- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಶ್ಲೋಕ
ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ ।
ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ ॥೩೪॥
ಪದವಿಭಾಗ
ಆಚಾರ್ಯಾಃ ಪಿತರಃ ಪುತ್ರಾಃ ತಥಾ ಏವ ಚ ಪಿತಾಮಹಾಃ । ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಃ ತಥಾ ॥
ಅನ್ವಯ
ತೇ ಇಮೇ ಆಚಾರ್ಯಾಃ ಪಿತರಃ ಪುತ್ರಾಃ ತಥಾ ಏವ ಚ ಪಿತಾಮಹಾಃ, ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ತಥಾ ಸಂಬಂಧಿನಃ ಪ್ರಾಣಾನ್ ಧನಾನಿ ಚ ತ್ಯಕ್ತ್ವಾ ಯುದ್ಧೇ ಅವಸ್ಥಿತಾಃ ।
ಪ್ರತಿಪದಾರ್ಥ
ತೇ ಇಮೇ ಆಚಾರ್ಯಾಃ – ಅವು ಈ ಗುರುಗೊ, ಪಿತರಃ – ಪಿತೃಗೊ, ಪುತ್ರಾಃ – ಮಕ್ಕೊ, ತಥಾ – ಹಾಂಗೆಯೇ, ಏವ – ನಿಶ್ಚಯವಾಗಿಯೂ, ಚ – ಕೂಡ, ಪಿತಾಮಹಾಃ – ಅಜ್ಜಂದ್ರು, ಮಾತುಲಾಃ – ಸೋದರ ಮಾವಂದ್ರು, ಶ್ವಶುರಾಃ – ಮಾವಂದ್ರು, ಪೌತ್ರಾಃ – ಮೊಮ್ಮಕ್ಕೊ, ಶ್ಯಾಲಾಃ – ಭಾವಂದ್ರು, ತಥಾ – ಹಾಂಗೆಯೇ, ಸಂಬಂಧಿನಃ – ಬಂಧುಗೊ, ಪ್ರಾಣಾನ್ – ಪ್ರಾಣಂಗಳ, ಧನಾನಿ – ಸಂಪತ್ತುಗಳ, ಚ – ಸಾನ, ತ್ಯಕ್ತ್ವಾ – ಬಿಟ್ಟಿಕ್ಕಿ, ಯುದ್ಧೇ – ಯುದ್ಧಲ್ಲಿ, ಅವಸ್ಥಿತಾಃ – ಇದ್ದವು.
ಅನ್ವಯಾರ್ಥ
ಗುರುಗೊ, ಅಪ್ಪ-ಅಬ್ಬೆ ಹಾಂಗಿಪ್ಪವು, ಮಕ್ಕೊ, ಅಜ್ಜಂದ್ರು, ಸೋದರಮಾವಂದ್ರು, ಮೊಮ್ಮಕ್ಕೊ ಭಾವ ಮೈದುನರುಗೊ ಮತ್ತೆ ಇತರ ಎಷ್ಟೋ ಸಂಬಂಧಿಗೊ ಅವರ ಪ್ರಾಣಂಗಳ ಮತ್ತೆ ಸಂಪತ್ತುಗಳ ಹಂಗಿನ ಬಿಟ್ಟಿಕ್ಕಿ ಇಲ್ಲಿ ಯುದ್ಧಲ್ಲಿ ಸೇರಿದ್ದವು.
ತಾತ್ಪರ್ಯ / ವಿವರಣೆ
ಅರ್ಜುನ° ಇಲ್ಲಿ ಸಾಮಾಜಿಕ ಕರ್ತವ್ಯವ ಮರದು ವೈಯುಕ್ತಿಕ ಬಾಂಧವ್ಯದ ಬಗ್ಗೆ ಮಾತಾಡಿಗೊಂಡು ಅಲ್ಲಿ ಕಾಂಬ ತನ್ನ ಬಂಧುಗಳ ಪಟ್ಟಿ ಹೇಳ್ಳೆ ಸುರುಮಾಡಿದ°
ಶ್ಲೋಕ
ಏತಾನ್ನ ಹಂತುಮಿಚ್ಛಾಮಿ ಘ್ನತೋsಪಿ ಮಧುಸೂದನ ।
ಅಪಿತ್ರೈಲೋಕ್ಯ ರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ ॥೩೫॥
ಪದವಿಭಾಗ
ಏತಾನ್ ನ ಹಂತುಮ್ ಇಚ್ಛಾಮಿ ಘ್ನತಃ ಅಪಿ ಮಧುಸೂದನ । ಅಪಿ ತ್ರೈಲೋಕ್ಯ ರಾಜ್ಯಸ್ಯ ಹೇತೋಃ ಕಿಮ್ ನು ಮಹೀಕೃತೇ ॥
ಅನ್ವಯ
ಹೇ ಮಧುಸೂದನ!, (ಅಹಂ) ಘ್ನತಃ ಅಪಿ ಏತಾನ್ ತ್ರೈಲೋಕ್ಯ-ರಾಜ್ಯಸ್ಯ ಹೇತೋಃ ಅಪಿ ಹಂತುಮ್ ನ ಇಚ್ಛಾಮಿ, ಕಿಂ ನು ಮಹೀಕೃತೇ ?
ಪ್ರತಿಪದಾರ್ಥ
ಹೇ ಮಧುಸೂದನ –ಹೇ ಕೃಷ್ಣ (ಮಧು ಎಂಬ ರಾಕ್ಷಸನ ಕೊಂದವ°), (ಅಹಮ್ – ಆನು), ಘ್ನತಃ ಅಪಿ – ಕೊಲ್ಲಲ್ಪಟ್ಟರೂ ಸಾನ, ಏತಾನ್ – ಇವೆಲ್ಲರ, ತ್ರೈಲೋಕ್ಯ-ರಾಜ್ಯಸ್ಯ – ಮೂರ್ಲೋಕ ರಾಜ್ಯದ, ಹೇತೋಃ – ಕಾರಣಕ್ಕಾಗಿ, ಅಪಿ – ಆದರೂ, ಹಂತುಮ್ ನ ಇಚ್ಛಾಮಿ – ಕೊಲ್ಲಲೆ ಬಯಸುತ್ತಿಲ್ಲೆ, ಕಿಮ್ ನು – ಹೇಳುವದೆಂತರ, ಮಹೀಕೃತೇ – ಭೂಮಿಗಾಗಿ
ಅನ್ವಯಾರ್ಥ
ಮಧುಸೂದನ (ಶ್ರೀಕೃಷ್ಣ), ಆನು ಇವರಿಂದ ಕೊಲ್ಲಲ್ಪಟ್ಟವನಾವ್ತರೂ ಚಿಂತೆ ಇಲ್ಲೆ. ಮೂರು ಲೋಕದ ರಾಜ್ಯಾಧಿಪತ್ಯ ಬಂದರೂ ಆನು ಇವರ ಕೊಲ್ಲೆ. ಇನ್ನು ಈ ಭೂಲೋಕದ ರಾಜ್ಯಕ್ಕಾಗಿ ಕೊಲ್ಲುವನೋ?
ತಾತ್ಪರ್ಯ / ವಿವರಣೆ
ಎನಗೆ ಇವರ ಕೊಲ್ಲೇಕು ಹೇಳಿ ಬಯಕೆ ಇಲ್ಲೆ. ಒಂದುವೇಳೆ ಅವ್ವು ಎನ್ನ ಕೊಂದರೂ ಚಿಂತಿಲ್ಲೆ. ಮೂರ್ಲೋಕ ಆಧಿಪತ್ಯ ಸಿಕ್ಕುತ್ತರೂ ಆನು ಇವರ ಕೊಲ್ಲಬಯಸೆ. ಮತ್ತೆ ಈ ತುಂಡು ಭೂಮಿಯ ಮಾತೆಂತಕೆ ಮಧುಸೂದನ?! ಅರ್ಜುನಂಗೆ ಅವನ ಕುಲದ, ಕುಟುಂಬದವರ ಬಂಧು ಮಿತ್ರರ ಮೇಗೆ ಗಾಢವಾದ ಪ್ರೀತಿ ಇಪ್ಪದು ಅಪ್ಪು. ಆರಿಂಗೆ ಆದರೂ ತನ್ನಲ್ಲಿಪ್ಪ ಸಂಪತ್ತು ಸುಖವ ತನ್ನ ಜನಂಗಳೊಟ್ಟಿಂಗೆ ತೋರ್ಸಿಗೊಂಬದು ಸಹಜ ಗುಣ. ಯುದ್ಧ ಮಾಡಿರೆ.. ಇವೆಲ್ಲ ಸತ್ತರೆ.. ತನ್ನ ತನ್ನವರಾಗಿಪ್ಪ ಇವರೊಟ್ಟಿಂಗೆ ಹಂಚಿಗೊಂಬಲೆ ಇವಾರೂ ಉಳಿಯವನ್ನೇ ಹೇಳ್ವ ಒಂದು ಆತಂಕವೂ ಅರ್ಜುನಂಗೆ. ಇದೊಂದು ಐಹಿಕ ಜೀವನದ ಸಹಜ ಲೆಕ್ಕಾಚಾರ.
‘ಮಧು’ ಹೇದರೆ ಆನಂದ. ಮಧುಸೂದನ° ಹೇದರೆ ಆನಂದ ನಾಶಕ°. ಧರ್ಮಮಾರ್ಗವ ಬಿಟ್ಟು ಅಧರ್ಮ ಮಾರ್ಗ ಹಿಡುದು ಮದಂದ(ಅಹಂಕಾರಂದ) ಸಾಗುವವರ ಆನಂದವ ನಾಶಮಾಡಿ ಸಜ್ಜನರ ಉದ್ಧಾರ ಮಾಡುವ ಆನಂದರೂಪಿ ಭಗವಂತ° – ಮಧುಸೂದನ°.
ಶ್ಲೋಕ
ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ ।
ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ ॥೩೬॥
ಪ್ರತಿಪದಾರ್ಥ
ನಿಹತ್ಯ ಧಾರ್ತರಾಷ್ಟ್ರಾನ್ ನಃ ಕಾ ಪ್ರೀತಿಃ ಸ್ಯಾತ್ ಜನಾರ್ದನ । ಪಾಪಮ್ ಏವ ಆಶ್ರಯೇತ್ ಅಸ್ಮಾನ್ ಹತ್ವಾ ಏತಾನ್ ಆತತಾಯಿನಃ ॥
ಅನ್ವಯ
ಹೇ ಜನಾರ್ದನ!, ಏತಾನ್ ಧಾರ್ತರಾಷ್ಟ್ರಾನ್ ನಿಹತ್ಯ ನಃ ಕಾ ಪ್ರೀತಿಃ ಸ್ಯಾತ್? ಆತತಾಯಿನಃ ಹತ್ವಾ ಅಸ್ಮಾನ್ ಪಾಪಮ್ ಏವ ಆಶ್ರಯೇತ್ ।
ಪ್ರತಿಪದಾರ್ಥ
ಹೇ ಜನಾರ್ದನ – ಏ ಸಕಲ ಜೀವಿಗಳ ರಕ್ಷಕನೇ (ಕೃಷ್ಣ!), ಏತಾನ್ ಧಾರ್ತರಾಷ್ಟ್ರಾನ್ – ಈ ಧೃತರಾಷ್ಟ್ರನ ಮಕ್ಕಳ, ನಿಹತ್ಯ – ಕೊಂದು, ನಃ – ನವಗೆ, ಕಾ – ಎಂತರ, ಪ್ರೀತಿಃ – ಸಂತೋಷ, ಸ್ಯಾತ್ – ಇಪ್ಪದು?!, ಆತತಾಯಿನಃ – ಆಕ್ರಮಣಕಾರಿಗಳ, ಹತ್ವಾ – ಕೊಂದು, ಅಸ್ಮಾನ್ – ನಮ್ಮ, ಪಾಪಮ್ – ಪಾಪವು, ಏವ – ಖಂಡಿತವಾಗಿಯೂ, ಆಶ್ರಯೇತ್ – ಆಶ್ರಯಿಸುತ್ತು.
ಅನ್ವಯಾರ್ಥ
ಏ ಜನಾರ್ದನ!, ಕೌರವಾದಿಗಳ ಕೊಂದು ಆನು ಪಡವ ಸಂತೋಷ ಆದರೂ ಎಂತರ?!, ಈ ಆಕ್ರಮಣಕಾರಿಗಳ ಕೊಲ್ಲುವುದರಿಂದಾಗಿ ನವಗೆ ಖಂಡಿತವಾಗಿಯೂ ಪಾಪವೇ ಅಂಟಿಗೊಳ್ಳುತ್ತು.
ತಾತ್ಪರ್ಯ / ವಿವರಣೆ
ಇಲ್ಲಿ ಅರ್ಜುನನ ಅಭಿಮತ ಧಾರ್ತರಾಷ್ಟ್ರರ ಕೊಂದು ನವಗೆ ಅಪ್ಪ ಸಂತೋಷ ಎಂತರ? ಅದರಿಂದ ನವಗೆ ಕಡೆವರೆಂಗೆ ಪಾಪಪ್ರಜ್ಞೆ ಉಳಿಗಷ್ಟೆ ಹೇದು.
ಆರು ಬಗೆಯ ಆಕ್ರಮಣಕಾರಿಗೊಡ. ೧. ವಿಷ ಹಾಕುವವ° ೨. ಮನಗೆ ಕಿಚ್ಚು ಹಾಕುವವ° ೩. ಮಾರಕ ಆಯುಧಂಗಳಿಂದ ಹಲ್ಲೆ ಮಾಡುವವ°, ೪ ಸಂಪತ್ತು ಲೂಟಿಮಾಡುವವ° ೫. ಮತ್ತೊಬ್ಬನ ಆಸ್ತಿಯ ಕಬಳಿಸುವವ°/ವಶಮಾಡುವವ° ೬. ಮತ್ತೊಬ್ಬನ ಹೆಂಡತಿಯ ಅಪಹರುಸುವವ°. ಇಂತವರ ಅಂಬಗಂಬಗಳೇ ಶಿಕ್ಷಿಸೆಕ್ಕಡ. ‘ಕಂಡಲ್ಲಿ ಹೊಡೆದು ಸಾಯಿಸು’ ಹೇದು ಹೇಳ್ತಡ ಶಾಸ್ತ್ರ. ಇಂತವರ ಕೊಲ್ಲುವದರಲ್ಲಿ ಪಾಪವೇ ಇಲ್ಲೆಡ. ಕೌರವ ಮೇಗೆ ಹೇದ ಎಲ್ಲ ಬಗೆಯ ಆಕ್ರಮಣಂಗಳ ಮಾಡಿದವ°. ಭೀಮಂಗೆ ವಿಷದ ಅನ್ನವ ಕೊಟ್ಟ°, ಅರಗಿನಾಲಯಕ್ಕೆ ಕಿಚ್ಚು ಕೊಟ್ಟ. ದ್ರೌಪದಿಯ ಶೀಲಾಪಹರಣ ಮಾಡ್ಳೆ ಪ್ರಯತ್ನಸಿ ವಸ್ತ್ರಾಪಹರಣ ಪ್ರಸಂಗ ನಡದತ್ತು, ಪಾಂಡವರ ಆಸ್ತಿಯನ್ನೂ ಒಳ ಹಾಕಿ ಕಾಡಿಂಗೆ ಅಟ್ಟಿ ಆತು. ಗೋಗ್ರಹಣ ಪ್ರಸಂಗವನ್ನುಂಟು ಮಾಡಿ ಪಾಂಡವರ ಕಬಳುಸಲೆ ಪ್ರಯತ್ನ ಮಾಡಿ ಆತು. ಸೂಜಿಮೊನೆ ನೆಲವನ್ನೂ ಕೊಡೆ ಹೇಳಿ ತಿರಸ್ಕರಿಸಿದವ° ಕೌರವ°.
ಇಲ್ಲಿ ಅರ್ಜುನ° ಶ್ರೀಕೃಷ್ಣನ ಜನಾರ್ದನ° ಹೇದು ದೆನಿಗೊಳ್ತ°. ಜನಾರ್ದನ° ಹೇಳಿರೆ ‘ನ ಜಾಯತೇ ಅರ್ದಯತಿ ಚ ಸಂಸಾರಂ’ – ದುರ್ಜನ ಸಂಹಾರಕ° ಮತ್ತೆ ಸಜ್ಜನಂಗೊಕ್ಕೆ ಮುಂದೆ ಹುಟ್ಟಿಲ್ಲದ್ದ ಮೋಕ್ಷಪ್ರದವಾದ ಸಾವು ಕೊಡುವವ°, ಸಂಸಾರ ಕಷ್ಟಂಗಳ ಹೋಗಲಾಡಿಸಿ ಪುನಃ ಹುಟ್ಟಿಲ್ಲದ್ದ ಸಾವು ಕೊಡುವವ°. “ಮೋಕ್ಷಪ್ರದನಾದ ನೀನು ಮತ್ತೆ ಪುನಃ ಈ ಹುಟ್ಟು-ಸಾವಿನ ಚಕ್ರಲ್ಲಿ ಬಪ್ಪ ಈ ಯುದ್ಧಲ್ಲಿ ಎಂಗಳ ಎಂತಕೆ ತೊಡಗುಸುತ್ತೆ?. ಯುದ್ಧ ಎಂದೂ ಮೋಕ್ಷಪ್ರದವಲ್ಲ. ಅದು ಸೇಡು-ದ್ವೇಷಂದ ಕೂಡಿಪ್ಪದು. ಹಾಂಗಿಪ್ಪಗ ಈ ಯುದ್ಧ ಎಂತಕೆ?!” ಹೇಳ್ವ ಧ್ವನಿ ಇಲ್ಲಿ.
ಶ್ಲೋಕ
ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸ್ವಬಾಂಧವಾನ್ ।
ಸ್ವಜನಂ ಹಿ ಕಥಮ್ ಹತ್ವಾ ಸುಖಿನಃ ಸ್ಯಾಮ ಮಾಧವ ॥ ೩೭॥
ಪದವಿಭಾಗ
ತಸ್ಮಾತ್ ನ ಅರ್ಹಾಃ ವಯಮ್ ಹಂತುಮ್ ಧಾರ್ತರಾಷ್ಟ್ರಾನ್ ಸ್ವ ಬಾಂಧವಾನ್ । ಸ್ವ ಜನಮ್ ಹಿ ಕಥಮ್ ಹತ್ವಾ ನುಖಿನಃ ಸ್ಯಾಮ ಮಾಧವ ॥
ಅನ್ವಯ
ಹೇ ಮಾಧವ!, ತಸ್ಮಾತ್ ಸ್ವಬಾಂಧವಾನ್ ಧಾರ್ತರಾಷ್ಟ್ರಾನ್ ಹಂತುಂ ವಯಂ ನ ಅರ್ಹಾಃ । ಸ್ವಜನಂ ಹತ್ವಾ ವಯಂ ಕಥಂ ಹಿ ಸುಖಿನಃ ಸ್ಯಾಮ ?
ಪ್ರತಿಪದಾರ್ಥ
ಹೇ ಮಾಧವ! – ಏ ಲಕ್ಷ್ಮೀರಮಣನಾದ ಮಾಧವನೇ!, ತಸ್ಮಾತ್ – ಹಾಂಗಾಗಿ, ಸ್ವ ಬಾಂಧವಾನ್, ತನ್ನ ಬಂಧುಗಳ, ಧಾರ್ತರಾಷ್ಟ್ರಾನ್ – ಧೃತರಾಷ್ಟ್ರನ ಮಕ್ಕಳ, ಹಂತುಮ್ – ಕೊಲ್ಲಲೆ, ವಯಂ ನ ಅರ್ಹಾ – ನಾವು ಅರ್ಹರಲ್ಲ, ಸ್ವ ಜನಮ್ – ತನ್ನ ಜನರ, ಹತ್ವಾ – ಕೊಂದಿಕ್ಕಿ, ಕಥಮ್ – ಹೇಂಗೆ, ಹಿ – ಖಂಡಿತವಾಗಿಯೂ, ಸುಖಿನಃ – ಸುಖಿಗೊ, ಸ್ಯಾಮ – ಅಪ್ಪಲೆಡಿಗು?!
ಅನ್ವಯಾರ್ಥ
ಮಾಧವ!, ಸಮೀಪ ಬಂಧುಗೊ ಆದ ದುರ್ಯೋಧನಾದಿಗಳ ಕೊಲ್ಲಲೆ ನಾವು ಅರ್ಹರಲ್ಲ. ನಮ್ಮ ಜನರ (ಬಾಂಧವರ) ಕೊಂದು ನಾವು ಹೇಂಗೆ ಸುಖಿಗಳಪ್ಪಲೆಡಿಗು ?!
ತಾತ್ಪರ್ಯ / ವಿವರಣೆ
ಧಾರ್ತರಾಷ್ಟ್ರರು ಹೇದರೆ ಎನ್ನ ಸಹೋದರರು. ಎನ್ನವು, ನಮ್ಮವು. ಅವರ ಕೊಂದು ನಾವು ಹೇಂಗೆ ಸುಖಿಗಳಪ್ಪಲೆಡಿಗು! ಅರ್ಜುನ ಒಬ್ಬ ಕ್ಷತ್ರಿಯ°. ಪ್ರಜಾಪಾಲನೆ, ಧರ್ಮರಕ್ಷಣೆ ಮಾಡೇಕ್ಕಾದ್ದು ಅವನ ಕರ್ತವ್ಯ. ಸ್ವಜನರ ಕಂಡು ತನ್ನ ಕರ್ತವ್ಯಲ್ಲಿ ಹಿಮ್ಮೆಟ್ಟು ಹಾಕುಲೆ ಪ್ರಯತ್ನಿಸುತ್ತಿಪ್ಪದು ಎದ್ದು ಕಾಣುತ್ತು. ಅರ್ಜುನ° ಇಲ್ಲಿ ಕೃಷ್ಣನ ಮಾಧವ ಹೇದು ಸಂಬೋಧಿಸುತ್ತ°. ಮಾಧವ ಹೇದರೆ ಭಾಗ್ಯ (ಸಂಪತ್ತು)ದೇವತೆಯ ಪತಿ. ಭಾಗ್ಯಾಧಿಪತಿಯಾದ ನೀನೇ ಎನ್ನ ದೌರ್ಭಾಗ್ಯದತ್ತ ನಡೆತ್ತ ಹಾಂಗೆ ಪ್ರೇರೇಪಿಸುತ್ತದು ಎಂಸಕೆ ಹೇದು ಅರ್ಜುನನ ಧ್ವನಿ.
ಶ್ಲೋಕ
ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತ ಚೇತಸಃ ।
ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ॥೩೮॥
ಪದವಿಭಾಗ
ಯದಿ ಅಪಿ ಏತೇ ನ ಪಶ್ಯಂತಿ ಲೋಭ-ಉಪಹತ-ಚೇತಸಃ । ಕುಲ-ಕ್ಷಯ-ಕೃತಮ್ ದೋಷಮ್ ಮಿತ್ರ-ದ್ರೋಹೇ ಚ ಪಾತಕಮ್ ॥
ಅನ್ವಯ
ಯದಿ ಅಪಿ ಏತೇ ಲೋಭ-ಉಪಹತ-ಚೇತಸಃ ಕುಲ-ಕ್ಷಯ-ಕೃತಂ ದೋಷಮ್, ಮಿತ್ರ-ದ್ರೋಹೇ ಚ ಪಾತಕಂ ನ ಪಶ್ಯಂತಿ ।
ಪ್ರತಿಪದಾರ್ಥ
ಯದಿ – ಒಂದುವೇಳೆ, ಅಪಿ – ಕೂಡ, ಏತೇ – ಇವು (ಈ), ಲೋಭ-ಉಪಹತ-ಚೇತಸಃ – ದುರಾಸೆಂದ ಪ್ರಭಾವಿತರಾದ ಹೃದಯದೋರಿಂದ, ಕುಲ-ಕ್ಷಯ-ಕೃತಮ್ – ಕುಲನಾಶ ಮಾಡಲಾದ, ದೋಷಮ್ – ತಪ್ಪಿನ, ಮಿತ್ರದ್ರೋಹೇ – ಸ್ನೇಹಿತರೊಂದಿಗೆ ಕಾದಾಡ್ತದರಲ್ಲಿ, ಚ – ಕೂಡ, ಪಾತಕಮ್ – ಪಾಪಪ್ರತಿಕ್ರಿಯೆಗಳ, ನ ಪಶ್ಯಂತಿ – ನೋಡುತ್ತವಿಲ್ಲೆ (ತಿಳಿತ್ತವಿಲ್ಲೆ).
ಅನ್ವಯಾರ್ಥ
ಲೋಭದುರಾಸೆಂದ ಬುದ್ಧಿಭ್ರಮಣೆ ಮಾಡಿಕೊಂಡಿಪ್ಪ ಇವ್ವು ಕೌರವವಂಶ ನಾಶದ ಕೇಡನ್ನೂ, ಮಿತ್ರರಿಂಗೆ ಮಾಡುವ ಹಿಂಸೆಂದ ಉಂಟಪ್ಪ ಪಾಪವನ್ನೂ ಅರ್ಥಮಾಡಿಗೊಳ್ತವಿಲ್ಲೇಳಿ ಆದರೆ..
ತಾತ್ಪರ್ಯ / ವಿವರಣೆ
ಬುದ್ಧಿಭ್ರಮಣೆಗೊಂಡವು ತಾನು ಎಂತ ಮಾಡ್ತೆ, ಸರಿಯೋ ತಪ್ಪೋ ಪಾಪವೋ ಪುಣ್ಯವೋ, ಒಳಿತೋ ಕೆಡುಕೊ ಹೇದು ಇತ್ಯಾದಿ ಒಂದರ್ನೂ ಮನಸ್ಸಿಲ್ಲಿ ತಿಳಿತ್ತವಿಲ್ಲೆ. ತನಗೆ ಆಯೇಕ್ಕಪ್ಪದು ಆಯೆಕು ಹೇದು ಅಷ್ಟೇ ಅವರ ವಿಚಾರ ಧಾರೆ.
ಶ್ಲೋಕ
ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ ।
ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ॥ ೩೯ ॥
ಪದವಿಭಾಗ
ಕಥಮ್ ನ ಜ್ಞೇಯಮ್ ಅಸ್ಮಾಭಿಃ ಪಾಪಾತ್ ಅಸ್ಮಾತ್ ನಿವರ್ತಿತುಮ್ । ಕುಲ-ಕ್ಷಯ-ಕೃತಮ್ ದೋಷಮ್ ಪ್ರಪಶ್ಯದ್ಭಿಃ ಜನಾರ್ದನ ॥
ಅನ್ವಯ
ಏ ಜನಾರ್ದನ!, ಕುಲ-ಕ್ಷಯ-ಕೃತಂ ದೋಷಾಂ ಪ್ರಪಶ್ಯದ್ಭಿಃ ಅಸ್ಮಾಭಿಃ ಅಸ್ಮಾತ್ ಪಾಪಾತ್ ನಿವರ್ತಿತುಂ ಕಥಂ ನ ಜ್ಞೇಯಮ್ ?
ಪ್ರತಿಪದಾರ್ಥ
ಹೇ ಜನಾರ್ದನ! – ಏ ಲೋಕದ ಸಕಲ ಜೀವರಕ್ಷಕನಾದ ಜನಾರ್ದನನೇ!, ಕುಲ-ಕ್ಷಯ-ಕೃತಮ್ – ವಂಶನಾಶ ಮಾಡಲಾದ, ದೋಷಮ್ – ದೋಷವ, ಪ್ರಪಶ್ಯದ್ಭಿಃ – ನೋಡಬಲ್ಲವರಾದ, ಅಸ್ಮಾಭಿಃ – ನಮ್ಮಿಂದ, ಅಸ್ಮಾತ್ ಪಾಪಾತ್ – ಈ ಪಾಪಂಗಳಿಂದ, ನಿವರ್ತಿತುಮ್ – ನಿವೃತ್ತಿ ಅಪ್ಪಲೆ, ಕಥಮ್ – ಹೇಂಗೆ, ನ ಜ್ಞೇಯಮ್ – ತಿಳಿಯಲ್ಪಡಲಾಗದ್ದು
ಅನ್ವಯಾರ್ಥ
ಜನಾರ್ದನ, ಕುಲನಾಶ ಮಾಡ್ವದರಿಂದ ಉಂಟಪ್ಪ ಕೇಡಿನ ನಾವು ಸ್ಪಷ್ಟವಾಗಿ ತಿಳುದವರಾದ್ದರಿಂದ ಈ ಪಾಪಕಾರ್ಯಂದ ದೂರವಿರೆಕು ಹೇದು ತಿಳಿಯದ್ರೆ ಹೇಂಗೆ?
ತಾತ್ಪರ್ಯ / ವಿವರಣೆ
ಇವ್ವು ಸಂಪೂರ್ಣ ದುರಾಸೆಯ ವಶವಾಯ್ದವು. ತಮ್ಮ ಕುಟುಂಬದವರ ಕೊಲ್ವುದರಿಂದ ಆಗಲೀ, ಮಿತ್ರ ದ್ರೋಹ ಮಾಡುವದರಿಂದಲಾಗಲೀ ಬಪ್ಪ ದೋಷಂಗಳ ತಿಳಿಯದ್ದವು. ಆದರೆ ಕುಲಕ್ಷಯ ಮಾಡುವದು ಮಹಾ ಪಾಪ ಹೇದು ತಿಳುದ ನಾವು ಎಂತಕೆ ಈ ಪಾಪ ಕಾರ್ಯವ ಮಾಡೆಕು!
ಇಂತಹ ಮಹಾಪಾಪಂಗಳ ಮಾಡ್ಳಾಗ ಹೇಳ್ವುದರ ನಾವೇ ಅರ್ತೂ ಆರಡಿಯದ್ದವರ ಹಾಂಗೆ ಆದ್ರೆ, ಮತ್ತೆ ಕೌರವಂಗೂ ನವಗೂ ಎಂತ ವ್ಯತ್ಯಾಸ? ಹುಟ್ಟು ಸಾವುಗಳ ಬಂಧಂದ ಪಾರುಮಾಡುವ ಓ ಜನಾರ್ದನನೇ!, ಕುಲವ ನಾಶ ಮಾಡುವ ಹಾಂಗಿಪ್ಪ ಕಾರ್ಯ ಮಾಡಿ, ಆ ದೋಷ ನವಗೆ ಬಪ್ಪ ಹಾಂಗೆ ಕಾಣುತ್ತು, ಯುದ್ಧಂದ ಅಪ್ಪ ಅನಿಷ್ಟಂಗೊ ಎಂತೆಲ್ಲಾ ಹೇದು ನವಗೆ ಗೊಂತಿದ್ದೂ ಯುದ್ಧ ಮಾಡ್ಳೆ ನಾವು ತೊಡಗಿದರೆ ದುರ್ಯೋಧನನ ಹಾಂಗೆ ನೀಚ ಬುದ್ಧಿ ನಮ್ಮದೂ ಆವ್ತಿಲ್ಯೋ ಹೇಳ್ವದು ಅರ್ಜುನನ ಧ್ವನಿ.
ಶ್ಲೋಕ
ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ ।
ಧರ್ಮೇ ನಷ್ಟೇ ಕುಲಂ ಕೃತ್ಸ್ನಮ್ ಅಧರ್ಮೋsಭಿವತ್ಯುತ ॥೪೦॥
ಪದವಿಭಾಗ
ಕುಲ-ಕ್ಷಯೇ ಪ್ರಣಶ್ಯಂತಿ ಕುಲ-ಧರ್ಮಾಃ ಸನಾತನಾಃ । ಧರ್ಮೇ ನಷ್ಟೇ ಕುಲಮ್ ಕೃತ್ಸ್ನಮ್ ಅಧರ್ಮಃ ಅಭಿಭವತಿ ಉತ ॥
ಅನ್ವಯ
ಕುಲ-ಕ್ಷಯೇ ಸನಾತನಾಃ ಕುಲ-ಧರ್ಮಾಃ ಪ್ರಣಶ್ಯಂತಿ, ಉತ ಧರ್ಮೇ ನಷ್ಟೇ ಅಧರ್ಮಃ ಕೃತ್ಸ್ನಂ ಕುಲಮ್ ಅಭಿಭವತಿ ।
ಪ್ರತಿಪದಾರ್ಥ
ಕುಲ-ಕ್ಷಯೇ – ವಂಶನಾಶಲ್ಲಿ, ಸನಾತನಾಃ – ಶಾಶ್ವತವಾದ, ಕುಲ-ಧರ್ಮಾಃ – ಕುಲಸಂಪ್ರದಾಯಂಗೊ, ಪ್ರಣಶ್ಯಂತಿ – ನಾಶವಾವ್ತು, ಉತ – ಹೇದು ಹೇಳಿದ್ದು, ಧರ್ಮೇ ನಷ್ಟೇ – ಧರ್ಮ ನಾಶಲ್ಲಿ, ಅಧರ್ಮಃ – ಅಧರ್ಮವು, ಕೃತ್ಸ್ನಮ್ – ಸಂಪೂರ್ಣವಾಗಿ, ಕುಲಮ್ – ಕುಲವ, ಅಭಿಭವತಿ – ಆವರಿಸುತ್ತು,
ಅನ್ವಯಾರ್ಥ
ಕುಲ/ವಂಶ ನಾಶಮಾಡುವದರಿಂದ ಪ್ರಾಚೀನಂದಲೂ ನಡಕ್ಕೊಂಡು ಬಂದಿಪ್ಪ (ಸನಾತನ) ಧಾರ್ಮಿಕ ಧರ್ಮ-ಕರ್ಮಂಗೊ ವಿನಾಶ ಆವ್ತು. ಧರ್ಮನಷ್ಟಂದಲಾಗಿ ಅಧರ್ಮವೇ ವಿಜೃಂಭಿಸುತ್ತು.
ತಾತ್ಪರ್ಯ / ವಿವರಣೆ
ಬನ್ನಂಜೆಯವು ಈ ಭಾಗವ ಈ ರೀತಿ ವಿವರುಸುತ್ತವು –
ಯುದ್ಧಂದಲಾಗಿ ಮುಂದೆ ಎದುರಪ್ಪ ದೊಡ್ಡ ಸಮಸ್ಯೆ ಹೇಳಿರೆ ‘ಕುಲಧರ್ಮ’ ನಾಶ. ಜಾತಿಧರ್ಮ, ಕುಲಧರ್ಮ, ಸನಾತನ ಧರ್ಮ ಇತ್ಯಾದಿ. ಜಾತಿಧರ್ಮ ಹೇಳಿರೆ ನಮ್ಮ ಮನಸ್ಸಿಂಗೆ ಪಕ್ಕನೆ ಗೋಚರ ಅಪ್ಪದು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ಹೇಳ್ವ ಜಾತಿ. ಕುಲಧರ್ಮ ಹೇದರೆ ಮನಸ್ಸಿಂಗೆ ತೋರುವದು ಒಂದು ಮನೆತನದ ಧರ್ಮ / ಕೆಲಸ. ಭಟ್ಟ, ಕಮ್ಮಾರ, ಚಮ್ಮಾರ, ಬಡಗಿ ಇತ್ಯಾದಿಗೊ. ಆದರೆ ಇಲ್ಲಿ ಹೇಳುವದು ಅದರ ಅಲ್ಲಡ. ಬನ್ನಂಜೆಯವು ವಿಶ್ಲೇಸಿಸುತ್ತವು – ಕುಲಧರ್ಮ ಹೇದರೆ ಸಮಾಜ ಧರ್ಮ., ಜಾತಿ ಧರ್ಮ ಹೇದರೆ ಹುಟ್ಟುಗುಣಂದ ಬಂದ ಮನುಷ್ಯನ ಸಹಜ ವೈಯುಕ್ತಿಕ ಧರ್ಮ. ಇದರಿಂದ ಆಚಿಗೆ ಇಪ್ಪದು ಸನಾತನ ಧರ್ಮ. ಇದು ಶಾಶ್ವತ ಧರ್ಮ. ಯಾವ ಕಾಲಲ್ಲಿಯೂ ಯಾವ ದೇಶಲ್ಲಿಯೂ ಸನಾತನ ಧರ್ಮ ಬದಲಪ್ಪಲಿಲ್ಲೆ. ವ್ಯಕ್ತಿಧರ್ಮ ವ್ಯಕ್ತಿಗಳ ನಡುವೆ ಬದಲಾವ್ತು. ಸಮಾಜ ಧರ್ಮ ಕಾಲಕ್ಕನುಗುಣವಾಗಿ, ದೇಶಕ್ಕನುಗುಣವಾಗಿ ಬದಲಾವ್ತು.
ಜಾತಿಧರ್ಮ ಹೇದರೆ ನಮ್ಮ ಸಹಜವಾದ ಹುಟ್ಟುಗುಣ ಸ್ವಭಾವ. ಪ್ರತಿಯೊಂದು ಜೀವಕ್ಕೂ ತನ್ನದೇ ಆದ ಹುಟ್ಟುಗುಣ ಇದ್ದೇ ಇರ್ತು. ಇದರ ಪತ್ತೆ ಹಚ್ಚುದು ಸುಲಭವಲ್ಲ. ಏಕೇಳಿರೆ ಅದರ ಮೇಲೆ ಅನುವಂಶೀಯ ಮತ್ತು ಬೆಳೆದ ಪರಿಸರ ವಾತಾವರಣದ ಎರಡು ಪ್ರಭಾವ ಆವರಿಸಿರ್ತು. ಪರಿಸರದ ಶಿಶುವಾದ ಮಾನವ° ಅನುವಂಶೀಯವಾಗಿ ಹರುದುಬಂದ ಗುಣಂಗಳ ಮತ್ತು ಪರಿಸರದ ಪ್ರಭಾವಲ್ಲಿ ಬದುಕುತ್ತ°. ಇದು ನೈಜ ಸ್ವಭಾವ ಮುಚ್ಚಿಬಿಡುತ್ತು.
ಸಮಾಜ ಧರ್ಮ : ಸಮಾಜಲ್ಲಿ ನಾವು ಏಕಾಂಗಿಯಾಗಿ ಆರ ನೆರವು ಇಲ್ಲದ್ದೆ ಬದುಕುತ್ತದಲ್ಲ. ಆದ್ದರಿಂದ ಸಂಘಟನೆಗೆ ಒಂದು ಪ್ರತ್ಯೇಕ ಧರ್ಮ. ವ್ಯಕ್ತಿ ಧರ್ಮವ (ವೈಯುಕ್ತಿಕ ಅಭಿರುಚಿಯ) ಸಮಾಜ ಧರ್ಮಕ್ಕೋಸ್ಕರ ಬದಲಿಸಿಕೊಳ್ಳೆಕ್ಕಾಗಿ ಬತ್ತು. (ಉದಾ : ಜೋರಾಗಿ ಮಾತಾಡುವದು ವೈಯುಕ್ತಿಕ ಧರ್ಮ ಆಗಿದ್ದರೂ ಆಸ್ಪತ್ರೇಲಿ ನಿಶ್ಯಬ್ದ ಕಾಪಾಡೆಕ್ಕಾದ್ದು ಸಮಾಜ ಧರ್ಮ). ಸಮಾಜ ಬದಲಾದಾಂಗೆ ಸಮಾಜ ಧರ್ಮವೂ ಬದಲಿಗೊಂಡು ಹೋವ್ತು. ಉದಾ : ಇಂತಹ ವಯಸ್ಸಿಂಗೆ ಮದುವೆ ಅಪ್ಪಲಕ್ಕು ಹೇದು ಕಾಲಕ್ಕನುಗುಣವಾಗಿ ಬದಲಾದ್ದು. ವೇದಕಾಲಲ್ಲಿ ಹೆಣ್ಣುಮಕ್ಕಳ ಬಾಲ್ಯ ವಿವಾಹ ಜಾರಿಲಿ ಇತ್ತಿದ್ದು. ಕಾರಣ ಎಂತ ಕೇಟ್ರೆ, ಆ ಕಾಲಲ್ಲಿ, ಅಂಬಗ ಗುರುಕುಲ ಪದ್ಧತಿ ಇತ್ತಿದ್ದು, ಗೆಂಡುಮಕ್ಕೊ ತನ್ನ ಎಂಟನೇ ವರ್ಷಂದ ಇಪ್ಪತ್ತನೇ ವರ್ಷದ ವರೆಂಗೆ ಗುರುಕುಲಲ್ಲಿ ವಿದ್ಯಾಭ್ಯಾಸ ಮಾಡಿ ಮನಗೆ ಹಿಂತಿರುಗಿಯೊಂಡಿತ್ತಿದ್ದವು. ಹಾಂಗೆ ಕಲ್ತು ಬಂದ ಮಾಣಿಗೆ ಎಂಟು ವರ್ಷ ಪ್ರಾಯದ ಕನ್ಯೆಯ ಮದುವೆ ಮಾಡ್ಸಿಗೊಂಡಿತ್ತಿದ್ದಿದ್ದವು. ಅದು ಅವನ ಶಿಷ್ಯೆ ಆಗಿ ವಿದ್ಯಾಭ್ಯಾಸ ಕಲ್ತು ಪ್ರಾಯಪ್ರಬುದ್ಧೆ ಆದ ಮತ್ತೆ ಸಂಸಾರ ಮಾಡ್ಳೆ ಸುರುಮಾಡುತ್ತವು. ಇದರಿಂದ ಅಲ್ಲಿವರೇಗೆ ಗಂಡನ ಅರ್ತುಗೊಂಬ, ಗಂಡನ ಮನೆ ವಾತಾವರಣ ಪರಿಸರವ ಅರ್ತುಗೊಂಬ ಹೊಂದಿಕೊಂಬ ಗುಣ ಬತ್ತಿತ್ತು. ರಾಮಾಯಣ, ಮಹಾಭಾರತ ಕಾಲಲ್ಲಿ ಬಾಲ್ಯವಿವಾಹ ಇತ್ತಿಲ್ಲೆಡ. ಮತ್ತೆ ಇತ್ತೀಚೆ ಸುಮಾರು ಒಂದು ಸಾವಿರ ವರ್ಷಂದ ಹಿಂದೆ ವಿದೇಶೀ ಆಕ್ರಮಣ ಆದಪ್ಪಗ ಹೆಣ್ಣುಮಕ್ಕಳ ಶಾಲಗೆ ಕಳುಸದ್ದೇ ಬೇಗ ಮದುವೆ ಮಾಡ್ಳೆ ಸುರುಮಾಡಿದ್ದಡ. ಇದು ಸಾಮಾಜಿಕ ಒತ್ತಡಂದ ಆದ ಬದಲಾವಣೆ. ಸಮಾಜ ಧರ್ಮ ಸಮಯಕ್ಕನುಗುಣವಾಗಿ, ಸಮಾಜಕ್ಕನುಗುಣವಾಗಿ ಬದಲಾವ್ತು.
ಸನಾತನ ಧರ್ಮ : ಇದು ಎಲ್ಲಾ ಕಾಲಲ್ಲಿಯೂ, ಎಲ್ಲಾ ಸ್ಥಿತಿಲ್ಲಿಯೂ ಎಂದೂ ಬದಲಾಗದ್ದ ಧರ್ಮ. ವೇದ ಹೇಳುವದು ಸನಾತನ ಧರ್ಮವ. ಉದಾ : ಪ್ರಾಮಾಣಿಕವಾಗಿ ಬದುಕ್ಕೆಕು. ಇನ್ನೊಬ್ಬರ ಸೊತ್ತಿಲ್ಲಿ ಆಶೆಪಡ್ಳಾಗ. ಸತ್ಯವನ್ನೇ ಹೇಳೇಕು. ದೇವರ ನಂಬಿ ನಡೇಕು ಇತ್ಯಾದಿ ಇತ್ಯಾದಿ. ಇದು ಶಾಶ್ವತವಾದ ಧರ್ಮ. ಎಲ್ಲಾ ಕಾಲಕ್ಕೂ ಎಲ್ಲಾ ದೇಶಕ್ಕೂ ಇದುವೇ. ಬದಲಪ್ಪಲಿಲ್ಲೆ.
ಸನಾತನ ಧರ್ಮಕ್ಕನುಗುಣವಾಗಿ ಸಾಮಾಜಿಕ ಧರ್ಮವ ಹೊಂದಿಸಿಕ್ಕೊಳ್ಳೆಕ್ಕಡ. ಜಾತಿಧರ್ಮವ ಸಮಾಜ ಧರ್ಮಕ್ಕನುಗುಣವಾಗಿ ಹೊಂದಿಸಿಕೊಳ್ಳೆಕ್ಕಡ. ಒಂದು ವಸ್ತುವಿನ ಅಸಾಧಾರಣ ಗುಣ ಅದರ ಧರ್ಮ. ಉದಾ: ನೋಡುವದು ಕಣ್ಣಿನ ಧರ್ಮ, ಕೇಳುವದು ಕೆಮಿಯ ಧರ್ಮ. ಆದರೆ ಯಾವುದು ಧರ್ಮವೋ ಅದುವೇ ಅಧರ್ಮ ಅಪ್ಪೋದಿದ್ದು. ನೋಡಬಾರದ್ದರ ನೋಡುವುದು ಅಧರ್ಮ, ಕೇಳಬಾರದ್ದರ ಕೇಳುವದು ಅಧರ್ಮ. ಎಲ್ಲೋದಕ್ಕೂ ಒಂದು ಸೀಮೆ (ಗಡಿ) ಇದ್ದು. ಅದು ಮೀರಿದರೆ ಅದುವೇ ಅಧರ್ಮ.
ಕುಲಕ್ಷಯ ಆದಪ್ಪಗ ಸಮಾಜ ಧರ್ಮವ ನಡೆಸೆಕ್ಕಾದ ನ್ಯಾಯಾಂಗ ವ್ಯವಸ್ಥೆ ಕುಸುದು ಹೋವ್ತು. ನ್ಯಾಯಾಂಗ ವ್ಯವಸ್ಥೆ ನಾಶ ಅಪ್ಪಗ ಸಮಾಜ ಧರ್ಮ ನಾಶ ಆವ್ತು. ಸಮಾಜ ಧರ್ಮ ನಾಶ ಅಪ್ಪಗ ಸಾಮಾಜಿಕ ವ್ಯವಸ್ಥೆ ಅಸ್ತವ್ಯಸ್ತ ಆಗಿ ಸಮಾಜ ಅಧರ್ಮಲ್ಲಿ ಮುಂಗುತ್ತು. ಅರ್ಜುನ° ಹೇಳ್ತ° – ವಿಷಯ ಇಂತಿಪ್ಪಗ ಸಮಾಜಕ್ಕೆ ನಾವು ಕೊಡುವ ಕಾಣಿಕೆ ಆದರೂ ಎಂತರ?!
ಶ್ಲೋಕ
ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ ।
ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ ॥೪೧॥
ಪದವಿಭಾಗ
ಅಧರ್ಮ-ಅಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲ-ಸ್ತ್ರಿಯಃ । ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣ-ಸಂಕರಃ ॥
ಅನ್ವಯ
ಹೇ ಕೃಷ್ಣ!, ಅಧರ್ಮ-ಅಭಿಭವಾತ್ ಕುಲ-ಸ್ತ್ರಿಯಃ ಪ್ರದುಷ್ಯಂತಿ । ಹೇ ವಾರ್ಷ್ಣೇಯ!, ಸ್ತ್ರೀಷು ದುಷ್ಟಾಸು ವರ್ಣ-ಸಂಕರಃ ಜಾಯತೇ ।
ಪ್ರತಿಪದಾರ್ಥ
ಹೇ ಕೃಷ್ಣ! –ಹೇ ಕೃಷ್ಣ!, ಅಧರ್ಮ–ಅಭಿಭವಾತ್ – ಅಧರ್ಮವು ಪ್ರಧಾನವಪ್ಪುದರಿಂದ, ಕುಲ-ಸ್ತ್ರಿಯಃ – ಕುಲಸ್ತೀಯರು, ಪ್ರದುಷ್ಯಂತಿ – ದೂಷಿತರಾವ್ತವು, ಹೇ ವಾರ್ಷ್ಣೇಯ! – ಏ ವೃಷ್ಣಿ ವಂಶಜನೇ!, ಸ್ತ್ರೀಷು ದುಷ್ಟಾಸು – ದುಷ್ಟ ಸ್ತ್ರೀಯರಲ್ಲಿ, (ದುಷ್ಟ ಸ್ತ್ರೀಯರಿಂದ ಹೇದರ್ಥ ಇಲ್ಲಿ), ವರ್ಣಸಂಕರಃ – ಅನಪೇಕ್ಷಿತ ಸಂತಾನ / ಜಾತಿ ಬೆರಕೆ, ಜಾಯತೇ – ಉಂಟಾವ್ತು.
ಅನ್ವಯಾರ್ಥ
ಹೇ ವಾರ್ಷ್ಣೇಯ! (ಕೃಷ್ಣ!), ಅಧರ್ಮ ಪ್ರಬಲ ಅಪ್ಪಗ ಕುಲಸ್ತ್ರೀಯರು ನಡತೆ ಕೆಡುತ್ತವು. ಸ್ತೀಯರು ಕೆಡುವಾಗ ವರ್ಣಸಂಕರ ಆವ್ತು.
ತಾತ್ಪರ್ಯ / ವಿವರಣೆ
ಕುಟುಂಬಲ್ಲಿ ಅಧರ್ಮ ಪ್ರಧಾನ ಆದಪ್ಪಗ ಕುಲಸ್ತ್ರೀಗೊ ನೀತಿಭ್ರಷ್ಟರಪ್ಪಲೆ ಕಾರಣ ಆವ್ತು. ಅದರಿಂದ ಅನಪೇಕ್ಷಿತ ಸಂತಾನ ಸೃಷ್ಟಿ ಆವ್ತು. ಯುದ್ಧ ಆದರೆ ಅದರಿಂದ ಯುವಕರು ಸಾಯುತ್ತವು. ಅಧರ್ಮ ಸಮಾಜವ ಆಕ್ರಮಿಸುತ್ತು. ಯುವಕರಿಲ್ಲದ ಸಮಾಜ ಸೃಷ್ಟಿ ಆವ್ತು. ಸಾಮಾಜಿಕವಾಗ ಸ್ತ್ರೀಗೆ ಭದ್ರತೆ ಇಲ್ಲದಾವ್ತು. ಪರಿಣಾಮವಾಗಿ ಅವರ ಮುಗ್ಧತೆಯ ದುರುಪಯೋಗ ಆವ್ತು. ಅದರಿಂದ ಸಮಾಜಲ್ಲಿ ವರ್ಣಸಂಕರ ಆವ್ತು. ವರ್ಣಸಂಕರ ವಿಕ್ಷಿಪ್ತ ಸಂತತಿಗೆ ಕಾರಣ ಆವ್ತು.
ಇಲ್ಲಿ ಅರ್ಜುನ° ಕೃಷ್ಣನ ‘ವಾರ್ಷ್ಣೇಯ°’ ಹೇಳಿ ದೆನಿಗೋಳ್ತ°. ಯಾದವ ಮನೆತನದ ಹಿರಿಯ ರಾಜ ‘ವೃಷ್ಣಿ’. ಆ ವಂಶಲ್ಲಿ ಅವತರಿಸಿದವನಾದ್ದರಿಂದ ‘ವಾರ್ಷ್ಣೇಯ°’. ಸಜ್ಜನರ ಅಭೀಷ್ಟವ ಈಡೇರಿಸಿ ಧರ್ಮಸಂಸ್ಥಾನೆಗಾಗಿ ವೃಷ್ಣಿ ವಂಶಲ್ಲಿ ಅವತರಿಸಿದ ಭಗವಂತ° – ‘ವಾರ್ಷ್ಣೇಯ°’.
ಶ್ಲೋಕ
ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ ।
ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ ॥೪೨॥
ಪದವಿಭಾಗ
ಸಂಕರಃ ನರಕಾಯ ಏವ ಕುಲ-ಘ್ನಾನಾಮ್ ಕುಲಸ್ಯ ಚ । ಪತಂತಿ ಪಿತರಃ ಹಿ ಏಷಾಮ್ ಲುಪ್ತ-ಪಿಂಡ-ಉದಕ-ಕ್ರಿಯಾಃ ॥
ಅನ್ವಯ
ಸಂಕರಃ ಕುಲ-ಘ್ನಾನಾಂ ಕುಲಸ್ಯ ಚ ನರಕಾಯ ಏವ ಭವತಿ । ಏಷಾಂ ಪಿತರಃ ಲುಪ್ತ-ಪಿಂಡ-ಉದಕ-ಕ್ರಿಯಾಃ ಸಂತಃ ಪತಂತಿ ಹಿ ।
ಪ್ರತಿಪದಾರ್ಥ
ಸಂಕರಃ – ಆ ರೀತಿ ವರ್ಣಸಂಕರಂದ ಜನಿಸಿದ ಸಂತಾನ, ಕುಲಘ್ನಾನಾಮ್ – ವಂಶನಾಶಕರ, ಕುಲಸ್ಯ – ವಂಶದ, ಚ – ಕೂಡ, ನರಕಾಯ – ನರಕಜೀವನವನ್ನುಂಟುಮಾಡ್ಳೆ, ಏವ – ನಿಶ್ಚಯವಾಗಿಯೂ, ಭವತಿ – ಆವುತ್ತು. ಏಷಾಮ್ – ಇವರ, ಪಿತರಃ – ಪಿತೃಗೊ, ಲುಪ್ತ-ಪಿಂಡ-ಉದಕ-ಕ್ರಿಯಾಃ – ನಿಲ್ಲುಸಿದ ಪಿಂಡಪ್ರದಾನ ತರ್ಪಣಕ್ರಿಯೆಯವರಾಗಿ, ಪತಂತಿ – ಪತನಗೊಳ್ಳುತ್ತವು, ಹಿ – ಖಂಡಿತವಾಗಿಯೂ.
ಅನ್ವಯಾರ್ಥ
ವರ್ಣಭೇದಂಗೊ ಉಂಟಪ್ಪಗ ಕುಲಕ್ಕೆ ಮತ್ತು ಕುಲನಾಶಕರಿಂಗೆ ನರಕ ಪ್ರಾಪ್ತಿ ಆವ್ತು. ಅವರ ಪಿತೃಗೊ ಪಿಂಡೋದಕ ಕಾರ್ಯವಿಲ್ಲದ್ದೆ ಪಿತೃಲೋಕಂದ ಅಧೋಗತಿಗೆ ಖಂಡಿತವಾಗಿಯೂ ಪತನಗೊಳ್ಳುತ್ತವು.
ತಾತ್ಪರ್ಯ / ವಿವರಣೆ
ವಿಕ್ಷಿಪ್ತ (ಅನಪೇಕ್ಷಿತ) ಸಂತತಿ ಹುಟ್ಟುವದರಿಂದ ಇಡೀ ಸಮಾಜ ನರಕಕ್ಕೆ ಹೋಯೇಕ್ಕಾಗಿ ಬತ್ತು. ಮತ್ತೆ ಅದಕ್ಕೆ ಕಾರಣರಾದ ನಾವೂ ನರಕಕ್ಕೆ ಹೋಯೇಕ್ಕಾವ್ತು. ಸಮಾಜ ಈ ರೀತಿ ಸಂಕೀರ್ಣ ಆದಪ್ಪಗ ಎಲ್ಲಾ ನಂಬಿಕೆಯ ಕಳಕ್ಕೊಂಡಪ್ಪಗ ಪಿತೃಗೊ ಪಿಂಡ ಪ್ರದಾನ ತರ್ಪಣ ಇಲ್ಲದ್ದೆ ನರಕಲ್ಲಿ ಬೀಳೆಕ್ಕಾವ್ತು.
ಇಲ್ಲಿ ಪಿಂಡದ ಬಗ್ಗೆ ಬನ್ನಂಜೆಯವು ಈ ರೀತಿ ಹೇಳ್ತವು – ನಾವು ಹಾಕುವ ಸ್ಥೂಲವಾದ ಪಿಂಡ ಸತ್ತ ಜೀವಕ್ಕೆ ನೇರವಾಗಿ ಹೋಗಿ ಸೇರುತ್ತಿಲ್ಲೆ. ಸತ್ತ ನಂತರ ಸೂಕ್ಷ್ಮ ಜೀವಲ್ಲಿ ಇಪ್ಪ ಜೀವಕ್ಕೆ ಸ್ಥೂಲಪಿಂಡದ ಅಗತ್ಯ ಇಲ್ಲೆ. ಜೀವ ಕರ್ಮಾನುಸಾರ ತಾನು ಹೋಯೇಕ್ಕಾದಲ್ಲಿಗೆ ಹೋವುತ್ತು. ನಾವು ಪಿಂಡ ಹಾಕುತ್ಸು ಪಿತೃದೇವತೆಗೊಕ್ಕೆ. ಇದೊಂದು ದೇವತಾಗಣ. ಅದರಲ್ಲಿ ಒಟ್ಟು ನೂರು ದೇವತೆಗೊ. ಅವರಲ್ಲಿ ಮೂರು ಪ್ರಧಾನ ಪಿತೃಗೊ. ಜೀವಿತ ಕಾಲಲ್ಲಿ ತತ್ವಾಭಿಮಾನಿ ದೇವತೆಗಳ ಹೇಂಗೆ ಪೂಜಿಸುತ್ತೋ, ಹಾಂಗೇ, ಸತ್ತ ಮತ್ತೆ ಈ ಸ್ಥೂಲ ಶರೀರಂದ ಹೊರಬಂದ ಮತ್ತೆ ಜೀವವ ರಕ್ಷಿಸುವ ದೇವತಾಗಣ – ‘ಪಿತೃಗಣ’. ಈ ಪಿತೃಗಳ ನಿಯಂತ್ರಿಸುವುವವು ‘ವಸು – ರುದ್ರ- ಆದಿತ್ಯ’ರು. ಈ ಪಿತೃದೇವತೆಗಳ ನಮ್ಮ ಪೂರ್ವಜರು ತೀರಿಗೊಂಡ ದಿನದಂದು ಆರಾಧುಸುವದು ಸಂಪ್ರದಾಯ. ಇಲ್ಲಿ ಪಿತೃಗೊಕ್ಕೆ ಪಿಂಡ ಪ್ರದಾನ ಮಾಡುವ ಕಾರಣ ಎಂತ ಕೇಳಿರೆ, ಒಂದು ವೇಳೆ ಯಾವುದೋ ಕಾರಣಂದ ಅವರ ದಾರೀಲಿ ಬಾಧಕವಾಗಿದ್ದರೆ ಅದರ ಪರಿಹರಿಸು ಹೇಳಿ ಮಾಡುವ ಪ್ರಾರ್ಥನೆಯೇ ಪಿಂಡ ಪ್ರದಾನ. ಪ್ರಾರಬ್ಧ ಕರ್ಮಂದ ಅವರ ಕಾಪಾಡಿ ಹೇಳಿ ಪಿತೃ ದೇವತೆಗಳ ಅರ್ಚನೆ. ಇನ್ನು ಕಾಕೆ ಮುಟ್ಟುತ್ಸು ಹೇಳಿರೆ ಪಿತೃ ದೇವತೆಗೊ ನಮ್ಮ ಪೂಜೆಯ ಸ್ವೀಕರಿಸಿದವು ಹೇಳಿ ಶಕುನ ಸಂಕೇತ.
ಶ್ಲೋಕ
ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ ।
ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ॥೪೩॥
ಪದವಿಭಾಗ
ದೋಷೈಃ ಏತೈಃ ಕುಲ-ಘ್ನಾನಾಮ್ ವರ್ಣ-ಸಂಕರ-ಕಾರಕೈಃ । ಉತ್ಸಾದ್ಯಂತೇ ಜಾತಿ-ಧರ್ಮಾಃ ಕುಲ-ಧರ್ಮಾಃ ಚ ಶಾಶ್ವತಾಃ ॥
ಅನ್ವಯ
ಕುಲ-ಘ್ನಾನಾಮ್ ಏತೈಃ ವರ್ಣ-ಸಂಕರ-ಕಾರಕೈಃ ದೋಷೈಃ ಶಾಶ್ವತಾಃ ಜಾತಿ-ಧರ್ಮಾಃ ಕುಲ-ಧರ್ಮಾಃ ಚ ಉತ್ಸಾದ್ಯಂತೇ ।
ಪ್ರತಿಪದಾರ್ಥ
ಕುಲ-ಘ್ನಾನಾಮ್ – ಕುಲನಾಶಕರ, ಏತೈಃ – ಈ ಎಲ್ಲಾ, ವರ್ಣ-ಸಂಕರ-ಕಾರಕೈಃ – ಅನಪೇಕ್ಷಿತ ಮಕ್ಕೊಗೆ ಕಾರಣವಪ್ಪ, ದೋಷೈಃ – ದೋಷಂಗಳಿಂದ, ಶಾಶ್ವತಾಃ – ಶಾಶ್ವತವಾದ, ಜಾತಿ-ಧರ್ಮಾಃ – ಸಮುದಾಯ ಧರ್ಮಂಗೊ/ಯೋಜನೆಗೊ, ಕುಲ-ಧರ್ಮಾಃ – ಕುಲಸಂಪ್ರದಾಯಂಗೊ, ಚ – ಕೂಡ, ಉತ್ಸಾದ್ಯಂತೇ – ನಾಶವಾವ್ತು.
ಅನ್ವಯಾರ್ಥ
ವರ್ಣಭೇದಂಗೊಕ್ಕೆ ಕಾರಣವಾಗಿಪ್ಪವರ ಮತ್ತು ಕುಲಧರ್ಮವನ್ನೂ ಹಾಳುಗೆಡಹುವವರ ಹೀನಕೃತ್ಯಂಗಳಿಂದ ವರ್ಣದ ಅನೇಕ ಧಾರ್ಮಿಕ ಕರ್ಮಂಗೊ ಮತ್ತು ಕುಲಧರ್ಮಂಗೊ ನಾಶ ಆವ್ತು.
ತಾತ್ಪರ್ಯ / ವಿವರಣೆ
ಯುದ್ಧದ ಪರಿಣಾಮವಾಗಿ ನಾಯಕರಿಲ್ಲದ್ದೆ, ಯುವಕರಿಲ್ಲದ್ದೆ, ಸಮಾಜಲ್ಲಿ ಗಂಡು ಹೆಣ್ಣಿನ ಅನುಪಾತ ವೆತ್ಯಾಸ ಆವ್ತು. ಇದು ಸರಿ ಆಯೇಕ್ಕಾರೆ ಅನೇಕಾನೇಕ ವರ್ಷಂಗಳೇ ಬೇಕು. ಒಟ್ಟು ಸಮಾಜದ ವ್ಯವಸ್ಥೆ ನಾಶ ಆವ್ತು. ಇದರಿಂದ ಆಯಾ ಜೀವದ ಸ್ವಭಾವ ಅಭಿವೃದ್ಧಿ ಆಗದ್ದೆ, ವ್ಯಕ್ತಿತ್ವ ವಿಕಸನ ಕುಂಠಿತ ಆವ್ತು. ಶಾಶ್ವತ ಮೌಲ್ಯದ ಸಮಾಜ ಧರ್ಮ ನಾಶ ಆವ್ತು. ಅನಾದಿ ಕಾಲಂದ ಸಮಾಜ ಒಪ್ಪಿಗೊಂಡು ಬಂದ ಸ್ಥಿರ ಧರ್ಮ ಕೊಚ್ಚಿ ಹೋವ್ತು.
ಶ್ಲೋಕ
ಉತ್ಸನ್ನ ಕುಲಧರ್ಮಾಣಾಂ ಮುನುಷ್ಯಾಣಾಂ ಜನಾರ್ದನ ।
ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ ॥೪೪॥
ಪದವಿಭಾಗ
ಉತ್ಸನ್ನ-ಕುಲ-ಧರ್ಮಾಣಾಮ್ ಮನುಷ್ಯಾಣಾಮ್ ಜನಾರ್ದನ । ನರಕೇ ನಿಯತಮ್ ವಾಸಃ ಭವತಿ ಇತಿ ಅನುಶುಶ್ರುಮ ॥
ಅನ್ವಯ
ಏ ಜನಾರ್ದನ!, ಉತ್ಸನ್ನ-ಕುಲ-ಧರ್ಮಾಣಾಂ ಮನುಷ್ಯಾಣಾಂ ನರಕೇ ನಿಯತಂ ವಾಸಃ ಭವತಿ ಇತಿ ಅನುಶುಶ್ರುಮ ।
ಪ್ರತಿಪದಾರ್ಥ
ಹೇ ಜನಾರ್ದನ! – ಓ ಜನಪಾಲಕ ಶ್ರೀಕೃಷ್ಣನೇ!, ಉತ್ಸನ್ನ-ಕುಲ-ಧರ್ಮಾಣಾಮ್ – ಕೆಟ್ಟುಹೋದ ಕುಲಧರ್ಮಂಗಳುಳ್ಳ, ಮನುಷ್ಯಾಣಾಮ್ – ಮನುಷ್ಯರ, ನರಕೇ – ನರಕಲ್ಲಿ, ನಿಯತಮ್ – ಯೇವತ್ತೂ, ವಾಸಃ – ವಾಸವು, ಭವತಿ – ಆವ್ತು, ಇತಿ – ಹೀಂಗೆ, ಅನುಶುಶ್ರುಮ – ಗುರುಶಿಷ್ಯ ಪರಂಪರೆಂದ ಕೇಳಿದ್ದೆಯೊ°.
ಅನ್ವಯಾರ್ಥ
ಏ ಜನಾರ್ದನ!, ಯಾವ ಕುಟುಂಬಲ್ಲಿ ಧಾರ್ಮಿಕ ಅಭ್ಯಾಸಂಗೊ ನಾಶ ಆಯ್ದೋ ಅಂಥ ಮನುಷ್ಯರಿಂಗೆ ಅನಿರ್ದಿಷ್ಟ ಅವಧಿ ನರಕವಾಸ ಪ್ರಾಪ್ತಿ ಆವ್ತು ಹೇಳಿ ನಾವು ಕೇಳಿದ್ದದು.
ತಾತ್ಪರ್ಯ / ವಿವರಣೆ
ಇಹಲ್ಲಿಯೂ ನರಕ, ಪರಲ್ಲಿಯೂ ನರಕ. ಹೀಂಗೆ ಜನ್ಮವೆಲ್ಲಾ ನರಕಲ್ಲಿ ಬಾಕಿ ಅಪ್ಪ ಪರಿಸ್ಥಿತಿ ಆವ್ತು.
ಶ್ಲೋಕ
ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಮ್ ।
ಯದ್ರಾಜ್ಯ ಸುಖಲೋಭೇನ ಹಂತುಂ ಸ್ವಜನಮುದ್ಯತಾಃ ॥೪೫॥
ಪದವಿಭಾಗ
ಅಹೋ ಬತ ಮಹತ್ ಪಾಪಮ್ ಕರ್ತುಮ್ ವ್ಯವಸಿತಾಃ ವಯಮ್ । ಯತ್ ರಾಜ್ಯ-ಸುಖ-ಲೋಭೇನ ಹಂತುಮ್ ಸ್ವಜನಮ್ ಉದ್ಯತಾಃ ॥
ಅನ್ವಯ
ಅಹೋ!, ಬತ!, ಮಹತ್ ಪಾಪಂ ಕರ್ತುಂ ವಯಂ ವ್ಯವಸಿತಾಃ ಯತ್ ರಾಜ್ಯ-ಸುಖ-ಲೋಭೇನ ಸ್ವಜನಂ ಹಂತುಮ್ ಉದ್ಯತಾಃ ।
ಪ್ರತಿಪದಾರ್ಥ
ಅಹೋ! – ಅಯ್ಯೋ!, ಬತ – ಎಷ್ಟು ವಿಚಿತ್ರ!, ಮಹತ್ ಪಾಪಮ್ – ಮಹತ್ತರವಾದ ಪಾಪವ, ಕರ್ತುಮ್ – ಮಾಡ್ಳೆ, ವಯಮ್ – ನಾವು, ವ್ಯವಸಿತಾಃ – ನಿರ್ಧರಿಸಿದ್ದು, ಯತ್ – ಎಂತಕೆ ಹೇದರೆ, ರಾಜ್ಯ-ಸುಖ-ಲೋಭೇನ – ರಾಜ್ಯದ ಸುಖದ ದುರಾಸೆಂದ, ಸ್ವಜನಮ್ – ಸ್ವಜನರುಗಳ, ಹಂತುಮ್ – ಕೊಲ್ಲುಲೆ, ಉದ್ಯತಾಃ –ಉದ್ಯುಕ್ತರಾದವು
ಅನ್ವಯಾರ್ಥ
ಅಯ್ಯೋ! ವಿಚಿತ್ರವೇ!, ರಾಜ್ಯಾಭಿಲಾಷೆಯ ಅತಿ ಆಸೆಂದಾಗಿ ನಾವು ನಮ್ಮ ಸ್ವಜನರ ಕೊಲ್ಲುಲೆ ಹೆರಟಿದನ್ನೇ!. ನಾವು ಕಠಿನತರದ ಪಾಪವ ಮಾಡ್ಳೆ ನಿಶ್ಚೈಸಿದಾಂಗೆ ಇದ್ದು.
ತಾತ್ಪರ್ಯ / ವಿವರಣೆ
ಒಂದು ಸಣ್ಣ ಬೀಜವಾಗಿ ಉದ್ಭವಿಸಿದ ಅರ್ಜುನನ ಮನದುಗುಡ ಆಳವಾಗಿ ವಿಶಾಲವಾಗಿಯೂ ವಿಚಾರ ಲಹರಿ ಹರುದು ಅರ್ಜುನನ ಮನಸ್ಥಿತಿ ಕುಸುದು, ‘ಅಯ್ಯೋ!, ಎಂತಾ ಮಹಾದುರಂತಕ್ಕೆ ನಾಂದಿಯಾಗಿ ಮಹಾಪಾಪಕಾರ್ಯಕ್ಕೆ ಕೈ ಹಾಕುತ್ತಾ ಇದ್ದೇ!’ ಹೇದು ಮನಸ್ಸಿಲ್ಲಿ ಭಯ, ಕಾತುರ, ಚಿಂತೆ ಆವರಿಸಿಗೊಂಡತ್ತು.
ಶ್ಲೋಕ
ಯದಿ ಮಾಮಪ್ರತೀಕಾರಂ ಅಶಸ್ತ್ರಂ ಶಸ್ತ್ರಪಾಣಯಃ ।
ಧಾರ್ತರಾಷ್ಟ್ರಾ ರಣೇ ಹನ್ಯುಃ ತನ್ಮೇ ಕ್ಷೇಮತರಂ ಭವೇತ್ ॥೪೬॥
ಪದವಿಭಾಗ
ಯದಿ ಮಾಮ್ ಅಪ್ರತೀಕಾರಮ್ ಅಶಸ್ತ್ರಮ್ ಶಸ್ತ್ರ-ಪಾಣಯಃ । ಧಾರ್ತರಾಷ್ಟ್ರಾಃ ರಣೇ ಹನ್ಯುಃ ತತ್ ಮೇ ಕ್ಷೇಮತರಮ್ ಭವೇತ್ ॥
ಅನ್ವಯ
ಯದಿ ಶಸ್ತ್ರ-ಪಾಣಯಃ ಧಾರ್ತರಾಷ್ಟ್ರಾಃ ಅಶಸ್ತ್ರಮ್ ಅಪ್ರತೀಕಾರಂ ಮಾಂ ರಣೇ ಹನ್ಯುಃ ತತ್ ಮೇ ಕ್ಷೇಮತರಂ ಭವೇತ್ ।
ಪ್ರತಿಪದಾರ್ಥ
ಯದಿ – ಒಂದುವೇಳೆ, ಶಸ್ತ್ರ-ಪಾಣಯಃ – ಶಸ್ತ್ರಧಾರಿಗಳಾದ, ಧಾರ್ತರಾಷ್ಟ್ರಾಃ – ಧೃತರಾಷ್ಟ್ರನ ಮಕ್ಕೊ, ಅಶಸ್ತ್ರಮ್ – ನಿಶಸ್ತ್ರನಾದ, ಅಪ್ರತೀಕಾರಮ್ – ಪ್ರತೀಕಾರ ಮಾಡದ, ಮಾಮ್ – ಎನ್ನ, ರಣೇ – ಯುದ್ಧಭೂಮಿಲಿ, ಹನ್ಯುಃ – ಕೊಲ್ಲಲಿ, ತತ್ – ಅದು, ಮೇ – ಎನಗೆ, ಕ್ಷೇಮತರಮ್ – ಕ್ಷೇಮಕರವೇ, ಭವೇತ್ – ಆಗಲಿ]
ಅನ್ವಯಾರ್ಥ
ಒಂದುವೇಳೆ ಶಸ್ತ್ರಾಸ್ತ್ರಂಗಳ ಹೊಂದಿಪ್ಪ ಕೌರವಂಗೊ ಎನ್ನ ಕೊಂದರೂ ಎನಗೆ ಅದುವೇ ಹೆಚ್ಚು ಕ್ಷೇಮಕರವಾಗಿದ್ದು.
ತಾತ್ಪರ್ಯ / ವಿವರಣೆ
“ಯುದ್ಧಪರಿಣಾಮ ಇಂತಹ ಭೀಕರ ಭಯಾನಕ ಆಗಿಪ್ಪದ್ದರಿಂದಲಾಗಿ ಆನು ಆ ಕೌರವಾದಿಗಳ ಎದುರು ನಿಂದು ಪ್ರತೀಕಾರ ಮಾಡ್ತೇ ಇಲ್ಲೆ. ಅವ್ವು ಎನ್ನ ಬಡಿವಲೆ ಬಂದರೂ ಆನು ಅವರ ಬಡಿವಲೆ ಹೆರಡೆ. ಅವ್ವು ಕತ್ತಿಲಿ ಎನ್ನ ಕೊಚ್ಚಿ ಕೊಂದರೂ ಅದು ಎನ್ನ ಭಾಗ್ಯ ಹೇಳಿ ತಿಳಿತ್ತೆ. ಎನಗೆ ಯುದ್ಧ ಬೇಡ”- ಹೇದು ಅರ್ಜುನನ ಹೇಳಿಕೆ.
ಯುದ್ಧ ಪ್ರಾರಂಭಲ್ಲಿ ‘ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇsಚ್ಯುತ’ ಹೇಳಿ ದರ್ಪಂದ ಹೇಳಿದ ಅರ್ಜುನ° ಕ್ಷಣ ಮಾತ್ರಲ್ಲಿ ಕರಗಿ ಹೋದ°. ಅತನ ಸುಪ್ತಪ್ರಜ್ಞೆಲ್ಲಿ ಅವಂಗೆ ಅರಿವಿಲ್ಲದ್ದಯೇ ಇತ್ತಿದ್ದ ಮನಸ್ಸಿನ ಭಾವನೆ ಇದು. ಮಾನಸಿಕ ಸಂಘರ್ಷಕ್ಕೆ ಒಳಗಾದ ಅರ್ಜುನನ ಸ್ಥಿತಿ ಇದು. ಅರ್ಜುನನ ಮನೋಸ್ಥಿತಿಯ ಹೆರತೋರ್ಸಲೆ ಬೇಕಾಗಿಯೇ ಶ್ರೀಕೃಷ್ಣ° ರಥವ ಆ ರೀತಿ ನಿಲ್ಲುಸಿದ್ದು. ಇಲ್ಲದ್ರೆ ಈ ಎಲ್ಲಾ ವಿಚಾರಂಗೊ ಅವನ ಮನಸ್ಸಿಂದ ಹೆರ ಬತ್ತಿತ್ತಿಲ್ಲೆ. ಭಗವಂತ° ಶ್ರೀಕೃಷ್ಣ° ಅರ್ಜುನಂಗೆ ಮಾಡಿದ ಮನಃಶಾಸ್ತ್ರೀಯ ಚಿಕಿತ್ಸೆ ಭಗವದ್ಗೀತೆ. ಶ್ರೀಕೃಷ್ಣನ ಈ ಮಾನಸಿಕ ಚಿಕಿತ್ಸೆ, ತತ್ವಶಾಸ್ತ್ರದೊಟ್ಟಿಂಗೆ ಮನಃಶಾಸ್ತ್ರವ ತಿಳುದು ವಿಶ್ಲೇಸಿಯಪ್ಪಗ ಧರ್ಮ ರಹಸ್ಯ ನವಗೆ ಅರಿವಾವ್ತು ಹೇದು ಬನ್ನಂಜೆ ವ್ಯಾಖ್ಯಾನಿಸುತ್ತವು.
ಶ್ಲೋಕ
ಸಂಜಯ ಉವಾಚ –
ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ ।
ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ॥೪೭॥
ಪದವಿಭಾಗ
ಸಂಜಯಃ ಉವಾಚ – ಏವಮ್ ಉಕ್ತ್ವಾ ಅರ್ಜುನಃ ಸಂಖ್ಯೇ ರಥ-ಉಪಸ್ಥೇ ಉಪಾವಿಶತ್ । ವಿಸೃಜ್ಯ ಸಶರಮ್ ಚಾಪಮ್ ಶೋಕ ಸಂವಿಗ್ನ ಮಾನಸಃ ॥
ಅನ್ವಯ
ಸಂಜಯಃ ಉವಾಚ – ಸಂಖ್ಯೇ ಏವಮ್ ಉಕ್ತ್ವಾ, ಶೋಕ-ಸಂವಿಗ್ನ-ಮಾನಸಃ ಅರ್ಜುನಃ ಸಶರಂ ಚಾಪಂ ವಿಸೃಜ್ಯ, ರಥ-ಉಪಸ್ಥೇ ಉಪಾವಿಶತ್ ।
ಪ್ರತಿಪದಾರ್ಥ
ಸಂಜಯಃ ಉವಾಚ – ಸಂಜಯ° ಹೇಳಿದ°, ಸಂಖ್ಯೇ – ರಣರಂಗಲ್ಲಿ, ಏವಮ್ – ಹೀಂಗೆ, ಉಕ್ತ್ವಾ – ಹೇಳಿಕ್ಕಿ, ಶೋಕ-ಸಂವಿಗ್ನ-ಮಾನಸಃ – ದುಃಖಂದ ಸಂಕಟಕ್ಕೊಳಗಾದ ಮನಸ್ಸಿಪ್ಪವನಾಗಿ, ಅರ್ಜುನಃ – ಅರ್ಜುನ°, ಸಶರಮ್ ಚಾಪಮ್ – ಬಾಣಸಹಿತವಾದ ಬಿಲ್ಲಿನ, ವಿಸೃಜ್ಯ – ಪಕ್ಕಲ್ಲಿ ಇರಿಸಿ (ಬಿಟ್ಟಿಕ್ಕಿ), ರಥ-ಉಪಸ್ಥೇ – ರಥದ ಪೀಠಲ್ಲಿ, ಉಪಾವಿಶತ್ – ಕೂದುಗೊಂಡ°.
ಅನ್ವಯಾರ್ಥ
ಸಂಜಯ° ಹೇಳುತ್ತ° – ಯುದ್ಧರಂಗಲ್ಲಿ ಹೀಂಗೆ ಹೇಳಿದ ಅರ್ಜುನ° ದುಃಖಪೀಡಿತನಾಗಿ ಶೋಕತಪ್ತ ಮನಸ್ಸಿಂದ ಬಿಲ್ಲುಬಾಣವ ಕೈಚೆಲ್ಲಿ ಬಿಸುಟು ರಥಲ್ಲಿ ರಥಿಕನ ಪೀಠಲ್ಲಿ ಕೂದುಗೊಂಡ°.
ತಾತ್ಪರ್ಯ / ವಿವರಣೆ
ರಥಲ್ಲಿ ಇಷ್ಟು ಹೊತ್ತು ನಿಂದುಗೊಂಡು ಮಾತಾಡಿದ ಅರ್ಜುನ° ರಥದ ಮಧ್ಯಲ್ಲಿ ಕುಸುದು ತನ್ನ ಕೈಲಿದ್ದ ಶಸ್ತ್ರಾಸ್ತ್ರವ ಕರೇಂಗೆ ಮಡುಗಿ (ಕೈಚೆಲ್ಲಿ) ಕೂದುಬಿಟ್ಟ°. ಅರ್ಜುನ° ತನ್ನೆಲ್ಲ ಭಾವನೆಗಳ ಕೃಷ್ಣನ ಮುಂದೆ ಬಿಚ್ಚಿ ಮಡಿಗಿದ°. ಅರ್ಜುನ° ಹೇದ ಎಲ್ಲಾ ವಿಷಯಂಗೊ ನವಗೂ ಅಪ್ಪು ಸರಿ ಹೇಳಿ ತೋರುತ್ತು. ನಮ್ಮ ಮನಸ್ಸಿಲ್ಲಿ ಯೂ ಈ ವಿಷಯಲ್ಲಿ ಅಜ್ಞಾನ ಎಂಬ ಕತ್ತೆಲಿ ಹುದುಗಿದ್ದು. ಈ ಕತ್ತಲೆಂದ ಬೆಳಕಿನತ್ರಂಗೆ ಕೊಂಡೊಪಲೆ ಭಗವಂತ° ಯಾವ ‘ಜ್ಞಾನ’ ಹೇಳ್ವ ತಿಳುವಳಿಕೆ ಬೆಣಚ್ಚ ನೀಡುತ್ತ° ಹೇಳ್ವದು ಮುಂದಾಣ ಅಧ್ಯಾಯಂಗಳಲ್ಲಿ ನೋಡುವೋ°.
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಅರ್ಜುನವಿಷಾದಯೋಗೋನಾಮ ಪ್ರಥಮೋsಧ್ಯಾಯಃ ॥
ಓಂ ತತ್ ಸತ್ ಇತಿ ಶ್ರೀಮತ್-ಭಗವತ್-ಗೀತಾಸು ಉಪನಿಷತ್ಸು ಬ್ರಹ್ಮ-ವಿದ್ಯಾಯಾಮ್ ಯೋಗ-ಶಾಸ್ತ್ರೇ ಶ್ರೀಕೃಷ್ಣ-ಅರ್ಜುನ-ಸಂವಾದೇ ಅರ್ಜುನ-ವಿಷಾದ-ಯೋಗಃ ನಾಮ ಪ್ರಥಮಃ ಅಧ್ಯಾಯಃ ॥
ಇಲ್ಲಿಗೆ ಉಪನಿಷತ್ತೂ ಬ್ರಹ್ಮವಿದ್ಯೆಯೂ ಮತ್ತು ಯೋಗಶಾಸ್ತ್ರವೂ ಶ್ರೀಕೃಷ್ಣ-ಅರ್ಜುನರೊಳಾಣ ಸಂವಾದವೂ ಆದ ಶ್ರೀಮದ್ಭಗವದ್ಗೀತೇಲಿ ಅರ್ಜುನವಿಷಾದಯೋಗ ಹೇಳ್ವ ಪ್ರಥಮ ಅಧ್ಯಾಯ ಮುಗುದತ್ತು.
ಈ ‘ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ..’ ಹೀಂಗೆ…ಹೇದರೆಎಂತರ ಹೇದು ಸುರುವಿಂಗೆ ಎನ ಅರ್ಥ ಆಯ್ದಿಲ್ಲೆ. ಎಲ್ಲಿಗೆ ಅರ್ಥ ಅಪ್ಪದು!, ಅದರ ಹಿಂದೆ ಮುಂದಾಣದ್ದು ಗೊಂತಿಲ್ಲದ್ರೆ ಅಲ್ಲದೋ!!. ಇದರ ನಮ್ಮ ಬೈಲಿನ ಪೊಕ್ಕಿಷ ಎದುರ್ಕಳ ಈಶ್ವರ ಮಾವನತ್ರೆ ಕೇಟತ್ತು. ಅವು ಎನಗೆ ವಿವರ್ಸಿ ತಿಳಿಶಿದ್ದರ ಇಲ್ಲಿ ಬರವದೀಗ –
ಓಂ ತತ್ ಸತ್ ಇತಿ ಶ್ರೀಮದ್ಭಗವದ್ಗೀತಾಸು, ಉಪನಿಷತ್ಸು, ಬ್ರಹ್ಮವಿದ್ಯಾಯಾಮ್, ಯೋಗಶಾಸ್ತ್ರೇ, ಶ್ರೀ ಕೃಷ್ಣಾರ್ಜುನಸಂವಾದೇ ಅರ್ಜುನವಿಷಾದಯೋಗೋನಾಮ ಪ್ರಥಮೋsಧ್ಯಾಯಃ | — ಶಬ್ಧಾರ್ಥ — ಓಂ ತತ್ ಸತ್ ( ಈ ಮೂರೂ ಪದಂಗೊ “ಪರಬ್ರಹ್ಮ” ವ ನಿರ್ದೇಶಿಸುತ್ತು – ಓಂ ತತ್ ಸತ್ಸದಿತಿ ನಿರ್ದೇಶೋ ಬ್ರಹ್ಮಣಃ ತ್ರಿವಿಧಸ್ಮ್ರುತಃ ಭ. ಗೀ – 17 -23 )| — ಇತಿ (ಹೀಂಗೆ, ಈ ರೀತಿ) ಶ್ರೀಮದ್ಭಗವದ್ಗೀತಾಸು = ಶ್ರೀಮದ್ಭಗವದ್ಗೀತೆಯಲ್ಲಿ| — ಉಪನಿಷತ್ಸು = ಉಪನಿಷತ್ ಗಳಲ್ಲಿ–| ಬ್ರಹ್ಮ ವಿದ್ಯಾಯಾಮ್ = ಬ್ರಹ್ಮ ವಿದ್ಯೆಲಿ| ಯೋಗ ಶಾಸ್ತ್ರೇ = ಯೋಗ ಶಾಸ್ತ್ರಲ್ಲಿ | ಶ್ರೀ ಕೃಷ್ಣಾರ್ಜುನ ಸಂವಾದೇ = ಶ್ರೀ ಕೃಷ್ಣಾರ್ಜುನ ಸಂವಾದಲ್ಲಿ | ಅರ್ಜುನವಿಷಾದಯೋಗೋನಾಮ = ಅರ್ಜುನವಿಷಾದಯೋಗ ಎಂಬ ಹೆಸರಿನ | ಪ್ರಥಮೋ ಅಧ್ಯಾಯಃ = ಪ್ರಥಮ ಅಧ್ಯಾಯವು (ಮುಗಿದುದು)||
ವಿವರಣೆ — ಶ್ರೀ ಕೃಷ್ಣಾರ್ಜುನ ಸಂವಾದ — ಯಾವ ವಿಷಯಲ್ಲಾತು ? ಉತ್ತರ — ೧. ಓಂ ತತ್ ಸತ್ ಎಂಬ – ಬ್ರಹ್ಮ ತತ್ವ ವಿಷಯವನ್ನು ತಿಳಿಸುವ ೨. ಭಗವದ್ಗೀತೆಯಲ್ಲಿ ೩. ಉಪನಿಷತ್ತುಗಳ ವಿಷಯಲ್ಲಿ. ಭಗವದ್ಗೀತೆಯೇ ಸಮಸ್ತ ಉಪನಿಷತ್ತುಂಗಳ ಸಾರ ಸರ್ವಸ್ವ (ಸರ್ವೊಪನಿಶದೋ ಗಾವೋ ದೋಗ್ಧಾ ಗೋಪಾಲ ನಂದನಃ = ಸಮಸ್ತ ಉಪನಿಷತ್ತುಗೊ ಗೋವುಗಳಾದರೆ, ಗೋಪಾಲ ನಂದನ° (ಶ್ರೀ ಕೃಷ್ಣ) ಅವುಗಳ ಸಾರವಾದ ಹಾಲ ಕರದು ಬಕುತರಿಂಗೆ ಉಣಬಡಿಸಿದವ° ) ಆದುದರಿಂದ “ಉಪನಿಷತ್ಸು” | ೪. ಬ್ರಹ್ಮ-ವಿದ್ಯಾಯಾಮ್ = ಬ್ರಹ್ಮ ವಿದ್ಯೆಲಿ — ಯಾವುದಿದು “ಬ್ರಹ್ಮ ವಿದ್ಯೆ” ?., ಈಗ ಮುಂಡಕ ಉಪನಿಷತ್ತು — ದ್ವೇ ವಿದ್ಯೇ ವೇದಿತವ್ಯೇ ——— ಯದ್ಭ್ರಹ್ಮ ವಿದೋ ವದಂತಿ “ಪರಾ ಚೈವಾಪರಾ” || ಮುಂಡಕ ೧-೧-೪|| = ಎರಡು ವಿದ್ಯೆಗಳ ತಿಳಿದುಕೊಳ್ಳ ತಕ್ಕದ್ದು — ಅವ್ವು ಯಾವ್ಯಾವು ? ಪರಾ ಚ ಏವ ಅಪರಾ = ೧. ಪರಾ ಮತ್ತು ೨. ಅಪರಾ | ಇದರಲ್ಲಿ ೧. ಪರಾ = ನಾಲ್ಕು ವೇದಂಗೊ (ಋಕ್, ಯಜುಸ್, ಸಾಮ, ಅಥರ್ವ) ೨. ಅಪರಾ = ಆರು ವೇದಾಂಗಂಗೊ ( ಶಿಕ್ಷಾ, ಕಲ್ಪೋ, ವ್ಯಾಕರಣಮ್, ನಿರುಕ್ತಮ್, ಛಂಧಃ, ಜ್ಯೋತಿಷಮ್) | ಈಗ ಪರಾ ವಿದ್ಯೆಯ = ನಾಲ್ಕು ವೇದಗಳ ಪೂರ್ಣ ಸಾರಾಮೃತವೇ ಉಪನಿಷತ್ತು . ಇನ್ನೊಂದೊಡೆಲಿ ” ಸ ಬ್ರಹ್ಮ ವಿದ್ಯಾಂ ಸರ್ವ ವಿದ್ಯಾಂ ಪ್ರತಿಷ್ಟಾಂ” (ಮುಂಡಕ – ೧-೧-೧ ) = ಆ “ಬ್ರಹ್ಮ ವಿದ್ಯೆ” ಸಕಲ ವಿದ್ಯೆಗೊಕ್ಕೂ ಆಶ್ರಯವಾಗಿಪ್ಪದು, — ಹಾಂಗಾಗಿ, “ಬ್ರಹ್ಮ ವಿದ್ಯಾಯಾಮ್” || ಇನ್ನು ಯೋಗಶಾಸ್ತ್ರೇ = ಇದು, ಈ ಶ್ರೀಮದ್ಭಗವದ್ಗೀತೆ ಯೋಗಶಾಸ್ತ್ರ ಗಳೆಲ್ಲವಕ್ಕು ಮೂಲಾಶ್ರಯ — ಇದರಲ್ಲಿ ಮುಖ್ಯವಾಗಿ ೧. ಭಕ್ತಿ ಯೋಗ ೨. ಧ್ಯಾನ ಯೋಗ ೩. ರಾಜ ಯೋಗ ೪. ಜ್ಞಾನ ಯೋಗ ೫. ಕರ್ಮಯೋಗ (ಇದು ಅತ್ಯಂತ ಉತ್ಕ್ರಷ್ಟವೂ, ವ್ಯವಹಾರಂಗಳಲ್ಲಿ ಬಳಸಿಕೊಂಬಲೆ ಸುಲಭವೂ ಆದ ಯೋಗದ ಒಂದು ವಿಧವಾಗಿದ್ದು. ಹಾಂಗಾಗಿ ಇದು “ಯೋಗ-ಶಾಸ್ತ್ರೇ ||
|| ಗೀತಾಚಾರ್ಯ ಶ್ರೀಕೃಷ್ಣಭಗವಾನ್ ಕೀ…. ಜೈ || ಗೀತಾಮಾತಾ ಕೀ …. ಜೈ || ಗೋಪಾಲಕೃಷ್ಣಭಗವಾನ್ ಕೀ .. ಜೈ ||
॥ ಶ್ರೀಕೃಷ್ಣಾರ್ಪಣ ಮಸ್ತು ॥
ಭಗವದ್ಗೀತಾ ಶ್ಲೋಕ ಶ್ರವಣಕ್ಕೆ:
[audio:audio/Bhagavadgeete/CHAPTER-01-SHLOKA-34-47.mp3]ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
….. ಮುಂದುವರಿತ್ತು.
ಚೆ೦ದದ ವಿವರಣೆ.ಓದುತ್ತಾ ಹೋದಾ೦ಗೇ ಸುಮಾರು ಸ೦ಶಯ೦ಗೊ ಹುಟ್ತುತ್ತು,ನಿವಾರಣೆಯೂ ಆವುತ್ತಾ ಇದ್ದು.
ಆತತಾಯಿ ನ್ಯಾಯದ ವಿವರಣೆ ಚೆ೦ದ ಆಯಿದು.ಜಾತಿ ಕುಲ ಧರ್ಮ೦ಗಳ ವಿಷಯಲ್ಲಿ ಬನ್ನ೦ಜೆಯವರ ವಿಮರ್ಶೆಯೂ,ಎದುರ್ಕಳ ಮಾವನ ವಿವರಣೆಯೂ ಸೇರಿ ಮತ್ತೆ ಮತ್ತೆ ಓದುವ ಹಾ೦ಗಾತು.
“ಗೀತೆ” ತನು ಮನಕ್ಕೆ ಇನ್ನೂ ಹತ್ತರೆ ಆವುತ್ತ ಇದ್ದು ಹೇಳೊದು ಸತ್ಯ..
ಧನ್ಯವಾದ೦ಗೊ
ಉತ್ತಮ ವಿವರಣೆ. ಬನ್ನಂಜೆಯ ವಿಶ್ಲೇಷಣೆಯುದೆ ಜತೆ ಸೇರಿದ್ದದು ವಿಶೇಷ. ಜಾತಿ ಧರ್ಮ, ಸಮಾಜ ಧರ್ಮದ ನಿರೂಪಣೆ ಸರಿಯಾಗಿದ್ದು . ಗೀತಾ ಸರಣಿ ಲಾಯಕ್ ಬತ್ತಾ ಇದ್ದು ಚೆನ್ನೈಭಾವಯ್ಯ.
ಜಾತಿ ಧರ್ಮ,ಸಮಾಜ ಧರ್ಮ, ಸನಾತನ ಧರ್ಮ ಒಳ್ಳೆ ವಿಶ್ಲೇಷಣೆ.
ಹಾಂಗೇ ತಿಥಿಲಿ ಪಿಂಡ ಪ್ರದಾನ ಬಗ್ಗೆ ಕೂಡಾ.
ಕೃಷ್ಣನ ಬೇರೆ ಬೇರೆ ಹೆಸರಿನ ಒಳಾರ್ಥ…ಓಹ್…ಅದ್ಭುತ ವಿವರಣೆ
ಅರ್ಜುನನ ಮನೋಸ್ಥಿತಿ ಲಾಯಿಕಲಿ ವಿವರಣೆ. ಎಲ್ಲಾ ಕಾಲಲ್ಲಿಯೂ ಎಲ್ಲರಿಂಗೂ ಅಪ್ಪ ಅನುಭವವೇ.
ಮನಸ್ಸಿಲ್ಲಿ ಬಪ್ಪ ದ್ವಂದ್ವಂಗಳ ನಿವಾರುಸಲೆ ಭಗವದ್ಗೀತೆ ತುಂಬಾ ಸಹಕಾರಿ ಅಕ್ಕು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ
ಚೆಂದಕೆ ವಿವರುಸಿದ್ದಿ ಭಾವಾ..
ಧನ್ಯವಾದ..
ಸನಾತನ ಧರ್ಮ, ಜಾತಿ ಧರ್ಮ, ಸಮಾಜ ಧರ್ಮ ದ ಬಗ್ಗೆ ವಿಶ್ಲೇಷಣೆ ಅತ್ಯದ್ಭುತ… ಪಿಂಡದ ಬಗ್ಗೆ ವಿವರಣೆ, ಈಶ್ವರ ಮಾವನತ್ರೆ ಕೇಳಿ ಬರದ ವಿವರಣೆಗೋ ಎಲ್ಲ ಒಂದಕ್ಕಿಂತ ಒಂದು ಅದ್ಭುತ… ನಮೋ ನಮ: ಹೇಳಿತ್ತು…
“ಕುಲಕ್ಷಯ ಆದಪ್ಪಗ ಸಮಾಜ ಧರ್ಮವ ನಡೆಸೆಕ್ಕಾದ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋವ್ತು. ನ್ಯಾಯಾಂಗ ವ್ಯವಸ್ಥೆ ನಾಶ ಅಪ್ಪಗ ಸಮಾಜ ಧರ್ಮ ನಾಶ ಆವ್ತು. ಸಮಾಜ ಧರ್ಮ ನಾಶ ಅಪ್ಪಗ ಸಾಮಾಜಿಕ ವ್ಯವಸ್ಥೆ ಅಸ್ತವ್ಯಸ್ತ ಆಗಿ ಸಮಾಜ ಅಧರ್ಮಲ್ಲಿ ಮುಳುಗುತ್ತು.”. ಇಂದು ಸಮಾಜ ಇದೇ ಪರಿಸ್ಥಿತಿಲಿ ಇದ್ದ ಹಾಂಗೆ ಕಾಣುತ್ತು… ಧರ್ಮ ಸಂಸ್ಥಾಪನೆಗೋಸ್ಕರ ನಡವ ಯುದ್ದಲ್ಲಿ ನಾವೆಲ್ಲ ಅರ್ಜುನನ ಹಾಂಗೆ ಮೋಹವ ಬಿಟ್ಟು ಭಾಗವಹಿಸೆಕ್ಕಾವುತ್ತೋ ಏನೋ…
{ಭಗವಂತ ಶ್ರೀಕೃಷ್ಣ ಅರ್ಜುನಂಗೆ ಮಾಡಿದ ಮನಃಶಾಸ್ತ್ರೀಯ ಚಿಕಿತ್ಸೆ ಭಗವದ್ಗೀತೆ.}
ಈ ಚಿಕಿತ್ಸೆ ಎಲ್ಲಾ ಕಾಲಲ್ಲಿಯೂ ಅಗತ್ಯವಾಗಿ ಬೇಕು.
ಮುಂದುವರಿಯಲಿ, ನಿಂಗಳ ಗೀತ ಜ್ಞಾನ ಯಜ್ಞ.
ಲಾಯಿಕಾಯಿದು ಭಾವ.
ಅರ್ಜುನ ತನ್ನ ವಾದವ ತರ್ಕಬದ್ಧವಾಗಿ ಮಂಡಿಸಿದ್ದ.ಆರೇ ಆಗಲಿ ತಲೆದೂಗಲೇ ಬೇಕಾದ ವಾದಸರಣಿ.ಕೃಷ್ಣ ಅದರ ಖಂಡಿಸುವ ರೀತಿ ಓದುದೇ ಒಂದು ಸೊಗಸು.ಕಾದು ನೋಡುತ್ತೆಯೊ.