ತರವಾಡುಮನೆಲಿ ಈ ಸರ್ತಿ ಟೀವಿಬುಡಲ್ಲೇ ದೀಪಾವಳಿ..!?

November 5, 2010 ರ 12:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದಾ, ಮತ್ತೊಂದರಿ ಬೆಣಚ್ಚಿನ ಹಬ್ಬದ ಗವುಜಿ ಬಂತು!
ಒಂದೊರಿಶ ಕತ್ತಲೆಲೇ ಒರಕ್ಕುತೂಗಿದ ಲೋಕ ಮತ್ತೊಂದರಿ ಬೆಣಚ್ಚಿಲಿ ಬೆಳಗುತ್ತ ಪುಣ್ಯಪರ್ವ.
ನರಕಾಸುರನ ಕೊಂದು ಕೃಷ್ಣಚಾಮಿ ಲೋಕೋದ್ಧಾರಮಾಡಿದ ನೆಂಪಿಂಗೆ ಹಬ್ಬ ಆಚರಣೆ ಮಾಡ್ತ ಪುಣ್ಯದಿನ..
ಚಕ್ರವರ್ತಿ ಬಲಿ ಫಲಪುಷ್ಪ ಸಮೃದ್ಧಿಯಾಗಿಪ್ಪ ಭೂಲೋಕದ ಅವನ ರಾಜ್ಯವ ಮತ್ತೊಂದರಿ ನೋಡ್ಳೆ ಬತ್ತ ಕಾಲ..
ಹಳ್ಳಿಮನೆಗಳ ಹಟ್ಟಿಲಿಪ್ಪ ಉಂಬೆದನಗಳ ಚೆಂದಕೆ ಮೀಶಿ, ಕುಂಕುಮದ ಬೊಟ್ಟುಮಡಗಿ ಆರತಿಎತ್ತಿ ಗೋಪೂಜೆನೈವೇದ್ಯ ಮಾಡ್ತ ಕಾಲ..
ಮಕ್ಕೊ ಎಲ್ಲ ಎಣ್ಣೆಕಿಟ್ಟಿ ಮಿಂದು, ಗುದ್ದುಪಟಾಕಿ ಗುದ್ದಿ, ಕೈಬೇನೆ ಮಾಡಿಗೊಂಡು, ಲಡಾಯಿ ಬೊಬ್ಬೆ ಕೊಡ್ತ ಸಮೆಯ..
ಊರೋರಿಂಗೆ ಹೊಸ ಅಂಗಿ, ಹೊಸ ಒಸ್ತ್ರಂಗಳ ಹಾಕಿಂಡು, ಗವುಜಿ ಮಾಡ್ತ ಸಮೆಯ..
ಅಂಗುಡಿಯವಕ್ಕೆ ಅಂಗುಡಿಪೂಜೆಮಾಡಿ ಜೆನಂಗಳ ಎಳಕ್ಕೊಳ್ತ ಸಮೆಯ..
ಚತುರ್ದಶಿಂದ ತೊಡಗಿ, ಮುಂದಾಣ ದ್ವಾದಶಿ ಒರೆಂಗೆ ಒಂದಲ್ಲಾ ಒಂದು ರೀತಿಲಿ ಆಚರುಸಿ, ತಂದ ಪಟಾಕಿಗಳ ಪೂರ್ತ ಮುಗುಶಿ, ಬಣ್ಣ ಬಣ್ಣದ ಬೆಣಚ್ಚಿನ ನೋಡ್ತ ಕಾಲ!
ಒಟ್ಟಾರೆಯಾಗಿ ಲೋಕ ಇಡೀಕ ಹೊಸ ಬೆಣಚ್ಚಿಲಿ ಬೆಳಗ್ಗುತ್ತ ಪುಣ್ಯಪರ್ವಕಾಲ!
ದೀಪಾವಳಿಗೆ ಲೋಕವೇ ಬೆಳಗುತ್ತಡ, ಇನ್ನು ಬೈಲು ಬೆಳಗದ್ದೆ ಇಕ್ಕೋ!
~
ಕಳುದೊರಿಶದ ಈ ವಾರವೂ ನವಗೆ ಇದೇ ಶುದ್ದಿ. (http://oppanna.com/oppa/balindra-baleendra-hariyo-hari)

ದೀಪಾವಳಿ ಹೇಳಿರೆ ಎಂತರ, ಯೇವದಿನ ಯೇವ ಲೆಕ್ಕಲ್ಲಿ ಗವುಜಿ, ಆರಾರು ಹೇಂಗೇಂಗೆ ಆಚರಣೆ ಮಾಡ್ತವು – ಈ ಬಗ್ಗೆ ಕಳುದವಾರ ನೋಡಿದ್ದು ನಾವು!
ಅಲ್ಲದೋ? (ಶುದ್ದಿ ಇಲ್ಲಿದ್ದು)
ಹಳ್ಳಿಗಳಲ್ಲಿ ಮಾಡ್ತ ಆಚರಣೆಗಳ ವಿವರ ನಾವು ಕಳುದೊರಿಶ ಮಾತಾಡಿದ್ದಾತು.
~
ನಮ್ಮ ಹಳೆಕಾಲದ ಕ್ರಮಂಗಳಲ್ಲೇ ನೆಡಕ್ಕೊಂಡು ಬಂದು, ನಮ್ಮ ಬೈಲಿಂಗೇ ಆದರ್ಶ ಆಗಿಪ್ಪ ಸಾಂಸ್ಕೃತಿಕ ಮನೆ – ಆಚಕರೆಯ ತರವಾಡುಮನೆ.
ಈ ಮೇಗೆ ಹೇಳಿದ ಎಲ್ಲಾ ಆಚರಣೆಗೊ ಅಲ್ಲಿ ನೆಡಗು.
ಅದು ಸುರು ಆದ್ದದು ಈ ಒರಿಶ ಅಲ್ಲ, ಯೇವಾಗ ಹೇಳ್ತ ಸಂಗತಿ ಶಂಬಜ್ಜಂಗೂ ಗೊಂತಿದ್ದಿರ – ಎಷ್ಟೋ ಒರಿಶಂದ ಅದು ನೆಡಕ್ಕೊಂಡು ಬಯಿಂದು.
ಪ್ರತಿ ಒರಿಶ ನಿರಂತರ!
ಈ ವಾರ ಇದೇ ಶುದ್ದಿಯ ಮಾತಾಡುವೊ ಆಗದೋ?!
~
ಚತುರ್ದಶಿ ದಿನ ಮಕ್ಕಳ ಮೀಶುತ್ತದರ ಬಗ್ಗೆ ನವಗೆ ಅರಡಿಗು.
ತರವಾಡುಮನಗೆ ಪುಳ್ಯಕ್ಕೊಗೆ ಬರೆಗ್ಗಾಲ ಇದ್ದೋ! – ಈಗ ಇಪ್ಪಲೂ ಸಾಕು, ಮದಲಿಂಗೆ ಖಂಡಿತಾ ಇದ್ದಿರ.
ಹಾಂಗೆ, ಎಲ್ಲಾ ಪುಳ್ಯಕ್ಕೊ ಅಲ್ಲಿ ಸೇರಿಗೊಂಡು ಗವುಜಿ ಮಾಡಿಗೊಂಡು, ಹಬ್ಬ ಆಚರುಸಿಗೊಂಡು ಇದ್ದಿದ್ದವಡ.
ಕಾಂಬುಅಜ್ಜಿ ಮಕ್ಕಳ ಮೀಶುದು ಹೇಳಿರೆ ಮದಲಿಂಗೇ ಪ್ರಸಿದ್ಧ.
ಯೇವಾ ಅರ್ಗೆಂಟಿನ ಮಾರಿಗೊ ಆದರೂ ಅಜ್ಜಿಯ ಕೊಂಗಾಟಕ್ಕೆ ಬಗ್ಗುಗಡ.
ಬೆಶಿಬೆಶಿ ನೀರು ಮೈಗೆ ಬೀಳುವಗ ಒಂದರಿ ಕೂಗಾಣ ಆದರೂ, ಪ್ರೀತಿಲಿ ಹಾಕಿದ ಎಣ್ಣೆ ಇಡೀಕ ಹೋಪನ್ನಾರ ಕಾಂಬುಅಜ್ಜಿ ಸೀಗೆಹೊಡಿ ಹಾಕಿ ಮೀಶಿರೆ, ಮಕ್ಕೊಗೂ, ಅವರ ಅಮ್ಮಂದ್ರಿಂಗೂ – ನೆಮ್ಮದಿ ಅಕ್ಕಡ.
ಮಕ್ಕೊ ಕೂಗಿ ಉರುಡುಲೆ ಸುರುಮಾಡಿರೆ ‘ನಿನ್ನ ಅಬ್ಬೆಯನ್ನೇ ಮೀಶಿ ಅರಡಿಗು ಎನಗೆ’ ಹೇಳಿಗೊಂಡು ಕಾಂಬುಅಜ್ಜಿ ಪರಂಚುಗಡ. :-)
ಮೀಯಾಣ ಆದ ಮತ್ತೆ ಮಕ್ಕೊಗೆ ಪುರುಸೊತ್ತೇ ಅನ್ನೇ! ಪುಳ್ಯಕ್ಕೊಗೆ ಬೇಕಾದಷ್ಟು ಗುದ್ದುಪಟಾಕಿಯ ರಂಗಮಾವ ತಂದು ಮಡುಗ್ಗಡ.
ಕಾಂಬುಅಜ್ಜಿ ಪರಂಚಲೆ, ಮಕ್ಕೊ ನಾಕೈದು ಒಟ್ಟಿಂಗೆ ಮಡಗಿ ಹೊಟ್ಟುಸಲೆ, ಮುಗುದ ಹಾಂಗೆ ರಂಗಮಾವ ತಂದು ಕೊಡ್ಳೆ! ಹಬ್ಬ ಎಲ್ಲೋರಿಂಗೂ ಕೊಶಿಯನ್ನೇ ಕೊಟ್ಟೋಂಡಿದ್ದಿಕ್ಕು!
~
ಮರದಿನ ಅಮಾಸೆದಿನ ಕರಿಕತ್ತಲೆಗೆ ದೀಪಂಗಳ ಹೊತ್ತುಸಿಗೊಂಡು, ಬಾಳೆದಂಡಿನ ಬಲೀಂದ್ರನ ಹಾಕಿಂಡು, ಬಲೀಂದ್ರಾ ಬಲೀಂದ್ರಾ – ಹರಿಯೋ ಹರಿ – ಹೇಳಿ ಬೊಬ್ಬೆಯ ಗವುಜಿ ಮಾಡ್ತದುದೇ ಬೈಲಿಂಗೆ ಅರಡಿಗು.
ಒಂದು ಗೆನಾ ಬಾಳೆಸೆಸಿ ಕಡುದು, ಚೋಲಿ ಎಳದು, ಬೆಳಿಬೆಳಿ ದಂಡಿನ ತೆಯಾರು ಮಾಡುಗು ಬಟ್ಯ.
ಶಂಬಜ್ಜ ಹೇಳಿದಲ್ಲಿ ಗುಂಡಿತೆಗದು ನೆಟ್ಟು, ಅಡಕ್ಕೆ ಸಲಕ್ಕೆಯ ಅದಕ್ಕೆ ಕುತ್ತಿ, ಪಾರೆಹೂಗಿನ ಮಾಲೆಯ ನೇಲುಸಿ ಬಲಿಯೆಂದ್ರ ಪೂಜಗೆ ತೆಯಾರಾಗಿ ನಿಂಗು!
ಇರುಳು ಪೂಜೆ ಎಲ್ಲ ಚೆಂದಕೆ ಕಳುದು, ಶಂಬಜ್ಜ ಜೋರಾಗಿ ಬಲಿವೆಂದ್ರಾ-ಬಲಿವೆಂದ್ರಾ ಹೇಳುಗು. ಪುಳ್ಯಕ್ಕೊ ಎಲ್ಲ ಜೋರಾಗಿ ಹರಿಯೋ ಹರಿ ಹೇಳುಗು, ಪೋಲಿ ಎಳಗಿಗೊಂಡು.

ಮರದಿನ ಮದ್ಯಾನ್ನವೇ ತೊಳಶಿಕಟ್ಟೆ ಸುತ್ತಕೆ ಸಗಣ ಉಡುಗಿ ಮನಾರ ಮಾಡಿ, ಇರುಳು ತೊಳಶಿಕಟ್ಟಗೆ ಸುತ್ತ ಬಂದಂಡು ಮಾಡ್ತ ತೊಳಶಿಪೂಜೆಯೂ ಗೊಂತಿದ್ದು ಬೈಲಿಂಗೆ.
ಪಕ್ಕನೆ ಪುರುಸೊತ್ತಾಗದ್ದರೆ ಉತ್ತಾನದ್ವಾದಶಿ ದಿನವೂ ಮಾಡ್ಳಕ್ಕಿದಾ!
ತರವಾಡುಮನೆಲಿ ಉತ್ತಾನದ್ವಾದಶಿ ದಿನಒರೆಂಗೆ ಕಾಯವು, ಅದೇ ದಿನ ಮಾಡಿಬಿಡುಗು.
ಭಜಗೋವಿಂದಂ ಭಜಗೋವಿಂದಂ – ಹೇಳಿಗೊಂಡು ತೊಳಶಿಕಟ್ಟಗೆ ಸುತ್ತ ಬಕ್ಕು ಶಂಬಜ್ಜ. ಅವರ ಹಿಂದೆ ಕಾಂಬು ಅಜ್ಜಿ, ಮತ್ತೆ ರಂಗಮಾವ, ಅವರ ಹಿಂದೆ ಪಾತಿಅತ್ತೆಯೂ, ಮತ್ತಾಣ ಹೊಡಿ ಮಕ್ಕಳೂ!
ಎಲ್ಲೋರ ಬಾಯಿಲಿಯೂ ಶಂಬಜ್ಜ ಹೇಳಿದ ಬಜನೆ ಇದ್ದೇ ಇಕ್ಕು!
~
ಅದೇದಿನ ದನಗೊಕ್ಕೆ ಚೆಕ್ಕರ್ಪೆಕೊಟ್ಟಿಗೆ ನೈವೇದ್ಯಮಾಡಿ, ಆರತಿ ಎತ್ತಿ ಪೂಜೆಮಾಡ್ತ ಗೋಪೂಜೆಯೂ ನವಗರಡಿಗು.
ಹೊತ್ತಪ್ಪಗಳೇ ಕಾಂಬುಅಜ್ಜಿಯೂ, ಅವರ ಪ್ರೀತಿಯ ಸೊಸೆ ಪಾತಿಅತ್ತೆಯೂ ಸೇರಿಗೊಂಡು ಅಟ್ಟಿನಳಗೆ ಒಲಗೆ ಮಡಗ್ಗು!
ದನಗೊಕ್ಕೆ ರುಚಿ ಆಯೆಕ್ಕಾದ್ದೋ – ಅಲ್ಲ ಅದರ ಮತ್ತೆ ತಿಂಬ ನವಗೆ ರುಚಿ ಆಯೆಕ್ಕಾದ್ದೋ – ಅಂತೂ ರುಚಿಯೋ ರುಚಿ ಪಾಕಂಗೊ!
ಇರಳಿ, ಗೋಪೂಜೆ ಆದ ಮತ್ತೆ ನವಗೇ ಇಪ್ಪದಲ್ಲದೋ – ಅದೂ ಒಂದು ಗವುಜಿಯೇ!
ಕೊಟ್ಟಿಗೆ ಎಷ್ಟು ರುಚಿ ಇತ್ತು ಹೇಳಿರೆ, ತಿಂದು ತಿಂದು ನಮ್ಮ ಹೊಟ್ಟೆಯೂ ಗೋಣಂಗಳ ಹೊಟ್ಟೆಯ ಹಾಂಗೆ ಉರೂಟು ಅಕ್ಕಿದಾ! 😉
~
ಬಿದಿಗೆ ದಿನ ಬಲೀಂದ್ರನ ವಿಸರ್ಜನೆ ಮಾಡಿ, ಹಬ್ಬದ ಗವುಜಿಯ ಸಮಾರೋಪ ಮಾಡಿಕ್ಕಿ, ಮುಂದಾಣ ಒರಿಶದ ಗವುಜಿಯ ಸ್ವಾಗತಿಸುದುದೇ ನವಗೆ ಕೊಶಿಯ ಸಂಗತಿಯೇ.
ಬೈಲಿನ ಜೆನಂಗೊಕ್ಕೆ ನಮ್ಮ ಆಚರಣೆ ಗೊಂತಿದ್ದು.
ಅವಕಾಶ ಒದಗಿಬತ್ತ ಹೆಚ್ಚಿನವು ಆಚರಣೆ ಮಾಡ್ತವು. ಅನಿವಾರ್ಯವಾಗಿ ಕೆಲವು ಜೆನ ಕೂಡಿಬಾರದ್ದವು ದೂರಂದಲೇ ಕೊಶಿಪಡ್ತವು.
~
ಪಾತಿಅತ್ತಗೆ ಸೊಂಟಬೇನೆ ಜೋರಾದ್ದು ನಿಂಗೊಗೆ ಅರಡಿಗಲ್ಲದಾ? (ಶುದ್ದಿ ಸಂಕೊಲೆ ಇಲ್ಲಿದ್ದು, ಗೊಂತಿಲ್ಲದ್ದರೆ ಓದಿಕ್ಕಿ)
ಹಿರಿ ತಲಗೊ ಒಳಿಶಿಗೊಂಡು ಬಂದ ಆಚರಣೆಯ ಕಾಂಬುಅಜ್ಜಿ ಈ ಪಾತಿಅತ್ತಗೆ ಕೊಟ್ಟಿದವು.
ಹಾಂಗೆ ಕೂದಲ್ಲೇ ಆದ ಮತ್ತೆ ಪಾತಿಅತ್ತೆಗೆ ಈ ಆಚರಣೆಗೊ ಜೋರು ನೆಂಪಪ್ಪದು.
ಅಂಬಗಾಣ ವೈವಿಧ್ಯಂಗೊ, ಅಂಬಗಾಣ ಗವುಜಿಗೊ, ಅಂಬಗಾಣ ಜೆನಸಂಕೆಗೊ, ಅಂಬಗಾಣ ಉತ್ಸಾಹಂಗೊ – ಚೆ, ಅದೆಲ್ಲ ಇನ್ನು ಸಿಕ್ಕುಗೋ ಒಪ್ಪಣ್ಣಾ – ಹೇಳಿ ಕೇಳ್ತವು ಹೀಂಗೇ ಮಾತಾಡುವಗ.
~
ಅವಕ್ಕೆ ಇದೆಲ್ಲ ಜೋರು ನೆಂಪಪ್ಪಲೆ ಕಾರಣ ಇಲ್ಲದ್ದಲ್ಲ.
ಅಲ್ಲಿಯಾಣ ಎಲ್ಲಾ ಬಾಧ್ಯತೆಯನ್ನುದೇ ಮನೆಯ ಕೇಂದ್ರಸ್ಥಾನಲ್ಲಿ ನಿಂದುಗೊಂಡು ನೋಡೆಕ್ಕಾದ್ದು ಪಾತಿಅತ್ತೆಯ ಮುದ್ದಿನ ಮಗ ಶಾಂಬಾವನ ಸಂಸಾರ.
ಮುಖ್ಯವಾಗಿ, ಆ ಮನೆಯ ಇನ್ನಾಣ ದೀಪ ಅವರ ಸೊಸೆ.
ಶಾಂಬಾವನ ಸಂಸಾರ ಹೇಳಿರೆ, ಅವನ ಪ್ರೀತಿಯ ಮಗ ವಿನು, ಕೊಂಡಾಟದ ಹೆಂಡತ್ತಿ ವಿದ್ಯಕ್ಕ – ಇಬ್ರೇ!
ಮಗ ಇಂತದ್ದರ ಕಲಿವಷ್ಟು ಬೆಳದ್ದನಿಲ್ಲೆ, ಹೆಂಡತ್ತಿ ಇಂತದ್ದರ ಕಲಿವಷ್ಟು ಪುರುಸೊತ್ತುಗಾರ್ತಿ ಅಲ್ಲ!
ಪೂರ್ತಿ ಕಲಿಶುತ್ತೆ ಹೇಳಿಗೊಂಡು ಹೆರಟ್ರೆ ಶಾಂಬಾವನೂ ಸೋಲುಗು – ಪೂರ್ತಿ ಅವಂಗೂ ಅರಡಿಯ ಇದಾ! 😉
~
ವಿನು ಶಾಲೆಕೆಲಸಂಗಳಲ್ಲೇ ತೆರಕ್ಕಿಲಿ ಇರ್ತ!
ಶಾಲೆ ಕೆಲಸ ಮುಗುದ ಕೂಡ್ಳೇ ಕಂಪ್ಯೂಟರಿಲಿ ಗೇಮುಆಡುಗು. ನಿತ್ಯ ಮಕ್ಕಳಹಬ್ಬ ಸಿಕ್ಕುವ ಜಾಗೆ ಅಲ್ಲದೋ ಅದು.
ವಿದ್ಯಕ್ಕನೂ ಜೋರುಮಾಡ್ತಷ್ಟು ಕಠಿನ ಹೃದಯದ ಹೆಮ್ಮಕ್ಕೊ ಅಲ್ಲ! 😉
ಶಾಂಬಾವಂಗೆ ಪುರುಸೊತ್ತೇ ಇಲ್ಲೆ, ಅಂಗುಡಿಲಿ ಒಳ್ಳೆತ ಕಚ್ಚೋಡ ಆವುತ್ತು ಈಗೀಗ. ಮನೆ ಎತ್ತುವಗ ಗಂಟೆ ಒಂಬತ್ತು!
ವಿನು ಎಂತರ ಮಾಡ್ತಾ ಇದ್ದ ಹೇಳಿ ನೋಡೆಕ್ಕಾದ ಆಸಗ್ತಿ ಅವಂಗೆ ಕಾಣ್ತೇ ಇಲ್ಲೆ!
ಇನ್ನು ವಿದ್ಯಕ್ಕನೋ! ಅದರದ್ದು ಹೇಳಿಸುಕ ಇಲ್ಲೆ.
~
ತರವಾಡುಮನಗೆ ಹೊಸ ಟೀವಿ ಬಯಿಂದು.
ಈಗ ಸದ್ಯ ಬಂದದಲ್ಲ, ಅಂದೇ ಒಂದಿತ್ತು, ಕುಂಬಟೆ.
ಆದರೆ ಕಳುದೊರಿಶ ಹೊಸತ್ತು ಟೀವಿ ತಂದವು. ವಿದ್ಯಕ್ಕನಷ್ಟೇ ತೆಳ್ಳಂಗೆದು, ಗೋಡಗೆ ಅಂಟುಸುತ್ತ ನಮುನೆದು.
ಒಂದು ಸಣ್ಣ ಕೊಡೆ, ಎಂಟುನೂರು-ಸಾವಿರಗಟ್ಳೆ ಚೇನಲು ಸಿಕ್ಕುತ್ತ ವೆವಸ್ತೆ ಮಾಡಿದ್ದ!
ಬಂಡಾಡಿಅಜ್ಜಿಯ ರೇಡ್ಯಲ್ಲಿ ಸುಮಾರು ಚೇನಲು ಬತ್ತು, ಗುಬ್ಬಿ ತಿರುಗಿಸಿರೆ, ಆದರೆ ಇಲ್ಲಿ ಹತ್ತರೆ ಬಪ್ಪದೇ ಬೇಡ, ದೂರಲ್ಲೇ ಕೂದಂಡು ಒಂದು ಸುಚ್ಚಿಲಿ ಬೇರೆ ಚೇನಲು ಹಾಕಲೆ ಎಡಿತ್ತು.
ಕನ್ನಡ, ಮಲೆಯಾಳ, ಹಿಂದಿ, ಇಂಗ್ಳೀಶು – ಯೇವ ಭಾಶೆ ಬೇಕು – ಆ ಬಾಶೆದು ಚೇನಲು ಇದ್ದಡ.
ವಿದ್ಯಕ್ಕನೇ ಹಟಹಿಡುದು ಆ ವೆವಸ್ತೆಯ ಮಾಡುಸಿದ್ದಡ.
ಹಳೆ ಟೀವಿಲಿ ರಂಗಮಾವಂಗೇ ಬೇಕಾದ್ದರ ಹಾಕಲೆ ಅರಡಿಗೊಂಡು ಇತ್ತು, ಈಗಾಣದ್ದರ ಒತ್ತಲೆ ಗೊಂತಾವುತ್ತಿಲ್ಲೆ ಅವಕ್ಕೆ, ಮುಟ್ಳೇ ಹೋವುತ್ತವಿಲ್ಲೆ.
~
ಸಾವಿರ ಚೇನಲು ಸಿಕ್ಕುತ್ತು ನಿಜ, ನೋಡ್ಳೆ ಯೇವದಕ್ಕೆ ಪುರುಸೊತ್ತು ಇಕ್ಕು!
ವಿದ್ಯಕ್ಕ ನಿತ್ಯಕ್ಕೂ ನೋಡ್ತ ಕೆಲವೆಲ್ಲ ಚೇನಲುಗ ಇದ್ದಡ. ಯೇವದೆಲ್ಲ – ಹೆಸರುಗೊ ನವಗರಡಿಯ!
ಉದಿಯಪ್ಪಗ ಹಿಂದಿಪದ್ಯಂಗೊ ಬತ್ತ ಯೇವದೋ ಚೇನಲು, ಅದಾದ ಮತ್ತೆ ಪರಿಚಯ, ಸಂದರ್ಶನ ಇರ್ತ ಯೇವದೋ ಚೇನಲು, ಅದಾದಮತ್ತೆ ಪುಚ್ಚೆಗೊ ನಾಯಿಪುಚ್ಚೆಮಾಡ್ತ ಚೇನಲು, ಅದಾದ ಮತ್ತೆ ಮಹಿಳೆಯರಿಂಗೆ ಹೇಳಿ ಇರ್ತ ಚೇನಲು, ಅದಾದ ಮತ್ತೆ ಮದ್ಯಾನ ಹೊಸ ಅಡಿಗೆ ಇರ್ತ ಚೇನಲು, ಅದಾದಮತ್ತೆ ಮದ್ಯಾನ್ನಮೇಲೆ ಹಳೆಸಿನೆಮ ಇರ್ತ ಚೇನಲುಗೊ – ಕನ್ನಡ ಅತವಾ ಮಲೆಯಾಳ – ಕನ್ನಡ ಸಿನೆಮ ಹಳತ್ತು ಚೆಂದ ಅಡ, ಮಲೆಯಾಳ ಸಿನೆಮ ಹೊಸತ್ತು ಚೆಂದ ಅಡ – ಹೊತ್ತಪ್ಪಗ ರಜ ಹೊತ್ತು ವಾರ್ತೆ ಅದು ಇದು, ಅದಾದ ಮತ್ತೆ ದಾರವಾಹಿಗೊ, ಮತ್ತೆ ಷ್ಟಾರುಸಿಂಗರು!
ಅಲ್ಲಿಗೆ ವಿದ್ಯಕ್ಕನ ಹೆಚ್ಚಿನ ದಿನದ ದಿನಚರಿ ಮುಗಾತು!
~

ತರವಾಡುಮನೆ ಟೀವಿಯ ಹಳೇ ಡಿಶ್ಶು! ಈಗ ಸಣ್ಣದು ಬಯಿಂದು, ಚೇನಲು ಜಾಸ್ತಿ ಸಿಕ್ಕುತ್ತದು!

ಇಷ್ಟೆಲ್ಲ ಚೇನಲುಗೊ ನೋಡ್ತ ವಿದ್ಯಕ್ಕಂಗೆ ಈಗ ದೊಡಾ ಕೋಪಕೋಪ ಬಯಿಂದು! ಎಂತ್ಸಕೇ?
ನಾಳ್ತು ದೀಪಾವಳಿ ದಿನಕ್ಕೆ ಅದರ ಇಷ್ಟದ ಎಲ್ಲಾ ಚೇನಲುಗಳಲ್ಲಿಯೂ ಗವುಜಿ ಇದ್ದಡ.
ಒಂದರಿಂದ ಒಂದರಲ್ಲಿ ಗವುಜಿ-ಗಮ್ಮತ್ತು. ಯೇವದರ ನೋಡುದು – ಯೇವದರ ಬಿಡುದು, ಎಲ್ಲವೂ ಒಂದೇ ಸಮೆಯಕ್ಕೆ, ಒಟ್ಟೊಟ್ಟಿಂಗೇ ಬತ್ತ ನಮುನೆಲಿ ಹೊಂದುಸಿದ್ದವಡ ಮಂಗಂಗೊ.
ಐದಾರು ಚೇನಲುಗಳಲ್ಲಿ ಇಪ್ಪತ್ತನಾಕುಗಂಟೆ – ಒಂದು ದಿನಲ್ಲಿ ಹೇಂಗೆ ನೋಡುದು!
ಅದಕ್ಕೇ ವಿದ್ಯಕ್ಕಂಗೆ ಕೋಪ ಬಂದದು!
ಕೋಪ ಮಾಂತ್ರ ಅಲ್ಲ, ಬೇಜಾರವುದೇ ಆಯಿದು – ಚೆಕ್ಕರ್ಪೆಯನ್ನೂ ತಿಂಬಲೆ ಮೆಚ್ಚದ್ದಷ್ಟು!  😉
~
ಅಪ್ಪಡ, ಹಬ್ಬದ ಲೆಕ್ಕಲ್ಲಿ ಸುಮಾರು ಗವುಜಿ ಇದ್ದಾಡ. ಎಲ್ಲಾ ಚೇನಲುಗಳ ಗವುಜಿಯ ಲೆಕ್ಕಹಾಕಿ, ಎಡೆಬದಲುಸಿ ನೋಡುದು
ಎಲ್ಲದರ್ಲಿ ಒಳ್ಳೆದರ್ಲಿ ಒಳ್ಳೆದರ ಹೆರ್ಕಿ ನೋಡುದು! – ಹೇಳಿ ಲೆಕ್ಕಾಚಾರ ಹಾಕಿತ್ತಡ!
ಉದಿಯಪ್ಪಗ ಒಂದು ಚೇನಲಿಲಿ ವಿಶೇಷ ಉದಯರಾಗ ಇದ್ದಡ. ಅಪುರೂಪದ ಸಿನೆಮ ಪದ್ಯಂಗಳ ಜೋಡುಸಿಗೊಂಡು!
ಅದಾದ ಮತ್ತೆ ಇನ್ನೊಂದು ಚೇನಲಿಲಿ ಹೊಸಾ ಸಿನೆಮದ ಒಂದು ಜೆನರ ಒಟ್ಟಿಂಗೆ ಸಂದರ್ಶನ ಇದ್ದಡ. ಮೊನ್ನೆ ಬಂದ ಅದರ ಒಂದು ಸಿನೆಮ ಬಾರೀ ಲಾಯಿಕಿದ್ದಡ.
ಮತ್ತೆ ಮತ್ತೊಂದರಲ್ಲಿ ಹರಟೆಕಟ್ಟೆ ಇದ್ದಡ – ಕುಶಾಲು, ಬೆಗುಡು, ನೆಗೆ – ನಮ್ಮ ನೆಗೆಗಾರನ ಹಾಂಗೆ – ಅಲ್ಲಿ ಮಾಡ್ತವಡ! ಅದರ ನೋಡದ್ದೆ ಕಳಿಗೋ!
ಮತ್ತೆ ನೋಡೆಕ್ಕಾದ್ದು ’ನಮ್ಮ ದೀಪಾವಳಿ’ ಹೇಳ್ತ ಕಾರ್ಯಕ್ರಮ.

ಅದರ್ಲಿ ಬೇರೆಬೇರೆ ಊರಿನ ದೀಪಾವಳಿ ಆಚರಣೆಕ್ರಮಂಗಳ ನೋಡುಸುತ್ತವಡ. ಕಾಂಬುಅಜ್ಜಿ ಕೊಟ್ಟಿಗೆ ಕಡದು ಶಂಬಜ್ಜ ಬಲೀಂದ್ರ ಹಾಕಿದ್ದದುದೇ ಬಕ್ಕೋ ಏನೋ!
ದೀಪಾವಳಿ ಲೆಕ್ಕದ ವಿಶೇಷ ಅಡಿಗೆ ಕಾರ್ಯಕ್ರಮ ಇನ್ನೊಂದು ಚೇನಲಿಲಿ, ಹಳಬ್ಬರು ಹಬ್ಬಕ್ಕೆ ಯೇವಯೇವ ಅಡಿಗೆಗಳ ಮಾಡಿಗೊಂಡು ಇತ್ತಿದ್ದವು – ಹೇಳ್ತ ವಿಚಾರ!
ಮದ್ಯಾನಮೇಲೆ ನಂದನಂ ಸಿನೆಮ ಇದ್ದಡ, ಯೇಶಿಯನೆಟ್ಟಿಲಿ! ನೋಡದ್ದೆ ಕಳೀಯ!!
ಮೊನ್ನೆಮೊನ್ನೆ ಬಿಡುಗಡೆ ಆದ ಕನ್ನಡ ಸಿನೆಮ – ಪುನೀತಿಂದು, ಕನ್ನಡ ಚೇನಲಿಲಿ! ಯೇವದರ ನೋಡುದು, ಯೇವದರ ಬಿಡುದು.
ಎರಡನ್ನೂ ಅತ್ತಿತ್ತೆ ನೋಡಿರೆ ಅವಿಲು ಅಕ್ಕದು!
ಮತ್ತೆ ಹೊತ್ತಪ್ಪಗ, ಸಿನೆಮದವರ ಪ್ರಶಸ್ತಿಪ್ರದಾನ ಕಾರ್ಯಕ್ರಮ ಒಂದರಲ್ಲಿ, ವಿವೇಕ್ ಒಬೆರಾಯ್ ನ ಮದುವೆ ಕಾರ್ಯಕ್ರಮ ಇನ್ನೊಂದರಲ್ಲಿ!
ಎರಡೂ ಕೊಶಿಕೊಡ್ತು ನೋಡ್ಳೆ!
ಅಂತೂ ಒಂದೇದಿನ ಎಲ್ಲೋರುದೇ ಟೀವಿಯವು ಗವುಜಿ ಮಾಡ್ತದು ಎಂತಕೇಪ್ಪಾ! ಹೇಳಿ ಇರುಳು ಒರಗುವನ್ನಾರವೂ ಅನುಸಿಗೊಂಡು ಇರ್ತ ನಮುನೆಯ ಕಾರ್ಯಕ್ರಮಂಗೊ!
~

ಹ್ಮ್, ಸೂರಂಬೈಲಿಂದ ತಂದ ಪಟಾಕಿ! ತಪ್ಪಗ ಜೋರು ಮಳೆ. ಹೊಟ್ಟುಗೋ ನೋಡೆಕ್ಕಷ್ಟೆ!!
ವಿದ್ಯಕ್ಕನ ಟೀವಿನೋಡಾಣಲ್ಲಿ ತರವಾಡುಮನೆಲಿ ದೀಪಾವಳಿಯೇ ಡಿಮ್ಮು – ಚೆಂಡಿ ಆದ ಪಟಾಕಿಯ ಹಾಂಗೆ!
ತೊಳಶಿಕಟ್ಟೆ ಉಡುಗಿದ್ದಿಲ್ಲೆ, ದನಗಳ ಮೀಶಿದ್ದಿಲ್ಲೆ, ಕೊಟ್ಟಿಗೆಗೆ ಕಡದ್ದಿಲ್ಲೆ, ಮಗನ ಮೀಶಿದ್ದಿಲ್ಲೆ – ಎಂತದೂ ಇಲ್ಲೆ! ಯೇವದಕ್ಕೂ ಪುರುಸೊತ್ತೇ ಇಲ್ಲೆ!
ಹಾಂಗಾಗಿ, ಏನಿದ್ದರೂ ಪಾತಿಅತ್ತೆ ಅದಕ್ಕೆಡಿಗಪ್ಪಷ್ಟು ಮಾಡಿಗೊಂಡು ಬಕ್ಕು, ಶ್ರದ್ಧೇಲಿ.
ರಂಗಮಾವನೂ ಅದರಿಂದ ಹೆಚ್ಚಿಂದು ಎಂತದೂ ಬಯಸವು!
ಶಾಂಬಾವಂಗೆ ಎಂತದೂ ಬೇಡ, ಒಯಿವಾಟು ಒಂದು ಬಿಟ್ಟು.
ವಿನು ಇನ್ನೂ ಸಣ್ಣ ಇದಾ! ನಾಕು ಗುದ್ದು ಪಟಾಕಿಯೂ, ಎರಡು ಸುರುಸುರುಕಡ್ಡಿಯೂ ಹೊತ್ತುಸುವಗ ಒರಕ್ಕು ತೂಗುತ್ತು, ಅಷ್ಟೇ!
ಹಳಬ್ಬರು ಆರುದೇ ಇಲ್ಲೆ, ಕ್ರಮ ಹೇಳಿ ಕೆಮಿ ಹಿಂಡುಲೆ!
~
ವಿದ್ಯಕ್ಕಂಗೆ ಪಾತಿಅತ್ತೆ ಕಲಿಶಿರೆ ಆಗ, ಟೀವಿಯವು ಕಲುಶುತ್ತರೆ ಎದೂರು ಕೂದು ನೋಡುಗು!
ನಮ್ಮ ಕ್ರಮಂಗೊ ಸ್ವತಃ ಆಚರಣೆ ಮಾಡಿ ಒಳಿಶುತ್ತದರ ಬದಲು, ಹಳ್ಳಿ ಆಚರಣೆಯ ಕ್ರಮಂಗೊ ಟೀವಿಲಿ ನೋಡುಸುತ್ತದೇ ಇಷ್ಟ ಆತೋ?
ಟೀವಿಯವು ಅವರ ಸೊಂತ ಲಾಬಕ್ಕೆ ಗವುಜಿ ಆಚರಣೆ ಮಾಡ್ತವು, ನಾವುದೇ ಅದಕ್ಕೆ ನೇತುಗೊಂಬದೋ?
ಟೀವಿಲಿ ನೋಡಿ ಕೊಶಿತೆಕ್ಕೊಂಬದರಿಂದ, ಸೊಂತ ಆಚರಣೆಯೇ ಮಾಡ್ಳಾಗದೋ?
ತರವಾಡುಮನೆಲಿ ಹಳೇಕ್ರಮದ ಹಬ್ಬದ ಗವುಜಿ ಮತ್ತೊಂದರಿ ಬರಳಿ, ಬೇಗನೆ!
– ಹೇಳಿಗೊಂಡು, ಸೂರಂಬೈಲಿಂದ ಪಟಾಕಿತೆಕ್ಕೊಂಡು ಅಜ್ಜಕಾನಬಾವನೊಟ್ಟಿಂಗೆ ನೆಡಕ್ಕೊಂಡು ಬಪ್ಪಗ ಮಾತಾಡಿಗೊಂಡದು ಇದರ!
ಬನ್ನಿ, ಪಟಾಕಿ ಸುಮಾರಿದ್ದು, ಎಲ್ಲೋರುದೇ ಗವುಜಿ ಮಾಡುವೊ°!

ಒಂದೊಪ್ಪ: ಬೇರೆ ಕೊಶಿಗೆ ನಾವು ಅಂಟಿಗೊಂಬದರಿಂದ, ನಾವೇ ಕೊಶಿ ಆಚರುಸುದು ಹೆಚ್ಚು ರಂಜನೀಯ! ಅಲ್ಲದೋ?

ಸೂ: ಬೈಲಿಂಗಿಡೀ ದೀಪಾವಳಿ ಒಪ್ಪಂಗೊ!

ತರವಾಡುಮನೆಲಿ ಈ ಸರ್ತಿ ಟೀವಿಬುಡಲ್ಲೇ ದೀಪಾವಳಿ..!?, 4.8 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕಾಲ ಬದಲದ ಹಾಂಗೆ ಆಚರಣೆಗೊ ಹೇಂಗೆ ಬಲಾವುತ್ತು ಹೇಳಿ ಲಾಯಿಕಲ್ಲಿ ತಿಳಿಸಿಕೊಟ್ಟ ಲೇಖನ.
  ನಾವು ಮಾಡೆಕ್ಕಾದ ಆಚರಣೆಗಳ ನಾವು ಮಾಡಿ ಅದರ ಮಹತ್ವವ ಮಕ್ಕೊಗೆ ತಿಳಿಸಿಕೊಟ್ಟರೆ ಮುಂದಂಗೆ ಅದೇ ರೀತಿ ನಡಕ್ಕೊಂಡು ಬಕ್ಕು. ಇಲ್ಲದ್ದರೆ ಎಂತದೋ ಒಂದು ಮದಲಿಂಗೆ ಇತ್ತಿದ್ದು ಹೇಳುವಲ್ಲಿಗೆ ಎತ್ತುಗು. ಈಗ ಅಂತೂ ಯಾವುದೇ ಹಬ್ಬ ಆದರೂ ಟೀವಿ ಲಿ ಕೆಲವು ಸಿನೆಮಾ ಕಾರ್ಯಕ್ರಮ ತುಂಬಿ ಹೋವ್ತು. ಇಷ್ಟ ಇಪ್ಪವಕ್ಕೆ ಅದರ ಬಿಟ್ಟು ಬಪ್ಪಲೆ ಗೊಂತಿಲ್ಲೆ
  ಬಾಳೆ ದಿಂಡು ತಂದು ಬಲೀಂದ್ರನ ಸ್ಥಾಪನೆ, ಪಾರೆ ಹೂಗಿನ ತಂದು ಮಾಲೆ ಕಟ್ಟಿ ಬಲೀಂದ್ರಂಗೆ ಹಾಕುದು, ಪೂಜೆ ಆಗಿಕ್ಕಿ ಪುಳ್ಳಿಯಕ್ಕೊ ಎಲ್ಲಾ ಸೇರಿ ಬಲೀಂದ್ರಂಗೆ “ಹರಿಯೋ ಹರಿ” ಹೇಳುವದು ದನಗಳ ಮೀಶಿ, ಚೆಂಡು ಮಲ್ಲಿಗೆ ಹೂಗಿನ ತಂದು ಮಾಲೆ ಮಾಡಿ ದನಗೊಕ್ಕೆ ಹಾಕಿ, ಕೊಟ್ಟಿಗೆ ತಿನಿಸಿ, ಆರತಿ ಎತ್ತುವದು ಎಲ್ಲಾ ಮಾಡಿಂಡು ಇತ್ತಿದ್ದ ದಿನಂಗಳ ನೆಂಪು ಮಾಡಿ ಕೊಟ್ಟ ಒಪ್ಪಣ್ಣಂಗೆ ಧನ್ಯವಾದಂಗೊ. ಎಂಗಳ ಮಕ್ಕೊಗೆ ಈ ಕ್ರಮಂಗೊ ನೋಡ್ಲೆ ಸಿಕ್ಕುತಾ ಇಲ್ಲೆ ಹೇಳ್ತ ಮನಸ್ಸಿನ ಬೇನೆ ಕೂಡಾ ಇದ್ದು.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಅಪ್ಪಚ್ಚೀ..
  ನಮ್ಮ ಬೈಲಿಂಗೆ ಬಂದ ಮಕ್ಕೊಗೆ ಎಲ್ಲವೂ ಸಿಕ್ಕುಗು..
  ನೋಡ್ಳೆ ಸಿಕ್ಕ, ಆದರೆ ಕಾಂಬಲೆ ಸಿಕ್ಕುಗು, ಅಲ್ಲದೋ ಅಪ್ಪಚ್ಚೀ?

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಒಪ್ಪಣ್ಣ,ಚೆಂದದ ಚಿತ್ರಣ.ಎನ್ನ ಬಾಲ್ಯಕಾಲದ ಹಬ್ಬದ ಆಚರಣೆಯ ಕ್ರಮ ನೆನಪ್ಪಾತು.ಈಗ ಎಷ್ಟು ಬದಲಾವಣೆಗೊ!!ಕಾರಣ ಹುಡುಕ್ಕಿರೆ– ಮಾಧ್ಯಮದ ಪ್ರಭಾವವೋ?ನಮ್ಮ ಮನಸ್ಥಿತಿಯೋ? ಒಂದೂ ಗೊಂತಾಗ.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಮನಸ್ಥಿತಿಯ ಮಾಧ್ಯಮಂಗೊ ರೂಪುಸುಗು, ಮಾಧ್ಯಮವ ಕೆಲವು ಮನಸ್ಸುಗೊ ರೂಪುಸುಗು..
  ಒಟ್ಟಿಲಿ ನಮ್ಮದೊಂದು ಬೆಳ್ಳಕ್ಕೆ ಹೋಗದ್ದ ಹಾಂಗೆ ನಾವೇ ಜಾಗ್ರತೆ ಮಾಡೆಕ್ಕಷ್ಟೆ..
  ಅಲ್ಲದೋ ಮುಳಿಯಭಾವಾ…

  [Reply]

  VA:F [1.9.22_1171]
  Rating: 0 (from 0 votes)
 3. shyamaraj.d.k

  Elloringoo belakina habbada shubhashayango.

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಶಾಂಬಾವಾ..
  ನಿಂಗಳ ಒಪ್ಪಕ್ಕೆ ಧನ್ಯವಾದಂಗೊ..
  ಬೈಲಿಂಗೆ ಬತ್ತಾ ಇರಿ.. ಹರೇರಾಮ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಶ್ಯಾಮಣ್ಣದೇವಸ್ಯ ಮಾಣಿಪುಣಚ ಡಾಕ್ಟ್ರುವಸಂತರಾಜ್ ಹಳೆಮನೆಚುಬ್ಬಣ್ಣಸುವರ್ಣಿನೀ ಕೊಣಲೆಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಒಪ್ಪಕ್ಕಕಜೆವಸಂತ°ಶುದ್ದಿಕ್ಕಾರ°ಮುಳಿಯ ಭಾವವಾಣಿ ಚಿಕ್ಕಮ್ಮಅಕ್ಷರ°ಡೈಮಂಡು ಭಾವದೀಪಿಕಾಜಯಗೌರಿ ಅಕ್ಕ°ಸಂಪಾದಕ°ಉಡುಪುಮೂಲೆ ಅಪ್ಪಚ್ಚಿಪುತ್ತೂರುಬಾವವೇಣೂರಣ್ಣಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿಅಡ್ಕತ್ತಿಮಾರುಮಾವ°ಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ