Oppanna.com

ಗರುಡ ಪುರಾಣ – ಅಧ್ಯಾಯ 02 – ಭಾಗ 02

ಬರದೋರು :   ಚೆನ್ನೈ ಬಾವ°    on   08/08/2013    2 ಒಪ್ಪಂಗೊ

ಚೆನ್ನೈ ಬಾವ°

ಮೃತ ಪಾಪಿ ಜೀವಿ ಹದಿಮೂರನೇ ದಿನ ತ್ರಾಸದಾಯಕ ಯಮಮಾರ್ಗಲ್ಲಿ ನಾನಾ ರೀತಿಯ ವೇದನೆಯ ತಿಂದೊಂಡು ದುಃಖಿಸಿಗೊಂಡು
ಹದಿನೇಳು ದಿನದ ಅವಿಶ್ರಾಂತವಾಗಿ ವಾಯುವೇಗಲ್ಲಿ ಪ್ರಯಾಣ ಮಾಡಿಗೊಂಡು ಹದಿನೆಂಟನೇ ದಿನ ಸೌಮ್ಯಪುರವ ಸೇರುತ್ತ° ಹೇಳಿ ಕಳುದವಾರ ಓದಿ ನಿಲ್ಲಿಸಿದ್ದದು. ಮುಂದೆ –
 
ಗರುಡ ಪುರಾಣ – ಅಧ್ಯಾಯ 2 – ಭಾಗ 2
 
ತಸ್ಮಿನ್ಪುರೇ ರಮ್ಯೇ ಪ್ರೇತಾನಾಂ ಚ ಗಣೋ ಮಹಾನ್ ।
ಪುಷ್ಪಭದ್ರಾ ನದೀ ತತ್ರ ನ್ಯಗ್ರೋಧಃ ಪ್ರಿಯದರ್ಶನಃ ॥೪೪॥road-to-hell1
ಆ ಸೌಮ್ಯಪುರೀ ಹೇಳ್ವ ಮನೋಹರವಾದ ಶ್ರೇಷ್ಠ ನಗರಲ್ಲಿ ಅತೀ ದೊಡ್ಡದಾದ ಪ್ರೇತಂಗಳ ಒಂದು ಗಣ ಇದ್ದು. ಮತ್ತೆ ಅಲ್ಲಿ ಪುಷ್ಪಭದ್ರಾ ಹೇಳ್ವ ನದಿಯೂ, ನೋಡ್ಳೆ ಪ್ರಿಯವಾದ ಒಂದು ವಟವೃಕ್ಷವೂ ಇದ್ದು.
ಪುರೇ ತತ್ರ ಸ ವಿಶ್ರಾಮಂ ಪ್ರಾಪ್ಯತೇ ಯಮಕಿಂಕರೈಃ ।
ದಾರಾಪುತ್ರಾದಿಕಂ ಸೌಖ್ಯಂ ಸ್ಮರತೇ ತತ್ರ ದುಃಖಿತಃ ॥೪೫॥
ಆ ಪುರಲ್ಲಿ ಅಂವ° ಯಮಕಿಂಕರಿಂದ ತುಸು ವಿಶ್ರಾಂತಿ ಪಡಕ್ಕೊಳ್ಳುತ್ತ°. ಅಲ್ಲಿ ತನ್ನ ಪತ್ನಿ, ಮಕ್ಕಳ ಕ್ಷೇಮವ ಗ್ರೇಶಿಗೊಂಡು ದುಃಖಿತನಾವುತ್ತ°.
ಧನಾನಿ ಭೃತ್ಯಮಾತ್ರಾಣಿ ಸರ್ವಂ ಶೋಚತಿ ವೈ ಯದಾ ।
ತದಾ ಪ್ರೇತಾಂಸ್ತು ತತ್ರತ್ಯಾಃ ಕಿಂಕರಾಶ್ಚೇದ ಮಬ್ರುವನ್ ॥೪೬॥
ಧನವನ್ನೂ ತನ್ನ ಕುಟುಂಬದೋರನ್ನೂ ಎಲ್ಲವನ್ನೂ ಅಂವ ಚಿಂತಿಸಿಗೊಂಡಿಪ್ಪಾಗ ಅಲ್ಲಿಯಾಣ ಪ್ರೇತಂಗಳೂ, ಯಮಕಿಂಕರುಗಳೂ ಹೀಂಗೆ ಹೇಳುತ್ತವು –
ಕ್ವ ಧನಂ ಕ್ವ ಸುತಾ ಜಾಯಾ ಕ್ವ ಸುಹೃತ್ಕ್ವ ಚ ಬಾಂಧವಾಃ ।
ಸ್ವ ಕರ್ಮೋಪಾರ್ಜಿತಂ ಭೋಕ್ತಾ ಮೂಢ ಯಾಹಿ ಚಿರಂ ಪಥಿ ॥೪೭॥
“ಏ ಮೂಢನೇ!, ಎಲ್ಲಿ ಧನ?, ಎಲ್ಲಿ ಮಕ್ಕೊ?, ಎಲ್ಲಿ ಹೆಂಡತಿ?, ಎಲ್ಲಿ ಮಿತ್ರರು? ಮತ್ತೆ ಎಲ್ಲಿ ಬಂಧುಗೊ?. ನಿನ್ನ ಕರ್ಮಂಗಳಿಂದ ಗಳಿಸಿದ್ದರ ಮಾಂತ್ರ ಅನುಭವಿಶಿಗೊಂಡು ಈ ಮಾರ್ಗಲ್ಲಿ ನಡೆ.
ಜಾನಾಸಿ ಸಂಬಲಬಲಂ ಬಲಮಧ್ವಗಾನಾಂ ನೋ ಸಂಬಲಾಯ ಯತಸೇ ಪರಲೋಕಪಾಂಥ ।
ಗಂತವ್ಯಮಸ್ತಿ ತವ ನಿಶ್ಚಿತಮೇವ ತೇನಮಾರ್ಗೇಣ ಯತ್ರ ಭವತಿ ಕ್ರಯವಿಕ್ರಯೋಹಿ ॥೪೮॥
ಬುತ್ತಿಯೇ ಪಥಿಕನ ಶಕ್ತಿ ಹೇಳ್ವದು ನಿನಗೆ ಗೊಂತಿದ್ದು. ಆದರೆ ನೀನು ಆ ಬುತ್ತಿಗೋಸ್ಕರ ಯತ್ನ ಮಾಡಿದ್ದಿಲ್ಲೆ. ಏ ಪರಲೋಕ ಪ್ರಯಾಣಿಕನೇ!, ಆದರೂ ಕ್ರಯವಿಕ್ರಯಂಗಳಿಲ್ಲದ್ದ ಆ ಮಾರ್ಗಲ್ಲಿ ನೀನು ಹೋಪಲೇ ಬೇಕು.
ಆಬಾಲಖ್ಯಾತಮಾರ್ಗೋsಯಂ ನೈವ ಮರ್ತ್ಯ ಶ್ರುತಸ್ತ್ವಯಾ ।
ಪುರಾಣಸಂಭವಂ ವಾಕ್ಯಂ ಕಿಂ ದ್ವಿಜೇಭ್ಯೋsಪಿ ನ ಶ್ರುತಮ್ ॥೪೯॥
ಏ ಮರ್ತ್ಯನೇ!, ಮಕ್ಕೊಗೆ ಗೊಂತಿಪ್ಪ ಮಾರ್ಗವ ನಿನ್ನಂದ ಕೇಳಲ್ಪಟ್ಟಿದ್ದಿಲ್ಲೆಯಾ? ಪುರಾಣಂಗಳಲ್ಲಿ ಹೇಳಿಪ್ಪ ಈ ವಿಷಯಂಗ ದ್ವಿಜರಿಂದ ಹೇಳಲ್ಪಟ್ಟಿದ್ದಿಲ್ಯ?”
ಏವಮುಕ್ತಸ್ತತೋ ದೂತೈಸ್ತಾಡ್ಯಮಾನಶ್ಚ ಮುದ್ಗರೈಃ ।
ನಿಪತನ್ನುತ್ಪತಂಧಾವನ್ಪಾಶೈರಾಕೃಷ್ಯತೇ ಬಲಾತ್ ॥೫೦॥
ಹೀಂಗೆ ಹೇಳಿಗೊಂಡು ಆ ಯಮದೂತರುಗೊ ಸುತ್ತಿಗೆಂದ ಬಡಿವಾಗ ಅಂವ ಬಿದ್ದುಗೊಂಡು ಎದ್ದುಗೊಂಡು ಓಡುತ್ತಿಪ್ಪಂತೆ ಪಾಶಂದ ಬಲವಂತವಾಗಿ ಎಳೆಯಲ್ಪಡುತ್ತ°.
ಅತ್ರ ದತ್ತಂ ಸುತೈಃ ಪೌತ್ರೈಃ ಸ್ನೇಹಾದ್ವಾ ಕೃಪಯಾsಥವಾ ।
ಮಾಸಿಕಂ ಪಿಂಡಮಶ್ನಾತಿ ತತಃ ಸೌರಿಪುರಂ ವ್ರಜೇತ್ ॥೫೧॥
ಇಲ್ಲಿ ಮಕ್ಕೊ ಮೊಮ್ಮಕ್ಕೊ ಸ್ನೇಹಭಾವಂದ ಅಥವಾ ಕೃಪೆಮಾಡಿ ಕೊಟ್ಟಂತಹ ಮಾಸಿಕ ಪಿಂಡವ ಅಲ್ಲಿ ತಿಂದು ಅಲ್ಲಿಂದ ಸೌರಿಪುರಕ್ಕೆ ಹೋವುತ್ತ°.
ತತ್ರ ನಾಮ್ನಾಸ್ತಿ ರಾಜಾ ವೈ ಜಂಗಮಃ ಕಾಲರೂಪಧೃಕ್ ।
ತದ್ದೃಷ್ಟ್ವಾ ಭಯಭೀತೋsಸೌ ವಿಶ್ರಾಮೇ ಕುರತೇ ಮತಿಮ್ ॥೫೨॥
ಅಲ್ಲಿ ಯಮನ ರೂಪವ ಧರಿಸಿಗೊಂಡಿಪ್ಪ ‘ಜಂಗಮ’ ಹೇಳ್ವ ಹೆಸರಿನ ರಾಜ° ಇದ್ದ. ಅವನ ನೋಡಿ ಭಯಭೀತನಾಗಿ ಇವನ ಮನಸ್ಸು ಯೋಚನಾಶೂನ್ಯವಾವ್ತು.
ಉದಕಂ ಚಾನ್ನ ಸಂಯುಕ್ತಂ ಭುಂಕ್ತೇ ತತ್ರ ಪುರೇ ಗತಃ ।
ತ್ರೈಪಾಕ್ಷಿಕೇ ವೈ ಯದ್ದತ್ತಂ ಸ ತತ್ಪುರಮತಿಕ್ರಮೇತ್ ॥೫೩॥
ಆ ಊರಿಂಗೆ ಹೋದಂವ ಅಲ್ಲಿ ತ್ರೈಪಾಕ್ಷಿಕಲ್ಲಿ ಕೊಟ್ಟ ಅನ್ನ ನೀರು ತಿಂದಿಕ್ಕಿ ಅಂವ° ಆ ಪುರಂದ ಹೆರಡುತ್ತ°.
ತತೋ ನಗೇಂದ್ರಭವನಂ ಪ್ರೇತೋ ಯಾತಿ ತ್ವರಾನ್ವಿತಃ ।
ವನಾನಿ ತತ್ರ ರೌದ್ರಾಣಿ ದೃಷ್ಟ್ವಾ ಕ್ರಂದತಿ ದುಃಖಿತಃ ॥೫೪॥
ಅಲ್ಲಿಂದ ಪ್ರೀತಜೀವ ನಗೇಂದ್ರ ಭವನಕ್ಕೆ ಅತಿ ಶೀಘ್ರಲ್ಲಿ ಹೋಗಿ ತಲಪುತ್ತ°. ಅಲ್ಲಿ ಭಯಂಕರವಾದ ಕಾಡುಗಳ ನೋಡಿ ದುಃಖಿತನಾಗಿ ರೋದಿಸುತ್ತ°.
ನಿರ್ಘೃಣೈಃ ಕೃಷ್ಯಮಾಣಸ್ತು ರುದತೇ ಚ ಪುನಃ ಪುನಃ ।
ಮಾಸದ್ವಯಾವಸಾನೇ ತು ತತ್ಪುರಂ ವ್ಯಥಿತೋ ವ್ರಜೇತ್ ॥೫೫॥
ನಿರ್ದಯವಾಗಿ ಎಳೆಯಲ್ಪಟ್ಟುಗೊಂಡು ಪುನಃ ಪುನಃ ರೋದಿಸಿಗೊಂಡು ಎರಡು ತಿಂಗಳ ಅಂತ್ಯಲ್ಲಿ ಅಂವ° ದುಃಖಿಸಿಗೊಂಡು ಆ ಪುರಂದ ಹೆರಡುತ್ತ°.
ಭುಂಕ್ತ್ವಾ ಪಿಂಡಂ ಜಲಂ ವಸ್ತ್ರಂ ದತ್ತಂ ಯದ್ಬಾಂಧವೈರಿತಃ ।
ಕೃಷ್ಯಮಾಣಃ ಪುನಃ ಪಾಶೈರ್ನಿಯತೇsಗ್ರೇ ಚ ಕಿಂಕರೈಃ ॥೫೬॥
ತನ್ನ ಬಂಧುಗೊ ಕೊಟ್ಟ ಪಿಂಡ, ಜಲ, ವಸ್ತುಗಳ ಪಡಕ್ಕೊಂಡು ಪುನಃ ಪಾಶಂದ ಎಳೆಯಲ್ಪಡುತ್ತ ಯಮಕಿಂಕರಿಂದ ಮುಂದಂತಾಗಿ ಕರೆದೊಯ್ಯಲ್ಪಡುತ್ತ°.
ಮಾಸೇ ತೃತೀಯೇ ಸಂಪ್ರಾಪ್ತೇ ಪ್ರಾಪ್ಯ ಗಂಧರ್ವಪತ್ತನಮ್ ।
ತೃತೀಯಮಾಸಿಕಂ ಪಿಂಡಂ ತತ್ರ ಭುಕ್ತ್ವಾ ಪ್ರಸರ್ಪತಿ ॥೫೭॥
ಮೂರ್ನೇ ತಿಂಗಳು ಆದಪ್ಪಗ ‘ಗಂಧರ್ವ ಪಟ್ಟಣ’ವ ತಲಪುತ್ತ°. ಅಲ್ಲಿ ಮೂರ್ನೇ ತಿಂಗಳು ಕೊಟ್ಟ ಪಿಂಡವ ಭುಂಜಿಸಿ ಮುಂದೆ ಹೆರಡುತ್ತ°.
ಶೈಲಾಗಮಂ ಚತುರ್ಥೇ ಚ ಮಾಸಿ ಪ್ರಾಪ್ನೋತಿ ವೈ ಪುರಮ್ ।
ಪಾಷಾಣಸ್ತತ್ರ ವರ್ಷಂತಿ ಪ್ರೇತಸ್ಯೋಪರಿ ಭೂರಿಶಃ ॥೫೮॥
ನಾಲ್ಕನೇ ತಿಂಗಳ್ಳಿ ‘ಶೈಲಾಗಮ’ ಹೇಳ್ವ ಪುರವ ತಲಪುತ್ತ°. ಅಲ್ಲಿ ಆ ಪ್ರೇತಜೀವಿಯ ಮೇಗಂಗೆ ಕಲ್ಲುಗಳ ಮಳೆಯೇ ಭಾರೀ ಸುರಿತ್ತು.
ಚತುರ್ಥಮಾಸಿಕಂ ಪಿಂಡಂ ಭುಕ್ತ್ವಾಕಿಂಚಿತ್ಸುಖೀ ಭವೇತ್ ।
ತತೋ ಯಾತಿ ಪುರಂ ಪ್ರೇತಃ ಕ್ರೌಂಚಂ ಮಾಸೇsಥ ಪಂಚಮೇ ॥೫೯॥
ಅಲ್ಲಿ ನಾಲ್ಕನೇ ತಿಂಗಳಿನ ಪಿಂಡವ ಭುಂಜಿಸಿ ರಜಾ ಸುಖಿಯಾವುತ್ತ°. ಮತ್ತೆ ಅಲ್ಲಿಂದ ಹೆರಟು ಐದನೇ ತಿಂಗಳ್ಳಿ ‘ಕ್ರೌಂಚಪುರ’ಕ್ಕೆ ಹೋಗಿ ಸೇರುತ್ತ°.
ಹಸ್ತದತ್ತಂ ತದಾ ಭುಂಕ್ತೇ ಪ್ರೇತಃ ಕ್ರೌಂಚಪುರೇ ಸ್ಥಿತಃ ।
ಯತ್ಪಂಚಮಾಸಿಕಂ ಪಿಂಡಂ ಭುಕ್ತ್ವಾ ಕ್ರೂರಪುರಂ ವ್ರಜೇತ್ ॥೬೦॥
ಅಂಬಗ ಕ್ರೌಂಚಪುರಲ್ಲಿ ನೆಲೆಸಿದ ಆ ಪ್ರೇತಜೀವಿ ಕೈಂದ ಕೊಡಲ್ಪಟ್ಟ ಐದನೇ ತಿಂಗಳ ಪಿಂಡವ ಉಣ್ಣುತ್ತ°. ಉಂಡಿಕ್ಕಿ ಮತ್ತೆ ‘ಕ್ರೂರಪುರ’ಕ್ಕೆ ಹೋವುತ್ತ°.
ಸಾರ್ಧಕೈಃ ಪಂಚಭಿರ್ಮಾಸೈನ್ಯೂರ್ನಷಾಣ್ಮಾಸಿಕಂ ವ್ರಜೇತ್ ।
ತತ್ರ ದತ್ತೇನ ಪಿಂಡೇನ ಘಟೇನಾಪ್ಯಾಯಿತಃ ಸ್ಥಿತಃ ॥೬೧॥
ಐದೂವರೆ ತಿಂಗಳ್ಳಿ ನ್ಯೂನ ಷಣ್ಮಾಸಿಕ ಶ್ರಾದ್ಧಲ್ಲಿ ಕೊಡಲ್ಪಟ್ಟ ಪಿಂಡವನ್ನೂ, ಚೆಂಬನ್ನೂ ಪಡದು ತೃಪ್ತಿ ಹೊಂದಿ ಅಲ್ಲಿ ನೆಲೆಸುತ್ತ°.
ಮುಹೂರ್ತಾರ್ಧಂ ತು ವಿಶ್ರಾಮ್ಯ ಕಂಪಮಾನಃ ಸುದುಃಖಿತಃ ।
ತತ್ಪುರಂ ತು ಪರಿತ್ಯಜ್ಯ ತರ್ಜಿತೋ ಯಮಕಿಂಕರೈಃ ॥೬೨॥
ಅರ್ಧಮುಹೂರ್ತದಷ್ಟು ಹೊತ್ತು ಅಲ್ಲಿ ವಿಶ್ರಮಿಸಿಕ್ಕಿ, ಅತಿ ದುಃಖಿತನಾಗಿ ನಡುಗಿಯೊಂಡು ಯಮಕಿಂಕರರಿಂದ ಹೆದರಿಸಲ್ಪಟ್ಟುಗೊಂಡು ಆ ಪುರವ ಬಿಟ್ಟಿಕ್ಕಿ
ಪ್ರಯಾತಿ ಚಿತ್ರಭವನಂ ವಿಚಿತ್ರೋ ನಾಮ ಪಾರ್ಥಿವಃ ।
ಯಮಸ್ಯೈವಾನುಜೋ ಭ್ರಾತಾ ಯತ್ರ ರಾಜ್ಯಂ ಪ್ರಶಾಸ್ತಿ ಹಿ ॥೬೩॥
‘ಚಿತ್ರಭವನ’ಕ್ಕೆ ಹೋವುತ್ತ°. ಅಲ್ಲಿ ಯಮನ ತಮ್ಮ°  ‘ವಿಚಿತ್ರ°’ ಹೇಳ್ವ ಹೆಸರಿನಂವ° ರಾಜ° ರಾಜ್ಯ ಆಳುತ್ತ°.
ವಿಲೋಕ್ಯ ಮಹಾಕಾಯಂ ಯದಾ ಭೀತಃ ಪಲಾಯತೇ ।
ತದಾ ಸಂಮುಖ ಆಗತ್ಯ ಕೈವರ್ತಾ ಇದಮಬ್ರುವನ್ ॥೬೪॥
ಅವನ ಮಹಾಕಾಯವ ನೋಡಿ ಭಯಭೀತನಾಗಿ ಓಡುತ್ತ°. ಅಷ್ಟಪ್ಪಗ ಅವನ ಮುಂದೆ ಬಂದು ಕೆಲವು ನಾವಿಕರು ಈ ರೀತಿ ಹೇಳುತ್ತವು –
ವಯಂ ತೇ ತರ್ತುಕಾಮಾಯ ಮಹಾವೈತರಣೀ ನದೀಮ್ ।
ನಾವಮಾದಾಯ ಸಂಪ್ರಾಪ್ತಾ ಯದಿ ತೇ ಪುಣ್ಯಮೀದೃಶಮ್ ॥೬೫॥
“ಮಹಾ ವೈತರಣೀ ನದಿಯ ದಾಂಟ್ಳೆ ಎಂಗೊ ನಿನಗೆ ದೋಣಿಯ ತಂಯ್ದೆಯೋ°. ಒಂದು ವೇಳೆ ನಿನ್ನಲ್ಲಿ ಅಷ್ಟು ಪುಣ್ಯ ಇದ್ದರೆ ಇದು ನಿನಗೆ ದೊರಕ್ಕುತ್ತು.
ದಾನಂ ವಿತರಣಂ ಪ್ರೋಕ್ತಂ ಮುನಿಭಿಸ್ತತ್ತ್ವದರ್ಶಿಭಿಃ ।
ಇಯಂ ಸಾ ತೀರ್ಯತೇ ಯಸ್ಮಾತ್ತಸ್ಮಾದ್ವೈತರಣೀ ಸ್ಮೃತಾ ॥೬೬॥
ತತ್ತ್ವದರ್ಶಿಗೊಗಳಾದ ಋಷಿಗೊ, ದಾನವ ‘ವಿತರಣ’ ಹೇದು ಹೇಳಿದ್ದವು. ಈ ನದಿಯ ದಾನಂದ ದಾಂಟ್ಳಕ್ಕು. ಹಾಂಗಾಗಿ ಇದಕ್ಕೆ ‘ವೈತರಣೀ’ ಹೇದು ಹೇಳುತ್ತದು.
ಯದಿ ತ್ವಯಾ ಪ್ರದತ್ತಾ ಗೌಸ್ತದಾ ನೌರುಪಸರ್ಪತಿ ।
ನಾನ್ಯಥೇತಿ ವಚಸ್ತೇಷಾಂ ಶ್ರುತ್ವಾ ಹಾ ದೈವ ಭಾಷತೇ ॥೬೭॥
ಒಂದುವೇಳೆ ನೀನು ಗೋದಾನ ಮಾಡಿದ್ದರೆ, ದೋಣಿ ಹತ್ತರೆ ಬಕ್ಕು. ಇಲ್ಲದ್ರೆ ಇಲ್ಲೆ”.  ಹೀಂಗೆ ಅವರ ಮಾತುಗಳ ಕೇಳಿ ‘ಹಾ ದೈವವೇ’ ಹೇದು ಉದ್ಗಾರಮಾಡುತ್ತ°.
ತಂ ದೃಷ್ಟ್ವಾ ಕ್ವಥತೇ ಸಾ ತು ದೃಷ್ಟ್ವಾ ಸೋsತಿಕ್ರಂದತೇ ।
ಅದತ್ತ ದಾನಃ ಪಾಪಾತ್ಮಾ ತಸ್ಯಾಮೇವ ನಿಮಜ್ಜತಿ ॥೬೮॥
ಅವನ ನೋಡಿ ಅದು (ನದಿ) ಉಕ್ಕಿ ಬತ್ತು. ಅದರ ನೋಡಿ ಅಂವ° ಅತಿಯಾಗಿ ರೋದಿಸುತ್ತ°. ದಾನ ಮಾಡದ್ದೆ ಇಪ್ಪ ಪಾಪಿಗೊ ಅದರ್ಲಿಯೇ ಮುಂಗಿ ಹೋವುತ್ತವು.
ತನ್ಮುಖೇ ಕಂಟಕಂ ದತ್ವಾ ದೂತೈರಾಕಾಶಸಂಸ್ಥಿತೈಃ ।
ಬಡಿಶೇನ ಯಥಾ ಮತ್ಸ್ಯಸ್ತಥಾ ಪಾರಂ ಪ್ರಣೀಯತೇ ॥೬೯॥
ಅಷ್ಟಪ್ಪಗ ಆಕಾಶಲ್ಲಿಪ್ಪ ದೂತರು ಅವನ ಬಾಯಿಗೆ ಮುಳ್ಳಿನ ಗಾಳವ ಹಾಕಿ ಗಾಳದ ಕೊಕ್ಕೆಂದ ಮೀನಿನ ಎಳವ ಹಾಂಗೆ ಎಳಕ್ಕೊಂಡು ದಡಕ್ಕೆ ಕರೆತತ್ತವು.
ಷಾಣ್ಮಾಸಿಕಂ ಚ ಯತ್ಪಿಂಡಂ ತತ್ರ ಭುಕ್ತ್ವಾ ಪ್ರಸರ್ಪತಿ ।
ಮಾರ್ಗೇ ಸ ವಿಲಪನ್ಯಾತಿ ಬುಭುಕ್ಷಾ ಪೀಡಿತೋ ಹ್ಯಲಮ್ ॥೭೦॥
ಅಲ್ಲಿ ಆರನೇ ತಿಂಗಳ ಪಿಂಡವ ಭುಂಜಿಸಿ ಮುಂದೆ ನಡೆತ್ತ°. ಆ ಮಾರ್ಗಲ್ಲಿ ಅಂವ ರೋದಿಸಿಗೊಂಡು ಅತಿಯಾದ ಹಶುವಿಂದ ಪೀಡಿತನಾಗಿ ಮುಂದೆ ಹೋವುತ್ತ°.
ಸಪ್ತಮೇ ಮಾಸಿ ಸಂಪ್ರಾಪ್ರೇ ಪುರಂ ಬಹ್ವಾಪದಂ ವ್ರಜೇತ್ ।
ತತ್ರ ಭುಂಕ್ತೇ ಪ್ರದತ್ತಂ ಯತ್ಸಪ್ತಮೇ ಮಾಸಿ ಪುತ್ರಕೈಃ ॥೭೧॥
ಏಳನೇ ತಿಂಗಳು ಆದಪ್ಪಗ ‘ಬಹ್ವಾಪದ’ ಹೇಳ್ವ ಪುರವ ಹೋಗಿ ಸೇರುತ್ತ°. ಅಲ್ಲಿ ಏಳನೇ ತಿಂಗಳ್ಳಿ ಮಕ್ಕೊ ಕೊಟ್ಟದರ ತಿಂತ°.
ತತ್ಪುರಂ ತು ವ್ಯತಿಕ್ರಮ್ಯ ದುಃಖದಂ ಪುರಮೃಚ್ಛತಿ ।
ಮಹದುಃಖಮವಾಪ್ನೋತಿ ಖೇ ಗಚ್ಛನ್ಖೇಚರೇಶ್ವರ ॥೭೨॥
ಏ ಪಕ್ಷಿರಾಜನೇ!, ಆ ಪುರವ ದಾಂಟಿದ ಮತ್ತೆ ಅಂವ° ‘ದುಃಖದ’ ಹೇಳ್ವ ಊರಿಂಗೆ ಹೋವುತ್ತ. ಆಕಾಶಲ್ಲಿ ಹೋಗಿಯೊಂಡು ಬಹಳ ದುಃಖವ ಅನುಭವುಸುತ್ತ°.
ಮಾಸ್ಯಷ್ಟಮೇ ಪ್ರದತ್ತಂ ಯತ್ಪಿಂಡಂ ಭುಕ್ತ್ವಾ ಪ್ರಸರ್ಪತಿ ।
ನವಮೇ ಮಾಸಿ ಸಂಪೂರ್ಣೇ ನಾನಾಕ್ರಂದ ಪುರಂ ವ್ರಜೇತ್ ॥೭೩॥
ಎಂಟನೇ ತಿಂಗಳ್ಳಿ ಕೊಡಲ್ಪಟ್ಟ ಪಿಂಡವ ಭುಂಜಿಸಿ ಮುಂದೆ ನಡೆತ್ತ. ಒಂಬತ್ನೇ ತಿಂಗಳು ಸಂಪೂರ್ಣ ಆದಪ್ಪಗ ‘ನಾನಾಕ್ರಂದ’ಪುರಕ್ಕೆ ಹೋವುತ್ತ°.
ನಾನಕ್ರಂದಗಣಾನ್ ದೃಷ್ಟ್ವಾ ಕ್ರಂದಮಾನಾನ್ಸುದಾರುಣಾನ್ ।
ಸ್ವಯಂ ಚ ಶೂನ್ಯ ಹೃದಯಃ ಸಮಾಕ್ರಂದತಿ ದುಃಖಿತಃ ॥೭೪॥
ಅಲ್ಲಿ ದಾರುಣವಾಗಿ ನಾನಾರೀತಿಲಿ ಗಟ್ಟಿಯಾಗಿ ಕೂಗಿಯೊಂಡಿಪ್ಪ ಅನೇಕ ಗಣಂಗಳ ನೋಡಿ, ತಾನೂ ಶೂನ್ಯ ಹೃದಯದವನಾಗಿ ಅದೇ ರೀತಿ ದುಃಖಂದ ಒಳ್ಳೆತ ಗಟ್ಟಿಗೆ ಕೂಗುತ್ತ.
ವಿಹಾಯ ತತ್ಪುರಂ ಪ್ರೇತಸ್ತರ್ಜಿತೋ ಯಮಕಿಂಕರೈಃ ।
ಸುತಪ್ತಭವನಂ ಗಚ್ಛೇದ್ದಶಮೇ ಮಾಸಿ ಕೃಚ್ಛೃತಃ ॥೭೫॥
ಆ ಪುರವ ಬಿಟ್ಟಿಕ್ಕಿ ಯಮಕಿಂಕರರಿಂದ ಹೆದರಿಸಲ್ಪಟ್ಟುಗೊಂಡು ಹತ್ತನೇ ತಿಂಗಳಿಲಿ ‘ಸುತಪ್ತ ಭವನ’ಕ್ಕೆ ಬಹು ಕಷ್ಟಂದ ಹೋವುತ್ತ°.
ಪಿಂಡದಾನಂ ಜಲಂ ತತ್ರ ಭುಕ್ತ್ವಾಪಿ ನ ಸುಖೀ ಭವೇತ್ ।
ಮಾಸಿ ಚೈಕಾದಶೇ ಪೂರ್ಣೇ ಪುರಂ ರೌದ್ರಂ ಸ ಗಚ್ಛತಿ ॥೭೬॥
ಅಲ್ಲಿ ಪಿಂಡದಾನವನ್ನೂ, ಜಲವನ್ನೂ ಉಂಡರೂ ಕೂಡ ಸುಖಿಯಾವ್ತನಿಲ್ಲೆ. ಹನ್ನೊಂದನೇ ತಿಂಗಳು ಪೂರ್ತಿಯಾದಪ್ಪಗ ಅಂವ° ‘ರೌದ್ರಪುರ’ಕ್ಕೆ ಹೋವುತ್ತ°.
ದಶೈಕ ಮಾಸಿಕಂ ತತ್ರ ಭುಂಕ್ತೇ ದತ್ತಂ ಸುತಾದಿಭಿಃ ।
ಸಾರ್ದೇ ಚೈಕಾದಶೇ ಮಾಸಿ ಪಯೋವರ್ಷಣಮೃಚ್ಛತಿ ॥೭೭॥
ಅಲ್ಲಿ ಹನ್ನೊಂದನೇ ತಿಂಗಳಿಲ್ಲಿ ಮಕ್ಕೊ ಕೊಟ್ಟದರ ತಿಂದಿಕ್ಕಿ ಹನ್ನೊಂದುವರೆ ತಿಂಗಳ್ಳಿ ‘ಪಯೋವರ್ಷಣ’ ಹೇಳ್ವ ಊರಿಂಗೆ ಹೋವುತ್ತ°.
ಮೇಘಾಸ್ತತ್ರ ಪ್ರವರ್ಷಂತಿ ಪ್ರೇತಾನಾಂ ದುಃಖದಾಯಕಾಃ ।
ನ್ಯೂನಾಬ್ದಿಕಂ ಚ ಯಚ್ಛ್ರಾದ್ಧಂ ತತ್ರ ಭುಂಕ್ತೇ ಸ ದುಃಖಿತಃ ॥೭೮॥
ಅಲ್ಲಿ ಮೇಘಂಗೊ ಜೋರಾಗಿ ಮಳೆಯ ಸುರುಸಿ ಆ ಜೀವಿಗೆ ದುಃಖವ ಉಂಟುಮಾಡುತ್ತವು. ಅಲ್ಲಿ ನ್ಯೂನಾಬ್ದಿಕ ಶ್ರಾದ್ಧಲ್ಲಿ ಕೊಡಲ್ಪಟ್ಟ ಪಿಂಡವ ದುಃಖಿತನಾದ ಅಂವ° ಉಣ್ಣುತ್ತ°.
ಸಂಪೂರ್ಣೇ ತು ತತೋ ವರ್ಷೇ ಶೀತಾಢ್ಯ ನಗರಂ ವ್ರಜೇತ್ ।
ಹಿಮಾಚ್ಛತಗುಣಂ ತತ್ರ ಮಹಾಶೀತಂ ತಪತ್ಯಪಿ ॥೭೯॥
ಒಂದು ವರ್ಷ ಪೂರ್ತಿಯಾದಪ್ಪಗ ‘ಶೀತಾಡ್ಯ’ ಹೇಳ್ವ ಪುರವ ಸೇರುತ್ತ°. ಅಲ್ಲಿ ಹಿಮಾಲಯಂದಲೂ ನೂರು ಪಾಲು ಹೆಚ್ಚಾಗಿಪ್ಪ ಹಿಮ ಬೀಳುತ್ತು.
ಶೀತಾರ್ತಃ ಕ್ಷುಧಿತಃ ಸೋsಪಿ ವೀಕ್ಷತೇ ಹಿ ದಿಶೋ ದಶ ।
ತಿಷ್ಠತೇ ಬಾಂಧವಃ ಕೋಪಿ ಯೋ ಮೇ ದುಃಖಂ ವ್ಯಪೋಹತಿ ॥೮೦॥
ಅಲ್ಲಿ ಶೀತಂದ ಆರ್ತನಾಗಿ, ಹಶುವಿಂದ ಪೀಡಿತನಾಗಿ ಅಂವ ‘ಆರಾರು ಬಂಧುಗೊ ಎನ್ನ ಈ ದುಃಖವ ದೂರಮಾಡ್ಳೆ ನಿಂದುಗೊಂಡಿದ್ದವೋ’ ಹೇದು ಹತ್ತು ದಿಕ್ಕುಗಳನ್ನೂ ನೋಡುತ್ತ°.
ಕಿಂಕರಾಸ್ತೇ ವದಂತ್ಯತ್ರ ಕ್ವತೇ ಪುಣ್ಯಂ ಹಿ ತಾದೃಶಮ್ ।
ಭುಕ್ತ್ವಾ ಚ ವಾರ್ಷಿಕಂ ಪಿಂಡಂ ಧೈರ್ಯಮಾಲಂಬತೇ ಪುನಃ ॥೮೧॥
ಅಂಬಗ ಅಲ್ಲಿಪ್ಪ ಯಮಕಿಂಕರುಗೊ ‘ನೀನು ಅಂತಹ ಎಂತ ಪುಣ್ಯ ಮಾಡಿದ್ದೆ?’ ಹೇದು ಕೇಳುತ್ತವು. ಅಲ್ಲಿ ವಾರ್ಷಿಕ ಪಿಂಡವ ಉಂಡಿಕ್ಕಿ ಅಂವ° ಧೈರ್ಯವ ಪಡೆತ್ತ°.
ತತಃ ಸಂವತ್ಸರಸ್ಯಾಂತೇ ಪ್ರತ್ಯಾಸನ್ನೇ ಯಮಾಲಯೇ ।
ಬಹುಭೀತಿಪುರೇ ಗತ್ವಾ ಹಸ್ತಮಾತ್ರಂ ಸಮುತ್ಸೃಜೇತ್ ॥೮೨॥
ಅಲ್ಲಿಂದ ಆ ಜೀವ° ಒಂದು ಸಂವತ್ಸರದ ಅಕೇರಿಲಿ ಯಮಾಲಯದ ಹತ್ತರ ಇಪ್ಪ ‘ಬಹುಭೀತಿ’ಪುರಕ್ಕೆ ಹೋಗಿ ಅಲ್ಲಿ ಕೈ ಮಾತ್ರದ (ಕೈ ಗಾತ್ರದ ಅವನ ಶರೀರವ) ಶರೀರವ ಬಿಡುತ್ತ°.
ಅಂಗುಷ್ಠಮಾತ್ರೋ ವಾಯುಶ್ಚ ಕರ್ಮಭೋಗಾಯ ಖೇಚರ ।
ಯಾತನಾದೇಹಮಾಸಾದ್ಯ ಸಹ ಯಾಮೈಃ ಪ್ರಯಾತಿ ಚ ॥೮೩॥
ಎಲೈ ಗರುಡನೇ!, ಆ ಜೀವಿಯು ಹೆಬ್ಬೆರಳು ಗಾತ್ರದವನಾಗಿ ವಾಯು ರೂಪಲ್ಲಿ ತನ್ನ ಕರ್ಮವ ಅನುಭವುಸಲೆ ಯಾತನಾದೇಹವ ಪಡದು ಯಮಕಿಂಕರರ ಒಟ್ಟಿಂಗೆ ಮುಂದೆ ಹೋವುತ್ತ°.
ಔರ್ಧ್ವದೇಹಿಕದಾನಾನಿ ಯೈರ್ನ ದತ್ತಾನಿ ಕಾಶ್ಯಪ ।
ಏವ ಕಷ್ಟೇನ ತೇ ಯಾಂತಿ ಗೃಹೀತಾ ದೃಢಬಂಧನೈಃ ॥೮೪॥
ಎಲೈ ಕಶ್ಯಪನ ಮಗನೇ!, ಪರಲೋಕದ ನಿಮಿತ್ತವಾಗಿ ದಾನಂಗಳ ಕೊಡದ್ದೆ ಇಪ್ಪಂವ° ಈ ರೀತಿ ಕಷ್ಟಪಟ್ಟುಗೊಂಡು, ದೃಢವಾದ ಬಂಧನಂದ ಬಂಧಿಸಲ್ಪಟ್ಟು ಹೋವುತ್ತ°.
ಧರ್ಮರಾಜಪುರೇ ಸಂತಿ ಚತುರ್ದ್ವಾರಾಣಿ ಖೇಚರ ।
ತತ್ರಾಯಂ ದಕ್ಷಿಣದ್ವಾರಮಾರ್ಗಸ್ತೇ ಪರಿಕೀರ್ತಿತಃ ॥೮೫॥
ಎಲೈ ಗರುಡ!, ಯಮಧರ್ಮರಾಜನ ಪುರಲ್ಲಿ ನಾಲ್ಕು ದ್ವಾರಂಗೊ ಇದ್ದು. ಅವುಗಳಲ್ಲಿ ದಕ್ಷಿಣ ದ್ವಾರದ ಮಾರ್ಗವ ನಿನಗೆ ವಿವರಿಸಿಯಾತು.
ಅಸ್ಮಿನ್ಪಥಿ ಮಹಾಘೋರೇ ಕ್ಷುತ್ತೃಷಾಶ್ರಮ ಪೀಡಿತಾಃ ।
ಯಥಾ ಯಾಂತಿ ತಥಾ ಪ್ರೋಕ್ತಂ ಕಿಂ ಭೂಯಃ ಶ್ರೋತುಮಿಚ್ಛಸಿ ॥೮೬॥
ಮಹಾಘೋರವಾದ ಆ ಮಾರ್ಗಲ್ಲಿ ಹಶು ಆಸರು ಶ್ರಮಂದ ಪೀಡಿತರಾಗಿ ಜೀವಿಗೊ ಹೇಂಗೆ ಹೋವುತ್ತವೋ ಅದರ ಇಪ್ಪಾಂಗೇ ನಿನಗೆ ಹೇಳಲ್ಪಟ್ಟತ್ತು. ಇನ್ನೆಂತ ಹೆಚ್ಚಿಗೆ ಕೇಳ್ಳೆ ನೀನು ಇಚ್ಚಿಸುತ್ತೆ ?
ಇತಿ ಶ್ರೀ ಗರುಡಪುರಾಣೇ ಸಾರೋದ್ಧಾರೇ ಯಮಮಾರ್ಗ ನಿರೂಪಣಂ ನಾಮ ದ್ವಿತೀಯೋsಧ್ಯಾಯಃ ॥
ಇಲ್ಲಿಗೆ ಗರುಡಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ಹೇಳ್ವ ವಿಭಾಗಲ್ಲಿ ‘ಯಮಮಾರ್ಗ ನಿರೂಪಣೆ’ ಹೇಳ್ವ ಎರಡ್ನೇ ಅಧ್ಯಾಯ ಮುಗುದತ್ತು.
 
ಗದ್ಯರೂಪಲ್ಲಿ –
 
ರಮಣೀಯವಾದ ಆ ಸೌಮ್ಯಪುರಲ್ಲಿ ಪ್ರೇತಂಗಳ ಮಹಾನ್ ಗಣ ಇದ್ದು. ಅಲ್ಲಿ ಪುಷ್ಪಭದ್ರಾ ನದಿ ಮತ್ತು ಅತ್ಯಂತ ಪ್ರಿಯವಾಗಿ ಕಾಂಬ ವಟವೃಕ್ಷ ಇದ್ದು. ಆ ಸೌಮ್ಯಪುರಲ್ಲಿ ಯಮದೂತರುಗೊ ಪ್ರೇತಜೀವಿಗೆ ವಿಶ್ರಾಂತಿಯ ಕೊಡುತ್ತವು. ಅಲ್ಲಿ ಜೀವಿ ದುಃಖಿಯಾಗಿ ಪತ್ನೀ-ಪುತ್ರರಿಂದ ಪ್ರಾಪ್ತ  ಸುಖವ ನೆಂಪು ಮಾಡಿಗೊಂಡು ದುಃಖಿಸುತ್ತ°. ಹಿಂದಾಣ ಸಂಪತ್ತನ್ನೂ, ಸೇವಕಾದಿಗಳನ್ನೂ ನೆಂಪುಮಾಡಿಗೊಂಡು ದುಃಖಿಸಿಗೊಂಡಿಪ್ಪಗ ಅಲ್ಲಿಪ್ಪ ಯಮನ ಸೇವಕರು ಬಂದು ಹೀಂಗೆ ಹೇಳುತ್ತವು – “ಎಲ್ಲಿಯ ಸಂಪತ್ತು”, ಎಲ್ಲಿಯ ಮಕ್ಕೋ, ಎಲ್ಲಿಯ ಹೆಂಡತಿ? ಎಲ್ಲಿಯ ಮಿತ್ರರು? ಎಲ್ಲಿಯ ಬಂಧು-ಬಾಂಧವರು?. ಹೇ ಮೂರ್ಖ!, ಜೀವಿ ತನ್ನ ಕರ್ಮೋಪಾರ್ಜಿತ ಫಲವನ್ನೇ ಭೋಗುಸುವದು. ಹಾಂಗಾಗಿ ಸುದೀರ್ಘ ಕಾಲದವರೇಂಗೆ ಈ ಯಮ ಮಾರ್ಗಲ್ಲಿ ನಡೆ.  ಈ ದಾರಿಗೆ ಜೀವಿಯ ಕರ್ಮವೇ ಬಲ ಮತ್ತೆ ಆಶ್ರಯ. ಅದಕ್ಕಾಗಿ ನೀ ಎಂತ ಪ್ರಯತ್ನವಾದರೂ ಮಾಡಿದ್ದೆ? ನಿಶ್ಚಿತವಾಗಿಯೂ ನೀನು ಇದೇ ಮಾರ್ಗಲ್ಲಿ ಹೋಯೇಕ್ಕಾವ್ತು ಹೇಳ್ವದು ನಿನಗೆ ಕೇಳಿಯಾರು ಗೊಂತಿರೆಕ್ಕಾತು. (ಅಂದು ಗೊಂತಿರುತ್ತಿದ್ದರೆ ನೀನೀ ಪಾಪದ ಕೊಡ ಹೊತ್ತೊಂಡು ಹೋಯೇಕ್ಕಾಗಿತ್ತಿಲ್ಲೆ). ಏ ಮರ್ತ್ಯನೇ!, ಮಕ್ಕಳೂ ತಿಳಿದಿಪ್ಪ ಈ ಮಾರ್ಗವ ನೀನು ಕೇಳಿದ್ದಿಲ್ಯೋ?. ಪುರಾಣಲ್ಲಿ ಹೇಳಿಪ್ಪ ಈ ವಿಷಯಂಗಳ ದ್ವಿಜರ ಮೂಲಕ ನೀನು ಕೇಳಿದ್ದಿಲ್ಯ?” – ಈ ರೀತಿಯಾಗಿ ಹೇಳಿಗೊಂಡೇ ಸುತ್ತಿಗೆಂದ ಬಡುದು, ಏಳುಸಿ,  ಪಾಶಂದ ಬಲವಂತವಾಗಿ ಎಳಕ್ಕೊಂಡು ಮುಂದೆಂತಾಗಿ ಸಾಗುತ್ತವು. ಅಲ್ಲಿ ಮಕ್ಕಳೋ ಮೊಮ್ಮಕ್ಕಳೋ ಸ್ನೇಹ  ಅಥವಾ ಕೃಪಾ ಭಾವಂದ ಕೊಟ್ಟ ಮಾಸಿಕ ಪಿಂಡವ ತಿಂದಿಕ್ಕಿ ಜೀವಿ ಮತ್ತೆ ಮುಂದೆ ಸೌರಿಪುರಕ್ಕೆ ಹೆರಡುತ್ತ°. ಆ ಸೌರಿಪುರಲ್ಲಿ ಯಮನ ಹಾಂಗೇ ಕಾಂಬ ‘ಜಂಗಮ’ ಹೇಳ್ವ ಅರಸ ಇದ್ದ°. ಅವನ ನೋಡಿದ ಆ ಜೀವಿ ಭಯಭೀತನಾಗಿ ಮನಸ್ಸು ಯೋಚನಾಶೂನ್ಯನಾವ್ತ°. ಆ ಊರಿಂಗೆ ಮುಟ್ಟಿಯಪ್ಪಗ ಆ ಜೀವಿ, ತನ್ನ ಸ್ವಜನರಿಂದ ಕೊಡಲ್ಪಟ್ಟ ತ್ರೈಮಾಸಿಕ ಅನ್ನ-ಜಲವ ತಿಂದು ಆ ಪುರವ ಬಿಟ್ಟು ಹೆರಡುತ್ತ°.
ಅಲ್ಲಿಂದ ಮುಂದೆ ಶೀಘ್ರಲ್ಲಿ ‘ನಗೇಂದ್ರ ಭವನ’ಕ್ಕೆ ಹೋಗಿ ಸೇರುತ್ತ°. ಅಲ್ಲಿ ಭಯಂಕರ ಕಾಡುಗಳ ನೋಡಿ ಹೆದರಿ ದುಃಖಿಸುತ್ತ°. ನಿರ್ದಯವಾಗಿ ದೂತರಿಂದ ಎಳೆಶಿಗೊಂಡು ಮತ್ತೆ ಮತ್ತೆ ದುಃಖಿಸಿಗೊಂಡು ಎರಡು ತಿಂಗಳ ಅಂತ್ಯಲ್ಲಿ ಆ ಜೀವಿ ಆ ಪುರಂದ ಹೆರಡುತ್ತ°. ಅಲ್ಲಿ ತನ್ನ ಬಾಂಧವರಿಂದ ಕೊಡಲ್ಪಟ್ಟ ಪಿಂಡಾನ್ನ, ಜಲವ ಪಡಕ್ಕೊಂಡು ಯಮಕಿಂಕರರಿಂದ ಪಾಶಂದ ಎಳೆಯಲ್ಪಟ್ಟು ಮುಂದಂಗೆ ಹೋವ್ತ°. ಮೂರನೇ ತಿಂಗಳ್ಳಿ ಆ ಜೀವಿ ‘ಗಂಧರ್ವ ನಗರ’ವ ಪ್ರವೇಶಿಸುತ್ತ°. ಅಲ್ಲಿ ತ್ರೈಮಾಸಿಕ ಪಿಂಡವ ಸೇವಿಸಿ ಮುಂದೆ ನಡೆತ್ತ°. ನಾಲ್ಕನೇ ತಿಂಗಳ್ಳಿ ಜೀವಿ ‘ಶೈಲಾಗಮಪುರ’ವ ತಲಪುತ್ತ°. ಅಲ್ಲಿ ಆ ಪ್ರೇತದ ಮೇಲೆ ಅತ್ಯಧಿಕ ಪ್ರಮಾಣದ ಕಲ್ಲಿನ ಮಳೆ ಸುರಿತ್ತು. ಅಲ್ಲಿ ನಾಲ್ಕನೇ ತಿಂಗಳ ಪಿಂಡವ ತಿಂದಿಕ್ಕಿ ಜೀವಿ ಅಲ್ಪಸುಖವ ತಾಳುತ್ತ°. ಮತ್ತೆ ಆ ಜೀವಿ ಐದನೇ ತಿಂಗಳ್ಳಿ ಕ್ರೌಂಚಪುರವ ಹೋಗಿ ಸೇರುತ್ತ°.
ಕ್ರೌಂಚಪುರಲ್ಲಿ ಬಂದು ನೆಲೆಸಿದ ಆ ಜೀವಿ ಅಲ್ಲಿ ತನ್ನ ಬಂಧುಗಳ ಕೈಂದ ನೀಡಲಾದ ಐದನೇ ಮಾಸಿಕ ಪಿಂಡವ ಸೇವಿಸಿ ಮುಂದೆ ‘ಕ್ರೂರಪುರ’ದ ಕಡೇಂಗೆ ಸಾಗುತ್ತ°. ಐದೂವರೆ ತಿಂಗಳ್ಳಿ ಊನಷಣ್ಮಾಸಿಕ ಶ್ರಾದ್ಧ ಪಿಂಡವ ಮತ್ತೆ ಚೆಂಬಿನ ಅಲ್ಲಿ ಸ್ವೀಕರಿಸಿ ಕಿಂಚಿತ್ ತೃಪ್ತನಾವ್ತ°. ಅರ್ಧಮುಹೂರ್ತದಷ್ಟು ಅವಧಿಯ ಅಲ್ಲಿ ವಿಶ್ರಮಿಸಿ ಮತ್ತೆ ಅಲ್ಲಿಂದ ಯಮದೂತರರಿಂದ ಹೆದರಿಸಲ್ಪಟ್ಟು ದುಃಖಿತನಾಗಿ ಆ ಪುರವ ಬಿಟ್ಟು ‘ಚಿತ್ರಭವನ’ಕ್ಕೆ ಹೋವುತ್ತ°. ಅಲ್ಲಿ ಯಮನ  ತಮ್ಮನಾದ ‘ವಿಚಿತ್ರ°’ ಹೇಳ್ವ ರಾಜ ರಾಜ್ಯವ ಆಳುತ್ತ°. ಆ ವಿಶಾಲ ಶರೀರದ ರಾಜನ ನೋಡಿ ಜೀವಿ ಭಯಂದ ನಡುಗಿ ಓಡ್ಳೆ ಸುರುಮಾಡುತ್ತ°. ಅಷ್ಟಪ್ಪಗ ಎದುರಂಗೆ ಬಂದ ಅಂಬಿಗರು (ನಾವಿಕರು) ಈ ರೀತಿ ಹೇಳುತ್ತವು – ” ಎಂಗೊ ಈ ಮಹಾ ವೈತರಣೀ ನದಿಯ ದಾಂಟುವವಕ್ಕೆ ಬೇಕಾಗಿ ದೋಣಿಯೆ ತಂಯ್ದೆಯೋ°. ಒಂದು ವೇಳೆ ನಿನ್ನತ್ರೆ ಆ ಪ್ರಕಾರದ ಪುಣ್ಯ ಇದ್ದರೆ ಈ ನಾವೆಲಿ ನೀನು ಕೂಬಲಕ್ಕು. ತತ್ತ್ವದರ್ಶಿ ಮುನಿಗೊ ದಾನಕ್ಕೇ ‘ವಿತರಣ’ ಹೇಳಿಯೂ ಹೇಳಿದ್ದವು. ಈ ವೈತರಣೀ ನದಿಯ ವಿತರಣೆಯ ಮೂಲಕವೇ ದಾಂಟಲೆಡಿಗಷ್ಟೆ. ಹಾಂಗಾಗಿ ಈ ನದಿಗೆ ವೈತರಣೀ ಹೇದು ಹೇಳುತ್ತವು. ಒಂದು ವೇಳೆ ನೀನು ಗೋದಾನ ಮಾಡಿದ್ದಿದ್ದರೆ ಈ ನೌಕೆ ನಿನ್ನ ಹತ್ರಂಗೆ ಬಕ್ಕು. ಇಲ್ಲದ್ರೆ ಇಲ್ಲೆ”. ಅಂಬಿಗರ ಈ ಮಾತುಗಳ ಕೇಳಿ ಆ ಜೀವಿ ‘ಹೇ ದೈವವೇ!’ ಹೇದು ಉದ್ಗಾರಮಾಡುತ್ತ°. ಜೀವಿಯ ನೋಡಿ ಆ ವೈತರಣೀ ಕುದುದು ಉಕ್ಕಿ ಬತ್ತು. ಅದರ ನೋಡಿ ಜೀವಿ ರೋದನ ಸುರುಮಾಡುತ್ತ°. ಆರು ತಮ್ಮ ಜೀವನಲ್ಲಿ ದಾನವನ್ನೇ ಮಾಡಿದ್ದವಿಲ್ಲೆಯೋ ಅಂಥಾ ಪಾಪಾತ್ಮರು ಅಲ್ಲಿ ವೈತರಣೀಲಿ ಮುಳುಗಿಬಿಡುತ್ತವು. ಅಷ್ಟಪ್ಪಗ ಆಕಾಶಮಾರ್ಗಲ್ಲಿ ನಡವ ದೂತರು ಜೀವಿಯ ಬಾಯಿಗೆ ಕೊಕ್ಕೆ ಹಾಕಿ ಗಾಳಂದ ಮೀನಿನ ಎಳೆತ್ತ ಹಾಂಗೆ ಎಳದು ವೈತರಣಿಯ ದಾಂಟುಸುತ್ತವು. ಅಲ್ಲಿ ಷಣ್ಮಾಸಿಕ ಪಿಂಡವ ಸೇವಿಸಿದ ಜೀವಿ, ಅತ್ಯಧಿಕ ಹಶು ಪೀಡಿತನಾಗಿ, ಅತಿಯಾಗಿ ರೋದಿಸಿಗೊಂಡು ಮುಂದೆ ನಡೆತ್ತ°.
ಏಳನೇ ತಿಂಗಳ್ಳಿ ಆ ಪ್ರೇತಜೀವಿಯು ‘ಬಹ್ವಾಪದ’ಪುರಕ್ಕೆ ಹೋವುತ್ತ°. ಅಲ್ಲಿ ತನ್ನ ಮಕ್ಕಳಿಂದ ಕೊಡಲ್ಪಟ್ಟ ಏಳನೇ ತಿಂಗಳ ಮಾಸಿಕ ಪಿಂಡವ ತಿಂತ°. ಮತ್ತೆ ಅಲ್ಲಿಂದ ಬಿಟ್ಟಿಕ್ಕಿ ‘ದುಃಖದ’ ಹೇಳ್ವ ಪುರಕ್ಕೆ ಹೋವ್ತ°. ಆಕಾಶಮಾರ್ಗಲ್ಲಿ ಹೋಗಿಗೊಂಡು ಆ ಜೀವಿ ಅಪಾರ ದುಃಖದ ಅನುಭವ ಪಡೆತ್ತ°. ಅಲ್ಲಿ ಎಂಟನೇ ತಿಂಗಳ ಪಿಂಡವ ಸೇವಿಸಿ ಮುಂದೆ ನಡೆತ್ತ°. ಒಂಬತ್ತನೇ ತಿಂಗಳು ಕಳುದಪ್ಪಗ ‘ನಾನಾಕ್ರಂದ’ಪುರಕ್ಕೆ ಹೋಗಿ ಸೇರುತ್ತ°. ಅಲ್ಲಿ ಆಕ್ರಂದನ ಮಾಡುವ ಅನೇಕ ಭಯಾನಕ ಗಣಂಗಳ ನೋಡಿ. ಸ್ವಯಂ ಶೂನ್ಯ ಹೃದಿಯದ ಜೀವಿ ಅತಿ ದುಃಖಿತನಾಗಿ ಅದೇ ರೀತಿ ಕೂಗಲೆ ಸುರುಮಾಡುತ್ತ°. ಅಲ್ಲಿಂದ ಆ ಜೀವಿ ಯಮಕಿಂಕರರಿಂದ ಹೆದರಿಸಲ್ಪಟ್ಟು, ಆ ಪುರವ ಬಿಟ್ಟು ಹತ್ತನೇ ತಿಂಗಳಿಲ್ಲಿ ಅತ್ಯಂತ ಕಠಿಣತೆಂದ  ‘ಸುತಪ್ತ ಭವನ’ಕ್ಕೆ ಹೋಗಿ ಸೇರುತ್ತ°.  ಅಲ್ಲಿ ಪುತ್ರಾದಿಗಳಿಂದ ಪಿಂಡದಾನ ಮತ್ತೆ ಜಲಾಂಜಲಿ ತರ್ಪಣ ಪ್ರಾಪ್ತಿ ಹೊಂದಿರೂ ಕೂಡ ಸುಖಿಯಾವ್ತನಿಲ್ಲೆ. ಹನ್ನೊಂದನೇ ತಿಂಗಳ ಪೂರ್ಣಲ್ಲಿ ಆ ಜೀವಿ ‘ರೌದ್ರಪುರ’ಕ್ಕೆ ಹೋವುತ್ತ°. ಅಲ್ಲಿ ಪುತ್ರಾದಿಗಳಿಂದ ಕೊಡಲ್ಪಟ್ಟ ಹನ್ನೊಂದನೇ ಮಾಸಿಕ ಶ್ರಾದ್ಧದ ಪಿಂಡವ ಸ್ವೀಕರುಸುತ್ತ°. ಹನ್ನೊಂದುವರೆ ತಿಂಗಳು ಕಳುದಮತ್ತೆ ಆ ಜೀವಿ ‘ಪಯೋವರ್ಷಣ’ ಹೇಳ್ವ ಪುರವ ತಲಪುತ್ತ°. ಅಲ್ಲಿ ಪ್ರೇತಂಗೊಕ್ಕೆ ದುಃಖವ ಉಂಟುಮಾಡುವ ಮೋಡ ಘನಘೋರ ಮಳೆಯ ಸುರುಸುತ್ತು. ಅಲ್ಲಿ ದುಃಖಿಯಾದ ಜೀವಿ ಊನಾಬ್ದಿಕ ಶ್ರಾದ್ಧದ ಪಿಂಡವ ಸೇವಿಸುತ್ತ°.
ಒಂದು ವರ್ಷ ಪೂರ್ತಿಯಾದಪ್ಪಗ ಆ ಜೀವಿ ‘ಶೀತಾಢ್ಯ’ ಹೇಳ್ವ ಊರಿಂಗೆ ಹೋಗಿ ಸೇರುತ್ತ°. ಅಲ್ಲಿ ಹಿಮಗಡ್ಡೆಂದಲೂ ನೂರುಪಾಲು ಹೆಚ್ಚಿನ ಚಳಿ (ಶೀತ) ಇರ್ತು. ಶೀತಂದ ದುಃಖ ಮತ್ತೆ ಹಶುವಿಂದ ಪೀಡಿತನಾಗಿ ಆ ಜೀವಿ ನಿರಾಶೆ ಹೊಂದಿ ಹತ್ತು ದಿಕ್ಕಿನ ನೋಡಿಯೊಂಡು ಎಲ್ಯಾರು ತನ್ನ ಬಂಧು-ಬಾಂಧವರು ತನ್ನ ದುಃಖವ ದೂರ ಮಾಡ್ಳೆ ಆರಾರು ಇದ್ದವೋ ಹೇಳಿ ನೋಡುತ್ತ°. ಅಷ್ಟಪ್ಪಗ ಯಮದೂತರು “ನಿನ್ನತ್ರೆ ಹಾಂಗಿರ್ಸ ಪುಣ್ಯ ಎಲ್ಲಿದ್ದು?” ಹೇದು ಹಂಗುಸುತ್ತವು. ಮತ್ತೆ ಆ ಜೀವಿ ಅಲ್ಲಿ ವಾರ್ಷಿಕ ಪಿಂಡವ ಸೇವಿಸಿ ರಜ ಧೈರ್ಯವಂತನಾವುತ್ತ°. ಅದರ ಮತ್ತೆ ಒಂದು ಸಂವತ್ಸರದ ಅಂತ್ಯಲ್ಲಿ  ಯಮಪುರದ ಹತ್ರಂಗೆ ಬಂದಾದಪ್ಪಗ ಜೀವಿಯು ಬಹುಭೀತಿಪುರಕ್ಕೆ ಹೋಗಿ ಮೊಣಕೈಯಷ್ಟು ಉದ್ದ ಇಪ್ಪ ತನ್ನ ಶರೀರವ ತ್ಯಜಿಸುತ್ತ°. ಮತ್ತೆ ಅಲ್ಲಿ ಕರ್ಮ ಭೋಗ ಅನುಭವುಸುವುದಕ್ಕಾಗಿ ಅಂಗುಷ್ಟ ಪ್ರಮಾಣದ ವಾಯುಸ್ವರೂಪ ಯಾತನಾ ದೇಹವ ಪ್ರಾಪ್ತಿಹೊಂದಿ, ಜೀವಿಯು ಯಮದೂತರರೊಟ್ಟಿಂಗೆ ಮುಂದೆ ಸಾಗುತ್ತ°.
ಭಗವಂತ° ಶ್ರೀ ಮಹಾವಿಷ್ಣು ಗರುಡಂಗೆ ಹೇಳುತ್ತ° – ಆರು ಔರ್ಧ್ವದೈಹಿಕ (ಮರಣಕಾಲಿಕ) ದಾನವ ಕೊಟ್ಟಿರುತ್ತವಿಲ್ಲೆಯೋ ಅವ್ವು ಯಮದೂತರರಿಂದ ಬಂಧನಲ್ಲಿ ಬಂಧಿಸಲ್ಪಟ್ಟು ಅತ್ಯಂತ ಕಷ್ಟಂದ ಯಮಪುರಕ್ಕೆ ಹೋವುತ್ತವು. ಯಮಧರ್ಮರಾಜನ ಪುರಲ್ಲಿ ನಾಲ್ಕು ದ್ವಾರಂಗೊ ಇದ್ದು. ಅದರಲ್ಲಿ ದಕ್ಷಿಣ ಮಾರ್ಗದ ಬಗ್ಗೆ ನಿನಗೆ ವರ್ಣಿಸಿದ್ದೆ. ಈ ಮಹಾಭಯಂಕರ ಮಾರ್ಗಲ್ಲಿ ಹಶು ಆಸರಂದ ದುಃಖಿಸಿಗೊಂಡು ಬಹುಕಷ್ಟಕರವಾಗಿ ಜೀವಿ ಯಾವ ಪ್ರಕಾರವಾಗಿ ಹೋವುತ್ತ ಹೇಳ್ವದರ ಅದೇ ಪ್ರಕಾರವಾಗಿ ಇಪ್ಪಾಂಗೇ ಆನು ನಿನಗೆ ಹೇಳಿದ್ದೆ. ಇನ್ನೆಂತ ಕೇಳ್ಳೆ ಬಯಸುತ್ತೆ?.
ಹೀಂಗೆ ಹೇಳಿದಲ್ಯಂಗೆ ಗರುಡಪುರಾಣದ ‘ಸಾರೋದ್ಧಾರ’ (ಪ್ರೇತಕಾಂಡ) ವಿಭಾಗದ ‘ಯಮಮಾರ್ಗ ನಿರೂಪಣೆ’ ಹೇಳ್ವ ಎರಡ್ನೇ ಅಧ್ಯಾಯ ಮುಗುದತ್ತು.
 
[ಚಿಂತನೀಯಾ –
ಈ ಪ್ರಪಂಚಕ್ಕೆ ಜೀವಿ ಹುಟ್ಟುವಾಗ ಒಬ್ಬನೇ ಬಪ್ಪದು, ಪ್ರಪಂಚವ ಬಿಟ್ಟು ಹೋಪಗಳೂ ಏಕಾಂಗಿಯಾಗಿಯೇ ಹೋಪದು. ಸಂಸಾರ ಹೇಳ್ವ ಬಂಧನಲ್ಲಿ ಸಂಸಾರ ಅತಿ ವ್ಯಾಮೋಹಕ್ಕೆ ಬಿದ್ದುಹೋಗದ್ದಾಂತೆ ಭಗವಂತನ ಸರ್ವಾಧಿಕಾರವ ಮನಸ್ಸಿಲ್ಲಿ ಸದಾ ನೆಂಪು ಮಡಿಕ್ಕೊಂಡು ಭಗವಂತಂಗೋಸ್ಕರ ಜೀವನ ಸಾಗುಸೇಕ್ಕಾದ್ದು ಪರಮ ಕರ್ತವ್ಯ. ಇಲ್ಲದ್ರೆ ತಾನು, ತನ್ನ ಹೆಂಡತಿ, ತನ್ನ ಮಕ್ಕೋ, ತನ್ನ ಗಂಟುಮೂಟೆ ಹೇದು ಕಟ್ಟಿಮಡಿಕ್ಕೊಂಡು ಕೂದರೆ ಮುಂದೆ ಒಂದು ದಿನ ಅವೆಲ್ಲವ ಬಿಟ್ಟಿಕ್ಕಿ ಏಕಾಂಗಿಯಾಗಿ ಹೋಪಗ ಅದರ ನೆನಪು ಮಾಂತ್ರ ತನಗೆ ಸಿಕ್ಕುವ ಗಂಟು. ಅದರಿಂದ ಅತೀ ಬೆರಗಾಗಿ, ದುಃಖತಪ್ತನಾಗಿ, ರೋದಿಸಿಗೊಂಡು ಮುಂದಾಣ ಯಾತ್ರೆಯ ಯಾತನಾಮಯವಾಗಿ ನಡೇಕ್ಕಾವ್ತು. ಭಗವಂತನ ಪ್ರಜ್ಞೆ ಇಪ್ಪವಂಗೆ ಇದ್ಯಾವುದೇ ಚಿಂತೆ ಇಲ್ಲದ್ದೆ ಎಲ್ಲ ಅಂವ° ನೋಡಿಗೊಳ್ತ° ಹೇಳ್ವ ನಿರ್ಲಿಪ್ತತೆಂದ ಭಗವದ್ ಸೇವೆ ಮಾಡಿಗೊಂಡು ಈ ಪ್ರಪಂಚವ ಬಿಡುವವಂಗೆ ಮುಂದಾಣ ದಾರಿ ಸುಗಮವಾಗಿ ಇರುತ್ತು. ಅಲ್ಲಿಯೂ ಭಗವಂತನ ಜ್ಞಾನವೇ ಇಪ್ಪದರಿಂದ ಹಿಂದಾಣದ್ದರ ಯೋಚಿಸಿಗೊಂಡು ಕೂಗೇಕ್ಕಾದ ಆವಶ್ಯಕತೆ ಇರ್ತಿಲ್ಲೆ. ಅಂವ° ಇಲ್ಲಿಂದ ನೇರವಾಗಿ ಭಗವಂತನಲ್ಲಿಗೆ ಸೇರಲ್ಪಡುತ್ತ°. ಮೃತ್ಯುದೇವತೆಯ ಕೈಗೆ ಸಿಕ್ಕಿದ ಮತ್ತೆ ನಮ್ಮ ಯಾವ ಆಟವೂ ನಡೆಯ. ಅಲ್ಲಿ ಎಲ್ಲವೂ ನಿಷ್ಪಕ್ಷಪಾತವಾಗಿ ನಿರ್ದಾಕ್ಷಿಣ್ಯವಾಗಿ ನೋಡಲಾವ್ತು. ಆ ಹೊತ್ತಿಂಗೆ ಯಾವ ಲಂಚವೂ ಯಾವ ಪ್ರಾರ್ಥನೆಯೂ ನಡೆಯ. ಪಾಪಿಗಳ ನಿರ್ದಾಕ್ಷಿಣ್ಯವಾಗಿ ಥಳಿಸಿ ಬಲುಗಿಯೊಂಡು ಯಮಕಿಂಕರುರುಗೊ ಎಳಕ್ಕೊಂಡು ಹೋವ್ತವು. ಹಾಂಗಾಗಿ ನಿರ್ಲಿಪ್ತ ಜೀವನ ಅತೀ ಮಹತ್ವದ ವಿಚಾರ.
ಜೀವಿಯು ಮರಣವಾದಪ್ಪಗ ಹೆಬ್ಬೆರಳ ಗಾತ್ರದ ದೇಹದೊಟ್ಟಿಂಗೆ ಸ್ಥೂಲದೇಹಂದ ಹೆರಬತ್ತ°. ಇದರ ‘ಯಾತನಾದೇಹ’ ಹೇದು ಹೇಳ್ವದು (ಗ.ಪು. ಅ.೧.ಶ್ಲೋ.೩೩). ಸುರೂವಾಣ ಸರ್ತಿ ಯಾತನಾದೇಹವುಳ್ಳ ಈ ಜೀವಿಯ ಕೆಲವೇ ಮುಹೂರ್ತಂಗಳಲ್ಲಿ, ತಮ್ಮ ಶಕ್ತಿಂದ ಯಮಲೋಕಕ್ಕೆ ಹೋಗಿ ನರಕ ದರ್ಶನ ಮಾಡಿಸಿಕ್ಕಿ ಯಮನ ಅಪ್ಪಣೆ ಪ್ರಕಾರ ಆ ಜೀವಿಯ ಮತ್ತೆ ಒಂದು ಮುಹೂರ್ತಲ್ಲಿ ಈ ಪ್ರಪಂಚಕ್ಕೆ ಹಿಂದಂತಾಗಿ ಕರಕ್ಕೊಂಡು ಬತ್ತವು. ಸುರುವಾಣ ಹನ್ನೆರಡು ದಿನಗಳ ಪಿಂಡ ಆಹಾರಂಗಳ ಸೇವಿಸಿ ಹಸ್ತಮಾತ್ರ ಗಾತ್ರದ ದೇಹವೂ ಶಕ್ತಿಯೂ ಉಂಟಾವ್ತು. ಈ ದೇಹ 86000 ಯೋಜನ ದೂರವ ಸ್ವಶಕ್ತಿಂದ ಪ್ರಯಾಣ ಮಾಡುವದಕ್ಕೆ ಅಗತ್ಯ. ಪಿಂಡ ಸಿಕ್ಕದ್ದೆ ಇಪ್ಪವಂಗೆ ಹಸ್ತಮಾತ್ರದ ದೇಹ ಉತ್ಪತ್ತಿಯಾಗದ್ದೆ ಯಮಮಾರ್ಗಲ್ಲಿ ನಡವಲೆ ಶಕ್ತಿ ಇಲ್ಲದ್ದೆ ಅಂವ° ಈ ಲೋಕಲ್ಲಿಯೇ ಪ್ರೇತವಾಗಿ ಉಳಿತ್ತ°. ಹಸ್ತಮಾತ್ರ (ಗಾತ್ರದ) ದೇಹವುಳ್ಳ ಆ ಜೀವಿ ಸ್ವಶಕ್ತಿಂದ 85956 ಯೋಜನ ದೂರ ನಡದು ಹದಿನಾರನೇ ಊರಾದ ಬಹುಭೀತಿಪುರದ ಹತ್ರೆ ತನ್ನ ಹಸ್ತಮಾತ್ರದ ದೇಹವ ತ್ಯಾಗಮಾಡಿ ಹೆಬೆರಳ ಗಾತ್ರದ ಯಾತನಾದೇಹದೊಟ್ಟಿಂಗೆ ಯಮಲೋಕವ ಪ್ರವೇಶಿಸುತ್ತ°.
ಸ್ಥೂಲದೇಹವಾಗಲೀ, ಹಸ್ತಮಾತ್ರದೇಹವಾಗಲೀ ಯಮಲೋಕದ ಅತೀವ ಕಷ್ಟಂಗಳ ತಡೆಕ್ಕೊಂಬಲೆ ಎಡಿಯ. ಮನುಷ್ಯನ ಸ್ಥೂಲದೇಹಕ್ಕೇ ಹೆಚ್ಚಿನ ಬೇನೆಯಪ್ಪಗ ಅಂವ ಬೇನೆಂದ ಜ್ಞಾನ ತಪ್ಪುವದು, ಸಾವದೂ ಗೊಂತಿಪ್ಪದೇ. ಆದರೆ ಯಾತನಾದೇಹಕ್ಕೆ ಎಷ್ಟು ಬೇನೆ ಆದರೂ ಆ ಜೀವಿ ಬೇನೆ ಅನುಭವುಸತ್ತನೇ ಹೊರತು ಆ ದೇಹ ನಾಶ ಆವುತ್ತಿಲ್ಲೆ. ಸ್ವರ್ಗದ ಅತೀವ ಸುಖ ನೀಡುವ ಭೋಗವ ಅನುಭವುಸಲೆ ಇಂತಹ ದೇಹವೇ ಬೇಕು. ಅದಕ್ಕೆ ಕೆಲವರು ಯಾತನಾದೇಹವ ಭೊಗದೇಹ ಹೇದು ಹೇಳುತ್ತವು. ಮೋಕ್ಷವೇ ಗುರಿಯಾಗಿಪ್ಪವವರ ದೃಷ್ಟಿಲಿ ಸ್ವರ್ಗದ ಭೋಗಂಗಳೂ ಆತ್ಮೋನ್ನತಿಗೆ ಅಡ್ಡಿಯಾಗಿಪ್ಪ ಯಾತನೆಗಳೇ ಹೇದು ‘ಸಾಯಿಬೋಧಾಮೃತಾಗರ’ ಪುಸ್ತಕಲ್ಲಿ ಉಲ್ಲೇಖಿತವಾಗಿಪ್ಪ ಟಿಪ್ಪಣಿ.]
 
॥ ಹರೇ ರಾಮ ॥
 

2 thoughts on “ಗರುಡ ಪುರಾಣ – ಅಧ್ಯಾಯ 02 – ಭಾಗ 02

  1. ಇತ್ತೀಚಿನ ದಿನಂಗಳಲ್ಲಿ “ಮಾಸಿಕ” ಗಳ ಕಾಲಕ್ಕೆ ಸರಿಯಾಗಿ ಮಾಡದ್ದೆ, ವರ್ಷದ ಕೊನೇಂಗೆ ಒಟ್ಟಿಂಗೆ ಮಾದುವ ಕ್ರಮ ಸುರುವಾಯಿದು. ಈ ಭಾಗವ ಓದಿಯಪ್ಪಗ “ಮಾಸಿಕದ ವಿಶೇಷತೆ ತಿಳಿತ್ತು. ಧನ್ಯವಾದ.

  2. ಹರೇ ರಾಮ, ಚೆನ್ನೈಭಾವ, ಗರುಡ ಪುರಾಣ ಸಂಗ್ರಹಿಸಿ ಬರೆತ್ತಾ ಇಪ್ಪ ನಿಂಗೊಗೆ ಯುಂಬಾ ಧನ್ಯವಾದ. ಹೀಂಗಿದ್ದರ ಓದಿ ಅಪ್ಪಗಾದರೂ ಮನುಷ್ಯರು ತಮ್ಮ, ತಮ್ಮ ಜೀವನಲ್ಲಿ ಎಚ್ಹೆತ್ತುಗೊಂಬಲೆ ರಜಾರೂ ಸಹಾಯ ಒಕ್ಕೋಕಾಣುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×