Oppanna.com

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 51 – 60

ಬರದೋರು :   ಚೆನ್ನೈ ಬಾವ°    on   12/04/2012    8 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್ ॥೫೧॥

ಪದವಿಭಾಗ

ಕರ್ಮಜಮ್ ಬುದ್ಧಿ-ಯುಕ್ತಾಃ ಹಿ ಫಲಮ್ ತ್ಯಕ್ತ್ವಾ ಮನೀಷಿಣಃ । ಜನ್ಮ-ಬಂಧ-ವಿನಿರ್ಮುಕ್ತಾಃ ಪದಮ್ ಗಚ್ಛಂತಿ ಅನಾಮಯಮ್ ॥

ಅನ್ವಯ

ಬುದ್ಧಿ-ಯುಕ್ತಾಃ ಮನೀಷಿಣಃ ಕರ್ಮಜಂ ಫಲಂ ತ್ಯಕ್ತ್ವಾ ಜನ್ಮ-ಬಂಧ-ವಿನಿರ್ಮುಕ್ತಾಃ ಅನಾಮಯಂ ಪದಂ ಗಚ್ಛಂತಿ ಹಿ ।

ಪ್ರತಿಪದಾರ್ಥ

ಬುದ್ಧಿ-ಯುಕ್ತಾಃ – ಭಕ್ತಿಸೇವೆಲಿ ತೊಡಗಿದ, ಮನೀಷಿಣಃ – ಮಹರ್ಷಿಗೊ ವಾ ಭಕ್ತರು, ಕರ್ಮಜಮ್ – ಕಾಮ್ಯಕರ್ಮಂಗಳಿಂದ ಉಂಟಾದ, ಫಲಮ್ – ಫಲಂಗಳ, ತ್ಯಕ್ತ್ವಾ – ತ್ಯಜಿಸಿ, ಜನ್ಮ-ಬಂಧ-ವಿನಿರ್ಮುಕ್ತಾಃ  – ಜನನ ಮತ್ತು ಮರಣ ಬಂಧನಂದ ಮುಕ್ತರಾಗಿ, ಅನಾಮಯಮ್ – ಕ್ಲೇಶರಹಿತವಾದ, ಪದಮ್ – ಸ್ಥಾನವ, ಗಚ್ಛಂತಿ – ತಲಪುತ್ತವು/ಹೋವುತ್ತವು,  ಹಿ – ನಿಶ್ಚಿತವಾಗಿಯೂ.

ಅನ್ವಯಾರ್ಥ

ಭಕ್ತಿಸೇವೆಲಿ ನಿರತರಾಗಿ ಮಹರ್ಷಿಗೊ ಅಥವಾ ಭಕ್ತರು ಐಹಿಕ ಜಗತ್ತಿಲ್ಲಿ ಕರ್ಮಫಲಂದ ಮುಕ್ತರಾವುತ್ತವು. ಹೀಂಗೆ ಅವು ಹುಟ್ಟುಸಾವುಗಳ ಚಕ್ರಂದ ಬಿಡುಗಡೆ ಹೊಂದುತ್ತವು ಮತ್ತು ಕ್ಲೇಶರಹಿತರಾಗಿ ಎಲ್ಲಾ ದುಃಖಂಗಳನ್ನೂ ಮೀರಿದ ಸ್ಥಾನವ ಪಡೆತ್ತವು.

ತಾತ್ಪರ್ಯ / ವಿವರಣೆ

ನಿಜವಾದ ಮಹರ್ಷಿಗೊ ವಾ ಭಕ್ತರು ಮನಸ್ಸಿನ ತಾವೇ ನಿಯಂತ್ರಿಸಿಗೊಂಬ ಜಿತೇಂದ್ರಿಯಂಗೊ. ಆತ್ಮಸಂಯಮ ಇಪ್ಪ ಜ್ಞಾನದ ಮಾರ್ಗಲ್ಲಿ ಸಾಗಿ ಆ ಅರಿವ ಪಡೆತ್ತವು. ಬುದ್ಧಿವಂತರಾದ ಜ್ಞಾನಿಗೊ ಕರ್ಮಂದ ಬರತಕ್ಕಂತಹ ಫಲದ ಮೋಹವ ಬಿಟ್ಟು ಅದರ ಭಗವಂತಂಗೆ ಅರ್ಪುಸುತ್ತವು. ಹೀಂಗೆ ಆರು ಕರ್ಮಫಲವ ಭಗವಂತಂಗೆ ಅರ್ಪಣ ಬುದ್ಧಿಂದ ತ್ಯಾಗ ಮಾಡಿ ನಿರ್ವಂಚನೆಂದ ಕರ್ಮ ಮಾಡುತ್ತವೋ, ಅವು ಕರ್ಮ ಮಾಡಿದರೂ ಕರ್ಮಬಂಧನಕ್ಕೊಳಪಡದೆ, ಎಲ್ಲಾ ಬಂಧನಂಗಳ ಕಳಚಿ. ದೋಷರಹಿತವಾದ ಮೋಕ್ಷವ ಪಡೆತ್ತವು. ಆದ್ದರಿಂದ ಕರ್ತವ್ಯ ಕರ್ಮವ ಭಗವಂತನ ಆರಾಧನೆ ಹೇಳಿ ಮಾಡಿ ಮೋಕ್ಷ ಪಡೆಯೇಕು ಹೊರತು ಆನು ಜ್ಞಾನಿ, ಆನೆಂತದೂ ಮಾಡುತ್ತಿಲ್ಲೆ ಹೇಳ್ವ ಧೋರಣೆ ಸರಿಯಲ್ಲ.

ಶ್ಲೋಕ

ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥೫೨॥

ಪದವಿಭಾಗ

ಯದಾ ತೇ ಮೋಹ-ಕಲಿಲಮ್ ಬುದ್ಧಿಃ ವ್ಯತಿತರಿಷ್ಯತಿ । ತದಾ ಗಂತಾಸಿ ನಿರ್ವೇದಮ್ ಶ್ತೋತವ್ಯಸ್ಯ ಶ್ರುತಸ್ಯ ಚ ॥

ಅನ್ವಯ

ಯದಾ ತೇ ಮೋಹ-ಕಲಿಲಂ ಬುದ್ಧಿಃ ವ್ಯತಿತರಿಷ್ಯತಿ, ತದಾ ಶ್ರೋತವ್ಯಸ್ಯ ಶ್ರುತಸ್ಯ ಚ ನಿರ್ವೇದಂ ಗಂತಾಸಿ ॥

ಪ್ರತಿಪದಾರ್ಥ

ಯದಾ – ಏವಾಗ, ತೇ – ನಿನ್ನ , ಮೋಹ-ಕಲಿಲಮ್  – ಭ್ರಮೆಯ ಗೊಂಡಾರಣ್ಯವ, ಬುದ್ಧಿಃ – ಬುದ್ಧಿಯುಕ್ತ ದಿವ್ಯಸೇವೆಯು, ವ್ಯತಿತರಿಷ್ಯತಿ – ದಾಂಟುತ್ತೋ, ತದಾ  – ಅಂಬಗ,  ಶ್ರೋತವ್ಯಸ್ಯ – ಕೇಳೆಕ್ಕಾದುದರೆಲ್ಲದರ ಬಗ್ಗೆ, ಶ್ರುತಸ್ಯ – ಈಗಾಗಲೇ ಕೇಳಿದವುಗಳೆಲ್ಲದರ ಬಗ್ಗೆ, ಚ – ಕೂಡ, ನಿರ್ವೇದಮ್ – ಉಪೇಕ್ಷೆಯ/ನಿರ್ಲಕ್ಷ್ಯೆ, ಗಂತಾಸಿ – ನೀನು ಹೋವ್ತೆ.

ಅನ್ವಯಾರ್ಥ

ನಿನ್ನ ಬುದ್ಧಿಯು ಭ್ರಾಂತಿಯ ದಟ್ಟವಾದ ಕಾಡಿಂದ ಹೆರಬಂದನಂತರ ನೀನು ಈ ಹಿಂದೆ ಕೇಳಿಪ್ಪದಲ್ಲದಕ್ಕೆ ಮತ್ತೆ ಮುಂದೆ ಕೇಳಲಿಪ್ಪದಲ್ಲದಕ್ಕೆ ನಿರ್ಲಕ್ಷ್ಯವ ತೋರುವೆ.

ತಾತ್ಪರ್ಯ / ವಿವರಣೆ

ಏವಾಗ ನಾವು ಓದಿದ್ದು ಕೇಳಿದ್ದು ಸಾರ್ಥಕ ಆವ್ತು? ನಮ್ಮ ಬುದ್ಧಿ ಎಷ್ತು ಕೇಳಿದರೂ ಕೂಡ ಪುನಃ ಪುನಃ ಗೊಂದಲಲ್ಲಿಯೇ ಇದ್ದರೆ ಎಷ್ಟು ಕೇಳಿಯೂ ಉಪಯೋಗವಿಲ್ಲೆ. ಓದುವದರಿಂದ, ಕೇಳುವದರಿಂದ ನಮ್ಮ ಮನಸ್ಸಿನ ಕೊಳೆ ತೊಳದು ಹೋಗಿ ಮನಸ್ಸು ತಿಳಿಯಾಯೇಕು. ಇಂತಹ ಮನಸ್ಸಿಂಗೆ ದುಗುಡ, ಆತಂಕ ಇರ್ತಿಲ್ಲೆ. ಈ ಸ್ಥಿತಿಲಿ ಕೋಪವೂ ಸಲ್ಲ. ಇಂತಹ ರಾಗ-ದ್ವೇಷ ರಹಿತವಾದ, ಎಂತಹ ಸಂದರ್ಭಲ್ಲಿಯೂ ಸಮತೋಲನ ಕಳಕ್ಕೊಳ್ಳದ ಮನಸ್ಸು ಬಂದಪ್ಪಗ ಓದಿದ್ದು, ಕೇಳಿದ್ದು ಸಾರ್ಥಕ ಆವ್ತು. ಇಂತಹ ಸ್ಥಿತಿಲಿ ಹಿಂದೆ ಕೇಳಿದ ಮತ್ತು ಮುಂದೆ ಕೇಳುವ ಉಪದೇಶ ಪೂರ್ತಿ ಫಲವ ಕೊಡುತ್ತು.

ಶ್ಲೋಕ

ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ ।
ಸಮಾಧಾವಚಲಾ ಬುದ್ಧಿಃ ತದಾ ಯೋಗಮವಾಪ್ಸ್ಯಸಿ ॥೫೩॥

ಪದವಿಭಾಗ

ಶ್ರುತಿ-ವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ । ಸಮಾಧೌ ಅಚಲಾ ಬುದ್ಧಿಃ ತದಾ ಯೋಗಮ್ ಅವಾಪ್ಸ್ಯಸಿ॥

ಅನ್ವಯ

ಯದಾ ಶ್ರುತಿ-ವಿಪ್ರತಿಪನ್ನಾ ತೇ ಬುದ್ಧಿಃ ನಿಶ್ಚಲಾ ಭೂತ್ವಾ ಸಮಾಧೌ ಅಚಲಾ ಸ್ಥಾಸ್ಯತಿ, ತದಾ ಯೋಗಮ್ ಅವಾಪ್ಸ್ಯಸಿ ।

ಪ್ರತಿಪದಾರ್ಥ

ಶ್ರುತಿ-ವಿಪ್ರತಿಪನ್ನಾ  – ವೇದಂಗಳ ದರ್ಶನದ ಕಾಮ್ಯಕರ್ಮ ಫಲಂಗಳಿಂದ ಪ್ರಭಾವಿತವಾಗದೆ, ತೇ – ನಿನ್ನ , ಯದಾ – ಏವಾಗ, ಬುದ್ಧಿಃ – ಬುದ್ಧಿಯು,  ನಿಶ್ಚಲಾ – ಅಚಲವಾಗಿ, ಸಮಾಧೌ – ದಿವ್ಯಪ್ರಜ್ಞೆಲಿ ಅಥವಾ ಕೃಷ್ಣಪ್ರಜ್ಞೆಲಿ, ಅಚಲಾ – ನಿಶ್ಚಲಾ – ನಿಶ್ಚಲವಾಗಿ, ಸ್ಥಾಸ್ಯತಿ – ಉಳಿತ್ತೋ, ತದಾ – ಅಂಬಗ, ಯೋಗಮ್ – ಆತ್ಮಸಾಕ್ಷಾತ್ಕಾರವ, ಅವಾಪ್ಸ್ಯಸಿ – ಹೊಂದುತ್ತೆ.

ಅನ್ವಯಾರ್ಥ

ವೇದಂಗಳ ಆಲಂಕಾರಿಕ ಭಾಷೆಯು ನಿನ್ನ ಮನಸ್ಸ ಕಲುಕದೆ ಇಪ್ಪಗ, ಮನಸ್ಸು ಸಮಾಧಿಲಿ ನಿಶ್ಚಲವಾಗಿಪ್ಪಗ ನೀನು ದಿವ್ಯಪ್ರಜ್ಞೆಯ ಪಡೆತ್ತೆ.

ತಾತ್ಪರ್ಯ / ವಿವರಣೆ

ಮನುಷ್ಯ° ಸಮಾಧಿಯಲ್ಲಿದ್ದ ಹೇಳಿರೆ ಅವ° ಕೃಷ್ಣಪ್ರಜ್ಞೆಯ ಸಂಪೂರ್ಣವಾಗಿ ಸಾಕ್ಷಾತ್ಕರಿಸಿಗೊಂಡಿದ ಹೇಳಿ ಅರ್ಥ. ಅರ್ಥಾತ್, ಪೂರ್ಣ ಸಮಾಧಿಸ್ಥಿತಿಲಿಪ್ಪವ° ಬ್ರಹ್ಮನ್, ಪರಮಾತ್ಮ° ಮತ್ತು ಭಗವಂತನ ಸಾಕ್ಷಾತ್ಕಾರವ ಮಾಡಿಕೊಂಡಿದ್ದ°. ಆತ್ಮಸಾಕ್ಷಾತ್ಕಾರದ ಅತ್ಯುನ್ನತ ಪರಿಪೂರ್ಣತೆ ಹೇಳಿರೆ ತಾನು ಎಂದೆಂದೂ ಕೃಷ್ಣನ ಸೇವಕ°, ಕೃಷ್ಣಪ್ರಜ್ಞೆಲಿ ಕರ್ತವ್ಯನಿಷ್ಠನಾಗಿಪ್ಪದಷ್ಟೇ ತನ್ನ ಏಕೈಕ ಕೆಲಸ ಎಂಬುದರ ಅರ್ಥಮಾಡಿಕೊಂಬದು. ಭಗವಂತನ ಅಚಲಭಕ್ತನಾಗಿ ಕೃಷ್ಣಪ್ರಜ್ಞೆ ಇಪ್ಪ ಮನಸ್ಸು ವೇದಂಗಳ ಆಲಂಕಾರಿಕ ಭಾಷೆಂದ ಕಲಕಿಹೋಪಲಾಗ. ಆತ° ಸ್ವರ್ಗವ ಪಡೆವದಕ್ಕೆ ಫಲಾಪೇಕ್ಷೆ ಇಪ್ಪ ಕರ್ಮವ ಮಾಡ್ಳಾಗ. ಕೃಷ್ಣಪ್ರಜ್ಞೆಲಿ ಮನುಷ್ಯ° ಕೃಷ್ಣನತ್ರೆ ನೇರವಾದ ಸಂಪರ್ಕವ ಪಡೆತ್ತ°. ಆದ್ದರಿಂದ ಆ ಅಲೌಕಿಕ ಸ್ಥಿತಿಲಿ ಕೃಷ್ಣನಿಂದ ಬಪ್ಪ ಎಲ್ಲ ಅದೇಶಂಗಳೂ ಅರ್ಥವಾವ್ತು. ಇಂತಹ ಚಟುವಟಿಕೆಗಳಿಂದ ಮನುಷ್ಯ° ನಿಶ್ಚಯವಾಗಿ ಫಲವ ಪಡೆತ್ತ° ಮತ್ತು ಪರಿಪೂರ್ಣ ಜ್ಞಾನವ ಪಡೆತ್ತ°. ಇದಕ್ಕೆ ಕೃಷ್ಣನ ಪ್ರತಿನಿಧಿಯಾದ ಗುರುವಿನ ಅಪ್ಪಣೆಗಳ ಪಾಲುಸೆಕು.

ಬನ್ನಂಜೆ ವಿವರುಸುತ್ತವು – ಇಲ್ಲಿ ವಿಪ್ರತಿಹನ್ನಾ ಹೇಳಿರೆ ಅಭಿಪ್ರಾಯಭೇದ. ಮದಾಲು ಶ್ರುತಿ (ಶ್ರವಣ)ಗಳಿಂದ ಗೊಂದಲ ಎನಿಸುತ್ತು. ನಂತರ ಅಲ್ಲಿಂದ ವೇದಕ್ಕೆ ಹೋದಪ್ಪಗ – ವೇದಲ್ಲಿ ಹೇಳಿದ ಸಂಗತಿಗೊಕ್ಕೆ ಮನಸ್ಸು ವಿರುದ್ಧವಾಗಿ ಯೋಚಿಸುತ್ತು. ಆದರೆ, ಒಂದರಿ ಮನಸ್ಸು ತಿಳಿ ಅಪ್ಪದ್ದೆ, ಶ್ರುತಿಲಿ ಹೇಳಿದ ತ್ರಿಗುಣಾತೀತ ತತ್ವಲ್ಲಿ ಮನಸ್ಸು ಗಟ್ಟಿಯಾವ್ತು. ಮೊದಲು ತ್ರೈಗುಣ್ಯ ವಿಷಯವಾಗಿದ್ದು ನಂತರ ತ್ರೈಗುಣ್ಯದ ವಿಷವ ಪರಿಹರಿಸುವಂತಾವುತ್ತು (ಪಾಪಯತಿ). ಒಂದರಿ, ಮನಸ್ಸು ನಿರ್ಮಲವಾದಪ್ಪಗ ಅದು ವೇದಕ್ಕೆ ಶ್ರುತಿಗೂಡುತ್ತು (tune). ಆದ್ದರಿಂದಾಗಿ, ವೇದಲ್ಲಿ ಹೇಳಿಪ್ಪ ವಿಚಾರ ಮತ್ತು ನಮ್ಮ ಯೋಚನೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲೆ. ಮನಸ್ಸು ವೈದಿಕ ವಾಙ್ಮಯಲ್ಲಿ ನೆಲೆ ನಿಲ್ಲುತ್ತು. ಈ ಸ್ಥಿತಿಲಿ ಧ್ಯಾನ  (meditation)  ಮಾಡಿರೆ ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತು. ಇದಕ್ಕೂ ಮುಂದೆ ಹೋಗಿ ನಿಶ್ಚಲ ಸಮಾಧಿ ಸ್ಥಿತಿಲಿ, ಸ್ವರೂಪ ಚಿಂತನೆ ಮಾಡಿಯಪ್ಪಗ ಭಗವಂತನ ನಿಜವಾದ ರೂಪ ಸಾಕ್ಷಾತ್ಕಾರ ಆವುತ್ತು. ಈ ಸ್ಥಿತಿಲಿ ಮನಸ್ಸು ಕೆಲಸ ಮಾಡುತ್ತಿಲ್ಲೆ. ಆತ್ಮ ಕೆಲಸ ಮಾಡುತ್ತಿರುತ್ತು. ಆತ್ಮದ ಕಣ್ಣಿಂದ ಭಗವಂತನ ಸಾಕ್ಷಾತ್ಕಾರ ಆವುತ್ತು. ಇದು ಸಾಧನೆಯ ಪೂರ್ಣ ಫಲ.

ಶ್ಲೋಕ

ಅರ್ಜುನ ಉವಾಚ –
ಸ್ಥಿತಪ್ರಜ್ಯಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ ॥೫೪॥

ಪದವಿಭಾಗ

ಅರ್ಜುನಃ ಉವಾಚ – ಸ್ಥಿತಪ್ರಜ್ಯಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ । ಸ್ಥಿತಧೀಃ ಕಿಮ್ ಪ್ರಭಾಷೇತ ಕಿಮ್ ಅಸೀತ ವ್ರಜೇತ ಕಿಮ್ ॥

ಅನ್ವಯ

ಅರ್ಜುನಃ ಉವಾಚ – ಹೇ ಕೇಶವ!, ಸಮಾಧಿಸ್ಥಸ್ಯ ಸ್ಥಿತಪ್ರಜ್ಞಸ್ಯ ಕಾ ಭಾಷಾ ? ಸ್ಥಿತಧೀಃ ಕಿಂ ಪ್ರಭಾಷೇತ ? ಕಿಮ್ ಆಸೀತ ? ಕಿಮ್ ವ್ರಜೇತ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಕೇಶವ! – ಏ ಕೇಶವನೇ , ಸಮಾಧಿಸ್ಥಸ್ಯ – ಸಮಾಧಿಯಲ್ಲಿಪ್ಪವವನ, ಸ್ಥಿತಪ್ರಜ್ಞಸ್ಯ – ಸ್ಥಿರವಾದ ಕೃಷ್ಣಪ್ರಜ್ಞೆಲಿ ನೆಲೆಸಿಪ್ಪವವನ, ಕಾ – ಎಂತರ, ಭಾಷಾ – ಭಾಷೆಯು,   ಸ್ಥಿತಧೀಃ – ಕೃಷ್ಣಪ್ರಜ್ಞೆಲಿ ಸ್ಥಿರವಾಗಿಪ್ಪವವ, ಕಿಮ್ – ಎಂತರ, ಪ್ರಭಾಷೇತ – ಮಾತಾಡುತ್ತ°, ಕಿಮ್ – ಎಂತರ, ಅಸೀತ – ಕೂದುಕೊಂಡಿರುತ್ತ, ಕಿಮ್ – ಎಂತರ, ವ್ರಜೇತ – ನಡೆತ್ತ°(ವರ್ತುಸುತ್ತ°).

ಅನ್ವಯಾರ್ಥ

ಅರ್ಜುನ° ಹೇಳುತ್ತ°- ಏ ಕೇಶವನೇ,  ಆರ ಪ್ರಜ್ಞೆಯು ದಿವ್ಯತ್ವಲ್ಲಿ ಇರುತ್ತೋ , ಅವನ ಲಕ್ಷಣಂಗೊ ಎಂತರ ? ಅವ° ಹೇಂಗೆ ಮಾತಾಡುತ್ತ°, ಅವನ ಭಾಷೆ ಯಾವುದು? ಅವನು ಹೇಂಗೆ ಕೂರುತ್ತ°, ನಡೆತ್ತ°/ವರ್ತುಸುತ್ತ°?

ತಾತ್ಪರ್ಯ / ವಿವರಣೆ

ಪ್ರತಿಯೊಬ್ಬಂಗೂ ಅವನವನ ವಿಶಿಷ್ಟ ಸ್ಥಿತಿಲಿ ಕೆಲವು ಲಕ್ಷಣಂಗೊ ಇರುತ್ತು. ಇದೇ ರೀತಿಲಿ ಕೃಷ್ಣಪ್ರಜ್ಞೆಲಿ ಇಪ್ಪವ ಮಾತಿಲ್ಲಿ, ನಡೆಲಿ, ವಿಚಾರರೀತಿಲಿ, ಭಾವಲ್ಲಿ, ಅವನ ವಿಶಿಷ್ಟ ಸ್ವಭಾವ ಇರುತ್ತು. ಐಶ್ವರ್ಯವಂತನಾದವ ಐಶ್ವರ್ಯವಂತ ಹೇಳಿ ತೋರುಸುವ ಲಕ್ಷಣಂಗೊ ಇಪ್ಪ ಹಾಂಗೆ, ರೋಗಿಗೆ ಅವ° ರೋಗಿ ಹೇಳಿ ತೋರುಸುವ ಲಕ್ಷಣಂಗೊ ಇಪ್ಪ ಹಾಂಗೆ, ವಿದ್ವಾಂಸಂಗೆ ಅವನದ್ದೇ ಆದ ಲಕ್ಷಣಂಗೊ ಇಪ್ಪಹಾಂಗೆ ಕೃಷ್ಣನ ದಿವ್ಯಪ್ರಜ್ಞೆಲಿ ಇಪ್ಪವನ ವಿವಿಧ ವ್ಯವಹಾರಂಗಳಲ್ಲಿ ನಿರ್ದಿಷ್ಟ ಲಕ್ಷಣಂಗೊ ಇರುತ್ತು. ಅವನ ಮಾತು ನಡೆ ನುಡಿ ಹಾವ ಭಾವಲ್ಲಿ ಹೇಂಗಿರುತ್ತು ?

ಬನ್ನಂಜೆ ಈ ಭಾಗವ ಈ ರೀತಿಯಾಗಿ ವಿವರಿಸುತ್ತವು – ಸ್ಥಿತಪ್ರಜ್ಞರ ನಾವು ಗುರುತುಸುವದು ಹೇಂಗೆ ಹೇಳ್ವದು ಅರ್ಜುನನ ಪ್ರಶ್ನೆ. ಒಬ್ಬ ಸ್ಥಿತಪ್ರಜ್ಞನ ವೇಷಭೂಷಣಂದ ಗುರುತುಸುವದು ಸುಲಭ ಅಲ್ಲ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳದ್ದೆ ಅಂತರಂಗ ಪ್ರಪಂಚಲ್ಲಿ ಸಮಾಧಿಸ್ಥಿತಿಯ ತಲುಪಿದ ಅವರ ಗುರುತುಸುವದು ಹೇಂಗೆ? ಅವ್ವು ಬಾಹ್ಯ ಪ್ರಪಂಚಲ್ಲಿ ಹೇಂಗೆ ವ್ಯವಹರಿಸುತ್ತವು. ಅವರ ನಡೆ ನುಡಿ ಹೇಂಗಿರುತ್ತು ಹೇಳ್ವದು ಅರ್ಜುನನ ಪ್ರಶ್ನೆ.

ಇಲ್ಲಿ ಅರ್ಜುನ° ಕೃಷ್ಣನ ‘ಕೇಶವ’ ಹೇಳಿ ದೆನಿಗೊಂಡಿದ. ಈ ಸಂಬೋಧನೆಂದಲೇ ಅರ್ಜುನ ಸ್ವಯಂ ಒಬ್ಬ ಮಹಾಜ್ಞಾನಿ ಹೇಳಿ ಅರ್ಥ ಮಾಡಿಗೊಂಬಲಕ್ಕು. ಕೇಶವ = ಕಹ+ಈಶ. ಕಹ ಹೇಳಿರೆ ಬ್ರಹ್ಮ ಶಕ್ತಿ, ಈಶ ಹೇಳಿರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ – ಕೇಶವ. ಸೂರ್ಯನ ಕಿರಣಂಗಳಲ್ಲಿ ನಿಂದು ಇಡೀ ಜಗತ್ತಿಂಗೆ ಶಕ್ತಿ ಪ್ರಧಾನ ಮಾಡುವವ ಭಗವಂತ° – ಕೇಶವ°.  “ಜಗತ್ತಿಂಗೆ ಬೆಳಕು ಕೊಡುವ ನಿನ್ನತ್ರಂದ ಆನು ಈ ವಿಷಯವ ಕೇಳಿ ತಿಳ್ಕೊಂಬಲೆ ಉತ್ಸುಕನಾಗಿದ್ದೆ” ಎಂಬ ಅರ್ಥಲ್ಲಿ ಈ ಸಂಬೋಧನೆ.

ಶ್ಲೋಕ

ಶ್ರೀ ಭಗವಾನುವಾಚ –
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ ।
ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ॥೫೫॥

ಪದವಿಭಾಗ

ಶ್ರೀ ಭಗವಾನ್ ಉವಾಚ –

ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನಃ ಗತಾನ್ । ಆತ್ಮನಿ ಏವ ಆತ್ಮನಾ ತುಷ್ಟಃ ಸ್ಥಿತಪ್ರಜ್ಞಃ ತದಾ ಉಚ್ಯತೇ ।

ಅನ್ವಯ

ಶ್ರೀ ಭಗವಾನ್ ಉವಾಚ –

ಹೇ ಪಾರ್ಥ!, ಯದಾ (ನರಃ) ಮನೋಗತಾನ್ ಸರ್ವಾನ್ ಕಾಮಾನ್ ಪ್ರಜಹಾತಿ, ಆತ್ಮನಿ ಏವ ಅತ್ಮನಾ ತುಷ್ಟಃ ಭವತಿ , ತದಾ, ಸ್ಥಿತಪ್ರಜ್ಞಃ ಉಚ್ಯತೇ ॥

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮಪುರುಷ ಭಗವಂತ° ಹೇಳಿದ°, ಹೇ ಪಾರ್ಥ! – ಏ ಪೃಥೆಯ ಪುತ್ರನೇ!, ಯದಾ – ಏವಾಗ, (ನರಃ – ಮನುಷ್ಯ°),  ಮನಃ-ಗತಾನ್ – ಮಾನಸಿಕ ಕಲ್ಪನೆಗಳಾದ (ಮನಸ್ಸಿಲ್ಲಿ ಹೊಕ್ಕಿದ),  ಸರ್ವಾನ್ – ಸಕಲವಿಧದ, ಕಾಮಾನ್ – ಇಂದ್ರಿಯತೃಪ್ತಿಯ ಅಪೇಕ್ಷೆಗಳ,  ಪ್ರಜಹಾತಿ – ತ್ಯಜಿಸುತ್ತನೋ,   ಆತ್ಮನಿ – ಆತ್ಮನ ಶುದ್ಧಸ್ಥಿತಿಲಿ, ಏವ – ನಿಶ್ಚಿತವಾಗಿಯೂ, ಆತ್ಮನಾ – ಶುದ್ಧಮನಸ್ಸಿಂದ , ತುಷ್ಟಃ ಭವತಿ – ತೃಪ್ತನಾವುತ್ತನೋ, ತದಾ – ಅಂಬಗ, ಸ್ಥಿತಪ್ರಜ್ಞಃ – ದಿವ್ಯಸ್ಥಿತ° ಹೇದು, ಉಚ್ಯತೇ – ಹೇಳಲಾವುತ್ತು.

ಅನ್ವಯಾರ್ಥ

ದೇವೋತ್ತಮ ಪರಮ ಪುರುಷನಾದ ಭಗವಂತ ಹೇಳಿದ° – ಹೇ ಪಾರ್ಥನೇ, ಮನಸ್ಸಿನ ಕಲ್ಪನೆಗಳಿಂದ ಇಂದ್ರಿಯ ಸುಖದ ವಿವಿಧ ಬಯಕೆಗೊ ಉಂಟಾವುತ್ತು. ಒಬ್ಬ ಮನುಷ್ಯನು ಇಂದ್ರಿಯಸುಖದ ಎಲ್ಲಾ ಬಗೆಯ ಆಸೆಗಳ ತ್ಯಜಿಸಿ, ಅವನ ಮನಸ್ಸು ಪರಿಶುದ್ಧವಾಗಿ ಆತ್ಮದಲ್ಲೇ ಸಂತುಷ್ಟನಪ್ಪಗ ಆತನ ಶುದ್ಧ ದಿವ್ಯಪ್ರಜ್ಞೆಲಿ ಇಪ್ಪವ° ಹೇಳಿ ಹೇಳ್ಳಾವುತ್ತು.

ತಾತ್ಪರ್ಯ / ವಿವರಣೆ

ಕೃಷ್ಣಪ್ರಜ್ಞೆಲಿ ಅಥವಾ ಭಗವಂತನ ಭಕ್ತಿಸೇವೆಲಿ ತನ್ಮಯನಾಗಿಪ್ಪ ಮನುಷ್ಯಂಗೆ ಮಹರ್ಷಿಗಳ ಎಲ್ಲ ಸದುಣಂಗಳೂ ಇರುತ್ತು. ಆದರೆ, ಅಧ್ಯಾತ್ಮಿಕ ನೆಲೆಯಿಲ್ಲದ್ದವಂಗೆ ಆ ಒಳ್ಳೆಯ ಅರ್ಹತೆ ಇರುತ್ತಿಲ್ಲೆ. ಎಂತಕೆ ಹೇಳಿರೆ ಅವ°  ತನ್ನ ಮನಸ್ಸಿನ ಕಲ್ಪನೆಗಳನ್ನೇ ಆಶ್ರಯಿಸಿರುತ್ತ°. ಮನಸ್ಸಿನ ಕಲ್ಪನೆಗಳ ಸೃಷ್ಟಿಮಾಡುವ ಎಲ್ಲ ಬಗೆಯ ಇಂದ್ರಿಯಾಪೇಕ್ಷೆಗಳ ಮನುಷ್ಯ° ತ್ಯಜಿಸೇಕು. ಇಂತಹ ಇಂದ್ರಿಯಾಪೇಕ್ಷೆಗಳ ಕೃತಕವಾಗಿ ತಡವಲೆ ಸಾಧ್ಯ ಇಲ್ಲೆ. ಆದರೆ, ಮನುಷ್ಯ ಕೃಷ್ಣಪ್ರಜ್ಞೆಲಿ ನಿರತನಾಗಿಪ್ಪಗ ಹೆರಾಣ ಪ್ರಯತ್ನವೇ ಇಲ್ಲದ್ದೆ ಇಂದ್ರಿಯಾಪೇಕ್ಷೆಗೊ ತಾನಾಗಿಯೇ ಅಡಗುತ್ತು. ಹಾಂಗಾಗಿ ಏವ ಹಿಂಜರಿಕೆ ಇಲ್ಲದ್ದೆ ಕೃಷ್ಣಪ್ರಜ್ಞೆಯ ಬೆಳೆಶಿಗೊಳ್ಳೆಕು. ಈ ಭಕ್ತಿಸೇವೆಂದ ಅವ° ಕೂಡ್ಳೆ ಅಲೌಕಿಕ ಪ್ರಜ್ಞೆಯ ವೇದಿಕೆಗೆ ಏರುತ್ತ°. ಪ್ರಗತಿ ಹೊಂದಿದ ಆತ್ಮ° ತಾನು ಪರಮ ಪ್ರಭುವಿನ ನಿರಂತರ ಸೇವಕ° ಹೇಳ್ವದರ ಅರ್ತುಗೊಂಡು ತನ್ನಲ್ಲೇ ಸದಾ ಸಂತೃಪ್ತನಾವುತ್ತ°. ಅಂತಹ ದಿವ್ಯಸ್ಥಿತಿಲಿ ಕ್ಷುದ್ರ ಪಾಪಂಚಿಕತೆಂದ ಉಂಟಪ್ಪ ಇಂದ್ರಿಯ ಬಯಕೆ ಇರುತ್ತಿಲ್ಲೆ. ಬದಲಾಗಿ ಪ್ರಭುವಿನ ನಿತ್ಯ ಸೇವೆ ಮಾಡುವ ತನ್ನ ಸಹಜ ಸ್ಥಿತಿಲಿ ಆತ ಸದಾ ಸುಖಿಯಾಗಿರುತ್ತ°.

ಬನ್ನಂಜೆ ವ್ಯಾಖ್ಯಾನಿಸುತ್ತವು – ನಿಜವಾದ ಸ್ಥಿತಪ್ರಜ್ಞಂಗೆ ಮೂಲಭೂತವಾಗಿ ಯಾವುದೇ ಬಯಕೆಗೊ ಕಾಡುತ್ತಿಲ್ಲೆ. ಇಲ್ಲಿ ಬಯಕೆ ಹೇಳಿರೆ ಮನುಷ್ಯನ ದಾರಿ ತಪ್ಪುಸುವ ಕೆಟ್ಟ ಕಾಮನೆಗೊ) ಅವ° ಇಂತಹ ಎಲ್ಲಾ ಕ್ಷುದ್ರ ಕಾಮನೆಗಳ ತೊರದು ತನ್ನೊಳ ಇಪ್ಪ ಜ್ಞಾನಾನಂದಮಯನಾದ ಭಗವಂತನ ಕಂಡುಗೊಂಡು ಸಂತೋಷನಾಗಿರುತ್ತ°. ಮನುಷ್ಯನ ದುಃಖಕ್ಕೆ ಮೂಲ ಕಾರಣ ಅವನ  ಕ್ಷುದ್ರ ಬಯಕೆಗೊ. ತನ್ನ ಬಯಕೆಗೊ ಈಡೇರದ್ದೆ ಇಪ್ಪಗ ಕೋಪ ಇತ್ಯಾದಿ ಆರಂಭ ಆವುತ್ತು. ಇದರಿಂದ ಅವ° ತನ್ನ ಜೀವನವ ನರಕವನ್ನಾಗಿ ಮಾಡಿಗೊಳ್ಳುತ್ತ°. ಇಂತಹ ಸ್ಥಿತಿಲಿ ಅವಂಗೆ ತನ್ನೊಳ ಇಪ್ಪ ಆ ಅಪೂರ್ವ ಶಕ್ತಿಯ ಅರಿವು ಆವುತ್ತಿಲ್ಲೆ. ಸ್ಥಿತಪ್ರಜ್ಞನಾದವ° ಈ ಜಂಜಾಟಲ್ಲಿ ಸಿಲುಕದ್ದೆ, ತನ್ನ ಅಂತರಂಗದಲ್ಲಿನ ಆ ಮಹದಾನಂದವ ಸದಾ ಸವಿಯುತ್ತ ಸಂತೋಷಲ್ಲಿರುತ್ತ°. ಅವ° ಕಾಮನೆಗೊಕ್ಕೆ ಬೆಂಬೀಳುತ್ತನಿಲ್ಲೆ. ಬೇಕು ಹೇಳ್ವ ಬಯಕೆ ಆತನ ಕಾಡುತ್ತಿಲ್ಲೆ. ಅವನ ಮನಸ್ಸು ಸದಾ ಪ್ರಸನ್ನವಾಗಿರುತ್ತು. ಜೀವನಲ್ಲಿ ಎಂತಹ ಸಮಸ್ಯೆ ಬಂದರೂ ಆತ ಉದ್ವೇಗಕ್ಕೆ ಒಳಗಾವುತ್ತನಿಲ್ಲೆ. ಅವನ ಮನಸ್ಸು ಗಟ್ಟಿಯಿರುತ್ತು ಮತ್ತು ಇದರಿಂದಾಗಿ ಅವ ಯಶಸ್ಸು ಕಾಣುತ್ತ°.

ಇಲ್ಲಿ ಕೃಷ್ಣ° ಅರ್ಜುನನ ‘ಪಾರ್ಥ’ ಹೇಳಿ ದೆನಿಗೋಳ್ತ°. ಪಾರ್ಥ ಹೇಳಿರೆ ಪಾರ-ತೀರ-ಗಮನೆ, ಹೇಳಿರೆ, ಸತ್ಯದ, ಸಾಧನೆಯ ಕಡಲ ದಾಂಟಿದವ°.  “ಸಾಧನೆಯ ಕಡಲ ದಾಟಿದ ನಿನಗೆ ಇದು ಸ್ಪಷ್ಟವಾಗಿ ತಿಳಿಯೆಕು” ಹೇಳ್ವ ಗೂಢಾರ್ಥ ಈ ಸಂಬೋಧನೆಲಿ.

ಹಾಂಗಾರೆ, ಕಾಮನೆಗಳ ಬಿಡುವದು ಹೇಳಿರೆ ಎಂತರ? ಹೇಂಗೆ..??

ಶ್ಲೋಕ

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ॥೫೬॥

ಪದವಿಭಾಗ

ದುಃಖೇಷು ಅನುದ್ವಿಗ್ನ-ಮನಾಃ ಸುಖೇಷು ವಿಗತ-ಸ್ಪೃಹಃ । ವೀತ-ರಾಗ-ಭಯ-ಕ್ರೋಧಃ ಸ್ಥಿತಧೀ ಮುನಿಃ ಉಚ್ಯತೇ ॥

ಅನ್ವಯ

ದುಃಖೇಷು ಅನುದ್ವಿಗ್ನ-ಮನಾಃ, ಸುಖೇಷು ವಿಗತ-ಸ್ಪೃಹಃ,  ವೀತ-ರಾಗ-ಭಯ-ಕ್ರೋಧಃ ಮುನಿಃ ಸ್ಥಿತಧೀ ಉಚ್ಯತೇ ॥

ಪ್ರತಿಪದಾರ್ಥ

ದುಃಖೇಷು – ಮೂರುಬಗೆಯ ಕ್ಲೇಶಂಗಳಲ್ಲಿ, ಅನುದ್ವಿಗ್ನ-ಮನಾಃ – ಕ್ಷೋಭೆಗೊಳ್ಳದ ಮನಸ್ಸಿಪ್ಪವ°, ಸುಖೇಷು – ಸುಖಂಗಳಲ್ಲಿ, ವಿಗತ-ಸ್ಪೃಹಃ – ಆಸಕ್ತನಾಗದ್ದ, ವೀತ-ರಾಗ-ಭಯ-ಕ್ರೋಧಃ  – ಇಲ್ಲದ್ದ ಆಸಕ್ತಿ,  ಭೀತಿ, ಕೋಪ, ಸ್ಥಿತಧೀಃ – ನಿಶ್ಚಲಬುದ್ಧಿಯಿಪ್ಪ, ಮುನಿಃ – ಮುನಿ (ಹೇದು), ಉಚ್ಯತೇ – ಕರೆಯಲ್ಪಡುತ್ತ°.

ಅನ್ವಯಾರ್ಥ

ತ್ರಿವಿಧವಾದ ದುಃಖಂಗಳಿಂದ ಮನಸ್ಸಿಲ್ಲಿ ಉದ್ವಿಗ್ನನಾಗದ್ದವ°, ಸುಖಂದ ಉಬ್ಬದ್ದವ°, ರಾಗ ಭಯ ಕ್ರೋಧಂಗಳಿಲ್ಲದ್ದವ° ಸ್ಥಿರಮನಸ್ಸಿನ ಋಷಿ (ಮುನಿ) ಎನಿಸಿಗೊಳ್ಳುತ್ತ°.

ತಾತ್ಪರ್ಯ / ವಿವರಣೆ

ಜೀವನಲ್ಲಿ ಸುಖ-ದುಃಖಂಗೊ ಹಗಲು ಇರುಳು ಇದ್ದ ಹಾಂಗೆ. ಇದು ನಿರಂತರ ಮತ್ತು ಆರನ್ನೂ ಬಿಟ್ಟಿಲ್ಲೆ. ಕೆಲವೊಂದರಿ ಸುಖ ನಾವು ಬಯಸದ್ದೇ ಬತ್ತು. ಅದೇರೀತಿ, ಕೆಲವೊಂದರಿ ದುಃಖ ಸರಮಾಲೆಯಾಗಿ ಬೆನ್ನು ಹಿಡಿತ್ತು. ಪೈಸೆಂದ ದುಃಖವ ನಿಯಂತ್ರಿಸಲೂ ಎಡಿಯ ವಾ ಪೈಸೆ ಕೊಟ್ಟು ಸುಖ ಖರೀದಿಸಲೂ ಎಡಿಯ. ಸಾಮಾನ್ಯವಾಗಿ ದುಃಖ ಬಂದಪ್ಪಗ ನಾವು ಉದ್ವೇಗಕ್ಕೆ ಒಳಗಾವ್ತು. ಇದರಿಂದ ಮನಸ್ಸು ಕಂಗೆಡುತ್ತು. ಅದರಿಂದ ಆರೋಗ್ಯ ಕೆಡುತ್ತು. ಯಾವುದು ಅನಿವಾರ್ಯವೋ ಅದರ ಬಗ್ಗೆ ದುಃಖಿಸಿ ಉಪಯೋಗ ಇಲ್ಲೆ. ಕೂಗಿಯೊಂಡು ಕೂಬದರಿಂದ ಬಂದ ದುಃಖ ಅಳುದುಹೋಗ. ದುಃಖ ಸುಖದ ಸಿದ್ಧತೆ. ಸುಖ ದುಃಖದ ಸಿದ್ಧತೆ. ಇವು ಜೀವನದ ಅನಿವಾರ್ಯ ದ್ವಂದ್ವಂಗೊ. ಹೇಳಿರೆ ಸುಖ ಬಪ್ಪಗ ಸಂತೋಷಪಡಲಾಗ ಎಂದರ್ಥವಲ್ಲ. ಆ ಸುಖಲ್ಲಿ ಮೈಮರವಲಾಗ. ತಟಸ್ಥತೆಯ ಮನಸ್ಸಿಂಗೆ ಅಭ್ಯಾಸಮಾಡಿಸಿಗೊಳ್ಳೆಕು. ಜೀವನ ಯುದ್ಧಲ್ಲಿ ಸುಖ-ದುಃಖಂಗೊ ಹಾಸುಹೊಕ್ಕಿದ್ದು ಹೇಳಿ ಸತ್ಯವ ಅರಿತಿರೆಕು. ದುಃಖ ಬಂದಪ್ಪಗ ಮನಸ್ಸಿನ ಗಟ್ಟಿಮಾಡಿ ಬದುಕ್ಕೆಕು ಹೇಳಿ ಹೇಳುವದು ಸುಲಭ. ಆದರೆ, ಅದರ ಜೀವನಲ್ಲಿ ಅನುಸರುಸುವದು ಅಷ್ಟೇ ಕಷ್ಟ. ಆದರೆ ಇದು ಅಭ್ಯಾಸ ಬಲಂದ ಮಾತ್ರ ಸಾಧ್ಯ. ಯಾವುದೇ ಒಂದು ವಸ್ತುವಿನ ಬಗ್ಗೆ ಮೂರು ವಿಷಯಂಗೊ ಮನಸ್ಸಿಲ್ಲಿಪ್ಪಲಾಗ . ಅದು ಹೇಳಿರೆ, ರಾಗ-ಭಯ-ಕ್ರೋಧ. ದುಃಖದ ಪೂರ್ವಸ್ಥಿತಿ ಭಯ. ಭಯದ ಉತ್ತರ ಸ್ಥಿತಿ ದುಃಖ. ಅತಿಯಾಗಿ ಆಸೆ ಪಡುವದು – ರಾಗ. ಆಸೆಪಟ್ಟ ವಸ್ಸು ಸಿಕ್ಕದ್ದಪ್ಪಗ ನಿರಾಶೆ. ಆ ವಸ್ತು ನಮ್ಮಿಂದ ದುರ್ಬಲರಿಂಗೆ ಸಿಕ್ಕಿಯಪ್ಪಗ ನವಗೆ ಅವರ ಮೇಲೆ ಕ್ರೋಧ. ನಮ್ಮಿಂದ ಬಲಿಷ್ಠರಿಂಗೆ ಸಿಕ್ಕಿರೆ ಅವರಿಂದ ನವಗೆ ಭಯ. ಇವೆಲ್ಲವು ಮನಸ್ಸಿನ ಹೊಯ್ದಾಟ. – ಇದು ಬನ್ನಂಜೆಯವರ ವ್ಯಾಖ್ಯಾನ.

ಇಲ್ಲಿ ಮುನಿಃ ಹೇಳಿರೆ ಕಾಮ-ಕ್ರೋಧವ ಗೆದ್ದವ°. ನಾವು ಮನಸ್ಸಿನ ಎಲ್ಲಾ ಸಂದರ್ಭಲ್ಲಿಯೂ ಏಕರೂಪವಾಗಿ ತಟಸ್ಥವಾಗಿ ಇಪ್ಪಲೆ ಪ್ರಯತ್ನಿಸೆಕ್ಕು. ನೀನೂ ಕೂಡ ಅಂಥ ಮುನಿ ಆಗು ಹೇಳಿ ಭಾವಾರ್ಥ.

ಕೃಷ್ಣಪ್ರಜ್ಞೆಲಿ ನಿಷ್ಠಾವಂತನಾಗಿಪ್ಪವಂಗೆ ಏವ ಮೋಹವೂ ಇಲ್ಲೆ . ಏಕೆ ಹೇಳಿರೆ ಅವನ ಬದುಕು ಭಗವಂತನ ಸೇವಗೆ ಸಮರ್ಪಿತವಾಯ್ದು. ಅವನ ಮನಸ್ಸು ದೃಢಸಂಕಲ್ಪಲ್ಲಿರುತ್ತು.

ಶ್ಲೋಕ

ಯಃ ಸರ್ವತ್ರಾನಭಿಸ್ನೇಹಃ ತತ್ತತ್ಪ್ರಾಪ್ಯ ಶುಭಾಶುಭಮ್ ।
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ।।೫೭॥

ಪದವಿಭಾಗ

ಯಃ ಸರ್ವತ್ರ ಅನಭಿಸ್ನೇಹಃ ತತ್ ತತ್ ಪ್ರಾಪ್ಯ ಶುಭ-ಅಶುಭಂ । ನ ಅಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥

ಅನ್ವಯ

ಯಃ ಸರ್ವತ್ರ ಅನಭಿಸ್ನೇಹಃ ತತ್ ತತ್ ಶುಭ-ಅಶುಭಂ ಪ್ರಾಪ್ಯ, ನ ಅಭಿನಂದತಿ, ನ ದ್ವೇಷ್ಟಿ, ತಸ್ಯ ಪ್ರಜ್ಞಾ ಪ್ರತಿಷ್ಠಿತಾ ।

ಪ್ರತಿಪದಾರ್ಥ

ಯಃ – ಆರು , ಸರ್ವತ್ರ – ಎಲ್ಲಾ ಕಡೆಗಳಲ್ಲಿಯೂ, ಅನಭಿಸ್ನೇಹಃ – ಪ್ರೀತಿಯಿಲ್ಲದ್ದೆ, ತತ್ ತತ್ – ಅದರದರ, ಶುಭ-ಅಶುಭಮ್ – ಒಳಿತು ಕೆಡುಕ,  ಪ್ರಾಪ್ಯ – ಪಡದು,  ನ ಅಭಿನಂದಂತಿ – ಹೊಗಳುತ್ತನಿಲ್ಲೆ, ನ ದ್ವೇಷ್ಟಿ – ದ್ವೇಷಿಸುತ್ತನಿಲ್ಲೆ, ತಸ್ಯ – ಅವನ, ಪ್ರಜ್ಞಾ – ಸಂಪೂರ್ಣಜ್ಞಾನವು, ಪ್ರತಿಷ್ಠಿತಾ – ಸ್ಥಿರವಾಗಿರುತ್ತು.

ಅನ್ವಯಾರ್ಥ

ಐಹಿಕ ಜಗತ್ತಿಲ್ಲಿ  ಎಲ್ಲ ಕಡೆಲಿಯೂ ಒಳ್ಳೆದಾಗಲೀ ಕೆಟ್ಟದಾಗಲಿ ಆರ ಮನಸ್ಸಿನ ತಾಗುತ್ತಿಲ್ಲೆಯೋ, ಆರು ಅದರ ಹೊಗಳುತ್ತವಿಲ್ಲೆಯೋ, ತೆಗಳುತ್ತವಿಲ್ಲೆಯೋ, ಅಂತವರ ಜ್ಞಾನ ಪರಿಪೂರ್ಣ ಜ್ಞಾನಲ್ಲಿ ಸ್ಥಿರವಾಗಿರುತ್ತು.

ತಾತ್ಪರ್ಯ / ವಿವರಣೆ

ಐಹಿಕ ಜಗತ್ತಿಲ್ಲಿ ಯಾವಾಗಲೂ ಏರುಪೇರು ಆವುತ್ತಲೇ ಇರುತ್ತು. ಇದು ಒಳ್ಳೆದು ಆಗಿಕ್ಕು , ಕೆಟ್ಟದ್ದೂ ಆಗಿಕ್ಕು. ಇಂತಹ ಪ್ರಾಪಂಚಿಕ ಏರುಪೇರುಗಳಿಂದ ಆರು ಉದ್ವಿಗ್ನರಾವುತ್ತವಿಲ್ಲೆಯೋ, ಆರ ಮನಸ್ಸ ಒಳ್ಳೆದು ಕೆಟ್ಟದ್ದು ತಾಗುತ್ತಿಲ್ಲೆಯೋ ಅವ್ವು ಕೃಷ್ಣಪ್ರಜ್ಞೆಲಿ ನಿಷ್ಠಾವಂತರಾಗಿದ್ದವು ಹೇಳಿ ಅರ್ಥಮಾಡ್ಳಕ್ಕು. ಈ ಪ್ರಪಂಚವೇ ದ್ವಂದ್ವಮಯವಾದ್ದು. ಆದ್ದರಿಂದ ಈ ಐಹಿಕ ಪ್ರಪಂಚಲ್ಲಿ ಒಳ್ಳೆದರ ಮತ್ತು ಕೆಟ್ಟದರ ಸಾಧ್ಯತೆ ಇದ್ದೇ ಇರುತ್ತು. ಆದರೆ, ಕೃಷ್ಣಪ್ರಜ್ಞೆಲಿ ನಿಷ್ಠನಾಗಿಪ್ಪವಂಗೆ ಸಕಲ ಮಂಗಳಪೂರ್ಣನಾದ ಶ್ರೀಕೃಷ್ಣನತ್ರೆ ಮಾತ್ರ ಸಂಬಂಧ. ಆದ್ದರಿಂದ ಶುಭಾಶುಭ ಅವಂಗೆ ಬಾಧಕವಲ್ಲ. ಇಂತಹ ಕೃಷ್ಣಪ್ರಜ್ಞೆಯು ಮನುಷ್ಯನ ಪರಿಪೂರ್ಣವಾದ ಅಲೌಕಿಕ ಸ್ಥಿತಿಲಿ ಮಡುಗುತ್ತು. ಈ ಸ್ಥಿತಿಗೆ ಸಮಾಧಿ ಹೇಳಿ ಹೇಳ್ವದು.

ಅರ್ಜುನಂಗೆ ಶ್ರೀಕೃಷ್ಣ ಹೇಳುವದು – ದುಃಖ ಬಪ್ಪಗ ಕಂಗೆಡೆಡ, ಸುಖ ಬಪ್ಪಗ ಉಬ್ಬೆಡ. ನಿರ್ಲಿಪ್ತತೆ ಅಭ್ಯಾಸ ಮಾಡು. ಯಾವುದರ ಮೇಲೂ ಅತಿಯಾದ ಆಸಕ್ತಿ (ವ್ಯಾಮೋಹ) ಬೇಡ. ಮನಸ್ಸಿನ ಸಮತೋಲನವ ಸಾಧುಸು. ದುಃಖ ಎಂಬುದು ಆರನ್ನೂ ಬಿಟ್ಟಿಲ್ಲೆ. ದೇವಾಂಶ ಸಂಭೂತರಾದ ಪಾಂಡವರಿಂಗೂ ಇದು ತಪ್ಪಿದ್ದಿಲ್ಲೆ. ಜ್ಞಾನಿಗಳಾಗಿರಲಿ, ಅಜ್ಞಾನಿಗಳಾಗಿರಲಿ ಎಲ್ಲೋರಿಂಗೂ ಬತ್ತು.  ಆನು ಬೇಕು ಬೇಡವ ಮೀರಿ ನಿಂದಿದೆ, ಇಂತದ್ದೇ ಬೇಕು, ಇಂತದ್ದು ಬೇಡ ಎಂಬ ಆಯ್ಕೆ ಎನ್ನ ಅಧಿಕಾರ ಅಲ್ಲ ಎಂಬ ತತ್ವವ ಕಾರ್ಯರೂಪಲ್ಲಿ ಅಳವಡಿಸಿಗೊಂಡರೆ ಜೀವನ ಸುಗಮ ಆವ್ತು. ಅಂತವ° ಜೀವನಲ್ಲಿ ಮೇಲಕ್ಕೇರುತ್ತ°. ಜ್ಞಾನಿಗೊ ಇಂತಹ ಮನಃಸ್ಥಿತಿಯ ಹೊಂದಿರುತ್ತವು. ಸಾಮಾನ್ಯ ಮಾನವರಾದ ನವಗೆ ಇಂದ್ರಿಯ ನಿಗ್ರಹ ಬಹಳ ಕಷ್ಟ. ಆದರೆ, ಅಸಾಧ್ಯವೂ ಅಲ್ಲ. ನಿರಂತರ ಸಾಧನೆಂದ ಇದನ್ನೂ ಸಾಧುಸಲೆ ಎಡಿಗು.

ಯಾವ ರೀತಿಲಿ ಇಂದ್ರಿಯ ನಿಗ್ರಹ ಸಾಧನೆ ಮಾಡೇಕು? –

ಶ್ಲೋಕ

ಯದಾ ಸಂಹರತೇ ಚಾಯಂ ಕೂರ್ಮೋsನ್ಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೫೮॥

ಪದವಿಭಾಗ

ಯದಾ ಸಂಹರತೇ ಚ ಅಯಮ್ ಕೂರ್ಮಃ ಅಂಗಾನಿ ಇವ ಸರ್ವಶಃ । ಇಂದ್ರಿಯಾಣಿ ಇಂದ್ರಿಯ-ಅರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥

ಅನ್ವಯ

ಕೂರ್ಮಃ ಅಂಗಾನಿ ಇವ, ಯದಾ, ಅಯಮ್ ಇಂದ್ರಿಯ-ಅರ್ಥೇಭ್ಯಃ ಇಂದ್ರಿಯಾಣಿ ಸರ್ವಶಃ ಸಂಹರತೇ, ತದಾ, ತಸ್ಯ ಪ್ರಜ್ಞಾ ಪ್ರತಿಷ್ಠಿತಾ ಚ ।

ಪ್ರತಿಪದಾರ್ಥ

ಕೂರ್ಮಃ – ಆಮೆ, ಅಂಗಾನಿ – ಅವಯವಂಗಳ, ಇವ – ಹಾಂಗೆ, ಯದಾ – ಏವಾಗ,  ಅಯಮ್ – ಅವ°, ಇಂದ್ರಿಯ-ಅರ್ಥೇಭ್ಯಃ – ಇಂದ್ರಿಯವಿಷಯಂಗಳಿಂದ, ಇಂದ್ರಿಯಾಣಿ – ಇಂದ್ರಿಯಂಗಳ, ಸರ್ವಶಃ – ಪೂರ್ತಿಯಾಗಿ, ಸಂಹರತೇ – ಹಿಂದೆಗೆದುಕೊಳ್ಳುತ್ತನೋ, ತದಾ – ಅಂಬಗ,  ತಸ್ಯ – ಅವನ, ಪ್ರಜ್ಞಾ – ಪ್ರಜ್ಞೆಯು, ಪ್ರತಿಷ್ಠಿತಾ – ಸ್ಥಿರವಾಗಿರುತ್ತು, ಚ – ಕೂಡ.

ಅನ್ವಯಾರ್ಥ

ಆಮೆಯು ತನ್ನ ಅಂಗಾಂಗಂಗಳ ಚಿಪ್ಪಿನೊಳ ಎಳಕ್ಕೊಳ್ಳುತ್ತಾಂಗೆ ಆರು ತನ್ನ ಇಂದ್ರಿಯಂಗಳ ಇಂದ್ರಿಯ ವಿಷಯಂಗಳಿಂದ ಹಿಂದಕ್ಕೆ ಎಳಕ್ಕೊಳ್ಳುತ್ತವೋ ಅವ್ವು ಪರಿಪೂರ್ಣ ಕೃಷ್ಣಪ್ರಜ್ಞೆಲಿ ಸ್ಥಿರವಾಗಿರುತ್ತವು.

ತಾತ್ಪರ್ಯ / ವಿವರಣೆ

ಒಬ್ಬ° ಯೋಗಿಯ ಅಥವಾ ಆತ್ಮಸಾಕ್ಷಾತ್ಕಾರ ಪಡೆದವನ ಪರೀಕ್ಷೆಯು ಅವ° ತನ್ನ ಯೋಚನೆಗನುಗುಣುವಾಗಿ ತನ್ನ ಇಂದ್ರಿಯಂಗಳ ನಿಯಂತ್ರಿಸಿಗೊಳ್ಳುತ್ತನೋ ಹೇಳ್ವದು. ಹೆಚ್ಚಿನೋರು ಇಂದ್ರಿಯ ಸೇವಕರೇ ಮತ್ತು ಇಂದ್ರಿಯ ಬಯಸಿದಂತೆ ನಡೆದುಕೊಳ್ಳುತ್ತವು. ಇಂದ್ರಿಯಂಗಳ ವಿಷಸರ್ಪಕ್ಕೆ ಹೋಲುಸುತ್ತವು. ಅದು (ಇಂದ್ರಿಯ) ಯಾವ ಹೊಣೆ ಇಲ್ಲದ್ದೆ ನಡೆದುಕೊಳ್ಳುತ್ತು. ಸರ್ಪಂಗಳ ನಿಯಂತ್ರಿಸುವ ಹಾವಾಡಿಗನಂತೆ ಯೋಗಿಯು ಶಕ್ತನಾಗಿರೇಕು. ಅವು ಸ್ವತಂತ್ರವಾಗಿ ಕಾರ್ಯಪ್ರವೃತ್ತ ಅಪ್ಪಲೆ ಅವಕಾಶವೇ ಕೊಡ್ಳಾಗ. ಇಂದ್ರಿಯ ಭೋಗಂದ ದೂರವಾಗಿ ವಿಧಿನಿಷೇಧಂಗಳ ಅನುಸರಿಸದಿದ್ದರೆ ಸ್ಥಿರವಾದ ಕೃಷ್ಣಪ್ರಜ್ಞೆಯ ಹೊಂದುಲೆ ಸಾಧ್ಯವಿಲ್ಲೆ. ಅದಕ್ಕೆ ಇಲ್ಲಿ ಆಮೆಯ ಉತ್ತಮ ಉದಾಹರಣೆ. ಆಮೆಯು ಯಾವ ಗಳಿಗೆಯಲ್ಲಾದರೂ ತನ್ನ ಇಂದ್ರಿಯಂಗಳ ಒಳ ಎಳಕ್ಕೊಂಡು ಅಗತ್ಯವಿಪ್ಪ ವಿಶಿಷ್ಟ ಉದ್ಧೇಶಂಗೊಕ್ಕೆ ಮಾತ್ರ ಅದರ ಹೆರತೆಗೆತ್ತು. ಹಾಂಗೆಯೇ, ಕೃಷ್ಣಪ್ರಜ್ಞೆ ಇಪ್ಪ ಮನುಷ್ಯ° ಇಂದ್ರಿಯಂಗಳ ಭಗವಂತನ ಸೇವೆಗಾಗಿ ವಿಶೇಷ ಉದ್ದೇಶಂಗೊಕ್ಕೆ ಬೇಕಾಗಿ ಬಳಸುತ್ತ°. ಇಲ್ಲವಾದಲ್ಲಿ ಹಿಂದೆಳೆಕ್ಕೊಳ್ಳುತ್ತ°. ಅರ್ಜುನ° ತನ್ನ ಇಂದ್ರಿಯಂಗಳ ತನ್ನ ತೃಪ್ತಿಗೆ ಬಳಸದ್ದೆ ಭಗವಂತನ ಸೇವಗೆ ಬಳಸೇಕು ಹೇಳಿ ಇಲ್ಲಿ ಉಪದೇಶ.

ಬನ್ನಂಜೆ ಇದರ ಈ ರೀತಿಯಾಗಿ ಹೇಳುತ್ತವು – ನಾವು ಭಗವಂತ° ಸೃಷ್ಟಿಸಿದ ಈ ಪ್ರಪಂಚವ ನೋಡುತ್ತು. ನೋಡುತ್ತಾ ಅದರ ಹಿಂದೆ ಇಪ್ಪ ಆ ವಿಶ್ವಶಕ್ತಿಯ ಮಹಿಮೆಯ ಯೋಚಿಸಿದರೆ, ಅದು ಅಂತರ್ಮುಖವಾದ ಒಳನೋಟವಾವ್ತು. ಎಲ್ಲದರ ಒಳವೂ ಭಗವಂತ ಇದ್ದ ಹೇಳ್ವ ಎಚ್ಚರ, ಒಂದೊಂದು ಅಭಿವ್ಯಕ್ತಿಲಿ ಭಗವಂತನ ಒಂದೊಂದು ವಿಭೂತಿ ಇದ್ದು ಎಂಬ ತಿಳುವಳಿಕೆ ಇಪ್ಪಗ ಯಾವುದೂ ನಮ್ಮ ದಾರಿ ತಪ್ಪುಸ. ಇದು ಜ್ಞಾನಿಗೊ ಪ್ರಪಂಚವ ನೋಡುವ ದೃಷ್ಠಿ. ನಾವು ಪ್ರಪಂಚವ ಬದುಲುಸಲೆ ಸಾಧ್ಯವಿಲ್ಲೆ. ಪ್ರಪಂಚವ ನಾವು ನಮ್ಮ ಇಷ್ಟದಂತೆ ನಿಯಂತ್ರಿಸುಲೆ ಸಾಧ್ಯವಿಲ್ಲೆ ಹೇಳ್ವ ಸತ್ಯವ ಅರಿತು, ಪ್ರಪಂಚ ಇದ್ದ ಹಾಂಗೆ ಅದಕ್ಕನುಗುಣವಾಗಿ ಬದುಕುವ ಮನೋವೃತ್ತಿಯ ಬೆಳೆಸಿಕೊಂಡಾಗ ಯಾವ ಸಮಸ್ಯೆಯೂ ಇಲ್ಲೆ. ಈ ರೀತಿ ತಮ್ಮ ಇಂದ್ರಿಯಂಗಳ ಅಂತರ್ಮುಖಗೊಳಿಸಿಗೊಂಡವನ ಪ್ರಜ್ಞೆ ಗಟ್ಟಿಯಾಗಿರುತ್ತು.

ಶ್ಲೋಕ

ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋsಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥೫೯॥

ಪದವಿಭಾಗ

ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ । ರಸವರ್ಜಮ್ ರಸಃ ಅಪಿ ಅಸ್ಯ ಪರಮ್ ದೃಷ್ಟ್ವಾ ನಿವರ್ತತೇ ॥

ಅನ್ವಯ

ನಿರಾಹಾರಸ್ಯ ದೇಹಿನಃ ವಿಷಯಾಃ ರಸವರ್ಜಂ ವಿನಿವರ್ತಂತೇ । ಅಸ್ಯ ರಸಃ ಅಪಿ ಪರಂ ದೃಷ್ಟ್ವಾ ನಿವರ್ತತೇ ॥

ಪ್ರತಿಪದಾರ್ಥ

ನಿರಾಹಾರಸ್ಯ – ನಿಷೇಧಾತ್ಮಕ ನಿಯಂತ್ರಣಂಗಳುಳ್ಳ, ದೇಹಿನಃ – ದೇಹಧಾರಿಗೊ, ವಿಷಯಾಃ – ಇಂದ್ರಿಯ ಸುಖದ ವಿಷಯಂಗೊ, ರಸವರ್ಜಮ್ – ರುಚಿಯ ತ್ಯಜಿಸಿದ, ವಿನಿವರ್ತಂತೇ – ದೂರವಾವ್ತು, ಅಸ್ಯ ರಸಃ –  ಈ ಇಂದ್ರಿಯಭೋಗ ರುಚಿ, ಅಪಿ – ಕೂಡ, ಪರಮ್ – ಶ್ರೇಷ್ಠವಾದ ವಿಷಯಂಗಳ, ದೃಷ್ಟ್ವಾ – ಅನುಭವಿಸುವ ಮೂಲಕ, ನಿವರ್ತತೇ – ಸ್ಥಗಿತಗೊಳ್ಳುತ್ತು/ಹೋಗಿಬಿಡ್ತು.

ಅನ್ವಯಾರ್ಥ

ನಿಷೇಧಾತ್ಮಕ ವಿಷಯಂಗಳಲ್ಲಿ ನಿಯಂತ್ರಣ ಹೊಂದಿದವಕ್ಕೆ ಇಂದ್ರಿಯ ಭೋಗದ ರುಚಿ, ರುಚಿಹೀನದಷ್ಟೇ ದೂರವಾಗಿರ್ತು. ಶ್ರೇಷ್ಠವಿಷಯಂಗಳ ಅನುಭವುಸುವ ಮೂಲಕ  ಅವರ ಇಂದ್ರಿಯಭೋಗದ ಅಭಿರುಚಿ ದೂರವಾಗಿಬಿಡ್ತು.

ತಾತ್ಪರ್ಯ / ವಿವರಣೆ

ದೇಹಸ್ಥ ಆತ್ಮವ ಇಂದ್ರಿಯ ಸುಖಂದ ದೂರಮಾಡ್ಳೆ ಎಡಿಗು. ಆದರೆ, ಇಂದ್ರಿಯಸುಖದ ವಸ್ತುಗಳ ರುಚಿಯು ಉಳಿತ್ತು. ಆದರೆ, ಇನ್ನೂ ಉತ್ತಮವಾದ ರುಚಿಯು ಅನುಭವಂದ ಆ ಅಸಕ್ತಿಗಳ ಕೊನೆಗಾಣಿಸಿರೆ ಅವನ ಪ್ರಜ್ಞೆಯು ಸ್ಥಿರವಾಗಿರುತ್ತು.

ಮನುಷ್ಯ° ಆಧ್ಯಾತ್ಮಿಕವಾಗಿ ನೆಲೆ ಕಂಡುಕೊಳ್ಳದ್ರೆ ಇಂದ್ರಿಯಸುಖವ ಅಭಿಲಾಷೆಯ ಕೊನೆಗಾಣುಸಲೆ ಎಡಿಯ. ನಿಯಮಂಗೊಕ್ಕನುಗುಣವಾಗಿ ವಿಷಯಸುಖವ ನಿಯಂತ್ರಿಸುವುದು ಹೇದರೆ ರೋಗಿಗೆ ಕೆಲವು ಬಗೆಯ ತಿಂಡಿತಿನಸುಗಳ ಮುಟ್ಳಾಗ ಹೇದು ನಿಯಂತ್ರಿಸಿದ ಹಾಂಗೆ. ರೋಗಿಗೆ ಈ ನಿಯಮಂಗೊ ಇಷ್ಟವಾವ್ತೂ ಇಲ್ಲೆ. ತಿಂಡಿತಿನಸುಗಳ ರುಚಿಯೂ ಬಿಡ್ತಿಲ್ಲೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಸಮಾಧಿ – ಈ ಅಷ್ಟಾಂಗ ಯೋಗದಂತಹ ಆಧ್ಯಾತ್ಮಿಕ ಪ್ರಕ್ರಿಯೆಯಿಂದ ಇಂದ್ರಿಯನಿಗ್ರಹ ಮಾಡೆಕು ಹೇಳುವದು ಸಾಮಾನ್ಯ ಜನಂಗೊಕ್ಕೆ ಹೇಳ್ವ ಮಾತು. ಆದರೆ, ಕೃಷ್ಣಪ್ರಜ್ಞೆಲಿ ಮುಂದುವರಿತ್ತ ಪರಮ ಪ್ರಭು ಶ್ರೀಕೃಷ್ಣನ ಸೌಂದರ್ಯವ ಸವಿದವಂಗೆ ನಿರ್ಜೀವವಾದ ಐಹಿಕ ವಿಷಯಂಗಳಲ್ಲಿ ರುಚಿ ಇರುತ್ತಿಲ್ಲೆ. ಆದ್ದರಿಂದ ಹೊಸದಾಗಿ ದೀಕ್ಷೆ ಪಡೆವವಕ್ಕೆ ಆಧ್ಯಾತ್ಮಿಕವಾಗಿ ಬದುಕಿಲ್ಲಿ ಮುಂದುವರಿಯಲೆ ಕೆಲವು ಕಟ್ಟುಪಾಡುಗೊ ಅಗತ್ಯ. ಆದರೆ, ಕೃಷ್ಣಪ್ರಜ್ಞೆಲಿ ರುಚಿ ಇಪ್ಪವಕ್ಕೆ ಮಾತ್ರ ಇಂತಹ ಕಟ್ಟುಪಾಡುಗೊ ಉಪಯೋಗ ಆವುತ್ತು. ವಾಸ್ತವವಾಗಿ ಕೃಷ್ಣಪ್ರಜ್ಞೆ ಇಪ್ಪವಂಗೆ ನಿಸ್ಸಾರವಾದ ವಸ್ತುಗಳಲ್ಲಿ ರುಚಿ ತಾನಾಗಿಯೇ ಹೋವುತ್ತು.

ಬನ್ನಂಜೆ ಹೇಳುತ್ತವು – ನಾವು ಸ್ಥಿತಪ್ರಜ್ಞ° ಹೇಳಿ ಆಯೇಕ್ಕಾರೆ ಇಂದ್ರಿಯಂಗಳ ಅಂತರ್ಮುಖಗೊಳುಸೆಕ್ಕು. ಆದರೆ, ಅದು ಅಷ್ಟು  ಸುಲಭದ ವಿಷಯವಲ್ಲ. ಸಾಧನಾ ಶರೀರದಲ್ಲಿರುವ ಸಾಧಕ°, ಇಂದ್ರಿಯಂಗಳ ಹೆರಾಣ ವಿಷಯಂಗಳ ಜೊತಗೆ ಸಂಪರ್ಕ ಆಗದಂತೆ ತಡದರೆ (ಏಕಾಂತದ ಅಭ್ಯಾಸ), ನೋಡುವ, ಕೇಳುವ ಎಲ್ಲಾ ಆಸೆಗೊ ಹೆರಟು ಹೋಕು. ಆದರೆ, ರುಚಿ (ನಾಲಗೆಯ ಚಪಲ) ಮತ್ತು ಶೃಂಗಾರ (ಕಾಮ)ವ ನಿವಾರುಸುವದು ಕಷ್ಟ. ಈ ಕಾರಣಕ್ಕಾಗಿ ನಾವು ಬ್ರಹ್ಮಚರ್ಯ ಪಾಲನೆ ಮಾಡೇಕ್ಕಾರೆ ಒಂದರಿ ಶೃಂಗಾರ ಭೋಗವ ಅನುಭವಿಸಿ ದಾಂಪತ್ಯ ಹೇಳಿರೆ ಎಂತರ ಎಂಬುದರ ಅರ್ತು ಮತ್ತೆ ಬ್ರಹ್ಮಚರ್ಯಕ್ಕೆ ಕಾಲಿಟ್ಟರೆ ಸಾಧನೆ ಸುಲಭ. ನಿಯಮಿತ ಆಹಾರ, ಉಪವಾಸ – ಅಧ್ಯಾತ್ಮಕ್ಕೆ ಪೂರಕ. ಅತಿ ಆಹಾರ, ತಾಮಸ ಹಾಗೂ ರಾಜಸ ಆಹಾರ (ತೊಗರಿಬೇಳೆ, ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆ, ಮಸಾಲೆ, ಮಾಂಸಾದಿ …) ಅಧ್ಯಾತ್ಮ ಸಾಧನೆಗೆ ತೀರಾ ವಿರುದ್ಧ. ಈ ಕಾರಣಕ್ಕಾಗಿ ಆರೇ ಅತಿಥಿ ಮನಗೆ ಬಂದಿಪ್ಪಗ ಅವಕ್ಕೆ ಒತ್ತಾಯ ಪೂರ್ವಕ ಉಣಬಡುಸಲಾಗ., ಮಾಡಿದ ಅಡುಗೆ ಮಿಕ್ಕಿಪ್ಪಗ ಹಾಳಾವ್ತನ್ನೇಳಿ ತಿಂಬದರಿಂದ ಆಹಾರವೂ ಹಾಳು ದೇಹವೂ ಹಾಳು!. ಒಟ್ಟಿಲ್ಲಿ, ಅಧ್ಯಾತ್ಮ ಸಾಧನೆಲಿ ಏಕಾಂತ ಮತ್ತು ಆಹಾರ ನಿಯಂತ್ರಣ ಸಾಧನೆಗೆ ಪೂರಕ. ಇದರಿಂದ ನಮ್ಮ ನಾಲಗೆಯ ಮತ್ತು ಭೋಗದ ಚಪಲ ಸಂಪೂರ್ಣ ನಿಗ್ರಹ ಆಗದ್ದರೂ ಕೂಡ ನಾವು ಭಗವಂತನಲ್ಲಿ ಸಂಪೂರ್ಣ ಶರಣಾದಪ್ಪಗ ಇಲ್ಲದಾವುತ್ತು.

ಶ್ಲೋಕ

ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥

ಪದವಿಭಾಗ

ಯತತಃ ಹಿ ಅಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ । ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಮ್ ಮನಃ ॥

ಅನ್ವಯ

ಹೇ ಕೌಂತೇಯ!, ಪ್ರಮಾಥೀನಿ ಇಂದ್ರಿಯಾಣಿ ಯತತಃ ವಿಪಶ್ಚಿತಃ ಅಪಿ ಪುರುಷಸ್ಯ ಮನಃ ಪ್ರಸಭಂ ಹರಂತಿ ಹಿ ॥

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀ ಮಗನೇ!, ಪ್ರಮಾಥೀನಿ – ಉದ್ವಿಗ್ನಗೊಳ್ಳುತ್ತಿಪ್ಪ, ಇಂದ್ರಿಯಾಣಿ – ಇಂದ್ರಿಯಂಗೊ, ಯತತಃ – ಪ್ರಯತ್ನಿಸುತ್ತಿಪ್ಪ, ವಿಪಶ್ಚಿತಃ – ವಿವೇಚನಾತ್ಮಕ ಜ್ಞಾನಪೂರ್ಣನ, ಅಪಿ -ಸಾನ, ಪುರುಷಸ್ಯ – ಮನುಷ್ಯನ, ಮನಃ – ಮನಸ್ಸಿನ, ಪ್ರಸಭಮ್ – ಒತ್ತಾಯಂದ, ಹರಂತಿ – ಎಳೆತ್ತು, ಹಿ – ಖಂಡಿತವಾಗಿಯೂ.

ಅನ್ವಯಾರ್ಥ

ಏ ಅರ್ಜುನ!, ಇಂದ್ರಿಯಂಗೊ ಎಷ್ಟು ಬಲಶಾಲಿ ಮತ್ತು ಆವೇಶಂದ ಕೆಲಸ ಮಾಡುತ್ತು ಹೇಳಿರೆ, ಅವುಗಳ ನಿಯಂತ್ರಿಸುಲೆ ಪ್ರಯತ್ನಿಸುತ್ತಿಪ್ಪವವನ ವಿವೇಚನಾವಂತನ ಮನಸ್ಸನ್ನೂ ಎಳಕ್ಕೊಂಡು ಹೋಗಿಬಿಡುತ್ತು.

ತಾತ್ಪರ್ಯ / ವಿವರಣೆ

ಇಂದ್ರಿಯಂಗಳ ಗೆಲ್ಲಲೆ ಪ್ರಯತ್ನಿಸುವ ಎಷ್ಟೋ ಮಂದಿ ವಿದ್ವಾಂಸರಾದ ಸಾಧುಗೊ, ತತ್ತ್ವಜ್ಞಾನಿಗೊ ಮತ್ತು ಆಧ್ಯಾತ್ಮಿಕವಾದಿಗೊ ಇದ್ದವು. ಆದರೆ, ಅವ್ವು ಎಷ್ಟೇ ಪ್ರಯತ್ನಪಟ್ಟರೂ ಅವ್ವು ಎಷ್ಟೇ ಶ್ರೇಷ್ಠರಾದರೂ ಕೂಡ ಕ್ಷೋಭೆಗೊಂಡ ಮನಸ್ಸಿನ ಕಾರಣಂದ ಐಹಿಕ ಇಂದ್ರಿಯ ಭೋಗಕ್ಕೆ ಒಂದೊಂದರಿ ಬಲಿ ಆವುತ್ತವು. ಮಹರ್ಷಿಯೂ, ಪರಿಪೂರ್ಣ ಯೋಗಿಯೂ ಆಗಿದ್ದ ವಿಶ್ವಾಮಿತ್ರರು ಕಠಿನ ತಪಸ್ಸಿಂದ ಮತ್ತು ಯೋಗಾಭ್ಯಾಸಂದ ಇಂದ್ರಿಯನಿಗ್ರಹಕ್ಕೆ ಶ್ರಮಿಸುತ್ತಿತ್ತಿದ್ದ. ಅಂದರೂ ಮೇನಕೆಯ ಶೃಂಗಾರ ಅವನ ಕಾಮಸುಖಕ್ಕೆಳದು ದಾರಿತಪ್ಪಿಸಿತ್ತು. ಆದ್ದರಿಂದ ಪೂರ್ಣ ಕೃಷ್ಣಪ್ರಜ್ಞೆಯಿಲ್ಲದ್ದೆ ಮನಸ್ಸನ್ನೂ ಇಂದ್ರಿಯಂಗಳನ್ನೂ ನಿಯಂತ್ರಿಸುವುದು ಬಹುಕಷ್ಟ. ಮನಸ್ಸಿನ ಕೃಷ್ಣನಲ್ಲಿ ನಿಲ್ಲುಸದ್ದೆ ಇಂತಹ ಐಹಿಕ ಚಟುವಟಿಕೆಗಳ ಕೊನೆಗಾಣುಸಲೆ ಸಾಧ್ಯ ಇಲ್ಲೆ.  ಕೃಷ್ಣಪ್ರಜ್ಞೆಯು ಮನಸ್ಸಿಲ್ಲಿ ಪೂರ್ಣ ಬೇರೂರಿರೆ ಮತ್ತಿಪ್ಪ ಯಾವುದೇ ಐಹಿಕ ಸಂಗತಿಗೊ ತಾನಾಗಿಯೇ ಅಸಹ್ಯ ಆವ್ತು.

ನಾವು ಎಷ್ಟೇ ಓದಿ, ಕೇಳಿ ತಿಳ್ಕೊಂಡಿದ್ದರೂ ಕೂಡ, ಸಾಧನೆಯ ಈ ದಾರಿ ಅಷ್ಟು ಸುಲಭವಲ್ಲ. ಪ್ರಯತ್ನದ ಛಲವಿಲ್ಲದ್ದೆ ಇದು ಅಸಾಧ್ಯ. ಅಧ್ಯಾತ್ಮದ ದಾರಿಲಿ ಸಾಗಲೆ ಮನಸ್ಸು ಗಟ್ಟಿಯಾಗಿರೇಕು. ಆದರೆ, ಇಲ್ಲಿ ಇನ್ನೊಂದು ಸಮಸ್ಯೆ ಹೇಳಿರೆ ಮನಸ್ಸು ಗಟ್ಟಿಯಪ್ಪಗ ಇಂದ್ರಿಯಂಗೊ ಸಡಿಲಗೊಳ್ಳುತ್ತು. ರಾಗ-ದ್ವೇಷ, ಕಾಮ-ಕ್ರೋಧಕ್ಕೆ ತುತ್ತಪ್ಪಲಾಗ. ಬಯಕೆಯ ಮೇಲೆ ಕಡಿವಾಣ ಇರೆಕು. ಆ ಕಾಲಕ್ಕೆ ಇಂದ್ರಿಯಂಗೊ ಸಡಿಲಗೊಂಡು ಮನಸ್ಸಿನ ಗೊಂದಲಕ್ಕೆ ತಳ್ಳಲಾಗ.

ಈ ರೀತಿ ಗಂಭೀರವಾಗಿಪ್ಪ ಸಮಸ್ಯೆಗೆ ಪರಿಹಾರ ಎಂತರ ? – ಮುಂದೆ ಬಪ್ಪ ವಾರ ನೋಡುವೋ°.

…..ಮುಂದುವರಿತ್ತು

ಕೆಮಿಲಿ ಕೇಳ್ಳೆ –

BHAGAVADGEETHA – CHAPTER 02 SHLOKAS 51 – 60 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

8 thoughts on “ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 51 – 60

  1. ಬಹುಶಃ, ಕೃಷ್ಣ ಒಂದು ಮಟ್ಟಿಂಗೆ ಮಾತಾಡಿ ಮುಗಿಶಿತ್ತಿದ್ದನೋ ತೋರ್ತು..
    ಎಂತಕೆ ಯುದ್ಧ ಮಾಡೆಕು? ಮಾಡಿರೆಂತ? ಮಾಡದ್ದರೆಂತ? ಮಾಡಿರೂ ಮಾಡದ್ದರೂ ಅಪ್ಪ ತಪ್ಪು-ಒಪ್ಪುಗೊ ಎಂತರ ಹೇಳಿ ಎಲ್ಲ – ಸಾಮಾಜಿಕ – ಆಧ್ಯಾತ್ಮಿಕ ಕಾರಣಂಗಳ ಸಮರ್ಪಕವಾಗಿ ವಿವರುಸಿ ಆಗಿತ್ತು.
    ಬಹುಶಃ ನಮ್ಮ ವ್ಯಗ್ರ ಮನಸ್ಸಿಂಗೆ ಅರ್ಥ ಆಗ ಹೇಳಿ ಕಂಡದಕ್ಕೋ ಎನೋ, ಅರ್ಜುನ ಮತ್ತೆ ಕೇಳಿದ ಪ್ರಷ್ನೆಯನ್ನೇ ನೆವ ಮಾಡಿಂಡು ಪುನಃ ಸುರುವಿಂದ ಇನ್ನೊಂದು ಕ್ರಮಲ್ಲಿ ವಿವರುಸುತ್ತಾ ಇದ್ದ°.

    ***

    ಏಮೆ ಕಾಲಿನ ಎಲ್ಲ ಒಳ ತಕ್ಕೊಂಡು ಚಿಪ್ಪಿನ ಒಳ ಆರ ಶುದ್ದಿಗೂ ಗೋಗದ್ದೇ ಕೂಪ ಹಾಂಗೆ,
    – ಬೇಜಾರಪ್ಪಗ ಮನಸ್ಸಿನ ಸ್ಥಿಮಿತ ಕಳಕ್ಕೊಳ್ಳದ್ದೆ
    – ಖುಶಿಲಿ ಉಬ್ಬದ್ದೆ
    – ಯಾವುದನ್ನೂ ತುಂಬ ಆಸಕ್ತಿ, ಹೆದರಿಕೆ, ಕೋಪ ತೋರುಸದ್ದೆ
    – ಹೆಚ್ಚು ಅಭಿನಂದಿಸದ್ದೆ, ದ್ವೇಶಿಸದ್ದೆ.
    ಇರು.
    ಅಷ್ಟಪ್ಪಗ ನಿನ್ನ ಪ್ರಜ್ನೆ ಸ್ಥಿರ ಅಕ್ಕು. ನೀನು ಮುನಿ ಅಪ್ಪೆ.

    ***

    ಏಮೆ ಹಾಂಗೆ ಆಯೆಕಾರೆ ಮಾಡೆಕಾದ್ದೆಂತ?

    ಇಂದ್ರಿಯಕ್ಕೆ ಪೊಸಿಟಿವೆ ಮತ್ತೆ ನೆಗೆಟಿವ್ ಆಹಾರ ಕೊಡೆಡ.
    ಎಂತಾ ಹೇಳಿರೆ, ತುಂಬ ಕೃಶ ಆದರೂ ಒಂದು ರಜ್ಜ ಆಹಾರ ಸಿಕ್ಕಿರೂ ಬೆಳವ ಗುಣ ಇದ್ದು ಅದಕ್ಕೆ. ಇದರಿಂದ ಹೇಂಗಿಪ್ಪವನೂ ಹೊರತಲ್ಲ.

    ಅಂಬಗ ಎಂತ ಮಾಡುದು, ಸುಖ, ದುಃಖ ಹೇಳುವ ಉಪ್ಪು ಹುಳಿ ಖಾರದ ಆಹಾರ ಆಹಾರ ಅಲ್ಲ. ಆನಂದ ಹೇಳುವ ಚೀಪೆ ಆಹಾರ ಕೊಡು. ಹೆಚ್ಚಿನ ಸೀವು ತಿಂದಪ್ಪಗ ಕಡಮ್ಮೆ ಸೀವು ಮೆಚ್ಚದ್ದೇ ಅಪ್ಪಹಾಂಗೆ, ಸುಖ ದುಃಖವ ಮೀರಿ ಆನಂದ ಹೇಳುವ ಚೀಪೆ ತಿಂದರೆ, ನಿಮ್ಮ ಮನಸ್ಸೂ ಒಳುದ ಎಲ್ಲ ಅಂಗಂಗಳಾ ಏಮೆಯ ಹಾಂಗೇ ಒಳ ಎಳಕ್ಕೊಂಗು. 🙂

    ***

    ಆನಂದ ಪಡವದು ಹೇಂಗೆ?

    ಅನುಪಾಲನೆಯೇ ಕರ್ತವ್ಯ ಹೇಳಿ ತಿಳುಕ್ಕೊಂಬದು. ಕರ್ತವ್ಯವ ತಪ್ಪದ್ದೇ ಫಲಾಪೇಕ್ಶೆ ಇಲ್ಲದ್ದೆ ಮಾಡುದು.
    ಇದು ಮಾತ್ರ ದಾರಿ.

    ***

    ಪುನಃ ಸುಲಭ ಸುಲಭ ಮಾಡಿ ಕೊಡ್ತಾ ಇದ್ದ° ಕೃಷ್ಣ° 🙂

  2. ಬರವಲೆ ಬಾಕಿ ಅದ್ದು ಇದಕ್ಕಾಗಿ | ಇನ್ನು ಬರೆತ್ತೆ | — ವಿಷಾದ — ಯೋಗ ಹೆಂಗಪ್ಪದು ಹೇಳಿ ಒಂದನೇ ಅಧ್ಯಾಯದ ಅಡಿಲೇ ಬರೆತ್ತೆ || ಇಲ್ಲಿ ಮುಖ್ಯವಾಗಿ ಜೀವನಲ್ಲಿ ಅಳವಡಿಸುಲೇ ಎದಿವದರನ್ನೇ ಬರವ ಪ್ರಯತ್ನ ||

  3. ಅಂತರ್ಜಾಲದ “ಒಪ್ಪಣ್ಣ ” ನ ಮಜಲಿಲಿ ಅಂತರ್ಗತವಾಗಿ ಹವ್ಯಕ ಭಾಷೆ ಲಿ ಈಗ ಬರುತ್ತಾ ಇಪ್ಪ “ಶ್ರೀಮದ್ಭಗವದ್ಗೀತಾ” — ಇದರ ವಿಷಯ ಮೊನ್ನೆ ೧೨-೦೪ -೨೦೧೨ ರಂದು ೩-೩೦ ಮಧ್ಯಾಹ್ನ ಮೇಲೆ — ಶ್ರೀ ಶ್ರೀ ಶ್ರೀಮದ್ಜಗದ್ಗುರು ಶಂಕಾರಾಚಾರ್ಯ ಶ್ರೀ ಮದ್ ರಾಘವೇಶ್ವರ ಭಾರತೀ ಸ್ವಾಮಿಗಳ ಅವಗಾಹನೆ ಗೆ ಗಿರಿ ನಗರಲ್ಲಿ ತರಲಾಯಿದು — ಅವರಿಂದ ಇದಕ್ಕಾಗಿ “ಪೂರ್ಣಾಶ್ರೀರ್ವಾದ ” ದ ಒಡನೆ ಮಂತ್ರಾಕ್ಷತೆ ಪಡಕ್ಕೊಂಡಿದು — ಹೇಳಿ ತಿಳಿಸುಲೇ ಅತ್ಯಂತ ಸಂತೋಷ ಆವುತ್ತ ಇದ್ದು || ಇದರ ಒಡನೆ “ಹವ್ಯವಚಾ” (ಹವ್ಯಕ ಭಾಷೆಲಿ) ” ಬ್ಲಾಗ್ ” ಬರವಲು ಪುರ್ಣಾಶೀರ್ವಾದದೊಂದಿಗೆ ಮಂತ್ರಾಕ್ಷತೆ ಆಯಿದು ||

    1. ಎದುರ್ಕಳ ಮಾವಂಗೆ ಇಲ್ಲಿಂದಲೇ ನಮೋ ನಮಃ. ನಿಂಗೊ ಎಂಗಳ ಹಿರಿಯರ ಸ್ಥಾನಲ್ಲಿದ್ದು, ಸಲಹೆ-ಮಾರ್ಗದರ್ಶನವನ್ನೂ ನೀಡಿ ಬೈಲಿನ ತುಂಬು ಅಭಿಮಾನಂದ ಈ ಗೀತಾಯಜ್ಞವ ಶ್ರೀ ಗುರುಗಳ ಅವಗಾಹನೆಗೆ ತಂದ ನಿಂಗಳ ಪ್ರೀತಿಯ ಸೇವಗೆ ತುಂಬುಹೃದಯದ ಧನ್ಯವಾದಂಗೊ. ಹರೇ ರಾಮ ॥

      ಶ್ರೀಗುರುಗಳ ಚರಣಾರವಿಂದಂಗಳಿಂಗೆ ಸಾಷ್ಟಾಂಗ ನಮಸ್ಕಾರ ಈ ಮೂಲಕ.

    2. ಮಾವ,
      ತುಂಬಾ ಖುಷಿ ಆವುತ್ತಾ ಇದ್ದು 🙂 ಗುರುಗೋ ಯಾವಾಗಲೂ “ರಾಮನ ತೃಪ್ತಿಗೆ ಶಿವನ ಪೂಜೆ; ಶಿವನ ತೃಪ್ತಿಗೆ ರಾಮನ ಪೂಜೆ” ಹೇಳುದು ನೆನಪಾವುತ್ತಾ ಇದ್ದು…

      ಗುರುಚರಣಗಳಿಗೆ ಅನಂತ ಪ್ರಣಾಮಗಳು… ಈಶ್ವರ ಮಾವಂಗೆ ನಮೋ ನಮ:

      “ವನ ಸಂರಕ್ಷಣಾ” ದ ಕುರಿತು ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸ್ವರ್ಣವಲ್ಲೀ ಸಂಸ್ಥಾನ ಮಾಡಿದ ಪ್ರವಚನಂಗೋ ಬೈಲಿಂಗೆ ಸಿಕ್ಕುವ ಹಾಂಗೆ ಇದ್ದರೆ ಒಳ್ಳೆದಿತ್ತು…

  4. [ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ – ಕೇಶವ]
    [ದುಃಖ ಸುಖದ ಸಿದ್ಧತೆ. ಸುಖ ದುಃಖದ ಸಿದ್ಧತೆ. ಇವು ಜೀವನದ ಅನಿವಾರ್ಯ ದ್ವಂದ್ವಂಗೊ]
    ಕೃಷ್ಣ ಪ್ರಜ್ಞೆ ಬಗ್ಗೆ ಒಳ್ಳೆ ವಿವರಣೆ. ಧನ್ಯವಾದಂಗೊ

  5. ವಿವರಣೆ ತುಂಬಾ ಲಾಯಕ ಮೂಡಿ ಬಯಿಂದು…

    “ಸ್ಥಿತ ಪ್ರಜ್ಹ ಅಥವಾ ಆರ ಪ್ರಜ್ಞೆಯು ದಿವ್ಯತ್ವಲ್ಲಿ ಇರುತ್ತೋ ಅವರ ಲಕ್ಷಣ೦ಗೋ ಎಂತರ?” ಹೇಳುವಲ್ಲಿ ಕೆಲವು ಬಿಂದುಗಳ ಸೇರುಸುತ್ತೆ… ಚೆನ್ನೈ ಭಾವನ ವಿವರಣೆ ಅಪೂರ್ಣ ಹೇಳಿ ಸೇರುಸುತ್ತ ಇಪ್ಪದು ಅಲ್ಲ… ಈ ಅನಂತ ಸಾಗರದ ಹಾಂಗಿಪ್ಪ ವಿಷಯವ ಎಷ್ಟು ತಿಳುಕ್ಕೊಂಡರೂ ಮುಗಿಯ… ಗೊಂತಿಪ್ಪ ಕೆಲವು ಸಣ್ಣ ಬಿಂದುಗಳ ಜೊತೆ ಸೇರುಸುತ್ತ ಇಪ್ಪದು ಅಷ್ಟೇ…

    ಅವ ಕೃಷ್ಣಪ್ರಜ್ಞೆಲಿ ಅಥವಾ ಭಗವಂತನ ಭಕ್ತಿಸೇವೆಲಿ ತನ್ಮಯನಾಗಿಪ್ಪ ಕಾರಣ ಭಗವಂತಂಗೆ ಎಂತರೂ ಅಪಚಾರ ಅಪ್ಪದು ಕಂಡರೆ ಅಥವಾ ಭಗವಂತನ ಸೇವೆಗೆ ಎಂತರೂ ಅಡ್ಡಿ ಆವುತ್ತಾ ಇದ್ದರೆ ಅವಂಗೆ ಕೋಪ ಅಥವಾ ದುಃಖ ಬತ್ತು… ಆದರೂ ಅದರ ತೋರುಸುದರಿಂದ ಪ್ರಯೋಜನ ಇದ್ದರೆ ಕೃಷ್ಣನ ಅನುಮತಿ ಪಡಕ್ಕೊಂಡು ಅವ ತೋರ್ಪಡಿಸುತ್ತ… ಇಲ್ಲದ್ದರೆ ಕೃಷ್ಣನ ಹತ್ತರೆಯೇ ಪುನ: ಪ್ರಾರ್ಥಿಸುತ್ತ… ಇದರಿಂದಾಗಿ ತಕ್ಷಣ ಕೃಷ್ಣ ಸರಿಪಡಿಸುತ್ತ… ಹಾಂಗಾಗಿ ಮಹಾತ್ಮರ ಬಳಿ ಇದ್ದ ಮಾತ್ರಂದಲೇ ನಮ್ಮ ಕೈಂದ ಆಗಿ ಹೋಪ ತಪ್ಪುಗಳ ಪ್ರಮಾಣ ಕಡಿಮೆ ಆವುತ್ತು… ಸದ್ಗುರುಸೇವೆ ದೇವರ ಸೇವೆಗಿಂತಲೂ ಶ್ರೇಷ್ಠ ಅಪ್ಪದು ಈ ಕಾರಣ೦ದಾಗಿಯೇ…

  6. ಈ ಆದರ್ಶ ಸ್ಥಿತಿಯ ಮುಟ್ಟುದು ಕಷ್ಟ;ಆದರೆ ಸುಲಭವಾಗಿ ತಿಳಿಸಿದ ಚೆನ್ನೈ ಭಾವಂಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×