Oppanna.com

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 26 – 34

ಬರದೋರು :   ಚೆನ್ನೈ ಬಾವ°    on   21/02/2013    3 ಒಪ್ಪಂಗೊ

ಚೆನ್ನೈ ಬಾವ°

ಈ ಹಿಂದಾಣ ಭಾಗಲ್ಲಿ ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ, ಪ್ರಕೃತಿ – ಪುರುಷ ಇವುಗಳ ವಿವರಿಸಿಗೊಂಡು, ಪ್ರಕೃತಿ ಮತ್ತೆ ಪುರುಷನ ಗುಣಸಹಿತ ತಿಳಿವದು ಮೋಕ್ಷಕ್ಕೆ ಮಾರ್ಗ ಹೇಳಿ ಭಗವಂತ°  ಉಲ್ಲೇಖಿಸಿ, ಇದರ ತಿಳಿತ್ತ ಬಗೆ ಹೇಂಗೆ ಎಂಬದನ್ನೂ ವಿವರಿಸಿದ್ದ° ಭಗವಂತ°, ಮುಂದೆ ಕ್ಷೇತ್ರ – ಕ್ಷೇತ್ರಜ್ಞರ ಸಂಬಂಧವ ವಿವರುಸುತ್ತ° ಇಲ್ಲಿ –

 

ಶ್ರೀಮದ್ಭಗವದ್ಗೀತಾ – ತ್ರಯೋದಶೋsಧ್ಯಾಯಃ – ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ – ಶ್ಲೋಕಾಃ – 26 – 34

 

ಶ್ಲೋಕ

ಯಾವತ್ಸಂಜಾಯತೇ ಕಿಂಚಿತ್ ಸತ್ತ್ವಂ ಸ್ಥಾವರಜಂಗಮಮ್ ।
ಕ್ಷೇತ್ರಕ್ಷೇತ್ರಜ್ಞಸಂಯೋಗಾತ್ ತದ್ವಿದ್ಧಿ ಭರತರ್ಷಭ ॥೨೬॥

ಪದವಿಭಾಗ

ಯಾವತ್ ಸಂಜಾಯತೇ ಕಿಂಚಿತ್ ಸತ್ತ್ವಮ್ ಸ್ಥಾವರ-ಜಂಗಮಮ್ । ಕ್ಷೇತ್ರ-ಕ್ಷೇತ್ರಜ್ಞ-ಸಂಯೋಗಾತ್ ತತ್ ವಿದ್ಧಿ ಭರತರ್ಷಭ ॥

ಅನ್ವಯ

ಹೇ ಭರತರ್ಷಭ!, ಯಾವತ್ ಕಿಂಚಿತ್ ಸ್ಥಾವರ-ಜಂಗಮಂ ಸತ್ತ್ವಂ ಸಂಜಾಯತೇ, ತತ್ ಕ್ಷೇತ್ರ-ಕ್ಷೇತ್ರಜ್ಞ-ಸಂಯೋಗಾತ್ (ಸಂಜಾಯತೇ ಇತಿ ತ್ವಂ) ವಿದ್ಧಿ ।

ಪ್ರತಿಪದಾರ್ಥ

ಹೇ ಭರತರ್ಷಭ! – ಏ ಭಾರತಶ್ರೇಷ್ಠನೇ!, ಯಾವತ್ – ಏವುದೆಲ್ಲ, ಕಿಂಚಿತ್ – ಏವುದಾರು, ಸ್ಥಾವರ-ಜಂಗಮಮ್ ಸತ್ತ್ವಮ್ – ಚಲುಸದ್ದ-ಚಲುಸುವ (ಸ್ಥಿರ-ಚರ) ಅಸ್ತಿತ್ವವ, ಸಂಜಾಯತೇ – ಅಸ್ತಿತ್ವಕ್ಕೆ ಬತ್ತೋ (ಅಸ್ತಿತ್ವವ ಹೊಂದುತ್ತೋ), ತತ್ – ಅದು, ಕ್ಷೇತ್ರ-ಕ್ಷೇತ್ರಜ್ಞ-ಸಂಯೋಗಾತ್ (ಸಂಜಾಯತೇ ಇತಿ ತ್ವಮ್) ವಿದ್ಧಿ – ಶರೀರ-ಶರೀರತಿಳುದೋನ ಸಂಯೋಗಂದ ಅಪ್ಪದು ಹೇಳಿ ನೀನು ತಿಳುಕ್ಕೊ.

ಅನ್ವಯಾರ್ಥ

ಏ ಭರತವಂಶಜರಲ್ಲಿ ಶ್ರೇಷ್ಥನಾದ ಅರ್ಜುನ!, ಸ್ಥಿರ-ಚರ (ಸ್ಥಾವರ-ಜಂಗಮ)ವಾಗಿ ಅಸ್ತಿತ್ವಲ್ಲಿಪ್ಪ ಏನ  ಕಂಡರೂ ಅದು ಕ್ಷೇತ್ರ ಮತ್ತೆ ಕ್ಷೇತ್ರಜ್ಞರ ಸಂಯೋಗಂದ ಉಂಟಾದ್ದು ಹೇಳಿ ನೀನು ತಿಳುಕ್ಕೊ.

ತಾತ್ಪರ್ಯ / ವಿವರಣೆ

ಪ್ರಕೃತಿ ಮತ್ತೆ ಪುರುಷನ ಗುಣಸಹಿತ ತಿಳಿವದು ಮೋಕ್ಷಮಾರ್ಗ ಹೇಳಿ ಭಗವಂತ° ಈ ಮೊದಲಾಣ ಶ್ಲೋಕಂಗಳಲ್ಲಿ ಸ್ಪಷ್ಟಪಡಿಸಿದ್ದ°. ಮತ್ತೆ ಮುಂದುವರ್ಶಿ ಭಗವಂತ° ಹೇಳುತ್ತ° – ಚರಾಚರಗಳಾಗಿ ಅಸ್ತಿತ್ವಲ್ಲಿಪ್ಪ ಕಾಂಬ ಪ್ರತಿಯೊಂದೂ ಕ್ಷೇತ್ರ-ಕ್ಷೇತ್ರಜ್ಞರ ಸಂಯೋಗಂದ ಉಂಟಾದ್ದು. ವಿಶ್ವದ ಸೃಷ್ಟಿಗೆ ಮದಲೇ ಅಸ್ತಿತ್ವಲ್ಲಿತ್ತಿದ್ದ ಐಹಿಕ ಪ್ರಕೃತಿ ಮತ್ತೆ ಜೀವಿಗಳ ಬಗ್ಗೆ ಈ ಶ್ಲೋಕಲ್ಲಿ ವಿವರಿಸಲ್ಪಟ್ಟಿದು. ಸೃಷ್ಟಿಯಾದ್ದೆಲ್ಲ ಜೀವಿ ಮತ್ತೆ ಪ್ರಕೃತಿಯ ಸಂಯೋಗ. ಮರ, ಬೆಟ್ಟಗುಡ್ಡದ ಹಾಂಗೆ ಚಲುಸದ್ದ ಅನೇಕ ಅಭಿವ್ಯಕ್ತಿಗೊ ಇದ್ದು, ಚಲುಸುವ ಅನೇಕ ಅಸ್ತಿತ್ವಂಗಳೂ ಇದ್ದು. ಅವೆಲ್ಲವೂ ಪ್ರಕೃತಿಯ ಮತ್ತೆ ಅದರಿಂದ ಉತ್ತಮ ಸ್ವಭಾವದ ಪುರುಷನ ಸಂಯೋಗ. ಉತ್ತಮ ಪ್ರಕೃತ್ಯ ಸ್ಪರ್ಶ ಇಲ್ಲದ್ದೆ ಏವುದೂ ಬೆಳೆಯ. ಐಹಿಕ ಪ್ರಕೃತಿ ಮತ್ತೆ ಉತ್ತಮ ಪ್ರಕೃತಿ ಸಂಬಂಧ ನಿರಂತರವಾಗಿ ಮುಂದುವರಿತ್ತು. ಭಗವಂತನೇ ಈ ರೀತಿಯಾಗಿ ಒಟ್ಟುಗೂಡಿಸಿದ್ದು. ಹಾಂಗಾಗಿ ಉತ್ತಮ ಮತ್ತೆ ನೀಚ ಪ್ರಕೃತಿಗಳ ಎರಡರನ್ನೂ ನಿಯಂತ್ರುಸುವದು ಅವನೆ. ಐಹಿಕ ಪಕೃತಿಯ ಸೃಷ್ಟಿಸಿದ್ದೂ ಅವನೇ.

ಇದರ ಬನ್ನಂಜೆಯವು ಸರಳವಾಗಿ ಈ ರೀತಿಯಾಗಿ ವಿವರುಸುತ್ತವು – “ಈ ಪ್ರಪಂಚಲ್ಲಿ ಎಂತೆಲ್ಲ ಹುಟ್ಟುತ್ತೋ, ಚಲುಸುವ-ಚಲುಸದ್ದ ಸಮಸ್ತ ಜೀವ ಜಡಾತ್ಮಕ ಮತ್ತೆ ಅದರ ಅಭಿಮಾನಿನಿಯಾದ ಪ್ರಕೃತಿದೇವಿ – ಇವಿಷ್ಟರ ಒಟ್ಟಿಂಗೆ ಕ್ಷೇತ್ರ ಹೇದು ಹೇಳುತ್ತದು. ಇವೆಲ್ಲವ ತಿಳುದವ ಕ್ಷೇತ್ರಜ್ಞನಾದ ಭಗವಂತ°. ಹಾಂಗಾಗಿ ಕ್ಷೇತ್ರ ಹೇಳಿರೆ ಭಗವಂತನಿಂದ ನಿರ್ಮಾಣವಾದ ಸಮಸ್ತ ಜೀವ ಜಡಾತ್ಮಕ ಪ್ರಪಂಚ. ಸಮಸ್ತ ಸೃಷ್ಟಿ ಲಕ್ಷ್ಮೀನಾರಾಯಣರ ಸಂಯೋಗಂದ ನಿರ್ಮಾಣ ಆತು. ಅವು ಈ ಪ್ರಪಂಚದ ಸುರುವಾಣ ದಂಪತಿಗೊ. ಹಾಂಗಾಗಿ ಎಲ್ಲೋರ ಅಪ್ಪ° ಅಬ್ಬೆ ಆ ನಾರಾಯಣ ಮತ್ತೆ ಶ್ರೀಲಕ್ಷ್ಮಿ. “ಇದರ ತಿಳುದಪ್ಪಗ ನೀನು ನಿಜವಾದ ಭರತರ್ಷಭ” ಹೇಳಿ ಭಗವಂತ° ಇಲ್ಲಿ ಹೇಳಿದ್ದದು. ಭಗವಂತನಲ್ಲಿ ರಥನಾದವ°, ಭಗವಂತನಲ್ಲಿ ಪೂರ್ಣಭಕ್ತಿ ಇಪ್ಪವ° – ‘ಭರತರ್ಷಭ°’ .

ಶ್ಲೋಕ

ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಮ್ ।
ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ ॥೨೭॥

ಪದವಿಭಾಗ

ಸಮಮ್ ಸರ್ವೇಷು ಭೂತೇಷು ತಿಷ್ಠಂತಮ್ ಪರಮೇಶ್ವರಮ್ । ವಿನಶ್ಯತ್ಸು ಅವಿನಶ್ಯಂತಮ್ ಯಃ ಪಶ್ಯತಿ ಸಃ ಪಶ್ಯತಿ ॥

ಅನ್ವಯ

ಯಃ ವಿನಶ್ಯತ್ಸು ಸರ್ವೇಷು ಭೂತೇಷು ಸಮಂ ತಿಷ್ಠಂತಮ್ ಅವಿನಶ್ಯಂತಂ ಪರಮೇಶ್ವರಂ ಪಶ್ಯತಿ, ಸಃ ಪಶ್ಯತಿ ।

ಪ್ರತಿಪದಾರ್ಥ

ಯಃ – ಯಾವಾತ°, ವಿನಶ್ಯತ್ಸು – ವಿನಾಶಿಯಾದವುಗಳಲ್ಲಿ, ಸರ್ವೇಷು ಭೂತೇಷು – ಸಮಸ್ತ ಜೀವಿಗಳಲ್ಲಿ, ಸಮಮ್ ತಿಷ್ಠಂತಮ್ – ಸಮಾನವಾಗಿ ಇಪ್ಪ, ಅವಿನಶ್ಯಂತಮ್ – ಅವಿನಾಶಿಯಾದವನ, ಪರಮೇಶ್ವರಮ್ (ಪರಮ-ಈಶ್ವರಮ್) – ಪರಮಾತ್ಮನ, ಪಶ್ಯತಿ – ಕಾಣುತ್ತನೋ, ಸಃ ಪಶ್ಯತಿ – ಅವ° ನಿಜವಾಗಿ ಕಾಣುತ್ತ°.

ಅನ್ವಯಾರ್ಥ

ವಿನಾಶಿಯಾಗಿಪ್ಪ ಎಲ್ಲ ಜೀವಿಗಳಲ್ಲಿ ಸಮಾನವಾಗಿಪ್ಪವ ನಾದ(ಏಕರೂಪನಾಗಿಪ್ಪವನಾದ) ಅವಿನಾಶಿಯಾದ ಪರಮಾತ್ಮನ ಯಾವತ° ತಿಳಿತ್ತನೋ ಅವನೇ ನಿಜವಾಗಿ ತಿಳುದವ°.

ತಾತ್ಪರ್ಯ / ವಿವರಣೆ

ಬನ್ನಂಜೆ ಹೇಳುತ್ತವು – ಸಮಸ್ತ ಜೀವಿಗಳ ಒಳ ಹೆರ ಏಕರೂಪಂದ ಇಪ್ಪ ಸರ್ವಶಕ್ತ ಭಗವಂತ° ಪರಮ-ಈಶ-ವರ°. ಆರ ಆಜ್ಞೆಯ ನಾವು ಪಾಲುಸದ್ದೆ ಇಪ್ಪಲೆಡಿಯದೋ, ಪಾಲುಸುವದು ನಮ್ಮ ಕರ್ತವ್ಯವೋ, ನವಗರಡಿಯದ್ದೆ ನಮ್ಮೊಳ ಇದ್ದು ನಮ್ಮ ಪಾಲುಸುವ ಅಜ್ಞಾತಶಕ್ತಿ – ‘ಈಶ-ವರ’ –  ಹೇಳಿರೆ, –  ತತ್ವಾಭಿಮಾನಿ ದೇವತೆಗೊ. ಇಂತಹ ತತ್ವಾಭಿಮಾನಿ ದೇವತೆಗಳನ್ನೂ ನಿಯಂತ್ರುಸುವ ಭಗವಂತ° – ಪರಮೇಶ್ವರ°. ಇಂಥ ಭಗವಂತ ಎಲ್ಯೋ ಕೂದೊಂಡು ನಮ್ಮ ಮೇಶುತ್ತನಿಲ್ಲೆ. ಅವ° ನಮ್ಮೊಳ ಇದ್ದು ನಮ್ಮ ಮೇಶುತ್ತ. ಅವ° ನಮ್ಮೊಳ ಸ್ವತಂತ್ರನಾಗಿದ್ದು ನಮ್ಮ ಹೊತ್ತು ನಡೆಶುತ್ತ°. ಭಗವಂತ° ಮುಕ್ತಾssಮುಕ್ತ ನಿಯಾಮಕ°. ಎಲ್ಲರನ್ನೂ ಎಲ್ಲ ಕಾಲಲ್ಲಿಯೂ ಅವರವರ ಯೋಗ್ಯತೆಗನುಗುಣವಾಗಿ, ಆಯಾ ವಸ್ತುವಿನ ಸ್ವಭಾವಕ್ಕನುಗುಣವಾಗಿ ಅದರೊಳ ಇದ್ದು ಪ್ರೇರಣೆ ಮಾಡುವವ° – ಭಗವಂತ°. ಭಗವಂತನ ಶಕ್ತಿಲಿ ಮೇಲು-ಕೀಳು ಹೇದು ಇಲ್ಲೆ. ಆನೆಯೊಳ ಇಪ್ಪ ಭಗವಂತ ಎರಿಗಿನೊಳವೂ ಇದ್ದ. ಅದೂ ಅದೇ ಭಗವಂತ°. ಎಲ್ಲದರೊಳವೂ ಸಮಾನವಾಗಿ ಇದ್ದ°. ಆದರೆ ಅವನ ಸನ್ನಿಧಾನಲ್ಲಿ ವ್ಯತ್ಯಾಸ ಇಪ್ಪದರಿಂದ (ಬೇರೆ ಬೇರೆ ವಸ್ತುಗಳ ಸ್ವಭಾವಕ್ಕನುಗುಣವಾಗಿ ಇಪ್ಪದರಿಂದ) ಆ ಸನ್ನಿಧಾನದ ಅಧಿಷ್ಠಾನಲ್ಲಿ ವ್ಯತ್ಯಾಸ ಕಂಡುಬತ್ತು. ನಮ್ಮ ದೇಹಲ್ಲಿಪ್ಪ ಬಿಂಬರೂಪಿ ಭಗವಂತ ಅವಿನಾಶಿ. ಅವಂಗೆ ದೇಹನಾಶ, ಸ್ವರೂಪನಾಶ, ದುಃಖಪ್ರಾಪ್ತಿ ಇತ್ಯಾದಿಗೊ ಇಲ್ಲೆ. ಅವ° ಅಪೂರ್ಣನಲ್ಲ. ಈ ಸತ್ಯವ ತಿಳುದವ° ಯಥಾರ್ಥ ಜ್ಞಾನ ಇಪ್ಪವ°.

ಶ್ಲೋಕ

ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಮ್ ।
ನ ಹಿನಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಮ್ ॥೨೮॥

ಪದವಿಭಾಗ

ಸಮಮ್ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮ್ ಈಶ್ವರಮ್ । ನ ಹಿನಸ್ತಿ ಆತ್ಮಾನಾ ಆತ್ಮಾನಮ್ ತತಃ ಯಾತಿ ಪರಾಮ್ ಗತಿಮ್ ॥

ಅನ್ವಯ

(ಯಃ) ಸರ್ವತ್ರ ಸಮವಸ್ಥಿತಮ್ ಈಶ್ವರಂ ಸಮಂ ಪಶ್ಯನ್ ಹಿ ಆತ್ಮನಾ ಆತ್ಮಾನಂ ನ ಹಿನಸ್ತಿ, (ಸಃ) ತತಃ ಪರಾಂ ಗತಿಂ ಯಾತಿ ।

ಪ್ರತಿಪದಾರ್ಥ

(ಯಃ – ಯಾವಾತ°), ಸರ್ವತ್ರ ಸಮವಸ್ಥಿತಮ್ ಈಶ್ವರಮ್ – ಎಲ್ಲ ಕಡೆಲಿಯೂ ಸಮಾನವಾಗಿ ನೆಲೆಸಿಪ್ಪ ಪರಮಾತ್ಮನ, ಸಮಮ್ ಪಶ್ಯನ್ – ಸಮಾನವಾಗಿ ನೋಡಿಗೊಂಡು, ಹಿ – ಖಂಡಿತವಾಗಿಯೂ, ಆತ್ಮನಾ – ಮನಸ್ಸಿಂದ, ಆತ್ಮಾನಮ್ – ಆತ್ಮನ(ತನ್ನ), ನ ಹಿನಸ್ತಿ – ಅವನತಿ ಹೊಂದುತ್ತನಿಲ್ಲೆಯೋ, (ಸಃ – ಅವ°), ತತಃ – ಮತ್ತೆ . ಪರಾಮ್ ಗತಿಮ್ – ಪರಮ ಗತಿಯ/ಗುರಿಯ (ಮುಕ್ತಿಯ) ಯಾತಿ – ತಲಪುತ್ತ°.

ಅನ್ವಯಾರ್ಥ

ಎಲ್ಲೆಲ್ಲಿಯೂ, ಪ್ರತಿಯೊಂದು ಜೀವಿಲಿಯೂ ಸಮಾನವಾಗಿ ಯಾವಾತ ಪರಮಾತ್ಮನ ಕಾಣುತ್ತನೋ, ಅವ ತನ್ನ ಮನಸ್ಸಿಂದ ತನ್ನ ಹೀನ ಸ್ಥಿತಿಯ ಹೊಂದುತ್ತನಿಲ್ಲೆ. ಹೀಂಗೆ ಅವ° ಪರಮ ಗತಿಯ ಸೇರುತ್ತ°.

ತಾತ್ಪರ್ಯ / ವಿವರಣೆ

ಮತ್ತೆ ಬನ್ನಂಜೆಯವರ ವ್ಯಾಖ್ಯಾನಂದಲೇ ಹೆರ್ಕಿದ್ದು – ನಾವು ನಮ್ಮ ದೇಹಲ್ಲಿ ಸ್ಥಿತರು, ಭಗವಂತ° ‘ಸಂಸ್ಥಿತ°’. ಈ ದೇಹದೊಳ ಇಪ್ಪ ನವಗೆ ಈ ದೇಹದ ಜ್ಞಾನ ಕೂಡ ಇಲ್ಲೆ. ನಾವೆಂತಕೆ ಇದ್ದೆಯೋ ಹೇಳಿಯೂ ಗೊಂತಿಲ್ಲೆ. ನಾವು ನಮ್ಮೊಳ ಇದ್ದುಗೊಂಡು ಆನಂದ ದುಃಖವ ಅನುಭವಿಸುತ್ತಿರುತ್ತು. ಆದರೆ ಭಗವಂತ° ದುಃಖ ಅಜ್ಞಾನದ ಸ್ಪರ್ಶ ಇಲ್ಲದ್ದೆ ಇಪ್ಪ ಆನಂದಮೂರ್ತಿ. ಅವ° ನಮ್ಮೊಳ ಇಪ್ಪ ಸರ್ವ ತತ್ವಾಭಿಮಾನಿ ದೇವತೆಗೊಕ್ಕೆ ಸಮವಸ್ಥಿತನಾಗಿ ಎತ್ತರಲ್ಲಿದ್ದ°. ದುಃಖ ಅಜ್ಞಾನದ ಲೇಪ ಇಲ್ಲದ್ದ ಭಗವಂತ° ಆರನ್ನೂ ಮೇಲು-ಕೀಳು ಭಾವಂದ ನೋಡುತ್ತನಿಲ್ಲೆ. ಪ್ರತಿಯೊಬ್ಬನನ್ನೂ ಅವರವರ ಕರ್ಮ ಮತ್ತೆ ಜೀವಯೋಗ್ಯತೆಕ್ಕನುಗುಣವಾಗಿ ಸಮವಾಗಿ ಕಾಣುತ್ತ°. ಭಗವಂತ° ಸಮಸ್ತ ಜಡ-ಚೇತನದೊಳ ಜಗದೀಶ್ವರನಾಗಿ ನಿಂದು ನಮ್ಮ ಜೀವಸ್ವಭಾವಕ್ಕೆ ತಕ್ಕಾಂಗೆ, ಕರ್ಮಕ್ಕನುಗುಣವಾಗಿ ನಮ್ಮ ನಡೆಶುತ್ತ°. ಈ ಸತ್ಯವ ತಿಳುದಪ್ಪಗ “ನೀನು ನಿನಗೆ ಹಿಂಸೆ ಮಾಡದ್ದೆ ಬದುಕ್ಕಲಕ್ಕು” (ನ ಹಿನಸ್ತಿ – ನೋವುಂಟುಮಾಡದ್ದೆ, ಅವನತಿಯ ಉಂಟುಮಾಡದ್ದೆ)  – ಹೇದು ಭಗವಂತ° ಇಲ್ಲಿ ಹೇಳಿದ್ದದು. ಭಗವಂತನ ಅರಿವಿಲ್ಲದ್ದೆ ಬದುಕುವುದು ಒಂದು ಆತ್ಮಹಿಂಸೆ. ಒಂದರಿ ‘ಆನು’ ಹೇಳಿರೆಂತರ, ಎನ್ನೊಳ ಇಪ್ಪ ಭಗವಂತ° ಹೇದರೆಂದತರ ಹೇಳ್ವ ವಸ್ತುಃಸ್ಥಿತಿ (ಯಥಾರ್ಥ) ತಿಳುದರೆ  ಹಿಂಸೆ ಆವುತ್ತಿಲ್ಲೆ. ಅದರ ತಿಳಿಯದ್ದೆ ಬದುಕ್ಕುವದು ಅಜ್ಞಾನದ ಮತ್ತೆ ದುಃಖದ ಬದುಕು. ಜೀವನಲ್ಲಿ ಬಪ್ಪ ಪ್ರತಿಯೊಂದು ಸಂಗತಿಯ “ಆನು ಹಿಂದೆ ಮಾಡಿದ ಕರ್ಮದ ಫಲ, ಅದರ ಭಗವಂತ° ಮಾಡಿಸಿದ°” ಹೇಳ್ವ ಯಥಾರ್ಥವ ತಿಳ್ಕೊಂಡ್ರೆ ಬದುಕು ದುಃಖ ಇಲ್ಲದ್ದೆ ಆನಂದಂದ ಇಪ್ಪಲೆಡಿಗು. ನಮ್ಮ ಮನಸ್ಸೇ ನವಗೆ ದುಃಖವ ಕೊಡುತ್ತದು. ಅದುವೇ ಆನಂದವನ್ನೂ ಕೊಡುವದು. ನವಗೆ ದುಃಖ ಆಪ್ಪದು ನಮ್ಮ ತಿಳುವಳಿಕೆಂದ ಹೊರತು ಬೇರೇವುದರಿಂದಲೂ ಅಲ್ಲ. ಉದಾಹರಣೆಗೆ – ಒಬ್ಬ ಶ್ರೀಮಂತ ಏವುದೋ ಕಾರಣಂದ ತನ್ನಲ್ಲಿಪ್ಪ ಎಲ್ಲ ಸಂಪತ್ತಿನ ಕಳಕ್ಕೊಳ್ಳುತ್ತ°. ಅಂಬಗ ಅವ° ‘ಎನ್ನ ಪೂರ್ವಜನ್ಮದ ಕರ್ಮಕ್ಕನುಗುಣವಾಗಿ ಈ ಘಟನೆ ನಡದತ್ತು. ಎಲ್ಲವೂ ಭಗವಂತನ ಲೀಲೆ. ಕೊಡುವವನೂ ಅವನೇ, ತೆಕ್ಕಂಬದೂ ಅವನೇ, ಪಾಲುಸುವವನೂ ಅವನೇ. ಆನೇಂತಕೆ ಚಿಂತೆ ಮಾಡೆಕು’ ಹೇದು ತಿಳ್ಕೊಂಡ್ರೆ ಅವಂಗೆ ದುಃಖ ಉಂಟಾಗ. ಆನಂದಂದ ಇಪ್ಪಲೆಡಿಗು. ಇದರ ಬಿಟ್ಟು ಬ್ರಹ್ಮಾಂಡವೇ ತಲೆಮೇಗೆ ಬಿದ್ದಾಂಗೆ ವರ್ತಿಸಿರೆ ಅದು ನಮ್ಮ ನಾವು ಹಿಂಸಿಸಿಗೊಂಡಾಂಗೆ. ನಾವು ಎಲ್ಲವನ್ನೂ ಪ್ರೇಕ್ಷಕನಾಗಿ ಕಾಂಬಲೆ ಅಭ್ಯಾಸ ಮಾಡಿಗೊಳ್ಳೆಕು. ಭಗವಂತನ ಜ್ಞಾನದೊಂದಿಂಗೆ ಶಾಂತವಾದ ಇಂತಹ ಬದುಕು ನಮ್ಮ ಪರಮಪದವಾದ ಮೋಕ್ಷದ ಕಡೆಂಗೆ ಕೊಂಡೋಕು.

ಶ್ಲೋಕ

ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ ।
ಯಃ ಪಶ್ಯತಿ ತಥಾತ್ಮಾನಂ ಅಕರ್ತಾರಂ ಸ ಪಶ್ಯತಿ ॥೨೯॥

ಪದವಿಭಾಗ

ಪ್ರಕೃತ್ಯಾ ಏವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ । ಯಃ ಪಶ್ಯತಿ ತಥಾ ಆತ್ಮಾನಮ್ ಅಕರ್ತಾರಮ್ ಸಃ ಪಶ್ಯತಿ ॥

ಅನ್ವಯ

ಯಃ ಚ ಪ್ರಕೃತ್ಯಾ ಏವ ಕರ್ಮಾಣಿ ಸರ್ವಶಃ ಕ್ರಿಯಮಾಣಾನಿ (ಸಂತಿ ಇತಿ ಪಶ್ಯತಿ), ತಥಾ ಆತ್ಮಾನಮ್ ಅಕರ್ತಾರಂ ಪಶ್ಯತಿ, ಸಃ ಪಶ್ಯತಿ ।

ಪ್ರತಿಪದಾರ್ಥ

ಯಃ – ಯಾವಾತ°, ಚ – ಕೂಡ, ಪ್ರಕೃತ್ಯಾ – ಭೌತಿಕ ಪ್ರಕೃತಿಂದ, ಏವ – ಖಂಡಿತವಾಗಿಯೂ, ಕರ್ಮಾಣಿ – ಕಾರ್ಯಂಗಳ, ಸರ್ವಶಃ ಕ್ರಿಯಮಾಣಾನಿ (ಸಂತಿ ಇತಿ ಪಶ್ಯತಿ) – ಎಲ್ಲ ರೀತಿಲ್ಲಿಯೂ ಆಚರುಸೆಕ್ಕಾದ್ದಿದ್ದು ಹೇದು ನೋಡುತ್ತನೋ, ತಥಾ – ಹಾಂಗೇ, ಆತ್ಮಾನಮ್ – ತನ್ನ, ಅಕರ್ತಾರಮ್ – ಮಾಡದವನಾಗಿ, ಪಶ್ಯತಿ – ನೋಡುತ್ತನೋ, ಸಃ – ಅವ°, ಪಶ್ಯತಿ – ಪರಿಪೂರ್ಣವಾಗಿ ನೋಡುತ್ತ°.

ಅನ್ವಯಾರ್ಥ

ಯಾವತ° ಪ್ರಕೃತಿಯಿಂದಲೇ ಸಕಲ ಕಾರ್ಯಂಗಳೂ ನಡೆತ್ತು ಹೇದು ಕಾಣುತ್ತನೋ (ತಿಳಿತ್ತನೋ), ಹಾಂಗೂ ತಾನು (ತನ್ನ ಸ್ವತಂತ್ರನಲ್ಲ ಹೇದು ತಿಳಿತ್ತನೋ) ಎಂತ ಮಾಡ್ಳೂ ಸ್ವತಂತ್ರನಲ್ಲ (ತಾನು ಏನೂ ಮಾಡುತ್ತವನಲ್ಲ) ಹೇಳಿ ತಿಳಿತ್ತನೋ ಅವ° ನಿಜವಾಗಿ ಪರಿಪೂರ್ಣವಾಗಿ ತಿಳುದವನಾಗಿರುತ್ತ°.

ತಾತ್ಪರ್ಯ / ವಿವರಣೆ

ಭಗವಂತನ (ಪರಮಾತ್ಮನ) ಮಾರ್ಗದರ್ಶನಲ್ಲಿ ಐಹಿಕ ಪ್ರಕೃತಿಯು ದೇಹವ ಮಾಡುತ್ತು. ದೇಹಕ್ಕೆ ಸಂಬಂಧಿಸಿ ಆಗುವ ಕರ್ಮಂಗಳ ಪರಮಾತ್ಮ ಮಾಡುತ್ತನಿಲ್ಲೆ. ಸುಖಕ್ಕಾಗಲೀ ದುಃಖಕ್ಕಾಗಲೀ ಮನುಷ್ಯ° ಮಾಡುತ್ತ° ಹೇದು ಗ್ರೇಶುವದೆಲ್ಲವ ಮನುಷ್ಯ° ತನ್ನ ದೇಹದ ಸ್ವರೂಪಂದ ಮಾಡ್ಳೇಬೇಕಾಗಿದ್ದು. ಆದರೆ ಆತ್ಮನು  ದೇಹದ ಕರ್ಮಂಗಳಿಂದ ಹೆರ ಇರ್ತ°.  ಮನುಷ್ಯನ ಹಿಂದಾಣ ಬಯಕೆಗಳ ಅನುಗುಣವಾಗಿ ಈಗ ಈ ದೇಹ ಬಂದದು. ಬಯಕೆಗಳ ಪೂರೈಸಿಗೊಂಬಲೆ ಮನುಷ್ಯಂಗೆ ಈ ದೇಹವ ಕೊಡಲ್ಪಟ್ಟಿದು. ಅದಕ್ಕೆ ಅನುಗುಣವಾಗಿ ಕರ್ಮಂಗಳ ಮಾಡುತ್ತ° ಮನುಷ್ಯ°. ವಾಸ್ತವವಾಗಿ ದೇಹ ಹೇಳ್ತದು ಒಂದು ಯಂತ್ರ, ಬಯಕೆಗಳ ತೃಪ್ತಿಗಾಗಿ ಭಗವಂತ ಇದರ ರೂಪಿಸಿದ್ದ°. ಬಯಕೆಗಳಿಂದಾಗಿ ಮನುಷ್ಯನ ಕಷ್ಟ ವಾ ಸುಖವ ಪಡುವ ಪರಿಸ್ಥಿತಿಲಿ ಇಡಲಾಯ್ದು. ಜೀವಿಯು ಈ ದಿವ್ಯದರ್ಶನವ ಬೆಳೆಶಿಗೊಂಡರೆ ಅದು ಅವನ ದೇಹದ ಕರ್ಮಂಗಳಿಂದ ಬೇರೆ ಮಾಡುತ್ತು. ಇಂತಹ ದರ್ಶನಯಿಪ್ಪವ° ವಾಸ್ತವವಾದ ದ್ರಷ್ಟಾರ°.

ಬನ್ನಂಜೆಯವರ ವ್ಯಾಖ್ಯಾನವ ಗಮನಿಸಿರೆ – ಜೀವಿಯ ಕರ್ಮಕ್ಕನುಗುಣವಾಗಿ ಭಗವಂತನೆ ಮುಂದೆ ನಿಂದು ಎಲ್ಲ ಕಾರ್ಯಂಗಳ ಮುನ್ನೆಡೆಸುತ್ತ°, ಮತ್ತೆ ಜೀವಿ ತಾನು ಸ್ವತಃ ಎಂತ ಮಾಡುವದಕ್ಕೂ ಸ್ವತಂತ್ರನಲ್ಲ (ಭಗವಂತಂಗೆ ಇನ್ನೊಬ್ಬ ಕಾರಣ ಪುರುಷ ಇಲ್ಲೆ) ಹೇಳಿ ತಿಳುದವ° ‘ನಿಜವಾಗಿ ತಿಳುದವ°’. ಭಗವಂತ ಇಲ್ಲಿ ಹೇಳಿದ್ದ° – “ಆರಿಂಗೆ ತಾನು ಮಾಡುತ್ತಿಲ್ಲೆ ಹೇದು ಗೊಂತಿದ್ದೊ, ಅವ° ತಿಳುದವ°”. ಹಾಂಗಾಗಿ ಮದಾಲು ನಾವು “ಆನು ಮಾಡಿದ್ದದು, ಆನು ಮಾಡ್ತ ಇಪ್ಪದು” ಹೇಳ್ವ ಅಹಂಕಾರವ ಬಿಡೆಕು. ಆನು ಮಾಡುತ್ತಾ ಇದ್ದೆ / ಮಾಡಿದ್ದದು ಹೇಳ್ವದು ಕೇವಲ ವ್ಯವಹಾರಿಕ ಸತ್ಯ ಹೊರತು ಪಾರಮಾರ್ಥಿಕ ಸತ್ಯ ಆವ್ತಿಲ್ಲೆ. ಇನ್ನು ‘ಆನು’  ಹೇಳಿರೆ ಅದು ‘ಆತ್ಮ’ ಅಲ್ಲ, ಈ ಶರೀರವೂ  ‘ಆನು’ ಅಲ್ಲ. ಉದಾಹರಣೆಗೆ “ಆನು ಮಾತಾಡುತ್ತ ಇದ್ದೆ”. ಇಲ್ಲಿ ಆನು ಮಾತಾಡೇಕ್ಕಾರೆ ಮದಾಲು ಆನು ಮೂಗನಾಗಿಪ್ಪಲಾಗ. ಅದಕ್ಕೆ ಸರಿಯಾದ ಅಂಗಾಂಗ ಇಪ್ಪ ಮಾನವ ಶರೀರ ಇರೆಕು. ಮಾತಾಡೇಕ್ಕಾರೆ ಎನ್ನ ಮನಸ್ಸು, ವಿಷಯಂಗಳ ಸಮಯಕ್ಕೆ ಸರಿಯಾಗಿ ಯೋಚಿಸಿ ಸಂದೇಶವ ರವಾನುಸೆಕು. ಹೇಳಿರೆ, ಇದಕ್ಕೆ ಸರಿಯಾದ ಮೆದುಳಿನ ಶಕ್ತಿ ಎನಗೆ ಬೇಕು. ಮಾತಾಡುವ ಧೈರ್ಯ ಎನಗೆ ಬೇಕು. ಇನ್ನು ಈಗ ನವಗೆ ನಾವೇ ಪ್ರಶ್ನೆ ಹಾಕ್ಯೊಂಬೊ. ಎನಗೆ ಮಾತಾಡ್ಳೆ ಈ ದೇಹವ ಕೊಟ್ಟದಾರು? ಎನಗೆ ಯೋಚನೆ ಮಾಡ್ಳೆ ಮೆದುಳಿನ ವಿನ್ಯಾಸ ಕರುಣಿಸಿದ್ದಾರು, ಮೆದುಳಿಂದ ಸರಿಯಾದ ಸಮಯಕ್ಕೆ ಸಂದೇಶವ ರವಾನಿಸಿದ್ದಾರು? ಮಾತಾಡುವ ಅದ್ಭುತ ಕಲೆಯ ದಯಪಾಲಿಸಿದ್ದಾರು?.. ಈ ಎಲ್ಲಾ ಪ್ರಶ್ನೆಗಳಿಂದ ನವಗೆ ಗೊಂತಪ್ಪದೆಂತರ ಹೇಳಿರೆ , “ಎನ್ನೊಳ ಇಪ್ಪ ಭಗವಂತ ನುಡಿಸಿದ°, ಆನು ನುಡುದೆ° ಹೇಳ್ವ ಸತ್ಯ. ಇದನ್ನೇ ಇಲ್ಲಿ ಭಗವಂತ° ಹೇಳಿದ್ದದು – “ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ” . ಅವರವರ ಜೀವಪ್ರಕೃತಿಗೆ (ಜೀವ ಸ್ವಭಾವಕ್ಕೆ) ಅನುಗುಣವಾಗಿ ಪ್ರಕೃತಿ ತ್ರಿಗುಣಂಗಳ ಪ್ರಭಾವಂದ, ಪ್ರಕೃತಿಪುರುಷರು (ಲಕ್ಷ್ಮೀ-ನಾರಾಯಣರು) ನಮ್ಮಿಂದ ಕರ್ಮವ ಮಾಡುಸುತ್ತವು. ಹಾಂಗಾಗಿ ಜೀವಂಗೆ ಅನಾಧಿನಿತ್ಯನಾಗಿ ಬಂದ ಜೀವಸ್ವಭಾವಕ್ಕನುಗುಣವಾಗಿ ಅವನ ದೇಹ ಸೃಷ್ಟಿ, ಅದಕ್ಕನುಗುಣವಾಗಿ ಅವನ ಮೇಲೆ ವಾತಾವರಣದ ತ್ರಿಗುಣಂಗಳ ಪ್ರಭಾವ, ತ್ರಿಗುಣಂಗಳ ಪ್ರಭಾವದಂತೆ ಅವನ ಎಲ್ಲಾ ವಿಧದ ಕರ್ಮ. ಇದೆಲ್ಲವ ಮಾಡುಸುವವ° – ಸರ್ವದೇವತೆಗಳ ಅಧಿಪತಿಯಾದ – ಲಕ್ಷ್ಮೀಸಮೇತನಾದ ನಾರಾಯಣ. ಈ ಯಥಾರ್ಥವ ಆರು ತಿಳಿದಿರುತ್ತನೋ ಅವನೇ ಪರಿಪೂರ್ಣವಾಗಿ ತಿಳುದವ°.

ಶ್ಲೋಕ

ಯದಾ ಭೂತಪೃಥಗ್ಭಾವಮ್ ಏಕಸ್ಥಮನುಪಶ್ಯತಿ ।
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ ॥೩೦॥

ಪದವಿಭಾಗ

ಯದಾ ಭೂತ-ಪೃಥಕ್-ಭಾವಮ್ ಏಕಸ್ಥಮ್ ಅನುಪಶ್ಯತಿ । ತತಃ ಏವ ಚ ವಿಸ್ತಾರಮ್ ಬ್ರಹ್ಮ ಸಂಪದ್ಯತೇ ತದಾ ॥

ಅನ್ವಯ

ಯದಾ ಭೂತ-ಪೃಥಕ್-ಭಾವಮ್ ಏಕಸ್ಥಂ ಚ ತತಃ ಏವ ವಿಸ್ತಾರಮ್ ಅನುಪಶ್ಯತಿ, ತದಾ ಬ್ರಹ್ಮ ಸಂಪದ್ಯತೇ ।

ಪ್ರತಿಪದಾರ್ಥ

ಯದಾ – ಏವಾಗ, ಭೂತ-ಪೃಥಕ್-ಭಾವಮ್ – ಜೀವಿಗಳ ಪ್ರತ್ಯೇಕವಾದ ಸ್ವರೂಪವ (ಬೇರೆ ಬೇರೆ ಜೀವಿಗಳ ಬೇರೆ ಬೇರೆ ಸ್ವರೂಪವ/ ಎಲ್ಲ ಜೀವಿಗಳ ಪ್ರಪ್ತತ್ಯೇಕ ಸ್ವಭಾವವ), ಏಕಸ್ಥಮ್ – ಒಂದರ್ಲಿ ನೆಲೆಸಿದ, ಚ – ಕೂಡ, ತತಃ ಏವ – ಮತ್ತೆ, ವಿಸ್ತಾರಮ್ – ವಿಸ್ತಾರವಾದ, ಅನುಪಶ್ಯತಿ – ಪ್ರಮಾಣಮೂಲಕ ನೋಡುತ್ತನೋ, ತದಾ – ಅಂಬಗ, ಬ್ರಹ್ಮ ಸಂಪದ್ಯತೇ – ಪರಬ್ರಹ್ಮವ ಹೊಂದುತ್ತ°.

ಅನ್ವಯಾರ್ಥ

ಏವಾಗ (ಮನುಷ್ಯ) ಬೇರೆ ಬೇರೆ ಜೀವಿಗಳ ಪ್ರಪ್ರತ್ಯೇಕ ಸ್ವಭಾವಂಗಳ ಒಂದರ್ಲಿ ನೆಲೆಸಿಪ್ಪಿದರ ಕಾಣುತ್ತನೋ ಅಂಬಗ ಅವ° ಪರಬ್ರಹ್ಮ ಪರಿಕಲ್ಪನೆಯ ತಲಪುತ್ತ°.

ತಾತ್ಪರ್ಯ / ವಿವರಣೆ

ಜೀವಿಗಳ ಬೇರೆ ಬೇರೆ ದೇಹಂಗೊ ಜೀವಾತ್ಮನ ಬೇರೆ ಬೇರೆ ಬಯಕೆಗಳ ಕಾರಣಂದ ಆದ್ದು, ದೇಹವು ಆತ್ಮಕ್ಕೆ ಸೇರಿದ್ದಲ್ಲ. ಇದರ ಮನುಷ್ಯ° ನಿಜವಾಗಿ ನೋಡ್ಳೆ ಸಾಧ್ಯನಾದಪ್ಪಗ ಅವ° ನಿಜವಾಗಿ ನೋಡುತ್ತ°.  ಬದುಕಿನ ಪರಿಕಲ್ಪನೆಲಿ ಒಬ್ಬ ದೇವತೆಯಾಗಿ, ಇನ್ನೊಬ್ಬ ಮನುಷ್ಯನಾಗಿ, ಮತ್ತೊಬ್ಬ ನಾಯಿ ಪುಚ್ಚೆ ಇತ್ಯಾದಿ ಪ್ರಾಣಿಯಾಗಿ, ಕ್ರಿಮಿಯಾಗಿ ನವಗೆ ಕಾಣುತ್ತು. ಇದು ಐಹಿಕ ದೃಷ್ಟಿ. ವಾಸ್ತವ ದೃಷ್ಟಿ ಇದಲ್ಲ. ಈ ಐಹಿಕ ಭಿನ್ನತೆಗೆ ಬದುಕಿನ ಐಹಿಕ ಪರಿಕಲ್ಪನೆಯೇ ಕಾರಣ. ಐಹಿಕ ದೇಹ ನಾಶವಾದಪ್ಪಗ ಮತ್ತೆ ಜೀವಾತ್ಮ ಒಂದೇ. ಐಹಿಕ ಪ್ರಕೃತಿಯ ಸಂಪರ್ಕಂದ ಜೀವಾತ್ಮಂಗೆ ಬೇರೆ ಬೇರೆ ದೇಹಂಗೊ ಹೊಂದುತ್ತು. ಮನುಷ್ಯಂಗೆ ಇದರ ಕಾಂಬಲೆ ಸಾಧ್ಯ ಆದಪ್ಪಗ ಅವ° ದಿವ್ಯದರ್ಶನವ ಪಡೆತ್ತ°. ಹೀಂಗೆ ಮಾನವ ಪ್ರಾಣಿ ಮೇಲಾದ್ದು ಕೀಳಾದ್ದು ಇತ್ಯಾದಿ ಭಿನ್ನತೆಯ ಭಾವಂಗಳಿಂದ ಮುಕ್ತನಾಗಿ ಮನುಷ್ಯ° ಪ್ರಜ್ಞೆಲಿ ಪರಿಶುದ್ಧನಾವ್ತ°.

ಜೀವ ಅನಾಧಿನಿತ್ಯ. ಸೃಷ್ಟಿಯಪ್ಪದು, ನಾಶ ಅಪ್ಪದು ಕೇವಲ ಕಾಂಬ ರೂಪ ಅಷ್ಟೆ. ಜೀವಜಾತಂಗೊ ಒಂದೊಂದೂ ಪೃಥಕ್ (ಪ್ರತ್ಯೇಕ) ಭಾವಂಗೊ. ಯಾವ ಜೀವಜಾತವೂ ನೂರಕ್ಕೆ ನೂರು ಸದೃಶವಾಗಿರ್ತಿಲ್ಲೆ. ಈ ಅನೇಕ ಜೀವಸಮುದಾಯ ಏಕನಾದ ಭಗವಂತನಲ್ಲಿ ಇದ್ದು. ಸೃಷ್ಟಿಕಾಲಲ್ಲಿ ಭಗವಂತನ ಉದರಂದ ಹೆರಬಂದು ಆಕಾರ ಪಡವ ಜೀವಜಾತಂಗೊ ಪ್ರಳಯಕಾಲಲ್ಲಿ ಸೂಕ್ಷರೂಪಲ್ಲಿ ಭಗವಂತನ ಉದರವ ಸೇರುತ್ತು. ಇದರ ನಾವು ವಸ್ತುಃಸ್ಥಿತಿಗೆ ಅನುಗುಣವಾಗಿ ಗ್ರಹಣಮಾಡಿಗೊಳ್ಳೆಕು. ಆರು ಈ ಸತ್ಯವ ಗ್ರಹಣಮಾಡಿಗೊಳ್ಳುತ್ತನೋ ಅವ ಮೋಕ್ಷವ ಪಡೆಯಬಲ್ಲ. ಅದನ್ನೇ ಭಗವಂತ° ಇಲ್ಲಿ ಹೇಳಿದ್ದದು – “ಬ್ರಹ್ಮ ಸಂಪದ್ಯತೇ” – ಪರಬ್ರಹ್ಮವ ಪಡೆತ್ತ°. ಯದಾ ಭೂತ-ಪೃಥಕ್-ಭಾವಮ್ ಏಕಸ್ಥಂ ಚ ತತಃ ಏವ ವಿಸ್ತಾರಮ್ ಅನುಪಶ್ಯತಿ” – ಏವಾಗ (ಮನುಷ್ಯ°) ಬಗೆಬಗೆಯ ಜೀವರಾಶಿಗೊ ಒಬ್ಬ ಭಗವಂತನಲ್ಲಿ (ಏಕಸ್ಥಂ) ನೆಲೆಸಿದ್ದು ಹೇದು ಕಾಣುತ್ತನೋ (ತಿಳಿತ್ತನೋ), ತದಾ ಬ್ರಹ್ಮ ಸಂಪದ್ಯತೇ” –  ಆವಾಗ ಅವ° ಭಗವಂತನ ಸೇರುತ್ತ° (ಪಡೆತ್ತ°).

ಶ್ಲೋಕ

ಅನಾದಿತ್ವಾನ್ನಿರ್ಗುಣತ್ವಾತ್ ಪರಮಾತ್ಮಾಯಮವ್ಯಯಃ ।
ಶರೀರಸ್ಥೋsಪಿ ಕೌಂತೇಯ ನ ಕರೋತಿ ನ ಲಿಪ್ಯತೇ ॥೩೧॥

ಪದವಿಭಾಗ

ಅನಾದಿತ್ವಾತ್ ನಿರ್ಗುಣತ್ವಾತ್ ಪರಮಾತ್ಮಾ ಅಯಮ್ ಅವ್ಯಯಃ । ಶರೀರಸ್ಥಃ ಅಪಿ ಕೌಂತೇಯ ನ ಕರೋತಿ ನ ಲಿಪ್ಯತೇ ॥

ಅನ್ವಯ

ಹೇ ಕೌಂತೇಯ!, ಅಯಂ ಪರಮಾತ್ಮಾ ಅನಾದಿತ್ವಾತ್, ನಿರ್ಗುಣತ್ವಾತ್, ಅವ್ಯಯಃ (ಅಸ್ತಿ, ಅತಃ ಸಃ) ಶರೀರಸ್ಥಃ (ಸನ್) ಅಪಿ ನ ಕರೋತಿ, ನ (ಚ) ಲಿಪ್ಯತೇ ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀಮಗನೇ!, ಅಯಮ್ – ಈ, ಪರಮಾತ್ಮಾ (ಪರಮ-ಆತ್ಮಾ) – ಭೌತಿಕಪ್ರಕೃತಿಗೆ ಅತೀತವಾಗಿ ಚೇತನ, ಅನಾದಿತ್ವಾತ್ – ಶಾಶ್ವತತೆಯ ಕಾರಣಂದ, ನಿರ್ಗುಣತ್ವಾತ್ – ನಿರ್ಗುಣ ತತ್ವಂದ ದಿವ್ಯವಾಗಿಪ್ಪ ಕಾರಣಂದ, ಅವ್ಯಯಃ (ಅಸ್ತಿ, ಅತಃ ಸಃ) – ಅವಿನಾಶಿಯಾಗಿದ್ದು ಹಾಂಗಾಗಿ ಅದು (ಪರಮಾತ್ಮ), ಶರೀರಸ್ಥಃ (ಸನ್) ಅಪಿ – ದೇಹಲ್ಲಿಪ್ಪವನಾಗಿದ್ದರೂ, ನ ಕರೋತಿ – ಏನನ್ನೂ ಮಾಡುತ್ತಿಲ್ಲೆ, ನ (ಚ) ಲಿಪ್ಯತೇ – ಸಿಲುಕುತ್ತೂ ಇಲ್ಲೆ.

ಅನ್ವಯಾರ್ಥ

ಕೌಂತೇಯ!, ಅವಿನಾಶಿಯಾದ ಪರಮಾತ್ಮ° ಅನಾದಿಯೂ, ನಿರ್ಗುಣವೂ, ಅವ್ಯಯವೂ, ದಿವ್ಯಗುಣಂಗಳಿಂದಲೂ ಕೂಡಿಪ್ಪದರಿಂದ, ದೇಹಲಿಪ್ಪದದಾದರೂ ಪರಮಾತ್ಮವು ಈ ದೇಹದೊಳ ಇದ್ದು ಏನನ್ನೂ ಮಾಡುತ್ತಿಲ್ಲೆ, ಏವುದರಲ್ಲಿಯೂ ಅಂಟಿಗೊಳ್ಳುತ್ತಿಲ್ಲೆ.

ತಾತ್ಪರ್ಯ / ವಿವರಣೆ

ಪರಮಾತ್ಮ ಎಂದೂ ಹುಟ್ಟದ್ದವ° (ಅನಾದಿ), ಯೇವ ಗುಣಂಗಳನ್ನೂ ಅಂಟಿಸಿಗೊಳ್ಳದ್ದವ° (ನಿರ್ಗುಣ°), ಅಳಿವು ಇಲ್ಲದ್ದವ° (ಅವ್ಯಯ°) ಹಾಂಗೇ ದಿವ್ಯನಾಗಿಪ್ಪವ°. ಅವ ಈ ದೇಹದೊಳ ಇದ್ದರೂ ಅವ° ಈ ದೇಹದೊಳ ಏನನ್ನೂ ಮಾಡುತ್ತನಿಲ್ಲೆ, ಏನನ್ನೂ ಅಂಟಿಸಿಗೊಳ್ಳುತ್ತನಿಲ್ಲೆ.

ನಿರ್ವೀಕಾರವಾದ ಏಕಮೇವ ಶಕ್ತಿ ಹೇಳಿರೆ ಅದು ಭಗವಂತ°. ಅವ ಯೇವ ಕಾರಣ ವಿಶೇಷ ವಾ ಪ್ರಭಾವಂದ ಹುಟ್ಟಿದ್ದನಿಲ್ಲೆ. ಅವ° ತ್ರೈಗುಣ್ಯವರ್ಜಿತ°, ಅದೇ ಕಾಲಕ್ಕೆ ಸರ್ವಗುಣ ಪರಿಪೂರ್ಣ°. ಅವಂಗೆ ಎಂದೂ ಬದಲಾವಣೆಯಾಗಲೀ ವಿಕಾರವಾಗಲಿ ಇಲ್ಲೆ. ಅವ ಶಾಶ್ವತ°, ಸತ್ಯ°. ಭಗವಂತ° ಎಲ್ಲ ಜೀವರೊಳದಿಗೆ ಬಿಂಬರೂಪನಾಗಿದ್ದರೂ ಕೂಡ ಅವಂಗೆ ಆ ದೇಹದ ಬದ್ಧತೆ ಇಲ್ಲೆ. ಅವ° ಎಲ್ಲವನ್ನೂ ನಮ್ಮಿಂದ ಮಾಡುಸುತ್ತ° ಆದರೆ ಏನನ್ನೂ ಅಂಟಿಸಿಗೊಳ್ಳುತ್ತನಿಲ್ಲೆ. ಅವ° ನಿರ್ಲಿಪ್ತನಾಗಿ ಎಲ್ಲವನ್ನೂ ಮಾಡುತ್ತ° ಆದರೆ ಏವುದರ ಲೇಪವೂ ಅವಂಗೆ ಇಲ್ಲೆ.

ಐಹಿಕ ದೇಹವು ಜನ್ಮತಾಳುವದರಿಂದ ಜೀವಿಯು ಜನ್ಮತಾಳಿದಾಂಗೆ ಕಾಣುತ್ತು. ಆದರೆ ವಾಸ್ತವವಾಗಿ ಜೀವಿಯು ನಿತ್ಯ°. ಐಹಿಕ ದೇಹಲ್ಲಿದ್ದರೂ ಅವ° ಅದಕ್ಕೆ ಬಾಧ್ಯನಾಗಿರದ್ದೆ ದಿವ್ಯನಾಗಿ, ನಿತ್ಯನಾಗಿಯೇ ಇರುತ್ತ°. ಅವನ ಎಂದೂ ನಾಶಮಾಡ್ಳೆ ಸಾಧ್ಯ ಇಲ್ಲೆ.  ದೇಹದೊಳ ಇಪ್ಪ ಪರಮಾತ್ಮ ಸ್ವಭಾವತಃ ಆನಂದಮಯ. ಏವುದೇ ಐಹಿಕ ಕರ್ಮಂಗಳಲ್ಲಿ ಅವ° ಇಲ್ಲೆ, ಐಹಿಕ ದೇಹದ ಸಂಪರ್ಕಲ್ಲಿದ್ದರೂ ಅವ° ಪ್ರತ್ಯೇಕನಾಗಿಯೇ ದೇಹದೊಳ ಇಪ್ಪದರಿಂದ ಅವಂಗೆ ಈ ದೇಹದ ಏವುದೇ ಐಹಿಕ ಕರ್ಮದ ಅಂಟು ಇಲ್ಲೆ. ಅದು ಹೇಂಗೆ ಕೇಳಿರೆ –

ಶ್ಲೋಕ

ಯಥಾ ಸರ್ವಗತಂ ಸೌಕ್ಷ್ಮ್ಯಾತ್ ಆಕಾಶಂ ನೋಪಲಿಪ್ಯತೇ ।
ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ ॥೩೨॥

ಪದವಿಭಾಗ

ಯಥಾ ಸರ್ವಗತಮ್ ಸೌಕ್ಷ್ಮ್ಯಾತ್ ಆಕಾಶಮ್ ನ ಉಪಲಿಪ್ಯತೇ । ಸರ್ವತ್ರ-ಅವಸ್ಥಿತಃ ದೇಹೇ ತಥಾ ಆತ್ಮಾ ನ ಉಪಲಿಪ್ಯತೇ ॥

ಅನ್ವಯ

ಯಥಾ ಸರ್ವಗತಮ್ ಆಕಾಶಂ ಸೌಕ್ಷ್ಮ್ಯಾತ್ ನ ಉಪಲಿಪ್ಯತೇ, ತಥಾ ಸರ್ವತ್ರ ಅವಸ್ಥಿತಃ  ದೇಹೇ ಆತ್ಮಾ ನ ಉಪಲಿಪ್ಯತೇ ।

ಪ್ರತಿಪದಾರ್ಥ

ಯಥಾ – ಹೇಂಗೆ, ಸರ್ವಗತಮ್ – ಸರ್ವವ್ಯಾಪಿಯಾದ, ಆಕಾಶಮ್ – ಆಕಾಶವು,  ಸೌಕ್ಷ್ಮ್ಯಾತ್ – ಸೂಕ್ಷ್ಮವಾಗಿಪ್ಪದರಿಂದ, ನ ಉಪಲಿಪ್ಯತೇ – ಮಿಶ್ರವಾವ್ತಿಲ್ಯೋ, ತಥಾ – ಹಾಂಗೇ, ಸರ್ವತ್ರ ಅವಸ್ಥಿತಃ ಆತ್ಮಾ – ಎಲ್ಲೆ ಕಡೆಲಿಯೂ ನೆಲೆಸಿದ ಪರಮಾತ್ಮವು, ದೇಹೇ – ದೇಹಲ್ಲಿ, ನ ಉಪಲಿಪ್ಯತೇ – ಮಿಶ್ರ ಆವುತ್ತಿಲ್ಲೆ.

ಅನ್ವಯಾರ್ಥ

ಹೇಂಗೆ ಆಕಾಶ ಎಲ್ಲೆಡೆ ತುಂಬಿಗೊಂಡಿದ್ದರೂ ಅತೀ ಸೂಕ್ಷ್ಮ್ಯವಾಗಿಪ್ಪದರಿಂದ ಯಾವುದರಿಂದಲೂ ಅಂಟಿಕೊಳ್ಳುತ್ತಿಲ್ಲೆಯೋ (ಯಾವುದಕ್ಕೂ ಅಂಟಿಕೊಳ್ಳುತ್ತಿಲ್ಲೆಯೋ),  ಹಾಂಗೇ ಪರಮಾತ್ಮ ಕೂಡ ಎಲ್ಲ ದೇಹಂಗಳಲ್ಲಿ ತುಂಬಿದ್ದರೂ ದೇಹಕ್ಕೆ ಅಂಟಿಗೊಳ್ಳುತ್ತನಿಲ್ಲೆ.

ತಾತ್ಪರ್ಯ / ವಿವರಣೆ

ಆಕಾಶ ಎಲ್ಲೆಲ್ಲಿಯೂ ಇದ್ದರೂ ತನ್ನ ಸೂಕ್ಷ್ಮಸ್ವರೂಪಂದಲಾಗಿ ಅದು ಏವುದರೊಂದಿಂಗೂ ಬೆರೆತ್ತಿಲ್ಲೆ (ಮಿಶ್ರ ಆವ್ತಿಲ್ಲೆ). ಹಾಂಗೇ ಬ್ರಹ್ಮನ್ ದೃಷ್ಟಿಲಿ ಸ್ಥಿತನಾಗಿಪ್ಪ ಪರಮಾತ್ಮ ಈ ದೇಹಲ್ಲಿದ್ದರೂ ದೇಹದೊಟ್ಟಿಂಗೆ ಬೆರಕೆ ಆವುತ್ತಿಲ್ಲೆ. ಪ್ರತ್ಯೇಕವಾಗಿಯೇ ಅಸ್ತಿತ್ವಲ್ಲಿರ್ತು. ಆಕಾಶ ಎಲ್ಲೆಡೆ ಇದ್ದು. ಅದಿಲ್ಲದ್ದ ಜಾಗೆ ಇಲ್ಲೆ. ಇಂಥಹ ಆಕಾಕ ಎಲ್ಲ ದಿಕ್ಕೆ ಇದ್ದರೂ ಅದು ಏವುದನ್ನೂ ತನ್ನೊಟ್ಟಿಂಗೆ ಅಂಟಿಸಿಗೊಳ್ಳುತ್ತಿಲ್ಲೆ. ಹಾಂಗೇ ಭಗವಂತ° / ಪರಮಾತ್ಮ° ಎಲ್ಲ ದೇಹಲ್ಲಿದ್ದರೂ ಏನನ್ನೂ ಅಂಟಿಸಿಗೊಳ್ಳದ್ದೆ ನಿರ್ಲಿಪ್ತನಾಗಿರುತ್ತ°.

ಶ್ಲೋಕ

ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ ।
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ ॥೩೩॥

ಪದವಿಭಾಗ

ಯಥಾ ಪ್ರಕಾಶಯತಿ ಏಕಃ ಕೃತ್ಸ್ನಮ್ ಲೋಕಮ್ ಇಮಮ್ ರವಿಃ । ಕ್ಷೇತ್ರಮ್ ಕ್ಷೇತ್ರೀ ತಥಾ ಕೃತ್ಸ್ನಮ್ ಪ್ರಕಾಶಯತಿ ಭಾರತ ॥

ಅನ್ವಯ

ಹೇ ಭಾರತ!, ಯಥಾ ಏಕಃ ರವಿಃ ಇಮಂ ಕೃತ್ಸ್ನಂ ಲೋಕಂ ಪ್ರಕಾಶಯತಿ, ತಥಾ ಕ್ಷೇತ್ರೀ ಕೃತ್ಸ್ನಂ ಕ್ಷೇತ್ರಂ ಪ್ರಕಾಶಯತಿ ।

ಪ್ರತಿಪದಾರ್ಥ

ಹೇ ಭಾರತ! – ಏ ಭರತ ಶ್ರೇಷ್ಠನೇ !, ಯಥಾ – ಹೇಂಗೆ, ಏಕಃ ರವಿಃ – ಒಬ್ಬನೇ ಸೂರ್ಯ, ಇಮಮ್ ಕೃತ್ಸ್ನಮ್ ಲೋಕಮ್ – ಈ ಇಡೀ ಲೋಕವ, ಪ್ರಕಾಶಯತಿ – ಪ್ರಕಾಶಿಸುತ್ತನೋ, ತಥಾ – ಹಾಂಗೇ, ಕ್ಷೇತ್ರೀ – ಆತ್ಮ° (ಪರಮಾತ್ಮ°), ಕೃತ್ಸ್ನಮ್ ಕ್ಷೇತ್ರಮ್ – ಇಡೀ (ಪೂರ್ಣ) ದೇಹವ, ಪ್ರಕಾಶಯತಿ – ಪ್ರಕಾಶಿಸುತ್ತ°.

ಅನ್ವಯಾರ್ಥ

ಏ ಭರತವಂಶಶ್ರೇಷ್ಠನಾದ ಅರ್ಜುನ!, ಹೇಂಗೆ ಒಬ್ಬನೇ ಸೂರ್ಯ° ಇಡೀ ವಿಶ್ವವ ಬೆಳಗುತ್ತನೋ, ಹಾಂಗೇ, ದೇಹದೊಳ ಇಪ್ಪ ಪರಮಾತ್ಮ° (ಜೀವಿಯ ಪ್ರಜ್ಞೆಂದ) ಇಡೀ ದೇಹವ ಬೆಳಗುತ್ತ°.

ತಾತ್ಪರ್ಯ / ವಿವರಣೆ

ಹೇಂಗೆ ಒಬ್ಬನೇ ಸೂರ್ಯ° ಇಡೀ ಪ್ರಪಂಚವ ಬೆಳಗುತ್ತನೋ, ಹಾಂಗೇ, ಇಡೀ ಕ್ಷೇತ್ರವ ಕ್ಷೇತ್ರಜ್ಞನಾದ ಭಗವಂತ ಬೆಳಗುತ್ತ°. ಹಾಂಗಾಗಿ ನಾವು ಮದಾಲು ಭಗವಂತನ ಬೆಣಚ್ಚಿಯ (ಜ್ಞಾನವ) ತಿಳಿಯೆಕು. ಅಂಬಗ ನಮ್ಮೊಳ ಇಪ್ಪ ಬೆಣಚ್ಚಿ ನವಗೆ ಅರ್ಥ ಆವ್ತು. ಪ್ರಪಂಚಕ್ಕೆ ಎಲ್ಲೆಡೆ ಪ್ರಕಾಶವ ನೀಡುವ ಸೂರ್ಯ° ಒಬ್ಬನೇ ಇಪ್ಪದು, ಅಂದರೂ ಅವ° ಒಂದಿಕ್ಕೆ ನಿಂದೊಂಡು ಇಡೀ ಪ್ರಪಂಚಕ್ಕೆ ಬೆಣಚ್ಚಿಯ ಕೊಟ್ಟು ಇಡೀ ಪ್ರಪಂಚವ ಪ್ರಕಾಶಮಾನವಾಗಿ ಕಾಂಬಂತೆ ಮಾಡುತ್ತ°. ಹಾಂಗೇ ಪರಮಾತ್ಮನ ಒಂದು ಸಣ್ಣಕಣ ಈ ದೇಹದ ಹೃದಯಲ್ಲಿದ್ದರೂ ಜೀವಿಯ ಪ್ರಜ್ಞೆಯ ಮೂಲಕ ಇಡೀ ದೇಹವ ಬೆಳಗುತ್ತ°. ಸೂರ್ಯನ ಬೆಣಚ್ಹಿ ಸೂರ್ಯ ಇದ್ದ° ಹೇಳ್ವದಕ್ಕೆ ಪುರಾವೆಯಾಗಿಪ್ಪಂತೆ ಪ್ರಜ್ಞೆಯು ಆತ್ಮನ ಇರುವಿಕೆಗೆ ಪುರಾವೆ. ದೇಹಲ್ಲಿ ಆತ್ಮ ಇಪ್ಪಗ ದೇಹದ ಎಲ್ಲೆಡೆ ಪ್ರಜ್ಞೆ ಇರುತ್ತು. ಆತ್ಮವು ದೇಹ ಬಿಟ್ಟು ಹೋದಮತ್ತೆ ದೇಹಲ್ಲಿ ಪ್ರಜ್ಞೆ ಇರ್ತಿಲ್ಲೆ. ಹಾಂಗಾಗಿ ಪ್ರಜ್ಞೆ ಹೇಳ್ತದು ಜಡವಸ್ತುವಿನ ಸಂಯೋಜನೆಂದ ಉಂಟಾದ್ದು ಅಲ್ಲ. ಅದು ಜೀವಿಯ ಒಂದು ಲಕ್ಷಣ ಹೇಳ್ವದು ಸ್ಪಷ್ಟ. ಜೀವಿಯು ಗುಣಾತ್ಮಕವಾಗಿ ಪರಮಾತ್ಮನೊಟ್ಟಿಂಗೆ ಒಂದಾದರೂ ಜೀವಿ° ಪರಮೋನ್ನತ° ಅಲ್ಲ. ಪರಮಾತ್ಮನೇ ಪರಮೋನ್ನತ°. ಎಂತಕೆ ಹೇಳಿರೆ ದೇಹದ ಪ್ರಜ್ಞೆ ಇನ್ನೊಂದು ದೇಹದ ಪ್ರಜ್ಞೆಯೊಟ್ಟಿಂಗೆ ಪಾಲ್ಗೊಂಬಲೆ ಎಡಿಯ. ಆದರೆ ಜೀವಾತ್ಮನ ಸಖನಾಗಿ ಎಲ್ಲ ದೇಹದ ಒಳ ಇಪ್ಪ ಪರಮಾತ್ಮಂಗೆ ಎಲ್ಲ ದೇಹಗಳ ಪ್ರಜ್ಞೆ ಇರುತ್ತು. ಪರಮ ಪ್ರಜ್ಞೆಗೂ, ವೈಯುಕ್ತಿಕ ಪ್ರಜ್ಞೆಗೂ ಇದುವೇ ವ್ಯತ್ಯಾಸ.

ಶ್ಲೋಕ

ಕ್ಷೇತ್ರಕ್ಷೇತ್ರಜ್ಞಯೋರೇವಮ್ ಅಂತರಂ ಜ್ಞಾನಚಕ್ಷುಷಾ ।
ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಮ್ ॥೩೪॥

ಪದವಿಭಾಗ

ಕ್ಷೇತ್ರ-ಕ್ಷೇತ್ರಜ್ಞಯೋಃ ಏವಮ್ ಅಂತರಮ್ ಜ್ಞಾನ-ಚಕ್ಷುಷಾ । ಭೂತ-ಪ್ರಕೃತಿ-ಮೋಕ್ಷಮ್ ಚ ಯೇ ವಿದುಃ ಯಾಂತಿ ತೇ ಪರಮ್ ॥

ಅನ್ವಯ

ಏವಂ ಯೇ ಜ್ಞಾನ-ಚಕ್ಷುಷಾ ಕ್ಷೇತ್ರ-ಕ್ಷೇತ್ರಜ್ಞಯೋಃ ಅಂತರಂ (ಜ್ಞಾನಂ) ಭೂತ-ಪ್ರಕೃತಿ-ಮೋಕ್ಷಂ ಚ ವಿದುಃ, ತೇ ಪರಂ ಯಾಂತಿ ।

ಪ್ರತಿಪದಾರ್ಥ

ಏವಮ್ – ಹೀಂಗೆ, ಯೇ – ಆರು, ಜ್ಞಾನ-ಚಕ್ಷುಷಾ – ಜ್ಞಾನದೃಷ್ಟಿಂದ, ಕ್ಷೇತ್ರ-ಕ್ಷೇತ್ರಜ್ಞಯೋಃ – ಶರೀರ-ಶರೀರದಯಜಮಾನರ, ಅಂತರಮ್ (ಜ್ಞಾನಮ್) – ಭೇದವ (ಜ್ಞಾನವ), [ಅಂತರಮ್ – ಎರಡರ ಮಧ್ಯೆ ಇಪ್ಪ ವಿಷಯವ], ಭೂತ-ಪ್ರಕೃತಿ-ಮೋಕ್ಷಮ್ – ಜೀವಿಯ ಭೌತಿಕ ಪ್ರಕೃತಿಂದ ಮೋಕ್ಷವ, ವಿದುಃ – ತಿಳುದೋರು, ತೇ – ಅವ್ವು, ಪರಮ್ ಯಾಂತಿ – ಪರಮೋನ್ನತವ ಹೊಂದುತ್ತವು.

ಅನ್ವಯಾರ್ಥ

ಹೀಂಗೆ ಆರು ಜ್ಞಾನದೃಷ್ಟಿಂದ ಕ್ಷೇತ್ರ-ಕ್ಷೇತ್ರಜ್ಞರ ನಡುವಣ ವ್ಯತ್ಯಾಸವ ಯಥಾರ್ಥವ ತಿಳಿತ್ತವೋ , ಅವು  ಭೌತಿಕ ಪ್ರಕೃತಿಯ ಬಂಧನಂದ ಮೋಕ್ಷವ ಪಡವ ಪ್ರಕ್ರಿಯೆಯ ತಿಳಿತ್ತವು ಮತ್ತು ಅವ್ವು ಪರಮ ಗುರಿಯ ಹೊಂದುತ್ತವು.

ತಾತ್ಪರ್ಯ/ವಿವರಣೆ

ಕ್ಷೇತ್ರ, ಕ್ಷೇತ್ರಜ್ಞ°, ಪರಮಾತ್ಮ° – ಇವುಗಳ ನಡುವಣ ವ್ಯತ್ಯಾಸವ ಮನುಷ್ಯ ತಿಳ್ಕೊಳ್ಳೆಕು ಹೇಳ್ವದೇ ಈ ಅಧ್ಯಾಯದ ಗುರಿ. ಹಾಂಗೆ ತಿಳುದಪ್ಪಗ ಭೌತಿಕ ಪ್ರಕೃತಿಯ ಬಂಧನಂದ ಬಿಡುಗಡೆಯಪ್ಪಲೆ  ಮೋಕ್ಷಮಾರ್ಗವ ಹಿಡುದು ಪರಮ ಗುರಿಯ ತಲುಪಲೆಡಿಗು.  ಕ್ಷೇತ್ರ, ಕ್ಷೇತ್ರಜ್ಞ° ಮತ್ತೆ ಪರಮಾತ್ಮ° ಇವರುಗಳ ಯಥಾರ್ಥತೆ ಮತ್ತೆ ಜೀವಜಾತ ಜಡಂದ ಬಿಡುಗಡೆ ಹೊಂದಲೆ ಇರೇಕಾದ ಮೋಕ್ಷ ಸಾಧಕ ಗುಣಂಗಳ ಜ್ಞಾನಪೂರ್ವಕವಾಗಿ ತಿಳುದು ಆಚರಣೆಗೆ ತಂದು ಬದುಕುವವು ಸರ್ವಶ್ರೇಷ್ಠನಾದ ಭಗವಂತನ ಸೇರುತ್ತವು.

ದೇಹವು ಒಂದು ಜಡವಸ್ತು ಹೇಳ್ವದರ ಮದಾಲು ಅರ್ಥಮಾಡಿಗೊಳ್ಲೆಕು. ಇದರ ಅದರ ಇಪ್ಪತ್ತನಾಲ್ಕು ಘಟಕಾಂಶಂಗಳೊಂದಿಗೆ ವಿಶ್ಲೇಷಣೆ ಮಾಡಿಗೊಳ್ಳೆಕು. ದೇಹವು ಜಡ ಅಭಿವ್ಯಕ್ತಿ. ಮನಸ್ಸು ಮತ್ತೆ ಮಾನಸಿಕ ಪರಿಣಾಮಂಗೊ ಸೂಕ್ಷ್ಮ ಅಭಿವ್ಯಕ್ತಿ. ಈ ಲಕ್ಷಣಂಗಳ ಪರಸ್ಪರ ಪ್ರತಿಕ್ರಿಯೆ ಬದುಕಿನ ಲಕ್ಷಣ. ಇದರ ಮೀರಿ ಆತ್ಮ ಇದ್ದು. ಪರಮಾತ್ಮನೂ ಇದ್ದ°. ಆತ್ಮನೂ ಪರಮಾತ್ಮನೂ ಭಿನ್ನ. ಆತ್ಮ ಮತ್ತೆ ಇಪ್ಪತ್ತನಾಲ್ಕು ಘಟಕಾಂಶಂಗಳ ಸಂಯೋಜನೆಂದ ಈ ಐಹಿಕ ಜಗತ್ತು ಕೆಲಸ ಮಾಡುತ್ತು. ಇಡೀ ಐಹಿಕ ಅಭಿವ್ಯಕ್ತಿಯ ಆತ್ಮ ಮತ್ತೆ ಘಟಕಾಂಶಂಗಳ ಸಂಯೋಜನೆ ಹೇದು ಕಾಂಬವ°, ಪರಮಾತ್ಮನ ಸ್ಥಾನವ ಕಾಂಬಲೆಡಿಗಾದವ ದಿವ್ಯಲೋಕಕ್ಕೆ ಹೋಪಲೆ ಅರ್ಹನಾವುತ್ತ°. ಇವಿಷ್ಟು ಹೇಳಿದ್ದದು ಚಿಂತನೆ ಮಾಡ್ಳೆ ಮತ್ತೆ ಸಾಕ್ಷಾತ್ಕಾರ ಮಾಡಿಗೊಂಬಲೆ. ಮನುಷ್ಯ° ನಿಜಗುರುವಿನ ನೆರವಿಂದ ಈ ಅಧ್ಯಾಯವ ಸಂಪೂರ್ಣವಾಗಿ ಅರ್ಥಮಾಡಿಗೊಂಡು ಜೀವನಲ್ಲಿ ಈ ತತ್ವವ ವಿಶ್ವಾಸಪೂರ್ವಕ ಅನುಸಂಧಾನ ಮಾಡಿಗೊಂಡು ಮುನ್ನೆಡದರೆ ಪರಮ ಗತಿಯ ಹೊಂದುತ್ತ° ಹೇಳಿ ಭಗವಂತ° ಭರವಸೆ ಹೇಳಿದಲ್ಯಂಗೆ –

 

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ  ಕ್ಷೇತ್ರಕ್ಷೇತ್ರಜ್ಞವಿಭಾಗಯೋಗೋ ನಾಮ ತ್ರಯೋದಶೋsಧ್ಯಾಯಃ ॥

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗಃ ಹೇಳ್ವ ಹದಿಮೂರನೇ ಅಧ್ಯಾಯ ಮುಗುದತ್ತು.

 

ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ ॥ ಗೀತಾ ಮಾತಾ ಕೀ …. ಜೈ ॥ ಗೋಪಾಲಕೃಷ್ಣ ಭಗವಾನ್ ಕೀ .. ಜೈ ॥

 

॥ ಶ್ರೀಕೃಷ್ಣಾರ್ಪಣಮಸ್ತು ॥

 

 

ಮುಂದೆ ಎಂತರ….. ?     ಬಪ್ಪವಾರ ನೋಡುವೋ° .

  …ಮುಂದುವರಿತ್ತು.

ಶ್ಲೋಕಂಗಳ ಕೇಳ್ಳೆ –
 SRIMADBHAGAVADGEETHA – CHAPTER 13 – SHLOKAS 26 – 34

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in

 

3 thoughts on “ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 26 – 34

  1. ದ್ವನಿ ಸಹಿತ ಚೆನೈಭಾವ ಬರದ ಶ್ಲೋಕ ಬಹು ಚೊಕ್ಕ ಆವುತ್ತು ಹೀಂಗಿಪ್ಪದೆಲ್ಲ ಹಳತ್ತಪ್ಪಲಿಲ್ಲೆ ಜೆನಂಗೊಕ್ಕೆ ಬೊಡಿವಲೂ ಇಲ್ಲೆ ಇದ

    1. ನಮಸ್ತೇ ಚೆನ್ನೈ ಬಾವ. ಒ೦ದೊ೦ದು ವಾಕ್ಯವುದೆ ಅರ್ಥವತ್ತಾಗಿ ನೆ೦ಪು ಮಾಡಗಿಯೊಳ್ತಾ೦ಗಿದ್ದು..ವಿವರಣೆಯ ಮತ್ತೆ, ಮತ್ತೆ ಮುಲುಕು ಹಾಕುತ್ತ ಇದ್ದೆ. ಇಷ್ಟು ಲಾಯಕಕೆ ರಸವ ಹಿ೦ಡಿ ಕುಡುಶುವ ನಿ೦ಗೊಗೆ ನಮೋನ್ನಮಃ

  2. [ಜೀವನಲ್ಲಿ ಬಪ್ಪ ಪ್ರತಿಯೊಂದು ಸಂಗತಿಯ “ಆನು ಹಿಂದೆ ಮಾಡಿದ ಕರ್ಮದ ಫಲ, ಅದರ ಭಗವಂತ° ಮಾಡಿಸಿದ°” ಹೇಳ್ವ ಯಥಾರ್ಥವ ತಿಳ್ಕೊಂಡ್ರೆ ಬದುಕು ದುಃಖ ಇಲ್ಲದ್ದೆ ಆನಂದಂದ ಇಪ್ಪಲೆಡಿಗು
    ಎಲ್ಲವೂ ಭಗವಂತನ ಲೀಲೆ. ಕೊಡುವವನೂ ಅವನೇ, ತೆಕ್ಕಂಬದೂ ಅವನೇ, ಪಾಲುಸುವವನೂ ಅವನೇ. ಆನೇಂತಕೆ ಚಿಂತೆ ಮಾಡೆಕು’ ಹೇದು ತಿಳ್ಕೊಂಡ್ರೆ ಅವಂಗೆ ದುಃಖ ಉಂಟಾಗ
    ಭಗವಂತನ ಬೆಣಚ್ಚಿಯ (ಜ್ಞಾನವ) ತಿಳಿಯೆಕು. ಅಂಬಗ ನಮ್ಮೊಳ ಇಪ್ಪ ಬೆಣಚ್ಚಿ ನವಗೆ ಅರ್ಥ ಆವ್ತು.]
    ಒಂದೊಂದು ಮಾತುಗಳೂ ಜೇವನ ರೂಪುಸಲೆ ಇಪ್ಪ ಅಮೂಲ್ಯ ಮುತ್ತುಗೊ.
    ಚೆನ್ನೈ ಭಾವಯ್ಯಂಗೆ ನಮೋ ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×