Oppanna.com

ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 31 – 39

ಬರದೋರು :   ಚೆನ್ನೈ ಬಾವ°    on   09/08/2012    1 ಒಪ್ಪಂಗೊ

ಚೆನ್ನೈ ಬಾವ°

ಶ್ಲೋಕ

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ ।
ಸರ್ವಥಾ ವರ್ತಮಾನೋsಪಿ ಸ ಯೋಗೀ ಮಯಿ ವರ್ತತೇ ॥೩೧॥

ಪದವಿಭಾಗ

ಸರ್ವ-ಭೂತ-ಸ್ಥಿತಮ್ ಯಃ ಮಾಮ್ ಭಜತಿ ಏಕತ್ವಮ್ ಆಸ್ಥಿತಃ । ಸರ್ವಥಾ ವರ್ತಮಾನಃ ಅಪಿ ಸಃ ಯೋಗೀ ಮಯಿ ವರ್ತತೇ ॥

ಅನ್ವಯ

ಯಃ ಏಕತ್ವಮ್ ಆಸ್ಥಿತಃ ಸರ್ವ-ಭೂತ-ಸ್ಥಿತಂ ಮಾಂ ಭಜತಿ, ಸಃ ಯೋಗೀ ಸರ್ವಥಾ ವರ್ತಮಾನಃ ಅಪಿ, ಮಯಿ ವರ್ತತೇ ।

ಪ್ರತಿಪದಾರ್ಥ

ಯಃ – ಆರು, ಏಕತ್ವಮ್ – ಏಕತ್ವಲ್ಲಿ, ಆಸ್ಥಿತಃ – ಇದ್ದವನಾಗಿ (ನೆಲೆಸಿದವನಾಗಿ), ಸರ್ವ-ಭೂತ-ಸ್ಥಿತಮ್ – ಪ್ರತಿಯೊಬ್ಬನ ಹೃದಯಲ್ಲಿ ನೆಲೆಸಿಪ್ಪ(ಎಲ್ಲೆಡೆ ನೆಲೆಸಿಪ್ಪ),  ಮಾಮ್ – ಎನ್ನ, ಭಜತಿ – ಭಜಿಸುತ್ತನೋ (ಧ್ಯಾನಿಸುತ್ತನೋ, ಭಕ್ತಿಸೇವೆಲಿ ತೊಡಗಿರುತ್ತನೋ), ಸಃ ಯೋಗೀ- ಆ ಯೋಗಿಯು (ಆಧ್ಯಾತ್ಮಿಕವಾದಿಯು), ಸರ್ವಥಾ – ಖಂಡಿತವಾಗಿಯೂ (ಎಲ್ಲಾ ವಿಚಾರಂಗಳಲ್ಲಿಯೂ, ಎಲ್ಲ ಸನ್ನಿವೇಶಂಗಳಲ್ಲಿಯೂ), ವರ್ತಮಾನಃ – ಇಪ್ಪವವನಾಗಿ, ಅಪಿ – ಆದರೂ, ಮಯಿ – ಎನ್ನಲ್ಲಿ, ವರ್ತತೇ – ಇರುತ್ತ°.

ಅನ್ವಯಾರ್ಥ

ಪರಿಶುದ್ಧ ಮನಸ್ಸುಳ್ಳವನಾಗಿ ಆರು ಎನ್ನ ಸರ್ವರ ಹೃದಯಂಗಳಲ್ಲಿಯೂ ನೆಲೆಸಿಪ್ಪವವ° ಹೇಳ್ವ ಏಕತ್ವ ಭಾವವ ತಿಳುದು ಪೂಜಿಸುತ್ತನೋ ಆ ಯೋಗಿಯು ಯಾವತ್ತೂ (ಎಂತ ಸನ್ನಿವೇಶಲ್ಲಿಯೂ / ಎಲ್ಲಾ ಸ್ಥಿತಿಲಿಯೂ) ಎನ್ನಲ್ಲಿ ನೆಲೆಸಿರುತ್ತ°.

ತಾತ್ಪರ್ಯ/ವಿವರಣೆ

ಪರಮಾತ್ಮನ ಧ್ಯಾನಲ್ಲಿ ಮಗ್ನನಾದ ಯೋಗಿ ಶಂಖ, ಚಕ್ರ, ಗದೆ, ಮತ್ತೆ ಪದ್ಮಂಗಳ ನಾಲ್ಕು ಕೈಗಳಲ್ಲಿ ಹಿಡ್ಕೊಂಡಿಪ್ಪ ಭಗವಂತನ ಸ್ವಾಂಶ ಭಾಗವಾಗಿ ತನ್ನಲ್ಲಿ ಕಾಣುತ್ತ°. ಪರಮಾತ್ಮನ ಸ್ವರೂಪಲ್ಲಿ ಭಗವಂತ° ಪ್ರತಿಯೊಬ್ಬನ ಹೃದಯಲ್ಲೂ ನೆಲೆಸಿದ್ದ°. ಅಲ್ಲದೆ ಜೀವಿಗಳ ಅಸಂಖ್ಯಾತ ಹೃದಯಂಗಳಲ್ಲಿ ಇಪ್ಪ ಅಸಂಖ್ಯಾತ ಪರಮಾತ್ಮಂಗಳಲ್ಲಿ ವ್ಯತ್ಯಾಸವೂ ಇಲ್ಲೆ. ಎಲ್ಲರ ಹೃದಯಲ್ಲೂ ಏಕರೂಪವಾಗಿ ಭಗವಂತ° ನೆಲೆಸಿದ್ದ°. ಕೃಷ್ಣಪ್ರಜ್ಞೆಂದ ಸದಾ ಭಗವಂತನ ದಿವ್ಯಪ್ರೇಮ ಸೇವೆಲಿ ತೊಡಗಿಪ್ಪ ಪರಿಪೂರ್ಣ ಯೋಗಿಗೂ ಕೃಷ್ಣಪ್ರಜ್ಞೆ ಇಪ್ಪ ಇತರ ಮನುಷ್ಯಂಗೂ ವ್ಯತ್ಯಾಸ ಇಲ್ಲೆ. ಕೃಷ್ಣಪ್ರಜ್ಞೆ ಇಪ್ಪ ಯೋಗಿ ಐಹಿಕ ಅಸ್ತಿತ್ವಲ್ಲಿ ಇಪ್ಪಗ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕ್ಕು, ಅಂದರೂ, ಅವ° ಸದಾ ಭಗವಂತನ ಪ್ರಜ್ಞೆಲಿಪ್ಪದರಿಂದ ಅವ° ಸದಾ ಭಗವಂತಲ್ಲಿ ನೆಲೆಸಿರುತ್ತ. ಸದಾ ಕೃಷ್ಣಪ್ರಜ್ಞೆಲಿ ಕರ್ಮಮಾಡುವ ಭಗವದ್ಭಕ್ತ° ಸಹಜವಾಗಿಯೇ ಮುಕ್ತನಾಗಿರುತ್ತ°. ಇಲ್ಲಿ ಭಗವಂತ° ಹೇಳುತ್ತ° – ‘ಸರ್ವಗತನಾಗಿಪ್ಪ ಭಗವಂತ° ಎಲ್ಲ ಕಡೆಯೂ ಏಕರೂಪವಾಗಿರುತ್ತ°’ ಹೇಳ್ವ ಅನುಸಂಧಾನ ಮತ್ತು ನಿರಂತರ ಭಕ್ತಿ ಇಪ್ಪ ಸಾಧಕ° ಹೇಂಗೇ ಇರಲಿ, ಅವ° ಎನ್ನನ್ನೇ ಸೇರುತ್ತ°’. ಅಪರೋಕ್ಷ ಜ್ಞಾನವ ಪಡದ ಅವ° ಭಗವಂತನಿಂದ ಎಂದೂ ದೂರವಾವ್ತನಿಲ್ಲೆ, ಅವ°, ಮೋಕ್ಷವ ಪಡದು ಭಗವಂತನಲ್ಲಿ ನೆಲೆಸುತ್ತ°. 

ಶ್ಲೋಕ

ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋsರ್ಜುನ ।
ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ॥೩೨॥

ಪದವಿಭಾಗ

ಆತ್ಮಾ-ಉಪಮ್ಯೇನ ಸರ್ವತ್ರ ಸಮಮ್ ಪಶ್ಯತಿ ಯಃ ಅರ್ಜುನಃ । ಸುಖಮ್ ವಾ ಯದಿ ವಾ ದುಃಖಮ್ ಸಃ ಯೋಗೀ ಪರಮಃ ಮತಃ ॥

ಅನ್ವಯ

ಹೇ ಅರ್ಜುನ!, ಯಃ ಆತ್ಮಾ-ಉಪಮ್ಯೇನ ಸರ್ವತ್ರ ಸುಖಂ ವಾ ಯದಿ ವಾ ದುಃಖಂ ಸಮಂ ಪಶ್ಯತಿ, ಸಃ ಯೋಗೀ ಪರಮಃ ಮತಃ ।

ಪ್ರತಿಪದಾರ್ಥ

ಹೇ ಅರ್ಜುನ! – ಏ ಅರ್ಜುನ!, ಯಃ – ಆರು, ಆತ್ಮಾ-ಉಪಮ್ಯೇನ – ತನ್ನ ಆತ್ಮದೊಟ್ಟಿಂಗೆ ಹೋಲಿಕೆಂದ, ಸರ್ವತ್ರ – ಎಲ್ಲೆಡೆ, ಸುಖಂ – ಸುಖವ, ವಾ – ಅಥವಾ, ಯದಿ – ಆದರೆ, ವಾ – ಅಥವಾ, ದುಃಖಮ್ – ದುಃಖವ, ಸಮಮ್ – ಸಮಾನವಾಗಿ, ಪಶ್ಯತಿ – ನೋಡುತ್ತನೋ, ಸಃ – ಆ (ಅವ°),  ಯೋಗೀ – ಆಧ್ಯಾತ್ಮಿಕವಾದಿ, ಪರಮಃ – ಪರಿಪೂರ್ಣ ಹೇದು, ಮತಃ – ಪರಿಗಣಿತನಾಗಿದ್ದ°.

ಅನ್ವಯಾರ್ಥ

ಏ ಅರ್ಜುನ!, ಯಾವಾತ (ಆರು) ಎಲ್ಲೋರ ಸುಖವನ್ನೋ ದುಃಖವನ್ನೋ ತನ್ನ ಹಾಂಗೇ ಸಮಾನತೆಂದ ಕಾಣುತ್ತನೋ (ಇತರರ ದುಃಖವನ್ನೋ ಸುಖವನ್ನೋ ತನ್ನ ಸಮಾನ ಸಂತೋಷ ವಾ ದುಃಖವಾಗಿ ತಿಳುಕ್ಕೊಳ್ಳುತ್ತನೋ, ಆ ಯೋಗಿ ಪರಿಪೂರ್ಣ ಯೋಗಿ / ಶ್ರೇಷ್ಠ ಸಾಧಕ° ಹೇಳಿ ಪರಿಗಣಿಸಲ್ಪಡುತ್ತ°.

ತಾತ್ಪರ್ಯ/ವಿವರಣೆ

ನಿರಂತರ ಕೃಷ್ಣಪ್ರಜ್ಞೆಲಿಪ್ಪವ° ಪರಿಪೂರ್ಣ ಯೋಗಿ. ತನ್ನ ವೈಯಕ್ತಿಕ ಅನುಭವಂದಾಗಿ ಅವಂಗೆ ಪ್ರತಿಯೊಬ್ಬನ ಸುಖ ದುಃಖದ ಅರಿವಿರ್ತು. ಜೀವಿಯ ಯಾತನಗೆ ಕಾರಣ ಹೇದರೆ ಭಗವಂತನ ಹತ್ರೆ ತನಗಿಪ್ಪ ಬಾಂಧವ್ಯವ ಮರೆತಿಪ್ಪದ್ದು. ಸುಖದ ಕಾರಣ ಹೇಳಿರೆ ಆ ಭಗವಂತನೇ ಎಲ್ಲ ಕಾರ್ಯಂಗಳ ಭೋಕ್ತಾರ ಮತ್ತು ಒಡೆಯ, ಎಲ್ಲ ಜೀವಿಗಳ ಪರಮ ಸಖ° ಹೇಳ್ವ ಅರಿವು ಇಪ್ಪದು. ಐಹಿಕ ಪ್ರಕೃತಿಯ ತ್ರಿಗುಣಂಗಳಿಂಗೆ ಬದ್ಧನಾದ ಜೀವಿ, ಭಗವಂತನನೊಡನೆ ತನಗಿಪ್ಪ ಬಾಂಧವ್ಯವ ಮರದಿರುತ್ತ°. ಇದರಿಂದ ತ್ರಿವಿಧ ಐಹಿಕ ದುಃಖಂಗೊಕ್ಕೆ ಗುರಿಯಾವುತ್ತ. ಈ ಸಂಗತಿಯ ಪರಿಪೂರ್ಣಯೋಗಿ ತಿಳಿದಿರುತ್ತ°. ಆದ್ದರಿಂದ ಕೃಷ್ಣಪ್ರಜ್ಞೆಲಿಪ್ಪವ° ಸುಖವಾಗಿರುತ್ತ°. ಆದ್ದರಿಂದ ಆ ಕೃಷ್ಣಪ್ರಜ್ಞೆಯ ಎಲ್ಲೋರಿಂಗೆ ಹಂಚಲೆ ಪ್ರಯತ್ನಿಸುತ್ತ°. ಕೃಷ್ಣಪ್ರಜ್ಞೆಯ ಬೆಳೆಶಿಗೊಂಬದರಿಂದ ಅಪ್ಪ ಲಾಭ ಮತ್ತು ಮಹತ್ವ ವಿಚಾರವ ಪ್ರಸಾರ ಮಾಡ್ಳೆ ಸಂಪೂರ್ಣಯೋಗಿ ಪ್ರಯತ್ನುಸುವದರಿಂದ ಜಗತ್ತಿಲ್ಲೇ ಅವನೇ ಅತ್ಯಂತ ಶ್ರೇಷ್ಠ ಪರೋಪಕಾರಿ. ಅವನೇ ಭಗವಂತನ ಅತ್ಯಂತ ಪ್ರೀತಿಪಾತ್ರನಾದ ಸೇವಕ°. ಪರಿಪೂರ್ಣ ಯೋಗಿಯು ಯೋಗಮುಖೇನ ಬಯಸುವದು ತನ್ನ ವೈಯಕ್ತಿಕ ಲಾಭ ಒಂದನ್ನೇ ಅಲ್ಲ., ಇತರರಿಂಗೂ ಪ್ರಯೋಜನ ಆಯೇಕು ಹೇಳಿಯೇ. ಆದ್ದರಿಂದ ಅವ° ಶ್ರೇಷ್ಠ ಯೋಗಿ ಎಂದೆಣಿಸಿಗೊಳ್ತ°. ಅವಂಗೆ ಸಹಜೀವಿಗಳೊಟ್ಟಿಂಗೆ ಅಸೂಯೆ ಇಲ್ಲೆ. ಪ್ರತಿಯೊಬ್ಬ ಮನುಷ್ಯನ ಮನಸ್ಸಿನ ಕೃಷ್ಣಪ್ರಜ್ಞೆ ಹೊಡೆಂಗೆ ತಿರುಗುಸಲೆ ತನ್ನಿಂದಪ್ಪ ಶ್ರಮವ ನೀಡುತ್ತ. ಹಾಂಗಾಗಿ ಅವ° ಇತರ ಸಾಮಾನ್ಯರಿಂದ ಶ್ರೇಷ್ಥ°.

ಬನ್ನಂಜೆ ಹೇಳ್ತವುಭಗವಂತ° ಇಲ್ಲೆ ನವಗೆ ಸಮದೃಷ್ಟಿ ಬಗ್ಗೆ ವಿವರಿಸಿದ್ದ°. ಇಲ್ಲಿ ಮುಖ್ಯವಾಗಿ ಸಾತ್ವಿಕರೊಂದಿಂಗೆ, ಭಗವದ್ಭಕ್ತರೊಂದಿಂಗೆ ಒಬ್ಬ ಸಾಧಕ ಯಾವ ರೀತಿ ಸಮದರ್ಶನ ಬೆಳೆಶಿಗೊಳ್ಳುತ್ತ ಹೇಳ್ವದರ ವಿವರಿಸಿದ್ದ°. ಪರಿಪೂರ್ಣ ಯೋಗಿಗೊ ‘ತನ್ನಂತೆಯೇ ಪರರು’ ಹೇಳ್ವದರ ತಿಳಿದಿರುತ್ತ°. ನವಗೆ ಯಾವುದು ದುಃಖವ ಕೊಡುತ್ತೋ ಅದು ಇನ್ನೊಬ್ಬಂಗೂ ದುಃಖವ ಕೊಡುತ್ತು ಹೇಳ್ವ ಸತ್ಯವ ಅವ° ತಿಳಿದಿರುತ್ತ°. ಎಲ್ಲೋರಿಂಗೂ ಸುಖ-ದುಃಖಂಗೊ ಇರುತ್ತು. ಎನ್ನ ಹಾಂಗೆ ಬಾಕಿದ್ದವು ದುಃಖಪಡುವದರ ಇಚ್ಛಿಸುತ್ತನಿಲ್ಲೆ. ಈ ಎಚ್ಚರಂದ ಸಾಧಕ° ವ್ಯವಹರಿಸುತ್ತ°. ಆರು ಇನ್ನೊಬ್ಬನ ಸುಖವನ್ನೋ ದುಃಖವನ್ನೋ ತನ್ನ ಸುಖದುಃಖಂಗಳಷ್ಟೇ ಸಮಾನವಾಗಿ ಕಾಣುತ್ತನೋ, ಆರು ಇನ್ನೊಬ್ಬನ ಸಂತೋಷ-ಯಶಸ್ಸಿನ ತನ್ನ ಯಶಸ್ಸು-ಸಂತೋಷಕ್ಕೆ ಸಮಾನ ಹೇಳಿ ತಿಳುದು ಖುಷಿಪಡುತ್ತನೋ ಅವನೇ ಬಹುದೊಡ್ಡ ಯೋಗಸಾಧಕ°.

ಪ್ರತಿಯೊಬ್ಬನ ಹೃದಯಲ್ಲಿಯೂ ಭಗವಂತನ ಸನ್ನಿಧಾನ ಇದ್ದು. ಆದ್ದರಿಂದ ಅವರ ಸುಖದುಃಖಂಗೊಕ್ಕೆ ನಾವು ಸ್ಪಂದಿಸಿದರೆ ಅದು ಅವರೊಳ ಇಪ್ಪ ಭಗವಂತನ ಪೂಜೆಯಾವುತ್ತು.

ಈ ರೀತಿಯಾಗಿ ಭಗವಂತ°, ಸಾಧಕನಾವುತ್ತವ° ಧ್ಯಾನಯೋಗದ (ಅಷ್ಟಾಂಗಯೋಗದ) ಮೂಲಕ ಚಂಚಲ ಮನಸ್ಸಿನ ನಿಯಂತ್ರಿಸಿ ಎಲ್ಲದರಲ್ಲೂ ಸಮದೃಷ್ಟಿ ಬೆಳೆಶೆಕು ಹೇಳಿ ಅರ್ಜುನಂಗೆ ಹೇಳುತ್ತ°.

ಶ್ಲೋಕ

ಅರ್ಜುನ ಉವಾಚ
ಯೋsಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ ।
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್ ॥ 

ಪದವಿಭಾಗ

ಅರ್ಜುನಃ ಉವಾಚ –
ಯಃ ಅಯಮ್ ಯೋಗಃ ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ । ಏತಸ್ಯ ಅಹಮ್ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಮ್ ಸ್ಥಿರಾಮ್ ॥

ಅನ್ವಯ

ಅರ್ಜುನಃ ಉವಾಚ –
ಹೇ ಮಧುಸೂದನ!, ಯಃ ಅಯಂ ಯೋಗಃ ತ್ವಯಾ ಸಾಮ್ಯೇನ ಪ್ರೋಕ್ತಃ, ಏತಸ್ಯ ಸ್ಥಿರಾಂ ಸ್ಥಿತಿಂ ಚಂಚಲತ್ವಾತ್ ಅಹಂ ನ ಪಶ್ಯಾಮಿ ।

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಮಧುಸೂದನ! – ಏ ಮಧುದೈತ್ಯನ ಕೊಂದವನೇ!, ಯಃ ಅಯಮ್ ಯೋಗಃ –  ಯಾವ ಈ ಯೋಗವು, ತ್ವಯಾ – ನಿನ್ನಿಂದ, ಸಾಮ್ಯೇನ – ಸಾಮಾನ್ಯವಾಗಿ, ಪ್ರೋಕ್ತಃ – ವಿವರಿಸಲ್ಪಟ್ಟತ್ತೋ, ಏತಸ್ಯ – ಇದರ, ಸ್ಥಿರಾಮ್ – ಸ್ಥಿರವಾದ, ಸ್ಥಿತಿಮ್ – ಸ್ಥಿತಿಯ, ಚಂಚಲತ್ವಾತ್ – ಚಾಂಚಲ್ಯದ ಕಾರಣಂದ, ಅಹಮ್ – ಆನು, ನ ಪಶ್ಯಾಮಿ – ಕಾಣುತ್ತಿಲ್ಲೆ.

ಅನ್ವಯಾರ್ಥ

ಅರ್ಜುನ° ಹೇಳಿದ° – ಏ ಮಧುಸೂದನ!, ನೀನು ಸಂಗ್ರಹವಾಗಿ ಹೇಳಿದ ಈ ಯೋಗಪದ್ಧತಿಯ ಮನಸ್ಸಿನ ಚಂಚಲದ ಕಾರಣಂದಲಾಗಿ ಕಾರ್ಯಸಾಧ್ಯವಾಗಿ ಎಡಿಗಪ್ಪದು ಹೇದು ಎನಕಾಣುತ್ತಿಲ್ಲೆ.

ತಾತ್ಪರ್ಯ/ವಿವರಣೆ

“ಶುಚೌದೇಶೇ ಪ್ರತಿಷ್ಠಾಪ್ಯ” ಹೇಳ್ವಲ್ಲಿಂದ ಸುರುಮಾಡಿ “ಯೋಗೀ ಪರಮೋ ಮತಃ ” ಹೇಳ್ವಲ್ಲಿ ಮುಕ್ತಾಯ ಮಾಡಿ ಭಗವಂತ ಅರ್ಜುನಂಗೆ ವಿವರಿಸಿದ ಯೋಗ ಪದ್ಧತಿಯ ಅರ್ಜುನ ಇಲ್ಲಿ ತನ್ನ ಅಸಾಮರ್ಥ್ಯ ಭಾವಂದ ತಿರಸ್ಕರಿಸುತ್ತ°. ಈ ಕಲಿಯುಗಲ್ಲಿ ಸಾಮಾನ್ಯ ಮನುಷ್ಯ° ಯೋಗಾಭ್ಯಾಸ ಹೇಳಿಗೊಂಡು ಮನೆ ಮಠವ ಬಿಟ್ಟು ಬೆಟ್ಟಕ್ಕೋ ಕಾಡಿಂಗೋ ಹೋಗಿ ಏಕಾಂತ ಸ್ಥಳಕ್ಕೆ ಹೋಗಿ ಕೂಪದು ಸುಲಭ ಸಾಧ್ಯ ಮಾತು ಅಲ್ಲ. ಅಲ್ಪಾಯುಸ್ಸಿನ ಈ ಬದುಕಿಲ್ಲಿ ಕಠಿಣ ಹೋರಾಟವೇ ಈ ಯುಗದ ಲಕ್ಷಣ. ಸರಳವಾದ ಕಾರ್ಯಸಾಧ್ಯವಾದ ವಿಧಾನಂದ ಆತ್ಮಸಾಕ್ಷಾತ್ಕಾರ ಪಡವ ವಿಷಯಲ್ಲಿಯೂ ಜನಂಗೊಕ್ಕೆ ಗಂಭೀರ ಆಸಕ್ತಿ ಇಲ್ಲೆ. ಇನ್ನು ಜೀವನ ವಿಧಾನ, ಆಸನದ ರೀತಿ, ಜಾಗೆಯ ಆಯ್ಕೆ ಮತ್ತೆ  ಐಹಿಕ ಚಟುವಟಿಕೆಗಳಿಂದ ಮನಸ್ಸಿನ ದೂರಮಾಡುತ್ತದು (ಇಂದ್ರಿಯ ನಿಗ್ರಹ, ಮನೋನಿಯಂತ್ರಣ) ಇದೆಲ್ಲವ ನಿಯಂತ್ರಿಸುವ ಈ ಕಷ್ಟಸಾಧ್ಯವಾದ ಯೋಗಪದ್ಧತಿ!.  ಹಲವು ರೀತಿಲಿ ಅನುಕೂಲಂಗಳೇ ಆಗಿದ್ದರೂ ಕಾರ್ಯಶೀಲ ಮನುಷ್ಯನಾಗಿ ಈ ಯೋಗಪದ್ಧತಿಯ ಅನುಸರುಸುವದು ಸುಲಭಸಾಧ್ಯವಾದ ಮಾತು ಅಲ್ಲ. ಅರ್ಜುನ° ರಾಜವಂಶಕ್ಕೆ ಸೇರಿದವ ಮತ್ತೆ ಹಲವು ಗುಣಂಗಳಲ್ಲಿ ಶ್ರೇಷ್ಠನೂ ಅಪ್ಪು,ಮಹಾಯೋಧ°,  ದೀರ್ಘಾಯುಷಿ ಕೂಡ. ಎಲ್ಲಕ್ಕಿಂತ ಮಿಕ್ಕಿ, ಅವ° ದೇವೋತ್ತಮ ಪರಮ ಪುರುಷನಾದ ಆ ಭಗವಂತನ ಪರಮ ಭಕ್ತನೂ, ಸ್ನೇಹಿತನೂ ಕೂಡ. ಐದು ಸಾವಿರ ವರುಷಂಗಳ ಹಿಂದೆ ಅರ್ಜುನಂಗೆ ಈಗ ನವಗಿಪ್ಪದರಿಂದ ಹೆಚ್ಚಿನ ಸೌಲಭ್ಯಂಗೊ ಇತ್ತಿದ್ದು. ಅಂದರೂ ಈ ಯೋಗಪದ್ಧತಿ ಕಾರ್ಯರೂಪಲ್ಲಿ ಅಸಾಧ್ಯ ಹೇದು ಅನುಮಾನಿಸಿದ°. ಅವಂಗೇ ಸಂದೇಹವಾಗಿ ಕಂಡ ಈ ರೀತಿಯ ಯೋಗಪ್ರಕ್ರಿಯೆ ಈಗಾಣ ಕಾಲದ ಸಾಮಾನ್ಯರಾದ ನವಗೆ ಎಡಿಗಕ್ಕೊ?! ಕೆಲವೇ ಕೆಲವು ಮಂದಿಗೊಕ್ಕೆ ಸಾಧ್ಯ ಅಪ್ಪಲೂ ಸಾಕು. ಆದರೆ ಜನಸಾಮಾನ್ಯರುಗೊಕ್ಕೆ ಇದು ಸಾಧ್ಯವಲ್ಲದ ಸಲಹೆಯಲ್ಲದೋ?! ಐದು ಸಾವಿರ ವರ್ಷಂಗಳ ಹಿಂದೆಯೇ ಹೀಂಗೆ ಆಗಿದ್ದರೆ ಇದರ ಹಿಂದಿಪ್ಪ ಗುಟ್ಟು ಎಂತರ?

ಅರ್ಜುನ° ಇಲ್ಲಿ ಭಗವಂತನ ಮಧುಸೂದನ ಹೇಳಿ ಸಂಬೋಧಿಸುತ್ತ°. ಮಧು ಹೇಳ್ವ ರಾಕ್ಷಸನ ಕೊಂದು ಮಧು ಹೇಳ್ವ ಸಂತೋಷವ ಕೊಟ್ಟು ಪಾಲುಸುವವ ಹೇಳಿ ಧ್ವನಿ. “ನೀನು ಸುಲಾಭಕ್ಕೆ ಧ್ಯಾನಯೋಗದ ಮೂಲಕ ಮನಸ್ಸು ಮತ್ತು ಇಂದ್ರಿಯಂಗಳ ನಿಯಂತ್ರಣ ಮಾಡಿಕ್ಕಿ ಆತ್ಮಸಾಕ್ಷಾತ್ಕಾರಕ್ಕೆ ಇಳಿವಲಕ್ಕು ಹೇಳಿಬಿಟ್ಟೆ., ಧ್ಯಾನ ಹೇಳ್ತದು ಸಂಪೂರ್ಣ ಮಾನಸಿಕ  ಪ್ರಕ್ರಿಯೆ. ಆದರೆ ನಮ್ಮ ಮನಸ್ಸು ಪ್ರಕ್ಷುಬ್ಧ ಮತ್ತು ಚಂಚಲ. ಇಂತಹ ಜಟಿಲವಾಗಿಪ್ಪ ಮನಸ್ಸಿನ ಹಿಡಿತಲ್ಲಿ ಮಡಿಕ್ಕೊಂಡು ನೀನು ಹೇಳಿದ ಧ್ಯಾನಯೋಗವ ಸಾಧುಸುವದು ಎಡಿಗಕ್ಕು ಹೇಳಿ ಎನಕಾಣುತ್ತಿಲ್ಲೆ ಭಗವಂತ” ಹೇದು ಅರ್ಜುನನ ಸಂದೇಹವ ಮುಂದೆ ಭಗವಂತನ ಮುಂದೆ ತೋಡಿಗೊಳ್ತ° ಅರ್ಜುನ°.

ಶ್ಲೋಕ

ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವತ್ ದೃಢಮ್ ।
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥೩೪॥

ಪದವಿಭಾಗ

ಚಂಚಲಮ್ ಹಿ ಮನಃ ಕೃಷ್ಣ ಪ್ರಮಾಥಿ ಬಲವತ್ ದೃಢಮ್ । ತಸ್ಯ ಅಹಮ್ ನಿಗ್ರಹಮ್ ಮನ್ಯೇ ವಾಯೋಃ ಇವ ಸುದುಷ್ಕರಮ್ ॥

ಅನ್ವಯ

ಹೇ ಕೃಷ್ಣ!, ಮನಃ ಬಲವತ್ ದೃಢಂ ಚಂಚಲಂ ಪ್ರಮಾಥಿ । ತಸ್ಯ ನಿಗ್ರಹಂ ವಾಯೋಃ ಇವ ಸುದುಷ್ಕರಂ ಹಿ (ಇತಿ) ಅಹಂ ಮನ್ಯೇ ।

ಪ್ರತಿಪದಾರ್ಥ

ಹೇ ಕೃಷ್ನ – ಏ ಕೃಷ್ಣ°!, ಮನಃ – ಮನಸ್ಸು, ಬಲವತ್ – ಬಲವಾಗಿಪ್ಪದು, ದೃಢಮ್ – ಜಗ್ಗದ್ದೆ ದೃಢವಾಗಿಪ್ಪದು, ಚಂಚಲಮ್ – ಚಂಚಲವಾದ್ದು, ಪ್ರಮಾಥಿ – ಉದ್ವಿಗ್ನಗೊಂಬದು, ತಸ್ಯ – ಅದರ, ನಿಗ್ರಹಮ್ – ನಿಯಂತ್ರಣವ, ವಾಯೋಃ  – ಗಾಳಿಯ, ಇವ – ಹಾಂಗೆ,  ಸುದುಷ್ಕರಮ್ – ಕಷ್ತಕರವಾದ್ದು , ಹಿ – ಖಂಡಿತವಾಗಿಯೂ, (ಇತಿ – ಹೇದು) ಅಹಮ್ – ಆನು, ಮನ್ಯೇ – ಗ್ರೇಶುತ್ತೆ.

ಅನ್ವಯಾರ್ಥ

ಏ ಕೃಷ್ಣ!, ಮನಸ್ಸು ಹೇಳ್ವದು ಚಂಚಲವಾದ್ದು, ಪ್ರಕ್ಷುಬ್ಧವಾದ್ದು, ದೃಢವಾದ್ದು (ಹಠಮಾರಿ) ಮತ್ತೆ ಬಲವಾದ್ದು., ಅದರ ನಿಗ್ರಹಿಸುವದು (ನಿಯಂತ್ರಿಸುವದು) ಗಾಳಿಯ ನಿಯಂತ್ರಿಸುವದಕ್ಕಿಂತಲೂ ಕಷ್ಟಕರ ಹೇದು ಎನಗೆ ತೋರುತ್ತು.

ತಾತ್ಪರ್ಯ/ವಿವರಣೆ

ಮನಸ್ಸು ಎಷ್ಟು ಗಟ್ಟಿ ಮತ್ತೆ ಹಠಮಾರಿ ಹೇಳಿರೆ ಮನಸ್ಸು ಬುದ್ಧಿಶಕ್ತಿಗೆ ವಿಧೇಯವಾಗಿರುತ್ತು ಹೇಳ್ವ ನಿರೀಕ್ಷಣೆ ಇದ್ದರೂ ಕೆಲವೊಂದರಿ ಅದು ಬುದ್ಧಿಶಕ್ತಿಯನ್ನೂ ಸೋಲುಸುತ್ತು. ವ್ಯಾವಹಾರಿಕ ಜಗತ್ತಿಲ್ಲಿ ಹಲವು ವಿರುದ್ಧ ಅಂಶಂಗಳೊಟ್ಟಿಂಗೆ ಹೋರಾಡೆಕ್ಕಪ್ಪ ಮನುಷ್ಯಂಗೆ ಮನಸ್ಸಿನ ನಿಯಂತ್ರುಸುವದು ನಿಶ್ಚಯವಾಗಿಯೂ ಬಹುಕಷ್ಟವೇ ಸರಿ. ಕೃತಕವಾಗಿ ಮನುಷ್ಯನಾದವ° ಮಿತ್ರ ವಾ ಶತ್ರುಗಳ ವಿಷಯಲ್ಲಿ ಒಂದು ಮಾನಸಿಕ ಸಮತೋಲನವ ಹಿಡ್ಕೊಂಬಲೆಡಿಗು. ಆದರೆ, ಅಕೇರಿಗೆ ಪ್ರಾಪಂಚಿಕ ವ್ಯವಸ್ಥೆಯೊಳ ಇಪ್ಪ ಯಾವ ಮನುಷ್ಯಂಗೂ ಹೀಂಗೆ ಮಾಡ್ಳೆ ಸಾಧ್ಯ ಇಲ್ಲೆ. ಎಂತಕೆ ಹೇದರೆ, ಇದು ಪ್ರಚಂಡವಾದ ಗಾಳಿಯ ನಿಯಂತ್ರುಸುವದಕ್ಕಿಂತಲೂ ಕಷ್ಟಕರವಾದ್ದು. ಯೋಗಾಭ್ಯಾಸವು ಮನಸ್ಸಿನ ನಿಯಂತ್ರುಸಲೆ ಇಪ್ಪ ಒಂದು ಮಾರ್ಗ ಹೇಳ್ವ ಒಂದು ನಂಬಿಕೆ. ಆದರೆ, ಲೌಕಿಕ ವ್ಯಕ್ತಿಗೊಕ್ಕೆ ಇಂತಹ ಅಭ್ಯಾಸ ಕಾರ್ಯಸಾಧ್ಯ ಅಪ್ಪಾಂಗೆ ಇಪ್ಪದಲ್ಲ. ಆ ಕಾಲದ ಅರ್ಜುನಂಗೇ ಈ ರೀತಿ ಸಂಶಯ ಬಂದಮೇಲೆ ಆಧುನಿಕ ಕಾಲದ ಸಾಮಾನ್ಯ ಜನರ ಗತಿ ಎಂತರ?!  ಬೀಸುವ ಗಾಳಿಯ ನಿಯಂತ್ರುಸಲೆ ಕಷ್ಟಕರವಾಗಿಪ್ಪಂತೆ ಈ ಸಾಧ್ಯವೂ.

ಶ್ಲೋಕ

ಶ್ರೀ ಭಗವಾನ್ ಉವಾಚ
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ ।
ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ ॥೩೫॥

ಪದವಿಭಾಗ

ಶ್ರೀ ಭಗವಾನ್ ಉವಾಚ
ಅಸಂಶಯಮ್ ಮಹಾಬಾಹೋ ಮನಃ ದುರ್ನಿಗ್ರಹಮ್ ಚಲಮ್ । ಅಭ್ಯಾಸೇನ ತು ಕೌತೇಯ ವೈರಾಗ್ಯೇಣ ಚ ಗೃಹ್ಯತೇ ॥

ಅನ್ವಯ

ಶ್ರೀ ಭಗವಾನ್ ಉವಾಚ
ಹೇ ಮಹಾಬಾಹೋ!, ಮನಃ ಅಸಂಶಯಂ ಚಲಂ ದುರ್ನಿಗ್ರಹಂ, ಹೇ ಕೌಂತೇಯ!, (ತತ್) ತು ಅಭ್ಯಾಸೇನ ವೈರಾಗ್ಯೇಣ ಚ ಗೃಹ್ಯತೇ ।

ಪ್ರತಿಪದಾರ್ಥ

ಶ್ರೀ ಭಗವಾನ್ ಉವಾಚ – ದೇವೋತ್ತಮ ಪರಮಪುರುಷ° (ಭಗವಂತ°) ಹೇಳಿದ°, ಹೇ ಮಹಾಬಾಹೋ! – ಏ ಮಹಾಬಾಹುವೇ!, ಮನಃ – ಮನಸ್ಸು, ಅಸಂಶಯಮ್ – ನಿಸ್ಸಂಶಯವಾಗಿಯೂ, ಚಲಮ್ – ಚಂಚಲವು, ದುರ್ನಿಗ್ರಹಮ್ – ನಿಗ್ರಹಿಸುಲೆ ಕಷ್ತಕರವಾದ್ದು, ಹೇ ಕೌಂತೇಯ! – ಏ ಕುಂತೀಪುತ್ರನೇ!, (ತತ್ – ಅದರ), ತು – ಆದರೆ, ಅಭ್ಯಾಸೇನ – ಅಭ್ಯಾಸಂದ, ವೈರಾಗ್ಯೇಣ – ವೈರಾಗ್ಯಂದ, ಚ – ಕೂಡ, ಗೃಹ್ಯತೇ – ನಿಯಂತ್ರಿಸಲ್ಪಡುತ್ತು.

ಅನ್ವಯಾರ್ಥ

ಭಗವಂತ° ಹೇಳಿದ° – ಏ ಮಹಾಬಾಹುವಾದ ಕುಂತೀಪುತ್ರನೇ!, ಚಂಚಲವಾದ ಮನಸ್ಸಿನ ನಿಗ್ರಹಿಸುವದು ಕಷ್ಟಕರವಾದ್ದು ಅಪ್ಪು., ಆದರೂ, ಯೋಗ್ಯವಾದ ವೈರಾಗ್ಯಂದ ಮತ್ತೆ ಅಭ್ಯಾಸಂದ ಅದರ ನಿಗ್ರಹಿಸಲಕ್ಕು.

ತಾತ್ಪರ್ಯ/ವಿವರಣೆ

ಹಠಮಾರಿಯಾದ ಮನಸ್ಸಿನ ಗೆಲ್ಲುತ್ತದು ಕಷ್ಟಕರವಾದ್ದು ಹೇಳಿ ಅರ್ಜುನ° ಹೇಳಿದ್ದರ ಭಗವಂತ° ಒಪ್ಪುತ್ತ. ಆದರೆ ಅದಕ್ಕೆ ಪರಿಹಾರ ಹೇಳುತ್ತ ಇಲ್ಲಿ ಭಗವಂತ°. ಮನಸ್ಸು ಚಂಚಲವಾಗಿಯೂ ಹಠಮಾರಿಯೂ ಆಗಿದ್ದರೂ ಅದರ ದೃಢವಾದ ವೈರಾಗ್ಯಂದ ಮತ್ತು ನಿರಂತರ ಅಭ್ಯಾಸದ ಮೂಲಕ ಸಾಧುಸಲೆ ಎಡಿಗು. ಒಂದು ಪವಿತ್ರವಾದ ಸ್ಥಳಲ್ಲಿ ನೆಲೆಸುವದು, ಮನಸ್ಸಿನ ಪರಮಾತ್ಮನಲ್ಲಿ ನೆಡುತ್ತದು, ಇಂದ್ರಿಯಂಗಳನ್ನೂ, ಮನಸ್ಸನ್ನೂ ನಿಯಂತ್ರುಸುವದು, ಬ್ರಹ್ಮಚರ್ಯ, ಏಕಾಂತಜೀವನ ಮುಂತಾದ ನಿಯಮಂಗಳ ಈಗಾಣ ಕಾಲಲ್ಲಿ ಆರಿಂದಲೂ ಸುಲಭಕ್ಕೆ ಎಡಿಗಪ್ಪ ವಿಷಯ ಅಲ್ಲ. ಆದರೆ ಕೃಷ್ಣಪ್ರಜ್ಞೆಯ ಅನುಷ್ಠಾನಂದ ಮನುಷ್ಯ° ಒಂಬತ್ತು ರೀತಿಲ್ಲಿ ಭಗವಂತನ ಭಕ್ತಿಪೂರ್ವಕ ಸೇವೆಲಿ ತೊಡಗುತ್ತ°. ಸುರುವಾಣದ್ದು ಮತ್ತು ಮುಖ್ಯವಾದ್ದು ಭಗವಂತನ ವಿಷಯವ ಕೇಳುವದು ಮತ್ತು ತಿಳುಕ್ಕೊಂಬದು. ಮನಸ್ಸಿನ ಎಲ್ಲ ಆತಂಕಂಗಳ ಕಳವದಕ್ಕೆ ಇದು ಬಹುಶಕ್ತಿಶಾಲಿಯಾದ ಆಧ್ಯಾತ್ಮಿಕ ಮಾರ್ಗ. ಭಗವಂತನ ವಿಷಯ ಕೇಳಿದಷ್ಟೂ ವ್ಯಕ್ತಿಯ ಚಿತ್ತಲ್ಲಿ ಜ್ಞಾನೋದಯ ಆವ್ತು. ಮನಸ್ಸಿಂಗೆ ಬೆಳಕುದೋರುತ್ತು. ಭಗವಂತನಿಂದ ಮನಸ್ಸಿನ ಸೆಳವ ಎಲ್ಲ ವಿಷಯಂಗಳಿಂದ ಮನಸ್ಸು ದೂರ ಆವುತ್ತು. ಭಗವಂತಂಗೆ ಸಮರ್ಪಣೆ ಆಗದ್ದ ಚಟುವಟಿಕೆಗಳಿಂದ ದೂರ ಆಗಿದ್ದರೆ ವೈರಾಗ್ಯವ ಕಲಿವದು ಸುಲಭ. ವೈರಾಗ್ಯ ಹೇಳಿರೆ ಜಡವಸ್ತುಗಳಿಂದ ದೂರ ಇಪ್ಪದು. ಮತ್ತೆ ಮನಸ್ಸಿನ ಆತ್ಮಲ್ಲಿ ನೆಲೆಗೊಳುಸುವದು. ನಿರಾಕಾರ ಆಧ್ಯಾತ್ಮಿಕ ವೈರಾಗ್ಯ ಮನಸ್ಸಿನ ಭಗವಂತನ ಚಟುವಟಿಕೆಗಳಲ್ಲಿ ಜೋಡುಸುವದಕ್ಕಿಂತಲೂ ಕಷ್ಟವಾದ್ದು. ಭಗವಂತನಲ್ಲಿ ಮನಸ್ಸಿನ ನೆಡುತ್ಸು ಕಾರ್ಯಸಾಧ್ಯ. ಭಗವಂತನ ವಿಷಯ ಕೇಳುವದರಿಂದ ಮನುಷ್ಯಂಗೆ ಸಹಜವಾಗಿ ಭಗವಂತನ ವಿಷಯಲ್ಲಿ ಮನಸ್ಸು ನೆಡುತ್ತು , ಆಸಕ್ತಿಯ ಹೊಂದುತ್ತು. ಈ ಆಸಕ್ತಿಗೆ ‘ಪರೇಶಾನುಭವ’ – ಆಧ್ಯಾತ್ಮಿಕ ತೃಪ್ತಿ ಹೇಳಿ ಹೆಸರು. ಇದು ಹಶುವಾದ ಮನುಷ್ಯ° ಪ್ರತಿಯೊಂದು ತುತ್ತು ತಿಂಬಗಳೂ ಅನುಭವುಸುವ ತೃಪ್ತಿಯ ಭಾವದ ಹಾಂಗಿಪ್ಪದು. ಮನುಷ್ಯಂಗೆ ಹಶುವಾದಪ್ಪಗೆ ಎಷ್ಟು ತಿಂದರೆ ಅಷ್ಟು ತೃಪ್ತಿ ಮತ್ತು ಶಕ್ತಿಗಳ ಭಾವನೆ ಬತ್ತು. ಹಾಂಗೆಯೇ ಭಕ್ತಿಪೂರ್ವಕ ಸೇವೆ ಮಾಡುವದರಿಂದ ಮನಸ್ಸು ಐಹಿಕ ಗುರಿಂದ ದೂರವಾವ್ತಾಂಗೆ ಮನುಷ್ಯಂಗೆ ದಿವ್ಯತೃಪ್ತಿ ಉಂಟಾವ್ತು. ಇದು ತಜ್ಞ ಚಿಕಿತ್ಸೆಂದ ಮತ್ತು ಸೂಕ್ತ ಆಹಾರಂದ ಕಾಯಿಲೆಯ ಗುಣಪಡುಸುವ ಹಾಂಗೆ. ಭಗವಂತನ ದಿವ್ಯ ಲೀಲೆಗಳ ಕೇಳುವದು ಮರ್ಳು ಮನಸ್ಸಿಂಗೆ ತಜ್ಞ ಚಿಕಿತ್ಸೆ ಮಾಡಿದಾಂಗೆ ಮತ್ತೆ ಭಗವಂತನ ಪ್ರಸಾದ ಸ್ವೀಕರುಸುವದು ಕಾಯಿಲೆಲಿ ನರಳುತ್ತಿಪ್ಪ ರೋಗಿಗೆ ಸೂಕ್ತ ಆಹಾರವ ಕೊಟ್ಟಾಂಗೆ. ಕೃಷ್ಣಪ್ರಜ್ಞೆಯ ಪ್ರಕ್ರಿಯೆಯೇ ಚಿಕಿತ್ಸೆ.

ಬನ್ನಂಜೆಯ ವ್ಯಾಖ್ಯಾನಲ್ಲಿ ವಿವರಿಸಿಪ್ಪಾಂಗೆ ಇಲ್ಲಿ ಭಗವಂತ° ಹೇಳುತ್ತ° – “ನೀನು ಹೇಳ್ವದರಲ್ಲಿ ಯಾವ ಸಂಶಯವೂ ಇಲ್ಲೆ. ಮನಸ್ಸಿನ ತಡೆ ಹಿಡಿವದು ಸುಲಭದ ಕೆಲಸ ಅಲ್ಲ. ಆದರೆ ಅಭ್ಯಾಸಂದ ಮತ್ತು ವೈರಾಗ್ಯಂದ ಇದರ ಕ್ರಮೇಣವಾಗಿ ಸಾಧುಸಲೆಡಿಗು”.

ನಾವು ಪ್ರಯತ್ನ ಪಡದ್ದೇ ಏನನ್ನೂ ಸಾಧುಸಲೆ ಸಾಧ್ಯ ಇಲ್ಲೆ. ಪ್ರತಿಯೊಂದಕ್ಕೂ ಪ್ರಯತ್ನ ಬೇಕು. ನಾವು ನಮ್ಮ ಮನಸ್ಸು ಹೇಳಿದಾಂಗೆ ಕುಣಿವ ಅಭ್ಯಾಸವ ಮಾಡಿಗೊಂಡಿದು. ಅದರ ಬಿಟ್ಟು ನಾವು ಹೇಳಿದಾಂಗೆ ಮನಸ್ಸು ಕೇಳುತ್ತ ಹಾಂಗೆ ಮಾಡುವ ಪ್ರಯತ್ನವ ನಾವೆಂದೂ ಮಾಡಿದ್ದದು ಇಲ್ಲೆ. ಇಲ್ಲಿ ಭಗವಂತ° ವೈರಾಗ್ಯ ಮತ್ತೆ ಅಭ್ಯಾಸ ಹೇಳ್ವ ಎರಡು ವಿಚಾರಕ್ಕೆ ಒತ್ತುಕೊಟ್ಟು ಹೇಳುತ್ತ°. ವೈರಾಗ್ಯ ಹೇದರೆ ಯಾವುದರ ಕಡೆಂಗೆ ಮನಸ್ಸು ಹರಿವಲಾಗದೋ ಅದರ ಮನಸ್ಸಿಂಗೆ ಉಣುಸದ್ದೆ ದೂರ ಮಡುಗುವದು. ದೇವರು ನವಗೆ ಯಾವುದು ಒಳ್ಳೆದು ಯಾವುದು ಕೆಟ್ಟದ್ದು ಹೇಳು ತಿಳುಕ್ಕೊಂಬ ಬುದ್ಧಿ ಶಕ್ತಿಯ ಕೊಟ್ಟಿದ°. ಆ ಬುದ್ಧಿಶಕ್ತಿಯ ಉಪಯೋಗಿಸಿಗೊಂಡು ಮನಸ್ಸಿನ ಕೆಟ್ಟದ್ದರಿಂದ ದೂರಮಡಿಕ್ಕೊಳ್ಳೆಕು. ಕೆಟ್ಟದ್ದರ ಬಗ್ಗೆ ಆಸಕ್ತಿಯೇ ಬಪ್ಪಲಾಗ. ಆಸಕ್ತಿ ಬಾರದ್ದಾಂಗೆ ಇರೆಕ್ಕಾರೆ ಅದರ ಪರಿಚಯವೇ ಅಪ್ಪಲಾಗ. ಹೀಂಗೆ ನಮ್ಮ ಬೆಳವಣಿಗೆಗೆ ಯಾವುದು ಬಾಧಕವೋ ಅದರಿಂದ ಮನಸ್ಸಿನ ದೂರಮಡಿಕ್ಕೊಂಬದು ವೈರಾಗ್ಯ. ಇದರ ಒಟ್ಟಿಂಗೆ ನಿರಂತರ ಏಕಾಗ್ರತಗೆ ಬೇಕಾದ ಅಭ್ಯಾಸವ ತಪ್ಪದೆ ಮಾಡಿಗೊಂಡಿರೆಕು ನಿರಂತರವಾಗಿ. ಈ ರೀತಿಯಾಗಿ ನಾವು ನಿರಂತರ ಅಭ್ಯಾಸಬಲಂದ ನಮ್ಮ ಮನಸ್ಸಿನ ನಿಯಂತ್ರಿಸಿಗೊಂಬಲೆಡಿಗು.

ಸಾಮಾನ್ಯವಾಗಿ ನಾವು ನಮ್ಮ ಮನಸ್ಸಿಂಗೆ ಪ್ರತೀ ದಿನ ಬೇಡದ್ದ ತರಭೇತಿಯನ್ನೇ ಕೊಡುತ್ತಾ ಇರ್ತು. ಉದಾಹರಣೆಗೆ ನಮ್ಮ ಅಮೂಲ್ಯವಾದ ಸಮಯವ ದೂರದರ್ಶನಲ್ಲಿ ಬಪ್ಪ ಯಾವುದೋ ದೈನಂದಿನ ಧಾರವಾಹಿ, ಸಿನೇಮ, ಕುಣಿತ, ಮಸಾಲೆ ಇತ್ಯಾದಿ ವಿಷಯಲ್ಲಿ ನಮ್ಮ ಮನಸ್ಸಿನ ಸಂಪೂರ್ಣವಾಗಿ ತೊಡಗಿಸಿಬಿಡ್ತು. ನವಗೆ ಆಧ್ಯಾತ್ಮಿಕ ಗ್ರಂಥಂಗಳ ಓದುಲೆ ವ್ಯವಧಾನವಾಗಲೀ, ಆಸಕ್ತಿಯಾಗಲೀ, ಸಮಯವಾಗಲಿ ಇರ್ತಿಲ್ಲೆ. ದೇವರ ಪೂಜೆ ಮಾಡುವಾಗ ಕೂಡ ನವಗೆ ಆ ಧಾರವಾಹಿಯ ಮುಂದಾಣ ಭಾಗದ ಚಿಂತೆ!. ಇರುಳು ಒರಗಲೆ ಹೋಪಗಲೂ ಟಿವಿ ನೋಡಿಕ್ಕಿ ಹೋಗಿ ಒರಗುವದು. ಒರಕ್ಕಿಲಿಯೂ ಆ ಟಿವಿಲಿ ಬಂದ ವಿಷಯಂಗಳ ಚಿಂತೆ. ಇದರ ಬದಲು ಆ ಸಮಯಂಗಳ ಆಧ್ಯಾತ್ಮಿಕ ಗ್ರಂಥಂಗಳ ಓದುವ, ಓದಿದ್ದರ ಅರ್ಥೈಸುವ ಅಭ್ಯಾಸವ ಮಾಡಿಗೊಂಡರೆ ನವಗೆ ಸಹಜವಾಗಿ ಅದರಲ್ಲಿ ಆಸಕ್ತಿ ಉಂಟಾವ್ತು, ಮನಸ್ಸು ಅದರಲ್ಲಿ ನೆಡಲ್ಪಡುತ್ತು. ಹೀಂಗೆ ಆಧ್ಯಾತ್ಮಿಕ ವಿಷಯಲ್ಲಿ ಮನಸ್ಸು ನೆಟ್ಟಪ್ಪಗ ಅನ್ಯ ವಿಚಾರಂಗಳಲ್ಲಿ  ವೈರಾಗ್ಯವ ಸಾಧುಸುತ್ತು. ಇದು ಕೇವಲ ಒಂದು ಉದಾಹರಣೆ ಮಾತ್ರ. ನಮ್ಮ ದೈನಂದಿನ ಜೀವನಲ್ಲಿ ಅದೆಷ್ಟು ವಿಷಯಂಗೆ ಹೀಂಗೆ ಹಾಸುಹೊಕ್ಕಾಗಿ ಬಿಟ್ಟಿದು. 

ಮನಸ್ಸು ತನಗೆ ತಿಳಿಯದ್ದ ವಿಷಯದತ್ರೆ ಹೆಚ್ಚು ಗಮನ ಕೊಡುತ್ತಿಲ್ಲೆ. ಆದರೆ ಒಂದರಿ ಅದರ ರುಚಿ ಸಿಕ್ಕಿತ್ತು ಕಂಡ್ರೆ ಮತ್ತೆ ಅದರ ಬಿಡುತ್ತಿಲ್ಲೆ. ಉದಾಹರಣೆಗೆ ದುಶ್ಚಟಂಗೊ. ಧೂಮ-ಮದ್ಯ ಇತ್ಯಾದಿ. ಎಂದೂ ಮದ್ಯಸೇವನೆ ಮಾಡದ್ದವಂಗೆ ಅದು ಅಸಹ್ಯವಾಗಿ ಅನುಸುತ್ತು. ಆದರೆ , ಆರದ್ದೋ ಒತ್ತಾಯದ ಮೇರಗೆ ಒಂದರಿ ರುಚಿ ನೋಡಿದವಂಗೆ ಮತ್ತೆ ಮತ್ತೆ ರುಚಿ ಕಾಂಬ ಆಸೆ. ಪರಿಣಾಮ ಅದರ ಬಲಿಪಶು ನಾವಪ್ಪದು. ಅರ್ಥಾತ್ ನವಂಗೆ ಗೊಂತಿದ್ದುಗೊಂಡೇ ನಮ್ಮ ಅವನತಿಯತ್ತ ನಾವು ಹೋಪದು. ಹಾಂಗೇ ಇನ್ನೊಂದು ವಿಷಯ ನವಗೆ ಬೇಡದ್ದ ವಿಷಯಂಗಳಲ್ಲಿ ನಾವು ತಲೆ ಹಾಕುವದು. ಆರೋ ಎಂತದೋ ಮಾಡಿದಡ!. ಆತು., ಇದು ನಮ್ಮ ಕೆಮಿಗೆ ಬಿದ್ದರೆ ಅದಾರು, ಅದೆಂತಕೆ, ಮತ್ತೆಂತಾತು ಹೀಂಗೆಲ್ಲ ಅದರ ಆಳ ಆಳವಾಗಿ ಅಧ್ಯಯನ ಮಾಡೆಕು ಹೇಳಿ ತೋರುವದು. ಒಂದರಿ ಯಾವುದೋ ಒಂದು ವಿಷಯಕ್ಕೆ ಹೀಂಗೆ ಮನಸ್ಸಿನ ಹಾದು ಹೋಪಲೆ ಬಿಟ್ಟರೆ ಮತ್ತೆ ಹಾಂಗಿಪ್ಪ ಬೇರೆ ವಿಚಾರಂಗೊ ಇದ್ದೋ, ಇದಕ್ಕಿಂತ ಸ್ವಾರಸ್ಯವಾಗಿಪ್ಪದು ಏನಾರು ಇದ್ದೋ ಹೇಳಿ ಹುಡುಕ್ಕುವದು. ಹೀಂಗೆ ಅನಗತ್ಯವಾಗಿ ಆ ವಿಷಯದ ಬೆನ್ನು ಹಿಡಿತ್ತದು ನಮ್ಮ ಮನಸ್ಸಿನ ನಾವೇ ಬಲಿ ಕೊಟ್ಟಹಾಂಗೆ. ಹಾಂಗಾಗಿ ಅಭ್ಯಾಸರೂಪವಾಗಿ ಮನಸ್ಸಿನ ಬೇಡದ್ದ ವಿಷಯಗಳತ್ತೆ ಹರಿಯಗೊಡದ್ದೆ ಆಧ್ಯಾತ್ಮಿಕ ವಿಷಯಗಳತ್ತ ತಿರುಗಿಸಿ ಅದರಲ್ಲಿ ಕ್ರಮೇಣ ನೆಲೆಗೊಂಬ ಹಾಂಗೆ ಮಾಡೆಕು. ಹಾಂಗಾಗಿ ನಾವಿಲ್ಲಿ ಕಲಿಯೆಕ್ಕಾದ್ದು ಎಂತ ಹೇದರೆ, ಮನಸ್ಸಿನ ಇಲ್ಲಸಲ್ಲದ್ದ ವಿಚಾರಂಗಳತ್ತ ತೊಡಗುಸುವ ಮದಲು ಆ ವಿಷಯ ಬೇಕಾದ್ದೋ ಬೇಡದ್ದೋ ಹೇಳಿ ಬುದ್ಧಿಪೂರ್ವಕ ತೀರ್ಮಾನಿಸೆಕು. ಮತ್ತೆ ಅದು ನಿಜವೋ (ವಾಸ್ತವವೋ /ರಿಯಾಲಿಟಿಯೋ ) ಹೇಳಿಯೂ ಅರ್ಥಮಾಡೆಕು. ಸುಮ್ಮನೆ ಅಲ್ಲಿ ಹಾಂಗಾತಡ, ಇಲ್ಲಿ ಹೀಂಗಾತಡ, ಅದು ಆಚದರೊಟ್ಟಿಂಗೆ ಓಡಿಹೋತಡ ಹೇಳ್ವ ಡ’ಕತೆಗಳಲ್ಲಿ ಮನಸ್ಸು ಮಗ್ನ ಅಪ್ಪಲೆ ಬಿಡ್ಳಾಗ. ಹಾಂಗಿರ್ತ ವಿಷಯ ಎದುರು ಬಂದಪ್ಪದ್ದೇ ಇದು ಎನಗೆ ಸಂಬಂಧಪಟ್ಟದ್ದಲ್ಲ, ಎನಗೆ ಇದರಿಂದ ಶ್ರೇಯಸ್ಸಪ್ಪಲ್ಲಿಲ್ಲೆ , ಇದರ ಬಗ್ಗೆ ಹೆಚ್ಚಿನ ವಿಚಾರ ತಿಳುಕ್ಕೊಳ್ಳೆಕ್ಕಾದ ಅಗತ್ಯ ಇಲ್ಲೆ ಹೇಳ್ವದು ಬುದ್ಧಿಪೂರ್ವಕವಾಗಿ ಮನಸ್ಸಿಂಗೆ ತಿಳಿಹೇಳೆಕು. ಈ ರೀತಿಯಾಗಿ ಅಭ್ಯಾಸರೂಪವಾಗಿ ಮನಸ್ಸಿನ ಏಕಾಗ್ರಮಾಡುವ ಸಾಧನೆಯ ಮನಸ್ಸಿಂಗೆ ಅಭ್ಯಾಸ ಮಾಡಿರೆ ಈ ಮಾರ್ಗಲ್ಲಿ ಯೋಗಸಾಧನೆ ಎಂದೂ ಅಸಾಧ್ಯ ಆಗ. ಅನಗತ್ಯ ವಿಷಯಲ್ಲಿ ಮನಸ್ಸು ಹೇಂಗೆ ಸುಲಭವಾಗಿ ಸಿಲುಕಿಗೊಳ್ಳುತ್ತೋ ಅದರಿಂದ ತೊಲಗುಸಿ ಅದರಿಂದ ಶ್ರೇಯಸ್ಸಿಲ್ಲೆ ಹೇಳ್ವದರ ಮನದಟ್ಟುಮಾಡಿಗೊಂಡು ಅದರಲ್ಲಿ ವೈರಾಗ್ಯವ ತಂದುಗೊಂಡು ಆಧ್ಯಾತ್ಮಿಕ ವಿಷಯಲ್ಲಿ ನಿಜವಾದ ಸತ್ವ ಸತ್ಯ ಮತ್ತು ನಿತ್ಯಾನಂದ ಇದ್ದು ಹೇಳ್ವದರ ಅರ್ಥೈಸಿಗೊಂಡು ಮನಸ್ಸಿನ ಆಧ್ಯಾತ್ಮಿಕ ವಿಷಯದತ್ತ ಒಲುಮೆ ಇಪ್ಪ ಹಾಂಗೆ ನಿರಂತರ ಅಭ್ಯಾಸ ಮೂಲಕ ಮಾಡಿಗೊಳ್ಳೆಕು.

ಶ್ಲೋಕ

ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ ।
ವಶ್ಯಾತ್ಮನಾ ತು ಯತತಾ ಶಕ್ಯೋsವಾಪ್ತುಮುಪಾಯತಃ ॥೩೬॥ 

ಪದವಿಭಾಗ

ಅಸಂಯತ-ಆತ್ಮನಾ ಯೋಗಃ ದುಷ್ಪ್ರಾಪಃ ಇತಿ ಮೇ ಮತಿಃ । ವಶ್ಯ-ಆತ್ಮನಾ ತು ಯತತಾ ಶಕ್ಯಃ ಅವಾಪ್ತುಮ್ ಉಪಾಯತಃ ॥

ಅನ್ವಯ

ಅಸಂಯತ-ಆತ್ಮನಾ ಯೋಗಃ ದುಷ್ಪ್ರಾಪಃ, ವಶ್ಯ-ಆತ್ಮನಾ ಯತತಾ ತು ಉಪಾಯತಃ ಅವಾಪ್ತುಂ ಶಕ್ಯಃ ಇತಿ ಮೇ ಮತಿಃ ।

ಪ್ರತಿಪದಾರ್ಥ

ಅಸಂಯತ-ಆತ್ಮನಾ – ಸಂಯಮ ಇಲ್ಲದ್ದ ಮನಸ್ಸಿನವನಿಂದ, ಯೋಗಃ – ಆತ್ಮಸಾಕ್ಷಾತ್ಕಾರವು, ದುಷ್ಪ್ರಾಪಃ – ಪಡವಲೆ ಕಷ್ಟಕರವಾದ್ದು, ವಶ್ಯ-ಆತ್ಮನಾ – ನಿಯಂತ್ರಿತ ಮನಸ್ಸಿನವನಿಂದ,  ಯತತಾ – ಪ್ರಯತ್ನಿಸುವವಂದ, ತು – ಆದರೆ, ಉಪಾಯತಃ – ಯೋಗ್ಯ ವಿಧಾನಂಗಳಿಂದ, ಅವಾಪ್ತುಮ್ – ಪಡವಲೆ, ಶಕ್ಯಃ – ಸಾಧ್ಯವಾದ್ದು, ಇತಿ – ಹೀಂಗೇದು, ಮೇ – ಎನ್ನ, ಮತಿಃ – ಅಭಿಪ್ರಾಯವು.

ಅನ್ವಯಾರ್ಥ

ಮನಸಂಯಮ ಇಲ್ಲದ್ದವನಿಂದ ( ಮನಸ್ಸಿಂಗೆ ಕಡಿವಾಣ ಹಾಕಲೆ ಎಡಿಗಾಗದ್ದವನಿಂದ), ಆತ್ಮಸಾಕ್ಷಾತ್ಕಾರವ ಪಡವಲೆ ಕಷ್ಟವೇ. ಆದರೆ, ಆರ ಮನಸ್ಸು ನಿಯಂತ್ರಣಲ್ಲಿರುತ್ತೋ (ಮನಸ್ಸಿನ ನಿಯಂತ್ರಿಸಿಗೊಂಡವಂಗೆ) ಯೋಗ್ಯ ರೀತಿಯ ವಿಧಾನಂಗಳಿಂದ ಪ್ರಯತ್ನಿಸಿದರೆ ಯಶಸ್ಸು ಖಂಡಿತ ಹೇದು ಎನ್ನ ಅಭಿಪ್ರಾಯ.

ತಾತ್ಪರ್ಯ/ವಿವರಣೆ

ಆರು ಐಹಿಕ ಕೆಲಸಂಗಳಿಂದ ಮನಸ್ಸಿನ ದೂರ ಮಾಡ್ಳೆ ಸರಿಯಾದ ರೀತಿಯ ಅನುಸರುಸುತ್ತವಿಲ್ಲೆಯೋ ಅವಂಗೆ ಆತ್ಮಸಾಕ್ಷಾತ್ಕಾರಲ್ಲಿ ಯಶಸ್ಸು ಸಿಕ್ಕ. ಮನಸ್ಸಿನ ಐಹಿಕ ಸುಖಲ್ಲಿ ತೊಡಗಿಸಿಗೊಂಡು ಯೋಗಾಭ್ಯಾಸ ಪ್ರಯತ್ನುಸುವದು ಹೇದರೆ ಅದು ಕಿಚ್ಚಿಂಗೆ ನೀರೆರದು ಹೊತ್ತುಸಲೆ ಪ್ರಯತ್ನ ಪಡುವಂತೆ ಅಕ್ಕು. ಮನಸ್ಸಿನ ಸಂಯಮ ಇಲ್ಲದ್ದೆ ಯೋಗಾಭ್ಯಾಸ ಹೇಳ್ವದು ಆಧ್ಯಾತ್ಮಿಕ ಕಾರ್ಯ ಆವುತ್ತಿಲ್ಲೆ. ಪ್ರಾಪಂಚಿಕವಾದ ಶಾರೀರಿಕ ವ್ಯಾಯಮ ಹೇಳಿ ಮಾತ್ರ ಅಕ್ಕಷ್ಟೆ. ಆದರೆ ಆತ್ಮಸಾಕ್ಷಾತ್ಕಾರದ ಮಟ್ಟಿಂಗೆ ಅದು ನಿಷ್ಪ್ರಯೋಜಕ. ಹಾಂಗಾಗಿ ಭಗವಂತನ ಆಧ್ಯಾತ್ಮಿಕ ಪ್ರೀತಿಪೂರ್ವಕ ಸೇವೆಲಿ ಮನಸ್ಸಿನ ನಿರಂತರವಾಗಿ ತೊಡಗುಸಲೆ ಅದರ ಅದಕ್ಕೆ ನಿಯಂತ್ರಿಸೆಕು. ಕೃಷ್ಣಪ್ರಜ್ಞೆಲಿ ತೊಡಗದ್ದಿಪ್ಪ ಮನುಷ್ಯ° ಒಂದೇ ಸರ್ತಿಲಿ ಹತೋಟಿಯ ತಂದುಗೊಂಬಲೆ ಸಾಧ್ಯನಾಗ°. ಆದರೆ ಕೃಷ್ಣಪ್ರಜ್ಞೆ ಅನುಸಂಧಾನ ಮಾಡಿಗೊಂಡಿಪ್ಪವಂಗೆ ವಿಶೇಷ ಪ್ರಯತ್ನ ಇಲ್ಲದ್ದೆ ಯೋಗಾಭ್ಯಾಸದ ಪ್ರಯೋಜನವ ಪಡಕ್ಕೊಂಬಲೆಡಿಗು. ಆದರೆ ಕೃಷ್ಣಪ್ರಜ್ಞೆ ಇಲ್ಲದ್ದೆ ಯಾವ ಯೋಗಾಭ್ಯಾಸಿಯೂ ಯಶಸ್ಸಿನ ಕಾಂಬಲೆ ಅಸಾಧ್ಯ. ಆರು ತನ್ನ ಸೋಮಾರಿತನವ ಬಿಟ್ಟು, ಲೌಕಿಕ ಅಭಿಲಾಷೆಯ ಬಿಟ್ಟು ಈ ರೀತಿ ಪ್ರಯತ್ನ ಪಡುತ್ತವಿಲ್ಲೆಯೋ ಅಂತವಕ್ಕೆ ಯೋಗಾಭ್ಯಾಸ ಎಂತ ಪ್ರಯೋಜನಕ್ಕೂ ಬಾರ. ಅವಕ್ಕೆ ಸಮಾಧಿ ಎಂದೂ ದಕ್ಕ. ವೈರಾಗ್ಯ ಮತ್ತೆ ಅಭ್ಯಾಸ ಹೇಳ್ವ ಈ ಉಪಾಯಂದ ಮನಸ್ಸಿನ ಮಣಿಸಿ ನವಗೆ ಬೇಕಾದಾಂಗೆ ಆ ಮನಸ್ಸು ಕಾರ್ಯಗತ ಆವ್ತಾಂಗೆ ಮಾಡೆಕು. ಹೀಂಗೆ ಮಾಡಿಯಪ್ಪಗ ಸಮಾಧಿಯ ಸಾಧುಸಲೆ ಎಡಿಗು ಹೇಳಿ ಭಗವಂತನ ಅಭಿಪ್ರಾಯ.

ಶ್ಲೋಕ

ಅರ್ಜುನ ಉವಾಚ
ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ ।
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ॥೩೭॥

ಪದವಿಭಾಗ

ಅರ್ಜುನಃ ಉವಾಚ

ಅಯತಿಃ ಶ್ರದ್ಧಯಾ ಉಪೇತಃ ಯೋಗಾತ್ ಚಲಿತ-ಮಾನಸಃ । ಅಪ್ರಾಪ್ಯ ಯೋಗ-ಸಂಸಿದ್ಧಿಮ್ ಕಾಮ್ ಗತಿಮ್ ಕೃಷ್ಣ ಗಚ್ಛತಿ ॥

ಅನ್ವಯ

ಅರ್ಜುನಃ ಉವಾಚ –

ಹೇ ಕೃಷ್ಣ!, ಶ್ರದ್ಧಯಾ ಉಪೇತಃ ಅಯತಿಃ, ಯೋಗಾತ್ ಚಲಿತ-ಮಾನಸಃ, ಯೋಗ-ಸಂಸಿದ್ಧಿಮ್ ಅಪ್ರಾಪ್ಯ ಕಾಂ ಗತಿಂ ಗಚ್ಛತಿ?

ಪ್ರತಿಪದಾರ್ಥ

ಅರ್ಜುನಃ ಉವಾಚ – ಅರ್ಜುನ° ಹೇಳಿದ°, ಹೇ ಕೃಷ್ಣ! – ಏ ಕೃಷ್ಣ!, ಶ್ರದ್ಧಯಾ ಉಪೇತಃ – ಶ್ರದ್ಧೆಂದ ಉಪಾಸನೆಮಾಡಿದಂತಹ, ಅಯತಿಃ – ಅಯಶ್ವಿಯಾದ ಆಧ್ಯಾತ್ಮಿಕವಾದಿ, ಯೋಗಾತ್ – ಯೋಗಸಂಬಂಧಂದ, ಚಲಿತ-ಮಾನಸಃ – ದಾರಿತಪ್ಪಿದ ಮನಸ್ಸುಳ್ಳ, ಯೋಗ-ಸಂಸಿದ್ಧಿಮ್ – ಯೋಗದ ಅತ್ತ್ಯುನ್ನತ ಪರಿಪೂರ್ಣತೆಯ, ಕಾಮ್ ಗತಿಮ್ – ಯಾವ ಗತಿಯ, ಗಚ್ಛತಿ – ಹೊಂದುತ್ತ° ?

ಅನ್ವಯಾರ್ಥ

ಅರ್ಜುನ° ಹೇಳಿದ°, ಏ ಕೃಷ್ಣ!, ಸುರುವಿಂಗೆ ಶ್ರದ್ಧೆಂದ ಆತ್ಮಸಾಕ್ಷಾತ್ಕಾರದ ಸಾಧನೆಯ ಸ್ವೀಕರುಸಿ, ಮತ್ತೆ ಅರ್ಧಲ್ಲಿ ಪ್ರಾಪಂಚಿಕ ಮನೋಧರ್ಮಂದ ಪ್ರಯತ್ನವ ನಿಲ್ಲಿಸಿ ಯೋಗ ಸಂಸಿದ್ಧಿಯ ಪಡೆಯ ಎಡಿಗಾಗದ್ದವನ ಗತಿ ಎಂತರ?

ತಾತ್ಪರ್ಯ/ವಿವರಣೆ

ಆತ್ಮಸಾಕ್ಷಾತ್ಕಾರದ ಅಥವಾ ಯೋಗದ ಮಾರ್ಗವ ಈ ವರೇಂಗೆ ಹೇಳಿದ್ದದು ಭಗವಂತ°. ಜೀವಿಯು (ಜೀವಾತ್ಮ) ಈ  ಜಡದೇಹದ್ದಲ್ಲ. ಆ ಜೀವಾತ್ಮ ದೇಹಲ್ಲಿದ್ದುಗೊಂಡು ದೇಹ ಇಪ್ಪನ್ನಾರ ಬೇರೆಯೇ ಆಗಿ ದೇಹದೊಳ ಇಪ್ಪದು. ಶಾಶ್ವತ ಜೀವನ, ಆನಂದ ಮತ್ತೆ ಜ್ಞಾನಲ್ಲಿಪ್ಪ ಅವನ ಸುಖ ಅಲೌಕಿಕವಾದ್ದು. ಅದು ಶರೀರ ಮತ್ತೆ ಮನಸ್ಸಿಂಗೆ ಅತೀತವಾದ್ದು. ಈ ಜ್ಞಾನವೇ ಆತ್ಮಸಾಕ್ಷಾತ್ಕಾರದ ಮೂಲತತ್ವ. ಆತ್ಮಸಾಕ್ಷಾತ್ಕಾರವ ಜ್ಞಾನಮಾರ್ಗಂದಲೂ, ಅಷ್ಟಾಂಗ ಯೋಗ ಪದ್ಧತಿಯ ಅಭ್ಯಾಸಂದಲೂ ಅಥವಾ ಭಕ್ತಿಯೋಗಂದಲೂ ಸಾಧುಸಲೆ ಜನಂಗೊ ಪ್ರಯತ್ನಿಸುತ್ತವು. ಈ ಒಂದೊಂದು ಪ್ರಕ್ರಿಯೆಲಿಯೂ ಮನುಷ್ಯ° ಹಲವು ವಿಷಯಂಗಳ ಅರ್ಥಮಾಡಿಗೊಳ್ಳೆಕು. ಜೀವಿಯ ಸಹಜ ಸ್ವರೂಪ, ಭಗವಂತನ ಹತ್ರೆ ಆ ಜೀವಿಗೆ (ಜೀವಾತ್ಮಂಗೆ) ಇಪ್ಪ ಸಂಬಂಧ ಮತ್ತೆ ಕಳದುಹೋದ ಕೊಂಡಿಯ ಮತ್ತೆ ಪಡಕ್ಕೊಂಡು ಕೃಷ್ಣಪ್ರಜ್ಞೆಯ ಅತ್ಯುನ್ನತ ಹಂತವ ಸಾಧುಸಲೆ ಅಗತ್ಯ ಕರ್ಮಂಗೊ – ಇವುಗಳ ತಿಳುಕ್ಕೊಂಬಲೇ ಬೇಕು. ಮೇಗೆ ಹೇಳಿಪ್ಪ ಮೂರು ರೀತಿಗಳಲ್ಲಿ ಯಾವುದಾದರೊಂದರ ಸರಿಯಾಗಿ ಅನುಸರಿಸಿದರೂ ಶೀಘ್ರವಾಗಿಯೋ ಮೆಲ್ಲಂಗೆಯೋ ಅಂತೂ ಕಡೇಂಗೂ ಆ ಅಂತಿಮ ಪರಮ ಗುರಿಯ ಮುಟ್ಟುವದು ಖಂಡಿತ. ಇದರ ಭಗವಂತ° ಎರಡ್ನೇ ಅಧ್ಯಾಯಲ್ಲೇ ಹೇಳಿದ್ದ°. ಆಧ್ಯಾತ್ಮಿಕ ಮಾರ್ಗಲ್ಲಿ ರಜ ಪ್ರಯತ್ನ ಪಟ್ಟರೂ ಬಿಡುಗಡೆಯ ಭರವಸೆ ಇದ್ದು. ಆತ್ಮಸಾಕ್ಷಾತ್ಕಾರದ ಮಾರ್ಗದ ಮೂರು ವಿಧಾನಂಗಳಲ್ಲಿ ಈ ಯುಗಕ್ಕೆ ಭಕ್ತಿಯೋಗವೇ ವಿಶೇಷವಾಗಿ ಸೂಕ್ತವಾದ್ದು ಹೇಳಿ ಭಗವಂತ ಆಗಳೇ ಹೇಳಿದ್ದ°. ಎಂತಕೆ ಹೇಳಿರೆ ಭಗವಂತನ ಸಾಕ್ಷಾತ್ಕಾರಕ್ಕೆ ಇದು ಅತ್ಯಂತ ನೇರವಾದ ಮಾರ್ಗ. ಇದರ ಇನ್ನೂ ಖಚಿತಮಾಡ್ಳೆ ಅರ್ಜುನ ಭಗವಂತನ ಹತ್ರೆ ಆ ಮಾತುಗಳ ದೃಢಪಡುಸಲೆ ಬೇಕಾಗಿ ಇಲ್ಲಿ ಅದರ ಕೇಳುತ್ತ° – ಒಬ್ಬ ಮನುಷ್ಯ° ಆತ್ಮಸಾಕ್ಷಾತ್ಕಾರದ ಮಾರ್ಗವ ಮನಃಪೂರ್ತಿಯಾಗಿ ಒಪ್ಪಿಗೊಂಬಲಕ್ಕು.. ಸರಿ. ಆದರೆ ಈ ಯುಗಲ್ಲಿ ಜ್ಞಾನವ ಬೆಳೆಶಿಗೊಂಬದು ಮತ್ತೆ ಅಷ್ಟಾಂಗ ಯೋಗಪದ್ಧತಿಯ ಅಭ್ಯಾಸಮಾಡುವದು ಬಹುಕಷ್ಟ.. ಹಾಂಗಾಗಿ ಇದಕ್ಕೆ ಬೇಕಾಗಿ ಭಗವಂತ° ಹೇಳಿದಾಂಗೆ ಸತತ ಪರಿಶ್ರಮ ಮಾಡಿ ಸುರುಮಾಡಿರೂ ಐಹಿಕ ಯಾವುದೋ ಅಲ್ಲ ಅನೇಕ ಕಾರಣಂಗಳಿಂದ ಮನುಷ್ಯ° ವಿಫಲನಪ್ಪ ಸಾಧ್ಯತೆ ಇದ್ದು. ನಡೆತ್ತಾ ಇಪ್ಪ ಹಾದಿಲಿ ಯಾವುದೋ ಕಾರಣಂದ ಮನಸ್ಸು ಸಹಕಾರ ಕೊಡದ್ದೆ ಇಪ್ಪಲೂ ಸಾಕು. ಆಧ್ಯಾತ್ಮಿಕ ಮಾರ್ಗಲ್ಲಿ ನಡವದು ಹೇಳಿರೆ ಮಾಯಾಶಕ್ತಿಯ ಒಟ್ಟಿಂಗೆ ಸೆಣೆಸಾಡಿಗೊಂಡು ಮುಂದೆ ಹೋವುತ್ತಾಂಗೇ. ಮನುಷ್ಯ° ಆ ಮಾಯಾಶಕ್ತಿಯ ಗೆಲ್ಲುಲೆ ವಾ ತಪ್ಪಿಸಿಗೊಂಬಲೆ ಪ್ರಯತ್ನಪಡುವಾಗೆಲ್ಲ  ಏನೇನೋ ಆಮಿಷಂಗೊ ಮುಂದೋರಿ ಚಿತ್ತ ವಿಕಲ್ಪ / ಚಂಚಲವಾಗಿ ದಾರಿ ಬಿಟ್ಟು ವಿಮುಖನಪ್ಪ ಸಾಧ್ಯತೆಗಳೂ ಇದ್ದು. ಐಹಿಕಗುಣಂಗೊಕ್ಕೆ ಬದ್ಧವಾದ ಆತ್ಮವು ಆಗಲೇ ಆಧ್ಯಾತ್ಮಿಕ ಶಿಸ್ತುಗಳ ಆಚರುಸುವಾಗಲೂ ಮತ್ತೆ ಆಕರ್ಷಣೆಗೆ ಸಿಕ್ಕಿಬೇಳುವ ಸಾಧ್ಯತೆ ಇದ್ದೇ ಇದ್ದು. ಇದನ್ನೇ “ಯೋಗಾತ್-ಚಲಿತ-ಮಾನಸಃ” ಹೇಳುವದು. ಆಧ್ಯಾತ್ಮಿಕ ಮಾರ್ಗಂದ ವಿಮುಖನಪ್ಪದು (ದೂರ ಅಪ್ಪದು) ಹೇಳಿ ಅರ್ಥ. ಹೀಂಗೆ ಆತ್ಮಸಾಕ್ಷಾತ್ಕಾರದ ಮಾರ್ಗಲ್ಲಿ ತೊಡಗಿ ಅಂತಿಮ ಗುರಿಯ ತಲುಪಲೆಡಿಗಾಗದ್ದೆ ಹೋದರೆ, ಅರ್ಧಲ್ಲಿ ಬಿಟ್ಟುಬಿಟ್ರೆ ಅದರ ಪರಿಣಾಮ ಎಂತರ ಹೇಳಿ ಭಗವಂತನ ಹತ್ರೆ ಅರ್ಜುನನ ಸಂದೇಹ. ಯೊಗದ ಸಾಧನೆಲಿ ಸಾಧನೆ ತೊಡಗಿದ, ಧ್ಯಾನ ಮಾಡಿಗೊಂಡಿದ್ದವ, ಪ್ರಯತ್ನ ಮುಂದುವರುಸಿಗೊಂಡು ಇತ್ತಿದ್ದವ ಒಂದು ಹಂತದ ವರೇಂಗೆ ಶ್ರದ್ಧೆಂದ, ಏಕಾಗ್ರತೆಂದ ಪ್ರಯತ್ನಿಸಿ ಯಾವುದೋ ಕಾರಣಂದ ಪೂರ್ಣ ಗುರಿ ತಲುಪಲೆ ಎಡಿಗಾಯ್ದಿಲ್ಲೇ ಹೇಳಿ ಆದರೆ ಅಂತವನ ಗತಿ ಎಂತರ? ಇಂತವಕ್ಕೆ ಸಿದ್ಧಿ ಆದರೂ ಹೇಂಗೆ?

ಶ್ಲೋಕ

ಕಚ್ಚಿನ್ನೋಭಯವಿಭ್ರಷ್ಟಃ ಛಿನ್ನಾಭ್ರಮಿವ ನಶ್ಯತಿ ।
ಅಪ್ರತಿಷ್ಠೋ ಮಾಹಾಬಾಹೋ ವಿಮೋಢೋ ಬ್ರಹ್ಮಣಃ ಪಥಿ ॥೩೮॥

ಪದವಿಭಾಗ

ಕಚ್ಚಿತ್ ನ ಉಭಯ-ವಿಭ್ರಷ್ಟಃ ಛಿನ್ನ-ಅಭ್ರಮ್ ಇವ ನಶ್ಯತಿ । ಅಪ್ರತಿಷ್ಠಃ ಮಹಾಬಾಹೋ ವಿಮೂಢಃ ಬ್ರಹ್ಮಣಃ ಪಥಿ ॥

ಅನ್ವಯ

ಹೇ ಮಹಾಬಾಹೋ!, ಕಚ್ಚಿತ್ ಬ್ರಹ್ಮಣಃ ಪಥಿ ಅಪ್ರತಿಷ್ಠಃ ವಿಮೂಢಃ ಉಭಯ-ವಿಭ್ರಷ್ಟಃ ಛಿನ್ನ-ಅಭ್ರಮ್ ಇವ  ನ ನಶ್ಯತಿ?

ಪ್ರತಿಪದಾರ್ಥ

ಹೇ ಮಹಾಬಾಹೋ! – ಏ ಮಹಾಬಾಹುವಾದ ಕೃಷ್ನನೇ!, ಕಚ್ಚಿತ್ – ಒಂದುವೇಳೆ, ಬ್ರಹ್ಮಣಃ ಪಥಿ – ದಿವ್ಯತೆಯ ಮಾರ್ಗಲ್ಲಿ, ಅಪ್ರತಿಷ್ಠಃ – ಯಾವುದೇ ಸ್ಥಾನ ಇಲ್ಲದ್ದ, ವಿಮೂಢಃ – ದಿಗ್ಭ್ರಮಿತನಾಗಿ, ಉಭಯ-ವಿಭ್ರಷ್ಟಃ – ಎರಡರಿಂದಲೂ ವಿಚಲಿತನಾಗಿ, ಛಿನ್ನ-ಅಭ್ರಮ್ ಇವ – ಹರುದುಹೋದ ಮೋಡದ ಹಾಂಗೆ, ನ ನಶ್ಯತಿ? – ನಾಶ ಆವುತ್ತಿಲ್ಲೆಯೋ?.

ಅನ್ವಯಾರ್ಥ

ಮಹಾಬಾಹುವಾದ ಕೃಷ್ಣ!, ಆಧ್ಯಾತ್ಮಿಕ ಪಥಂದ ದಿಗ್ಭ್ರಮೆಗೊಂಡು ದೂರ ಆದವ° ಆಧ್ಯಾತ್ಮಿಕ ಮತ್ತು ಐಹಿಕ ಯಶಸ್ಸು ಎರಡರಿಂದಲಲೂ ಭ್ರಷ್ಟನಾಗಿ, ಯಾವ ಲೋಕಲ್ಲಿಯೂ ಜಾಗೆ ಇಲ್ಲದ್ದೆ ತುಂಡುತುಂಡಾದ ಮೋಡದ ಹಾಂಗೆ ನಾಶ ಆವ್ತ ಹಾಂಗೆ ಆವುತ್ತಿಲ್ಲೆಯೋ?

ತಾತ್ಪರ್ಯ/ವಿವರಣೆ

ಪ್ರಗತಿಗೆ ಎರಡು ಮಾರ್ಗಂಗೊ ಇದ್ದು. ಪ್ರಾಪಂಚಿಕವಾದಿಗೊಕ್ಕೆ ಆಧ್ಯಾತ್ಮಿಕಲ್ಲಿ ಆಸಕ್ತಿ ಇರ್ತಿಲ್ಲೆ. ಆರ್ಥಿಕ ಬೆಳವಣಿಗೆ ಮೂಲಕ ಪ್ರಾಪಂಚಿಕ ಪ್ರಗತಿ ಅಥವಾ ಸೂಕ್ತವಾದ ಕೆಲಸಂದ ಉನ್ನತ ಹುದ್ದಗೆ ಏರುವದು. ಆದರೆ ಯೋಗಮಾರ್ಗವ ಒಪ್ಪಿಕೊಂಡವಂಗೆ ಎಲ್ಲ ಐಹಿಕ ಚಟುವಟಿಕೆಗಳ ನಿಲ್ಲುಸೆಕು, ಮತ್ತೆ , ‘ಸುಖ’ ಹೇಳಿ ಹೇಳಿಗೊಂಬ ಎಲ್ಲ ಪ್ರಾಪಂಚಿಕ ಸುಖಭೋಗಂಗಳ ತ್ಯಾಗ ಮಾಡೆಕು. ಉತ್ಕಾಂಕ್ಷೆಯಿಪ್ಪ ಆಧ್ಯಾತ್ಮಿಕವಾದಿ ತನ್ನ ಮಾರ್ಗಲ್ಲಿ ವಿಫಲ° ಆದ° ಹೇಳಿ ಆದರೆ ಅವಂಗೆ ಎರಡು ಮಾರ್ಗಲ್ಲಿಯೂ ಸೋಲು ಹೇಳಿ ಆತು. ಅವಂಗೆ ಐಹಿಕ ಸುಖದ ಸವಿಯೂ ಇಲ್ಲೆ, ಆಧ್ಯಾತ್ಮಿಕ ಯಶಸ್ಸಿನ ಸೀವೂ ಇಲ್ಲೆ. ಅವಂಗೆ ಒಂದು ಸ್ಥಾನ ಹೇದು ಇಲ್ಲದ್ದ ಹಾಂಗೆ ಆಗಿಬಿಡ್ತು. ಆಕಾಶಲ್ಲಿ ತುಂಡುತುಂಡಾದ ಮೋಡದ ಹಾಂಗೆ. ಆಕಾಶಲ್ಲಿ ಕೆಲವೊಂದರಿ ಸಣ್ಣ ಸಣ್ಣ ಮೋಡಂಗೊ ಕಾಣಿಸಿಗೊಳ್ತು. ಅದು ಕ್ರಮೇಣ ದೊಡ್ಡಮೋಡದ ಒಟ್ಟಿಂಗೆ ಸೇರಿಗೊಳ್ತು. ಆದರೆ, ಕೆಲವೊಂದರಿ ಗಾಳಿಯ ಪ್ರಭಾವಕ್ಕೆ ತುತ್ತಾಗಿ ಈಚ ಸಣ್ಣ ಮೋಡಂಗಳ ಒಟ್ಟಿಂಗೂ ಸೇರ್ಲೆ ಎಡಿಗಾಗದ್ದೆ, ಆಚ ದೊಡ್ಡಮೋಡಂಗಳ ಒಟ್ಟಿಂಗೂ ಸೇರ್ಲೆ ಎಡಿಗಾಗದ್ದೆ ಹರುದು ಚಾಂದ್ರಾಣ ಆವ್ತು, ವಿಶಾಲ ಆಕಾಶಲ್ಲಿ ಅಸ್ತಿತ್ವವ ಕಳಕ್ಕೊಳ್ಳುತ್ತು. ಹಾಂಗೆ ಇದುದೆ. ಆಧ್ಯಾತ್ಮಿಕ ಸಾಧನೆಯ ಅರ್ಧಲ್ಲಿ ಬಿಟ್ಟವನ ಗತಿಯೂ ಹಾಂಗೆ ಅತ್ತೆ ಅದೂ ಇಲ್ಲೆ ಇತ್ತೆ ಇದೂ (ಐಹಿಕವೂ ಇಲ್ಲೆ) ಇಲ್ಲೆ ಹೇಳಿ ಬೆಗುಡು ಸ್ಥಿತಿ. ಎರಡು ಕಡೆಲಿಯೂ ಅಸ್ತಿತ್ವವ ಕಳಕ್ಕೊಳ್ಳೆಕ್ಕಾವ್ತಿಲ್ಯೋ ಹೇದು ಅರ್ಜುನನ ಜಿಜ್ಞಾಸೆ. “ಯೋಗದ ಸಾಧನೆಲಿ ಸಾಧನೆ ಮಾಡಿದ, ಧ್ಯಾನ ಮಾಡುವುದಕ್ಕೂ ಪ್ರಯತ್ನ ಮಾಡಿ ಕಡೆಂಗೆ ಎಡಿಲಿ ಒಂದು ಅರ್ಧ ಹಂತಲ್ಲೇ ಕೈಬಿಟ್ರೆ, ಆಕಾಶಲ್ಲಿ ಮೂಡಿದ ಮೋಡ ಗಾಳಿಯ ರಭಸಕ್ಕೆ ತುತ್ತಾಗಿ ಛಿದ್ರವಾಗಿ  ಇತ್ಲಾಗಿ ಮಳೆಯೂ ಇಲ್ಲದ್ದೆ, ಅತ್ಲಾಗಿ ನೆರಳೂ ಕೊಡದ್ದೆ ಅಸ್ತಿತ್ವವನ್ನೆ ಕಳಕ್ಕೊಂಡ ಹಾಂಗೆ ಆವ್ತಿಲ್ಯೋ ಕೃಷ್ಣ!, ಯಾವುದಕ್ಕೂ ಉಪಯೋಗ ಇಲ್ಲದ್ದೆ ವ್ಯರ್ಥವಾವ್ತಿಲ್ಯೋ ಅವರ ಬದುಕು ಜ್ಞಾನಬಲ ಇಚ್ಛಾಸ್ವರೂಪನಾದ (ಮಬಾಬಾಹುಃ), ಅಂತಹ ಉಭಯ-ವಿಭ್ರಷ್ಟರ ನೀನು ಎಂತ ಮಾಡುತ್ತೆ ಕೃಷ್ಣ!” ಹೇಳಿ ಭಗವಂತನ ಹತ್ರೆ ಕೇಳುತ್ತ° ಇಲ್ಲಿ ಅರ್ಜುನ°.

ಶ್ಲೋಕ

ಏತನ್ಮೇ ಸಂಶಯಂ ಕೃಷ್ಣ ಛೇತ್ತುಮರ್ಹಸ್ಯಶೇಷತಃ ।
ತ್ವದನ್ಯಃ ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪಪದ್ಯತೇ ॥೩೯॥

ಪದವಿಭಾಗ

ಏತತ್ ಮೇ ಸಂಶಯಮ್ ಕೃಷ್ಣ ಛೇತ್ತುಮ್ ಅರ್ಹಸಿ ಅಶೇಷತಃ । ತ್ವತ್ ಅನ್ಯಃ ಸಂಶಯಸ್ಯ ಅಸ್ಯ ಛೇತ್ತಾ ನ ಹಿ ಉಪಪದ್ಯತೇ ॥

ಅನ್ವಯ

ಹೇ ಕೃಷ್ಣ! ಮೇ ಏತತ್ ಸಂಶಯಮ್ ಅಶೇಷತಃ ಛೇತ್ತುಮ್ ಅರ್ಹಸಿ । ತ್ವತ್ ಅನ್ಯಃ ಅಸ್ಯ ಸಂಶಯಸ್ಯ ಛೇತ್ತಾ ನ ಉಪಪದ್ಯತೇ ಹಿ ।

ಪ್ರತಿಪದಾರ್ಥ

ಹೇ ಕೃಷ್ಣ! – ಏ ಕೃಷ್ಣ!, ಮೇ – ಎನ್ನ, ಏತತ್ – ಈ, ಸಂಶಯಮ್ – ಸಂಶಯವ, ಛೇತ್ತುಮ್ – ನಿವಾರಿಸುಲೆ, ಅರ್ಹಸಿ – ನಿನ್ನ ಪ್ರಾರ್ಥಿಸುತ್ತೆ.  ತತ್ವ ಅನ್ಯಃ – ನಿನ್ನ ಬಿಟ್ಟು ಇನ್ನೊಬ್ಬ° (ನಿನ್ನ ಹೊರತು ಬೇರೊಬ್ಬ°) , ಅಸ್ಯ ಸಂಶಯಸ್ಯ – ಈ ಸಂಶಯವ, ಛೇತ್ತಾ – ನಿವಾರಕ°, ನ ಉಪಪದ್ಯತೇ – ಎಂದಿಂಗೂ ಸಿಕ್ಕ°, ಹಿ – ಖಂಡಿತವಾಗಿಯೂ.

ಅನ್ವಯಾರ್ಥ    

ಏ ಕೃಷ್ಣ!, ಇದು ಎನ್ನ ಸಂದೇಹ. ಇದರ (ಈ ಎನ್ನ ಸಂಶಯವ) ಸಂಪೂರ್ಣವಾಗಿ ಹೋಗಲಾಡುಸೆಕು ಹೇದು ನಿನ್ನಲ್ಲಿ ಬೇಡಿಗೊಳ್ತ ಇದ್ದೆ. ಖಂಡಿತವಾಗಿಯೂ ನಿನ್ನ ಬಿಟ್ಟು ಈ ಸಂದೇಹವ ನಿವಾರುಸುವವ ಬೇರೊಬ್ಬ ಆರೂ ಇಲ್ಲೆ. 

ತಾತ್ಪರ್ಯ/ವಿವರಣೆ

ಭೂತ, ವರ್ತಮಾನ ಮತ್ತೆ ಭವಿಷ್ಯತ್’ಗಳ ಪರಿಪೂರ್ಣ ಜ್ಞಾನ ಇಪ್ಪವ° ಕೃಷ್ಣ°. ಅವಂಗೆ ಸಮಾನರು ಆರೂ ಬೇರೆ ಇನ್ನೊಬ್ಬ° ಇಲ್ಲೆ. ಐಹಿಕ ಪ್ರಕೃತಿಗೆ ಸಂಪೂರ್ಣ ವಿಧೇಯರಾಗಿಪ್ಪ ಯಾವ ಮಹಾಋಷಿಗಳೂ ವಾ ತತ್ವಜ್ಞಾನಿಗಳೂ ಕೂಡ ಭಗವಂತಂಗೆ ಸಮಾನನಪ್ಪಲೆಡಿಯ. ಭಗವಂತ ಎಲ್ಲ ವಿಷಯಂಗಳಲ್ಲಿಯೂ ಇಪ್ಪವ°, ಎಲ್ಲ ವಿಷಯಂಗಳನ್ನೂ ಸಂಪೂರ್ಣವಾಗಿ ತಿಳುದವ°. ಹಾಂಗಾಗಿ ಎಲ್ಲ ಸಂದೇಹಂಗೊಕ್ಕೆ ಪರಿಹಾರ ಹೇಳ್ಳೆ ಅವ° ಒಬ್ಬನೇ ಪರಿಪೂರ್ಣ ಸಮರ್ಥ°. ಅವನೇ ತೀರ್ಮಾನವೇ ಅಂತಿಮ, ಸಂಪೂರ್ಣ ಸತ್ಯ.  ಹಾಂಗಾಗಿ ಅರ್ಜುನ° ಇಲ್ಲಿ ಭಗವಂತನ ಹತ್ರೆ ‘ಎನ್ನ ಈ ಗೊಂದಲಂಗಳ ನೀನೇ ಪರಿಹರಿಸಿಕೊಡೆಕು’ ಹೇದು ವಿನೀತನಾಗಿ ಬೇಡಿಗೊಳ್ತ°.

ಮುಂದೆ ಎಂತರ..?    ಬಪ್ಪವಾರ ನೋಡುವೋ°

.. ಮುಂದುವರಿತ್ತು.

 

ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 06 – SHLOKAS 31 – 39 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

One thought on “ಶ್ರೀಮದ್ಭಗವದ್ಗೀತಾ – ಷಷ್ಠೋsಧ್ಯಾಯಃ – ಆತ್ಮಸಂಯಮಯೋಗಃ (ಧ್ಯಾನಯೋಗಃ) – ಶ್ಲೋಕಂಗೊ 31 – 39

  1. ಈ ಕಂತು ಅರ್ಜುನನ ಒಂದು ಅತಿ ತಾರ್ಕಿಕವಾದ ಪ್ರಶ್ನೆಲಿ ನಿಂದಿದು.ಮುಂದೆ ನೋಡುವೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×