರ್ಶವ ಪಾಲುಸಿ ಅವು (ಮುಕ್ತಾತ್ಮರು) ಅನುಸರಿಸಿದ ಮಾರ್ಗವನ್ನೇ ಅನುಸರುಸು. ಕೃಷ್ಣಪ್ರಜ್ಞೆಲಿ ಕಾರ್ಯವ ತೊಡಗು ಹೇಳಿ ಹೇಳುತ್ತ° ಕೃಷ್ಣ ಅರ್ಜುನಂಗೆ.

ಕರ್ಮದ ಬಂಧನಂದ ಬಿಡಿಸಿಗೊಂಬಲೆ (ತಪ್ಪಿಸಿಗೊಂಬಲೆ) ‘ನಿಷ್ಕ್ರಿಯತೆ’ (ಕೆಲಸ ಮಾಡದ್ದೆ ಇಪ್ಪದು) ಸುಲಭೋಪಾಯ ಹೇಳಿ ಕೆಲವರು ಯೋಚಿಸುತ್ತವು. ಅಂತಹ ನಿಷ್ಕ್ರಿಯತೆ ಸರಿಯಲ್ಲ ಹೇಳಿ ಹೇಳುತ್ತ° ಕೃಷ್ಣ°. ಕರ್ಮ ಮಾಡುತ್ಸು ಹೇಳಿ ಏನಾರ ಮಾಡುತ್ತದಲ್ಲ. ನಮ್ಮ ಜೀವಸ್ವಭಾವ (ವರ್ಣ)ಕ್ಕೆ ತಕ್ಕಂತೆ ಕರ್ಮ ಮಾಡೆಕು. ಮಾಡುವ ಕರ್ಮವ ಜ್ಞಾನಪೂರ್ವಕವಾಗಿ ತಿಳುದು ಅಭಿಮಾನ-ಅಹಂಕಾರ-ಫಲಾಪೇಕ್ಷೆ ಇಲ್ಲದ್ದೆ ಮಾಡೆಕು. ಈ ಹಿಂದಾಣ ರಾಜರ್ಷಿಗೊ, ಋಷಿ-ಮುನಿಗೊ ಮಾಡಿದ್ದೂ ಇದನ್ನೇ. ಕರ್ಮಯೋಗ-ಜ್ಞಾನಯೋಗ ಇಲ್ಲದ್ದೆ ಭಗವಂತನ ಸಂಯೋಗ ಇಲ್ಲೆ ಹೇದು ಈ ಬಗ್ಗೆ ಬನ್ನಂಜೆಯವರ ವ್ಯಾಖ್ಯಾನಲ್ಲಿ ವಿವರಿಸಿದ್ದವು.

ಶ್ಲೋಕ

ಕಿಂ ಕರ್ಮ ಕಿಮಕರ್ಮೇತಿ ಕವಯೋsಪ್ಯತ್ರ ಮೋಹಿತಾಃ ।
ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞಾತ್ವಾ ಮೋಕ್ಷ್ಯಸೇsಶುಭಾತ್ ॥೧೬॥

ಪದವಿಭಾಗ

ಕಿಮ್  ಕರ್ಮ ಕಿಮ್ ಅಕರ್ಮ ಇತಿ ಕವಯಃ ಅಪಿ ಅತ್ರ ಮೋಹಿತಾಃ । ತತ್ ತೇ ಕರ್ಮ ಪ್ರವಕ್ಷ್ಯಾಮಿ ಯತ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್ ।।

ಅನ್ವಯ

ಕಿಂ ಕರ್ಮ ಕಿಮ್ ಅಕರ್ಮ ಇತಿ ಅತ್ರ ಕವಯಃ ಅಪಿ ಮೋಹಿತಾಃ । ತತ್ ಕರ್ಮ ತೇ ಪ್ರವಕ್ಷ್ಯಾಮಿ, ಯತ್ ಜ್ಞಾತ್ವಾ ಅಶುಭಾತ್ ಮೋಕ್ಷ್ಯಸೇ ॥

ಪ್ರತಿಪದಾರ್ಥ

ಕಿಮ್ – ಯಾವುದು, ಕರ್ಮ – ಕರ್ಮವು, ಕಿಮ್ – ಯಾವುದು, ಅಕರ್ಮ – ಅಕರ್ಮವು, ಇತಿ – ಹೇದು, ಅತ್ರ – ಇಲ್ಲಿ (ಈ ವಿಷಯಲ್ಲಿ), ಕವಯಃ – ಬುದ್ಧಿವಂತರು, ಅಪಿ – ಕೂಡ, ಮೋಹಿತಾಃ – ದಿಗ್ಭ್ರಮೆಗೊಂಡಿದ್ದವು , ತತ್  ಕರ್ಮ – ಆ ಕರ್ಮವ, ತೇ – ನಿನಗೆ,  ಪ್ರವಕ್ಷ್ಯಾಮಿ – ವಿವರುಸುತ್ತೆ, ಯತ್ – ಯಾವುದರ, ಜ್ಞಾತ್ವಾ – ತಿಳುದು, ಅಶುಭಾತ್ – ಗೊಂದಲಂಗಳಿಂದ, ಮೋಕ್ಷ್ಯಸೇ – ಮುಕ್ತನಪ್ಪೆ,

ಅನ್ವಯಾರ್ಥ

ಯಾವುದು ಕರ್ಮ, ಯಾವುದು ಅಕರ್ಮ (ಯಾವುದು ಮಾಡ್ಳಕ್ಕು, ಯಾವುದು ಮಾಡ್ಳಾಗ), ಎಂಬುದರ ಬಗ್ಗೆ ತೀರ್ಮಾನುಸುವಾಗ ಜ್ಞಾನಿಗೊ (ಬುದ್ಧಿವಂತರೂ) ಕೂಡ ಗೊಂದಲಕ್ಕೆ ಈಡಾಯ್ದವು. ಕರ್ಮ ಹೇಳಿರೆ ಎಂತರ ಹೇಳ್ವದರ ನಿನಗೆ ಈಗ ವಿವರುಸುತ್ತೆ. ಅದರ ತಿಳುದು ನೀನು ಎಲ್ಲ ಗೊಂದಲಂಗಳಿಂದ ಬಿಡುಗಡೆ ಹೊಂದುವೆ.     

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಯ ಮಾರ್ಗದರ್ಶನ ಮಾಡಿದ್ದು ಗುರುಶಿಷ್ಯನಾಗಿ ಕೃಷ್ಣ ಮದಾಲು ವಿವಸ್ವಾನ್ ಸೂರ್ಯಂಗೆ, ಅವನಿಂದ ಮತ್ತೆ ತನ್ನ ಮಗ ಮುನುವಿಂಗೆ, ಮನು ಮತ್ತೆ ತನ್ನ ಮಗ ಇಕ್ಷ್ವಾಕುವಿಂಗೆ, ಹೀಂಗೆ ಗುರುಶಿಷ್ಯಪರಂಪರೆಲಿ ಬೋಧನೆ ಆತು. ಆ ಪ್ರಾಚೀನ ಕಾಲಂದ ಇದೇ ರೀತಿ ನಡಕ್ಕೊಂಡು ಬಂತು. ಆದ್ದರಿಂದ ಜ್ಞಾನವ ಗುರುವಿನ ಮಾರ್ಗದರ್ಶನಲ್ಲಿ ಪಡೆಕ್ಕಪ್ಪದು ಅತೀ ಮುಖ್ಯ. ಇಲ್ಲದ್ರೆ ತಥಾಕಲಿತ ಕಲ್ಪನೆಯ ವಿವರಣೆಗೆ ಸಿಲುಕಿ ಮೂಲ ವಿಷಯ ಅನಪೇಕ್ಷಿತ ವ್ಯಾಖ್ಯಾನಕ್ಕೆ ತುತ್ತಾಗಿ ವಿಷಯ ಆಭಾಸ ಆಗಿ ಮತ್ತಾಣವಕ್ಕೆ ಗೊಂದಲ ವಿಷಯವೇ ಉಳಿವದು. ಆದ್ದರಿಂದಲೇ ಪ್ರಸ್ತುತ ಕಾಲಘಟ್ಟಲ್ಲಿ ಕೃಷ್ಣ ತನ್ನ ಸಖನೂ ನೆಂಟನೂ ಆಪ್ತ ಶಿಷ್ಯನೂ ಆದ ಅರ್ಜುನಂಗೆ ಉಪದೇಶಿಸಲೆ ನಿರ್ಧರಿಸಿದ್ದು. ಭಗವಂತ ಅರ್ಜುನಂಗೆ ನೇರವಾಗಿ ಉಪದೇಶ ಮಾಡುವದರಿಂದ ಆರು ಅಜುನನ ಹೆಜ್ಜೆಲಿ ನಡೆತ್ತವೊ ಅವಕ್ಕೆ ಗೊಂದಲ ಖಂಡಿತ ಇರ್ತಿಲ್ಲೆ. ಧರ್ಮದ ಮಾರ್ಗವ ಅಪರಿಪೂರ್ಣವಾದ ಪ್ರಾಯೋಗಿಕ ತಿಳುವಳಿಕೆಂದ ನಿರ್ಧರುಸಲೆ ಸಾಧ್ಯವಿಲ್ಲೆ. ವಾಸ್ತವವಾಗಿ ಧರ್ಮದ ತತ್ವಂಗಳ ಭಗವಂತ° ವಿಧಿಸಿದ್ದು (ಧರ್ಮಂ ತು ಸಾಕ್ಷಾದ್ ಭಗವತ್ಪ್ರಣೀತಂ). ಅಪರಿಪೂರ್ಣವಾದ ಊಹೆಗಳಿಂದ ಧಾರ್ಮಿಕ ತತ್ವಂಗಳ ಆರೂ ಸರಿಯಾಗಿ ಸೃಷ್ಟಿ ಮಾಡ್ಳೆ ಸಾಧ್ಯ ಇಲ್ಲೆ. ಹಿಂದಾಣ ಮಹಾತ್ಮರ ಶ್ರೇಷ್ಠ ಹೆಜ್ಜೆಯ ಅನುಸರುಸೇಕು. ಊಹಾತ್ಮಕ ಚಿಂತನೆಂದ ಧರ್ಮ ಯಾವುದು , ಆತ್ಮಸಾಕ್ಷಾತ್ಕಾರ ಹೇಳಿರೆಂತರ ಹೇಳ್ವದರ ತಿಳ್ಕೊಂಬಲೆ ಎಡಿಯ. ಆದ್ದರಿಂದ ತನ್ನ ಭಕ್ತರ ಬಗ್ಗೆ ಇಪ್ಪ ನಿಷ್ಕಾರಣ ಕಾರುಣ್ಯಂದ ಭಗವಂತ° ಕರ್ಮ ಯಾವುದು, ಅಕರ್ಮ ಯಾವುದು ಹೇಳ್ವದರ ಅರ್ಜುನನ ಮುಖಾಂತರ ಜಗತ್ತಿಂಗೆ ಸಾರುತ್ತ°. ಕೃಷ್ಣಪ್ರಜ್ಞೆಂದ ಮಾಡಿದ ಕರ್ಮ ಮಾತ್ರವೇ ಮನುಷ್ಯನ ಐಹಿಕ ಅಸ್ತಿತ್ವದ ಗೋಜಿಂದ ಬಿಡುಗಡೆ ಮಾಡುತ್ತು.  

ಶ್ಲೋಕ

ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ ।
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ ॥೧೭॥

ಪದವಿಭಾಗ

ಕರ್ಮಣಃ ಹಿ ಅಪಿ ಬೋದ್ಧವ್ಯಮ್ ಬೋದ್ಧವ್ಯಮ್ ಚ ವಿಕರ್ಮಣಃ । ಅಕರ್ಮಣಃ ಚ ಬೋದ್ಧವ್ಯಮ್ ಗಹನಾ ಕರ್ಮಣಃ ಗತಿಃ ॥

ಅನ್ವಯ

ಕರ್ಮಣಃ ತತ್ತ್ವಂ ಹಿ ಅಪಿ ಬೋದ್ಧವ್ಯಮ್, ವಿಕರ್ಮಣಃ ಚ ತತ್ತ್ವಂ ಬೋದ್ಧವ್ಯಮ್, ತಥಾ, ಅಕರ್ಮಣಃ ಚ ತತ್ತ್ವಂ ಬೋದ್ಧವ್ಯಮ್ । ಕರ್ಮಣಃ ಗತಿಃ ಗಹನಾ ॥

ಪ್ರತಿಪದಾರ್ಥ

ಕರ್ಮಣಃ  ತತ್ತ್ವಂ – ಕರ್ಮದ ತತ್ತ್ವಂಗಳ, ಹಿ – ಖಂಡಿತವಾಗಿಯೂ, ಅಪಿ – ಕೂಡ, ಬೋದ್ಧವ್ಯಮ್ – ತಿಳ್ಕೊಳ್ಳೆಕು, ವಿಕರ್ಮಣಃ – ನಿಷಿದ್ಧಕರ್ಮದ, ಚ – ಕೂಡ,  ತತ್ತ್ವಮ್ – ತತ್ತ್ವಂಗಳ, ಬೋದ್ಧವ್ಯಮ್ – ತಿಳುಕ್ಕೊಳ್ಳೆಕು,  ತಥಾ – ಹಾಂಗೇ, ಅಕರ್ಮಣಃ – ಅಕರ್ಮದ (ಕರ್ಮಬಾಹಿರ, ಕರ್ಮಮಾಡದ್ದೆ ಇಪ್ಪದು), ಚ – ಕೂಡ, ತತ್ತ್ವಮ್ – ತತ್ತ್ವವ, ಬೋದ್ಧವ್ಯಮ್ – ತಿಳುಕ್ಕೊಳ್ಳೆಕು, ಕರ್ಮಣಃ – ಕರ್ಮದ, ಗತಿಃ – ಮಾರ್ಗವು, ಗಹನಾ – ಬಹಳ ಗಹನವಾದ್ದು (ಕಷ್ಟಕರವಾದ್ದು) .

ಅನ್ವಯಾರ್ಥ

ಕರ್ಮದ ಜಟಿಲತೆಯ ಅರ್ಥಮಾಡಿಗೊಂಬದು ಬಹಳ ಕಷ್ಟ. ಹಾಂಗಾಗಿ ಮನುಷ್ಯ° ಕರ್ಮ ಯಾವುದು, ವಿಕರ್ಮ (ನಿಷಿದ್ಧಕರ್ಮ) ಏವುದು, ಅಕರ್ಮ (ಕರ್ಮ ಮಾಡದ್ದೆ ಇಪ್ಪದು) ಯಾವುದು ಹೇಳ್ವದರ ಸರಿಯಾಗಿ ತಿಳ್ಕೊಳ್ಳೆಕು. 

ತಾತ್ಪರ್ಯ / ವಿವರಣೆ

ಭೌತಿಕ ಬಂಧನಂದ ಬಿಡುಗಡೆ ಪಡವಲೆ ಮನುಷ್ಯಂಗೆ ಕರ್ಮ ಅನಿವಾರ್ಯ. ಅದಕ್ಕಾಗಿ ಮನುಷ್ಯ° ಕರ್ಮ, ಅಕರ್ಮ, ವಿಕರ್ಮಂಗಳ ವಿಷಯ ತಿಳುಕ್ಕೊಳ್ಳೆಕು. ಕ್ರಿಯೆ, ಪ್ರತಿಕ್ರಿಯೆ, ವಿಕೃತಕ್ರಿಯೆಗಳ ಬಗ್ಗೆ ಗಮನ ಇರೆಕು. ಇದು ಬಹಳ ಕ್ಲಿಷ್ಟವಾದ ವಿಷಯ. ಕೃಷ್ಣಪ್ರಜ್ಞೆಯ ಮತ್ತು ಅದಕ್ಕನುಗುಣವಾಗಿ ಎಂತರ ಹೇಂಗೆ ಮಾಡೇಕ್ಕಾದ್ದು ಹೇಳಿ ಗೊಂತಾಯೆಕ್ಕಾರೆ ಮನುಷ್ಯಂಗೆ ಮನುಷ್ಯ ಮತ್ತು ಪರಮ ಪುರುಷನ ಸಂಬಂಧ ತಿಳುದಿರೆಕು. ಪರಿಪೂರ್ಣ ಜ್ಞಾನ ಇಪ್ಪವಂಗೆ ಪ್ರತಿಯೊಂದು ಜೀವಿಯೂ ಭಗವಂತನ ಸೇವಕ°. ಆದ್ದರಿಂದ ಮನುಷ್ಯಂಗೆ ಸುರುವಿಂದಲೇ ಕೃಷ್ಣಪ್ರಜ್ಞೆ ಆವಶ್ಯಕ. ಈ ಪ್ರಜ್ಞೆಗೆ ಮತ್ತು ಅದಕ್ಕೆ ಸಂಬಂಧಿಸಿದ ಕರ್ಮಂಗೊಕ್ಕೆ ವಿರುದ್ಧವಾದ ನಿರ್ಣಯವು ವಿಕರ್ಮ (ನಿಷಿದ್ಧ ಕರ್ಮ). ಇದರ ತಿಳ್ಕೊಳ್ಳೆಕ್ಕಾರೆ ಮನುಷ್ಯ ನಿಜವಾದ ಕೃಷ್ಣಪ್ರಜ್ಞೆಲಿ ಇಪ್ಪವನ ಸಹವಾಸ ಮಾಡೆಕು ಮತ್ತು ಅವರಿಂದ ಜ್ಞಾನ ರಹಸ್ಯವ ತಿಳುಕ್ಕೊಳ್ಳೆಕು. ಇಲ್ಲದ್ರೆ ಯಾವ ಬುದ್ಧಿವಂತಂಗೂ ದಿಗ್ಭ್ರಮೆ ಮಾತ್ರ ಉಳಿವದು. ನಿಜಗುರುವಿನ ಮಾರ್ಗದರ್ಶನ ನೇರ ಭಗವಂತನ ಮಾರ್ಗದರ್ಶನಕ್ಕೆ ಸಮ. ಎಂತಕೆ ಹೇಳಿರೆ ಗುರುಸ್ಥಾನಲ್ಲಿ ಇಪ್ಪವ ಲಘುವಾಗಿಪ್ಪಲೆ ಸಾಧ್ಯ ಇಲ್ಲೆ. ಕರ್ಮ, ವಿಕರ್ಮ, ಅಕರ್ಮ ಇವ್ವು ಗೊಂದಲದ ವಿಷಯಂಗೊ. ನಾವು ಮಾಡುತ್ತದರ ತಿಳುದು ಮಾಡೆಕು ., ಹೇಳಿರೆ, ಕರ್ಮ ಜ್ಞಾನಪೂರ್ವಕ ಆಗಿರೆಕು. ನಮ್ಮಲ್ಲಿ ನಡವ ಕರ್ಮ, ಅಕರ್ಮ, ವಿಕರ್ಮದ ಹಿಂದೆ ಅನಂತವಾದ ಭಗವದ್ ಶಕ್ತಿ ಕೆಲಸ ಮಾಡುತ್ತಾ ಇದ್ದು ಹೇಳ್ವ ಎಚ್ಚರ ನವಗೆ ಇರೆಕು. ಈ ಮೂಲ ಜ್ಞಾನ ಇಲ್ಲದ್ದೆ ಕರ್ಮದ ಮರ್ಮವ ತಿಳಿವದು ಅಸಾಧ್ಯ.

ಶ್ಲೋಕ

ಕರ್ಮಣ್ಯಕರ್ಮ ಯಃ ಪಶ್ಯೇತ್ ಅಕರ್ಮಣಿ ಚ ಕರ್ಮ ಯಃ ।
ಸ ಬುದ್ಧಿಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್ ॥೧೮॥

ಪದವಿಭಾಗ

ಕರ್ಮಣಿ ಅಕರ್ಮ ಯಃ ಪಶ್ಯೇತ್ ಅಕರ್ಮಣಿ ಚ ಕರ್ಮ ಯಃ । ಸಃ ಬುದ್ಧಿಮಾನ್ ಮನುಷ್ಯೇಷು ಸಃ ಯುಕ್ತಃ ಕೃತ್ಸ್ನ-ಕರ್ಮ-ಕೃತ್॥

ಅನ್ವಯ

ಯಃ ಕರ್ಮಣಿ ಅಕರ್ಮ ಪಶ್ಯೇತ್ ಅಕರ್ಮಣಿ ಚ ಯಃ ಕರ್ಮ ಪಶ್ಯೇತ್ । ಸಃ ಮನುಷ್ಯೇಷು ಬುದ್ಧಿಮಾನ್, ಸಃ ಯುಕ್ತಃ, ಸಃ ಕೃತ್ಸ್ನ-ಕರ್ಮ-ಕೃತ್ ॥

ಪ್ರತಿಪದಾರ್ಥ

ಯಃ – ಆರು, ಕರ್ಮಣಿ – ಕರ್ಮಲ್ಲಿ, ಅಕರ್ಮ – ಅಕರ್ಮವ,  ಪಶ್ಯೇತ್ – ಕಾಣುತ್ತನೋ, ಅಕರ್ಮಣಿ – ಅಕರ್ಮಲ್ಲಿ, ಚ – ಕೂಡ, ಯಃ – ಆರು, ಕರ್ಮ – ಕಾಮ್ಯಕರ್ಮವ, ಪಶ್ಯೇತ್ – ಕಾಣುತ್ತನೋ, ಸಃ – ಅವ°, ಮನುಷ್ಯೇಷು – ಮಾನವ ಸಮಾಜಲ್ಲಿ, ಬುದ್ಧಿಮಾನ್ – ಬುದ್ಧಿವಂತ°,  ಸಃ – ಅವ°, ಯುಕ್ತಃ – ದಿವ್ಯಸ್ಥಿತಿಲಿರುತ್ತ°, ಕೃತ್ಸ್ನ-ಕರ್ಮ-ಕೃತ್ – ಎಲ್ಲ ಕಾರ್ಯಂಗಳಲ್ಲಿ ತೊಡಗಿದ್ದು.

ಅನ್ವಯಾರ್ಥ

ಕರ್ಮಲ್ಲಿ ಅಕರ್ಮವ , ಅಕರ್ಮಲ್ಲಿ ಕರ್ಮವ ಕಾಂಬ ಮನುಷ್ಯ ಬುದ್ಧಿವಂತ°. ಅವ ಎಲ್ಲ ಬಗೆಯ ಕರ್ಮಂಗಳಲ್ಲಿ ತೊಡಗಿದ್ದರೂ ಆಧ್ಯಾತ್ಮಿಕ ಸ್ಥಿತಿಲಿರುತ್ತ°.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ಕರ್ಮ ಮಾಡುವವ° ಸಹಜವಾಗಿ ಕರ್ಮಬಂಧನಂದ ಮುಕ್ತನಾದವ°. ಅವ° ಮಾಡುವದೆಲ್ಲ ಭಗವಂತಂಗಾಗಿಯೇ. ಎಲ್ಲವೂ ಭಗವಂತನ ಸೇವೆ ಅವನ ಕರ್ಮ. ಆದ್ದರಿಂದ ಅವಂಗೆ ಕರ್ಮಲ್ಲಿ ಸಂತೋಷವೂ ಇಲ್ಲೆ, ಕಷ್ಟವೂ ಇಲ್ಲೆ. ಹೀಂಗಾಗಿ ಅವ° ಭಗವಂತಂಗಾಗಿ ಎಲ್ಲ ಬಗೆಯ ಕರ್ಮಲ್ಲಿ ತೊಡಗಿದ್ದರೂ ಅಕರ್ಮಿಯಾಗಿ ಕಂಡರೂ ಮನುಷ್ಯ ಸಮಾಜಲ್ಲಿ ಅವ ಬುದ್ಧಿವಂತ°. ಅಕರ್ಮ ಹೇಳಿರೆ ಕೆಲಸಕ್ಕೆ ಪ್ರತಿಕ್ರಿಯೆಯಿಲ್ಲದ ಹೇಳಿಯೂ ಅರ್ಥ. ಭಗವಂತನ ನಿತ್ಯಸೇವೆಯ ಭಾವವು ಮನುಷ್ಯನ ಕರ್ಮದ ಎಲ್ಲ ಪ್ರತಿಕ್ರಿಯೆ ತೊಂದರೆಂದ ರಕ್ಷಿಸುತ್ತು. ಅರ್ಥಾತ್ ಅವಂಗೆ ಕರ್ಮಫಲಲ್ಲಿ ಆಸೆ ಇಲ್ಲೆ. ಅವ° ಮಾಡುವುದೆಲ್ಲ ಭಗವಂತನ ಸೇವೆಗಾಗಿ, ಎಲ್ಲವೂ ಭಗವಂತಂಗೆ ಅರ್ಪಣೆ. ದೊರಕುವದು ಭಗವತ್ ಪ್ರಸಾದ ಹೇಳಿ ಸ್ವೀಕರುಸುವ ಮನೋಭಾವ. 

ಬನ್ನಂಜೆ ಹೇಳುತ್ತವು – ಈ ಶ್ಲೋಕಲ್ಲಿ ಒಳ್ಳೆ ಸ್ವಾರಸ್ಯ ಮರ್ಮ ಅಡಗಿದ್ದು – ಶ್ಲೋಕದ ಮೇಲ್ನೋಟಕ್ಕೆ ಅರ್ಥ ಬಪ್ಪದು – “ಕರ್ಮ ಇದ್ದಲ್ಲಿ ಕರ್ಮ ಇಲ್ಲೆ, ಕರ್ಮ ಎಲ್ಲಿ ಇಲ್ಲೆ ಅಲ್ಲಿ ಕರ್ಮ ಇದ್ದು. ಇದು ಆರಿಂಗೆ ತಿಳಿದಿರುತ್ತೋ ಅವನೇ ಬುದ್ಧಿವಂತ”. ಅಥವಾ ” ಯಾವುದು ಕರ್ಮವೋ ಅದು ಕರ್ಮವಲ್ಲ, ಯಾವುದು ಕರ್ಮವಲ್ಲವೋ ಅದು ಕರ್ಮ, ಇದರ ತಿಳುದವನೇ ಬುದ್ಧಿವಂತ. ಇದು ಎಂತದೋ ಒಗಟಿನ ಹಾಂಗೆಯೂ, ವಿರೋಧಾಭಾಸವಪ್ಪಂತೆಯೂ ಇದ್ದು.  ಆಧ್ಯಾತ್ಮಿಕವಾಗಿ ಚಿಂತನೆ ಮಾಡಿರೆ – “ಎಲ್ಲಿ ಕರ್ಮ ಇದ್ದೋ ಅಲ್ಲಿ ಕರ್ಮ ಇಲ್ಲೆ, ಎಲ್ಲಿ ಕರ್ಮ ಇಲ್ಯೋ ಅಲ್ಲಿ ಕರ್ಮ ಇದ್ದು”. ಹೇಳಿರೆ, ಎನ್ನಲ್ಲಿ ಕರ್ಮದ ಸ್ವಾತಂತ್ರ್ಯ ಇದ್ದು ಆದರೆ ಯಾವ ಹಂಗೂ ಇಲ್ಲೆ ಹೇಳ್ವ ಭಾವನೆ. ನಮ್ಮಲ್ಲಿಪ್ಪ ಕರ್ಮ ಭಗವಂತನ ಅಧೀನ. ಈ ಸೃಷ್ಟಿ ಚಕ್ರಲ್ಲಿ ನಾವು ಏನು ಮಾಡದ್ದೆ ಇದ್ದರೂ ಕ್ರಿಯ ಮಾತ್ರ ನಿರಂತರ ನಡೆತ್ತಾ ಇರುತ್ತು. ನಾವೇನನ್ನಾರು ಮಾಡುತ್ತರೆ ಅದು ನಮ್ಮಿಂದಾಗಿ ಅಪ್ಪದು ಅಲ್ಲ. ಎನ್ನಲ್ಲಿ ಕ್ರಿಯೆ ಇದ್ದು ಹೇಳ್ವದು ಭ್ರಮೆ. ಪ್ರಕೃತಿ ನಿರಂತರವಾಗಿ ತನ್ನ ಕರ್ತವ್ಯವ ಮಾಡಿಗೊಂಡೇ ಇರುತ್ತು. ವಿಶ್ವಕ್ರಿಯೆ ನಾವು ನಿಷ್ಕ್ರಿಯರಾಗಿದ್ದರೂ ನಡದೇ ನಡೇತ್ತು. ನಾವು ಅಲ್ಲ ಮಾಡಿರೂ ಏನೂ ನಡೆತ್ತಿಲ್ಲೆ. ಈ ವಿಶ್ವಚಕ್ರ ನಿರಂತರ. ಇದರ ಸೊಗಸಾದ ಒಂದು ಸಣ್ಣ ಉದಾಹರಣೆ ಮೂಲಕ ಬನ್ನಂಜೆ ವಿವರುಸುತ್ತವು – ಒಂದು ಆನೆ (ಈ ವಿಶ್ವ ಚಕ್ರ). ಅದರ ತಲೆಲಿ ಒಂದು ಸಣ್ಣ ಎರುಗು (ಸಾಮಾನ್ಯ ಮನುಷ್ಯ°). ಆನೆ ಪೂರ್ವಂದ ಪಶ್ಚಿಮದತ್ತ ಸಾಗುತ್ತು. ಆದರೆ ಇರುವೆ ಅದರ ತಲೆಂದ ಬಾಲದತ್ತ ಹೋವುತ್ತು (ವಿರುದ್ಧಮುಖ ಚಲನೆ). ಆದರೆ, ಅಕೇರಿಗೆ ಆನೆ ಎಲ್ಲಿಗೆ ಹೋಗಿ ಮುಟ್ಟುತ್ತೋ ಅಲ್ಲಿಗೇ ಎರುಗೂ ಹೋಗಿ ಸೇರುತ್ತದು. ಇಲ್ಲಿ ಎರುಗಿನ ಚಲನೆ ವ್ಯರ್ಥ. ಒಂದುವೇಳೆ ಎರುಗು ಎನ್ನಂದಾಗಿ ಆನೆ ಇಲ್ಲಿಗೆ ಬಂದು ಸೇರಿತ್ತು ಹೇಳಿ ಗ್ರೇಶಿರೆ?! ಹಾಸ್ಯಾಸ್ಪದವೇ ಅಲ್ಲದ. ಹಾಂಗೆಯೇ, ನಮ್ಮ ಚಲನೆಯ ಹಿಂದೆ ಒಂದು ಮಹಾ ಚಾಲನಾ ಶಕ್ತಿ ಇದ್ದು. ಇಡೀ ಬ್ರಹ್ಮಾಂಡವ ತೆಕ್ಕೊಂಡರೆ, ಈ ಭೂಮಿ ಇತರ ಗ್ರಹಗೋಲಂಗಳ ನಡುವೆ ಇಪ್ಪ ಒಂದು ಚಿಕ್ಕ ಬಿಂದು. ಆ ಬಿಂದುವಿಲ್ಲಿ ನಮ್ಮ ದೇಶ ಇನ್ನೂ ಒಂದು ಸಣ್ಣ ಬಿಂದು. ಅದರಲ್ಲಿ ‘ಆನು’ ಎಂಬುದು ಊಹಿಸಲೂ ಎಡಿಯದ್ದ ಅತಿ ಸಣ್ಣ ಬಿಂದು. ಆದರೆ, ನಾವು ಮಾತ್ರ ಪ್ರಪಂಚವೇ ನಮ್ಮಿಂದ ನಡೆತ್ತದು ಹೇಳಿ ಅಹಂಕಾರ ಪಟ್ಟುಗೊಳ್ಳುತ್ತು. ಇಡೇಏ ವಿಶ್ವದ ಚಲನೆಲಿ ನಾವೂ ಒಂದು ಘಟಕವಾಗಿದ್ದಷ್ಟೇ ಹೊರತು ನಮ್ಮ ಸ್ವಂತಂದ ಏನೂ ನಡೆತ್ತಿಲ್ಲೆ. ಆದ್ದರಿಂದ ನಿನ್ನ ಕರ್ಮಲ್ಲಿ ಅಕರ್ಮವ ನೋಡು ಹೇಳಿ ಕೃಷ್ಣ ಹೇಳಿದ್ದು. ಹೀಂಗೆ ತನ್ನ ಕರ್ಮವ ನಿಯಂತ್ರುಸುವವ ವಿಶ್ವಶಕ್ತಿಯಾಗಿ ಭಗವಂತ ಇದ್ದ° ಹೇಳಿ ತಿಳ್ಕೊಂಡವ ವಿವೇಕಿ.

‘ಯುಕ್ತಃ’ ಹೇಳಿರೆ ಮನಸ್ಸಿನ ಸತ್ಯದ ಕಡೆಂಗೆ ತಿರುಗಿಸಿ ಸತ್ಯವ ತಿಳ್ಕೊಂಬಲೆ ಮನನ ಮಾಡಿದವ° ಹೇದು ಅರ್ಥ. ಹೀಂಗೆ ಸರಿ ತಪ್ಪುಗಳ ತಿಳುದವ ಎಲ್ಲ ಕರ್ಮದ ಪೂರ್ಣ ಫಲ ಭಗವಂತನಿಂದ ಪಡೆತ್ತ°. ಇಂತವಕ್ಕೆ ಕರ್ತೃತ್ವದ ಅಭಿಮಾನವಾಗಲಿ ಅಹಂಭಾವವಾಗಲೀ ಇಲ್ಲೆ. ಅವ° ಮಾಡುವ ಎಲ್ಲ ಕರ್ಮವು ಭಗವಂತಂಗೋಸ್ಕರ. ಅವನಿಂದ ಯೋಗ್ಯ ಫಲ ಪಡಕ್ಕೊಳ್ಳುತ್ತ°. ಅಹಂಕಾರಂದ ಕಳಚಿಗೊಂಬದು ಆಧ್ಯಾತ್ಮಿಕಲ್ಲಿ ಮಹತ್ತರ ಕಾರ್ಯ. ಅಹಂಕಾರ ಎಂಬುದು ಅತ್ಯಂತ ಅಪಾಯಕಾರಿ. ಯಾವುದೇ ವಿಷಯಕ್ಕೂ ಒಡೆತನ ಸಾಧುಸುವ ಹಾಂಗಿಲ್ಲೆ, ಅಹಂಕಾರ ಪಡುವ ಹಾಂಗಿಲ್ಲೆ. ಗೀತೆಯ ಓದಿಕ್ಕಿ ಆನು ಗೀತೆಯ ಓದಿದ್ದೆ ಹೇಳ್ವ ಅಹಂಕಾರ ಪಡ್ಳೂ ಇಲ್ಲೆ. ಜ್ಞಾನ ಸಂಪಾದನೆಲಿ ಅದರ ಒಟ್ಟಿಂಗೆ ಈ ಅಹಂಕಾರದ ಪರಿಜ್ಞಾನ ಇರೆಕು.

ಭಗವಂತ° ಕರ್ಮ ಮಾಡಿದರೂ ಅವಂಗೆ ಕರ್ಮದ ಲೇಪ ಇಲ್ಲೆ. ಯಾವ ಕರ್ಮದ ಲೇಪವಿಲ್ಲದ್ದೆಯೂ ಆ ಭಗವಂತನಲ್ಲಿ ಕರ್ಮ ಇದ್ದು. ಕರ್ಮ ಇದ್ದು ಆದರೆ ಕರ್ಮದ ಲೇಪ ಇಲ್ಲೆ. ಆರಲ್ಲಿ ಕರ್ಮದ ಲೇಪ ಇಲ್ಲ್ಯೋ ಅವ° ಮಾತ್ರ ಕರ್ಮದ ಪೂರ್ಣ ಫಲವ ಪಡೆತ್ತ°. ಭಗವಂತನಲ್ಲಿ ಕರ್ಮದ ಲೇಪ ಇಲ್ಲೆ, ಆದರೆ, ಸರ್ವ ಕರ್ತೃತ್ವ ಇದ್ದು. ನಾವು ಕರ್ಮದ ಲೇಪವ ಎಷ್ಟು ಲೇಪ ಮಾಡಿಕೊಳ್ಳುತ್ತೋ ಅಷ್ಟು ಕರ್ಮದ ಫಲವ ಪಡೆತ್ತು. ಇದರ ಅರ್ಥಮಾಡಿಗೊಂಡವ ಬುದ್ಧಿವಂತ°. ಆತ° ಕರ್ಮದ ನಿಜವಾದ ಅನುಸಂಧಾನಂದ ಅದರ ಪೂರ್ಣ ಫಲವ ಪಡಕ್ಕೊಳ್ಳುತ್ತ° ಹೇಳಿ ಬನ್ನಂಜೆಯವು ವ್ಯಾಖ್ಯಾನಿಸುತ್ತವು.

ಶ್ಲೋಕ

ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ ।
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ ॥೧೯॥

ಪದವಿಭಾಗ

ಯಸ್ಯ ಸರ್ವೇ ಸಮಾರಂಭಾಃ ಕಾಮ-ಸಂಕಲ್ಪ-ವರ್ಜಿತಾಃ । ಜ್ಞಾನ-ಅಗ್ನಿ-ದಗ್ಧ-ಕರ್ಮಾಣಮ್ ತಮ್ ಆಹುಃ ಪಂಡಿತಮ್ ಬುಧಾಃ ॥

ಅನ್ವಯ

ಯಸ್ಯ ಸರ್ವೇ ಸಮಾರಂಭಾಃ ಕಾಮ-ಸಂಕಲ್ಪ-ವರ್ಜಿತಾಃ, ತಂ ಜ್ಞಾನ-ಅಗ್ನಿ-ದಗ್ಧ-ಕರ್ಮಣಂ ಬುಧಾಃ ಪಂಡಿತಮ್ ಆಹುಃ ॥

ಪ್ರತಿಪದಾರ್ಥ

ಯಸ್ಯ – ಆರ, ಸರ್ವೇ ಸಮಾರಂಭಾಃ – ಎಲ್ಲ ಬಗೆಯ ಪ್ರಯತ್ನಂಗೊ, ಕಾಮ-ಸಂಕಲ್ಪ-ವರ್ಜಿತಾಃ  – ಇಂದ್ರಿಯತೃಪ್ತಿಯ ಆಸೆಯ ಆಧರಿಸಿದ ನಿರ್ಧಾರಂದ ರಹಿತವಾಗಿರುತ್ತೋ, ತಮ್ – ಅವನ, ಜ್ಞಾನ-ಅಗ್ನಿ-ದಗ್ಧ-ಕರ್ಮಣಮ್  – ಪರಿಪೂರ್ಣ ಜ್ಞಾನದ ಕಿಚ್ಚಿಲ್ಲಿ ಸುಟ್ಟುಹೋದ ಕರ್ಮವಿಪ್ಪ,   ಪಂಡಿತಮ್ – ವಿದ್ವಾಂಸ° (ಹೇದು), ಬುಧಾಃ – ತಿಳುದವು, ಆಹುಃ – ಹೇಳುತ್ತವು .

ಅನ್ವಯಾರ್ಥ

ಯಾವ ವ್ಯಕ್ತಿಯ ಪ್ರತಿಯೊಂದು ಕರ್ಮವೂ ಇಂದ್ರಿಯ ತೃಪ್ತಿಯ ಬಯಕೆಂದ ಮುಕ್ತವಾಗಿರುತ್ತೋ, ಅಂತವ ಪೂರ್ಣಜ್ಞಾನಲ್ಲಿ ಇರುತ್ತ°. ವಿದ್ವಾಂಸರ (ಋಷಿಗಳ) ಪ್ರಕಾರ ಅಂತವನ ಕರ್ಮದ ಪ್ರತಿಕ್ರಿಯೆಗಳ ಪೂರ್ಣಜ್ಞಾನದ ಅಗ್ನಿಯು ಸುಟ್ಟುಹಾಕುತ್ತು.

ತಾತ್ಪರ್ಯ / ವಿವರಣೆ

ಪೂರ್ಣಜ್ಞಾನಲ್ಲಿಪ್ಪವ° ಮಾತ್ರ ಕೃಷ್ಣಪ್ರಜ್ಞೆಲಿಪ್ಪವನ ಕಾರ್ಯಂಗಳ ಅರ್ಥಮಾಡಿಗೊಂಬಲೆ ಎಡಿಗು. ಕೃಷ್ಣಪ್ರಜ್ಞೆಲಿಪ್ಪವಂಗೆ ಇಂದ್ರಿಯಭೋಗದ ಪ್ರವೃತ್ತಿ ಕಿಂಚಿತ್ತೂ ಇರ್ತಿಲ್ಲೆ. ಆತ° ದೇವೋತ್ತಮ ಪರಮ ಪುರುಷನ ನಿತ್ಯಸೇವಕನಾಗಿ ತನ್ನ ಸ್ವರೂಪಸ್ಥಿತಿಯ ಪರಿಪೂರ್ಣ ಜ್ಞಾನವ ಪಡೆದಿರುತ್ತ°. ಇಂತಹ ಪರಿಪೂರ್ಣ ಜ್ಞಾನವ ಪಡದವ ನಿಜಾವಾಗಿ ವಿದ್ವಾಂಸ ಎಂದೆಣಿಸಿಗೊಳ್ತ. ಭಗವಂತನ ನಿತ್ಯಸೇವಕ° ಎಂಬ ಈ ಜ್ಞಾನದ ಬೆಳವಣಿಗೆಯ ಜ್ಞಾನಾಗ್ನಿ ಹೇಳಿ ಹೋಲಿಸಿದ್ದು. ಇಂತಹ ಅಗ್ನಿಯ ಒಂದರಿ ಪ್ರಜ್ವಲಿಸಿದರೆ ಎಲ್ಲ ಬಗೆಯ ಪ್ರತಿಕ್ರಿಯೆಗೊ ಸುಟ್ಟುಭಸ್ಮ ಆವುತ್ತು.

ನಮ್ಮ ಜೀವನದ ತೊಡಗುವಿಕೆಯ ಹಿಂದೆ ಒಂದು ಕಾಮನೆ, ಸಂಕಲ್ಪ ಇರುತ್ತು. ಆನು ಸುಖ ಪದೇಕು, ಎನ್ನ ಮನೆಮಂದಿಗೊ ಸುಖವಾಗಿರೆಕು ಹೇಳ್ವ ಕಾಮನೆ. ಇದಕ್ಕಾಗಿ ಏನೋನೋ ವಿಧಾನಂಗಳ ಅನುಸರುಸುತ್ತು. ಇದು ಪ್ರತಿಯೊಂದು ಕ್ರಿಯೆಯ ಹಿಂದೆ ಕಾಡುವ ಸಮಸೆ. ನಮ್ಮ ಬಯಕೆಯ ಈಡೇರಿಕೆಗಾಗಿ ನಮ್ಮ ನಾವು ತೊಡಗಿಸಿಕೊಳ್ಳುತ್ತು. ಆರಿಂಗೆ ತನ್ನ ಈ ತೊಡಗುವಿಕೆಲಿ ಬಯಕೆಗಳ ಸ್ಪರ್ಶ ಇಲ್ಲಿಯೋ, ಅವ° ಪಂಡಿತ°. ಹಾಂಗಾರೆ, ಒಬ್ಬ ಪಂಡಿತನ ಪಾಂಡಿತ್ಯ ಅವನ ನುಡಿಲಿ ಅಲ್ಲ, ನಡೆಲಿ ಹೇಳ್ವ ಅರ್ಥ. ಎನ್ನ ಜೀವನಲ್ಲಿ ಹೀಂಗೇ ಆಯೇಕು, ಹೀಂಗೇ ಮಾಡೆಕು, ಅದರಿಂದ ಇಂತದ್ದು ಸಿಕ್ಕೆಕು ಹೇಳ್ವ ಬಯಕೆ, ಆಸೆಗಳ ಬಿಟ್ಟು ನಿರಾಳವಾಗಿ ಕರ್ತ್ಯವ್ಯ ಮಾಡೆಕು ಹೇಳ್ವದು ಭಗವಂತನ ಮಾತು. ಭಗವಂತ ಮೆಚ್ಚಿ ಎಂತ ಕೊಟ್ಟನೋ ಅದರ ಪ್ರಸಾದ ರೂಪವಾಗಿ ಸ್ವೀಕರುಸು. ಎಂತ ಬಂತೋ, ಸಿಕ್ಕುತ್ತೋ ಅದರಲ್ಲಿ ತೃಪ್ತಿಯ ಅನುಭವುಸು. ಇಲ್ಲೆನ್ನೇ , ಸಿಕ್ಕಿದ್ದಿಲ್ಲೆನ್ನೇಳಿ ಸಂಕಟ ಪಡವಲಾಗ. ಇದುವೇ ಕಾಮಸಂಕಲ್ಪವರ್ಜ್ಯ. (ಏನೂ ಬೇಡ ಹೇಳಿ ಬಯಸುವದಲ್ಲ, ಇಂತದ್ದೇ ಬೇಕು ಹೇಳಿ ಬಯಸದ್ದೆ ಇಪ್ಪದು ಕಾಮಸಂಕಲ್ಪವರ್ಜ್ಯ). ಏನೇ ಬರಳಿ, ಪ್ರಯತ್ನಮಾಡು, ಬಂದದ್ದರ್ಲಿ ಸಂತೋಷಪಡು. ಇಂತಹ ಜ್ಞಾನಂದ ಮಾಡಿದ ಕರ್ಮ ಸ್ವಚ್ಛವಾಗಿರುತ್ತು. ಇದು ಕರ್ಮದ ಕೊಳೆ ಅರಿವಿನ ಕಿಚ್ಚಿಂದ ಸ್ವಚ್ಛ ಅಪ್ಪದು. ಇಂತಹ ನಡೆ ನುಡಿ ಇಪ್ಪವ° ನಿಜವಾದ ಅರ್ಥಲ್ಲಿ ತನೆನೆಸಿಗೊಳ್ಳುತ್ತ°. ಇಂತವರ ಜ್ಞಾನಿಗೊ ‘ಜ್ಞಾನಿಗೊ’ ಹೇಳಿ ಗುರುತುಸುತ್ತವು. ಮನುಷ್ಯ ಎಂತ ಹೇಳುತ್ತ° ಹೇಳ್ವದು ಮುಖ್ಯವಲ್ಲ., ಎಂತ ತನ್ನಲ್ಲಿ ರೂಢಿಸಿಗೊಳ್ಳುತ್ತ ಎಂಬುದು ಮುಖ್ಯ. ಮನಸ್ಸಿಲ್ಲಿ ತುಂಬ ಆಸೆಗಳ ತುಂಬಿಸುಗೊಂಡು, ಆ ಆಸೆಯ ಈಡೇರಿಕಗೆ ಯಾವ್ಯಾದರನ್ನೋ ಬೆನ್ನುಹತ್ತಿ ಸೋಗುಹಾಕಿ ಬದುಕ್ಕುವವ° ಎಂದೂ ಉದ್ಧಾರ ಆಗ° ಹೇಳಿ ಈ ವಿಷಯವ ಬನ್ನಂಜೆ ವ್ಯಾಖ್ಯಾನಲ್ಲಿ ಚಿತ್ರಿಸಿದ್ದವು.

ಶ್ಲೋಕ

ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋsಪಿ ನೈವ ಕಿಂಚಿತ್ ಕರೋತಿ ಸಃ ॥೨೦॥

ಪದವಿಭಾಗ

ತ್ಯಕ್ತ್ವಾ ಕರ್ಮ-ಫಲ-ಅಸಂಗಮ್ ನಿತ್ಯ ತೃಪ್ತಃ ನಿರಾಶ್ರಯಃ । ಕರ್ಮಣಿ ಅಭಿಪ್ರವೃತ್ತಃ ಅಪಿ ನ ಏವ ಕಿಂಚಿತ್ ಕರೋತಿ ಸಃ ॥

ಅನ್ವಯ

ಯಃ ಕರ್ಮ-ಫಲ-ಅಸಂಗಂ ತ್ಯಕ್ತ್ವಾ ನಿತ್ಯ-ತೃಪ್ತಃ ನಿರಾಶ್ರಯಃ, ಸಃ, ಕರ್ಮಣಿ ಅಭಿಪ್ರವೃತ್ತಃ ಅಪಿ ನ ಏವ ಕಿಂಚಿತ್ ಕರೋತಿ ॥

ಪ್ರತಿಪದಾರ್ಥ

ಯಃ – ಆರು,  ಕರ್ಮ-ಫಲ-ಅಸಂಗಮ್ – ಕಾಮ್ಯಕರ್ಮ ಫಲಂಗಳಲ್ಲಿ ಆಸಕ್ತಿಯ, ತ್ಯಕ್ತ್ವಾ- ಬಿಟ್ಟಿಕ್ಕಿ, ನಿತ್ಯ-ತೃಪ್ತಃ  – ಯಾವಾಗಲೂ ತೃಪ್ತನಾಗಿ, ನಿರಾಶ್ರಯಃ – ಯಾವುದೇ ಆಶ್ರಯ ಇಲ್ಲದವನಾಗಿ, ಸಃ – ಅವ°, ಕರ್ಮಣಿ – ಕರ್ಮಲ್ಲಿ, ಅಭಿಪ್ರವೃತ್ತಃ ಅಪಿ – ಪೂರ್ಣನಿರತನಾಗಿದ್ದರೂ ಕೂಡ,   ಕಿಂಚಿತ್ – ರಜಾದರೂ (ಏನಾದರೂ),  ಏವ – ಖಂಡಿತವಾಗಿಯೂ, ನ ಕರೋತಿ – ಮಾಡುತ್ತನಿಲ್ಲೆ.

ಅನ್ವಯಾರ್ಥ

ತನ್ನ ಕಾರ್ಯಂಗಳ ಫಲಂಗಳ ಬಗ್ಗೆ ಇಂತಹ ಮನುಷ್ಯ° ಎಲ್ಲ ಮೋಹವ (ಫಲಾಸಕ್ತಿಯ) ತ್ಯಜಿಸಿರುತ್ತ°, ಅವ° ಸದಾ ತೃಪ್ತ°, ಸ್ವತಂತ್ರ°. ಅವ° ಎಲ್ಲ ಬಗೆಯ ಕಾರ್ಯಂಗಳಲ್ಲಿ ನಿರತನಾಗಿದ್ದರೂ ಫಲಾಪೇಕ್ಷೆ ಇಪ್ಪ ಕರ್ಮವ ಮಾಡುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ಎಲ್ಲವನ್ನೂ ಕೃಷ್ಣಂಗಾಗಿ ಮಾಡುತ್ತಿಪ್ಪದಾದ್ದರಿಂದ ಯಾವುದೇ ಫಲಾಪೇಕ್ಷೆ ಇಲ್ಲದ್ದಿಪ್ಪದರಿಂದ ಅಲ್ಲಿ ಕರ್ಮಬಂಧನದ ಅಂಟು ಇಲ್ಲೆ. ಕೃಷ್ಣಪ್ರಜ್ಞೆಂದ ಮಾಡುವ ಕಾರ್ಯಂದಲಾಗಿ ಕರ್ಮಬಂಧನಂದ ಬಿಡುಗಡೆ ಸಾಧ್ಯ. ಕೃಷ್ಣಪ್ರಜ್ಞೆ ಇಪ್ಪ ಮನುಷ್ಯಂಗೆ ಭಗವಂತನಲ್ಲಿ ಸಂಪೂರ್ಣ ಶುದ್ಧ ಪ್ರೇಮ ಭಾವ ಇಪ್ಪದರಿಂದ ಸಹಜವಾಗಿಯೇ ಆ ಭಗವಂತನ ಸಂತೋಷಕ್ಕಾಗಿ ಕರ್ಮವ ಸಹಜವಾಗಿ ಮಾಡುತ್ತ°. ಆದ್ದರಿದ ಅಲ್ಲಿ ಅವಂಗೆ ಯಾವುದೇ ಕರ್ಮಫಲದ ಆಸಕ್ತಿಯೋ ಆಕರ್ಷಣೆಯೋ ಇಲ್ಲೆ. ತನ್ನ ಬಗ್ಗೆಯೇ ಅವಂಗೆ ಕಳಕಳಿ ಇಲ್ಲೆ. ಎಲ್ಲ ಭಗವಂತ° ನೋಡಿಗೊಳ್ತ ಎಂಬ ಸಂಪೂರ್ಣ ಡೃಢ ನಂಬಿಕೆ, ವಿಶ್ವಾಸ ಅವಂಗೆ. ಎಲ್ಲವೂ ಕೃಷ್ಣಂಗೇ (ಭಗವಂತಂಗೆ) ಅರ್ಪಣೆ. ತನಗೆ ಏನಾರು ವಸ್ತುಗೊ ಸಿಕ್ಕೆಕು ಹೇಳ್ವದಾಗಲೀ , ತನ್ನಲ್ಲಿಪ್ಪ ವಸ್ತುಗಳ ಕಾಪಾಡೆಕು ಹೇಳ್ವ ಭಾವನೆಯಾಗಲಿ ಕೃಷ್ಣಪ್ರಜ್ಞೆಲಿಪ್ಪವಂಗೆ ಇಲ್ಲೆ. ಅಂತಹ ನಿರ್ಲಿಪ್ತ ನಡತೆ ಅವನದ್ದು. ಹೀಂಗಾಗಿ ಎಂತದೋ ಕರ್ಮ ಮಾಡಿಗೊಂಡು ಯಾವ ಕರ್ಮವನ್ನೂ ಮಾಡದವನ ಹಾಂಗೂ ಕಾಣುತ್ತ°. ಇದು ಅಕರ್ಮದ ಹೇಳಿರೆ ಪ್ರತಿಕ್ರಿಯೆಗಳ ಫಲಂಗೊ ಇಲ್ಲದ್ದ ಕರ್ಮ. ಕೃಷ್ಣಪ್ರಜ್ಞೆ ಇಲ್ಲದ್ದೆ ಮಾಡುವ ಕರ್ಮ ವಿಕರ್ಮದ ಲಕ್ಷಣ.

ಪ್ರಪಂಚಲ್ಲಿ ಕೆಲವರಿಂಗೆ ಅದು ಬೇಕು, ಇದು ಬೇಕು, ಹಾಂಗಾಯೆಕು, ಹೀಂಗಾಯೆಕು ಹೇಳ್ವ ಆಸೆ ಇರುತ್ತಿಲ್ಲೆ. ಅನಿರೀಕ್ಷಿತ ಸಿಕ್ಕಿಯಪ್ಪಗ ಉಬ್ಬಲೂ ಇಲ್ಲೆ, ಸಿಕ್ಕದ್ದಪ್ಪಗ ಹತಾಶೆಯೂ ಇಲ್ಲೆ. ಮನುಷ್ಯನ ಐಹಿಕ ಆಸೆ ಆಕಾಂಕ್ಷೆಗೊ ಕನಸುಗಳ ಸರಮಾಲೆ. ಇದರ್ಲಿ ಎಲ್ಲವೂ ಕೈಗೂಡ್ಳೆ ಇಲ್ಲೆ. ಅಷ್ಟಪ್ಪಗ ಹತಾಶೆ , ದುಃಖ, ಉದ್ವೇಗ, ಮಾನಸಿಕ ವ್ಯಾಕುಲತೆ ಇತ್ಯಾದಿಗೊಕ್ಕೆ ಕಾರಣ ಆವ್ತು. ಇನ್ನು ಅನಿರೀಕ್ಷಿತ ಸಂಪತ್ತು ಬಂದರೆ ಅತಿ ಸಂತೋಷ, ಹಾರಾಟ, ಅಹಂ ಇತ್ಯಾದಿಗೊ ಮೈದೋರಿ ವಿನಾಶಕ್ಕೆ ತಳ್ಳುತ್ತು. ಹಾಂಗಾಗಿ ಅದು ಯಾವುದನ್ನೂ ಯೋಚನೆ ಇಲ್ಲದ್ದೆ, ಸಂಪೂರ್ಣ ಕೃಷ್ಣಪ್ರಜ್ಞೆಲಿ ಎಲ್ಲವೂ ಭಗವಂತನದ್ದು, ಎಲ್ಲವೂ ಭಗವಂತಂಗೇ, ಸಿಕ್ಕಿದ್ದು ಭಗವಂತನ ಪ್ರಸಾದ ಹೇಳಿ ಜೀವನಲ್ಲಿ ರೂಢಿಸಿಗೊಂಡವಂಗೆ ಅತೃಪ್ತಿ ಹೇಳ್ವ ವಿಷಯವೇ ಬತ್ತಿಲ್ಲೆ. 

ಜೀವ ಭಗವಂತನ ಪ್ರತಿಬಿಂಬ. ಅದಕ್ಕೆ ಸ್ವಾತಂತ್ರ್ಯ ಇಲ್ಲೆ. ಬಿಂಬ ಮಾಡಿಸಿದಾಂಗೆ ಪ್ರತಿಬಿಂಬ. ಭಗವಂತ° ನಿತ್ಯ ತೃಪ್ತ°. ಅವಂಗೆ ಅತೃಪ್ತಿಯೇ ಇಲ್ಲೆ. ಹಾಂಗೇ ನಾವೂ ಅವನಾಂಗೆ ಅತೃಪ್ತಿ ಇಲ್ಲದ್ದೆ ಇಪ್ಪದರ ಕಲಿಯೆಕು. ಯಾವುದೇ ಒಂದು ಆಸೆ ಈಡೇರುಸುಲೆ ಎಷ್ಟೋ ಜನರ ಹಿಂದೆ ಬೀಲ ಆಡಿಸಿಗೊಂಡು ಸ್ವಾರ್ಥ ಬದುಕಿನ ನಡಸುವುದು ಜೀವನವಲ್ಲ. ಆರ ಆಶ್ರಯವೂ ಇಲ್ಲದ್ದ ಭಗವಂತನ ಪ್ರತಿಬಿಂಬವಾದ ನವಗೆ ಮಾತ್ರ ಅತೃಪ್ತಿಯ ಬದುಕು ಎಂತಕೆ? . ಭಗವಂತನ ಹಾಂಗೆ ನಿರಾಶ್ರಯನಾಗು. ನವಗೆ ಸದಾ ಭಗವಂತನ° ಆಶ್ರಯ ಇದ್ದು. ಅದು ನಿತ್ಯಾನಂದ. ಹೀಂಗೆ ಬದುಕುವ ಮನುಷ್ಯ° ಕರ್ಮಲ್ಲಿ ತೊಡಗಿದ್ದರೂ ಕೂಡ ಎಂತದೂ ಮಾಡುತ್ತನಿಲ್ಲೆ. ಭಗವಂತ° ಎಲ್ಲವುದಕ್ಕಿಂತ ಮೇಲೆ ಇದ್ದ° ಹೇಳ್ವ ಸತ್ಯವ ಅವ° ತಿಳುದಿರುತ್ತ° ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಓದಿದ್ದು.

ಮುಂದೆ ಎಂತಾತು ..?   ಬಪ್ಪ ವಾರ ನೋಡುವೋ°

 ….ಮುಂದುವರಿತ್ತು

ಕೆಮಿಲಿ ಕೇಳ್ಳೆ –
SRIMADBHAGAVADGEETHA – CHAPTER 04 – SHLOKAS

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

2 thoughts on “ಶ್ರೀಮದ್ಭಗವದ್ಗೀತಾ – ಚತುರ್ಥೋsಧ್ಯಾಯಃ – ಶ್ಲೋಕಂಗೊ 11 – 20

  1. ಚೆನ್ನೈ ಭಾವ – ತುಂಬಾ ಉತ್ತಮ ರೀತಿಲ್ಲಿ ವಿವರಣೆ ಮೂಡಿ ಬತ್ತಾ ಇದ್ದು…

    ‘ಕೃಷ್ಣಪ್ರಜ್ಞೆ’ ಜೀವನ ತುಂಬಾ ರಸಮಯವಾದ ಜೀವನ. ಜ್ಹಾನ, ಆನಂದಗಳ ಉತ್ತುಂಗದ ಸ್ಥಿತಿ. ಇಂದು ಕೂಡಾ ಲೌಕಿಕವಾದ ಜೀವನಕ್ಕೆ ಯಾವುದೇ ಅಡ್ಡಿ ಆಗದ್ದ ಹಾಂಗೆ ಆ ಆನಂದದ ಜೀವನವ ನಡೆಸುಲೇ ಎಡಿತ್ತು. ಹಾಂಗಾಗಿ ಇನ್ನು “ಆ ಕಾಲ ಒಂದಿತ್ತು… ನಮ್ಮ ಭವ್ಯ ಭಾರತ ರಸ ಋಷಿಗಳ ನೆಲೆಬೀಡು ಆಗಿತ್ತು…” ಹೇಳಿ ಎಲ್ಲ ಭೂತಕಾಲಲ್ಲಿ ಇಪ್ಪದರ ವರ್ತಮಾನ ಕಾಲಕ್ಕೆ ಬದಲಾಯಿಸಿಗೊಮ್ಬಲಕ್ಕು… ಆಸಕ್ತಿ ಇಪ್ಪವಕ್ಕೆ ಆನಂದದ ಜೀವನ ನಡೆಸುಲಕ್ಕು…

  2. ದೇವರಿಂಗೆ ಕರ್ಮ ಬಂಧ ಇಲ್ಲೆ ಹೇಳುವ ವಿವರಣೆ ಲಾಯ್ಕ ಅಯಿದು. ಇದರ ಕಥೆ ರೂಪಲ್ಲಿ,ವಾದವಿವಾದದ ರೂಪಲ್ಲಿ ಕೇಳಿ ತಿಳಿಕ್ಕೊಂಬಲೆ ಇನ್ನೊಂದು ದಾರಿ ಇದ್ದು-ಭೀಷ್ಮ ಅರ್ಜುನ ಯುದ್ಧಲ್ಲಿ ಭೀಷ್ಮ ಕೃಷ್ಣರ ಮಧ್ಯೆ ಈ ಒಂದೇ ಸಂಗತಿಯ ಬಗ್ಗೆ ವಾದ-ವಿವಾದ ಇದ್ದು.ತಾಳಮದ್ದಳೆಲಿ ಅರ್ಥಧಾರಿಗೊ ವಾದ ಮಾಡುದರ ಕೇಳಿದರೆ ಸಾಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×