Oppanna.com

ಗರುಡಪುರಾಣ – ಅಧ್ಯಾಯ 16 – ಭಾಗ 04

ಬರದೋರು :   ಚೆನ್ನೈ ಬಾವ°    on   06/03/2014    3 ಒಪ್ಪಂಗೊ

ಚೆನ್ನೈ ಬಾವ°

ಮನುಷ್ಯ° ತಾಪತ್ರಯಂಗಳಿಂದ ಸಾಂತ್ವನ ಪಡವಲೆ ಮೋಕ್ಷವೃಕ್ಷದ ತಣಿಲಿನ ಆಶ್ರಯಿಸೆಕು. ಶ್ರೀಗುರುಮುಖಂದ ಜ್ಞಾನಾರ್ಜನೆ ಮಾಡಿ ತತ್ತ್ವಜ್ಞನಾಗಿ ಬ್ರಹ್ಮನಿರ್ವಾಣಕ್ಕೆ ಶ್ರಮಿಸೆಕು ಹೇಳಿ ಹೇಳಿದಲ್ಯಂಗೆ ಕಳುದವಾರ. ಹಾಂಗಿಪ್ಪ ತತ್ತ್ವಜ್ಞ° ತನ್ನ ಅಂತ್ಯ ಹತ್ರೆ ಆದಪ್ಪಗ ಮಾಡೇಕ್ಕಾದ ಅಂತಿಮ ಕಾರ್ಯಂಗ ಎಂತರ ಹೇದು ಮುಂದೆ –
 
ಗರುಡಪುರಾಣ – ಅಧ್ಯಾಯ 16 – ಭಾಗ 04images
 
ಅಂತಕಾಲೇ ತು ಪುರುಷ ಆಗತೇ ಗತಸಾಧ್ವಸಃ ।
ಛಿಂದ್ಯಾದಸಂಗಶಸ್ತ್ರೇಣ ಸ್ಪೃಹಾಂ ದೇಹೇsನು ಯೇ ಚ ತಮ್ ॥೧೦೩॥
(ಆ) ಪುರುಷ°, ತನ್ನ ಅಂತ್ಯಕಾಲ ಹತ್ರೆ ಬಂದಪ್ಪಗ, ನಿರ್ಭಯನಾಗಿ, ಅಸಂಗ ಎಂಬ ಶಸ್ತ್ರಂದ ತನ್ನ ದೇಹದ ಮತ್ತೆ ಅದರ ಅನುಸರುಸುವ ಬಂಧು ಬಾಂಧವರತ್ರಾಣ ಆಸಕ್ತಿಯ ಕತ್ತರುಸೆಕು.
ಗೃಹಾತ್ಪ್ರವ್ರಜಿತೋ ಧೀರಃ ಪುಣ್ಯತೀರ್ಥಜಲಾತ್ಪ್ಲುತಃ ।
ಶುಚೋ ವಿವಿಕ್ತ ಆಸೀನೋ ವಿಧಿವತ್ಕಲ್ಪಿತಾಸನೇ ॥೧೦೪॥
ಮನೆಯ ಬಿಟ್ಟಿಕ್ಕಿ, ಆ ಧೀರ° ಪುಣ್ಯ ತೀರ್ಥಂಗಳ ನೀರಿಲ್ಲಿ ಮಿಂದು, ಪವಿತ್ರವಾದ ಏಕಾಂತ ಸ್ಥಳಲ್ಲಿ ವಿಧಿಪೂರ್ವಕವಾಗಿ ನಿರ್ಮಿಸಿದ ಆಸನಲ್ಲಿ ಕೂದೊಂಡು,
ಅಭ್ಯಸೇನ್ಮನಸಾ ಶುದ್ಧಂ ತ್ರಿವೃದ್ಬ್ರಹ್ಮಾಕ್ಷರಂ ಪರಮ್ ।
ಮನೋ ಯಚ್ಛೇಜ್ಜಿತಶ್ವಾಸೋ ಬ್ರಹ್ಮಬೀಜಮವಿಸ್ಮರನ್ ॥೧೦೫॥
ಪವಿತ್ರವಾದ ಅ, ಉ, ಮ ಹೇಳ್ವ ಮೂರು ಅಕ್ಷರಂಗಳಿಂದ ಕೂಡಿದ ಶ್ರೇಷ್ಠವಾದ ಬ್ರಹ್ಮಾಕ್ಷರ ಓಂಕಾರವ ಮನಸ್ಸಿಲ್ಲ್ಯೇ ಅಭ್ಯಾಸ ಮಾಡ್ಯೊಂಡು ಶ್ವಾಸವ ಗೆದ್ದು ಓಂಕಾರವ ಸ್ಮರಿಸಿಗೊಂಡು, ಮನಸ್ಸಿನ ನಿರೋಧಿಸೆಕು.
ನಿಯಚ್ಛೇದ್ವಿಷಯೋಭ್ಯೋsಕ್ಷಾನ್ಮನಸಾ ಬುದ್ಧಿ ಸಾರಥಿಃ ।
ಮನಃ ಕರ್ಮಭಿರಾಕ್ಷಿಪ್ತಂ ಶುಭಾರ್ಥೇ ಧಾರಯೇದ್ಧಿಯಾ ॥೧೦೬॥
ಬುದ್ಧಿಯನ್ನೇ ಸಾರಥಿಯನ್ನಾಗಿ ಮಾಡಿಗೊಂಡ ಮನಸ್ಸಿಂದ ಇಂದ್ರಿಯಂಗಳ ವಿಷಯಂಗಳಿಂದ ತಡೆಕು. ಕರ್ಮಂಗಳಿಂದ ಎಳೆಯಲ್ಪಟ್ಟ ಮನಸ್ಸಿನ ಬುದ್ಧಿಂದ ಶುಭಕಾರ್ಯಂಗಳಲ್ಲಿ ಧಾರಣೆ ಮಾಡೆಕು.
ಅಹಂ ಬ್ರಹ್ಮ ಪರಂ ಧಾಮ ಬ್ರಹ್ಮಾಹಂ ಪರಮಂ ಪದಮ್ ।
ಏವಂ ಸಮೀಕ್ಷ್ಯ ಚಾತ್ಮಾನಮತ್ಮನ್ಯಾಧಾಯ ನಿಷ್ಕಲೇ ॥೧೦೭॥
‘ಆನು ಪರಮ ಧಾಮವಾದ ಬ್ರಹ್ಮ°, ಆನು ಪರಮಪದವಾದ ಬ್ರಹ್ಮ’ ಹೇದು ತಿಳ್ಕೊಂಡು ಅಖಂಡವಾದ ಆತ್ಮನಲ್ಲಿ ತನ್ನ ಆತ್ಮವ ಸ್ಥಾಪನೆ ಮಾಡ್ಯೊಂಡು ಧ್ಯಾನ ಮಾಡೆಕು.
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ ।
ಯಃ ಪ್ರಯಾತಿ ತ್ಯಜಂದೇಹಂ ಸ ಯಾತಿ ಪರಮಾಂ ಗತಿಮ್ ॥೧೦೮॥
‘ಓಂ’ ಹೇಳ್ವ ಏಕಾಕ್ಷರ ಬ್ರಹ್ಮನ ಉಚ್ಚರಿಸ್ಯೊಂಡು ಎನ್ನನ ಸ್ಮರಿಸಿಗೊಂಡು ಯಾವಾತ° ದೇಹವ ಬಿಟ್ಟಿಕ್ಕಿ ಹೋವುತ್ತನೋ, ಅವ° ಪರಮ ಗತಿಯ ಹೊಂದುತ್ತ°.
ನ ಯತ್ರ ದಾಂಭಿಕಾ ಯಾಂತಿ ಜ್ಞಾನವೈರಾಗ್ಯವರ್ಜಿತಾಃ ।
ಸುಧಿಯಸ್ತಾಂ ಗತಿಂ ಯಾಂತಿ ತಾನಹಂ ಕಥಯಾಮಿ ತೇ ॥೧೦೯॥
ಜ್ಞಾನವೈರಾಗ್ಯಂಗಳ ಬಿಟ್ಟ ದಾಂಭಿಕ ಜೆನಂಗೊ ಅಲ್ಲಿಗೆ ಹೋವ್ತವಿಲ್ಲೆ. ಆ ಗತಿಯ ಹೊಂದುವ ಬುದ್ಧಿವಂತರ ವಿಷಯವ ಆನು ನಿನಗೆ ಹೇಳುತ್ತೆ.
ನಿರ್ಮಾನಮೋಹಾ ಜಿತಸಂಗದೋಷಾ ಅಧ್ಯಾತ್ಮನಿಷ್ಠಾ ವಿನಿವೃತ್ತಕಾಮಾಃ ।
ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್ಗಚ್ಛಂತ್ಯಮೂಢಾಃ ಪದಮವ್ಯಯಮ್ ತತ್ ॥೧೧೦॥
ಮಾನ ಮೋಹರಹಿತರಾಗಿ, ಸಂಗ ಹೇಳ್ವ ದೋಷವ ಗೆದ್ದೋರು, ಆತ್ಮಜ್ಞಾನಲ್ಲಿ ನಿಷ್ಠರಾದೋರು, ಕಾಮಂದ ದೂರವಾದೋರು, ಸುಖ ಮತ್ತೆ ದುಃಖಂಗಳ ದ್ವಂದಂದ ಮುಕ್ತರಾದೋರು – ಇಂತಹ ಜ್ಞಾನಿಗೊ ಅವಿನಾಶಿಯಾದ ಪದಕ್ಕೆ ಹೋವುತ್ತವು.
ಜ್ಞಾನಹ್ರದೇ ಸತ್ಯಜಲೇ ರಾಗದ್ವೇಷಮಲಾಪಹೇ ।
ಯಃ ಸ್ನಾತಿ ಮಾನಸೇ ತೀರ್ಥೇ ಸ ವೈ ಮೋಕ್ಷಮವಾಪ್ನುಯಾತ್ ॥೧೧೦॥
ಜ್ಞಾನ ಹೇಳ್ವ ಕೆರೆಲಿ, ರಾಗದ್ವೇಷಂಗೊ ಹೇಳ್ವ ಮಲವ ದೂರ ಮಾಡುವ ಸತ್ಯ ಹೇಳ್ವ ಜಲ ಇಪ್ಪ ಮಾನಸತೀರ್ಥಲ್ಲಿ ಯಾವಾತ° ಮೀಯ್ತನೋ, ಅವ° ನಿಶ್ಚಯವಾಗ್ಯೂ ಮೋಕ್ಷವ ಪಡೆತ್ತ°.
ಪ್ರೌಢಂ ವೈರಾಗ್ಯಮಾಸ್ಥಾಯ ಭಜತೇ ಮಾಮನನ್ಯಭಾಕ್ ।
ಪೂರ್ಣದೃಷ್ಟಿಃ ಪ್ರಸನ್ನಾತ್ಮಾ ಸ ವೈ ಮೋಕ್ಷಮವಾಪ್ನುಯಾತ್ ॥೧೧೩॥
ಪ್ರೌಢವಾದ ವೈರಾಗ್ಯಲ್ಲಿ ಸ್ಥಿರನಾಗಿ, ಅನ್ಯರನ್ನಲ್ಲದ್ದೆ ಎನ್ನ ಭಜಿಸುವವ°, ಪೂರ್ಣದೃಷ್ಟಿಯಿಪ್ಪವನೂ, ಪ್ರಸನ್ನಚಿತ್ತನೂ ಆದ ಅವ° ನಿಶ್ಚಯವಾಗ್ಯೂ ಮೋಕ್ಷವ ಪಡೆತ್ತ°.
ತ್ಯಕ್ತ್ವಾಗೃಹಂ ಚ ಯಸ್ತೀರ್ಥೇ ನಿವಸೇನ್ಮರಣೋತ್ಸುಕಃ ।
ಮ್ರಿಯತೇ ಮುಕ್ತಿಕ್ಷೇತ್ರೇಷು ಸ ವೈ ಮೋಕ್ಷಮವಾಪ್ನುಯಾತ್ ॥೧೧೩॥
ಯಾವಾತ° ಮರಣವ ಎದುರುನೋಡ್ಯೊಂಡು ಮನೆಯ ಬಿಟ್ಟಿಕ್ಕಿ ತೀರ್ಥಸ್ಥಾನಲ್ಲಿ ವಾಸಮಾಡುತ್ತನೋ ಅಥವಾ ಮುಕ್ತಿಕ್ಷೇತ್ರಲ್ಲಿ ಮರಣ ಹೊಂದುತ್ತನೋ, ಅವ° ನಿಶ್ಚಯವಾಗ್ಯೂ ಮೋಕ್ಷವ ಪಡೆತ್ತ°.
ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ ।
ಪುರೀ ದ್ವಾರಾವತೀ ಜ್ಞೇಯಾಃ ಸಪ್ತೈತಾ ಮೋಕ್ಷಾದಾಯಿಕಾಃ ॥೧೧೪॥
ಅಯೋಧ್ಯಾ, ಮಥುರಾ, ಮಾಯಾ (ಹರಿದ್ವಾರ), ಕಾಶಿ, ಕಾಂಚಿ, ಅವಂತಿಕಾ (ಉಜ್ಜೈನಿ), ದ್ವಾರಾವತಿ – ಈ ಏಳು ಪುರಂಗೊ ಮೋಕ್ಷದಾಯಕ ಹೇದು ತಿಳಿಯೆಕು.
ಇತಿ ತೇ ಕಥಿತಂ ತಾರ್ಕ್ಷ್ಯ ಮೋಕ್ಷಧರ್ಮಂ ಸನಾತನಮ್ ।
ಜ್ಞಾನವೈರಾಗ್ಯಸಹಿತಂ ಶ್ರುತ್ವಾ ಮೋಕ್ಷಮವಾಪ್ನುಯಾತ್ ॥೧೧೫॥
ಹೇ ಗರುಡ!, ಹೀಂಗೆ ನಿನಗೆ ಆನು ಹೇಳಿದ ಸನಾತನವಾದ ಮೋಕ್ಷಧರ್ಮವ ಜ್ಞಾನ ವೈರಾಗ್ಯಂಗಳ ಸಮೇತವಾಗಿ ಕೇಳಿದವ° ಮೋಕ್ಷವ ಪಡೆತ್ತ°.
ಮೋಕ್ಷಂ ಗಚ್ಛಂತಿ ತತ್ತ್ವಜ್ಞಾ ಧಾರ್ಮಿಕಾಃ ಸ್ವರ್ಗತಿಂ ನರಾಃ ।
ಪಾಪಿನೋ ದುರ್ಗತಿಂ ಯಾಂತಿ ಸಂಸರಂತಿ ಖಗಾದಯಃ ॥೧೧೬॥
ತತ್ತ್ವಜ್ಞಾನಿಗೊ ಮೋಕ್ಷಕ್ಕೆ ಹೋವುತ್ತವು. ಧಾರ್ಮಿಕರಾದ ಮನುಷ್ಯರು ಸ್ವರ್ಗಕ್ಕೆ ಹೋವುತ್ತವು. ಪಾಪಿಗೊ ದುರ್ಗತಿಯ ಹೊಂದುತ್ತವು ಹಾಂಗೂ ಪಕ್ಷಿ ಮೊದಲಾದವುಗಳಾಗಿ ಹುಟ್ಟಿ ಸಂಸಾರ ಚಕ್ರಲ್ಲಿ ಸುತ್ತಿಗೊಂಡಿರುತ್ತವು.
ಇತ್ಯೇವಂ ಸರ್ವಶಾಸ್ತ್ರಾಣಾಂ ಸಾರೋದ್ಧಾರೋ ನಿರೂಪಿತಃ ।
ಮಯಾ ತೇ ಷೋಡಶಾಧ್ಯಾಯೈಃ ಕಿಂ ಭೂಯಃ ಶ್ರೋತುಮಿಚ್ಛಸಿ ॥೧೧೭॥
ಈ ರೀತಿ ಸಕಲ ಶಾಸ್ತ್ರಂಗಳ ಸಾರೋದ್ಧಾರವ ಆನು ನಿನಗೆ ಹದ್ನಾರು ಅಧ್ಯಾಯಂಗಳಲ್ಲಿ ನಿರೂಪಿಸಿದ್ದೆ. ಇನ್ನು ಎಂತ ಕೇಳ್ಳೆ ಇಚ್ಛಿಸುತ್ತೆ?
ಸೂತ ಉವಾಚ
ಏವಂ ಶ್ರುತ್ವಾ ವಚೋ ರಾಜನ್ಗರುಡೋ ಭಗವನ್ಮುಖಾತ್ ।
ಕೃತಾಂಜಲಿರುವಾಚೇದಂ ತಂ ಪ್ರಣಮ್ಯ ಮುಹುರ್ಮುಹುಃ ॥೧೧೮॥
ಸೂತಪುರಾಣಿಕ° ಹೇಳಿದ°
ಗರುಡ ಪಕ್ಷಿಗಳ ರಾಜನಾದ ವೈನತೇಯ°, ಭಗವಂತನ ಮುಖಂದ ಈ ಪ್ರಕಾರದ ಮಾತುಗಳ ಕೇಳಿ, ಮತ್ತೆ ಮತ್ತೆ ಪ್ರಣಾಮಂಗಳ ಮಾಡಿ, ಕೈ ಜೋಡಿಸಿಗೊಂಡು ಹೀಂಗೆ ಹೇಳಿದ° –
ಭಗವನ್ದೇವದೇವೇಶ ಶ್ರಾವಯಿತ್ವಾ ವಚೋsಮೃತಮ್ ।
ತಾರಿತೋsಹಂ ತ್ವಯಾ ನಾಥ ಭವಸಾಗರತಃ ಪ್ರಭೋ ॥೧೧೯॥
‘ಹೇ ಭಗವನ್, ಹೇ ದೇವ-ದೇವೇಶ!. ಹೇ ನಾಥ!, ಹೇ ಪ್ರಭೋ!, ನೀನು ಎನಗೆ ಅಮೃತವಚನಂಗಳ ಕೇಳಿಸಿ ಎನ್ನ ಭವಸಾಗರಂದ ದಾಂಟುಸಿದೆ.
ಸ್ಮಿತೋsಸ್ಮಿ ಗತಸಂದೇಹಃ ಕೃತಾರ್ಥೋsಸ್ಮಿ ನ ಸಂಶಯಃ ।
ಇತ್ಯುಕ್ತ್ವಾ ಗರುಡಸ್ತೂಷ್ಣೀಂ ಸ್ಥಿತ್ವಾ ಧ್ಯಾನಪರೋsಭವತ್ ॥೧೨೦॥
ಈಗ ಆನು ಸಂದೇಹರಹಿತ° ಆಗಿದ್ದೆ ಮತ್ತೆ ಕೃತಾರ್ಥನೂ ಆಗಿದ್ದೆ, ಇದರ್ಲಿ ಸಂಶಯ ಇಲ್ಲೆ’. – ಹೀಂಗೆ ಹೇಳಿಕ್ಕಿ ಗರುಡ ಮೌನವಾಗಿ ಕೂದು ಧ್ಯಾನಲ್ಲಿ ತಲ್ಲೀನ ಆದ°.
ಸ್ಮರಣಾದ್ದುರ್ಗತಿಹರ್ತಾ ಪೂಜನಯಜ್ಞೇನ ಸದ್ಗತೇರ್ದಾತಾ ।
ಯಃ ಪರಯಾ ನಿಜಭಕ್ತ್ವ್ಯಾ ದದಾತಿ ಮುಕ್ತಿಂ ಸ ನಃ ಹರಿಃ ಪಾತು ॥೧೨೧॥
ಸ್ಮರಣೆ ಮಾತ್ರಂದಲೇ ದುರ್ಗತಿಯ ನಾಶಮಾಡುವ, ಪೂಜೆ, ಯಜ್ಞಂಗಳಿಂದ ಸದ್ಗತಿಯ ಕೊಡುವ, ತನ್ನಲ್ಲಿ ಮಡಿಗಿದ ಶ್ರೇಷ್ಠವಾದ ಭಕ್ತಿಂದ ಮುಕ್ತಿಯ ಕೊಡುವ ಆ ಹರಿ ನಮ್ಮ ರಕ್ಷಿಸಲಿ.
ಇತಿ ಶ್ರೀಗರುಡಪುರಾಣೇ ಸಾರೋದ್ಧಾರೇ ಭಗವದ್ಗರುಡಸಂವಾದೇ ಮೋಕ್ಷಧರ್ಮನಿರೂಪಣಂ ನಾಮ ಷೋಡಶೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಭಗವಂತ-ಗರುಡ ಸಂವಾದಲ್ಲಿ ಮೋಕ್ಷಧರ್ಮನಿರೂಪಣೆ ಹೇಳ್ವ ಹದ್ನಾರನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
ತತ್ತ್ವಜ್ಞನಾದ ಮನುಷ್ಯನ ಅಂತ್ಯಕಾಲ ಹತ್ರೆ ಆದಪ್ಪಗ ಆ ಮನುಷ್ಯ°, ಹೆದರಿಕೆಯ ನಿರ್ಭಯನಾಗಿ ಅನಾಸಕ್ತಿರೂಪಿ ಶಸ್ತ್ರಂದ ದೇಹ-ಮನೆ ಇತ್ಯಾದಿ ವಿಷಯಂಗಳ ಆಸಕ್ತಿಯ ಕತ್ತರಿಸಿ ಹಾಕೆಕು. ಆ ಧೀರ ಮನುಷ್ಯ° ಮನೆಂದ ಹೆರಟು ಪವಿತ್ರ ತೀರ್ಥ ಜಲಲ್ಲಿ ಮಿಂದು ಪವಿತ್ರನಾಗಿ ಪವಿತ್ರವಾದ ಏಕಾಂತ ಜಾಗೆಲಿ ವಿಧಿವತಾದ ಆಸನಲ್ಲಿ ಕೂದುಗೊಂಡು, ಪರಮಶುದ್ಧ ಮೂರಕ್ಷರಂದ ಕೂಡಿದ ಬ್ರಹ್ಮಾಕ್ಷರ ಓಂಕಾರವ ಮನಸ್ಸಿಲ್ಲಿಯೇ ಧ್ಯಾನ ಮಾಡೆಕು. ಬ್ರಹ್ಮಬೀಜಸ್ವರೂಪ ಓಂಕಾರವ ನಿರಂತರವಾಗಿ ಸ್ಮರಣೆ ಮಾಡ್ಯೊಂಡು, ಶ್ವಾಸವ ಗೆದ್ದು ಮನವ ನಿಯಂತ್ರಣಗೊಳುಸೆಕು. ಬುದ್ಧಿರೂಪಿ ಸಾರಥಿಯ ಸಕಾಯಂದ ಮನರೂಪಿ ಕಡಿವಾಣಂದ ಇಂದ್ರಿಯವಿಷಯಂಗಳ ನಿಗ್ರಹಿಸೆಕು. ಮತ್ತೆ ಕರ್ಮಂಗಳಿಂದ ಸೆಳೆಯಲ್ಪಟ್ಟ ಆಕ್ಷಿಪ್ತ (ದುಷ್ಟ) ಮನಸ್ಸಿನ ಬುದ್ಧಿಯ ಸಹಾಯಂದ ಶುಭ ಅರ್ಥಂಗಳಲ್ಲಿ (ಕಾರ್ಯಂಗಳಲ್ಲಿ), ಅರ್ಥಾತ್., ಪರಬ್ರಹ್ಮನ ಚಿಂತನೆಲಿ ತೊಡಗುಸೆಕು. ‘ಆನು ಪರಮಪದವಾದ ಬ್ರಹ್ಮ, ಆನು ಪರಮಧಾಮವಾದ ಬ್ರಹ್ಮ’ ಹೇದು ತಿಳ್ಕೊಂಡು ಅಖಂಡವಾಗಿ ತನ್ನ ಆತ್ಮವ ನಿಷ್ಕಲ ಪರಮಾತ್ಮನಲ್ಲಿ ತೊಡಗುಸೆಕು. ಮತ್ತೆ ಓಂ ಹೇಳ್ವ ಏಕಾಕ್ಷರ ಬ್ರಹ್ಮನ ಉಚ್ಚರಿಸ್ಯೊಂಡು ಅವನನ್ನೇ ಸ್ಮರಣೆಲಿ ನೆಂಪಿಸಿಗೊಂಡು ಯಾವಾತ° ದೇಹ ಬಿಟ್ಟಿಕ್ಕಿ ಹೋವ್ತನೋ, ಅವ° ಪರಮ ಗತಿಯ ಹೊಂದುತ್ತ°.
ಜ್ಞಾನ ವೈರಾಗ್ಯಂಗಳ ಬಿಟ್ಟ ದಾಂಭಿಕರು ಅಲ್ಲಿಗೆ (ಮೋಕ್ಷಗತಿಗೆ) ಹೋವ್ತವಿಲ್ಲೆ . ಆ ಗತಿಯ ಹೊಂದುವ ಬುದ್ಧಿವಂತರ ಕುರಿತಾಗಿ – ಮಾನ, ಮೋಹರಹಿತರಾಗಿ, ಸಂಗ ಹೇಳ್ವ ದೋಷವ ಗೆದ್ದವು, ಆತ್ಮಜ್ಞಾನಲ್ಲಿ ನಿಷ್ಠರಾದೋರು, ಕಾಮಂದ ದೂರವಾದೋರು, ಸುಖ ಮತ್ತೆ ದುಃಖಂಗಳ ದ್ವಂದಂದ ಮುಕ್ತರಾದೋರು – ಇಂತಹ ಜ್ಞಾನಿಗೊ ಅವಿನಾಶಿಯಾದ ಪದಕ್ಕೆ ಹೋವುತ್ತವು. ಜ್ಞಾನ ಹೇಳ್ವ ಕೆರೆಲಿ, ರಾಗದ್ವೇಷಂಗೊ ಹೇಳ್ವ ಮಲವ ದೂರ ಮಾಡುವ ಸತ್ಯ ಹೇಳ್ವ ಜಲ ಇಪ್ಪ ಮಾನಸತೀರ್ಥಲ್ಲಿ ಯಾವಾತ° ಮೀಯ್ತನೋ, ಅವ° ನಿಶ್ಚಯವಾಗ್ಯೂ ಮೋಕ್ಷವ ಪಡೆತ್ತ°. ಏವ ಪ್ರೌಢ ವ್ಯಕ್ತಿ ವೈರಾಗ್ಯವ ಹೊಂದಿ, ಅನ್ಯಭಾವಂಗಳ ಬಿಟ್ಟಿಕ್ಕಿ ಬರೇ ಅನನ್ಯ ಭಾವಂದ ಭಗವಂತನ ಭಜನೆ ಮಾಡುತ್ತನೋ, ಭಗವಂತನಲ್ಲಿ ಪೂರ್ಣದೃಷ್ಟಿಯ ನೆಡುತ್ತನೋ, ಅಂತಹ ಪವಿತ್ರಾತ್ಮ ಸಂತ° ಮೋಕ್ಷಪ್ರಾಪ್ತಿಯ ಹೊಂದುತ್ತ. ಯಾವಾತ° ಮರಣವ ಎದುರುನೋಡ್ಯೊಂಡು ಮನೆಯ ಬಿಟ್ಟಿಕ್ಕಿ ತೀರ್ಥಸ್ಥಾನಲ್ಲಿ ವಾಸಮಾಡುತ್ತನೋ ಅಥವಾ ಮುಕ್ತಿಕ್ಷೇತ್ರಲ್ಲಿ ಮರಣ ಹೊಂದುತ್ತನೋ, ಅವ° ನಿಶ್ಚಯವಾಗ್ಯೂ ಮೋಕ್ಷವ ಪಡೆತ್ತ°. ಅಯೋಧ್ಯಾ, ಮಥುರಾ, ಮಾಯಾ (ಹರಿದ್ವಾರ), ಕಾಶಿ, ಕಾಂಚಿ, ಅವಂತಿಕಾ (ಉಜ್ಜೈನಿ), ದ್ವಾರಾವತಿ – ಈ ಏಳು ಪುರಂಗೊ ಮೋಕ್ಷದಾಯಕವಾಗಿದ್ದು.
ಭಗವಂತ° ಹೇಳುತ್ತ° – ಹೇ ಗರುಡ!, ಆನು ಸನಾತನ ಮೋಕ್ಷಧರ್ಮದ ಕುರಿತಾಗಿ ನಿನಗೆ ಹೇಳಿದೆ. ಜ್ಞಾನ ಮತ್ತೆ ವೈರಾಗ್ಯ ಸಹಿತವಾಗಿ ಇದರ ಕೇಳಿದವ° ಮೋಕ್ಷಪ್ರಾಪ್ತಿಯ ಹೊಂದುತ್ತ°. ತತ್ತ್ವಜ್ಞ ಪುರುಷ° ಮೋಕ್ಷಪ್ರಾಪ್ತಿಯ ಪಡೆತ್ತ°, ಸಕಾಮ ಧರ್ಮಾನುಷ್ಠಾನ ಮಾಡುವ ಧಾರ್ಮಿಕ ಪುರುಷ ಸ್ವರ್ಗವ ಪ್ರಾಪ್ತಿ ಹೊಂದುತ್ತ°. ಪಾಪಿಗೊ ದುರ್ಗತಿಯ (ನರಕ) ಪ್ರಾಪ್ತಿಹೊಂದುತ್ತವು ಹಾಂಗೂ ಮುಂದೆ ಪಶು-ಪಕ್ಷಿ ಮೊದಲಾದವುಗಳಾಗಿ ಜನನ-ಮರಣರೂಪಿ ಸಂಸಾರ ಚಕ್ರಲ್ಲಿ ಸುತ್ತಿಗೊಂಡಿರುತ್ತವು. ಈ ಪ್ರಕಾರ ಸಮಸ್ತ ಶಾಸ್ತ್ರಂಗಳ ಸಾರದ್ಧೋರವ ಈ ಹದ್ನಾರು ಅಧ್ಯಾಯಂಗಳಲ್ಲಿ ಹೇಳಿದೆ. ಇನ್ನೀಗ ನೀನು ಎಂತ ತಿಳಿವಲೆ ಬಯಸುತ್ತೆ?.
ಸೂತಪುರಾಣಿಕ ಹೇಳಿದ° – ಗರುಡ ಪಕ್ಷಿಗಳ ರಾಜನಾದ ವೈನತೇಯ°, ಭಗವಂತನ ಮುಖಂದ ಈ ಪ್ರಕಾರದ ಮಾತುಗಳ ಕೇಳಿ, ಮತ್ತೆ ಮತ್ತೆ ಪ್ರಣಾಮಂಗಳ ಮಾಡಿ, ಕೈ ಜೋಡಿಸಿಗೊಂಡು ಹೀಂಗೆ ಹೇಳಿದ° – ಹೇ ದೇವಾದಿದೇವ ಭಗವಂತ! ಹೇ ನಾಥ!, ಹೇ ಪ್ರಭೋ!, ನೀನು ಎನಗೆ ಅಮೃತವಚನಂಗಳ ಕೇಳಿಸಿ ಎನ್ನ ಭವಸಾಗರಂದ ದಾಂಟುಸಿದೆ. ಆನೀಗ ಸಂದೇಹರಹಿತ° ಆಗಿದ್ದೆ, ಮತ್ತೆ ಕೃತಾರ್ಥನೂ ಆಗಿದ್ದೆ, ಇದರ್ಲಿ ಸಂಶಯ ಇಲ್ಲೆ’. – ಹೀಂಗೆ ಹೇಳಿಕ್ಕಿ ಗರುಡ ಮೌನವಾಗಿ ಕೂದು ಧ್ಯಾನಲ್ಲಿ ತಲ್ಲೀನ ಆದ°.
ಸ್ಮರಣೆ ಮಾತ್ರಂದಲೇ ದುರ್ಗತಿಯ ನಾಶಮಾಡುವ, ಪೂಜೆ, ಯಜ್ಞಂಗಳಿಂದ ಸದ್ಗತಿಯ ಕೊಡುವ, ತನ್ನಲ್ಲಿ ಮಡಿಗಿದ ಶ್ರೇಷ್ಠವಾದ ಭಕ್ತಿಂದ ಮುಕ್ತಿಯ ಕೊಡುವ ಆ ಹರಿ ನಮ್ಮ ರಕ್ಷಿಸಲಿ.
ಇಲ್ಲಿಗೆ ಗರುಡಪುರಾಣಲ್ಲಿ ಸಕಲಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ಭಗವಂತ-ಗರುಡ ಸಂವಾದಲ್ಲಿ ಮೋಕ್ಷಧರ್ಮನಿರೂಪಣೆ ಹೇಳ್ವ ಹದ್ನಾರನೇ ಅಧ್ಯಾಯ ಮುಗುದತ್ತು.
 
[ಚಿಂತನೀಯಾ –
ದುರ್ಲಭವಾದ ಮನುಷ್ಯಜನ್ಮವ ಪಡಕ್ಕೊಂಡ ಜೀವಿ ಏವರೀತಿಲಿ ತನ್ನ ಅವಸಾನವ ಕಾಣೆಕು, ಜೀವನ್ಮುಕ್ತಿಯ ಪಡೆಕು, ಪರಮಾನಂದ ಪರಂಧಾಮನಲ್ಲಿ ಲೀನ ಆಯೇಕು ಹೇಳ್ವದರ ಈ ಭಾಗಲ್ಲಿ ಭಗವಂತ ಸಾರಿದ್ದ. ಎಲ್ಲ ಜೀವಿಗಳ ಅಕೇರಿಯಾಣ ಗುರಿ ಒಂದೇ. ಅದು ಜೀವನ್ಮುಕ್ತಿ. ಅದರ ಯಥಾರ್ಥವಾಗಿ ಅರ್ತುಗೊಂಬವು ಬರೀ ವಿರಳ. ಶಾಸ್ತ್ರಂಗಳಲ್ಲಿ ಹೇಳಿಪ್ಪದು ಒಂದು, ಜನಂಗೊ ಅದರ ಅರ್ಥಮಾಡಿಗೊಂಡದು ಇನ್ನೊಂದು!. ಶಾಸ್ತ್ರರ್ಥವ ಎಲ್ಲ ಓದಿ ಅದರ ಅರ್ಥಮಾಡಿ ಜೀರ್ಣಿಸಿಗೊಂಬದ ನಮ್ಮಂದ ಆರಿಂದಲೂ ಎಡಿಯದ್ದ ಪಂಚಾಯ್ತಿಗೆ. ಅದಕ್ಕಾಗಿಯೇ ಭಗವಂತ ಹೇಳಿದ್ದು, ಶಾಸ್ತ್ರಂಗಳ ಓದಿಕ್ಕಿ ಶಾಸ್ತ್ರಸಾರವ ಮಾಂತ್ರ ತೆಕ್ಕೊಂಡು ಅರ್ಥೈಸಿ ಮನಸ್ಸು ಭಗವಂತನಲ್ಲಿ ಕೇಂದ್ರಿಕರಿಸಿ ಮುಂದೆ ಹೆಜ್ಜೆ ಹಾಕಿರೆ ಸಾಧನಾಪಥಲ್ಲಿ ಯಶಸ್ಸು ಕಾಂಬಲೆಡಿಗು. ಇಲ್ಲದ್ರೆ ಸಂಮೋಹವೇ ಮನಸ್ಸಿಲ್ಲಿ ಒಳ್ಕೊಂಬದು, ಅದು ಯಾವ ಯಶಸ್ಸಿನತ್ತೆಯೂ ನಮ್ಮ ಕೊಂಡೋವ್ತಿಲ್ಲೆ, ಬರೇ ಜೀವಮಾನ ಹಾಳುಮಾಡಿಗೊಂಬಲಕ್ಕು. ಹಾಂಗಾಗಿ ಭಗವಂತ° ಗೀತೆಯ ಅಕೇರಿಲಿ ಹೇಳಿದ – ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ । ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷ್ಯಯಿಷ್ಯಾಮಿ ಮಾ ಶುಚಃ ॥ಭ.ಗೀ೧೮.೬೬॥    –  ಎಲ್ಲ ‘ಧರ್ಮಂಗಳ’ ತ್ಯಜಿಸಿ ನೀನು ಎನ್ನ ಒಬ್ಬನ ಮಾತ್ರ ಶರಣು ಹೋಗು. ಆನು ನಿನ್ನ ಸರ್ವಪಾಪಂಗಳಿಂದ ವಿಮೋಚನೆಗೊಳುಸುತ್ತೆ. ಇದಕ್ಕೆ ನೀನು ಚಿಂತೆಮಡೆಡ. ಭಗವಂತನ ಈ ಒಂದು ಮಾತು ಸದಾ ನಮ್ಮಲ್ಲಿ ಜಾಗೃತವಾಗಿದ್ದರೆ ನವಗೆ ಮತ್ತೆ ಕ್ಲೇಶ ಹೇಳ್ವ ಮಾತೇ ಇಲ್ಲೆ.
ಜ್ಞಾನ-ವೈರಾಗ್ಯಂದ ಕೂಡಿ ಪರಮ ಪುಣ್ಯಪ್ರದವಾದ ಈ ಗರುಡಪುರಾಣ ಪಠಣ ವಾ ಶ್ರವಣ ಮಾತ್ರಂದ ಭವಕಷ್ಟಂಗೊ ನೀಗುತ್ತು ಹೇಳ್ತರ್ಲಿ ಸಂಶಯ ಇಲ್ಲೆ. ಪೂರ್ವಾಗ್ರಹ ಪೀಡಿತ ಕುತರ್ಕ ಜಿಜ್ಞಾಸುಗೊಕ್ಕೆ ಏವುದೇ ಪುರಾಣ ಶಾಸ್ತ್ರಾರ್ಥ ಅಧ್ಯಯನಂದಲೂ ಎಂತ ಪೊದುಂಕುಳೂ ಪ್ರಯೋಜನಕ್ಕೆ ಸಿಕ್ಕ ಹೇದು ಭಗವಂತ° ಈ ಮದಲೇ ಹೇಳಿದ್ದ°.
ನಮ್ಮ ಮನಸ್ಸಿನ ಬುದ್ಧಿಯುಕ್ತವಾಗಿ ಆತ್ಮನಲ್ಲಿ ನೆಲೆಗೊಳಿಸಿಯಪ್ಪಗ ನಮ್ಮ ಶರೀರವೇ ಮಹಾಪುಣ್ಯಕ್ಷೇತ್ರ. ಮತ್ತೆ ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ ಅವಂತಿಕಾ….. ಇತ್ಯಾದಿಯಾಗಿ ಏವ ಭೌಗೋಳಿಕ ಪುಣ್ಯಸ್ಥಳ-ತೀರ್ಥ ಅನ್ವೇಷಣೆ ಪರ್ಯಟನೆ ಅಗತ್ಯ ಇಲ್ಲೆ. ಎಲ್ಲವೂ ನಮ್ಮ ಮನಸ್ಸಿನ ಮೂಲಕ ನಮ್ಮ ಶರೀರಲ್ಲೇ ಕಾಂಬಲೆ ಎಡಿಗಾವ್ತು. ಉದಾಹರಣೆಗೆ ಅಯೋಧ್ಯೆ ಹೇದರೆ ಏವ ಯೋಧನೂ ಒಳಹೋಪಲೆ ಎಡಿಗಾಗದ್ದಿಪ್ಪ ಜಾಗೆ, ಆರಿಂದಲೂ ಅದರ ಗೆಲ್ಲುಲೆ ಎಡಿಯದ್ದಿಪ್ಪ, ಭೇದುಸುಲೆ ಎಡಿಯದ್ದ ಜಾಗೆ. ಆತ್ಮ ನಿವಾಸವಾದ ನಮ್ಮ ಹೃದಯವೇ ಅಯೋಧ್ಯೆ. ನಾಮಸ್ಮರಣೆ ಮಾಡುವಾಗ ಶಬ್ದ ನಮ್ಮ ನಾಭಿಂದ ಹೆರಡೆಕು. ಭಗವಂತ° ಶ್ರೀಕೃಷ್ಣಪರಮಾತ್ಮ° ಮಥುರೆ(ನಾಭಿ)ಲಿ ಹುಟ್ಟಿ, ತನ್ನ ಲೀಲಾಮಯವಾದ ಬಾಲ್ಯವ ಬೃಂದಾವನ(ಹೃದಯ)ಲ್ಲಿ ಮತ್ತೆ ಗೋಕುಲ(ನಾಲಗೆ)ಲಿ ಕಳದ್ದ ಹೇದು ಯೋಗಿಗಳ ಮಾತು. ಸಾಧುವಾಗಿಪ್ಪವಂಗೆ ಮನಸ್ಸೇ ಮಥುರಾಪುರಿ, ಹೃದಯವೇ ದ್ವಾರಕ, ದೇಹವೇ ದಿವ್ಯಕ್ಷೇತ್ರ ಕಾಶಿ. ಈ ರೀತಿಯಾಗಿ ನವದ್ವಾರಂಗಳಿಪ್ಪ ನಮ್ಮ ಶರೀರ ಹೇಳ್ವ ನಿಲಯಲ್ಲಿ ಪರಂಜ್ಯೋತಿಯ ದರ್ಶನ ಮಾಡೆಕು ಹೇದು ‘ಸಾಯಿಭೋಧಾಮೃತಾಗರ’ಲ್ಲಿ ವರ್ಣಿಸಿದ್ದವು.
ಭಗವಂತನಿಂದ ಗರುಡಂಗೆ ಹೇಳಲ್ಪಟ್ಟ ಸಕಲಶಾಸ್ತ್ರಂಗಳ ಸಾರರೂಪೀ ಈ ಗರುಡಪುರಾಣ ಉತ್ತರಖಂಡ ‘ಸಾರೋದ್ಧಾರ’ದ ಶ್ರವಣಂದ ನಮ್ಮ ಮನಸ್ಸು ಶುದ್ಧವಾಗಿ, ನಿಶ್ಚಲ ಭಕ್ತಿ ನಮ್ಮಲ್ಲಿ ಅಂಕುರಿಸಿ ಮಾನವ ಜನ್ಮ ಸಾರ್ಥಕ ಪಡವಲ್ಲಿ ನಮ್ಮೆಲ್ಲರ ಕೊಂಡೋಗಲಿ ಹೇದು ಹೇಳಿಗೊಂಡು ಈ ಭಾಗಕ್ಕೆ ಹರೇ ರಾಮ]
 
 

3 thoughts on “ಗರುಡಪುರಾಣ – ಅಧ್ಯಾಯ 16 – ಭಾಗ 04

  1. ಹರೇ ರಾಮ. ಧನ್ಯೋsಸ್ಮಿ. ಎಲ್ಲೋರಿಂಗೂ ಒಳ್ಳೆದಾಗಲಿ.

  2. ಗರುಡ ಪುರಾಣವ ವಿವರವಾಗಿ ತಿಳಿಸಿಕೊಟ್ಟ ಚೆನ್ನ್ಹೈಭಾವಂಗೆ ಧನ್ಯವಾದ. ನಿಂಗಳ ಶ್ರಮಕ್ಕೆ ಪ್ರತಿಫಲವಾಗಿ ಎಂಗೊ ಓದುಗರು, ಗರುಡ ಪುರಾಣಲ್ಲಿ ಹೇಳಿಪ್ಪ ರೀತಿಲಿ ಸನ್ಮಾರ್ಗಲ್ಲಿ ನೆಡದು ಜೀವನಲ್ಲಿ ಸಾರ್ಥಕತೆ ಪಡೆತ್ತಿಯೊ ಹೇಳಿ ಭರವಸೆ ಕೊಡ್ತಿಯೊ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×