- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಉಭಯ ಸೇನೆಲಿಪ್ಪ ತನ್ನ ಬಂಧುಗಳ ನೋಡಿ ಯುದ್ಧಪರಿಣಾಮದ ಕಲ್ಪನೆ ಮನಸ್ಸಿಲ್ಲಿ ತಂದುಗೊಂಡು ಭೀತಿಗೊಂಡು, “ಆನು ಯುದ್ಧ ಮಾಡುತ್ತಿಲ್ಲೆ” ಹೇದು ಕೈಲಿದ್ದ ಶರ ಚಾಪವ ಕೈಚೆಲ್ಲಿ ರಥಲ್ಲಿ ಕುಸುದು ಕೂದ ಅರ್ಜುನಂಗೆ ಶ್ರೀಕೃಷ್ಣನ ಉಪದೇಶಂಗೊ ಎರಡನೇ ಅಧ್ಯಾಯಂದ ಪ್ರಾರಂಭ ಆವ್ತು.
ಓಂ ಶ್ರೀಕೃಷ್ಣಪರಮಾತ್ಮನೇ ನಮಃ ||
ಶ್ರೀಮದ್ಭಗವದ್ಗೀತಾ ||
ಅಥ ದ್ವಿತೀಯೋsಧ್ಯಾಯಃ – ಸಾಂಖ್ಯಯೋಗಃ ||
ಶ್ಲೋಕ
ಸಂಜಯ ಉವಾಚ –
ತಂ ತಥಾ ಕೃಪಯಾsವಿಷ್ಟಮ್ ಅಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮ್ ಉವಾಚ ಮಧುಸೂದನಃ ॥೦೧॥
ಪದವಿಭಾಗ
ಸಂಜಯಃ ಉವಾಚ – ತಮ್ ತಥಾ ಕೃಪಯಾ ಆವಿಷ್ಟಮ್ ಅಶ್ರು-ಪೂರ್ಣ-ಆಕುಲ-ಈಕ್ಷಣಮ್ । ವಿಷೀದಂತಮ್ ಇದಮ್ ವಾಕ್ಯಮ್ ಉವಾಚ ಮಧುಸೂದನಃ ॥
ಅನ್ವಯ
ಸಂಜಯಃ ಉವಾಚ – ತಥಾ ಕೃಪಯಾ ಆವಿಷ್ಟಮ್ ಅಶ್ರು-ಪೂರ್ಣ-ಆಕುಲ-ಈಕ್ಷಣಂ ವಿಷೀದಂತಂ ತಂ ಮಧುಸೂದನಃ ಇದಂ ವಾಕ್ಯಮ್ ಉವಾಚ ।
ಪ್ರತಿಪದಾರ್ಥ
ಸಂಜಯಃ ಉವಾಚ – ಸಂಜಯ° ಹೇಳಿದ°, ತಥಾ – ಹೀಂಗೆ, ಕೃಪಯಾ – ಕೃಪೆಂದ, ಆವಿಷ್ಟಮ್ – ಆವರಿಸಿದ, ಅಶ್ರು-ಪೂರ್ಣ-ಆಕುಲ-ಈಕ್ಷಣಮ್ = ಕಣ್ಣೀರು ತುಂಬಿದ (ಆಕುಲ – ತುಂಬಿದ) ಕಣ್ಣುಗಳಿಪ್ಪ, ವಿಷೀದಂತಮ್ – ವಿಷಾದಿಸಿಗೊಂಡಿತ್ತಿದ್ದ, ತಮ್ – (ಅವಂಗೆ (ಅರ್ಜುನಂಗೆ), ಮಧುಸೂದನಃ – ಮಧುವ ಕೊಂದವ° (ಕೃಷ್ಣ), ಇದಮ್ ವಾಕ್ಯಮ್ – ಈ ವಾಕ್ಯವ, ಉವಾಚ – ಹೇಳಿದ°.
ಅನ್ವಯಾರ್ಥ
ಧೃತರಾಷ್ಟ್ರಂಗೆ ಸಂಜಯ ಹೇಳುತ್ತ° – ಈ ರೀತಿ ಚಿಂತೆಯಿಂದ ಒಡಗೂಡಿ, ಕಣ್ಣೀರು ತುಂಬಿ ವಿಷಾದಿಸಿಗೊಂಡಿತ್ತಿದ್ದ ಅರ್ಜುನನ ನೋಡಿ ಕೃಪೆಂದ ಮಧುಸೂದನ (ಕೃಷ್ಣ°) ಈ ರೀತಿ ಹೇಳಿದ°-
ತಾತ್ಪರ್ಯ / ವಿವರಣೆ
ಯುದ್ಧದ ಪರಿಣಾಮದ ಬಗ್ಗೆ ಯೋಚಿಸಿದ ಅರ್ಜುನಂಗೆ ಇಡೀ ಸಮಾಜದ, ಜನಾಂಗದ ಮೇಲೆ ಅನುಕಂಪ, ಚಿಂತೆ. ಯುದ್ಧ ಮಾಡುವದರಿಂದಲಾಗಿ ಮುಂದೆ ಜನಾಂಗ ಹತ್ಯೆ / ನಾಶಕ್ಕೆ ಕಾರಣ ಆವ್ತು. ಆ ದೋಷ ತನ್ನ ಮತ್ತು ತನ್ನವರ ಬಾಧಿಸುತ್ತು ಹೇಳ್ವ ಅಜ್ಞಾನದ ಮಂಜು ಅವನ ಆವರುಸುತ್ತು. ಮನಸ್ಸು ವಿಕ್ಷಿಪ್ತಗೊಳ್ಳುತ್ತು. ತರ್ಕದ ಮೂಲಕ ತನ್ನ ನಿಲುವ ಸಮರ್ಥಿಸುಲೆ ನೋಡ್ತ°. ಲೌಕಿಕ ಅನುಕಂಪ ದುಃಖ ಕಂಬನಿ ಇವೆಲ್ಲ ಆತ್ಮದ ಬಗ್ಗೆ ಅಜ್ಞಾನದ ಲಕ್ಷಣಂಗೊಡ. ಇಲ್ಲಿ ಕೃಷ್ಣನ ಮಧುಸೂದನ° ಹೇದು ದೆನಿಗೋಳ್ತ°.
ಶ್ರೀಕೃಷ್ಣ° ಮಧು ಎಂಬ ರಾಕ್ಷಸನ ಕೊಂದವ°, ಅಪರಾಧಿಗಳ (ದುಷ್ಟರ) ಮಧು ಅರ್ಥಾತ್ ಸುಖವ ಮರ್ದಿಸಿದವ°. ಇಲ್ಲಿ ಈಗ ಅರ್ಜುನಂಗೆ ಆವರಿಸಿದ ಅಜ್ಞಾನ ಭಯವ ಕೊಲ್ಲೆಕು ಹೇಳಿ ಅರ್ಜುನನ ಧ್ವನಿಲಿ ‘ಮಧುಸೂದನ’ ಹೇಳಿ ಸಾಂಕೇತಿಕ ಹೇದು ಬನ್ನಂಜೆಯವರ ವ್ಯಾಖ್ಯಾನಂದ ಹೆರ್ಕಿದ್ದದು.
ಶ್ಲೋಕ
ಶ್ರೀಭಗವಾನುವಾಚ –
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮ್ ಅಕೀರ್ತಿಕರಮರ್ಜುನ ॥೦೨॥
ಪದವಿಭಾಗ
ಶ್ರೀ ಭಗವಾನ್ ಉವಾಚ – ಕುತಃ ತ್ವಾ ಕಶ್ಮಲಮ್ ಇದಮ್ ವಿಷಮೇ ಸಮುಪಸ್ಥಿತಮ್ । ಅನಾರ್ಯ-ಜುಷ್ಟಮ್ ಅಸ್ವರ್ಗ್ಯಮ್ ಅಕೀರ್ತಿಕರಮ್ ಅರ್ಜುನ॥
ಅನ್ವಯ
ಶ್ರೀ ಭಗವಾನ್ ಉವಾಚ – ಹೇ ಅರ್ಜುನ!, ಅನಾರ್ಯ-ಜುಷ್ಟಮ್ ಅಸ್ವರ್ಗ್ಯಮ್ ಅಕೀರ್ತಿಕರಮ್ ಇದಂ ಕಶ್ಮಲಂ ವಿಷಮೇ ತ್ವಾ ಕುತಃ ಸಮುಪಸ್ಥಿತಮ್ ?
ಪ್ರತಿಪದಾರ್ಥ
ಶ್ರೀ ಭಗವಾನ್ ಉವಾಚ – ಭಗವಂತ° ಹೇಳಿದ°, ಹೇ ಅರ್ಜುನ! – ಏ ಅರ್ಜುನ!, ಅನಾರ್ಯ-ಜುಷ್ಟಮ್ – ಜೀವನದ ಮೌಲ್ಯಂಗಳ ತಿಳಿಯದ್ದ/ಆಚರುಸದ್ದ (ಅನಾರ್ಯವಾದ), ಅಸ್ವರ್ಗ್ಯಮ್ – ಸ್ವರ್ಗಕ್ಕೆ ಮಾರ್ಗ ತೋರದ, ಅಕೀರ್ತಿಕರಮ್ – ಅಪಕೀರ್ತಿಯ ಉಂಟುಮಾಡುವ, ಇದಮ್ ಕಶ್ಮಲಮ್ – ಈ ಕಶ್ಮಲ (ಕೊಳೆ), ವಿಷಮೇ – ಕಷ್ಟಕಾಲಲ್ಲಿ, ತ್ವಾ – ನಿನಗೆ, ಕುತಃ – ಎಲ್ಲಿಂದ, ಸಮುಪಸ್ಥಿತಮ್ – ಬಂತು.
ಅನ್ವಯಾರ್ಥ
ಶ್ರೀ ಭಗವಂತ° ಹೇಳಿದ°- ಹೇ ಅರ್ಜುನ!, ಆರ್ಯರಿಂಗೆ ಯೋಗ್ಯವಲ್ಲದ (ಅನಾರ್ಯವಾದ), ನರಕದಾಯಕವಾದ (ಸ್ವರ್ಗಕ್ಕೆ ಮಾರ್ಗತೋರದ), ಅಪಕೀರ್ತಿಕರವಾದ (ಶ್ರೇಯಸ್ಕರವಲ್ಲದ), ಕಶ್ಮಲವಾದ ಯೋಚನೆ ಈ ಸಂಕಟಕಾಲಲ್ಲಿ ನಿನಗೆ ಎಲ್ಲಿಂದ ಬಂತು?!
ತಾತ್ಪರ್ಯ / ವಿವರಣೆ
ಇಂತಹ ವಿಷಮ ಪರಿಸ್ಥಿತಿಲಿ ಈ ರೀತಿಯ ಭೌತಿಕ ಕೊಳೆ ಎಲ್ಲಿಂದ ಬಂತು. ಆರ್ಯರು (ತಿಳುದವು, ನಾಗರಿಕರು, ಜ್ಞಾನಿಗೊ, ಗೌರವಾನ್ವಿತರುಗೊ) ಈ ರೀತಿ ಯೋಚನೆ ಮಾಡವು. ಇಂತಹ ವಿಚಾರಧಾರೆ ಪರಲ್ಲಿ ಸ್ವರ್ಗಕ್ಕೆ ಕೊಂಡೋಗ ಮತ್ತೆ ಇಹಲ್ಲಿ ಕೀರ್ತಿಯನ್ನೂ ಕೊಡ. ನಿನಗೆ ಇಂತಹ ಕಲುಷಿತ ಯೋಚನೆ ಎಲ್ಲಿಂದ ಬಂತು? ಅರ್ಜುನನ ಸಂಪೂರ್ಣವಾದವ ಶ್ರೀಕೃಷ್ಣ ನಿಷ್ಠುರವಾಗಿ ಈ ರೀತಿಯಾಗಿ ಒಂದೇ ಮಾತಿಲ್ಲಿ ಹೊಡದು ಹಾಕಿದ°.
ಭಗವಾನ್ ಹೇದರೆ ಭಗವಂತ° ಅರ್ಥಾತ್ ಶ್ರೀಕೃಷ್ಣ ಪರಮಾತ್ಮ°., ಎಲ್ಲ ಸಂಪತ್ತು , ಎಲ್ಲ ಶಕ್ತಿ, ಎಲ್ಲ ಕೀರ್ತಿ, ಎಲ್ಲ ಸೌಂದರ್ಯ, ಎಲ್ಲ ಜ್ಞಾನ, ಎಲ್ಲ ವೈರಾಗ್ಯ ಹೊಂದಿಪ್ಪ ದೇವೋತ್ತಮ ಪರಮ ಪುರುಷ°. ಅವನೇ ಅನಾದಿಪ್ರಭು. ಅವನೇ ಗೋವಿಂದ°. “ಈಶ್ವರಃ ಪರಮಃ ಕೃಷ್ಣಃ ಸತ್-ಚಿದ್-ಆನಂದವಿಗ್ರಹಃ , ಅನಾದಿರಾದಿರ್ಗೋವಿಂದಃ ಸರ್ವಕಾರಣಕಾರಣಮ್” (ಬ್ರಹ್ಮಸಂಹಿತೆ ೫.೧). ಭಗವಾನನ ಗುಣಂಗಳ ಹೊಂದಿಪ್ಪವು ಅನೇಕರಿದ್ದವು. ಆದರೆ, ಶ್ರೀಕೃಷ್ಣನೇ ಸರ್ವಶ್ರೇಷ್ಠ°. ಎಂತಕೆ ಹೇದರೆ ಅವನ ಮೀರುವವು ಆರೂ ಇಲ್ಲೆ. ಅವ° ಪರಮಪುರುಷ°, ಅವನ ಶರೀರ ನಿತ್ಯವಾದ್ದು, ಜ್ಞಾನ ಮತ್ತು ಆನಂದಂದ ತುಂಬಿ ತುಳುಕುತ್ತ ಇಪ್ಪದು. ಅವನೇ ಅನಾದಿಪ್ರಭು ಗೋವಿಂದ° ಮತ್ತು ಎಲ್ಲ ಕಾರಣಂಗಳ ಕಾರಣ°. ಭಾಗವತಲ್ಲಿ ಹೇಳಿದಾಂಗೆ – ‘ಕೃಷ್ಣಸ್ತು ಭಗವಾನ್ ಸ್ವಯಮ್’.
ದೇವೋತ್ತಮ ಪರಮ ಪುರುಷನ ಸನ್ನಿಧಿಲಿ ತನ್ನ ಬಂಧುಗೊಕ್ಕಾಗಿ ಅರ್ಜುನ° ದುಃಖಿಸುತ್ತಿಪ್ಪದು ಅನುಚಿತವಾದ್ದು. ಹಾಂಗಾಗಿಯೇ ಕೃಷ್ಣ ಕೇಳಿದ್ದು – ಕುತಃ?! (ಎಲ್ಲಿಂದ?!) ಹೇಳಿ ಆಶ್ಚರ್ಯಸೂಚಕವಾಗಿ. ಬದುಕಿನ ಮೌಲ್ಯಂಗಳ ಅರ್ಥಮಾಡಿಕೊಂಡ ನಾಗರಿಕತೆಯ ಹೊಂದಿಪ್ಪವು ಆರ್ಯರು ಹೇಳಿ ಹೇಳಿಸಿಗೊಳ್ಳುತ್ತವು. ಬದುಕಿನ ಪ್ರಾಪಂಚಿಕ ಕಲ್ಪನೆಯನ್ನೇ ಅನುಸರುಸುತ್ತವಕ್ಕೆ ಬದುಕಿನ ಗುರಿ ಗೊಂತಿರ್ತಿಲ್ಲೆ. ಲೌಕಿಕ ಜಗತ್ತಿನ ಹೊರಲಕ್ಷಣಂಗೊಕ್ಕೆ ಬೆರಗಾಗಿರ್ತವು. ಹಾಂಗಾಗಿ ಅವಕ್ಕೆ ಮುಕ್ತಿ ಹೇಳಿರೆ ಎಂತರ ಹೇಳುವದೇ ಅರ್ಥ ಆಗದ್ದ ವಿಶಯ. ಅಂತವು ‘ಅನಾರ್ಯರು’ ಹೇದು ಕರೆಯಲ್ಪಡುತ್ತವು. ಭಗವಾನ್ ಶ್ರೀಕೃಷ್ಣನ ಒಡನಾಟಲ್ಲಿ ಇದ್ದುಗೊಂಡು, ಬಂಧುವಾಗಿಯೂ ಇದ್ದುಗೊಂಡು ಆಧ್ಯಾತ್ಮಿಕ ಬದುಕಿನತ್ತ ಚಿಂತುಸೆಕ್ಕಾದವ ಅರ್ಜುನ°, ಈ ರೀತಿ ವ್ಯಾಮೋಹಕ್ಕೆ ತುತ್ತಾದ್ದರ ಭಗವಂತ ಅನುಮೋದುಸುತ್ತನಿಲ್ಲೆ. ಹಾಂಗಾಗಿಯೇ ಅರ್ಜುನನತ್ರೆ ಶ್ರೀಕೃಷ್ಣ° ಕೇಳಿದ್ದು ಕುತಃ (ಎಲ್ಲಿಂದ) ಈ ರೀತಿಯ ಕೊಳಕ್ಕು ಯೋಚನೆ ನಿನಗೆ ಬಂದದು?! ಹೇದು.
ಶ್ಲೋಕ
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ॥೦೩॥
ಪದವಿಭಾಗ
ಕ್ಲೈಬ್ಯಮ್ ಮಾ ಸ್ಮ ಗಮಃ ಪಾರ್ಥ ನ ಏತತ್ ತ್ವಯಿ ಉಪಪದ್ಯತೇ । ಕ್ಷುದ್ರಮ್ ಹೃದಯ-ದೌರ್ಬಲ್ಯಮ್ ತ್ಯಕ್ತ್ವಾ ಉತ್ತಿಷ್ಠ ಪರಂತಪ ॥
ಅನ್ವಯ
ಹೇ ಪಾರ್ಥ!, ಕ್ಲೈಬ್ಯಂ ಮಾ ಸ್ಮ ಗಮಃ । ಏತತ್ ತ್ವಯಿ ನ ಉಪಪದ್ಯತೇ । ಹೇ ಪರಂತಪ!, ಕ್ಷುದ್ರಂ ಹೃದಯ-ದೌರ್ಬಲ್ಯಂ ತ್ಯಕ್ತ್ವಾ ಉತ್ತಿಷ್ಠ ।
ಪ್ರತಿಪದಾರ್ಥ
ಹೇ ಪಾರ್ಥ! – ಏ ಪೃಥೆಯ ಮಗನೇ! (ಅರ್ಜುನ!), ಕ್ಲೈಬ್ಯಮ್ – ಷಂಡತನವ, ಮಾ ಸ್ಮ ಗಮಃ – ಹೊಂದೆಡ, ಏತತ್ – ಇದು, ತ್ವಯಿ – (ನಿನ್ನಲ್ಲಿ) ನಿನಗೆ, ನ ಉಪಪದ್ಯತೇ – ಸರಿಹೊಂದುತ್ತಿಲ್ಲೆ, ಹೇ ಪರಂತಪ! – ಶತ್ರುಗಳ ದಂಡಿಸುವವನೇ!, ಕ್ಷುದ್ರಮ್ – ಅಲ್ಪವಾದ (ನೀಚವಾದ, ದೃಢವಲ್ಲದ), ಹೃದಯ-ದೌರ್ಬಲ್ಯಮ್ – ಹೃದಯದ ದೌರ್ಬಲ್ಯವ, ತ್ಯಕ್ತ್ವಾ – ಬಿಟ್ಟಿಕ್ಕಿ, ಉತ್ತಿಷ್ಠ – ಎದ್ದು ನಿಲ್ಲು.
ಅನ್ವಯಾರ್ಥ
ಏ ಪೃಥೆಯ ಮಗನಾದ ಪಾರ್ಥನೇ!, ಷಂಡತನವ ಹೊಂದೆಡ. ಇದು ನಿನಗೆ ಯೋಗ್ಯ ಅಲ್ಲ. ಓ ಶತ್ರುಗೊಕ್ಕೆ ತಾಪವ ಉಂಟು ಮಾಡುವವನೇ! (ಪರಂತಪನೇ!), ಈ ಹೃದಯ ದೌರ್ಬಲ್ಯವು ಕ್ಷುದ್ರವಾದ್ದು. ಇದರ ಬಿಟ್ಟಿಕ್ಕಿ ಎದ್ದು ನಿಲ್ಲು.
ತಾತ್ಪರ್ಯ / ವಿವರಣೆ
ನಪುಂಸಕನ ಹಾಂಗೆ ಮಾತಾಡೇಡ. ಇಂತಹ ಹೇಡಿತನವ ನಿನ್ನತ್ರೆ ನಿರೀಕ್ಷಿಸಿದ್ದಿಲ್ಲೆ, ಕ್ಷುದ್ರ ಹೃದಯ / ಮಾನಸಿಕ ದೌರ್ಬಲ್ಯವ ತೊಡೆದು ಹಾಕಿ, ವೀರನಾಗಿ ಅನ್ಯಾಯದ ವಿರುದ್ಧ ಹೋರಾಡ್ಳೆ ಎದ್ದು ನಿಲ್ಲು ಹೇದು ಕೃಷ್ಣ° ಅರ್ಜುನಂಗೆ ದಿಗ್ಬ್ರಾಂತಿ ಚಿಕಿತ್ಸೆ ನೀಡಿದ° ಹೇದು ಬನ್ನಂಜೆ ವ್ಯಾಖ್ಯಾನುಸುತ್ತವಿದರ. ಯುದ್ಧ ಆದರೆ ಮತ್ತೆ ಅದರ ಪರಿಣಾಮ ಎಂತೆಲ್ಲ ಅಕ್ಕು ಹೇದು ಅರ್ಜುನ° ಹೇದನೋ ಅದರಿಂದ ಹತ್ತುಪಟ್ಟು ಅನ್ಯಾಯ ಯುದ್ಧ ಆಗದ್ರೆ ಆವ್ತು ಹೇದು ಕೃಷ್ಣನ ಅಭಿಮತ ಆಗಿರೆಕು. ಆ ಕಾಲದ ಲೋಕಕಂಟಕ° ಆಗಿತ್ತವ° ದುರ್ಯೋಧನ°. ತುಂಬಿದ ಸಭೆಲಿ ತನ್ನ ಅತ್ತಿಗೆಯ ಸೀರಗೇ ಕೈ ಹಾಕಲೆ ಬಯಸಿದವ° ಅವ° ಮುಂದೆ ಅಧಿಕಾರದ ಗದ್ದುಗೆ ಏರಿರೆ ಸಮಾಜದ ಪರಿಸ್ಥಿತಿ ಎಂತಕ್ಕು ಹೇದು ಕೃಷ್ಣ° ಯೋಚಿಸಿದನಾಯ್ಕು. ಯುದ್ಧಲ್ಲಿ ಬಂಧುಪ್ರೇಮವ ಬಿಟ್ಟಿಕ್ಕಿ ಅನ್ಯಾಯದ ವಿರುದ್ಧ ಹೋರಾಡಿ ಸತ್ತರೂ ಚಿಂತೆ ಇಲ್ಲೆ ಹೇದು ಅರ್ಜುನಂಗೆ ಕೃಷ್ಣನ ಸೂಚನೆ . ಅರ್ಜುನ° ಒಬ್ಬ ಕ್ಷತ್ರಿಯ° ಆಗಿದ್ದುಕ್ಕೊಂಡು ತನ್ನ ಕರ್ತವ್ಯ (ಯುದ್ಧ) ಮಾಡ್ಳೆ ನಿರಾಕರಿಸಿರೆ ಅದು ಅವಂಗೆ ಅಕೀರ್ತಿಕರವಾವ್ತು. ಇಂತಹ ವರ್ತನೆ ಅರ್ಜುನನ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ. ಬಂಧುಪ್ರೇಮ ಹೇಳ್ವದು ಹೃದಯ ದೌರ್ಬಲ್ಯ ಮಾಂತ್ರ.
ಶ್ಲೋಕ
ಅರ್ಜುನ ಉವಾಚ ।
ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ ।
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ ॥೦೪॥
ಪದವಿಭಾಗ
ಅರ್ಜುನಃ ಉವಾಚ – ಕಥಮ್ ಭೀಷ್ಮಮ್ ಅಹಮ್ ಸಂಖ್ಯೇ ದ್ರೋಣಮ್ ಚ ಮಧುಸೂದನ । ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹೌ ಅರಿ-ಸೂದನ ॥
ಅನ್ವಯ
ಅರ್ಜುನಃ ಉವಾಚ – ಹೇ ಮಧುಸೂದನ!, ಅಹಂ ಭೀಷ್ಮಂ ದ್ರೋಣಂ ಚ ಸಂಖ್ಯೇ ಇಷುಭಿಃ ಕಥಮ್ ಪ್ರತಿಯೋತ್ಸ್ಯಾಮಿ ? ಹೇ ಅರಿ-ಸೂದನ! ಏತೌ ಪೂಜಾ-ಅರ್ಹೌ ।
ಪ್ರತಿಪದಾರ್ಥ
ಅರ್ಜುನಃ ಉವಾಚ – ಅರ್ಜುನ ಹೇಳಿದ°, ಹೇ ಮಧು-ಸೂದನ! – ಮಧುಹಂತಕನೇ!, ಅಹಮ್ – ಆನು, ಭೀಷ್ಮಮ್ – ಭೀಷ್ಮನ, ದ್ರೋಣಮ್ – ದ್ರೋಣನ, ಚ – ಕೂಡ, ಸಂಖ್ಯೇ – ಯುದ್ಧಲ್ಲಿ, ಇಷುಭಿಃ – ಬಾಣಗಳಿಂದ, ಕಥಮ್ – ಹೇಂಗೆ, ಪ್ರತಿಯೋತ್ಸ್ಯಾಮಿ – ಪ್ರತಿರೋಧಿಸುವೆ, ಹೇ ಅರಿ-ಸೂದನ! – ಶತ್ರುಸಂಹಾರಕನೇ!, ಏತೌ – ಇವು, ಪೂಜಾ-ಅರ್ಹೌ – ಪೂಜಾರ್ಹರಾದವು.
ಅನ್ವಯಾರ್ಥ
ಅರ್ಜುನ° ಹೇಳಿದ° – ಹೇ ಮಧುಸೂದನ!, ಹೇ ಶತ್ರುಸಂಹಾರಕನೇ!, ಪಿತಾಮಹ° ಭೀಷ್ಮರ, ಆಚಾರ್ಯ ದ್ರೋಣರ ವಿರುದ್ಧ ಈ ಯುದ್ಧಭೂಮಿಲಿ ಹೇಂಗೆ ಬಾಣಂಗಳಿಂದ ಪ್ರತಿರೋಧಿಸಲಿ ?! ಇವು ಸದಾ ಪೂಜಾರ್ಹರು.
ತಾತ್ಪರ್ಯ / ವಿವರಣೆ
ಪಿತಾಮಹ° ಭೀಷ್ಮ°, ಗುರು ದ್ರೋಣ° ಇಂತಹ ಹಿರಿಯರು ಸದಾ ಪೂಜಾರ್ಹರು. ಅವ್ವೇ ಆಕ್ರಮಣ ಮಾಡಿರೂ ಅವರ ವಿರುದ್ಧ ಅಸ್ತ್ರಪ್ರಯೋಗ ಮಾಡ್ಳಾಗ. ಹಿರಿಯರತ್ರೆ ಮಾತಿನ ಕಾಳವೂ ಸಲ್ಲ ಹೇಳ್ವದು ಯೋಗ್ಯ ವರ್ತನೆ. ಅವ್ವು ಕೆಲವೊಂದರಿ ಕಟುವಾಗಿ ವರ್ತಿಸಿರೂ ಅವರ ವಿರುದ್ಧ ಒರಟಾಗಿ ವರ್ತುಸಲಾಗ. ಹೀಂಗಿಪ್ಪಗ ಅವರ ವಿರುದ್ಧ ಬಾಣಪ್ರಯೋಗ ಹೇಂಗೆ ಮಾಡುತ್ಸು ಹೇದು ಅರ್ಜುನನ ಚಿಂತೆ. ಕೃಷ್ಣನ ತೀಕ್ಷ್ಣ ಧಾಟಿಯ ಮಾತು ‘ಯೋಚನೆ ಎಲ್ಲಿಂದ ಬಂತು’ ಹೇದು ಅರ್ಜುನನತ್ರೆ ಕೇಳಿದ ರೀತಿಂದಲಾಗಿ ಅರ್ಜುನನ ಮಾತಿನ ಧಾಟಿ ಬದಲಿತ್ತು. ಭಾವಾವೇಶ ಬಿಟ್ಟು ಭಾವುಕತೆಂದ ಶರಣಾಗತಿಯ ಧಾಟಿಗೆ ತೊಡಗುತ್ತ°.
ಶ್ಲೋಕ
ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋಭೋಕ್ತುಂ ಭೈಕ್ಷ್ಯಮಪೀಹ ಲೋಕೇ ।
ಹತ್ವಾsರ್ಥ ಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ ॥೦೫॥
ಪದವಿಭಾಗ
ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ ಭೋಕ್ತುಮ್ ಭೈಕ್ಷ್ಯಮ್ ಅಪಿ ಇಹ ಲೋಕೇ । ಹತ್ವಾ ಅರ್ಥ-ಕಾಮಾನ್ ತು ಗುರೂನ್ ಇಹ ಏವ ಭುಂಜೀಯ ಭೋಗಾನ್ ರುಧಿರ-ಪ್ರದಿಗ್ಧಾನ್ ॥
ಅನ್ವಯ
ಮಹಾನುಭಾವಾನ್ ಗುರೂನ್ ಅಹತ್ವಾ, ಇಹ ಲೋಕೇ ಭೈಕ್ಷ್ಯಂ ಭೋಕ್ತುಮ್ ಅಪಿ ಶ್ರೇಯಃ ಹಿ। ಗುರೂನ್ ಹತ್ವಾ ತು ಇಹ ಏವ ರುಧಿರ-ಪ್ರದಿಗ್ಧಾನ್ ಅರ್ಥ-ಕಾಮಾನ್ ಭೋಗಾನ್ ಭುಂಜೀಯ ।
ಪ್ರತಿಪದಾರ್ಥ
ಮಹಾನುಭಾವಾನ್ – ಮಹಾತ್ಮರಾದ, ಗುರೂನ್ – ಹಿರಿಯರನ್ನು, ಅಹತ್ವಾ – ಕೊಲ್ಲದ್ದೆ, ಇಹ – ಈ ಬದುಕಿಲ್ಲಿ, ಲೋಕೇ – ಈ ಜಗತ್ತಿಲ್ಲಿ, ಭೈಕ್ಷ್ಯಮ್ – ಭಿಕ್ಷೆಬೇಡ್ತದು, ಭೋಕ್ತುಮ್ – ಬದುಕ ಸುಖಿಸುವದು, ಅಪಿ – ಕೂಡ, ಶ್ರೇಯಃ – ಉತ್ತಮವಾದ್ದು, ಹಿ – ಖಂಡಿತವಾಗಿಯೂ, ಗುರೂನ್ – ಹಿರಿಯರ (ಗುರುಸಮಾನರ), ಹತ್ವಾ ತು – ಕೊಂದಾದರೋ, ಇಹ – ಈ ಜಗತ್ತಿಲ್ಲಿ, ಏವ- ಖಂಡಿತವಾಗಿ, ರುಧಿರ-ಪ್ರದಿಗ್ಧಾನ್ – ರಕ್ತಂದ ಸಿಕ್ತವಾದ್ದರ, ಅರ್ಥ-ಕಾಮಾನ್ – ಪ್ರಯೋಜನ ಅಪೇಕ್ಷೆಗಳ, ಭೋಗಾನ್ – ಭೋಗಂಗಳ, ಭುಂಜೀಯ – ಅನುಭೋಗುಸಬೇಕಾವ್ತು.
ಅನ್ವಯಾರ್ಥ
ಗುರುಗಳಂತಹ ಮಹಾನುಭಾವರುಗಳ ಕೊಂದು ಬದುವದಕ್ಕಿಂತ (ಕೊಲ್ಲದ್ದೆ) ಈ ಜಗತ್ತಿಲ್ಲಿ ಭಿಕ್ಷೆ ಬೇಡಿ ಬದುಕುತ್ತದೇ ಉತ್ತಮ. ಅವರ ಕೊಂದರೆ ನಾವು ಅನುಭವಿಸುವ ಎಲ್ಲ ಭೋಗಂಗೊಕ್ಕೂ ರಕ್ತ ಅಂಟಿಕೊಂಡಿರುತ್ತು.
ತಾತ್ಪರ್ಯ / ವಿವರಣೆ
ಈ ಗುರುಗಳ ಕೊಂದಿಕ್ಕಿ ಸಿಕ್ಕುವ ಐಹಿಕ ಸುಖ ಐಶ್ವರ್ಯ ಭೋಗ ಅರ್ಥಕಾಮಾದಿಗೊ ರಕ್ತಸಿಕ್ತ ಆಗಿರ್ತು. ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ಸಿದ್ಧರಾಗಿ ನಿಂದ ಇವರ ಕೊಂದು ಸಿಂಹಾಸನ ಏರಿರೆ ಗುರುಗಳ ನೆತ್ತರಿಂದ ತೊಳದ ಭೋಗವ ಅನುಭವಿಸಿದಾಂಗೆ ಆವ್ತು.
ಶ್ಲೋಕ
ನ ಚೈತದ್ವಿದ್ಮಃ ಕತರನ್ನೋ ಗರೀಯೋ ಯದ್ವಾ ಜಯೇಮ ಯದಿವಾ ನೋ ಜಯೇಯುಃ ।
ಯಾನೇವ ಹತ್ವಾನ ಜಿಜೀವಿಷಾಮಃ ತೇsವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥೦೬॥
ಪದವಿಭಾಗ
ನ ಚ ಏತದ್ ವಿದ್ಮಃ ಕತರತ್ ನಃ ಗರೀಯಃ ಯತ್ ವಾ ಜಯೇಮ ಯದಿ ವಾ ನಃ ಜಯೇಯುಃ । ಯಾನ್ ಏವ ಹತ್ವಾ ನ ಜೆಜೀವಿಷಾಮಃ ತೇ ಅವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥
ಅನ್ವಯ
ನ ಕತರತ್ ಗರೀಯಃ? ಯತ್ ವಾ (ವಯಂ) ಜಯೇಮ, ಯದಿ ವಾ (ತೇ) ನಃ ಜಯೇಯುಃ, ಏತತ್ ಚ ನ ವಿದ್ಮಃ । ಯಾನ್ ಹತ್ವಾ ನ ಜಿಜೀವಿಷಾಮಃ, ತೇ ಏವ ಧಾರ್ತರಾಷ್ಟ್ರಾಃ ಪ್ರಮುಖೇ ಅವಸ್ಥಿತಾಃ ।
ಪ್ರತಿಪದಾರ್ಥ
ನ – ಇಲ್ಲೆ, ಕತರತ್ – ಏವುದು, ಗರೀಯಃ – ಉತ್ತಮವಾದ್ದು (ಒಳಿತಾದ್ದು / ಶ್ರೇಷ್ಠವಾದ್ದು), ಯತ್ ವಾ – ಒಂದು ವೇಳೆ ಅಥವಾ, (ವಯಮ್ – ನಾವು), ಜಯೇಮ – ನಾವು ಗೆಲ್ಲುತ್ತ್ಯೋ°, ಯದಿ ವಾ (ತೇ) ಒಂದು ವೇಳೆ ಅಥವಾ ಅವ್ವು, ನಃ – ನವಗೆ, ಜಯೇಯುಃ – ಅವ್ವು ಗೆಲ್ಲುತ್ತವು, ಏತತ್ – ಇದು, ಚ – ಕೂಡ, ನ ವಿದ್ಮಃ – ಗೊಂತಿಲ್ಲೆ, ಯಾನ್ – ಆರ, ಹತ್ವಾ – ಕೊಂದು, ನ ಜಿಜೀವಿಷಾಮಃ – ನಾವು ಬದುಕಲೆ ಬಯಸುತ್ತಿಲ್ಲೆಯೋ, ತೇ ಏವ – ಆವ್ವೇ, ಧಾರ್ತರಾಷ್ಟ್ರಾಃ – ಧೃತರಾಷ್ಟ್ರನ ಮಕ್ಕೊ, ಪ್ರಮುಖೇ – ಎದುರೆ (ಮುಂಭಾಗಲ್ಲಿ), ಅವಸ್ಥಿತಾಃ – ಇದ್ದವು
ಅನ್ವಯಾರ್ಥ
ಏವುದು ಒಳಿತಾದ್ದು ಅಪ್ಪು ಅಲ್ಲ ಹೇಳ್ವದೇ ಗೊಂತಾವ್ತಿಲ್ಲೆ, ಯುದ್ಧಲ್ಲಿ ನಾವು ಗೆಲ್ಲುತ್ತೋ, ಅವ್ವು ಗೆಲ್ಲುಗೋ ಅರಡಿಯ (ಗೊಂತಿಲ್ಲೆ). ಏವ ಧೃತರಾಷ್ಟ್ರನ ಮಕ್ಕಳ ಕೊಂದು ನಾವು ಜೀವಿಸಲೆ ಖಂಡಿತವಾಗಿಯೂ ಬಯಸುತ್ತಿಲ್ಲೆಯೋ. ಅವೆಲ್ಲ ನಮ್ಮ ಮುಂದೆ (ಯುದ್ಧಕ್ಕೆ) ನಿಂದುಗೊಂಡಿದ್ದವು.
ತಾತ್ಪರ್ಯ / ವಿವರಣೆ
ಯುದ್ಧಮಾಡುತ್ಸು ಕ್ಷತ್ರಿಯನ ಕರ್ತವ್ಯ ಆದರೂ, ಸನ್ನಿವೇಶಲ್ಲಿ ಯುದ್ಧಮಾಡಿ ಅನಗತ್ಯ ಹಿಂಸೆಯ ನಾಶದ ಸಾಧ್ಯತೆಗೆ ಎಡೆಕೊಡೇಕೋ ಅಥವಾ ಯುದ್ಧಮಾಡದ್ದೆ ಭಿಕ್ಷೆಬೇಡಿ ಬದುಕುವದೋ ಹೇದು ಅರ್ಜುನಂಗೆ ಗೊಂದಲ. ಅವರ ಸೋಲುಸದ್ರೆ ಜೀವನನಿರ್ವಹಣಗೆ ಭಿಕ್ಷೆವೃತ್ತಿ ಒಂದೇ ಮಾರ್ಗ. ಯುದ್ಧ ಮಾಡಿರೆ ತಾನು ಗೆಲ್ಲುತ್ತೊ ಸೋಲುತ್ತೋ ಅರಡಿಯ. ಎರಡು ಪಕ್ಷಲ್ಲಿ ಯಾವ ಪಕ್ಷವಾದರೂ ಗೆಲ್ಲುಗು. ಧೃತರಾಷ್ಟನ ಪಕ್ಷ ಸೋತು ಸತ್ತರೆ ಅವ್ವಿಲ್ಲದ್ದೆ ಬದುಕುವದು ಅರ್ಜುನಂಗೆ ತುಂಬಾ ಕಷ್ಟ. ಇಂತಹ ಸ್ಥಿತಿಲಿ ಪಾಂಡವರ ವಿಜಯವೂ ಒಂದು ಬಗೆಯ ಸೋಲೇ. ಒಂದು ಬಗೆಲಿ ಅರ್ಜುನನೂ ತಿಳುವಳಿಕೆ ಇಪ್ಪ ಮೇಧಾವಿ ಹೇಳ್ವದು ಈ ಸನ್ನಿವೇಶಲ್ಲಿ ಕಾಣುತ್ತು. ಭಗವಂತನ ಶ್ರೇಷ್ಠ ಭಕ್ತ° ಅರ್ಜುನ°, ತಿಳುವಳಿಕೆ ಇಪ್ಪವ°, ತನ್ನ ಮನಸ್ಸು ಮತ್ತು ಇಂದ್ರಿಯಂಗಳ ಮೇಲೆ ನಿಯಂತ್ರಣ ಇಪ್ಪವ° ಹೇಳ್ವದು ತೋರ್ಸಿಕೊಡ್ತು. ತಾನು ರಾಜವಂಶಲ್ಲಿ ಜನಿಸಿದ್ದರೂ ಭಿಕ್ಷೆ ಬೇಡಿ ಬದುಕ್ಕಲೂ ಸಿದ್ಧ° ಎಂಬ ಅವನ ನಿರ್ಲಿಪ್ತತೆಯ ಲಕ್ಷಣ. ಈ ಎಲ್ಲ ಗುಣಂಗಳಿಂದ ತನ್ನ ಗುರು ಭಗವಂತನಲ್ಲಿ ಪೂರ್ಣ ಶ್ರದ್ಧಾ-ಭಕ್ತಿ ಇಪ್ಪವ° ಅರ್ಜುನ°. ಜ್ಞಾನ ಮತ್ತು ಭಕ್ತಿಗೊ ಇಲ್ಲದ್ದೆ ಮುಕ್ತಿ ಸಾಧ್ಯವಿಲ್ಲೆ. ಹಾಂಗಾಗಿ ಅರ್ಜುನ° ಮುಕ್ತಿಗೆ ಅರ್ಹ ಹೇದು ಗ್ರೇಶಲಕ್ಕು.
ಶ್ಲೋಕ
ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾಂ ಧರ್ಮ ಸಂಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇsಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್॥೦೭॥
ಪದವಿಭಾಗ
ಕಾರ್ಪಣ್ಯ-ದೋಷ-ಉಪಹತ-ಸ್ವಭಾವಃ ಪೃಚ್ಛಾಮಿ ತ್ವಾಮ್ ಧರ್ಮ-ಸಂಮೂಢ-ಚೇತಾಃ । ಯತ್ ಶ್ರೇಯಃ ಸ್ಯಾತ್ ನಿಶ್ಚಿತಮ್ ಬ್ರೂಹಿ ತತ್ ಮೇ ಶಿಷ್ಯಃ ತೇ ಅಹಮ್ ಶಾಧಿ ಮಾಮ್ ತ್ವಾಮ್ ಪ್ರಪನ್ನಮ್ ॥
ಅನ್ವಯ
ಕಾರ್ಪಣ್ಯ-ದೋಷ-ಉಪಹತ-ಸ್ವಭಾವಃ ಧರ್ಮ-ಸಂಮೂಢ-ಚೇತಾಃ (ಅಹಂ) ತ್ವಾಂ ಪೃಚ್ಛಾಮಿ । ಯತ್ ನಿಶ್ಚಿತಂ ಶ್ರೇಯಃ ಸ್ಯಾತ್, ತತ್ ಮೆ ಬ್ರೂಹಿ । ಅಹಂ ತೇ ಶಿಷ್ಯಃ । ತ್ವಾಮ್ ಪ್ರಪನ್ನಂ ಮಾಂ ಶಾಧಿ ।
ಪ್ರತಿಪದಾರ್ಥ
ಕಾರ್ಪಣ್ಯ-ದೋಷ-ಉಪಹತ-ಸ್ವಭಾವಃ – ಕೃಪಣತೆಯ ದೌರ್ಬಲ್ಯಂದ ಬಾಧಿತವಾದ ಸ್ವಭಾವವುಳ್ಳ, ಧರ್ಮ-ಸಂಮೂಢ-ಚೇತಾಃ – ಧರ್ಮದ ಬಗ್ಗೆ ದಿಗ್ಬ್ರಮೆಗೊಂಡ ಹೃದಯವುಳ್ಳ ಅಹಮ್ – ಆನು, ತ್ವಾಮ್ – ನಿನ್ನ, ಪೃಚ್ಛಾಮಿ – ಕೇಳುತ್ತೆ, ಯತ್- ಯಾವುದು, ನಿಶ್ಚಿತಮ್ – ನಿಶ್ಚಿತವಾಗಿಯೂ, ಶ್ರೇಯಃ – ಶ್ರೇಯಸ್ಕರವು, ಸ್ಯಾತ್ – ಅಕ್ಕು, ತತ್ – ಅದರ, ಮೇ – ಅನಗೆ, ಬ್ರೂಹಿ – ಹೇಳು. ಅಹಮ್ – ಆನು, ತೇ – ನಿನ್ನ, ಶಿಷ್ಯಃ – ಶಿಷ್ಯ° ಆಗಿದ್ದೆ. ತ್ವಾಮ್ – ನಿನ್ನ, ಪ್ರಪನ್ನಮ್ – ಶರಣಾಗತನಾದ, ಮಾಮ್ – ಎನ್ನ (ಎನಗೆ ಹೇಳ್ತ ಅರ್ಥ) , ಶಾಧಿ- ಬೋಧುಸು.
ಅನ್ವಯಾರ್ಥ
ಕಾರ್ಪಣ್ಯದ ದೌರ್ಬಲ್ಯಂದ ಆನೀಗ ಬಾಧಿತ ಸ್ವಭಾವದವನಾಗಿದ್ದೆ. ಚಿತ್ತ ವಿಕಲ್ಪತೆಂದ ಧರ್ಮಾಧರ್ಮಂಗಳ ವಿವೇಕ ಚಂಚಲವಾಗಿದ್ದು. ಇಂತಹ ಸ್ಥಿತಿಲಿ ಎನಗೆ ಯಾವುದು ಶ್ರೇಯಸ್ಕರ ಹೇಳ್ವದರ ನಿಶ್ಚಯವಾಗಿ ಬೋಧುಸು. ಆನು ನಿನ್ನ ಶಿಷ್ಯ° ಮತ್ತು ನಿನಗೆ ಸಂಪೂರ್ಣ ಶರಣಾಗತನಾಯ್ದೆ. ದಯವಿಟ್ಟು ಎನಗೆ ಮಾರ್ಗದರ್ಶನ ಮಾಡು.
ತಾತ್ಪರ್ಯ / ವಿವರಣೆ
ಕೃಪಣ° ಹೇಳಿರೆ ಐಹಿಕ ಬದುಕಿನ ಸುಖಭೋಗದ ಕಲ್ಪನೆ ಮಡಿಕ್ಕೊಂಡಿಪ್ಪವ°. ಭೌತಿಕ ಚಟುವಟಿಕೆಗಳ ಸಂಪೂರ್ಣ ವ್ಯವಸ್ಥೆಯು ಪ್ರಕೃತಿಯ ರೀತಿಲಿಯೇ ಎಲ್ಲೋರಿಂಗೂ ಗೊಂದಲವನ್ನುಂಟುಮಾಡುತ್ತದೇ. ಮೆಟ್ಟುಮೆಟ್ಟಿಂಗೂ ಗೊಂದಲ. ಹಾಂಗಾಗಿ ಆರೇ ಆಗಲಿ, ಬದುಕಿನ ಗುರಿಯ ಸಾಧುಸುವುದಕ್ಕೆ ಯೋಗ್ಯವಾದ ಮಾರ್ಗದರ್ಶನ ಮಾಡ್ಳೆಡಿಗಪ್ಪ ಒಬ್ಬ ನಿಜವಾದ ಗುರುವಿನ ಹತ್ರಂಗೆ ಹೋಯೇಕ್ಕಾದ್ದು ಉಚಿತ. ನಾವು ಅಪೇಕ್ಷಿಸದ್ದೇ ಉಂಟಪ್ಪ ಬದುಕಿನ ಗೊಂದಲಂಗಳಿಂದ ಪಾರಪ್ಪಲೆ ಗುರುಶಿಷ್ಯ ಪರಂಪರೆಲಿಪ್ಪ ಒಬ್ಬ ನಿಜಗುರುವಿನ ಹತ್ರಂಗೆ ಹೋಗಿ ಅವನ ಮಾರ್ಗದರ್ಶನ ಪಡೆಕ್ಕೊಳ್ಳೆಕ್ಕಾಗಿದ್ದು ಹೇಳ್ವದು ಈ ಮಾತಿಂದ ಅರ್ಥವಾವ್ತು. ಹಾಂಗಾಗಿ ಆರೇ ಆಗಲಿ ಐಹಿಕ ಗೊಂದಲಂಗಳಲ್ಲಿಯೇ ಉಳುದು ಹೋಪಲಾಗ. ಸೂಕ್ತ ಒಬ್ಬ° ಅವಂಗೆ ಮಾರ್ಗದರ್ಶನ ನೀಡಿ ಆತ್ಮೋನ್ನತಿಗೆ ದಾರಿ ತೋರುಸುವ ಗುರುವಿನ ಹತ್ರಂಗೆ ಹೋಯೆಕು ಹೇಳ್ವದು ಈ ಶ್ಲೋಕಂದ ಅರ್ಥ ಮಾಡೇಕ್ಕಾಗಿದ್ದು.
ಬುದ್ಧಿವಂತನಾದ ಅರ್ಜುನ° ತನ್ನ ಸಂಸಾರದ ಸದಸ್ಯರಲ್ಲಿ ತನಗಿಪ್ಪ ವ್ಯಾಮೋಹ, ಅವರ ಸಾವಿಂದ ರಕ್ಷಿಸುವ ಬಯಕೆ – ಇವೇ ತನ್ನ ಗೊಂದಲಕ್ಕೆ ಕಾರಣ ಹೇಳ್ವದು ಅರ್ಥೈಸಿಗೊಂಡ. ಯುದ್ಧಮಾಡೇಕ್ಕಾದ್ದು ತನ್ನ ಕರ್ತವ್ಯ ಮತ್ತು ಈ ಕರ್ತವ್ಯ ತನಗಾಗಿ ಕಾಯುತ್ತಾ ಇದ್ದು ಹೇಳ್ವದು ಅರ್ಜುನಂಗೆ ಗೊಂತಿದ್ದು. ಆದರೂ ತನ್ನ ಕೃಪಣತೆಯ ದೋಷಂದ ತನ್ನ ಕರ್ತವ್ಯ ಪಾಲುಸಲೆ ಎಡಿಗಾವ್ತಿಲ್ಲೆ. ಹಾಂಗಾಗಿ ಅವ° ತನ್ನ ಪರಮ ಗುರುವಾದ ಶ್ರೀ ಕೃಷ್ಣನತ್ರೆ ನಿಶ್ಚಿತವಾದ ಪರಿಹಾರವ ಹೇಳಿಕೊಡು ಹೇದು ಬೇಡಿಗೊಳ್ತ°. ತಾನು ಕೃಷ್ಣನ ಶಿಷ್ಯನಾಗಿ, ಸಖ್ಯಭಾವದ ಮಾತುಗಳ ಬಿಟ್ಟು ಗುರುಶಿಷ್ಯರ ನಡುವಣ ಗಂಭೀರ ಮಾತಿಂಗೆ ತೊಡಗುತ್ತ°. ಹಾಂಗಾಗಿ ಭಗವದ್ಗೀತೆಯ ವಿಜ್ಞಾನದ ಮೂಲಗುರು ಶ್ರೀಕೃಷ್ಣ, ಮತ್ತೆ, ಗೀತೆಯ ಅರ್ಥಮಾಡಿಗೊಂಡ ಮೊದಲ ಶಿಷ್ಯ° – ಅರ್ಜುನ°.
ಶ್ಲೋಕ
ನ ಹಿ ಪ್ರಪಶ್ಯಾಮಿ ಮಮಾಪನುದ್ಯಾತ್ ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ ।
ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾಧಿಪತ್ಯಮ್ ॥೦೮॥
ಪದವಿಭಾಗ
ನ ಹಿ ಪ್ರಪಶ್ಯಾಮಿ ಮಮ ಅಪನುದ್ಯಾತ್ ಯತ್ ಶೋಕಮ್ ಉಚ್ಛೋಷಣಮ್ ಇಂದ್ರಿಯಾಣಾಮ್ । ಅವಾಪ್ಯ ಭೂಮೌ ಅಸಪತ್ನಮ್ ಋದ್ಧಮ್ ರಾಜ್ಯಮ್ ಸುರಾಣಾಮ್ ಅಪಿ ಚ ಆಧಿಪತ್ಯಮ್ ॥
ಅನ್ವಯ
ಹಿ ಭೂಮೌ ಅಸಪತ್ನಮ್ ಋದ್ಧಂ ರಾಜ್ಯಮ್ ಅವಾಪ್ಯ, ಸುರಾಣಾಂ ಚ ಅಪಿ ಆಧಿಪತ್ಯಮ್ , ಯತ್ ಮಮ ಇಂದ್ರಿಯಾಣಾಮ್ ಉಚ್ಛೋಷಣಂ ಶೋಕಮ್ ಅಪನುದ್ಯಾತ್ ನ ಪ್ರಪಶ್ಯಾಮಿ ।
ಪ್ರತಿಪದಾರ್ಥ
ಹಿ – ಖಂಡಿತವಾಗಿಯೂ, ಭೂಮೌ – ಭೂಮಿಲಿ, ಅಸಪತ್ನಮ್ – ವೈರಿಗೊ ಇಲ್ಲದ್ದ, ಋದ್ಧಮ್ – ಸಮೃದ್ದವಾದ, ರಾಜ್ಯಮ್ – ರಾಜ್ಯವ, ಅವಾಪ್ಯ – ಹೊಂದಿ, ಸುರಾಣಾಮ್ – ದೇವತೆಗಳ, ಚ ಕೂಡ, ಅಪಿ – ಸಾನ, ಆಧಿಪತ್ಯಮ್ – ಆಧಿಪತ್ಯವ, ಯತ್ – ಏವುದು (ಅದರ), ಮಮ – ಎನ್ನ , ಇಂದ್ರಿಯಾಣಾಮ್ – ಇಂದ್ರಿಯಂಗಳ, ಉಚ್ಛೋಷಣಮ್ – ಶೋಷಣವ, ಶೋಕಮ್ – ದುಃಖವ, ಅಪನುದ್ಯಾತ್ – ದೂರಮಾಡುಗೋ, ನ ಪ್ರಪಷ್ಯಾಮಿ – ಕಾಣುತ್ತಿಲ್ಲೆ.
ಅನ್ವಯಾರ್ಥ
ಎನ್ನ ಇಂದ್ರಿಯಂಗಳ ಸೊರಗುಸುತ್ತಿಪ್ಪ (ತಪಿಸುತ್ತಿಪ್ಪ) ಈ ದುಃಖವ ದೂರಮಾಡುವ ಯಾವ ದಾರಿಯೂ ಎನಗೆ ಕಾಣುತ್ತಿಲ್ಲೆ. ಭೂಮಿಲಿ ಸಮೃದ್ಧವಾದ, ವೈರಿಗಳೇ ಇಲ್ಲದ್ದ, ಸಾಟಿಯೇ ಇಲ್ಲದ್ದ ರಾಜ್ಯವ ಗೆದ್ದುಗೊಂಡರೂ ಮತ್ತು ಸ್ವರ್ಗಲ್ಲಿಪ್ಪ ದೇವತೆಗಳ ಪ್ರಭುತ್ವದಂತಹ ಪ್ರಭುತ್ವ ಪಡಕ್ಕೊಂಡರೂ ಎನಗೆ ಈ ದುಃಖವ ಹೋಗಲಾಡಿಸಲೆ ಅಸಾಧ್ಯ.
ತಾತ್ಪರ್ಯ / ವಿವರಣೆ
ಧಾರ್ಮಿಕ ತತ್ವ ಮತ್ತು ನೀತಿಸಂಹಿತೆಗಳ ಅರ್ತುಗೊಂಡಿಪ್ಪ ಅರ್ಜುನ° ತನ್ನ ಗುರುವಾದ ಶ್ರೀಕೃಷ್ಣನ ನೆರವಿಲ್ಲದ್ದೆ ತನ್ನ ನಿಜ ಸಮಸ್ಯೆಯ ಬಗೆಹರುಸಲೆ ಸಾಧ್ಯ ಇಲ್ಲೆ. ಎಂತಹ ವಿದ್ಯೆಯನ್ನೂ ಎಲ್ಲೆಲ್ಲಿಂದ ಕಲ್ತಿದ್ದರೂ, ವಿದ್ಯಾಸಂಸ್ಥೆಂಗಳಿಂದ ಪಡದ ಜ್ಞಾನ, ವಿದ್ವತ್ತು, ಉನ್ನತ ಸ್ಥಾನ ಎಲ್ಲವೂ ಬದುಕಿನ ಸಮಸ್ಯೆಯ ಪರಿಹರುಸಲೆ ನಿರರ್ಥಕ. ಶ್ರೀಕೃಷ್ಣನಂತಹ ಗುರುವಿನ ಮಾರ್ಗದರ್ಶನಂದ ಮಾತ್ರವೇ ಸಾಧ್ಯ. ಗೂಡಾರ್ಥ ಇನ್ನೂ ಅವಲೋಕಿಸಿದರೆ ಕೃಷ್ಣಪ್ರಜ್ಞೆ ಇಪ್ಪವ° ಮಾತ್ರವೇ ನಿಜವಾದ ಗುರು ಹೇಳ್ವ ಭಾವ. ಎಂತಕೆ ಹೇದರೆ ನಿಜಗುರುವಿಂದ ಮಾತ್ರ ಬದುಕಿನ ಸಮಸ್ಯೆಗಳ ಪರಿಹರುಸಲೆ ಸಾಧ್ಯ.
ಸೂಕ್ಷ್ಮವಾಗಿ ನಾವು ರಜಾ ಚಿಂತಿಸಿ ನೋಡಿರೆ ನಮ್ಮ ಜೀವನಲ್ಲಿ ನಾವು ಕಾಂಬಲೆಡಿಗಪ್ಪ ಸಣ್ಣ ಉದಾಹರಣೆ – ನಾವು ನಮ್ಮ ಪೂಜ್ಯ ಗುರುಗೊ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗೊ ಹೇಳ್ವ ಮಾತುಗಳ ಅವಲೋಕಿಸಿದರೆ, ಏವತ್ತಾರು ಗುರುಗಳತ್ರೆ ನಮ್ಮ ಸಂಕಷ್ಟವ ತೋಡಿಗೊಂಬಗ ಅವ್ವು ಹೇಳ್ವ ಮಾತುಗೊ – “ ನೀ ಬೇಜಾರ ಮಾಡೇಡ. ನಿನ್ನ ಕರ್ತವ್ಯವ ನೀ ಮಾಡು. ನಿನ್ನ ಕರ್ಮವ ನೀ ಮಾಡು. ಮನಸ್ಸಿಂಗೆ ಚಿಂತೆ ಆದರೆ ನೀ ಎನ್ನತ್ರಂಗೆ ಬಾ”. ಎಂತಕೆ ?., ಗುರುಗಳ ಆಶ್ರಯ ಪಡೆ, ಗುರುವಿನ ಶ್ರದ್ಧಾ-ಭಕ್ತಿಲಿ ನೋಡು. ಗುರುಮುಖೇನ ಪರಮಾತ್ಮನ ನೋಡು. ಪರಮಾತ್ಮನ ನೋಡುವದು ಹೇದರೆ ಪರಮಾತ್ಮನಲ್ಲಿ ತನ್ನನ್ನೇ ಕಾಂಬದು, ತನ್ನಲ್ಲಿ ಪರಮಾತ್ಮನ ಕಾಂಬದು. ಇದುವೇ ಆತ್ಮ ಸಾಕ್ಷಾತ್ಕಾರ. ಆದ್ದರಿಂದಲೇ ಅಲ್ಲದೋ ಪುರಂದರ ದಾಸರು ಹಾಡಿದ್ದು – ”ದೊರೆಯದಣ್ಣ ಮುಕುತಿ.., ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ”!
ಶ್ಲೋಕ
ಸಂಜಯ ಉವಾಚ ।
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ ।
ನ ಯೋತ್ಸ್ಯ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಂ ಬಭೂವ ಹ ॥೦೯॥
ಪದವಿಭಾಗ
ಸಂಜಯಃ ಉವಾಚ । ಏವಮ್ ಉಕ್ತ್ವಾ ಹೃಷೀಕೇಶಮ್ ಗುಡಾಕೇಶಃ ಪರಂತಪಃ । ನ ಯೋತ್ಸ್ಯೇ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಮ್ ಬಭೂವ ಹ ॥
ಅನ್ವಯ
ಸಂಜಯಃ ಉವಾಚ – ಪರಂತಪಃ ಗುಡಾಕೇಶಃ ಹೃಷೀಕೇಶಮ್ ಏವಮ್ ಉಕ್ತ್ವಾ, ‘ನ ಯೋತ್ಸ್ಯೇ’ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಂ ಬಭೂವ ಹ ।
ಪ್ರತಿಪದಾರ್ಥ
ಸಂಜಯಃ ಉವಾಚ – ಸಂಜಯ° ಹೇಳಿದ°, ಪರಂತಪಃ – ಶತ್ರುಗಳ ದಂಡುಸುವವ°, ಗುಡಾಕೇಶಃ – ಅಜ್ಞಾನವ ಅಡಗುಸಲೆ ಸಮರ್ಥನಾದ ಅರ್ಜುನ°, ಹೃಷೀಕೇಶಮ್ – ಇಂದ್ರಿಯಂಗಳ ಒಡೆಯನಾದ ಕೃಷ್ಣಂಗೆ, ಏವಮ್ – ಹೀಂಗೆ, ಉಕ್ತ್ವಾ- ಹೇಳಿಕ್ಕಿ, ನ ಯೋತ್ಸ್ಯೈ – ಆನು ಯುದ್ಧಮಾಡುತ್ತಿಲ್ಲೆ, ಇತಿ – ಎಂದು, ಗೋವಿಂದಮ್ – ಇಂದ್ರಿಯಂಗಂಗೊಕ್ಕೆ ಸುಖನೀಡುವವನಾದ ಕೃಷ್ಣಂಗೆ, ಉಕ್ತ್ವಾ – ಹೇಳಿಗೊಂಡು, ತೂಷ್ಣೀಮ್ – ಮೌನ, ಬಭೂವ – ಆದ°, ಹ – ನಿಶ್ಚಯವಾಗಿಯೂ.
ಅನ್ವಯಾರ್ಥ
ಸಂಜಯ° ಹೇಳುತ್ತ° – ಹೇ ಧೃತರಾಷ್ಟ್ರ!, ಶತ್ರುಗಳ ನಿಗ್ರಹಿಸುಲೆ ಎಡಿಗಪ್ಪ ಅರ್ಜುನ° ಈ ಪ್ರಕಾರವಾಗಿ ಕೃಷ್ಣನತ್ರೆ ಹೇಳಿಕ್ಕಿ, “ಗೋವಿಂದ!, ಆನು ಯುದ್ಧ ಮಾಡುತ್ತಿಲ್ಲೆ”, ಹೇದು ಮೌನಿಯಾದ°.
ತಾತ್ಪರ್ಯ / ವಿವರಣೆ
ಅರ್ಜುನ° ಯುದ್ಧಮಾಡುತ್ತನಿಲ್ಲೆ. ಯುದ್ಧರಂಗವ ಬಿಟ್ಟು ಭಿಕ್ಷೆ ಬೇಡ್ಳೆ ಹೋವ್ತನಾಯ್ಕು ಹೇದು ಧೃತರಾಷ್ಟ್ರ° ಒಳಂದೊಳ ಸಂತೋಷಪಟ್ಟಿಕ್ಕು. ಆದರೆ, ಅರ್ಜುನನ ಪರಂತಪಃ (ಶತ್ರುಗಳ ನಿಗ್ರಹಿಸುವವ°) ಹೇಳಿ ಸಂಜಯ° ಎತ್ತಿಹೇಳಿ ನಿರಾಶೆ ಉಂಟುಮಾಡಿದ°. ಸಾಂಸಾರಿಕ ಮೋಹಂದ ಹುಸಿದುಃಖಕ್ಕೆ ಗುರಿಯಾಗಿ ಅರ್ಜುನ° ತತ್ಕಾಲ ಭಾವಪರವಶ ಆದ°. ಆದರೂ, ತನ್ನ ಪರಮ ಗುರುವಾದ ಶ್ರೀಕೃಷ್ಣನ ಶಿಷ್ಯನಾಗಿ ಶರಣಾಗತನಾದ° ಹೇಳಿ ಸಂಜಯ° ಧೃತರಾಷ್ಟ್ರಂಗೆ ವಿವರಿಸಿದ°.
ಶ್ಲೋಕ
ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ॥೧೦॥
ಪದವಿಭಾಗ
ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ । ಸೇನಯೋಃ ಉಭಯೋಃ ಮಧ್ಯೇ ವಿಷೀದಂತಮ್ ಇದಮ್ ವಚಃ ॥
ಅನ್ವಯ
ಹೇ ಭಾರತ!, ಉಭಯೋಃ ಸೇನಯೋಃ ಮಧ್ಯೇ ವಿಷೀದಂತಂ ತಂ (ಅರ್ಜುನಮ್) ಹೃಷೀಕೇಶಃ ಪ್ರಹಸನ್ ಇವ ಇದಂ ವಚಃ ಉವಾಚ ।
ಪ್ರತಿಪದಾರ್ಥ
ಹೇ ಭಾರತ! – ಓ ಭರತಕುಲದವನಾದ ಧೃತರಾಷ್ಟ್ರನೇ!, ಉಭಯೋಃ – ಎರಡು ಪಕ್ಷಂಗಳ, ಸೇನಯೋಃ – ಸೈನ್ಯಂಗಳ, ಮಧ್ಯೇ – ನೆಡುಕೆ, ವಿಷೀದಂತಮ್ – ವಿಷಾದಿಸುತ್ತ ಇಪ್ಪವಂಗೆ, ತಮ್ – ಅವಂಗೆ, ಹೃಷೀಕೇಶಃ – ಇಂದ್ರಿಯಂಗಳ ಒಡೆಯನಾದ ಶ್ರೀಕೃಷ್ಣ°, ಪ್ರಹಸನ್ ಇವ – ನೆಗೆಮಾಡಿಗೊಂಡಿಪ್ಪ ಹಾಂಗೇ, ಇದಮ್ – ಈ, ವಚಃ – ಮಾತುಗಳ, ಉವಾಚ – ಹೇಳಿದ°.
ಅನ್ವಯಾರ್ಥ
ಭರತ ವಂಶಜನಾದ ಧೃತರಾಷ್ಟ್ರನೇ!, ಎರಡು ಸೈನ್ಯಂಗಳ ನೆಡುಕೆ ವಿಷಾದಲ್ಲಿ ಮುಳುಗಿದ ಅರ್ಜುನಂಗೆ ಇಂದ್ರಿಯಂಗಳ ಒಡೆಯನಾದ ಶ್ರೀಕೃಷ್ಣ° ನಸು ನೆಗೆಮಾಡ್ಯೊಂಡು ಈ ಮಾತುಗಳ ಹೇಳಿದ°.
ತಾತ್ಪರ್ಯ / ವಿವರಣೆ
ಇಬ್ರು ಆತ್ಮೀಯ ಸ್ನೇಹಿತರಾದ ಹೃಷೀಕೇಶ° ಮತ್ತು ಗುಡಾಕೇಶರ ನೆಡುಕೆ ಸಂವಾದ ನಡೆತ್ತಾ ಇದ್ದು. ಸ್ನೇಹಿತರಾಗಿ ಇಬ್ರೂ ಸರಿಸಮಾನರುಗೊ ಅವ್ವು. ಆದರೆ, ಅವರಲ್ಲಿ ಒಬ್ಬ° ಸ್ವ-ಇಚ್ಛೆಂದ ಮತ್ತೊಬ್ಬನ ಶಿಷ್ಯ° ಆದ°. ಸ್ನೇಹಿತ ಶಿಷ್ಯನಪ್ಪಲೆ ತೀರ್ಮಾನಿಸಿದ ಹೇದು ಶ್ರೀಕೃಷ್ಣ ನಸುನೆಗೆ ಮಾಡಿದ್ದದು. ಎಲ್ಲೋರ ಪ್ರಭುವಾಗಿ ಅವ° ಏವತ್ತೂ ಉಚ್ಚಸ್ಥಾನಲ್ಲಿರ್ತ°. ಆದರೆ, ಭಗವಂತ°, ಭಕ್ತ° ಬಯಸಿದ ಹಾಂಗೆ ಸ್ನೇಹಿತ°, ಮಗ°, ಗೆಂಡ°.. ಹೇದು ಯಾವ ಪಾತ್ರವನ್ನೂ ವಹಿಸುಲೆ ಸಿದ್ಧ°. ಅರ್ಜುನ° ಅವನ ಗುರು ಹೇದು ಹೇದಪ್ಪಗ ಕೂಡ್ಳೆ ಆ ಪಾತ್ರವ ಒಪ್ಪಿಗೊಂಡ° ಹಾಂಗೂ ಶಿಷ್ಯನತ್ರೆ ಗುರುವು ಮಾತಾಡೆಕ್ಕಾದ ಗಂಭೀರ ರೀತಿಲಿ ಮಾತ್ನಾಡುಸುತ್ತ°. ಗುರು ಶಿಷ್ಯರ ನಡುವಿನ ಸಂವಾದ ಎರಡು ಸೈನ್ಯಂಗಳ ಎದುರ್ಲಿ ಬಹಿರಂಗವಾಗಿಯೇ ನಡದತ್ತು. ಇದರಿಂದ ಎಲ್ಲೋರಿಂಗೂ ಅದರ ಕೇಳಿಸಿಗೊಂಬ ಲಾಭ ಆತು. ಆದರೆ, ಅರ್ಥ ಆದ್ದು ಅರ್ಜುನಂಗೆ ಮಾತ್ರ. ಆರಿಂಗೆ ಕಾಯಿಲೆ ಇದ್ದೋ ಅವಂಗೆ ಔಷಧಿ ಕೊಟ್ಟಪ್ಪಗ ಪರಿಣಾಮ ಆವ್ತು. ರೋಗಿ ಅಲ್ಲದ್ದವಂಗೆ ಔಷಧಿ ಪಥ್ಯ ಅಕ್ಕೋ!., ರೋಗಿ ಅಲ್ಲದ್ದವಕ್ಕೆ ಅದರ ಗುಣ ಸಿಕ್ಕ, ವಿಪರೀತಂಗಳೇ ಅಕ್ಕು. ಅದೇ ರೀತಿ ರೋಗಿಯ ಕಣ್ಣೆದುರೇ ಔಷಧಿ ಇದ್ದರೂ ಸಾಲ ಅದರ ಯೋಗ್ಯರೀತಿಲ್ಲಿ ತೆಕ್ಕೊಳ್ಳೆಕ್ಕು. ಅರ್ಥಾತ್ ಭಗವದ್ಗೀತೆಯ ನುಡಿಗೊ ಯಾವ ಒಬ್ಬ ವ್ಯಕ್ತಿಗಾಗಿ ಅಥವಾ ಸಮಾಜಕ್ಕಾಗಿಯೋ ಸಮುದಾಯಕ್ಕಾಗಿಯೋ ಉದ್ದೇಶಿಸಿಪ್ಪದಲ್ಲ. ಅವು ಎಲ್ಲೋರಿಂಗೂ ಹೇದ ಮಾತುಗೊ. ಸ್ನೇಹಿತರಾಗಲಿ, ಶತ್ರುಗೊ ಆಗಿರಲಿ., ಎಲ್ಲೋರಿಂಗೂ ಕೇಳುವ ಸಮಾನ ಅವಕಾಶ ಇದ್ದು. ಬರೇ ಭಗವದ್ಗೀತೆ ಹತ್ರೆ ಮಡಿಕ್ಕೊಂಡಿದ್ದರೆ ಸಾಲ ಅದರ ಹಿರಿಮೆಯ ಸಾರವ ಅರ್ಥಮಾಡಿಕ್ಕೊಳ್ಳೆಕ್ಕಾದ ಮನಸ್ಸು, ಪ್ರಯತ್ನ ಮುಖ್ಯ. ಅದಲ್ಲಿದ್ದೆ ಓದಿರೆ ಬರೇ ಶ್ಲೋಕ – ಅರ್ಥ ಓದಿದಾಂಗೆ ಅಕ್ಕಷ್ಟೆ.
ಮುಂದೆ ಎಂತಾತು… , ಬಪ್ಪ ವಾರ ನೋಡುವೋ°
…….. ಮುಂದುವರಿತ್ತು.
ಶ್ಲೋಕಂಗೊ ಕೆಮಿಲಿ ಕೇಳ್ಳೆ – BHAGAVADGEETHA – CHAPTER 02 SHLOKAS 1 – 10 by CHENNAI BHAAVA
ಧ್ವನಿ ಕೃಪೆ: ಟಿ. ಎಸ್. ರಂಗನಾಥನ್, ಗಿರಿ ಟ್ರೇಡಿಂಗ್ ಎಜೆನ್ಸಿ ಪ್ರೈ. ಲಿ. ಚೆನ್ನೈ
ಗೀತೆ ಇಳುಶಿಗೊಂಬಲೆ: www.addkiosk.in ; www.giri.in
Audio courtesy: T.S. Ranganathan, Giri Trading P. Ltd. Chennai
To Download : www.addkiosk.in ; www.giri.in
ಚೆನ್ನೈ ಭಾವಾ ರಾಶಿ ಚೊಲೋ ವಿವರಣೆ ಕೊಟ್ಟಿದ್ರಿ. ಸ೦ಸ್ಕೃತದ ‘ಸ’ ಕೂಡ ಗೊತ್ತಿಲ್ದವ೦ಗೂ ಅರ್ಥ ಅಪ್ಪಾ೦ಗೆ ಪದಚ್ಛೇದ, ಪ್ರತೀ ಶಬ್ಢಾರ್ಥ ಕೊಟ್ಟದ್ದು ಸಿಕಾಪಟ್ಟೆ ಉಪಕಾರ ಆಯ್ದು. ನಮೋ ನಮಃ ಭಾವಯ್ಯಾ….
ನಿಮ್ಮ ಬರವಣಿಗೆ ನಮ್ಮೆಲ್ಲರ ಓದು ನಿರ೦ತರವಾಗಿರಲಿ.
ಅನುರಾಗ ಹೆಚ್ಚಾದರೆ ಅದು ಕಣ್ಣಿನ ಕಟ್ಟುತ್ತೋ ತೋರುದು ಎನಗೆ.
ನಾವು ಇನ್ನೊಬ್ರಿಂಗೆ ತೋರುಸುವ ಪ್ರೀತಿ ಮತ್ತೆ ಗೌರವ, ನಮ್ಮ ಬೆಳಶೆಕು – ನಾವು ಮತ್ಟೂ ಹೆಚ್ಚು ತಿಳುಕ್ಕೊಂಬ ಹಾಂಗೆ, ಇನ್ನೂ ಪ್ರಬುದ್ಧರಪ್ಪ ಹಾಂಗೆ ಮಾಡೆಕು.
ಅದೇ ಅನುರಾಗ ಕುರುಡಾದರೆ, ಅವು ಮಾಡುವ ತಪ್ಪೂ ನಾವಗೆ ಕಾಣ್ತಿಲ್ಲೆ. ಆರಾರು ಹೇಳಿರೆ ನವಗದು ಅರ್ಥವೂ ಆವುತ್ತಿಲ್ಲೆ.
ಒಂದು ರೀತಿಲಿ ಧೃತರಾಷ್ಟ್ರನೂ ಅರ್ಜುನನೂ ಎನಗೆ ಒಂದೇ ರೀತಿ ಕಾಣ್ತವು.
ಮಗನ ಮೇಗಾಣ ಮೋಹಲ್ಲಿ ರಾಜಂಗೆ ಮಗ° ಮಾಡಿದ ಏವ ತಪ್ಪೂ ಕಾಣ್ತಿಲ್ಲೆ.
ಗುರುವಿನ ಮೇಗೆ ಇಪ್ಪ ಗೌರವಲ್ಲಿ ಈ ಶಿಷ್ಯ° ಒಳುದ ಶಿಷ್ಯರು ಮಾಡಿದ ಅಪರಾಧವ ನೋಡದ್ದೇ ಹೋವುತ್ತ°..
ಒಬ್ಬ ರಾಜನಾಗಿ ಅವನ ಕರ್ತವ್ಯ ಮಾಡಿದ್ದಾ° ಇಲ್ಲೆ – ಮತ್ತೊಬ್ಬ ಗೆಂಡ° ಆಗಿ/ ಮಗ° ಆಗಿ ಅವನ ಕರ್ತವ್ಯ ಮಾಡ್ತಾ ಇಲ್ಲೆ 🙁
ಕನಿಷ್ಠ ಕ್ಷತ್ರಿಯ ಧರ್ಮದ ಪಾಲನೆಯೂ ಇಲ್ಲಿ ಆಯಿದಿಲ್ಲೆ ಹೇಳಿ ತೋರುತ್ತು ಮೇಗಂಗೆ.
ಅರ್ಜುನನ ನೋಡುವಾಗ,
ಪರೀಕ್ಷೆ ಕೋಣೆಯ ಹೆರ ನಿಂದ ಶಾಲೆ ಮಕ್ಕಳ ಹಾಂಗೆ ಕಾಣ್ತ°. ಎಲ್ಲ ತಯಾರಿ ಮಾಡಿ ಬಂದರೂ, ಪರೀಕ್ಷೆ ಕೋಣೆಯ ಎದುರು ನಿಂದಪ್ಪಗ ಹೆದರಿಕೆ ಶುರು ಆವ್ತು.
ಇಲ್ಲಿ – ಗುರುವಿನ ಅಗತ್ಯ ಖಂಡಿತಾ ಇದ್ದು. 🙂
ಯಾವುದು ಶೆರಿ, ಯಾವುದು ತಪ್ಪು ಹೇಳ್ತದೊಟ್ಟಿಂಗೆ, ಎಂತ ಮಾಡಿರೆ ಎಂತ ಅಕ್ಕು? ಎಂತಕೆ ಮಾಡೆಕು ಹೇಳ್ಲೆ, ಗುರು ಬೇಕೇ ಬೇಕು.
ಕುರುಡು ಮೋಹಂದ-ಶುದ್ಧ ಪ್ರೀತಿಗೆ
ಅಜ್ನಾನಂದ-ಉನ್ನತಿಗೆ
ಎತ್ತಿ ಕೊಂಡೋಪವನೇ ಗುರು.
ಅರ್ಜುನಂಗೆ ಕೃಷ್ಣ ಗುರೂಪದೇಶ ಮಾಡಿರೆ, ಕೃಷ್ಣ ಹೇಳಿದ ಮಾತುಗಳನ್ನೇ ಸಂಜಯ° ಧೃತರಾಷ್ಟ್ರಂಗೆ ಹೇಳ್ತ°. ಒಂದು ಲೆಕ್ಕಲ್ಲಿ ನೋಡ್ತರೆ, ಎರಡೂ ಕಡೆ ಕುರುಡು ಪ್ರೀತಿ ಮತ್ತೆ ಮೋಹಕ್ಕ ಪರಿಹಾರ ಅಪ್ಪದು ಕಾಣ್ತು.
ಪ್ರತಿಯೊಂದು ಶ್ಲೋಕಕ್ಕೋ ಅದೆಷ್ಟು ಅರ್ಥವತ್ತಾದ ವಿವರಣೆ… ಮತ್ತೆ ಮತ್ತೆ ಓದಿದೆ… ಚೆನೈ ಭಾವಂಗೆ ನಮೋ ನಮ:
ಲೌಕಿಕವಾಗಿ ಯೋಚನೆ ಮಾಡಿರೆ ಅರ್ಜುನನ ಕಾಡಿದ ಬ೦ಧು ವ್ಯಾಮೋಹ ಎಲ್ಲೋರಿ೦ಗೂ ಬಕ್ಕು.ಶ್ರೀಕೃಷ್ಣನ ಮಾತುಗೊ ಖ೦ಡಿತಾ ”ಗೂಗ್ಲಿ”ಯೋ “ಬೌನ್ಸರೋ” ಆಗಿ ಹೋಕು. ಆದರೆ ಅರ್ಜುನನ ಭಾವುಕತೆಯ ಉತ್ತರ ಅವನ ಮನಸ್ಸಿನ ಮಟ್ತವ ವ್ಯಕ್ತಪಡಿಸುತ್ತು.ಹೃಷೀಕೇಶ,ಬುಡಾಕೇಶ ಶಬ್ದ೦ಗೊ ಶೇಣಿ ಅಜ್ಜನ ಅರ್ಥಗಾರಿಕೆಯ ಮೂಲಕ ಪರಿಚಿತ ಆಗಿದ್ದರೂ ಅರ್ಥವ್ಯಾಪ್ತಿ ಗೊ೦ತಾತು.
ಮು೦ದೆ ಯೇವ ಮಾತುಗೊ ಬಕ್ಕು,ನೋಡುವ.
ಹವ್ಯಕ ಭಾಷೆಲಿ ಗೀತೆಯ ಸಾರವ ಬೈಲಿಂಗೆ ಕೊಡ್ತಾ ಇಪ್ಪ ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ. ವಿವರಣೆ ಚೆಂದಕೆ ಬತ್ತಾ ಇದ್ದು. ಇದು ಸಂಪೂರ್ಣವಾಗಿ ಮುಂದೆ ಗ್ರಂಥ ರೂಪಲ್ಲಿಯುದೆ ಹೆರ ಬರಲಿ ಹೇಳ್ತ ಹಾರೈಕೆ.
ಹವ್ಯಕ ಭಾಶೆಲಿ ಭಗವದ್ಗೀತೆಯ ಶ್ಲೋಕಂಗಳ ಭಾವಾರ್ಥವ ಲಾಯಿಕಲ್ಲಿ ಚೆನ್ನೈಭಾವ ಕೊಡ್ತಾ ಇದ್ದವು….
ಅಕ್ಕು ಭಾವ,ಬಪ್ಪ ವಾರದ್ದಕ್ಕೆ ಕಾವದು.
ಕಥಂ ಭೀಷ್ಮಮಹಂ ಸಂಖ್ಯೇ-ಅರ್ಜುನ ಬಹಳ ತರ್ಕಬದ್ಧವಾಗಿ ,ಭಾವುಕವಾಗಿ ಕೇಳಿದ.ಗುರುಗಳ ಕೊಲ್ಲದ್ದೆ,ಭಿಕ್ಷೆ ಬೇಡಿ ಜೀವಿಸುದಾದರೂ ಆನು ತಯಾರು-ಹೇಳುತ್ತ.
ಒಂದು ಸಲವಾದರೂ ಅರ್ಜುನನ ವಾದ ಸರಿ ಹೇಳಿ ಕಾಣದ್ದೆ ಇರ. ನಾವು ಎಷ್ಟೋ ಸಲ ಇಂತದ್ದೆ ನಿರ್ಣಯಂಗಳ ಕೈಕೊಂಬದು.
ಕೃಷ್ಣ ಒಂದೇ ಶ್ಲೋಕಲ್ಲಿ ಅದರ ಹೊಡದು ಹಾಕುದು ಹೇಂಗೆ-ನೋಡುವ.
ಅಪ್ಪು… ಈ ಮೋಹ ಯಾವುದು,ಧರ್ಮ ಯಾವುದು,ಅಧರ್ಮ ಯಾವುದು ಹೇಳಿ ನಿರ್ಧಾರ ಮಾಡುದು ತುಂಬಾ ಕಷ್ಟ… ಕೃಷ್ಣನೇ ಸಾರಥಿಯಾಗಿ ಅರ್ಜುನನ ಮುನ್ನಡೆಸಿಗೊಂಡು ಇದ್ದ ಹಾಂಗೆ ನಮ್ಮನ್ನೂ ಆ ಭಗವಂತನೇ ಮುನ್ನಡೆಸುವ ಹಾಂಗೆ ಆಯೆಕ್ಕು…
ಒಂದು ಅತ್ಯಂತ ಸರಳವಾದ ಉದಾಹರಣೆ ಕೊಡುತ್ತೆ. ಉದಾಹರಣೆಗೋಸ್ಕರ ಮಾಂತ್ರ ಹೇಳುತ್ತಾ ಇಪ್ಪದು…
“ಹೊಗೆಸೊಪ್ಪು ಸೇವಿಸುದು ಆರೋಗ್ಯಕ್ಕೆ ಹಾನಿಕರ. ಅದರ ನಾವೂ ತಿಮ್ಬಲಾಗ, ನಮ್ಮ ಕಣ್ಣೆದುರು ತಿಮ್ಬದರ ನಮ್ಮ ಕೈಲಾದ ಮಟ್ಟಿ೦ಗೆ ವಿರೋಧಿಸೆಕ್ಕು…”
ನಮ್ಮ ಗುರುಸ್ಥಾನಲ್ಲಿಪ್ಪವು ನಮ್ಮ ಮನೆಗೆ ಬತ್ತವು. ಅವಕ್ಕೆ ಎಲೆತಟ್ಟೆಲ್ಲಿ ಹೊಗೆಸೊಪ್ಪು ಬೇಕಾವುತ್ತು.
“ಅತಿಥಿದೇವೋ ಭವ” ಹೇಳುವ ಸಂಪ್ರದಾಯ ಒಂದು ಕಡೆ… “ಗುರುಸ್ಥಾನಲ್ಲಿಪ್ಪವಕ್ಕೆ ಯಾವುದೇ ಕೊರತೆ ಆಗದ್ದ ಹಾಂಗೆ ಉಪಚರಿಸೆಕ್ಕು”… ಎರಡನ್ನೂ ಪಾಲಿಸಿದರೆ ಇಡೀ ಸಮಾಜಕ್ಕೆ ದ್ರೋಹ ಮಾಡಿದ ಹಾಂಗೆ ಆವುತ್ತು…
ಅರ್ಜುನ ಅಪ್ಪಲೇ ಎಷ್ಟು ಕಷ್ಟ ಇದ್ದು ಅಲ್ಲದ? ಆದರೆ ಯುದ್ದ ಸುರುವಾದ ಮೇಲೆ ಪ್ರತಿಯೊಬ್ಬನೂ ಒಂದೋ ಪಾಂಡವರ ಪಕ್ಷಲ್ಲಿ ಅಥವಾ ಕೌರವ ಪಕ್ಷಲ್ಲಿ ಇರಲೇಬೇಕು…
ಆನು ಉದ್ದೇಶಿಸಿದ್ದು ಮುಂದಿನ ಶ್ಲೋಕ ಹೇಂಗೆ ಬತ್ತು ನೋಡುವೊ ಹೇಳಿ.-ಅಶೋಚ್ಯಾನನ್ವಶೋಚಸ್ತ್ವಮ್…ಹೇಳುತ್ತ ಕೃಷ್ಣ.
ಅರ್ಜುನ ವಿಷಾದ ಯೋಗದ ಎಲ್ಲಾ ಮಾತುಗಳ ಕೃಷ್ಣ ಅನಾರ್ಯಜುಷ್ಟಂ,ಅಸ್ವರ್ಗ್ಯಂ,ಅಕೀರ್ತಿಕರಂ ಹೇಳಿ ಆಗಲೇ ಖಂಡಿಸಿದ್ದ.
ಅರ್ಥ,ಉದ್ದೇಶ ಸ್ಪಷ್ಟ ಮಾಡಲೆ ಮತ್ತೊಮ್ಮೆ ಬರೆತ್ತಾ ಇದ್ದೆ.
ಚೆನ್ನೈ ಭಾವ ತುಂಬಾ ಶ್ರಮ ವಹಿಸಿ ಬರೆತ್ತಾ ಇದ್ದವು.ಗೀತೆ ಅಂತಾ ಶ್ರಮವ ಬೇಡುವ ಗ್ರಂಥ.
ಎಲ್ಲರೂ ಚೆನ್ನೈ ಭಾವನ ಪ್ರೋತ್ಸಾಹಿಸೆಕ್ಕು ,ಒಪ್ಪಂಗLa ಬರೆದು ಸಂವಾದ ಮಾಡೆಕ್ಕು ಹೇಳಿ ಎನ್ನ ಆಶಯ.
ನಮೋ ನಮಃ ಗೋಪಾಲಣ್ಣ. ನಿಂಗೊ ಎಲ್ಲೋರ ಒಪ್ಪಂಗೊ ಪ್ರೋತ್ಸಾಹ ಮತ್ತು ಆಸಕ್ತಿ ಜವಬ್ದಾರಿಯ ಹೆಚ್ಚಿಸುತ್ತಾ ಇದ್ದು. ಮುಂದೆಯೂ ಇದೇ ರೀತಿ ಪ್ರೋತ್ಸಾಹ, ಸಲಹೆ, ತಪ್ಪಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಟ್ಟು ಬೈಲ ಶುದ್ದಿ ಲಾಯಕ ಆವ್ತಾಂಗೆ ಪ್ರೋತ್ಸಾಹ ಬೇಕು ಹೇಳಿ ಕೇಳಿಕೊಳ್ತೆ. ಧನ್ಯವಾದಂಗೊ.
ಗೋಪಾಲಣ್ಣ ಹೇಳಿದ್ದದಕ್ಕೆ ಎನ್ನದೂ ಸಹಮತ…
ಚೆನ್ನೈ ಭಾವ ಇಷ್ಟು ಶ್ರಮ ಪಟ್ಟು ಕೆಲಸ ಮಾಡುತ್ತಾ ಇಪ್ಪಗ ನಾವು ನಿಜವಾಗಿಯೂ ಅದರ ಪ್ರಯೋಜನ ಪಡಕ್ಕೊಂಡರೆ ಮಾಂತ್ರ ಅವರ ಶ್ರಮ ಸಾರ್ಥಕ ಅಕ್ಕಷ್ಟೇ… ಗೀತೆಯ ಸಾರವ ಉಪಯೋಗಿಸಿಗೊಂಡು ನಮ್ಮ ಇಂದಿನ ಜೀವನ ಮಟ್ಟವ ಯಾವ ತರ ಉತ್ತಮ ರೀತಿಗೆ ಕೊಂಡು ಹೋಪಲಕ್ಕು ಹೇಳಿ ಪ್ರತಿಯೊಬ್ಬನೂ ಚಿಂತನೆ ಮಾಡೆಕ್ಕು.
“ನಾವು ಎಷ್ಟೋ ಸಲ ಇಂತದ್ದೆ ನಿರ್ಣಯಂಗಳ ಕೈಕೊಂಬದು.” ಹೇಳಿ ಗೋಪಾಲಣ್ಣನ ಚಿಂತನೆ ಇಷ್ಟ ಆತು…