ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 12 – 18

February 7, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಿಂದಾಣ ಭಾಗಲ್ಲಿ ಕ್ಷೇತ್ರ, ಕ್ಷೇತ್ರಜ್ಞ, ಬಳಿಕ ಜ್ಞಾನದ ಬಗ್ಗೆ ವಿವರಿಸಿದ್ದ°. ಜ್ಞಾನಗಳುಸೆಕ್ಕಾರೆ ನಮ್ಮಲ್ಲಿ ಇರೆಕ್ಕಪ್ಪ 20 ಗುಣಂಗಳನ್ನೂ ಭಗವಂತ ವಿವರಿಸಿದ್ದ°. ಹಾಂಗಾರೆ, ನಾವು ಮೋಕ್ಷ ಸಾಧನೆಗೆ ತಿಳಿಯೇಕ್ಕಾಗಿಪ್ಪ  ಆ ಜ್ಞಾನ (ಜ್ಞೇಯಂ) ಎಂತರ ಹೇಳ್ವದು ಇಲ್ಲಿ ಮುಂದೆ –

ಶ್ರೀಮದ್ಭಗವದ್ಗೀತಾ – ತ್ರಯೋದಶೋsಧ್ಯಾಯಃ – ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ – ಶ್ಲೋಕಾಃ – 12 – 18

ಶ್ಲೋಕ

ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್ಞಾತ್ವಾಮೃತಮಶ್ನುತೇ ।
ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ ॥೧೨॥

ಪದವಿಭಾಗ

ಜ್ಞೇಯಮ್ ಯತ್ ತತ್ ಪ್ರವಕ್ಷ್ಯಾಮಿ ಯತ್ ಜ್ಞಾತ್ವಾ ಅಮೃತಮ್ ಅಶ್ನುತೇ । ಅನಾದಿಮತ್ ಪರಮ್-ಬ್ರಹ್ಮ ನ ಸತ್ ತತ್ ನ ಅಸತ್ ಉಚ್ಯತೇ ॥

ಅನ್ವಯ

ಯತ್ ಜ್ಞೇಯಂ, ಯತ್ ಜ್ಞಾತ್ವಾ (ಜೀವಃ) ಅಮೃತಮ್ ಅಶ್ನುತೇ, ತತ್ (ತೇ ಅಹಂ) ಪ್ರವಕ್ಷ್ಯಾಮಿ । ತತ್ ಅನಾದಿಮತ್, ಪರಂ-ಬ್ರಹ್ಮ, ಸತ್ ನ ಅಸತ್ (ಚ) ನ (ಇತಿ) ಉಚ್ಯತೇ ।

ಪ್ರತಿಪದಾರ್ಥ

ಯತ್  ಜ್ಞೇಯಮ್ – ಏವುದು ತಿಳಿಯೇಕ್ಕಾದ್ದು, ಯತ್ ಜ್ಞಾತ್ವಾ – ಏವುದು (ಏವುದರ) ತಿಳುದು, (ಜೀವಃ – ಜೀವವು), ಅಮೃತಮ್ – ಅಮೃತಸವಿಯ, ಅಶ್ನುತೇ – ಆಸ್ವಾದಿಸುತ್ತೋ, ತತ್ – ಅದರ (ತೇ – ನಿನಗೆ, ಅಹಮ್ – ಆನು), ಪ್ರವಕ್ಷ್ಯಾಮಿ – ವಿವರುಸುತ್ತೆ. ತತ್ – ಅದು, ಅನಾದಿಮತ್ – ಅನಾದಿ, ಪರಮ್-ಬ್ರಹ್ಮ – ಬೇರೆಯೇ ( ಎನಗೆ ಅಧೀನವಲ್ಲದ್ದು) ಆಗಿಪ್ಪ ಶ್ರೇಷ್ಠ ಚೇತನ, ನ ಸತ್ – ಕಾರಣವೂ ಅಲ್ಲ, ತತ್ – ಅದು,  ಅಸತ್ ಚ ನ – ಪರಿಣಾಮವೂ ಕೂಡ ಅಲ್ಲ, (ಇತಿ – ಹೀಂಗೆ), ಉಚ್ಯತೇ – ಹೇಳಲ್ಪಡುತ್ತು.

ಅನ್ವಯಾರ್ಥ

ಏವ ಜ್ಞಾನವ ತಿಳಿಯೇಕ್ಕಾಗಿದ್ದೋ, ಏವುದರ ತಿಳುದು ಜೀವವು ಅಮೃತತ್ವದ ಸವಿಯ ಆಸ್ವಾದುಸುತ್ತೋ (ಮುಕ್ತಿ ಪಡೆತ್ತೋ), ಅದರ (ಆ ಜ್ಞಾನವ) ನಿನಗೆ ಆನಿಲ್ಲಿ ವಿವರುಸುತ್ತೆ. ಅನಾದಿಯೂ, ಶ್ರೇಷ್ಠ ಚೇತನವೂ (ಪರಂಬ್ರಹ್ಮವೂ), ಜಗತ್ತಿನ ಎಲ್ಲವುಗಳಿಂದ ಬೇರೇಯೇ (ಅಧೀನವಲ್ಲದ್ದು) ಆಗಿಪ್ಪ ಅದು ಈ ಜಗತ್ತಿನ ಕಾರ್ಯ ಕಾರಣಂಗಳಿಂದ ಆಚಿಗಾಣದ್ದೇ ಆಗಿದ್ದು (ಕಾರ್ಯವೂ ಅಲ್ಲ, ಕಾರಣವೂ ಅಲ್ಲ / ಸತ್ ಅಲ್ಲ, ಅಸತ್ ಕೂಡ ಅಲ್ಲ / ಸತ್ಯವೂ ಅಲ್ಲ -ಮಿಥ್ಯೆಯೂ ಅಲ್ಲದ್ದು. – ಹೇಳಿರೆ., ಈ ಜಗತ್ತಿನ ಅಧೀನಕ್ಕೆ ಒಳಪ್ಪಡದ್ದು).

ತಾತ್ಪರ್ಯ / ವಿವರಣೆ

ಭಗವಂತ° ಈ ವರೇಂಗೆ ಕ್ಷೇತ್ರ, ಕ್ಷೇತ್ರಜ್ಞ°ರ ಬಗ್ಗೆ ಅದರ ಸ್ವರೂಪ ಬಗ್ಗೆ ವಿವರಿಸಿದ್ದ°. ಇಲ್ಲಿ ಈಗ ಜ್ಞೇಯ’ದ ಬಗ್ಗೆ ವಿವರುಸುತ್ತ°. ಜ್ಞೇಯ ಹೇದರೆ ತಿಳಿಯೇಕ್ಕಾಗಿಪ್ಪಂತದ್ದು. ಮನುಷ್ಯನಾಗಿ ಹುಟ್ಟಿ, ಸಾಧಕನಾಗಿ ತೊಡಗಿ ಏವುದರ ತಿಳಿಯೇಕ್ಕಾಗಿದ್ದೋ ಅದು ಜ್ಞೇಯ. ತಿಳಿಯೇಕ್ಕಾಗಿಪ್ಪದು ತಿಳುಕ್ಕೊಂಬಲೆ ಎಡಿಗಪ್ಪದು – ಜ್ಞೇಯ. ಇಲ್ಲಿ ಮದಾಲು ಆತ್ಮವ ಮತ್ತೆ ಪರಮಾತ್ಮವ ವಿವರುಸುತ್ತ°. ಕ್ಷೇತ್ರಜ್ಞ° ‘ಆತ್ಮ’ ಮತ್ತೆ ‘ಪರಮಾತ್ಮ’ ಇವುಗಳ ತಿಳುಕ್ಕೊಂಡು ಜೀವನದ ಅಮೃತವ ಅನುಭವುಸಲೆಡಿಗು. ಅದು ‘ಜ್ಞೇಯ’.  “ಯತ್ ಜ್ಞಾತ್ವಾ ಅಮೃತಮ್ ಅಶ್ನುತೇ” – ‘ಏವುದರ ತಿಳ್ಕೊಂಡು ಅಮೃತಸವಿಯ ಅನುಭವಿಸುತ್ತೋ’, “ತತ್ ಪ್ರವಕ್ಷ್ಯಾಮಿ” – ‘ಅದರ ವಿವರುಸುತ್ತೆ’ ಹೇದು ಹೇಳಿದ್ದ° ಇಲ್ಲಿ ಭಗವಂತ°. “ಅನಾದಿಮತ್ ಪರಮ್-ಬ್ರಹ್ಮ ನ ಸತ್ ತತ್ ನ ಅಸತ್” – ಅದು ಅನಾದಿಮತ್ (ಹುಟ್ಟಿಲ್ಲದ್ದು), ಪರಮ್-ಬ್ರಹ್ಮ ಪರಬ್ರಹ್ಮವಾದ್ದು (ಬ್ರಹ್ಮ = ಶ್ರೇಷ್ಠ, ಅತ್ಯುತ್ತಮ, ಹಿರಿಯ.,  ಇದಕ್ಕಿಂತಲೂ ಪರಮ್ – ಬೇರೆಯೇ ಆಗಿಪ್ಪದು = ಪರಬ್ರಹ್ಮ)  ಅದುವೇ ಜ್ಞೇಯ. ತತ್ ನ ಸತ್ ನ ಅಸತ್ – ಅದು ಸತ್ಯವೂ ಅಲ್ಲ ಮಿಥ್ಯವೂ ಅಲ್ಲ – ಹೇಳಿರೆ ಜಗತ್ತಿನ ಕಾರ್ಯವೂ ಕಾರಣವೂ ಅಲ್ಲದ್ದು, ಕಣ್ಣಿಂಗೆ ಕಾಂಬದರಿಂದಲೂ ಭಿನ್ನವಾಗಿಪ್ಪದು, ಗ್ರಹಿಕೆಯ ಎಟಕಿಂಗೆ ನಿಲುಕದ್ದೂ, ಗಾಳಿ ಆಕಾಶಕ್ಕಿಂತಲ್ಲೂ ಭಿನ್ನ ಆಗಿಪ್ಪದು. ಅದು ಬೇರೇಯೇ ಆಗಿಪ್ಪದು. ಭಗವಂತ° ಅನಾದಿಮತ್.  ಅವಂಗೆ ನಶ್ವರವಾದ ಪಂಚಭೂತಂಗಳಿಂದಾದ ಏವ ಆಕಾರವೂ ಇಲ್ಲೆ. ಅವ° ಜ್ಞಾನಾನಂದ ಸ್ವರೂಪ°. ಸಕಲ ಸದ್ಗುಣಂಗಳ ನಿಧಿ ಭಗವಂತ°. ಅವ° ಪರಿಪೂರ್ಣ°, ನವಗೆ ಪೂರ್ಣತೆಯ ಕೊಡ್ಳೆ ಸಾಧ್ಯವಾಗಿಪ್ಪ ಏಕೈಕ°. ಅವ° ಸರ್ವ ಹಿರಿಯವ°. ಅವಂಗೆ ಹಿರಿದಾದ್ದು ಇನ್ನೊಂದು ತತ್ವ ಇಲ್ಲೆ. ಅಂತಹ ಭಗವಂತನ ನಾವು ಸಂಪೂರ್ಣವಾಗಿ ತಿಳಿವಲೆ ಸಾಧ್ಯ ಇಲ್ಲೆ. ಅದು ನಮ್ಮ ಅರಿವಿಂಗೆ ಎಟುಕದ್ದು. ಆದರೂ, ಅವನ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಯಥಾರ್ಥವ ತಿಳಿವಲೆ ಸಾಧ್ಯ. ಅಂತಹ ‘ಜ್ಞೇಯ’ದ ವಿವರುಸ್ಸುತ್ತೆ ಹೇಳಿ ಭಗವಂತ° ಸುರುಮಾಡುತ್ತ° –

ಶ್ಲೋಕ

ಸರ್ವತಃ ಪಾಣಿಪಾದಂ ತತ್  ಸರ್ವತೋsಕ್ಷಿಶಿರೋಮುಖಮ್ ।
ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ॥೧೩॥

ಪದವಿಭಾಗ

ಸರ್ವತಃ ಪಾಣಿ-ಪಾದಮ್ ತತ್ ಸರ್ವತಃ ಅಕ್ಷಿ-ಶಿರಃ-ಮುಖಮ್ । ಸರ್ವತಃ ಶ್ರುತಿಮತ್ ಲೋಕೇ ಸರ್ವಮ್ ಆವೃತ್ಯ ತಿಷ್ಠತಿ ॥

ಅನ್ವಯ

ಲೋಕೇ ತತ್ ಸರ್ವತಃ ಪಾಣಿ-ಪಾದಮ್, ಸರ್ವತಃ ಅಕ್ಷಿ-ಶಿರಃ-ಮುಖಮ್, ಸರ್ವತಃ ಶ್ರುತಿಮತ್ (ಅಸ್ತಿ), ಸರ್ವಮ್ (ಚ) ಆವೃತ್ಯ ತಿಷ್ಠತಿ ।

ಪ್ರತಿಪದಾರ್ಥ

ಲೋಕೇ – ಪ್ರಪಂಚಲ್ಲಿ, ತತ್ – ಅದು, ಸರ್ವತಃ – ಎಲ್ಲ ಕಡೆಲಿ, ಅಕ್ಷಿ-ಶಿರಃ-ಮುಖಮ್ – ಕಣ್ಣು-ತಲೆ-ಮೋರೆ, ಸರ್ವತಃ – ಎಲ್ಲ ಕಡೆಲಿ, ಶ್ರುತಿಮತ್ – ಕೆಮಿಹೊಂದಿದ್ದು, (ಅಸ್ತಿ – ಆಗಿದ್ದು)ಮ್ ಸರ್ವಮ್ (ಚ)  – ಎಲ್ಲವನ್ನೂ, ಆವೃತ್ಯ – ಆವರಿಸಿ, ತಿಷ್ಠತಿ – ನಿಂದುಗೊಂಡಿದ್ದು.

ಅನ್ವಯಾರ್ಥ

ಅದಕ್ಕೆ (ಪರಮಾತ್ಮ ತತ್ವಕ್ಕೆ)  ಕೈ ಕಾಲು ಕಣ್ಣು ತಲೆ ಮೋರೆಗೊ ಎಲ್ಲೆಲ್ಲಿಯೂ (ಎಲ್ಲ ಕಡೆಲಿಯೂ) ಇದ್ದು, ಅದಕ್ಕೆ ಎಲ್ಲದಿಕ್ಕೆಯೂ ಕೆಮಿ ಇದ್ದು, ಎಲ್ಲವನ್ನೂ ಆವರಿಸಿಗೊಂಡಿದ್ದು (ಸರ್ವವ್ಯಾಪಿಯಾಗಿದ್ದು).

ತಾತ್ಪರ್ಯ / ವಿವರಣೆ

ಭಗವಂತ° ಎಲ್ಲ ದಿಕ್ಕೆ ಆವರಿಸಿ ತುಂಬಿಗೊಂಡಿದ್ದ° ಹೇಳ್ವದರ ಇಲ್ಲಿ ವಿವರಿಸಿದ್ದ°.  ಅವಂಗೆ ಪ್ರಪಂಚದ ಎಲ್ಲ ದಿಕ್ಕೆ ಕೈ ಕಾಲು ಕಣ್ಣು ಮೋರೆ  ಬಾಯಿ ಕೆಮಿ. ಹಾಂಗಾಗಿ ಅವಂಗೆ ಅರಡಿಯದ್ದೆ ನವಗೆಂತ ಮಾಡಿಕ್ಕಲೂ ಎಡಿಯ.  ಅವ° ಸರ್ವಜ್ಞ°, ಸರ್ವಗತ°, ಸರ್ವಸಮರ್ಥ°. ಭಗವಂತ ಎಲ್ಲೆಲ್ಲಿಯೂ ಇದ್ದ ಹೇಳ್ವದು ಅಜ್ಞಾನಂದ ಗೊಂತಾಗ. ಅವ° ಸರ್ವಂತರ್ಯಾಮಿ ಹೇಳ್ವದು ಜ್ಞಾನದ ಮೂಲಕ ತಿಳೆಯೆಕು. ಹೇಳಿರೆ ಐಹಿಕ ಪ್ರಕೃತಿಗೆ ಬದ್ಧನಾದ ವ್ಯಕ್ತಿಗತ ಆತ್ಮ° ಪರಮೋನ್ನತ° ಅಲ್ಲ ಹೇಳ್ವದು ತಿಳ್ಕೊಳ್ಳೆಕ್ಕು. ಪರಮೋನ್ನತ° ವ್ಯಕ್ತಿಗತ ಆತ್ಮಂದ ಭಿನ್ನ. ಆತ್ಮವು ಪರಮಾತ್ಮನ ವಿಭಿನ್ನಾಂಶ ಮಾತ್ರ. ಪರಮ ಪ್ರಭು ಭಗವಂತ ಮಿತಿಯಿಲ್ಲದ್ದವ°. ಅವನ ಕೈಕಾಲು ಕಣ್ಣು ಕೆಮಿ ಮಿತಿಯಿಲ್ಲದ್ದೆ ಸರ್ವತ್ರ ವ್ಯಾಪಿಸಿಗೊಂಡಿದ್ದು. ವ್ಯಕ್ತಿಗತ ಆತ್ಮನಿಂದ ಇದು ಸಾಧ್ಯ ಇಲ್ಲೆ.  ಭಗವಂತ° ಈ ಮದಲೇ ಹೇಳಿತ್ತಿದ್ದ° – “ಪತ್ರಂ ಪುಷ್ಪಂ ಫಲಂ ತೋಯಂ ಯೋ ಮಾಂ ಭಕ್ತ್ಯಾ ಪ್ರಯಚ್ಛತಿ, ತದಹಂ ಭಕ್ಟ್ಯುಪಹೃತಂ ಅಶ್ನಾಮಿ ಪ್ರಯತಾತ್ಮನಃ” – ‘ಶ್ರದ್ಧಾಭಕ್ತಿಪೂರ್ವಕವಾಗಿ ಅರ್ಪುಸುವ ಪತ್ರೆ,  ಹೂಗು ವಾ ಹೂಗಿನೆಸಳು ವಾ ಹುಂಡುನೀರು ಯಾವಾತ° ಸಮರ್ಪಿಸುತ್ತನೋ ಅದರಾನು ಅಷ್ಟೇ ಪ್ರೀತಿಂದ ಸ್ವೀಕರುಸುತ್ತೆ’ ಹೇದು ಹೇಳಿದ್ದ° . ಭಗವಂತ ಎಲ್ಯೋ ದೂರ ಇಪ್ಪವ° ಆಗಿದ್ರೆ ಅವಂಗದರ ಸ್ವೀಕರುಸಲೆ ಹೇಂಗೆ ಎಡಿಗಕ್ಕು?! . ಇದು ಭಗವಂತನ ಸರ್ವಶಕ್ತಿಯ ಸೂಚಿಸುತ್ತು. ಪ್ರಪಂಚದ ಏವ ದೂರಲ್ಲಿಪ್ಪ ತನ್ನ ಮನೆಂದಲೂ ಭಕ್ತಿಂದ  ಅರ್ಪಿಸುವ ಕಾಣಿಕೆಯ ಭಗವಂತ° ಕೈಚಾಚಿ ಸ್ವೀಕರುಸಲೆ ಭಗವಂತಂಗೆ ಮಾಂತ್ರ ಸಾಧ್ಯ. ಅದು ಭಗವಂತನ ಶಕ್ತಿ. ಹೀಂಗೆ ವ್ಯಕ್ತಿಗತ ಆತ್ಮವು ಸರ್ವಶಕ್ತ ಭಗವಂತನಿಂದ ಭಿನ್ನವಾದ್ದು, ಭಗವಂತ° ಸರ್ವಗತ°, ಸರ್ವವ್ಯಾಪಿ, ಸರ್ವಶಕ್ತ° ಹೇಳ್ವದರ ಇಲ್ಲಿ ಹೇಳಿದ್ದ°.

ಶ್ಲೋಕ

ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಮ್ ।
ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ ॥೧೪॥

ಪದವಿಭಾಗ

ಸರ್ವ-ಇಂದ್ರಿಯ-ಗುಣ-ಆಭಾಸಮ್ ಸರ್ವ-ಇಂದ್ರಿಯ-ವಿವರ್ಜಿತಮ್ । ಅಸಕ್ತಮ್ ಸರ್ವ-ಭೃತ್ ಚ ಏವ ನಿರ್ಗುಣಮ್ ಗುಣ-ಭೋಕ್ತೃ ಚ ॥

ಅನ್ವಯ

(ತತ್) ಸರ್ವ-ಇಂದ್ರಿಯ-ಗುಣ-ಆಭಾಸಮ್, ಸರ್ವ-ಇಂದ್ರಿಯ-ವಿವರ್ಜಿತಮ್, ಅಸಕ್ತಮ್, ಸರ್ವ-ಭೃತ್ ಚ ಏವ, ನಿರ್ಗುಣಂ ಗುಣ-ಭೋಕ್ತೃ ಚ (ಅಸ್ತಿ) ।

ಪದವಿಭಾಗ

(ತತ್ – ಅದು), ಸರ್ವ-ಇಂದ್ರಿಯ-ಗುಣ-ಆಭಾಸಮ್ – ಸಕಲ ಇಂದ್ರಿಯಂಗಳ ಗುಣಂಗಳ ಮೂಲ ಆಕರ°, ಸರ್ವ-ಇಂದ್ರಿಯ-ವಿವರ್ಜಿತಮ್ – ಸಕಲ ಇಂದ್ರಿಯ ರಹಿತ°, ಅಸಕ್ತಮ್ – ಅನಾಸಕ್ತ°, ಸರ್ವ-ಭೃತ್ – ಸಕಲವುಗಳ ಪಾಲಕ°, ಚ – ಕೂಡ, ಏವ – ಖಂಡಿತವಾಗಿಯೂ, ನಿರ್ಗುಣಮ್ – ಭೌತಿಕ ಗುಣರಹಿತ°, ಗುಣ-ಭೋಕ್ತೃ – ಗುಣಂಗಳ ಭೋಕ್ತಾರ°, ಚ – ಕೂಡ, (ಅಸ್ತಿ – ಆಗಿದ್ದು).

ಅನ್ವಯಾರ್ಥ

(ತತ್ – ಅದು = ಪರಮಾತ್ಮ) ಎಲ್ಲ ಇಂದ್ರಿಯಂಗಳ ಆದಿಮೂಲ, ಆದರೆ ಇಂದ್ರಿಯರಹಿತ, ಸಕಲವುಗಳ ಪಾಲಕ ಆದರೂ ನಿರಾಸಕ್ತ, ನಿಸರ್ಗದ ಸಕಲ (ಭೌತಿಕ) ಗುಣಂಗಳ ಮೀರಿದ್ದು, ಆದರೂ ಎಲ್ಲ ಗುಣಂಗಳ ರಾಶಿ (ಭೋಕ್ತಾರ) ಆಗಿದ್ದು. (ಪರಮಾತ್ಮ° ಸಕಲ ಇಂದ್ರಿಯಂಗಳ ಆದಿಮೂಲ°, ಆದರೂ ಇಂದ್ರಿಯರಹಿತ°, ಸಕಲ ಭೌತಿಕ ಅಸ್ತಿತ್ವಂಗಳ ಪಾಲಕ°, ಆದರೂ ಅವುಗಳಲ್ಲಿ ನಿರಾಸಕ್ತ°, ಭೌತಿಕ ಗುಣಂಗೊಕ್ಕೆ ಮೀರಿದವ° ಮತ್ತು ಎಲ್ಲ ಗುಣಂಗಳ ಒಡೆಯ° ಆಗಿದ್ದ°).

ತಾತ್ಪರ್ಯ / ವಿವರಣೆ

ಪರಮಾತ್ಮನ ಗುಣಂಗಳ ವಿವರಿಸಿಗೊಂಡು ಭಗವಂತ° ಮುಂದುವರುಶಿ ಹೇಳುತ್ತ° – ಪರಮಾತ್ಮ ಸಕಲ ಜೀವಿಗಳ ಎಲ್ಲ ಇಂದ್ರಿಯಂಗಳ ಮೂಲ, ಆದರೂ ಅವಕ್ಕೆ ಇಪ್ಪಾಂಗೆ ಪರಮಾತ್ಮಂಗೆ ಭೌತಿಕ ಇಂದ್ರಿಯಂಗೊ ಇಲ್ಲೆ. ವಾಸ್ತವಲ್ಲಿ ವ್ಯಕ್ತಿಗತ ಆತ್ಮಂಗೊಕ್ಕೆ ಆಧ್ಯಾತ್ಮಿಕ ಇಂದ್ರಿಯಂಗೊ ಇದ್ದು. ಆದರೆ , ಬದ್ಧಜೀವನಲ್ಲಿ ಐಹಿಕ ಘಟಕಾಂಶಂಗೊ ಅದರ ಮರೆಮಾಡುತ್ತು. ಹಾಂಗಾಗಿ ಇಂದ್ರಿಯಂಗಳ ಚಟುವಟಿಕೆಗೊ ಜಡವಸ್ತುವಿನ ಮೂಲಕ ಪ್ರಕಟ ಅಪ್ಪದು. ಪರಮಾತ್ಮನ ಇಂದ್ರಿಯಂಗೊ ಈ ರೀತಿ ಮರೆ ಹೇದು ಇಲ್ಲೆ. ಅವನ ಇಂದ್ರಿಯಂಗೊ ಅಲೌಕಿಕವಾದ್ದು. ಹಾಂಗಾಗಿ ಅವನ ‘ನಿರ್ಗುಣ’ ಹೇದು ಹೇಳುತ್ತದು. ‘ಗುಣ’ ಹೇದರೆ ಐಹಿಕ ಗುಣಂಗೊ. ಪರಮಾತ್ಮನ ಇಂದ್ರಿಯಂಗೊಕ್ಕೆ ಐಹಿಕ ಆಚ್ಛಾದನೆ ಇಲ್ಲೆ. ಹೇದರೆ ನಮ್ಮ ಇಂದ್ರಿಯಂಗಳ ಹಾಂಗೆ ಭಗವಂತನ ಇಂದ್ರಿಯಂಗೊ ಅಲ್ಲ. ಅದು ಪರಮಶಕ್ತಿಯುತವಾದ್ದು. ಇಂದ್ರಿಯಂಗಳ ಸಕಲ ಚಟುವಟಿಕೆಗಳ ಮೂಲ ಅವನೇ ಆದರೂ ಅವಂಗೆ ಅಲೌಕಿಕ ಇಂದ್ರಿಯಂಗೋ, ಅದು ನಿರ್ಮಲ. ಪರಮಾತ್ಮಂಗೆ ಐಹಿಕ ಕಶ್ಮಲದ ಸೋಂಕುಗೊ ಇಪ್ಪ ಕೈ ಇಲ್ಲೆ. ಆದರೂ ಅವಂಗೆ ಕೈ ಇದ್ದು. ಅವ° ನಾವು ಭಕ್ತಿಂದ ಅರ್ಪಿಸಿದ್ದರ ಕೈಚಾಚಿ ಸ್ವೀಕರುಸುತ್ತ°. ಬದ್ಧ ಆತ್ಮಕ್ಕೂ ಪರಮಾತ್ಮಂಗೂ ಇದೇ ವ್ಯತ್ಯಾಸ. ಅವಂಗೆ ಐಹಿಕ ಕಣ್ಣುಗೊ ಇಲ್ಲೆ ಆದರೂ ಅವಂಗೆ ಕಣ್ಣುಗೊ ಇದ್ದು. ಇಲ್ಲದ್ರೆ ಅವಂಗೆ ಭೂತ ವರ್ತಮಾನ ಭವಿಷ್ಯ ಎಲ್ಲವನ್ನೂ ಕಾಣುತ್ತದು ಹೇಂಗೆ?! ಹಾಂಗಾಗಿ ಭಗವಂತ° ಇಲ್ಲಿ ಹೇಳಿದ್ದದು- ‘ಬದ್ಧ ಆತ್ಮಂಗೆ ಇಪ್ಪ ಹಾಂಗೆ ಇಂದ್ರಿಯಂಗೊ, ಗುಣಂಗೊ ಭಗವಂತಂಗೆ ಇಲ್ಲೆ ಆದರೂ ಅವುಗಳ ಮೂಲ ಅವನೇ’. ಅವಂಗೆ ಇಪ್ಪದು ಆಧ್ಯಾತ್ಮಿಕ ಅವಯವಂಗೊ. ಆಕಾಶಲ್ಲಿ ಅವ° ಪ್ರಯಾಣ ಮಾಡುಗು, ಹೇಳಿರೆ, ನಿರಾಕಾರನಲ್ಲ ಹೇದರ್ಥ. ನಾವು ಭಗವಂತನ ಅವಿಭಾಜ್ಯ ಅಂಗಂಗೊ, ನವಗೆ ಅಂಗಾಂಗಂಗೊ ಇದ್ದು ಆದರೆ ಪರಮಾತ್ಮನ ಕೈ ಕಾಲು ಕಣ್ಣು ಇಂದ್ರಿಯಂಗೊ ಐಹಿಕ ಪ್ರಕೃತಿಯ ಕಲ್ಮಷದ ಸೋಂಕು ಇಲ್ಲದ್ದಿಪ್ಪದು.

ಐಹಿಕ ಶಕ್ತಿಗೊ ಭಗವಂತನ ಮಲಿನಗೊಳುಸುತ್ತಿಲ್ಲೆ. ಅವ° ಐಹಿಕ ಶಕ್ತಿಯ ಒಡೆಯ°. ಅವನ ಇಡೀ ಶರೀರ ಆಧ್ಯಾತ್ಮಿಕವಾದ್ದು. ಅವನದ್ದು ಶಾಶ್ವತವಾದ ಸಚ್ಚಿದಾನಂದ ವಿಗ್ರಹ. ಅವನಲ್ಲಿ ಎಲ್ಲ ಸಿರಿಗೊ ಅಡಗಿದ್ದು. ಎಲ್ಲ ಸಿರಿಗಳ ಒಡೆಯ° ಅವ°. ಎಲ್ಲ ಶಕ್ತಿಯೂ ಅವನಲ್ಲಿ ಅಡಗಿಪ್ಪದು. ಹಾಂಗಾಗಿ ಅವ° ಧೀಮಂತ° ಮತ್ತು ಜ್ಞಾನಪೂರ್ಣ°. ಇವು ದೇವೋತ್ತಮ ಪರಮ ಪುರುಷನ ಕೆಲವು ಲಕ್ಷಣಂಗೊ. ಅವ° ಎಲ್ಲ ಜೀವಿಗಳ ಪಾಲಕ° ಹಾಂಗೂ ಸರ್ವಸಾಕ್ಷಿ.  ಐಹಿಕ ಪಕೃತಿಯ ಕಲ್ಮಶದ ಸೋಂಕು ನವಗಿಪ್ಪದರಿಂದ ನವಗೆ ಅವನ ರೂಪವ ಕಾಂಬಲೆ ಎಡಿಯ. ಹಾಂಗಾಗಿ, ಐಹಿಕ ಜಗತ್ತಿನ ಪ್ರಭಾವಕ್ಕೆ ಒಳಗಾದ ನಿರಾಕಾರವಾದಿಗೊ ದೇವೋತ್ತಮ ಪುರುಷನ ಅರ್ಥಮಾಡಿಗೊಂಬಲೆ ಅಸಮರ್ಥರು ಆಗಿರ್ತವು.

ಒಟ್ಟಿಲ್ಲಿ ಭಗವಂತ° ಇಲ್ಲಿ ಹೇಳಿದ್ದದು – ಜಗತ್ತಿನ ಎಲ್ಲ ಜೀವಜಾತಂಗೊ ತಮ್ಮ ಇಂದ್ರಿಯಂಗಳಿಂದ ಇಂದ್ರಿಯ ವಿಷಯಂಗಳ ಗ್ರಹಿಸಿಗೊಂಬದು ಭಗವಂತನಿಂದ ಆದರೆ ಆ ಭಗವಂತಂಗೆ ಪಂಚಭೌತಿಕವಾದ ನಶ್ವರವಾದ ನಮ್ಮಾಂಗೆ ಒಂದಿನ ನಾಶವಪ್ಪ, ತನ್ನ ಸ್ವರೂಪಕ್ಕೆ ಭಿನ್ನವಾದ ಯಾವ ಇಂದ್ರಿಯಂಗಳೂ ಇಲ್ಲೆ. ಈ ಜಗತ್ತಿನ ಹೊತ್ತಿಪ್ಪ ಅಪ್ಪ° ಅವ° – ಗೆಂಡು, ಜೆಗತ್ತಿನ ಹೆತ್ತ ಅಬ್ಬೆಯೂ (ಸ್ತ್ರೀಯೂ) ಅವನೇ. ಭೌತಿಕವಾಗಿ ಗೆಂಡೂ ಅಲ್ಲ, ಹೆಣ್ಣು ಅಲ್ಲ, ಆದರೆ ಸ್ವರೂಪಭೂತನಾಗಿ ಗೆಂಡೂ ಅಪ್ಪು, ಹೆಣ್ಣೂ ಅಪ್ಪು. ಅವ° ಎಲ್ಲವುದರ ಒಳವೂ ತುಂಬಿಗೊಂಡಿದ್ದ° ಆದರೆ ಏವುದನ್ನೂ ಅಂಟಿಸಿಗೊಂಡಿದ್ದನಿಲ್ಲೆ. ಅವ° ಎಲ್ಲವನ್ನೂ ಹೊಂದಿದ್ದ° ಅದರೆ ಯಾವುದರಲ್ಲಿಯೂ ಬಾಂಧವ್ಯದ ಬೆಸುಗೆ ಅವಂಗೆ ಇಲ್ಲೆ. ಅವ° ತ್ರಿಗುಣಾತೀತ°, ಆದರೆ ಸದ್ಗುಣಂಗಳ ಸೆಲೆ-ನೆಲೆ. ಅವ° ನಿರಾಕಾರನೂ ಅಪ್ಪು, ಸಾಕಾರನೂ ಅಪ್ಪು. ಅದುವೇ – “ಸರ್ವ-ಇಂದ್ರಿಯ-ಗುಣ-ಆಭಾಸಮ್ ಸರ್ವ-ಇಂದ್ರಿಯ-ವಿವರ್ಜಿತಮ್ । ಅಸಕ್ತಮ್ ಸರ್ವ-ಭೃತ್ ಚ ಏವ ನಿರ್ಗುಣಮ್ ಗುಣ-ಭೋಕ್ತೃ ಚ ಹೇದು ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಬಹಿರಂತಶ್ಚ ಭೂತಾನಾಮ್ ಅಚರಂ ಚರಮೇವ ಚ ।
ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ ॥೧೫॥

ಪದವಿಭಾಗ

ಬಹಿಃ-ಅಂತಃ ಚ ಭೂತಾನಾಮ್ ಅಚರಮ್ ಚರಮ್ ಏವ ಚ । ಸೂಕ್ಷ್ಮತ್ವಾತ್ ತತ್ ಅವಿಜ್ಞೇಯಮ್ ದೂರಸ್ಥಮ್ ಚ ಅಂತಿಕೇ ಚ ತತ್ ॥

ಅನ್ವಯ

ತತ್ ಭೂತಾನಾಂ ಬಹಿಃ ಅಂತಃ ಚ (ಅಸ್ತಿ), ಅಚರಂ ಚರಂ ಚ ಏವ (ಅಸ್ತಿ), ತತ್ ಸೂಕ್ಷ್ಮತ್ವಾತ್ ಅವಿಜ್ಞೇಯಮ್ (ಅಸ್ತಿ), ದೂರಸ್ಥಂ ಚ ಅಂತಿಕೇ ಚ (ಅಸ್ತಿ) ।

ಪ್ರತಿಪದಾರ್ಥ

ತತ್ ಭೂತಾನಾಮ್ – ಆ ಜೀವಿಗಳ, ಬಹಿಃ – ಹೆರ, ಅಂತಃ – ಒಳ, ಚ (ಅಸ್ತಿ) – ಕೂಡ (ಇದ್ದು), ಅಚರಮ್ – ಚಲುಸದ್ದ, ಚರಮ್ – ಚಲುಸುವ, ಚ ಏವ (ಅಸ್ತಿ) – ಕೂಡ ಖಂಡಿತವಾಗಿಯೂ ಆಗಿದ್ದು, ತತ್ – ಅದು, ಸೂಕ್ಷ್ಮತ್ವಾತ್ – ಸೂಕ್ಷ್ಮವಾಗಿಪ್ಪದರಿಂದಲಾಗಿ, ಅವಿಜ್ಞೇಯಮ್ (ಅಸ್ತಿ) – ತಿಳಿಯಲಾಗದ್ದು ಆಗಿದ್ದು, ದೂರಸ್ಥಮ್ – ಬಹುದೂರಲ್ಲಿದ್ದು, ಚ – ಕೂಡ, ಅಂತಿಕೇ – ಹತ್ರೆ, ಚ (ಅಸ್ತಿ) – ಕೂಡ (ಆಗಿದ್ದು).

ಅನ್ವಯಾರ್ಥ

(ಪರಮಾತ್ಮ°) ಎಲ್ಲ ಜೀವಿಗಳ ಹೆರವೂ ಒಳವೂ ಇದ್ದು, ಚರವೂ ಅಚರವೂ ಆಗಿದ್ದು (ಚರಾಚರದೊಳವೂ ಇದ್ದು), ಅದು ಬಹುಸೂಕ್ಷ್ಮವಾಗಿಪ್ಪದರಿಂದ (ಐಹಿಕ ಇಂದ್ರಿಯಂಗಳಿಂದ) ಅದರ ತಿಳಿವಲೆ ಅಸಾಧ್ಯವಾಗಿಪ್ಪದಾಗಿದ್ದು. ಬಹೂದೂರಲ್ಲಿದ್ದರೂ ಅದು ಎಲ್ಲರಿಂಗೂ ಸಮೀಪಲ್ಲಿಯೇ ಇದ್ದು.

ತಾತ್ಪರ್ಯ / ವಿವರಣೆ

ಇಲ್ಲಿಯೆಲ್ಲಾ ‘ತತ್’  ಹೇಳಿ ಭಗವಂತ° ಹೇಳುವದು ಪರಮಾತ್ವ ತತ್ವವ. ಹಾಂಗಾಗಿ ‘ಅದು’ ಹೇಳಿ ಪದಪ್ರಯೋಗ ಮಾಡಿದ್ದದು. ಭಗವಂತ° ವಿವರುಸುತ್ತಾ ಇಪ್ಪದು ಪರಮಾತ್ಮನ ಬಗ್ಗೆ , ಪರಮಾತ್ಮ ಸ್ವರೂಪ ತತ್ವದ ಬಗ್ಗೆ.. ಹೇಳಿರೆ ಪರಮಾತ್ಮನ ಸ್ವರೂಪ ಗುಣಂಗಳ ಬಗ್ಗೆ.

ಪರಮ ಪುರುಷನಾದ ನಾರಾಯಣ° (ಭಗವಂತ°) ಪ್ರತಿಯೊಂದು ಜೀವಿಯ ಒಳವೂ ಹೆರವೂ ವಾಸಮಾಡಿಗೊಂಡಿದ್ದ. ಇದನ್ನೇ ಹಲವು ಸರ್ತಿ ಒತ್ತಿ ಒತ್ತಿ ಹೇಳಿದ್ದು ಎಲ್ಲ ದಿಕ್ಕೆಯೂ. ಅವ° ಆಧ್ಯಾತ್ಮಿಕ ಹಾಂಗೂ ಐಹಿಕ ಜಗತ್ತಿನ ಒಳವೂ ಹೆರವೂ ಇದ್ದ°. ಅವ° ಬಹುದೂರಲ್ಲಿದ್ದರೂ (ಕಣ್ಣಿಂದ ಕಾಂಬಲೆ ಎಡಿಗಾಗದ್ದ ದೂರಲ್ಲಿದ್ದರೂ), ಬಹು ಹತ್ರವೇ ಇದ್ದ° ಅಂದರೂ ಐಹಿಕ ಕಲ್ಮಷ ಕಣ್ಣಿಂದ ಅವನ ಕಾಂಬಲೆ ಎಡಿಯ. ನಮ್ಮ ಐಹಿಕ ಇಂದ್ರಿಯಂಗಳಿಂದ ಅವನ ಕಾಂಬದಾಗಲೀ ಅರ್ಥೈಸುವದಾಗಲಿ ಅಸಾಧ್ಯ. ಹಾಂಗಾಗಿ ಅವನ ಕಾಣೇಕ್ಕಾರೆ ಇಂದ್ರಿಯಕಾಮನೆಗಳ ವರ್ಜಿತನಾಗಿರೆಕು ಹೇಳಿ ಹಲವು ದಿಕ್ಕೆ ಹೇಳಿದ್ದದು. ಸಂಪೂರ್ಣ ಕೃಷ್ಣಪ್ರಜ್ಞೆ ಸ್ಥಿತಿಲಿ ಮಾತ್ರ ಅವ ಬಹುದೂರಲ್ಲಿದ್ದರೂ ಹತ್ರಂದಲೇ ಅವನ ಕಾಂಬಲೆ ಎಡಿಗು.

ಇನ್ನು ಇಲ್ಲಿ, ಭೂತ ಹೇಳಿರೆ ಸಮಸ್ತ ಬ್ರಹ್ಮಾಂಡ ಮತ್ತೆ ಸಮಸ್ತ ಜೀವಜಾತ (ಪಿಂಡಾಂಡ). ಭಗವಂತ° ಈ ಬ್ರಹ್ಮಾಂಡ-ಪಿಂಡಾಂಡದ ಒಳವೂ ಹೆರವೂ ವ್ಯಾಪ್ತನಾಗಿದ್ದ°. ಅದನ್ನೇ ನಾರಾಯಣ ಸೂಕ್ತಲ್ಲಿ ಹೇಳಿದ್ದದು – “ಅಂತರ್ಬಹಿಶ್ಚ ತತ್-ಸರ್ವಮ್ ವ್ಯಾಪ್ಯ ನಾರಾಯಣಃ ಸ್ಥಿತಃ” – ಎಲ್ಲವುದರ ಹೆರವೂ ಒಳವೂ  ನಾರಾಯಣ ವ್ಯಾಪ್ತನಾಗಿದ್ದ°. ನಮ್ಮ ಒಳವೂ ಹೆರವೂ ತುಂಬಿ, ಎಲ್ಲವನ್ನೂ ವ್ಯಾಪಿಸಿ ನಿಂದಿಪ್ಪ ಭಗವಂತ° – ‘ನಾರಾಯಣಃ’. ಅತಿ ಕ್ಷುದ್ರ ಜೀವಂದ ಹಿಡುದು ಚತುರ್ಮುಖ ಬ್ರಹ್ಮನ ವರೇಂಗೆ ಪ್ರತಿಯೊಂದರ ಒಳವೂ ಹೆರವೂ ಭಗವಂತ° ತುಂಬಿಗೊಂಡಿದ್ದ°. ನಮ್ಮ ಒಳ ಅಂತರ್ಯಾಮಿಯಾಗಿ ಬಿಂಬರೂಪಲ್ಲಿದ್ದು ನಮ್ಮ ನಡೆಶುತ್ತ° ಮತ್ತೆ ನಮ್ಮ ಹೆರ ನಿಂದು ನಮ್ಮ ಧಾರಣೆ ಮಾಡಿಗೊಂಡಿದ್ದ°. ಜ್ಞಾನಿಗೊಕ್ಕೆ ಅವರ ಅಂತರಂಗಲ್ಲಿ ದರ್ಶನ ಕೊಡುವ ಭಗವಂತ ಅಜ್ಞಾನಿಗೊಕ್ಕೆ ಬಹುದೂರವಾಗಿರ್ತ°. ಸರ್ವಗತನಾದ ಭಗವಂತ° ಅಚಲ°, ಆದರೆ ಅವನ ಅನಂತ ಅನಂತ ರೂಪಂಗೊ ಸದಾ ಚಲಿಸಿಗೊಂಡೇ ಇರುತ್ತು. ಸಮಸ್ತ ಚರಾಚರತ್ಮಕ ಜೀವದ ಒಳ ಹೆರ ಅವನದ್ದೇ ಪ್ರಭಾವ. ಭಗವಂತ° ಜ್ಞೇಯ ಆದರೆ ವಿಜ್ಞೇಯ ಅಲ್ಲ. ಹೇಳಿರೆ, ಭಗವಂತನ ನಾವು ರಜಾ ತಿಳಿವಲೆ ಎಡಿಗು (ಜ್ಞೇಯ) ಆದರೆ ಪೂರ್ಣವಾಗಿ ತಿಳಿವಲೆ ಸಾಧ್ಯ ಇಲ್ಲೆ (ವಿಜ್ಞೇಯ) ಹೇಳಿ ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದು.

ಶ್ಲೋಕ

ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ ।
ಭೂತಭರ್ತೃ ಚ ತಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ ॥೧೬॥

ಪದವಿಭಾಗ

ಅವಿಭಕ್ತಮ್ ಚ ಭೂತೇಷು ವಿಭಕ್ತಮ್ ಇವ ಚ ಸ್ಥಿತಮ್ । ಭೂತ-ಭರ್ತೃ ಚ ತತ್ ಜ್ಞೇಯಮ್ ಗ್ರಸಿಷ್ಣು ಪ್ರಭವಿಷ್ಣು ಚ ॥

ಅನ್ವಯ

ತತ್ ಜ್ಞೇಯಮ್ ಅವಿಭಕ್ತಂ ಚ ಭೂತೇಷು ವಿಭಕ್ತಮ್ ಇವ ಸ್ಥಿತಮ್, ಭೂತ-ಭರ್ತೃ ಚ ಗ್ರಸಿಷ್ಣು ಚ ಪ್ರಭವಿಷ್ಣು ಚ (ಅಸ್ತಿ) ।

ಪ್ರತಿಪದಾರ್ಥ

ತತ್ ಜ್ಞೇಯಮ್ – ಅದರ ತಿಳುಕ್ಕೊಳ್ಳೆಕು, ಅವಿಭಕ್ತಮ್ – ಅವಿಭಜಿತ°, ಚ – ಕೂಡ, ಭೂತೇಷು – ಎಲ್ಲ ಜೀವಜಾತಂಗಳಲ್ಲಿ, ವಿಭಕ್ತಮ್ – ವಿಭಜಿತ°, ಇವ – ಇಪ್ಪಾಂಗೆ, ಚ – ಕೂಡ, ಸ್ಥಿತಮ್ – ನೆಲೆಸಿದ್ದು, ಭೂತ-ಭರ್ತೃ – ಎಲ್ಲ ಜೀವಿಗಳ ಪಾಲಕ°, ಚ – ಕೂಡ, ಗ್ರಸಿಷ್ಣು – ಭಕ್ಷಕ°, ಚ – ಕೂಡ, ಪ್ರಭವಿಷ್ಣು – ವೃದ್ಧಿಕಾರಕ°, ಚ (ಅಸ್ತಿ) – ಕೂಡ (ಆಗಿದ್ದು).

ಅನ್ವಯಾರ್ಥ

ಪರಮಾತ್ಮ ತತ್ವ (ಬ್ರಹ್ಮತತ್ವ)  ಎಲ್ಲ ಜೀವಜಾತಂಗಳಲ್ಲಿ ಅವಿಭಕ್ತನಾಗಿದ್ದರೂ(ಏಕರೂಪ) ವಿಭಜಿತನಾಗಿಪ್ಪಂತೆ (ಬೇರೆಯೇ ಆಗಿಪ್ಪಂತೆ) ಇರುತ್ತು.   ಪ್ರತಿಯೊಂದು ಜೀವಜಾತದ ಪಾಲಕನೂ, ತಿಂದುಹಾಕುವದೂ (ಭಕ್ಷಕ), ಹಾಂಗೇ ಎಲ್ಲವನ್ನೂ ಬೆಳೆಶುವದೂ (ವೃದ್ಧಿಕಾರಕ) ಅದು ಆಗಿದ್ದಾಗಿ ತಿಳುಕ್ಕೊಳ್ಳೆಕು.

ತಾತ್ಪರ್ಯ / ವಿವರಣೆ

ಪರಮಾತ್ಮ ಎಲ್ಲರ ಹೃದಯಲ್ಲಿಯೂ ಇದ್ದ°. ಹಾಂಗಾರೆ ಅವ° ವಿಭಾಗ ಆಗಿದ್ದ ಹೇಳಿ ಅರ್ಥ ಅಲ್ಲ. ವಾಸ್ತವವಾಗಿ ಅವ° ಏಕ°. ಅವ° ಭಾಗವಾಗಿಪ್ಪಂತೆ  (ವಿಭಜಿತನಾಗಿಪ್ಪಂತೆ ಕಂಡರೂ) ಅವಿಭಕ್ತನಾಗಿಯೇ ಇರ್ತ°. ಪ್ರಪಂಚದ ಪ್ರತಿಯೊಂದು ಜೀವಲ್ಲಿಯೂ ಬಿಂಬರೂಪವಾಗಿ ನೆಲೆಸಿದ್ದ°. ಒಂದೊಂದು ಜೀವಲ್ಲಿಯೂ ಅನೇಕ ರೂಪಲ್ಲಿ ಅವ ನೆಲೆಸಿದ್ದ°. ಪ್ರಪಂಚಲ್ಲಿ ಪ್ರತಿಯೊಂದು ಜೀವಿಯೂ ವಿಭಕ್ತರು. ಆದರೆ ಭಗವಂತ° ಮಾಂತ್ರ ಅಖಂಡ (ಅವಿಭಕ್ತ°). ಎಲ್ಲ ಕಡೆ ಇಪ್ಪ ಭಗವಂತ° ಒಬ್ಬನೇ, ಆದರೆ ಬೇರೆ ಬೇರೆ ಇಪ್ಪಾಂಗೆ ನವಗೆ ಕಾಂಬದು ಮಾಂತ್ರ. ಬನ್ನಂಜೆ ಹೇಳ್ತವು – ಇದಕ್ಕೆ ಉತ್ತಮ ಉದಾಹರಣೆ – ಭಗವಂತನ ಅವತಾರವಾದ ಪರಶುರಾಮ, ವೇದವ್ಯಾಸ ಮತ್ತೆ ಶ್ರೀಕೃಷ್ಣ. ಇಲ್ಲಿ ಭಗವಂತ° ಮೂರು ರೂಪಲ್ಲಿ ಏಕಕಾಲಲ್ಲಿ ಕಾಣಿಸಿಗೊಂಡಿದ°. ಒಂದೇ ಆದರೂ ಮೂರಾಗಿ ಅವ° ಕಾಣಿಸಿಗೊಂಡ°. ಭಗವಂತ° / ಪರಮಾತ್ಮ° ಸಮಸ್ತ ಜೀವದೊಳ ಇದ್ದ° ಆದರೆ ಸಮಸ್ತ ಜೀವಂಗಳ ಅವನೇ ಹೊತ್ತುಗೊಂಡಿದ್ದ.  ಎಲ್ಲವುದರ ಸೃಷ್ಟಿಕರ್ತ, ಪಾಲಕ° –  ಭಗವಂತ°, ಹಾಂಗೇ ತನ್ನ ಸೃಷ್ಟಿಯ ಒಂದು ದಿನ ಸಂಹಾರ ಮಾಡುವವನೂ ಅವನೇ. ಸಂಹಾರದ ಮತ್ತೆ ಸೃಷ್ಟಿಯ ಪುನರ್ನಿರ್ಮಾಣ ಮಾಡುವವನೂ ಅವನೇ . ಹಾಂಗಾಗಿ ಇಲ್ಲಿ ಹೇಳಿದ್ದದು – ಭಗವಂತ° “ಭೂತ-ಭರ್ತೃ ಗ್ರಸಿಷ್ಣು ಪ್ರಭವಿಷ್ಣು” – ಪಾಲಕ°, ಸಂಹಾರಕ°, ವೃದ್ಧಿಕಾರಕ°.

ಶ್ಲೋಕ

ಜ್ಯೋತಿಷಾಮ್ ಅಪಿ ತತ್ ಜ್ಯೋತಿಃ ತಮಸಃ ಪರಮ್ ಉಚ್ಯತೇ ।
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ ॥೧೭॥

ಪದವಿಭಾಗ

ಜ್ಯೋತಿಷಾಮ್ ಅಪಿ ತತ್ ಜ್ಯೋತಿಃ ತಮಸಃ ಪರಮ್ ಉಚ್ಯತೇ । ಜ್ಞಾನಮ್ ಜ್ಞೇಯಮ್ ಜ್ಞಾನಗಮ್ಯಮ್ ಹೃದಿ ಸರ್ವಸ್ಯ ವಿಷ್ಠಿತಮ್ ॥

ಅನ್ವಯ

ತತ್ ಜ್ಯೋತಿಷಾಮ್ ಅಪಿ ಜ್ಯೋತಿಃ (ಅಸ್ತಿ), ತಮಸಃ ಪರಮ್ ಉಚ್ಯತೇ, (ತತ್) ಜ್ಞಾನಮ್, ಜ್ಞೇಯಮ್, ಜ್ಞಾನಗಮ್ಯಮ್ (ಅಸ್ತಿ), ಸರ್ವಸ್ಯ ಹೃದಿ ವಿಷ್ಠಿತಮ್ (ಅಸ್ತಿ) ।

ಪ್ರತಿಪದಾರ್ಥ

ತತ್ – ಅದು, ಜ್ಯೋತಿಷಾಮ್ ಅಪಿ – ಎಲ್ಲ ಬೆಳಗುವ ವಸ್ತುಗಳಲ್ಲಿಯೂ ಕೂಡ, ಜ್ಯೋತಿಃ (ಅಸ್ತಿ) – ಬೆಣಚ್ಚಿಯ ಮೂಲ ಆಗಿದ್ದು, ತಮಸಃ ಪರಮ್ –  ಅಂಧಕಾರವ ಮೀರಿದ್ದು, ಉಚ್ಯತೇ – ಹೇಳಲ್ಪಡುತ್ತು, (ತತ್) ಜ್ಞಾನಮ್ – ಆ ಜ್ಞಾನವು, ಜ್ಞೇಯಮ್ – ತಿಳಿಯಲ್ಪಡೇಕ್ಕಾದ್ದು(ಜ್ಞಾನದ ವಸ್ತು), ಜ್ಞಾನಗಮ್ಯಮ್ – ಜ್ಞಾನಂದಸಮೀಪಿಸೆಕಾದ್ದು (ಜ್ಞಾನದ ಗುರಿ), ಸರ್ವಸ್ಯ ಹೃದಿ – ಎಲ್ಲೋರ (ಪ್ರತಿಯೊಬ್ಬರ) ಹೃದಯಲ್ಲಿ, ವಿಷ್ಠಿತಮ್ (ಅಸ್ತಿ) – ನೆಲೆಸಿದ್ದು ಆಗಿದ್ದು.

ಅನ್ವಯಾರ್ಥ

ಅದು (ಪರಮಾತ್ಮ ತತ್ವ) ಎಲ್ಲ ಪ್ರಕಾಶಮಾನ ಪ್ರಕಾಶದ ಮೂಲ, ( ಅದು ಜಡವಸ್ತುವಿನ ತಮಸ್ಸಿಂದಾಚಿಗೆ ಅವ್ಯಕ್ತವಾಗಿದ್ದು) ಕಸ್ತಲೆಯ ಮೀರಿದ್ದು, ಅದು ಜ್ಞಾನ, ಜ್ಞಾನದ ವಸ್ತು, ಮತ್ತು ಜ್ಞಾನದ ಗುರಿ. ಅದು ಎಲ್ಲೋರ ಹೃದಯಲ್ಲಿ ಪ್ರತಿಷ್ಠಿತವಾಗಿದ್ದು.

ತಾತ್ಪರ್ಯ / ವಿವರಣೆ

ದೇವೋತ್ತಮ ಪರಮ ಪುರುಷನಾದ ಪರಮಾತ್ಮ° (ಪರಮಾತ್ಮ ತತ್ವ) / ಭಗವಂತ° ಸೂರ್ಯ, ಚಂದ್ರ, ನಕ್ಷತ್ರಂಗಳಂತಹ ಪ್ರಕಾಶಮಾನ ವಸ್ತುಗಳ ಪ್ರಭೆಯ ಮೂಲ. ಆಧ್ಯಾತ್ಮಿಕ ಜಗತ್ತಿಲ್ಲಿ ಸೂರ್ಯ ಚಂದ್ರಾದಿಗಳ ಅಗತ್ಯವೇ ಇಲ್ಲೆ. ಭಗವಂತನ ಪ್ರಭೆಯೇ ಅಲ್ಲಿದ್ದು.  ಐಹಿಕ ಜಗತ್ತಿಲ್ಲಿ ಭಗವಂತನ ದಿವ್ಯತೇಜಸ್ಸಿನ, ಬ್ರಹ್ಮಜ್ಯೋತಿಯ ‘ಮಹತ್ ತತ್ವವು’ ಹೇಳಿರೆ ಐಹಿಕ ಘಟಕಾಂಶಂಗೊ ಮರೆಮಾಡಿರುತ್ತು. ಹಾಂಗಾಗಿ ಈ ಐಹಿಕ ಜಗತ್ತಿಲ್ಲಿ ಬೆಣಚ್ಚಿಗೆ ಸೂರ್ಯ, ಚಂದ್ರ, ದೀಪ, ವಿದ್ಯುಚ್ಛಕ್ತಿ ಮೊದಲಾದವುಗಳ ನೆರವು ಬೇಕಾಗಿದ್ದು. ಆದರೆ ಆಧ್ಯಾತ್ಮಿಕ ಜಗತ್ತಿಲ್ಲಿ ಇದೇವುದರ ಅಗತ್ಯ ಇಲ್ಲೆ. ಪರಮಾತ್ಮನ ಪ್ರಕಾಶಮಾನ ತೇಜಸ್ಸಿಂದ ಎಲ್ಲವುದರ ಮೇಲೆಯೂ ಬೆಣಚ್ಚಿ ಬೀಳುತ್ತು. ಹಾಂಗಾಗಿ ಅದು ಐಹಿಕ ಜಗತ್ತಿಲ್ಲಿ ನೆಲೆಸಿಲ್ಲೆ, ಅದಿಪ್ಪದು ಆಧ್ಯಾತ್ಮಿಕ ಜಗತ್ತಿಲ್ಲಿ. ಅದು ಆಧ್ಯಾತ್ಮಿಕ ಗಗನಲ್ಲಿ ಬಹುದೂರಲ್ಲಿ ಇಪ್ಪದು. ನಿರಂತರ ಪ್ರಕಾಶಮಾನವಾಗಿಪ್ಪದು. ಈ ಐಹ್ಕ ಜಗತ್ತಿನ ಕತ್ತಲೆಯ (ತಮಸಃ ಪರಂ) ಮೀರಿದ್ದು. ಅದು ದಿವ್ಯಜ್ಞಾನ, ಆಧ್ಯಾತ್ಮಿಕ ಜಗತ್ತಿಂಗೆ ಸೇರ್ಲೆ ಕಾತರನಾಗಿಪ್ಪವಂಗೆ ಜ್ಞಾನದ ವಸ್ತು ಅದು, ಜ್ಞಾನದ ಗುರಿಯೂ ಅದು. ಹಾಂಗಿದ್ದು ಆ ಪರಮಾತ್ಮ ತತ್ವ ಪ್ರತಿಯೊಬ್ಬರ ಹೃದಯಲ್ಲಿಯೂ ಪ್ರತಿಷ್ಠಿತವಾಗಿದ್ದು.

ಬನ್ನಂಜೆ ವಿವರುಸುತ್ತವು – ಭಗವಂತ° ಈ ವರೇಂಗೆ ವಿವರಿಸಿದ ಪರಮಾತ್ಮ ತತ್ವ ವಿಚಾರವ ನಾವು ನಮ್ಮ ಧ್ಯಾನಲ್ಲಿ ಕಾಂಬದು ಕಷ್ಟ. ಅದಕ್ಕೆ ಭಗವಂತ° ಇಲ್ಲಿ ತನ್ನ ಭಾವನಾತ್ಮಕವಾಗಿ ವಿವರುಸುತ್ತ°. ಭಗವಂತ° ಕತ್ತಲೆ ಇಲ್ಲದ್ದ ಬೆಣಚ್ಚು. ಅವನ ಜಗತ್ತಿಲ್ಲಿ (ಆಧ್ಯಾತ್ಮಿಕ ಜಗತ್ತಿಲ್ಲಿ) ಕತ್ತಲು ಹೇಳ್ವದೇ ಇಲ್ಲೆ. ಕತ್ತಲೆಯ ಮೀರಿಪ್ಪದು. ಭಗವಂತನ ಬೆಣಚ್ಚಿ ಹೇಳಿರೆ ಅದಕ್ಕೆ ಅವಧಿ ಇಲ್ಲೆ. ಅದು ಅನಂತ. ಎಲ್ಲ ಪ್ರಕಾಶಂಗೊಕ್ಕೂ ಬೆಣಚ್ಚಿಯ ಕೊಡುವ ಮಹಾಜ್ಞೋತಿ ಭಗವಂತ° – ಜ್ಯೋತಿಷಾಮ್ ಅಪಿ ಜ್ಯೋತಿಃ”. ಭಗವಂತನ ಧ್ಯಾನಲ್ಲಿ ಕಾಣೆಕು ಹೇಳಿ ಕಣ್ಣು ಮುಚ್ಚಿ ಕೂದರೆ ನವಗೆ ನಮ್ಮ ಇಷ್ಟವಾದ ವಸ್ತು ವಾ ವ್ಯಕ್ತಿ ಕಾಂಬದು. ಅಂಬಗ ಆ ವ್ಯಕ್ತಿ/ವಸ್ತುವೊಳ ನಾವು ಭಗವಂತನ ಕಾಂಬಲೆ ಪ್ರಯತ್ನಿಸೆಕು. ಎಂತಕೇಳಿರೆ ಭಗವಂತ° ಸರ್ವಂತರ್ಯಾಮಿ, ಸರ್ವಗತ° – ಎಲ್ಲವುದರ ಒಳವೂ ಹೆರವೂ ತುಂಬಿಗೊಂಡಿಪ್ಪದು ಅವ°. ಮತ್ತೆ ಸೂರ್ಯನಲ್ಲಿ ಭಗವಂತ° ಇದ್ದ, ಸೂರ್ಯನ ಮೂಲಕ ನವಗೆ ಸಿಕ್ಕುವ ಸೌರಶಕ್ತಿ ಭಗವಂತನಿಂದ ಬಪ್ಪದು ಹೇಳ್ವ ತಿಳುವಳಿಕೆ ನವಗೆ ಬೇಕು. ಮತ್ತೆ ಸೌರಮಂಡಲದ ನೆಡುಕೆ ಭಗವಂತನ ಪಾದವ ಕಾಂಬ ಪ್ರಯತ್ನ ಮಾಡೆಕು. ಆ ಪಾದದ ಬೆರಳಿನ ಕೊಡಿಂದ ಚಿಮ್ಮಿದ ಬೆಣಚ್ಚಿ ನಮ್ಮ ಹೃದಯವ ಪ್ರವೇಶಿಸಿ ಬೆಳಗುತ್ತಿಪ್ಪದರ ಧ್ಯಾನಲ್ಲಿ ನಾವು ಅನುಭವುಸೆಕು. ಇದು ಧ್ಯಾನಲ್ಲಿ ಹಂತ ಹಂತವಾಗಿ ಮುನ್ನೆಡೆದು ನಾವು ಭಗವಂತನ ಕಾಂಬ ಪ್ರಕ್ರಿಯೆ. ಭಗವಂತ ಈ ಜಗತ್ತಿಂಗೆ ಎಲ್ಲ ಬೆಣಚ್ಹಿಗೊಕ್ಕೂ ಬೆಣಚ್ಚಿ ಕೊಟ್ಟವ°. ನಮ್ಮ ಅಂತರಂಗವ ಬೆಳಗುಸುವ ಸಾಮರ್ಥ್ಯ ಇಪ್ಪದೂ ಅವಂಗೆ ಒಬ್ಬಂಗೆ. ‘ಭಗವಂತ’/’ಪರಮಾತ್ಮ’ ಹೇಳ್ವ ಬೆಣಚ್ಚಿ ಕಸ್ತಲೆಯ ಮೀರಿದ್ದು. ಅದು ಜ್ಞಾನಾನಂದಸ್ವರೂಪದ ಬೆಣಚ್ಚಿ. ಭಗವಂತನ ಪೂರ್ಣ ತಿಳುದವ° ಭಗವಂತ° ಒಬ್ಬನೆ. ನಾವು ಯಥಾಶಕ್ತಿ ಅವನ ತಿಳಿವಲೆ ಪ್ರಯತ್ನ ಮಾಡೆಕು. ಭಗವಂತ° ಎಲ್ಲೋರ ಹೃದಯಲ್ಲಿ ನೆಲೆಸಿದ್ದ°, ನಮ್ಮ ಹೃದಯಲ್ಲಿಯೂ ನೆಲೆಸಿದ್ದ°, ಅವ ಎಲ್ಲವುದರಿಂದಲೂ ವಿಲಕ್ಷಣನಾಗಿ ನಮ್ಮ ಹೃತ್ಕಮಲ ಮಧ್ಯಲ್ಲಿ ಸೂಕ್ಷ್ಮಂದಲೂ ಸೂಕ್ಷ್ಮವಾಗಿ ನೆಲೆಸಿದ್ದ°. ಇಂತಹ ಭಗವಂತನ ನಾವು ಭಕ್ತಿಪೂರ್ವಕ ಜ್ಞಾನಂದ ಮಾತ್ರ ತಿಳಿವಲೆ ಸಾಧ್ಯ.

ಶ್ಲೋಕ

ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ ।
ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ ॥೧೮॥

ಪದವಿಭಾಗ

ಇತಿ ಕ್ಷೇತ್ರಮ್ ತಥಾ ಜ್ಞಾನಮ್ ಜ್ಞೇಯಮ್ ಚ ಉಕ್ತಮ್ ಸಮಾಸತಃ । ಮತ್-ಭಕ್ತಃ ಏತತ್ ವಿಜ್ಞಾಯ ಮತ್-ಭಾವಾಯ ಉಪಪದ್ಯತೇ ॥

ಅನ್ವಯ

ಇತಿ ಕ್ಷೇತ್ರಮ್, ತಥಾ ಜ್ಞಾನಂ ಜ್ಞೇಯಂ ಚ ಸಮಾಸತಃ ಉಕ್ತಮ್, ಏತತ್ ವಿಜ್ಞಾಯ, ಮತ್-ಭಕ್ತಃ ಮತ್-ಭಾವಾಯ ಉಪಪದ್ಯತೇ ।

ಪ್ರತಿಪದಾರ್ಥ

ಇತಿ – ಹೀಂಗೆ, ಕ್ಷೇತ್ರಮ್ – ಕ್ಷೇತ್ರವ (ದೇಹವ), ತಥಾ – ಹಾಂಗೇ, ಜ್ಞಾನಮ್ – ಜ್ಞಾನವ, ಜ್ಞೇಯಮ್ – ಜ್ಞಾನಕ್ಕೆ ಎಟಕುವುದರ (ಹೇಳಿರೆ – ಜ್ಞೇಯವ), ಚ – ಕೂಡ, ಸಮಾಸತಃ – ಸಂಗ್ರಹವಾಗಿ, ಉಕ್ತಮ್ – ಹೇಳಿದ್ದಾತು, ಏತತ್ ವಿಜ್ಞಾಯ – ಇದರ ಪೂರ್ಣವಾಗಿ ಅರ್ತು, ಮತ್-ಭಕ್ತಃ – ಎನ್ನ ಭಕ್ತ°, ಮತ್-ಭಾವಾಯ – ಎನ್ನ ಸ್ವಭಾವವ, ಉಪಪದ್ಯತೇ – ಹೊಂದುತ್ತ°.

ಅನ್ವಯಾರ್ಥ

ಹೀಂಗೆ (ಈ ರೀತಿಯಾಗಿ) ದೇಹ (ಕ್ಷೇತ್ರ), ಜ್ಞಾನ, ಜ್ಞಾನಕ್ಕೆ ಸಿಕ್ಕುತ್ತರ (ಜ್ಞೇಯವ) ಸಂಗ್ರಹವಾಗಿ ಹೇಳಿದ್ದಾತು. ಇದರ ಸಂಪೂರ್ಣವಾಗಿ ತಿಳುದು / ಅರ್ಥಮಾಡಿಗೊಂಡು ಎನ್ನ ಭಕ್ತ ಎನ್ನ ಸ್ವಭಾವವ ಪಡೆತ್ತ°.

ತಾತ್ಪರ್ಯ / ವಿವರಣೆ

ಈ ಅಧ್ಯಾಯಲ್ಲಿ ಈ ವರೇಂಗೆ ಹೇಳಿದ್ದರ ಉಪಸಂಹಾರ ಮಾಡಿಗೊಂಡು ಭಗವಂತ° ಹೇಳುತ್ತ° – ಈ ವರೇಂಗೆ  (ಇಲ್ಲಿವರೇಂಗೆ / ಹೀಂಗೆ) ಕ್ಷೇತ್ರದ (ದೇಹದ) ಬಗ್ಗೆ, ಜ್ಞಾನಸಾಧನದ ಬಗ್ಗೆ , ಈ ಜ್ಞಾನಸಾಧನೆಂದ ತಿಳುಕ್ಕೊಳ್ಳೆಕ್ಕಾದ್ದರ (ಭಗವಂತನ) ಬಗ್ಗೆ ಅಡಕವಾಗಿ / ಸಂಕ್ಷೇಪವಾಗಿ / ಸಂಗ್ರಹವಾಗಿ ಹೇಳಿದ್ದಾತು. ಸೃಷ್ಟಿ, ಸೃಷ್ಟಿಯಾದ ಪ್ರಪಂಚ, ಪ್ರಪಂಚ ಸೃಷ್ಟಿಯ ಬಗೆ, ಸ್ರಷ್ಟಾರನಾದ ಭಗವಂತನ ಬಗ್ಗೆ – ಇದರ ತಿಳುದರೆ ಮತ್ತೆ ತಿಳಿಯೇಕ್ಕಾದ್ದು ಏನೂ ಉಳಿತ್ತಿಲ್ಲೆ. ಪೂರ್ಣ ನಂಬಿಕೆಂದ, ಪೂರ್ಣ ಭಕ್ತಿಂದ, ಇದರ ಅರ್ತು ಸಾಧನೆಯ ಮೂಲಕ ಮುಂದುವರಿವ ಸಾಧಕ ಭಗವಂತನ ಸೇರುತ್ತ°. ಅದನ್ನೇ ಭಗವಂತ° ಹೇಳಿದ್ದದು – “ಮತ್-ಭಾವಾಯ ಉಪಪದ್ಯತೇ” – ‘ಎನ್ನ ಸ್ವಬಾವವ ಪಡೆತ್ತ°’ – ಅರ್ಥಾತ್ ಅವನ (ಭಗವಂತನ) ಸೇರುತ್ತ°.

ಹೀಂಗೆ ಭಗವಂತನ ಬಗ್ಗೆ ಜ್ಞಾನ ಮತ್ತೆ ಭಕ್ತಿ ನಮ್ಮ ಮೋಕ್ಷದತ್ತ ಕೊಂಡೋವುತ್ತು.

ಒಟ್ಟಿಲ್ಲಿ ಹೇಳ್ತದಾದರೆ ಕ್ಷೇತ್ರಜ್ಞ°, ಜ್ಞೇಯ ಮತ್ತೆ ಜ್ಞಾನದ ಪ್ರಕ್ರಿಯೆ – ಈ ಮೂರನ್ನೂ ಸೇರ್ಸಿ ಆಧ್ಯಾತ್ಮಿಕ ‘ವಿಜ್ಞಾನ’ ಹೇದು ಹೇಳುವದು. ಭಗವಂತನ ಪರಿಶುದ್ಧರಿಂದ ಮಾತ್ರ ಇದರ ಅರ್ಥಮಾಡಿಗೊಂಬಲೆ ಸಾಧ್ಯ. ಇದಕ್ಕೆ ನಾವು ನಮ್ಮ ಸಂಪೂರ್ಣ ಕೃಷ್ಣಪ್ರಜ್ಞೆ ಸ್ಥಿತಿಲಿ ಅಣಿಗೊಣಿಸಿಗೊಂಬದು ಅತೀ ಅಗತ್ಯ.  ಸಂಗ್ರಹವಾಗಿ ಹೇಳುತ್ತದಾದರೆ, ಮಹಾಭೂತಾನ್ಯಹಂಕಾರೋ..” ಹೇಳ್ವ ಈ ಅಧ್ಯಾಯದ ಐದನೇ ಶ್ಲೋಕಂದ “..ಚೇತನಾ ಧೃತಿಃ” ಹೇಳ್ವ ಆರನೇ ಶ್ಲೋಕಂಗಳಲ್ಲಿ  ಐಹಿಕ ಮೂಲ ಘಟಕಂಗಳ, ಬದುಕ್ಕಿನ ಲಕ್ಷಣಂಗಳ ಕೆಲವು ಅಭಿವ್ಯಕ್ತಿಯ ವಿಶ್ಲೇಷಣೆ ಮಾಡಿದ್ದು. ಇವು ಒಂದುಗೂಡಿ ‘ದೇಹ’ ಅಥವಾ ‘ಕ್ಷೇತ್ರ’ ಆವ್ತು. ಏಳ್ನೇ ಶ್ಲೋಕ ಅಮಾನಿತ್ವಮ್ದ ತೊಡಗಿ ಹನ್ನೊಂದನೇ ಶ್ಲೋಕ “.. ತತ್ವಜ್ಞಾನಾರ್ಥ ದರ್ಶನಮ್” ಶ್ಲೋಕಂಗಳಲ್ಲಿ ಎರಡು ಬಗೆ ಕ್ಷೇತ್ರಜ್ಞರ ಅರ್ಥಮಾಡಿಗೊಂಬ ಪ್ರಕ್ರಿಯೆಯ ಹೇಳಿದ್ದು. ‘ಆತ್ಮ’ ಮತ್ತೆ ‘ಪರಮಾತ್ಮ’ ಈ ಕ್ಷೇತ್ರಜ್ಞರು. ಹನ್ನರಡ್ನೇ ಶ್ಲೋಕ “ಅನಾದಿಮತ್ ಪರಮ್.. ಎಂಬಲ್ಲಿಂದ ಹದಿನೇಳ್ನೇ ಶ್ಲೋಕ ಅಕೇರಿಗೆ ” ..ಹೃದಿ ಸರ್ವಸ್ಯ ವಿಷ್ಠಿತಮ್” – ಇಲ್ಲಿವರೇಂಗೆ ‘ಆತ್ಮ’ ಮತ್ತೆ ‘ಪರಮಾತ್ಮ’ ದ ಬಗ್ಗೆ ವರ್ಣಿಸುತ್ತು. ಹೀಂಗೆ ಇಲ್ಲಿ ಮೂರು ಅಂಶಂಗೊ ವರ್ಣಿಸಲ್ಪಟ್ಟಿದು – ಕ್ಷೇತ್ರ (ದೇಹ), ಜ್ಞಾನದ ಪ್ರಕ್ರಿಯೆ ಮತ್ತೆ ಆತ್ಮ-ಪರಮಾತ್ಮ. ಭಗವಂತನ ಪರಿಶುದ್ಧ ಭಕ್ತರು, ಸಂಪೂರ್ಣ ಕೃಷ್ಣಪ್ರಜ್ಞೆಯ ಸ್ಥಿತಿಯ ಹೊಂದಿದವು ಮಾಂತ್ರ ಈ ಅಂಶಂಗಳ ಸ್ಪಷ್ಟವಾಗಿ ಅರ್ಥಮಾಡಿಗೊಂಬಲೆ ಸಾಧ್ಯರು ಹೇದು ಅಕೇರಿಗೆ ಈ ವಿಷಯವ ಭಗವಂತ° ಉಪಸಂಹಾರ ಮಾಡುತ್ತ°.  ಹೇಳಿರೆ ಭಗವಂತನಲ್ಲಿ ಸಂಪೂರ್ಣ ನಂಬಿಕೆ ಇರಿಸಿ, ಅವನ ಭಕ್ತಿಸೇವೆಲಿ ನಿರತನಾದವಂಗೆ ಮಾಂತ್ರ ಈ ವಿಚಾರಂಗೊ ಮನದಾಳಲ್ಲಿ ತಿಳುವಳಿಕೆಗೆ ಬಕ್ಕಷ್ಟೆ. ಅಲ್ಲದ್ದೋರಿಂಗೆ ಇದು ಪಥ್ಯವೂ ಆಗ, ಜೀರ್ಣವೂ ಆಗ.

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

   …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 13 – SHLOKAS 12 – 18
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೋಳ್ಯೂರು ಕಿರಣ

  ಭಾರೀ ಲಾಯ್ಕಾಯ್ದು..ನಮ್ಮ ಭಾಷೆಲಿ ಇಷ್ಟು ಚಂದಕ್ಕೆ ಅರ್ಥ ಹೇಳುದು ಓದಿ ಭಯಂಕರ ಇಷ್ಟ ಆತು ಭಾವಾ. ಸುಲಭಲ್ಲಿ ಅರ್ಥಪ್ಪಾಂಗೆ ಬಿಡುಶಿ ಬಿಡುಶಿ ಬರದ ನಿಂಗಳ ಬರಹಕ್ಕೆ ನಿಂಗೊಗೆ ನಮಸ್ಕಾರ.

  ಮುಂದಿನ ಸಂಚಿಕೆಗೆ ಕಾಯ್ತಾ ಇರ್ತೆಯ.

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಚೆನ್ನೈ ಬಾವ,
  ಹರೇ ರಾಮ;ಭಕ್ತಿಯ ಕುರಿತು ಓದಿಯಪ್ಪಗ,“ ಪ್ರೀತೋಸ್ತು ಕೃಷ್ಣ ಪ್ರಭುಃ “ಹೇಳುವ ಆಚಾರ್ಯ ಮಧ್ವರ ಮಾತು ನೆ೦ಪಾತು. ಆತ್ಮ-ಪರಮಾತ್ಮನ ವಿವರಣೆಯ೦ತೂ ಬಾರಿ ಲಾಯಿಕಕೆ ಬಯಿ೦ದು.ನಮೋನ್ನಮಃ ಬಾವ.ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: +1 (from 1 vote)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಏವ ಜ್ಞಾನವ ತಿಳಿಯೇಕ್ಕಾಗಿದ್ದೋ, ಏವುದರ ತಿಳುದು ಜೀವವು ಅಮೃತತ್ವದ ಸವಿಯ ಆಸ್ವಾದುಸುತ್ತೋ (ಮುಕ್ತಿ ಪಡೆತ್ತೋ), ಅದರ (ಆ ಜ್ಞಾನವ) ನಿನಗೆ ಆನಿಲ್ಲಿ ವಿವರುಸುತ್ತೆ.-ಭಗವಂತನಲ್ಲಿ ಸಂಪೂರ್ಣ ಶರಣಾಗಿಯೊಂದೇ ಅವನ ತಿಳಿವಲೆ ಇಪ್ಪ ದಾರಿ. ಒಂದರಿ ಅದರ ತಿಳ್ಕೊಂಡರೆ ಅವನಷ್ಟು ಶ್ರೇಷ್ಠರು ಮತ್ತಾರೂ ಇಲ್ಲೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಸುವರ್ಣಿನೀ ಕೊಣಲೆಪೆಂಗಣ್ಣ°ಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕವಿದ್ವಾನಣ್ಣಕೇಜಿಮಾವ°ದೊಡ್ಡಮಾವ°ವೇಣೂರಣ್ಣಡಾಗುಟ್ರಕ್ಕ°ಶರ್ಮಪ್ಪಚ್ಚಿಮಾಲಕ್ಕ°ಗೋಪಾಲಣ್ಣಉಡುಪುಮೂಲೆ ಅಪ್ಪಚ್ಚಿಬೊಳುಂಬು ಮಾವ°ನೀರ್ಕಜೆ ಮಹೇಶಶ್ರೀಅಕ್ಕ°ಅನು ಉಡುಪುಮೂಲೆಯೇನಂಕೂಡ್ಳು ಅಣ್ಣತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಮುಳಿಯ ಭಾವಡಾಮಹೇಶಣ್ಣಚುಬ್ಬಣ್ಣಅನಿತಾ ನರೇಶ್, ಮಂಚಿಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ