ಶ್ರೀಮದ್ಭಗವದ್ಗೀತಾ – ಪಂಚಮೋsಧ್ಯಾಯಃ – ಕರ್ಮಸಂನ್ಯಾಸಯೋಗಃ – ಶ್ಲೋಕಂಗೊ 21 – 29

July 12, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ಲೋಕ

ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ ಸುಖಮ್ ।
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯ್ಯಮಶ್ನುತೇ ॥೨೧॥

ಪದವಿಭಾಗ

ಬಾಹ್ಯ-ಸ್ಪರ್ಶೇಷು ಅಸಕ್ತ-ಆತ್ಮಾ ವಿಂದತಿ ಆತ್ಮನಿ ಯತ್ ಸುಖಮ್ । ಸಃ ಬ್ರಹ್ಮ-ಯೋಗ-ಯುಕ್ತ-ಆತ್ಮಾ ಸುಖಮ್ ಅಕ್ಷಯ್ಯಮ್ ಅಶ್ನುತೇ ॥

ಅನ್ವಯ

ಬಾಹ್ಯ-ಸ್ಪರ್ಶೇಷು ಅಸಕ್ತ-ಆತ್ಮಾ, ಆತ್ಮನಿ ಯತ್ ಸುಖಂ ವಿಂದತಿ, ಸಃ ಬ್ರಹ್ಮ-ಯೋಗ-ಯುಕ್ತಾತ್ಮಾ ಅಕ್ಷಯ್ಯಂ ಸುಖಮ್ ಅಶ್ನುತೇ ॥

ಪ್ರತಿಪದಾರ್ಥ

ಬಾಹ್ಯ-ಸ್ಪರ್ಶೇಷು – ಬಾಹ್ಯೇಂದ್ರಿಯಸ್ಪರ್ಶಸುಖಲ್ಲಿ, ಅಸಕ್ತ-ಆತ್ಮಾ –  ಆಸಕ್ತನಲ್ಲದ್ದವ°, ಆತ್ಮನಿ – ಆತ್ಮಲ್ಲಿ, ಯತ್ ಸುಖಮ್ – ಯಾವ ಸುಖವ, ವಿಂದತಿ – ಅನುಭೋಗುಸುತ್ತ°,  ಸಃ – ಅವ°, ಬ್ರಹ್ಮ-ಯೋಗ-ಯುಕ್ತ-ಆತ್ಮಾ – ಪರಬ್ರಹ್ಮನಲ್ಲಿ ಏಕಾಗ್ರತೆ ಹೊಂದಿಪ್ಪವ°, ಅಕ್ಷಯ್ಯಮ್ ಸುಖಮ್ – ಅಪರಿಮಿತವಾದ (ಕ್ಷಯವಾಗದ, ಅಕ್ಷಯವಾದ) ಸುಖವ,  ಅಶ್ನುತೇ – ಸವಿಯುತ್ತ°.

ಅನ್ವಯಾರ್ಥ

(ಹೀಂಗೆ ಮುಕ್ತನಾದ ಮನುಷ್ಯಂಗೆ) ಐಹಿಕ (ಬಾಹ್ಯ) ಇಂದ್ರಿಯ ಸುಖದ ಆಕರ್ಷಣೆ (ಆಸಕ್ತಿ) ಇಲ್ಲೆ. ಅವ° ಯೇವತ್ತೂ ಅಂತರ್ಯಲ್ಲಿ ಭಗವಂತನ ಸುಖವ ಅನುಭವಿಸ್ಯೊಂಡು ಸಮಾಧಿಸ್ಥಿತಿಲಿರುತ್ತ°. ಈ ರೀತಿಲಿ ಆತ್ಮಸಾಕ್ಷಾತ್ಕಾರ ಪಡದ ಮನುಷ್ಯ° ಪರಮಸತ್ಯಲ್ಲಿ ಮಗ್ನನಾಗಿಪ್ಪದರಿಂದ ಅಪರಿಮಿತಾನಂದವ (ಅಕ್ಷಯಾನಂದವ, ಅಮಿತಾನಂದವ) ಸವಿಯುತ್ತ°.

ತಾತ್ಪರ್ಯ/ವಿವರಣೆ

ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ಭಗವಂತನ ಪ್ರೇಮಪೂರ್ವಕ ಸೇವಲಿ ಎಷ್ಟು ಮೈಮರಕ್ಕೊಂಡಿರುತ್ತ° ಹೇಳಿರೆ, ಅವಂಗೆ ಐಹಿಕ ಇಂದ್ರಿಯ ಸುಖಲ್ಲಿ ಆಸಕ್ತಿಯೇ ಇರುತ್ತಿಲ್ಲೆ. ದೈಹಿಕ ಸುಖಾಪೇಕ್ಷಿಗೊಕ್ಕೆ ಕಾಮ ಮತ್ತು ಇಂದ್ರಿಯ ಸುಖಲ್ಲಿಯೇ ಆಸಕ್ತಿ. ಇಡೀ ಪ್ರಪಂಚ ಅದರ ಮೋಡಿಗೆ ಸಿಲುಕಿಬೀಳುತ್ತು. ಪ್ರಾಪಂಚಿಕನಾದವ° ಈ ಪ್ರೇರಣೆಂದಲಾಗಿ ಆದ್ಯಾತ್ಮಿಕ ಕರ್ಮವ ಮಾಡ್ಳೆ ಎಡಿಗಾಗದ್ದೆ ಹೋವ್ತ°. ಆದರೆ ಕೃಷ್ಣಪ್ರಜ್ಞೆಲಿ ಇಪ್ಪವಂಗೆ ದೈಹಿಕ, ಇಂದ್ರಿಯ ಯಾವುದೇ ಕಾಮ ಇರುತ್ತಿಲ್ಲೆ. ಅವ° ಅದಿಲ್ಲದ್ದಯೇ ಹೆಚ್ಚು ಚೈತನ್ಯಪೂರ್ಣವಾಗಿ ಕೆಲಸಮಾಡ್ಳೆ ಎಡಿಗು. ಆತ್ಮಸಾಕ್ಷಾತ್ಕಾರಕ್ಕೆ ಇದುವೇ ಪರೀಕ್ಷೆ. ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೂ ಇಂದ್ರಿಯ ಚಾಪಲ್ಯಕ್ಕೂ ಹೊಂದಾಣಿಕೆ ಆವ್ತಿಲ್ಲೆ. ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ಇವೆಲ್ಲವುಗಳಿಂದ ಮುಕ್ತನಾಗಿ ಇಂದ್ರಿಯಸುಖದ ಆಸಕ್ತಿ ಇಲ್ಲದ್ದೆ ಭಗವಂತನಲ್ಲೇ ಆಸಕ್ತಿ ಮಡುಗು ಮೈಮರೆತ್ತ°. 

ಬನ್ನಂಜೆಯವರ ವ್ಯಾಖ್ಯಾನಲ್ಲಿ ಇದರ ಚಂದಕ್ಕೆ ವಿವರಿಸಿದ್ದವು- ಬಾಹ್ಯ (ಹೆರಾಣ) ಭೋಗಂಗಳಲ್ಲಿ ನಂಟು ಇಪ್ಪವ ಭಗವಂತನ ಪ್ರೇಮಪೂರಿತ ಸುಖವ ಪಡೆತ್ತನಿಲ್ಲೆ. ಅದೇ ಸುಖವ ನಿಜವಾದ ಸಾಧಕ ಭಗವಂತನಲ್ಲೇ ನೆಟ್ಟಮನಸ್ಸುಳ್ಳವನಾಗಿ ನಿರಂತರ ಆ ಸುಖವ ಸವಿಯುತ್ತ°.  ಪ್ರಪಂಚಲ್ಲಿ ರೂಪ, ರಸ, ಗಂಧ, ಸ್ಪರ್ಶ, ಶಬ್ದ ಹೇಳಿ ಸುಖ ಸಾಧನಂಗೊ. ಇದರ ಮುಖೇನ ಅನುಭವುಸುವದು ತಪ್ಪಲ್ಲ. ಬೇಕು ಹೇಳ್ವ ವಸ್ತುವ ಪಡೆತ್ತದರಲ್ಲಿ ಆನಂದ/ಸುಖ ಇರ್ತು. ಆದರೆ, ಅದಕ್ಕಿಂತ ಮುಖ್ಯವಾಗಿ ಅದರ ಬಿಡುವುದರಲ್ಲಿ / ಬಿಟ್ಟಿಪ್ಪದರಲ್ಲಿ ಅದಕ್ಕಿಂತ ಹೆಚ್ಚು ಸುಖ ಇರುತ್ತು. ‘ನಾಳೆಯಾಣ ಸುಖಕ್ಕೆ ಇಂದು ಕಷ್ಟಪಡುವದು’ – ಇದು ನಮ್ಮ ಬದುಕಿನ ನೀತಿ. ಆದರೆ ಆ ನಾಳೆ ಎಂದೂ ಬತ್ತಿಲ್ಲೆ. ಸಾವನ್ನಾರ ಈ ‘ನಾಳೆಯ ದಿನವ’ ಕಾದುಗೊಂಡೇ ಇರ್ತು. ಈ ನಾಳೆಯಾಣ ಸುಖಕ್ಕೆ ನಮ್ಮ ಜೀವನ ಅಪ್ಪಲಾಗ. ಭಗವಂತನ ಪಡವದರಲ್ಲಿ ಅಪರಿಮಿತವಾದ ಮಹದಾನಂದ ಇರುತ್ತು. ಅದು ನಮ್ಮ ಸದಾ ಸುಖಿಯನ್ನಾಗಿರುಸುತ್ತು. ಒಂದರಿ ನಾವು ನಮ್ಮ ಅಂತರಂಗದ ಆತ್ಮಸ್ವರೂಪ ಸುಖುಅವ ಅನುಭವುಸಲೆ ತೊಡಗಿರೆ, ಮತ್ತೆ ಬಾಹ್ಯ ಸುಖ ಎಲ್ಲ ಏನೂ ಅಲ್ಲ ಹೇಳ್ವ ವಿಚಾರ ಗೊಂತಾವುತ್ತು. ನಮ್ಮ ಒಳವೇ (ಅಂತರಂಗಲ್ಲಿಯೇ) ನಿಜವಾದ ಸುಖ ಅಡಗಿದ್ದು, ಅದು ಬಾಹ್ಯಸುಖದ ತ್ಯಾಗಂದ ಕಾಂಬಲೆಡಿಗಪ್ಪದು.  ಅಂತರಂಗದ ಆನಂದವ ತಿಳುದಪ್ಪಗ ಬಾಹ್ಯ ಸುಖ ಏನೂ ಅಲ್ಲ ಹೇಳ್ವ ತಿಳುವಳಿಕೆ ಬತ್ತು.

ಇಲ್ಲಿ ಭಗವಂತ° ಹೇಳುತ್ತ° ಕೇವಲ ಬಾಹ್ಯ ಸುಖವ ಬಿಡುವುದಷ್ಟೇ ಅಲ್ಲ, ಅದರ ಒಟ್ಟಿಂಗೆ ಒಳಾಣ ಆನಂದವ ಹಿಡಿಯೆಕು. ಅದು ಅನಂತವಾದ ಆನಂದ. ‘ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ’ – ಭಗವತ್ಪ್ರಜ್ಞೆಂದ ಕೂಡಿಗೊಂಡಿಪ್ಪವ° ಅಕ್ಷಯವಾದ ಸುಖವ ಅನುಭವಿಸುತ್ತ°. ಅದರ ಒಬ್ಬ ಸಾಧಕ ಪಡೆತ್ತ. ಅಂತರಂಗಲ್ಲಿ ಭಗವದ್ ಸ್ಪರ್ಷವಾಗಿ ಅದರಿಂದ ಅನಂತ ಸುಖವ ಸಾಧಕ ನಿರಂತರವಾಗಿ ಅನುಭವಿಸುತ್ತ°. ಸುಖ ಹೇಳ್ವದು ನಮ್ಮ ಒಳವೇ ಇದ್ದು. ಇದೊಂದು ಮಾನಸಿಕ ಸ್ಥಿತಿ. ನಾವು ನಮ್ಮ ಒಳ ಇಪ್ಪ ಸುಖವ ಗುರುತಿಸಿರೆ ಬಾಹ್ಯ ಸುಖ ಎಂತದೂ ಅಲ್ಲ ಹೇಳ್ವ ನಿಜಸ್ಥಿತಿ ಅರ್ಥ ಆವ್ತು. ಇದರ ತಿಳ್ಕೊಳ್ಳದ್ದೆ ನಾವು ಬಾಹ್ಯ ಸುಖದ ಬೆನ್ನ ಹಿಡ್ಕೊಂಡು ಕಷ್ಟ ಪಡುತ್ತಾ ಇದ್ದು. ಒಂದು ಅಜ್ಜಿ ತನ್ನ ಮನೇಲಿ ಇರುಳು ಹೊತ್ತಿಲ್ಲಿ ರಜಾ ಪೈಸೆಯ ಕೈಜಾರಿ ಬಿದ್ದು ಕಳಕ್ಕೊಳ್ಳುತ್ತು. ಇರುಳು ಹೊತ್ತು ದೀಪ ಹೊತ್ತುಸಲೆ ಎಣ್ಣೆ ಇಲ್ಲೆ. ಹೆರ ಬೀದಿಲಿ ಇಪ್ಪ ಬೀದಿದೀಪವ ಬೆಣಚ್ಚ ಕಂಡ ಅಜ್ಜಿ ಬೀದಿಗೆ ಬಂದು ಬೆಣಚ್ಚಿಪ್ಪಲ್ಲಿ ಹುಡ್ಕುಲೆ ಸುರುಮಾಡುತ್ತು. ಎಂತಕೆ ಹೀಂಗೆ ಕೇಳಿರೆ – “ಮನೆಲಿ ಬೆಣಚ್ಚಿಲ್ಲೆ ಆದರೆ ಇಲ್ಲಿ ಬೆಣಚ್ಚಿ ಇದ್ದು, ಹಾಂಗಾಗಿ ಇಲ್ಲಿ ಎಲ್ಯಾರು ಬಿದ್ದೊಂಡಿದ್ದೋ ಹೇಳಿ ಹುಡುಕ್ಕುತ್ತಾ ಇದ್ದೆ” ಹೇಳಿ ಹೇಳಿತ್ತಡ!. ನಾವೂ ಹೀಂಗೆ, ನಿಜವಾದ ಆನಂದ ಇಪ್ಪದು ನಮ್ಮ ಅಂತರಂಗಲ್ಲಿ, ಆದರೆ ನಾವು ಆನಂದ ಹುಡುಕ್ಕುವದು ಹೆರಪ್ರಪಂಚಲ್ಲಿ!.

ಶ್ಲೋಕ

ಯೇ ಹಿ ಸಂಸ್ಪರ್ಶಜಾ ಭೋಗಾ ದುಃಖಯೋನಯ ಏವ ತೇ ।
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥೨೨॥

ಪದವಿಭಾಗ

ಯೇ ಹಿ ಸಂಸ್ಪರ್ಶಜಾಃ ಭೋಗಾಃ ದುಃಖ-ಯೋನಯಃ ಏವ ತೇ । ಆದಿ ಅಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥

ಅನ್ವಯ

ಹೇ ಕೌಂತೇಯ!, ಯೇ ಸಂಸ್ಪರ್ಶಜಾಃ ಭೋಗಾಃ ತೇ ದುಃಖ-ಯೋನಯಃ ಆದಿ ಅಂತವಂತಃ ಏವ ಹಿ । ತೇಷು ಬುಧಃ ನ ರಮತೇ।

ಪ್ರತಿಪದಾರ್ಥ

ಹೇ ಕೌಂತೇಯ! – ಏ ಕುಂತೀ ಮಗನೇ!, ಯೇ  ಸಂಸ್ಪರ್ಶಜಾಃ – ಏವ ಭೌತಿಕ ಇಂದ್ರಿಯಂಗಳೊಟ್ಟಿಂಗೆ ಸಂಪರ್ಕಂದ ಉಂಟಾದ,  ಭೋಗಾಃ – ಭೋಗಂಗೊ, ತೇ – ಅವು, ದುಃಖ-ಯೋನಯಃ – ದುಃಖಮೂಲಂಗೊ,    ಆದಿ – ಸುರು(ಪ್ರಾರಂಭ), ಅಂತವಂತಃ ಏವ- ಅಖೇರಿಗೆ (ಕೊನೆ/ಕೆಡೇಯಾಣ) ಒಳಪಟ್ಟವೇ ಆಗಿದ್ದು,  ಹಿ – ಖಂಡಿತವಾಗಿಯೂ, ತೇಷು – ಅವುಗಳಲ್ಲಿ, ಬುಧಃ – ಬುದ್ಧಿವಂತವ್ಯಕ್ತಿ, ನ ರಮತೇ – ಎಂದಿಂಗೂ ಆಸ್ವಾದಿಸುತ್ತನಿಲ್ಲೆ.

ಅನ್ವಯಾರ್ಥ

ವಿಷಯೇಂದ್ರಿಯಂಗಳ ಸಂಪರ್ಕವು ದುಃಖವನ್ನುಂಟುಮಾಡುವದಪ್ಪದರಿಂದ ವಿವೇಕಿಯಾದವ ಅದರಲ್ಲಿ ತೊಡಗುತ್ತನಿಲ್ಲೆ. ಕುಂತೀಪುತ್ರನಾದ ಅಜುನನೇ!, ಇಂತಹ ಸುಖಂಗೊಕ್ಕೆ ಆದಿಯೂ ಇದ್ದು, ಅಂತ್ಯವೂ ಇದ್ದು. ಆದ್ದರಿಂದ ವಿವೇಕಿಯಾದವ (ಬುದ್ಧಿವಂತವ್ಯಕ್ತಿ) ಅವುಗಳಲ್ಲಿ ಸಂತೋಷಪಡುತ್ತನಿಲ್ಲೆ (ಆಸ್ವಾದಿಸುತ್ತನಿಲ್ಲೆ). 

ತಾತ್ಪರ್ಯ/ವಿವರಣೆ

ಐಹಿಕ ಇಂದ್ರಿಯ ಸುಖಂಗೊ ಐಹಿಕ ಇಂದ್ರಿಯ ಸಂಪರ್ಕಂದ ಉಂಟಾವ್ತದು. ಇವೆಲ್ಲವೂ ಅಲ್ಪಕಾಲದ್ದು. ಎಂತಕೆ ಹೇಳಿರೆ, ದೇಹವೇ ಅಲ್ಪಕಾಲದ್ದು. ಅಲ್ಪಕಾಲವಾಗಿಪ್ಪ ಯಾವುದರಲ್ಲಿಯೂ ಮುಕ್ತಾತ್ಮಂಗೆ ಆಸಕ್ತಿ ಇರುತ್ತಿಲ್ಲೆ. ಹಾಂಗಾಗಿ ನಿಜವಾದ ಯೋಗಿಗೊಕ್ಕೆ ಅಥವಾ ಬುದ್ಧಿವಂತರಿಂಗೆ/ವಿವೇಕಿಗೊಕ್ಕೆ/ ಆಧ್ಯಾತ್ಮಿಕವಾದಿಗೊಕ್ಕೆ (ಬುಧಃ) ಇಂದ್ರಿಯಸುಖಂಗಳ ಆಕರ್ಷಣೆ ಇರುತ್ತಿಲ್ಲೆ. ಈ ಇಂದ್ರಿಯ ಸುಖಂಗೊ ನಿರಂತರ ಐಹಿಕ ಅಸ್ತಿತ್ವಕ್ಕೆ ಕಾರಣ ಆವೇ ವಿನಃ ನಿರಂತರ ಅಮಿತವಾದ ಆಧ್ಯಾತ್ಮಿಕ ಆನಂದಕ್ಕೆ ಕಾರಣ ಆವ್ತಿಲ್ಲೆ. ಮನುಷ್ಯ ಐಹಿಕ ಸುಖಕ್ಕೆ ಅಂಟಿಗೊಂಡಷ್ಟೂ ಐಹಿಕ ದುಃಖಂಗಳಲ್ಲಿ ಸಿಲುಕಿಗೊಂಡಿರುತ್ತ°. ಕ್ಷಣಿಕ ಸುಖದ ಆಸಗೆ ಬಿದ್ದು ಇಡೀ ಜೀವನವನ್ನೇ ದುಃಖಕ್ಕೆ ತಳ್ಳುಲಾಗ ಹೇಳ್ವ ತಾತ್ಪರ್ಯ ಇಲ್ಲಿ. ಬಾಹ್ಯವಾಗಿ ಸುಖ ಹೇಳಿ ಕಾಂಬದು ದುಃಖದ ಮರಿ ಹಾಕುವ ಮೊಟ್ಟೆ ಹೇಳಿ ಬನ್ನಂಜೆಯವರ ವ್ಯಾಖ್ಯಾನಲ್ಲಿ ಚಿತ್ರಿಸಿದ್ದವು. ಪ್ರತಿಯೊಂದು ಬಾಹ್ಯಸುಖದ ಹಿಂದೆ ದುಃಖ ಹೇಳ್ವ ಕಗ್ಗತ್ತಲು ಹುದುಗಿಗೊಂಡಿರುತ್ತು. ಬಾಹ್ಯ ಸುಖ-ಆನಂದ ಹೇಳ್ವದು ಕೇವಲ ಕ್ಷಣಿಕ, ಒಂದು ಮಿಂಚಿನ ಹಾಂಗೆ. ಅದು ಬಂದಷ್ಟೇ ವೇಗಲ್ಲಿ ಮರೆಯಾವುತ್ತು. ತಿಳುವಳಿಕೆ ಇಪ್ಪವ್ವು ಈ ಬಾಹ್ಯ ಸುಖದ ಆಸೆಲಿ ಬದುಕುತ್ತವಿಲ್ಲೆ.  

“ಈಗಲೇ ನವಗೆಂತಕೆ ಈ ಅಧ್ಯಾತ್ಮ!, ಅದೆಲ್ಲ ಅರವತ್ತರ ಶಾಂತಿ ಆದ ಮತ್ತೆ ” ಹೇಳಿ ಹೇಳ್ವವು ಇದ್ದವು. ಅದಕ್ಕೆ ಭಗವಂತ° ಹೇಳುತ್ತ° –

ಶ್ಲೋಕ

ಶಕ್ನೋತೀಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್ ।
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ॥೨೩॥

ಪದವಿಭಾಗ

ಶಕ್ನೋತಿ ಇಹ ಏವ ಯಃ ಸೋಢುಮ್ ಪ್ರಾಕ್ ಶರೀರ-ವಿಮೋಕ್ಷಣಾತ್ । ಕಾಮ-ಕ್ರೋಧ-ಉದ್ಭವಮ್ ವೇಗಮ್ ಸಃ ಯುಕ್ತಃ ಸಃ ಸುಖೀ ನರಃ ॥

ಅನ್ವಯ

ಇಹ ಏವ ಶರೀರ-ವಿಮೋಕ್ಷಣಾತ್ ಪ್ರಾಕ್, ಯಃ ಕಾಮ-ಕ್ರೋಧ-ಉದ್ಭವಂ ವೇಗಂ ಸೋಢುಂ ಶಕ್ನೋತಿ, ಸಃ ನರಃ ಯುಕ್ತಃ, ಸಃ ಸುಖೀ ಭವತಿ ॥

ಪ್ರತಿಪದಾರ್ಥ

ಇಹ ಏವ – ಈ ಸದ್ಯದ ಶರೀರಲ್ಲಿಯೇ (ಈ ಲೋಕಲ್ಲಿಯೇ/ ಈ ಜೀವನಲ್ಲೇ), ಶರೀರ-ಮಿಮೋಕ್ಷಣಾತ್ – ದೇಹದ ತ್ಯಾಗಂದ (ಶರೀರತ್ಯಾಗಂದ ಹೇಳಿ ಅರ್ಥ), ಪ್ರಾಕ್ – ಮದಲು, ಯಃ – ಆರು, ಕಾಮ-ಕ್ರೋಧ-ಉದ್ಭವಂ – ಆಸೆ, ಕೋಪಂದ ಉದ್ಭವವಾದ (ಜನ್ಯವಾದ), ವೇಗಮ್ – ಒತ್ತಡವ (ಆವೇಗ, ಉದ್ವೇಗ), ಸೋಢುಂಮ್- ಸಹಿಸಲೆ,  ಶಕ್ನೋತಿ – ಸಮರ್ಥನಾಗಿರುತ್ತನೋ,  ಸಃ – ಅವ°, ನರಃ – ಮನುಷ್ಯ, ಯುಕ್ತಃ – ಸಮಾಧಿಲಿಪ್ಪವ°, ಸಃ – ಅವ°, ಸುಖೀ ಭವತಿ- ಸುಖಿಯು ಆವುತ್ತ°.

ಅನ್ವಯಾರ್ಥ

ಈ ದೇಹವ ಬಿಡುವದಕ್ಕೆ ಮದಲೇ ಐಹಿಕ ಇಂದ್ರಿಯಂಗಳ ಬಯಕೆಗಳ ಸಹಿಸಿಗೊಂಡು ಕಾಮ-ಕ್ರೋಧ, ಆವೇಗವ ತಡಕ್ಕೊಂಬಲೆ ಶಕ್ತನಾದ ಮನುಷ್ಯ° ಈ ಲೋಕಲ್ಲಿಯೇ ಒಳ್ಳೆಯ ಸ್ಥಿತಿಲಿ ಇರುತ್ತ° ಅಲ್ಲದೇ, ಸುಖಿಯಾಗಿರುತ್ತ°.

ತಾತ್ಪರ್ಯ/ವಿವರಣೆ

ಆತ್ಮಸಾಕ್ಷಾತ್ಕಾರದ ಮಾರ್ಗಲ್ಲಿ ತಡೆಯಿಲ್ಲದ್ದ ಮುನ್ನಡೆಯ ಬಯಸುವವ° ಐಹಿಕ ಇಂದ್ರಿಯಂಗಳ ಆವೇಗವ ಹತೋಟಿಲಿ ಮಡಿಕ್ಕೊಳ್ಳೆಕು. ಪಂಚೇಂದ್ರಿಯಂಗೊಕ್ಕೆ ಒತ್ತಡ ಇರುತ್ತು. ಈ ಒತ್ತಡವ ನಿಯಂತ್ರಣಲ್ಲಿರಿಸಿಗೊಂಬಲೆಡಿಗಪ್ಪವನೇ ನಿಜವಾದ ಸಾಧಕನಪ್ಪಲೆ ಸಾಧ್ಯ. ಐಹಿಕ ಸಹಜವಾಗಿ ಕಾಮ ಉದ್ಭವ ಆವ್ತು. ಕಾಮ ಈಡೇರದ್ದಿಪ್ಪಗ ಕೋಪಕ್ಕೆ ಕಾರಣ ಆವ್ತು. ಇದರಿಂದ ಮನಸ್ಸು ಕ್ಷೋಭೆಗೊಳ್ಳುತ್ತು. ಹಾಂಗಾಗಿ ಐಹಿಕ ಈ ದೇಹವ ಬಿಡುವ ಮದಲೇ ಇವುಗಳ ನಿಯಂತ್ರಿಸಿಗೊಂಡಿಪ್ಪಲೆ ಮನುಷ್ಯ° ಅಭ್ಯಾಸ ಮಾಡೆಕು. ಇದರ ಮಾಡ್ಳೆ ಎಡಿಗಾದ ಮನುಷ್ಯ° ಆತ್ಮಸಾಕ್ಷಾತ್ಕಾರಕ್ಕೆ ತಡೆಯಿಲ್ಲದ ಮಾರ್ಗವ ಸಿದ್ಧಗೊಳಿಸಿದ ಹಾಂಗೆ ಆತು. ಈ ರೀತಿ ಈ ಸ್ಥಿತಿಲಿ ಇಪ್ಪವ (ಸುಖೀ) ಐಹಿಕ ಪ್ರಪಂಚಲ್ಲಿ ಸುಖಿಯಾಗಿರುತ್ತ°. ಹಾಂಗಾಗಿ ಕಾಮಕ್ರೋಧಂಗಳ ನಿಯಂತ್ರಿಸಿಗೊಂಬಲೆ ಪ್ರಯತ್ನುಸುವದು ಆಧ್ಯಾತ್ಮಿಕವಾದಿಗಳ ಕರ್ತವ್ಯ.

ನಾವು ನಮ್ಮ ಪ್ರಾಪಂಚಿಕ ಸುಖ-ಸ್ಪರ್ಶದ ಮೋಹವ ಗೆಲ್ಲುಲೆ ಸಾಧ್ಯ ಆಪ್ಪದು ಈ ದೇಹ ಇಪ್ಪಗಳೇ. ವಿಷಯಂಗಳ ಸ್ಪರ್ಶ ಇಪ್ಪದು ದೇಹಕ್ಕೆ, ಮತ್ತೆ, ವಿಷಯಂಗಳ ಗೆಲ್ಲುಲೆ ಸಾಧ್ಯ ಅಪ್ಪದು ಈ ದೇಹ ಇಪ್ಪಗಳೇ. ಭಗವಂತ° ನವಗೆ ಯಾವುದು ಸರಿ, ಯಾವುದು ತಪ್ಪು ಹೇಳ್ವದರ ವಿವೇಚನೆ ಮಾಡ್ಳೆ ನವಗೆ ಬುದ್ಧಿಶಕ್ತಿಯ ಕೊಟ್ಟಿದ°. ಇಂತಹ ಬುದ್ಧಿಶಕ್ತಿಯ ಉಪಯೋಗಿಸಿಗೊಂಡು ಶರೀರ ಬಿದ್ದುಹೋಪಂದ ಮದಲೇ ಇಂದ್ರಿಯ ನಿಗ್ರಹ ಅಭ್ಯಾಸ ಮಾಡೆಕು. ಇದು ಮುಂದಂಗೆ ದೂಡುವ ಅಥವಾ ಒಂದೇ ದಿನಲ್ಲಿ ಸಾಧುಸಲೆ ಎಡಿಗಪ್ಪ ಕಾರ್ಯ ಅಲ್ಲ. ಇದಕ್ಕೆ ನಿರಂತರ ಸಾಧನೆ ಅಗತ್ಯ. ಈ ದೇಹ ಗಟ್ಟಿಯಾಗಿಪ್ಪಗಳೇ ಈ ಸಾಧನೆ ಮಾಡೆಕು. ಮನುಷ್ಯನ ಕಾಡುವ ಮೂಲಭೂತ ಸಮಸ್ಯೆ ಕಾಮ ಮತ್ತೆ ಕ್ರೋಧ. ಈ ಕಾಮ-ಕ್ರೋಧದ ವೇಗ ನಮ್ಮೆಲ್ಲ ವಿವೇಕವ ತಳ್ಳಿ ಮುಂದೆ ಹೋಗಿ ನಿಂಬಷ್ಟು ಬಲಿಷ್ಠ. ಆರಿಂಗೆ ಇದರ ತಡವಲೆಡಿಗಾವ್ತೋ, – “ಸಃ ಯುಕ್ತಃ ಸ ಸುಖೀ ನರಃ”, ಅವ° ನಿಜವಾದ ಸುಖೀ ಮನುಷ್ಯ°.

ಹಾಂಗಾರೆ ಸಾಧಕನ ಅಂತರಂಗಲ್ಲಿ ಕಂಡುಗೊಂಬ ಆನಂದದ ಅನುಭವ ಹೇಂಗಿಪ್ಪದು ? –

ಶ್ಲೋಕ

ಯೋsನ್ತಃಸುಖೋsನ್ತರಾರಾಮಃ ತಥಾsನ್ತರ್ಜ್ಯೋತಿರೇವ ಯಃ ।
ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋsಧಿಗಚ್ಛತಿ ॥೨೪॥

ಪದವಿಭಾಗ

ಯಃ ಅಂತಃ-ಸುಖಃ ಅಂತಃ-ಆರಾಮಃ ತಥಾ ಅಂತಃ ಜ್ಯೋತಿಃ ಏವ ಯಃ । ಸಃ ಯೋಗೀ ಬ್ರಹ್ಮ-ನಿರ್ವಾಣಮ್ ಬ್ರಹ್ಮ-ಭೂತಃ ಅಧಿಗಚ್ಛತಿ ॥

ಅನ್ವಯ

ಯಃ ಅಂತಃ-ಸುಖಃ, ಅಂತರ-ಆರಾಮಃ, ತಥಾ ಯಃ ಅಂತರ್-ಜ್ಯೋತಿಃ ಏವ, ಸಃ ಯೋಗೀ, ಬ್ರಹ್ಮ-ಭೂತಃ ಬ್ರಹ್ಮ-ನಿರ್ವಾಣಮ್ ಅಧಿಗಚ್ಛತಿ ।

ಪ್ರತಿಪದಾರ್ಥ

ಯಃ – ಆರು, ಅಂತಃ-ಸುಖಃ – ಅಂತರಂಗಲ್ಲಿ ಸುಖಿಯೋ, ಅಂತಃ-ಆರಾಮಃ – ಕ್ರಿಯಾಶೀಲನಾಗಿ ಅಂತರಂಗಲ್ಲಿ ಆನಂದಿಸುತ್ತನೋ, ತಥಾ – ಹಾಂಗೆಯೇ, ಯಃ – ಆರು, ಅಂತಃ-ಜ್ಯೋತಿಃ – ಅಂತರಂಗಲ್ಲಿ ಗುರಿಯ ಮಡಿಕ್ಕೊಂಡವನೋ, ಏವ – ಖಂಡಿತವಾಗಿಯೂ, ಸಃ – ಅವ°,    ಯೋಗೀ – ಯೋಗಿಯು, ಬ್ರಹ್ಮ-ಭೂತಃ – ಆತ್ಮಸಾಕ್ಷಾತ್ಕಾರವ ಹೊಂದಿ, ಬ್ರಹ್ಮ-ನಿರ್ವಾಣಮ್ – ಪರಮೋನ್ನತಲ್ಲಿ ಮೋಕ್ಷವ,  ಅಧಿಗಚ್ಛತಿ – ಪಡೆತ್ತ°.

ಅನ್ವಯಾರ್ಥ

ಆರು ಅಂತರ್ಯಲ್ಲಿಯೇ ಸುಖಪಡುತ್ತನೋ, ಆರು ಅಂತರ್ಯಲ್ಲೇ ಕ್ರಿಯಾಶೀಲನಾಗಿದ್ದು ಸಂತೋಷಿಸುತ್ತನೋ, ಮತ್ತೆ, ಆರ ಗುರಿಯು ಅಂತರ್ಮುಖಿಯಾಗಿದ್ದೋ, ಅಂತವ° ವಾಸ್ತವವಾಗಿ ಪರಿಪೂರ್ಣ ಯೋಗಿ. ಅವ° ಬ್ರಹ್ಮನ್ ಲ್ಲಿ ಮುಕ್ತ° ಮತ್ತು ಅಖೇರಿಗೆ ಪರಮಪುರುಷ ಪರಬ್ರಹ್ಮ (ಭಗವಂತ°)ನ ಹೊಂದುತ್ತ°.

ತಾತ್ಪರ್ಯ/ವಿವರಣೆ

ಬಹಿರಂಗದ ಕ್ರಿಯೆಗೊ ಬಾಹ್ಯ ಸುಖವ ಪಡವಲೇ ಇಪ್ಪದು. ಬಾಹ್ಯಕ್ರಿಯೆ ಸುಖಂಗಳ ಬಿಡದ್ದೆ  ಅಂತರಂಗದ ಸುಖವ ಸವಿಯಲೆ ಸಾಧ್ಯ ಇಲ್ಲೆ. ಇಂದ್ರಿಯ ಸುಖದ ಆಸೆಂದ ಮುಕ್ತನಾದ ಮನುಷ್ಯ° ವಾಸ್ತವವಾಗಿ ಅನುಭವಂದ ಅಂತರಂಗದ ಸುಖವ ಸವಿಯುತ್ತ°. ಹಾಂಗಾಗಿ ಅವ° ಎಲ್ಲಿ ಇದ್ದರೂ (ಯಾವ ಸ್ಥಳಲ್ಲಿ ಇದ್ದರೂ) ಅಲ್ಲೇ ಮೌನವಾಗಿ ಕೂದೊಂಡು ತನ್ನ ಒಳಾಣ ಚಟುವಟಿಕೆಗಳ ಸವಿಯ ಉಣ್ಣುತ್ತ°. ಇಂತಹ ಮುಕ್ತನಾದ ಮನುಷ್ಯ° ಐಹಿಕ ಸುಖವ ಬಯಸುತ್ತನಿಲ್ಲೆ. ಈ ಸ್ಥಿತಿಗೆ ಬ್ರಹ್ಮಭೂತ ಹೇಳಿ ಹೆಸರು. ಇದರ ಸಾಧಿಸಿರೆ ಭಗವದ್ಧಾಮಕ್ಕೆ ಹೋಗಿ ಸೇರುವದು ಖಂಡಿತ.  

ಬಯಕೆಯ ಅಳುದು ಒಳಬಗೆಯ ಸುಖವ ಕಂಡವ°, ಒಳಒಳವೇ ಭಗವಂತನ ಕಂಡುಗೊಂಡು ಒಳಂದೊಳವೇ ಖುಷಿಪಡುತ್ತ. ಭಗವಂತನ ಜ್ಞಾನಪ್ರಕಾಶವ ಒಳ ಎಲ್ಲಾ ತುಂಬಿಗೊಂಡವನಾಗಿರುತ್ತ°. ಭಗವಂತನಲ್ಲೇ ನೆಲೆನಿಂದ ಸಾಧಕ°, ಅಳಿವಿರದ ಆ ಭಗವಂತನನ್ನೇ ಸೇರುತ್ತ°. ಮನುಷ್ಯ ದೈಹೀಕ ಸುಖ ಬೇಕು ಹೇಳಿ ಬಯಸದ್ದೆ ಅಂತಃಸುಖ ಬೇಕು ಹೇಳಿ ಬಯಸೆಕು. ಬಯಕೆಗಳೇ ಇಲ್ಲದ್ದಿಪ್ಪದು ‘ಸುಖ’. ಬಯಸಿದ್ದರ ಸಿಕ್ಕಿಯಪ್ಪಗ ಅಪ್ಪದು ‘ಆರಾಮ’. ಭಗವಂತ° ಹೇಳುತ್ತ° – ಅಧ್ಯಾತ್ಮಯೋಗದ ಸಾಧಕ°, ಸಾಧನೆಮಾಡಿ ಫಲ ಪಡಕ್ಕೊಂಡವ°, ಮಾನಸಿಕವಾಗಿ ಭಗವಂತನಲ್ಲೇ ನೆಲೆನಿಂದವ°. ಅಂತಹ ಸಾಧಕ ನಿಜವಾದ ಯೋಗೀ, ಅವ° ತನ್ನ ಅಂತರಂಗಲ್ಲೇ ಭಗವಂತನ ನೋಡಿಗೊಂಡು ಸುಖೀ ಮತ್ತು ಆರಾಮವಾಗಿ ತನ್ನೊಳ ಇಪ್ಪ ಭಗವಂತನ ಜ್ಯೋತಿಲಿ ನೆಲೆಸಿಬಿಡುತ್ತ° .

ಶ್ಲೋಕ

ಲಭಂತೇ ಬ್ರಹ್ಮನಿರ್ವಾಣಂ ಋಷಯಃ ಕ್ಷೀಣಕಲ್ಮಷಾಃ ।
ಛಿನ್ನದ್ವೈಧಾಯತಾತ್ಮಾನಃ ಸರ್ವಭೂತಹಿತೇ ರತಾಃ ॥೨೫॥

ಪದವಿಭಾಗ

ಲಭಂತೇ ಬ್ರಹ್ಮ-ನಿರ್ವಾಣಮ್ ಋಷಯಃ ಕ್ಷೀಣ-ಕಲ್ಮಷಾಃ । ಛಿನ್ನ-ದ್ವೈಧಾಃ ಯತ-ಆತ್ಮನಃ ಸರ್ವ-ಭೂತಹಿತೇ ರತಾಃ ॥

ಅನ್ವಯ

 ಕ್ಷೀಣ-ಕಲ್ಮಷಾಃ, ಛಿನ್ನ-ದ್ವೈಧಾಃ ಯತ-ಆತ್ಮಾನಃ, ಸರ್ವ-ಭೂತಹಿತೇ ರತಾಃ ಋಷಯಃ ಬ್ರಹ್ಮ-ನಿರ್ವಾಣಂ ಲಭಂತೇ ।

ಪ್ರತಿಪದಾರ್ಥ

ಕ್ಷೀಣ-ಕಲ್ಮಷಾಃ – ಸಕಲ ಪಾಪರಹಿತರು,  ಛಿನ್ನ-ದ್ವೈಧಾಃ – ದ್ವಂದವ ಹರುದಿಡುಕ್ಕಿದವು, ಯತ-ಆತ್ಮನಃ  – ಆತ್ಮಸಾಕ್ಷಾತ್ಕಾರಲ್ಲಿ ನಿರತರಾದವು, ಸರ್ವ-ಭೂತಹಿತೇ – ಸಕಲ ಜೀವಿಗಳ ಹಿತಕಾರ್ಯಲ್ಲಿ (ಕಲ್ಯಾಣಕಾರ್ಯಲ್ಲಿ), ರತಾಃ ಋಷಯಃ  – ತೊಡಗಿದ ಅಂತರಂಗಲ್ಲಿ ಕ್ರಿಯಾಶೀಲರಾಗಿಪ್ಪವು (ಋಷಿಗೊ), ಬ್ರಹ್ಮ-ನಿರ್ವಾಣಮ್ – ಪರಮೋನ್ನತಲ್ಲಿ ಮೋಕ್ಷವ, ಲಭಂತೇ – ಪಡೆತ್ತವು.

ಅನ್ವಯಾರ್ಥ

ಪಾಪರಹಿತರು, ಸಂಶಯಾತೀತರು (ದ್ವಂದ್ವಾತೀತರು), ಇಂದ್ರಿಯಂಗಳ ಜಯಿಸಿದವು, ಅಂತರಂಗಲ್ಲಿ ಕ್ರಿಯಾಶೀಲರಾಗಿ ಆತ್ಮಸಾಕ್ಷಾತ್ಕಾರಲ್ಲಿ ನಿರತರಾಗಿಪ್ಪಂತವು, ಎಲ್ಲ ಪಾಪಂಗಳಿಂದ ಮುಕ್ತರಾಗಿಪ್ಪವು, ಸರ್ವಜೀವಿಗಳ ಹಿತಲ್ಲಿ ನಿರತರಾದವು. ಬ್ರಹ್ಮನಿರ್ವಾಣವ (ಪರಮೋನ್ನತ ಮೋಕ್ಷವ) ಪಡೆತ್ತವು.

ತಾತ್ಪರ್ಯ/ವಿವರಣೆ

ಸಂಪೂರ್ಣವಾಗಿ ಕೃಷ್ಣಪ್ರಜ್ಞೆಲಿಪ್ಪ ಮನುಷ್ಯ° ಮಾತ್ರ ಎಲ್ಲ ಜೀವಿಗಳ ಕಲ್ಯಾಣಕಾರ್ಯಲ್ಲಿ ನಿರತರಾಗಿದ್ದ ಹೇಳಿ ಹೇಳ್ಳಕ್ಕು. ಎಲ್ಲ ವಸ್ತುಗಳ ಆದಿಮೂಲ° – ಆ ಭಗವಂತ° ಹೇಳ್ವ ಜ್ಞಾನ ಹೊಂದಿದ್ದು, ಆ ಮನೋಧರ್ಮಲ್ಲಿ ಕೆಲಸ ಮಾಡುವ ಮನುಷ್ಯ° ಎಲ್ಲರ ಹಿತಕ್ಕಾಗಿ ಕರ್ಮ ಮಾಡುತ್ತ°. ಭಗವಂತನೇ ಪರಮ ಭೋಕ್ತಾರ°, ಪರಮ ಪ್ರಭು, ಪರಮ ಮಿತ್ರ ಹೇಳ್ವದರ ಮರದಿಪ್ಪದೇ ಮನುಷ್ಯರ ಎಲ್ಲ ದುಃಖಕ್ಕೆ ಕಾರಣ. ಹಾಂಗಾಗಿ, ಇಡೀ ಮಾನವ ಸಮಾಜಲ್ಲಿ ಈ ಪ್ರಜ್ಞೆಯ ಪುನಃಶ್ಚೇತನಗೊಳುಸಲೆ ಶ್ರಮಿಸುವದೇ ಅತ್ತ್ಯುನ್ನತ ಕಲ್ಯಾಣಕಾರ್ಯ.  ಕೃಷ್ಣಪ್ರಜ್ಞೆಲಿ ಇಪ್ಪ ಮನುಷ್ಯಂಗೆ ಭಗವಂತನ ಪರಮಾಧಿಕಾರದ ವಿಷಯಲ್ಲಿ ಯಾವುದೇ ಸಂಶಯ ಇರ್ತಿಲ್ಲೆ. ಹಾಂಗಾಗಿ ಅವ° ಎಲ್ಲ ಪಾಪಂಗಳಿಂದ ಬಿಡುಗಡೆ ಹೊಂದುತ್ತ. ಇದುವೇ ದೈವೀಪ್ರೇಮದ ಸ್ಥಿತಿ. ಮಾನವ ಸಮಾಜದ ಭೌತಿಕ ಹಿತಕ್ಕಾಗಿ ಮಾತ್ರ ಶ್ರಮವಹಿಸುವವ° ವಾಸ್ತವವಾಗಿ ಆರಿಂಗೂ ಸಹಾಯ ಮಾಡ್ಳೆ ಇಲ್ಲೆ. ಬಾಹ್ಯ ಶರೀರಕ್ಕೆ ಮತ್ತು ಮನಸ್ಸಿಂಗೆ ತಾತ್ಕಾಲಿಕ ಪರಿಹಾರವ ಕೊಡುವದು ತೃಪ್ತಿಕರವಾದ ಕೆಲಸ ಅಲ್ಲ. ಮನುಷ್ಯ ಭಗವಂತನಲ್ಲಿ ತನ್ನ ಸಂಬಂಧವ ಮರತಿಪ್ಪದೇ ಬದುಕಿನ ಕಠಿಣ ಹೋರಾಟಾಲ್ಲಿ ಅವನ ಕ್ಲೇಶಂಗೊಕ್ಕೆ ಕಾರಣ. ಮನುಷ್ಯಂಗೆ ಭಗವಂತನೊಡನೆ ತನ್ನ ಸಂಬಂಧದ ಸಂಪೂರ್ಣಪ್ರಜ್ಞೆ ಇಪ್ಪಗ ಅವ° ಅಶಾಶ್ವತ ಐಹಿಕ ದೇಹಲ್ಲಿ ಇದ್ದರೂ ವಾಸ್ತವವಾಗಿ ಅವ°, ಮುಕ್ತಾತ್ಮನೇ.

ತನ್ನಲ್ಲಿ ಉದ್ಭವವಪ್ಪ ಸಂದೇಹಂಗಳ, ದ್ವಂದ್ವಂಗಳ ಮೀರಿ ನಿಂತವು ನಿಜವಾದ ಸಾಧಕರು. ಇವು ಸದಾ ತಮ್ಮ ಮನಸ್ಸಿನ ಅಂತರಂಗಲ್ಲಿ ನೆಲೆಗೊಳಿಸಿರುತ್ತವು. ಇವು ಬಯಸುವದು ‘ಅಂತರಂಗದ ಸುಖ’. ಬಾಹ್ಯಸುಖದ ಬೆನ್ನುಹಿಡಿಯದ್ದೆ, ಎಲ್ಲ ಜೀವಿಗಳ ಒಳಿತನ್ನೇ ಬಯಸುವ ಇವು ಸದಾ  ಅಂತರಂಗಲ್ಲಿ ನಿತ್ಯ ಸ್ವರೂಪನಾದ ಭಗವಂತನಲ್ಲಿ ನೆಲೆಸಿ ಅವನನ್ನೇ ಅಖೇರಿಗೆ ಸೇರುತ್ತವು. 

ಶ್ಲೋಕ

ಕಾಮ ಕ್ರೋಧ ವಿಯುಕ್ತಾನಾಂ ಯತೀನಾಂ ಯತಚೇತಸಾಮ್ ।
ಅಭಿತೋ ಬ್ರಹ್ಮನಿರ್ವಾಣಂ ವರ್ತತೇ ವಿದಿತಾತ್ಮನಾಮ್ ॥೨೬॥

ಪದವಿಭಾಗ

ಕಾಮ-ಕ್ರೋಧ-ವಿಯುಕ್ತಾನಾಮ್ ಯತೀನಾಮ್ ಯತ-ಚೇತಸಾಮ್ । ಅಭಿತಃ ಬ್ರಹ್ಮ-ನಿರ್ವಾಣಮ್ ವರ್ತತೇ ವಿದಿತ-ಆತ್ಮನಾಮ್ ॥

ಅನ್ವಯ

ಕಾಮ-ಕ್ರೋಧ-ವಿಯುಕ್ತಾನಾಂ ಯತ-ಚೇತಸಾಂ ವಿದಿತ-ಆತ್ಮನಾಂ ಯತೀನಾಮ್ ಅಭಿತಃ ಬ್ರಹ್ಮ-ನಿರ್ವಾಣಂ ವರ್ತತೇ ।

ಪ್ರತಿಪದಾರ್ಥ

ಕಾಮ-ಕ್ರೋಧ-ವಿಯುಕ್ತಾನಾಮ್ – ಆಸೆ ಕೋಪಂಗಳಿಂದ ಮುಕ್ತರಾದ (ತ್ಯಜಿಸಿದ, ಬಿಟ್ಟ), ಯತ-ಚೇತಸಾಮ್ -ಪೂರ್ಣವಾಗಿ ಮನಸ್ಸಿನ ನಿಗ್ರಹಿಸಿದವರ,  ವಿದಿತ-ಆತ್ಮನಾಮ್ – ಆತ್ಮಸಾಕ್ಷಾತ್ಕಾರವ ಹೊಂದಿದ, ಯತೀನಾಮ್ – ಸಾಧುಪುರುಷರ,  ಅಭಿತಃ – ಹತ್ರವೇ (ಸುತ್ತುದೇ), ಬ್ರಹ್ಮನಿರ್ವಾಣಮ್ – ಪರಮೋನ್ನತ ಮೋಕ್ಷವು, ವರ್ತತೇ – ಇದ್ದು, .

ಅನ್ವಯಾರ್ಥ

ಕಾಮಕ್ರೋಧಂಗಳಿಂದ ಬಿಡುಗಡೆ ಹೊಂದಿದವೂ ಆತ್ಮಸಾಕ್ಷಾತ್ಕಾರವ ಪಡದವೂ, ಸ್ವಯಂ ಶಿಸ್ತಿಪ್ಪವ್ವೂ, ನಿರಂತರ ಪರಿಪೂರ್ಣತಗೆ ಶ್ರಮಿಸುತ್ತಿಪ್ಪವ್ವೂ ಆಗಿಪ್ಪವಕ್ಕೆ ಸಮೀಪಲ್ಲಿಯೇ ಬ್ರಹ್ಮನಿರ್ವಾಣ (ಮೋಕ್ಷ) ಲಭಿಸುತ್ತು.

ತಾತ್ಪರ್ಯ/ವಿವರಣೆ

ಕೃಷ್ಣಪ್ರಜ್ಞೆಂದ ಕೂಡಿ ಭಕ್ತಿಸೇವೆಲಿ ಸದಾನಿರತನಾಗಿಪ್ಪ ಮತ್ತು ಆತ್ಮಸಾಕ್ಷಾತ್ಕಾರಲ್ಲಿ ಪರಿಪೂರ್ಣತೆಯ ಕಂಡುಗೊಂಡ ಭಗವದ್ಭಕ್ತ° ಬಹುಬೇಗ ಬ್ರಹ್ಮನಿರ್ವಾಣವ ಪಡೆತ್ತ°. ಆತ್ಮಸಾಕ್ಷಾತ್ಕಾರಲ್ಲಿ ಸಂಪೂರ್ಣಜ್ಞಾನ ಇಪ್ಪದರಿಂದ ಅವ ಸದಾ ಅಂತರಂಗಲ್ಲಿ ಸಮಾಧಿಸ್ಥಿತಿಲಿ ಇರುತ್ತ°. ಮೀನು ತನ್ನ ಮರಿಗಳ ನೋಡುವ ಮಾತ್ರಂದಲೇ ಅವುಗಳ ಪೋಷಿಸುತ್ತು, ಆಮೆ ಧ್ಯಾನಮಾತ್ರಂದಲೇ ತನ್ನ ಮರಿಗಳ ಸಂರಕ್ಷಿಸುತ್ತು. ಆಮೆ ತನ್ನ ಮೊಟ್ಟೆಯ ಭೂಮಿಲಿ ಮಡುಗುತ್ತು ಮತ್ತು ತಾನು ನೀರಿಲ್ಲಿದ್ದು ಆ ಮೊಟ್ಟೆಗಳ ಧ್ಯಾನಿಸುತ್ತು. ಹಾಂಗೆಯೇ ಕೃಷ್ಣಪ್ರಜ್ಞೆಲಿಪ್ಪ ಭಕ್ತ° ಭಗವಂತನ ನಿವಾಸಂದ ದೂರ ಇದ್ದು ಐಹಿಕ ಸಂಸಾರದ ಒಟ್ಟಿಂಗೆ ಇದ್ದರೂ ಅಂತರಂಗಲ್ಲಿ ಸದಾ ಭಗವಂತನ ಧ್ಯಾನಲ್ಲಿ ಇಪ್ಪದರಿಂದ ಭಗವಂತನ ನಿವಾಸಕ್ಕೆ ಶೀಘ್ರಲ್ಲಿ ಏರ್ಲೆ ಎಡಿಗು. ಅವಂಗೆ ಐಹಿಕ ಕ್ಲೇಶಂಗಳ ನೋವು ಅನುಭವಕ್ಕೆ ಬತ್ತಿಲ್ಲೆ. ಈ ಸ್ಥಿತಿಯ ಬ್ರಹ್ಮನಿರ್ವಾಣ ಹೇಳಿ ಹೇಳುತ್ತದು. ಸದಾ ಭಗವಂತನಲ್ಲಿ ಮಗ್ನನಾಗಿಪ್ಪದರಿಂದ ಐಹಿಕ ಕ್ಲೇಶಂಗೊ ಇಲ್ಲದ್ದಿಪ್ಪದೇ ಈ ಸ್ಥಿತಿ.  

ಕಾಮ-ಕ್ರೋಧಂಗಳ ಸಂಪೂರ್ಣ ಬಿಟ್ಟು, ಪೂರ್ಣ ಇಂದ್ರಿಯನಿಗ್ರಹ ಸಾಧಿಸವಂಗೆ ಎಲ್ಲೆಡೆಯೂ, ಎಲ್ಲ ಜೀವ ಜಂತುವಿಲ್ಲಿಯೂ ಭಗವಂತನೇ ಕಾಣಿಸಿಗೊಂಬದು. ಇವರ ಮನಸ್ಸಿಲ್ಲಿ ಸರ್ವಾಂತರ್ಯಾಮಿಯಾದ, ನಿತ್ಯ ಸ್ವರೂಪನಾದ ಭಗವಂತ° ನೆಲೆಸಿರುತ್ತ°. ಇದುವೇ ಬ್ರಹ್ಮನಿರ್ವಾಣ ಸ್ಥಿತಿ. 

ಶ್ಲೋಕ

ಸ್ಪರ್ಶಾನ್ ಕೃತ್ವಾ ಬಹಿರ್ಬಾಹ್ಯಾಂಶ್ಚಕ್ಷುಶ್ಚೈವಾಂತರೇ ಭ್ರುವೋಃ ।
ಪ್ರಾಣಾಪಾನೌ ಸಮೌ ಕೃತ್ವಾ ನಾಸಾಭ್ಯಂತರಚಾರಿಣೌ ॥೨೭।।

ಯತೇಂದ್ರಿಯಮನೋಬುದ್ಧಿಃ ರ್ಮುನಿರ್ಮೋಕ್ಷಪರಾಯಣಃ ।
ವಿಗತೇಚ್ಛಾಭಯಕ್ರೋಧೋ ಯಃ ಸದಾ ಮುಕ್ತ ಏವ ಸಃ ॥೨೮॥

ಪದವಿಭಾಗ

ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್ ಚಕ್ಷುಃ ಚ ಏವ ಅಂತರೇ ಭ್ರುವೋಃ । ಪ್ರಾಣ-ಅಪಾನೌ ಸಮೌ ಕೃತ್ವಾ ನಾಸ-ಅಭ್ಯಂತರ-ಚಾರಿಣೌ ॥

ಯತ-ಇಂದ್ರಿಯ-ಮನಃ ಬುದ್ಧಿಃ ಮುನಿಃ ಮೋಕ್ಷ-ಪರಾಯಣಃ । ವಿಗತ-ಇಚ್ಛಾ-ಭಯ-ಕ್ರೋಧಃ ಯಃ ಸದಾ ಮುಕ್ತಃ ಏವ ಸಃ ॥

ಅನ್ವಯ

ಯಃ ಮುನಿಃ ಬಾಹ್ಯಾನ್  ಸ್ಪರ್ಶಾನ್ ಬಹಿಃ ಕೃತ್ವಾ, ಚಕ್ಷುಃ ಚ ಏವ ಭ್ರುವೋ ಅಂತರೇ ಕೃತ್ವಾ, ಪ್ರಾಣ-ಅಪಾನೌ ನಾಸ-ಅಭ್ಯಂತರ-ಚಾರಿಣೌ ಸಮೌ ಕೃತ್ವಾ, ಯತ-ಇಂದ್ರಿಯ-ಮನಃ ಬುದ್ಧಿಃ, ವಿಗತ-ಇಚ್ಛಾ-ಭಯ-ಕ್ರೋಧಃ ಮೋಕ್ಷ-ಪರಾಯಣಃ ಸ್ಯಾತ್, ಸಃ ಸದಾ ಮುಕ್ತಃ ಏವ ।

ಪ್ರತಿಪದಾರ್ಥ

ಯಃ ಮುನಿಃ – ಯಾವ ಮುನಿ (ದಿವ್ಯವಾದಿಯು), ಬಾಹ್ಯಾನ್ ಸ್ಪರ್ಶಾನ್ – ಅನವಶ್ಯಕವಾದ ಇಂದ್ರಿಯ ವಿಷಂಯಂಗಳ, ಬಹಿಃ  ಕೃತ್ವಾ – ಹೆರ ಮಾಡಿಕ್ಕಿ, ಚಕ್ಷುಃ – ಕಣ್ಣು, ಚ – ಕೂಡ, ಏವ – ಖಂಡಿತವಾಗಿಯೂ, ಭ್ರುವೋಃ ಅಂತರೇ – ಹುಬ್ಬುಗಳ ಮಧ್ಯಲ್ಲಿ (ನೆಡುಕೆ), ಕೃತ್ವಾ – ಮಾಡಿ, ಪ್ರಾಣ-ಅಪಾನೌ – ಮೇಲೆ ಕೇಳ (ಹೆರ ಒಳ) ಹೋಪ ವಾಯುವ (ಶ್ವಾಸೋಚ್ವಾಸವ),ನಾಸ-ಅಭ್ಯಂತರ-ಚಾರಿಣೌ – ಮೂಗಿನ ಹೊಳ್ಳೆಗಳಲ್ಲಿ ಉಸಿರಾಡುವ, ಸಮೌ ಕೃತ್ವಾ – ನಿಯಂತ್ರಣ ಮಾಡಿ, ಯತ-ಇಂದ್ರಿಯ-ಮನಃ ನಿಯಂತ್ರಿಸಿದ ಇಂದ್ರಿಯ ಮನಸ್ಸು, ಬುದ್ಧಿಃ – ಬುದ್ಧಿಶಕ್ತಿ,  ವಿಗತ-ಇಚ್ಛಾ-ಭಯ-ಕ್ರೋಧಃ  – ವಿಸರ್ಜಿಸಿದ ಅಪೇಕ್ಷೆಗೊ, ಭೀತಿ, ಕೋಪ ಇಪ್ಪ,  ಮೋಕ್ಷ-ಪರಾಯಣಃ – ಮುಕ್ತಿಗಾಗಿ ಉದ್ಧೇಶಿತನಾಗಿ, ಸ್ಯಾತ್ – ಆಗಿದ್ದು, ಸಃ – ಅವ°,  ಸದಾ – ಯಾವತ್ತೂ, ಮುಕ್ತಃ – ಮುಕ್ತ°, ಏವ – ಖಂಡಿತವಾಗಿಯೂ, . 

ಅನ್ವಯಾರ್ಥ

ಅಧ್ಯಾತ್ಮವಾದಿಯು ಹೆರಾಣ ಇಂದ್ರಿಯವಿಷಯಂಗಳ (ಬಾಹ್ಯಾನ್ ಸ್ಪರ್ಶಾನ್) ದೂರಮಾಡಿ, ಕಣ್ಣುಗಳನ್ನೂ, ದೃಷ್ಟಿಯನ್ನೂ ಎರಡು ಹುಬ್ಬುಗಳ ನಡುವೆ ಕೇಂದ್ರೀಕರಿಸಿ  (ಭ್ರುವೋಃ ಅಂತರೇ ಕೃತ್ವಾ), ಶ್ವಾಸೋಚ್ವಾಸಂಗಳ (ಪ್ರಾಣ-ಅಪಾನೌ) ಮೂಗಿನ ಹೊಳ್ಳೆಗಳಲ್ಲಿ ನಿಲ್ಲುಸಿ (ನಾಸ-ಅಭ್ಯಂತರ-ಚಾರಿಣೌ ಸಮೌ ಕೃತ್ವಾ), ಆ ಮೂಲಕ ಮನಸ್ಸನ್ನೂ ಇಂದ್ರಿಯಂಗಳನ್ನೂ ಬುದ್ಧಿಯನ್ನೂ ನಿಯಂತ್ರಿಸಿ ಮೋಕ್ಷವನ್ನೇ ಗುರಿಯನ್ನಾಗಿ ಮಾಡಿಕೊಂಡಿರುತ್ತ°. ಇಂತಹ ಅಧ್ಯಾತ್ಮವಾದಿ (ಮುನಿಃ) ಆಸೆ, ಭಯ ಮತ್ತೆ ಕ್ರೋಧಂಗಳಿಂದ ಮುಕ್ತನಾವುತ್ತ° (ವಿಗತ). ಸದಾ ಈ ಸ್ಥಿತಿಲಿಪ್ಪವ° ನಿಶ್ಚಯವಾಗಿಯೂ (ಏವ ಸಃ ಸದಾ ಮುಕ್ತಃ) ಮುಕ್ತನಾವುತ್ತ°.

ತಾತ್ಪರ್ಯ/ವಿವರಣೆ

ಕೃಷ್ಣಪ್ರಜ್ಞೆಲಿ ನಿರತನಾದವನ ಆಧ್ಯಾತ್ಮಿಕ ಗುರುತವ ಕಾಂಬಲೆಡಿಗು. ಅವ° ಸದಾ ಭಕ್ತಿಸೇವೆಲಿ ನಿರತನಾಗಿದ್ದು ಭಗವಂತನ ಚಿಂತನೆಲಿಯೇ ಮನಸ್ಸಿನ ಕೇಂದ್ರೀಕರಿಸಿಗೊಂಡಿರುತ್ತ°. ಭಕ್ತಿಸೇವೆಲಿ ಸರಿಯಾಗಿ ನೆಲೆಯ ಕಂಡುಗೊಂಡವ° ಅಲೌಕಿಕ ಸ್ಥಿತಿಗೆ ಏರುತ್ತ°. ಅಂಬಗ ಅವ° ತನ್ನ ಕಾರ್ಯಕ್ಷೇತ್ರಲ್ಲಿ ಭಗವಂತನ ಸಾನ್ನಿಧ್ಯವ ಅನುಭವುಸುವ ಯೋಗ್ಯತೆಯ ಪಡಕ್ಕೊಳ್ಳುತ್ತ°. ಈ ವಿಶಿಷ್ಟ ಸ್ಥಿತಿಯ ಬ್ರಹ್ಮನಿರ್ವಾಣ ಹೇಳಿ ಹೇಳುವದು. ಕೃಷ್ಣಪ್ರಜ್ಞೆಲಿಪ್ಪವ° ಅಷ್ಟಾಂಗಯೋಗ ಹೇಳ್ವ ಯೋಗಾಭ್ಯಾಸಂದ ಆ ಬ್ರಹ್ಮನಿರ್ವಾಣ ಸ್ಥಿತಿಗೆ ತಲಪುತ್ತ°. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಹೇಳ್ವ ಈ ಎಂಟು ಅಷ್ಟಾಂಗಯೋಗ ವಿಷಯಂಗೊ. ಯೋಗದ ಮೂಲಕವಾಗಿ ಪ್ರತ್ಯಾಹಾರ ಪ್ರಕ್ರಿಯೆಂದ ಶಬ್ದ, ಸ್ಪರ್ಶ, ರೂಪ, ರುಚಿ ಮತ್ತೆ ವಾಸನೆ ಇತ್ಯಾದಿ ಇಂದ್ರಿಯ ವಿಷಯಂಗಳ ದೂರಮಾಡೆಕು. ಮತ್ತೆ, ಕಣ್ಣಿನ ನೋಟವ ಎರಡು ಹುಬ್ಬುಗಳ ಮಧ್ಯೆ ನಿಲ್ಲುಸಿ ಕಣ್ಣಿನ ಅರ್ಧಮುಚ್ಚಿ, ಮೂಗಿನ ಕೊಡಿಲಿ ಕೇಂದ್ರೀಕರುಸೆಕು. ಕಣ್ಣಿನ ಪೂರ್ತಿ ಮುಚ್ಚಿ ಪ್ರಯೋಜನ ಇಲ್ಲೆ. ಎಂತಕೆ ಹೇಳಿರೆ., ಕಣ್ಣು ಮುಚ್ಚಿ ಅಲ್ಲಿಗೆ ಒರಗಿಬಿಡುವ ಸಂಭವ ಇದ್ದು. ಕಣ್ಣಿನ ಪೂರ್ತಿ ಬಿಡಿಸಿಮಡಿಕ್ಕೊಂಡೂ ಪ್ರಯೋಜನ ಇಲ್ಲೆ. ಎಂತಕೆ ಹೇಳಿರೆ, ಅಷ್ಟಪ್ಪಗ ಇಂದ್ರಿಯವಸ್ತುಗಳಿಂದ ಆಕರ್ಷಿತರಾಗಿಬಿಡುವ ಅಪಾಯವೂ ಇದ್ದು. ದೇಹಲ್ಲಿ ಮೇಗೆ ಕೆಳ ಹೋಪ ಗಾಳಿಯ ನಿಯಂತ್ರಿಸಿ ಉಸಿರಾಟವ ಮೂಗಿನ ಹೊಳ್ಳೆಗಳಲ್ಲಿ ಕೇಂದ್ರೀಕರುಸೆಕು. ಮನಸ್ಸಿನ ಮೂಲಕ ಅಂತರಂಗಲ್ಲಿ ಇಪ್ಪ ಭಗವಂತನ ಚಿಂತನೆಲಿ ಸುರುಮಾಡೆಕು. ಇಂತಹ ಯೋಗಾಭ್ಯಾಸಂದ ಮನುಷ್ಯ ಇಂದ್ರಿಯಂಗಳ ಮೇಲೆ ಹತೋಟಿಯ ಪಡಕ್ಕೊಂಬಲಕ್ಕು. ಬಾಹ್ಯ ಇಂದ್ರಿಯವಸ್ತುಗಳಿಂದ ದೂರ ಇಪ್ಪಲೆಡಿಗು. ಹೀಂಗೆ ಆ ಪರಬ್ರಹ್ಮನಲ್ಲಿ ಮುಕ್ತಿಗೆ ತನ್ನ ಸಿದ್ಧಪಡಿಸಿಗೊಂಬಲಕ್ಕು.  ಈ ಯೋಗಪ್ರಕ್ರಿಯೆ ಮನುಷ್ಯನ ಎಲ ಬಗೆಯ ಭಯ ಮತ್ತೆ ಕೋಪಂಗಳಿಂದ ಮುಕ್ತನಪ್ಪಲೆ ಸಹಾಯ ಆವ್ತು. ಹೀಂಗೆ ಆಧ್ಯಾತ್ಮಿಕ ಸನ್ನಿವೇಶಲ್ಲಿ ಪರಮಾತ್ಮನ ಸಾನ್ನಿಧ್ಯವ ಅನುಭವುಸಲೆ ನೆರವಾವ್ತು. ಯೋಗತತ್ವಂಗಳ ಆಚರಣಗೆ ಕೃಷ್ಣಪ್ರಜ್ಞೆಯೇ ಅತ್ಯಂತ ಸುಲಭವಾದ ಪ್ರಕ್ರಿಯೆ. ಕೃಷ್ಣಪ್ರಜ್ಞೆಲಿ ಇಪ್ಪವ° ಸದಾ ಭಕ್ತಿಸೇವೆಲಿ ನಿರತನಾಗಿರುತ್ತ°, ಮತ್ತೆ , ತನ್ನ ಇಂದ್ರಿಯಂಗಳ ಬಾಹ್ಯ ಸುಖಕ್ಕೆ ತೊಡಗಿಸಿಗೊಂಬ ಅಪಾಯಂದ ಪಾರಾವ್ತ°. ಇಂದ್ರಿಯಂಗಳ ನಿಯಂತ್ರಣಕ್ಕೆ ಅಷ್ಟಾಂಗಯೋಗಕ್ಕಿಂತ ಕೃಷ್ಣಪ್ರಜ್ಞೆಯೇ ಉತ್ತಮಮಾರ್ಗ. ಅರ್ಥಾತ್, ಕೃಷ್ಣಪ್ರಜ್ಞೆ ಇಲ್ಲದ್ದೆ ಮಾಡುವ ಅಷ್ಟಾಂಗ ಯೋಗ ಮಿಕ್ತಿಗೆ ಸಾಧಕ ಆವ್ತಿಲ್ಲೆ, ಅದು ಬರೇ ಶಾರೀರಿಕ ವ್ಯಾಯಾಮ ಅಷ್ಟೇ ಅಕ್ಕಷ್ಟೆ.  ಭಗವಂತ° ಇಲ್ಲಿ ಹೇಳಿದ್ದು ಬರೇ ಯೋಗತತ್ವಂಗಳ ಆಚರಣೆಂದ ಇಂದ್ರಿಯ ನಿಗ್ರಹ ಮಾಡಿಗೊಂಡರೆ ಅದು ಶಾಶ್ವತ ಅಲ್ಲ., ಬದಲಾಗಿ, ಕೃಷ್ಣಪ್ರಜ್ಞೆಂದ ಯೋಗತತ್ವವ ಪಾಲುಸಿರೆ ಅದು ಬ್ರಹ್ಮನಿರ್ವಾಣ ಸ್ಥಿತಿಯ ತಲುಪಲೆ ಸಹಾಯಕ ಆವ್ತು ಹೇಳಿ. ಸಮಾಜಲ್ಲಿ ಅನೇಕರು ಹೇಳ್ವದು ಇದ್ದು – ‘ಆನು ಯೋಗಾಭ್ಯಾಸ ಮಾಡುತ್ತೆ, ಆನು ಯೋಗ ಮಾಡುತ್ತೆ’ ಹೇಳಿ. ಆದರೆ, ಅದು ದೈಹಿಕ ವ್ಯಾಯಾಮಕ್ಕೆ ಮಾತ್ರ ಸಹಾಯಕ. ಅದೇ ಯೋಗವ ಕೃಷ್ಣಪ್ರಜ್ಞೆಂದ ಪಾಲುಸಿರೆ ಅದು ಬ್ರಹ್ಮನಿರ್ವಾಣಕ್ಕೆ ಏರಲೆಡಿಗಪ್ಪ ಮಾರ್ಗ. 

ಬನ್ನಂಜೆ ವಿವರುಸುತ್ತವುಭಗವದ್ಪ್ರಜ್ಞೆಲಿ ಅಷ್ಟಾಂಗಯೋಗವ ಪಾಲುಸುವ ಸಾಧಕ° ಸದಾ ಮುಕ್ತನೇ ಸರಿ. ಅವು ಪ್ರಪಂಚದ ಬಾಹ್ಯ ವಿಷಯ ಸಂಬಂಧಂಗಳ ಹೆರ ಎಬ್ಬಿ ಕಾಮ-ಕ್ರೋಧ ವಿಷಯಂಗಳಿಂದ  ಮುಕ್ತರಾವುತ್ತವು. ಅದಕ್ಕೆ ಮದಾಲು ನಮ್ಮ ಮನಸ್ಸಿನ ನಿಯಂತ್ರಿಸೆಕು. ಅದಕ್ಕೆ ನಮ್ಮ ಇಂದ್ರಿಯಂಗೊ ಹೆರ ಪ್ರಪಂಚಲ್ಲಿ ತಿರುಗುತ್ತದರ ನಿಯಂತ್ರಿಸೆಕು. “ಸ್ಪರ್ಶಾನ್ ಕೃತ್ವಾ ಬಹಿಃ ಬಾಹ್ಯಾನ್”, ಅರ್ಥಾತ್., ‘ಬಾಹ್ಯಾನ್ ಸ್ಪರ್ಶಾನ್ ಬಹಿಃ ಕೃತ್ವಾ’  ಬಾಹ್ಯೇಂದ್ರಿಯ ಚಟುವಟಿಕೆಗಳ ಹೆರಮಾಡಿ, ಅರ್ಥಾತ್., ನಿಯಂತ್ರಿಸಿ, ಮನಸ್ಸಿನ ನಿಯಂತ್ರಣ ಮಾಡೆಕು. ಇದಕ್ಕಾಗಿ ಹೆರ ಪ್ರಪಂಚದ ರೂಪ-ರಸ-ಸ್ಪರ್ಶ-ಗಂಧ ಹೇಳ್ವ ಸುಖದ ಭ್ರಮೆಯ ಹೆರವೇ ಬಿಡೆಕು. ಅದರೊಟ್ಟಿಂಗೆ ಅನಪೇಕ್ಷಿತವಾಗಿ ನಮ್ಮೊಳ ತುಂಬಿಪ್ಪ, ಸತ್ಯವ ಕಾಂಬಲೆ ಅಡ್ಡಗೋಡೆಯಾಗಿಪ್ಪ, ಈ ಪ್ರಪಂಚದ ಅನುಭೂತಿಯ ಹೆರ ಅಟ್ಟಕು. ಸಾಮಾನ್ಯವಾಗಿ ನವಗೆ ಧ್ಯಾನಕ್ಕೆ ಕೂದಪ್ಪಗ ಎಂತಂತದೋ ಕಾಂಬಲೆ ಸುರುವಾವ್ತು. ಸುಂದರವಾದ್ದು, ಭಯಾನಕವಾದ್ದು ಇತ್ಯಾದಿ.  ಇದಕ್ಕಾಗಿ ಹೆದರೆಕ್ಕಾದ ಅಗತ್ಯ ಇಲ್ಲೆ. ಇವೆಲ್ಲ ನಮ್ಮೊಳ ತುಂಬಿಗೊಂಡಿಪ್ಪ ಅನಗತ್ಯ ವಿಚಾರಂಗೊ. ಅವು ನಮ್ಮಿಂದ ಹೆರ ಹೋದಪ್ಪಗ ಈ ರೀತಿಯ ಅಂಜಿಕೆ ನವಗೆ ತೋರುತ್ತದು ಮಾಂತ್ರ. ಹಠಬಿಡದ್ದೆ ಸಾಧನೆ ಮುಂದುವರಿಸಿಯಪ್ಪಗ ಕ್ರಮೇಣವಾಗಿ ಈ ಎಲ್ಲ ವಿಚಾರಂಗೊ ಹೆರಹೋಗಿ ಮನಸ್ಸು ನಿರ್ಮಲ ಆವ್ತು. ಇದು ಒಂದೇ ದಿನಲ್ಲಿ ಅಪ್ಪಾದ್ದಂತದಲ್ಲ. ಇದಕ್ಕೆ ನಿರಂತರ ಸಾಧನೆ ಅಗತ್ಯ. ಒಂದರಿ ಅಂತಃಕರಣ ಸ್ವಚ್ಛ ಆದರೆ ಅದರಲ್ಲಿ ಮತ್ತೆ ಬೇಕಾದ್ದರ ಪ್ರತಿಬಿಂಬಿಸಲೆಡಿಗು.

ಧ್ಯಾನಕ್ಕೆ ಬೇಕಾದ ಇನ್ನೊಂದು ಮುಖ್ಯವಾದ ಅಂಶ ಹೇಳಿರೆ ಅನ್ನಮಯಕೋಶವ (ದೇಹವ) ಸ್ಥಿರಗೊಳುಸುವದು. ದೇಹ ಚಲಿಸಿರೆ ಮನಸ್ಸೂ ಹಂದಾಡ್ಳೆ ಸುರುವಾವ್ತು. ಅಷ್ಟಪ್ಪಗ ಏಕಾಗ್ರತೆ ಎಡಿತ್ತಿಲ್ಲೆ. ಅದಕ್ಕೆ ನಾವು ಸರೂತ (ಸರ್ತ/ನೆಟ್ಟಗೆ) ನಮ್ಮ ದೇಹವ ಸ್ಥಿರಗೊಳುಸೆಕು. ಹಾಂಗೆ ಕೂದು ನಮ್ಮ ದೃಷ್ಟಿಯ ನಮ್ಮ ಎರಡು ಹುಬ್ಬುಗಳ ನೆಡುಕೆ ನೆಡೆಕು . ನಮ್ಮ ಎರಡು ಹುಬ್ಬುಗಳ ಮಧ್ಯೆ ಇಪ್ಪದು ಆಜ್ಞಾಚಕ್ರ. ಅದರಲ್ಲಿ ನಮ್ಮ ದೃಷ್ಟಿಯ ನೆಟ್ಟಪ್ಪಗ ಈ ಶಕ್ತಿಕೇಂದ್ರ ಜಾಗೃತ ಆವ್ತು. ಇದರಿಂದ ಅನ್ನಮಯ ಕೋಶ ಸ್ಥಿರ ಆವ್ತು. 

ಅನ್ನಮಯಕೋಶದ ಮತ್ತೆ ಪ್ರಾಣಮಯಕೋಶ. “ಪ್ರಾಣ ಅಪಾನೌ ಸಮೌ ಕೃತ್ವಾ ನಾಸಾ ಅಭ್ಯಂತರ ಚಾರಿಣೌ” – ನಮ್ಮ ಒಳ ನಿರಂತರ ವಾಯುವಿನ ಚಲನೆ ಇರುತ್ತು. ಈ ಚಲನೆಯ ಸ್ಥಿರಗೊಳುಸುವದರ ಕುಂಭಕ ಹೇಳುವದು. ಇದರಲ್ಲಿ ಎರಡು ವಿಧ. ಒಂದು ಅಂತಃಕುಂಭಕ ಇನ್ನೊಂದು ಬಾಹ್ಯಕುಂಭಕ. ಅಂತಃಕುಂಭಕಲ್ಲಿ ಮದಲು ಸಂಪೂರ್ಣ ಒಳ ಇಪ್ಪ ಗಾಳಿಯ ಹೆರಹಾಕಿ ಮತ್ತು ಎಷ್ಟು ಹೆಚ್ಚು ಎಡಿತ್ತೋ ಅಷ್ಟು ಶುದ್ಧ ಗಾಳಿಯ ಒಳಂತಾಗಿ ತೆಕ್ಕೊಂಡು ಉಸಿರಿನ ತಟಸ್ಥಗೊಳುಸುವದು. ಬಾಹ್ಯಕುಂಭಕಲ್ಲಿ ಒಳಾಣ ಗಾಳಿಯ ಸಂಪೂರ್ಣ ಹೆರಹಾಕಿ ಅದೇ ಸ್ತಿತಿಲಿ ಉಸಿರಿನ ಸ್ಥಗಿತಗೊಳುಸುವದು. ಹೀಂಗೆ ಕುಂಭಕಂದ ಪ್ರಾಣಮಯಕೋಶ ಸ್ಥಿರ ಆವ್ತು.

ಮತ್ತಾಣದ್ದು ಮನೋಮಯ ಮತ್ತು ವಿಜ್ಞಾನಮಯಕೋಶ. ನಮ್ಮ ಮನಸ್ಸು ಚಂಚಲ. ಒಂದಿಕ್ಕೇ ನಿಲ್ಲುತ್ತಿಲ್ಲೆ. ಹಾಂಗಾಗಿ ಅದರ ಸ್ಥಿರಗೊಳುಸೆಕು. ‘ಈ ದಾರಿಲಿ ಸಾಗಿ ಸಿದ್ಧಿ ಪಡದೇ ಪಡೆತ್ತೆ’, ಹೇಳ್ವ ಹಠಗಟ್ಟಿ ಮನಸ್ಸಿನ ಅದಕ್ಕೆ ಅಣಿಗೊಳುಸುವದು. ಇದರಿಂದ ಚಿತ್ತ ಭಗವಂತನಲ್ಲಿ ಕೇಂದ್ರೀಕೃತ ಆವ್ತು. ಈ ಮೂಲಕ ನಮ್ಮ ಚಿತ್ತ ಭಗವಂತನಲ್ಲಿ ಚಿತ್ತ ಏಕಾಗ್ರಗೊಳ್ಳುತ್ತು. ಈ ಸ್ಥಿತಿ ಭೌತಿಕವಾಗಿ ನಾವು ಪಡವಲಪ್ಪದರಿಂದ ಬಹು ಉತ್ತಮ ಮತ್ತೆ ಮಹತ್ತಾದ ಸ್ಥಿತಿ. ಇದರಲ್ಲಿ ಇಪ್ಪ ಆನಂದ ಅಪರಿಮಿತ. ಈ ಸ್ಥಿತಿಲಿ ಇಪ್ಪ ಸುಖವ ಅನುಭವಿಸಿದರೆ ಮುಂದೆ ಬಾಹ್ಯಪ್ರಪಂಚಲ್ಲಿ ಎಂದೂ ನಮ್ಮ ಮನಸ್ಸು ಹರಿತ್ತಿಲ್ಲೆ. ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತು. ಇದರಿಂದ ಆಸೆ-ಭಯ-ಕ್ರೋಧ ಎಲ್ಲವೂ ದೂರ ಆವ್ತು. “ಇಂತಹ ಸಾಧಕ° ಸದಾ ಮುಕ್ತನಾವುತ್ತ°”.

ಹಾಂಗಾರೆ ಆ ಸ್ಥಿತಿಲಿ, ನಾವೆಂದೂ ಕಾಣದ್ದ ಆ ಭಗವಂತನ ಯಾವ ರೀತಿಲಿ ಕಾಣೆಕು? –

ಶ್ಲೋಕ

ಭೋಕ್ತಾರಂ ಯಜ್ಞತಪಸಾಂ ಸರ್ವಲೋಕಮಹೇಶ್ವರಮ್ ।
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ॥೨೯॥

ಪದವಿಭಾಗ

ಭೋಕ್ತಾರಮ್ ಯಜ್ಞ-ತಪಸಾಮ್ ಸರ್ವ-ಲೋಕ-ಮಹೇಶ್ವರಮ್ । ಸುಹೃದಮ್ ಸರ್ವ-ಭೂತಾನಾಮ್ ಜ್ಞಾತ್ವಾ ಮಾಮ್ ಶಾಂತಿಮ್ ಋಚ್ಛತಿ ॥

ಅನ್ವಯ

ಯಜ್ಞ-ತಪಸಾಂ ಭೋಕ್ತಾರಂ ಸರ್ವ-ಭೂತಾನಾಂ ಸುಹೃದಂ ಸರ್ವ-ಲೋಕ-ಮಹೇಶ್ವರಂ ಮಾಂ ಜ್ಞಾತ್ವಾ ಶಾಂತಿಂ ಋಚ್ಛತಿ ।

ಪ್ರತಿಪದಾರ್ಥ

ಯಜ್ಞ-ತಪಸಾಮ್  ಭೋಕ್ತಾರಮ್ – ಯಜ್ಞ ತಪಸ್ಸು ಮತ್ತೆ ವ್ರತಂಗಳ ಭೋಕ್ತಾರನಾದ,   ಸರ್ವ-ಭೂತಾನಾಮ್ – ಎಲ್ಲ ಜೀವಿಗಳ, ಸುಹೃದಮ್ – ಆಶ್ರಯದಾತನಾದ, ಸರ್ವ-ಲೋಕ-ಮಹೇಶ್ವರಮ್ – ಎಲ್ಲಲೋಕಂಗಳ ಮತ್ತು ದೇವತೆಗಳ ಪರಮಪ್ರಭುವಾದ, ಮಾಮ್ – ಎನ್ನ, ಜ್ಞಾತ್ವಾ – ತಿಳ್ಕೊಂಡು, ಶಾಂತಿಮ್ – ಭೌತಿಕವೇದನೆಗೊಕ್ಕೆ ಪರಿಹಾರವಾದ ಶಾಂತಿಯ, ಋಚ್ಛತಿ – ಪಡೆತ್ತ°.

ಅನ್ವಯಾರ್ಥ

ಎನ್ನ ವಿಷಯವಾಗಿ ಸಂಪೂರ್ಣಪ್ರಜ್ಞೆಯ ಮಡಿಕ್ಕೊಂಡು ಎಲ್ಲ ಯಜ್ಞಂಗಳ ಮತ್ತು ತಪಸ್ಸುಗಳ ಕಟ್ಟಕಡೆಯ ಭೋಕ್ತೃ ಆನೇ, ಎಲ್ಲ ಲೋಕಂಗಳ ಮತ್ತು ದೇವತೆಗಳ ಪರಮ ಪ್ರಭು ಆನೇ, ಮತ್ತೆ ಎಲ್ಲ ಜೀವಿಗಳ ಆಶ್ರಯದಾತ°, ಉಪಕಾರಿ, ಹಿತೈಷಿ (ಸುಹೃದ್) ಆನೇ ಹೇಳಿ ತಿಳ್ಕೊಂಡು ಮನುಷ್ಯ° ಐಹಿಕ ದುಃಖಂಗಳ ಯಾತನೆಂದ ಮುಕ್ತನಾಗಿ ಶಾಂತಿಯ ಪಡೆತ್ತ°.

ತಾತ್ಪರ್ಯ/ವಿವರಣೆ

ಮಾಯಾಶಕ್ತಿಯ ಹಿಡಿತಕ್ಕೆ ಸಿಲುಕಿ ಎಲ್ಲ ಜೀವಾತ್ಮಂಗಳೂ ಐಹಿಕ ಜಗತ್ತಿಲ್ಲಿ ಶಾಂತಿಯ ಪಡವಲೆ ಕಾತರಲ್ಲಿ ಇರುತ್ತವು. ಅವಕ್ಕೆ ಶಾಂತಿಯ ಸೂತ್ರ ಗೊಂತಿರುತ್ತಿಲ್ಲೆ. ಅದರ ಸೂತ್ರ ಇದುವೇ – ಎಲ್ಲ ಮನುಷ್ಯರ ಕಾರ್ಯಂಗಳ ಫಲವು ಭಗವಂತನದ್ದು. ಅವನೇ ಎಲ್ಲ ಲೋಕಂಗಳ ಮತ್ತು ದೇವತೆಗಳ ಒಡೆಯ°. ಹಾಂಗಾಗಿ ಸಮಸ್ತ ಮನುಷ್ಯರೂ ತಮ್ಮ ಸರ್ವಸ್ವವನ್ನೂ ಭಗವಂತನ ದಿವ್ಯಸೇವಗೆ ಅರ್ಪುಸೆಕು. ಅವನಿಂದ ಶ್ರೇಷ್ಠ° ಇನ್ನೊಬ್ಬ° ಇಲ್ಲೆ. ದೇವತೆಗಳಲ್ಲಿ ಶ್ರೇಷ್ಠರಾದ ಶಿವ ಬ್ರಹ್ಮರಿಂದಲೂ ಶ್ರೇಷ್ಠ° – ಈ ಭಗವಂತ°. ಮಾಯೆಯ ಪ್ರಭಾವಂದಲಾಗಿ ತನಗೆ ಕಂಡದ್ದೆಲ್ಲಾ ತನ್ನದಾಯೇಕು ಹೇಳ್ವ ಆಸೆ ಮತ್ತು ಅದರ ಒಡೆಯನಪ್ಪಲೆ ಪ್ರಯತ್ನಿಸುತ್ತವು ಮನುಷ್ಯರು. ಅದು ಸಿಕ್ಕದ್ದಪ್ಪಗ ಮತ್ತೆ ಕ್ರೋಧಕ್ಕೆ ತುತ್ತಾಗಿ ಮನೋವಿಕಲ್ಪಕ್ಕೆ ತುತ್ತಾವ್ತವು. ಭಗವಂತ° ಈ ಐಹಿಕ ಪ್ರಕೃತಿಯ ಒಡೆಯ°. ಮನುಷ್ಯರು ಈ ಐಹಿಕ ಪ್ರಕೃತಿಯ ಕಟ್ಟುನಿಟ್ಟಿಂಗೆ ಒಳಗಾಗಿಯೊಂಡಿಪ್ಪದು. ಈ ವಾಸ್ತವಾಂಶವ ಮನುಷ್ಯ° ಅರ್ಥಮಾಡಿಕೊಳ್ಳೆಕ್ಕಾಗಿದ್ದು. ಅಲ್ಲದ್ರೆ ಪ್ರಪಂಚಲ್ಲಿ ವೈಯಕ್ತಿಕವಾಗಲೀ, ಸಾಮೂಹಿಕವಾಗಲೀ ಶಾಂತಿಯ ಸಾಧುಸಲೆ ಎಡಿಯ. ಕೃಷ್ಣಪ್ರಜ್ಞೆಯ ಅರ್ಥ ಇದು. ಭಗವಂತನೇ ಸರ್ವಾಧಿಕಾರಿ. ಸಮಸ್ತವೂ ಅವನ ಅಧೀನಕ್ಕೆ ಒಳಪ್ಪಟ್ಟದ್ದು. ಕೃಷ್ಣಪ್ರಜ್ಞೆಲಿ ಇದರ ತಿಳುದಪ್ಪಗ ಮನುಷ್ಯಂಗೆ  ಶಾಂತಿಯು ಸಾಧ್ಯ.  

“ಭೋಕ್ತಾರಂ ಯಜ್ಞತಪಸಾಂ” – ಎಲ್ಲ ಯಜ್ಞ-ತಪಸ್ಸುಗಳ ಭೋಕ್ತಾರ° ಆ ಭಗವಂತನೇ. ಇಲ್ಲಿ ಯಜ್ಞ ಹೇಳಿರೆ ಬರೇ ಹೋಮ ಅಲ್ಲ, ಈ ಮದಲೇ ಹೇಳಿದ ಹಾಂಗೆ ಎಲ್ಲ ರೀತಿಯ ‘ಯಜ್ಞ’ . ಯಜ್ಞಲ್ಲಿ ಅರ್ಪಿಸುವ ಹವಿಸ್ಸೂ ಕೂಡ ದೇವತೆಗಳ ಒಳ ಅಂತರ್ಯಾಮಿಯಾಗಿಪ್ಪ ಭಗವಂತಂಗೇ ಸೇರುವದು ಹೇಳಿ ತಿಳ್ಕೊಂಡು ಅರ್ಪಿಸೆಕು. ಭಗವಂತಂಗೆ ಅರ್ಪುಸದ್ದೆ ಅರ್ಪುಸುವ ಯಾವ ಹವಿಸ್ಸನ್ನೂ ದೇವತೆಗೊ ಮುಟ್ಟುತ್ತವಿಲ್ಲೆ. ನಮ್ಮ ಪ್ರತಿಯೊಂದು ನಡೆಲಿಯೂ ಆ ಭಗವಂತನ ಅನುಸಂಧಾನ ಇರೆಕು. ಅವ° ಸರ್ವಸಮರ್ಥ°, ಸರ್ವಕಾರ್ಯಂಗಳ ನಿಯಾಮಕ, ಇಲ್ಲಿ ಇಪ್ಪದು ಎಲ್ಲವೂ ಅವನದ್ದು, ಎಲ್ಲವೂ ಅವಂಗೇ ಸೇರೆಕ್ಕಪ್ಪದು ಹೇಳ್ವ ಜ್ಞಾನ ನಮ್ಮಲ್ಲಿ ಸದಾ ಇರೆಕು. ದೈಹಿಕವಾಗಿ, ಮಾನಸಿಕವಾಗಿ, ವಾಚಕವಾಗಿ ಅಚಲವಾದ ಈ ದೀಕ್ಷೆ ಇರೆಕು. ಸದಾ ಮನಸ್ಸಿಲ್ಲಿ ‘ಸತ್ಯ’ದ ಆಳ ಚಿಂತನೆ ಇರೆಕು ಮತ್ತು ಎಲ್ಲೋರ ಬಗ್ಗೆ ಸದ್ಭಾವ ಇರೆಕು. ಹೀಂಗೆ ಇದೂ ಒಂದು ತಪಸ್ಸು. ಹಾಂಗಾಗಿ ಪ್ರತಿಯೊಂದು ವಿಷಯವವೂ ಭಗವಂತ° ಹೇಳಿ ತಿಳ್ಕೊಂಬದು –  ಯಜ್ಞ, ತಪಸ್ಸು.

ಕೆಲವರಿಂಗೆ ಭಗವಂತ° / ದೇವರು ಹೇಳಿರೆ ಹೆದರಿಕೆ. ಬೇಕಾದ್ದೇ!. ಆದರೆ ಎಲ್ಲಿವರೇಂಗೆ ಕೃಷ್ಣಪ್ರಜ್ಞೆ ಇರ್ತಿಲ್ಲಿಯೋ ಅಲ್ಲಿವರೇಂಗೆ ಹೆದರಿಕೆ ತಪ್ಪಿದ್ದೂ ಅಲ್ಲ. ಆದರೆ ಕೃಷ್ಣಪ್ರಜ್ಞೆಲಿ ಇಪ್ಪವಂಗೆ ಸರ್ವಸ್ವವೂ ಪರಮಾತ್ಮನೇ ಆದ್ದರಿಂದ ಹೆದರಿಕೆ ಬೇಕಾಗಿಲ್ಲೆ ಹೇಳಿ ಹೇಳ್ತ° ಇಲ್ಲಿ ಭಗವಂತ. ”ಸುಹೃದಂ ಸರ್ವಭೂತಾನಾಂ”  – ಭಗವಂತನ ಬಗ್ಗೆ ಎಂದೂ ಭಯಪಡೆಕ್ಕಾದ್ದಿಲ್ಲೆ. ಅವನ ಹಾಂಗಿಪ್ಪ ಆತ್ಮೀಯ ಮಿತ್ರ° ಇನ್ನೊಬ್ಬ ಇಲ್ಲೆ. ನಮ್ಮ ಸದಾ ಪ್ರೀತಿಸುವವ ಅವ°; ನಿರಂತರ ನಮ್ಮ ಒಳವೂ ಹೆರವೂ ಇದ್ದು ಧೈರ್ಯ ತುಂಬಿ ರಕ್ಷಿಸುವವ ಶಕ್ತಿ ಆ ಭಗವಂತ. ಅವರವರ ಯೋಗ್ಯತೆಗೆ ಅನುಸಾರವಾಗಿ ಫಲವ ನೀಡಿ ಬೆಳಶುವವ ಆ ಭಗವಂತ. ನಾವು ತಪ್ಪು ಮಾಡಿಯಪ್ಪಗ ಕೇವಲ ನಮ್ಮ ತಿದ್ದುವದಕ್ಕೆ ಶಿಕ್ಷೆಕೊಟ್ಟು ಸರಿದಾರಿ ತೋರುಸುವ, ಸದಾ ಕಾರುಣ್ಯ ಸಿಂಧು, ನಮ್ಮ ಉದ್ಧರುಸುವ ‘ಸುಹೃತ್’ ಆ ಭಗವಂತ. ಇಂತಹ ಕರುಣಾಳು ಇನ್ನೊಬ್ಬ ಇಲ್ಲೆ ಹೇಳ್ವ ಜ್ಞಾನ ನಮ್ಮ ಧ್ಯಾನಲ್ಲಿ ಬಹು ಮುಖ್ಯ.ಈ ವಿಚಾರವ ತಿಳುದು ಅನುಸರುಸುವವ° ಜ್ಞಾನಾನಂದದ ಪರಕಾಷ್ಠೆಯ ಮೋಕ್ಷವ ಪಡೆತ್ತ ಹೇದು ಬನ್ನಂಜೆಯವರ ವ್ಯಾಖ್ಯಾನಂದ ಗುರುತಿಸಿದ್ದು. 

ಗೀತೆಯ ಎರಡನೇ ಅಧ್ಯಾಯಲ್ಲಿ ಭಗವಂತ°, ಅರ್ಜುನನ ಸಂಶಯಂಗೊಕ್ಕೆ ಉತ್ತರರೂಪವಗಿ ಜ್ಞಾನದ ಮೂಲಕ ವಿಷಯ ತಿಳ್ಕೊಳ್ಳೆಕ್ಕು ಹೇಳಿ ಬೋಧಿಸುತ್ತ°. ಅದಕ್ಕೆ ಅರ್ಜುನ ಕರ್ಮಕ್ಕಿಂತ ಜ್ಞಾನವೇ ಮುಖ್ಯವಾದರೆ, ಎನ್ನ ಎಂತಕೆ ಯುದ್ಧ ಮಾಡ್ಳೆ ಹೇಳ್ತೆ ಹೇಳಿ ತನ್ನ ಸಂಶಯವ ಮುಂದಿಡುತ್ತ°. ಮೂರನೇ ಅಧ್ಯಾಯಲ್ಲಿ ಕರ್ಮಯೋಗದ (ಕರ್ಮಾಚರಣೆಯ ಅವಶ್ಯಕತೆಯ) ಬಗ್ಗೆ ವಿಸ್ತೃತ ವಿವರಣೆಯ ಕೊಡುತ್ತ ಭಗವಂತ°. ಭಕ್ತಿಪ್ರಧಾನವಾದ ಕರ್ಮಯೋಗ ಭಗವಂತ° ಹೇಳಿದ್ದು. ಸ್ತಂತ ಆಸಕ್ತಿಯನ್ನೂ, ಮೋಹವನ್ನೂ ಬಿಟ್ಟು ಭಗವಂತನ ಆಸಕ್ತಿಗೆ ಕರ್ಮ ಮಾಡೆಕ್ಕು ಹೇಳಿ ವಿವರಿಸಿದ್ದು ಭಗವಂತ°. ನಾಲ್ಕನೇ ಅಧ್ಯಾಯಲ್ಲಿ ಜ್ಞಾನಪ್ರದವಾದ ಕರ್ಮಯೋಗ ಆಯೇಕು ಹೇಳಿ ಭಗವಂತ ಮತ್ತೆ ವಿವರಿಸಿದ್ದ°. ಜ್ಞಾನಯೋಗವೇ ಕರ್ಮಸಂನ್ಯಾಸ ಹೇಳಿ ಭಗವಂತ° ಸ್ಪಷ್ಟಪಡಿಸಿದ್ದ. ಅದಕ್ಕೆ ಮತ್ತೆ ಈ ಐದನೇ ಅಧ್ಯಾಯಲ್ಲಿ  ಅರ್ಜುನ° ಭಗವಂತನತ್ರೆ ಕರ್ಮಯೋಗ – ಕರ್ಮಸಂನ್ಯಾಸಯೋಗ ಇವ್ವೆರಡರಲ್ಲಿ ಏವುದರ ಆನು ತೆಕ್ಕೊಳ್ಳೆಕ್ಕಾದ್ದು ಹೇಳಿ ಮತ್ತೂ ಸ್ಪಷ್ಟೀಕರಣ ಕೇಳುತ್ತ°. ಫಲದೃಷ್ಟಿಂದ ಎರಡೂ ಸಮಾನವಾಗಿದ್ದರೂ ಸಾಧಕಂಗೆ ಕರ್ಮಸಂನ್ಯಾಸಕ್ಕಿಂತ ಕರ್ಮಯೋಗವೇ ಶ್ರೇಯಸ್ಕರ ಹೇಳಿ ತೀರ್ಮಾನಹೇಳ್ತ° ಭಗವಂತ°. ಎರಡೂ ಸಾಧನಗಳ ಆಕಾರ ಮತ್ತು ಫಲ-ಪ್ರಯೋಜನಂಗಳ ನಿರೂಪಿಸಿಕ್ಕಿ ಸಂಕ್ಷಿಪ್ತವಾಗಿ ಧ್ಯಾನಯೋಗದ ಬಗ್ಗೆಯೂ ತಿಳಿಶಿದ್ದ°. ಧ್ಯಾನಯೋಗಕ್ಕೂ ಕರ್ಮಯೋಗದ ಆವಶ್ಯಕತೆ ಇಪ್ಪದಾಗಿಯೂ ವಿವರಿಸಿದ್ದ°.  ಹಾಂಗಾರೆ ‘ಜ್ಞಾನಪ್ರದವಾದ ಕರ್ಮಯೋಗವ ಭಕ್ತಿಯೋಗಕ್ಕೆ ಸ್ವೀಕರಿಸಿದರೆ ಶಾಂತಿ ನಿಶ್ಚಯ’ ಹೇಳಿ ಭಗವಂತ° ಹೇಳಿದ್ದ° ಎಂಬಲ್ಯಂಗೆ –

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕರ್ಮಸಂನ್ಯಾಸಯೋಗೋನಾಮ ಪಂಚಮೋsಧ್ಯಾಯಃ ||

ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ‘ಕರ್ಮಸಂನ್ಯಾಸಯೋಗ’ ಹೇಳ್ವ ಐದ್ನೇ ಅಧ್ಯಾಯ ಮುಗುದತ್ತು.

|| ಗೀತಾಚಾರ್ಯ ಶ್ರೀಕೃಷ್ಣ ಭಗವಾನ್ ಕೀ…. ಜೈ || ಗೀತಾ ಮಾತಾ ಕೀ …. ಜೈ || ಗೋಪಾಲಕೃಷ್ಣ ಭಗವಾನ್ ಕೀ .. ಜೈ ||

॥ ಶ್ರೀಕೃಷ್ಣಾರ್ಪಣಮಸ್ತು ॥

  ….ಮುಂದುವರಿತ್ತು

 ಶ್ಲೋಕಂಗಳ ಕೇಳ್ಳೆ –
SRIMADBHAGAVADGEETHA – CHAPTER 05 – SHLOKAS 21 – 29 by CHENNAI BHAAVA

ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download  : www.addkiosk.in ; www.giri.in

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  “ಕೇವಲ ಬಾಹ್ಯ ಸುಖವ ಬಿಡುವುದಷ್ಟೇ ಅಲ್ಲ, ಅದರ ಒಟ್ಟಿಂಗೆ ಒಳಾಣ ಆನಂದವ ಹಿಡಿಯೆಕು.”…
  ಇದು ಸಾಧನೆಗೆ ಅತ್ಯಂತ ಸುಲಭದ ದಾರಿ… ನಾವು ಒಳಾಣ ಆನಂದಲ್ಲಿ ಆಸಕ್ತಿ ಬೆಳೆಸುತ್ತಾ ಹೋದರೆ ಸಾಕು… ಬಾಹ್ಯ ಆಸಕ್ತಿ ತನ್ನಿಂತಾನಾಗಿ ಕಡಮ್ಮೆ ಆವುತ್ತು…

  ಒಬ್ಬ ಸಾಹಿತಿ,ವಿಜ್ಹಾನಿ,ಸಂಗೀತ ಪ್ರೇಮಿ ಆರ ಬೇಕಾರೂ ನೋಡಿದರೆ ಅವು ಅದರಲ್ಲಿ ತಲ್ಲೀನ ಆಗಿಪ್ಪಗ ಅವಕ್ಕೆ ಬಾಹ್ಯ ಸುಖದ ಆಸಕ್ತಿ ಇರುತ್ತಿಲ್ಲೇ… ಇದೆ ತರ ಆಸಕ್ತಿಯ ಆಂತರ್ಯದ ಮೇಲೆ ಬೆಳೆಸುತ್ತಾ ಹೋದರೆ ಆ ಪರಮಾನಂದ ಸಿಕ್ಕುತ್ತು…

  [Reply]

  VA:F [1.9.22_1171]
  Rating: +1 (from 1 vote)
 2. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ನಮೊ ನಮಃ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆದೊಡ್ಮನೆ ಭಾವಕೇಜಿಮಾವ°ಸುವರ್ಣಿನೀ ಕೊಣಲೆಅಜ್ಜಕಾನ ಭಾವಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಅಕ್ಷರ°ವೇಣಿಯಕ್ಕ°ಶುದ್ದಿಕ್ಕಾರ°ದೊಡ್ಡಭಾವಸರ್ಪಮಲೆ ಮಾವ°ದೇವಸ್ಯ ಮಾಣಿಸಂಪಾದಕ°ಡೈಮಂಡು ಭಾವಅಕ್ಷರದಣ್ಣಗಣೇಶ ಮಾವ°ಹಳೆಮನೆ ಅಣ್ಣಕಜೆವಸಂತ°ಮುಳಿಯ ಭಾವಪೆಂಗಣ್ಣ°ಬೋಸ ಬಾವಪುತ್ತೂರಿನ ಪುಟ್ಟಕ್ಕಶಾ...ರೀದೀಪಿಕಾಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ