ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 10 – 17

March 7, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಪ್ರಕೃತಿಯ ತ್ರಿಗುಣಂಗೊ ಸತ್ವ-ತಮ-ರಜೋಗುಣಂಗಳ ಬಗ್ಗೆ ಓದಿದ್ದು. ಸೃಷ್ಟಿ ಭಗವಂತನಿಂದ ಪ್ರಕೃತಿಯ ಮೂಲಕ ಅಪ್ಪದಾಗಿಯೂ, ಪ್ರಕೃತಿಯ ಗರ್ಭಲ್ಲೇ ತ್ರಿಗುಣಂಗೊ ಹುದುಗಿಪ್ಪದಾಗಿಯೂ, ಆ ಗುಣತ್ರಯಂಗೊ ಮನುಷ್ಯನ ನಿಯಂತ್ರಣಕ್ಕೆ ತೆಕ್ಕೊಂಡು ನಮ್ಮ ಕೊಣುಶುತ್ತು ಹೇಳಿಯೂ ಅರ್ಥೈಸಿದ್ದು. ಈ ಮೂರು ಗುಣಂಗೊ ಪ್ರತಿಯೊಂದು ಜೀವಿಲಿ ಇರ್ತು ಮತ್ತು ಏಕಕಾಲಕ್ಕೆ ಕೆಲಸ ಮಾಡುತ್ತು. ಈ ಮೂರು ಗುಣಂಗೊ ಒಟ್ಟಿಂಗೆ ಏಕಕಾಲಕ್ಕೆ ಕೆಲಸ ಮಾಡುವಾಗ ಬರೇ ಸಾತ್ವಿಕ ಚಿಂತನೆ, ಬರೇ ರಾಜಸ ಚಿಂತನೆ, ಬರೇ ತಾಮಸ ಚಿಂತನೆ ಹೇಳಿ ಒಂದೊಂದು ಎದ್ದು ನಿಂಬದೇಂಗೆ?! ಒಂದೇ ದೇಹಲ್ಲಿ ಮೂರೂ ಒಟ್ಟಿಂಗೆ ಇಪ್ಪಗ ಏವುದೋ ಒಂದು ಗುಣ ಹೇಂಗೆ ಪ್ರಾಮುಖ್ಯತೆ ಪಡಕ್ಕೊಳ್ಳುತ್ತು?! ಮೂರುಗುಣಂಗಳೂ ಒಟ್ಟಿಂಗೇ ಇಪ್ಪಗ ಒಂದು ಪ್ರತ್ಯೇಕ ಸಾತ್ವಿಕ ಸ್ವಭಾವ, ರಾಜಸ ಸ್ವಭಾವ, ತಾಮಸ ಸ್ವಭಾವ ಹೇದು ಗುರುತುಸುವದು ಹೇಂಗೆ ಹೇಳ್ವದರ ಇಲ್ಲಿ ಮುಂದೆ ನೋಡುವೋ° –

 

ಶ್ರೀಮದ್ಭಗವದ್ಗೀತಾ ಚತುರ್ದಶೋsಧ್ಯಾಯಃ – ಗುಣತ್ರಯವಿಭಾಗಯೋಗಃ – ಶ್ಲೋಕಾಃ 10 – 17

 

ಶ್ಲೋಕ

ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ ।
ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ ॥೧೦॥ BHAGAVADGEETHA

ಪದವಿಭಾಗ

ರಜಃ ತಮಃ ಚ ಅಭಿಭೂಯ ಸತ್ತ್ವಮ್ ಭವತಿ ಭಾರತ । ರಜಃ ಸತ್ತ್ವಮ್ ತಮಃ ಚ ಏವ ತಮಃ ಸತ್ತ್ವಮ್ ರಜಃ ತಥಾ ॥

ಅನ್ವಯ

ಹೇ ಭಾರತ!, ಸತ್ತ್ವಮ್, ರಜಃ, ತಮಃ ಏವ ಅಭಿಭೂಯ (ಸ್ವಯಮ್) ಭವತಿ । ಚ ರಜಃ, ಸತ್ತ್ವಂ ತಮಃ ಚ (ಅಭಿಭೂಯ ಸ್ವಯಂ ಭವತಿ) । ತಥಾ ತಮಃ ಸತ್ತ್ವಂ ರಜಃ (ಅಭಿಭೂಯ ಸ್ವಯಂ ಭವತಿ) ।

ಪ್ರತಿಪದಾರ್ಥ

ಹೇ ಭಾರತ! – ಏ ಭರತವಂಶಜ!, ಸತ್ತ್ವಮ್ – ಸತ್ವಗುಣ, ರಜಃ – ರಜೋಗುಣ, ತಮಃ – ತಮೋಗುಣ, ಏವ – ಖಂಡಿತವಾಗಿಯೂ, ಅಭಿಭೂಯ – ದಾಂಟಿ, (ಸ್ವಯಮ್ – ತಾನೇ) ಭವತಿ – ಪ್ರಧಾನವಾಗಿ ಆವುತ್ತು.  ಚ – ಕೂಡ, ರಜಃ – ರಜೋಗುಣವು, ಸತ್ತ್ವಮ್ – ಸತ್ವಗುಣ, ತಮಃ – ತಮೋಗುಣವು, ಚ – ಕೂಡ, (ಅಭಿಭೂಯ ಸ್ವಯಮ್ ಭವತಿ – ದಾಂಟಿ ತಾನೇ ಪ್ರಧಾನ ಆವ್ತು), ತಥಾ – ಹಾಂಗೇ, ತಮಃ – ತಮೋಗುಣವು, ಸತ್ತ್ವಮ್ – ಸತ್ವಗುಣ, ರಜಃ – ರಜೋಗುಣ, (ಅಭಿಭೂಯ ಸ್ವಯಮ್ ಭವತಿ – ದಾಂಟಿ ತಾನೇ ಪ್ರಧಾನ ಆವ್ತು).

ಅನ್ವಯಾರ್ಥ

ಏ ಭರತವಂಶಜನಾದ ಅರ್ಜುನ!, ಕೆಲವೊಂದರಿ ಸತ್ತ್ವಗುಣ ರಜೋಗುಣವ, ತಮೋಗುಣವ ಸೋಲುಸಿ (ದಾಂಟಿ) ತಾನೇ ಪ್ರಬಲವಾವ್ತು, ಕೆಲವೊಂದರಿ ರಜೋಗುಣ ಸತ್ತ್ವಗುಣವ, ತಮೋಗುಣವ ಮೀರಿ ಪ್ರಧಾನ ಆವ್ತು, ಹಾಂಗೇ ಕೆಲವೊಂದರಿ ತಮೋಗುಣ ಸತ್ತ್ವಗುಣವ, ರಜೋಗುಣವ ಮೀರಿ ಪ್ರಧಾನ ಆವ್ತು.

ತಾತ್ಪರ್ಯ / ವಿವರಣೆ

ಗುಣತ್ರಯಂಗೊಕ್ಕೆ ಒಂದು ವಿಶೇಷ ಶಕ್ತಿ ಇದ್ದು. ಅದೆಂತರ ಹೇಳಿರೆ ಈ ಮೂರರಲ್ಲಿ ಏವುದೋ ಒಂದು ನಮ್ಮ ಮನಸ್ಸಿನ ನಿಯಂತ್ರಣವ ತೆಕ್ಕೊಂಡು ಉಳುದ ಎರಡು ಗುಣಂಗಳ ಸೋಲುಸಿ ಮೇಲುಗೈ ಸಾಧಿಸುತ್ತು. ಮೂರರಲ್ಲಿ ಒಂದು ಗುಣ ನಮ್ಮ ಸ್ವಾಧೀನಕ್ಕೆ ತೆಕ್ಕೊಳ್ತು. ಅಂಬಗ ನಮ್ಮ ಮನಸ್ಸು ಆ ಗುಣಕ್ಕೆ ತಕ್ಕ ಹಾಂಗೆ ಕೆಲಸ ಮಾಡ್ಳೆ ಸುರುಮಾಡುತ್ತು. ತ್ರಿಗುಣಮಾನಿನಿ ಲಕ್ಷ್ಮಿ. ಅದು ಏವುದೋ ಒಂದು ಗುಣಕ್ಕೆ ಉಳುದ ಗುಣವ ಮೀರಿಸಿ ಕೆಲಸ ಮಾಡುವ ಶಕ್ತಿ ಕೊಡುತ್ತು. ಹೀಂಗೆ ಒಂದು ಗುಣ ಉಳುದ ಎರಡು ಗುಣಂಗಳ ಮೀರಿಸಿ ಪ್ರಬಲವಾಗಿ ಎದ್ದು ನಿಲ್ಲುತ್ತು.

ನಮ್ಮಲ್ಲಿ ಏವ ಗುಣ ಪ್ರಬಲವಾಗಿದ್ದು ಹೇಳ್ವದರ ನಾವು ಗುರುತುಸಿಗೊಳ್ಳೆಕು. ಮನಸ್ಸಿನ ಹತೋಟಿಲಿ ಮಡಿಕ್ಕೊಂಡು ಬುದ್ಧಿವಂತಿಕೆಯ ಉಪಯೋಗಿಸಿ ಕಾರ್ಯಪ್ರವೃತ್ತ ಆಯೇಕು. ಇಲ್ಲದ್ರೆ ಪ್ರಬಲವಾಗಿಪ್ಪ ಗುಣ ನಮ್ಮ ಅದರ ವಶಕ್ಕೆ ತೆಕ್ಕೊಂಡು ಅದರಿಚ್ಚೆಯ ಹಾಂಗೆ ನಮ್ಮ ಕೊಣುಶುಗು.

ಹಾಂಗಾರೆ ಆ ಗುಣವ ಹೇಂಗೆ ಗುರುತುಸುವದು?

ಶ್ಲೋಕ

ಸರ್ವದ್ವಾರೇಷು ದೇಹೇsಸ್ಮಿನ್ ಪ್ರಕಾಶ ಉಪಜಾಯತೇ ।
ಜ್ಞಾನಂ ಯದಾ ತದಾ ವಿದ್ಯಾತ್ ವಿವೃದ್ಧಂ ಸತ್ತ್ವಮಿತ್ಯುತ ॥೧೧॥

ಪದವಿಭಾಗ

ಸರ್ವ-ದ್ವಾರೇಷು ದೇಹೇ ಅಸ್ಮಿನ್ ಪ್ರಕಾಶಃ ಉಪಜಾಯತೇ । ಜ್ಞಾನಮ್ ಯದಾ ತದಾ ವಿದ್ಯಾತ್ ವಿವೃದ್ಧಮ್ ಸತ್ತ್ವಮ್ ಇತಿ ಉತ ॥

ಅನ್ವಯ

ಯದಾ ಅಸ್ಮಿನ್ ದೇಹೇ ಸರ್ವ-ದ್ವಾರೇಷು ಪ್ರಕಾಶಃ ಜ್ಞಾನಂ (ಚ) ಉಪಜಾಯತೇ, ತದಾ ಸತ್ತ್ವಂ ವಿವೃದ್ಧಂ ವಿದ್ಯಾತ್ ಇತಿ ಉತ ।

ಪ್ರತಿಪದಾರ್ಥ

ಯದಾ – ಏವಾಗ, ಅಸ್ಮಿನ್ ದೇಹೇ – ಈ ಶರೀರಲ್ಲಿ, ಸರ್ವ-ದ್ವಾರೇಷು – ಎಲ್ಲ ದ್ವಾರಂಗಳಲ್ಲಿ, ಪ್ರಕಾಶಃ – ಪ್ರಕಾಶವು, ಜ್ಞಾನಂ – ಜ್ಞಾನವು, (ಚ – ಕೂಡ), ಉಪಜಾಯತೇ – ಬೆಳೆತ್ತೋ, ತದಾ – ಅಂಬಗ, ಸತ್ತ್ವಮ್ – ಸತ್ವಗುಣವು, ವಿವೃದ್ಧಮ್ ಇತಿ – ವೃದ್ಧಿಯಾಗಿದ್ದು ಹೇದು, ವಿದ್ಯಾತ್ – ತಿಳಿಯಲ್ಪಡಲಿ, ಇತಿ ಉತ – ಹೇದು ಹೇಳಲ್ಪಟ್ಟಿದು.

ಅನ್ವಯಾರ್ಥ

ಏವಾಗ ಈ ಶರೀರಲ್ಲಿ ಎಲ್ಲ ದ್ವಾರಂಗಳಲ್ಲಿ ಬೆಣಚ್ಚಿ, ಜ್ಞಾನ ಬೆಳೆತ್ತೋ, ಅಂಬಗ ಸತ್ತ್ವಗುಣ ವೃದ್ಧಿಯಾಗಿದ್ದು ಹೇದು ತಿಳಿಯೇಕು ಹೇದು ಹೇಳಲ್ಪಟ್ಟಿದು.

ತಾತ್ಪರ್ಯ / ವಿವರಣೆ

ನಮ್ಮ ಈ ಶರೀರಲ್ಲಿ ಎಲ್ಲ ಇಂದ್ರಿಯಂಗಳಲ್ಲೂ ಜ್ಞಾನದ ಬೆಣಚ್ಚಿ ಪ್ರಕಾಶವಾದಪ್ಪಗ ಸತ್ತ್ವಗುಣ ಬಲವಾಗಿದ್ದು ಹೇಳಿ ತಿಳಿಯೇಕು ಹೇಳಿ ಭಗವಂತ° ಇಲ್ಲಿ ಹೇಳಿದ್ದದು. ಸತ್ತ್ವಗುಣ ಜಾಗೃತವಾದಪ್ಪಗ ನಮ್ಮ ಒಳ ಬೆಣಚ್ಚಿಯ ಅನುಭವ ಆವ್ತು. ಆ ಬೆಣಚ್ಚಿಯ ಸಂಚಾರ ಎಲ್ಲ ಇಂದ್ರಿಯಂಗಳ ಮೂಲಕ ಹರಿವದರ ಅನುಭವಪೂರ್ವಕ ಕಂಡುಗೊಂಬಲಕ್ಕು. ಸರ್ವೇಂದ್ರಿಯಂಗಳಲ್ಲಿ ಜ್ಞಾನದ ಆನಂದ ತುಂಬುತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸಿಲ್ಲಿ ಹೊಸಹೊಸ ಜ್ಞಾನದ ವಿಚಾರ ಹೊಳವಲೆ ಪ್ರಾರಂಭ ಆವ್ತು. ಇದರಿಂದ ಅಪಾರ ಸಂತೋಷ ಆವ್ತು. ಇದು ಸತ್ವಗುಣದ ಜಾಗೃತಾವಸ್ಥೆ ಹೇಳಿ ಭಗವಂತ° ಇಲ್ಲಿ ವಿವರಿಸಿದ್ದದು.

“ಸರ್ವದ್ವಾರೇಷು ..” – ದೇಹಕ್ಕೆ ಒಂಬತ್ತು ದ್ವಾರಂಗೊ ಇದ್ದು – ಎರಡು ಕಣ್ಣು, ಎರಡು ಕೆಮಿ, ಮೂಗ ಎರಡು ಹೊಳ್ಳೆಗೊ, ಬಾಯಿ, ಜನನಾಂಗ ಮತ್ತೆ ಗುದ. ಪ್ರತಿಯೊಂದು ದ್ವಾರಕ್ಕೂ ಸತ್ತ್ವಗುಣದ ಲಕ್ಷಣಂಗಳಿಂದ ಬೆಣಚ್ಚಿಯ ಅನುಭವುಸುವ ಶಕ್ತಿ ಇದ್ದು. ಈ ನವದ್ವಾರಂಗಳಲ್ಲಿ ಸತ್ತ್ವಗುಣದ ಬೆಣಚ್ಚಿ /ಜ್ಞಾನದ ಬೆಣಚ್ಚಿ ಪ್ರಕಾಶ ಅಪ್ಪಗ ಅದರ ಅನುಭವಪೂರ್ವಕ ಅರ್ತುಗೊಂಬಲೆ ಸಾಧ್ಯ ಆವ್ತು. ಮನಸ್ಸಿಂಗೂ ಸಮಾಧಾನ, ತೃಪ್ತಿ, ಆನಂದ ಲಭಿಸುತ್ತು. ಈ ಸ್ಥಿತಿಲಿ ನಮ್ಮಲ್ಲಿ ಸತ್ತ್ವಗುಣ ಪ್ರಬಲವಾಗಿದ್ದು ಹೇದು ಅರ್ಥಮಾಡಿಗೊಂಬಲಕ್ಕು. ಸತ್ತ್ವಗುಣದ ಸ್ಥಿತಿಲಿ ಮನುಷ್ಯಂಗೆ ಯಾವುದೇ ವಸ್ತುವಿನ ಅದರ ಸರಿಯಾದ ಸ್ಥಿತಿಲಿ ಕಾಂಬಲೆ ಎಡಿಗು, ಅದರ ಯಥಾರ್ಥ ಸ್ಥಿತಿಲಿ ಕೇಳ್ಳೆ ಎಡಿಗು, ಅದರ ಯಥಾರ್ಥ ಸ್ಥಿತಿಲಿ ರುಚಿ ನೋಡ್ಳಕ್ಕು. ಅಂತರಂಗ ಮತ್ತೆ ಬಹಿರಂಗಲ್ಲಿ ಮನುಷ್ತ್ಯ° ಪರಿಶುದ್ಧನಾಗಿರುತ್ತ°. ಹಾಂಗಾಗಿ ಅವಂಗೆ ಆನಂದದ ಅನುಭವವೇ ಸಿಕ್ಕುವದು. ಇದುವೇ ಸತ್ತ್ವದ ಸ್ಥಿತಿ.

ಶ್ಲೋಕ

ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ ।
ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥೧೨॥

ಪದವಿಭಾಗ

ಲೋಭಃ ಪ್ರವೃತ್ತಿ ಆರಂಭಃ ಕರ್ಮಣಾಮ್ ಅಶಮಃ ಸ್ಪೃಹಾ । ರಜಸಿ ಏತಾನಿ ಜಾಯಂತೇ ವಿವೃದ್ಧೇ ಭರತರ್ಷಭ ॥

ಅನ್ವಯ

ಹೇ ಭರತರ್ಷಭ!, ಲೋಭಃ ಪ್ರವೃತ್ತಿಃ ಕರ್ಮಣಾಮ್ ಆರಂಭಃ ಅಶಮಃ ಸೃಹಾ ಏತಾನಿ ರಜಸಿ ವಿವೃದ್ಧೇ ಜಾಯಂತೇ ।

ಪ್ರತಿಪದಾರ್ಥ

ಹೇ ಭರತರ್ಷಭ! – ಏ ಭರತವಂಶ ಪ್ರಮುಖನೇ!, ಲೋಭಃ – ದುರಾಸೆ, ಪ್ರವೃತ್ತಿಃ – ಪ್ರವೃತ್ತಿ (ಚಟುವಟಿಕೆ), ಆರಂಭಃ – ಸುರುವಪ್ಪದು (ಪ್ರಯತ್ನ), ಕರ್ಮಣಾಮ್ – ಚಟುವಟಿಕೆಗಳ, ಅಶಮಃ – ನಿಯಂತ್ರುಸುಲೆಡಿಗಾಗದ್ದಪ್ಪದು, ಸ್ಪೃಹಾ – ಆಸೆ, ಏತಾನಿ – ಇವೆಲ್ಲವೂ, ರಜಸಿ – ರಾಜಸಗುಣಲ್ಲಿ,   ವಿವೃದ್ಧೇ – ಅತಿಯಾಗಿ, ಜಾಯಂತೇ – ಬೆಳೆತ್ತು,

ಅನ್ವಯಾರ್ಥ

ಏ ಭರತವಂಶಲ್ಲಿ ಪ್ರಮುಖನಾದ ಅರ್ಜುನ! ದುರಾಸೆ, ಫಲಾಪೇಕ್ಷೆ ಕರ್ಮಂಗೊ, ನಿಯಂತ್ರುಸೆಲೆಡಿಗಾಗದ್ದ ಬಯಕೆಗೊ, ನೆಮ್ಮದಿಕೆಡುವದು ಇವೆಲ್ಲವೂ ರಜೋಗುಣ ಅತಿಯಾದಪ್ಪಗ ಬೆಳೆತ್ತು.

ತಾತ್ಪರ್ಯ / ವಿವರಣೆ

ರಜೋಗುಣ ಇಪ್ಪವಂಗೆ ತನಗಿಪ್ಪದರಲ್ಲಿ, ತಾನು ಪಡದ್ದರ್ಲಿ, ತಾನು ಮಾಡಿ ಸಾಧಿಸಿದ್ದರ್ಲಿ ತೃಪ್ತಿ ಹೇಳ್ವದೇ ಇರ್ತಿಲ್ಲೆ. ಇನ್ನೂ ಬೇಕು ಇನ್ನೂ ಬೇಕು ಹೇಳ್ವ ಬಯಕೆಯೇ ಹೆಚ್ಚುತ್ತದು. ಆಡಂಬರ ಸುಖಲ್ಲಿ ಹಾತೊರೆದು ಮನಸ್ಸು ಸ್ಥಿಮಿತ ತಪ್ಪಿ ಏವತ್ತೂ ಅತೃಪ್ತಿಲಿಯೇ ಹಲುಬಿಗೊಂಡಿರುತ್ತು. ಮಾನಸಿಕ ನೆಮ್ಮದಿ ಇಪ್ಪಲೇ ಇಲ್ಲೆ. ವಸ್ತು, ವಿಷಯ, ಇಂದ್ರಿಯ ಚಪಲ, ಭೋಗಜೀವನಲ್ಲೇ ಸುಖವಾಗಿರೆಕು ಹೇಳಿ ಮನಸ್ಸು ಬಯಸುತ್ತು ಮತ್ತೆ ಅದರ ಪಡವಲೆ ಅವನ ಕಾರ್ಯಂಗೊ ಮುನ್ನೆಡೆತ್ತು. ಏವ್ಯಾವ ರೀತಿಲಿ ಪೈಸೆ ಮಾಡುವದು, ಸೇರ್ಸುವದು, ಗಳಿಸಿದ್ದರಲ್ಲಿ ಮತ್ತೂ ಆಸೆ, ಆರಿಂಗೂ ಚಿಕ್ಕಾಸೂ ದಾನ ಕೊಡೆ ಹೇಳ್ವ ಹಠ ಜಿಪುಣತನ ಬೆಳೆತ್ತು. ಇದುವೇ ಇಲ್ಲಿ ಹೇಳಿದ ಲೋಭತನ. ಗಳಿಸಿದ ಸಂಪತ್ತು ವಿನಿಯೋಗ ಅಪ್ಪದು ಮೂರು ರೀತಿಲಿ – ದಾನ, ಭೋಗ, ನಾಶ. ಲೋಭತನಲ್ಲಿಪ್ಪವಂಗೆ ಪೈಸೆ ಪೀಂಕುಸಲೆ ಪೀಂಟು ಬಿಡ., ಕಡೇಂಗೆ ನರಿ-ನಾಯಿ ಪಾಲಾಗಿ ನಾಶ ಅಪ್ಪದು. ಇದು ರಜೋಗುಣದ ಪ್ರಭಾವ ಹೇಳಿ ಭಗವಂತ° ಇಲ್ಲಿ ಹೇಳಿದ್ದದು. ಹೀಂಗೆ ರಜೋಗುಣದ ಪ್ರಭಾವಕ್ಕೆ ತುತ್ತಾದ ಮನುಷ್ಯ ಏವ್ಯಾವುದೋ ಪ್ರವೃತ್ತಿಲಿ ತೊಡಗುತ್ತ°. ಪೈಸೆ ಮಾಡ್ತದರ್ಲೇ ಮನಸ್ಸು ಕೇಂದ್ರವಾಗಿಸಿ, ಎಷ್ಟು ಗಳಿಸಿರೂ ಅತೃಪ್ತಿ, ಇನ್ನೊಬ್ಬನಲ್ಲಿಪ್ಪದರ ಕಂಡು ತನ್ನಲ್ಲಿಲ್ಲೆನ್ನೇದು ಮನಸ್ಸು ಕೊರಗುವದು ಇತ್ಯಾದಿ ಇತ್ಯಾದಿಗಳಿಂದ ಮನಃಶಾಂತಿ ಕಳಕ್ಕೊಂಡು ನಿತ್ಯ ಇನ್ನೂ “ಬೇಕು-ಬೇಕು” ಎಂಬುದರ ದಾಸನಾವ್ತ°. ಇದು ಸತ್ತ್ವಗುಣವ ತೊಳುದು ನಿಂದು ರಜೋಗುಣ ತಲೆಯೆತ್ತಿ ನಿಂದಪ್ಪಗ ಅಪ್ಪ ಲಕ್ಷಣಂಗೊ.

ಬನ್ನಂಜೆಯ ವ್ಯಾಖ್ಯಾನಲ್ಲಿ ಹೇಳ್ತವು – ಈ ರಜೋಗುಣಂದ ಪಾರಪ್ಪಲೆ ನಾವು ‘ಭರತರ್ಷಭ’ ಆಯೇಕು ಹೇಳಿಯೂ ಭಗವಂತ° ಇಲ್ಲಿ ಸೂಚಿಸಿದ್ದ°. ಐತರೇಯ ಬ್ರಾಹ್ಮಣಲ್ಲಿ ‘ವಾಯರ್ವಾವ ಭರತಃ’ ಹೇಳ್ವ ಒಂದು ಮಾತಿದ್ದು.ಸದಾ ಭಗವಂತನಲ್ಲಿ ನಿರತನಾದ (ರತಃ) ವಾಯುದೇವರಿಂಗೆ ‘ಭರತ’ ಹೇಳಿ ಹೆಸರು. ಪ್ರಾಣದೇವರಲ್ಲಿ ಶರಣಾಗತಿ ನಮ್ಮ ರಜೋಗುಣಂದ ಪಾರುಮಾಡುತ್ತು.

ಶ್ಲೋಕ

ಅಪ್ರಕಾಶೋsಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ ।
ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ ॥೧೩॥

ಪದವಿಭಾಗ

ಅಪ್ರಕಾಶಃ ಅಪ್ರವೃತ್ತಿಃ ಚ ಪ್ರಮಾದಃ ಮೋಹಃ ಏವ ಚ । ತಮಸಿ ಏತಾನಿ ಜಾಯಂತೇ ವಿವಿದ್ದೇ ಕುರು-ನಂದನ ॥

ಅನ್ವಯ

ಹೇ ಕುರು-ನಂದನ!, ಅಪ್ರಕಾಶಃ ಅಪ್ರವೃತ್ತಿಃ ಚ ಪ್ರಮಾದಃ ಚ ಮೋಹಃ ಏವ ಏತಾನಿ ತಮಸಿ ವಿವೃದ್ಧೇ ಜಾಯಂತೇ ।

ಪ್ರತಿಪದಾರ್ಥ

ಹೇ ಕುರು-ನಂದನ! – ಏ ಕುರುನಂದನನೇ!, ಅಪ್ರಕಾಶಃ – ಅಂಧಕಾರ, ಅಪ್ರವೃತ್ತಿಃ – ನಿಷ್ಕ್ರಿಯತೆ, ಚ – ಕೂಡ, ಪ್ರಮಾದಃ – ಮತಿಭ್ರಮಣೆ, ಚ – ಕೂಡ, ಮೋಹಃ – ಭ್ರಾಂತಿ (ಮೋಹ), ಏವ – ಖಂಡಿತವಾಗಿಯೂ, ಏತಾನಿ – ಇವೆಲ್ಲವು, ತಮಸಿ – ತಮೋಣಲ್ಲಿ, ವಿವೃದ್ಧೇ – ವೃದ್ಧಿಯಾದಿಪ್ಪಗ, ಜಾಯಂತೇ – ವ್ಯಕ್ತವಾವ್ತು.

ಅನ್ವಯಾರ್ಥ

ಏ ಕುರುನಂದನನಾದ ಅರ್ಜುನ!, ಅಂಧಕಾರ, ಕರ್ಮ ನಿಷ್ಕ್ರಿಯತೆ (ಆಲಸ್ಯ, ಒರಗುವದು ಇತ್ಯಾದಿ) ಮತಿಭ್ರಮಣೆ, ಭ್ರಾಂತಿ, ಇವೆಲ್ಲವು ತಮೋಗುಣ ಅಧಿಕವಾಗಿಪ್ಪಗ ವ್ಯಕ್ತವಾವ್ತು.

ತಾತ್ಪರ್ಯ / ವಿವರಣೆ

ಇಲ್ಲಿ ‘ಅಪ್ರಕಾಶಃ’ ಹೇಳಿ ಹೇಳಿದ್ದದು ಪ್ರಕಾಶ ಇಲ್ಲದ್ದಿಪ್ಪದು, ಹೇಳಿರೆ., ಜ್ಞಾನಪ್ರಕಾಶ ಇಲ್ಲದ್ದಿಪ್ಪದು. ಜ್ಞಾನಪ್ರಕಾಶ ಬೆಳಗದ್ದೆ ಅಜ್ಞಾನದ ಕಸ್ತಲೆಲಿ ಪರಡುವದು. ತಮೋಗುಣ ಅಧಿಕವಪ್ಪಗ ಒಂದು ನಿಯಂತ್ರಕ ತತ್ವಕ್ಕೆ ಅನುಗುಣವಾಗಿ ಕೆಲಸ ಮಾಡ್ಳೆ ಎಡಿತ್ತಿಲ್ಲೆ. ಅವ° ಒಂದು ಹೊಡೆಂಗೆ ಮನಸ್ಸು ಇನ್ನೊಂದು ಹೊಡೆಂಗೆ. ಒಟ್ಟಿಲ್ಲಿ ಆಲಸ್ಯ (ಜಡ). ಕೆಲಸ ಮಾಡಿರೂ ಅದು ಮನೋಇಚ್ಛೆ ಕೆಲಸಂಗೊ. ವಿವೇಚನೆ ಮಾಡದ್ದೆ ಕಾರ್ಯವೆಸಗಿ ಮತ್ತೆ ಪ್ರಮಾದಕ್ಕೆ ತುತ್ತಪ್ಪದು. ಕೆಲಸ ಮಾಡ್ಳೆ ಶೆಕ್ತಿ ಇದ್ದರೂ ಪ್ರಯತ್ನ ಮಾಡ್ಲೆ ಇಲ್ಲೆ. ಎಂತರನ್ನೋ ಗ್ರೇಶಿಗೊಂಡು ಮನಃಭ್ರಾಂತಿಗೆ ಒಳಗಪ್ಪದು. ಸುಪ್ತಪ್ರಜ್ಞೆ ಕೆಲಸ ಮಾಡುತ್ತಾರು ಚಟುವಟಿಕೆಲಿ ತೊಡಗಲೆ ಮನಸ್ಸು ಬಿಡುತ್ತಿಲ್ಲೆ. ಒಟ್ಟಿಲ್ಲಿ ಏವತ್ತೂ ಅಂತೇ ಕೂದು, ಒರಗಿ ವ್ಯರ್ಥ ಕಾಲಯಾಪನೆ ಮಾಡ್ತದು. ಇದೆಲ್ಲವು ತಮೋಗುಣದ ಮನುಷ್ಯನಲ್ಲಿ ಕಂಡುಬಪ್ಪ ಲಕ್ಷಣಂಗೊ. ತಮೋಗುಣ ಜಾಗೃತವಾಗಿಪ್ಪಗ ಒಳವೂ ಹೆರವೂ ಕಸ್ತಲೆಯೇ ಕಾಂಬದು. ಏವತ್ತೂ ಒರಗುವದು, ಒಟ್ಟಾರೆ ಕಾರ್ಯವೆಸಗಿ ತಪ್ಪು ಅಪ್ಪದು, ಅಜ್ಞಾನಲ್ಲಿ ಬದುಕುವದು ಇದೆಲ್ಲ ತಮೋಗುಣದ ಪ್ರಭಾವ. ಉದಿಗಾಲಕ್ಕೆ ಎದ್ದು ನಿತ್ಯಕರ್ಮಕ್ಕೆ ತೊಡಗೆಕು ಹೇಳಿ ಗೊಂತಿದ್ದರೂ ಯೇಯ್ ಅದೆಂತಕೆ ಹಾಂಗೆ ಹೇಳು ಮನಸ್ಸಿಂಗೆ ತೋರಿ ಪುನಃ ಗುಡಿಹೆಟ್ಟಿ ಮನುಗಿ ಒರಗುವದು, ಯೇವತ್ತಾರು ಮನಸ್ಸು ತೋರುವಾಗ ಎದ್ದತ್ತೋ ತಿಂದತ್ತೋ ವಾಪಾಸು ಬಿದ್ದೊಂಬದು ಹೀಂಗೆ ಸದಾ ಕಸ್ತಲೆಯತ್ತೆಯೇ ತಳ್ಳುತ್ತು ತಮೋಗುಣದ ಪ್ರಭಾವಂದ. ಇದರಿಂದ ತಪ್ಪುಸೆಕಾರೆ ನಾವು ಸದಾ ‘ಕುರುನಂದನ’ – ಕಾರ್ಯವ ಕುರು (ಮಾಡು) ಆಯೇಕು ಹೇಳಿ ಭಗವಂತ° ಸೂಚಿಸಿದ್ದ.

ಶ್ಲೋಕ

ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್ ।
ತದೋತ್ತಮವಿದಾಂ ಲೋಕಾನ್ ಅಮಲಾನ್ಪ್ರತಿಪದ್ಯತೇ ॥೧೪॥

ಪದವಿಭಾಗ

ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಮ್ ಯಾತಿ ದೇಹ-ಭೃತ್ । ತದಾ ಉತ್ತಮ-ವಿದಾಮ್ ಲೋಕಾನ್ ಅಮಲಾನ್ ಪ್ರತಿಪದ್ಯತೇ ॥

ಅನ್ವಯ

ಯದಾ ತು ಸತ್ತ್ವೇ ಪ್ರವೃದ್ಧೇ (ಸತಿ) ದೇಹ-ಭೃತ್ ಪ್ರಲಯಂ ಯಾತಿ, ತದಾ ಉತ್ತಮ-ವಿದಾಂ ಅಮಲಾನ್ ಲೋಕಾನ್ ಪ್ರತಿಪದ್ಯತೇ ।

ಪ್ರತಿಪದಾರ್ಥ

ಯದಾ – ಏವಾಗ, ತು – ಆದರೋ, ಸತ್ತ್ವೇ ಪ್ರವೃದ್ಧೇ (ಸತಿ) – ಸತ್ವಗುಣ ವೃದ್ಧಿಯಾಗಿದ್ದುಗೊಂಡು, ದೇಹ-ಭೃತ್ – ದೇಹಧಾರಿಯು, ಪ್ರಲಯಮ್ ಯಾತಿ – ಪ್ರಳಯವ ಹೊಂದುತ್ತನೋ, ತದಾ – ಅಂಬಗ, ಉತ್ತಮ-ವಿದಾಮ್ – ಉತ್ತಮರ (ಮಹರ್ಷಿಗಳ), ಅಮಲಾನ್ – ಶುದ್ಧವಾದ, ಲೋಕಾನ್ – ಲೋಕಂಗಳ, ಪ್ರತಿಪದ್ಯತೇ – ಹೊಂದುತ್ತ°

ಅನ್ವಯಾರ್ಥ

ಏವಾಗ ಸತ್ವಗುಣಲ್ಲಿ ಜೀವಿಯು (ದೇಹಧಾರಿ) ಪ್ರಳಯವ ಹೊಂದುತ್ತನೋ ( ಸತ್ವಗುಣಲ್ಲಿ ಮನುಷ್ಯ° ಸತ್ತರೆ), ಅಂಬಗ ಅವ° ಉತ್ತಮರ ಲೋಕಂಗಳ (ಉನ್ನತ ಲೋಕಂಗಳ) ಸೇರುತ್ತ°.

ತಾತ್ಪರ್ಯ / ವಿವರಣೆ

ಸತ್ವಗುಣಲ್ಲಿ ಇಹಲೋಕವ ತ್ಯಜಿಸಿದವ° ಬ್ರಹ್ಮಲೋಕ, ಜನಲೋಕ ಮುಂತಾದ ಉತ್ತಮ (ಉನ್ನತ) ಲೋಕಂಗಳ ಸೇರುತ್ತ ಮತ್ತೆ ಅಲ್ಲಿ ಸ್ವರ್ಗ ಸುಖವ ಅನುಭವಿಸುತ್ತ°. ಇಲ್ಲಿ ‘ಅಮಲಾನ್’ ಮಲಿನವಲ್ಲದ ಹೇಳ್ವ ಪದ ಮಹತ್ವವಾದ್ದು. ಹೇಳಿರೆ., ‘ರಜೋಗುಣ, ತಮೋಗುಣ’ ರಹಿತವಾದ (ಮುಕ್ತವಾದ) ಲೋಕಂಗೊ ಹೇಳಿ ಅರ್ಥ. ಐಹಿಕ ಜಗತ್ತಿಲ್ಲಿ ಕಶ್ಮಲಂಗೊ ಇದ್ದು. ಆದರೆ ಸತ್ವಗುಣವು ಐಹಿಕ ಜಗತ್ತಿನ ಅಸ್ತಿತ್ವದ ಅತ್ಯಂತ ಪರಿಶುದ್ಧ ರೂಪ. ಬೇರೆ ಬೇರೆ ರೀತಿಯ ಜೀವಿಗೊಕ್ಕೆ ಬೇರೆ ಬೇರೆ ರೀತಿಯ ಲೋಕಂಗೊ ಇದ್ದು. ಸತ್ವಗುಣಲ್ಲಿ ಮರಣ ಹೊಂದಿದವ ಮಹರ್ಷಿಗೊ, ಮಹಾಭಕ್ತರು ಇಪ್ಪ ಆ ಪುಣ್ಯ/ಪಾವನ/ಶುದ್ಧ ಲೋಕವ ಸೇರ್ತವು ಹೇಳಿ ಭಗವಂತ° ಇಲ್ಲಿ ಹೇಳಿದ್ದದು.

ಸಾಮಾನ್ಯವಾಗಿ ನವಗೆ ದೇವರ ಜೋರು ನೆಂಪಪ್ಪದು ನಮ್ಮ ಸಾಯ್ವ ಕಾಲಕ್ಕೇ. ಈ ಮದಲೇ ಗೀತೆಲಿ ಹೇಳಿಪ್ಪಂತ ಅಂತ್ಯ ಕಾಲಲ್ಲಿ ಜೀವಿ ಏವುದರ ಚಿಂತಿಸಿಗೊಂಡು ದೇಹವ ಬಿಡುತ್ತನೋ ಮತ್ತಾಣ ಜನ್ಮಲ್ಲಿ ಅದೇ ಚಿಂತನೆಯ ಜನ್ಮವ ಪಡೆತ್ತ°. ಹಾಂಗಾಗಿ ಸದಾ ಭಗವದ್ ಸ್ಮರಣೆಲಿ ಇರೇಕು, ಅಂತ್ಯಕಾಲಲ್ಲಿಯೂ ಅನನ್ಯ ಭಕ್ತಿಂದ ಭಗವಂತನನ್ನೇ ಧ್ಯಾನಿಸಿಗೊಂಡು ದೇಹವ ಬಿಡುವವಂಗೆ ಪರಂಧಾಮ ನಿಶ್ಚಯ ಹೇಳಿ ಭಗವಂತ° (ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ ಮಾಮನುಸ್ಮರನ್ , ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ॥ ಭ.ಗೀ. ೮.೧೩) ಎಂಟನೇ ಅಧ್ಯಾಯಲ್ಲಿ ೧೩ನೇ ಶ್ಲೋಕಲ್ಲಿ ಹೇಳಿದ್ದ°. ಅಂತ್ಯಕಾಲಲ್ಲಿ ಸಾತ್ವಿಕವಾದ ಚಿಂತನೆಂದ, ಸತ್ವದ ಪ್ರಭಾವಂದ ಪ್ರಾಣ ಬಿಟ್ಟವಂಗೆ ಮುಂದಾಣ ಜನ್ಮಲ್ಲಿ ಏವುದೇ ದೋಷಂಗಳಿಲ್ಲದ (ಅಮಲಾನ್ ಲೋಕಾನ್) ಮನುಷ್ಯರಾಗಿ ಜ್ಞಾನಿಗಳ ಸಮುದಾಯಲ್ಲಿ ಹುಟ್ಳೆ ಸಾಧ್ಯ ಇದ್ದು. ಅಲ್ಲಿ ಜ್ಞಾನಿಗಳೊಟ್ಟಿಂಗೆ ಇದ್ದುಗೊಂಡು ಜ್ಞಾನವ ಬೆಳೆಶಿಗೊಂಡು ಮತ್ತೆ ಜ್ಞಾನ ಮಾರ್ಗಲ್ಲಿ ಎತ್ತರಕ್ಕೆ ಏರ್ಲೆ ಅನುಕೂಲ ಆವ್ತು. ಜೀವಮಾನಲ್ಲಿ ನಾವು ಸತ್ವಕ್ಕೆ ಒತ್ತುಗೊಟ್ಟು ಬದುಕ್ಕಿರೆ ಮಾಂತ್ರ ಸಾಯ್ವಾಗ ಸತ್ವದ ಅಧಿಷ್ಠಾನಲ್ಲಿ ಸಾಯಲೆ ಸಾಧ್ಯ ಅಕ್ಕಷ್ಟೆ. ಇದರ ಬಿಟ್ಟು ‘ಸಾಯ್ವಾಗ ಸಾತ್ವಿಕ ಬಿಂತನೆ ಮಾಡಿಗೊಂಡ°’ ಹೇಳಿ ಗ್ರೇಶಿಗೊಂಡು ಕೂದರೆ ಸತ್ವದ ಪ್ರಭಾವ ನಮ್ಮಲ್ಲಿ ಬೆಳವಲೆ ಸಾಧ್ಯ ಇಲ್ಲೆ, ಸತ್ವದ ಪ್ರಭಾವಲ್ಲಿ ಸಾವಲೂ ಅಸಾಧ್ಯ.

ಶ್ಲೋಕ

ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ ।
ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ ॥೧೫॥

ಪದವಿಭಾಗ

ರಜಸಿ ಪ್ರಲಯಮ್ ಗತ್ವಾ ಕರ್ಮ-ಸಂಗಿಷು ಜಾಯತೇ । ತಥಾ ಪ್ರಲೀನಃ ತಮಸಿ ಮೂಢ-ಯೋನಿಷು ಜಾಯತೇ ॥

ಅನ್ವಯ

(ದೇಹ-ಭೃತ್) ರಜಸಿ ಪ್ರಲಯಂ ಗತ್ವಾ ಕರ್ಮ-ಸಂಗಿಷು ಜಾಯತೇ । ತಥಾ (ಸಃ) ತಮಸಿ ಪ್ರಲೀನಃ ಮೂಢ-ಯೋನಿಷು ಜಾಯತೇ ।

ಪ್ರತಿಪದಾರ್ಥ

(ದೇಹ-ಭೃತ್ – ದೇಹಧಾರಿಯು) ರಜಸಿ – ರಜೋಗುಣಲ್ಲಿ, ಪ್ರಲಯಮ್ ಗತ್ವಾ – ಪ್ರಳಯ ಹೊಂದಿ, ಕರ್ಮ-ಸಂಗಿಷು – ಕಾಮ್ಯಕರ್ಮಂಗಳಲ್ಲಿ ನಿರತರಾದೋರ ಸಹವಾಸಲ್ಲಿ, ಜಾಯತೇ – ಜನ್ಮತಾಳುತ್ತ°, ತಥಾ – ಹಾಂಗೇ (ಸಃ – ಅವ°), ತಮಸಿ – ತಮೋಗುಣಲ್ಲಿ , ಪ್ರಲೀನಃ – ಪ್ರಳಯ ಹೊಂದುವವ°, ಮೂಢ-ಯೋನಿಷು – ಪಶುಜಾತಿಲಿ, ಜಾಯತೇ – ಹುಟ್ಟುತ್ತ°.

ಅನ್ವಯಾರ್ಥ

ರಜೋಗುಣಲ್ಲಿ ಅವಸಾನವ ಕಂಡ ಜೀವಿಯು ಮುಂದಾಣ ಜನ್ಮಲ್ಲಿ ಫಲಾಪೇಕ್ಷೆಂದ ಕರ್ಮಂಗಳಲ್ಲಿ ತೊಡಗಿಯೊಂಡಿಪ್ಪವರ ನೆಡುಕೆ ಹುಟ್ಟುತ್ತ°, ಹಾಂಗೇ, ತಮೋಗುಣಲ್ಲಿ ಸತ್ತವ° ಮತ್ತೆ ಪ್ರಾಣಿ ವರ್ಗಲ್ಲಿ ಹುಟ್ಟುತ್ತ°.

ತಾತ್ಪರ್ಯ / ವಿವರಣೆ

ಜೀವಾತ್ಮವು ಮನುಷ್ಯ ಜೀವನದ ನೆಲೆಯ ಹೊಂದಿರೆ ಮತ್ತೆ ಅದಕ್ಕೆ ಅಧಃಪತನವೇ ಇಲ್ಲೆ ಹೇಳಿ ಗ್ರೇಶುವದು ಸರಿಯಲ್ಲ. ಬರೇ ಬುದ್ಧಿಯಿಪ್ಪ ಪ್ರಾಣಿ ಮನುಷ್ಯ ಜನ್ಮವೆತ್ತಿರೆ ಸಾಲ. ಬುದ್ಧಿವಂತನಾಗಿ ಸತ್ವಗುಣವ ಮೆರೆಶಿ ಬದುಕಿರೆ ಮಾತ್ರ ಎತ್ತರಕ್ಕೆ ಹೋಪಲೆಡಿಗು ಹೇಳ್ವದರ ಈ ಮದಲಾಣ ಶ್ಲೋಕಂಗಳಲ್ಲಿ ನಾವು ಕಂಡುಗೊಂಡತ್ತು. ಈ ಶ್ಲೋಕಲ್ಲಿ ಹೇಳಿಪ್ಪ ಪ್ರಕಾರ, ಮನುಷ್ಯ° ರಜೋಗುಣವ ಬೆಳೆಶಿಗೊಂಡರಿ ಮತ್ತೆ ಮುಂದಾಣ ಜನ್ಮಲ್ಲಿ ಅದೇ ರಜೋಗುಣ ಇಪ್ಪ ಕಾಮ್ಯಕರ್ಮಲ್ಲಿ ನಿರತರಾದೋರ ಮಧ್ಯೆ ಹುಟ್ಟಿಗೊಳ್ತ°. ಅದೇ ತಮೋಗುಣಲ್ಲಿ ಅವಸಾನವ ಕಂಡ ಮನುಷ್ಯ ಮುಂದಾಣ ಜನ್ಮಲ್ಲಿ ಪ್ರಾಣಿವರ್ಗಲ್ಲಿ (ಮೃಗವರ್ಗಲ್ಲಿ) ಹುಟ್ಟಿಗೊಳ್ತ° ಹೇಳಿ ಭಗವಂತ° ಇಲ್ಲಿ ಎಚ್ಚರಿಸಿದ್ದ°. ಹಾಂಗಾಗಿ ಸನ್ಮಾರ್ಗಲ್ಲಿ ಮುಂದುವರಿಯಲೆ ಸತ್ವಗುಣವ ಬೆಳೆಶಿಗೊಳ್ಳೆಕು, ಕೃಷ್ಣಪ್ರಜ್ಞೆಲಿ ನೆಲೆಗೊಳ್ಳೆಕು ಮತ್ತೆ ಗಿರಿಯ ಸಾಧುಸೆಕು ಹೇಳ್ವ ಸಾರವ ಭಗವಂತ° ಇಲ್ಲಿ ವಿವರಿಸಿದ್ದ°. ಇಲ್ಲದ್ರೆ ಮುಂದೆ ರಜೋಗುಣಲ್ಲಿಯೋ ತಮೋಗುಣಲ್ಲಿಯೋ ಮುಂದಾಣ ಜನ್ಮವ ಕಳೆಯಕ್ಕಾವ್ತು.

ಜ್ಞಾನಕ್ಕೆ ಪೂರಕವಲ್ಲದ್ದ ಕರ್ಮಾನುಷ್ಠಾನ ಮಾಡಿಗೊಂಡು ಹೋದರೆ ರಜೋಗುಣದ ಪ್ರಭಾವಂದ ಪೈಸೆ ಪೈಸೆ ಹೇದು ಬದುಕ್ಕಿ ಅದೇ ಪ್ರಭಾವಲ್ಲಿ ಸತ್ತು ಮುಂದಾಣ ಜನ್ಮಲ್ಲಿ ಅದೇ ಪ್ರಭಾವಂದ ಹುಟ್ಟೆಕ್ಕಾವ್ತು. ತಮೋಗುಣಲ್ಲಿ ಬದುಕಿ ಸತ್ತರೆ ಮುಂದೆ ಹೀನಯೋನಿಲಿ ಹುಟ್ಟೆಕ್ಕಾವ್ತು. ಇಲ್ಲಿ ಹೀನಯೋನಿ ಹೇಳಿರೆ ಮೃಗಪ್ರಾಣಿಪಕ್ಷಿಯೇ ಆಯೇಕು ಹೇಳಿ ಏನಲ್ಲ. ಏವ ಸಂಸ್ಕಾರವೂ ಇಲ್ಲದ್ದ, ಸ್ವಚ್ಛತೆಯೂ ಇಲ್ಲದ್ದ, ಜ್ಞಾನವೂ ಇಲ್ಲದ್ದ ಕೇವಲ ಮನುಷ್ಯ ಆಕಾರವಾಗಿ ಹುಟ್ಟಿ, ಮನುಷ್ಯತ್ವದ ಲವಲೇಷಲೇಪವಿಲ್ಲದ್ದ ಮನುಷ್ಯನಾಗಿ ಬದುಕ್ಕುವದೂ ಹೀನಯೋನಿ ಜನನವೇ ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಹೇಳಿದ್ದವು.

ಶ್ಲೋಕ

ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಮ್ ।
ರಜಸಸ್ತು ಫಲಂ ದುಃಖಮ್ ಅಜ್ಞಾನಂ ತಮಸಃ ಫಲಮ್ ॥೧೬॥

ಪದವಿಭಾಗ

ಕರ್ಮಣಃ ಸುಕೃತಸ್ಯ ಆಹುಃ ಸಾತ್ತ್ವಿಕಮ್ ನಿರ್ಮಲಮ್ ಫಲಮ್ । ರಜಸಃ ತು ಫಲಮ್ ದುಃಖಮ್ ಅಜ್ಞಾನಮ್ ತಮಸಃ ಫಲಮ್ ॥

ಅನ್ವಯ

ಸುಕೃತಸ್ಯ ಕರ್ಮಣಃ ಸಾತ್ತ್ವಿಕಂ ನಿರ್ಮಲಂ ಫಲಮ್, ರಜಸಃ ಫಲಂ ತು ದುಃಖಮ್, ತಮಸಃ (ಚ) ಫಲಂ ಅಜ್ಞಾನಮ್ (ಇತಿ) ಆಹುಃ ।

ಪ್ರತಿಪದಾರ್ಥ

ಸುಕೃತಸ್ಯ ಕರ್ಮಣಃ – ಪುಣ್ಯಕರ ಕರ್ಮದ, ಸಾತ್ತ್ವಿಕಮ್ – ಸತ್ವಗುಣವಾದ, ನಿರ್ಮಲಮ್ – ಪರಿಶುದ್ಧವಾದ, ಫಲಮ್ – ಫಲವು, ರಜಸಃ ಫಲಮ್ ತು – ರಜೋಗುಣದ ಫಲವಾದರೋ, ದುಃಖಮ್ – ದುಃಖ, ತಮಸಃ (ಚ) ಫಲಮ್ – ತಮೋಗುಣಕರ್ಮದ ಫಲವೂ ಕೂಡ, ಅಜ್ಞಾನಮ್ (ಇತಿ) ಆಹುಃ – ಅಜ್ಞಾನವು ಹೇದು ಹೇಳಲಾಯ್ದು.

ಅನ್ವಯಾರ್ಥ

ಸುಕೃತದ ಫಲ ಪರಿಶುದ್ಧವಾದ್ದು, ಸಾತ್ವಿಕವಾದ್ದು, ರಜೋಗುಣಕರ್ಮದ ಫಲ ದುಃಖಕರವಾದ್ದು ಮತ್ತೆ ತಮೋಗುಣಕರ್ಮದ ಫಲವು ಅಜ್ಞಾನಕರ ಹೇದು ಹೇಳಲಾಯ್ದು.

ತಾತ್ಪರ್ಯ / ವಿವರಣೆ

ಜೀವನದುದ್ದಕ್ಕೂ ಇನ್ನೊಬ್ಬಂಗೆ ಸಹಾಯ ಅಪ್ಪಂತ ಕೆಲಸ ಮಾಡಿರೆ ಅದು ಸುಕೃತ. ನಮ್ಮಲ್ಲಿ ಸಂಪತ್ತಿಪ್ಪಗ ಅದು ಎನ್ನದು ಎನ್ನಿಂದ ಹೇದು ಜಿಪುಣನಾಗಿ ಬದುಕ್ಕಿರೆ ಅದರಿಂದ ದುಃಖಭರಿತ ಜೀವನ ನಮ್ಮದಪ್ಪದು. ನಾವು ಗಳಿಸಿದ್ದರ ಇನ್ನೊಬ್ಬರ ಕಷ್ಟಲ್ಲಿ ವಿನಿಯೋಗಿಸಿರೆ ಅದು ನಮ್ಮ ಸಾತ್ವಿಕ ಫಲದೆಡೆಂಗೆ ಕೊಂಡೋವುತ್ತು. ಸಾಮಾನ್ಯವಾಗಿ ನಾವು ಕಷ್ಟಲ್ಲಿಪ್ಪೋರ ಕಂಡು “ಅದು ಅವನ ಪ್ರಾರಬ್ಧಕರ್ಮ , ಅದರ ಅವ° ಅನುಭವುಸಲಿ, ಆನೆಂತಕೆ ತಲೆ ಕೆಡುಸೆಕು” ಹೇಳಿ ಹೇಳಿಕ್ಕಿ ತಳಿಯದ್ದೆ ಕೂರುತ್ತು. ಈ ರೀತಿ ಮಾಡಿರೆ ನಾವು ಆ ಕಷ್ಟಲ್ಲಿಪ್ಪ ವ್ಯಕ್ತಿಯ ಭಗವಂತನ ತಿರಸ್ಕಾರ ಮಾಡಿದಾಂಗೆ ಆವ್ತು. ಇಂಥವಕ್ಕೆ ಭಗವಂತನ ಸಾಕ್ಷಾತ್ಕಾರ ಆವುತ್ತಿಲ್ಲೆ. ನಮ್ಮ ಆಧ್ಯಾತ್ಮಿಕ ಸಾಧನೆಲಿ ಜಪ-ತಪ ಮಾಂತ್ರ ಇದ್ದರೆ ಸಾಲ. ಎಲ್ಲರಲ್ಲಿಯೂ ಎಲ್ಲವುದರಲ್ಲಿಯೂ ಭಗವಂತನ ಕಾಣೆಕು, ಕಷ್ಟಲ್ಲಿಪ್ಪೋರಿಂಗೆ ಸಕಾಯ ಮಾಡೆಕು. ಅದು ಕಷ್ಟಲ್ಲಿಪ್ಪವನಲ್ಲಿಪ್ಪ ಭಗವಂತನ ಸೇವೆ ಮಾಡಿದಾಂಗೆ ಆವ್ತು. ಇದೂ ಸಾತ್ವಿಕ ಜೀವನದ ಒಂದು ಪ್ರಧಾನ ಅಂಶ. ಸಾಧಕ° ತನ್ನ ನಿತ್ಯಾನುಷ್ಠಾನದೊಟ್ಟಿಂಗೆ ಈ ಸೇವಾಕಾರ್ಯವನ್ನೂ ಆಚೆರುಸೇಕು ಹೇಳ್ವದೆ ಭಗವಂತನ ಗೀತೆಯ ಆದೇಶ. ಹಸಿದವಗೆ ಅಶನವ ನೀಡಲೇ ಬೇಕು ಹೊರತು ಅವಂಗೆ ಪುರಾಣ ಪ್ರವಚನ ಹೇಳುಲಾಗ ಹೇಳಿ ದಾಸರು ಹಾಡಿದ್ದದು ಇದೇ ಸಾರವ ಮಡುಗಿ ಎಂಬುದರ ನಾವಿಲ್ಲಿ ಅರ್ತುಗೊಂಬಲಕ್ಕು. ಅದರ ಬಿಟ್ಟು ಎಷ್ಟು ದೇವಸ್ಥಾನ ಸುತ್ತಿರೂ, ಎಷ್ಟು ಹರಿಕಥೆ ಕೇಳಿರೂ ಭಗವದ್ ಸೇವೆ ಹೇಳಿ ಆಗ. ‘ಜನತಾ ಸೇವೆಯೇ ಜನಾರ್ದನನ ಸೇವೆ’ ಹೇಳ್ವ ಗಾದೆ ಮಾತು ಕೂಡ ಇದೇ ತತ್ವವ ಮಡಿಕ್ಕೊಂಡಿಪ್ಪದಾಗಿದ್ದು.

ಬನ್ನಂಜೆ ಹೇಳ್ತವು – ನಮ್ಮ ಮನೆಲಿ ಬೆಂದ ಅಶನ ಎಷ್ಟು ಜೆನರ ಹಶುವ ತಣುಶುತ್ತೋ – ಅಷ್ಟು ಸುಕೃತ. ಈ ಕಾರಣಕ್ಕಾಗಿಯೇ ಮದಲಿಂಗೆ ಕೆಲವು ಮನೆಗಳಲ್ಲಿ ಅಡಿಗೆ ಮಾಡಿಕ್ಕಿ ದೇವರಿಂಗೆ ಸಮರ್ಪಿಸಿ ಮತ್ತೆ ರಜಾ ಹೊತ್ತು ಹೆಬ್ಬಾಗಿಲಿಲಿ ಕಾದಿಕ್ಕಿಯೇ ಊಟಕ್ಕೆ ಕೂಬದು. ಎಂತಕೆ ಹೇಳಿರೆ ಆ ಸಮಯಲ್ಲಿ ಆರಾರು ಅಲ್ಲೆ ಬಂದರೆ ಅವಕ್ಕೆ ಮದಲು ಬಡಿಸಿಕ್ಕಿ ಮತ್ತೆ ತಾನು ಉಂಬದು. ಎಂತಕೆ ಹೇಳಿರೆ ಆ ಸಮಯಲ್ಲಿ ಆರಾರು ಆ ಬೀದಿಲಿ ಹಶುವಾಗ್ಯೊಂಡು ಬಂದರೆ ಅವಂಗೆ ಮದಾಲು ಉಣುಸಿ ಮತ್ತೆ ದೇವರ ಪ್ರಸಾದ ಹೇಳಿ ಮನೆಯಜಮಾನ ತೆಕ್ಕೊಂಬ ಒಂದು ಪದ್ಧತಿ ಆಗಾಣ ಕಾಲಲ್ಲಿ. ಇದು ಮಾಂತ್ರ ಅಲ್ಲ , ಈಗಾಣ ಕಾಲಲ್ಲಿ ಕೆಲವು ಪೇಟೆ ಮನೆಗಳಲ್ಲಿಯೂ ದಿನಾ ಊಟಂದ ಮದಲು ರಜಾ ಅಶನವ ಹೆರ ಮಡುಗುತ್ತ ಕ್ರಮ ಇದ್ದು. ಈ ರೀತಿ ಮನೆ ಸುತ್ತಮುತ್ತಲಿಪ್ಪ ಪ್ರಾಣಿಪಕ್ಷಿಗೊಕ್ಕೆ ಬಲಿಹರಣ ರೂಪಲ್ಲಿ ಅವುಗಳ ಹಶುವಿಂಗೆ ನೆರವಪ್ಪದು. ಹೀಂಗೆ ಜೀವಮಾನ ಉದ್ದಕ್ಕೂ ಮಾಡಿಗೊಂಡು ಬಂದರೆ ಅದು ಸಾತ್ವಿಕ ಕಾರ್ಯದ ಒಂದು ಪಾಲು ಆವ್ತು. ಇದರಿಂದ ಈ ಜನ್ಮಲ್ಲಿ ಜ್ಞಾನ ಗಳುಸಲೆ ಎಡಿಗಾಗದ್ರೂ ಮುಂದಾಣ ಜನ್ಮಲ್ಲಿ ಜ್ಞಾನ ಪಡಕ್ಕೊಂಬಲೆ ಅವಕಾಶ ಇಪ್ಪ ಸಮುದಾಯಲೆ ಹುಟ್ಟಿಗೊಂಬಲೆ ಸಾಧ್ಯ ಆವ್ತು.

ಹೋಮ-ಹವನ, ದಾನ-ದಕ್ಷಿಣೆ, ಬ್ರಾಹ್ಮಣಾರಾಧನೆ ಎಲ್ಲವನ್ನೂ ಮಾಡಿಕ್ಕಿ ತಾನು ಎಲ್ಲೋರಿಂದ ದೊಡ್ಡವ°, ಮಹಾಕಾರ್ಯ ಮಾಡಿದೆ, ನಾಕು ಜೆನಕ್ಕೆ ದಾನ ದಕ್ಷಿಣೆ ಕೊಟ್ಟು ಸಮಾರಾಧನೆ ಮಾಡಿದೆ ಹೇಳಿಗೊಂಡು ಅಹಂಕಾರ ಬಂದರೆ ಅದು ರಜೋಗುಣದ ಕರ್ಮ ಆವ್ತು. ಅದರ ಫಲ ಲೋಭ ಮತ್ತೆ ದುಃಖ ಭರಿತ ಜೀವನ. ಇದರಿಂದ ಪುಣ್ಯ ಕರ್ಮ ಮಾಡಿರೂ ದುಃಖವೇ ಅನುಭವುಸುವುದು. ಹಾಂಗಾಗಿ ನಮ್ಮ ಜೀವಮಾನದ ಉದ್ದಕ್ಕೂ ನಿಗರ್ವಿ, ನಿರಹಂಕಾರಿಯಾಗಿ ಬದುಕೆಕು ಹೇಳಿ ಈ ಮದಲೇ ಭಗವಂತ° ಹೇಳಿದ್ದ°. ಅಜ್ಞಾನಂದ, ಆರದ್ದೋ ಒತ್ತಾಯಕ್ಕೆ ಮಾಡುವ ಕರ್ಮ ಎಂದೂ ಜ್ಞಾನವ ನೀಡುತ್ತಿಲ್ಲೆ. ತಿಳಿಗೇಡಿತನವೇ ಬೆಳವದು. ಇದು ತಮೋಗುಣದ ಫಲ.

ಶ್ಲೋಕ

ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ ।
ಪ್ರಮಾದಮೋಹೌ ತಮಸೋ ಭವತೋsಜ್ಞಾನಮೇವ ಚ ॥೧೭॥

ಪದವಿಭಾಗ

ಸತ್ತ್ವಾತ್ ಸಂಜಾಯತೇ ಜ್ಞಾನಮ್ ರಜಸಃ ಲೋಭ ಏವ ಚ । ಪ್ರಮಾದ-ಮೋಹೌ ತಮಸಃ ಭವತಃ ಅಜ್ಞಾನಮ್ ಏವ ಚ ॥

ಅನ್ವಯ

ಸತ್ತ್ವಾತ್ ಜ್ಞಾನಂ ಸಂಜಾಯತೇ, ರಜಸಃ ಲೋಭಃ ಏವ ಚ (ಸಂಜಾಯತೇ), ತಮಸಃ ಪ್ರಮಾದ-ಮೋಹೌ ಭವತಃ, ಅಜ್ಞಾನಂ ಚ ಏವ (ಭವತಿ) ।

ಪ್ರತಿಪದಾರ್ಥ

ಸತ್ತ್ವಾತ್ – ಸತ್ವಗುಣಂದ, ಜ್ಞಾನಮ್ – ಜ್ಞಾನವು, ಸಂಜಾಯತೇ – ಬೆಳೆತ್ತು, ರಜಸಃ – ರಜೋಗುಣಂದ, ಲೋಭಃ – ದುರಾಸೆ, ಏವ – ಖಂಡಿತವಾಗಿಯೂ, ಚ – ಕೂಡ, (ಸಂಜಾಯತೇ – ಉಂಟಾವ್ತು, ಹುಟ್ಟುತ್ತು, ಬೆಳೆತ್ತು), ತಮಸಃ – ತಮೋಗುಣಂದ. ಪ್ರಮಾದ-ಮೋಹೌ  – ಮತಿಭ್ರಮಣೆ ಮತ್ತೆ ಭ್ರಾಂತಿ, ಭವತಃ – ಉಂಟಾವ್ತು, ಅಜ್ಞಾನಮ್ ಚ – ಅಜ್ಞಾನವೂ ಕೂಡ, ಏವ – ಖಂಡಿತವಾಗಿಯೂ (ಭವತಿ – ಉಂಟಾವ್ತು).

ಅನ್ವಯಾರ್ಥ

ಸತ್ವಗುಣಂದ ಜ್ಞಾನವು ಬೆಳೆತ್ತು, ರಜೋಗುಣಂದ ಲೋಭವು ಬೆಳೆತ್ತು, ತಮೋಗುಣಂದ ಮತಿಭ್ರಮಣೆ-ಭ್ರಾಂತಿ, ಅಜ್ಞಾನಂಗಳೇ ಬೆಳವದು.

ತಾತ್ಪರ್ಯ / ವಿವರಣೆ

ಭಗವಂತ° ಮತ್ತೂ ಮತ್ತೂ ಸತ್ವ-ತಮ-ರಜೋಗುಣಂಗಳ ಒತ್ತಿ ವಿವರುಸುತ್ತಾ ಇದ್ದ°. ಭಗವಂತ° ಇಲ್ಲಿ ನಮ್ಮಲ್ಲಿ ಏವ ಗುಣ ಜಾಗೃತವಾಗಿದ್ದು ಹೇಳಿ ತಿಳಿವದು ಹೇಳ್ವದರ ವಿವರಿಸಿದ್ದ°. “ಸತ್ತ್ವಾತ್ ಸಂಜಾಯತೇ ಜ್ಞಾನಮ್” – ಇದು ಬಹು ಮುಖ್ಯವಾದ್ದು. ಮನುಷ್ಯಂಗೆ ಉನ್ನತಿ ಸಿಕ್ಕೆಕ್ಕಾರೆ ಜ್ಞಾನ ಸರ್ವಥಾ ಅಗತ್ಯ ಹೇಳ್ವದರ ಇಲ್ಲಿ ಒತ್ತಿ ಹೇಳಿದ್ದ°. ಜ್ಞಾನದ ತೃಷೆ ಇಪ್ಪವಂಗೆ ಈ ಲೋಕಲ್ಲಿ ಬಾಕಿ ಏನಿದ್ದರೂ ನಗಣ್ಯ. ಜ್ಞಾನ ಮೋಕ್ಷಕ್ಕೆ ಹೆದ್ದಾರಿ. ಇದು ಸತ್ತ್ವಗುಣದ ಪೂರ್ಣ ಜಾಗೃತಾವಸ್ಥೆ.

“ರಜಸೋ ಲೋಭ ಏವ ಚ” – ಲೋಭ ಹೇಳ್ವದು ರಜಸ್ಸಿನ ಮೀಸಲಾದ ಗುಣ. ಇದು ಸಾತ್ವಿಕರಲ್ಲಿ ಕಾಂಬಲೆ ಸಾಧ್ಯ ಇಲ್ಲೆ. ಏವುದೋ ಒಂದು ವಸ್ತುವಿನ ಬಗ್ಗೆ ಕಾಮ, ಆ ವಸ್ತು ಸಿಕ್ಕದ್ದಪ್ಪಗ ಕ್ರೋಧ, ಸಿಕ್ಕಿಯಪ್ಪದ್ದೆ ಲೋಭ. ಅದರ ಉಪಯೋಗುಸಲೂ ಇಲ್ಲೆ, ಉಪಯೋಗ ಆವ್ತವಂಗೆ ಕೊಡ್ಳೂ ಇಲ್ಲೆ. ಇದು ಲೋಭ. ದಾನ ಹೇಳ್ವದು ಇವಕ್ಕೆ ಬಲುದೂರ. ನಮ್ಮ ಹತ್ರೆ ಎಂತಿದ್ದೋ ಅದರ ಹಂಚಿ ತಿನ್ನೆಕು ಹೇಳ್ವದೇ ಜೀವನ ಹೇಳ್ವ ಸಾತ್ವಿಕ  ತತ್ವ ಇವಕ್ಕೆ ಅಪಥ್ಯ.

“ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ । ತೇನ ತ್ಯಕ್ತೇನ ಬುಂಜೀಥಾ ಮಾ ಗೃಧಃ ಕಸ್ಯಸ್ವದ್ಧನಮ್”॥ (ಈಶೋಪನಿಷತ್ತು – ೧ ). – ಭಗವಂತ° ಈ ಎಲ್ಲವುದರ ಒಡೆಯ°, ಅವ° ಕೊಟ್ಟದ್ದರ (ನವಗೆ ಬಿಟ್ಟದ್ದರ) ನಾವು  ಅನುಭವುಸೆಕು, ಇಲ್ಲದ್ದ ಸಂಪತ್ತಿಂಗೆ ಆಸೆ ಪಡ್ಳಾಗ. ಹಾಂಗಾಗಿ ಅವ° ಕೊಟ್ಟ ಸಂಪತ್ತಿನ ‘ಎನ್ನದು’ ಹೇದು ಲೋಭಂದ ಬದುಕುವದು ಒಳ್ಳೆದಲ್ಲ. ರಜೋಗುಣದ ಬಹಳ ಮುಖ್ಯ ದೋಷ ಈ ಲೋಭ. ಇನ್ನೊಬ್ಬನ ಬಗ್ಗೆ ಸಹಾನುಭೂತಿಯೂ ಇಲ್ಲದ್ದೆ, ತಾನು ಗಳಿಸಿದ್ದರ ಇನ್ನೊಬ್ಬಂಗೂ ಕೊಡದ್ದೆ, ತಾನೂ ತಿನ್ನದ್ದೆ ಮುಚ್ಚಿಮಡಿಕ್ಕೊಂಬದು – ಲೋಭ. ನಮ್ಮಲ್ಲಿ ಈ ಲಕ್ಷಣಂಗೊ ಇದ್ದರೆ ಅದು ರಜೋಗುಣ ಜಾಗೃತಾವಸ್ಥೆಲಿ ಇದ್ದು ಹೇಳ್ವದರ ನಾವು ಅರ್ಥಮಾಡಿಗೊಂಬಲಕ್ಕು.

“ಪ್ರಮಾದ-ಮೋಹೌ ತಮಸೋ ಭವತೋsಜ್ಞಾನಮೇವ ಚ” – ತಮೋಗುಣಂದ ತಿಳಿಗೇಡಿತನವೂ ಭ್ರಾಂತಿಯೂ ಅಪ್ಪದು. ಒಂದು ವಸ್ತು, ವಿಷಯ, ವ್ಯಕ್ತಿಯ ಅತಿಯಾಗಿ ಅಂಟಿಸಿಗೊಂಬದು, ಅವು ಮಾಡುವ ತಪ್ಪುಗಳ ಕ್ಷಮಿಸುವದು, ಅವು ಹೇಳಿದಾಂಗೆ ಕುಣಿವದು ಇತ್ಯಾದಿ. ಇದು ಎಷ್ಟು ಪ್ರಭಾವಶಾಲಿ ಹೇತುಕಂಡ್ರೆ, ಇದು ನಮ್ಮಲ್ಲಿಪ್ಪ ಜ್ಞಾನವ ಮುಚ್ಚುಸಿ ಮುಚ್ಚಳಿಕೆ ಹಾಂಗೆ ನಮ್ಮಲ್ಲಿ ಗಟ್ಟಿಕೂದುಗೊಂಡು ನಮ್ಮ ತಪ್ಪು ದಾರಿಲಿ ನಡವಲೆ ಪ್ರೇರಿಪಿಸುತ್ತು.

ಬನ್ನಂಜೆ ಹೇಳ್ತವು – ಇದಕ್ಕೆ ಭಾಗವತಲ್ಲಿ ಬಪ್ಪ ಅಜಾಮಿಳನ ಕತೆ. ಅಜಾಮಿಳ ಒಬ್ಬ ಸಾತ್ವಿಕ ಬ್ರಾಹ್ಮಣ, ಮದುವೆ ಆಗಿತ್ತು. ಒಂದರಿ ಪೂಜಗೆ ಹೂಗು ಕೊಯ್ವಲೆ ಕಾಡಿಂಗೆ ಹೋದಲ್ಲಿ ಒಂದು ಕಾಡಿನ ಹೆಣ್ಣ ಕಂಡು ಅದರಲ್ಲಿ ಮೋಹಪರವಶನಾಗಿ ಅದರ ಸಂಗಲ್ಲಿ ಬಿದ್ದು ಅದರೊಟ್ಟಿಂಗೆ ಮದ್ಯ-ಮಾಂಸವ ತಿಂದುಗೊಂಡು ತನ್ನ ಮನೆಯ ಸಂಪೂರ್ಣ ಮರದ°. ಅದರ ಆಸೆಯ ಪೂರೈಸಲೆ ತಾನು ಕಳ್ಳತನಕ್ಕೂ ಇಳುದ°. ಸಾತ್ವಿಕನಾಗಿದ್ದ ಒಬ್ಬ° ಬ್ರಾಹ್ಮಣ ತಾಮಸನಾದ°. ಈ ಕಥೆಯ ಶಾಸ್ತ್ರೀಯವಾಗಿ ನೋಡಿರೆ- ಎಂತಕೆ ಇದು ಹೀಂಗಾತು ಹೇಳ್ವದು ಗೊಂತಾವ್ತು. ಅಜಾಮಿಳ° ಬ್ರಾಹ್ಮಣ, ಮದುವೆ ಆಗಿತ್ತು. ಆದರೆ ಅವನ ಮನೆಲಿ ಮಡಿ-ಮೈಲಿಗೆ ಹೇದು ಅನೇಕ ಕರ್ಮಾಚರಣೆಂದಲಾಗಿ ಅವಂಗೆ ಅವನ ಅಂತರಂಗದ ಬಯಕೆಯ ಬಲವಂತವಾಗಿ ನಿಗ್ರಹಿಸೆಕ್ಕಾಗಿ ಬಂತು. ನಾವು ನಮ್ಮ ಬಯಕೆಯ ಬಲವಂತವಾಗಿ ಅದುಮಿ ಹಿಡುಕ್ಕೊಂಡ್ರೆ ಅದು ಒಂದಲ್ಲ ಒಂದು ದಿನ ಸ್ಪೋಟ ಆವ್ತು ಹೇಳ್ವದಕ್ಕೆ ಇದುವೇ ಉತ್ತಮ ಒಂದು ಉದಾಹರಣೆ. ಹಾಂಗಾಗಿ ಅಧ್ಯಾತ್ಮ ಶಾಸ್ತ್ರ ಎಂತ ಹೇಳ್ತು ಹೇದರೆ, “ಅಧ್ಯಾತ್ಮ ಸಾಧನೆ ಮಾಡುವ ಮದಲು ನಿನಗೆ ಸಂಸಾರಿಕ ಸುಖದ ಮೋಹ ಇದ್ದರೆ ಅದರ ಮದಾಲು ಅನುಭವಿಸು, ಅದರ ನಿಸ್ಸಾರವ ತಿಳಿ, ಅಷ್ಟಪ್ಪಗ ಸಾಧನೆ ಸುಲಭ”. ಅಜಾಮಿಳ° ಶಾಸ್ತ್ರ ಓದಿದ್ದ°, ಅಂದರೂ ಮೋಹಕ್ಕೆ ಬಲಿಯಾದ°. ಅದರಿಂದ ಅವನ ಎಲ್ಲಾ ಜ್ಞಾನವೂ ಮರೆಯಾತು. ತಮೋಗುಣಕ್ಕೆ ಸಿಲುಕಿದ°. ತಮೋಗುಣ ಅವನ  ಮಾಡ್ಳಾಗದ್ದ ತಪ್ಪುಗಳೆಲ್ಲ ಮಾಡಿಸಿತ್ತು. ಹೀಂಗೆ., ಇದು ತಮೋಗುಣದ ಜಾಗೃತಾವಸ್ಥೆಯ ಲಕ್ಷಣ.

ಹೀಂಗೆ ನಮ್ಮಲ್ಲಿ ಏವ ಗುಣ ಕೆಲಸ ಮಾಡುತ್ತು ಹೇಳ್ವದರ ಸ್ಪಷ್ಟ ರೂಪುರೇಷೆಂದ ಭಗವಂತ° ಇಲ್ಲಿ ವಿವರಿಸಿದ್ದ°. ಈ ಶ್ಲೋಕದ ಒಟ್ಟು ಸಾರಾಂಶ ಇಷ್ಟು – ಜ್ಞಾನದ ತೃಷೆ ಇದ್ದರೆ ಅದು ಸಾತ್ವಿಕ ಗುಣ, ಎನಗೇ ಬೇಕು, ಬಾಕಿದ್ದೋರಿಂಗೆ ಸಿಕ್ಕಲಾಗ ಹೇಳ್ವ ಲೋಭ ಇದ್ದರೆ ಅದು ರಜೋಗುಣ, ಏವುದೋ ಒಂದು ಭೌತಿಕ ವಸ್ತುವಿನ ಮೇಗೆ ಅತಿಯಾದ ಮಮತೆ-ಮೋಹ ಬೆಳದರೆ ಅದು ತಮೋಗುಣ.

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download: www.addkiosk.in ; www.giri.in

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಕೋಳ್ಯೂರು ಕಿರಣ

  ಫರ್ಷ್ಟಾಯಿದು ಚೆನ್ನೈ ಭಾವಾ.. ಸುಪರ್. ನಿಂಗಳ ಬರವಣಿಗೆ ಹೀಂಗೇ ಮುಂದುವರೆಯಲಿ ಹೇಳಿ ಆಸೆ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ನಮಸ್ತೇ ಚೆನ್ನೈ ಬಾವ,
  ಗುಣತ್ರಯ೦ಗಳ ವಿವರ, ಯೇವೇವ ಗುಣದವು ಅ೦ತ್ಯಲ್ಲಿಪ್ಪ ಅವರ ಗುಣಾದಿಗ೦ದ ಮತ್ತೆ ಹೇ೦ಗೆ ಹುಟ್ಟುತ್ತವು ಇತ್ಯಾದಿ ವಿವರಣ೦ಗ ಬಾರೀ ಲಾಯಕಕೆ ಬತ್ತಾ ಇದ್ದು.ಸರಳವಾಗಿ ಅರ್ಥ ಅಪ್ಪಾ೦ಗೆ ಬರವ ನಿ೦ಗಳ ಶೈಲಿ ಹಾ೦ಗೂ ಭಾಷೆ ಓದಲೆ ತು೦ಬಾ ಕೊಶಿ ಕೊಡುತ್ತು.ನಿ೦ಗೊಗೆ ಅದೆಷ್ಟು ಧನ್ಯವಾದ ಹೇಳಿರೂ ಕಡಮ್ಮೆಯೇ !
  ಹರೇ ರಾಮ.

  [Reply]

  VN:F [1.9.22_1171]
  Rating: +1 (from 1 vote)
 2. ಭಾಗ್ಯಲಕ್ಶ್ಮಿ

  ರಜೋಗುಣ, ತಮೋಗುಣ ಮತ್ತು ಸತ್ವ ಗುಣ೦ಗಳ ವಿವರಣೆ ಲಾಯಿಕಲ್ಲಿ ಬರದ್ದಿ.ಆನು ಮೊದಲು ಓದಿತ್ತಿದ್ದ ಅಜಮಿಳನ ಕತೆಗೂ, ಇದರಲ್ಲಿಪ್ಪದಕ್ಕೊ ರಜ್ಜ ವ್ಯತ್ಯಾಸ ಕ೦ಡತ್ತು. ಇನ್ನು ಹೆಚ್ಹು ವಿವರವಾಗಿ ಒದುವಾ೦ಗೆ ಗುಣತ್ರಯ ವಿಭಾಗ ಪ್ರೆರೇಪಿಸಿತ್ತು. ನೆಟ್ ಲಿ ಸಿಕ್ಕುವ ಭಾಗವಥ ಓದಿಗೊ೦ಡೆ.

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘು ಮುಳಿಯ

  ಮೂರು ಗುಣ೦ಗೊ ತಮ್ಮೊಳವೇ ಗುದ್ದಾಡಿ ಮನುಷ್ಯನ ಮೇಲೆ ನಿಯ೦ತ್ರಣ ಸಾಧುಸುತ್ತು.ತನ್ಮೂಲಕ ಮನುಷ್ಯನ ಜೀವನವ ತನ್ನ ಪ್ರವಾಹಲ್ಲಿ ಸೆಳಕ್ಕೊಳ್ತು.
  ವಿಶ್ವಲ್ಲೇ ಹೆಸರು ಪಡದ ನಮ್ಮ ಕ್ರೀಡಾಪಟುಗೊ ಅಮಲುಪದಾರ್ಥ ಸೇವನೆಯ ದಾರಿ ಹಿಡಿವದು ಕ೦ಡತ್ತಿಲ್ಲೆಯೋ,ನಮ್ಮ ಮು೦ದೆಯೇ !

  ಒಳ್ಳೆ ವಿವರಣೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಹಳೆಮನೆ ಅಣ್ಣಕೇಜಿಮಾವ°ಪವನಜಮಾವಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣvreddhiಉಡುಪುಮೂಲೆ ಅಪ್ಪಚ್ಚಿಪಟಿಕಲ್ಲಪ್ಪಚ್ಚಿಮಾಲಕ್ಕ°ಚುಬ್ಬಣ್ಣಜಯಗೌರಿ ಅಕ್ಕ°ಶರ್ಮಪ್ಪಚ್ಚಿಅಕ್ಷರದಣ್ಣದೊಡ್ಮನೆ ಭಾವವೇಣೂರಣ್ಣಮುಳಿಯ ಭಾವಸಂಪಾದಕ°ಅನು ಉಡುಪುಮೂಲೆಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಕೆದೂರು ಡಾಕ್ಟ್ರುಬಾವ°ಚೆನ್ನಬೆಟ್ಟಣ್ಣಅಡ್ಕತ್ತಿಮಾರುಮಾವ°ವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ